ಶುಕ್ರವಾರ, ಏಪ್ರಿಲ್ 28, 2017

ತಹ ತಹ…. 89 ಬಸವ ಜಯಂತಿಗೊಂದೇ ವಚನ ಸಾಕು; ಎಲ್ಲರೂ ಮನುಷ್ಯರಾಗಬೇಕು :





ಮತ್ತೊಂದು ಬಸವ ಜಯಂತಿ ಬಂದಿದೆ. ಪ್ರತಿಸಲದಂತೆ ಬಸವ ಜಯಂತಿ ಎನ್ನುವುದು ವಾರ್ಷಿಕ ಧಾರ್ಮಿಕ ಆಚರಣೆಯಂತಾಗಿದೆ. ಎಲ್ಲಾ ಸರಕಾರಿ ಕಛೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಹಾಕಲು ಸರಕಾರದ ಆದೇಶವಾಗಿದೆ.  ಬಸವಣ್ಣನವರ ಹೆಸರಲ್ಲಿ ಭಜನೆ ಭಾಷಣಗಳು ನಾಡಿನಾದ್ಯಂತ ಪ್ರತಿದ್ವನಿಸುತ್ತಿವೆ. ಪರಸ್ಪರ ಶುಭಾಷಯಗಳು ವಿನಿಮಯವಾಗುತ್ತಿವೆ. ಆದರೆ.. ಬಸವಣ್ಣನವರ ತತ್ವಾದರ್ಶಗಳು ವ್ಯಕ್ತಿಯ ಅಂತರಂಗದ ಅರಿವಿಗೆ ಮುಟ್ಟದೇ ಕೇವಲ ಬಹಿರಂಗಾಚರಣೆಗಳಿಗೆ ಸೀಮಿತವಾಗಿರುವುದು ವಿಪರ್ಯಾಸಕರವಾಗಿದೆ.   

ಶರಣರ ಸಿದ್ದಾಂತದ ಮೇಲೆ ನಿಜವಾಗಿಯೂ ಒಲವಿದ್ದರೆ.. ಯಾರಾದರೂ ಬಸವಾನುಯಾಯಿ ಎಂದು ಹೇಳಿಕೊಳ್ಳುತ್ತಿದ್ದರೆ .. ಅಂತವರು ಬಸವಣ್ಣನವರ ಸಾವಿರಾರು ವಚನಗಳನ್ನು ಅರಗಿಸಿಕೊಳ್ಳುವುದೇನೂ ಬೇಕಾಗಿಲ್ಲಾ, ಶರಣರ ಸಹಸ್ರಾರು ವಚನಗಳ ಅಧ್ಯಯನದ ಅಗತ್ಯವೂ ಇಲ್ಲಾ.. ನಿಜವಾಗಿ ಮನುಷ್ಯನಾಗಲು ಬಸವಣ್ಣನವರ ಒಂದೇ ಒಂದು ವಚನವನ್ನು ಬಸವಾನುಯಾಯಿಗಳಾದ ಎಲ್ಲರೂ ತಮ್ಮ ಬದುಕಲ್ಲಿ ಅಳವಡಿಸಿಕೊಂಡರೆ ಸಾಕು ಪರಸ್ಪರ ಶಾಂತಿ ಸೌಹಾರ್ಧತೆ ನೆಮ್ಮದಿಯಿಂದಾ ಸಾಮುದಾಯಿಕ ಬದುಕು ಕಟ್ಟಿಕೊಳ್ಳಲು ಸಾಧ್ಯ.

ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ,
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ದಿ,
ಇದೇ ನಮ್ಮ ಕೂಡಲಸಂಗಮ ದೇವನೊಲಿಸುವ ಪರಿ

ಎನ್ನುವ ಅತ್ಯಂತ ಸರಳವಾದ ವಚನ ಬಹುತೇಕರಿಗೆ ಕಂಠಗತವಾಗಿದೆ. ಬಸವಾನುಯಾಯಿಗಳು ತಮ್ಮ ಎಲ್ಲಾ ಸಭೆ ಸಮಾರಂಭ ಕೂಟಗಳಲ್ಲಿ ಇದನ್ನು ಹೇಳುತ್ತಾ ಕೇಳುತ್ತಾ ಇರುತ್ತಾರೆ. ಆದರೆ.. ಈ ವಚನ ಹೇಳಿದಂತೆ ಯಾರೆಂದರೆ ಯಾರೂ ನಡೆದುಕೊಳ್ಳಲು ಹೋಗುತ್ತಿಲ್ಲಾ.. ಈ ಮಾತಿಗೆ ಬಸವ ತತ್ವ ಪ್ರಚಾರಕರು ಎಂದುಕೊಂಡ ಶರಣ ಮಠ ಪೀಠಗಳ ಜಗದ್ಗುರುಗಳೂ ಹೊರತಾಗಿಲ್ಲಾ.

ಈಗ ಈ ವಚನವೇ ನೇತ್ಯಾತ್ಮಕವಾಗಿ ಬದಲಾಗಿದೆ. ಬದಲಾಗುತ್ತಿರುವ ಕಾಲದ ಆವೇಗದಲ್ಲಿ ತನ್ನ ಚಹರೆಯನ್ನು ಬದಲಿಸಿಕೊಂಡಿದೆ.

ಕಳಬೇಕು ಕೊಲಬೇಕು, ಹುಸಿಯ ನುಡಿಯಲು ಬೇಕು,
ಮುನಿಯಬೇಕು, ಅನ್ಯರಿಗೆ ಅಸಹ್ಯಪಡಬೇಕು,
ತನ್ನ ಬಣ್ಣಿಸಬೇಕು, ಇದಿರ ಹಳಿಯಲುಬೇಕು,
ಹೀಗೆ ಅಂತರಂಗವ ತಿದ್ದಿ,  ಬಹಿರಂಗಶುದ್ದಿ ಎಂದು ತೋರಿ,
ಇದೇ ನಮ್ಮ ದುರಾಸೆಗಳ ವಲಸಿಕೊಳ್ಳುವ ಪರಿ


ಎಂಬುದು ಬಹುತೇಕ ವ್ಯಕ್ತಿಯ ಅಂತರಂಗದ ಅಭೀಷ್ಟೆಯಾಗಿದೆ. ಅಕಸ್ಮಾತ್ ಯಾರಾದರೂ ಈ ವಚನವನ್ನು ಅಕ್ಷರಶಃ ಪಾಲಿಸಲು ಆರಂಭಿಸಿದರೆ ಆಗ ಸಹಜೀವಿಗಳಿಂದ ಅಪಹಾಸ್ಯಕ್ಕೊಳಗಾಗುವ ಹಾಗೂ ಬದುಕಿನಲ್ಲಿ ಏನನ್ನೂ ಸಾಧಿಸದ ಅಪ್ರಯೋಜಕ ವ್ಯಕ್ತಿ ಎಂದು ಸಮಾಜ ನಿಂದಿಸುತ್ತದೆ. ಕಳ್ಳತನ, ಸುಳ್ಳುತನ, ಸಿಟ್ಟು ಅಸಹನೆ, ಶ್ರೇಷ್ಠತೆಯ ವ್ಯಸನ ಹಾಗೂ ಅಸಹಿಷ್ಣುತತೆಗಳೇ ಮನುಷ್ಯನ ಬದುಕಿನ ಭಾಗವಾಗಿರುವಾಗ ಹಾಗೂ ಬಂಡವಾಳಶಾಹಿ ಪ್ರಭುತ್ವ ಎನ್ನುವುದು ಅಂತಹ ಭ್ರಷ್ಟ ವ್ಯವಸ್ಥೆಯೊಂದನ್ನು ಕಟ್ಟಿಕೊಟ್ಟಿರುವಾಗ ವ್ಯಕ್ತಿ ಬಸವತತ್ವಕ್ಕೆ ಬದ್ದನಾಗಿರಬೇಕು ಎನ್ನುವುದೇ ಅತೀ ಆದರ್ಶವಾದವೆನಿಸುತ್ತದೆ. ಹೀಗಾಗಿ ಬಸವಾದಿ ಶಿವಶರಣರ ವಚನಗಳು ಹಾಗೂ ವಸವತತ್ವ ಶರಣ ಸಿದ್ದಾಂತಗಳು ಕೇವಲ ಹೇಳಲಿಕ್ಕೆ ಕೇಳಲಿಕ್ಕೆ ಹಾಗೂ ತಮಗನುಕೂಲಕರವಾದ ರೀತಿಯಲ್ಲಿ ಬಳಸಲಿಕ್ಕೆ ಮಾತ್ರ ಬಳಕೆಯಾಗುತ್ತಿವೆಯೇ ಹೊರತು ಅಂತರಂಗಶುದ್ದಿಗಾಗಿ ಅಲ್ಲ ಎನ್ನುವುದೇ ಈ ಕಾಲದ ಬಹು ದೊಡ್ಡ ದುರಂತ. ಯಾರು ಲಿಂಗಾಯತರು ಎಂದು ಹೇಳಿಕೊಳ್ಳುತ್ತಾರೋ, ಯಾರು ಬಸವಣ್ಣನವರನ್ನು ತಮ್ಮ ಆದರ್ಶ ಎಂದು ನಂಬಿಕೊಂಡಿದ್ದಾರೋ.. ಯಾರು ನಿಜವಾದ ಅರ್ಥದಲ್ಲಿ ಮನುಷ್ಯರಾಗಬೇಕು ಎಂದುಕೊಂಡಿದ್ದಾರೋ ಅಂತವರೆಲ್ಲಾ ಬದುಕಿನಾದ್ಯಂತ ರೂಢಿಸಿಕೊಳ್ಳಬೇಕಾದದ್ದು ಬಸವಣ್ಣನವರ ಕಳಬೇಡ ಕೊಲಬೇಡ.. ವಚನವೊಂದನ್ನೇ. ಈ ವಚನದ ಆಶಯವನ್ನು ಮರೆತು ಅಂತರಂಗವ ಶುದ್ದಿಗೊಳಿಸಿಕೊಳ್ಳದೇ ಬಹಿರಂಗದ ಆಚರಣೆಗಿಳಿದರೆ ಅದು ಬಸವಣ್ಣನವರಿಗೆ ಮಾಡಿದ ಅವಮಾನವಾಗಿದೆ. ಬಸವ ಜಯಂತ ಆಚರಣೆಯೇ ವ್ಯರ್ಥವೆನಿಸುತ್ತದೆ. ಬಸವಾದಿ ಶರಣರ ಕನಿಷ್ಟ ತತ್ವ ಸಿದ್ದಾಂತ ಆದರ್ಶಗಳನ್ನು ದಿನನಿತ್ಯದ ಬದುಕಲ್ಲಿ ಅಳವಡಿಸಿಕೊಳ್ಳದೇ ಹೋದರೆ ಅಂತವರು ಬಸವಣ್ಣನವರ ಹೆಸರನ್ನು ಹೇಳುವುದು ಕೇವಲ ತೋರುಂಭ ಲಾಭವಾಗುತ್ತದೆ.ಮನುಷ್ಯ ಮೂಲಭೂತವಾಗಿ ಮೃಗ. ಅಂತರ್ಗತವಾದ ತನ್ನ ಮೃಗೀಯ ಸ್ವಭಾವವನ್ನು ಬಿಟ್ಟು ನಿಜವಾದ ಮನುಷ್ಯನಾಗಬೇಕು ಎಂದರೆ ಕೆಲವೊಂದು ಆದರ್ಶಗಳನ್ನು ಅಳವಡಿಸಿಕೊಳ್ಳಲೇಬೇಕು. ಅದರಲ್ಲಿ ಬಸವಣ್ಣನವರ ಈ ಒಂದೇ ಒಂದು ವಚನ ಪ್ರಾಕೃತಿಕವಾಗಿ ಬಂದ  ಮೃಗೀಯ ಸ್ವಭಾವವನ್ನು ಬದಲಾಯಿಸಿ ಮನುಷ್ಯರನ್ನಾಗಿಸಲು ಬಲು ದೊಡ್ಡ ಪ್ರೇರಣೆಯನ್ನು ನೀಡುತ್ತದೆ.  ಮನುಕುಲದ ಒಳಿತಿಗೆ.. ಅಂತರಂಗದ ಪರಿವರ್ತನೆಗೆ ಇದೊಂದು ವಚನ ಬೇಕಾದಷ್ಟಾಯಿತು. 


ಬುದ್ದನ ಅಷ್ಟಾಂಗ ಮಾರ್ಗವೂ ಸಹ ಇಂತಹುದೇ ಆದರ್ಶವನ್ನು ಹೇಳುತ್ತದೆ.  ಪೂರ್ಣವಾದ ದೃಷ್ಟಿ, ಆಲೋಚನೆ, ನುಡಿ, ನಡೆ, ಬದುಕು, ಕ್ರಿಯೆ, ಶ್ರದ್ಧೆ ಹಾಗೂ ಏಕಾಗ್ರತೆಗಳೆಂಬ ಅಷ್ಟಮ ಮಾರ್ಗಗಳು ಮನುಷ್ಯನ ಅಂತರಂಗ ಮತ್ತು ಬಹಿರಂಗ ಶುದ್ಧಿಗೆ ಅಗತ್ಯವಾದವುಗಳು ಎಂದು ಬುದ್ಧ ಪ್ರತಿಪಾದಿಸಿದ್ದಾರೆ. ಬದುಕನ್ನು ನೋಡುವ ದೃಷ್ಟಿಯನ್ನು ಬದಲಾಯಿಸಿಕೊಂಡು, ಎಲ್ಲರ ಒಳಿತಿನ ಕುರಿತು ಆಲೋಚಿಸಿ, ನುಡಿ ನಡೆಯಲ್ಲಿ ಸಾಮ್ಯತೆಯನ್ನು ತಂದುಕೊಂಡು ಬದುಕನ್ನು ರೂಪಿಸಿಕೊಳ್ಳಬೇಕು.  ಹಾಗೂ ಹೀಗೆ ಬದುಕನ್ನು ರೂಪಿಸಿಕೊಳ್ಳಲು ಅಪಾರವಾದ ಶ್ರದ್ಧೆ ಹಾಗೂ ಏಕಾಗ್ರತೆ ಬೇಕಾಗುತ್ತದೆ.. ಇದರಿಂದಾಗಿ ನಿರ್ವಾಣದ ಹಾದಿ ಸುಗಮವಾಗುತ್ತದೆ ಎನ್ನುವುದು ಬುದ್ದ ಮನುಕುಲಕೆ ತೋರಿದ ಬೆಳಕಾಗಿದೆ. ಬಸವಣ್ಣನವರೂ ಸಹ ಅದನ್ನೇ ತಮ್ಮ ಕಳಬೇಡ ವಚನದಲ್ಲಿ ಪ್ರತಿಪಾದಿಸಿದ್ದಾರೆ. ಅಂತರಂಗ ಹಾಗೂ ಬಹಿರಂಗ ಶುದ್ಧಿಯನ್ನು ಪಡೆದು ದೇವನನ್ನು ಮೆಚ್ಚಿಸಲು ಏನನ್ನು ಮಾಡಬಾರದು ಎಂಬುದನ್ನು ಸರಳವಾದ ವಚನದ ಮೂಲಕ ಹೇಳಿ ಪ್ರತಿಯೊಬ್ಬ ವ್ಯಕ್ತಿಯ ಬದುಕಿನ ಸಾಕ್ಷಾತ್ಕಾರದ ಮಾರ್ಗವನ್ನು ತೋರಿದ್ದಾರೆ. ಬುದ್ಧ ಮತ್ತು ಬಸವ ಮನುಕುಲದ ಮಹಾ ಬೆಳಕು. ಅವರು ತೋರಿದ ಅರಿವಿನ ಮಾರ್ಗದಲ್ಲಿ ನಡೆದವರ ಬದುಕು ಸಾರ್ಥಕವಾಗಲು ಸಾಧ್ಯ. ಇಲ್ಲವಾದರೆ ಈ ಸಂಕೀರ್ಣ ಬದುಕಿನ ಸಂಕಷ್ಟ ಸಂಕೋಲೆಗಳು ಅಭೇದ್ಯ..


ಇಡೀ ಕಳಬೇಡ ಕೊಲಬೇಡ.. ವಚನವನ್ನು ಬದುಕಲ್ಲಿ ರೂಢಿಸಿಕೊಳ್ಳುವುದು ಅಷ್ಟು ಕಷ್ಟಕರಾವಾದರೆ ಪ್ರತಿ ಸಲದ ಬಸವ ಜಯಂತಿಯಂದು ಈ ವಚನದ ಒಂದೊಂದು ಸಾಲನ್ನಾದರೂ ಅಳವಡಿಸಿಕೊಳ್ಳೋಣ. ಈ ವರ್ಷ ಯಾವುದೇ ರೀತಿಯ ಕಳ್ಳತನವನ್ನು ಮಾಡದೇ ನಮ್ಮದಲ್ಲದ ವಸ್ತುಗಳನ್ನು ಹೇಗಾದರೂ ಮಾಡಿ ಪಡೆಯಲೇ ಬೇಕೆಂಬ ವಾಮಮಾರ್ಗಗಳನ್ನು ಅನುಸರಿಸದೇ, ಮತ್ತೊಬ್ಬರ ಶ್ರಮದ ಫಲವನ್ನು ಕದ್ದು ನಮ್ಮ ಬದುಕನ್ನು ರೂಪಿಸಿಕೊಳ್ಳದೇ ಕಾಯಕ ಮಾಡಿ ಬದುಕುವ ಕೆಲಸವನ್ನು ಮೊದಲು ಅನುಷ್ಟಾನಕ್ಕೆ ತರಬೇಕಿದೆ. ಹೀಗೆ ಪ್ರತಿ ವರ್ಷದ ಬಸವ ಜಯಂತಿಯಂದು ಈ ವಚನದ ಒಂದೊಂದು ವಾಕ್ಯವನ್ನು ಪರಿಪಾಲಿಸುವ ಪ್ರತಿಜ್ಞೆ ಮಾಡಿ ಅದನ್ನು ಆಚರಣೆಯಲ್ಲಿ ತಂದರೆ ಬಸವಣ್ಣನವರ ಹೆಸರು ಹೇಳಲು ನಾವು ಯೋಗ್ಯರಾಗುತ್ತೇವೆ. ಲಿಂಗಾಯತರು ಎಂದು ಹೇಳಿಕೊಳ್ಳುವ ಅರ್ಹತೆ ಪಡೆಯುತ್ತೇವೆ. ಮನುಷ್ಯರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಭಾಗ್ಯದಾತರಾಗುತ್ತೇವೆ. ಒಂದೇ ಒಂದು ವಚನವನ್ನು ಪಾಲನೆ ಮಾಡದ ಮೇಲೆ ಯಾಕೆ ಬಸವಣ್ಣನವರ ಜಯಂತಿ ಆಚರಿಸಬೇಕು? ಒಂದು ವಚನದ ಒಂದು ಸಾಲನ್ನಾದರೂ ಬದುಕಲ್ಲಿ ಅಳವಡಿಸಿಕೊಳ್ಳದಿದ್ದರೆ ಯಾಕೆ ಲಿಂಗಾಯತ ಎಂದು ಹೇಳಿಕೊಳ್ಳಬೇಕು? ನಡೆ ನುಡಿ ಸಿದ್ದಾಂತವಾಗದೇ ಹೋದಲ್ಲಿ ಯಾಕೆ ಮನುಷ್ಯರು ಎಂದು ಅಂದುಕೊಳ್ಳಬೇಕು. ಅರಿವಿನ ಬೆಳಕು ಮೂಡದೇ ಅಂತರಂಗ ಶುದ್ಧಿ ಅಸಾಧ್ಯ. ಅಂತರಂಗ ಶುದ್ಧಿಯಾಗದೇ ಬಹಿರಂಗಶುದ್ಧಿಯಾಗದು, ಅಂತರಂಗ ಹಾಗೂ ಬಹಿರಂಗ ಶುದ್ಧಿಗಳಾಗದೇ ಮನುಷ್ಯ ಮನುಷ್ಯನಾಗಲು ಸಾಧ್ಯವಿಲ್ಲಾ. ಅಲ್ಲಿವರೆಗೂ ಬಸವ ಜಯಂತಿಗೆ ನಿಜವಾದ ಅರ್ಥವೆಂಬುದಿಲ್ಲಾ..  ತೋರುಂಭ ಲಾಭವೇ ಎಲ್ಲಾ....

- ಶಶಿಕಾಂತ ಯಡಹಳ್ಳಿ







 



ತಹ ತಹ ....88 ರಾಮಾನುಜರಿಗೆ ಸಹಸ್ರ ವರ್ಷ; ಮೂಡಲಿಲ್ಲ ಸಮಾನತೆಯ ಹರ್ಷ.






ವೈದಿಕ ಧರ್ಮದ ವರ್ಣ ವ್ಯವಸ್ಥೆಯಲ್ಲಿ ಸಂಚಲನವನ್ನುಂಟು ಮಾಡಿದವರು ಶ್ರೀರಾಮಾನುಜರು. ಕಾಲದ ಒತ್ತಡದ ವಿವೇಕಕ್ಕೆ ಸ್ಪಂದಿಸಿದ ರಾಮಾನುಜರು ಕಟ್ಟರ್ ವೈದಿಕ ಪರಂಪರೆಗೆ ಬದಲಾವಣೆ ತರಲೇಬೇಕಾದ ಸಂದಿಗ್ದ ಪರಿಸ್ಥಿತಿಯಲ್ಲಿದ್ದರು.

ಅದು 11 ನೇ ಶತಮಾನ. ವೈದಿಕಶಾಹಿಯ ಅತಿರೇಕಗಳನ್ನು ದಿಕ್ಕರಿಸಿ ಸಮಾನತೆ ಸಾರಿದ ಬೌದ್ಧ ಧರ್ಮ ಜನರಿಗೆ ಅಪ್ಯಾಯಮಾನವಾಗಿತ್ತು. ಇನ್ನೊಂದು ಕಡೆ ಅಹಿಂಸೆಯನ್ನು ಪ್ರತಿಪಾದಿಸಿದ ಜೈನ ಧರ್ಮ ಸಶಕ್ತವಾಗತೊಡಗಿತ್ತು. ಮಗದೊಂದು ಕಡೆಗೆ ಹೊರದೇಶದಿಂದಾಗುವ ಮುಸ್ಲಿಂ ದಾಳಿಗಳು ಆತಂಕವನ್ನು ಸೃಷ್ಟಿಸಿದ್ದವು. ಆದರೆ ವೈದಿಕರು ಸೃಷ್ಟಿಸಿದ ಅಮಾನವೀಯ ಅಸಮಾನತೆಗಳು ಹಿಂದೂಧರ್ಮವನ್ನು ಒಳಗಿಂದೊಳಗೆ ವಿಘಟನೆಗೊಳಿಸ ತೊಡಗಿದ್ದವು. ಹೀಗೆಯೇ ಆದರೆ ಬ್ರಾಹ್ಮಣ್ಯದ ವರ್ಣವ್ಯವಸ್ಥೆ ಛಿದ್ರಗೊಂಡು ಅನ್ಯ ಧರ್ಮಗಳು ಪ್ರಭಾವಶಾಲಿಯಾಗುವ ಸುಳಿವು ರಾಮಾನುಜರಿಗೆ ಗೋಚರವಾಯಿತು. ಅಲ್ಪಸಂಖ್ಯಾತ ಬ್ರಾಹ್ಮಣರನ್ನು ಹೊರತುಪಡಿಸಿ ವೈಶ್ಯರು ಜೈನ ಧರ್ಮದತ್ತ ವಾಲಿದರೆ, ಬಹುಸಂಖ್ಯಾತ ಶೂದ್ರ ದಲಿತರು ಬೌದ್ದ ಧರ್ಮಕ್ಕೆ ಒಲಿಯ ತೊಡಗಿದ್ದರು. ಜೊತೆಗೆ ಕೆಲವು ಕ್ಷತ್ರೀಯ ರಾಜರುಗಳು ಬೌದ್ದ ಮತಾನುಯಾಯಿಗಳಾಗಿದ್ದರಿಂದ ವೈದಿಕ ಧರ್ಮದ ಬದಲು ಬೌದ್ದ ಧರ್ಮ ರಾಜಾಶ್ರಯ ಪಡೆಯಿತು. ಇದೆಲ್ಲದರಿಂದ ಆತಂಕಿತರಾದ ರಾಮಾನುಜರಿಗೆ ಹೇಗಾದರೂ ಮಾಡಿ ವರ್ಣವ್ಯವಸ್ಥೆಯ ಒಗ್ಗಟ್ಟನ್ನು ಉಳಿಸಿಕೊಳ್ಳಬೇಕಾಗಿತ್ತು. ಬಹುಸಂಖ್ಯಾತ ದಲಿತ ಶೂದ್ರರನ್ನು ಬೇರೆ ಧರ್ಮಕ್ಕೆ ಹೋಗದಂತೆ ತಡೆಯಬೇಕಾಗಿತ್ತು. ವೈದಿಕ ವ್ಯವಸ್ಥೆಯಲ್ಲಿ ಕೆಲವು ಸುಧಾರಣೆಗಳನ್ನು ತರಲೇ ಬೇಕಾದ ಅನಿವಾರ್ಯತೆ ಆಚಾರ್ಯ ರಾಮಾನುಜರ ಮುಂದಿತ್ತು.

ಆಗ ತಾವು ಉತ್ತರಾಧಿಕಾರಿಯಾಗಿದ್ದ ಶ್ರೀರಂಗಂ ಮಠದ ದೇವಸ್ಥಾನದಲ್ಲಿ ಎಲ್ಲ ಜನರಿಗೂ ಪ್ರವೇಶವನ್ನು ರಾಮಾನುಜರು ಮುಕ್ತಗೊಳಿಸಿದರು. ನಂತರ ಅವರ ಆಡಳಿತವಿದ್ದ ತಿರುಪತಿ ಹಾಗೂ ಮೇಲುಕೋಟೆ ದೇವಸ್ಥಾನಗಳಲ್ಲಿ ಜನರ ಮುಕ್ತ ಪ್ರವೇಶವನ್ನು ವಿಸ್ತರಿಸಿದರು. ದೇವಸ್ಥಾನದ ಆಡಳಿತದ ನಿಯಮಗಳಲ್ಲಿ ಸುಧಾರಣೆ ತಂದರು. ಎಲ್ಲ ಜಾತಿಗಳ ಜನರಿಗೆ ದೇವಾಲಯಕ್ಕೆ ಮುಕ್ತ ಪ್ರವೇಶ ಕೊಟ್ಟು ಅಸ್ಪೃಶ್ಯರಿಗೂ ದೇವರ ವಿಗ್ರಹದ ದರ್ಶನ ಭಾಗ್ಯವನ್ನು ಒದಗಿಸಿಕೊಟ್ಟರು. ಮೋಕ್ಷ ಎನ್ನುವುದು ಉತ್ತಮ ಕುಲದವರಿಗೆ ಮಾತ್ರ ಎನ್ನುವ ವೈದಿಕಶಾಹಿ ಮೌಢ್ಯವನ್ನು ಒಡೆದು ಹಾಕಿದ ರಾಮಾನುಜರು ಭಕ್ತಿ, ಪ್ರಪತ್ತಿ ಹಾಗೂ ಶರಣಾಗತಿಯ ಮೂಲಕ ಯಾವುದೇ ಜಾತಿ, ಲಿಂಗ ಬೇಧಗಳಿಲ್ಲದೇ ಎಲ್ಲರೂ ಮೋಕ್ಷ ಪಡೆಯಬಹುದೆಂದು ಸಿದ್ದಾಂತವನ್ನು ಪ್ರತಿಪಾದಿಸಿದರು

ಅವರ್ಣೀಯರಾದ ದಲಿತ ಸಮುದಾಯವನ್ನು ಮುಟ್ಟಿಸಿಕೊಳ್ಳುವುದೇ ಮಹಾಪಾಪ ಎಂದುಕೊಳ್ಳುತ್ತಿದ್ದ ವೈದಿಕರಿಗೆ ಅಸ್ಪೃಷ್ಯರಿಗೆ ದೇವಸ್ಥಾನದಲ್ಲಿ ಪ್ರವೇಶ ಕೊಟ್ಟಾಗ ಅಸಹನೆ ಸ್ಪೋಟಗೊಂಡಿದ್ದಂತೂ ಸತ್ಯ. ಜಾತಿಭ್ರಷ್ಟ ಗೊಳಿಸಿ ದೇವಸ್ಥಾನದ ಮಡಿ ಹಾಳು ಮಾಡಿ ಬ್ರಾಹ್ಮಣ್ಯದ ಹಿತಕ್ಕೆ ಭಂಗತಂದ ಆರೋಪದ ಮೇಲೆ ರಾಮಾನುಜರಿಗೆ ಎರಡು ಸಲ ವಿಷ ಹಾಕಿ ಕೊಲ್ಲುವ ಪ್ರಯತ್ನವನ್ನು ಅರ್ಚಕರುಗಳೇ ಮಾಡಿದ್ದರು. ಆದರೆ ಹಂತಕ ವೈದಿಕರಿಗೆ ಬ್ರಾಹ್ಮಣ್ಯಕ್ಕೆ ಅವಸಾನ ಬಂದಿದೆ ಎಂಬುದರ ಅರಿವೇ ಇರಲಿಲ್ಲ. ಅದರ ಅರಿವಿದ್ದ ರಾಮಾನುಜರು ದೇವಸ್ಥಾನದ ಆವರಣದಿಂದ ಭಹಿಷ್ಕೃತಗೊಂಡ ಸಮುದಾಯವನ್ನು ದೇವಸ್ಥಾನದೊಳಗೆ ಕರೆತಂದು ದೇವರ ವಿಗ್ರಹ ದರ್ಶನ ಮಾಡಿಸಿ ಅನ್ಯ ಧರ್ಮದ ಕಡೆಗೆ ಜನರು ಆಕರ್ಷಿತರಾಗದಂತೆ ತಡೆದರು

ಜೊತೆಗೆ ಆಯಾ ಜಾತಿಗಳಲ್ಲೇ ಪುರೋಹಿತರನ್ನು ಸೃಷ್ಟಿಸಿ ಯಾರೂ ಬೇರೆ ಧರ್ಮಕ್ಕೆ ಮತಾಂತರವಾಗದಂತೆ ನೋಡಿಕೊಂಡರು. ಈಗಿನ ಕರ್ನಾಟಕ ಪ್ರಾಂತ್ಯದಲ್ಲಿಯೇ ಆಗ 58 ಜಾತಿಯಿಂದಾಯ್ದ ಜನರಿಗೆ ಮಂತ್ರದೀಕ್ಷೆ ಕೊಟ್ಟು ದೇವರ ದಾಸರನ್ನಾಗಿಸಿ ವೈದಿಕರ ದೇವರ ಕುರಿತು ಜನರಲ್ಲಿ ಪ್ರಚಾರ ಮಾಡುವ ಕಾಯಕಕ್ಕೆ ಪ್ರೇರೇಪಿಸಿ ದಾಸ ಪರಂಪರೆಯನ್ನೇ ಆರಂಭಿಸಿದರು. ವೈಕುಂಟದಾಸರು, ಕನಕದಾಸರು, ಯತಿರಾಜದಾಸರಾದಿಯಾಗಿ ಹಲವಾರು ದಾಸರು ದೇವರ ಮಹಿಮೆಯನ್ನು ಕೊಂಡಾಡಿ ಜನರಲ್ಲಿ ವೈದಿಕರ ದೇವರ ಕುರಿತು ಭಕ್ತಿಯನ್ನು ಹುಟ್ಟಿಸಲು ಪ್ರಯತ್ನಿಸಿದರು. ಈಗಿನ ಕರ್ನಾಟಕ ತಮಿಳುನಾಡು ಹಾಗೂ ಆಂದ್ರದಲ್ಲೂ ದಾಸ ಪರಂಪರೆಯನ್ನು ರಾಮಾನುಜರು ಆಗಲೇ ಹುಟ್ಟುಹಾಕಿ ಜನಸಮುದಾಯದಲ್ಲಿ ಅಸ್ತಿರಗೊಳ್ಳುತ್ತಿದ್ದ ತಮ್ಮ ದೇವರು ಹಾಗೂ ಧರ್ಮದ ಅಸ್ಮಿತೆಯನ್ನು ಉಳಿಸಿಕೊಂಡರು

ರಾಮಾನುಜರ ಎಲ್ಲಾ ನಮೂನಿಯ ಸುಧಾರಣೆಗಳಿಂದ ಜಾತಿವ್ಯವಸ್ಥೆ ನಾಶವಾಗಿ ಸಾಮಾಜಿಕ ಸಮಾನತೆ ಸಾಧ್ಯವಾಯಿತೆ..? ಇಲ್ಲಾ... ಇದು ರಾಮಾನುಜರ ಉದ್ದೇಶವೂ ಆಗಿರಲಿಲ್ಲ. ವೈದಿಕಶಾಹಿಯೂ ಉಳಿಯಬೇಕು, ಬಹುಸಂಖ್ಯಾತ ದಲಿತ ಶೂದ್ರರು ಬೇರೆ ಧರ್ಮಕ್ಕೆ ಮತಾಂತರವೂ ಆಗಬಾರದು ಎನ್ನುವ ಉದ್ದೇಶದ ಅನುಷ್ಟಾನಕ್ಕಾಗಿ ಕೆಲವು ಮೇಲ್ಪದರ ಸುಧಾರಣೆಗಳನ್ನು ರಾಮಾನುಜರು ಜಾರಿಗೊಳಿಸಿದರು. ಅಸ್ಪೃಶ್ಯರನದನು ಗರ್ಭಗುಡಿಯಿಂದ ಹೊರಗೆ ನಿಲ್ಲಿಸಿ ದೇವರ ದರ್ಶನ ಮಾಡಿಸುವ ವ್ಯವಸ್ಥೆ ಆಯಿತೇ ಹೊರತು ಗರ್ಭಗುಡಿಯಲ್ಲಿ ಅಬ್ರಾಹ್ಮಣರ ಪ್ರವೇಶ ಅಸಾಧ್ಯವಾಯಿತು. ಶೂದ್ರ ಕುಲದ ದಾಸರು ವೈದಿಕ ದೇವರ ಪ್ರಚಾರಕರಾದರೇ ಹೊರತು ಕನಕದಾಸರ ಹಾಗೆ ಮೂಲ ವಿಗ್ರಹ ಪೂಜೆಯಿಂದ ವಂಚಿತರಾದರು. ದಾಸರ ಹೆಸರಲ್ಲಿ ರಾಮಾನುಜರ ಶಿಷ್ಯರಾದ ಬ್ರಾಹ್ಮಣರೇ ದೇವರ ಪೂಜೆಯ ಹಕ್ಕು ಗಿಟ್ಟಿಸಿಕೊಂಡರೇ ಹೊರತು ಬೇರೆ ಯಾವ ಅವರ್ಣನೀಯನೂ ಗರ್ಭಗುಡಿಯ ಅರ್ಚಕನಾಗಲಿಲ್ಲ. ಆಗುವಂತೆಯೂ ಇರಲಿಲ್ಲ. ಹೊರಗೆ ಜಾತ್ರೆ ಹಬ್ಬಗಳಲ್ಲಿ ಶೂದ್ರ ಕುಲದವರು ಉತ್ಸವ ಮೂರ್ತಿಯ ತೇರು ಪಲ್ಲಕ್ಕಿ ಹೊರುವ ಬೋವಿಯಾದರೆ ಹೊರತು ಮುಟ್ಟಿ ಪೂಜೆ ಮಾಡುವ ಭಾಗ್ಯ ಪಡೆಯಲಿಲ್ಲ. ಹೀಗಾಗಿ ರಾಮಾನುಜರ ಆಶಯ ವರ್ಣಧರ್ಮವನ್ನು ಅನ್ಯ ಧರ್ಮೀಯರಿಂದ ಕಾಪಾಡುವುದಾಗಿತ್ತೇ ಹೊರತು ಸಂಪೂರ್ಣವಾಗಿ ಅಮಾನವೀಯ ವರ್ಣವ್ಯವಸ್ಥೆಯನ್ನು ನಾಶಮಾಡುವುದಾಗಿರಲಿಲ್ಲ. ದಲಿತ ಶೂದ್ರರಿಗೆ ದೇವರ ದರ್ಶನ ಮಾಡಿಸಿ... ಶೂದ್ರ ದಾಸರ ಮೂಲಕ ದೇವರ ಮಹಿಮೆ ಪ್ರಚಾರ ಮಾಡಿಸಿ ಅಲ್ಪ ಸ್ವಲ್ಪ ತೋರಿಕೆಯ ಬದಲಾವಣೆಗಳೊಂದಿಗೆ ವರ್ಣವ್ಯವಸ್ಥೆಯ ಅಂತಸ್ಸತ್ವವನ್ನು ಉಳಿಸಿಕೊಳ್ಳಲು ರಾಮಾನುಜರು ಬಲು ಚಾಣಾಕ್ಷತನದಿಂದಾ ಪ್ರಯತ್ನಿಸಿ ಯಶಸ್ವಿಯಾದರು. ಧಾರ್ಮಿಕ ಸಮಾಜ ಸುಧಾರಕ ಎಂದು ಹೆಸರಾದರು. ಭಕ್ತಿಯ ಅಫೀಮಿನ ಅಮಲನ್ನು ಜನಸಾಮಾನ್ಯರಿಗೆ ಏರಿಸಿ ಸಾಮಾಜಿಕ ಅಸಮಾನತೆಯನ್ನು ಉಳಿಸಿಕೊಂಡರು. ವೈದಿಕಶಾಹಿ ಚರಿತ್ರೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಕಾಲದ ಒತ್ತಡದ ಮೂಸೆಯಲ್ಲಿ ರಾಮಾನುಜರನ್ನು ಸೃಷ್ಟಿಸಿದ್ದರಲ್ಲಿ ಸುಳ್ಳಿಲ್ಲ.

ಏನೇ ಇರಲಿ... ರಾಮಾನುಜರ ಬಗ್ಗೆ ಇರುವ ದಂತಕಥೆಯಂತೂ ತುಂಬಾನೇ ವಿಶಿಷ್ಟವಾಗಿದೆ. 24 ನೇ ವಯಸ್ಸಿಗೆ ಸನ್ಯಾಸ ಸ್ವೀಕರಿಸಿದ ರಾಮಾನುಜರು ತಮ್ಮ ಗುರುಗಳಾದ ಮಹಾಪೂರ್ಣರ ಆದೇಶದಂತೆ ಮಂತ್ರೋಪದೇಶ ಪಡೆಯಲು ತಿರುಕ್ಕೋಟ್ಟಿಯೂರಿನ ಗೋಷ್ಠೀಪೂರ್ಣರ ಹತ್ತಿರ 18 ಸಲ ಪ್ರಯತ್ನಿಸುತ್ತಾರಂತೆ. 19 ನೇ ಸಲ ಕರೆದು " ಯಾರಿಗೂ ಮಂತ್ರೋಪದೇಶ ಹೇಳಬಾರದು... ಹಾಗೇನಾದರೂ ಹೇಳಿದರೆ ನೇರ ನರಕಕ್ಕೆ ಹೋಗುತ್ತೀ" ಎಂದು ಎಚ್ಚರಿಸಿಯೇ ಗೋಷ್ಟಿಪೂರ್ಣರು ರಾಮಾನುಜರ ಕಿವಿಯಲ್ಲಿ ಮತ್ರೋಪದೇಶ ಮಾಡುತ್ತಾರೆ. ತದನಂತರ ದೇವಾಲಯದ ಗೋಪುರವೇರಿದ ರಾಮಾನುಜರು ಎಲ್ಲಾ ಜಾತಿಯ ಜನರನ್ನೆಲ್ಲಾ ಸೇರಿಸಿ ಮಂತ್ರೋಪದೇಶವನ್ನು ಅರ್ಥ ಸಮೇತ ಸಾರ್ವಜನಿಕವಾಗಿ ಹೇಳಿದರಂತೆ. ಇದರಿಂದ ಸಿಟ್ಟಿಗೆದ್ದ ಗುರುಗಳು " ನೀನು ನರಕಕ್ಕೆ ಹೋಗುತ್ತೀಯಾ" ಎಂದು ಕಿರುಚಿದಾಗ..." ಗುರುಗಳೆ ಮಂತ್ರವನ್ನು ಕೇಳಿದ ಜನರಿಗೆಲ್ಲಾ ಮೋಕ್ಷ ಸಿಕ್ಕುವುದಾದರೆ ನಾನು ನರಕಕ್ಕೆ ಹೋಗಲೂ ಸಿದ್ದ" ಎಂದ ರಾಮಾನುಜರ ಮಾತು ಕೇಳಿ ಗುರುಗಳೇ ಬದಲಾಗಿ ಶಿಷ್ಯನನ್ನು ಮೆಚ್ಚಿ "ಮನ್ನಾಥ" ಎಂದು ಬಿರುದಿತ್ತು ಅಭಿನಂದಿಸಿದರಂತೆ. ದಂತ ಕತೆ ಎಷ್ಟು ಸತ್ಯವೋ ಸುಳ್ಳೊ ಗೊತ್ತಿಲ್ಲಾ. ಆದರೆ ಗೌಪ್ಯ ಮಂತ್ರಗಳ ಹೆಸರಲ್ಲಿ ಶ್ರೇಷ್ಟತೆಯ ವ್ಯಸನ ಪೀಡಿತರಾದ ವೈದಿಕರಿಗೆ ಪಾಠವಂತೂ ಇದು ಆಗಿದೆ

ಒಂದು ಸಾವಿರ ವರ್ಷಗಳ ಹಿಂದೆ ಕ್ರಿ. 1017 ಎಪ್ರಿಲ್ 10 ರಂದು ಜನಿಸಿದ ರಾಮಾನುಜರು ನಿಂತ ನೀರಾಗಿ ಮಲಿನವಾಗಿದ್ದ ವೈದಿಕಶಾಹಿ ವ್ಯವಸ್ಥೆಯಲ್ಲಿ ಸಣ್ಣ ಸಂಚಲನವನ್ನು ಸೃಷ್ಟಿಸಿದ್ದರಿಂದ ಈಗಲೂ ಶೂದ್ರ ವರ್ಗದವರ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಸುಧಾರಣೆಯ ಹಿಂದಿನ ಅನಿವಾರ್ಯತೆ ಹಾಗೂ ಉದ್ದೇಶಗಳನ್ನು ಮರೆಮಾಚುವ ವೈಷ್ಣವ ಪಂಥದ ಅಯ್ಯಂಗಾರಿ ವೈದಿಕಶಾಹಿ ಕುಲ ರಾಮಾನುಜರನ್ನು ಸಮಾಜದಲ್ಲಿ ಸಮಾನತೆ ಸಾರಿದ ಹರಿಕಾರ ಎಂದು ನಂಬಿಸಲು ಕಳೆದ ಹತ್ತು ಶತಮಾನಗಳಿಂದ ಪ್ರಯತ್ನಿಸುತ್ತಲೇ ಇದೆ. ಹಲವಾರು ಜನ ಅದನ್ನು ನಂಬಿಯೂ ಇದ್ದಾರೆ.. ಚರಿತ್ರೆ ತನ್ನೊಡಲಲ್ಲಿ ಅನೇಕಾನೇಕ ಸತ್ಯಗಳನ್ನು ಮುಚ್ಚಿಟ್ಟುಕೊಂಡು ಚಲಿಸುತ್ತಲೇ ಇದೆ.. ಜಾತಿ ಬೇರುಗಳು ಗಟ್ಟಿಗೊಳ್ಳುತ್ತಲೇ ಅಸಮಾನತೆ ವಿವಿಧ ಆಯಾಮಗಳಲ್ಲಿ ವಿಸ್ತರಗೊಳ್ಳುತ್ತಲೇ ಇದೆ. ಇದನ್ನು ತೊಳೆಯಲು ರಾಮಾನುಜರಿಗಿಂತಾ ಅಂಬೇಡ್ಕರರವರಂತವರ ಜರೂರತ್ತು ಪ್ರಸ್ತುತ ದೇಶಕ್ಕಿದೆ.

- ಶಶಿಕಾಂತ ಯಡಹಳ್ಳಿ