ಮಂಗಳವಾರ, ಏಪ್ರಿಲ್ 18, 2017

ತಹ ತಹ...84 ಮೀಸಲಾತಿ ಇಲ್ಲಾ; ಉಳ್ಳವರಿಗೆ ಸವಲತ್ತುಗಳೆಲ್ಲಾ :


ಯೋಗಿಗಳು ಉತ್ತರದ ಅಧಿಪತ್ಯದಲಿ ಆಸೀನರಾದ ನಂತರ ಮೇಲ್ವರ್ಗದ ಭಕ್ತರಿಗೆ ಕ್ರಾಂತಿಕಾರಿ ಎಂದೆನಿಸುವ ಕ್ರಮ ಕೈಗೊಂಡಿದ್ದಾರೆ. ಖಾಸಗಿ ವೈದ್ಯಕೀಯ ಹಾಗೂ ಡೆಂಟಲ್ ಕಾಲೇಜುಗಳಲ್ಲಿ ಪರಿಶಿಷ್ಟ ಸಮುದಾಯಕ್ಕಿದ್ದ ಮೀಸಲಾತಿಯನ್ನು ರದ್ದು ಪಡಿಸುವ ಆದೇಶ ಹೊರಡಿಸಿದ್ದಾರೆ. ಅದೂ ಮೀಸಲಾತಿ ಒದಗಿಸಿ ದಲಿತ ದಮನಿತ ಶೂದ್ರರಿಗೆ ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಿದ ಬಾಬಾ ಸಾಹೇಬರ 126 ನೇ ಜನ್ಮ ಜಯಂತಿಯ ಸಂದರ್ಭದಲ್ಲಿ ಈ ಮೀಸಲಾತಿ ರದ್ದತಿ ಆದೇಶ ಹೊರಡಿಸಲಾಗಿದೆ. ಮೀಸಲಾತಿ ವಿರೋಧಿಗಳಾದ ಮೇಲ್ವರ್ಗದ ನಕಲಿ ದೇಶಭಕ್ತರು ಕುಂಡಿ ಬಡಿದುಕೊಂಡು ಕುಣಿದಾಡುತ್ತಿದ್ದಾರೆ. 

ಇನ್ನು ಮೇಲೆ ಉತ್ತರ ಪ್ರದೇಶದ ಕೆಳ ತಳ ಸಮುದಾಯದವರು ಡಾಕ್ಟರುಗಳಾಗುವ ಅಗತ್ಯವಿಲ್ಲ. ವೈದ್ಯರಾಗುವ ಯೋಗ್ಯತೆ ಏನಿದ್ದರೂ ಸಕಲ ಸವಲತ್ತುಗಳನ್ನು ಹೊಂದಿರುವ ಮೇಲ್ವರ್ಗದವರ ಮಕ್ಕಳಿಗೆ ಮಾತ್ರ. 'ಯೋಗ್ಯತೆ ಇದ್ದರೆ ಅವರೂ ತಮ್ಮ ಪ್ರತಿಭೆ ತೋರಿಸಿ ಹೆಚ್ಚು ಅಂಕ ಗಳಿಸಿ ವೈದ್ಯಕೀಯ ಕಾಲೇಜಲ್ಲಿ ಸೀಟು ಗಿಟ್ಟಿಸಿಕೊಳ್ಳಲಿ ಬಿಡಿ' ಎನ್ನುವ ವಾದ ಈ ಉತ್ತಮ ಕುಲದವರದು. ಹೌದು... ಇನ್ನು ಮೇಲೆ ತಿನ್ನಲು ಪೌಷ್ಟಿಕ ಆಹಾರವೂ ಇಲ್ಲದ ಬಡ ಸಣಕಲರು ಪುಷ್ಟಿದಾಯಕ ಆಹಾರ ತಿಂದು ಕೊಬ್ಬಿ ಆಧುನಿಕ ತರಬೇತಿ ಪಡೆದ ಪೈಲ್ವಾನರ ಜೊತೆಗೆ ಸ್ಪರ್ದಿಸಿ ಗೆಲ್ಲಬೇಕು. ಅದೆಷ್ಟೇ ಪ್ರತಿಭೆ ಇದ್ದರೂ ನಿತ್ಯ ಬದುಕಿನ ಆರ್ಥಿಕ ಬವಣೆಯಲ್ಲಿ ಬೇಯುತ್ತಿರುವ ಕೆಳ ಸಮುದಾಯದ ಯುವಕರು ವಿಪರೀತ ಡೊನೇಶನ್ ಕೊಟ್ಟು ಅತಿರೇಕದ ಪೀಸ್ ಕಟ್ಟಿ ವೈದ್ಯಕೀಯ ಕಾಲೇಜು ಸೇರಬೇಕು. ಅದೆಲ್ಲಾ ಸಾಧ್ಯವಾಗದೇ ಹೋದರೆ ಡಾಕ್ಟರಾಗುವ ಕನಸನ್ನು ಮರೆತು ವೈದ್ಯರಾಗುವ ಉತ್ತಮರ ಕ್ಲಿನಿಕ್- ಆಸ್ಪತ್ರೆಗಳಲ್ಲಿ ಕಂಪೌಂಡರ ಕೆಲಸವೂ ಸಿಗದೆ ವಾಚ್ಮನ್ ಕೆಲಸಕ್ಕೆ ಅರ್ಜಿ ಹಾಕಬೇಕು.

ವೈದ್ಯಕೀಯ ಕಾಲೇಜಲ್ಲಿ ಮೀಸಲಾತಿ ತೆಗೆದು ಹಾಕಿದ್ದು ಮನುವಾದಿ ಅಜೆಂಡಾದ ಅನುಷ್ಠಾನದ ಆರಂಭ ಅಷ್ಟೇ... ಕಂತು ಕಂತುಗಳಲ್ಲಿ ಮೀಸಲಾತಿ ಮರೆಯಾಗುತ್ತಾ ಈ ದೇಶದ ಸಕಲ ಸಂಪತ್ತು ಸವಲತ್ತು ಅವಕಾಶಗಳೆಲ್ಲಾ ಉಳ್ಳವರ ಪಾಲಾಗುವ ಅಪಾಯವನ್ನು ಅಲ್ಲಗಳೆಯುವಂತಿಲ್ಲ. ದಲಿತ ಶೂದ್ರ ಸಮುದಾಯವು ಈಗಲೇ ಎಚ್ಚೆತ್ತು ಈ ಸಂವಿಧಾನ ವಿರೋಧಿ ಅಕ್ರಮಗಳನ್ನು ಶಾತಾಯ ಗತಾಯ ವಿರೋಧಿಸದೇ ಹೋದರೆ ವರ್ಗ ಅಸಮಾನತೆ ಅತಿರೇಕವಾಗುವುದರಲ್ಲಿ ಸಂದೇಹವಿಲ್ಲ. ಸಂಘ ಪರಿವಾರವನ್ನು ಯಾವಯಾವುದೋ ಕಾರಣಗಳಿಗೆ ಬೆಂಬಲಿಸುವ ಎಸ್ ಸಿ, ಎಸ್ ಟಿ ಹಾಗೂ ಓಬಿಸಿ ಸಮುದಾಯದ ಕೆಲವರು ತಮ್ಮ ಮುಂದಿನ ತಲೆಮಾರು ಮೂಲಭೂತ ಸವಲತ್ತುಗಳಿಂದ ವಂಚಿತವಾಗಿ ಮನುವಾದಿಗಳ ಮನೆಯಲ್ಲಿ ಜೀತ ಮಾಡುವ ದುರಂತದ ಬಗ್ಗೆ ಈಗಲೇ ಎಚ್ಚರ ವಹಿಸಬೇಕಿದೆ.

ಯಾರು ಏನೇ ಹೇಳಲಿ ಈ ದೇಶ ಸಾವಕಾಶವಾಗಿ ಪ್ಯಾಸಿಸ್ಟ್ ಆಡಳಿತದತ್ತ ಒಂದೊಂದೆ ಹೆಜ್ಜೆಗಳನ್ನು ಹಾಕುತ್ತಿದೆ. ಸಂವಿಧಾನವನ್ನು ಅಸ್ತಿರಗೊಳಿಸಿ ಮನುಸ್ಮೃತಿಯಾಧಾರಿತ ವೈದಿಕಶಾಹಿ ಸಂವಿಧಾನವನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಈ ಅಪಾಯವನ್ನು ಗ್ರಹಿಸಿ ಪ್ಯಾಸಿಜಂ ಮನಸ್ಥಿತಿಯ ವಿರುದ್ದ ಬಹುಜನರು ಎಚ್ಚೆತ್ತು ಒಟ್ಟಾಗಿ ನಿಂತು ಜನಾಂದೋಲನ ಮಾಡದೇ ಹೋದರೆ... ಚುನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸದೇ ಹೋದರೆ ಈ ದೇಶವನ್ನು ಪ್ಯಾಸಿಸ್ಟ್ ಆಡಳಿತದಿಂದ ಪಾರುಮಾಡಲು ಯಾರಿಂದಲೂ ಸಾಧ್ಯವಿಲ್ಲ.. ಮನುವಾದಿಗಳಿಗೆ ಮಾತ್ರ ಬರುವ ಅಚ್ಚೇ ದಿನ್ ಬಹುಸಂಖ್ಯಾತ ದುಡಿಯುವ ವರ್ಗಗಳಿಗಂತೂ ಎಂದೂ ಬರುವುದಿಲ್ಲ...

- ಶಶಿಕಾಂತ ಯಡಹಳ್ಳಿ

ಶುಕ್ರವಾರ, ಏಪ್ರಿಲ್ 14, 2017

ತಹ ತಹ.... 83 ಮನುವ್ಯಾಧಿಗಳ ಕುತಂತ್ರದ ವಿರುದ್ಧ ಅಂಬೇಡ್ಕರರ ಸಮಾನತಾ ಮಂತ್ರ :



ಕೇಸರಿ ದಾಳಿಗೆ ಆರದಿರಲಿ  ಬಾಬಾಸಾಹೇಬ ಹಚ್ಚಿಟ್ಟ ನೀಲಿ ಬೆಳಕು:
 

ಮನುವಾದ ಎನ್ನುವ ಜೀವವಿರೋಧಿ ವ್ಯಾಧಿ ಇಡೀ ದೇಶಾದ್ಯಂತ ಶತಮಾನಗಳಿಂದ ಪಸರಿಸಿ ಬಹುಸಂಖ್ಯಾತ ದಲಿತ ಶೂದ್ರರನ್ನು ದಮನಿಸಿ ಇಡೀ ದೇಶವನ್ನೇ ರೋಗಗ್ರಸ್ತವಾಗಿರುವಾಗ ಸಾಮಾಜಿಕ ಚಿಕಿತ್ಸಕರಾಗಿ ಬಂದಿದ್ದು ಬಾಬಾ ಸಾಹೇಬ ಅಂಬೇಡ್ಕರ್. ಅವರು ಇದ್ದಿದ್ದರೆ ಎಪ್ರಿಲ್ 14 ಕ್ಕೆ ಸರಿಯಾಗಿ 126 ವರ್ಷಗಳು ತುಂಬುತ್ತಿದ್ದವು. ಇಷ್ಟು ವರ್ಷಗಳ ಕಾಲ ಅವರು ಭೌತಿಕವಾಗಿ ಬದುಕಿರಲು ಸಾಧ್ಯವಿಲ್ಲದೇ ಹೋದರೂ ಅವರು ಪ್ರತಿಪಾದಿಸಿದ ಮಾನವೀಯ ಮೌಲ್ಯಗಳು ಹಾಗೂ ಸಮಾನತೆಯ ಸಿದ್ದಾಂತಗಳು ಮನುಕುಲ ಇರುವವರೆಗೂ ಶಾಶ್ವತ.

ಅಂಬೇಡ್ಕರರವರನ್ನು ಒಂದು ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸಿ ಅವರ ಪ್ರಭಾವವನ್ನು ಮಿತಿಗೊಳಿಸಲು ಮನುವಾದಿ ಪಡೆ ಪ್ರಯತ್ನಿಸುತ್ತಲೇ ಇದೆ. ಜೊತೆಗೆ ದಲಿತ ಸಮುದಾಯದ ಸ್ವಾಭಿಮಾನದ ಸಂಕೇತವಾದ ಅಂಬೇಡ್ಕರರನ್ನು ದಲಿತ ಸಮುದಾಯದ ಆಸ್ತಿಯನ್ನಾಗಿಸಿಕೊಳ್ಳುವ ಸೀಮಿತ ಪ್ರಯತ್ನಗಳೂ ನಡೆಯುತ್ತಿವೆ. ಆದರೆ.. ಅಂಬೇಡ್ಕರ್ ಕೇವಲ ಒಂದು ನಿರ್ದಿಷ್ಟ ಸಮುದಾಯವನ್ನಷ್ಟೇ ದೃಷ್ಟಿಯಲ್ಲಿಟ್ಟುಕೊಂಡು ತಮ್ಮ ಸಿದ್ದಾಂತವನ್ನು ಪ್ರತಿಪಾದಿಸಲಿಲ್ಲಾ. ಈ ದೇಶದ ಎಲ್ಲಾ ದಲಿತರು, ದಮನಿತರು, ಬಡವರು, ಶ್ರಮಿಕರು ಹಾಗೂ ಮಹಿಳೆಯರು ಸ್ವಾಭಿಮಾನದಿಂದ ಬದುಕುವಂತಹ ವ್ಯವಸ್ಥೆಯೊಂದನ್ನು ರೂಪಿಸಬೇಕೆಂಬ ಮಹತ್ವಾಕಾಂಕ್ಷೆಯಿಂದಾ ತಮ್ಮ  ಬದುಕನ್ನೇ ದೀಪದಂತೆ ಉರಿಸಿ ಮನುಕುಲಕೆ ಬೆಳಕಾದರು. ಆದರೆ ಅವರು ಇದ್ದಾಗಲೂ ಹಾಗೂ ಅವರು ಇಲ್ಲವಾದಾಗಲೂ ಬಾಬಾಸಾಹೇಬರನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಹುನ್ನಾರಗಳ ಬಗ್ಗೆ ಎಚ್ಚರವಹಿಸಬೇಕಾಗಿದೆ.

ಅಂಬೇಡ್ಕರರವರ ವಿಶಾಲವಾದ ಜನಮುಖಿ ಸಮಗ್ರ ದೃಷ್ಟಿಕೋನ ಅವರ ಅಧ್ಯಕ್ಷತೆಯಲ್ಲಿ ರಚನೆಯಾದ ಭಾರತದ ಸಂವಿಧಾನದಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ. ಯಾವುದೇ ಜಾತಿ ಧರ್ಮ ವರ್ಣಗಳ ಬೇಧಭಾವವಿಲ್ಲದೇ ಎಲ್ಲರಿಗೂ ಸಮಾನವಾಗಿ ರಚಿತವಾದ ಕಾನೂನುಗಳು ಹಾಗೂ ಸಮಾಜದಲ್ಲಿ ಕೆಳಸ್ತರದಲ್ಲಿರುವ ತಳಸಮುದಾಯದ ದಮನಿತ ವರ್ಗದವರಿಗೂ ಸಮಾನತೆ ಸಾಧಿಸಲು ಒದಗಿಸಿದ ಮೀಸಲಾತಿಗಳು ಅಂಬೇಡ್ಕರರವರ ಸಾಮಾಜಿಕ ಸಮಾನತೆಯ ಆಶಯವನ್ನು ಪ್ರತಿನಿಧಿಸುತ್ತವೆ.

ಇವತ್ತು ಕೆಳ ಹಾಗೂ ತಳಸಮುದಾಯಗಳನ್ನು ಪ್ರತಿನಿಧಿಸುವ ಕೆಲವರಾದರೂ ಸರಕಾರದ ಆಡಳಿತದಲ್ಲಿ ಪ್ರಾತಿನಿದ್ಯತೆಯನ್ನು ಪಡೆದಿದ್ದರೆ ಅದಕ್ಕೆ ಅಂಬೇಡ್ಕರರವರೇ ಕಾರಣ. ದಲಿತ ಶೂದ್ರ ಸಮುದಾಯದ ಹಲವಾರು ಜನ ಸರಕಾರಿ ನೌಕರಿಗಳನ್ನು ಪಡೆದು ಆರ್ಥಿಕವಾಗಿ ಮುಂದುವರೆದಿದ್ದರೆ ಅದಕ್ಕೆ ಬಾಬಾಸಾಹೇಬರ ನೀತಿ ನಿರೂಪಣೆಯೆ ಕಾರಣ. ಈ  ಮೀಸಲಾತಿ ಎನ್ನುವುದು ಇಲ್ಲದೇ ಹೋಗಿದ್ದರೆ ಉಳ್ಳವರೇ ಈಡೀ ವ್ಯವಸ್ಥೆಯ ಫಲಾನುಭವಿಗಳಾಗಿ ದಲಿತ ಶೂದ್ರ ಸಮುದಾಯ ಈಗಲೂ ಜೀತ ಮಾಡಿಕೊಂಡೇ ಬದುಕುವಂತಹ ವ್ಯವಸ್ಥೆ ಜಾರಿಯಲ್ಲಿರುತ್ತಿತ್ತು ಎನ್ನುವುದನ್ನು ಮರೆಯುವಂತಿಲ್ಲ. ಕೂಲಿಯವನ ಮಗ ಕೂಲಿಯವನೇ ಆಗಿರುತ್ತಿದ್ದಾ. ಬಂಗಿಯವನ ಮಗ ಉಳ್ಳವರ ಅಮೇಧ್ಯವನ್ನು ತಲೆಯ ಮೇಲೆ ಹೊರುತ್ತಿದ್ದ. ಆದರೆ ಮೀಸಲಾತಿ ಹಾಗೂ ಶಿಕ್ಷಣ ಎನ್ನುವುದು ಇವತ್ತು ಅನೇಕಾನೇಕ ಜನ ದಲಿತ ಶೂದ್ರರನ್ನು ಆರ್ಥಿಕವಾಗಿ ಸಬಲರನ್ನಾಗಿಸಿ ಸ್ವಾಭಿಮಾನದ ಬದುಕನ್ನು ರೂಪಿಸಿಕೊಳ್ಳಲು ಕಾರಣವಾಗಿದೆ. ಇದಕ್ಕಾಗಿ ಎಲ್ಲರೂ ಅಂಬೇಡ್ಕರ್‌ರವರನ್ನು ನಿತ್ಯ ಸ್ಮರಿಸಬೇಕಿದೆ.

ಹಾಗೆಯೇ ಪುರೋಹಿತಶಾಹಿ ಪ್ರಣೀತ ವ್ಯವಸ್ಥೆಯಲ್ಲಿ ಎರಡನೇ ದರ್ಜೆಯ ಪ್ರಜೆಗಳಂತೆ ಯಾವುದೇ ಹಕ್ಕುಗಳಿಲ್ಲದೇ ಅತಂತ್ರತೆಯಲ್ಲೇ ಪರಾವಲಂಬಿಯಾಗಿ ಬದುಕುತ್ತಿದ್ದ ಮಹಿಳೆಯರಿಗೆ ಕಾನೂನಿನ ರಕ್ಷಣೆ ಕೊಟ್ಟು ಕಾಪಾಡಿದ್ದೂ ಸಹ ಅಂಬೇಡ್ಕರರ ಸಮಾನತಾ ಸಿದ್ದಾಂತವೇ ಆಗಿದೆ. ಇಲ್ಲವಾಗಿದ್ದರೆ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರು ಗುಲಾಮರಾಗಿ ಬದುಕು ಸವೆಸುವುದನ್ನು ಯಾರಿಂದಲೂ ತಡೆಯಲು ಸಾಧ್ಯವೇ ಇರಲಿಲ್ಲಾ.  ಹಠಕ್ಕೆ ಬಿದ್ದು ಬಹುಪತ್ನಿತ್ವ ವ್ಯವಸ್ಥೆಯನ್ನು ಸಂವಿಧಾನದಲ್ಲಿ ಅಂಬೇಡ್ಕರರವರು ನಿಷೇಧಿಸದೇ ಹೋಗಿದ್ದರೆ ಈಗಲೂ ಮಹಿಳೆಯರು ಪುರುಷರ ಭೋಗದ ವಸ್ತುವಾಗಿ ಸದಾ ಆತಂಕದಲ್ಲೇ ಜೀವಿಸುತ್ತಿದ್ದರು. ಅದೇ ರೀತಿ ಮಹಿಳೆಯರಿಗೆ ಆಸ್ತಿಯಲ್ಲೂ ಹಕ್ಕನ್ನು ಅಂಬೇಡ್ಕರರು ಪ್ರತಿಪಾದಿಸದೇ ಹೋಗಿದ್ದರೆ ಮಹಿಳೆಯ ಬದುಕು ಅಸಹನೀಯವಾಗುತ್ತಿತ್ತು.

ಈ ದೇಶದ ಜನಸಂಖ್ಯೆಯಲ್ಲಿ ಮುಕ್ಕಾಲು ಭಾಗಕ್ಕಿಂತಲೂ ಹೆಚ್ಚು ದುಡಿಯುವ ವರ್ಗದ ದಲಿತ ಶೂದ್ರ ಸಮುದಾಯದವರಿದ್ದಾರೆ. ಹಾಗೂ ಜನಸಂಖ್ಯೆಯ ಅರ್ಧದಷ್ಟು ಮಹಿಳೆಯರಿದ್ದಾರೆ.  ಅವರೆಲ್ಲರಿಗೂ ಮೀಸಲಾಗಿ, ಶಿಕ್ಷಣ ಹಾಗೂ ಸಮಾನ ಕಾನೂನುಗಳನ್ನು ಸಂವಿಧಾನದ ಮೂಲಕ ಅಂಬೇಡ್ಕರ್ ಕೊಡದೇ ಹೋಗಿದ್ದರೆ ನಮ್ಮ ಇಡೀ ದೇಶ ವೈದಿಕಶಾಹಿಯ ಕರ್ಮಸಿದ್ದಾಂತದ ವರ್ಣಾಶ್ರಮದ ವ್ಯಾಧಿಯಲ್ಲಿ ನರಳಬೇಕಿತ್ತು. ಎಲ್ಲಾ ಜಾತಿ ಧರ್ಮದಲ್ಲಿರುವ ಪುರುಷ ಪ್ರಧಾನ ಪುರೋಹಿತಶಾಹಿಗಳ ಹಿಡಿತದಲ್ಲಿ ಸಿಕ್ಕು ಮಹಿಳೆಯರು ಗುಲಾಮಗಿರಿಯ ಬದುಕು ಸವೆಸಬೇಕಾಗುತ್ತಿತ್ತು. ಆದರೆ.. ಅಂಬೇಡ್ಕರರವರ ದೂರದೃಷ್ಟಿ ಹಾಗೂ ಸಮಾನತಾ ಸಿದ್ದಾಂತಗಳು ಇಂದು ಬಹುಸಂಖ್ಯಾತ ದಮನಿತ ಜನರಿಗೆ ಕನಿಷ್ಟ ಸ್ವಾಭಿಮಾನದ ಬದುಕನ್ನು ರೂಪಿಸಿ ಕೊಟ್ಟಿವೆ. ಮನುಸ್ಮೃತಿಯ ಅಸಮಾನತೆಯ ರೋಗಪೀಡಣೆಯಿಂದ ಸಾಧ್ಯವಾದಷ್ಟೂ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿವೆ. ಇದಕ್ಕಾಗಿಯಾದರೂ ಎಲ್ಲರೂ ಬಾಬಾಸಾಹೇಬರನ್ನು ನೆನಪಿಸಿಕೊಳ್ಳಬೇಕಾಗಿದೆ. ಅವರು ಹಾಕಿ ಕೊಟ್ಟ ಸ್ವಾತಂತ್ರ್ಯ ಸಮಾನತೆ  ಸ್ವಾಭಿಮಾನ ಹಾಗೂ ಸ್ವಾವಲಂಬನೆಯ ದಾರಿಯಲ್ಲಿ ಮುನ್ನಡೆಯಬೇಕಾಗಿದೆ.

ಆದರೆ.. ಈಗ ಬಹುಸಂಖ್ಯಾತ ದುಡಿಯುವ ವರ್ಗಗಳ ಸ್ವಾಭಿಮಾನದ ಸಂಕೇತವಾದ ಅಂಬೇಡ್ಕರರವರ ಹೆಸರನ್ನು ಮನುವಾದಿಗಳು ಬಳಸಿಕೊಂಡು ದಲಿತ ಶೂದ್ರ ಸಮುದಾಯಗಳ ದಿಕ್ಕು ತಪ್ಪಿಸುತ್ತಿದ್ದಾರೆ. ಸಮಾನತೆ ಬರುವವರೆಗೂ ಮೀಸಲಾತಿ ಇರಬೇಕೆಂದು ಬಯಸಿದ ಅಂಬೇಡ್ಕರರ ಆಶಯವನ್ನೇ ಸಾವಕಾಶವಾಗಿ ಇಲ್ಲವಾಗಿಸುವ ಹುನ್ನಾರಗಳು ನಡೆಯುತ್ತಿವೆ. ಉತ್ತರ ಪ್ರದೇಶದಲ್ಲಿ ಜನರಲ್ಲಿ  ಭ್ರಮೆಗಳನ್ನು ಬಿತ್ತಿ ಬಹುಮತ ಪಡೆದು ಆಡಳಿತದ ಚುಕ್ಕಾಣಿ ಹಿಡಿದ ಬಿಜೆಪಿ ಮೀಸಲಾತಿಯನ್ನು ರದ್ದು ಮಾಡುವ ಆದೇಶವನ್ನು ಹೊರಡಿಸಿದೆ. ಈ  ಪ್ಯಾಸಿಸ್ಟ್ ಪ್ರಭುತ್ವ ಇಡೀ ದೇಶವನ್ನು ಓಟ್ ರಾಜಕಾರಣದ ಮೂಲಕವೇ ಆಕ್ರಮಿಸಿಕೊಂಡು ಮೀಸಲಾತಿಯನ್ನೇ ತೆಗೆದುಹಾಕಿ ಮತ್ತೆ ದಲಿತ ದಮನಿತರನ್ನು ವಂಚಿತರನ್ನಾಗಿಸುವ ಶಡ್ಯಂತ್ರಗಳನ್ನು ಅಲ್ಲಗಳೆಯುವಂತಿಲ್ಲ. ಹೀಗೇನಾದರೂ ಆದರೆ.. ಅಂಬೇಡ್ಕರವರ ಸಮಾಜದಲ್ಲಿ  ಸಮಾನತೆಯನ್ನು ತರುವ ಉದ್ದೇಶವೇ ಸರ್ವನಾಶವಾಗುತ್ತದೆ. ಜೊತೆಗೆ ಪ್ಯಾಸಿಸ್ಟ್ ಪ್ರಭುತ್ವ ಶಕ್ತಿಯುತವಾದಂತೆ ಭಾರತದ ಸಂವಿಧಾನವೇ ಅವರ ಮನುವ್ಯಾಧಿಗೆ ತಕ್ಕಂತೆ ಬದಲಾವಣೆಗೊಳಗಾಗುತ್ತಾ ಕೊನೆಗೆ ಮನುಸ್ಮೃತಿಯೇ ಸಂವಿಧಾನವಾಗುವ ಅಪಾಯವನ್ನೂ ನಿರ್ಲಕ್ಷಿಸುವ ಹಾಗಿಲ್ಲಾ.

ಈಗ ಮನುವಾದಿ ಸಂಘಪರಿವಾರದ ಸಂತಾನಗಳಿಗೆ ಕಮ್ಯೂನಿಸ್ಟರಿಗಿಂತಾ ಅಂಬೇಡ್ಕರ್‌ವಾದಿಗಳೇ ಬಹಳ ಮುಖ್ಯ ಅಡತಡೆಯಾಗಿದ್ದಾರೆ. ಯಾಕೆಂದರೆ ಅಂಬೇಡ್ಕರರವನ್ನು ತಮ್ಮ ವಿಮೋಚನೆಯ ಹರಿಕಾರ ಎಂದು ನಂಬಿದವರ ಬಲು ದೊಡ್ಡ ಜನಸಂಖ್ಯೆ ಭಾರತದಲ್ಲಿದೆ. ಅಂಬೇಡ್ಕರರ ನೀಲಿ ಬಾವುಟದಡಿಯಲ್ಲಿ ಈ ದಮನಿತ ದಲಿತ ಶಕ್ತಿ ಒಂದಾಗಿ ನಿಂತರೆ ಮನುವಾದಿಗಳು ಮೂಲೆಗುಂಪಾಗುತ್ತಾರೆ. ಈ ಸತ್ಯದ ಅರಿವಿದ್ದ ಮೋದಿ ನೇತೃತ್ವದ ಬಿಜೆಪಿ ಪಕ್ಷ ಈಗ ಅಂಬೇಡ್ಕರ್ ಭಜನೆಯನ್ನು ಆರಂಭಿಸಿದೆ. ಅಂಬೇಡ್ಕರ್ ಹೆಸರಲ್ಲಿಯೇ ಬಹುಜನರನ್ನು ಒಡೆದು ಆಳುವ ಹುನ್ನಾರಗಳು ನಡೆಯುತ್ತಿವೆ. ದಲಿತರನ್ನು ದಿಕ್ಕುತಪ್ಪಿಸಿ ಇಲ್ಲದ ಭರವಸೆಗಳನ್ನು ತೋರಿಸಿ ಮತಗಳನ್ನು ಪಡೆದು ಇಡೀ ದೇಶದ ಮೇಲೆ ಪ್ರಭುತ್ವವನ್ನು ಸ್ಥಾಪಿಸಿ ವರ್ಣಬೇಧ ನೀತಿಯನ್ನು ಸಾವಕಾಶವಾಗಿ ಹೇರುವುದು ಸಂಘಪರಿವಾರದ ಹಿಡನ್ ಅಜೆಂಡಾ ಆಗಿದೆ. ಈ ಕುತಂತ್ರವನ್ನು ಮೊದಲು ದಲಿತ ಶೂದ್ರ ಸಮುದಾಯ ಅರಿಯಬೇಕಿದೆ.

ದಲಿತ ಸಮುದಾಯದ ನಾಯಕರುಗಳು ತಮ್ಮ ಅವಕಾಶವಾದಿತನವನ್ನು ಬದಿಗಿಟ್ಟು ಎಲ್ಲಾ ದಲಿತ ಸಂಘಟನೆಗಳನ್ನು ಒಂದು ಸಂಯುಕ್ತ ವೇದಿಕೆಯಡಿ ತಂದು ಮನುವಾದಿ ಮನಸ್ಥಿತಿಯ ಸಂಘಪರಿವಾರದ ಕೇಸರಿ ಪಡೆಯ ವಿರುದ್ದ  ನೀಲಿ ಪಡೆಯನ್ನು ಸಿದ್ದಗೊಳಿಸಬೇಕಿದೆ. ಚಿಕ್ಕ ಪುಟ್ಟ ರಾಜಕೀಯ ಅವಕಾಶಗಳ ಮೋಹಕ್ಕೊಳಗಾಗಿ ಅವರವರ ಕಾಲುಗಳನ್ನು ಅವರವರೇ ಎಳೆದುಕೊಳ್ಳುತ್ತಾ ಅಂಬೇಡ್ಕರ್ ರವರ ಹೆಸರಲ್ಲಿ ದಲಿತ ಸಂಘಗಳೆಂಬ ದ್ವೀಪಗಳನ್ನು ಕಟ್ಟಿ ಸರಕಾರಿ ಸವಲತ್ತುಗಳ ಫಲಾನುಭವಿಯಾಗುವಂತಹ ರಾಜೀಕೋರತನವನ್ನು ಈ ಎಲ್ಲಾ ನಾಯಕರುಗಳು ತೊರೆಯಬೇಕಿದೆ. ಅಂಬೇಡ್ಕರರವರು ಇದ್ದಿದ್ದರೆ ಅವರೂ ಸಹ ಇದನ್ನೇ ಬಯಸುತ್ತಿದ್ದರು.

ಅಂಬೇಡ್ಕರ್ ಈಗ ಕೇವಲ ತೋರುಂಬ ಲಾಭವಾಗದೇ ಅಸಮಾನತೆಯ ವಿರುದ್ದದ ಸಶಕ್ತ ಆಯುಧವಾಗಬೇಕಿದೆ. ಬಾಬಾಸಾಹೇಬರು ದಲಿತ ಸಮುದಾಯದವರ ವಿಜ್ರಂಭಣೆಗೆ ಕೇವಲ ಉತ್ಸವ ಮೂರ್ತಿಯಾಗದೇ ವಿಚಾರವಾದಕ್ಕೆ ಪ್ರೇರಣೆಯಾಗಬೇಕಿದೆ. ಅಂಬೇಡ್ಕರರವರನ್ನು ನಿಜಕ್ಕೂ ಒಪ್ಪಿಕೊಂಡು ಅಂಬೇಡ್ಕರ್ ವಾದವನ್ನು ಪ್ರತಿನಿಧಿಸುವ ಪ್ರತಿಯೊಬ್ಬರೂ ವೈದಿಕಶಾಹಿಯ ವಿರುದ್ಧ ಸಮರವನ್ನೇ ಸಾರಬೇಕಿದೆ. ಇಲ್ಲವಾದರೆ ಮನುವಾದಿ ಪ್ಯಾಸಿಸ್ಟ್‌ರು ಪ್ರಭಲಗೊಂಡು ಮತ್ತೆ ಇನ್ನೂರು ವರ್ಷಗಳ ಕಾಲ ಈ ದೇಶ ವೈದಿಕಶಾಹಿಯ ಆಡಳಿತದಲ್ಲಿ ನಲುಗುತ್ತದೆ. ಮತ್ತೆ ಇನ್ನೊಬ್ಬ ಸಮಾನತಾವಾದಿ ಅಂಬೇಡ್ಕರ್ ಹುಟ್ಟಿ ಬಂದು ಹೋರಾಟದ ಮುಂದಾಳತ್ವವಹಿಸಿಕೊಳ್ಳುವವರೆಗೂ ಇಡೀ ದಲಿತ ಶೂದ್ರ ಮಹಿಳಾ ಸಮುದಾಯ ವರ್ಣಾಶ್ರಮದ ಬಚ್ಚಲಿನಲ್ಲಿ ಹುಳುಗಳಂತೆ ಕೊಳೆಯಬೇಕಾಗುತ್ತದೆ. ಮುಂದಿನ ತಲೆಮಾರು ಸ್ವಾತಂತ್ರ್ಯ ಹಾಗೂ ಸ್ವಾಭಿಮಾನವನ್ನು ಕಳೆದುಕೊಂಡು ವೈದಿಕಶಾಹಿಯ ಅಡಿಯಾಳಾಗಿ, ಮನುವಾದಿಗಳ ಜೀತದಾರರಾಗಿ ಬದುಕನ್ನು ಸವೆಸಬೇಕಾಗುತ್ತದೆ. ಅಕಸ್ಮಾತ್ ಈಗಿನ ತಲೆಮಾರಿನವರ ಅವಕಾಶವಾದಿತನದಿಂದಾಗಿ ಮನುವ್ಯಾಧಿ ದೇಶಾದ್ಯಂತ ವ್ಯಾಪಿಸಿ ಬಹುಜನರನ್ನು ಬಲಿತೆಗೆದುಕೊಂಡರೆ ಅದನ್ನು ಮುಂದಿನ ಹಲವಾರು ತಲೆಮಾರು ಅನುಭವಿಸಬೇಕಾಗುತ್ತದೆ. ರಾಜೀತನವನ್ನು ಬಿಸಾಕಿ, ವ್ಯಯಕ್ತಿಕ ಅಹಂ ಪಕ್ಕಕ್ಕಿಟ್ಟು ಅಂಬೇಡ್ಕರರವರ ಆಶಯಗಳ ಸಾಕಾರಕ್ಕಾಗಿ ಅಂಬೇಡ್ಕರ್‌ವಾದಿಗಳು, ಅಂಬೇಡ್ಕರರ ಅನುಯಾಯಿಗಳು ಹಾಗೂ ಎಲ್ಲಾ ಪ್ರಗತಿಪರರು ಒಂದಾಗಿ ವೈದಿಕಶಾಹಿಗಳ ಹುನ್ನಾರಗಳ ವಿರುದ್ದ ನಿಲ್ಲಬೇಕಾದದ್ದು ಈಗಿನ ತುರ್ತು ಅಗತ್ಯವಾಗಿದೆ. ಅದು ಸಾಧ್ಯವಾಗದಿದ್ದರೆ ಮುಂದಿನ ತಲೆಮಾರು ನಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ ಎನ್ನುವ ಅರಿವಾದರೂ ಇರಬೇಕಾಗಿದೆ. ಅಂಬೇಡ್ಕರ್ ಪ್ರತಿಯೊಬ್ಬರಲ್ಲೂ ಜಾಗೃತಗೊಳ್ಳಬೇಕು ಹಾಗೂ ಮನುವಾದಿಗಳ ವಿರುದ್ದ ಮಾನವೀಯತಾವಾದ ಗೆಲ್ಲಬೇಕು ಎಂಬುದೇ ಈ ಲೇಖನದ ಆಶಯವಾಗಿದೆ. 

                         -ಶಶಿಕಾಂತ ಯಡಹಳ್ಳಿ
 


ಸೋಮವಾರ, ಏಪ್ರಿಲ್ 10, 2017

ತಹ ತಹ...82 ಮನುವಾದಿಗಳ ಅಸಲಿ ಮುಖವಾಡಾ ; ವರ್ಣಬೇಧ ನೋಡಾ :






ನಾವೆಲ್ಲ ಹಿಂದು, ನಾವೆಲ್ಲಾ ಒಂದು ಎನ್ನುವ ಮಾತು ಬಹುಜನರನ್ನು ಮರಳು ಮಾಡಿ ತಮ್ಮ ಪ್ಯಾಸಿಸ್ಟ್ ಸಾಮ್ರಾಜ್ಯ ಸ್ಥಾಪಿಸುವುದು ಸಂಘಪರಿವಾರದ ಹಿಡನ್ ಅಜೆಂಡಾ ಅನ್ನುವುದು ಬೇಕಾದಷ್ಟು ಸಲ ಸಾಬೀತಾಗಿದೆ. ಜಾತಿ ಧರ್ಮಗಳ ಜೊತೆಗೆ ವರ್ಣಬೇಧ ನೀತಿಯನ್ನು ತನ್ನ ಆಂತರ್ಯದಲ್ಲಿ ಕಾಪಿಟ್ಟುಕೊಂಡಿರುವ ಈ ವೈದಿಕ ಪುರೋಹಿತಶಾಹಿ ಪಡೆ ಇಡೀ ಸಮಾಜವನ್ನು ಒಡೆದಾಳುತ್ತಲೇ ಮನುಶಾಸ್ತ್ರ ಪ್ರಣೀತ ಆಳ್ವಿಕೆಯನ್ನು ಸ್ಥಾಪಿಸಲು ಏನೇನು ಬೇಕೋ ಅದನ್ನು ಮಾಡುತ್ತಲೇ ಬಂದಿದ್ದಾರೆ. ಇದಕ್ಕೆ ಲೇಟೆಸ್ಟ್ ಉದಾಹರಣೆ ಈ ದೇಶದ ಜನರನ್ನು ಚರ್ಮದ ಬಣ್ಣದ ಮೇಲೆ ವಿಭಾಗೀಕರಣ ಮಾಡಲು ಪ್ರಯತ್ನಿಸುತ್ತಿರುವುದು. ಇದು ಈಗಿನದು ಮಾತ್ರವಲ್ಲ.. ಮೊದಲಿನಿಂದಲೂ ಆರ್ಯ ದ್ವಾವಿಡ ಬೇಧವನ್ನು ವರ್ಣದ ಆಧಾರದ ಮೇಲೆ ಹುಟ್ಟುಹಾಕಿದ ಈ ಆರ್ಯಸಂತಾನ ಕಪ್ಪು ವರ್ಣೀಯರನ್ನು ಎರಡನೇ ದರ್ಜೆಯ ಪ್ರಜೆಗಳೆಂದೇ ಭಾವಿಸುತ್ತಾ ಬಂದಿದ್ದಾರೆ.

ಆರೆಸ್ಸೆಸ್ಸಿನ ಕೊಳೆತ ಮೆದುಳೊಂದು ಈಗ ಈ ವರ್ಣ ತಾರತಮ್ಯವನ್ನು ಬಹಿರಂಗವಾಗಿಯೇ ಹೇಳಿಕೊಂಡಿದೆ. ತರುಣ್ ವಿಜಯ್ ಎನ್ನುವ ಈ ವ್ಯಕ್ತಿ ಆರೆಸ್ಸೆಸ್ಸ್ ಮುಖವಾಣಿ ಪತ್ರಿಕೆಯಾದ ಪಾಂಚಜನ್ಯದ ಸಂಪಾದಕನಾಗಿದ್ದವ. ತನ್ನ ಕೋಮುದ್ವೇಷದ ವಿಕಾರತೆಗಳಿಂದಾಗಿಯೇ ಬಿಜೆಪಿಯಿಂದಾ ರಾಜ್ಯಸಭೆಯ ಸದಸ್ಯರೂ ಆಗಿದ್ದವ. ಈಗಲೂ ಆರೆಸ್ಸೆಸ್ ಕೃಪಾಶೀರ್ವಾದದಿಂದ ಆಪ್ರಿಕಾ ಪಾರ್ಲಿಮೆಂಟರಿ ಪ್ರೆಂಡ್‌ಶಿಪ್ ಗ್ರುಪ್ ನ ಅಧ್ಯಕ್ಷರಾಗಿರುವವ. ಆಗಿದ್ದೇನಪ್ಪಾ ಅಂತಂದ್ರೆ..


ಕತಾರ್ ಮೂಲದ ಅಲ್ ಜಝೀರಾ ಎನ್ನುವ ಸುದ್ದಿ ವಾಹಿನಿ ಕಾರ್ಯಕ್ರಮವೊಂದರಲ್ಲಿ ನಡೆದ ಚರ್ಚೆಯೊಂದರಲ್ಲಿ ಭಾಗವಹಿಸಿದ್ದ ತರುಣ್ ಮಹಾಶಯ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಭಾರತೀಯರು ಜನಾಂಗೀಯ ದ್ವೇಷಿಗಳಲ್ಲ. ಜನಾಂಗೀಯ ದ್ವೇಷಿಗಳಾಗಿದ್ದರೆ ದಕ್ಷಿಣ ಭಾರತದವರ ಜತೆ ಹೇಗೆ ಬದುಕುತ್ತಿದ್ದೆವು. ನಿಮಗೆ ಗೊತ್ತಲ್ಲಾ ತಮಿಳರು, ಕೇರಳಿಗರು, ಕರ್ನಾಟಕ ಮತ್ತು ಆಂದ್ರದವರ ಜತೆ ನಾವೇಕೆ ಬದುಕುತ್ತಿದ್ದೆವು? ಎಂದು ಮರುಪ್ರಶ್ನಿಸುತ್ತಾ ತನ್ನ ಮನದಾಳದ ಜನಾಂಗೀಯ ದ್ವೇಷವನ್ನು ಕಾರಿಕೊಂಡ. ಇದು ಈ ತರುಣ್ ವಿಜಯ್ ಎನ್ನುವ ಸಂಘಪರಿವಾರದ ಬುದ್ದಿಜೀವಿಯೊಬ್ಬನ ವ್ಯಯಕ್ತಿಕ ಅಭಿಪ್ರಾಯವಲ್ಲಾ.. ತಮ್ಮ ಬಿಳಿ ಬಣ್ಣದ ಬಗ್ಗೆ ಶೇಷ್ಟತೆಯ ವ್ಯಸನ ಹೊಂದಿರುವ ಉತ್ತರ ಭಾರತದ ಆರ್ಯ ಮೂಲದವರ ಒಟ್ಟಾರೆ ಅಭಿಪ್ರಾಯವಾಗಿದೆ. ಸಮಾಜವನ್ನು ಜಾತಿ ಧರ್ಮ ಹಾಗೂ ವರ್ಣದ ಆಧಾರದ ಮೇಲೆ ಶತಮಾನಗಳಿಂದ ಒಡೆದು ಆಳುತ್ತಲೇ ಬಂದಿರುವ ಈ ಮನುವಾದಿ ಸಂತಾನಗಳಿಂದ ಇದಕ್ಕಿಂತಾ ಹೆಚ್ಚಿಗೆ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ?

ಇವತ್ತೂ ಸಹ ಉತ್ತರ ಭಾರತದವರಲ್ಲಿ ಅದರಲ್ಲೂ ಈ ವರ್ಣ ಶ್ರೇಷ್ಠತೆಯ ವ್ಯಸನಪೀಡಿತರಲ್ಲಿ ದಕ್ಷಿಣ ಭಾರತದವರ ಬಗ್ಗೆ ಒಂದು ರೀತಿಯ ಅಸಡ್ಡೆ ಮಡುಗಟ್ಟಿದೆ. ದಕ್ಷಿಣ ಭಾರತೀಯರನ್ನು ಅಣಕಿಸಲು ಮದ್ರಾಸಿಗಳೆಂದು ಕರೆದು ಮೂದಲಿಸಲಾಗುತ್ತಿದೆ. ತಮ್ಮ ಹಾಗೆ ಹಿಂದಿ ಭಾಷೆ ಮಾತಾಡದವರನ್ನು, ತಮ್ಮ ಹಾಗೆ ಬಿಳಿ ಚರ್ಮ ಹೊಂದಿಲ್ಲದವರನ್ನು ಮದ್ರಾಸಿ ಎಂದು ಅವಹೇಳನ ಮಾಡುವ ಮೂಲಕ ತಮ್ಮ ಅಸಮಾಧಾನವನ್ನು ಉತ್ತರದ ಉತ್ತಮರೆಂದುಕೊಂಡವರು ತೋರಿಸುತ್ತಾರೆ. ಅಂದರೆ ಈ ಉತ್ತರಭಾರತದ ಆರ್ಯೊತ್ತಮರ(?) ಕಣ್ಣಲ್ಲಿ ದಕ್ಷಿಣದವರು ಅಧಮರು, ಅನಾಗರಿಕರಾಗಿ ಕಾಣಿಸುತ್ತಾರೆ. ಅದಕ್ಕಾಗಿಯೇ ಆರ್ಯ ರಾಮನನ್ನು ಆರಾಧಿಸುತ್ತಲೇ ದ್ವಾವಿಢ ರಾವಣನನ್ನು ರಾಕ್ಷಸ ಎಂದು ಕಥೆ ಕಟ್ಟಿದವರು ಇದೇ ಆರ್ಯಜನಾಂಗದವರು. ಎಲ್ಲೆಲ್ಲಿಂದಲೋ ಒಲಸೆ ಬಂದ ಈ ಆರ್ಯ ಜನಾಂಗದವರು, ಕಾಡುವಾಸಿಗಳಾಗಿದ್ದ ಶ್ರಮಿಕರಾದ ದ್ರಾವಿಡ ಜನಾಂಗದವರನ್ನು ರಾಕ್ಷಸರು, ಹಿಂಸಕರು, ಅನಾಗರಿಕರು ಎಂದು ಆರೋಪಿಸಿ ಹಿಂಸೆ ಆಕ್ರಮಣಗಳ ಮೂಲಕ ಸಂವಾರ ಮಾಡಲು ಪ್ರಯತ್ನಿಸಿದವರು ಇದೇ ಆರ್ಯಪುತ್ರರು. ದೇವತೆಗಳು ಹಾಗೂ ರಾಕ್ಷಸರ ಕಥೆಗಳನ್ನು ರೋಚಕವಾಗಿ ಕಟ್ಟಿ ಆರ್ಯವಿರೋಧಿ ರಕ್ಕಸ ರಾಜರ ಸಂವಾರಕ್ಕಾಗಿ ಅವತಾರಗಳನ್ನು ಹುಟ್ಟುಹಾಕಿದರು. ಆರ್ಯರು ಉತ್ತಮರು ಹಾಗೂ ಶಿಷ್ಟ ರಕ್ಷಕರು ಮತ್ತು ದ್ರಾವಿಡರು ಅಧಮರು ಹಾಗೂ ದುಷ್ಟರು ಎಂದು ಸಾಬೀತು ಪಡಿಸಲು ಶಾಸ್ತ್ರ ಪುರಾಣ ಮಹಾಕಾವ್ಯಗಳನ್ನು ಹುಟ್ಟುಹಾಕಿದವರು. ಇಂತದೇ ಉತ್ತಮರೆನಿಸಿಕೊಂಡವರ ಸಂತಾನಗಳು  ಇಂದು ಮತ್ತೆ ಚರ್ಮದ ಬಣ್ಣದ ಆಧಾರದ ಮೇಲೆ ಮನುಷ್ಯರನ್ನು ಒಡೆದಾಳಲು ಪ್ರಯತ್ನಿಸುತ್ತಿವೆ. ಅಂತಹ ಶ್ರೇಷ್ಟತೆ ವ್ಯಸನದ ವ್ಯಾಧಿಪೀಡಿತ ಸಂಘಪರಿವಾರದ ಕುಡಿಯೇ ಈ ತರುಣ್ ವಿಜಯ್.

ಇದು ತರುಣ್ ಒಬ್ಬನ ಅನಿಸಿಕೆಯಾಗಿದ್ದರೆ ನಿರ್ಲಕ್ಷಿಸಬಹುದಾಗಿತ್ತು. ಆದರೆ.. ಆರ್ಯಕುಲತಿಲಕರೆಂಬ ಭ್ರಮೆಯಲ್ಲಿರುವ ವೈದಿಕಶಾಹಿಗಳ ಒಟ್ಟಾರೆ ಅಭಿಪ್ರಾಯವಾಗಿದ್ದು ಅಪಾಯಕಾರಿಯಾಗಿದೆ. ದಕ್ಷಿಣ ಭಾರತೀಯ ಸಂಘಪರಿವಾರದ ಸಮರ್ಥಕರುಗಳು ಸಂಘಿಗಳ ಹಿಡನ್ ಅಜೆಂಡಾ ಆಗಿರುವ ಈ ವರ್ಣಬೇಧ ನೀತಿಯನ್ನು ಮೊದಲು ತಿಳಿದುಕೊಳ್ಳಬೇಕಿದೆ. ಈ ದೇಶದ ಮತಿಕೆಟ್ಟು ಮುಂದೊಮ್ಮೆ ಈ ಸಂಘಿಗಳ ಪ್ಯಾಸಿಸ್ಟ್ ಸರ್ವಾಧಿಕಾರ ಈ ದೇಶದಲ್ಲಿ ಜಾರಿಯಾಗಿ ಮನುಸ್ಮೃತಿ ಸಂವಿಧಾನವಾದಲ್ಲಿ ದಕ್ಷಿಣ ಭಾರತದ ದ್ರಾವಿಡರೆಲ್ಲಾ ಎರಡನೇ ದರ್ಜೆಯ ಪ್ರಜೆಗಳಾಗುತ್ತಾರೆ. ಅವರು ಹುಟ್ಟಿನಿಂದ ಬ್ರಾಹ್ಮಣರಾಗಿದ್ದರೂ ಕರಿ ಬ್ರಾಹ್ಮಣರೆಂದು ಕರೆಯಲ್ಪಟ್ಟು ಶೋಷಣೆಗೆ ಹಾಗೂ ದೂಷಣೆಗೆ ಒಳಗಾಗುವುದರಲ್ಲಿ ಸಂದೇಹವಿಲ್ಲ. ಬಹತೇಕರು ಸಂಘಪರಿವಾರದ ದೇಶಭಕ್ತಿ, ದೇಶಪ್ರೇಮ, ಹಿಂದುತ್ವಗಳೆಂಬೋ ಘೋಷಣೆ ಹಾಗೂ ಭಾಷಣಗಳಿಗೆ ಮರುಳಾಗಿ ಆರೆಸ್ಸೆಸ್, ಬಿಜೆಪಿ ಹಾಗೂ ಅವುಗಳ ಅಂಗ ಉಪಾಂಗಗಳನ್ನು ಬೆಂಬಲಿಸುತ್ತಿದ್ದಾರೆ. ಸಂಘಪರಿವಾರವು ಹಿಂದೂ ದೇಶವನ್ನು ಕಟ್ಟುತ್ತದೆ, ಆಗ ಹಿಂದೂಗಳೆಲ್ಲ ಅಣ್ಣತಮ್ಮಂದಿರಂತೆ ಸುಖವಾಗಿ ಬದುಕಬಹುದು ಎಂದು ನಂಬಿಕೊಂಡಿದ್ದಾರೆ. ಆದರೆ ಅಸಂಖ್ಯಾತ ಅಸ್ಪೃಶ್ಯರನ್ನು ಮನುಷ್ಯರನ್ನು ಮುಟ್ಟಿಸಿಕೊಳ್ಳದ, ಅಗಣಿತ ಶೂದ್ರರನ್ನು ಸಾಮಾಜಿಕವಾಗಿ ಸಮಾನರೆಂದು ಎಂದೂ ಒಪ್ಪಿಕೊಳ್ಳದ ಈ ವೈದಿಕ ಧರ್ಮಿಯ ಸಂಘಾಧಿಪತಿಗಳು ಅದು ಹೇಗೆ ಹಿಂದೂ ಸಾಮ್ರಾಜ್ಯ ಕಟ್ಟುತ್ತಾರೆ. ವರ್ಣಾಶ್ರಮ ಧರ್ಮಕ್ಕೆ ಬದ್ದರಾಗಿರುವ ಈ ಕಟ್ಟರ್ ಮನುವಾದಿಗಳು ಮತ್ತೆ ಗರ್ಭಗುಡಿಯಲ್ಲಿ ತಾವು ಕುಳಿತು ಶೂದ್ರರನ್ನು ದೇವಸ್ಥಾನದ ಹೊಸ್ತಿಲಿನಾಚೆಯೇ ಇಟ್ಟು ಅಸ್ಪೃಶ್ಯರನ್ನು ಹೊಲಗೇರಿಯಲ್ಲಿರಿಸಿ ನೋಡಿ ನಾವು ಹಿಂದೂ ದೇಶ ಕಟ್ಟಿದ್ದೇವೆ.. ಇನ್ನು ಮೇಲೆ ಮನುಸ್ಮೃತಿಯ ವರ್ಣಾಶ್ರಮ ಪದ್ದತಿಯಂತೆ ನಾವೆಲ್ಲಾ ನಮ್ಮ ನಮ್ಮ ಕೆಲಸಗಳನ್ನು ಮಾಡುತ್ತಾ ಸುಖವಾಗಿದ್ದುಬಿಡೋಣ ಎಂದು ಆದೇಶಿಸುತ್ತಾರೆ.

ಸಂಘಪರಿವಾರದ ಮೆದುಳಿನಲ್ಲಿರುವ ಈ ಒಳಹುನ್ನಾರಗಳನ್ನು ಎಲ್ಲಿಯವರೆಗೂ ಅಹಿಂದ ಸಮುದಾಯದಲ್ಲಿರುವ ಸಂಘಪರಿವಾರದ ಸಮರ್ಥಕರು ಅರ್ಥಮಾಡಿಕೊಳ್ಳುವುದಿಲ್ಲವೋ ಅಲ್ಲಿವರೆಗೂ ಈ  ಬಿಳಿ ತೊಗಲಿನ ಶ್ರೇಷ್ಟತೆಯ ವ್ಯಸನಪೀಡಿತ ಮನುವಾದಿಗಳ ಒಡೆದಾಳುವ ಶಡ್ಯಂತ್ರ ನಿಲ್ಲುವುದಿಲ್ಲಾ. ದಕ್ಷಿಣ ಭಾರತದ ಬ್ರಾಹ್ಮಣ ಸಮುದಾಯವೂ ಉತ್ತರ ಭಾರತದ ವೈದಿಕರ ವರ್ಣ-ಬೇಧದ ಹುನ್ನಾರಗಳನ್ನು ಅರಿಯಬೇಕಿದೆ. ಇಲ್ಲವಾದರೆ ಹಿಂದೂ ರಾಷ್ಟ್ರದ ಹೆಸರಲ್ಲಿ ಎಲ್ಲಾ ಸಮುದಾಯವನ್ನು ತಮ್ಮ ಹಿತಾಸಕ್ತಿಗಾಗಿ  ಬಳಸಿಕೊಂಡು, ತಮ್ಮ ಗುರಿ ಮುಟ್ಟಿದ ಮೇಲೆ ಎಲ್ಲರನ್ನೂ ಎರಡನೇ ದರ್ಜೆಯ ಪ್ರಜೆಗಳನ್ನಾಗಿಸಿ ಇಡೀ ದೇಶವನ್ನು ತಮ್ಮಿಚ್ಚೆಗನುಗುಣವಾಗಿ ಆಳುವುದರಲ್ಲಿ ಸಂದೇಹವೇ ಇಲ್ಲಾ. ತರುಣ್‌ನಂತಹ ಕಟ್ಟರ್ ಸಂಘಿಯ ಬಾಯಲ್ಲಿ ಅದರ ಮುನ್ಸೂಚನೆ ಮೂಡಿಬಂದಿದೆ. ಈಗಲಾದರೂ ಸಂಘಪರಿವಾರದ ಬಗ್ಗೆ ಸಾಪ್ಟ್‌ಕಾರ್ನರ್ ಹೊಂದಿರುವವರು, ಆರೆಸ್ಸೆಸ್ಸ ಬಿಜೆಪಿಯ ಮೇನಿಯಾಗೆ ಒಳಗಾಗಿ ಸ್ವಂತಿಕೆಯನ್ನೇ ಕಳೆದುಕೊಂಡವರು ಹಾಗೂ ದಕ್ಷಿಣ ಭಾರತದ ಕಪ್ಪುವರ್ಣೀಯರು ಎಚ್ಚರಗೊಳ್ಳಬೇಕಿದೆ. ಜಾತಿ ಧರ್ಮ ಹಾಗೂ ಚರ್ಮದ ಬಣ್ಣದ ಮೇಲರಿಮೆಯಿಂದಾ ದುರಹಂಕಾರ ತೋರಿ ಮನುಷ್ಯರನ್ನು ಒಡೆದಾಳುತ್ತಿರುವ ಮನುವಾದಿ ಮನಸ್ಥಿತಿಯ ಜೀವವಿರೋಧಿಗಳನ್ನು ಶತಾಯ ಗತಾಯ ವಿರೋಧಿಸಬೇಕಿದೆ. ಕಪ್ಪುವರ್ಣೀಯ ದ್ರಾವಿಡರೊಂದಿಗೆ ಹೊಂದಿಕೊಂಡು ಹೋಗುತ್ತಾ ದ್ರಾವಿಡರ ಮೇಲೆ ಉಪಕಾರ ಮಾಡಿದ್ದೇವೆಂದು ಹೇಳಿಕೊಳ್ಳುವ ದುರಹಂಕಾರಿ ಆರ್ಯಪುತ್ರರನ್ನು ದಿಕ್ಕರಿಸಬೇಕಿದೆ. ಜಾತಿ ಧರ್ಮ ಹಾಗೂ ವರ್ಣದ ಆಧಾರದ ಮೇಲೆ ಯಾರೇ ಆಗಲಿ ಮನುಷ್ಯರಲ್ಲಿ ಬಿನ್ನಬೇಧ ಮಾಡಿದರೆ ಅಂತವರನ್ನು ಹಾಗೂ ಅಂತವರ ಹಿಂದಿರುವ ಶಕ್ತಿಗಳನ್ನು ಜನವಿರೋಧಿಗಳು ಎಂದು ಗುರುತಿಸಿ ನಿರಾಕರಿಸಬೇಕಿದೆ. ಇಲ್ಲವಾದರೆ ಈ ದೇಶವನ್ನು ಉತ್ತರದ ಮನುವಾದಿ ಪ್ಯಾಸಿಸ್ಟ್‌ಗಳು ಆಳುವುದರಿಂದ ತಪ್ಪಿಸಲಂತೂ ಸಾಧ್ಯವಿಲ್ಲಾ. ಈ ಪ್ಯಾಸಿಸ್ಟ್ ಆಡಳಿತದಲ್ಲಿ ಕಪ್ಪುವರ್ಣೀಯ ದ್ರಾವಿಡರು ಗುಲಾಮರಾಗಿ ಬದುಕು ಸವೆಸುವುದನ್ನು ನಿಲ್ಲಿಸಲೂ ಸಾಧ್ಯವಿಲ್ಲಾ..  


                -ಶಶಿಕಾಂತ ಯಡಹಳ್ಳಿ

         


ಶನಿವಾರ, ಏಪ್ರಿಲ್ 1, 2017

ತಹ ತಹ... 81 ಬಂಡವಾಳಶಾಹಿ ಹುನ್ನಾರಕ್ಕೆ ಮೈಸೂರು ಬ್ಯಾಂಕ್ ಬಲಿ :




ಆರ್ಥಿಕ ಕ್ಷೇತ್ರದಲ್ಲಿ 104 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಮೈಸೂರು ಬ್ಯಾಂಕ್ (ಎಸ್‌ಬಿಎಂ) ಮಾರ್ಚ 31 ರಂದು ಎಸ್‌ಬಿಐ ಜೊತೆಗೆ ವಿಲೀನಗೊಂಡು ಖಾಯಂ ಆಗಿ ನೇಪತ್ಯಕ್ಕೆ ಸೇರಲಿದೆ. ಮೈಸೂರಿನ ಅರಸು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೆಜೆಸ್ಟಿಕ್‌ನಲ್ಲಿ (ಕೆಜಿ ರಸ್ತೆ) ಕೊಡಮಾಡಿದ ಭೂಮಿ ಹಾಗೂ ಇಪ್ಪತ್ತು ಲಕ್ಷ ರೂಪಾಯಿಗಳ ಇಡಿಗಂಟಿನೊಂದಿಗೆ 1913 ಅಕ್ಟೋಬರ್ 2 ರಂದು ಬೆಂಗಳೂರಿನಲ್ಲಿ ಆರಂಭಗೊಂಡ ಎಸ್‌ಬಿಎಂ ಹೆಸರು ಇನ್ನು ಬರೀ ನೆನಪು ಮಾತ್ರ.

ಈ ಬ್ಯಾಂಕ್ ಕರ್ನಾಟಕ ರಾಜ್ಯದ ಆರ್ಥಿಕ ವಹಿವಾಟಿಗೆ ಕೊಟ್ಟ ಕೊಡುಗೆ ಅಪಾರವಾದದ್ದು. ಒಟ್ಟಾರೆ ಇರುವ 1075 ಶಾಖೆಗಳಲ್ಲಲಿ ಶೆ.90 ರಷ್ಟು ಶಾಖೆಗಳು ಕರ್ನಾಟಕದಲ್ಲೇ ಇವೆ. ಹನ್ನೊಂದು ಸಾವಿರದಷ್ಟು ಉದ್ಯೋಗಿಗಳು ಕೆಲಸ ಮಾಡುವ ಕರ್ನಾಟಕದ ಬ್ರಹತ್ ಬ್ಯಾಂಕ್ ಇದು. ಎಂದೂ ನಷ್ಟವನ್ನೇ ಅನುಭವಿಸದೆ ಕೊಟ್ಯಾಂತರ ರೂಪಾಯಿ ಲಾಭದಲ್ಲಿದ್ದ ಈ ಬ್ಯಾಂಕಿನ ಅಸಲಿ ಅಸ್ತಿತ್ವವನ್ನೇ ಅಳಿಸಿ ಹಾಕಲು ಕೇಂದ್ರ ಸರಕಾರ ಭಾರೀ ಪ್ಲಾನ್ ಮಾಡಿದ್ದಂತೂ ಸತ್ಯ.

ಇಷ್ಟಕ್ಕೂ ಲಾಭದಾಯಕವಾಗಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದ ಎಸ್‌ಬಿಎಂನ್ನು ಯಾಕೆ ವಿಲೀನಗೊಳಿಸಲಾಯ್ತು? ಯಾಕೆಂದರೆ ದೇಶದಲ್ಲೇ ಅತೀ ದೊಡ್ಡ ಬ್ಯಾಂಕನ್ನಾಗಿ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ (ಎಸ್‌ಬಿಐ) ವನ್ನು ಮಾಡಬೇಕು ಎನ್ನುವ ಉದ್ದೇಶ ಕೇಂದ್ರ ಸರಕಾರದ್ದು. ಇದಕ್ಕಾಗಿ ಎಸ್‌ಬಿಐ ಬ್ಯಾಂಕ್ ಜೊತೆಗೆ ಅಸೋಸಿಯೇಟ್ ಆಗಿದ್ದ ಉಳಿದೆಲ್ಲಾ ಬ್ಯಾಂಕಗಳನ್ನು ಮುಖ್ಯ ಬ್ಯಾಂಕ್ ಜೊತೆಗೆ ವಿಲೀನಗೊಳಿಸಿ ಬ್ರಹತ್ ಬ್ಯಾಂಕೊಂದನ್ನು ಅಸ್ತಿತ್ವಕ್ಕೆ ತರುವ ಯೋಚನೆ ಕೇಂದ್ರ ಸರಕಾರದ್ದು. ಅಂತರಾಷ್ಟ್ರೀಯ ಬಹುರಾಷ್ಟ್ರೀಯ ಬ್ಯಾಂಕುಗಳನ್ನು ಎದುರಿಸಲು, ಖಾಸಗಿ ಬ್ಯಾಂಕುಗಳ ಜೊತೆ ಸ್ಪರ್ದಿಸಲು ಏಕೀಕೃತ ಬ್ರಹತ್ ಬ್ಯಾಂಕನ್ನಾಗಿ ಎಸ್‌ಬಿಐ ಬ್ಯಾಂಕನ್ನು ರೂಪಿಸುವುದು ಸರಕಾರದ ಆಶಯವೆಂದು ಕೇಂದ್ರ ಸರಕಾರ ಹೇಳಿಕೊಳ್ಳುತ್ತಿದೆ. ಬಹುರಾಷ್ಟ್ರೀಯ ಬ್ಯಾಂಕುಗಳಿಗೆ ದೇಶದೊಳಗೆ ಬಿಟ್ಟುಕೊಂಡು ಲೂಟಿಗೆ ಅವಕಾಶ ಕೊಟ್ಟವರೂ ಇದೇ ಕೇಂದ್ರ ಸರಕಾರದವರು. ಈಗ ಅವರ ಜೊತೆಗೆ ಸ್ಪರ್ದಿಸಲಾಗದೆ ಬ್ಯಾಂಕ್ ವಿಲೀನದಂತಹ ಪರ್ಯಾಯಗಳನ್ನು ಹುಡುಕುತ್ತಿರುವುದೂ ಸಹ ಕೇಂದ್ರ ಸರಕಾರದ ಆರ್ಥಿಕ ನೀತಿ ನಿರೂಪಕರು. ಆಳುವ ಸರಕಾರ ಯಾವುದೇ ಪಕ್ಷದ್ದಾಗಿರಲಿ ಯಾವುದೇ ಬಣ್ಣದ್ದಾಗಿರಲಿ ಎಲ್ಲವೂ ಕಾರ್ಪೊರೇಟ್ ಕಂಪನಿಗಳ ಹಿತಾಸಕ್ತಿಯನ್ನು ಕಾಪಾಡುತ್ತಾ ಫಲಾನುಭವಿಗಳಾಗಿರುವುದು ಬಹಿರಂಗ ಸತ್ಯ.  ಆದರೆ.. ಬ್ಯಾಂಕ್ ವಿಲೀನದ ಹಿಂದಿರುವ ಅಸಲಿ ವಿಷಯ ಬೇರೆಯದೇ ಇದೆ.

2008 ರಲ್ಲಿ ಇಡೀ ಜಗತ್ತೇ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾಗ, ಅಮೇರಿಕದ ಬಹುತೇಕ ಬ್ಯಾಂಕುಗಳು ದಿವಾಳಿ ಎದ್ದಾಗ ಭಾರತದ ಬ್ಯಾಂಕಿಂಗ್ ಕ್ಷೇತ್ರ ಆರ್ಥಿಕ ಸುರಕ್ಷತೆಯನ್ನು ಕಾಪಾಡಿಕೊಂಡು ಬಂದಿತ್ತು. ಆದರೆ ಬರುಬರುತ್ತಾ  ದೊಡ್ಡ ದೊಡ್ಡ ಬಂಡವಾಳಶಾಹಿಗಳಿಗೆ ಬೇಕಾಬಿಟ್ಟಿ ಸಾಲಗಳನ್ನು ಕೊಟ್ಟ ಎಸ್‌ಬಿಐ ಕೊಟ್ಯಾಂತರ ರೂಪಾಯಿ ಮರಳಿ ಬಾರದ ಸಾಲವನ್ನು ತನ್ನ ಮೇಲೆ ಹೇರಿಕೊಂಡಿತು. ಸಾರ್ವಜನಿಕ ಲೆಕ್ಕಪತ್ರಗಳ ಸಂಸದೀಯ ಸಮಿತಿಯ  ಪ್ರಕಾರ ಸದ್ಯ ಸಾರ್ವಜನಿಕ ವಲಯದ ಬ್ಯಾಂಕುಗಳು ನೀರಿರುವ ತೀರಿಸಲಾಗದ ಸಾಲದ ಮೊತ್ತವೇ ಸುಮಾರು 6.7 ಲಕ್ಷ ಕೋಟಿಗಳಷ್ಟಿದೆ. ಇದರಲ್ಲಿ ಮುಕ್ಕಾಲು ಪಾಲು ಸಾಲವನ್ನು ಪಡೆದಿರುವುದು ಕಾರ್ಪೋರೇಟ್ ಕಂಪನಿಗಳು ಹಾಗೂ ಅವರ ಕುಟುಂಬದವರು. ಮುಖ್ಯ ಹಣಕಾಸು ಸಲಹೆಗಾರರಾದ ಅರವಿಂದ್ ಸುಬ್ರಮಣಿಯನ್ ಈಗಾಗಲೇ ಕಾರ್ಪೋರೆಟ್ ಕ್ಷೇತ್ರಕ್ಕೆ ನೀಡಿರುವ ಸಾಲವನ್ನು ಮನ್ನಾ ಮಾಡಬೇಕು ಎಂದು ಹೇಳಿಕೆ ನೀಡಿದ್ದಾರೆ. ಅವರ ಪ್ರಕಾರ ನಾವು ಒಪ್ಪಿಕೊಂಡಿರುವ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿ ಕೆಟ್ಟ ಸಾಲಗಳನ್ನು ಮನ್ನಾ ಮಾಡುವುದಷ್ಟೇ ಈಗ ಸರಕಾರದ ಮುಂದೆ ಉಳಿದಿರುವ ದಾರಿ ಅಂತೆ. ಇನ್ನೊಂದು ಕಡೆ ಶೇಕಡಾ 1 ರಷ್ಟಿರುವ ರೈತರ ತೀರಿಸಲಾಗದ ಸಾಲವನ್ನು  ಮನ್ನಾ ಮಾಡುವುದು  ಕೆಟ್ಟ ಆರ್ಥಿಕತೆ ಎಂದು ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾದ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಹೇಳುತ್ತಿದ್ದಾರೆ. ಇದರರ್ಥ ಇಷ್ಟೇ ಜನರ ಹಣದ ವಹಿವಾಟಿನಿಂದಾ ನಡೆಯುತ್ತಿರುವ ಬ್ಯಾಂಕಿನ ಬಹುತೇಕ ಹಣ ಬಂಡವಾಳಶಾಹಿಗಳಿಗಾಗಿ ವಿನಿಯೋಗವಾಗಿದೆ. ಕೊಟ್ಟ ಸಾಲವನ್ನು ಮನ್ನಾ ಮಾಡುವ ಮೂಲಕ ಕಾರ್ಪೋರೇಟ್ ಸೆಕ್ಟರ್‌ಗಳ ಹಿತಾಸಕ್ತಿಯನ್ನು ಕಾಪಾಡಲು ಬ್ಯಾಂಕುಗಳು ಬಳಕೆಯಾಗುತ್ತಿವೆ. ಇದೇ ಕಾಪೋರೇಟ್ ಕಂಪನಿಗಳು ಆಳುವ ಸರಕಾರವನ್ನು ಸಾಕಿ ಸಲಹುತ್ತವೆ. ಆಳುವ ಸರಕಾರಗಳು ಕಾಪೋರೇಟ್ ಕಂಪನಿಗಳಿಗೆ ಲಾಭ ಮಾಡಿಕೊಡುವ ದೃಷ್ಟಿಯಿಂದಾ ಈ ದೇಶದ ಆರ್ಥಿಕತೆಯನ್ನು ರೂಪಿಸುತ್ತವೆ.

ಹೀಗಾಗಿ.. ಕಾರ್ಪೋರೇಟ್ ಕಂಪನಿಗಳು ತೀರಿಸಲಾಗದ ಸಾಲವನ್ನು ಮನ್ನಾ ಮಾಡುವ ಮೂಲಕ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಅದರಲ್ಲೂ ಎಸ್‌ಬಿಐ ಬ್ಯಾಂಕಿಗೆ ತಡೆದುಕೊಳ್ಳಲಾದ ನಷ್ಟ ಉಂಟಾಗುತ್ತದೆ. ಎಲ್ಲಾ ಸಾಲವನ್ನು ಮನ್ನಾ ಮಾಡಿದರೆ ಈ ಬ್ಯಾಂಕೇ ದಿವಾಳಿಯಾಗುತ್ತದೆ. ಅತ್ತ ಕಾರ್ಪೊರೇಟ್ ಕಂಪನಿಗಳ ಸಾಲವೂ ಮನ್ನಾ ಆಗಬೇಕು ಹಾಗು ಇತ್ತ ಎಸ್‌ಬಿಐ ಬ್ಯಾಂಕ್ ಆರ್ಥಿಕ ನಷ್ಟದಿಂದ ಪಾರಾಗಬೇಕು ಎನ್ನುವ ಕೇಂದ್ರ ಸರಕಾರದ ಹುನ್ನಾರದ ಭಾಗವೇ ಈ ಎಸ್‌ಬಿಐ ಅಸೋಸಿಯೇಟ್ ಬ್ಯಾಂಕುಗಳ ವಿಲೀನ. ಅದರಲ್ಲೂ ಎಸ್‌ಬಿಎಂ ಬ್ಯಾಂಕ್ ಗಳಿಕೆಯಲ್ಲಿ ಮುಂದಿದೆ. ಈ ಬ್ಯಾಂಕು 2016 ನವೆಂಬರ ತಿಂಗಳವರೆಗೆ 1,33,000 ಕೋಟಿಯಷ್ಟು ವಹಿವಾಟನ್ನು ಮಾಡಿದೆ.  ಇಂತಹ ಲಾಭದಾಯಕ ಬ್ಯಾಂಕನ್ನು ವಸೂಲಾಗದ ಸಾಲದಿಂದಾಗಿ ಸಂಕಷ್ಟದಲ್ಲಿರುವ ಎಸ್‌ಬಿಐ ಬ್ಯಾಂಕಿನ ಜೊತೆಗೆ ಸೇರಿಸಿದರೆ ಆ  ಬ್ಯಾಂಕನ್ನು ಆರ್ಥಿಕ ದಿವಾಳಿತನದಿಂದ ರಕ್ಷಿಸಬಹುದು ಎನ್ನುವುದು ಈ ವಿಲೀನ ಪ್ರಕ್ರಿಯೆಯ ಹಿಂದಿರುವ ಮುಖ್ಯ ತಂತ್ರಗಾರಿಕೆಯಾಗಿದೆ.  

ಈ ಬ್ಯಾಂಕುಗಳ ವಿಲೀನವಾದರೆ ಆಡಳಿತ ವೆಚ್ಚವನ್ನು ಕಡಿತಗೊಳಿಸಬಹುದು. ಕೇಂದ್ರಿಕೃತವಾಗಿ ಒಂದೇ ಕಛೇರಿಯ ಮೂಲಕ ಎಲ್ಲವನ್ನು ನಿಯಂತ್ರಿಸಬಹುದು. ಹಾಗೂ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸಿ ಆಡಳಿತಾತ್ಮಕವಾಗಿ ವ್ಯಯವಾಗುವ ಹಣವನ್ನು ಉಳಿತಾಯ ಮಾಡಬಹುದು ಎನ್ನುವುದೂ ಸಹ ಈ ಮಹಾ ವಿಲೀನದ ಹಿಂದಿರುವ ಉದ್ದೇಶ. ಆದರೆ ಈ ಎಸ್ ಬಿ ಎಂ ಬ್ಯಾಂಕಿನ ಉದ್ಯೋಗವನ್ನು ನಂಬಿಕೊಂಡಿದ್ದ ಸಾವಿರಾರು ಜನರು ಕೆಲಸವನ್ನು ಕಳೆದುಕೊಂಡು ಸಂಕಷ್ಟಕ್ಕೊಳಗಾಗುವುದನ್ನು ತಪ್ಪಿಸಲು ಸಾದ್ಯವೇ ಇಲ್ಲಾ. ಇದಕ್ಕಿಂತಲೂ ಹೆಚ್ಚಾಗಿ ಈ ಬ್ಯಾಂಕಿನ ಜೊತೆಗೆ ಅಲ್ಲಿರುವ ಉದ್ಯೋಗಿಗಳು ಭಾವನಾತ್ಮಕ ಸಂಬಂಧವನ್ನು ಹೊಂದಿರುತ್ತಾರೆ. ಈಗ ಬ್ಯಾಂಕೇ ಅಸ್ತಿತ್ವ ಕಳೆದುಕೊಂಡಿದ್ದರಿಂದ ಅವರಿಗೆಲ್ಲ ಅನಾಥ ಭಾವ ಕಾಡುವುದರಲ್ಲಿ ಸಂದೇಹವೇ ಇಲ್ಲಾ. ಈ ಎಸ್‌ಬಿಐ ಎನ್ನುವುದು ಇಡೀ ಇಂಡಿಯಾಕ್ಕೆ ಸಂಬಂಧಿಸಿದ ಬ್ಯಾಂಕ್ ಆದರೆ ಬಹುತೇಕ ರಾಜ್ಯಗಳಲ್ಲಿ ಪ್ರಾದೇಶಿಕವಾಗಿ ವಹಿವಾಟು ನಡೆಸುವ ಅಸೋಸಿಯೇಟ್ ಬ್ಯಾಂಕ್ ಗಳಿವೆ. ಕರ್ನಾಟಕದಲ್ಲಿ ಸ್ಟೇಟ್ ಬ್ಯಾಂಕ್ ಆಪ್ ಮೈಸೂರು ಇದ್ದಂತೆ ಆಂದ್ರದಲ್ಲಿ ಸ್ಟೇಟ್ ಬ್ಯಾಂಕ್ ಆಪ್ ಹೈದರಾಬಾದ್ ಹೀಗೆಯೇ ಪಟಿಯಾಲಾ, ಜೈಪೂರ್, ಟ್ರವಂಕೂರು.. ಇಂಡೋರ್ ಮುಂತಾದವುಗಳು. ಈಗ ಮೈಸೂರು ಬ್ಯಾಂಕ್ ಜೊತೆಗೆ ಜೈಪೂರ್, ಪಟಿಯಾಲಾ, ಹೈದರಾಬಾದ್ ಹಾಗೂ ಮಹಿಳಾ ಬ್ಯಾಂಕ್.. ಒಟ್ಟು ೫ ಬ್ಯಾಂಕ್‌ಗಳನ್ನು ಎಸ್‌ಬಿಐ ಜೊತೆಗೆ ಆರ್‌ಬಿಐ ಆದೇಶದಂತೆ ವಿಲೀನಗೊಳಿಸಲಾಗಿದೆ. ಇವುಗಳೆಲ್ಲಾ ಆಯಾ ರಾಜ್ಯಗಳಲ್ಲಿ ಲಾಭದಾಯಕವಾಗಿ ನಡೆಯುವ ಬ್ಯಾಂಕುಗಳು. ಎಲ್ಲವನ್ನೂ ಕೇಂದ್ರದ ಆಡಳಿತಕ್ಕೆ ತರಬೇಕು ಎನ್ನುವುದೇ ಕೇಂದ್ರ ಸರಕಾರದ ಅಜೆಂಡಾ ಆಗಿದ್ದರಿಂದಾ ಈ ಎಲ್ಲಾ ಪ್ರಾದೇಶಿಕ ವಹಿವಾಟಿನ ಬ್ಯಾಂಕುಗಳ ಅಸ್ತಿತ್ವವನ್ನೇ ಕೊನೆಗಾಣಿಸಿ ಕೇಂದ್ರೀಕೃತವಾಗಿ ಒಂದೇ ಬ್ಯಾಂಕ್ ಮಾಡುವ ಹಿಡನ್ ಅಜೆಂಡಾ ಸಹ ಕೇಂದ್ರ ಸರಕಾರದ್ದಾಗಿದೆ. ಈ ವಿಲೀನದಿಂದಾಗಿ ಎಸ್ ಬಿಐ ಜಾಗತಿಕವಾಗಿ ದೊಡ್ಡ ಬ್ಯಾಂಕ್ ಆಗಲಿದ್ದು ಅದರ ಅಸೆಟ್ 37 ಟ್ರಿಲಿಯನ್ ಅಂದರೆ 37 ಲಕ್ಷ ಕೋಟಿಯಾಗಲಿದೆ. ಒಟ್ಟು 50 ಕೋಟಿ ಗ್ರಾಹಕರ ಸಮೂಹವನ್ನು ಹೊಂದುತ್ತದೆ.  ಈಗಾಗಲೇ 2008 ರಲ್ಲಿ ಸ್ಟೇಟ್ ಬ್ಯಾಂಕ್ ಆಪ್ ಸೌರಾಷ್ಟ್ರ ಮತ್ತು 2010 ರಲ್ಲಿ ಸ್ಟೇಟ್ ಬ್ಯಾಂಕ್ ಆಪ್ ಇಂಡೋರ್ ಎಸ್‌ಬಿಐ ಜೊತೆಗೆ ವಿಲೀನಗೊಂಡಿವೆ. ಈಗ ಇನೈದು ಬ್ಯಾಂಕುಗಳು ವಿಲೀನಗೊಂಡಿವೆ. ಈ ಮಹಾ ವಿಲೀನವನ್ನು ತಡೆಯುವ ಶಕ್ತಿ ಬ್ಯಾಂಕ್ ಯುನಿಯನ್ ಗಳಿಗೆ ಇತ್ತು. ಆದರೆ ಆ ಯೂನಿಯನ್ ಗಳೇ ಈಗ ಅಶಕ್ತವಾಗಿ ಕೇವಲ ಸಾಂಕೇತಿಕ ಪ್ರತಿಭಟನೆಗಳಿಗೆ ಸೀಮಿತವಾದವು. ಉಗ್ರ ಹೋರಾಟದ ಮೂಲಕ ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ವಿಲೀನವನ್ನು ತಡೆಯಬಹುದಾದ ಪ್ರಾಮಾಣಿಕ ಪ್ರಯತ್ನಗಳೂ ಸಹ ಈ ಬ್ಯಾಂಕುಗಳ ಕಾರ್ಮಿಕ ಸಂಘಟನೆಗಳಿಂದಾ ಆಗಲಿಲ್ಲಾ. ಹೋಗಲಿ ಪ್ರತಿಪಕ್ಷಗಳಾದರೂ  ಆರ್ ಬಿ ಐ  ಆದೇಶದ ಮೂಲಕ ಬ್ಯಾಂಕ್ ವಿಲೀನಗೊಳಿಸಲು ನಿರ್ಣಯಿಸಿದ ಕೇಂದ್ರ ಸರಕಾರವನ್ನು ಐಕ್ಯ ಹೋರಾಟದ ಮೂಲಕ ವಿರೋಧಿಸಬಹುದಾಗಿತ್ತು. ಆದರೆ ಎಲ್ಲಾ ರಾಷ್ಟ್ರೀಯ ಪಕ್ಷಗಳೂ ಸಹ ಕಾರ್ಪೋರೇಟ್ ಕಂಪನಿಗಳಿಂದ  ಫಲಾನುಭವಿಗಳಾಗಿದ್ದರಿಂದಾ ಹಾಗೂ ಬಂಡವಾಳಶಾಹಿಗಳ ಕೃಪಾಕಟಾಕ್ಷದಲ್ಲಿ ಇರುವುದರಿಂದಾ ವಿರೋಧಿಸುವ ತಾಕತ್ತನ್ನು ಕಳೆದುಕೊಂಡಿದ್ದವು. ಹೀಗಾಗಿ ಈ ಮಹಾವಿಲೀನ ನಡೆದೇ ಹೋಯಿತು. 


ಮೈಸೂರು ಬ್ಯಾಂಕ್ ಮೊದಲಿನಿಂದಲೂ ಗ್ರಾಹಕ ಸ್ನೇಹಿ ಬ್ಯಾಂಕ್ ಆಗಿದೆ. ಅನೇಕ ಬ್ಯಾಂಕೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಲೇ ಬಂದಿದೆ. ಕನ್ನಡದ ಸಾಂಸ್ಕೃತಿಕ ಲೋಕಕ್ಕೆ ಕೊಡುಗೆಯನ್ನಿತ್ತಿದೆ. ನಾಟಕೋತ್ಸವಗಳನ್ನು ಆಯೋಜಿಸಿದೆ ಹಾಗೂ ಪ್ರಾಯೋಜಿಸಿದೆ. ಕರ್ನಾಟಕದ ಆರ್ಥಿಕ ಸಂಪನ್ಮೂಲಗಳಿಂದ ಪಡೆದ ಲಾಭದ ಒಂದು ಪಾಲನ್ನು ನಾಡು ನುಡಿ ಸಂಸ್ಕೃತಿಗಾಗಿ ಬಳಕೆ ಮಾಡುತ್ತಾ ಬಂದಿದೆ. ಆದರೆ.. ಈಗ ವಿಲೀನ ಪ್ರಕ್ರಿಯೆಯಿಂದಾಗಿ ಕನ್ನಡದ ಘಮಲು ಕಡಿತಗೊಂಡು ಬೇರೆ ಭಾಷೆಯ ಅಧಿಕಾರಿಗಳು ಹಾಗೂ ನೌಕರರು ಬ್ಯಾಂಕಿನಲ್ಲಿ ತುಂಬಿಕೊಳ್ಳುತ್ತಾರೆ. ಇಲ್ಲಿಯ ಭಾಷೆ ಹಾಗೂ ಸಂಸ್ಕೃತಿಯ ಗಂಧ ಗಾಳಿ ಗೊತ್ತಿಲ್ಲದ ಅವರಿಂದಾ ಸಾಂಸ್ಕೃತಿಕ ಸಹಕಾರವನ್ನು ನಿರೀಕ್ಷಿಸುವುದೂ ವ್ಯರ್ಥ. ಹೀಗಾಗಿ ಎಸ್‌ಬಿಎಂ ಎನ್ನುವ ಕರ್ನಾಟಕದ ಆರ್ಥಿಕ ಕ್ಷೇತ್ರದ ಹೆಮ್ಮೆಯ ಬ್ಯಾಂಕ್ ತನ್ನ ಅಸಲಿ ಅಸ್ತಿತ್ವವನ್ನು ಕಳೆದುಕೊಳ್ಳುವುದು ಎಂದರೆ ಪ್ರಾದೇಶಿಕ ಸೊಗಡನ್ನು ಕಳೆದುಕೊಂಡಂತೆ. ಇಲ್ಲಿವರೆಗೂ ಬೆಂಗಳೂರಿನ ಹೆಡ್ ಕ್ವಾರ್ಟರ್ ಮೂಲಕ ಎಸ್‌ಬಿಎಂ ಬ್ಯಾಂಕ್ ಕಾರ್ಯನಿರ್ವಹಿಸುತ್ತಿತ್ತು. ಕರ್ನಾಟಕದ ನಾಡು ನುಡಿಗೆ ಪೂರಕವಾಗಿ ಸ್ಪಂದಿಸುತ್ತಿತ್ತು. ಆದರೆ ವಿಲೀನದ ನಂತರ ಎಲ್ಲಾ ನಿಯಂತ್ರಣವೂ ಸಹ ಮುಂಬೈನಲ್ಲಿರುವ ಎಸ್‌ಬಿಐ ಹೆಡ್ ಕ್ವಾರ್ಟರ್ ಮೂಲಕವೇ ನಡೆಯುತ್ತದೆ. ಪ್ರಾದೇಶಿಕ ಸಂವಹನ ಕಡಿತಗೊಳ್ಳುತ್ತದೆ. ಏನೇ ಆಗಲಿ ಕಳೆದೊಂದು ಶತಮಾನದಿಂದ ಕರ್ನಾಟಕದ ಆರ್ಥಿಕತೆಯ ಪ್ರಮುಖ ಕೊಂಡಿಯೊಂದು ಕಳಚಿಕೊಂಡಂತಾಯಿತು. ಬಂಡವಾಳಶಾಹಿಗಳ ಹಿತಾಸಕ್ತಿ ಕಾಪಾಡುವ ಕೇಂದ್ರ ಸರಕಾರಗಳ ಅರಾಜಕ ಆರ್ಥಿಕ ವಹಿವಾಟುಗಳ ಆಟಕ್ಕೆ ಕರ್ನಾಟಕದ ಹೆಮ್ಮೆಯ ಬ್ಯಾಂಕೊಂದು ಬಲಿಯಾಯಿತು.   

              -ಶಶಿಕಾಂತ ಯಡಹಳ್ಳಿ