ಭಾನುವಾರ, ಡಿಸೆಂಬರ್ 22, 2013

ಕವಿತಾವತಾರ :









(ಕವಿತೆ ಕುರಿತು ಗಂಡ ಹೆಂಡಿರ ಜುಗಲಬಂಧಿ )

ಹೂವೊಳಗಿನ ಚೆಲುವು, ಚೆಲುವೊಳಗಿನ ಒಲವು
ಒಲವೊಳಗಿನ ಸೆಳೆತ ನನ್ನ ಕವಿತಾ.....

ಪೂಸಿ ಮಾತು ಬಿಡ್ರಿ, ತಿಂಗಳ ಸಂತಿ ಎಲ್ರಿ
ಅಡುಗೆ ಏನು ಮಾಡ್ಲಿ, ಯಾರಿಗೆ ಬೇಕ್ರಿ ನಿಮ್ಮ ಕವಿತಾ?
*        *        *

ಹಾಲೊಳಗಿನ ಮೊಸರು, ಮೊಸರೊಳಗಿನ ಬೆಣ್ಣೆ
ಬೆಣ್ಣೆಲಿರುವ ತುಪ್ಪಾ ನನ್ನ ಕವಿತಾ....

ಬೆಣ್ಣೆ ತಾ ಜೊತೆಗೆ ಬ್ರೆಡ್ಡು ತಾ, ಜಾಮ್ ಹಾಕಿ ತಿನ್ನುನಂತಾ-
ಟಿವಿ ಸಿನೆಮಾ ನೋಡ್ತಾ, ಯಾರಿಗೆ ಬೇಕ್ರಿ ನಿಮ್ಮ ಕವಿತಾ?
*        *        *

ಮನಸೊಳಗಿನ ಕನಸು, ಕನಸೊಳಗಿನ ಸೊಗಸು
ಸೊಗಸೊಳಗಿನ ಸವಿನೆನಪು  ನನ್ನ ಕವಿತಾ....

ನೈಟಿ ತಾ, ರೇಷ್ಮೇ ಸೀರೆ ತಾ, ಮಿಡ್ಡಿ ಬೇಡಾ ಚೂಡಿದಾರ ತಾ
ತರೂದಿದ್ರ ಹಬ್ಬಕ್ಕೆರಡು ಡ್ರೆಸ್ಸು ತಾ, ಯಾರಿಗೆ ಬೇಕರಿ ನಿಮ್ಮ ಕವಿತಾ?
*        *        *

ಸುರೆಯೊಳಗಿನ ನಶೆ, ನಶೆಯೊಳಗಿನ ಉಷೆ
ಉಷೆಯೊಳಗಿನ  ಬೆಳಕು ನನ್ನ ಕವಿತಾ....

ಮಿರಿಮಿರಿ ಮಿಂಚುವ ಓಲೆ ತಾ, ಚಿನ್ನದ ಮಾಲೆ ತಾ
ಬಳೆ ತಾ, ಸೊಂಟಕ್ಕ ಡಾಬು ತಾ, ಯಾರಿಗೆ ಬೇಕರಿ ನಿಮ್ಮ ಕವಿತಾ?
*        *        *

ನೀರೊಳಗಿನ ಮೀನು, ಮೀನೊಳಗಿನ ಚಲನೆ
ಚಲನೆಯೊಳಗಿನ ಜೀವ ನನ್ನ ಕವಿತಾ.....

ಹಾಂ! ಮೀನು ತಾ, ಚಿಕನ್ ಟಿಕ್ಕಾ ಮಟನ್ ಕರಿ ತಾ
ಡೊನ್ನೆ ಬಿರಿಯಾನಿ ತಾ, ಯಾರಿಗೆ ಬೇಕರಿ ನಿಮ್ಮ ಕವಿತಾ?
*        *        *

ಸ್ಥಾವರವಿಲ್ಲದ ಜಂಗಮ, ಜಂಗಮನೊಳಗಿನ ಸಂಗಮ
ಸಂಗಮನೊಳಗಿನ ಬಸವ ನನ್ನ ಕವಿತಾ.

ಲೇಔಟ್ ಬೇಡಾ ಸೈಟು ತಾ, ಅರಮನೆ ಬೇಡಾ ಸ್ವಂತ ಮನೆ ತಾ
ರಾಜಾರಾಣಿ ತರಾ ಇರೂನಂತಾ, ಯಾರಿಗೆ ಬೇಕರಿ ನಿಮ್ಮ ಕವಿತಾ?
*        *        *

ಒಲುವೆಯ ಹೆಣ್ಣು, ಪ್ರೀತಿಸುವ ಗಂಡು
ಗಂಡು ಹೆಣ್ಣಿನ ಸರಸ ಸಲ್ಲಾಪ ನನ್ನ ಕವಿತಾ....

ವಾಶಿಂಗ್ ಮಶಿನ್, ಮಿಕ್ಸಿ ಗ್ರೈಂಡರ್ ಕೇಳಾಂಗಿಲ್ಲ
ಆ ಕೆಲಸಕ್ಕೆ ನೀವೆ ಇದ್ದೀರಲ್ಲಾ ಯಾರಿಗೆ ಬೇಕರಿ ನಿಮ್ಮ ಕವಿತಾ?
*        *        *

ಉದರದೊಳಗಿನ ಹಸಿವು, ಹಸಿವಿನೊಳಗಿನ ರೋಷ
ರೋಷದೊಳಗಿನ  ಆವೇಶ ನನ್ನ ಕವಿತಾ.

ಸಿಟ್ಟು ಸೆಡವು ಪಕ್ಕಕ್ಕಿಡಿ, ಸಂಬಳಾ ಬಂತಾ ಮೊದಲು ಹೇಳಿ
ಬದುಕೋದು ಮುಖ್ಯ ಯಾರಿಗೆ ಬೇಕರಿ ನಿಮ್ಮ ಕವಿತಾ?
*        *        *

ಭೂಮಿಗೆ ಬಿದ್ದ ಬೀಜ, ಬೀಜದೊಳಗಿನ ಮರ
ಮರದೊಳಗಿನ ಫಲ ನನ್ನ ಕವಿತಾ....

ಬೀಜಾ ಬಿತ್ತಿ, ಹೊಲಾ ಉತ್ತಿ ಬೆಳಿ ಬೆಳೆದು ಮನಿಗೆ ತನ್ರಿ
ಸಂಸಾರ ಸಾಗಿಸೋಣಂತ, ಯಾರಿಗೆ ಬೇಕರಿ ನಿಮ್ಮ ಕವಿತಾ?
*        *        *

ಎದೆಗೆ ಬಿದ್ದ  ಅಕ್ಷರ,  ಅಕ್ಷರದೊಳಗಿನ ಸಾಕ್ಷರ
ಸಾಕ್ಷರತೆಯ ಸಾಕ್ಷಾತ್ಕಾರ ನನ್ನ ಕವಿತಾ...

ಮಗನಿಗೆ ಕಾನ್ಮೆಂಟು, ಮಗಳಿಗೆ ನರ್ಸರಿಗೆ ಸೇರಿಸಬೇಕು
ಡೋನೇಶನ್ ಹೊಂದಿಸ್ಕೊಳ್ರಿ ಯಾರಿಗೆ ಬೇಕರಿ ನಿಮ್ಮ ಕವಿತಾ?
*        *        *

ಕತ್ತಲೊಳಗಿನ ಬೆತ್ತಲು, ಬೆತ್ತಲೊಳಗಿನ ಬಯಲು
ಬಯಲೊಳಗಿನ ಶೂನ್ಯ ನನ್ನ ಕವಿತಾ....

ಬೆಣ್ಣೆ ಹಚ್ಚಿ ತಿನ್ನಾಕಾಗೊಲ್ಲಾ, ಚಿನ್ನ ಹಾಕಿ ಮೆರೆಯೋಕಾಗೊಲ್ಲ
ಉಂಡುಟ್ಟು ಸುಖವಾಗಿರೋಕಾಗೊಲ್ಲ, ಯಾರಿಗೆ ಬೇಕರಿ ನಿಮ್ಮ ಕವಿತಾ?
*        *        *

ಯೋಗಿಯ ದ್ಯಾನ, ದ್ಯಾನದೊಳಗಿನ ಜ್ಞಾನ
ಜ್ಞಾನದೊಳಗಿನ  ಅರಿವು ನನ್ನ ಕವಿತಾ.....

ಧ್ಯಾನಾ ಮಾಡ್ತಾ ಕೂತ್ಕೊಂಡು ಬಿಡಿ, ಹೊಟ್ಟೆಗೆ ತಣ್ಣೀರ ಬಟ್ಟೆ ಕಟ್ಕೊಂಡ್ ಬಿಡಿ
ಇಗೋ ಹೊರಟೆ ತವರಿಗೆ ತಬ್ಕೊಂಡ್ ಮಲಕೊಳ್ರಿ ನಿಮ್ಮ ಕವಿತಾ...
*        *        *

ನೀನಿಲ್ಲದೆ ಇರಲಾರೆ, ಇದ್ದರೂ ನೆಮ್ಮದಿಯಾಗಿ ಬದುಕಲಾರೆ 
ಬದುಕಿದರೂ ವಿರಹ ತಾಳಲಾರೆ, ಹೋಗದಿರು ಬಾ ಬಾರೆ ನನ್ನ ಕವಿತಾ.....

 

                                                   -ಶಶಿಕಾಂತ ಯಡಹಳ್ಳಿ







ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ