ಬುಧವಾರ, ಮಾರ್ಚ್ 22, 2017

ತಹ ತಹ... 78 ವಿದ್ಯುನ್ಮಾನ ಮತಯಂತ್ರಗಳ ಸುತ್ತ ಸಂದೇಹದ ಹುತ್ತ:





ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ನಿಂತಿರುವುದೇ ಪ್ರಜೆಗಳ ಮತಮೌಲ್ಯದ ಮೇಲೆ. ತಮ್ಮ ಪ್ರತಿನಿಧಿಗಳು ಯಾರಿರಬೇಕು?, ಯಾವ ಪಕ್ಷ ಅಧಿಕಾರಕ್ಕೆ ಬರಬೇಕು? ಎನ್ನುವುದನ್ನೆಲ್ಲಾ ನಿರ್ದರಿಸುವವರು ಈ ದೇಶದ ಮತದಾರರು ಎನ್ನುವುದೆಲ್ಲಾ ಸಂವಿಧಾನದ ಸದಾಶಯ. ಆದರೆ.. ಭಾರತದಂತಹ ಬಂಡವಾಳಶಾಹಿ ಪ್ರಜಾಪ್ರಭುತ್ವದ ಚುನಾವಣಾ ರಾಜಕೀಯದಲ್ಲಿ ಅಸಲಿಗೆ ನಡೆಯುತ್ತಿರುವುದೇ ಬೇರೆ. ರಾಜ್ಯಾಧಿಕಾರ ಹಿಡಿಯುವುದೇ ಪರಮ ಗುರಿಯೆಂದು ತಿಳಿದು ತಂತ್ರ ಕುತಂತ್ರಗಳಲ್ಲಿ ನಿರತವಾಗಿರುವ ಎಲ್ಲಾ ನಮೂನಿಯ ರಾಜಕೀಯ ಪಕ್ಷಗಳು ಹಾಗೂ ಅವುಗಳ ರೂವಾರಿಗಳ ಏಕೈಕ ಮಂತ್ರವೇನೆಂದರೆ ಹೇಗಾದರೂ ಮಾಡು, ಏನಾದರೂ ಮಾಡು ಓಟುಗಳನ್ನು ಪಡೆದು ಅಧಿಕಾರ ಹಿಡಿ ಎನ್ನುವುದಾಗಿದೆ. ಜನಪರ ಕಾಳಜಿ ಇರುವ ವ್ಯಕ್ತಿಗಿಂತಲೂ ಜನರ ಮತಗಳನ್ನು ಹಣಬಲ ತೋಳ್ಬಲಗಳಿಂದ ಹೇಗಾದರೂ ಮಾಡಿ ಪಡೆಯಬಹುದಾದ ತಾಕತ್ತಿರುವವನಿಗೆ ಮಾತ್ರ ಇಲ್ಲಿ ಪ್ರಮುಖ ಪಕ್ಷದ ಅಭ್ಯರ್ಥಿಯಾಗಲು ಸಾಧ್ಯವಾಗುತ್ತದೆ.

ಮತದಾರರಿಗೆ ಇಲ್ಲಸಲ್ಲದ ಪೊಳ್ಳು ಭರವಸೆಗಳನ್ನು ಕೊಡುವ ಮೂಲಕ ಆಸೆ ಆಮಿಷಗಳನ್ನೊಡ್ಡಿ ಮತ ಪಡೆಯುವ ತಂತ್ರಗಾರಿಕೆ ಹಳೆಯದಾಗಿದೆ. ಬರುಬರುತ್ತಾ ಈ ಓಟಿನ ಹಪಾಹಪಿ ಅದೆಷ್ಟಾಗಿದೆ ಎಂದರೆ ಮತದಾರರನ್ನು ಜಾತಿ ಧರ್ಮದ ಹೆಸರಲ್ಲಿ ಒಡೆದು ಮತಗಳನ್ನು ದೃವೀಕರಣ ಮಾಡುವ ಸಂವಿಧಾನ ವಿರೋಧಿ ಕೃತ್ಯ ಅವ್ಯಾಹತವಾಗಿ ದೇಶಾದ್ಯಂತ ನಡೆಯುತ್ತಿದೆ. ಇದಕ್ಕೆ ಯಾವುದೇ ಪ್ರಮುಖ ಪಕ್ಷಗಳೂ ಹೊರತಲ್ಲಾ. ಉತ್ತಮ ಜನಪರ ಕೆಲಸಗಳಿಂದ ಜನರನ್ನು ಒಲಿಸಿಕೊಳ್ಳುವ, ಜನರ ಪ್ರೀತಿ ವಿಶ್ವಾಸವನ್ನು ಗಳಿಸಿಕೊಳ್ಳುವ ಜನಪ್ರತಿನಿಧಿಗಳು ಈಗ ಬೆರಳೆಣಿಕೆಗೂ ದಕ್ಕದಾಗಿದ್ದಾರೆ. ಈಗೇನಿದ್ದರೂ ಚುನಾವಣೆಯಲ್ಲಿ ಹಣ, ಹೆಂಡ, ಹುಸಿ ಆಶ್ವಾಸನೆ ಹಾಗೂ ಜಾತಿಗಳೇ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದು ಸಂವಿಧಾನದ ಆಶಯವೇ ನೇಪತ್ಯಕ್ಕೆ ಸೇರಿಹೋಗಿದೆ. ಇತ್ತೀಚೆಗಂತೂ ಮತದಾರರ ಮೇಲೆಯೇ ವಿಶ್ವಾಸ ಕಳೆದುಕೊಂಡ ರಾಜಕೀಯ ಪಕ್ಷಗಳು ಮತಯಂತ್ರವನ್ನೇ ತಮ್ಮಿಚ್ಚೆಯಂತೆ ತಿರುಚಿ ತಮಗೆ ಬೇಕಾದಂತೆ ಮತಗಳನ್ನು ಹಾಕಿಸಿಕೊಳ್ಳುವ ತಂತ್ರಗಾರಿಕೆಯನ್ನು ರೂಢಿಸಿಕೊಂಡಿವೆ.

2017 ಫೆಬ್ರವರಿ ಹಾಗೂ ಮಾರ್ಚ ತಿಂಗಳಲ್ಲಿ ನಡೆದ ಉತ್ತರ ಪ್ರದೇಶದ ಚುನಾವಣೆಯಲ್ಲಿ ಮತಯಂತ್ರ ದುರುಪಯೋಗದ ಆರೋಪ ಹಿಂದೆಂದಿಗಿಂತಲೂ ಹೆಚ್ಚಾಗಿ ಕೇಳಿಬಂದಿದೆ. ಯುಪಿ ಎಲೆಕ್ಷನ್ನಿನಲ್ಲಿ ನಿಜಕ್ಕೂ ಇಂತಹುದೊಂದು ದುಷ್ಕೃತ್ಯ ವ್ಯಾಪಕವಾಗಿ ನಡೆದಿದೆಯಾ? ಅನುಮಾನಗಳಂತೂ ಇದ್ದೇ ಇದೆ. ಆದರ ನಡುವೆಯೇ ಬಿಜೆಪಿ ಈ  ರಾಜ್ಯದಲ್ಲಿ ಜಯಬೇರಿ ಬಾರಿಸಿದೆ. ಕೇಂದ್ರದಲ್ಲಿ ಇದೇ ಪಕ್ಷದ ಆಡಳಿತವಿದೆ. ಸೋತು ಸುಣ್ಣವಾಗಿರುವ ವಿರೋಧ ಪಕ್ಷಗಳು ಅದೆಷ್ಟೇ ಮತಯಂತ್ರದ ದುರುಪಯೋಗದ ಬಗ್ಗೆ ಬಾಯಿ ಬಡಿದುಕೊಂಡರೂ ಅವರ ಪರಿಸ್ಥಿತಿ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಎನ್ನುವಂತಾಗಿದೆ.  ನಿಜಕ್ಕೂ ಮತಯಂತ್ರಗಳನ್ನು ತಿರುಚುವ ಸಾಧ್ಯತೆ ಇದೆಯಾ? ಯಾರು ಯಾರಿಗೇ ಮತ ಹಾಕಿದರೂ ಒಂದು ಪಕ್ಷದ ಅಭ್ಯರ್ಥಿಗೆ ಮತಗಳೆಲ್ಲಾ ಬೀಳುವಂತೆ ಮಾಡಲು ಸಾಧ್ಯವಾ? ಹೌದು ಸಾಧ್ಯ ಅನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆತಂಕಕಾರಿಯಾದ ಸಂಗತಿ.

ಮೊದಲು ಮ್ಯಾನುವಲ್ ಬ್ಯಾಲೆಟ್ ಪೇಪರ್‌ನಲ್ಲಿ ಮತಗಳು ಚಲಾವಣೆಗೊಳಗಾಗುತ್ತಿದ್ದವು. ಆಗ ಶಕ್ತಿ ಇದ್ದವರು ಬೂತ್ ಕ್ಯಾಪ್ಚರ್ ಮಾಡಿಯೋ ಇಲ್ಲವೇ ಚುಣಾವಣಾಧಿಕಾರಿಗಳನ್ನು ಸರಿಪಡಿಸಿಕೊಂಡೋ ಮತಗಳನ್ನು ಬಾಚಿಕೊಳ್ಳುತ್ತಿದ್ದರು. ಹಾಗೂ ಮತಪತ್ರಗಳನ್ನು ಮುದ್ರಿಸುವುದು, ಸಾಗಿಸುವುದು ಚುನಾವಣೆಯ ನಂತರ ಸುರಕ್ಷಿತವಾಗಿ ಕಾಪಾಡುವುದು ಅತಿ ಹೆಚ್ಚು ಖರ್ಚು ಸಮಯ ಹಾಗೂ ಶ್ರಮದ ಕೆಲಸವಾಗಿತ್ತು.   ಇದನ್ನೆಲ್ಲಾ ತಡೆಯಲೆಂದು ಚುನಾವಣಾ ಆಯೋಗವು ವಿದ್ಯುನ್ಮಾನ ಮತಯಂತ್ರಗಳು ಅಂದರೆ ಇವಿಎಂ ಗಳು ಬಳಕೆಗೆ ಬಂದವು. ಚುನಾವಣಾ ಅಕ್ರಮಗಳು ಕಡಿಮೆಯಾಗಿ ನ್ಯಾಯಸಮ್ಮತ ರೀತಿಯಲ್ಲಿ ಚುನಾವಣೆಗಳು ನಡೆಯಲಿ ಎನ್ನುವ ಸದುದ್ದೇಶ ಈ ಹೊಸ ವ್ಯವಸ್ಥೆಯ ಹಿಂದಿತ್ತು. ಆದರೆ.. ಚುನಾವಣಾ ಆಯೋಗ ಚಾಪೆ ಕೆಳಗೆ ತೂರಿದರೆ ರಾಜಕೀಯ ಪಕ್ಷಗಳು ರಂಗೋಲಿ ಕೆಳಗೆ ತೂರಿ ತಮ್ಮ ನೀಚತನದ ಆಟ ಆಡುವುದನ್ನು ಮುಂದುವರೆಸಿದವು. ಬ್ಯಾಲೆಟ್ ಪೇಪರ್ ವ್ಯವಸ್ಥೆಯಲ್ಲಿ ಬೂತ್ ಕ್ಯಾಪ್ಚರ್ ಮಾಡಲಿಕ್ಕೆ ಗೂಂಡಾ ಶಕ್ತಿ ಬೇಕಾಗಿತ್ತು. ಅದರೆ.. ಈ ಇವಿಎಂ ವ್ಯವಸ್ಥೆಯಲ್ಲಿ ಯುಕ್ತಿ ಇದ್ದರೆ ಸಾಕು ಮತಗಳನ್ನು ಬೇಕಾದವರ ಖಾತೆಗೆ ಸೇರಿಸಲು.

ಈ ವಿದ್ಯುನ್ಮಾನ ಮತಯಂತ್ರಗಳ ಬಳಕೆ ಮೊಟ್ಟ ಮೊದಲು ಆರಂಭವಾಗಿದ್ದು 1982ರ ಕೇರಳ ರಾಜ್ಯದ ಚುನಾವಣೆಯಲ್ಲಿ. ಆಗಲೇ ಇದರ ದುರುಪಯೋಗದ ಕುರಿತು ಎಚ್ಚೆತ್ತ ಸಿಪಿಎಂ ಪಕ್ಷವು ಹೈಕೋರ್ಟಿನಲ್ಲಿ ಪ್ರಶ್ನಿಸಿತ್ತು. ಆದರೆ ಚುನಾವಣೆ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡಲಾಗದೆಂದು ಹೈಕೋರ್ಟ ತನ್ನ ಜವಾಬ್ದಾರಿಯಿಂದಾ ಹಿಂದೆ ಸರಿಯಿತು. ವಿಪರ್ಯಾಸವೆಂದರೆ ಆ ಚುನಾವಣೆಯಲ್ಲಿ ಕಮ್ಯೂನಿಸ್ಟ್ ಪಕ್ಷ ಗೆದ್ದಾಗ ಕಾಂಗ್ರೆಸ್ ಮತಯಂತ್ರಗಳ ದುರುಪಯೋಗವಾಗಿದೆ ಎಂದು ಹೈಕೋರ್ಟಿಗೆ ಮೊರೆಯನ್ನಿಟ್ಟಿತು. ಅಂದಿನಿಂದಾ ಇಂದಿನವರೆಗೂ ಈ ಇವಿಎಂ ಗಳ ಬಗ್ಗೆ ಎಲ್ಲಾ ಪಕ್ಷಗಳಲ್ಲೂ ಒಂದು ರೀತಿ ಗುಮಾನಿ ಇದ್ದೇ ಇದೆ. ಗೆದ್ದಾಗ ಸುಮ್ಮನಿರುವುದು ಸೋತಾಗ ಮತಯಂತ್ರಗಳ ದುರುಪಯೋಗದ ಬಗ್ಗೆ ಗುಲ್ಲೆಬ್ಬಿಸುವುದು ನಡೆದೇ ಇದೆ. ಆದರೆ ಚುನಾವಣಾ ಆಯೋಗ ಮಾತ್ರ ಈ ಇವಿಎಂ ವ್ಯವಸ್ಥೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಲೇ ಬಂದಿದೆ.

ಜಗತ್ತಿನ ಯಾವ ದೇಶಗಳೂ ಭಾರತದಷ್ಟು ವ್ಯಾಪಕವಾಗಿ ಇವಿಎಂ ಗಳನ್ನು ಬಳಸುತ್ತಿಲ್ಲಾ. ಎಂತೆಂತಹ ಸುರಕ್ಷಿತ ವಿದ್ಯುನ್ಮಾನ ವಲಯಗಳನ್ನೇ ಹ್ಯಾಕ್ ಮಾಡುವ ಪ್ರಚಂಡರು ಇರುವಾಗ ಇನ್ನು ಈ ಇವಿಎಂಗಳು ಯಾವ ಲೆಕ್ಕ ಎನ್ನುವ ಗುಮಾನಿ ಎಲ್ಲಾ ದೇಶಗಳಲ್ಲೂ ಇದ್ದೇ ಇದೆ. ಇತ್ತೀಚೆಗೆ ಟ್ರಂಪ್ ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಎಲ್ಲರ ನಿರೀಕ್ಷೆ ಮೀರಿ ಜಯಗಳಿಸಿದಾಗ ರಷ್ಯಾದ ಹ್ಯಾಕರಗಳು ಮತಯಂತ್ರಗಳನ್ನು ಟ್ರಂಪ್ ಪರವಾಗಿ ತಿರುಚಿದ್ದಾರೆಂಬ ಆರೋಪವೂ ಕೇಳಿಬಂದಿತ್ತು.. ಆದರೆ ಅಮೇರಿಕದಲ್ಲಿರುವ 50 ರಾಜ್ಯಗಳಲ್ಲಿ ಕೇವಲ 5 ರಾಜ್ಯಗಳಲ್ಲಿ ಮಾತ್ರ ಈ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸುತ್ತಿದ್ದುದರಿಂದ ಈ ಆರೋಪಕ್ಕೆ ಹೆಚ್ಚು ಮಹತ್ವ ಸಿಗಲಿಲ್ಲ. 2002ರಲ್ಲಿ ಅಮೇರಿಕದಲ್ಲಿ ಇವಿಎಂಗಳ ಬಳಕೆ ಆರಂಭವಾಯಿತು. ಆದರೆ ಈ ಮತಯಂತ್ರಗಳನ್ನು ಸುಲಭವಾಗಿ ಹ್ಯಾಕ್ ಮಾಡಬಹುದೆಂದು ಕಂಪ್ಯೂಟರ್ ಪರಿಣಿತರು ಸಾಬೀತುಗೊಳಿಸಿದರು. ನೆದರ್‌ಲ್ಯಾಂಡ್ ಜರ್ಮಿನಿಗಳಲ್ಲಿ ಸಹ ಒಂದೆರಡು ಚುನಾವಣೆಗಳಲ್ಲಿ ಈ ಮತಯಂತ್ರಗಳನ್ನು ಬಳಸಿದರಾದರೂ ಗೋಲ್ಮಾಲ್ ಸಾಧ್ಯತೆಗಳನ್ನು ಮನಗಂಡು ಮತ್ತೆ ಬ್ಯಾಲೆಟ್ ವ್ಯವಸ್ಥೆಗೆ ಮರಳಿದರು. ಈಗಲೂ ಯುರೋಪಿನ ಎರಡು ಮೂರು ದೇಶಗಳನ್ನು ಹೊರತು ಪಡಿಸಿ ಎಲ್ಲಿಯೂ ವ್ಯಾಪಕವಾಗಿ ಮತಯಂತ್ರಗಳನ್ನು ಬಳಸುತ್ತಿಲ್ಲಾ. ಹಲವಾರು ದೇಶಗಳು ಇವಿಎಂ ಮತಯಂತ್ರಗಳನ್ನು ಬಳಸಿ ನಿಷೇಧಿಸಿವೆ. ಆದರೆ ಭ್ರಷ್ಟಾಚಾರದಲ್ಲಿ ಯಾವಾಗಲೂ ಮುಂದಾಳತ್ವವನ್ನು ಕಾಯ್ದುಕೊಂಡು ಬಂದ ಭಾರತದಂತಹ ದೇಶ ಮಾತ್ರ ಈ ಮತಯಂತ್ರಗಳ ಮೋಹಕ್ಕೊಳಗಾಗಿದೆ. 2009ರ ರಾಜ್ಯಸಭೆ ಚುನಾವಣಾ ಸಂದರ್ಭದಲ್ಲಿ ಬಿಜೆಪಿಯ ನಾಯಕ ಎಲ್.ಕೆ.ಅಡ್ವಾನಿಯವರೇ ಮತಯಂತ್ರಗಳಿಗಿಂತಾ ಬ್ಯಾಲೆಟ್ ಪೇಪರ್ ಬಳಸುವುದುತ್ತಮ ಎಂದು ಹೇಳಿದ್ದರು. ಯಾಕೆಂದರೆ ಮತಯಂತ್ರಗಳ ಅಕ್ರಮಗಳ ಮೂಲಕ ಇಡೀ ಚುನಾವಣಾ ಫಲಿತಾಂಶವನ್ನೇ ಬದಲಾಯಿಸಬಹುದಾದ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲಾ.

ಈಗ ಉತ್ತರ ಪ್ರದೇಶದ ಚುನಾವಣೆಯಲ್ಲಿ ಎಲ್ಲಾ ಸಮೀಕ್ಷೆಗಳ ನಿರೀಕ್ಷೆಯನ್ನು ಮೀರಿ ಬಿಜೆಪಿ ದಿಗ್ವಿಜಯ ಸಾಧಿಸಿದೆ. ಮತಯಂತ್ರಗಳ ದುರುಪಯೋಗವಾಗಿದೆ ಎಂದು ಮಾಯಾವತಿಯವರು ಈ ಬಾರಿ ಮೊದಲು ದ್ವನಿಯೆತ್ತಿದರು. ಶೇ.5 ರಷ್ಟೂ ಮತಗಳನ್ನು ಪಡೆಯದ ಮಯಾವತಿಯವರಿಗೆ ಮತಯಂತ್ರಗಳ ಮೇಲೆ ಸಂದೇಹ ಬಂದಿದ್ದರಲ್ಲಿ ತಪ್ಪೇನಿಲ್ಲಾ. ಕೇಂದ್ರ ಸರಕಾರ ತನ್ನ ಅಧಿಕಾರ ದುರುಪಯೋಗ ಮಾಡಿ ಚುನಾವಣಾ ಅಧಿಕಾರಿಗಳನ್ನೇ ಬುಕ್ ಮಾಡಿಕೊಂಡು ಮತಯಂತ್ರಗಳ ತಿರುಚಿ, ಬೇರೆಪಕ್ಷಗಳ ಅಭ್ಯರ್ಥಿಗಳಿಗೆ ಚಲಾವಣೆಯಾದ ಮತಗಳನ್ನು ಬಿಜೆಪಿ ಅಭ್ಯರ್ಥಿಗಳಿಗೆ ಬರುವಂತೆ ಮಾಡಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸತೊಡಗಿದವು. ಯುಪಿಯಲ್ಲಿ ಮತಯಂತ್ರ ದುರುಪಯೋಗಗೊಂಡು ಬಿಜೆಪಿ ಬಂದಿದ್ದರೆ ಪಂಜಾಬಿನಲ್ಲೂ ಯಾಕೆ ಬಿಜೆಪಿ-ಅಕಾಲಿದಳ ಸೋತುಹೋದವು ಎಂದು ಭಕ್ತರು ಮರುಪ್ರಶ್ನಿಸಿ ಆರೋಪಿಸಿದವರ ಬಾಯಿ ಮುಚ್ಚಲು ಪ್ರಯತ್ನಿಸಿದರು. ಅದರೆ.. ಪಂಜಾಬಿನಲ್ಲಿ  ಆಪ್ ಪಕ್ಷ ಬಹುಮತದಿಂದ ಗೆಲ್ಲುತ್ತದೆ ಎಂದು ಬಿಜೆಪಿ ತಪ್ಪು ಲೆಕ್ಕಾಚಾರ ಮಾಡಿತ್ತು. ಹೀಗಾಗಿ ಆಪ್ ಪಕ್ಷದ ಅಭ್ಯರ್ಥಿಗಳ ಮತಗಳು ಬಿಜೆಪಿ ಕ್ಯಾಂಡಿಡೇಟ್‌ಗೆ ಬೀಳುವಂತೆ ಮಾಡಲಾಗಿತ್ತು. ಆದರೆ.. ಕಾಂಗ್ರೆಸ್ ಪಕ್ಷ ಅಲ್ಲಿ ಲೀಡ್ ಪಡೆಯಿತು. ಹೀಗಾಗಿ ಬಿಜೆಪಿ ಸೋತಿತು ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಆಪ್ ಪಕ್ಷದ ನೇತಾರ ಕೇಜ್ರೀವಾಲ್‌ರವರೂ ಸಹ ಪಂಜಾಬಿನಲ್ಲಿ ಆಪ್‌ನ 20% ರಿಂದ 25% ಮತಗಳು ಬಿಜೆಪಿ-ಅಕಾಲಿದಳಕ್ಕೆ ಹೋಗುವಂತೆ ಯಂತ್ರವನ್ನು ತಿದ್ದಲಾಗಿದೆ ಎಂದು ಆರೋಪಿಸಿದ್ದರು. ಈ ಕುರಿತು ಕೋರ್ಟಿಗೆ ಹೋಗುತ್ತೇನೆ. ಇದು ಪ್ರಜಾಸತ್ತೆಯ ಕೊಲೆ. ಇದನ್ನು ವಿರೋಧಿಸಿ ಪ್ರತಿ ತಿಂಗಳೂ ಒಂದು ದಿನವನ್ನು ಕರಾಳ ದಿನವಾಗಿ ಆಚರಿಸಲಿದ್ದೇನೆ ಎಂದು ಮಾಯಾವತಿ ಗುಡುಗಿದರು.

ಇಂತಹ ಸಂದೇಹಗಳಿಂದಾಗಿ ಪಕ್ಷಾತೀತವಾಗಿ ಕೆಲಸಮಾಡಬೇಕಾದ ಚುನಾವಣಾ ಆಯೋಗದ ಪ್ರಾಮಾಣಿಕತೆಯನ್ನೇ ಪ್ರಶ್ನಿಸಿದಂತಾಯಿತು. ಇಲ್ಲಿವರೆಗೂ ಇವಿಎಂ ವ್ಯವಸ್ಥೆ ಅದೆಷ್ಟೇ ಪಾರದರ್ಶಕವೆಂದು ಆಯೋಗ ಸಮರ್ಥಿಸಿಕೊಳ್ಳುತ್ತಾ ಬಂದರೂ ಅದನ್ನು ಸಂಪೂರ್ಣವಾಗಿ ನಂಬುವುದು ಸಾಧ್ಯವಾಗಿರಲಿಲ್ಲ. ಮತಯಂತ್ರವನ್ನು ಮ್ಯಾನುಪಿಲೇಟ್ ಮಾಡಬಹುದಾದ ಸಾಧ್ಯತೆಗಳ ಬಗ್ಗೆಯೂ ಹಲವಾರು ತಂತ್ರಜ್ಞರು ಬೆಳಕು ಚೆಲ್ಲಿದರು. ಹೀಗಾಗಿ ಇಡೀ ದೇಶವಾಸಿಗಳಲ್ಲಿ ಮತಯಂತ್ರಗಳ ಪ್ರಾಮಾಣಿಕತೆಯ ಬಗ್ಗೆ ಒಂದು ರೀತಿಯ ಗುಮಾನಿ ಉಳಿದುಕೊಂಡಿದೆ. ಚುನಾವಣಾ ಆಯೋಗದ ಆಯುಕ್ತರು ಅದೆಷ್ಟೇ ಸಬೂಬುಗಳನ್ನು ಕೊಟ್ಟರೂ ಸಂಪೂರ್ಣವಾಗಿ ನಂಬುವಂತಿಲ್ಲ. ಯುಪಿ ಎಲೆಕ್ಷನ್ನಿನ ಒಂದು ಕ್ಷೇತ್ರದಲ್ಲಿ ಮತಚಲಾಯಿಸಿದವರಿಗಿಂತಲೂ ಮತಗಳ ಸಂಖ್ಯೆಗಳೇ ಹೆಚ್ಚಿರುವುದು ಮತಯಂತ್ರದ ಮೇಲೆ ಸಂದೇಹವನ್ನು ಹೆಚ್ಚಿಸುವಂತಿದೆ.

ಈ ಎಲ್ಲ ಸಂದೇಹಗಳಿಗೆ ಅಂತ್ಯ ಹಾಡಲು.. ಮತಯಂತ್ರಗಳ ತಿರುಚುವಿಕೆಗೆ ಅಂತ್ಯಹಾಡಲು ದೇಶಾದ್ಯಂತ ಎಲ್ಲಾ ಮತಗಟ್ಟೆಗಳಲ್ಲಿ ವಿವಿಪಿಎಟಿ ವ್ಯವಸ್ಥೆಯಿರುವ ಮತಯಂತ್ರಗಳನ್ನು ಜಾರಿಗೆ ತರಲು ಚುನಾವಣಾ ಆಯೋಗದ ಮಾಜಿ ಆಯುಕ್ತರಾದ ವೈ.ಎಸ್.ಖುರೇಷಿ ಮತ್ತು ಎಚ್.ಎಸ್.ಬ್ರಹ್ಮರವರು ಆಗ್ರಹಿಸಿದ್ದಾರೆ. ವಿವಿಪಿಎಟಿ ಅಂದರೆ ಓಟರ್ ವೆರಿಪೈಡ್ ಆಡಿಟ್ ಟ್ರಯಲ್ ಎಂಬುದು ಇವಿಎಂಗಳ ಸುಧಾರಿತ ಆವೃತ್ತಿಯಾಗಿದ್ದು 2014ರ ಚುನಾವಣೆಯಲ್ಲಿ ಕೆಲವು ಕಡೆ ಪ್ರಯೋಗಿಕವಾಗಿ ಬಳಸಲಾಗಿತ್ತಾದರೂ ವ್ಯಾಪಕವಾಗಿ ಬಳಕೆಯಾಗಲಿಲ್ಲ. ಮತದಾರ ದೃಢೀಕರಣ ಕಾಗದ ಪರಿಶೀಲನಾ ಪ್ರಯೋಗ (ವಿವಿಪಿಎಟಿ) ವೆನ್ನುವ ಈ ಸುಧಾರಿತ ವ್ಯವಸ್ಥೆಯಲ್ಲಿ ಮತದಾರರ ಮತ ಒತ್ತಿದ ತಕ್ಷಣ ಯಂತ್ರದಲ್ಲಿ ಒಂದು ಸಣ್ಣ ಚೀಟಿ ಕಾಣಿಸಿಕೊಂಡು ಮತದಾರ ಯಾರಿಗೆ ಮತ ಹಾಕಿದ್ದಾನೆ ಎನ್ನುವುದನ್ನು ದೃಢೀಕರಿಸುತ್ತದೆ. ಹಾಗೂ ಮತಗಳ ಎಣಿಕೆಯನ್ನು ಮಾಡುವಾಗ ಡಿಜಿಟಲ್ ಓಟುಗಳ ಜೊತೆಗೆ ಈ ಚೀಟಿಗಳ ಸಂಖ್ಯೆಯನೂ ಸಹ ತುಲನೆ ಮಾಡಲಾಗುತ್ತದೆ. ಅಂದರೆ ಎಟಿಎಂಗಳಲ್ಲಿ ಹಣ ಪಡೆದ ನಂತರ ಬರುವ ರಸೀದಿಯನ್ನು ಓದಿ ತುಲನೆ ಮಾಡುವ ಹಾಗೆ.

ಇತ್ತೀಚೆಗೆ ನಡೆದ ಗೋವಾ ವಿಧಾನಸಭೆಯ ಚುನಾವಣೆಯಲ್ಲಿ ಬಿಇಎಲ್ ನಿರ್ಮಾಣದ ಈ ಸುಧಾರಿತ ಯಂತ್ರಗಳನ್ನು ಬಳಸಲಾಗಿದೆ. ಇದರಿಂದಾಗಿಯೇ ಅಲ್ಲಿ ಬಿಜೆಪಿ ಬಹುಮತ ಪಡೆಯಲು ಸಾಧ್ಯವಾಗಿಲ್ಲವೆಂದೂ ಹೇಳಲಾಗುತ್ತದೆ. ಮತಯಂತ್ರದ ವಿಶ್ವಾಸಾರ್ಹತೆಯ ಮೇಲೆ ಪ್ರತಿಪಕ್ಷಗಳು ಹಾಗೂ ಪ್ರಜೆಗಳು ಸಂದೇಹವನ್ನು ವ್ಯಕ್ತಪಡಿಸುತ್ತಿರುವಾಗ ಮತಯಂತ್ರದ ದುರ್ಬಳಕೆಯನ್ನು ತಡೆಗಟ್ಟಲು ಕೂಡಲೇ ಕೇಂದ್ರ ಚುನಾವಣಾ ಆಯೋಗವು ವಿವಿಪಿಎಟಿ ಮತಯಂತ್ರಗಳ ಬಳಕೆಯನ್ನು ವ್ಯಾಪಕವಾಗಿ ಎಲ್ಲಾ ಚುನಾವಣೆಗಳಲ್ಲೂ ಬಳಸುವುದನ್ನು ಖಡ್ಡಾಯವಾಗಿ ಜಾರಿಗೆ ತರಬೇಕಾಗಿದೆ. 2013 ರಲ್ಲಿಯೇ ಈ ವಿವಿಪಿಎಟಿ ವ್ಯವಸ್ಥೆ ಜಾರಿಗೆ ತರಲು ಸುಪ್ರಿಂ ಕೋರ್ಟ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿತ್ತು. ಆದರೆ.. ಅದು ಯಾಕೋ ಇಲ್ಲಿವರೆಗೂ ಜಾರಿಯಲ್ಲಿ ಬಂದಿರಲಿಲ್ಲ. ಈಗ ಚುನಾವಣಾ ಆಯೋಗದ ಮೇಲೆಯೇ ಗುರುತರ ಆರೋಪಗಳು ಕೇಳಿ ಬಂದಿದ್ದರಿಂದಾ ಅನಿವಾರ್ಯವಾಗಿ ವಿವಿಪಿಎಟಿ ವ್ಯವಸ್ಥೆ ಜಾರಿಮಾಡಲೇಬೇಕಾದ ಒತ್ತಡ ನಿರ್ಮಾಣವಾಗಿದೆ. ದೇಶದಲ್ಲಿ ಅಗತ್ಯವಿರುವ 16 ಲಕ್ಷ ಹೊಸ ವಿವಿಪಿಎಟಿ ಮತಯಂತ್ರಗಳ ಖರೀದಿಗೆ ಮೂರುಸಾವಿರ ಕೋಟಿ ಹಣವನ್ನು ಖರ್ಚುಮಾಡಬೇಕಾಗುತ್ತದೆ.

ರಾಜಕೀಯ ಭ್ರಷ್ಟಾಚಾರ ಮಿತಿಮೀರಿ ಬೇರುಮಟ್ಟಕ್ಕೆ ಇಳಿದಿರುವ ಇಂದಿನ ಬಂಡವಾಳಶಾಹಿ ಭಾರತದ ವಿಕ್ಷಿಪ್ತ  ಸಂದರ್ಭದಲ್ಲಿ ನ್ಯಾಯಯುತವಾದ ಮತದಾನವೆನ್ನುವುದು ಕನಸಿನ ಮಾತು. ಯಾವುದೇ ಆಧುನಿಕ ಸುಧಾರಿತ ಮತಯಂತ್ರಗಳನ್ನು ತಂದರೂ, ಅದೆಷ್ಟೇ ಸುರಕ್ಷತಾ ಕ್ರಮಗಳನ್ನು ಕೈಗೊಂಡರೂ ಪ್ರಾಮಾಣಿಕ ಜನಪರ ಕಾಳಜಿಯುಳ್ಳ ಜನಸೇವಕರು ಈ ಬಂಡವಾಳಶಾಯಿ ವ್ಯವಸ್ಥೆಯಲ್ಲಿ ಹೆಚ್ಚು ಮತ ಪಡೆದು ಪ್ರಜಾಪ್ರತಿನಿಧಿಗಲಾಗುವುದಂತೂ ಸಾಧ್ಯವಿಲ್ಲ. ಅಕಸ್ಮಾತ್ ಆದರೂ ಇಡೀ ವ್ಯವಸ್ಥೆಯ ವಿರುದ್ಧ ಹೋರಾಡುವುದಂತೂ ಅಸಾಧ್ಯದ ಮಾತು. ಎಲ್ಲಿ ಜಾತಿ ಧರ್ಮ ವರ್ಣಗಳ ಆಧಾರದ ಮೇಲೆ ಸಮಾಜವನ್ನು ಒಡೆದು ಮತಗಳನ್ನು ಇಬ್ಬಾಗಿಸಿ ತಂತ್ರ ಕುತಂತ್ರಗಳಿಂದ ಚುನಾವಣೆಯನ್ನು ಗೆಲ್ಲಲಾಗುತ್ತದೆಯೋ ಅಲ್ಲಿ ನಿಜವಾದ ಪ್ರಜಾಪ್ರಭುತ್ವ ಇರಲು ಸಾಧ್ಯವೇ ಇಲ್ಲ. ಎಲ್ಲಿವರೆಗೂ ಹಣಬಲ, ಬಾಹುಬಲ ಹಾಗೂ ಜಾತಿಬಲ ಉಳ್ಳವರು ಚುನಾವಣೆಯಲ್ಲಿ ಅಡ್ಡಹಾದಿಗಳ ಮೂಲಕ ಜಯವನ್ನು ಪಡೆಯುತ್ತಾರೋ ಅಲ್ಲಿವರೆಗೂ ಈ ದೇಶದಲ್ಲಿ ನ್ಯಾಯಸಮ್ಮತ ಚುನಾವಣೆಗಳು ಅಸಾಧ್ಯ. ಎಲ್ಲಾ ಪಕ್ಷಗಳ ಬ್ರಷ್ಟ ರಾಜಕಾರಣಿಗಳು, ಕರಪ್ಟ್ ಅಧಿಕಾರಿಶಾಹಿಗಳು, ಸ್ವಾರ್ಥಿ ಬಂಡವಾಳಗಾರರು ಹಾಗೂ ಲೂಟಿಕೋರ ಕಾರ್ಪೊರೇಟ ಕಂಪನಿಗಳು ಒಳ ಒಪ್ಪಂದ ಮಾಡಿಕೊಂಡು ದುಡಿಯುವ ವರ್ಗದ ಶ್ರಮಜೀವಿಗಳನ್ನು ಯಾಮಾರಿಸಿ ರಾಜ್ಯಾಧಿಕಾರವನ್ನು ಹಿಡಿದು ದೇಶದ ಸಂಪತ್ತು ಹಾಗೂ ಸಂಪನ್ಮೂಲಗಳನ್ನು ಹಂಚಿಕೊಂಡು ಮೆರೆಯುತ್ತಾರೋ ಅಲ್ಲಿವರೆಗೂ ಈ ದೇಶದ ಬಹುಸಂಖ್ಯಾತ ದುಡಿಯುವ ಜನರಿಗೆ ಸ್ವಾತಂತ್ರ್ಯ ಸಮಾನತೆಗಳು ಸಿಕ್ಕಲು ಸಾಧ್ಯವೇ ಇಲ್ಲಾ. ಕೇವಲ ಚುನಾವಣೆ ವ್ಯವಸ್ಥೆ ಮಾತ್ರವಲ್ಲ ಇಡೀ ದೇಶದ ಆಳುವ ವ್ಯವಸ್ಥೆಯೆ ಬದಲಾಗಬೇಕಾಗಿದೆ. ಬಂಡವಾಳಶಾಹಿ  ಹಿತಾಸಕ್ತಿಗೆ ಪೂರಕವಾಗಿರುವ ಪ್ರಜಾಪ್ರಭುತ್ವ ವ್ಯವಸ್ಥೆ ನಾಶವಾಗಿ ದುಡಿಯುವ ವರ್ಗದ ಹಿತಾಸಕ್ತಿಯನ್ನು ಕಾಪಾಡುವಂತಹ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬರಬೇಕಾಗಿದೆ.


  ಸಧ್ಯಕ್ಕೆ ಅಂತಹ ವ್ಯವಸ್ಥೆ ಬರುವ ಲಕ್ಷಣಗಳಂತೂ ಇಲ್ಲಾ. ಆದರೂ ಜನಾಂದೋಲನಗಳು ಕೆಟ್ಟ ವ್ಯವಸ್ಥೆಯನ್ನು ಬದಲಿಸುವ ಸಾಮರ್ಥ್ಯವನ್ನು ಹೊಂದಿದೆ. ದಮನವನ್ನು ವಿರೋಧಿಸಿ ಹೊಸ ವ್ಯವಸ್ಥೆಯೊಂದನ್ನು ತರಬಹುದಾದಂತಹ ಜನಾಂದೋಲನದ ನಿರೀಕ್ಷೆಯೊಂದೇ ಈಗಿನ ತುರ್ತು ಅಗತ್ಯವಿದೆ. ಯಾವುದೇ ವ್ಯವಸ್ಥೆಯ ವಿನಾಶದ ಬೀಜಗಳು ಆ ವ್ಯವಸ್ಥೆಯೊಳಗಿಂದಲೇ ಹುಟ್ಟಿಕೊಳ್ಳುತ್ತವೆ. ಅದೇ ರೀತಿ ಈಗಿನ ಬಂಡವಾಳಶಾಹಿ ಶೋಷಕ ವ್ಯವಸ್ಥೆಯ ಬೀಜಗಳೂ ಸಹ ಇದರಲ್ಲಿಯೇ ಇದೆ. ಶೋಷಣೆ ಹೆಚ್ಚಿದಷ್ಟೂ ಆ ಪ್ರತಿಭಟನೆಯ ಬೀಜಗಳು ಬೆಳೆಯುತ್ತವೆ. ಒಂದಿಲ್ಲೊಂದು ದಿನ ಅದೇ ಬೀಜಗಳು ಜನಾಂದೋಲನದ ರೂಪತಾಳಿ ಈಗಿರುವ ಬಂಡವಾಳಶಾಹಿ ವ್ಯವಸ್ಥೆಯನ್ನು ಆಪೋಷಣತೆಗೆದುಕೊಳ್ಳುವುದರಲ್ಲಿ ಸಂದೇಹವೇ ಇಲ್ಲಾ. ಅಲ್ಲಿವರೆಗೂ ಪ್ರತಿಭಟನೆಯ ಬೀಜಗಳನ್ನು ಕಾಪಿಟ್ಟುಕೊಳ್ಳಬೇಕಿದೆ, ಹೋರಾಟದ ಹಾದಿಯನ್ನು ಮುಂದುವರೆಸಬೇಕಾಗಿದೆ. ಜನರನ್ನು ಬಂಡವಾಳಶಾಹಿಯ ವಿರುದ್ದ ಸದಾ ಜಾಗೃತಗೊಳಿಸುತ್ತಲೇ ಇರಬೇಕಾಗಿದೆ. ಸಂವಿಧಾನದ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳು ಹಾಗೂ ಮೀಡಿಯಾಂಗಗಳು ಬಂಡವಾಳಶಾಹಿಗಳ ಪರವಾಗಿಯೇ ಇರುವುದರಿಂದ ಹಾಗೂ ನೈತಿಕತೆಯ ಮಿತಿಯನ್ನೂ ಮೀರಿ ಭ್ರಷ್ಟತೆಯನ್ನು ರೂಢಿಸಿಕೊಂಡಿರುವುದರಿಂದ ಅವುಗಳ ವಿರುದ್ಧ ಜನರನ್ನು ಎಚ್ಚರಿಸುವ ಕೆಲಸವನ್ನು ಪ್ರಜ್ಞಾವಂತರು ಒಗ್ಗಟ್ಟಾಗಿ ಮಾಡಬೇಕಿದೆ. ಇಲ್ಲವಾದರೆ ಶತಮಾನಗಳ ಕಾಲ ಬಂಡವಾಳಿಗರ ಶೋಷಣೆಯನ್ನು  ಅನುಭವಿಸಬೇಕಾಗುತ್ತದೆ. 



                   -ಶಶಿಕಾಂತ ಯಡಹಳ್ಳಿ

     
    





ಸೋಮವಾರ, ಮಾರ್ಚ್ 13, 2017

ತಹ ತಹ ... 77 ಶಾಯರಿ ಕವಿ ಇಟಗಿ ಈರಣ್ಣ ಮರಳಿ ಬಾರದ ಲೋಕಕ್ಕೆ ಹೋದರಣ್ಣಾ...




ಚೆಂದಕ್ಕಿಂತ ಚೆಂದ ನೀನೆ ಸುಂದರ ನಿನ್ನ ನೋಡ ಬಂದ ಬಾನ ಚಂದಿರ.. ಎನ್ನುವ ಗಜಲ್ ಮಾದರಿಯ ಸ್ಪರ್ಶ ಸಿನೆಮಾ ಹಾಡನ್ನು ಕೇಳಿ ಖುಷಿಪಟ್ಟವರು ಅಸಂಖ್ಯಾತರು. ಈ ಹಾಡು ಬರೆದ ಕವಿ ಪ್ರೊ.ಇಟಗಿ ಈರಣ್ಣ ಮಾರ್ಚ 12ರಂದು ಚೆಂದದ ಲೋಕ ಬಿಟ್ಟು ಮರಳಿ ಬಾರದ ಲೋಕಕ್ಕೆ ಹೊರಟುಬಿಟ್ಟರು. ಉರ್ದು ಹಾಗೂ ಹಿಂದಿಯಲ್ಲಿ ಪ್ರಸಿದ್ದಿಯಾದ ಶಾಯರಿ (ಗಜ್ಹಲ್) ಪ್ರಕಾರವನ್ನು ಕನ್ನಡ ಭಾಷೆಯಲ್ಲಿ ರೂಢಿಸಿಕೊಂಡು ಸಾವಿರಕ್ಕೂ ಹೆಚ್ಚು ಕನ್ನಡ ಶಾಯರಿಗಳನ್ನು ಬರೆದ ಈರಣ್ಣ ಕನ್ನಡ ಕಾವ್ಯ ಲೋಕಕ್ಕೆ ಕೊಟ್ಟ ಕೊಡುಗೆ ಬಲು ವಿಶಿಷ್ಟವಾದದ್ದು. ಅವರ ಕನ್ನಡದ ಶಾಯರಿಗಳು ಕವಿತೆ ಸಂಗ್ರಹದ ಪುಸ್ತಕ ಹದಿನೈದಕ್ಕೂ ಹೆಚ್ಚು ಮರುಮುದ್ರಣಗಳನ್ನು ಕಂಡಿದೆ. ಉರ್ದು ಮತ್ತು ಪರ್ಷಿಯನ್ ಭಾಷೆಯನ್ನೂ ಬಲ್ಲವರಾಗಿದ್ದ ಪ್ರೊ.ಈರಣ್ಣ ಆ ಭಾಷೆಗಳ ಕೆಲವಾರು ಗಜ್ಹಲ್‌ಗಳನ್ನು ಕನ್ನಡಕ್ಕೆ ಅನುವಾದಿಸಿ ಕನ್ನಡ ಕಾವ್ಯಾಸಕ್ತರಿಗೆ ಶಾಯರಿ ಪ್ರಕಾರವನ್ನು ಪರಿಚಯಿಸಿದ್ದರು.

ಒಂದೇ ಒಂದು ಸಲ ಅವರನ್ನು ಮಾತಾಡಿಸಿದರೆ ಸಾಕಿತ್ತು.. ಅವರು ಅಪರಿಚಿತರಾಗಿದ್ದರೂ ಸಹ ಜನುಮ ಜನುಮದ ಸಂಬಂಧಿಕರೇನೋ ಎನ್ನುವಂತೆ.. ಹಲವಾರು ವರ್ಷಗಳ ಆತ್ಮೀಯ ಪರಿಚಯವಿದೆಯೇನೋ ಎನ್ನುವಂತೆ ಆತ್ಮೀಯತೆಯಿಂದ ಮಾತಾಡಿಸುತ್ತಿದ್ದ ಅಂತಃಕರಣದ ಕವಿ ಈರಣ್ಣನವರ ನೆನಪು ಅವರ ಆತ್ಮೀಯ ಬಳಗವನ್ನು ಬಹುಕಾಲ ಕಾಡುವುದಂತೂ ಸತ್ಯ. ಚೆಂದಕ್ಕಿಂತಾ ಚೆಂದದ ವ್ಯಕ್ತಿತ್ವ ಹೊಂದಿದ್ದ ಈರಣ್ಣನವರ ಮಾನವೀಯ ಪ್ರೀತಿ ಹಾಗೂ ಅದರ ರೀತಿಯನ್ನು ಅನುಭವಿಸಿದವರು ಎಂದೂ ಮರೆಯಲಾರರು. ಅವರ ಬಹುತೇಕ ಕನ್ನಡ ಶಾಯರಿಗಳಲ್ಲಿ ಸಹ ಗಂಡು ಹೆಣ್ಣಿನ ನಡುವಿನ ಆತ್ಮೀಯ ಕ್ಷಣಗಳೇ ಅಕ್ಷರಗಳಾಗಿವೆ. ಸಂಬಂಧಗಳ ಚೌಕಟ್ಟಿನೊಳಗೇ ತಮ್ಮ ಶಾಯರಿ ಕೃಷಿಯನ್ನು ನಿರಂತರವಾಗಿ ಮಾಡಿದವರು ಈರಣ್ಣ.


ಅವರ ಮಾನವೀಯ ಅಂತಃಕರಣಕ್ಕೆ ಸಾಕ್ಷಿಯಾಗಿದ್ದು ಅವರು ಹೆತ್ತವ್ವನ ಮೇಲಿಟ್ಟಿದ್ದ ಅಪಾರ ಪ್ರೀತಿ. ಅತ್ಯಂತ ಕಡುಬಡತನದಲ್ಲಿ ಅವರಿವರ ಮನೆ ಕೆಲಸ ಮಾಡಿ ಮಗನನ್ನು ಕಷ್ಟಪಟ್ಟು ಓದಿಸಿ ಬೆಳೆಸಿದ ಅವ್ವ ಕೊಟ್ರಮ್ಮನ ಮೇಲೆ ಈರಣ್ಣನವರಿಗೆ ಅಪಾರವಾದ ಗೌರವಾಭಿಮಾನ. ಕೊನೆಯವರೆಗೂ ತಾವೇ ಹಾಸಿಗೆ ಹಿಡಿದ ತಾಯಿಯ ಸೇವೆಯನ್ನು ಈರಣ್ಣನವರು ಮಾಡುತ್ತಿದ್ದರು. 87 ವರ್ಷದ ಕೊಟ್ರಮ್ಮನವರು ಮಾರ್ಚ 8 ರಂದು ವಯೋಸಹಜ ಅನಾರೋಗ್ಯದಿಂದ ತೀರಿಕೊಂಡರು. ಇದರಿಂದ ತೀವ್ರ ತಳಮಳಗೊಂಡ ಈರಣ್ಣನವರನ್ನು ತಾಯಿಯ ಅಗಲಿಕೆ ಕಂಗೆಡಿಸಿತು. ಉಕ್ಕಿ ಬರುತ್ತಿದ್ದ ದುಃSವನ್ನು ಹತ್ತಿಕ್ಕಿಕೊಂಡು ಅವ್ವನ ಅಂತ್ಯಕ್ರಿಯೆ ಮುಗಿಸಿದ ನಂತರ 5ನೇ ದಿನ ಶಿವಗಣಾರಾಧನೆ ಮುಗಿಸಿ ತಮ್ಮ ಕರ್ತವ್ಯವನ್ನು ಮಾಡಿದ ಕೂಡಲೇ ಎದೆ ಹಿಡಿದುಕೊಂಡು ಕುಸಿದು ಕುಳಿತ ಈರಣ್ಣ ಮತ್ತೆ ಮೇಲಕ್ಕೇಳಲೇ ಇಲ್ಲಾ. ಹೃದಯವಂತನ ಹೃದಯ ಸ್ಥಬ್ದವಾಗಿತ್ತು. ಅವ್ವನ ಜಾಡನ್ನು ಹಿಡಿದು ಮಗ ಮರಳಿ ಬಾರದ ಊರಿಗೆ ಪಯಣಿಸಿದ್ದರು. ಉಸಿರು ಉಸಿರಿಗೊಮ್ಮೆ ನಿನ್ನ ಹೆಸರು ತಗೋತೇನಿ. ಉಸಿರು ಉಸಿರಿಗೊಮ್ಮೆ ನಿನ್ನ ಹೆಸರು ಬಿಡತೇನಿ. ಈ ಉಸಿರಿರೋ ತನಕ ಅದರಾಗ ನಿನ್ನ ಹೆಸರಿರಲಿ. ನಿನ್ನ ಹೆಸರಿನ್ಯಾಗ ಒಂದಿನಾ ನನ್ನೀ ಉಸರು ಹೋಗಲಿ.. ಎಂದು ಶಾಯರಿ ಬರೆದ ಈರಣ್ಣನವರ ಮನದಲ್ಲಿ ತಾಯಿಯ ಹೆಸರೇ ಇತ್ತಾ? ಉಸಿರು ಕೊಟ್ಟ ಅವ್ವ ಕೊನೆಯುಸಿರೆಳೆದಾಗ ಮಗನ ಉಸಿರೂ ಎದುಸಿರು ಬಿಡುತ್ತಾ ಉಸಿರು ನಿಂತೇ ಹೋಯಿತಾ...?

ಇಟಗಿ ಈರಣ್ಣನವರು ಹುಟ್ಟಿಬೆಳೆದಿದ್ದು ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿಯಲ್ಲಿ. ಬಿಸಿಲೂರಿನಲ್ಲೂ ತಂಗಾಳಿಯಂತಹ ಶಾಯರಿಗಳನ್ನು ಬರೆದ ಈರಣ್ಣನವರು ಹರಪನಹಳ್ಳಿ, ಕೊಟ್ಟೂರುಗಳಲ್ಲಿ ವಿದ್ಯಾಬ್ಯಾಸ ಮುಗಿಸಿದ ನಂತರ ಬಳ್ಳಾರಿಯ ವೀರಶ್ಯವ ವಿದ್ಯಾವರ್ಧಕ ಕಾಲೇಜಿನಲ್ಲಿ ಮೇಷ್ಟ್ರಗಿರಿ ಆರಂಭಿಸಿದ್ದರು. ತದನಂತರವೂ ಸಹ ಹೂವಿನಹಡಗಲಿಯ ಜಿಬಿಆರ್ ಕಾಲೇಜ್ ಮತ್ತು ವಿಜಯನಗರ ಕಾಲೇಜುಗಳಲ್ಲಿ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿದರು. ಏಳು ವರ್ಷಗಳ ಹಿಂದೆ ನಿವೃತ್ತರಾದ ನಂತರ ಶಿವಮೊಗ್ಗಕ್ಕೆ ಬಂದು ತಾಯಿ, ಹೆಂಡತಿ ಹಾಗೂ ಮಕ್ಕಳ ಜೊತೆಗೆ ನೆಮ್ಮದಿಯ ವಿಶ್ರಾಂತ ಜೀವನ ನಡೆಸುತ್ತಿದ್ದರು. ಕೊನೆಗೂ ಬಯಲುನಾಡು ಬಳ್ಳಾರಿಯ ಈ ಪ್ರತಿಭೆ ಮಲೆನಾಡು ಶಿವಮೊಗ್ಗದ ಪಂಚಭೂತಗಳಲ್ಲಿ ಐಕ್ಯವಾಯಿತು.

ಪ್ರೊ.ಇಟಗಿ ಈರಣ್ಣನವರು ರಂಗಭೂಮಿಗೆ ಕೊಟ್ಟ ಕೊಡುಗೆಗಳನ್ನು ಮರೆಯುವಂತಿಲ್ಲ. ನಾನು ನೀನು ರಾಜಿ ಏನ್ ಮಾಡ್ತಾನ್ ಖಾಜಿ, ರಾವಿ ನದಿಯ ದಂಡೆ, ತಾಜ್ ಮಹಲ್ ಟೆಂಡರ್, ಯಹೂದಿ ಹುಡುಗಿ.. ಹೀಗೆ ಬೇರೆ ಭಾಷೆಯ ಕೆಲವು ಪ್ರಸಿದ್ದ ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡಿ ನಾಟಕಗಳ ಕೊರತೆಯನ್ನು ಅನುಭವಿಸುತ್ತಿದ್ದ ಕನ್ನಡ ರಂಗಭೂಮಿಗೆ ಅಗತ್ಯ ಕೊಡುಗೆ ನೀಡಿದ್ದರು. ಇಡೀ ಆಳುವ ವ್ಯವಸ್ಥೆಯನ್ನು ಅಣಕಿಸುವಂತಹ ತಾಜ್‌ಮಹಲ್ ಟೆಂಡರ್ ನಾಟಕವಂತೂ ಮರೆಯಲು ಸಾಧ್ಯವಿಲ್ಲ. ಕೋಮು ಸಾಮರಸ್ಯವನ್ನು ಸಾರುವ ಯಹೂದಿ ಹುಡುಗಿ.. ಎನ್ನುವ ಅಪರೂಪದ ನಾಟಕವನ್ನು ರೂಪಾಂತರ ರಂಗತಂಡಕ್ಕೆ ವಿಶೇಷ ಆಸಕ್ತಿಯಿಂದಾ ಅನುವಾದಿಸಿಕೊಟ್ಟಿದ್ದರು ಹಾಗೂ ಕೆಎಸ್‌ಡಿಎಲ್ ಚಂದ್ರುರವರ ನಿರ್ದೇಶನದಲ್ಲಿ ಈ ನಾಟಕ ಯಶಸ್ವಿಯಾಗಿ ಹಲವಾರು ಪ್ರದರ್ಶನಗಳನ್ನು ಕಂಡಿತ್ತು. ಈರಣ್ಣನವರು ಶಾಯರಿಗಳ ಸಂಕಲನವನ್ನು ರೂಪಾಂತರ ತಂಡವೇ ಪ್ರಕಟಿಸಿತ್ತು.  ಈರಣ್ಣನವರು ಕಬೀರ್‌ದಾಸರ ದೋಹೆಗಳು ಹಾಗೂ ಹರಿವಂಶರಾಯ್ ಬಚ್ಚನ್ ರವರ ಮಧುಶಾಲಾ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಜೊತೆಗೆ ಈಶನ ವಚನಗಳು ಹಾಗೂ ಬಸವಣ್ಣನವರ ವಚನಗಳ ಸಂಗ್ರಹ ಕೃತಿಗಳೂ ಮಹತ್ತರವಾದದ್ದು. ಇವರ ನಾಟಕಗಳು ಹಾಗೂ ಕವಿತೆಗಳು ಕೆಲವು ವಿಶ್ವವಿದ್ಯಾಲಯಗಳಿಗೆ ಪಠ್ಯವಾಗಿ ಬೋಧನೆಗೊಳ್ಳುತ್ತಿವೆ. 2010ರಲ್ಲಿ ನಡೆದ 14ನೇ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪ್ರೊ.ಈರಣ್ಣನವರು ಗೌರವಿಸಲ್ಪಟ್ಟಿದ್ದರು.

 ಉಸಿರು ನಿಲ್ಲುವ ಮುನ್ನ ಹೆಸರು ನಿಲ್ಲುವ ಕೆಲಸ ಮಾಡಬೇಕು.. ಎಂದು ಶಾಯರಿ ಬರೆದ ಈ ಶಾಯರಿ ಕವಿ ನಿಜಕ್ಕೂ ಹೆಸರು ನಿಲ್ಲುವಂತಹ ಕೊಡುಗೆಗಳನ್ನು ತಮ್ಮ ಗಜ್ಹಲ್‌ಗಳ ಮೂಲಕ ಹಾಗೂ ನಾಟಕಗಳ ಮೂಲಕ ಕೊಟ್ಟಿದ್ದು ಕನ್ನಡ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಲೋಕ ಬಹುಕಾಲ ನೆನಪಿಸಿಕೊಳ್ಳದೇ ಇರದು. ಪ್ರೊ.ಇಟಗಿ ಈರಣ್ಣ ತಮ್ಮ ಕವಿತೆಗಳು, ಶಾಯರಿಗಳು ಹಾಗೂ  ನಾಟಕಗಳ ಮೂಲಕ ಸದಾಕಾಲ ನಮ್ಮೊಂದಿಗೆ ಜೀವಂತವಾಗಿಯೇ ಇರುತ್ತಾರೆನ್ನುವ ಸಂಗತಿಯೇ ಅವರ ಅಗಲಿಕೆಯ ನೋವನ್ನು ಮರೆಸುವಂತಹುದು. ಸಾರ್ಥಕ ಬದುಕನ್ನು ಬದುಕಿದ ಈರಣ್ಣನವರಿಗೆ ರಂಗನಮನಗಳು.

  ಕನ್ನಡದೊಳಗ ಶಾಯಿರಿನಂತೂ ಯಾರೂ ಬರೆದಿಲ್ಲ ಇವತ್ತಿನ ತನಕ
  ನನಗಂತೂ ಬರೀಬೇಕನಸತೈತಿ ಸಾಯೋತನಕ.. 

ಎಂದು ಶಾಯರಿ ಬಗ್ಗೆಯೇ ಈರಣ್ಣನವರು ಕನ್ನಡದಲ್ಲಿ ಶಾಯರಿ ಬರೆದಿದ್ದರು. ಹಾಗೂ ತಾವು ಬರೆದುಕೊಂಡಂತೆಯೇ ಕೊನೆವರೆಗೂ ಶಾಯರಿಗಳನ್ನು ಬರೆಯುತ್ತಲೇ ಬದುಕಿದ್ದರು.  ಈರಣ್ಣನವರು ಕೊನೆಯಾಸೆ ಎನ್ನುವ ಶಾಯರಿಯಲ್ಲಿ ಸುಡುಗಾಡ ತನಕ ಬಂದು ಕಳಿಸಿ ಬಿಡು ನೀ ನನ್ನ. ಅತ್ತಾಗಿಂದ ನಾ ಒಬ್ನ ಹೊಕ್ಕೇನಿ. ಮಣ್ಣಾಗ ಮುಚ್ಚಿ ನನ್ನ ಮಣ್ಣು ಮಾಡಿ ಹೋಗು ನೀನು. ನಿನ್ನ ನೆನಪು ನನ್ನ ಎದಿಯಾಗಿಟಗೊಂಡು ನಾ ಸುಮ್ಮ ಹೊಕ್ಕೇನಿ... ಎಂದು ಬರೆದಿದ್ದಾರೆ. ಈಗ ಅವರು ಮಣ್ಣಲ್ಲಿ ಮಣ್ಣಾಗಿದ್ದಾರೆ. ಅದೆಷ್ಟು ಜನ ಸುಡುಗಾಡ ತನಕ ಬಂದು ಕಳಿಸಿ ಹೋದರು.. ಆದರೆ.. ಈರಣ್ಣನವರು ಎಲ್ಲರ ನೆನಪು ಎದೆಯಾಗಿಟಗೊಂಡು ಹೋದರೋ ಇಲ್ಲವೋ ಗೊತ್ತಿಲ್ಲಾ.. ಆದರೆ ಈರಣ್ಣನವರ ನೆನಪನ್ನು ಮಾತ್ರ ಕಳಿಸಲು ಹೋದವರು ತಮ್ಮ ಎದಿಯಾಗಿಟಗೊಂಡು ಮರಳಿ ಬಂದ್ರು. ಇನ್ನೂ ಸಾಧ್ಯ ಇದ್ರ ಕೊನೆಗಳಿಗೆಯಲ್ಲಿ ಒಂದು ಶಾಯರಿ ಮೂಲಕ ಹೇಳಿ ಬಿಡ್ತಿದ್ದರೋ ಏನೋ.. ಆದರೆ ಸತ್ತ ನಂತರ ಹೇಳಲಾಗದ ಅನಿವಾರ್ಯತೆಯನ್ನು ಮೊದಲೇ ಊಹಿಸಿ ಬರೆದ ಶಾಯರಿ ಹೀಗಿದೆ.. ಸಾಯೋತನಕ ಜೀವನಾಂದ್ರ ಏನು ಅಂತ ಯಾರಿಗೂ ಹೇಳಾಕ ಬರಾಂಗಿಲ್ಲಾ...! ಸತ್ತ ಮ್ಯಾಲೆ ಹೇಳಬೇಕಂದ್ರ ಹೇಳಾಕ ಬಾಯಿ ಇರಾಂಗಿಲ್ಲಾ..!!.  ಸಾವು ಹಾಗೂ ಬದುಕಿನ ಬಗ್ಗೆ ಅವರು ಬರೆದ ಶಾಯರಿ ತುಂಬಾನೇ ಸೊಗಸಾಗಿದೆ..ಸಾವನ್ನೂದು ನಮಗ ಗೊತ್ತಿದ್ದೂ ಬೀಳೋ ಏಟು.. ನಾ ಅದ್ಕ ಅಷ್ಟು ಹೆದರಾಂಗಿಲ್ಲಾ!  ಜೀವನ ಅನ್ನೋದು ನಮಗ ಗೊತ್ತಿಲ್ದ ಬಿದ್ದ ಏಟು ನಾ ಇದ್ಕ ಬಾಳಾ ಹೆದರತೇನಿ... ಹೀಗೆ ಸಾವಿಗೂ ಹೆದರದ ಈರಣ್ಣ ಬದುಕಿನಲ್ಲಿ ಹೆದರುತ್ತಾ ನೊಂದು ಬೆಂದು ಅನುಭವಗಳಿಂದಾ ಗಟ್ಟಿಗೊಳ್ಳುತ್ತಾ ಬೆಳೆದಿದ್ದು ಸೋಜಿಗದ ಸಂಗತಿ. ಸಾವಿನ ಬಗ್ಗೆ ಈರಣ್ಣ ಬೇಕಾದಷ್ಟು ಶಾಯರಿಗಳನ್ನು ಬರೆದಿದ್ದಾರೆ. ಅದರಲ್ಲಿ ಒಂದು ಹೀಗಿದೆ.. ತಮ್ಮಾ ನಿನ್ನ ಜೀವನಾ ಅನ್ನೋದು ನಿನ್ನ ಸಾವಿನ ಆಸ್ತಿ ಐತಿ. ತನ್ನ ಆಸ್ತೀನ ಅದು ತಾನು ಯಾವಾಗ ಬೇಕಾದರೂ ತಗೊಂತೈತಿ..!!. ಈರಣ್ಣ ಸಾವಿಗಿಂತಲೂ ಜೀವನಕ್ಕೆ ಹೆಚ್ಚು ದಿಗಿಲುಗೊಂಡಿದ್ದು ಅವರ ಶಾಯರಿಗಳಲ್ಲಿ ಗೊತ್ತಾಗುತ್ತದೆ. ಅದು ಹೇಗೆಂದರೆ.. ಸಾವನ್ನೋದು ವೈರಿಯಲ್ಲಾ ನನಗ ಅದು ಎದುರಿಗೆ ಬಂದು ಗುಂಡು ಹೊಡೀತೈತಿ..! ಜೀವನ ಅನ್ನೋದು ಗೆಳೆಯಾ ಅಲ್ಲ ನನಗ ಅದು ಹಿಂದಿನಿಂದ ಬಂದು ಚೂರಿ ಹಾಕತೈತಿ...

ಬದುಕು ಸಾವು ಪ್ರೀತಿ ವಿರಹ ಹೀಗೆ ಹಲವಾರು ವಿಷಯಗಳ ಬಗ್ಗೆ ಈರಣ್ಣ ಶಾಯರಿ ಬರೆದಿದ್ದಾರೆ. ಪ್ರೊ. ಇಟಗಿ  ಈರಣ್ಣನವರ ಕೆಲವು ಕನ್ನಡ ಶಾಯರಿಗಳು ಹೀಗಿವೆ..

ಈ ಕತ್ತಲ ರಾತ್ರಿ
ನಿನ್ನ ದಾರಿ ಕಾದೂ ಕಾದೂ
ನನ್ನೆದಿ ಒಂದ ಅಳತಿ
ಸುಡಾಕ್ ಹತ್ತೇತಿ !!
ಕತ್ತಲಾಗೇತಂದ
ಹೆದರಿ ಕುಂದರಬ್ಯಾಡ
ನನ್ನ ಸುಡೂ ಎದಿ
ನಿನ್ನ ದರ‍್ಯಾಗ ಬೆಳಕು ಚೆಲ್ಲೇತಿ. .!

*        *        *        *        *

ನನಗನಸತೈತಿ
ಈ ಹರಿಯೂ ಬೆಳದಿಂಗಳಾ
ಹೆಪ್ಪಾಗಿ ನಿನ್ ಮೈ ಆಗಿರಬೇಕು
ಇಲ್ಲಾಂದ್ರ ನನ್ನ ಬಿಸಿ
ನಿನ್ನ ಮೈಗೆ ತಾಗಿ
ಅದು ಕರಗಿ ಈ
ಬೆಳದಿಂಗಳಾಗಿ ಹರಡಿರಬೇಕು..

*        *        *        *        *

ಕಡಿಮಿ ಸಾಮಾನಿದ್ರ ರೇಲ್ವೇ ಪ್ರಯಾಣಾ
ಭಾಳ ಚೆಂದ ಇರತೈತಿ..!
ಕಡಿಮೆ ಆಸೆ ಇದ್ರ ಬಾಳ ಪ್ರಯಾಣಾನೂ
ಭಾಳ ಚೆಂದ ಇರತೈತಿ..!!

*        *        *        *        *

ಹೊಳಿ ದಾಟಿ ಹೋಗಬೇಕನ್ನಂಗಿದ್ರ
ಡೋಣೀ ಒಳಗ ತೂತು ಇರಬಾರದು..!
ಜೀವನಾನೂ ಜಯಿಸಬೇಕನ್ನಂಗಿದ್ರ
ಸಂಸಾರದಾಗ ಸಂಶೆ ಇರಬಾರದು..!!

                  - ಶಶಿಕಾಂತ ಯಡಹಳ್ಳಿ









  


ತಹ ತಹ.. 76 ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಸಂಘಿಗಳ ದಮನ :



ಯೋಗೇಶ್ ಮಾಸ್ಟರ್ ಮುಖಕ್ಕೆ ಮಸಿ; ಪ್ರಜ್ಞಾವಂತರೆಲ್ಲಾ ತೀವ್ರವಾಗಿ ಪ್ರತಿಭಟಿಸಿ:

ಮತ್ತೊಮ್ಮೆ ಸಂಘಪರಿವಾರದ ಅಂಗಗಳು ತಮ್ಮ ವಿಕೃತತೆಯನ್ನು ಮೆರೆದಿವೆ. ಪ್ರಗತಿಪರ ಚಿಂತಕ ಬರಹಗಾರ ಯೊಗೇಶ್ ಮಾಸ್ಟರ್ ಮುಖ ಮೈಗೆಲ್ಲಾ ಮಸಿ ಬಳಿದು ಹಲ್ಲೆ ಮಾಡುವ ಮೂಲಕ ತಮ್ಮ ಕೊಳಕು ಮನಸ್ಸನ್ನು ಜಗಜ್ಜಾಹೀರು ಮಾಡಿವೆ. ಮಾರ್ಚ 12ರಂದು ದಾವಣಗೆರೆಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಕನ್ನಡ ಭವನದಲ್ಲಿ ಆಯೋಜನೆಗೊಂಡಿದ್ದ ಲಂಕೇಶ್-82 ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಟಿ ಕುಡಿಯಲೆಂದು ಪಕ್ಕದ ಹೊಟೇಲಿಗೆ ಹೋಗಿದ್ದಾಗ ಕಾದು ಕುಳಿತಿದ್ದ ನಕಲಿ ದೇಶಭಕ್ತರು ಸಾಹಿತಿ ಯೊಗೇಶ್‌ರವರ ಮೇಲೆ ರಾಸಾಯನಿಕ ಮಿಶ್ರಿತ ಕಪ್ಪು ಬಣ್ಣದ ಅಭಿಷೇಕ ಮಾಡಿ ಹಲ್ಲೆ ನಡೆಸಿದ್ದಾರೆ. ಸಂಘಿಗಳು ಮತ್ತೆ ಮತ್ತೆ ಪ್ರಗತಿಪರರ ಮೇಲೆ ಹಲ್ಲೆ ಮಾಡುತ್ತಾ ವಿರೋಧಿ ದ್ವನಿಯನ್ನು ದಮನ ಮಾಡುವ ಗುಂಡಾಗಿರಿಯನ್ನು ಕಾಲಕಾಲಕ್ಕೆ ನಡೆಸಿಕೊಂಡು ಬರುತ್ತಲೇ ತಮ್ಮ ವಿಕೃತ ಮನಸ್ಥಿತಿಯನ್ನು ತೋರಿಸುತ್ತಲೇ ಬಂದಿದ್ದಾರೆ. ಯೋಗೇಶ್ ಮಾಸ್ಟರ್ ಮೇಲೆ ಮಸಿ ಬಳಿಯುವ ಮೂಲಕ ಈ ಕೋಮುಪಡೆ ತಮ್ಮ ಮುಖಕ್ಕೆ ತಾವೇ ಮಸಿಬಳಿದುಕೊಂಡು ತಮ್ಮ ಕರಾಳತೆಯನ್ನು ಮೆರೆದಿದ್ದಾರೆ. 
ಈ ಹಿಂದೆಯೂ ಸಹ ಮಂಗಳೂರು ವಿವಿಯ ಪ್ರಾದ್ಯಾಪಕರಾದ ಪಟ್ಟಾಭಿರಾಮ್ ಸೋಮಯಾಜಿ, ಚಿಂತಕ ಸುರೇಶ್ ಭಟ್ ಬಾಕ್ರಬೈಲ್ ಹಾಗೂ ಸಾಹಿತಿ ಭಗವಾನ್ ರವರ ಮೇಲೆಯೂ ಸಹ ಈ ಮಸಿ ಬಳಿಯುವ ಮೂಲಕ ಸಂಘಿಗಳು ತಮ್ಮ ವಿಕಾರತೆಯನ್ನು ಸಾಬೀತುಪಡಿಸಿದ್ದರು. ಯೊಗೇಶ್ ಮಾಸ್ಟರ್ ಈಗ ಹೊಸ ಸೇರ್ಪಡೆ ಅಷ್ಟೆ. ಇದು ಇಲ್ಲಿಗೆ ನಿಲ್ಲುವುದೂ ಇಲ್ಲಾ. ಪ್ರಭುತ್ವಾಧಿಕಾರವನ್ನು ಕೇಂದ್ರದಲ್ಲಿ ಸ್ಥಾಪಿಸಿದಾಗಿನಿಂದಾ ಈ  ಪರಿವಾರಿಗಳು ತಮ್ಮ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಮಾಡುವ ದುಷ್ಕೃತ್ಯವನ್ನು ಮುಂದುವರೆಸಿದ್ದಾರೆ ಹಾಗೂ ಮುಂದುವರೆಸುತ್ತಲೇ ಇರುತ್ತಾರೆ. ಅಷ್ಟೇ ಯಾಕೆ ಸನಾತನ ವಿಕೃತಿಗಳನ್ನು ವಿರೋಧಿಸಿದವರನ್ನು ಕೊಲೆ ಮಾಡುವ ಮೂಲಕ ಸತ್ಯವನ್ನು ಪ್ರತಿಪಾದಿಸುವವರಲ್ಲಿ ಆತಂಕ ಹಾಗೂ ಭಯವನ್ನು ಹುಟ್ಟಿಸಿ ಪ್ರತಿರೋಧದ ನೆಲೆಗಳನ್ನು ಹತ್ತಿಕ್ಕುವ ಹುನ್ನಾರನ್ನು ಸಂಘಿಗಳು ಸಂಘಟನಾತ್ಮಕವಾಗಿಯೇ ಮಾಡುತ್ತಿದ್ದಾರೆ. ಡಾ.ಎಂ.ಎಂ.ಕಲಬುರ್ಗಿಯಂತಹ ವಿಚಾರವಾದಿಗಳನ್ನು ಕೊಲೆ ಮಾಡಿದ್ದೇ ಇದಕ್ಕೆ ಉದಾಹರಣೆಯಾಗಿದೆ.

ಇದು ಸನಾತನವಾದಿಗಳ ಭಯೋತ್ಪಾದನೆಯ ಮಾದರಿಯಾಗಿದೆ. ಪ್ಯಾಸಿಸ್ಟ್ ಪ್ರಭುತ್ವದ ಸ್ಥಾಪನೆಯ ಲಕ್ಷಣವಾಗಿದೆ. ಸೈಂದಾತಿಕ ಭಿನ್ನಾಭಿಪ್ರಾಯಗಳನ್ನು ಸೈಂದಾತಿಕ ಸಂವಾದಗಳ ಮೂಲಕ ಎದುರಿಸುವ ತಾಕತ್ತಿಲ್ಲದ ಈ ಹೇಡಿಗಳು ಹಲ್ಲೆ ಕೊಲೆಗಳನ್ನು ಮಾಡುವ ಮೂಲಕ ಕೋಮುವಾದವನ್ನು ವಿರೋಧಿಸುವ ಹಾಗೂ ಕೋಮುವ್ಯಾದಿಗಳನ್ನು ಖಂಡಿಸುವ ಪ್ರಜ್ಞವಂತರನ್ನು ಹೆದರಿಸುವ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದಾರೆ. ನಾವು ದ್ವೇಷಿಸುವ ಜನರಿಗೂ ವಾಕ್ ಸ್ವಾತಂತ್ರ್ ಇರಬೇಕೆಂದು ನಂಬಿಕೆ ನಮಗೆ ಇರದಿದ್ದರೆ, ಆಗ ನಮಗೆ ನಿಜವಾಗಿಯೂ ವಾಕ್ ಸ್ವಾತಂತ್ರ್ದಲ್ಲಿ ನಂಬಿಕೆಯಿಲ್ಲವೆಂದೇ ಅರ್ಥ ಎಂದು ನೋಮ್ ಚಾಮ್‌ಸ್ಕಿ ಹೇಳಿದಿಂತೆ ಈ ಕೋಮು ಭಯೋತ್ಪಾದಕರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಯಾವುದೇ ನಂಬಿಕೆ ಇಲ್ಲವೆಂಬುದು ಬೇಕಾದಷ್ಟು ಸಲ ಸಾಬೀತಾಗಿದೆ. ಯೊಗೇಶ್ ಮಾಸ್ಟರ್ ಹೇಳಿದ್ದರಲ್ಲಿ  ಇಲ್ಲವೇ ಬರೆದಿದ್ದರಲ್ಲಿ ಅಸಹನೆ ಇದ್ದರೆ ಅದನ್ನು ವಾದ ಸಂವಾದ ಚರ್ಚೆಗಳ ಮೂಲಕ ಪ್ರತಿಪಾದಿಸುವುದನ್ನು ಬಿಟ್ಟು ಮಸಿ ಬಳಿದು ಹಲ್ಲೆ ಮಾಡಲು ಮುಂದಾದವರಿಗೆ ಪ್ರಜಾಪ್ರಭುತ್ವದ ಮೌಲ್ಯಗಳೆ ಗೊತ್ತಿಲ್ಲಾ.. ಮಾನವೀಯತೆಯಂತೂ ಮೊದಲೇ ಇಲ್ಲಾ.

 ಇಷ್ಟಕ್ಕೂ ಈ ಸಲ ಯೊಗೇಶ್ ಮಾಸ್ಟರರನ್ನೇ ಯಾಕೆ ಈ ದೇಶಭಕ್ತರು ಆಯ್ಕೆ ಮಾಡಿಕೊಂಡರು? ಡುಂಡಿ ಕೊಟ್ಟ ಶಾಕ್ ಗುಂಗಿನಿಂದಾ ಇನ್ನೂ ಹೊರಬರದೇ ಪರಿತಪಿಸುತ್ತಿರುವ ಈ ಅತೃಪ್ತಾತ್ಮಗಳು ತಲ್ಲಣಗೊಂಡಿದ್ದವು. ಯೋಗೇಶ್ ಗಣಪತಿ ಹಾಗೂ ಪಾರ್ವತಿಯ ಕುರಿತು ಡುಂಡಿ  ಎನ್ನುವ ಸಂಶೋಧನಾತ್ಮಕ ಕಾದಂಬರಿಯೊಂದನ್ನು ನಾಲ್ಕು ವರ್ಷಗಳ ಹಿಂದೆ ಬರೆದಿದ್ದರು. ಅದು ಪ್ರಕಟಗೊಂಡಕೂಡಲೇ ಸನಾತನಿಗಳು ಬಾಲ ಸುಟ್ಟ ಕೋತಿಯಂತೆ ತಲ್ಲಣಗೊಂಡು ರುದ್ರನರ್ತನದಲ್ಲಿ ತೊಡಗಿದವು. ಧಾರ್ಮಿಕ ಬಾವನೆಗಳ ಮೇಲೆ ಬ್ರಹ್ಮಾಸ್ತ್ರ ಬಿಟ್ಟಂತಾಗಿದೆ ಎಂದು ಆರೋಪಿಸಿ ಕೇಸ್ ದಾಖಲಿಸಿದರು. ಇನ್ನು ಕೆಲವರು ಕೋರ್ಟ ಮೇಲೆ ಒತ್ತಡ ತಂದು ಡುಂಡಿ ಕಾದಂಬರಿಯನ್ನೇ ಬ್ಯಾನ್ ಮಾಡಿಸಿದರು. ಅಷ್ಟಕ್ಕೆ ಬಿಡದೇ ಯೋಗೇಶ್ ಮಾಸ್ಟರ ಎನ್ನುವ ಸೂಕ್ಷ್ಮ ಪ್ರಜ್ಞೆಯ ಲೇಖಕರನ್ನು ಬಂಧಿಸಿ ಜೈಲಿಗೆ ಕಳುಹಿಸಿ ವಿಕೃತಾನಂದ ಪಟ್ಟರು. ಯೋಗೇಶ್ ರವರ ಬಂಧನವನ್ನು ವಿರೋಧಿಸಿ ಕೆಲವರು ಪ್ರತಿಭಟನೆಗಿಳಿದರೂ ಈ ಸಂಘಿಗಳ ಅಬ್ಬರದ ಮುಂದೆ ಅವು ಕ್ಷೀಣವಾಗಿದ್ದವು. ಕೊನೆಗೆ ಸಾಮಾಜಿಕ ಕಾಳಜಿ ಇರುವ ಹಿರಿಯ ವಕೀಲ ಸಿ.ಎಸ್.ದ್ವಾರಕಾನಾಥರವರ ಸಾಮಾಜಿಕ ಕಳಕಳಿಯಿಂದಾಗಿ ಜಾಮೀನಿನ ಮೇಲೆ ಯೋಗೇಶ್ ಬಿಡುಗಡೆಯಾದರು ಆದರೆ ಈಗಲೂ ಕೇಸ್ ನಡೆಯುತ್ತಲೇ ಇದೆ. ಕೇಸ್ ಗೆಲ್ಲುವುದಂತೂ ಈ ಕಮಂಗಿ ಪಡೆಗೆ ಸಾಧ್ಯವಂತೂ ಇಲ್ಲಾ. ಆದರೆ.. ಬರಹಗಾರರನ್ನು ಕಾನೂನಿನ ಕುಣಿಕೆಯಲ್ಲಿ ಸಿಕ್ಕಿಸಿ ಹಿಂಸಿಸುವ ಮೂಲಕ ಅವರ ಆತ್ಮಸ್ತೈರ್ಯವನ್ನು ಕುಗ್ಗಿಸುವ ಕೆಲಸವನ್ನು ಮಾಡುವುದರಲ್ಲಿ ಈ ಕೋಮುಪಡೆ ನಿಸ್ಸೀಮರು. ಆದರೆ.. ಯೊಗೇಶ್ ಮಾಸ್ಟರ್ ಈ ಯಾವ ಕೇಸುಗಳಿಗೆ ಬಗ್ಗದೇ ಕೋಮುವಿರೋಧಿ ಚಳುವಳಿಯ ಜೊತೆ ತೊಡಗಿಸಿಕೊಳ್ಳುತ್ತಲೇ ಬಂದಾಗ ದೇಶಭಕ್ತರ ಸಂಕಟ ಹೆಚ್ಚಾಗತೊಡಗಿತು. ಕೋರ್ಟಲ್ಲಿ ಸೋಲು ಖಂಡಿತ ಎನ್ನುವ ಅರಿವೂ ಅವರಿಗಿತ್ತು. ಆದ್ದರಿಂದ ಈಗ ಕಾನೂನನ್ನು ತಾವೇ ಕೈಗೆ ತೆಗೆದುಕೊಂಡು ಮಸಿ ಬಳಿಯುವ ಹಾಗೂ ಹಲ್ಲೆ ಮಾಡುವ ಮೂಲಕ ಯೋಗೇಶ್ ಮಾಸ್ಟರ್‌ರನ್ನು ಹೆದರಿಸುವ ಹಾಗೂ ಆ ಮೂಲಕ ಕೋಮುವಾದಿಗಳನ್ನು ವಿರೋಧಿಸುವ ಎಲ್ಲಾ ಪ್ರಜ್ಞಾವಂತ ಬರಹಗಾರರಿಗೆ ಎಚ್ಚರಿಕೆ ಕೊಡುವ ಅಮಾನವೀಯ ಕೆಲಸವನ್ನು ಮಾಡಿ ಹೇಡಿಗಳಂತೆ ಓಡಿ ಹೋಗಿದ್ದಾರೆ.  

ಹಲ್ಲೆಯಾದ ದಿನದ ಸಂಜೆಯೇ ಕ್ಯಾಂಪಸ್ ಪ್ರಂಟ್ ಆಪ್ ಇಂಡಿಯಾ ವಿದ್ಯಾರ್ಥಿ ಸಂಘಟನೆ ಮೈಸೂರು ಬ್ಯಾಂಕ್ ಸರ್ಕಲ್ಲಿನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡು ರಾಜ್ಯಾಂದ್ಯಂತ ಪ್ರತಿಭಟನೆಗೆ ಕರೆಕೊಟ್ಟರು. ಮರುದಿನ ಹಲವಾರು ಪ್ರಗತಿಪರ ಸಂಘಟನೆಗಳು ಟೌನ್‌ಹಾಲ್ ಮುಂದೆ ಪ್ರತಿಭಟನೆ ಆಯೋಜಿಸಿವೆ. ದಾವಣಗೆರೆಯಲ್ಲೂ ಪ್ರಗತಿಪರ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿವೆ. ಸಾಮಾಜಿಕ ಜಾಲತಾಣಗಳಲ್ಲಿ ಸಂಘಪರಿವಾರದ ವಟುಗಳಾದ ಎಬಿವಿಪಿಗಳು ಮಾಡಿದ ಈ ದುಷ್ಟಕೃತ್ಯಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ದಾವಣಗೆರೆ ಎಬಿವಿಪಿ ಪತ್ರಿಕಾ ಪ್ರಕಟಣೆ ಹೊರಡಿಸಿ ಈ ಮಸಿ ಘಟನೆಗೂ ತಮಗೂ ಯಾವುದೇ ಸಂಬಂಧವಿಲ್ಲಾ ಎಂದು ಹೇಳಿಕೊಂಡು ಹೊಣೆಗಾರಿಕೆಯಿಂದಾ ಜಾರಿಕೊಳ್ಳಲು ಪ್ರಯತ್ನಿಸಿತು. ಕಾರ್ಯಪ್ರವೃತ್ತರಾದ ದಾವಣಗೆರೆ ಪೊಲೀಸರು ಹಿಂದೂ ಜಾಗರಣ ವೇದಿಕೆಯ ಶಿವಪ್ರಸಾದ್ ಹಾಗೂ ಚೇತನ್ ಎನ್ನುವ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ಚೇತನ್ ಹಿಂದೂ ಜಾಗರಣ ವೇದಿಕೆಯ ಸದಸ್ಯನಾಗಿದ್ದು ಎಬಿವಿಪಿಯ ಕಾರ್ಯಕರ್ತ. ಹಾಗೂ ಈ ಶಿವಪ್ರಸಾದ್ ಎನ್ನುವ ವ್ಯಕ್ತಿ ವಿಶ್ವವಾಣಿ ಪತ್ರಿಕೆಯಲ್ಲಿ ಕೆಲಸಮಾಡುತ್ತಿದ್ದು ಹಿಂದೂ ಜಾಗರಣ ವೇದಿಕೆಯ ಸದಸ್ಯನಾಗಿದ್ದು ಆರೆಸ್ಸೆಸ್ಸ ಹಾಗೂ ಬಿಜೆಪಿಯ ಸಕ್ರೀಯ ಸದಸ್ಯನಾಗಿದ್ದಾನೆ. ಈತ ಯೊಗೇಶ್ ಮಾಸ್ಟರ್ಗೆ ಮಸಿ ಬಳಿದು ಹಲ್ಲೆ ಮಾಡಿದ ಪ್ರಕರಣದಲ್ಲಿ ಬಂಧಿಯಾದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಕೋರ್ಟಿನಲ್ಲಿ ಜಾಮೀನು ಪಡೆದು ಹೊರಬಂದಿದ್ದಾನೆ. ಅದರೆ... ನಮ್ಮ  ಮುಖ್ಯ ಮಂತ್ರಿಗಳು ತಪ್ಪಿತಸ್ತರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿ ತಮ್ಮ ಹೊಣೆಗಾರಿಕೆಯನ್ನು ಪೊಲೀಸರ ಮೇಲೆ ಹಾಕಿ ನಿರಾಳರಾಗಿದ್ದಾರೆ.  ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ಅಭಿವ್ಯಕ್ತ ಸ್ವಾತಂತ್ರ್ಯದ ಮೇಲೆ ನಂಬಿಕೆ ಇದ್ದರೆ ಮೊದಲು ಯೊಗೇಶ್ ಮಾಸ್ಟರರಿಗೆ ಸಾಂತ್ವನ ಹೇಳಬೇಕಿತ್ತು. ತದನಂತರ ತಪ್ಪಿತಸ್ತರನ್ನು ಕೂಡಲೇ ಗೂಂಡಾಕಾಯ್ದೆಯಡಿ ಬಂಧಿಸಿ  ಇತರ ಕೋಮುವಾದಿ ಭಯೋತ್ಪಾದಕರಿಗೆ ತೀವ್ರವಾದ ಎಚ್ಚರಿಕೆಯನ್ನು ಕೊಡಬೇಕಿತ್ತು. ಈ ಶಡ್ಯಂತ್ರವನ್ನು ಕಾರ್ಯರೂಪಕ್ಕೆ ತಂದ ಕಾಲಾಳುಗಳಿಗಿಂತಲೂ ಅದರ ಹಿಂದಿರುವ ಮೆದುಳುಗಳನ್ನು ಹಿಡಿದೆಳೆತಂದು ಜೈಲಿಗಟ್ಟಬೇಕಿತ್ತು.ಈ ಮಸಿ ಬಳಿಯುವ ಗನಂಧಾರಿ ಕೆಲಸವನ್ನು ಮಾಡಿದ್ದು ಶೂದ್ರ ಹುಡುಗರು. ಇವರ ತಲೆಯಲ್ಲಿ ಮತೀಯವಾದವನ್ನು ಬಿತ್ತಿದ ಕಾರಂತ, ಪ್ರಭಾಕರ್ ಭಟ್ ನಂತವರು ಹಿಂದುತ್ವದ ಹೆಸರಲ್ಲಿ ತಮ್ಮ ಬ್ರೇನ್ ವಾಷ್ ಕಾರ್ಯಕ್ರಮವನ್ನು ಮುಂದುವರೆಸಿದ್ದಾರೆ. ಅದರೆ ಈ ಮನುವಾದಿಗಳ ಕುತಂತ್ರವರಿಯದ ಶೂದ್ರ ಯುವಕರು ಇಂತಹ ಹೀನ ಕೆಲಸಕ್ಕೆ ಟೂಲ್ ಆಗಿ ಬಳಕೆಯಾಗುತ್ತಿದ್ದಾರೆ. ಇದೂ ಸಹ ಸಂಘಪರಿವಾರದ ಮಾಸ್ಟರ್ ಮೈಂಡ್ ಗಳ ಶಡ್ಯಂತ್ರದ ಭಾಗವೇ ಆಗಿದೆ. ಶೂದ್ರ ದಲಿತ ಯುವಕರ ತಲೆಯಲ್ಲಿ ಹಿಂದುತ್ವದ ಉನ್ಮಾದವನ್ನು ತುಂಬಿ ಹತ್ಯೆ ಹಲ್ಲೆಗಳನ್ನು ಮಾಡಿಸುತ್ತಲೇ ಬಂದಿರುವ ಪುರೋಹಿತಶಾಹಿಗಳು ಅಬ್ರಾಹ್ಮಣ ಯುವಕರನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವುದು ಬಹಿರಂಗ ಸತ್ಯ.

ಅಕಸ್ಮಾತ್ ಇದೇ ರೀತಿ ಯಾರಾದರೂ ಸಾಮಾಜಿಕ ಚಳುವಳಿಯ ಹುಡುಗರುಗಳು ಬಲಪಂಥೀಯ ಪ್ರತಿಪಾದಕರಾದ ಬೈರಪ್ಪನವರಿಗೋ ಇಲ್ಲಾ ಚಿದಾನಂದಮೂರ್ತಿಯವರಿಗೋ ಮಸಿ ಬಳಿದು ಹಲ್ಲೆ ಮಾಡಿದ್ದರೆ ಇಷ್ಟೊತ್ತಿಗೆ ಅದನ್ನು ರಾಷ್ಟ್ರೀಯ ದುರಂತ ಎನ್ನುವಂತೆ ಈ ಸಂಘಪರಿವಾರಿಗಳು ಬಿಂಬಿಸಿ ಬೀದಿಬೀದಿಯಲ್ಲಿ ನಿಂತು ಬಾಯಿಬಡಿದುಕೊಳ್ಳುತ್ತಿದ್ದರು. ಈ ಸೂಲಿಬೆಲೆಯಂತಾ ವಿಕೃತ ಮನಸ್ಸಿನ ನಕಾರಾತ್ಮಕ ಜೀವಿಗಳು ಆರು ದಾರಿ ಸೇರುವಲ್ಲಿ ನಿಂತು ಮೆದುಳಿನೊಳಗಿರುವ ಕೊಳಕನ್ನು ವಾಂತಿ ಮಾಡಿಕೊಳ್ಳುತ್ತಿದ್ದರು.   ಕೋಮುವಾದಿತ್ವವನ್ನು ಹಿಡನ್ ಅಜೆಂಡಾ ಮಾಡಿಕೊಂಡಿರುವ ಬಹುತೇಕ ಚಾನೆಲ್‌ನವರು ಅದನ್ನು ದಿನದಿಪ್ಪತ್ತುನಾಲ್ಕು ಗಂಟೆಯೂ ಬ್ರೇಕಿಂಗ್ ನ್ಯೂಸ್ ಹೆಸರಲ್ಲಿ ಮತ್ತೆ ಮತ್ತೆ ತೋರಿಸಿ ಇದೊಂದು ದೇಶದ್ರೋಹದ ಕೃತ್ಯವೆಂದು ಪ್ರತಿಪಾದಿಸಿ ಬಲಪಂಥೀಯರ ಪರವಾಗಿ ಜನಾಭಿಪ್ರಾಯವನ್ನು ರೂಪಿಸಲು ಹಗಲಿರುಳು ಶ್ರಮಿಸುತ್ತಿದ್ದರು. ಆದರೆ.. ಈಗ ಮಸಿ ಬಳಿದು ಹಲ್ಲೆ ಮಾಡಿದ್ದು ಸಂಘಪರಿವಾರಿಗಳೇ ಆಗಿದ್ದರಿಂದಾ ಚಾನೆಲ್‌ಗಳು ಹಾಗೂ ಪೀತ ಪತ್ರಿಕೆಗಳು ಪಂಚೇಂದ್ರಿಯಗಳನ್ನು ಮುಚ್ಚಿಕೊಂಡು ಬೇರೆ ಬ್ರೇಕಿಂಗ ನ್ಯೂಸ್‌ಗಾಗಿ ಅಂಡಲೆಯುತ್ತಿವೆ. ಆತ್ಮಸಾಕ್ಷಿಯನ್ನೇ ಮಾರಿಕೊಂಡ ಮಾಧ್ಯಮಗಳನ್ನು ನಿರ್ಲಕ್ಷಿಸಿ ಜನಪರ ಹೋರಾಟಗಾರರು ಹಾಗೂ ಪ್ರಜ್ಞಾವಂತ ಸಾಹಿತಿ ಕಲಾವಿದರುಗಳು ಬೀದಿಗಿಳಿದು ಪ್ರತಿಭಟಿಸುತ್ತಾ ಈ ದೇಶಭಕ್ತರ ನಿಜವಾದ ಮುಖವಾಡವನ್ನು ಜನತೆಯ ಮುಂದೆ ಕಿತ್ತೆಸೆಯಬೇಕಿದೆ. ಯೊಗೇಶ್ ಮಾಸ್ಟರ್ ಇಲ್ಲಿ ಕೇವಲ ನಿಮಿತ್ತ ಮಾತ್ರ. ಎಲ್ಲಾ ಪ್ರಗತಿಪರರಿಗೂ ಕೋಮುವಾದಿಗಳು ಕೊಟ್ಟ ಎಚ್ಚರಿಕೆ ಎಂದೇ ಪರಿಗಣಿಸಬೇಕಿದೆ. ಅಭಿವ್ಯಕ್ತಿ ಸ್ವಾತಂತ್ರವನ್ನು ದಮನಗೊಳಿಸುವವರ ಎಲ್ಲಾ ರೀತಿಯ ಭಯೋತ್ಪಾದಕತೆಯನ್ನು ಶತಾಯ ಗತಾಯ ವಿರೋಧಿಸಬೇಕಿದೆ. ಪ್ರತಿಯೊಬ್ಬ ಪ್ರಜ್ಞಾವಂತರೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಲೇಬೇಕಿದೆ. 
ಪ್ರೀತಿಯ ಸಂಗಾತಿಗಳೇ, ನಿಮ್ಮ ಕಳಕಳಿ ಮತ್ತು ಬದ್ಧತೆಯನ್ನು ಕಂಡು ನನ್ನ ಮೇಲಿನ ಹಲ್ಲೆಯಿಂದ ನನಗಾದ ಆಘಾತ ಕಡಿಮೆಯಾಗಿದೆ. ಜೊತೆಗೆ ನಮ್ಮ ಪ್ರಗತಿಪರವಾದ ಮತ್ತು ಶೋಷಣೆಗಳ ವಿರುದ್ಧವಾದ ಹೋರಾಟ ಮತ್ತು ಚಳುವಳಿಗಳಲ್ಲಿ ನನ್ನ ಬದ್ಧತೆಯ ಪ್ರಜ್ಞೆಯನ್ನು ಮತ್ತಷ್ಟು ಬಲಗೊಳಿಸಿದೆ. ನಮ್ಮ ಹೋರಾಟ ಬಲಗೊಳ್ಳಲಿ ಮತ್ತು ಸಾಧಿಸಬೇಕಾದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಸಾಧಿಸಿಯೇ ತೀರುವ. ಐಕ್ಯತೆ ಚಿರಾಯುವಾಗಲಿ ಎಂದು ಯೋಗೇಶ್ ಮಾಸ್ಟರ್ ವಾಟ್ಸಾಪ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಈ ಸಂಘಪರಿವಾರದ ಉನ್ಮಾದಪೀಡಿತರಿಗೆ ದಮನ ಹೆಚ್ಚಿದಷ್ಟೂ ದಂಗೆ ತೀವ್ರಗೊಳ್ಳುತ್ತದೆ ಎನ್ನುವ ಜಾಗತಿಕ ಸತ್ಯ ಅರಿವಾಗಬೇಕಿದೆ ಹಾಗೂ ಹೀಗೆ ದೌರ್ಜನ್ಯ ಮಾಡುವುದರ ಮೂಲಕ ಜನರ ಪರವಾದ ದ್ವನಿಗಳನ್ನು ಉಡುಗಿಸಲು ಸಾಧ್ಯವೆಂದು ನಂಬಿದ ಕೋಮುವಾದಿ ಭಯೋತ್ಪಾದಕರಿಗೆ ಕಾಲವೇ ಉತ್ತರಿಸುತ್ತದೆ.

ಪೊಲೀಸರು ತಮ್ಮ ಕೆಲಸ ತಾವು ಮಾಡುತ್ತಾರೆ. ಕೋರ್ಟಿನ ವಿಳಂಬ ಧೋರಣೆಯಿಂದಾಗಿ ಇಂತಹ ಕೇಸುಗಳು ಇತ್ಯರ್ಥವಾಗುವುದು ಇನ್ಯಾವ ಕಾಲಕ್ಕೋ. ಈಗಾಗಲೇ ಹಲ್ಲೆ ಮಾಡಿದ ಕೋಮುವಾದಿಗಳಿಗೆ ಇಲ್ಲಿವರೆಗೂ ಶಿಕ್ಷೆಯಾಗಿಲ್ಲಾ.. ಈ ವ್ಯವಸ್ಥೆಯಲ್ಲಿ ಆಗುವುದೂ ಇಲ್ಲಾ. ಈ ಸಂಘಿಗಳಿಗೆ ಯೋಗೇಶ್ ಮಾಸ್ಟರ್ ಆಗಲಿ ಇಲ್ಲವೇ ಡಾ.ಕಲಬುರ್ಗಿಯವರಾಗಲಿ ನಿಜವಾದ ಟಾರ್ಗೆಟ್ ಅಲ್ಲವೇ ಅಲ್ಲಾ. ಈ ರೀತಿಯ ಹಲ್ಲೆ ಕೊಲೆಗಳನ್ನು ಮಾಡುವ ಮೂಲಕ ಎಲ್ಲಾ ಪ್ರಜ್ಞಾವಂತ ಪ್ರಗತಿಪರರು ಹಾಗೂ ಜನಹೋರಾಟಗಾರರಲ್ಲಿ ಭಯಹುಟ್ಟಿಸುವ ಮೂಲಕ ಸಂಘಿಗಳ ಜೀವವಿರೋಧಿ ಸಿದ್ದಾಂತಗಳನ್ನು ಹಾಗೂ ಚರಿತ್ರೆ ಪುರಾಣಗಳ ಸುಳ್ಳುಸೃಷ್ಟಿಗಳನ್ನು ಪ್ರಶ್ನಿಸುವವರ ದ್ವನಿಯನ್ನು ಹತ್ತಿಕ್ಕುವ ಕುತಂತ್ರಗಳನ್ನು ಮಾಡುತ್ತಿದ್ದಾರೆ. 
ಆದ್ದರಿಂದ ಇಂತಹ ಘಟನೆಗಳನ್ನು ವ್ಯಯಕ್ತಿಕ ನೆಲೆಯಲ್ಲಿ ನೋಡದೇ.. ಯಾರೋ ಒಬ್ಬರ ಮೇಲಾದ ದಮನವೆಂದು ನಿರ್ಲಕ್ಷಿಸದೇ ಎಲ್ಲಾ ಪ್ರಗತಿಪರರು ಹಾಗೂ ಜನಹೋರಾಟದ ಪರವಿರುವ ಸಂಘಟನೆಗಳು ಸಂಘನಾತ್ಮಕವಾಗಿ ವಿರೋಧಿಸಲೇಬೇಕಿದೆ. ಇಲ್ಲವಾದರೆ ಅವತ್ತು ಕಲಬುರ್ಗಿಯವರಿಗೆ ಮಾಡಲಾದ ಹತ್ಯೆ ನಾಳೆ ಇನ್ನ್ಯಾರದೋ ಮೇಲಾಗಬಹುದು. ಇವತ್ತು ಯೋಗೇಶ್ ಮೇಷ್ಟ್ರ ಮೇಲಾದ ಹಲ್ಲೆ ನಾಳೆ ಇನ್ಯಾರೋ ಪ್ರಗತಿಪರರ ಮೇಲಾಗಬಹುದು. ನಮ್ಮ ಸರದಿ ಬರುವವರೆಗೆ ಕಾಯುವುದನ್ನು ಬಿಟ್ಟು ಹಾಗೂ ಕೇವಲ ಸಾಂಕೇತಿಕ ಪ್ರತಿಭಟನೆಗಳ ಜೊತೆಗೆ ಸಂಘಪರಿವಾರದ ಹುನ್ನಾರದ ವಿರುದ್ದ ಜನಾಭಿಪ್ರಾಯವನ್ನು ರೂಪಿಸುವುದು ಈ ಸಧ್ಯದ ಅಗತ್ಯವಾಗಿದೆ. ಇನ್ನೊಮ್ಮೆ ಪ್ರಗತಿಪರರ ಮೇಲೆ ಹಲ್ಲೆ ಮಾಡುವ ಮೊದಲು ಸಂಘಿಗಳ ಗೂಂಡಾಪಡೆ ಸಾವಿರ ಸಲ ಯೋಚಿಸುವಂತೆ ಮಾಡಬೇಕಿದೆ. ಅವರು ಮಾಡುವ ಒಂದೊಂದು ಹತ್ಯೆ ಹಲ್ಲೆಗಳೂ ಅವರ ಮುಖವಾಡಗಳನ್ನು ಜನರ ಮುಂದೆ ಬಯಲುಗೊಳಿಸುವಂತೆ ಮಾಡುವುದು ಪ್ರಸ್ತುತ ಅನಿವಾರ್ಯತೆಯಾಗಿದೆ. ಎಲ್ಲಿವರೆಗೂ ಇನ್ನೂ ಜೀವಂತ ಇರುವ ಹಾಗೂ ಜೀವ ಹಿಡಿದುಕೊಂಡಿರುವ ಜನಪರವಾದ ಸಂಘಟನೆಗಳು ಸಂಘಿಗಳ  ದಮನದ ಮೇಲೆ ಒಂದಾಗಿ ತಿರುಗಿ ಬೀಳಬೇಕಿದೆ. ಇಲ್ಲವಾದರೆ ಪ್ರತಿರೋಧದ ದ್ವನಿಗಳನ್ನು ಅಡಗಿಸುವ ಶಡ್ಯಂತ್ರಕ್ಕೆ ಎಲ್ಲರೂ ಕಾಲಕಾಲಕ್ಕೆ ಬಲಿಯಾಗುವುದು ಶತಸಿದ್ದ. ಈ ದೇಶವನ್ನು ಪ್ಯಾಸಿಸ್ಟ್ ಪ್ರಭುತ್ವ ಆಪೋಷನ ತೆಗೆದುಕೊಳ್ಳುವುದು ಹಾಗೂ ಮುಂದಿನ ನೂರಿನ್ನೂರು ವರ್ಷಗಳ ಕಾಲ ಮನುವಾದಿಗಳೇ ಈ ದೇಶವನ್ನು ಕಪಿಮುಷ್ಟಿಯಲ್ಲಿಟ್ಟುಕೊಂಡು ಆಳುವುದನ್ನು ಯಾರಿಂದಲೂ ತಡೆಯಲು ಸಾಧ್ಯವೇ ಇಲ್ಲಾ  

 -ಶಶಿಕಾಂತ ಯಡಹಳ್ಳಿ