ನನ್ನ ನೋಡಿ ನಾ ನಗದಿದ್ದರೆ
ನನ್ನೊಳಗಿನ ವಿದೂಷಕ ಮಲಗಿದ್ದರೆ,
ನಾನೇ ಲೋಕದ ಕಣ್ಣಿಗೆ ವಿದೂಷಕನಾಗುತ್ತೇನೆ
ಜನ ನನ್ನ ನೋಡಿ ನಗುತ್ತಾರೆ.
* * *
ತನುವು ಬಯಲಾಗಿ, ಮನವು ಬೆತ್ತಲಾಗಿ
ನನ್ನೊಳಗಿನ ಕತ್ತಲೆ ದೂರವಾಗದಿದ್ದಲ್ಲಿ,
ಬೆಳಕಿನ ಸೊಗಸು, ಕಾಮನಬಿಲ್ಲಿನ ಹೊಂಗನಸು
ಕಾಣುತ್ತೇನೆನ್ನುವುದು ಬರೀ ಕನಸು.
* * *
ನಾಗರೀಕತೆ ಎಲ್ಲವನ್ನೂ ಕೊಟ್ಟಿದೆ
ನೆಮ್ಮದಿಯಾಗಿ ಬದುಕುವುದನ್ನು ಹೊರತುಪಡಿಸಿ,
ತಂತ್ರಜ್ಞತೆ ಅನುಕೂಲತೆಗಳನ್ನೆಲ್ಲಾ
ತೆರೆದಿಟ್ಟಿದೆ
ಮಾನವೀಯ ಸಂಬಂಧಗಳನ್ನು ಹೊರತುಪಡಿಸಿ.
* * *
ಆಗೆಲ್ಲಾ ಚೆನ್ನಾಗಿತ್ತು ಈಗೇನೂ ಇಲ್ಲಾ
ಅಂತಾರಲ್ಲಾ
ಆಗೂ ಹೀಗೆ ಇತ್ತು, ಅದೇ ದ್ವೇಷ- ಅಸೂಯೆ,
ಧರ್ಮ -ಕರ್ಮ -ಅಸಮಾನತೆ -ಅಮಾನವೀಯತೆ
ದೇಶಕಾಲ ಯಾವುದಾದರೇನು ಇದು ಬಗೆಹರಿಯದ
ಸಮಸ್ಯೆ.
* * *
ಆ ದ್ವೇಷ ನನ್ನನ್ನು ಕೊಲ್ಲಬೇಕೆಂದಿತ್ತು
ಹೇಗಾದರೂ ಮಾಡಿ ನಾನು ಬದುಕಲೇಬೇಕಿತ್ತು.
ಕೊನೆಗೂ ನಾನೇ ಕೊಲೆಗಾರನಾದೆ
ದ್ವೇಷಿಸುವವನನ್ನು ಬಿಟ್ಟು ದ್ವೇಷವನ್ನು
ಕೊಂದೆ.
* * *
ಆ ಜ್ಞಾನ ಅನ್ನೋದು ಶ್ರೇಷ್ಟತೆಯ ವ್ಯಸನ
ಸೃಷ್ಟಿಸುವುದಾದರೆ
ನಾನಂತೂ ಅಜ್ಞಾನಿಯಾಗಿರಲು ಬಯಸುತ್ತೇನೆ.
ಈ ವಿದ್ಯೆ ಅನ್ನೋದು ಅಸಮಾನತೆ ಪಸರಿಸುವಂತಿದ್ದರೆ
ನಾನು ಅನಕ್ಷರಸ್ತನಾಗಿರಲು ಇಚ್ಚಿಸುತ್ತೇನೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ