ಶುಕ್ರವಾರ, ಡಿಸೆಂಬರ್ 9, 2016

ತಹ ತಹ.... 66 ಮುನಿಯನ ಸ್ವಗತ ಸಂಕಟ (ಏಕವ್ಯಕ್ತಿ ಪ್ರಹಸನ):




ಸಾರ್... ನಮಸ್ಕಾರ ಸಾರ್.. ನಾನು ನಿಮಗೊತ್ತಿಲ್ವರಾ..? ಹೋಗಲಿ ಬಿಡಿ. ನನಗಂತೂ ನೀವಷ್ಟೇ ಅಲ್ಲಾ ನಿಮ್ಮ ತಲೆಲಿರೋ ಕೂದಲೂ ಬಾಳಾ ಅಂದ್ರೆ ಬಾಳಾ ಪರಿಚಯ. ನಾನ್ ಸಾಮಿ ಮುನಿಯಾ.... ಗೊತ್ತಾಗಲಿಲ್ವರಾ.. ಹಡಪದ ಮುನಿಯಾ... ಒಂದು ವರ್ಷದ ಹಿಂದೆ ಕಟ್ಟಿಂಗ್ ಮಾಡಿಸೋಕೆ ನಮ್ಮ ಕ್ಷೌರದಂಗಡಿಗೆ ಬರ್ತಿದ್ದೀರಲ್ಲಾ ದೇವ್ರು... ಸೊಲೂಪ ನೆಪ್ಪ ನಾಡ್ಕೊಳ್ಳಿ.. ಹಾಂ... ನಾನು ಮುನಿಯಾನೇ ಸಾರ್ರು... ನಾನೀಗ ಬಲೇ ಕಷ್ಟದಲ್ಲಿ ಸಿಕ್ಕಾಕೊಂಡಿವ್ನಿ ಅದ್ಕೆ ನಿಮ್ಮ ಹತ್ರ ಏನಾದ್ರೂ ಉಪಾಯ ಇದೆಯಾ ಅಂತಾ ಕೇಳೋಕೆ ಬಂದೆ ಸ್ವಾಮೇರಾ...


ನಂಗೆ ಮದುವೆ ಆಗಿ ನಾಳೆ ಬರೋ ಅಮಾಸೆಗೆ ಹತ್ತು ವರ್ಸ ಆಯ್ತುರಾ... ಆದರೆ ನನ್ನೆಂಡ್ರು ಮುನಿಸ್ಕೊಂಡು ತವ್ರಿಗೆ ಹೋಗಿ ಮೂರು ವರ್ಸಾ ಆತು ಅನ್ನಿ. ಯಾಕಂದ್ರೆ ಮದುವೆ ಟೇಮಿನಾಗೆ ತಾರಸಿ ಮನೆ ಕಟ್ಟಿಸಿ ರಾಣಿ ಹಂಗೆ ನೋಡ್ಕೋತೇನಿ ಅಂತಾ ನನ್ನೆಂಡ್ರಿಗೆ ಮಾತು ಕೊಟ್ಟಿದ್ದೆ. ಮನೆ ಕಟ್ಟೋದು ಅಸ್ಟೊಂದು ಸುಲಭಾನಾ ನೀವೇ ಹೇಳಿ ಸಾಮಿ. ಒಂದತ್ತು ಲಕ್ಷಾನಾದ್ರೂ ಬೇಕಲ್ವರಾ? ನಾನು ಬಾಳಾ ಪ್ರಯತ್ನಾ ಮಾಡಿ ವರ್ಷಕ್ಕೆ ಒಂದೊಂದು ಲಕ್ಷಾ ಉಳಿಸಿ ಕೂಡಿಟ್ಟೀವ್ನಿ. ಈಗ ಹತ್ತು ಲಕ್ಷ ರೂಪಾಯಿ ಒಟ್ಟು ಗೂಡಿಸಿ ಮನೇಲಿ ಬಚ್ಚಿಟ್ಟೀವ್ನಿ. ಇನ್ನೇನು ಗುಡಿಸಿಲಿದ್ದ ಜಾಗದಾಗೆ ತಾರಸಿ ಮನೆ ಕಟ್ಟಿಸ್ಬೇಕು ಅಂತಾ ಇದ್ದೆ ಸ್ವಾಮಿ ಅಷ್ಟರಲ್ಲಿ ಬೆವರು ಹರಿಸಿ ದುಡಿದಿಟ್ಟ ಐನೂರು ಸಾವಿರ ರೂಪಾಯಿ ನೋಟಗಳೆಲ್ಲಾ ರದ್ದು ಮಾಡಿ ಬಿಟ್ಟಿದ್ದಾರಂತೆ ಸ್ವಾಮಿ ಮೋದಿಯವ್ರು. ನಂಗಂತೂ ಆಕಾಸವೇ ತಲೆ ಮೇಲೆ ಬಿದ್ದಂಗಾಗ್ತಿದೆ. ಒಂದಲ್ಲಾ ಎರಡಲ್ಲಾ ಹತ್ತು ವರ್ಸಾ ದುಡಿದಿಟ್ಟಿರೋ ಹಣ ಅದು. ಅದೆಲ್ಲಾ ಕಪ್ಪುಹಣ ಆಗೋಗಿದೆಯಂತೆ. ನಾನು ತೆಗೆದು ಮೂರ್ನಾಲ್ಕು ಸಲಾ ನೋಡಿದೆ ಸ್ವಾಮಿ ಎಲ್ಲೂ ಸೊಲ್ಪಾನೂ ಮಸಿ ಅಂಟಿಲ್ಲಾ... ಆದರೂ ಅದ್ಯಾಕೆ ಕಪ್ಪು ಹಣ ಆಯ್ತು ಅಂತಾ ಗೊತ್ತಾಗ್ತಾನೇ ಇಲ್ಲಾ. ನೀವೇ ದಾರಿ ತೋರ್ಸಿ ಸ್ವಾಮಿ ನಿಮ್ಮ ಪಾದ ನನ್ನ ತಲೆ ಮೇಲಿರ್ಲಿ. ನಾನು ಮನೆ ಕಟ್ಟದಿದ್ರೆ ನನ್ನೆಂಡ್ರು ವಾಪಸ್ ಬರೋದಿಲ್ಲವಂತೆ. ಮನೆ ಕಟ್ಟೊಕಂತಾ ರೊಕ್ಕಾ ಕೂಡಿಟ್ರೆ ಅದೆಲ್ಲಾ ರದ್ದಾಗಿದೆಯಂತೆ ಈಗೇನು ಮಾಡೋದು ಅಂತಾ ಹೇಳಿ ಪುಣ್ಯ ಕಟ್ಕೊಳ್ಳಿ ತಂದೆ...

ಹೂಂ ಬ್ಯಾಂಕಿಗೂ ಹೋಗಿದ್ದೆ. ಯಾರದೋ ಕೈಕಾಲು ಹಿಡಿದು ಖಾತೆನೂ ತಗೆದೆ. ಆದ್ರೆ ಎರಡೂವರೆ ಲಕ್ಷ ಮಾತ್ರ ಖಾತೆಗೆ ಹಾಕ್ಬೇಕಂತೆ.. ಹೆಚ್ಚಿಗೆ ಹಾಕಿದ್ರೆ ತೊಂದರೆ ಆಗುತ್ತಂತೆ. ಎರಡೂವರೆ ಲಕ್ಷಾ ಬ್ಯಾಂಕಲ್ಲಿ ಜಮಾ ಮಾಡಿ ಬಂದೆ. ಈಗ ಬಾಕಿ ಹಣ ಏನು ಮಾಡೋದು... ಹೆಂಗೆ ಹೊಸ ನೋಟಿಗೆ ಬದಲಾಯಿಸೋದು ಅಂತಾ ಗೊತ್ತಾಗ್ತಿಲ್ಲಾ ಸಾಮಿ... ನೀವು ಪೇಪರಿನೋರು.. ನಿಮಗೆಲ್ಲಾ ಗೊತ್ತಿರುತ್ತೆ... ಏನಾದರೂ ದಾರಿ ತೋರ್ಸಿ ಪುಣ್ಯ ಕಟ್ಕೊಳ್ಳಿ ಸಾರು.
.
ಹೂಂ ಲಾಯರ್ರತ್ರಾನೂ ಹೋಗಿದ್ದೆ ಸ್ವಾಮಿ. ನನ್ನತ್ರಾ ಕಟಿಂಗ್ ಮಾಡ್ಸೊಕೆ ಅವ್ರು ಪ್ರತಿ ತಿಂಗಳೂ ಬರ್ತಾರೆ. ಅವರು ಹೇಳಿದ್ರು ಎಲ್ಲಾ ಹಣಾನೂ ಬ್ಯಾಂಕಿಗೆ ಕಟ್ಟಬೋದಂತೆ. ಆದ್ರೆ ಎರಡೂವರೆ ಲಕ್ಷ ಮಿಕ್ಕದ್ದೆಲ್ಲಾ ಕಪ್ಪು ಹಣವಂತೆ. ಅದಕ್ಕೆ ಅದೇನೋ ಮಾಡ್ಬೇಕು ಅಂದ್ರಲ್ಲಾ.... ಹಾಂ ಡಿಕ್ಲರೇಸನ್ನು ಮಾಡ್ಬೇಕಂತೆ. ಹಿಂಗಿಂಗೆ ನನ್ನತ್ರ ಇಷ್ಟಿಷ್ಟು ಹೆಚ್ಚಿಗೆ ರೊಕ್ಕಾ ಇದೆ.. ಇದನ್ನ ಬಿಳಿ ಮಾಡ್ಕೋಬೇಕಿದೆ...ಅಂತಾ ಟ್ಯಾಕ್ಸ ಆಪೀಸಿನಾಗೆ ಬರ್ಕೊಡಬೇಕಂತೆ. ಅದ್ಯಾಂಗೆ ಸ್ವಾಮಿ ನಾನು ದುಡಿದ ಕಾಸು ಕಾಳ ಧನ ಆಗುತ್ತೆ. ಯಾರದಾದರೂ ತಲೆ ಒಡದೋ ಇಲ್ಲಾ ಮೋಸಾ ಮಾಡಿಯೋ ಸಂಪಾದಿಸಿದ್ದೀನಾ? ಒಂದಿನಾನೂ ಸುಮ್ಮನೆ ಖಾಲಿ ಕೂಡದೇ ದುಡಿದು ಸಂಪಾದನೆ ಮಾಡಿದ ದುಡ್ಡು ಸ್ವಾಮೇರ... ಈಗದು ಕಾಳಧನ ಆಗೊಗಿದೆಯಂತೆ... ಏನು ಮಾಡೊದು ನೀವೇ ಒಸಿ ಹೇಳ್ರಲಾ?


ಹೂಂ ಅದನ್ನೂ ಮಾಡಿದೆ. ನನ್ನತ್ರಾ ಕಟಿಂಗ್ ಮಾಡಿಸ್ಕೊಳ್ಳೋಕೆ ಅಂತಾ ಬರ್ತಿದ್ರಲ್ಲಾ ಟ್ಯಾಕ್ಸಾಫಿಸರು.. ಅವರನ್ನೂ ಕೇಳಿದೆ ಸ್ವಾಮಿ.. ಬಾಕಿ ಉಳಿದ ಏಳು ಲಕ್ಷ ರೂಪಾಯಿಯೊಳಗೆ ಅರ್ಧದಷ್ಟು ಹಣ ಅಂದ್ರೆ ಮೂರುವರೆ ಲಕ್ಷ ಹಣವನ್ನ ಸರಕಾರಕ್ಕೆ ದಂಡ ಕಟ್ಟಬೇಕಂತೆ. ಮಿಕ್ಕ ಮೂರುವರೆ ಲಕ್ಷ ರೂಪಾಯಿಯೊಳಗೂ ಮತ್ತರ್ಧದಷ್ಟು ಅಂದರೆ ಒಂದೂ ಮುಕ್ಕಾಲು ಲಕ್ಷದಷ್ಟು ಕಾಸನ್ನ ಬ್ಯಾಂಕಲ್ಲಿ ಠೇವಣಿ ಮಡಗ್ಬೇಕಂತೆ. ಅದನ್ನ ನಾಲ್ಕು ವರ್ಸ ಮುಟ್ಟೋಹಂಗಿಲ್ವಂತೆ. ಕೊನೆಗೂ ನಂಗೆ ಉಳಿಯೋದು ಒಂದೂ ಮುಕ್ಕಾಲು ಲಕ್ಷ ಹಾಗೂ ಬ್ಯಾಂಕಲ್ಲಿರೋ ಎರಡೂವರೆ ಲಕ್ಷ ಅಂದ್ರೆ ನಾಲ್ಕೂ ಕಾಲು ಲಕ್ಷ ಮಾತ್ರವಂತೆ ಸಾಮಿ. ಇಷ್ಟು ಹಣದಾಗೆ ನಾನು ತಾರಸಿ ಮನೆ ಹೆಂಗೆ ಕಟ್ಟಲಿ... ತವರಿಗೆ ಹೋದ ಹೆಂಡತೀನ ಹೆಂಗೆ ಕರೆತರಲಿ.. ನಾನೂ ಕಾಳಧನದ ಕಳ್ಳ ಎನ್ನುವ ಅವಮಾನ ಹೆಂಗೆ ಸಹಿಸಿಕೊಳ್ಲಿ... ಏನು ಮಾಡ್ಬೇಕು ಅಂತಾ ಗೊತ್ತಾಗ್ತಿಲ್ಲಾ.... ನೀವೇ ಹೇಳಿ ನಾನು ಕಳ್ಳನಾ...? ನಾನು ದುಡಿದ ಹಣ ನಂದಲ್ಲವಾ? ಹತ್ತು ವರ್ಸಾ ನಾ ಬೆವರು ಸುರ್ಸಿ ಸಂಪಾದಿಸಿದ್ದೆಲ್ಲಾ ಸುಳ್ಳಾ? ನೀವೇ ಮೂಸಿ ನೋಡಿ ನಾನು ದುಡಿದ ಪ್ರತಿಯೊಂದು ನೋಟಿನಲ್ಲೂ ನನ್ನ ಬೆವರಿನ ವಾಸನೆ ಇದೆ... ಆದರೆ... ವಾಸನೆ ಭಾವನೆಗಳನ್ನ ಕಳಕೊಂಡ ಕುರುಡು ಕಾನೂನಿಗೆ ನನ್ನ ಸಂಕಟ ಹೆಂಗೆ ಅರ್ಥ ಆಗುತ್ತೆ ಸ್ವಾಮಿ... ಹಿಂದೆ ಮುಂದೆ ನೋಡದೇ ಕಾಯ್ದೆ ಮಾಡೊರಿಗೆ ನಮ್ಮಂತಾ ಶ್ರಮಿಕರ ನೋವು ಎಲ್ಲಿ ತಿಳಿಯುತ್ತೆ ನೀವೇ ಹೇಳಿ. ಇದೆಲ್ಲಾ ಮೋಸಾ ಮಾಡಿ ಸಂಪಾದಿಸಿದ್ದಲ್ಲಾ.... ದುಡಿದ ಕಾಸು. ಆದರೆ ಈಗ ಇದೆಲ್ಲಾ ರದ್ದೀ ಕಾಗದ ಅಂತೆ. ನಾನು ಕಳ್ಳನಂತೆ... ಹೌದು ನಾನು ಕಳ್ಳನೇ... ಎಲೆಕ್ಷನ್ನಿನಾಗೆ ನೋಟು ತಗೊಂಡು ಓಟು ಹಾಕಿ ಕಳ್ಳರಿಗೆ ದೇಶ ಆಳೋ ಹಾಗೆ ಸಪೋರ್ಟ್ ಮಾಡಿದ ನಾನು ನನ್ನಂತವರು ನಿಜವಾದ ಕಳ್ಳರೇ... ಸರಿಯಾಗಿ ಶಿಕ್ಷೆಯಾಗಿದೆ ನಮ್ಗೆ. ನನ್ನ ನೋಟು ನನ್ನದಲ್ಲಾ.... ನನ್ನ ಶ್ರಮದ ಫಲ ನನ್ನದಲ್ಲಾ.... ನನ್ನದೆನ್ನುವುದಿಲ್ಲಿ ಏನೂ ಇಲ್ಲಾ... ಎಲ್ಲಾ ಮಾಯೆ.... ಜಗವೆಲ್ಲಾ ಮಾಯೆ...ಹಾಂ ನಾನೊಬ್ಬ ಕಳ್ಳ.... ಕಪ್ಪು ಹಣದ ಕಳ್ಳ... ತಗೊಳ್ಲಿ ರದ್ದೀ ರೊಕ್ಕಾ ನೀವೇ ಇಟ್ಕೊಳ್ಳಿ... ಅಯ್ಯೋ ನನ್ನ ಕನಸಿನ ಮನೆ ಮುರಿದು ಬಿತ್ತು... ನನ್ನ ಸಂಸಾರ ಹಾಳಾಗಿ ಹೋಯ್ತು... ಇನ್ನು ಯಾರಿಗಂತಾ ದುಡೀಲಿ... ಯಾತಕ್ಕಂತಾ ಬದಕ್ಲಿ... ಇಡೀ ಬದುಕೇ ಬರಬಾದಾಗೋಯ್ತು... ಕಳ್ಳ ನಾನೊಬ್ಬ ಕಳ್ಳ.....

(ಹುಚ್ಚನಂತೆ ಅಂಗಿ ಹರಿದುಕೊಂಡು... ಹಳೆಯ ನೋಟುಗಳನ್ನು ಎಸೆಯುತ್ತಾ ಮುನಿಯ ಹೊರಡುತ್ತಾನೆ..)

- ಶಶಿಕಾಂತ ಯಡಹಳ್ಳಿ


ಗುರುವಾರ, ಡಿಸೆಂಬರ್ 8, 2016

ತಹ ತಹ.....65 ನೋಟು ರದ್ದತಿಯಿಂದ ದೇಶಕ್ಕೆ ಆಘಾತ: ಅಪ್ರಾಮಾಣಿಕ ಆದೇಶದಿಂದಾದ ಅನಾಹುತ;


ಕೆರೆ ಖಾಲಿಮಾಡಿಸಿದ ದೊರೆ: ಉಸಿರುಗಟ್ಟಿದ ಮೀನುಗಳು.. ಪಾರಾದವು ಮೊಸಳೆಗಳು...



ಹೊಸ ನೋಟಿನ ಕಥೆ ಹಾಗೂ ಜನಸಾಮಾನ್ಯರ ವ್ಯಥೆ ಆರಂಭಗೊಂಡು ಡಿಸೆಂಬರ್ ೮ಕ್ಕೆ ಸರಿಯಾಗಿ ಒಂದು ತಿಂಗಳು ತುಂಬಿತು. ದಿನದಿಂದ ದಿನಕ್ಕೆ ಸಮಸ್ಯೆಗಳು ಬಿಗಡಾಯಿಸಿ ಹೊಸ ಆಯಾಮಗಳನ್ನು ಪಡೆದವೇ ಹೊರತು ಸಧ್ಯಕ್ಕೆ ತಾಪತ್ರಯಗಳು ಬಗೆಹರಿಯುವ ಲಕ್ಷಣಗಳೇನಿಲ್ಲ. ಪೂರ್ವಸಿದ್ದತೆ ಇಲ್ಲದೇ ತೆಗೆದುಕೊಂಡ ಆಘಾತಕಾರಿ ಆರ್ಥಿಕ ನಿರ್ಣಯಗಳಿಂದಾಗುತ್ತಿರುವ ಡ್ಯಾಮೇಜ್ ಕಂಟ್ರೋಲ್ ಮಾಡಲು ಕೇಂದ್ರ ಸರಕಾರ ಹರಸಾಹಸ ಮಾಡುತ್ತಿದೆಯಾದರೂ ನಿಯಂತ್ರಣಕ್ಕೆ ಬರುತ್ತಿಲ್ಲಾ. ಕಾಳಧನವೆಂಬ ರೋಗದ ಮೂಲಕ್ಕೆ ಮದ್ದರೆಯುವುದು ಬಿಟ್ಟು ಇಡೀ ದೇಹಕ್ಕೆ ತುರಿಕೆ ಪುಡಿ ಸವರಿ ವ್ಯಾಧಿ ಗುಣವಾಗುವವರೆಗೂ ಉರಿ ತಡೆದುಕೊಳ್ಳಿ ಎಂದರೆ ರೋಗ ಗುಣವಾಗುವುದೇ? ಕಾಳಧನಿಕರನ್ನೇ ಜೊತೆಯಲ್ಲಿಟ್ಟುಕೊಂಡು ರಕ್ಷಿಸುತ್ತಾ ಕಪ್ಪುಹಣವನ್ನು ಬೇರುಸಮೇತ ಕಿತ್ತುಹಾಕುತ್ತೇನೆ ಎನ್ನುವ ಮೋದಿಯ ಮೋಡಿ ಮಾತುಗಳಲ್ಲಿ ಸತ್ಯವೆಂಬುದೇನಾದರೂ ಇದೆಯಾ?   

ಕಳೆದ ಚುನಾವಣೆಯ ಸಂದರ್ಭದಲ್ಲಿ ಹರ್ ಬಚ್ಚಾ ಜಾನತಾ ಹೈ ಕಾಲಾ ಧನ್ ಸ್ವಿಸ್ ಬ್ಯಾಂಕ್ ಮೇ ಹೈ ಎಂದು ದೇಶಾದ್ಯಂತ ಬಾಯಿ ಮತ್ತೊಂದು ಬಡಿದುಕೊಂಡ ಮೋದಿ ಸಾಹೇಬರು ವಿದೇಶದಲ್ಲಿರುವ ಸ್ವದೇಶಿ ಕಾಳಧನಿಕರ ಕಪ್ಪು ಹಣವನ್ನು ಮರಳಿ ತಂದು ಪ್ರತಿಯೊಬ್ಬ ದೇಶವಾಸಿಗಳ ಬ್ಯಾಂಕ್ ಅಕೌಂಟಿಗೆ ಹದಿನೈದು ಲಕ್ಷ ರೂಪಾಯಿ ಹಣ ಜಮಾವಣೆ ಮಾಡಲಾಗುವುದೆಂದು ಸುಳ್ಳು ಭರವಸೆ ಕೊಟ್ಟು ಜನರಲ್ಲಿ ಇಲ್ಲದ ಭ್ರಮೆ ಹುಟ್ಟಿಸಿ ದೇಶವಾಳುವ ಪಟ್ಟ ಗಿಟ್ಟಿಸಿಕೊಂಡರು. ಆದರೆ.. ದೇಶದ ಚುಕ್ಕಾಣಿ ಹಿಡಿದ ನಂತರ ಮೋದಿ ಸಾಹೇಬರಿಗೆ ಗೊತ್ತಾಯಿತು ಸ್ವಿಸ್ ಬ್ಯಾಂಕಿನ ಹಣಕ್ಕೆ ಕೈ ಹಾಕಿದರೆ ತಮ್ಮ ಸಂಘಪರಿವಾರದ ಮಿತ್ರರ ಹಣವೂ ಅಲ್ಲಿ ಅಧಿಕವಾಗಿದೆಯೆಂದು, ಬಿಜೆಪಿ ಸರಕಾರದ ಆರ್ಥಿಕ ಆಧಾರ ಸ್ತಂಭವಾಗಿರುವ ಅಂಬಾನಿ ಆದಾನಿಯವರ ಕಪ್ಪು ಹಣ ಸ್ವಿಸ್ ಬ್ಯಾಂಕಲ್ಲಿರುವುದೆಂದು, ಪನಾಮಾ ಪೇಪರ‍್ಸ್‌ಗಳ ವಹಿವಾಟಿನಲ್ಲಿ ಹೊರಬಂದ ಹೆಸರುಗಳಲ್ಲಿ ಬಿಜೆಪಿ ಸಮರ್ಥಕ ಉದ್ಯಮಿಗಳ ದೊಡ್ಡ ಪಟ್ಟಿಯೇ ಇದೆಯೆಂದು ಮತ್ತು ಸ್ವಿಸ್ ಬ್ಯಾಂಕಿಂದಾ ಕಾಳಧನ ಹೊರತರುವುದು ಅಂದುಕೊಂಡಷ್ಟು ಸುಲಭ ಸಾಧ್ಯವಿಲ್ಲವೆಂದು.

ಆದರೆ.. ಭರವಸೆ ಕೊಟ್ಟು ಸುಮ್ಮನಿದ್ದರೆ ಜನ ಸುಮ್ಮನಿದ್ದಾರಾ? ಅಲ್ಲಲ್ಲಿ ಭಿನ್ನ ದ್ವನಿಗಳು ಮೊಳಗಿದವು. ಕಪ್ಪುಹಣ ಎಲ್ಲಿ ಎಂದು ಪ್ರಶ್ನೆಗಳು ಎದ್ದವು. ಸಾವಕಾಶವಾಗಿ ಜನಸಾಮಾನ್ಯರಲ್ಲಿ ಮೋದಿ ಮತ್ತೊಬ್ಬ ಸುಳ್ಳುಗಾರ ಎನ್ನುವುದು ಸಾಬೀತಾಗತೊಡಗಿತು. ಜನರಲ್ಲಿ ಹುಟ್ಟಿದ ಪ್ರತಿಕೂಲಕರ ಭಾವನೆಯನ್ನು ಹೊಡೆದು ಹಾಕಲು ಸರ್ಜಿಕಲ್ ಸ್ಟ್ರೈಕ್ ದಾಳವನ್ನು ಎಸೆದು ದೇಶಭಕ್ತಿಯ ಉನ್ಮಾದವನ್ನು ಹುಟ್ಟಿಸಲಾಯಿತಾದರೂ ಅದು ಕೇವಲ ಮೋದಿ ಭಕ್ತರ ಭಜನೆಗೆ ಸೀಮಿತವಾಯಿತು. ದೇಶಪ್ರೇಮ ಎನ್ನುವ ಉನ್ಮಾದವೂ ಹೆಚ್ಚು ದಿನ ಬಾಳಲಿಲ್ಲ. ಜನ ಮತ್ತೆ ಮತ್ತೆ ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪು ಹಣದ ಲೆಕ್ಕ ಕೇಳತೊಡಗಿದರು. ಇದು ಮೋದಿ ಸರಕಾರಕ್ಕೆ ನುಂಗಲಾರದ ತುತ್ತಾಯಿತು.

ಸರಕಾರ ಸುಮ್ಮನೇ ಕೂತಿಲ್ಲಾ. ಜನರ ಒಳತಿಗಾಗಿ ಏನೋ ಮಾಡುತ್ತಿದೆ ಎನ್ನುವಂತೆ ತೋರಿಸಬೇಕಾದ ಅನಿವಾರ್ಯತೆ ಮೋದಿ ಮೇಲೆ ಒತ್ತಡವನ್ನು ಹೇರಿತು. ವಿದೇಶದಲ್ಲಿರುವ ಕಪ್ಪು ಹಣ ತರಲಾಗದಿದ್ದರೂ ಸ್ವದೇಶದಲ್ಲಿರುವ ಕಪ್ಪುಹಣವನ್ನಾದರೂ ಹೊರತಂದು ತನ್ನ ಜನಪ್ರೀಯತೆಯನ್ನು ಉಳಿಸಿ ಬೆಳೆಸಿಕೊಳ್ಳುವ ಮಹಾ ಕೆಲಸಕ್ಕೆ ಮೋದಿ ತಯಾರಿ ಮಾಡಿಕೊಂಡರು. ಆಗ ಉರ್ಜಿತ್ ಪಟೇಲ್ ಎನ್ನುವ ರಿಲೈಯನ್ಸ್ ಕಂಪನಿಯ ಮಾಜಿ ಅಧಿಕಾರಿ ಹಾಗೂ ಗುಜರಾತಿ ಆರ್ಥಿಕ ತಜ್ಞ ಊರ್ಜಿತ್ ಪಟೇಲ್‌ರವರನ್ನು ರಿಜರ್ವ ಬ್ಯಾಂಕ್ ನಿರ್ದೇಶಕರನ್ನಾಗಿ ನಿಯಮಿಸಿ ದೇಶಾದ್ಯಂತ ಸಂಚಲನವನ್ನು ಹುಟ್ಟುಹಾಕುವ ಮಹತ್ವಾಂಕಾಂಕ್ಷೀ ಯೋಜನೆಯೊಂದನ್ನು ಗುಟ್ಟಾಗಿ ರೂಪಿಸಲಾಯಿತು. ಭಕ್ತರ ಭಾಷೆಯಲ್ಲಿ ಹೇಳುವುದಾದರೆ ಅದು ನೋಟಿನ ಮೇಲೆ ಸರ್ಜಿಕಲ್ ಸ್ಟ್ರೈಕ್. ಮೋದಿ ಭಾಷೆಯಲ್ಲಿ ಕಾಳಧನಿಕರ ಮೇಲೆ ಸರ್ಜಿಕಲ್ ಸ್ಟ್ರೈಕ್. ತಮ್ಮ ಪಕ್ಷ ಹಾಗೂ ಸಂಘಪರಿವಾರದ ಪ್ರಮುಖ ಕುಳಗಳಿಗೆ ಇದರ ಬಗ್ಗೆ ಎಂಟು ತಿಂಗಳ ಮೊದಲೇ ಗುಟ್ಟಾಗಿ ತಿಳಿಸಿ ಅವರಲ್ಲಿದ್ದ ಎಲ್ಲಾ ಅಕ್ರಮ ಹಣವನ್ನು ಸಕ್ರಮಗೊಳಿಸಲು ಅವಕಾಶಮಾಡಿಕೊಟ್ಟು, ಅಂಬಾನಿಯಂತವರಿಗೆ ಕಪ್ಪು ಹಣದಲ್ಲಿ  ಜಿಯೋದಂತಹ ಭವಿಷ್ಯದ ಲೂಟಿ ಯೋಜನೆಯನ್ನು ರೂಪಿಸಲು ಸಮಯಕೊಟ್ಟು ಅತ್ಯಧಿಕ ಮೌಲ್ಯದ ನೋಟುಗಳನ್ನೆಲ್ಲಾ ಹಿಂಪಡೆದು ಎರಡು ಸಾವಿರ ರೂಪಾಯಿಗಳ ಹೊಸ ನೋಟನ್ನು ರಿಸರ್ವ ಬ್ಯಾಂಕ್ ಮೂಲಕ ನವೆಂಬರ್ 8 ರಂದು ಬಿಡುಗಡೆ ಮಾಡಲಾಯಿತು. ಅವತ್ತಿಂದಾ ಜನರ ಪರದಾಟ ದಿನನಿತ್ಯದ ಗೋಳಾಯಿತು.

ದೇಶದ ಒಳಗೆ ಕಪ್ಪು ಹಣ ಶ್ರೀಮಂತರ ಬಳಿ ಹೇರಳವಾಗಿದೆ. ನೋಟು ಅಮಾನ್ಯತೆಯಿಂದಾಗಿ ಅದೆಲ್ಲಾ ನಿರ್ಣಾಮವಾಗುತ್ತದೆ. ಬ್ಯಾಂಕ್ ಮೂಲಕವೇ ಹಣದ ವಿನಿಮಯ ನಡೆಯುವುದರಿಂದ ಬಿಳಿ ಹಣ ಮಾತ್ರ ಹೊರಗೆ ಬರುತ್ತದೆ. ಜೊತೆಗೆ ಪಾಕಿಸ್ತಾನ ಪ್ರಾಯೋಜಿತ ಕೋಟಾ ನೋಟುಗಳ ಹಾವಳಿ ನಿಂತುಹೋಗುತ್ತದೆ. ಭಯೋತ್ಪಾದಕರ ಖರ್ಚಿಗೆ ಕೂಡಾ ಹಣವಿಲ್ಲದೇ ಭಯೋತ್ಪಾದನೆ ನಿಂತೇ ಹೋಗುತ್ತದೆ.., ಎನ್ನುವ ಭಾರಿ ಭರವಸೆಗಳನ್ನು ಮೋದಿ ಹಾಗೂ ಅವರ ವೃಂದಗಾಣ ಮಾಡುವ ಭಕ್ತರು ಪ್ರಚಾರ ಮಾಡತೊಡಗಿದರು. ಐವತ್ತು ದಿನಗಳ ಕಾಲ ಸಂಕಷ್ಟ ತಡೆದುಕೊಳ್ಳಿ.. ಎಲ್ಲಾ ಕಪ್ಪು ಹಣ ರದ್ದಾಗಿ ಬರುವ ದಿನಗಳು ಸುಖಮಯವಾಗುತ್ತವೆ.. ಅಕ್ರಮ ಹಣವನ್ನು ಸಕ್ರಮ ಮಾಡಿದಾಗ ರಿಕವರಿ ಆಗುವ ಹಣವನ್ನು ಬಡಜನರ ಅಬ್ಯುದಯಕ್ಕೆ ಬಳಕೆ ಮಾಡಲಾಗುವುದು ಎನ್ನುವ ಮತ್ತೊಂದು ಭ್ರಮೆಯನ್ನು ವ್ಯವಸ್ಥಿತವಾಗಿ ಸೃಷ್ಟಿಸಲಾಯಿತು. ಸಂಕಷ್ಟ ಪೀಡಿತ ಜನರ ಮೂಗಿಗೆ ಬೆನ್ನೆ ಸವರಲಾಯಿತು. ಮಧ್ಯಮ ವರ್ಗದ ಜನರೂ ಸಹ ಇದನ್ನು ನಂಬಿದರು. ದೇಶದ ಒಳಿತಿಗಾಗಿ ತಾವು ಮಾಡುವ ಅಲ್ಪ ತ್ಯಾಗವೆಂದು ನಂಬಿದ ಕೆಲವರು ಬ್ಯಾಂಕಿನ ಸರದಿ ಸಾಲಲ್ಲಿ ನಿಂತು ಕೊಟ್ಟಷ್ಟು ಪಡೆದು ಸಂಕಷ್ಟದಲ್ಲೇ ತೃಪ್ತರಾದರು. ಅದರೆ.. ಅಂದುಕೊಂಡಿದ್ದೇ ಒಂದು.  ಆಗಿದ್ದೇ ಮತ್ತೊಂದು

ಮೋದಿ ಪಟಾಲಂ ಹೇಳಿಕೊಳ್ಳುವಂತೆ ದೇಶದೊಳಗಿನ ಕಪ್ಪು ಹಣ ಬ್ರಹತ್ ಸಂಖ್ಯೆಯಲ್ಲಿ ಹೊರಗೆ ಬರಲೇ ಇಲ್ಲ. ಅದು ಬರುವುದೂ ಇಲ್ಲಾ. ಆದಾಯ ತೆರಿಗೆ ಇಲಾಖೆಯ ಮಾಹಿತಿಯ ಪ್ರಕಾರವೇ ಇಡೀ ದೇಶದಲ್ಲಿ ನಗದು ರೂಪದಲ್ಲಿರುವ ಕಪ್ಪುಹಣ ಶೆ.4 ರಿಂದ ಶೆ.6 ರಷ್ಟಿದೆ. ಈ ರೀತಿ ಕಪ್ಪು ಹಣ ಇರುವವರು ವ್ಯವಸ್ಥೆಯೊಳಗೆ ಇರುವ ದೌರ್ಬಲ್ಯಗಳನ್ನು ಬಳಸಿಕೊಂಡು ತಮ್ಮಲ್ಲಿರವ ಕಪ್ಪು ಹಣವನ್ನೆಲ್ಲಾ ತಿಜೋರಿಯಿಂದ ತೆಗೆದು ಅಡ್ಡದಾರಿಗಳ ಮೂಲಕ ಹೊಸನೋಟುಗಳನ್ನು ಪಡೆದು ಮತ್ತೆ ತಮ್ಮ ಖಜಾನೆಗಳಿಗೆ ಸೇರಿಸಿಕೊಂಡರು. ಸಾಮಾನ್ಯ ಜನರು ತಮ್ಮದೇ ಹಣವನ್ನು ಬ್ಯಾಂಕಿನಿಂದ ಪಡೆಯಲು ಉದ್ದನೆಯ ಲೈನುಗಳಲ್ಲಿ ನಿಂತು ಹರಸಾಹಸಪಡುತ್ತಿರುವಾಗ.. ದೊಡ್ಡ ದೊಡ್ಡ ಬಂಡವಾಳಿಗರು ಬ್ಯಾಂಕು ಮ್ಯಾನೇಜರುಗಳು ಹಾಗೂ ಬ್ಯಾಂಕ್ ಸಿಬ್ಬಂದಿಗಳನ್ನೇ ಆಮಿಷಕ್ಕೆ ಒಳಪಡಿಸಿ ರದ್ದಾದ ನೋಟುಗಳನ್ನು ಕೋಟಿಗಳ ಲೆಕ್ಕದಲ್ಲಿ ಹೊಸ ನೋಟುಗಳಿಗೆ ಬದಲಾಯಿಸಿಕೊಂಡರು. ಇನ್ನು ಕೆಲವು ದುರುಳರು ಬಡವರು ಹಾಗೂ ಮಧ್ಯಮ ವರ್ಗದವರ ಅಕೌಂಟುಗಳಿಗೆ ತಮ್ಮ ಹಳೆಯ ನೋಟುಗಳನ್ನು ಹಾಕಿಸಿ.. ಹೊಸ ನೋಟುಗಳನ್ನು ಮರಳಿ  ಪಡೆದು ತಮ್ಮ ಸಂಪತ್ತನ್ನು ಸೇಫ್ ಮಾಡಿಕೊಂಡರು. ಅಧಿಕಾರಿಗಳಾದ ಜಯಚಂದ್ರ, ಚಿಕ್ಕರಾಯಪ್ಪ ಹಾಗೂ ಅವರ ಜೊತೆಗಾರ ಗುತ್ತಿಗೆದಾರರ ಮನೆಯಲ್ಲಿ ಕೊಟ್ಯಾಂತರ ರೂಪಾಯಿ ಹೊಸ ನೋಟುಗಳು ದೊರೆತವು. ಒಂದೇ ಒಂದು ಸಲವೂ ಬ್ಯಾಂಕಿನ ಮುಂದೆ ಸರದಿಯಲ್ಲಿ ನಿಲ್ಲದ ಇಂತಹ ಸಹಸ್ರಾರು ಅಧಿಕಾರಿಗಳು, ಗುತ್ತಿಗೆದಾರರು, ಸಿರಿವಂತರುಗಳು ತಮ್ಮ ಅಗಣಿತ ಹಣವನ್ನು ಅಕ್ರಮ ಮಾರ್ಗಗಳಲ್ಲಿ ಬದಲಾಯಿಸಿಕೊಂಡರು. ಇನ್ನೊಬ್ಬ ಅಧಿಕಾರಿ ಭೀಮಾನಾಯಕ್ ಜನಾರ್ಧನ ರೆಡ್ಡಿ ಮಗಳ ಮದುವೆಗೆ ನೂರು ಕೋಟಿ ಬೆಲೆಯ ರದ್ದಾದ ನೋಟುಗಳನ್ನು ಹೊಸ ನೋಟಿಗೆ ಬದಲಾಯಿಸಿಕೊಟ್ಟಿದ್ದನ್ನು ಭೀಮಾನಾಯಕ್ ಕಾರ್ ಡ್ರೈವರ್ ರಮೇಶ್ ಎನ್ನುವಾತ ವಿವರವಾಗಿ ಬರೆದಿಟ್ಟು ಸತ್ತಿದ್ದಾನೆ. ಚೆನೈನಲ್ಲಿ  ಮರಳುದಣಿ ಶೇಖರ್ ರೆಡ್ಡಿ ಎನ್ನುವ ಉದ್ಯಮಿ ಹಾಗೂ ಅವನ ಸಹಚರರಿಂದ ವಶಪಡಿಸಿಕೊಂಡ 90 ಕೋಟಿ ಬ್ರಹತ್ ಪ್ರಮಾಣದ ಹಣದಲ್ಲಿ ಹತ್ತು ಕೋಟು ರೂಪಾಯಿಗಳಷ್ಟು ಹೊಸದಾದ ಎರಡು ಸಾವಿರ ರೂಪಾ ನೋಟುಗಳು ಸೇರಿವೆ. ಅದು ಹೇಗೆ ಹಳೆಯ ನೋಟುಗಳನ್ನು ಈ ದಗಾಕೋರರು ಅಡ್ಡದಾರಿಯಲ್ಲಿ ಹೊಸ ನೋಟನ್ನಾಗಿ ಪರಿವರ್ತಿಸುತ್ತಾರೆ ಎನ್ನುವುದಕ್ಕೆ ಸಾಕ್ಷಿಗಳು ಅಲ್ಲಲ್ಲಿ ದೊರೆಯುತ್ತಿವೆ. ಅಂದರೆ ಅಕ್ರಮವಾಗಿ ಸಂಗ್ರಹವಾಗಿದ್ದ ಹಳೆಯ ನೋಟುಗಳು ನಾಶವಾಗುವ ಬದಲಾಗಿ ಹೊಸನೋಟಾಗಿ ಪರಿವರ್ತನೆಗೊಂಡು ಮತ್ತೆ ಕಪ್ಪುಹಣವಾಗಿಯೇ ಭಾಗ್ಯವಂತರ ಪೆಟ್ಟಿಗೆ ಸೇರುತ್ತಿರುವುದು ಈಗಾಗಲೇ ಸಾಬೀತಾಗಿದೆ.

ಇಷ್ಟಕ್ಕೂ ಹೀಗೆ ತೆರಿಗೆ ಇಲಾಖೆಗಳ ದಾಳಿಗಳಿಂದಲೇ ಕಪ್ಪು ಹಣ ಹೊರಗೆ ತಂದು ಕಾಳಧನಿಕರನ್ನು ಮಟ್ಟಹಾಕುವುದಿದ್ದರೆ ಈ ನೋಟು ರದ್ದತಿಯ ಪ್ರಹಸನವಾದರೂ ಯಾಕೆ ಬೇಕಾಗಿತ್ತು. ತೆರಿಗೆ ಇಲಾಖೆಗೆ ದಂಡ ಕಟ್ಟಿ ಅಕ್ರಮ ಸಂಪಾದನೆಯನ್ನು ಸಕ್ರಮ ಮಾಡಿಕೊಳ್ಳಲು ಸರಕಾರವೇ ಅಧೀಕೃತವಾಗಿ ಅವಕಾಶ ಮಾಡಿಕೊಟ್ಟಿದ್ದರಿಂದ ಜನರನ್ನು ಶೋಷಿಸಿ ಸಂಪಾದಿಸಿದ ಕಳ್ಳ ಕದೀಮರಿಗೆ ಶಿಕ್ಷೆ ಇಲ್ಲದಂತಾಗಿದ್ದಷ್ಟೇ ಅಲ್ಲಾ ಅಂತಾ ಬಲುಗಳ್ಳರ ಹೆಸರನ್ನೂ ಗೌಪ್ಯವಾಗಿಟ್ಟು ಸರಕಾರ ಕಳ್ಳಕಾಕರ ರಕ್ಷಣೆಗೆ ನಿಂತಿದ್ದು ಸೂರ್ಯ ಸತ್ಯವಾಗಿರುವಾಗ ಈ ಆರ್ಥಿಕ ಸರ್ಜಿಕಲ್ ಸ್ಟ್ರೈಕ್ ನಡೆಸಿ ಜನಸಾಮಾನ್ಯರನ್ನ್ಯಾಕೆ ಹೀಗೆ ಗೋಳು ಹೋಯ್ದುಕೊಳ್ಳಬೇಕಿತ್ತು? ನೋಟು ರದ್ದು ಮಾಡಿ ಹೊಸ ನೋಟು ವಿತರಿಸಿದರೆ ಕಪ್ಪುಹಣ ನಿಲ್ಲುತ್ತದೆ ಎನ್ನುವುದು ದಿಟವಾದರೆ ಈಗ ದಿನನಿತ್ಯ ಕಾಳಧನಿಕರ ಮನೆಯನ್ನು ರೇಡ್ ಮಾಡಿ ಹಿಡಿಯುವ ಅಗತ್ಯವಾದರೂ ಏನಿತ್ತು? ಅಂದರೆ.. ಕೆಲವು ಕಳ್ಳರಿನ್ನು ಹಿಡಿಯಲು ಬಹುಸಂಖ್ಯಾತ ಜನರ ಬದುಕನ್ನೇ ಅಲ್ಲೋಲ ಕಲ್ಲೋಲ ಮಾಡಿದ್ದು ಅಕ್ಷಮ್ಯ. ಮೊಸಳೆಗಳ ಹಿಡಿಯಲೆಂದು ಕೆರೆಯ ನೀರನ್ನು ಬರಿದುಗೊಳಿಸಿ ಮೀನುಗಳು ಉಸಿರುಗಟ್ಟುವಂತೆ ಮಾಡುವ ಹುನ್ನಾರವಿದು. ಈಗ ಆಗಿದ್ದೂ ಅದೇ.. ಮೊಸಳೆಗಳು ತಮ್ಮ ತಂತ್ರ ಬದಲಾಯಿಸಿ ಬದುಕಿದವು. ಆದರೆ.. ಏನೂ ಅರಿಯದ ಅಮಾಯಕ ಮೀನುಗಳು ಬದುಕಲು ಏದುಸಿರು ಬಿಡತೊಡಗಿದವು. ಕಳೆದ ಒಂದು ತಿಂಗಳ ದೇಶದ ವಿದ್ಯಮಾನಗಳನ್ನು ಗಮನಿಸಿದರೆ ಈ ಮೊಸಳೆ ಮತ್ತು ಮೀನಿನ ಉದಾಹರಣೆ ಸೂಕ್ತವೆನಿಸುತ್ತದೆ. ದೇಶವಾಳುವ ಪ್ರಭುಗಳ ಹುಚ್ಚಾಟ ಮಿತಿಮೀರುತ್ತಿದೆ. ಜನಸಾಮಾನ್ಯರ ಪರದಾಟ ಅತಿಯಾಗುತ್ತಿದೆ.


ಅಂದರೆ.. ನೋಟು ಅಮಾನ್ಯೀಕರಣದಿಂದಾ ದೇಶದ ಬಹುತೇಕ ಕಪ್ಪು ಹಣವೆಲ್ಲಾ ಕರಗಿಹೋಗಿ ದೇಶ ಸುಭೀಕ್ಷೆಯಾಗುತ್ತದೆ.. ಬಹುತೇಕ ಶ್ರೀಮಂತರೆಲ್ಲಾ ಬೀದಿಗೆ ಬರುತ್ತಾರೆ ಎಂದು ಭಾಷಣಗಳಲ್ಲೆಲ್ಲಾ ಬಾಯಿಬಡಿದುಕೊಂಡ ಈ ದೇಶದ ಪ್ರಧಾನಿಗಳು ಬಡಾಯಿ ಕೊಚ್ಚಿಕೊಂಡಂತೆ ಏನೂ ಆಗಲೇ ಇಲ್ಲಾ. ಕಪ್ಪು ಹಣ ನಾಶವೂ ಆಗಲಿಲ್ಲ.. ಹೊರಬಂದು ದಂಡ ತೆರಿಗೆ ಪಾವತಿಸಿ ಬಿಳಿಯಾಗಲಿಲ್ಲ. ಅಕಸ್ಮಾತ್ ಆಗಿದ್ದರೂ ಒಟ್ಟು ಹಣದಲ್ಲಿ ಅದು ನಗಣ್ಯವಾಗಿದೆ. ಇದರಿಂದಾಗಿ ಜನಸಾಮಾನ್ಯರಂತೆಯೇ ಮೋದಿಗೂ ಸಹ ಅಪಾರವಾದ ನಿರಾಶೆಯಾಗಿದ್ದಂತೂ ಸತ್ಯ. ಕಾನೂನಾತ್ಮಕವಾಗಿ ತಾನೇನೆ  ಮಾಡಿದರೂ ಈ ಖದೀಮರು ಒಳದಾರಿಗಳನ್ನು ಹುಡುಕುಕೊಳ್ಳುತ್ತಿರುವುದು ಮೋದಿಗೆ ನುಂಗಲಾರದ ತುತ್ತಾಗಿದೆ. ದೇಶದ ಮುಂದೆ ಮತ್ತೊಮ್ಮೆ ಸುಳ್ಳುಗಾರನಾಗಿ ನಿಲ್ಲಬೇಕಾದ ಅನಿವಾರ್ಯತೆ ಇದೆ. ದೇಶದಲ್ಲಿ ಒಟ್ಟು ಹದಿನೈದು ಲಕ್ಷ ಕೋಟಿಯಷ್ಟು ದೊಡ್ಡ ಮೊತ್ತದ ನೋಟುಗಳಿದ್ದವು. ಅದರಲ್ಲಿ ಶೆ.86ರಷ್ಟು ಮೌಲ್ಯದ ಐನೂರು ಹಾಗೂ ಸಾವಿರ ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿದ್ದವು. ಶೆ.14ರಷ್ಟು ನೋಟುಗಳು ಅಕ್ರಮವಾಗಿ ಕೂಡಿಡಲ್ಪಟ್ಟಿತ್ತು. ಇದು ಗೊತ್ತಿಲ್ಲದಷ್ಟು ಮುಗ್ದರೇನಲ್ಲ ಮೋದಿ. ಆದರೆ. ಭಾರೀ ಮೊತ್ತ ಕಪ್ಪುಹಣವಾಗಿದೆ. ಅದನ್ನೆಲ್ಲಾ ಹೊರಗೆ ತಂದೇ ತೀರುವೆ ಎಂದು ಜನರನ್ನು ನಂಬಿಸುವ ಪ್ರಯತ್ನವನ್ನು ಮಾಡಿ ವಿದೇಶಿ ಬ್ಯಾಂಕಿನಲ್ಲಿರುವ ಕಪ್ಪು ಹಣವನ್ನು ತರುವಲ್ಲಿ ಆದ ವಿಫಲತೆಯನ್ನು ಮರೆಸುವ ಪ್ರಯತ್ನವನ್ನು ಮಾಡಲಾಯಿತು. ಹಿಂದೆ ಮುಂದೆ ಗೊತ್ತಿಲ್ಲದ ಜನರೂ ಸಹ ಮೊದಮೊದಲು ಮೋದಿ ಮಾತಿಗೆ ತಲೆದೂಗಿದರು.

ಹಾಗಾದರೆ ಈ ದೇಶದಲ್ಲಿ ಕಪ್ಪು ಹಣವೇ ಇಲ್ಲವಾ? ಯಾಕಿಲ್ಲ... ಇದೆ.. ಬೇಕಾದಷ್ಟು ಇದೆ. ಆದರೆ ಅದೆಲ್ಲವೂ ನಗದು ರೂಪದಲ್ಲಿಲ್ಲ. ಹಾಗೂ ನೋಟಿನ ರೂಪದಲ್ಲಿ ನೂರಾರು ಕೋಟಿಗಳನ್ನು ಮನೆಯಲ್ಲಿಟ್ಟುಕೊಳ್ಳುವಷ್ಟು ಕಾಳಧನಿಕರು ಮೂರ್ಖರೂ ಅಲ್ಲಾ. ಯಾವಾಗ ಆದಾಯ ತೆರಿಗೆ ಇಲಾಖೆಯ ದಾಳಿಯಾಗುತ್ತದೋ ಎನ್ನುವ ಆತಂಕ ತೆರಿಗೆ ಕಳ್ಳರಿಗೆ ಸದಾ ಇದ್ದೇ ಇರುತ್ತದೆ. ಆದ್ದರಿಂದ ಭಾರತೀಯ ಕಪ್ಪುಹಣವು ಬೇನಾಮಿ ಆಸ್ತಿ ಹಾಗೂ ಸಂಪತ್ತಿನ ರೂಪದಲ್ಲಿದೆ. ವಿದೇಶಿ ಬ್ಯಾಂಕುಗಳಲ್ಲಿ ಡಾಲರ್ ರೂಪದಲ್ಲಿ ಭದ್ರವಾಗಿದೆ. ಪನಾಮಾ ಬೋಗಸ್ ಕಂಪನಿಗಳಲ್ಲಿ ತೊಡಗಿಸಿಕೊಂಡಿದೆ. ಆದರೆ.. ಇದೆಲ್ಲವುಳನ್ನು ಜಪ್ತಿ ಮಾಡುವುದು ಬಿಟ್ಟು... ಶೇ.96 ರಷ್ಟಿರುವ ಅನಧೀಕೃತ ಬೇನಾಮಿ ಆಸ್ತಿಗಳ ಮೇಲೆ ಕ್ರಮ ತೆಗೆದುಕೊಳ್ಳುವುದು ಬಿಟ್ಟು ಶೆ.4 ರಷ್ಟಿರುವ ಕಪ್ಪು ಹಣವನ್ನು ಹೊರತೆಗೆಯುತ್ತೇನೆಂದು ಕೊಟ್ಯಾಂತರ ಜನರ ದಿನನಿತ್ಯದ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಮೋದಿ ಮಹಾತ್ಮರ ಲೀಲೆ ಅತಿರೇಕವೆನಿಸುತ್ತದೆ. 

ಆದರೆ ಮೋದಿ ವರಸೆ ಹಾಗೂ ಭರವಸೆಗಳೆಲ್ಲಾ ಹುಸಿ ಎಂಬುದು ತಿಳಿಯಲು ಜನರಿಗೆ ಈ ಒಂದು ತಿಂಗಳು ಸಾಕಾಗಿತ್ತು. ಯಾಕೆಂದರೆ ದೇಶದಲ್ಲಿ ಯಾವುದೇ ಕಪ್ಪು ಹಣ ಕ್ಯಾಶ್ ರೂಪದಲ್ಲಿ ಇರಲೇ ಇಲ್ಲ. ಅದೆಲ್ಲವೂ ಭೂಮಿ ಬಂಗಾರ ಡಾಲರ್ ರೂಪದಲ್ಲಿ ಸೇಫಾಗಿತ್ತು. ಕ್ಯಾಶ್ ರೂಪದಲ್ಲಿದ್ದರೂ ಅದೂ ಸಹ ಶೆ.3 ರಷ್ಟಿತ್ತು. ದೇಶದಲ್ಲಿರುವ ದೊಡ್ಡಮೊತ್ತದ ಒಟ್ಟು ಹದಿನೈದು ಲಕ್ಷ ಕೋಟಿಯಲ್ಲಿ ಕಳೆದ ಮೂವತ್ತು ದಿನಗಳಲ್ಲಿ  ಹನ್ನೊಂದುವರೆ ಲಕ್ಷ ಕೋಟಿ ಹಣ ಬ್ಯಾಂಕಿಗೆ ಹರಿದು  ಬಂದಿದೆ ಹಾಗೂ ಹೊಸ ನೋಟಾಗಿ ಬದಲಾವಣೆಗೊಂಡಿದೆ. ಅಂದರೆ ಶೇ.76 ರಷ್ಟು ಹಣ ಅಧೀಕೃತವಾಗಿಯೇ ಬದಲಾವಣೆಗೊಳಗಾಗಿದೆ. ಬಾಕಿ ಹಣ ಬರಲು ಇನ್ನೂ ಇಪ್ಪತ್ತು ದಿನ ಸಮಯವೂ ಇದೆ. ಅಂದರೆ.. ಹಳೆಯ ನೋಟು ಅಮಾನ್ಯ ಮಾಡಿ ಹೊಸ ನೋಟನ್ನು ಕೊಟ್ಟಿದ್ದರಿಂದ ಬಂದ ಭಾಗ್ಯವಾದರೂ ಏನು? ಪೆಟ್ಟಿಗೆಯಲ್ಲಿ ಸಂಗ್ರಹಗೊಂಡಿದ್ದ ಹಣ ಹೊರಗೆ ಬಂದು ಚಲಾವಣೆಗೆ ತರಲಾಯಿತಲ್ಲಾ ಎಂದು ಮೋದಿ ಭಕ್ತರು ಸಮಾಧಾನ ಹೇಳುತ್ತಿದ್ದಾರೆ. ಆದರೆ.. ಹಾಗೆ ಹೊರಗೆ ಬಂದು ಯಾವುಯಾವುದೋ ರೂಪದಲ್ಲಿ ಜಮಾ ಆದ ಹಣವು ಹೊಸ ನೋಟಾಗಿ ಪರಿವರ್ತನೆಗೊಂಡು ಮತ್ತೆ ಮೊದಲು ಎಲ್ಲಿತ್ತೋ ಅಲ್ಲಿಯೇ ಹೋಗಿ ಸೇರುತ್ತದೆ ಎನ್ನುವ ಸಾಮಾನ್ಯ ಜ್ಞಾನವೂ ಪಂಚೇಂದ್ರಿಯಗಳನ್ನು  ಮೋದಿಗೆ ಅಡವಿಟ್ಟ ಈ ಭಕ್ತಮಹಾಶಯರಿಗೆ ತಿಳಿಯಲು ಹೇಗೆ ಸಾಧ್ಯ? ಯಾವಾಗ ನೋಟು ಅಮೌಲ್ಯೀಕರಣದಿಂದಾಗಿ ಕಪ್ಪುನೋಟಿನ ಸಂಗ್ರಹ ನಾಶವಾಗುತ್ತದೆಂದು ಸರಕಾರವು ಭಾವಿಸಿತ್ತೋ ಅದು ಆಗದಿದ್ದಾಗ ತೆರಿಗೆ ಕಳ್ಳರಿಗೆ ದಂಡ ಹಾಕಿ ಕ್ಷಮಾಧಾನ ಯೋಜನೆಯೊಂದನ್ನು ಘೋಷಿಸಿತು. ಆದರೆ..  ಈ ಯೋಜನೆಯಡಿಯಲ್ಲಿ ಘೋಷಣೆಯಾದ ಕಪ್ಪುಹಣವೂ ಸಹ ನಗಣ್ಯವಾಗಿ ಸರಕಾರದ ಈ ಯೋಜನೆಯೂ ವಿಫಲವಾಯಿತು.

ಯಾವಾಗ ನೋಟು ಅಮಾನ್ಯತೆ ಹಾಗೂ ಕಾಳಧನಿಕರಿಗೆ ಕ್ಷಮಾಧಾನ ಎನ್ನುವ ಮಹತ್ವಾಂಕಾಂಕ್ಷಿ ಯೋಜನೆಗಳು ವಿಫಲವಾದವೋ ಆಗ ಮೋದಿ ಮಂಡಳಿಗೆ ಮುಖಭಂಗವಾಗುವುದರಿಂದ ತಪ್ಪಿಸಿಕೊಳ್ಳಲು ಬೇರೆ ಅಸ್ತ್ರ ಬೇಕಿತ್ತು. ಆಗ ಕ್ಯಾಶಲೆಸ್ ಅಸ್ತ್ರ ಪ್ರಯೋಗಿಸಲಾಯಿತು. ಬಡವರು, ಅನಕ್ಷರಸ್ತರು, ಅಲೆಮಾರಿ ಹಾಗೂ ಬುಡಕಟ್ಟು ಸಮುದಾಯಗಳು ಬಹುಸಂಖ್ಯೆಯಲ್ಲಿರುವ ಭಾರತದಂತಹ ಗ್ರಾಮ್ಯ ಪ್ರಧಾನ ದೇಶದಲ್ಲಿ ಮಾಡರ್ನ ತಂತ್ರಜ್ಞಾನದ ಅವಿಷ್ಕಾರವಾದ ಈ ಮೊಬೈಲ್ ಬ್ಯಾಂಕಿಂಗ್ ಹಾಗೂ ಕಾರ್ಡ ಸ್ವೈಂಪಿಂಗಗಳು ಪ್ರಯೋಜನಕ್ಕೆ ಬರುವಂತಹುದಲ್ಲಾ. ದೇಶದ ಜನರನ್ನು ಅಕ್ಷರಸ್ತರನ್ನಾಗಿ ಹಾಗೂ ಆರ್ಥಿಕವಾಗಿ ಸಬಲರನ್ನಾಗಿ ಮಾಡದ ಹೊರತು ಈ ತಂತ್ರಜ್ಞಾನವು ಕೆಳವರ್ಗದ ಜನರಿಗೆ ದಕ್ಕುವಂತಹುದಲ್ಲಾ. ಇದೆಲ್ಲಾ ಗೊತ್ತಿದ್ದರೂ ತಮ್ಮ ತಪ್ಪುಗಳನ್ನು ಮುಚ್ಚಲು ಕ್ಯಾಶಲೆಸ್ ವಹಿವಾಟನ್ನು ಘೋಷಿಸಿ ಕಳೆದುಹೋಗುತ್ತಿರುವ ಮರ್ಯಾದೆಯನ್ನು ಮತ್ತೆ ಗಳಿಸಿಕೊಳ್ಳುವ ವ್ಯರ್ಥ ಪ್ರಯತ್ನವನ್ನು ಮೋದಿ ಹಾಗೂ ಅವರ ಸಮರ್ಥಕ ಪಡೆ ಮಾಡುತ್ತಿದೆ. ಇದು ಹೇಗಿದೆ ಎಂದರೆ ಒಂದು ತಪ್ಪನ್ನು ಮುಚ್ಚಲು ಇನ್ನೊಂದು ತಪ್ಪನ್ನು ಮಾಡುತ್ತಲೇ ಇಡೀ ವ್ಯವಸ್ಥೆಯನ್ನೆ ಹದಗೆಡಿಸಿ ಜನಸಾಮಾನ್ಯರ ಬದುಕಿನ ಜೊತೆಗೆ ಚೆಲ್ಲಾಟವಾಡುವಂತಿದೆ.

ಕೋಟಾ ನೋಟಿನ ದಂದೆ ಸಂಪೂರ್ಣ ನಿಂತು ಹೋಗುತ್ತದೆ ಹಾಗೂ ಭಯೋತ್ಪಾದಕರಿಗೆ ಹಣಕಾಸಿನ ಮುಗ್ಗಟ್ಟು ಉಂಟಾಗಿ ಭಯೋತ್ಪಾದನೆ ಬಂದಾಗುತ್ತದೆ ಎನ್ನುವ ಇನ್ನೆರಡು ತಲೆಬುಡವಿಲ್ಲದ ಸಿದ್ದಾಂತಗಳನ್ನು ಮೋದಿ ಪಡೆ ಪ್ರಚಾರಗೊಳಿಸುತ್ತಿದೆ. ಆದರೆ.. ಇವರೆಲ್ಲಾ ಹೇಳುತ್ತಿರುವ ಕಣ್ಕಟ್ಟಿನ ಹಿಂದೆ ಸತ್ಯ ಬೇರೆಯಾಗಿದೆ. ದೇಶದಲ್ಲಿ ಚಲಾವಣೆಯಲ್ಲಿರುವ ಒಟ್ಟು ಕೋಟಾ ನೋಟುಗಳ ಸಂಖ್ಯೆ ಶೆ.0002 ರಷ್ಟಾಗಿದೆ. ಅಂದರೆ ಒಟ್ಟು ಚಲಾವಣೆಯಲ್ಲಿರುವ ಮೊತ್ತದಲ್ಲಿ ನಾನೂರು ಕೋಟಿಯಷ್ಟು ನಕಲಿ ನೋಟುಗಳಿವೆ. ಈ ನಾನೂರು ಕೋಟಿ ನಕಲಿ ನೋಟು ರದ್ದು ಮಾಡಲು ಹದಿನೈದು ಲಕ್ಷ ಕೋಟಿ ನೋಟುಗಳನ್ನು ಬ್ಯಾನ್ ಮಾಡುವುದು ನಿಜಕ್ಕೂ ಹುಚ್ಚಾಟವಲ್ಲದೇ ಮತ್ತೇನು? ಇಷ್ಟಕ್ಕೂ ಕೋಟಾ ನೋಟು ದಂದೆ ನಿಲ್ಲಲು ಸಾಧ್ಯವೇ ಇಲ್ಲಾ. ಹೊಸನೋಟು ಬಂದ ಹತ್ತೇ ದಿನಗಳಲ್ಲಿ ನಕಲಿ  ನೋಟುಗಳು ಪತ್ತೆಯಾಗಿವೆ. ದೊಡ್ಡ ಸಂಖ್ಯೆಯಲ್ಲಿ ಹೊಸ ನೋಟುಗಳನ್ನು ಮುದ್ರಿಸಲು ದಂದೆಕೋರರಿಗೆ ಒಂದೆರಡು ತಿಂಗಳು ಸಮಯ ಬೇಕಾಗಬಹುದಷ್ಟೇ. ಪಾಕಿಸ್ತಾನವೇ ಭಾರತದ ನೋಟುಗಳನ್ನು ನಕಲಿ ಮಾಡಿ ಈ  ದೇಶದ ಆರ್ಥಿಕತೆಯನ್ನು ಬುಡಮೇಲು ಮಾಡುತ್ತದೆ ಎನ್ನುವುದು ನಿಜವಾದರೆ ಈಗ ಹೊರತರುತ್ತಿರುವ ನೋಟುಗಳನ್ನೂ ನಕಲಿ ಮಾಡಲು ಸಾಧ್ಯವಿಲ್ಲ ಎಂದು ಹೇಳುವುದು ಮೂರ್ಖತನವಾಗುತ್ತದೆ. ಹೊಸ ನೋಟಿನಲ್ಲಿ ಚಿಪ್ ಇದೆ ಎನ್ನುವುದೆಲ್ಲಾ ಕಪೋಲಕಲ್ಪಿತ ಮಾತುಗಳಷ್ಟೇ. ಎರಡುಮೂರು ತಿಂಗಳ ನಂತರ ಮತ್ತೆ ನಕಲಿ ನೋಟುಗಳ ಹಾವಳಿ ಶುರುವಾಗುತ್ತದೆ. ಇನ್ನು ಭಯೋತ್ಪದನೆ ತೊಲಗುತ್ತದೆ ಎನ್ನುವವರು ಜನಸಾಮಾನ್ಯರ ಕಿವಿಯ ಮೇಲೆ ಹಿಮಾಲಯ ಪರ್ವತ ಇಡುವ ಹುನ್ನಾರ ಮಾಡುವಷ್ಟೇ ಸತ್ಯ. ಯಾಕೆಂದರೆ ನೋಟು ರದ್ದಿನ ನಂತರವೂ ಭಯೋತ್ಪಾದಕ ದಾಳಿಗಳಾಗಿವೆ. ನಮ್ಮ ಯೋಧರು ಕೊಲೆಯಾಗಿದ್ದಾರೆ ಹಾಗೂ ಆ ಭಯೋತ್ಪಾದಕ ಜಿಹಾದಿಗಳ ಜೇಬಿನಲ್ಲಿ ಹೊಸ ಎರಡುಸಾವಿರದ ನೋಟುಗಳು ಪತ್ತೆಯಾಗಿವೆ. ಹಾಗೂ ಪಾಕಿಸ್ಥಾನ ಪ್ರಾಯೋಜಿತ ಭಯೋತ್ಪಾದನೆಗೆ ಹಣ ರೂಪಾಯಿಗಳಲ್ಲೇ ಬರಬೇಕೆಂದೇನಿಲ್ಲ. ಡಾಲರ್ ಗಳನ್ನು ರೂಪಾಯಿಗಳಲ್ಲಿ ಬದಲಾಯಿಸಿ ಜಿಹಾದಿಗಳಿಗೆ ಒದಗಿಸಲಾಗುತ್ತದೆ. ಹಣಕಾಸಿನ ವಿಷಯಕ್ಕಾಗಿಯೇ ಭಯೋತ್ಪಾದನೆ ನಡೆಯುತ್ತದೆ ಎನ್ನುವುದು ಅರ್ಥಹೀನ ತರ್ಕ.. ಹಣಕಾಸಿನ ಕೊರತೆಯಿಂದಾಗಿ ಭಯೋತ್ಪಾದನೆ ನಿಲ್ಲುತ್ತದೆ ಎನ್ನುವುದಂತೂ ಹಾಸ್ಯಾಸ್ಪದವಾಗಿದೆ. ಭಕ್ತರು ಬಾಲಿಷವಾಗಿ ಅದೆಷ್ಟೇ ಸಮರ್ಥನೆಗಳನ್ನು  ಕೊಟ್ಟರೂ ಅವುಗಳೆಲ್ಲವೂ ಸುಳ್ಳು ಎನ್ನುವುದನ್ನು ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ತೋರಿಸುತ್ತವೆ. ಸದುದ್ದೇಶವಿಲ್ಲದೇ ಮಾಡುವ ಯಾವುದೇ ಕೆಲಸಗಳೂ ಫಲಕಾರಿಯಾಗುವುದಿಲ್ಲ ಎನ್ನುವ ಸತ್ಯವನ್ನು ಈ ಮೋದಿ ಆಂಡ್ ಕಂಪನಿ ಅರ್ಥ ಮಾಡಿಕೊಳ್ಳಬೇಕಿದೆ. ಇನ್ನು ಬ್ರಷ್ಟಾಚಾರ ಕೊನೆಯಾಗುತ್ತದೆ ಎನ್ನುವ ವದಂತಿಯನ್ನೂ ಭಕ್ತರು ಹಬ್ಬಿಸುತ್ತಿದ್ದಾರೆ. ಕಾಳಧನಿಕರು ಬ್ಯಾಂಕ್ ಮ್ಯಾನೇಜರುಗಳಿಗೆ ಕಮಿಶನ್ ಫಿಕ್ಸ್ ಮಾಡಿ ಹಳೆ ನೋಟುಗಳನ್ನು ಹೊಸದಕ್ಕೆ ಬದಲಾಯಿಸಿಕೊಳ್ಳುವುದೇ ಹೊಸ ರೀತಿಯ ಭ್ರಷ್ಟಾಚಾರದ ಉಗಮಕ್ಕೆ ಪರಮ ಸಾಕ್ಷಿಯಾಗಿದೆ. ಇನ್ನೇನು ಲಂಚ ರುಶುವತ್ತುಗಳಿಲ್ಲದೇ ಯಾವ ನೌಕರಶಾಹಿ ಹಾಗೂ ಅಧಿಕಾರಶಾಹಿಗಳು ಕೆಲಸ ಮಾಡಲು ಸಾಧ್ಯವೇ ಇಲ್ಲಾ. ಇಡೀ ಆಡಳಿತ ವ್ಯವಸ್ಥೆಯೇ ಕರಪ್ಟ್ ಆಗಿರುವಾಗ ಬರೀ ನೋಟುಗಳ ಬದಲಾವಣೆ ಮಾಡಿದರೆ ಬ್ರಷ್ಟಾಚಾರ ತೊಲಗಲು ಸಾಧ್ಯವೆ?   


ನೋಟು ಅಮಾನ್ಯತೆಯಿಂದಾಗಿ ಆದ ಅನಾಹುತಗಳ ಪಟ್ಟಿ ಬಲು ದೊಡ್ಡದಿದೆ. ದೇಶದ ಡಿಜಿಪಿ ಬೆಳವಣಿಗೆ ಕುಸಿದಿದೆ. ದೇಶವಾಸಿಗಳಿಗೆ ಹಣದ ಕೊರತೆಯುಂಟಾಗಿ ತಮ್ಮದೇ ಹಣವನ್ನು ಪಡೆದುಕೊಳ್ಳಲು ಬ್ಯಾಂಕು ಎಟಿಎಂ ಗಳ ಮುಂದೆ ಸರದಿಯಲ್ಲಿ ನಿಂತು ಅಪಾರವಾದ ಮಾನವ ಸಂಪನ್ಮೂಲ ಅಪವ್ಯಯ ಆಗುತ್ತಿದೆ. ದಿನನಿತ್ಯದ ಅಗತ್ಯಗಳಿಗೆ ಹಣವಿಲ್ಲದೇ ಬಡ ಕೂಲಿಕಾರ ಜನರು ಪರದಾಡುತ್ತಿದ್ದಾರೆ. ಪಟ್ಟಣಗಳಲ್ಲಿ ಕೆಲಸಕ್ಕೆಂದು ವಲಸೆಬಂದವರಿಗೆ ಸಂಬಳ ಕೊಡಲು ಕೆಲಸದಾತರು ಅಸಹಾಯಕರಾಗಿದ್ದರಿಂದಾಗಿ ಕೂಲಿಯಾಳುಗಳು ನಿರಾಶೆಯಿಂದಾ ಕೆಲಸಗೇಡಿಗಳಾಗಿ ತಮ್ಮ ಊರುಗಳಿಗೆ ವಾಪಸ್ ಹೋಗುತ್ತಿದ್ದಾರೆ. ಹಲವಾರು ಕಂಪನಿಗಳು ಸಂಬಳಕೊಡಲು ಆಗದೇ ಅನೇಕ ಉದ್ಯೋಗಿಗಳನ್ನು ಕಡಿತಗೊಳಿಸುತ್ತಿದ್ದಾರೆ. ನಿರುದ್ಯೋಗ ಎನ್ನುವುದು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕಾಪೋರೇಟ್ ಕಂಪನಿಗಳು ಉದ್ಯೋಗ ಸೃಷ್ಟಿಯನ್ನು ಕೈಬಿಟ್ಟಿವೆ. ಇರುವ ಉದ್ಯೋಗಿಗಳಿಗೂ ಯಾವತ್ತು ಕೆಲಸಕ್ಕೆ ಕುತ್ತು ಬರುತ್ತದೋ ಎನ್ನುವ ಆತಂಕ ಕಾಡುತ್ತಿದೆ. ಹಣದ ಒಳಹೊರ ಹರಿವು ನಿರ್ಬಂಧವಾಗಿದ್ದರಿಂದಾಗಿ ದೇಶಾದ್ಯಂತ ಉತ್ಪಾದನೆ ಕುಸಿದಿದೆ. ವ್ಯಾಪಾರ ವಹಿವಾಟುಗಳು ಅರ್ಧಕ್ಕರ್ಧ ನಿಂತಿವೆ. ಆಹಾರೋತ್ಪನ್ನಗಳ ವಹಿವಾಟುಗಳು ಎಪಿಎಂಸಿಗಳಲ್ಲಿ ಶೆಕಡಾ ನಲವತ್ತರಷ್ಟು ಕುಸಿದಿದೆ. ರೈತಾಪಿ ಜನರಿಗೆ ತೀವ್ರವಾದ ಅನಾನುಕೂಲವಾಗಿ ಇಡೀ ಕೃಷಿ ಕ್ಷೇತ್ರವೇ ತತ್ತರಿಸುತ್ತಿದೆ. ಆಯೋಜನೆಗೊಂಡ ಅನೇಕಾನೇಕ ಮದುವೆಗಳು ಮುರಿದುಬಿದ್ದು ಇಲ್ಲವೇ ಮುಂದಕ್ಕೆ ಹೋಗಿ ಜನರ ಕೌಟುಂಬಿಕ ಭಾವನೆಗಳಿಗೆ ದಕ್ಕೆಯಾಗಿದೆ ಹಾಗೂ ಸಂಬಂಧಗಳು ಹಳಸುತ್ತಿವೆ. ಅಗತ್ಯವಾದ ಹಣ ಸಿಗದೇ ಜನರಲ್ಲಿ ಕೊಂಡುಕೊಳ್ಳುವ ಶಕ್ತಿ ಕ್ಷೀಣಗೊಂಡು ಚಿಕ್ಕಪುಟ್ಟ ವ್ಯಾಪಾರಸ್ತರಷ್ಟೇ ಅಲ್ಲಾ ಮಾಲ್‌ಗಳಲ್ಲಿ ಕೂಡಾ ವ್ಯಾಪಾರ ವಹಿವಾಟು ಕುಸಿದು ವ್ಯಾಪಾರಸ್ತರ ಆದಾಯ ಗಣನೀಯ ಪ್ರಮಾಣದಲ್ಲಿ  ಕುಸಿದಿದೆ. ಜನರಲ್ಲಿ ಹಣ ಇದ್ದರೂ ಬಳಕೆಗೆ ಸಿಗದಂತಾಗಿ ಉತ್ಪನ್ನಗಳ ಬೇಡಿಕೆಯೂ ಕಡಿತಗೊಂಡು ಸರಕು ಉತ್ಪಾದಕ ವಲಯ ತಲ್ಲಣಗೊಂಡಿದೆ.

ಅಷ್ಟೇ ಅಲ್ಲದೇ ಹಣಕ್ಕಾಗಿ ಸರತಿ ಸಾಲಲ್ಲಿ ನಿಂತು ಹಣ ವಿನಿಮಯದ ಪ್ರಯತ್ನದಲ್ಲಿದ್ದಾಗ ಒಂದು ತಿಂಗಳ ಅವಧಿಯಲ್ಲಿ ದೇಶಾದ್ಯಂತ ಎಂಬತ್ನಾಲ್ಕು ಅಮೂಲ್ಯ ಜೀವಗಳು ಬಲಿಯಾಗಿವೆ. ಕ್ಯೂನಲ್ಲಿ ನಿಂತಾಗಲೇ ಹೆರಿಗೆಯಾದ ಉದಾಹರಣೆಗಳೂ ಇದೆ. ಆಸ್ಪತ್ರೆಗೆ ಸಕಾಲಕ್ಕೆ ಹಣ ಕಟ್ಟಲಾಗದೇ ಸಂಕಷ್ಟಕ್ಕೊಳಗಾದ ಜೀವಗಳಿಗೆ ಲೆಕ್ಕವಿಲ್ಲ. ಪ್ರವಾಸೋದ್ಯಮ ವಹಿವಾಟು ಹಳ್ಳಹಿಡಿದಿದೆ. ಸಿನೆಮಾಹಾಲ್‌ಗಳು ಪ್ರೇಕ್ಷಕರಿಲ್ಲದೇ ಬೀಕೋ ಎನ್ನುತ್ತಿದ್ದು ಸಿನೆಮಾಕ್ಷೇತ್ರವೇ ತಳಮಳಿಸಿದೆ. ಹೀಗೆ.. ಒಂದೆರಡಲ್ಲಾ.. ಹಲವಾರು ಆರ್ಥಿಕ, ಸಾಮಾಜಿಕ ಅವಗಢಗಳು ದಿನನಿತ್ಯ ಸಂಭವಿಸುತ್ತಲೇ ಇವೆ. ಇವೆಲ್ಲಕ್ಕೂ ಮೋದಿ ಸರಕಾರ ಹಾಗೂ ಅದರ ಸಮರ್ಥಕ ಸಂಘಿಗಳು ಕೊಡುವುದು ಒಂದೇ ಉತ್ತರ ಬಂದಿದ್ದನ್ನೆಲ್ಲಾ ಸಹಿಸಿಕೊಳ್ಳಿ ಅಚ್ಚೇ ದಿನ್ ಬಂದೆ ಬರುತ್ತದೆ. ಆದರೆ.. ಈಗಿನ ಈ ಅವ್ಯವಸ್ಥೆ ಹಾಗೂ ತುಘಲಕ್ ಮಾದರಿ ಆಡಳಿತವನ್ನು ನೋಡಿದರೆ ಅಚ್ಚೇ ದಿನ್ ಬರುವುದಂತೂ ಕನಸಿನ ಮಾತು. ಈ ಹಿಂದ ಇರುವ ವ್ಯವಸ್ಥೆಯೂ ಹಾಳಾಗಿ ಇಡೀ ದೇಶಕ್ಕೆ ದೇಶವೇ ಆರ್ಥಿಕವಾಗಿ ಅಧೋಗತಿಗಿಳಿಯುವ ಸಮಯ ಹತ್ತಿರವಾಗುತ್ತಿದೆ. ಅಂತಹ ಸಂದರ್ಭ ಬಂದಾಗ.. ಜನಸಾಮಾನ್ಯರು ರೋಸತ್ತಿ ಹೋದಾಗ.. ಮತ್ತೆ ಪಾಕಿಸ್ತಾನದ ಜೊತೆಗೆ ಕದನವನ್ನು ಘೋಷಿಸಿ ದೇಶವಾಸಿಗಳಲ್ಲಿ ದೇಶಭಕ್ತಿಯ ಉನ್ಮಾದವನ್ನು ತುಂಬಿ ಎಲ್ಲಾ ವಿಫಲತೆಗಳನ್ನು ಮರೆಮಾಚುವ ಪ್ರಯತ್ನವನ್ನು ಈ ಪ್ಯಾಸಿಸ್ಟ್ ಸರಕಾರ ಮಾಡುವುದರಲ್ಲಿ ಸಂದೇಹವೇ ಇಲ್ಲಾ. ಬರುವ ವಿಕ್ಷಿಪ್ತ ದಿನಮಾನಗಳಿಗೆ ಜನತೆ ಹೊಂದಿಕೊಂಡು ಹೋಗಬೇಕು ಇಲ್ಲವೇ ತಮ್ಮ ನಾಗರೀಕ ಹಕ್ಕುಗಳಿಗಾಗಿ ದಂಗೆ ಎದ್ದು ಹೊಸ ವ್ಯವಸ್ಥೆಯೊಂದನ್ನು ತರಬೇಕು. ಅಲ್ಲಿವರೆಗೂ ಮೋದಿ ಪರಿವಾರದ ವಿಫಲ ಪ್ರಯತ್ನಗಳಿಗೆ ತಲೆಕೊಡಬೇಕು. ಒಂದಂತೂ ನಿಜ, ಹಿಟ್ಲರ್‌ನಿಗೆ ದೇಶದ ಚುಕ್ಕಾಣಿ ಹಿಡಿಯಲು ಅವಕಾಶ ಕೊಟ್ಟವರು ಆತನ ಹುಚ್ಚಾಟಗಳನ್ನು ಸಹಿಸಿಕೊಳ್ಳಲೇಬೇಕು. ಸಹಿಸಿಕೊಳ್ಳಲು ಸಾಧ್ಯವಿಲ್ಲದವರು ಭ್ರಮೆಗಳನ್ನು ಬಿಟ್ಟು ಪ್ರತಿರೋಧಿಸಬೇಕು. ಇಲ್ಲವಾದರೆ ಈ  ದೇಶವನ್ನು ಯಾರಿಂದಲೂ ಕಾಪಾಡಲು ಸಾಧ್ಯವೇ ಇಲ್ಲಾ. ಸಾಧ್ಯವಾಗುವಷ್ಟರ ಹೊತ್ತಿಗೆ ಇಡೀ ದೇಶವೇ ಸರ್ವನಾಶವಾಗಿಹೋಗಿರುತ್ತದೆ. ಮುಂದಿನ ತಲೆಮಾರು ಇಂದಿನವರ ಅಸಹಾಯಕತೆಗೆ ಶಾಪಹಾಕುವುದರಲ್ಲಿ ಸಂದೇಹವೇ ಇಲ್ಲ. 

-ಶಶಿಕಾಂತ ಯಡಹಳ್ಳಿ       



ಶುಕ್ರವಾರ, ಡಿಸೆಂಬರ್ 2, 2016

ತಹ ತಹ.....64 ಕ್ಯಾಶಲೆಸ್ ವಹಿವಾಟಿಗೆ ಖಾತ್ರಿಯಿಲ್ಲ, ಕಪ್ಪುಹಣಕೆ ಕೊನೆಯಿಲ್ಲ; ಜನಸಾಮಾನ್ಯರ ಬವಣೆ ತಪ್ಪೊಲ್ಲ :


ಕ್ಯಾಶ್‌ಲೆಸ್ ವ್ಯವಹಾರ ದೇಶಾದ್ಯಂತ ಇರಬೇಕೆಂದು ಪ್ರಧಾನಿ ಮೋದಿಯವರ ಮಹತ್ವಾಂಕಾಂಕ್ಷೆಯಾಗಿದೆ. ಮೋದಿ ಏನೇ ಹೇಳಿದರೂ ಅದಕ್ಕೆ ದೇಶಭಕ್ತಿಯನ್ನು ಆರೋಪಿಸಿ ಮೋದಿ ಬ್ರಿಗೇಡ್ ಭಕ್ತರು ಭಾವಾತೀರೇಕಕ್ಕೊಳಗಾಗುತ್ತಾರೆ. ನಗದು ವ್ಯವಹಾರ ಕಡಿತಗೊಳಿಸಿ ಕಾರ್ಡು ಮೊಬೈಲ್ಗಳ ಮೂಲಕ ದೇಶ ವ್ಯವಹರಿಸಲಿ ಎನ್ನುವ ಉದ್ದೇಶದ ಹಿಂದೆ ಕಾರ್ಪೋರೇಟ್ ಸೆಕ್ಟರಿನ ಹಿತಾಸಕ್ತಿ ಇರುವುದು ಭಕ್ತರ ಗಮನಕ್ಕೆ ಬರಲು ಸಾಧ್ಯವೇ ಇಲ್ಲ. ಅಕಸ್ಮಾತ್ ತಿಳಿಸಿ ಹೇಳಿದರೂ ಬ್ರೇನ್‌ವಾಷ್‌ಗೊಳಗಾದ ಭಕ್ತಗಣ ಕೇಳುವುದೂ ಇಲ್ಲ. ಈ ಭಕ್ತರ ಭಜನೆಯನ್ನೇ ನಿಜವೆಂದು ಜನರು ನಂಬುವ ಅಪಾಯವೂ ಇರುವುದರಿಂದ ಒಂದಿಷ್ಟು ಸ್ಪಷ್ಟನೆಗಳನ್ನು ಕೊಡುವ ಅಗತ್ಯವಿದೆ.


ಜನರು ತಮ್ಮ ಶ್ರಮದ ದುಡಿಮೆಯಿಂದ ಬರುವ ಆದಾಯವನ್ನು ತಮ್ಮಲ್ಲೇ ಇಟ್ಟುಕೊಂಡು ತಮಗೆ ಬೇಕಾದಾಗ ಬೇಕಾದಂತೆ ಖರ್ಚುಮಾಡುತ್ತಾರೆ. ಅದು ಅವರ ಹಕ್ಕೂ ಕೂಡಾ. ಆದರೆ ನೀವು ಗಳಿಸಿದ್ದನ್ನೆಲ್ಲಾ ಬ್ಯಾಂಕಿಗೆ ಹಾಕಿ, ಆ ನಂತರ ಕಾರ್ಡಗಳ ಮೂಲಕ ವ್ಯವಹರಿಸಿ ಎಂದು ಕೇಂದ್ರ ಸರಕಾರ ಒತ್ತಾಯಿಸುತ್ತಿದೆ. ಆದರೆ ದಿನಕ್ಕೊಂದು ಆರ್ಥಿಕ ನೀತಿಯನ್ನು ಘೋಷಿಸುತ್ತಿರುವ ಈ ತುಘಲಕ್ ಸರಕಾರವನ್ನು ನಂಬುವುದಾದರೂ ಹೇಗೆ? ಎನ್ನುವುದು ಜನಸಾಮಾನ್ಯರ ಆತಂಕವಾಗಿದೆ. ಈಗಂತೂ ಬ್ಯಾಂಕಲ್ಲಿರುವ ನಮ್ಮದೇ ಹಣವನ್ನು ನಾವೇ ಬೇಕೆಂದಾಗ ಬೇಕಾದಷ್ಟು ತೆಗೆದುಕೊಳ್ಳಲು ಸ್ವಾತಂತ್ರ್ಯವಿಲ್ಲ. ಒಮ್ಮೆ ಇಪ್ಪತ್ನಾಲ್ಕು ಸಾವಿರ ವಾರಕ್ಕೆ ತೆಗೆದುಕೊಳ್ಳಿ ಎನ್ನುತ್ತಿದೆ ಸರಕಾರ ಹಾಗೂ ಆರ‍್ಬಿಐ. ಆದರೆ ಹಣವೇ ಇಲ್ಲಾ ನಾಳೆ  ಬನ್ನಿ ಎನ್ನುತ್ತಿದೆ ಬ್ಯಾಂಕ್. ಹಣ ಇದ್ದರೂ ದೊಡ್ಡ ಕ್ಯೂವಲ್ಲಿ ನಿಂತವರಿಗೆ  ಒಬ್ಬರಿಗೆ ಐದೋ ಆರೋ ಸಾವಿರ ರೂಪಾಯಿ ಕೊಟ್ಟು ಕಳುಹಿಸಲಾಗುತ್ತಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರಿಗೆ ಔಷಧಕ್ಕೂ ಕಾಸಿಲ್ಲದಂತಾಗಿದೆ ಜನರ ಪರಿಸ್ಥಿತಿ. ಹೇಗೋ ಕೊಟ್ಟಷ್ಟು ಹಣವನ್ನಾದರೂ ತೆಗೆದುಕೊಂಡು ಮನೆಗೆ ಅಗತ್ಯವಾಗಿ ಬೇಕಾದ ದಿನಸಿ ಸಾಮಾನುಗಳನ್ನಾದರೂ ಕೊಂಡುಕೊಳ್ಳಲು  ಹೋದರೆ ಎರಡು ಸಾವಿರದ ನೋಟಿಗೆ ಚಿಲ್ಲರೆ ಇಲ್ಲ ಎನ್ನುತ್ತಾರೆ ಅಂಗಡಿಯವರು. ಇಂತಹ ಆರ್ಥಿಕ ತುರ್ತು ಪರಿಸ್ಥಿತಿಯಲ್ಲಿ ಇಡೀ ದೇಶದ ಜನತೆ ತತ್ತರಿಸುತ್ತಿದೆ. ದೇಶಕ್ಕೆ ಒಳಿತಾಗಬೇಕಾದರೆ ಸಂಕಷ್ಟ ಅನುಭವಿಸಲೇಬೇಕೆನ್ನುತ್ತದೆ ಸಂಘಪರಿವಾರದ ಅಂಗಗಳು ಹಾಗೂ ಅದರ ಬಾಲ ಚೇಲಾಗಳು. ಇನ್ನೊಂದು ತಿಂಗಳು ಕಳೆದರೆ ಇಡೀ  ದೇಶಕ್ಕೆ ಅಚ್ಚೇ ದಿನ್ ಬಂದೇ ಬಿಡುತ್ತದೆ ಎಂದು ಪುಂಗುವವರಿಗೇನೂ ಕಡಿಮೆಯಿಲ್ಲ. ಆದರೆ ಅಚ್ಚೆ ದಿನ್ ಜನಸಾಮಾನ್ಯರಿಗೆ ಬರಲು ಸಾಧ್ಯವೇ ಇಲ್ಲಾ. ಅದು ಏನಿದ್ದರೂ ದೇಶಿ ಹಾಗೂ ವಿದೇಶಿ ಬಂಡವಾಳಿಗರಿಗೆ, ಅಧಿಕಾರಶಾಹಿಗಳಿಗೆ ಹಾಗೂ ರಾಜಕಾರಣಿಗಳು ಹಾಗೂ ಅವರ ಪಟಾಲಂಗಳಿಗೆ ಬರುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ.


ದೇಶದ ಜನಸಾಮಾನ್ಯರು ಪರಿಶ್ರಮ ಪಟ್ಟು ಗಳಿಸಿದ ಎಲ್ಲಾ ಹಣವನ್ನೂ ಬ್ಯಾಂಕುಗಳಿಗೆ ಜಮಾ ಮಾಡುತ್ತಾರೆ ಎಂದುಕೊಳ್ಳೋಣ. ಆದರೆ ಬ್ಯಾಂಕುಗಳು ಹಾಗೆ ಜಮಾ ಆದ ಹಣವನ್ನು ಬ್ರಹತ್ ಸಾಲರೂಪದಲ್ಲಿ ಕೊಡುವುದು ಮತ್ತೆ ಬಂಡವಾಳಶಾಹಿಗಳಿಗೆ. ಭಾರತದ ನೂರಾರು ಕೋಟಿ ಜನರ ಹಣ ಬ್ಯಾಂಕುಗಳಲ್ಲಿ ಸಂಗ್ರಹಗೊಂಡು ಹೋಗಿ ಸೇರುವುದು ನೂರಾರು ದೊಡ್ಡ ಕಂಪನಿಗಳಿಗೆ. ಪ್ರತಿಯೊಬ್ಬರೂ ಹಾಕಿದ ಹನಿ ಹನಿ ಹಣದ ನೀರು ಹಳ್ಳವಾಗಿ ಹೊಳೆಯಾಗಿ ಹರಿಯುವುದು ಕಾಪೋರೇಟ್ ಕಂಪನಿಗಳ ಬೊಕ್ಕಸಕ್ಕೆ. ಉದಾಹರಣೆಗೆ.. ವಿಜಯ್ ಮಲ್ಯ ಎನ್ನುವವನಿಗೆ ಎಲ್ಲಾ ಬ್ಯಾಂಕುಗಳು ಹತ್ತು ಸಾವಿರ ಕೋಟಿಗೂ ಹೆಚ್ಚು ಹಣವನ್ನು ಸಾಲರೂಪದಲ್ಲಿ ತಕರಾರು ಎತ್ತದೇ ಕೊಡುತ್ತವೆ. ಹಾಗೆ ಸಾಲರೂಪದಲ್ಲಿ ಕೊಟ್ಟ ಜನರ ಹಣವನ್ನು ಮಲ್ಯನಂತವರು ನುಂಗಿ ನೀರುಕುಡಿದು ಸಂಪತ್ತು ಸಂಪನ್ಮೂಲಗಳ ಜೊತೆಗೆ ದೇಶವನ್ನೇ ಬಿಟ್ಟು ತೊಲಗುತ್ತಾರೆ. ಆ ನಂತರ ಬ್ಯಾಂಕುಗಳು ಅದು ವಸೂಲಿಯಾಗಲಾರದ ಸಾಲವೆಂದು ಘೋಷಿಸುತ್ತವೆ. ಅಂಬಾನಿ ಆದಾನಿ, ಟಾಟಾ, ಮಹೇಂದ್ರಗಳಂತಹ ಮೋದಿ ಹಾಗೂ ಬಿಜೆಪಿಯ ಅಂತರಂಗದ ಹತ್ತು ಮಿತ್ರರು ಹತ್ತು ಲಕ್ಷಕೋಟಿ ಹಣವನ್ನು ಬ್ಯಾಂಕುಗಳಿಂದ ಸಾಲ ಪಡೆದಿದ್ದಾರೆ. ದೇಶದ ಒಟ್ಟಾರೆ ರೈತಾಪಿ ಜನರ ಸಾಲ ಸೇರಿದರೂ ಹದಿನೈದು ಸಾವಿರ ಕೋಟಿ ಮೀರುವುದಿಲ್ಲ. ಹೀಗಾದರೆ ಈ ಬ್ಯಾಂಕುಗಳನ್ನು ನಂಬುವುದಾದರೂ ಹೇಗೆ? ಯಾವ ನಂಬಿಕೆಯ ಮೇಲೆ ನಮ್ಮ ಬೆವರಿನ ಪ್ರತಿಫಲವನ್ನು ಬ್ಯಾಂಕುಗಳಲ್ಲಿ ಇಡುವುದು. ಯಾವಾಗ ಯಾವ ಕಾಯಿದೆ ಬರುತ್ತದೆ, ಯಾವಾಗ ನಮ್ಮ ಹಣ ಬೇಕಾದಾಗ ನಮಗೆ ಸಿಗುವುದು ಅಸಾಧ್ಯವಾಗುತ್ತದೆ? ಎನ್ನುವ ಆತಂಕ ಇರುವಾಗ ಅದು ಹೇಗೆ ದುಡಿದ ಎಲ್ಲಾ ಹಣವನ್ನು ಬ್ಯಾಂಕುಗಳಲ್ಲಿ ಜಮಾ ಮಾಡಿ ಮೊಬೈಲ್ ಬ್ಯಾಂಕಿಂಗ್‌ನಲ್ಲಿ ವ್ಯವಹರಿಸುವುದು?. ನಾವು ದುಡಿದ ಹಣ ನಮ್ಮಲ್ಲೇ ಇರಲಿ. ಬೇಕಾದಾಗ ನಾವೇ ಖರ್ಚು ಮಾಡುತೇವೆ ಎಂದು ಜನರ ಒತ್ತಾಸೆಯಾಗಿದ್ದರೆ ಈ ಕ್ಯಾಶಲೆಸ್ ಒತ್ತಡಗಳೇಕೆ?

ಇಷ್ಟಕ್ಕೂ ಕ್ಯಾಶ್ಲೆಸ್ ವ್ಯವಹಾರ ಮಾಡುತ್ತಾ ಕಾರ್ಡಗಳನ್ನೋ  ಮೊಬೈಲ್ಗಳನ್ನೋ ಬಳಸೋಣವೆಂದರೆ ಅದೂ ಸಹ ಸಂಪೂರ್ಣವಾಗಿ ಸೇಫ್ ಅನ್ನುವುದರಲ್ಲಿ ಖಾತ್ರಿಯಿಲ್ಲ. ಪಾಕಿಸ್ತಾನದಲ್ಲೋ ಚೀನಾದಲ್ಲೋ ಇಲ್ಲವೇ ಜಗತ್ತಿನ ಯಾವುದೇ ಮೂಲೆಯಲ್ಲಿ  ಕುಳಿತ ಹ್ಯಾಕರ್‌ಗಳು ಯಾವುದೇ ಬ್ಯಾಂಕ್ ಅಕೌಂಟಗಳನ್ನು ಹ್ಯಾಕ್ ಮಾಡಿ ಹಣ ಲಪಟಾಯಿಸಬಹುದಾಗಿದೆ. ಅಪಾರ ಭದ್ರತೆಯ ಮಿಲಿಟರಿ ರಹಸ್ಯಗಳನ್ನೇ ಹ್ಯಾಕ್ ಮಾಡಿ ಕದಿಯುತ್ತಿರುವ ವಿದ್ಯುನ್ಮಾನದ ದಿನಗಳಲ್ಲಿ ಬ್ಯಾಂಕ್ ಅಕೌಂಟಗಳು ಸುಭದ್ರವೆಂದು ಹೇಳಲು ಬರುವುದಿಲ್ಲ. ಒಬ್ಬ ಶ್ರಮಿಕ ತನ್ನ ಜೀವಮಾನವೆಲ್ಲಾ ದುಡಿದು ಕೂಡಿಟ್ಟ ನಾಲ್ಕೈದು ಲಕ್ಷ ರೂಪಾಯಿಗಳನ್ನು ಬ್ಯಾಂಕಲ್ಲಿಟ್ಟಿದ್ದ ಎಂದುಕೊಳ್ಳೋಣ.  ಆತನ ಅಕೌಂಟಿಗೆ ಕನ್ನ ಹಾಕಿ ಇರುವ ಹಣವನ್ನು ಹ್ಯಾಕರ‍್ಗಳು ಕದ್ದಾಗ ಆತ್ಮಹತ್ಯೆಯೊಂದನ್ನು ಹೊರತು ಆತನಿಗೆ ಪಡಿಸಿ ಬೇರೆ ದಾರಿಗಳೇನಿರುತ್ತವೆ. ಹಾಗೇನಾದರೂ ಆದರೆ.. ತನ್ನದಲ್ಲದ ತಪ್ಪಿಗೆ ಕಳೆದುಕೊಂಡ ಹಣವನ್ನು ಸರಕಾರವಾಗಲಿ, ಬ್ಯಾಂಕಾಗಲಿ  ಇಲ್ಲವೇ ಆರ್‌ಬಿಐ ಆಗಲಿ ಭರಿಸುತ್ತದೆಯಾ? ವಂಚನೆಕೋರರು ನಕಲಿ ಕಾರ್ಡಗಳನ್ನು ಬಳಸಿಯೋ ಇಲ್ಲವೇ ಜನಸಾಮಾನ್ಯರ ಪಿನ್ ನಂಬರ್ ಕದ್ದು ಹಣವನ್ನು ಲಪಟಾಯಿಸಿದಾಗ ಆದ ನಷ್ಟವನ್ನು ಕಟ್ಟಿಕೊಡುವವರು ಯಾರು? ಎಲ್ಲಿವರೆಗೂ ಬ್ಯಾಂಕಲ್ಲಿ ಇಡುವ ಹಣಕ್ಕೆ ಸಂಪೂರ್ಣ ಭದ್ರತೆ ಹಾಗೂ ನಷ್ಟ ಪರಿಹಾರವನ್ನು ಬ್ಯಾಂಕು ಇಲ್ಲವೇ ಸರಕಾರ ವದಗಿಸುವುದಿಲ್ಲವೋ ಅಲ್ಲಿವರೆಗೂ ಸಂಪೂರ್ಣ ನಂಬಿಕೆಯೊಂದಿಗೆ ಇರುವ ಎಲ್ಲಾ ಹಣವನ್ನು ಬ್ಯಾಂಕಲ್ಲಿ ಇಡಲು ದುಡಿಯುವ ವರ್ಗದವರಿಗೆ ಸಾಧ್ಯವಿಲ್ಲ. ಯಾವಾಗ ಬ್ಯಾಂಕುಗಳು ಹಾಗೂ ಸರಕಾರಗಳ ಮೇಲೆ ಜನರಿಗೆ ನಂಬಿಕೆ ಇಲ್ಲವೋ  ಅಲ್ಲಿವರೆಗೂ ದುಡಿದ ಹಣವನ್ನು ತಮ್ಮಲ್ಲೇ ಇಟ್ಟುಕೊಳ್ಳುತ್ತಾರೆ, ಇಲ್ಲವೇ ಆಪತ್ಕಾಲಕ್ಕೆ ಇರಲಿ ಎಂದು ಸಾಧ್ಯವಾದಷ್ಟು ಚಿನ್ನವನ್ನು ಕೊಂಡುಕೊಳ್ಳುತ್ತಾರೆ.

ಹೌದು.... ಡೆಬಿಟ್ ಕಾರ್ಡು, ಕ್ರೆಡಿಟ್ ಕಾರ್ಡು, ಎಟಿಎಂ, ಪೇಟಿಎಂ, ಇ ವ್ಯಾಲೆಟ್ ಅಂತೆಲ್ಲಾ ತರಾವರಿ ಬ್ಯಾಂಕಿಂಗ್ ಬಳಸಿ ಕ್ಯಾಶಲೆಸ್ ವಹಿಮಾಟನ್ನು ಆರಂಭಿಸಿ ಎಂದು ಮೋದಿ ಸಾಹೇಬರು ಹೇಳ್ತಿದ್ದಾರಲ್ಲಾ.. ಆದರೆ ಇವನ್ನೆಲ್ಲಾ ಬಳಿಸಿದಾಗ ಸಂಬಂಧಪಟ್ಟ ಸರ್ವಿಸ್ ಪ್ರೊವೈಡ್ ಕಂಪನಿಗಳು ಹಾಕುವ ಜಾರ್ಜನ್ನು ಸರಕಾರ ಕಟ್ಟುತ್ತಾ? ಅದನ್ನು ನಾವೇ ಕಟ್ಟಬೇಕಲ್ಲಾ. ಹೀಗೆ ದಿನವಹಿ ನಡೆಯುವ ಅದೆಷ್ಟೋ ಕೋಟಿ ಟ್ರಾನ್ಜಾಂಕ್ಷನ್ ಗಳಿಂದ ಹರಿದು ಬರುವ ಸರ್ವಿಸ್ ಚಾರ್ಜಸ್ ಸರಕಾರಕ್ಕಂತೂ ಹೋಗೋದಿಲ್ಲ. ಬದಲಾಗಿ ಖಾಸಗಿ ಬ್ಯಾಂಕುಗಳು, ಕಾರ್ಪೋರೇಟ್ ಕಂಪನಿಗಳ ಬೊಕ್ಕಸಕ್ಕೆ ಹರಿದು ಹೋಗುತ್ತದಲ್ಲಾ.. ಈ ಕ್ಯಾಶಲೆಸ್ ವ್ಯವಹಾರದಿಂದ ಯಾರಿಗೆ ಹೆಚ್ಚು ಲಾಭ ಹಾಗೂ ಯಾರಿಗೆ ನಷ್ಟ ಎನ್ನುವುದನ್ನು ತಿಳಿದುಕೊಳ್ಳಲು ಅತೀ ಹೆಚ್ಚು ಬುದ್ದಿಯನ್ನು ಖರ್ಚುಮಾಡುವ ಅಗತ್ಯವೇ ಇಲ್ಲ.



ನೋಟು ನಿಷೇಧವೆನ್ನುವುದು ದಬ್ಬಾಳಿಕೆಯ ಕ್ರಮ. ಇದು ಜನಸಾಮಾನ್ಯರ ನಂಬಿಕೆಯನ್ನೇ ಬುಡಮೇಲುಗೊಳಿಸಿದೆ ಎಂದು ನೊಬೆಲ್ ಪುರಸ್ಕೃತ ಆರ್ಥಿಕ ತಜ್ಞ ಅಮರ್ತ್ಯ ಸೇನ್ ಹೇಳಿದ್ದಾರೆ. ನೋಟು ರದ್ದತಿಯಿಂದ ಬ್ರಷ್ಟಾಚಾರ ನಿಯಂತ್ರಿಸಲಾಗದು, ದೇಶದಲ್ಲಿರುವ ಒಟ್ಟಾರೆ ಕಪ್ಪು ಹಣದಲ್ಲಿ ಕೇವಲ 6 ಪ್ರತಿಶತ ಮಾತ್ರ ನಗದು ರೂಪದಲ್ಲಿದೆ. ಇಂತಹ ಕ್ರಮದಿಂದಾಗಿ ಕೇವಲ ನೋಟು ಹಾಗೂ ಬ್ಯಾಂಕ್ ಅಕೌಂಟ್ ಮಾತ್ರವಲ್ಲ ಇಡೀ ನಂಬಿಕೆ ಆಧಾರಿತ ಅರ್ಥವ್ಯವಸ್ಥೆಯನ್ನೇ ಕಡೆಗಣಿಸಲಾಗುತ್ತದೆ. ಇದು ನಂಬಿಕೆ ಆಧಾರಿತ ವಹಿವಾಟಿಗೆ ನೀಡಿದ ದೊಡ್ಡ ಪೆಟ್ಟು. ಕಳೆದ 20 ವರ್ಷಗಳಿಂದ ದೇಶ ವೇಗವಾಗಿ ಅಭಿವೃದ್ದಿ ಸಾಧಿಸುತ್ತಿದೆ. ಇದು ಪರಸ್ಪರ ನಂಬಿಕೆ ಹಾಗೂ ವಿಶ್ವಾಸದಿಂದ ನಡೆಯುತ್ತಿರುವ ವಹಿವಾಟಿನಿಂದ ಸಾಧ್ಯವಾಗಿದೆ. ಆದರೆ ಈಗ ನೋಟಿನ ಮೇಲೆ ಜನಸಾಮಾನ್ಯರ ನಂಬಿಕೆಯೇ ಹೊರಟುಹೋಗುವಂತೆ ಮಾಡಿದೆ. ಸರಕಾರ ತಾನು ಬಿಡುಗಡೆ ಮಾಡಿದ ನೋಟಿನಲ್ಲಿ ನಾವಿಷ್ಟು ಮೊತ್ತದ ಹಣವನ್ನು ನೀಡುತ್ತಿದ್ದೇವೆ ಎಂದು ವಾಗ್ದಾನ ನೀಡಿ, ಏಕಾಏಕಿ ಆ ನೋಟಿಗೆ ಬೆಲೆ ಇಲ್ಲ ಎಂದು ಘೋಷಿಸುವುದು ದಬ್ಬಾಳಿಕೆಯಾಗಿದೆ. ಇದು ಸಾಮಾನ್ಯರು ನೋಟಿನ ಮೇಲೆ ಭರವಸೆ ಕಳೆದುಕೊಳ್ಳುವಂತೆ ಮಾಡಿದೆ ಎಂದು ಖಾಸಗಿ  ಸುದ್ದಿವಾಹಿನಿಗೆ ಕೊಟ್ಟ ಸಂದರ್ಶನದಲ್ಲಿ ಅಮರ್ತ್ಯ ಸೇನ್ ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆರ್ಥಿಕ ತಜ್ಞರು ಹೇಳಿದ ಮಾತುಗಳಲ್ಲಿ ವಿಶ್ವಾಸವಿಡದ ಭಕ್ತಗಣ ಆರ್ಥಿಕ ಸಿದ್ದಾಂತದ ತಲೆಬಾಲ ಗೊತ್ತಿಲ್ಲದಿದ್ದರೂ ಪಂಚೇಂದ್ರಿಯಗಳನ್ನು ಕಳೆದುಕೊಂಡು ತಮ್ಮ ಅಧಿನಾಯಕ ಮೋದಿಯ ಅತಾರ್ಕಿಕ ಆರ್ಥಿಕ ನೀತಿಯ ಕುರಿತು ಭಜನೆ ಮಾಡುತ್ತಿದ್ದಾರೆ.

ಸುಖಾ ಸುಮ್ಮನೆ ನೂರಿಪ್ಪತೈದು ಕೋಟಿ ಭಾರತೀಯರ ಮೇಲೆ ಹೀಗೆ ಆರ್ಥಿಕ ದಬ್ಬಾಳಿಕೆ ಮಾಡಿ ಇಡೀ ದೇಶಕ್ಕೆ ದೇಶವನ್ನೇ ಆರ್ಥಿಕ ತುರ್ತು ಪರಿಸ್ಥಿತಿಗೆ ದೂಡುವ ಬದಲಾಗಿ ಎಲ್ಲಾ ಪಕ್ಷಗಳನ್ನು ಸಾಕಿ ಸಲಹುತ್ತಿರುವ ಒಂದು ಸಾವಿರ ಶ್ರೀಮಂತರು ಹಾಗೂ ಮೋದಿ ಅಂತರಂಗದ ಹತ್ತು ಕಂಪನಿಗಳ ಮೇಲೆ ದಾಳಿ ಮಾಡಿಸಿದ್ದರೆ ಸಾಕಿತ್ತು ಇಡೀ ದೇಶದ ಜನತೆ ಮೋದಿಗೆ ಜೈಕಾರ ಹೇಳುತ್ತಿತ್ತು. ದೇಶದ ಕಪ್ಪುಹಣ ಹೆಚ್ಚಾಗಿರುವುದು ಅಧಿಕಾರಶಾಹಿಗಳಲ್ಲಿ. ಸಂದೇಹ ಬಂದ ಕರಪ್ಟ್ ಅಧಿಕಾರಿಗಳ ಮನೆಗೆ ತೆರಿಗೆ ಇಲಾಖೆ ದಾಳಿಮಾಡಿದ್ದರೆ ಸಾಕಿತ್ತು ನಮೋ ಬ್ರಿಗೇಡ್‌ಗೆ ಉಘೇ ಎನ್ನಬಹುದಿತ್ತು. ಆದರೆ ಹಾಗೆ ಮಾಡದೇ ಹದ್ದುಗಳನ್ನು ಸಂರಕ್ಷಿಸಿ ಗುಬ್ಬಿಗಳ ಮೇಲೆ ಬ್ರಹ್ಮಾಸ್ತ್ರ ಬಿಡುವ ಕೆಲಸವನ್ನು ಮೋದಿ ಮಾಡಿದರು. ಇದು ಯಾವಾಗ ಜನರ ಆಕ್ರೋಶಕ್ಕೆ ಕಾರಣವಾಯಿತೋ ಆಗ.. ಬೇರೆ ತಂತ್ರಗಾರಿಕೆ ರೂಪಿಸಲಾಯಿತು. ನವೆಂಬರ್ ೮ರ ನಂತರದ ಬ್ಯಾಂಕಿನ ವಹಿವಾಟಿನ ಲೆಕ್ಕ ಕೊಡಲು ಮೋದಿ ಸಾಹೇಬರು ತಮ್ಮ ಪಕ್ಷದ ಶಾಸಕ ಸಂಸದರಿಗೆ ಆದೇಶಿಸಿ ದೇಶದ ಜನರ ಕಣ್ಣಿಗೆ ಮಣ್ಣೆರಚುವ ಬದಲಾಗಿ ಮೋದಿ  ಸರಕಾರ ಆಡಳಿತಕ್ಕೆ ಬಂದ ದಿನದಿಂದ ಮಾಡಿದ ವಹಿವಾಟಿನ ಲೆಕ್ಕವನ್ನು ಕೇಳಿದ್ದರೆ ಇಡೀ ದೇಶಕ್ಕೆ ದೇಶವೇ ಮೋದಿ ಜಿಂದಾಬಾದ್ ಎನ್ನಬಹುದಾಗಿತ್ತು. ಸಂಘಪರಿವಾರವನ್ನು ಹಾಗೂ ಅದರ ಮಿತ್ರರನ್ನೆಲ್ಲ ಮೊದಲೇ ಆರ್ಥಿಕವಾಗಿ ಸೇಫಾಗಿರಲು ಬೇಕಾದಷ್ಟು ಅವಕಾಶಮಾಡಿಕೊಟ್ಟು ತದನಂತರ ಇಡೀ ದೇಶದ ಮೇಲೆ ಅಘೋಷಿತ ಆರ್ಥಿಕ ತುರ್ತು ಪರಿಸ್ಥಿತಿಯನ್ನು ಹೇರಿದ ಆಧುನಿಕ ಹಿಟ್ಲರ್ ಮೋದಿಯ ನಡೆಯನ್ನು ಸಮರ್ಥಿಸಿಕೊಳ್ಳಲು ನಿಜವಾದ ದೇಶಭಕ್ತರಿಗೆ ಸಾಧ್ಯವೇ ಇಲ್ಲ. ನಕಲಿ ದೇಶಭಕ್ತರಿಗೆ ಮುಂಬರುವ ಅಪಾಯದ ಅರಿವಿಲ್ಲ.


ಇಷ್ಟಕ್ಕೂ ದೇಶಾದ್ಯಂತ ಇರುವ ಕಪ್ಪು ಹಣದ ಅರ್ಧದಷ್ಟನ್ನಾದರೂ ಮೋದಿ ಸರಕಾರ ರಿಕವರಿ ಮಾಡಿಕೊಳ್ಳದೇ ಹೋದರೆ ದೇಶದ ಜನರ ಕ್ಷಮೆಕೋರಿ ರಾಜೀನಾಮೆ ಕೊಟ್ಟು ಹೋಗುತ್ತೇನೆಂದು ಘೊಷಿಸುವುದುತ್ತಮ. ಕಪ್ಪು ಹಣ ರಿಕವರಿ ಆಗದೇ ಇದ್ದಲ್ಲಿ ಇಡೀ ಮೋದಿಯ ಹಿಂಬಾಲಕ ಭಕ್ತರು ಸಾರಾಸಗಟಾಗಿ ತಮ್ಮ ಅತಿರೇಕದ ಭಜನೆಯನ್ನು ಬಿಟ್ಟು ಆಳುವ ವರ್ಗಗಳ ವಿರುದ್ಧ ನಿಂತು ಜನಸಾಮಾನ್ಯರ ಪರವಾಗಿ ಮಾತಾಡುತ್ತೇವೆ ಎಂದಾದರೂ ನಿರ್ಧರಿಸಬೇಕು. ಆದರೆ ಇದೆಲ್ಲಾ ಸಾಧ್ಯವೂ ಇಲ್ಲಾ. ಅವರಿಗೆ ಬೇಕಾಗೂ ಇಲ್ಲ. ದೇಶದ ಜನರನ್ನು ಸದಾ ಒಂದಿಲ್ಲೊಂದು ಭ್ರಮೆಯಲ್ಲಿಟ್ಟು, ದೇಶಭಕ್ತಿಯ ಉನ್ಮಾದವನ್ನು ಹುಟ್ಟಿಸಿ ಅಂತಿಮವಾಗಿ ಪ್ಯಾಸಿಸ್ಟ್ ಆಡಳಿತವನ್ನು ಹೇರುವ ಮೂಲಕ ಸನಾತನ ಮನುಸ್ಮೃತಿ ಆಡಳಿತವನ್ನು ದೇಶಾದ್ಯಂತ ತರಬೇಕು ಎನ್ನುವುದೇ ಸಂಘಪರಿವಾರದ ಹಿಡನ್ ಅಜೆಂಡಾ ಆಗಿದೆ. ಅದಕ್ಕಾಗಿ  ಈ ಎಲ್ಲಾ ಸರ್ಕಸ್ ಮಾಡಲಾಗುತ್ತಿದೆ. ಆದರೆ.. ಅದೆಷ್ಟೇ ದೌರ್ಜನ್ಯ ಎಸಗಿದರೂ ಮತಾಂಧ ಹಿಟ್ಲರನಿಗಾದ ಗತಿಯೇ ಈ ಪ್ಯಾಸಿಸ್ಟ್ ಸಂತತಿಗೂ ಆಗುವುದು ಖಂಡಿತ. ದೌರ್ಜನ್ಯ ಹೆಚ್ಚಿದಷ್ಟೂ ದಂಗೆ ತೀವ್ರಗೊಳ್ಳುತ್ತದೆ ಎನ್ನುವ ಜಾಗತಿಕ ಸತ್ಯದ ಅರಿವು ಆಗುವವರೆಗೂ ಈ ಮಾತಾಂಧರ ಅಟ್ಟಹಾಸ ನಿಲ್ಲುವುದಿಲ್ಲ. ಜನರನ್ನು ಸುದೀರ್ಘ ಕಾಲ ಭ್ರಮೆಯಲ್ಲಿಟ್ಟು ಮೋಸಗೊಳಿಸಲು ಸಾಧ್ಯವಿಲ್ಲ ಎನ್ನುವ ತಿಳುವಳಿಕೆ ಬರುವಷ್ಟರಲ್ಲಿ ಬಹುಸಂಖ್ಯಾತ ಜನರೇ ಸನಾತನಿಗಳಿಗೆ ಪಾಠ ಕಲಿಸುತ್ತಾರೆ ಎನ್ನುವುದರಲ್ಲಿ ಸಂದೇಹವೇ ಇಲ್ಲಾ. ಆದರೆ.. ಅಲ್ಲಿವರೆಗೂ ಆಗುವ ಜೀವ ಹಾನಿ ಹಾಗೂ ಸಮಾಜದ ಮೇಲಾಗುವ ದುಷ್ಪರಿಣಾಮಗಳು ಮಾತ್ರ ಘೋರ.

-ಶಶಿಕಾಂತ ಯಡಹಳ್ಳಿ