ಗಂಡಿಗೆ ಹೆಣ್ಣು ಹೆಣ್ಣಿಗೆ ಗಂಡು ಮಾಯೇ...ಮಾಯೇ....
ಮಾಯೆಗೆ ಮರುಳಾಗದಂತೆನ್ನ ಕಾಯೇ.....ತಾಯೇ....
ಅನುದಿನವೂ ಸೆಳೆತ ಅನುಕ್ಷಣವೂ ತುಡಿತ
ಅಣುಅಣುವಾಗಿ ಆಲಂಗಿಸಿತೆನ್ನನು ಮಾಯೇ.......
ಹೊರಬರುವ ದಾರಿ ನಾ ಕಾಣೆ..... ತಾಯೇ...
ಏನೋ ಎಂತೋ.... ಬರಿ ಮೋಹದ ಬ್ರಾಂತೋ
ಬಂಧಿಸಿ ಭವದಲಿ ನೆಮ್ಮದಿ ಕುಂದಿಸಿತೀ ಮಾಯೇ...
ಗುರಿ ತಲುಪುವ ಹಾದಿ ನಾ ಕಾಣೆ..... ತಾಯೇ.......
ಅಗೆದಷ್ಟು ಮೋಹ, ಬಗೆದಷ್ಟು ದಾಹ..
ಕೊನೆಮೊದಲಿಲ್ಲ ಬಯಕೆಯ ಬೆಂಕಿ ಸುಡುತಿದೆ.... ಮಾಯೇ
ಮನದ ಮುಂದನ ಮಾಯೆಯ ಛಾಯೆ ನಾ ಕಾಣೆ... ತಾಯೇ...
ಹಗಲಲಿ ಕೆಲವು ಇರುಳಲಿ ಹಲವು
ಬಣ್ಣದ ಕನಸು ಬೆಂಬತ್ತಿ ಕಾಡಿವೆ.... ಮಾಯೇ....
ಸದಾ ಎಚ್ಚರವಿರುವಂತೆನ್ನ ಕಾಯೇ... ತಾಯೇ...
ಸಂತೇಲಿ ಸಂತ ನಿರ್ವಾಣದಲಿ ನಿಂತ
ಮಂಕು ಬೂದಿ ಎರಚಿ ಮಂಕಾಗಿಸಿತು ಈ ಮಾಯೇ...
ಇನ್ನು ನನ್ನ ಗತಿ ಏನು ನೀನೇ ಹೇಳು ತಾಯೇ.......
ಶ್ರೇಷ್ಟತೆಯ ವ್ಯಸನ, ಕೀರ್ತಿಯ ಶನಿಸಂತಾನ
ತಲೆ ಮೆಲೇರಿ ಕುಳಿತು ಮೆರೆಯುತಿದೆ ಈ ಮಾಯೆ...
ಹೇಗೆ ಹಂಗಿನಿಂದ ಹೊರಬರಲಿ ಹೇಳು ತಾಯೇ.....
ಬುದ್ಧನ ಬೆಳಕು, ಬಸವನ ವಚನ, ಅಲ್ಲಮನ ಬಯಲು
ಮೋಹವ ತೊಲಗಿಸಿ ಕಳೆದು ಹೋಗಲಿ ಈ ಮಾಯೇ..
ಮತ್ತೆ ಮತ್ತೆ ಮಾಯೆಗೊಳಗಾಗದಂತೆನ್ನ ಕಾಯೇ ... ತಾಯೇ....
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ