ತಹ ತಹ - 508. ರಂಗವಿಮರ್ಶೆ
ಕನಸಿನ ಲೋಕದಲಿ ಅರಳಿದ ಕಣಿವೆಯ ಹಾಡೆಂಬ ದೃಶ್ಯಕಾವ್ಯ
ದೇಶ ಯಾವುದಾದರೇನು ಜನರ ಬಾದೆ ಬವಣೆ ಒಂದೇ. ಜಗದ ಬದಲಾಯಿಸಲಾಗದ ನಿಯಮ ಬದಲಾವಣೆಯೊಂದೇ. ದೂರದ ದಕ್ಷಿಣ ಆಫ್ರಿಕಾದ ಹಳೆ ತಲೆಮಾರಿನ ಶ್ರಮಿಕನ ಕಥೆಯೊಂದು ನಮ್ಮದೇ ಆಗಬಹುದಾಗಿದೆ. ಅಲ್ಲಿಯ ಹೊಸ ತಲೆಮಾರಿನ ಪ್ರಾಯದವರ ಆಸೆ ಕನಸು ತರುಣ ಜನಾಂಗದವರದ್ದೆ ಆಗಬಹುದಾಗಿದೆ.
ಅದು 'ದಿ ವ್ಯಾಲಿ ಸಾಂಗ್'. ದಕ್ಷಿಣ ಆಫ್ರಿಕಾದ ಪ್ರಸಿದ್ದ ನಾಟಕಕಾರ ಅತೋಲ್ ಫ್ಯುಗಾರ್ಡ್ ಬರೆದ ನಾಟಕ. ಡಾ.ಮೀರಾ ಮೂರ್ತಿ ಯವರು 'ಕಣಿವೆಯ ಹಾಡು' ಹೆಸರಲ್ಲಿ ಈ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಮೈಸೂರಿನ ನಟನ ರೆಪರ್ಟರಿ ತಂಡಕ್ಕೆ ಡಾ.ಶ್ರೀಪಾದ ಭಟ್ ರವರು ನಿರ್ದೇಶಿಸಿದ್ದಾರೆ.
ಎರಡು ರೀತಿಯ ಜನರು ಯಾವಾಗಲೂ ಇದ್ದೇ ಇರುತ್ತಾರೆ. ಮೊದಲನೆಯವರು ಯಥಾಸ್ಥಿತಿವಾದಿಗಳು. ದೇವರ ಮೇಲೆ ಭಾರ ಹಾಕಿ ಇದ್ದಂತೆ ಬದುಕನ್ನು ಸಾಗಿಸುವವರು. ಎರಡನೇ ರೀತಿಯವರು ಬದಲಾವಣೆಯ ಕನಸು ಕಾಣುತ್ತಾ ಅದರ ಸಾಕಾರಕ್ಕಾಗಿ ಪ್ರಯತ್ನಿಸುವವರು. ಮೊದಲನೆಯ ಕೆಟಗರಿಯ ಅಜ್ಜನಿಗೆ ತುಂಡು ಭೂಮಿ, ಮನೆ ಹಾಗೂ ಪ್ರಾರ್ಥನೆಗೆ ಇರುವ ಚರ್ಚೇ ಬದುಕು ಸರ್ವಸ್ವ. ಹಾಡನ್ನೇ ಬದುಕಾಗಿಸಿಕೊಂಡ ಆತನ ಮೊಮ್ಮಗಳಿಗೆ ಸದಾ ಹಾಡಿನದ್ದೇ ಧ್ಯಾನ. ತಲೆಮಾರಿನ ಅಂತರದ ವಿಭಿನ್ನ ಆಲೋಚನೆಯ ಅಜ್ಜ ಮತ್ತು ಮೊಮ್ಮಗಳ ಕಥಾನಕವೇ ಕಣಿವೆಯ ಹಾಡು.
ಈಗಲೂ ಪ್ರತಿ ಗ್ರಾಮಗಳಲ್ಲೂ ಈ ರೀತಿಯ ತಲೆಮಾರುಗಳ ನಡುವಿನ ತಾಕಲಾಟ ನಿತ್ಯ ನಿರಂತರವಾಗಿರುತ್ತದೆ. ಭೂಮಿಯನ್ನೇ ನಂಬಿಕೊಂಡ ಶ್ರಮಜೀವಿಗಳಿಗೆ ತಮ್ಮ ಕೆಲಸ ಮತ್ತು ವಾಸಸ್ಥಳವೇ ಜಗತ್ತು. ಆದರೆ ಹೊರಜಗತ್ತಿನ ಸಂಪರ್ಕಕ್ಕೆ ಹಾತೊರೆಯುವ ಯುವಜನಾಂಗಕ್ಕೆ ಅಜ್ಜ ಕಟ್ಟಿಕೊಂಡ ತಲ್ಲಣದ ಚೌಕಟ್ಟನ್ನು ಮೀರುವ ತವಕ. ಈ ತಾಕಲಾಟಗಳೆ ತಲೆಮಾರಿನ ನಡುವೆ ಮಾನಸಿಕ ಸಂಘರ್ಷಕ್ಕೆ ಕಾರಣವಾಗುತ್ತಾ ಹಳ್ಳಿಗಳಿಂದ ನಗರಗಳತ್ತ ವಲಸೆ ಆರಂಭವಾಗುತ್ತದೆ. ಹಿರಿಯರು ಗ್ರಾಮವಾಸಿಗಳಾದರೆ, ಉತ್ಸಾಹಿ ಯುವಕರು ಪಟ್ಟಣ ಸೇರುತ್ತಾರೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಾ ಅನೇಕ ಗ್ರಾಮಗಳು ಈಗ ವೃದ್ದಾಶ್ರಮಗಳಾಗಿವೆ. ಪಟ್ಟಣಗಳು ವಲಸೆಗಾರರಿಂದ ಕಿಕ್ಕಿರಿದಿವೆ. ಈ ರೀತಿಯ ಜಾಗತಿಕ ವಿದ್ಯಮಾನದ ಅನಿವಾರ್ಯತೆಯನ್ನು ಅಜ್ಜ ಮೊಮ್ಮಗಳ ಸಂಬಂಧದ ಮೂಲಕ "ಕಣಿವೆಯ ಹಾಡು" ಕಟ್ಟಿಕೊಡುತ್ತದೆ.
ವಯೋವೃದ್ಧ ಅಬ್ರಾಮ್ ಜೋಂಕರ್ಸ್ ತುಂಡು ಭೂಮಿಯಲ್ಲಿ ಕುಂಬಳ ಬೆಳೆದು ಬದುಕುವ ಶ್ರಮಿಕ. ಆತನ ಮಗಳು ಯಾರ ಜೊತೆಯೋ ಪಟ್ಟಣಕ್ಕೆ ಓಡಿ ಹೋಗಿ ಮಗುವನ್ನು ಹೆತ್ತು ಸಾಯುತ್ತಾಳೆ. ಆ ಮಗುವನ್ನು ತಂದು ಸಾಕುವ ಅಜ್ಜಿಯೂ ತೀರಿಕೊಂಡಾಗ ಕೂಸಿನ ರಕ್ಷಣೆ ಅಜ್ಜನ ಹೊಣೆಗಾರಿಕೆಯಾಗುತ್ತದೆ. ಬೆಳೆದು ನಿಂತ ಮೊಮ್ಮಗಳು ವೆರೋನಿಕಾಗೆ ಹಾಡು ಕಟ್ಟುವ, ಕಟ್ಟಿದ್ದನ್ನು ಹಾಡುವ ಹುಚ್ಚು. ಹಾಡಿದ್ದನ್ನು ಜಗದ ಜನ ಮೆಚ್ಚಿಕೊಳ್ಳಬೇಕೆಂಬ ಕನಸು. ಅದಕ್ಕಾಗಿ ಪಟ್ಟಣಕ್ಕೆ ವಲಸೆ ಹೋಗುವ ಆಸೆ ಅವಳದು. ಮಳೆ ಬೆಳೆ ಹಾಗೂ ಬದುಕಿಗೆ ಪ್ರಾರ್ಥನೆಯನ್ನೇ ನಂಬಿದ ಅಜ್ಜನಿಗೆ ಪಟ್ಟಣ ಸೇರಿ ಸತ್ತು ಹೋದ ಮಗಳಂತೆ ಮೊಮ್ಮಗಳ ಬದುಕೂ ಆಗಬಹುದೆಂಬ ಆತಂಕ. ಅಜ್ಜ ಒಪ್ಪುತ್ತಿಲ್ಲ ಮೊಮ್ಮಗಳು ಬಿಡುತ್ತಿಲ್ಲ. ಕೊನೆಗೂ ಒಪ್ಪದಿದ್ದರೆ ಓಡಿ ಹೋಗುತ್ತೇನೆಂದ ಮೊಮ್ಮಗಳ ಮಾತಿಗೆ ಅಜ್ಜ ಅನಿವಾರ್ಯವಾಗಿ ಒಪ್ಪುತ್ತಾನೆ. ಮೊಮ್ಮಗಳು ಕನಸು ನನಸಾಗಿಸಿಕೊಳ್ಳಲು ಪಟ್ಟಣಕ್ಕೆ ಹೊರಡುತ್ತಾಳೆ.
ಇಷ್ಟು ಸರಳವಾದ ಸಾಮಾನ್ಯ ಕಥೆಯ ಎಳೆಯನ್ನು ಅಸಾಮಾನ್ಯ ರೀತಿಯಲ್ಲಿ ಕಟ್ಟಿಕೊಟ್ಟಿರುವುದೇ ಈ ನಾಟಕದ ವಿಶೇಷತೆ. ಮೂರೇ ಪಾತ್ರಗಳನ್ನು ಇಬ್ಬರೇ ಪಾತ್ರಧಾರಿಗಳು ತಮ್ಮ ಅಭಿನಯದ ಮೂಲಕ ಒಂದೂ ಮುಕ್ಕಾಲು ಗಂಟೆಗಳ ಕಾಲ ನೋಡುಗರ ಗಮನವನ್ನು ಹಿಡಿದಿಡುವುದು ಈ ನಾಟಕದ ಯಶಸ್ಸಿಗೆ ಸಾಕ್ಷಿ. ಅಜ್ಜನ ಪಾತ್ರವನ್ನು ಆವಾಹಿಸಿಕೊಂಡು ಅಭಿನಯಿಸಿದ ಮೇಘ ಸಮೀರ್ ರವರ ನಟನೆಗೆ ಪೈಪೋಟಿ ಕೊಡುವಂತೆ ಮೊಮ್ಮಗಳ ಪಾತ್ರದಲ್ಲಿ ನಟಿಸಿದ್ದು ದಿಶಾ ರಮೇಶ್. ಈ ನಾಟಕದ ನಾಯಕಿ ಜೊತೆಗೆ ಗಾಯಕಿಯೂ ಆಗಿರುವ ದಿಶಾ ಕಂಠಸಿರಿಗೆ ಮಾರುಹೋಗದ ಪ್ರೇಕ್ಷಕರೇ ಇಲ್ಲ. ಸ್ಪಟಿಕದಂತಹ ಸ್ಪಷ್ಟ ಮಾತು, ಪಾದರಸದಂತಹ ಚಲನೆ, ಕಣ್ಮನಸೆಳೆಯುವ ಅಭಿನಯವನ್ನು ನೋಡಿದವರಿಗೆ ಹಾಡಿನ ಕಣಿವೆಯಲಿ ಹಾರಾಡಿದ ಅನುಭವ. ನಾಟಕದಲ್ಲಿ ನಟದ್ವಯರ ಅಭಿನಯ ನಿರ್ದೇಶಕನ ಅಗೋಚರ ಅಸ್ತಿತ್ವವನ್ನೇ ಮರೆಸಿರುವುದು ಈ ಯುವ ಕಲಾವಿದರ ಪ್ರೌಢ ಪ್ರತಿಭೆಗೆ ಸಾಕ್ಷಿಯಾಗಿದೆ.
ಇಬ್ಬರೇ ಅನುಭವಿ ಪ್ರತಿಭಾನ್ವಿತ ಕಲಾವಿದರ ಮೂಲಕ ಶ್ರೀಪಾದ ಭಟ್ ರು ದೃಶ್ಯ ಕಾವ್ಯವನ್ನು ಕಟ್ಟಿಕೊಟ್ಟಿದ್ದಾರೆ. ಅವರ ಬ್ಲಾಕಿಂಗ್ ಮತ್ತು ಮೂವಮೆಂಟಗಳ ವಿನ್ಯಾಸ ಇಡೀ ನಾಟಕದಲ್ಲಿ ಸಂಚಲನವನ್ನು ಸೃಷ್ಟಿಸಿದೆ. ಕಣಿವೆಯ ಪೇಂಟಿಂಗ್ ಹಿನ್ನೆಲೆಯ ಅತ್ಯಂತ ಸರಳವಾದ ರಂಗಸಜ್ಜಿಕೆ ಹಾಗೂ ಕೈಗಾಡಿಯೊಂದೇ ನಾಟಕದ ಪ್ರಮುಖ ಪರಿಕರವಾಗಿದ್ದು, ಸೆಟ್ ಮತ್ತು ಪ್ರಾಪ್ಸ್ ಸರಳತೆಯೇ ನಾಟಕ ಇನ್ನಷ್ಟು ಕಳೆಗಟ್ಟಲು ಸಾಧ್ಯವಾಗಿದೆ. ನಟರು ಹಾಗೂ ನಿರ್ದೇಶಕರ ಪ್ರತಿಭೆಯ ಹದವಾದ ಮಿಶ್ರಣದಿಂದ ನಾಟಕವು ಹಾಡಾಗಿ ಹೊರಹೊಮ್ಮಿದೆ. ನಾಟಕ ಮಾಡಿದರೆ ಇಂತಹುದ್ದನ್ನು ಮಾಡಬೇಕು, ನೋಡಿದರೆ ಇಂತಹ ನಾಟಕ ನೋಡಬೇಕು ಎಂದೆನ್ನಿಸುವಂತಹ ಕ್ಲಾಸಿಕ್ ರಂಗಪ್ರಯೋಗವಿದು.
ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಮಾಡಬಹುದಾದ ಸಾಧ್ಯತೆಗಳೂ ಇವೆ. ದಕ್ಷಿಣ ಆಫ್ರಿಕಾದ ಪ್ರಚಲಿತ ಹೆಸರುಗಳನ್ನು ಬಿಟ್ಟು ಈ ನೆಲವನ್ನು ಪ್ರತಿನಿಧಿಸುವ ಹೆಸರುಗಳನ್ನೇ ಪ್ರಸ್ತಾವಿತ ಪಾತ್ರಗಳಿಗೆಲ್ಲಾ ಇಟ್ಟಿದ್ದರೆ ಇಡೀ ನಾಟಕ ನಮ್ಮದೇ ಎಂದೆನಿಸುತ್ತಿತ್ತು. ನಮ್ಮ ನೆಲಮೂಲದ ಸಂಸ್ಕೃತಿಗೆ ಆಫ್ರಿಕಾದ ನಾಟಕವನ್ನು ಮರುಹೊಂದಾಣಿಕೆ ಮಾಡಬಹುದಾಗಿತ್ತು. ಯಥಾವತ್ತು ಅನುವಾದದ ಬದಲಾಗಿ ಈ ನಾಟಕವನ್ನು ರೂಪಾಂತರದ ಮೂಲಕ ಕಟ್ಟಿಕೊಟ್ಟು ಈ ನೆಲದ ಕಣಿವೆಯ ಹಾಡನ್ನು ನೋಡುಗರೆದೆಗೆ ತಲುಪಿಸಬಹುದಾಗಿತ್ತು. ಅಪರಿಚಿತ ಸ್ಥಳ ಪರಿಸರ ಹೆಸರುಗಳಿಗಿಂತಾ ನಮ್ಮದೇ ಪರಿಸರದ ಅನಾವರಣ ಆಗಿದ್ದರೆ ಇಡೀ ನಾಟಕ ನೋಡುಗರದ್ದಾಗಬಹುದಾಗಿತ್ತು. ಈ ನಾಟಕದಲ್ಲಿ ಬಳಸಿದ ಹಾಡುಗಳಿಗೆ ಪಾಶ್ಚಾತ್ಯ ಸಂಗೀತ ಬಳಸಲಾಗಿದ್ದು ಅದರ ಅಬ್ಬರದಲ್ಲಿ ಹಾಡಿನ ಸಾಲುಗಳೇ ಅಸ್ಪಷ್ಟವಾಗಿವೆ. ಒಂದಿಷ್ಟು ಮೆಲೋಡಿ ಹಾಡು ಹಾಗೂ ನೆಲಮೂಲ ಸಂಸ್ಕೃತಿಯ ಸಂಗೀತವನ್ನು ಬಳಸಿದ್ದರೆ ಕೇಳುಗರಿಗೆ ಆಪ್ತತೆಯ ಅನುಭೂತಿಯ ಸಾಕ್ಷಾತ್ಕಾರವಾಗುತ್ತಿತ್ತು. ಇಡಿ ನಾಟಕ ದೃಶ್ಯ ಕಾವ್ಯವಾಗಿ ಒಡಮೂಡಿದ್ದು ಸತ್ಯ. ಆದರೆ ಅದು ವಿದೇಶಿ ಮೂಲದ ಕಾವ್ಯಪ್ರಸ್ತುತಿಯಂತಾಗಿದ್ದು ಅದನ್ನು ಎಲ್ಲಾ ರೀತಿಯಿಂದಲೂ ಸ್ವದೇಶಿಕರಣ ಮಾಡಿದ್ದರೆ ಇಡೀ ನಾಟಕ ನಮ್ಮದೇ ಆಗುತ್ತಿತ್ತು. ನೋಡುಗರೆದೆಯಾಳಕ್ಕೆ ನಾಟಕ ಇಳಿಯುತ್ತಿತ್ತು.
ನಾಟಕ ಮುಗಿದ ನಂತರವೂ ಈ ದೃಶ್ಯಕಾವ್ಯವು ನೋಡುಗರನ್ನು ಕಾಡುತ್ತದೆ. ಹಲವಾರು ಕನಸು ಕಟ್ಟಿಕೊಂಡು ಬದುಕನ್ನರಿಸಿ ಹಳ್ಳಿ ಬಿಟ್ಟು ಬಂದು ಪಟ್ಟಣದಲ್ಲಿ ಕಳೆದುಹೋದವರಿಗಂತೂ ಮೂಲ ನೆಲೆಯನ್ನು "ಕಣಿವೆಯ ಹಾಡು" ನೆನಪಿಸಿ ಕಾಡುತ್ತದೆ. ನಗರ ಸೇರಿ ಯಾರು ಅದೆಷ್ಟು ಟೊಂಗೆ ಟಿಸುಳುಗಳನ್ನು ಚಾಚಿದ್ದರೂ ಹಳ್ಳಿಯಲ್ಲೇ ಉಳಿದ ಸಂಬಂಧದ ಬೇರುಗಳು ಸೆಳೆಯುತ್ತವೆ. ಬಾಲ್ಯದ ಆಟ ನೋಟ ಪಾಠ ಹಾಗೂ ಪ್ರಕೃತಿಯೊಡಗಿನ ಒಡನಾಟಗಳನ್ನು ಈ ನಾಟಕ ಪ್ರೇಕ್ಷಕರ ಚಿತ್ತದಲ್ಲಿ ಮತ್ತೆ ಬಿತ್ತರಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ನೋಡುಗರನ್ನು ನೆನಪಿನ ಕಣಿವೆಯಲ್ಲಿ ಇಳಿಸಿ, ಕನಸಿನ ಲೋಕದಲಿ ತೇಲಿಸಿ, ಹಾಡಿನ ಲೋಕದಲಿ ಮೈಮರೆಸುವ ಕಣಿವೆಯ ಹಾಡನ್ನು ನೋಡಿ ಅನುಭವಿಸುವುದೇ ಒಂದು ಸೊಗಸು. ವಿಷಾದದಲಿ ಹದಗೊಂಡು ವಿನೋದದಲಿ ಮುದಗೊಳ್ಳುವುದು ಮನಸು.
- ಶಶಿಕಾಂತ ಯಡಹಳ್ಳಿ
10-02-2024
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ