ಭಾರತ ದೇಶ ಇವತ್ತು ಜನವರಿ
26ರಂದು ಗಣರಾಜ್ಯೋತ್ಸವ ದಿನವನ್ನು ಸಂಬ್ರಮದಿಂದ ಆಚರಿಸುತ್ತಿದೆ. ಯಾವುದೇ ಸಂಭ್ರಮ ಎನ್ನುವುದು ಬಹುಜನರ
ಬದುಕಿನ ಭಾಗವಾದಾಗ ವಿಜ್ರಂಭಿಸುವ ರೀತಿಯೇ ಬೇರೆ.. ಅದು ಕೇವಲ ಸರಕಾರಿ ಪ್ರೊಟೋಕಾಲ್ ಕಾರ್ಯಕ್ರಮವಾದಾಗ
ಬರೀ ಭ್ರಮೆಂiiನ್ನುಂಟುಮಾಡುವ ಸಾಧನವಾಗುತ್ತದೆ. ಈಗ ಆಗಿದ್ದೂ ಸಹ ಅದೇ. ದೇಶಭಕ್ತಿ ಎನ್ನುವುದನ್ನು
ಜನರ ಮೇಲೆ ಹೇರಿಕೆ ಮಾಡಲಾಗದು. “ದೇಶಕ್ಕಾಗಿ ಏನು ಮಾಡಿದೆ ಎನ್ನುವುದನ್ನು ಹೇಳು...
ದೇಶ ನಿನಗಾಗಿ ಏನು ಮಾಡಿದೆ ಎಂದು ಕೇಳಬೇಡಾ” ಎನ್ನುವ ಸೂಡೋ ದೇಶಪ್ರೇಮಿಗಳ
ಮಾತುಗಳು ದೇಶವಾಸಿಗಳಲ್ಲಿ ದೇಶಭಕ್ತಿಯನ್ನು ತುಂಬಲಾರವು. ಯಾವಾಗ ಬಹುಸಂಖ್ಯಾತ ಕೂಲಿ ಕಾರ್ಮಿಕ ಜನರು
ತಮಗರಿವಿಲ್ಲದೇ ದೇಶದ ಕೋಶ ತುಂಬಲು ಬೆವರು ಸುರಿಸುತ್ತಿದ್ದಾರೋ.. ಯಾವಾಗ ಕೋಟ್ಯಾಂತರ ರೈತರು ದೇಶವಾಸಿಗಳ
ಹಸಿವನ್ನು ನೀಗಿಸಲು ಬದುಕನ್ನೇ ಬಸಿಯುತ್ತಿದ್ದಾರೋ ಅಂತವರಿಗೆ ಈ ದೇಶ ಕೊಟ್ಟಿದ್ದೇನು? ಇಂದಿಲ್ಲಾ
ನಾಳೆ ನಮ್ಮ ಬದುಕು ಹಸನಾದೀತು ಎಂದು ಕಳೆದ ಏಳು ದಶಕಗಳಿಂದ ಭಾರತದ ದುಡಿಯುವ ಜನತೆ ಅಪಾರ ನಿರೀಕ್ಷೆಗಳೊಂದಿಗೆ
ಕಾಯುತ್ತಲೇ ಇದೆ. ಆದರೆ.. ದೇಶವಾಳುವವರು ಕಾಲಕಾಲಕ್ಕೆ ಜನತೆಯನ್ನು ಭ್ರಮೆಯಲ್ಲಿಟ್ಟು.. ಇಲ್ಲಸಲ್ಲದ
ಭರವಸೆಗಳನ್ನು ಕೊಟ್ಟು ತಮ್ಮ ಅಧಿಕಾರ ರಾಜಕಾರಣದಾಟವನ್ನು ಮುಂದುವರೆಸಿದರೇ ವಿನಹಾ ಮತದಾರರ ಬದುಕನ್ನಂತೂ
ಬದಲಾಯಿಸಲಾಗಲಿಲ್ಲ. ದೇಶ ಅಂದರೆ ದೇಶವಾಳುವವರು ಈ ದೇಶದ ಶ್ರಮಿಕರ ಬದುಕನ್ನು ಸಹ್ಯವಾಗಿಸಲು.. ಅವರಿಗೆ
ಸಿಗಬೇಕಾದ ಸವಲತ್ತುಗಳನ್ನು ದೊರಕಿಸಲು ಏನನೂ ಮಾಡದೇ ಇರುವಾಗ ಆ ಜನತೆ ಯಾಕೆ ಈ ದೇಶವನ್ನು ತಮ್ಮದು
ಎನ್ನಬೇಕು.. ಬಂಡವಾಳಿಗರ ಪರವಾಗಿರುವ ಆಳುವವರ್ಗವನ್ನು ತಮ್ಮ ಉದ್ದಾರಕರು ಎಂದು ಒಪ್ಪಿಕೊಳ್ಳಬೇಕು?
ವ್ಯಯಕ್ತಿಕ ಬದುಕಲ್ಲಿ ಸ್ವಾತಂತ್ರವೇ ಬರದಿರುವಾಗ ಸ್ವಾತಂತ್ರ್ಯ ದಿನಾಚರಣೆಯನ್ನು ಯಾಕೆ ಆಚರಿಸಬೇಕು?
ಗಣರಾಜ್ಯದ ಸಂವಿಧಾನದ ಆಶಯಗಳೇ ಜಾರಿಯಾಗದಿರುವಾಗ ಯಾಕೆ ಗಣರಾಜ್ಯೋತ್ಸವವನ್ನು ಸಂಭ್ರಮಿಸಬೇಕು?
ಅರವತ್ತು ಏಳು ವರ್ಷಗಳ ಹಿಂದೆ
ಜನವರಿ 26 ರಂದು ನಮ್ಮ ದೇಶ ಭಾರತ ತನ್ನದೇ ಆದ ಸಂವಿಧಾನವನ್ನು ರಚಿಸಿಕೊಂಡು ಜಾರಿಗೊಳಿಸಿದ ಐತಿಹಾಸಿಕ
ದಿನ. ಇಡೀ ದೇಶದ ಭವಿಷ್ಯವನ್ನು ರೂಪಿಸಲು.. ಬದಲಾಯಿಸಲು
ಡಾ.ಅಂಬೇಡ್ಕರರ ಅಧ್ಯಕ್ಷತೆಯಲ್ಲಿ ರೂಪಗೊಂಡ ಸಂವಿಧಾನ ಅಧೀಕೃತವಾಗಿ ಜಾರಿಗೊಂಡ ದಿನ. ಅಂಬೇಡ್ಕರ್‌ರವರು
ಸಂವಿಧಾನದಲ್ಲಿ ಅದರ ಉದ್ದೇಶ ಹಾಗೂ ಆಶಯಗಳನ್ನು ಬಹಳ ಸ್ಪಷ್ಟವಾಗಿಯೇ ನಮೂದಿಸಿದ್ದಾರೆ. ಅದು ಹೀಗಿದೆ
“ಭಾರತವನ್ನು
ಸಾರ್ವಭೌಮ ಸಮಾಜವಾದಿ ಜಾತ್ಯಾತೀತ ಲೋಕತಾಂತ್ರಿಕ ಗಣತಂತ್ರವನ್ನಾಗಿ ವಿಧಿಯುಕ್ತವಾಗಿ ಸ್ಥಾಪಿಸಿ, ಈ
ದೇಶದ ಎಲ್ಲಾ ಪ್ರಜೆಗಳಿಗೂ ಸಮಾನವಾಗಿ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಹಕ್ಕುಗಳನ್ನು ಕೊಡಮಾಡುತ್ತದೆ.
ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಹಾಗೂ ಆರಾಧನೆಗಳಲ್ಲಿ ಸ್ವಾತಂತ್ರ್ಯ ವದಗಿಸುತ್ತಿದ್ದು, ಎಲ್ಲರಿಗೂ
ಸಮಾನ ಅವಕಾಶಗಳನ್ನು ದೊರಕಿಸಿಕೊಡಲಾಗುತ್ತದೆ. ವ್ಯಯಕ್ತಿಕ ಘನತೆ ಹಾಗೂ ದೇಶದ ಒಗ್ಗಟ್ಟು ಮತ್ತು ಐಕ್ಯತೆ
ಕಾಪಾಡಿಕೊಳ್ಳುವುದು ಹಾಗೂ ಭ್ರಾತೃತ್ವವನ್ನು ಪ್ರೋತ್ಸಾಹಿಸುವುದು ಸಂವಿಧಾನದ ಆಶಯವಾಗಿದೆ.” ಎಂದು ಸಂವಿಧಾನದಲ್ಲಿ ಬರೆದು
ಶಾಸನವನ್ನಾಗಿ ಒಪ್ಪಿಕೊಂಡು ಜಾರಿಗೊಳಿಸಲಾಯಿತು. ಹಾಗೂ ಜನವರಿ 26ರ ದಿನವನ್ನು ಗಣರಾಜ್ಯೋತ್ಸವದ ಹೆಸರಲ್ಲಿ
ಆಚರಿಸಲಾಗುತ್ತದೆ.
ರೀಪಬ್ಲಿಕ್ ಡೇ ಆಚರಣೆಯಲ್ಲಿ
ತಪ್ಪೇನಿಲ್ಲಾ.. ಇಂತಹ ಆಚರಣೆಗಳು ದೇಶಭಕ್ತಿಗೆ ಕಾರಣವಾಗುವುದಾದರೆ ಯಾರದೂ ಅಭ್ಯಂತರವಿಲ್ಲಾ. ಆದರೆ..
ಉದ್ದೇಶವೇ ಈಡೇರದೇ ಉತ್ಸವ ಮಾಡುವುದು ಪ್ರಶ್ನಾರ್ಹವಾಗಿದೆ. ಯಾಕೆಂದರೆ ಸಂವಿಧಾನ ಜಾರಿಯಾಗಿ 67ವರ್ಷಗಳು
ಕಳೆದರೂ ಅದರ ಆಶಯಗಳು ಈಡೇರಿದವಾ? ಡಾ.ಅಂಬೇಡ್ಕರ್‌ರವರು ಕಂಡ ಕನಸಿನ ಭಾರತ ನಿರ್ಮಾಣವಾಗಿದೆಯಾ? ಇಲ್ಲಾ..
ಇಲ್ಲಿವರೆಗೂ ಸಾಧ್ಯವಾಗಿಲ್ಲಾ. ಆಗುವ ಲಕ್ಷಣಗಳೂ ಕಾಣುತ್ತಿಲ್ಲಾ. ಕೇವಲ ವಿದೇಶಿಯ ಆಳುವ ವರ್ಗ ಬದಲಾವಣೆಗೊಂಡು
ಸ್ವದೇಶಿ ಆಳುವ ವರ್ಗಕ್ಕೆ ಅಧಿಕಾರ ಹಸ್ತಾಂತರವಾಗಿದೆಯೇ ಹೊರತು ಸಂವಿಧಾನದ ಉದ್ದೇಶಗಳು ಅಮೂಲಾಗ್ರವಾಗಿ
ಇನ್ನೂ ಜಾರಿಗೆ ಬಂದಿಲ್ಲಾ. ಭಾರತವನ್ನು ಸಮಜವಾದಿ ಜಾತ್ಯಾತೀತ ಲೋಕತಾಂತ್ರಿಕ ಗಣತಂತ್ರವನ್ನಾಗಿ ಸ್ಥಾಪಿಸುವುದು
ಸಂವಿಧಾನದ ಮೊಟ್ಟಮೊದಲ ಆಶಯವಾಗಿತ್ತು. ಅದರೆ.. ಜಾತಿಯ ಬೇರುಗಳು ಸಡಿಲಗೊಳ್ಳವ ಬದಲು ದಿನದಿಂದ ದಿನಕ್ಕೆ
ಗಟ್ಟಿಯಾಗತೊಡಗಿವೆ. ಜಾತಿ ಸಂಘಟನೆಗಳು, ಜಾತಿ ಸಮ್ಮೇಳನಗಳು, ಜಾತಿಗೊಂದಿಷ್ಟು ಮಠಪೀಠಗಳು ಹೆಚ್ಚಿ
ಜಾತಿ ಬಿಟ್ಟು ಬದುಕಲಾರದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಓಟಿನ ರಾಜಕೀಯ ಎನ್ನುವುದು ಜಾತಿಯೆಂಬುದನ್ನು
ಜೀವಂತವಾಗಿಟ್ಟುಕೊಂಡೇ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಂಡು ಬರುತ್ತಿದೆ. ಇಂತಹ ವಿಕ್ಷಿಪ್ತ ಪರಿಸ್ಥಿತಿಯಲ್ಲಿ
ಜ್ಯಾತ್ಯಾತೀತ ರಾಷ್ಟ್ರ ನಿರ್ಮಾಣ ಎನ್ನುವುದು ಕನಸಿನ ಗಂಟಾಗಿಯೇ ಉಳಿದಿದೆ. ಇಂತಹುದರಲ್ಲಿ ಸಂವಿಧಾನದ
ಜ್ಯಾತ್ಯಾತೀತ ಆಶಯ ಮೂಲೆಗುಂಪಾಗಿದೆ. ಇನ್ನು ಸರ್ವರ ಸಮಾನ ಬೆಳವಣಿಗೆಯನ್ನು ಬಯಸುವ ಸಮಾಜವಾದಿ ಗಣತಂತ್ರವಂತೂ
ಆದರ್ಶ ಕಲ್ಪನೆಯಾಗಿಯೇ ಮುಂದುವರೆದಿದ್ದು ಅಸಮಾನ ವ್ಯವಸ್ಥೆ ನಮ್ಮ ದೇಶದ ಆಳುವ ವರ್ಗಗಳು ಉದ್ದೇಶಪೂರ್ವಕವಾಗಿಯೇ
ಕಾಪಾಡಿಕೊಂಡು ಬರುತ್ತಿರುವ ವಾಸ್ತವವಾಗಿದೆ.
ಈ ದೇಶದ ಪ್ರತಿಯೊಬ್ಬ ನಾಗರೀಕನಿಗೂ
ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಹಕ್ಕುಗಳನ್ನು ಸಂವಿಧಾನದಲ್ಲಿ ಕೊಡಲಾಗಿದೆ. ಆದರೆ ಈ ಹಕ್ಕುಗಳು
ಈಗಲೂ ಉಳ್ಳವರ ಪಾಲಾಗಿವೆಯೇ ಹೊರತು ದುಡಿಯುವ ಜನರಿಗೆ ಇಲ್ಲವಾಗಿವೆ. ಬಲಾಢ್ಯರು ಮಾತ್ರ ಎಲ್ಲ ಸವಲತ್ತುಗಳೊಂದಿಗೆ
ಬದುಕುವಂತಹ, ಅಧಿಕಾರಸ್ತರು ಮಾತ್ರ ವ್ಯವಸ್ಥೆಯ ಅನುಕೂಲತೆಗಳ ಫಲಾನುಭವಿಗಳಾಗುವಂತಹ ಪರಿಸ್ಥಿತಿಯನ್ನು
ಈ ದೇಶದ ಆಳುವ ವರ್ಗಗಳು ಸೃಷ್ಟಿಸಿವೆ. ಸಂವಿಧಾನದಲ್ಲಿ.. ಕಾನೂನು ಕಾಯಿದೆಗಳಲ್ಲಿ ಮಾತ್ರ ಈ ಸಾಮಾನಿಕ
ಆರ್ಥಿಕ ರಾಜಕೀಯ ಸ್ವಾತಂತ್ರ್ಯ ಎನ್ನುವುದು ಲಿಖಿತವಾಗಿದೆಯೇ ಹೊರತು ಜನಸಮಾನ್ಯರಿಗೆ.. ಕೊಟ್ಯಾಂತರ
ಶ್ರಮಜೀವಿಗಳ ಪಾಲಿಗೆ ದಕ್ಕಿಯೇ ಇಲ್ಲಾ. ಇರುವ ಕಾನೂನುಗಳು ಉಳ್ಳವರ ಹಿತಾಸಕ್ತಿಯನ್ನು ಕಾಪಾಡಲು ನೆರವಾಗುತ್ತವೆಯೇ
ಹೊರತು ಬಡವರ ಗೋಳಿಗೆ ನ್ಯಾಯದೊರಕಿಸಲು ಅಲ್ಲವೇ ಅಲ್ಲಾ. ಈ
ದೇಶದ ಜೈಲಿನಲ್ಲಿ ಶೇ.90 ರಷ್ಟು ಜನರು ದುಡಿಯುವ ಕೆಳವರ್ಗದವರೇ ಆಗಿದ್ದು ಅವರಿಗೆ ನ್ಯಾಯನಿರ್ಣಯವೆಂಬುದು
ದುಬಾರಿಯ ಸರಕಾಗಿದೆ. ಕಾನೂನನ್ನು ಕೊಂಡುಕೊಳ್ಳುವ ಇಲ್ಲವೇ ಸಾಕ್ಷಿಗಳನ್ನು ಖರೀದಿಮಾಡಿ ಅನ್ಯಾಯವನ್ನು
ನ್ಯಾಯಸಮ್ಮತ ಎನ್ನುವಂತೆ ಸಾಬೀತುಗೊಳಿಸುವ ತಾಕತ್ತಿರುವವರು ಕಾನೂನಿನ ಬಲೆಯಿಂದ ತಪ್ಪಿಸಿಕೊಳ್ಳುತ್ತಾರೆ..
ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದವರು ಮತ್ತು ರಾಜಕೀಯ ಶಕ್ತಿ ಇಲ್ಲದವರು ಕಾನೂನಿನ ಉರುಳಿಗೆ
ಸಿಕ್ಕಿಹಾಕಿಕೊಂಡು ನರಳುತ್ತಾರೆ. ಇದು ಖಂಡಿತಾ ಸಂವಿಧಾನದ ಆಶಯ ಅಲ್ಲವೇ ಅಲ್ಲಾ.. ಈ ದೇಶದಲ್ಲಿ ಹಣಬಲ,
ಜನಬಲ ಹಾಗೂ ಅಧಿಕಾರದ ಬಲ ಇದ್ದವರು ಮಾತ್ರ ಬದಕುತ್ತಾರೆ
ಮತ್ತು ಅದು ಇಲ್ಲದವರು ಶೋಷಣೆಗೆ ಒಳಗಾಗುತ್ತಲೇ ಬಂದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ.. ಸಂವಿಧಾನದ
ಸಮಾಧಿಯ ಮೇಲೆ ಅದು ಹೇಗೆ ಗಣರಾಜ್ಯೋತ್ಸವದ ಸಂಭ್ರಮವನ್ನು ದಮನಿತ ವರ್ಗ ಆಚರಿಸಲು ಸಾಧ್ಯ?
ಇನ್ನು ವಿಚಾರ ಅಭಿವ್ಯಕ್ತಿ
ಸ್ವಾತಂತ್ರ್ಯ ಎನ್ನುವುದಂತೂ ಹರಣವಾಗುತ್ತಲೇ ಬಂದಿದೆ. ಬಲಪಂಥೀಯ ಸರಕಾರ ಬಂದ ನಂತರವಂತೂ ಅಭಿವ್ಯಕ್ತಿ
ಸ್ವಾತಂತ್ರ್ಯದ ಹತ್ಯೆಯೇ ನಡೆಯುತ್ತಿದೆ. ಸತ್ಯವನ್ನು ಅನಾವರಣ ಮಾಡಿದ ತಪ್ಪಿಗೆ ದಾಬೋಲ್ಕರ್, ಡಾ.ಎಂ.ಎಂ.ಕಲಬುರ್ಗಿಯಂತವರ
ಹತ್ಯೆ ಮಾಡಲಾಗುತ್ತದೆ. ಸತ್ಯ ಹೇಳುವ ಬಾಯಿಗಳನ್ನು ಮುಚ್ಚಲಾಗುತ್ತಿದೆ. ಮುಕ್ತವಾಗಿ ಇದ್ದದ್ದನ್ನು
ಇದ್ದಹಾಗೆ ಹೇಳಿದರೆ ದೇಶದ್ರೋಹಿ ಎನ್ನುವ ಪಟ್ಟ ಕಟ್ಟಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತದೆ.
ನಿಜ ಹೇಳಿದವರನ್ನು ಕಾನೂನಿನ ಕುಣಿಕೆಯಲ್ಲಿ ಸಿಕ್ಕಿಸಿ ನರಳುವಂತೆ ಮಾಡಲಾಗುತ್ತದೆ. ಸುಳ್ಳುಗಳನ್ನೇ
ಸಾವಿರಾರು ಸಲ ಹೇಳಿ ಸತ್ಯ ಎನ್ನುವ ಭ್ರಮೆಯನ್ನು ಹುಟ್ಟಿಸುವ ಹುನ್ನಾರಗಳು ಸನಾತನವಾದಿಗಳಿಂದ ಅವ್ಯಾಹತವಾಗಿಯೇ
ನಡೆಯುತ್ತಿದ್ದು ವಿರೋಧಿಸಿದವರನ್ನು ಶತಾಯ ಗತಾಯ ಮಟ್ಟಹಾಕುವ ಪ್ಯಾಸಿಸ್ಟ್ ತಂತ್ರಗಳು ಸಕ್ರೀಯವಾಗಿವೆ.
ನಂಬಿಕೆ ಭಕ್ತಿ ಆರಾಧನೆಯ ಸ್ವಾತಂತ್ರ್ಯವನ್ನು
ಸಂವಿಧಾನ ಎಲ್ಲರಿಗೂ ಒದಗಿಸಿಕೊಟ್ಟಿದ್ದರೂ ಧರ್ಮದ ನಂಬಿಕೆ ಭಕ್ತಿ ಆರಾಧನೆಯನ್ನು ಅವಮಾನಿಸುವ ಮೂಲಕ
ಕೋಮುದಳ್ಳುರಿಯನ್ನು ಹಚ್ಚುವ ಕೆಲಸಗಳು ಧರ್ಮಾಂಧರಿಂದ ನಡೆಯುತ್ತಿವೆ. ಈ ಭಕ್ತಿ ಆರಾಧನೆಗಳೇ ದೇಶಾದ್ಯಂತ
ಹಲವಾರು ಹಿಂಸೆಗಳಿಗೆ ಕಾರಣವಾಗಿವೆ. ಸಂವಿಧಾನದ ಉದ್ದೇಶ ಅವರವರ ನಂಬಿಕೆಗಳನ್ನು ಇನ್ನೊಬ್ಬರಿಗೆ ತೊಂದರೆಯಾಗದಂತೆ
ಆಚರಿಸಿಕೊಂಡು ಹೋಗಬಹುದು ಎನ್ನುವುದಾಗಿತ್ತು. ಆದರೆ ಅದು ಈಗ ಸಮಾಜದಲ್ಲಿ ಅಸಹಿಷ್ಣುತತೆಯನ್ನು ಹೆಚ್ಚಿಸಲು
ಬಳಕೆಯಾಗುತ್ತಿರುವುದೊಂದು ದುರಂತ. ಯಾವಾಗ ಬಹುಸಂಖ್ಯಾತ ದುಡಿಯುವ ಜನತೆಯನ್ನೇ ಕಡೆಗಣಿಸಲಾಗಿದೆಯೋ
ಆಗ ವ್ಯಯಕ್ತಿಕ ಘನತೆ ಎಲ್ಲಿರುತ್ತದೆ. ಈಗಲೂ ಲಿಂಗತಾರತಮ್ಯ ಅತಿಯಾಗಿದೆ, ಜೀತ ಪದ್ದತಿ ಜೀವಂತವಾಗಿದೆ,
ದಲಿತ ಶೂದ್ರರ ಮೇಲೆ ಹಲ್ಲೆ ಹತ್ಯೆಗಳು ಅವ್ಯಾಹತವಾಗಿವೆ, ರೈತರ ಗೋಳು ತೀರದಾಗಿದೆ, ಇಂತಹ ಸಂದರ್ಭದಲ್ಲಿ
ಅದೆಲ್ಲಿದೆ ವ್ಯಕ್ತಿಯ ಘನತೆ.. ಆ ಘನತೆಯನ್ನು ಕಾಪಾಡಿಕೊಂಡು ಹೋಗಬೇಕಾದ ಆಳುವ ಸರಕಾರಗಳು ಚುನಾವಣೆಯ
ಸಂದರ್ಭವೊಂದನ್ನು ಹೊರತು ಪಡಿಸಿ ಮಿಕ್ಕೆಲ್ಲಾ ಸಮಯದಲ್ಲೂ ದುಡಿಯುವ ವರ್ಗದ ಘನತೆಯನ್ನು ಲೆಕ್ಕಕ್ಕೆ
ತೆಗೆದುಕೊಳ್ಳುವುದಿಲ್ಲಾ.
ಇನ್ನು ದೇಶದ ಒಗ್ಗಟ್ಟು ಹಾಗೂ
ಐಕ್ಯತೆಯನ್ನು ಕಾಪಾಡಿಕೊಳ್ಳಬೇಕೆಂಬುದು ಸಂವಿಧಾನದ ಮಹತ್ತರವಾದ ಆಶಯ. ಆದರೆ ದೇಶವಾಸಿಗಳಿಗೆ ದೇಶದ
ಆಳುವ ವರ್ಗ ಏನನ್ನೂ ಮಾಡದೇ ಇರುವಾಗ.. ಬಡಜನರ ಹೆಸರಲ್ಲಿ ನೂರಾರು ಯೋಜನೆಗಳನ್ನು ಹಾಕಿ ಹಣ ಲೂಟಿ ಮಾಡುತ್ತಿರುವಾಗ
ದೇಶದ ಬಗ್ಗೆ ಜನರಲ್ಲಿ ಪ್ರೀತಿ ಹುಟ್ಟೀತು ಹೇಗೆ? ಆದರೂ ಎಲ್ಲವನ್ನೂ ಸಹಿಸಿಕೊಂಡು ದೇಶದ ಮೇಲೆ ಇನ್ನೂ
ಪ್ರೀತಿಯನ್ನು ಜನತೆ ಇಟ್ಟುಕೊಂಡಿದ್ದರೆ ಅದಕ್ಕೆ ಇಂದಿಲ್ಲಾ ನಾಳೆ ಸಂವಿಧಾನದ ಆಶಯಗಳು ಈಡೇರಬಹುದು
ಎನ್ನುವ ಆಸೆಯೇ ಕಾರಣವಾಗಿದೆ. ಜನರು ಈ ದೇಶದ ಮೇಲೆ ಇಟ್ಟಿರುವ ದೇಶಪ್ರೇಮವನ್ನೂ ಸಹ ದುರುಪಯೋಗಪಡಿಸಿಕೊಂಡು
ದೇಶಭಕ್ತಿಯ ಉನ್ಮಾದವನ್ನು ಹುಟ್ಟಿಸಿ ದೇಶವಾಳುವ ಅಧಿಕಾರವನ್ನು ಖಾಯಂಗೊಳಿಸಿಕೊಳ್ಳಲು ಆಳುವ ವರ್ಗಗಳು
ಪ್ರಯತ್ನಿಸುತ್ತಲೇ ಬಂದಿವೆ. ಒಂದಿಷ್ಟು ಯಶಸ್ಸನ್ನೂ ಪಡೆದಿವೆ. ಆದರೆ.. ದೇಶಭಕ್ತಿಯ ಹೆಸರಲ್ಲಿ ಹೆಚ್ಚು
ಕಾಲ ಜನರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ. ದೇಶದ ಒಗ್ಗಟ್ಟು ಹಾಗೂ ಐಕ್ಯತೆಯನ್ನು ಕಾಪಾಡಿಕೊಳ್ಳಬೇಕೆಂದರೆ
ದೇಶದ ಪ್ರಜೆಗಳು ಸುಭೀಕ್ಷೆಯಾಗಿರಬೇಕು ಹಾಗೂ ಸಂವಿಧಾನದ ಆಶಯಗಳು ಈಡೇರಬೇಕಿದೆ. ಎಲ್ಲಿವರೆಗೂ ಇದು
ಸಾಧ್ಯವಾಗುವುದಿಲ್ಲವೋ,.. ಎಲ್ಲಿವರೆಗೂ ಇಡೀ ದೇಶದ ಸಂಪತ್ತು ಕೇವಲ ಶೇಕಡಾ 1 ರಷ್ಟು ಜನ ಶ್ರೀಮಂತರ
ಹಿಡಿತದಲ್ಲಿರುವುದೋ, ಎಲ್ಲಿವರೆಗೂ ಆಳುವ ವರ್ಗಗಳು ಬಹುಸಂಖ್ಯಾತ ದುಡಿಯುವ ವರ್ಗಗಳನ್ನು ಒಡೆದಾಳುತ್ತಾ
ಶೋಷಿಸುತ್ತಲೇ ಇರುತ್ತದೆಯೋ ಅಲ್ಲಿವರೆಗೂ ಈ ದೇಶದ ಸಂವಿಧಾನದ ಉದ್ದೇಶ ಈಡೇರಲು ಸಾಧ್ಯವೇ ಇಲ್ಲಾ.
ಸಂವಿಧಾನವನ್ನೇ ತಮ್ಮ ಹಿತಾಸಕ್ತಿಗೆ
ಪೂರಕವಾಗಿ ಬಳಸಿ ಬೆಳೆಯುವ ಆಳುವ ವರ್ಗಗಳು ಈ ದೇಶವನ್ನು ಆಳುವ ವರೆಗೂ ಡಾ.ಅಂಬೇಡ್ಕರರ ಆಶಯ ನೆರವೇರುವುದಿಲ್ಲಾ. ಯಾವಾಗ ಸಂವಿಧಾನದ ಮೂಲ ಆಶಯಗಳೇ ಮೂಲೆಗುಂಪಾಗಿವೆಯೋ... ಯಾವಾಗ
ಸಂವಿಧಾನದ ಫಲ ಎಲ್ಲರಿಗೂ ದೊರೆಯದೇ ಕೆಲವರ ಪಾಲಾಗಿವೆಯೋ.. ಆಗ ಸಂವಿಧಾನ ಜಾರಿಯಾದ ದಿನವನ್ನು ಸಂಭ್ರಮದಿಂದ
ಆಚರಿಸುವುದಾದರೂ ಹೇಗೆ? ಯಾರು ಸಂವಿಧಾನದ ಫಲಾನುಭವಿಗಳಾಗಿದ್ದಾರೋ ಅವರು ಸಂಭ್ರಮಿಸುತ್ತಿದ್ದಾರೆ.
ಆಳುವ ಸರಕಾರಗಳು, ಸರಕಾರವನ್ನು ಕಾಪಾಡುತ್ತಲೇ ತಮ್ಮ ಹಿತಾಸಕ್ತಿಯನ್ನು ಬೆಳೆಸಿಕೊಳ್ಳುತ್ತಿರುವ ಅಧಿಕಾರಶಾಹಿಗಳು
ಸಂವಿಧಾನದ ದಿನವನ್ನು ಗಣರಾಜ್ಯೋತ್ಸವದ ಹೆಸರಲ್ಲಿ ಸಂಭ್ರಮದಿಂದ ಆಚರಿಸಿ ತಮ್ಮ ದೇಶಭಕ್ತಿಯನ್ನು ತೋರಿಸಲು
ಉತ್ಸುಕರಾಗಿರುತ್ತಾರೆ ಹಾಗೂ ಸಂವಿದಾನದ ಗರಿಷ್ಟ ಅನುಕೂಲತೆಯನ್ನು ಪಡೆದವರು ರೀಪಬ್ಲಿಕ್ ಡೇ ಆಚರಿಸುತ್ತಾರೆ
ಅಚರಿಸಲಿ. ಆದರೆ.. ಸಂವಿಧಾನದ ಸಂಪೂರ್ಣ ಉದ್ದೇಶದ ಕೇಂದ್ರದಿಂದ ದೂರವೇ ಉಳಿದ ಬಹುತೇಕ ದುಡಿಯುವ ಶ್ರಮಜೀವಿ
ವರ್ಗಗಳು ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಹೇಗೆ ತಾನೇ ಆಚರಿಸಿಯಾರು? ಯಾರನ್ನು ಶೋಷಿಸಲು ಸಂವಿಧಾನ
ದುರುಪಯೋಗವಾಗುತ್ತಿದೆಯೋ, ಸಂವಿಧಾನ ಕೊಟ್ಟ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸ್ವಾತಂತ್ರ್ಯದಿಂದ
ಯಾವ ಶ್ರಮಜೀವಿ ವರ್ಗಗಳನ್ನು ದೂರವಾಗಿಡಲಾಗಿದಿಯೋ.. ಅಂತಹ ಜನರು ಅದು ಹೇಗೆ ರೀಪಬ್ಲಿಕ್ ಡೇ ಯನ್ನು
ಸಂತಸ ಸಂಭ್ರಮದಿಂದ ಆಚರಿಸಲು ಸಾಧ್ಯ?
ಆದ್ದರಿಂದಲೇ ಈ ಸ್ವಾತಂತ್ರ್ಯ
ದಿನ ಹಾಗೂ ಗಣರಾಜ್ಯೋತ್ಸವ ದಿನಗಳು ಈಗ ಕೇವಲ ಸರಕಾರಿ ಕಾರ್ಯಕ್ರಮಗಳಾಗಿ ಮಾತ್ರ ಆಚರಣೆಯಲ್ಲಿವೆ. ಹೇಗೆ
ಜನರು ಹಬ್ಬ ಹರಿದಿನಗಳನ್ನು ಸಂಭ್ರಮದಿಂದ ಆಚರಿಸುತ್ತಾರೋ ಹಾಗೆ ಈ ಸರಕಾರಿ ಸಂಭ್ರಮಗಳನ್ನು ಸಂತಸದಿಂದ ಆಚರಿಸುವುದಿಲ್ಲಾ. ಯಾಕೆಂದರೆ..
ಜನರಿಗೆ ನಿಜವಾದ ಸ್ವಾತಂತ್ರ್ಯ ಇನ್ನೂ ಬಂದೇ ಇಲ್ಲಾ. ಸಂವಿಧಾನ ಜನರಿಗೆ ಕೊಟ್ಟ ಆಶಯಗಳು ಇನ್ನೂ ಈಡೇರಲೇ
ಇಲ್ಲಾ. ಇಂತಹ ಸಂದರ್ಭದಲ್ಲಿ ದೇಶಭಕ್ತಿಯ ಹೆಸರಲ್ಲಿ ಈ ಸರಕಾರಿ ಉತ್ಸವಗಳನ್ನು ಜನರ ಮೇಲೆ ಒತ್ತಾಯ
ಪೂರ್ವಕವಾಗಿ ಹೇರಲು ಸಾಧ್ಯವೂ ಇಲ್ಲಾ. ದೇಶವಾಳುವ ಎಲ್ಲಾ ಬಣ್ಣದ ಪಕ್ಷಗಳಿಗೆ ಹಾಗೂ ಅದರ ನಾಯಕರುಗಳಿಗೆ,
ಬಂಡವಾಳಶಾಹಿಗಳಿಗೆ, ಅಧಿಕಾರಶಾಹಿಗಳಿಗೆ ಸ್ವಾತಂತ್ರ್ಯ ಸಿಕ್ಕಿದೆ ಮತ್ತು ಸಿಕ್ಕ ಸ್ವಾತಂತ್ರ್ಯವನ್ನು
ದಕ್ಕಿಸಿಕೊಂಡು ಫಲಾನುಭವಿಗಳಾಗಿದ್ದಾರೆ ಆದ್ದರಿಂದ ಅವರೆಲ್ಲಾ ಈ ದಿನಗಳನ್ನು ಸಂಭ್ರಮದಿಂದ ಆಚರಿಸುತ್ತಾರೆ.
ಇನ್ನೂ ವಿಶೇಷ ಏನೆಂದರೆ ಕಾರ್ಪೋರೇಟ್
ಕಂಪನಿಗಳು ಹಾಗೂ ಸರಕು ಮಾರಾಟದ ಬಂಡವಾಳಶಾಹಿಗಳ ಹುಸಿ
ದೇಶಪ್ರೇಮ ಈ ದಿನಗಳಲ್ಲಿ ಇಮ್ಮಡಿಯಾಗುತ್ತದೆ. ಸ್ವಾತಂತ್ರ್ಯ ಹಾಗೂ ಸಂವಿಧಾನದ ಗರಿಷ್ಟ ಲಾಭವನ್ನು
ಪಡೆದವರು ಈ ವ್ಯಾಪಾರಿ ಕಂಪನಿಗಳು. ದೇಶಭಕ್ತಿಯನ್ನೂ ಸಹ ಸರಕು ಸಂಸ್ಕೃತಿಯ ಭಾಗವಾಗಿಯೇ ಪರಿಗಣಿಸುವ
ಈ ದಲ್ಲಾಳಿ ವ್ಯಾಪಾರಿ ವರ್ಗ ಜನರಲ್ಲಿ ದೇಶಭಕ್ತಿಯ ಉನ್ಮಾದವನ್ನು ಹೆಚ್ಚಿಸಿ ಅದರಿಂದಲೂ ತಮ್ಮ ಸರಕುಗಳನ್ನು
ರಿಯಾಯತಿ ಹೆಸರಲ್ಲಿ ಮಾರುವ ತಂತ್ರಗಳನ್ನು ರೂಪಿಸಿರುತ್ತಾರೆ.
ಹೀಗಾಗಿ.. ಎಲ್ಲಿವರೆಗೂ ಸಂಪತ್ತನ್ನು ಸೃಷ್ಟಿಸುವ ಕೂಲಿ ಕಾರ್ಮಿಕರಿಗೆ, ಆಹಾರವನ್ನು ಬೆಳೆಯುವ ಅನ್ನದಾತರಿಗೆ
ನಿಜವಾದ ಸ್ವಾತಂತ್ರ್ಯ ಬರುವುದಿಲ್ಲವೋ.. ಎಲ್ಲಿವರೆಗೂ ಸಂವಿಧಾನ ಕೊಟ್ಟ ಹಕ್ಕುಗಳು ದುಡಿಯುವ ವರ್ಗದವರ
ಪರವಾಗಿ ಪ್ರಯೋಜನಕ್ಕೆ ಬರುವುದಿಲ್ಲವೋ ಅಲ್ಲಿವರೆಗೂ ಈ ದೇಶದ ಜನತೆ ಸಂಭ್ರಮಿಸಲು ಸಾಧ್ಯವೇ ಇಲ್ಲಾ.
ದೇಶಕ್ಕಾಗಿ ಏನು ಮಾಡಿದ್ದೀರಿ ಎನ್ನುವ ಹಳಸಲು ಪ್ರಶ್ನೆಯನ್ನೇ ಕೇಳುವ ಬದಲು.. ದೇಶಕ್ಕೆ ರಕ್ತ ಬೆವರು
ಹರಿಸಿ ಸಂಪತ್ತು ಸಂಪನ್ಮೂಲ ಬೆಳೆಸಿದವರಿಗೆ ಈ ದೇಶವು ಏನು ಮಾಡಿದೆ ಎಂದು ಕೇಳಬೇಕಿದೆ. ಇಂದಿಲ್ಲಾ
ನಾಳೆ ಈ ನಿಟ್ಟಿನಲ್ಲಿ ಜನಲೋಂದನಗಳು ನಡೆಯುತ್ತವೆ. ಸ್ವಾತಂತ್ರ್ಯ ಹಾಗೂ ಸಂವಿಧಾನವನ್ನು ತಮ್ಮ ಹಿತಾಸಕ್ತಿಗೆ
ತಕ್ಕಂತೆ ಬಳಸುತ್ತಿರುವ ಈ ಬಂಡವಾಳಶಾಹಿ ವರ್ಗವನ್ನು ಈ ದೇಶದ ಜನತೆಯೇ ಒಂದಿಲ್ಲಾ ಒಂದು ದಿನ ಮಟ್ಟ
ಹಾಕುತ್ತದೆ. ಅಲ್ಲಿವರೆಗೂ ಸರಕಾರಿ ಆಚರಣೆಗಳಿಗೆ ಭಂಗವಿಲ್ಲಾ.. ಈ ದೇಶದ ದುಡಿಯುವ ಜನತೆ ಎಚ್ಚರಾಗಿ
ಎದ್ದು ನಿಂತು ತಮ್ಮ ಹಕ್ಕುಗಳನ್ನು ಪಡೆಯುವವರೆಗೆ ಸ್ವಾತಂತ್ರ್ಯ ಹಾಗೂ ಸಂವಿಧಾನದ ಪ್ರಯೋಜನ ಸಿಕ್ಕುವುದಿಲ್ಲಾ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ