ಶುಕ್ರವಾರ, ಡಿಸೆಂಬರ್ 6, 2013

ಹುಟ್ಟು ಹಬ್ಬ ಹೇಗೆ ಆಚರಿಸಿಕೊಳ್ಳಲಿ? :








ಇಂದು ನನ್ನ ಹುಟ್ಟುಹಬ್ಬ ಅಂತಾ
ಹೆಮ್ಮೆಯಿಂದ ಹೇಗೆ ಹೇಳಿಕೊಳ್ಳಲಿ
ಹಬ್ಬದಾಚರಣೆಯ ಸಂಭ್ರಮ ಎಲ್ಲಿಂದ ತರಲಿ?

ನನ್ನಂತೆ ಹುಟ್ಟಿದ ಕೋಟ್ಯಾಂತರ ಜನ ಸಂಕಷ್ಟದಲ್ಲಿರುವಾಗ
ಮಕ್ಕಳು, ಮಹಿಳೆಯರು ಅತ್ಯಾಚಾರಕ್ಕೊಳಗಾಗುತ್ತಿರುವಾಗ
ಹೆಣ್ಣು ಕಂದಮ್ಮಗಳು ಗರ್ಭದಲ್ಲೇ ಗೋರಿ ಸೇರುತ್ತಿರುವಾಗ
ಹುಟ್ಟು ಹಬ್ಬ ಹೇಗೆ ಆಚರಿಸಿಕೊಳ್ಳಲಿ?

ಕೋಮುದೆವ್ವ ಕೊಳ್ಳಿಹಿಡಿದು ಕುಣಿಯುತ್ತಿರುವಾಗ
ಜಾತಿಭೂತದ ಕುಣಿಕೆ ಕತ್ತು ಬಿಗಿಯುತ್ತಿರುವಾಗ
ಧರ್ಮದ ಗುತ್ತಿಗೆದಾರರು ಜನರಲ್ಲಿ ಅಫೀಮು ಬಿತ್ತುತ್ತಿರುವಾಗ

ನಾನ್ಹೇಗೆ ಹುಟ್ಟು ಹಬ್ಬ ಮಾಡಿಕೊಳ್ಳಲಿ?

ಭಾಗ್ಯವಂತರ ಬಂಧಿಖಾನೆಯಲಿ ನ್ಯಾಯ ಖೈದಾಗಿರುವಾಗ
ಶೋಷಕರ  ಅಟ್ಟಹಾಸಕ್ಕೆ ಸ್ವಾತಂತ್ರ್ಯವೇ ಬಲಿಯಾಗಿರುವಾಗ
ಓಟ್ ಬ್ಯಾಂಕಿನ ರಾಜಕಾರಣಕ್ಕೆ ನೈತಿಕತೆ ನಿರ್ಣಾಮವಾದಾಗ
ನಾ ಹೇಗೆ ತಾನೆ ಹುಟ್ಟು ಹಬ್ಬದಲಿ ಸಂಭ್ರಮಿಸಲಿ?

ಜಾಗತೀಕರಣದ ಜಾಲಕ್ಕೆ ಸಂಸ್ಕೃತಿ ಛಿದ್ರವಾಗಿರುವಾಗ
ಖಾಸಗೀಕರಣದ  ಆಟಕ್ಕೆ ನಿರುದ್ಯೊಗ ಹೆಚ್ಚಿರುವಾಗ
 ಉದಾರೀಕರಣ ದೇಶವನ್ನೇ ಮಾರಾಟಕ್ಕಿಟ್ಟಿರುವಾಗ
ಯಾವ ಮುಖಹೊತ್ತು ಹುಟ್ಟುಹಬ್ಬ ಮಾಡಿಕೊಳ್ಳಲಿ?

ಶ್ರಮದ ಫಲ ಸಿಗದೆ ಅನ್ನದಾತ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಾಗ
ಕಲಿತದ್ದಕ್ಕೆ ತಕ್ಕ ಕೆಲಸ ಸಿಗದೆ ಯುವಜನತೆ ಪರದಾಡುತ್ತಿರುವಾಗ
ನಿರಾಶೆಗೊಂಡ ಯುವಕರು ದುಶ್ಚಟಕ್ಕೆ ದಾಸರಾಗುತ್ತಿರುವಾಗ
ಹುಟ್ಟು ಹಬ್ಬದ ಸಂಭ್ರಮದ ಸವಿ ಹೇಗೆ ಸವಿಯಲಿ?




ಬುಧವಾರ, ಡಿಸೆಂಬರ್ 4, 2013

ಪಶ್ಚಾತ್ತಾಪ (ಕವಿತೆ)





ನನ್ನ ಮಗಳು ನಡುರಾತ್ರಿ ಬೆಚ್ಚಿಬಿದ್ದು ಕೇಳುತ್ತಾಳೆ,
ಅಪ್ಪಾ..... ಏಳು ಅಪ್ಪಾ.... ಅಪ್ಪಾ
ನಾನು ಮುಸ್ಲಿಂ ಅಲ್ಲಾ ಆದರೂ ಪರವಾಗಿಲ್ಲ
ಬುರ್ಖಾ ಹಾಕಿಕೊಳ್ಳಲು ಅವಕಾಶ ಕೊಡಿ.

ಶಾಲೆ ಕಾಲೇಜು, ರಸ್ತೆ-ಕಛೇರಿ, ಬಸ್ಸು ಬಜಾರು
ಎಲ್ಲೇ ಹೋದರು ಕಾಮಗಣ್ಣಿಗರ ಕಾಟ ಬಲು ಬೇಜಾರು.
ಮುಜುಗರದಿಂದ ಹೇಗಾದರೂ ಪಾರಾಗಬೇಕಿದೆ
ಬುರ್ಖಾ ಹಾಕಿಕೊಳ್ಳಲು ಅವಕಾಶ ಮಾಡಿಕೊಡಿ.

ಧರ್ಮಸ್ಥಳದಲ್ಲೇ ಹುಡುಗಿ ಮೇಲೆ ಬಲಾತ್ಕಾರ
ದೆಲ್ಲಿಯಲ್ಲಿ ಓಡುವ ಬಸ್ಸಿನಲ್ಲಿ ಅತ್ಯಾಚಾರ.
ದಿನಪತ್ರಿಕೆಗಳ ತುಂಬಾ ಇಂತವೇ ಸುದ್ದಿಗಳು ಭಯವಾಗ್ತಿದೆ
ಕಾಮುಕರ ಕಣ್ಣಿಗೆ ಬೀಳದಂತಿರಲು ಬೂರ್ಖಾ ತಂದುಕೊಡಿ.

ಹೋದಲ್ಲೆಲ್ಲಾ ಸಿಗುತ್ತಾರೆ ಮೋಜಣಿದಾರರು
ದೇಹದೊಂದೊಂದು ಅಂಗುಲ ಕಣ್ಣಲ್ಲೆ ಅಳೆಯುತ್ತಾರೆ.
ಹುಟ್ಟುವ ಮೊದಲೇ ನನ್ನನ್ನು ಕೊಲ್ಲಬಾರದಿತ್ತಾ ಅಪ್ಪಾ
ಹುಟ್ಟಿಸಿದ ತಪ್ಪಿಗೆ ಈಗ ಬೂರ್ಖಾ ತಂದು ಕೊಡು.

ಕೊಂದುಕೊಳ್ಳಬೇಕೆನಿಸಿತು ನನಗೆ, ಮನತುಂಬಾ ಪಶ್ಚಾತ್ತಾಪ

ಮಗಳ ಸಂಕಟಕ್ಕಲ್ಲ, ಹೆಣ್ಣಿಗೆ ತಂದೆಯಾಗಿದ್ದಕ್ಕೂ ಅಲ್ಲಾ.
ನಾನೆಷ್ಟು ಹೆಣ್ಣುಗಳ ಮೈಮಾಟ ಮೋಜಣಿ ಮಾಡಿದ್ದೇನೆ
ಎಂದು ನೆನಪಿಸಿಕೊಂಡು ನಾಚಿಕೆಯಿಂದ ಮಗಳ ಮುಂದೆ ತಲೆ ತಗ್ಗಿಸಿದೆ. 



                                                    -ಶಶಿಕಾಂತ ಯಡಹಳ್ಳಿ

ಸೋಮವಾರ, ಡಿಸೆಂಬರ್ 2, 2013

ಮನದೊಳಗಿನ ಮಿನಿ ಕವಿತೆಗಳು :






ಚಿಕ್ಕವನಾಗಿದ್ದಾಗ ನನಗೆ
ಗುರಿ ಇತ್ತು ದಾರಿ ಗೊತ್ತಿರಲಿಲ್ಲ.

ಈಗ ದೊಡ್ಡವನಾಗಿದ್ದೇನೆ
ದಾರಿ ಸಿಕ್ಕಿದೆ ಗುರಿ ಮರೆತಿದೆ.

*        *        *


ಪರಿಚಿತ ಸ್ನೇಹಿತರ                                                        


ಅಪರಿಚಿತ ಮುಖಗಳು


ಒಟ್ಟಿಗೆ ಕಾಣುವುದಿಲ್ಲ.

ಕಾಲನ ಓಟದಲ್ಲಿ  ಮುಖವಾಡ
ಕಳಚಿ ಬಿದ್ದಂತೆಲ್ಲಾ
ಸಂಬಂಧಗಳು ಉಳಿಯುವುದಿಲ್ಲ.

*        *        *

ಇತ್ತೀಚೆಗೆ ಮೆಟ್ರೋ ಸಿಟಿಯಲ್ಲಿ
ಸಂಬಂಧಗಳ ಸಾಚಾತನದ ಬಗ್ಗೆ ಗುಮಾನಿಯಿದೆ.

ಹಣದ ಹಿಂದೆ ಬಿದ್ದ ಸ್ವಾರ್ಥಿಗಳ
ನೀಚತನ ನಿರಂತರವಾಗಿ ಸಾಗಿದೆ.

*        *        *

ಪ್ರೀತಿಯ ಬಲೆಯಲಿ ಸಿಕ್ಕ ಮೇಲೆ
ಅದರ ನೆಲೆಯನರಸಿ ಹೋಗದಿರು....

ಶೋಧಿಸುವ ಕಯಾಲಿಗೆ ಬಿದ್ದವರು
ಪ್ರೀತಿಯನ್ನೇ ಕಳೆದುಕೊಂಡರು....

*        *        *

ಯಾಕೀ ನಿರಾಶೆ, ಯಾತಕೀ ಹತಾಶೆ
ನನ್ನ ನಿರೀಕ್ಷೆ ಅತಿಯಾಯಿತೇನೋ?

ಯಾಕೆ ಈ ವ್ಯವಸ್ಥೆ ಇಷ್ಟೊಂದು ದುರಾವಸ್ತೆ
ದುರಸ್ತಿ ಮಾಡಲು ಸಾಧ್ಯವೇ ಇಲ್ಲವೇನೋ?

*        *        *

ಬದುಕು ಬಲು ರೋಚಕ  ಎಂದುಕೊಂಡು
ಸೂಚನೆಗಳನ್ನು ಮೀರಿ ಮೆರೆದವನ
ಮನೆಯಲ್ಲೀಗ ಸೂತಕ.....

*        *        *

ಪರಿಚಿತ ಲೋಕದ ಅಪರಿಚಿತ ಮಜಲುಗಳು ಕಾಣುವುದಿಲ್ಲ ಕಣ್ಣಿಗೆ
ಒಟ್ಟಿಗಿದ್ದೂ ನೆಟ್ಟಗಿದ್ದರೂ ಮುಚ್ಚುಮರೆ ನಿಗೂಢಗಳು ಚುಚ್ಚುತ್ತವೆ ತಣ್ಣಗೆ.

*        *        *

ಬದುಕಿನ ದ್ವಂದ್ವ-ವೈರುಧ್ಯ  ಅಸಾಂಗತ್ಯಗಳನ್ನು
ಯಾವ ತತ್ವ-ಸಿದ್ದಾಂತಗಳೂ ಪರಿಪೂರ್ಣವಾಗಿ ವಿವರಿಸಲಾರವು...

ನಾವು ಮನುಷ್ಯರು ಇರೋದೇ ಹೀಗೆ
ಯಾವ ಧರ್ಮ-ಕರ್ಮಗಳೂ ಅಪೂರ್ಣತೆಯನ್ನು ಪರಿಹರಿಸಲಾರವು...

*        *        *

ಆಗ ತ್ರಿಕರಣ ಶುದ್ದೀಕರಣ
ಮುಂದೆ ಗುರಿಯಿತ್ತು
ಹಿಂದೆ ಗುರುವಿದ್ದ.

ಈಗ ಜಾಗತೀಕರಣ
ಗುರಿಯೂ ಇಲ್ಲಾ, ಗುರುವೂ ಇಲ್ಲಾ
ಯಾಕೆಂದರೆ ಗುರುವಿಗೆ ಗುರಿ ಗೊತ್ತಿಲ್ಲ.

*        *        *

ಗಂಡು ಹೆಣ್ಣಿನ ನಡುವಿನ ಮಜಲುಗಳು
ಯಾವ ಕಾಲವಾದರೂ ಗೋಜಲುಗಳೇ...

ಪ್ರೀತಿ ಪ್ರೇಮದ ಪರಾಕಾಷ್ಟೆಯಲ್ಲಿ ಎಲ್ಲಾ ಗೋಜಲುಗಳೂ
ಗಮ್ಯ ತಲುಪುವ ಮಜಲುಗಳೇ.....

*        *        *

ಗಂಡು ಹೆಣ್ಣುಗಳು ಅರ್ಥೈಸಿಕೊಳ್ಳುವ
ವ್ಯರ್ಥ ಪ್ರಯತ್ನ ನಿರಂತರ..

ಮೊದಲು ಒಬ್ಬರಿಗೊಬ್ಬರು
ಮಾನಸಿಕವಾಗಿ ಆಗಲೇಬೇಕು ರೂಪಾಂತರ.....

*        *        *

ಇನ್ನೂ ಎಷ್ಟೂಂತ ಹುಡುಕಲಿ, ಎಲ್ಲೀಂತ ಹುಡುಕಲಿ
ಕಳೆದುಕೊಂಡ ನೆಮ್ಮದಿಯನ್ನ....

ಪ್ರೀತಿ ಆಯ್ತು..ಮದುವೆ ಆಯ್ತು.. ಮಕ್ಕಳೂ ಆಯ್ತು
ನೆಮ್ಮದಿಯ ನೆಲೆ ಎಂದುಕೊಂಡಿದ್ದೆಲ್ಲಾ ಕೊಟ್ಟಿದ್ದು ಬರೀ ನಿರಾಶೆಯನ್ನ......

*        *        *

ಯಾವುದೇ ಕೋಮುದಳ್ಳುರಿ ಬರೀ-
ಸಂತ್ರಸ್ತರನ್ನು ಮಾತ್ರ ಸುಡುವುದಿಲ್ಲ...

ಮನುಷ್ಯತ್ವ ಇರುವವರ ಎದೆಗೆ
ಕೊಳ್ಳಿ ಇಡದೇ ಬಿಡುವುದಿಲ್ಲ.

*        *        *

ಈ ಜಾತಿವಾದ ಯಾರನ್ನೂ ಬಿಟ್ಟಿಲ್ಲ
ಸತ್ತವರನ್ನೂ ಸಹ..

ಹುಟ್ಟದವರನ್ನು ಇನ್ನೂ ತಟ್ಟಿಲ್ಲ
ಯಾಕೆಂದರೆ ಅವರಿನ್ನೂ ಹುಟ್ಟಿಲ್ಲ.....

*        *        *

ಸಂಕಟ ಸಂಕೋಲೆಗಳೊಳಗೂ
ಕ್ಷೀಣವಾಗದು ಬದುಕುವ  ಆಸೆ..
ಕಾರಣ......
ನೆಮ್ಮದಿಯ ನಾಳೆಯತ್ತ  ಇರುವ
ಅದಮ್ಯ ಭರವಸೆ...

*        *        *

ರಾಗ ತಾಳಬದ್ದವಾಗಿ
ಹಾಡುತ್ತಾರೆ ಗಾಯಕರು
ಅವರದು ಕೊರಳಿನ ದ್ವನಿ....

ಗಾರ್ದಭ ರಾಗದಲ್ಲಿ
ಕರ್ಕಶವಾಗಿ ಹಾಡುತ್ತಾರೆ ಭಿಕ್ಷುಕರು
ಅವರದು ಕರುಳಿನ ದ್ವನಿ....

*        *        *

ದೇಶದ ಆರ್ಥಿಕತೆ ಛಿದ್ರಗೊಂಡಿದೆ
ಸಾಮಾಜಿಕ ಭದ್ರತೆ ಭಗ್ನಗೊಂಡಿದೆ
ಆದರೂ  ಆಳುವವರ ಹೇಳುತ್ತಾರೆ
ಭಾರತ ಬೆಳಗುತ್ತಿದೆ.

*        *        *

                                                                   -ಶಶಿಕಾಂತ ಯಡಹಳ್ಳಿ