ಮಂಗಳವಾರ, ಮೇ 2, 2017

ತಹ ತಹ.... 92 ಬೆಂಕಿಯಿಂದ ಬೆಂಕಿ ನಂದಿಸಲಾದೀತೆ? ಯುದ್ದೋನ್ಮಾದ ನೆಮ್ಮದಿ ತಂದೀತೆ?






ದ್ವೇಷ ಮತ್ತು ದೇಶಭಕ್ತಿ ಎರಡೂ ಅತಿಯಾದರೆ ಅದಕ್ಕೆ ಯುದ್ದೋನ್ಮಾದ ಎನ್ನುತ್ತಾರೆ. ದೇಶಭಕ್ತಿಯ ಮೇನಿಯಾವನ್ನು ದೇಶವಾಸಿಗಳಲ್ಲಿ ಹಬ್ಬಿಸಲು ದ್ವೇಷವನ್ನು ಹೆಚ್ಚಿಸುವ ಕೆಲಸವನ್ನು ಆಳುವ ಪ್ರಭುತ್ವಗಳು ಮಾಡುತ್ತಲೇ ಇರುತ್ತವೆ. ಯುದ್ದೋನ್ಮಾದ ಹೆಚ್ಚಾದಷ್ಟೂ ಆಳುವವರಿಗೆ ತಮ್ಮ ಎಲ್ಲ ನ್ಯೂನ್ಯತೆಯನ್ನು ಮುಚ್ಚಿಕೊಂಡು ಜನರ ಗಮನವನ್ನು ಬೇರೆ ಕಡೆಗೆ ಸೆಳೆಯಲು ಅನುಕೂಲವಾಗುತ್ತದೆ. ಇದಕ್ಕೆ ಪಾಕಿಸ್ತಾನವೂ ಹೊರತಲ್ಲಾ ಹಿಂದೂಸ್ತಾನವೂ ಹಿಂದೆ ಬಿದ್ದಿಲ್ಲಾ. ಪಾಕಿಸ್ತಾನಕ್ಕೆ ಈಗ ದೇಶಭಕ್ತಿಯ ಮೇನಿಯಾ ಹುಟ್ಟಿಸುವ ಅಗತ್ಯವಿದೆ. ಆ ದೇಶದ ಜನರನ್ನು ದಿಕ್ಕುತಪ್ಪಿಸಲು ಈಗ ಯುದ್ದೋನ್ಮಾದ ಸೃಷ್ಟಿಸುವ ತರಾತುರಿ ಇದೆ. ಅದಕ್ಕಾಗಿಯೇ ಮೇ 1 ರಂದು ಭಾರತದ ಗಡಿ ದಾಟಿ ಬಂದ ಪಾಕಿ ಸೈನಿಕರು ಇಬ್ಬರು ಭಾರತೀಯ ಯೋಧರನ್ನು ಗುಂಡಿಕ್ಕಿ ಕೊಂದು ಶಿರಚ್ಚೇದನ ಮಾಡಿ ತಮ್ಮ ಕ್ರೌರ್ಯವನ್ನು ಮೆರೆದಿದ್ದಾರೆ. ಪಾಕಿಸ್ಥಾನದ ಸೇನಾ ಮುಖ್ಯಸ್ಥ ಜನರಲ್ ಕಮಾರ್ ಜಾವೇದ್ ಬಾಜ್ವಾ ನಿಯಂತ್ರಣ ರೇಖೆಯ ಕೆಲವೆಡೆ ಬೇಟಿ ನೀಡಿ ಕಾಶ್ಮೀರಿಗಳಿಗೆ ಬೆಂಬಲ ಘೋಷಿಸಿದ ಮರುದಿನವೇ ಈ ಕುಕೃತ್ಯ ನಡೆದಿದೆ. 11ನೇ ಶಿಖ್ ರೆಜಿಮೆಂಟಿನ ಸುಬೇದಾರ್ ಪರಮ್‌ಜೀತ್ ಸಿಂಗ್ ಮತ್ತು ಬಿಎಸೆಫ್‌ನ 200ನೇ ಬೆಟಾಲಿಯನ್‌ನ ಹೆಡ್ ಕಾನ್ ಸ್ಟೇಬಲ್ ಪ್ರೇಮ್ ಸಾಗರ್ ಪಾಕಿ ಸೈನಿಕರ ಕ್ರೌರ್ಯಕ್ಕೆ ಬಲಿಯಾಗಿದ್ದಾರೆ.

2016 ಸೆಪ್ಟಂಬರ್ 29ರಂದು ಭಾರತದ ಸೈನಿಕರು ಪಾಕ್ ಗಡಿಯೊಳಗೆ ನುಗ್ಗಿ ಏಳು ಟೆರೆರಿಸಟ್ ಕ್ಯಾಂಪಗಳ ಮೇಲೆ ದಾಳಿ ಮಾಡಿ 50ರಷ್ಟು ಭಯೋತ್ಪಾದಕರು ಹಾಗೂ ಅವರಿಗೆ ಕಾವಲಾಗಿದ್ದ ಪಾಕ್ ಸೈನಿಕರನ್ನು ಹತ್ಯೆ ಗೈದು ಮರಳಿದ್ದರು. ಇದಕ್ಕೆ ಸರ್ಮಿಕಲ್ ಸ್ಟ್ರೈಕ್ ಎಂದು ಕರೆದ ಬಿಜೆಪಿ ಸರಕಾರ ಭಾರತದಾದ್ಯಂತ ದೇಶಭಕ್ತಿಯ ಮೇನಿಯಾವನ್ನು ಹುಟ್ಟುಹಾಕಿತ್ತು. ಪಾಕಿಸ್ತಾನದ ದುರಹಂಕಾರವನ್ನು ಮೆಟ್ಟಿ ನಿಂತೆವು ಎಂದು ಅಗ್ಗರಿಸಿತ್ತು. ಆದರೆ ಬೆಂಕಿ ಇಂದಾ ಬೆಂಕಿ ನಂದಿಸಲು ಸಾಧ್ಯವೆ. ಈಗ ಪಾಕಿಸ್ಥಾನ ತನಗಾದ ಅವಮಾನಕ್ಕೆ ಪ್ರತಿಯಾಗಿ ಪಾಕಿಸ್ತಾನದ ಮಿಲಿಟರಿಯು ತನ್ನ ಸೈನಿಕರನ್ನು ಬೆಳಿಗ್ಗೆ 8.30 ಗಂಟೆಗೆ ಭಾರತದ ಜಮ್ಮು ಕಾಶ್ಮೀರದ ಪೂಂಛ್ ಗಡಿ ದಾಟಿಸಿ ಇಬ್ಬರು ಭಾರತೀಯ ಸೈನಿಕರನ್ನು ನಿರ್ಧಯವಾಗಿ ಕೊಂದು ಸುರಕ್ಷಿತವಾಗಿ ವಾಪಸ್ ಹೋಗಿದ್ದಾರೆ. ಪಾಕ್ ಮಿಲಿಟರಿಯು ಭಾರತದ ಸರ್ಜಿಕಲ್ ಸ್ಟ್ರೈಕಿಗೆ ಪ್ರತಿಕಾರ ತೀರಿಸಿಕೊಂಡಿದೆ. ಅದನ್ನು ಆ ದೇಶದಲ್ಲಿರುವ ಯುದ್ದೋನ್ಮಾದಿಗಳು ಸಂಭ್ರಮಿಸುತ್ತಿದ್ದಾರೆ. ಇತ್ತ ಭಾರತೀಯರಲ್ಲಿ ಆಕ್ರೋಶ ಉರಿಬೆಂಕಿಯಾಗಿದೆ. ಮತ್ತೆ ಸೇಡಿನ ಮಾತುಗಳು ಪ್ರತಿದ್ವನಿಸುತ್ತಿದೆ. ಒಂದು ತಲೆಗೆ ಐವತ್ತು ತಲೆ ತೆಗೆಯಬೇಕೆಂದು ಹುತಾತ್ಮ ಯೋಧನ ಮಗಳೇ ಅವಲತ್ತುಕೊಂಡಿದ್ದಾಳೆ. ಅಲ್ಲಲ್ಲಿ ಪಾಕ್ ದ್ವಜವನ್ನು ಸುಟ್ಟುಹಾಕಲಾಗಿದೆ. ಭದ್ರತಾ ಪಡೆಗಳು ಪಾಕ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಸಜ್ಜಾಗಿದ್ದು ಸೂಕ್ತ ಸಮಯಕ್ಕಾಗಿ ಕಾಯುತ್ತಿವೆ. 

ಇದು ಸಧ್ಯಕ್ಕೆ ಮುಗಿಯುವ ಸಮಸ್ಯೆಯಲ್ಲಾ. ಹೀಗೆಯೇ ಸಮರದಾಹ ಹಾಗೂ ದ್ವೇಷಗಳು ಎರಡೂ ದೇಶಗಳಲ್ಲಿ ಆಳುವ ವರ್ಗಗಳು ಬೆಳೆಸುತ್ತಾ ಹೋದಂತೆ ಎರಡೂ ಕಡೆ ರಕ್ತಪಾತಗಳು ನಿರಂತರ. ಸರ್ಜಿಕಲ್ ದಾಳಿಯಿಂದಾ ಪಾಕ್ ಬಾಲ ಮುದುರಿಕುಳಿತಿದೆ ಎಂದು ನಕಲಿ ದೇಶಭಕ್ತರು ಪುಂಗಿದ್ದೆಲ್ಲಾ ಅಸತ್ಯವೆಂದು ಈಗ ಗೊತ್ತಾಗುತ್ತಿದೆ.  ಹಳೆಯ ನೋಟ್ ರದ್ದತಿಯಿಂದಾ ಗಡಿ ಭಯೋತ್ಪಾದನೆ ಕಡಿಮೆಯಾಗುತ್ತದೆ ಎನ್ನುವ ಪ್ರಧಾನಿ ಮೋದಿಯವರ ಮಾತುಗಳೆಲ್ಲಾ ಹುಸಿಹೋಗಿವೆ. ಸರ್ಜಿಕಲ್ ಸ್ಟ್ರೈಕ್ ಮಾಡುವ ಮುನ್ನ ಪಾಕ್ ಆಕ್ರಮಿತ ಕಾಶ್ಮೀರದ ಗಡಿರೇಖೆಯಲ್ಲಿ ಪಾಕಿಸ್ತಾನ ಸೇನಾ ಬೆಂಬಲಿತ ಸುಮಾರು 35 ರಷ್ಟು ಉಗ್ರಗಾಮಿಗಳ ತರಬೇತಿ ಕ್ಯಾಂಪಗಳಿದ್ದವು. ಅದರಲ್ಲಿ 7 ಕ್ಯಾಂಪ್ ಗಳನ್ನು ಭಾರತೀಯ ಸೈನಿಕರು ದ್ವಂಸಗೊಳಿಸಿದರು. ಆದರೆ..  ಕಳೆದ ನಾಲ್ಕು  ತಿಂಗಳಲ್ಲಿ ಉಗ್ರರ ತರಬೇತಿ ಕೇಂದ್ರಗಳ ಸಂಖ್ಯೆ ೫೫ ರಷ್ಟನ್ನು ದಾಟಿದೆ. ಅಂದರೆ.. ಸರ್ಜಿಕಲ್ ಸ್ಟ್ರೈಕ್ ಮಾಡುವುದರಿಂದಾಗಲೀ ಇಲ್ಲವೇ ನೋಟ್ ಬಂಧಿ ಮಾಡುವುದರಿಂದಾಗಲೀ ಈ ಉಗ್ರಗಾಮಿಗಳ ಉಪಟಳವನ್ನು ನಾಶಮಾಡಲು  ಸಾಧ್ಯವಿಲ್ಲ ಹಾಗೂ ಪಾಕಿಸ್ತಾನಿ ಸೇನೆಯ ದುಸ್ಸಾಹಸಗಳನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲಾ. 2013 ರಲ್ಲಿ ಗಡಿ  ನಿಯಂತ್ರಣ ರೇಖೆ ಬಳಿ ಕರ್ತವ್ಯ ನಿರತವಾಗಿದ್ದ ಯೋಧ ಲ್ಯಾನ್ಸ್ ನಾಯಕ್ ಹೇಮರಾಜ್ ಮೇಲೆ ಪಾಕ್ ಸೈನಿಕರು ದಾಳಿ ಮಾಡಿ ಶಿರಚ್ಚೇದ ಮಾಡದ್ದಾಗ ನಮ್ಮ ಕೇಂದ್ರ ಸರಕಾರವು “ನಮ್ಮ ಒಬ್ಬ ಯೋಧನ ತಲೆ ಕಡಿದರೆ ನಾವು ಅವರ ಹತ್ತು ತಲೆಗಳನ್ನು ಉರುಳಿಸುತ್ತೇವೆ” ಎಂದು ಹೇಳಿತ್ತು. ಆದರೆ.. ಇಲ್ಲಿವರೆಗೂ ಪಾಕ್ ಸೈನಿಕರ ತಲೆಗಳಂತೂ ಉದುರಲಿಲ್ಲಾ.. ಈ ರೀತಿಯ ಉನ್ಮಾದದ ಹೇಳಿಕೆಗಳಿಗಂತೂ ಬರವಿಲ್ಲಾ. ಯಾಕೆಂದರೆ ಈ ಹಿಂಸೆ ಪ್ರತಿಹಿಂಸೆಗಳು ಸಮರದಾಹಕ್ಕೆ ಪರಿಹಾರ ಅಲ್ಲವೇ ಅಲ್ಲಾ. ಯುದ್ದ ಎನ್ನುವುದು ದೇಶಭಕ್ತರು ಅಂದುಕೊಂಡಷ್ಟು ಸುಲಭಸಾಧ್ಯವಾಗಿಲ್ಲ. ಅಣ್ವಸ್ತ್ರಗಳನ್ನು ಹೊಂದಿದ ಎರಡು ರಾಷ್ಟ್ರಗಳು ಯುದ್ದಕ್ಕೆ ನಿಂತರ ಎರಡೂ ದೇಶಗಳು ಉರಿದು ಬೂದಿಯಾಗುತ್ತವೆ. ಇಂತಹ ಸಂದಿಗ್ದ ಸಂದರ್ಭದಲ್ಲಿ ಸಮರದಾಹ ಹಾಗೂ ಯುದ್ದೋನ್ಮಾದಗಳ ವಿನಾಶಕಾರಿ ಮಾರ್ಗವನ್ನು ಬಿಟ್ಟು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ.

ಭಯೋತ್ಪಾದನೆ ಎನ್ನುವುದು ಈಗ ಒಂದು ದೇಶಕ್ಕೆ ಸೀಮಿತವಾದದ್ದಲ್ಲಾ. ಅದು ಈಗ ಜಾಗತಿಕ ಸಮಸ್ಯೆಯಾಗಿದೆ. ಬಹುತೇಕ ದೇಶಗಳು ಈ ಧಾರ್ಮಿಕ ಉಗ್ರಗಾಮಿಗಳ ಅಟ್ಟಹಾಸಕ್ಕೆ ನಲುಗಿವೆ. ಹೀಗಾಗಿ  ಉಗ್ರಗಾಮಿಗಳಿಂದ ಹಿಂಸೆಗೊಳಗಾದ ಎಲ್ಲಾ ದೇಶಗಳನ್ನೂ ಒಂದುಗೂಡಿಸಿ ಭಯೋತ್ಪಾದಕರ ವಿರುದ್ಧ ಜಾಗತಿಕವಾಗಿ ಯುದ್ದಸಾರಬೇಕಾಗಿದೆ. ಉಗ್ರರಿಗೆ ನೆಲೆಯನ್ನು ಒದಗಿಸಿ ತರಬೇತಿಯನ್ನು ಕೊಟ್ಟು ಸಾಕುತ್ತಿರುವ ಪಾಕಿಸ್ತಾನದ ಮಿಲಿಟರಿಯ ವಿರುದ್ಧ ಎಲ್ಲಾ ದೇಶಗಳನ್ನು ಎತ್ತಿಕಟ್ಟುವ ಕೆಲಸವನ್ನು ಭಾರತ ಮಾಡಬೇಕಾಗಿದೆ. ಎಲ್ಲಿವರೆಗೂ ಪಾಕಿಸ್ತಾನವನ್ನು ಜಾಗತಿಕವಾಗಿ ಒಂಟಿ ಮಾಡಲಾಗುವುದಿಲ್ಲವೋ ಅಲ್ಲಿವರೆಗೂ ಆ ದೇಶದ ಯುದ್ದೋನ್ಮಾದಿಗಳ ಅಟ್ಟಹಾಸ ನಿಲ್ಲುವುದಿಲ್ಲಾ. ಉಗ್ರರ ರಕ್ತಪಾತದಾಟ ಕೊನೆಯಾಗುವುದಿಲ್ಲಾ. ಅಂತರಾಷ್ಟ್ರೀಯ ಒತ್ತಡಕ್ಕೊಳಗಾಗಿ ಪಾಕಿಸ್ತಾನದ ಸೈನೈವೇ ಆ ದೇಶದೊಳಗಿನ ಉಗ್ರರನ್ನು ಮಟ್ಟಹಾಕುವಂತಹ ಸನ್ನಿವೇಶವನ್ನು ಸೃಷಿಸಬೇಕಾಗಿದೆ. ಅದರ ನಾಯಕತ್ವವನ್ನು ಭಾರತವೇ ವಹಿಸಿಕೊಳ್ಳಬೇಕಿದೆ. ಚೀನಾದ ಬೆಂಬಲ ಪಾಕಿಸ್ತಾನಕ್ಕೆ ಅಚಲವಾಗಿರುವವರೆಗೂ ಇದು ಅಷ್ಟೊಂದು ಸುಲಭ ಸಾಧ್ಯವಲ್ಲಾ. ಆದರೆ.. ಉತ್ತರ ಕೋರಿಯಾಗೂ ಸಹ ಚೀನಾ ಬೆಂಬಲವಿದ್ದರೂ ಜಾಗತಿಕ ದೇಶಗಳ ಒತ್ತಾಯಕ್ಕೆ ಚೀನಾ ಮಣಿಯಲೇಬೇಕಾಗಿದೆ.. ಉತ್ತರ ಕೋರಿಯಾಗೆ ಸಂಯಮದ ಪಾಠವನ್ನು ಚೀನಾ ಹೇಳುವಂತಾಗಿದೆ. ಅದೇ ರೀತಿ ಅಂತರ್ರಾಷ್ಟ್ರೀಯ ಒತ್ತಡವನ್ನು ಚೀನಾದ ಮೇಲೂ ತರುವ ಮೂಲಕ ಪಾಕಿಸ್ತಾನವೇ ತನ್ನ ಒಡಲೊಳಗಿಟ್ಟು ಪೋಷಿಸುತ್ತಿರುವ ಉಗ್ರಗಾಮಿಗಳನ್ನು ನಾಶಮಾಡಲೇಬೇಕಾದಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಬೇಕಾಗಿರುವುದು ಈಗ ಭಾರತಕ್ಕೆ ಅನಿವಾರ್ಯವಾಗಿದೆ. ಅದು ಬಿಟ್ಟು ಈ ಯುದ್ದೋತ್ಪಾದನೆ, ಸರ್ಜಿಕಲ್ ಸ್ಟ್ರೈಕ್‌ಗಳೆಲ್ಲಾ ಕೇವಲ ದ್ವೇಷದ ಕಿಚ್ಚನ್ನು ಹೆಚ್ಚಿಸುವ ಹಾಗೂ ದೇಶವಾಸಿಗಳಲ್ಲಿ ದೇಶಭಕ್ತಿಯ ಕೆಚ್ಚನ್ನು ಸೃಷ್ಟಿಸುವ ಹಾಗೂ ಆಳುವ ಸರಕಾರಗಳ ವೈಪಲ್ಯಗಳನ್ನು ಮರೆಸುವ ತಂತ್ರಗಾರಿಕೆಯಾಗಿವೆ. ಇದನ್ನು ಭಾರತದ ಪ್ರಜ್ಞಾವಂತ ಜನರು ಅರಿಯಬೇಕಾಗಿದೆ. ರಕ್ತಕ್ಕೆ ರಕ್ತ, ಕತ್ತಿಗೆ ಕತ್ತಿ ಎನ್ನುವ ಹಿಂಸೋತ್ಪಾದಕ ಪ್ರಚೋದನೆಗೊಳಗಾಗದೇ ಉಗ್ರದಮನದತ್ತ ಪರ್ಯಾಯ ಮಾರ್ಗಗಳ ಬಗ್ಗೆ ಯೋಚಿಸಬೇಕಿದೆ. ಎಲ್ಲಾ ದೇಶಗಳ ಗಡಿಗಳಲ್ಲಿ ಶಾಂತಿ ನೆಮ್ಮದಿ ನೆಲೆಸಬೇಕಿದೆ. ಬಂದೂಕಿನ ಬಾಯೊಳಗೆ ಗುಬ್ಬಿಗಳು ಗೂಡುಕಟ್ಟಿ ಮರಿಮಾಡಬೇಕಿದೆ.  

 - ಶಶಿಕಾಂತ ಯಡಹಳ್ಳಿ  









ಸೋಮವಾರ, ಮೇ 1, 2017

ತಹ ತಹ..... 91 ಮೇ ಡೆ ಘೋಷಣೆ ಭಾಷಣಗಳನು ಮೀರಿ ತುರ್ತಾಗಿ ಆಗಬೇಕಿದೆ ಜನಾಲೋಂದನ ಜಾರಿ :



 
ಪ್ರತಿ ವರ್ಷದಂತೆ ಈ ಸಲವೂ ಸಹ ಮೇ 1 ಬಂದಿದೆ. ವಿಶ್ವ ಕಾರ್ಮಿಕ ದಿನಾಚರಣೆ ಎನ್ನುವುದು ಮೇ ಒಂದರಂದು ಖಡ್ಡಾಯವಾಗಿ ನಡೆಯುವ ಸಾಂಪ್ರದಾಯಿಕ ಶುಷ್ಕ ಆಚರಣೆಂiiಂತಾಗಿದೆ. ದೇಶಾದ್ಯಂತ ಕಾರ್ಮಿಕ ಸಂಘಟನೆಗಳ ಶಕ್ತಾನುಸಾರ ಭಾಷಣ ಘೋಷಣೆ ಹಾಗೂ ರ‍್ಯಾಲಿಗಳು ಈ ದಿನದಂದು ನಡೆದುಕೊಂಡು ಬರುತ್ತಲೇ ಇವೆ. ಇಷ್ಟೆಲ್ಲಾ ಕಾರ್ಮಿಕ ಸಂಘಟನೆಗಳು, ಇಂತಹ ಸಂಘಟನೆಗಳಲ್ಲಿ ನೋಂದಾಯಿತ ಕೋಟ್ಯಾಂತರ ಸಂಘಟಿತ ಕಾರ್ಮಿಕರು, ಸಾವಿರಾರು ಬುದ್ದಿವಂತ ಕಾರ್ಮಿಕ ನಾಯಕರುಗಳು ಇದ್ದರೂ ಕಾರ್ಮಿಕರ ಬದುಕಂತೂ ವರ್ಷದಿಂದ ವರ್ಷಕ್ಕೆ ಅತಂತ್ರಗೊಳ್ಳುತ್ತಿದೆ. ಜಾಗತೀಕರಣದ ಮಾಯಾಜಾಲ ಕಾರ್ಮಿಕ ವರ್ಗವನ್ನೇ ಹಿಡಿದು ಹಿಂಡಿ ಹಿಪ್ಪೆ ಮಾಡುತ್ತಿದೆ. ಕಾರ್ಮಿಕರನ್ನು ಮನುಷ್ಯರನ್ನಾಗಿ ಪರಿಗಣಿಸದೇ ಯಂತ್ರಗಳ ಹಾಗೆ ದುಡಿಸಿಕೊಳ್ಳುವ ಹುನ್ನಾರಗಳು ಬಹುತೇಕ ಖಾಸಗಿ ಕಾರ್ಖಾನೆಗಳಲ್ಲಿ ನಿರಂತರವಾಗಿ ನಡೆಯುತ್ತಲೇ ಇದೆ. ಇರುವ ಸರಕಾರಿ ಸಾಮ್ಯದ ಕಾರ್ಖಾನೆಗಳನ್ನೂ ಸಹ ಖಾಸಗೀಕರಣ ಮಾಡಲು ಕೇಂದ್ರ ಸರಕಾರ ಹಾತೊರೆಯುತ್ತಿದೆ. ಬಿಇಎಂಎಲ್ ಕಾರ್ಖಾನೆ ಖಾಸಗೀಕರಣಕ್ಕೆ ಮುಂದಿನ ಬಲಿಪಶುವಾಗುವುದರಲ್ಲಿದೆ.


ಲಕ್ಷಾಂತರ ಸಂಘಟಿತ ಕಾರ್ಮಿಕರಿದ್ದರೂ, ಹಲವಾರು ಪ್ರಮುಖ ಕಾರ್ಮಿಕ ಸಂಘಟನೆಗಳಿದ್ದರೂ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಅದರ ಅಸೋಸಿಯೇಟ್ ಬ್ಯಾಂಕ್‌ಗಳ ವಿಲೀನವನ್ನು ತಪ್ಪಿಸಲಾಗಲಿಲ್ಲಾ. ಸಾವಿರಾರು ಜನರು ಬಲವಂತದ ನಿವೃತ್ತಿ ಪಡೆಯುವುದನ್ನು ನಿಲ್ಲಿಸಲಾಗಲಿಲ್ಲಾ. ಕಾರ್ಮಿಕ ಸಂಘಟನೆಗಳು ಸಾಂಕೇತಿಕವಾಗಿ ಧರಣಿ ಪ್ರತಿಭಟನೆ ಬಂದ್‌ಗಳನ್ನು ಕಾಲಕಾಲಕ್ಕೆ ಮಾಡಿ ಯಾಂತ್ರಿಕವಾಗಿ ತಮ್ಮ ಕರ್ತವ್ಯವನ್ನು ನಿಭಾಯಿದರೂ ಎಸ್ ಬಿಐ ಬ್ಯಾಂಕ್ ಕಾರ್ಮಿಕ ನೌಕರ ವರ್ಗದವರ ವೃತ್ತಿ ಬದುಕು ಅತಂತ್ರವಾಗುವುದನ್ನು ಬದಲಾಯಿಸಲಾಗಲೇ ಇಲ್ಲಾ. ಯಾವಾಗ ಆಳುವ ಪ್ರಭುತ್ವ ಎನ್ನುವುದು ಬಂಡವಾಳಶಾಹಿ ಕಾರ್ಪೋರೇಟ್ ಕಂಪನಿಗಳ ಹಿತಾಸಕ್ತಿಯನ್ನು ಕಾಪಾಡಲು ಪಣತೊಡುತ್ತದೋ ಆಗ ಬಂಡವಾಳಶಾಹಿಗಳ ಮಾಲೀಕತ್ವದಲ್ಲಿರುವ ಎಲ್ಲಾ ಕಾರ್ಖಾನೆ ಕಛೇರಿಗಳ ಉತ್ಪಾದನಾ ಕೇಂದ್ರಗಳಲ್ಲಿರುವ ಕಾರ್ಮಿಕರು, ನೌಕರರು ಹಾಗೂ ಅಧಿಕಾರಿಗಳ ವೃತಿಬದುಕು ಮಾಲೀಕರ ಮರ್ಜಿಗೆ ಒಳಗಾಗುವುದರಲ್ಲಿ ಸಂದೇಹವಿಲ್ಲಾ.


ಇದಕ್ಕೆ ಪತ್ರಿಕಾರಂಗವೂ ಹೊರತಲ್ಲಾ. ಮೊದಲು ಬಿಗಿಯಾದ ಕಾರ್ಮಿಕ ಕಾನೂನುಗಳಿಂದಾಗಿ ಯಾವುದೇ ದೊಡ್ಡ ಪತ್ರಿಕೆಯಿಂದಾ ಒಬ್ಬ ನೌಕರನನ್ನೂ ಇದ್ದಕ್ಕಿದ್ದಂತೆ ನೌಕರಿಯಿಂದಾ ತೆಗೆದುಹಾಕುವಂತಿರಲಿಲ್ಲಾ. ಅಮ್ಮಮ್ಮಾ ಅಂದರೆ ಟ್ರಾನ್ಸಪರ್ ಮಾಡಿ ತೊಂದರೆ ಕೊಡಬಹುದಾಗಿತ್ತು. ಆದರೆ.. ಯಾವಾಗ ಪತ್ರಿಕೋದ್ಯಮವು ದೊಡ್ಡ ದೊಡ್ಡ ಬಂಡವಾಳಶಾಹಿ ಮಾಲಿಕರ ಹಿಡಿತಕ್ಕೊಳಗಾಯಿತೋ, ಯಾವಾಗ ಕೋಟ್ಯಾಂತರ ಹಣವನ್ನು ಹಾಕಿದ ಬಂಡವಾಳಶಾಹಿಗಳು ಚಾನೆಲ್‌ಗಳನ್ನು ಆರಂಭಿಸಿದರೋ ಆಗ ಇಡೀ ಮೀಡಿಯಾಂಗ ಎನ್ನುವುದೇ ಆಯಾ ಮಾಲೀಕರ ಮರ್ಜಿಗೆ ಒಳಗಾಯಿತು. ಖಾಯಂ ನೌಕರರಿಂದ ಅಧೀಕೃತವಾಗಿ ರಾಜೀನಾಮೆ ಪತ್ರಗಳನ್ನು ಪಡೆದುಕೊಂಡು ಗುತ್ತಿಗೆ ಆಧಾರದ ಮೇಲೆ ನೌಕರಿ ಮಾಡುವ ಒಪ್ಪಂದಕ್ಕೆ ಬಲವಂತವಾಗಿ ಒಪ್ಪಿಸಲಾಯಿತು. ಸಮಾಜಕ್ಕೆ ಸ್ವಾತಂತ್ರ್ಯ, ಸ್ವಾಭಿಮಾನ, ಸ್ವಾವಲಂಬನೆಯ ಪಾಠ ಹೇಳುವ ಪತ್ರಕರ್ತರಿಗೆಲ್ಲಾ ವೃತ್ತಿ ಭದ್ರತೆ ಇಲ್ಲದೇ ಗುತ್ತಿಗೆ ನೌಕರರಾಗಿ ಯಾವಾಗಲೂ ಅತಂತ್ರ ಸ್ಥಿತಿಯಲ್ಲೇ ಕೆಲಸ ಮಾಡಬೇಕಾಗಿ ಬಂದಿರುವುದು ವಿಪರ್ಯಾಸ. ಪತ್ರಿಕೋದ್ಯಮದಲ್ಲಿ ನೌಕರರನ್ನು ಗುಲಾಮರನ್ನಾಸುವ ಈ ಹುನ್ನಾರವನ್ನು, ಪತ್ರಕರ್ತರನ್ನು ಅತಂತ್ರರನ್ನಾಗಿಸಿ ಆಟವಾಡುವ ಮಾಲೀಕರ ದಮನವನ್ನು ಯಾರೆಂದರೆ ಯಾರೂ ಪ್ರಶ್ನಿಸಲಿಲ್ಲಾ. ಕನಿಷ್ಟ ಪತ್ರಿಕೆಗಳಲ್ಲಿ ಬರೆದು ತಮ್ಮ ಆಕ್ರೋಶವನ್ನೂ ಹೊರಹಾಕಲಿಲ್ಲಾ. ಇರುವ ನೌಕರಿಯನ್ನು ಉಳಿಸಿಕೊಂಡರೆ ಸಾಕು ಎಂದುಕೊಂಡು ಗುತ್ತಿಗೆ ನೌಕರರಾಗಲು ಒಪ್ಪಿಕೊಂಡರು. ಪತ್ರಕರ್ತರ ಹಿತಕಾಯಲು ಇರುವ ಸಂಘಗಳು ಜಾಣಕುರಡನ್ನು ವ್ಯಕ್ತಪಡಿಸಿದವು.  ಕಾರ್ಮಿಕ ಸಂಘಗಳು ಪತ್ರಿಕಾ ಮಾಲೀಕರಿಂದಾದ ನೌಕರರ ಹಕ್ಕುಗಳ ದಮನವನ್ನು ಪ್ರತಿಭಟಿಸದೆ ಮೌನತಾಳಿದವು.  ಈಗ ಮೀಡಿಯಾಂಗದ ಎಲ್ಲಾ ನೌಕರ ವರ್ಗದವರು ಗುತ್ತಿಗೆಯ ನೌಕರರು ಹಾಗೂ ಯಾವಾಗ ಬೇಕಾದರೂ ಅವರನ್ನು ನೌಕರಿಯಿಂದ ತೆಗೆದು ಹಾಕಬಹುದು ಇಲ್ಲವೇ ಮೂರು ವರ್ಷಗಳ ಗುತ್ತಿಗೆ ಮುಗಿದ ತಕ್ಷಣ ನೌಕರಿಯಿಂದ ಹೊರಗೆ ಹಾಕಬಹುದು. 


ಇದೊಂದೆ ಕ್ಷೇತ್ರವಲ್ಲಾ. ಎಲ್ಲಾ ಖಾಸಗಿ ರಂಗದಲ್ಲೂ ನೌಕರರ ಶೋಷಣೆ ನಿರಂತರವಾಗಿದೆ. ವೃತ್ತಿಸ್ಥಿರತೆಯ ಗ್ಯಾರಂಟಿ ಇಲ್ಲದೇ ಇರುವುದರಿಂದ ನೌಕರರು ಸಂಘಟಿತರಾಗಿ ಪ್ರತಿಭಟನೆಗೆ ಇಳಿಯಲೂ ಹೆದರುವ ಪರಿಸ್ಥಿತಿ ಇದೆ. ಮ್ಯಾನೇಜಮೆಂಟ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಹೋಗಲೇಬೇಕಾದ ಪರಿಸ್ಥಿತಿ ಕಾರ್ಮಿಕರದ್ದಾಗಿದೆ. ಇದನ್ನು ಅರಿತ ಕಾರ್ಮಿಕ ಸಂಘಟನೆಯ ನಾಯಕರೂ ಸಹ ಕಾರ್ಮಿಕರ ಮೂಲಭೂತ ಹಕ್ಕುಗಳ ಪ್ರಶ್ನೆಗಳಿಗಾಗಿ ಹೋರಾಟವನ್ನು ಸಂಘಟಿಸುವ ಬದಲು ತಮ್ಮ ಸಂಘಟನೆಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಕಾರ್ಮಿಕರ ವೇತನ ಬತ್ತೆಗಳ ಹೆಚ್ಚಳಕ್ಕಾಗಿ ಮ್ಯಾನೇಜಮೆಂಟ್ ಜೊತೆಗೆ ಡೀಲ್‌ಗಿಳಿಯುವ ಸೇಫ್ ಮಾರ್ಗವನ್ನು ಹುಡುಕಿಕೊಂಡಿವೆ.  

ಇದರ ಜೊತೆಗೆ ಕಾರ್ಮಿಕರ ಪರವಾಗಿ ಇರುವ ಕಾನೂನುಗಳೆಲ್ಲವನ್ನೂ ಒಂದೊಂದಾಗಿ ಬಂಡವಾಳಿಗರ ಹಿತಾಸಕ್ತಿಗೆ ಪರವಾಗಿ ಬದಲಾಯಿಸುವ ಕೆಲಸವನ್ನು ಆಳುವ ಪ್ರಭುತ್ವ ಮಾಡುತ್ತಲೇ ಬಂದಿದೆ. ಇದೆಲ್ಲವೂ ಕಾರ್ಮಿಕ ಸಂಘಟನೆಗಳಿಗೆ, ಈ ಸಂಘಟನೆಗಳ ಮಾತೃಪಕ್ಷಗಳಿಗೆ ಗೊತ್ತಿಲ್ಲದ ಸಂಗತಿ ಏನಲ್ಲಾ. ಆದರೆ.. ಈ ಯಾವ ಸಂಘಟನೆಗಳು ಹಾಗೂ ಕಮ್ಯೂನಿಸ್ಟ್ ಪಕ್ಷಗಳಿಗೂ ಇಲ್ಲಿವರೆಗೂ ಜನಾಂದೋನಗಳನ್ನು ಹುಟ್ಟು ಹಾಕಲು ಸಾಧ್ಯವಾಗಿಲ್ಲಾ ಹಾಗೂ ಆ ನಿಟ್ಟಿನಲ್ಲಿ ಅವು ಕೆಲಸವನ್ನೂ ಮಾಡುತ್ತಿಲ್ಲಾ. ಇತ್ತೀಚೆಗೆ ಬೆಂಗಳೂರಿನ ಬಾಷ್ ಮೈಕೋ ಕಾಪೋರೇಟ್ ಕಂಪನಿಯಲ್ಲಿ ಕೆಲಸದ ಸಮಯ ಹಾಗೂ ಸವಲತ್ತುಗಳಿಗಾಗಿ ಕೆಲವಾರು ಕಾರ್ಮಿಕರು ವರ್ಷಾನುಗಂಟಲೇ ಹೋರಾಟ ಮಾಡಿದರು. ಆದರೂ ಮ್ಯಾನೇಜಮೆಂಟ್ ಮಣಿಯಲಿಲ್ಲ. ನೌಕರಿ ಕಳೆದುಕೊಳ್ಳುವ ಪರಿಸ್ಥಿತಿ ಬಂದಾಗ ಕೆಲವರು ಮ್ಯಾನೇಜಮೆಂಟ್ ಹೇಳಿದ್ದಕ್ಕೆ ಒಪ್ಪಿಕೊಂಡು ಹೆಚ್ಚು ಸಮಯ ದುಡಿಯಲು ಒಪ್ಪಿ ಮತ್ತೆ ಕೆಲಸಕ್ಕೆ ಸೇರಿದರು. ಹಠಕೆ ಬಿದ್ದು ಕೊನೆಯವರೆಗೂ ಹೋರಾಟದ ಹಾದಿಯನ್ನು ಕಾರ್ಮಿಕ ಸಂಘಟನೆಯ ನೇತೃತ್ವದಲ್ಲಿ ಮುನ್ನಡೆಸಿದ ನೂರಾರು ಕಾರ್ಮಿಕರು ಕೆಲಸ ಕಳೆದುಕೊಂಡರು. ನೌಕರಿಯನ್ನು ನಂಬಿಕೊಂಡಿದ್ದ ಕುಟುಂಬ ಸಾಲಸೋಲಕ್ಕೆ ತುತ್ತಾಗಿ ಕಷ್ಟಕ್ಕೆ ಸಿಲುಕಿತು. ಮೇ ಡೇ ಕಾರ್ಮಿಕ ಸಂಘಟನೆಗಳು ನಿರುದ್ಯೋಗಿಗಳಾದ ಈ ನೌಕರರಿಗೆ ನ್ಯಾಯ ಕೊಡಿಸಲು ಆಗಲೇ ಇಲ್ಲಾ. ಕಾರ್ಮಿಕ ಸಂಘಟನೆಗಳ ಮಿತಿ ಇಷ್ಟೇ ಎಂದು ತಿಳಿದ ಉಳಿದ ಕಾರ್ಮಿಕರು ಮಾಲೀಕರ ವಿರುದ್ಧ ತಮ್ಮ ಹಕ್ಕುಗಳಿಗಾಗಿ ತಿರುಗಿ ಬೀಳುವ ಸಾಹಸ ಮಾಡದೇ ಈಗ ದಿನಕ್ಕೆ ಹನ್ನೆರಡು ತಾಸಿಗಿಂತಲೂ ಹೆಚ್ಚು ಕಾಲ ಡಬಲ್ ಶಿಪ್ಟಲ್ಲಿ ಯಂತ್ರಗಳ ಜೊತೆಗೆ ಯಂತ್ರವಾಗಿ ಬದುಕುತ್ತಿದ್ದಾರೆ. ಕಾರ್ಮಿಕರ ಹಕ್ಕು ಹಾಗೂ ಸವಲತ್ತುಗಳಿಂದ ವಂಚಿತರಾಗಿದ್ದಾರೆ. 


ಇದು ಕೇವಲ ಒಂದೆರಡು ಕಾರ್ಖಾನೆಗಳ ಉದಾಹರಣೆಗಳಲ್ಲಾ. ದೇಶಾದ್ಯಂತ ಬಹುತೇಕ ಕಾರ್ಮಿಕರ ಪರಿಸ್ಥಿತಿ ಇದಕ್ಕಿಂತ ಬಿನ್ನವಾಗೇನೂ ಇಲ್ಲ. ಸಂಘಟಿತ, ಸುಶಿಕ್ಷಿತ ನೌಕರರ ಪರಿಸ್ಥಿತಿಯೇ ಹೀಗೆ ಅತಂತ್ರವಾಗಿರುವಾಗ ಇನ್ನು ಅಸಂಘಟಿತ ವಲಯದ ಕಾರ್ಮಿಕ ವರ್ಗದ ಪರಿಸ್ಥಿತಿ ಇನ್ನೂ ಘೋರವಾಗಿದೆ. ಖಾಯಂ ಕೆಲಸಗಳಿಲ್ಲದೇ ಸರಕಾರದ ಭಾಗ್ಯಗಳ ಮೇಲೆ ಬದುಕುವಂತಹ ನಿಕೃಷ್ಟ ಪರಿಸ್ಥಿತಿಗೆ ಕೂಲಿ ಕಾರ್ಮಿಕ ವರ್ಗದವರು ನೂಕಲ್ಪಟ್ಟಿದ್ದಾರೆ. ವಿಶ್ವದ ಕಾರ್ಮಿಕರೇ ಒಂದಾಗಿ ಎಂದು ಕರೆಕೊಡುವ ಕಾರ್ಮಿಕ ಸಂಘಟನೆಗಳಲ್ಲೇ ಮೊದಲು ಐಕ್ಯತೆಗಳಿಲ್ಲಾ. ಶತಮಾನದ ಹಿಂದಿನ ಮಾರ್ಕ್ಸವಾದಿ ಕಾರ್ಮಿಕ ಸಿದ್ದಾಂತದ ಮಾನದಂಡಗಳನ್ನೇ ಇನ್ನೂ ಹಿಡಿದುಕೊಂಡು ಕಾರ್ಮಿಕ ಕ್ರಾಂತಿ ಮಾಡಿ ದೇಶದ ಆಡಳಿತದ ಚುಕ್ಕಾಣಿ ಹಿಡಿಯುವ ಭ್ರಮೆಯಲ್ಲಿ ಕಮ್ಯೂನಿಸ್ಟ್ ಪಕ್ಷಗಳ ನಾಯಕರುಗಳಿದ್ದಾರೆ. ಆದರೆ.. ಈಗ ಉತ್ಪಾದನೆ ಹಾಗೂ ಉತ್ಪಾದಕ ಸಂಬಂಧಗಳಲ್ಲಿ ತೀವ್ರವಾದ ಬದಲಾವಣೆಗಳಾಗಿವೆ. ಕಾರ್ಮಿಕ ವರ್ಗಗಳಲ್ಲೂ ಸಹ ಬೌದ್ದಿಕ ವಲಯ ಹಾಗೂ ದೈಹಿಕ ವಲಯ ಎಂದು ವಿಭಾಗೀಕರಣವಾಗಿದೆ. ಲಕ್ಷಾಂತರ ರೂಪಾಯಿಗಳ ಸಂಬಳ ಪಡೆಯುವ ಐಟಿ ಬಿಟಿ ವಲಯದ ನೌಕರರೂ ಸಹ ಹೈಟೆಕ್ ಕಾರ್ಮಿಕರೇ ಆಗಿದ್ದಾರೆ. ಈ ಹೈಟೆಕ್ ಕಾರ್ಮಿಕರಿಗೂ ಸಹ ಕೆಲಸದ ಭದ್ರತೆ ಎನ್ನುವುದಿಲ್ಲಾ. ಮಾಡುವ ಕೆಲಸಕ್ಕೆ ಸಮಯದ ಮಿತಿ ಎನ್ನುವುದಿಲ್ಲಾ. ಎಂಟು ಗಂಟೆಗಳ ಕೆಲಸ ಎನ್ನುವುದು ಮೇ ಡೇ ಘೋಷಣೆ. ಆದರೆ.. ಈ ಹೈಟೆಕ್ ಕಾರ್ಮಿಕರು ರಾತ್ರಿ ಹಗಲು ಎನ್ನುವ ಪ್ರಜ್ಞೆ ಕೂಡಾ ಇಲ್ಲದೇ, ಮನೆ ಕಛೇರಿ ಎನ್ನುವ ಭಿನ್ನತೆ ಇಲ್ಲದೇ ಕೂತಲ್ಲೇ ಕೂತು ಬೌದ್ದಿಕ ಕೆಲಸದಲ್ಲಿ ನಿರತರಾಗಿರುತ್ತಾರೆ. ನಿರಂತರ ಕೆಲಸ ಮಾಡಿ ಇರುವ ಎಲ್ಲಾ ಸಾಮರ್ಥ್ಯವನ್ನೂ ಹಾಕಿದರೆ ಮಾತ್ರ ನೌಕರಿ ಉಳಿಸಿಕೊಳ್ಳಲು ಸಾಧ್ಯ. ಇಲ್ಲವಾದರೆ ಹೈರ್ ಆಂಡ್ ಪೈರ್ ರೂಲ್ ಅಪ್ಲೈ ಆಗುತ್ತದೆ. ಮತ್ತೆ ನಿರುದ್ಯೋಗಿಯಾಗಿ ಕೆಲಸಕ್ಕೆ ಜಾಬ್ ಡಾಟ್ ಕಾಮ್ ಗಳಿಗೆ ಅಪ್ಲೈ ಮಾಡುತ್ತಾ ಕೂಡಬೇಕಾಗುತ್ತದೆ. ವ್ಯಕ್ತಿಗತವಾಗಿ ದೈಹಿಕ ಹಾಗೂ ಮಾನಸಿಕ ಆರೋಗ್ಯ  ಮತ್ತು ಕೌಟುಂಬಿಕ ನೆಮ್ಮದಿಯನ್ನು ಹಾಳು ಮಾಡಿಕೊಂಡು ಹಣದ ಹಿಂದೆ ಬಿದ್ದಿರುವ ಈ ಹೈಟೆಕ್ ಕಾರ್ಮಿಕ ವಲಯವನ್ನೂ ಸಹ ಈ ಮಾರ್ಕ್ಸವಾದಿ ಕಾರ್ಮಿಕ ಸಂಘಟನೆಗಳು ಮುಟ್ಟಬೇಕಾಗಿದೆ.

ಈಗ ಇಡೀ ವ್ಯವಸ್ಥೆಯೇ ಸಾವಕಾಶವಾಗಿ ಕಾರ್ಪೋರೇಟ್ ಕಂಪನಿಗಳ ಹಿಡಿತಕ್ಕೆ ಒಳಗಾಗುತ್ತಿದೆ. ಜನರ ಪ್ರತಿನಿಧಿಗಳು ಎನ್ನಿಸಿಕೊಂಡ ಈ ದೇಶವಾಳುವವರು ಬಂಡವಾಳಶಾಹಿಗಳ ಹಿತಾಸಕ್ತಿಗಾಗಿ ತಮ್ಮ ಅಧಿಕಾರವನ್ನು ಬಳಸುತ್ತಿದ್ದಾರೆ.  ಸ್ವತಃ ಪ್ರಧಾನಿಯೇ ಅಂಬಾನಿ ಆದಾನಿಗಳಂತಹ ದೇಸಿ ಬ್ರಹತ್ ಬಂಡವಾಳಿಗರು ಹಾಗೂ ವಿದೇಶಿ ಕಾರ್ಪೋರೇಟ್ ಕಂಪನಿಗಳ ಮ್ಯಾನೇಜರ್ ರೀತಿಯಲ್ಲಿ ವರ್ತಿಸುತ್ತಿದ್ದು ಅವರ ವ್ಯವಹಾರಗಳಿಗೆ ಪೂರಕವಾಗಿ ಕಾನೂನುಗಳು ರೂಪಿಸಲ್ಪಡುತ್ತಿವೆ. ನೋಟ್ ಬ್ಯಾನ್ ಹಾಗೂ ಕ್ಯಾಶಲೆಸ್‌ಗಳ ಹಿಂದೆ ಇದೇ ಬಂಡವಾಳಶಾಹಿ ಕಂಪನಿಗಳ ಹಿತಾಸಕ್ತಿ ಅಡಗಿದೆ. ಆದರೆ.. ಈ ಹುನ್ನಾರಗಳ ಬಗ್ಗೆ ಎಡಪಂಥೀಯ ಕಾರ್ಮಿಕ ಸಂಘಟನೆ ಹಾಗೂ ಪಕ್ಷಗಳು ಜನಾಲೋಂಧನಗಳನ್ನು ಹುಟ್ಟು ಹಾಕುವಲ್ಲಿ ವಿಫಲವಾಗಿವೆ. ಬಹುಸಂಖ್ಯಾತ ಕಾರ್ಮಿಕರು ಹಾಗೂ ಶ್ರಮಜೀವಿ ವರ್ಗಗಳು ಮತ್ತೆ ಆಧುನಿಕ ಗುಲಾಮಗಿರಿಗೆ ಒಳಗಾಗುತ್ತಿದ್ದಾರೆ. ಇಡೀ ದೇಶದ ಆಡಳಿತ ವ್ಯವಸ್ಥೆ ಪ್ಯಾಸಿಸಂ ಕಡೆಗೆ ವಾಲುತ್ತಿದೆ. ಪ್ಯಾಸಿಸಂ ಪೂರ್ಣಪ್ರಮಾಣದಲ್ಲಿ ಬಂದರೆ ದೇಶದ ಎಲ್ಲಾ ದುಡಿಯುವ ವರ್ಗ ಶತಮಾನಗಳ ಕಾಲ ದಮನವನ್ನು ಅನುಭವಿಸುವುದಂತೂ ಗ್ಯಾರಂಟಿ. ಹಾಗೇನಾದರೂ ಆದರೆ ಅದರ ಹೊಣೆಗಾರಿಕೆಯನ್ನು ಕಾರ್ಮಿಕ ಸಂಘಟನೆಗಳ ನಾಯಕರುಗಳು ಹಾಗೂ ಎಡಪಂಥೀಯ ಸಂಘಟನೆಗಳೇ ಹೊರಬೇಕಾಗುತ್ತದೆ. ಆಧುನಿಕ ಗುಲಾಮಗಿರಿ ಯುಗಕ್ಕೆ ದಾರಿಮಾಡಿಕೊಟ್ಟ ಮಹಾಪರಾದದ ಪಾಪಪ್ರಜ್ಞೆಯಲ್ಲಿ ಈ ಎಲ್ಲಾ ಸಂಘಟನೆಗಳು ಹಾಗೂ ಪಕ್ಷಗಳು ನರಳಬೇಕಾಗುತ್ತದೆ.


ಎಲ್ಲಿವರೆಗೂ ಎಲ್ಲಾ ರೀತಿಯ ಸಂಘಟಿತ ಹಾಗೂ ಅಸಂಘಟಿತ ವಲಯಗಳ ದುಡಿಯುವ ಜನರು ಸ್ವಾಭಿಮಾನದಿಂದ ಬದುಕುವಂತಹ ವ್ಯವಸ್ಥೆ ನಿರ್ಮಿಸಲು ಈ ಕಾರ್ಮಿಕ ಸಂಘಟನೆಗಳು ಶತಾಯ ಗತಾಯ ಕೆಲಸ ಮಾಡುವುದಿಲ್ಲವೋ. ಎಲ್ಲಿವರೆಗೂ ಈ ಎಡರಂಗದ ಪಕ್ಷಗಳು ಹಾಗೂ ಸಂಘಟನೆಗಳು ತಮ್ಮೆಲ್ಲಾ ಸೈದ್ದಾಂತಿಕ ಭಿನ್ನಾಭಿಪ್ರಾಯಗಳನ್ನು ಮರೆತು ದುಡಿಯುವ ವರ್ಗಗಳ ವಿಮೋಚನೆಯತ್ತ ತಮ್ಮ ಐಕ್ಯ ಹೋರಾಟವನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಮುನ್ನಡೆಸುವುದಿಲ್ಲವೋ ಅಲ್ಲಿವರೆಗೂ ಮೇ ಡೇ ಎನ್ನುವುದು ಕೇವಲ ವಾರ್ಷಿಕ ಶುಷ್ಕ ಆಚರಣೆಯಾಗುತ್ತದೆ. ಒಂದು ಕಡೆಯಿಂದಾ ದೇಶದ ಆಳುವ ವರ್ಗ ದುಡಿಯುವ ವರ್ಗಗಳನ್ನು ಸದಾ ಅತಂತ್ರದಲ್ಲಿಟ್ಟು ಶೋಷಿಸುತ್ತಲೇ ತಮ್ಮ ಬಂಡವಾಳಶಾಹಿ ಸಾಮ್ರಾಜ್ಯವನ್ನು ವಿಸ್ತರಿಸುತ್ತಿದ್ದರೆ.. ಇನ್ನೊಂದು ಕಡೆಗೆ ಜನವಿರೋಧಿಕ ವ್ಯವಸ್ಥೆಯ ವಿರುದ್ಧ ಜನಾಂದೋಲನಗಳನ್ನು ರೂಪಿಸಿ ದುಡಿಯುವ ವರ್ಗಗಳ ಹಕ್ಕುಗಳಿಗಾಗಿ ಹೋರಾಡಬೇಕಾದ ಸಂಘಟನೆಗಳು ಹಾಗೂ ಪಕ್ಷಗಳು ವಿಘಟನೆಗೊಳ್ಳುತ್ತಾ ಸಾಗುತ್ತಿವೆ. ಬಂಡವಾಳಶಾಹಿ ಶಕ್ತಿಗಳು ತಮ್ಮ ತಾಕತ್ತನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಿದ್ದರೆ.. ಕಾರ್ಮಿಕ ಸಂಘಟನೆಗಳು ಹಾಗೂ ಎಡಪಂಥೀಯ ಪಕ್ಷಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತಿವೆ. ಇದರಿಂದಾಗಿ ಬಂಡವಾಳಿಗರ ಬಣ್ಣ ಬಣ್ಣದ ಮಾತುಗಳಿಗೆ, ಬಂಡವಾಳಿಗರ ಪೋಷಣೆಯಲ್ಲಿರುವ ರಾಜಕಾರಣಿಗಳ ಹುಸಿ ಬರವಸೆಗಳು ಹಾಗೂ ತಾತ್ಕಾಲಿಕ ಭಾಗ್ಯ ಯೋಜನೆಗಳಿಗೆ ಮರುಳಾದ ಮಹಾಜನತೆ ಮತ್ತೆ ಮತ್ತೆ ಈ ಭ್ರಷ್ಟರನ್ನು ಹಾಗೂ ಬಂಡವಾಳಿಗರ ಹಿತರಕ್ಷಕರನ್ನು ತಮ್ಮ ಪ್ರತಿನಿಧಿಗಳಾಗಿ ಆರಿಸಿ ಕಳಿಸುತ್ತಲೇ ಇರುತ್ತಾರೆ. ಜನರಲ್ಲಿ ಜಾಗೃತಿ ಮೂಡಿಸಿ ಹೋರಾಟ ರೂಪಿಸುವಲ್ಲಿ ಎಲ್ಲಾ ನಮೂನಿಯ ಎಡರಂಗದವರು ಅಸಫಲರಾಗುತ್ತಿದ್ದಾರೆ. ಇಂತಹ ಆತಂಕಕಾರಿ ಸನ್ನಿವೇಶದಲ್ಲಿ ಮೇ ಡೇ ದಿನ ಇನಕ್ಯೂಲಾಬ್ ಜಿಂದಾಬಾದ್ ಎಂದು ಘೋಷಣೆಗಳನ್ನು ಕೂಗಿದರೆ ಪ್ರಯೋಜನವಾದರೂ ಏನು. ಕಾರ್ಮಿಕ ಸಂಘಟನೆಗಳ ನಾಯಕರುಗಳಲ್ಲೇ ಒಮ್ಮತ ಇಲ್ಲದಿರುವಾಗ “ವಿಶ್ವ ಕಾರ್ಮಿಕರೇ ಒಂದಾಗಿ ಹೋರಾಟಕ್ಕೆ ಮುಂದಾಗಿ” ಎಂದು ಘೋಷಣೆಗಳ ಗರ್ಜಿಸುವುದರಿಂದ ಆಗುವುದಾದರೂ ಏನು.


ಎಲ್ಲಕ್ಕಿಂತಲೂ ಮೊದಲು ಕಾರ್ಮಿಕ ಸಂಘಟನೆಗಳು ಬದಲಾದ ಕಾಲಕ್ಕೆ ತಕ್ಕಂತೆ ತಮ್ಮ ಸಿದ್ದಾಂತಗಳನ್ನು ಬದಲಾಯಿಸಿಕೊಳ್ಳಬೇಕಿದೆ.  ಕಾರ್ಮಿಕರ ಹಿತರಕ್ಷಣೆ ಮಾಡುತ್ತೇವೆನ್ನುವ ಎಲ್ಲಾ ಎಡಪಂಥೀಯ ಕಾರ್ಮಿಕ ಸಂಘಟನೆಗಳು ತಮ್ಮೆಲ್ಲಾ ಭಿನ್ನಾಭಿಪ್ರಾಯವನ್ನು ಮರೆತು ಐಕ್ಯ ಹೋರಾಟಗಳನ್ನು ನಿರಂತರವಾಗಿ ಮುನ್ನಡೆಸಬೇಕಾಗಿದೆ. ಬೌದ್ದಿಕ ಆಗೂ ದೈಹಿಕ ಶ್ರಮಜೀವಿಗಳ ಅತಂತ್ರ ಬದುಕಿನ ಹಿಂದಿನ ಹುನ್ನಾರಗಳ ವಿರುದ್ದ ಜನರನ್ನು ಜಾಗೃತಗೊಳಿಸಬೇಕಾಗಿದೆ. ಕೆಲಸದ ಭದ್ರತೆ, ಕನಿಷ್ಟ ಸವಲತ್ತುಗಳು ಹಾಗೂ ಸ್ವಾಭಿಮಾನದ ಬದುಕನ್ನು ಎಲ್ಲಾ ರೀತಿಯ ದುಡಿಯುವ ವರ್ಗ ಪಡೆಯುವವರೆಗೂ ಜನಹೋರಾಟ ನಿರಂತರವಾಗಿ ಜಾರಿಯಲ್ಲಿಡಬೇಕಿದೆ. ಜನ ಶೋಷಕ ಬಂಡವಾಳಿಗರ  ವಿರುದ್ದ ದುಡಿಯುವ ಜನತೆಯನ್ನು ಒಟ್ಟುಗೂಡಿಸಿ ಯುದ್ದವನ್ನೇ ಸಾರಬೇಕಿದೆ. ಆಗ ಹೆಮ್ಮೆಯಿಂದಾ ಮೇ ಡೇ ದಿನ ಇನ್‌ಕ್ಯೂಲಾಬ್ ಜಿಂದಾಬಾದ್ ಎಂದು ಹೇಳಬಹುದಾಗಿದೆ. ಹಲವಾರು ಜನ ಕಾರ್ಮಿಕರು ಮೇ 1 ರಂದು ರಕ್ತವನ್ನು ಹರಿಸಿ ತ್ಯಾಗ ಬಲಿದಾನ ಮಾಡಿ ವಿಶ್ವ ಕಾರ್ಮಿಕರಿಗೆ ಕನಿಷ್ಟ ಹಕ್ಕುಗಳನ್ನು ಜಾರಿಗೆ ಬರುವಂತೆ ಮಾಡಿದರು. ಈಗ ಅವುಗಳನ್ನಾದರೂ ಕಾಪಾಡಿಕೊಳ್ಳುವ ಕೆಲಸವನ್ನು ಕೆಂಬಾವುಟದವರು ಮಾಡಬೇಕಿದೆ. ಕಾರ್ಮಿಕ ಸಂಘಟನೆ ಹಾಗೂ ಪಕ್ಷಗಳ ನಾಯಕರುಗಳು ತಮ್ಮ ಸಾಂಪ್ರದಾಯಿಕ ಸ್ಟ್ರ್ಯಾಟಜಿಯನ್ನು ಬದಲಾಯಿಸಿ ಆತ್ಮಶೋಧನೆ ಮಾಡಿಕೊಂಡು ದುಡಿಯುವ ಜನರ ಹಕ್ಕುಗಳನ್ನು ಕಾಪಾಡಲು ಹೊಸ ಮಾರ್ಗಗಳನ್ನು ಆನ್ವೇಷಿಸಬೇಕಿದೆ. ಮತ್ತೆ ದುಡಿಯುವ ಜನರ ನಡುವಿನಿಂದ ನಿಜವಾದ ಜನನಾಯಕರು ಹುಟ್ಟಿಬರಬೇಕಿದೆ. ಎಲ್ಲಾ ದುಡಿಯುವ ವರ್ಗದ ಜನತೆ ಒಕ್ಕೋರಲಿನಿಂದ “ನಾವು ಬೆವರನು ಸುರಿಸಿ ದುಡಿಯುವ ಜನ ನಮ್ಮ ಬೆವರಿನ ಪಾಲನು ಕೇಳುವೆವು, ತುಂಡು ಭೂಮಿಯಲ್ಲಾ, ಒಂದು ದೇಶವಲ್ಲಾ ಇಡೀ ಭೂಗೋಳವನೇ ಕೇಳುವೆವು..” ಎಂದು ಹಾಡಬೇಕಿದೆ. ಮೇ ಡೇ ಉದ್ದೇಶ ಸಫಲವಾಗಬೇಕಿದೆ. 

   - ಶಶಿಕಾಂತ ಯಡಹಳ್ಳಿ




ಭಾನುವಾರ, ಏಪ್ರಿಲ್ 30, 2017

ತಹ ತಹ... 90 ಸಾಧಕಿಯರಿಗೆ ವೇದನೆಕೊಟ್ಟ ಸಾಧನೆ ಮಾಡಿದ ಸುವರ್ಣ ವಾಹಿನಿ :



ಹತ್ತು ಮಹಿಳಾ ಸಾಧಕರಿಗೆ ಸನ್ಮಾನ; ಹಲವಾರು ಸಾಧಕಿಯರಿಗೆ ಅವಮಾನ : ಹರಾಜಾಯ್ತು ಸುವರ್ಣ ವಾಹಿನಿಯ ಮಾನ..



ಸುವರ್ಣ ಸುದ್ದಿ ವಾಹಿನಿ ಮತ್ತು ಕನ್ನಡಪ್ರಭ ಪತ್ರಿಕೆಗಳು ಕರ್ನಾಟಕದಲ್ಲಿರುವ ಮಹಿಳಾ ಸಾಧಕಿಯರನ್ನು ಗುರುತಿಸಿ ಪ್ರಶಸ್ತಿ ಕೊಡುವ ಉತ್ತಮ ಯೋಜನೆಯೊಂದನ್ನು ಹಮ್ಮಿಕೊಂಡಿದ್ದವು.  ಅದಕ್ಕಾಗಿ ತಿಂಗಳುಗಳ ಕಾಲ ಪ್ರತಿ ದಿನ ತಮ್ಮ  ವಾಹಿನಿಯಲ್ಲಿ ಸಾಧಕಿಯರಿಂದ ಅರ್ಜಿಗಳನ್ನು ಆಹ್ವಾನಿಸುತ್ತಲೇ ಇದ್ದವು. ನಾಡಿನಾದ್ಯಂತ ಆರು ನೂರಕ್ಕೂ ಹೆಚ್ಚು  ಪ್ರಶಸ್ತಿ ಆಕಾಂಕ್ಷಿ ಮಹಿಳೆಯರುಗಳು ತಮ್ಮ ಸಾಧನೆಯ ವಿವರಗಳೊಂದಿಗೆ ಅರ್ಜಿ ಹಾಕಿದ್ದರು. ನಟಿ ರಾಜಕಾರಣಿ  ಮಾಳವಿಕಾ, ಕಲಾವಿದೆ ಜಯಂತಿ ಹಾಗೂ ಸುಧಾರಾಣಿಯವರು ತೀರ್ಪುಗಾರರಾಗಿದ್ದು ಹತ್ತು ಜನ ಸಾಧಕರನ್ನು ವಿವಿಧ ಕ್ಷೇತ್ರಗಳಿಂದ ಆಯ್ಕೆ ಮಾಡುವ ಕಸರತ್ತಿನಲ್ಲಿ ಯಶಸ್ವಿಯಾಗಿದ್ದರು. ಎಪ್ರೀಲ್ ೨೯ರಂದು ವಿಜಯನಗರದಲ್ಲಿರುವ “ಕಾಸಿಯಾ ಉದ್ಯೋಗ ಭವನ”ದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭದ ಪೂರ್ವಭಾವಿ ಶೂಟಿಂಗ್ ಮಾಡಲಾಯಿತು. ವಿಶೇಷ ಜ್ಯೂರಿ ಅವಾರ್ಡ ಸೇರಿ ಒಟ್ಟು ಹನ್ನೊಂದು ಮಹಿಳೆಯರಿಗೆ ಪ್ರಶಸ್ತಿಯನ್ನು ಅತಿಥಿಗಳಾದ ಸಾಲುಮರದ ತಿಮ್ಮಕ್ಕ, ಆರುಂಧತಿ ನಾಗ್, ಸಿನೆಮಾ ನಟಿಯರಾದ ತಾರಾ ಮತ್ತು ಹರ್ಷಿತಾ ಪೂಣಚ್ಚರವರು ಕೊಡಮಾಡಿದರು.

ಇಡೀ ಕಾರ್ಯಕ್ರಮ ಚೆನ್ನಾಗಿಯೇ ನಡೆಯುತ್ತಿತ್ತು. ಸುವರ್ಣ ವಾಹಿನಿ ಮೊದಲ ಬಾರಿಗೆ ಮಹಿಳಾ ಸಾಧಕಿಯರನ್ನು ಗುರುತಿಸಿ ಉತ್ತಮ ಕೆಲಸವನ್ನು ಮಾಡುತ್ತಿದೆ ಎಂದೇ ಎಲ್ಲರೂ ನಂಬಿದ್ದರು.  ಆದರೆ.. ಐದಾರು ಸಾಧಕಿಯರಿಗೆ ಪ್ರಶಸ್ತಿ ಪ್ರಧಾನ ಮಾಡಿದ ನಂತರ ವೇದಿಕೆಯ ಬಲಬಾಗದ ಪ್ರವೇಶದ್ವಾರದಿಂದ ಅಪಸ್ವರಗಳು ಕೇಳ ಬರತೊಡಗಿದವು. ಮೊದಲು ಕೇವಲ ಒಂದಿಬ್ಬರ ಗೊಣಗುವಿಕೆಯಾಗಿದ್ದ ದ್ವನಿಗಳು ಬರುಬರುತ್ತಾ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಗಟ್ಟಿಗೊಳ್ಳತೊಡಗಿದವು. ಏನಾಯಿತು ಎಂದು ವಿಚಾರಿಸಿದರೆ ದಿಗಿಲು ಬೀಳುವ ಸಂಗತಿಗಳು ಹೊರಬೀಳತೊಡಗಿದವು.

ಈ ವಾಹಿನಿಗಳ ಹಣೇಬರಹವೇ ಇಷ್ಟೇ. ಎಲ್ಲಿ ತಮಗೆ ಲಾಭ ಇಲ್ಲವೋ ಅಂತಹ ಕೆಲಸವನ್ನು ಮಾಡಲು ಸಾಧ್ಯವೇ ಇಲ್ಲ ಎನ್ನುವಷ್ಟು ಲಾಭಬಡುಕಗಳಾಗಿವೆ. ಟಿಆರ್‌ಪಿ ಹಾಗೂ ಪ್ರಚಾರಕ್ಕಾಗಿ ಏನು ಬೇಕಾದರೂ ಮಾಡುತ್ತವೆ ಎನ್ನುವುದಕ್ಕೆ ಈ ಪ್ರಶಸ್ತಿ ಪ್ರಧಾನ ಪ್ರಹಸನ ಸಾಕ್ಷಿಯಾಯಿತು. ಈ ಸಲ ಮಹಿಳಾ ಸಾಧಕರ ಭಾವನೆಗಳ ಜೊತೆಗೆ ಆಟವಾಡಿ ಅನೇಕ ಸಾಧಕರಿಗೆ ಅವಮಾನವಾಗುವಂತೆ ಮಾಡಿದ್ದಂತೂ ಅಕ್ಷಮ್ಯ. ಕಲಾವಿದರು ಸಾಧಕರು ಎಂದರೆ ಈ ವಾಹಿನಿಗಳು ಆಟದ ಕಾಯಿಗಳು ಎಂದುಕೊಂಡಂತಿವೆ. ಹೀಗೆ ಪ್ರಶಸ್ತಿ ಕೊಡುತ್ತೇವೆ ಎಂದು ಕರೆಯಿಸಿ ಕೊಡದೇ ಅವಮಾನ ಮಾಡಬಾರದಿತ್ತು. ಮಾಡಿಯಾಗಿತ್ತು.

ಅಸಲಿಗೆ ಆಗಿದ್ದೇನಪ್ಪಾ ಅಂತಂದ್ರೆ.. ಖಾಸಿಯ ಭವನದಲ್ಲಿ ಇರೋದೇ ಮುನ್ನೂರು ಚಿಲ್ಲರೆ ಖುರ್ಚಿಗಳು. ಇಷ್ಟು ಜನ ಪ್ರೇಕ್ಷಕರನ್ನು ಈ ಟ್ರಾಫಿಕ್ ಸಿಟಿಯಲ್ಲಿ ಎಲ್ಲಿಂದ ತರುವುದು? ದೊಡ್ಡ ಸ್ಟಾರ್ ನಟ ನಟಿಯರಿಗೆ ಪ್ರಶಸ್ತಿಗಳನ್ನು ಕೊಟ್ಟಿದ್ದರೆ ಇಲ್ಲವೇ ಪ್ರಶಸ್ತಿ ಕೊಡಲು ಕರೆಯಿಸಿದ್ದರೆ ಅಭಿಮಾನಿಗಳು ಕರೆಯದೇ ಬರುತ್ತಿದ್ದರು. ಆದರೆ.. ಅದೂ ಇಲ್ಲಿ ಪ್ರಶಸ್ತಿ ಪಡೆದವರ‍್ಯಾರೂ ಸೆಲಿಬ್ರಿಟಿಗಳಾಗಿರಲಿಲ್ಲಾ. ಪ್ರಶಸ್ತಿ  ಕೊಡಲು ಬಂದವರಿಗೆ ಅಭಿಮಾನಿಗಳ ಬಳಗವಿಲ್ಲಾ.  ಹೀಗಾಗಿ ಇಡೀ ಸಭಾಂಗಣ ಖಾಲಿ  ಹೊಡೆಯುವುದಂತೂ ಗ್ಯಾರಂಟಿ ಎಂದು ಈ ವಾಹಿನಿಯ ಸಂಘಟಕರಿಗೆ ಮೊದಲೆ ಗೊತ್ತಿತ್ತೆಂದು ಕಾಣುತ್ತದೆ. ಅದಕ್ಕಾಗಿ ಉಚಿತ ಪಾಸ್ ಕೊಡುತ್ತೇವೆಂದು ತಮ್ಮ ಚಾನೆಲ್ಲನಲ್ಲಿ ಬಿತ್ತಿರಿಸಿದರೂ ಯಾರೂ ಪಾಸ್‌ಗೆ ಕ್ಯಾರೇ ಎನ್ನಲಿಲ್ಲಾ. ಅದಕ್ಕೆ ಆತಂಕಗೊಂಡ ಆಯೋಜಕರು ಪ್ರೇಕ್ಷಕರನ್ನು ಹೆಚ್ಚಿಸಲು ಒಂದು ಐಡಿಯಾ ಕತರ್ನಾಕ್ ಮಾಡಿದ್ದರು. ಪ್ರಶಸ್ತಿಗೆ ಅರ್ಜಿ ಹಾಕಿಕೊಂಡ ಬೆಂಗಳೂರು ಮೂಲದ ಸುಮಾರು ಐವತ್ತು ಜನರಿಗೆ ಪೋನ್ ಮಾಡಿ ನೀವು ಸುವರ್ಣ ಮಹಿಳಾ ಸಾಧಕಿಯರು ಪ್ರಶಸ್ತಿಗೆ ಆಯ್ಕೆ ಆಗಿದ್ದೀರಿ, ಎಪ್ರಿಲ್ 29 ರಂದು ನಿಮ್ಮ ಕುಟುಂಬ ಪರಿವಾರ ಸಮೇತ ಬನ್ನಿ ಎಂದು ಕರೆಯ ಮೇಲೆ ಕರೆ ಮಾಡಿ ಕರೆಯತೊಡಗಿದರು.

ಈ ಕರೆಗಳಿಂದ ಪುಲ್ ಖುಷಿಯಾದ ಸಾಧಕ ಮಹಿಳೆಯರು ತಮ್ಮ ಸ್ನೇಹಿತರು ಆಪ್ತರು ಹಾಗೂ ಬಂಧು ಬಳಗಕ್ಕೆಲ್ಲಾ ಸಂತಸದ ವಿಚಾರ ತಿಳಿಸಿ ಸಂಭ್ರಮಿಸಿದರು. ಪ್ರಶಸ್ತಿ ಸಮಾರಂಭಕ್ಕೆ ಬರಲೇಬೇಕೆಂದು ಒತ್ತಾಯಿಸಿದರು. ಸಮಾರಂಭ ನಡೆದಾಗ ಪ್ರೇಕ್ಷಕರನ್ನೂ ಸಹ ಟಿವಿಯಲ್ಲಿ ತೋರಿಸುತ್ತಾರೆಂಬ ಗೊತ್ತಿದ್ದ ಆಪ್ತರೂ ಬಂದರು. ಅಂತೂ ಇಂತೂ ಒಬ್ಬೊಬ್ಬ ಮಹಿಳೆಯರೂ ಕನಿಷ್ಟ ನಾಲ್ವರಿಂದ ಹತ್ತು ಜನರವರೆಗೂ ಪ್ರೇಕ್ಷಕರನ್ನು ಕರೆದುಕೊಂಡು ಬಂದಿದ್ದರು. ಅಂತೂ ಇಂತೂ ಮುಕ್ಕಾಲು ಭಾಗ ಸಭಾಂಗಣ ತುಂಬಿ ಹೋಯಿತು. ಆಯೋಜಕರ ಮುಖಗಳು ಒಂಚೂರು ಅರಳಿದವು.

ಆದರೆ.. ಪ್ರಶಸ್ತಿಗಳನ್ನು ಯಾರಿಗೆ ಕೊಡಬೇಕೆಂದು ಪೂರ್ವ ನಿರ್ಧಾರಿತವಾಗಿತ್ತೆಂದು ಪ್ರಶಸ್ತಿ ಪಡೆದವರ ವಿಡಿಯೋ ಕ್ಲಿಪ್ಪಿಂಗ್ ಗಳು ಎಲ್‌ಸಿಡಿ ಸ್ಕ್ರೀನ್ ಮೇಲೆ ಡಿಸ್ಪ್ಲೇ ಆಗತೊಡಗಿದವೋ ಉಳಿದ ಆಹ್ವಾನಿತ ಸಾಧಕಿಯರಿಗೆಲ್ಲಾ ಅನುಮಾನ ಶುರುವಾಯಿತು. ಯಾಕೆಂದರೆ ಅವರ‍್ಯಾರ ಸಾಧನೆಯ ವಿಡಿಯೋವನ್ನು ಪೂರ್ವಭಾವಿಯಾಗಿ ಚಿತ್ರೀಕರಿಸಿರಲಿಲ್ಲಾ.  ಯಾವಾಗ ತಮಗೆ ಮೋಸವಾಗಿದೆ ಎಂದು ಗೊತ್ತಾಯಿತೋ ಆಗ ಕೆಲವರ ಅಸಮಾಧಾನ ಹೆಚ್ಚಾಗತೊಡಗಿತು. ತಮ್ಮ ಅಸಹನೆಯನ್ನು ವ್ಯಕ್ತ ಪಡಿಸುತ್ತಾ ಒಂದು ದೊಡ್ಡ ಗುಂಪು ಪ್ರವೇಶದ್ವಾರದ ಹೊರಗೆ ನಿಂತು ಮಾತಿನ ಚಕಮುಖಿ ನಡೆಸಿತು. ಹನುಮಕ್ಕನವರ್ ಎನ್ನುವ ನಿರೂಪಕ ಓಡಿ ಬಂದು ಸಮಾಧಾನ ಮಾಡಲು  ಪ್ರಯತ್ನಿಸಿದರೂ ಆಗಲಿಲ್ಲಾ. ಇನ್ನೂ  ಕೆಲವಾರು ಜನ ಆಯೋಜಕರು ಬಂದು ಎಲ್ಲೋ ಏನೋ ತಪ್ಪಾಗಿದೆ ಕ್ಷಮಿಸಿ ಬಿಡಿ ಎಂದು ಕೇಳಿದರೂ ನೊಂದವರು ಕೇಳಲಿಲ್ಲಾ. ಯಾಕೆಂದರೆ ಅವರಿಗೆಲ್ಲಾ ಪ್ರಶಸ್ತಿ ಕೊಟ್ಟಿಲ್ಲಾ ಎನ್ನುವುದಕ್ಕಿಂತಲೂ ಪ್ರಶಸ್ತಿ ಕೊಟ್ಟಿದ್ದಾರೆಂದು ಊರೆಲ್ಲಾ ಹೇಳಿಕೊಂಡು ಬಂದಿದ್ದು ಹುಸಿಯಾಯಿತಲ್ಲಾ ಎನ್ನುವ ವೇದನೆ ಮಡುಗಟ್ಟಿತ್ತು. ಜೊತೆಗೆ ಕರೆದುಕೊಂಡು ಬಂದ ಬಂಧುಬಾಧವರ ಮುಂದೆ ಹೀಗೆ ಪ್ರಶಸ್ತಿ ಕೊಡದೇ ಅವಮಾನಿಸಲಾಯಿತಲ್ಲಾ ಎನ್ನುವ ನೋವು ಅವರೆದೆಯಲ್ಲಿ ಇರಿಯತೊಡಗಿತ್ತು.

ಹಾಗೆ ಅವಮಾನಿತರಾದವರಲ್ಲಿ ಬಲು ದೊಡ್ಡ ಕಲಾವಿದೆಯರು, ಸಾಧಕಿಯರು ಇದ್ದರು. ಓಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟು ಸರೋಜಾರವರಿಗೆ ಈಗ 79 ವರ್ಷ. ಅವರು ತಮ್ಮ ಬಂಗಾರ ಬೆಳ್ಳಿ ತಾಮ್ರದ ಪದಕಗಳ ಒಂದು ಗುಚ್ವವನ್ನೇ ಪ್ರದರ್ಶಿಸುತ್ತಾ ತಮ್ಮ ಇಂತಹ ಜೀವನ ಸಾಧನೆಗೆ ಈ ವಾಹಿನಿ ಎಂತಾ ಅವಮಾನ ಮಾಡಿತೆಂದು ಅವಲತ್ತುಕೊಳ್ಳುತ್ತಿದ್ದರು. ಫೈನ್ ಆರ್ಟಲ್ಲಿ ಸಾಧನೆ ಮಾಡಿದ ಡಾ.ಪ್ರಭಾ ಶಂಕರ್ ರವರಿಗೆ 77 ವರ್ಷ ವಯೋಮಾನ. ಅವಮಾನದಿಂದ ಅವರ ಕಣ್ಣಲ್ಲಿ ನೀರು  ಜಿನುಗುತ್ತಿತ್ತು. ಪಂಕಜಾಕ್ಷಿ ಯವರು ಹರಿಕಥಾ ಕಲಾವಿದೆ. ಅವರ ಇಡೀ ಕುಟುಂಬವೇ ಕಲೆಗಾಗಿ ಬದುಕನ್ನು ಮೀಸಲಿಟ್ಟಿದೆ. ಪಂಕಜಾಕ್ಷಿ ತಮ್ಮ ಜೊತೆಗೆ ಹತ್ತಾರು ಜನರನ್ನು ಕರೆತಂದಿದ್ದರು. ಪ್ರಶಸ್ತಿ ಕೊಡದೇ ವಂಚಿತರಾಗಿದ್ದಕ್ಕೆ ಅವರ ಆತ್ಮವಿಶ್ವಾಸವೇ ಕುಸಿದುಹೋಗಿತ್ತು.  ಶಿಲ್ಪಕಲೆಯಲ್ಲಿ ಸಾಧನೆ ಮಾಡಿದ ಅನುಪಮಾ, ಸಮಾಜಸೇವೆ ಮಾಡುತ್ತಿರುವ ಮಂಗಲಾ ಪಾಟೀಲ್.. ಹೀಗೆ ಹಲವಾರು ಮಹಿಳೆಯರು ತಮಗಾದ ಅವಮಾನದಿಂದ ಅತ್ಯಂತ ಆತಂಕಕ್ಕೊಳಗಾಗಿದ್ದರು. ಇವರೆಲ್ಲರಿಗಿಂತಾ ನೋವನ್ನು ಮೌನವಾಗಿ ಸಹಿಸಿಕೊಂಡು ಅಸಹಾಯಕತೆಯಿಂದಾ ಮೂಲೆಯಲ್ಲಿ ನಿಂತಿದ್ದವರು ಮೂರ‍್ನಾಲ್ಕು ಜನ ವಿಕಲಚೇತನರು. ಹೀಗೆ ಕಲಾವಿದರನ್ನು, ಅದರಲ್ಲೂ ಮಹಿಳಾ ಸಾಧಕಿಯರನ್ನು, ವೃದ್ದರನ್ನು, ಅಂಗವಿಕಲಚೇತನರನ್ನು ಪ್ರಶಸ್ತಿ ಕೊಡುತ್ತೇವೆ ಕುಟುಂಬ ಪರಿವಾರ ಸಮೇತರಾಗಿ ಬನ್ನಿ ಎಂದು ಕರೆದು ಪ್ರಶಸ್ತಿ ಕೊಡದೇ ಅವಮಾನಿಸಿದ್ದಕ್ಕೆ ಇಡೀ  ಸುವರ್ಣ ವಾಹಿನಿ  ಹಾಗೂ ಕನ್ನಡ ಪ್ರಭ ಬಳಗ ತಲೆತಗ್ಗಿಸಬೇಕಿದೆ. ಆದರೆ.. ಮನುಷ್ಯ ಸಂಬಂಧದ ಸೂಕ್ಷ್ಮತೆಗಳನ್ನೇ ಕಳೆದುಕೊಂಡ, ಭಾವನೆಗಳನ್ನು ವ್ಯಾಪಾರದ ಸರಕಾಗಿಸಿಕೊಂಡ ಈ ಮೀಡಿಯಾಂಗದ ಉದ್ಯಮಿಗಳಿಗೆ ಹಾಗೂ ನೌಕರರಿಗೆ ಸೂಕ್ಷ್ಮ ಮನಸ್ಸಿನ ತಲ್ಲಣ ತಳಮಳಗಳು ಅದು ಹೇಗೆ ತಾನೇ ಅರಿವಾಗಬೇಕು. 

ಇಷ್ಟಕ್ಕೂ ಸುವರ್ಣ ವಾಹಿನಿ ಕೊಡಮಾಡುವ ಸಾಧಕಿಯರ ಅವಾರ್ಡ ಲಕ್ಷಾಂತರ ಹೋಗಲಿ ಸಾವಿರಾರು ರೂಪಾಯಿಗಳನ್ನು ಒಳಗೊಂಡಿದೆಯಾ ಎಂದರೆ ಅದೂ ಇಲ್ಲಾ. ಕೇವಲ  ಒಂದು ಸ್ಮರಣ ಫಲಕದ ಜೊತೆಗೊಂದು ಮೊಮೆಂಟೋ ಕೊಟ್ಟು ಕೈಗೊಂದು ಹೂಗುಚ್ಚ ಇಟ್ಟು ಒಂದು ನಿಮಿಷದಲ್ಲಿ ಸನ್ಮಾನ ಎನ್ನುವ ಶಾಸ್ತ್ರ ಮುಗಿಸಿ ಪ್ರಶಸ್ತಿಗೆ ಆಯ್ಕೆಗೊಂಡವರನ್ನು ಕಳುಹಿಸಲಾಗುತ್ತಿತ್ತು. ಬೇರೆ ಬೇರೆ ದೂರದ ಊರುಗಳಿಂದ ಸ್ವಂತ ಖರ್ಚು ಮಾಡಿಕೊಂಡು ಬಂದಿದ್ದ ಸಾಧಕಿಯರ  ಕೈಗೆ ಹೂಗುಚ್ಚದ ಜೊತೆಗೆ ಒಂದಿಷ್ಟು ಕ್ಯಾಶ್ ಅವಾರ್ಡ್ ಕೊಡಬಹುದಾಗಿತ್ತು. ಆದರೆ.. ಹೆಚ್ಚು ಹಣ ಖರ್ಚು ಮಾಡದೇ ಟಿಆರ್ಪಿ ಪಡೆದು ಪ್ರಚಾರವನ್ನು ಪಡೆಯುವುದು ಈ ವಾಹಿನಿಯ ಉದ್ದೇಶವಾಗಿತ್ತು. ಅದಕ್ಕೆ ಮಹಿಳಾ ಸಾಧಕಿಯರು ಬೇಕಾಗಿತ್ತು.  ಕೆಲವರು ಸಿಕ್ಕಷ್ಟೇ ಸಾಕು ಟಿವಿಯಲ್ಲಿ ಬರುತ್ತೇವಲ್ಲಾ ಎಂಬ ಅಲ್ಪತೃಪ್ತಿಯಿಂದಾ ಊರಿನ ದಾರಿ ಹಿಡಿದರೆ, ಪ್ರಶಸ್ತಿ ಪಡೆಯಲು ಆಹ್ವಾನಿತರಾಗಿ ಬಂದ ಹಲವಾರು ಮಹಿಳಾ ಸಾಧಕಿಯರು ಅತೃಪ್ತಿಯಿಂದಾ ಆಯೋಜಕರನ್ನು ಶಪಿಸುತ್ತಾ ಮನೆಗೆ ಹೊರಟರು.
  
ಕೊನೆಗೂ ಅರ್ಧದಷ್ಟು ಜನರು ವಾಹಿನಿಯ ಆವಾಂತರವನ್ನು ಬೈದುಕೊಳ್ಳುತ್ತಲೇ ನಿರಾಸೆಯಿಂದಾ ಮನೆಯ ದಾರಿ ಹಿಡಿದರು.  ಇನ್ನು ಕೆಲವರು ಗಟ್ಟಿದ್ವನಿಯಲ್ಲಿ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿ ಕೋಣನ ಮುಂದೆ ಕಿನ್ನುರಿ ಬಾರಿಸಿದರೆ ಏನೂ ಪ್ರಯೋಜನವಿಲ್ಲವೆಂದು ತಿಳಿದುಕೊಂಡು ಬಂದ ದಾರಿಗೆ ಸುಂಕವಿಲ್ಲವೆಂದು ಸುರಿಯುತ್ತಿರುವ ಮಳೆನೀರಲ್ಲಿ ಅಕ್ಕಪಕ್ಕದವರಿಗೆ ಕಾಣದಂತೆ ನಮ್ಮ ಕಣ್ಣೀರನ್ನು ಒರೆಸಿಕೊಳ್ಳುತ್ತಲೇ ಮನೆ ದಾರಿ ಹಿಡಿದರು. ಆಗ ಕನ್ನಡಪ್ರಭದ ಸಂಪಾದಕರಾದ ರವಿ ಹೆಗಡೆಯವರು ಓಡಿ ಬಂದವರು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು.  ಪ್ರಶಸ್ತಿ ವಂಚಿತರೆಲ್ಲಾ ಮನೆಗೆ ಹೋಗಿ ನಾಲ್ಕಾರು ಜನರು ಮಾತ್ರ ಉಳಿದದ್ದನ್ನು ನೋಡಿ ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾದರು. ಇದ್ದಕ್ಕಿದ್ದಂತೆ ವಿಶೇಷ ಜ್ಯೂರಿ  ಅವಾರ್ಡ ಕೊಡುತ್ತೇವೆಂದು ಘೋಷಿಸಿದರು. ಆದರೆ ಆ ನಾಲ್ಕು ಜನಕ್ಕೆ ಕೊಡಲು ಪ್ರಶಸ್ತಿ ಫಲಕಗಳೆಲ್ಲಿವೆ. ಮಾಡಿಸಿದ್ದೇ ಹನ್ನೊಂದು. ಹನ್ನೊಂದು ಜನಕ್ಕೆ ಕೊಟ್ಟಾಗಿದೆ. ಇನ್ನೂ ಕೊಡಬೇಕೆಂದರೂ ಅಲ್ಲಿ ಫಲಕಗಳಿಲ್ಲಾ. ಸರಿ ಯಾರದೋ ಒಂದು ಪ್ರಶಸ್ತಿ ಫಲಕ ಹಾಗೂ ಸ್ಮರಣಿಕೆಯನ್ನು ಪಡೆದುಕೊಂಡು ಅದನ್ನೇ ನಾಲ್ಕೂ ಜನರಿಗೆ ಒಬ್ಬರಾದ ಮೇಲೆ ಒಬ್ಬರಂತೆ ಕೊಟ್ಟು, ಕಿವಿಗಿಡುವ ಬದಲು ಕೈಗೊಂದು ಹೂಗುಚ್ಚ ಕೊಟ್ಟು ಸಮಾಧಾನ ಮಾಡಿ ಕಳುಹಿಸಿದರು. ಆದರೆ.. ನಾಲ್ಕು ಜನರಿಗೆ ಸಮಾಧಾನ ಮಾಡಿ ಪಾಪ ಪರಿಹಾರ ಮಾಡಿಕೊಂಡಂತೆ ಈ ವಾಹಿನಿಯವರು ನಡೆದುಕೊಂಡರಾದರೂ ಅವಮಾನಿತರಾಗಿ ನೋವು ಹಾಗೂ ಮುಜುಗರವನ್ನು ಅನುಭವಿಸಿ ತಲ್ಲಣಗೊಂಡು ಮನೆಗೆ ತೆರಳಲಿದ ಆ ನಲವತ್ತಕ್ಕೂ ಮಿಕ್ಕಿದ ತಾಯಂದಿರ ಮಾನಸಿಕ ಸಂಕಟಕ್ಕೆ ಪರಿಹಾರವಾದರೂ ಏನು? ವಾಹಿನಿಯ ಟಿಆರ್‌ಪಿ ಆಟಕ್ಕೆ, ಪ್ರಚಾರದ ಹುಚ್ಚಾಟಕ್ಕೆ ಕಲಾವಿದೆಯರು ಹಾಗೂ ಮಹಿಳಾ ಸಾಧಕಿಯರು ಅವಮಾನಿತರಾಗಬೇಕೆ? ರವಿ ಹೆಗಡೆ, ಜೋಗಿ ಯವರಂತಹ ಸೂಕ್ಷ್ಮ ಮನಸ್ಸಿನ ಪ್ರತಿಭಾವಂತ ಬರಹಗಾರ ಪತ್ರಕರ್ತರು ಇರುವಾಗಲೂ ಈ ರೀತಿಯ ಅನ್ಯಾಯ ಅದೂ ಮಹಿಳೆಯರ ಮೇಲೆ ನಡೆಯಬೇಕಿತ್ತೇ? ಕಲಾವಿದರು ಸಾಧಕರು ಅಂದರೆ ಈ ಟಿವಿ ವಾಹಿನಿಗಳ ಪ್ರಚಾರಕ್ಕೆ ಬಳಕೆಯಾಗಬಹುದಾದ ಸರಕುಗಳೇ? ನಾಡಿನ ಪ್ರಜ್ಞಾವಂತರು ಮಹಿಳಾ ಸಾಧಕಿಯರಿಗಾದ ಈ ಅನ್ಯಾಯವನ್ನು ಖಂಡಿಸಬೇಕಿದೆ. ವಾಹಿನಿಗಳ ಬೇಜವಾಬ್ದಾರಿತನವನ್ನು ಪ್ರತಿಭಟಿಸಬೇಕಿದೆ. ಹಾಗೂ ಅವಮಾನಿತರಾಗಿ ನೊಂದುಕೊಂಡು ಹೋದ ಆ ಮಹಿಳಾ ಸಾಧಕಿಯರಿಗೆ ಸಾಂತ್ವನವನ್ನು ಹೇಳಬೇಕಿದೆ. ವಾಹಿನಿಗಳು ಕರೆದರೆಂದು ಹಿಂದು ಮುಂದು ನೋಡದೇ ಕುಟುಂಬ ಪರಿವಾರ ಸಮೇತರಾಗಿ ಪ್ರಶಸ್ತಿ ಪಡೆಯಲು ಹೋಗುವ ಮುಂಚೆ ವಾಹಿನಿಗಳು ತಮ್ಮ ಲೆಟರ್‌ಹೆಡ್‌ನಲ್ಲಿ  ಬರವಣಿಗೆ ರೂಪದಲ್ಲಿ ಆಹ್ವಾನ ಮಾಡಬೇಕೆಂದು ಡಿಮಾಂಡ್ ಮಾಡಬೇಕಿದೆ. ಅದಕ್ಕಿಂತ ಮುಖ್ಯವಾಗಿ ಪ್ರಶಸ್ತಿಗಳನ್ನು ಕೊಡಿ ಎಂದು ಅರ್ಜಿ ಹಾಕಿ ಈ ವಾಹಿನಿಗಳ ಮರ್ಜಿ ಕಾಯುವುದನ್ನು ಬಿಡಬೇಕಿದೆ. ಬೇಕಾದರೆ ಅವರೇ ಸಾಧನೆಯನ್ನು ಗುರುತಿಸಿ ಅಧಿಕೃತವಾಗಿ ತಿಳಿಸಿ ಪ್ರಶಸ್ತಿಗಳನ್ನು ಕೊಡಲಿ. ಇಲ್ಲವಾದರೆ ಕಳೆದುಕೊಳ್ಳುವಂತಹುದೇನೂ ಇಲ್ಲಾ.. ಮಾಧ್ಯಮೋಧ್ಯಮದ ವ್ಯಾಪಾರದ ಸರಕಾಗುವ ಬದಲು ತಮ್ಮ ಕ್ಷೇತ್ರಗಳಲ್ಲಿ ಸಾಧನೆಯನ್ನು ಮುಂದುವರೆಸುವುದು ಉತ್ತಮ.

ಇಷ್ಟೆಲ್ಲಾ ರಾದ್ದಾಂತದ ನಡುವೆಯೂ ರಂಗಭೂಮಿ ಕ್ಷೇತ್ರದಿಂದ ಯುವ ಕಲಾವಿದೆ ನಯನ ಸೂಡರಿಗೆ ಸುವರ್ಣ ಸಾಧಕಿಯರ ಪ್ರಶಸ್ತಿ ದೊರಕಿದ್ದು ಸಮಾಧಾನಕರ. ಬಾಲ ಕಲಾವಿದೆಯಾದ ಈ ಯುವತಿ ರಂಗಭೂಮಿಯಲ್ಲಿ ಪೂರ್ಣಾವಧಿಯಾಗಿ ತೊಡಗಿಕೊಂಡಿದ್ದು ಚಂದ್ರಗಿರಿ ತೀರದಲ್ಲಿ ನಾಟಕವನ್ನು ನಿರ್ದೇಶನ ಮಾಡಿ ಯಶಸ್ವಿಯಾಗಿದ್ದಾರೆ. ನಯನ ಸೂಡ ಹಾಗೂ ಅವರ ಪತಿ ರಾಜು ಹೊಸಕೋಟೆ  ದಂಪತಿಗಳ ರಂಗಬದ್ಧತೆ ಪ್ರಶ್ನಾತೀತ. ರಂಗಪಯಣ ಎನ್ನುವ ರಂಗತಂಡವನ್ನು ಕಟ್ಟಿಕೊಂಡು ನಿರಂತರವಾಗಿ ನಾಟಕಗಳನ್ನು ಮಾಡುತ್ತಲೇ ಇದ್ದಾರೆ. ಅಪಾರ ಸಿದ್ಧತೆ ಹಾಗೂ ರಂಗಬದ್ದತೆಯಿಂದಾ ರಂಗಕಾರ್ಯ ಮಾಡುತ್ತಿರುವ ನಟಿ ನಿರ್ದೇಶಕಿ ರಂಗಸಂಘಟಕಿ ನಯನ ಸೂಡರವರಿಗೆ ಸುವರ್ಣ ಮಹಿಳಾ ಸಾಧಕಿಯರ ಪ್ರಶಸ್ತಿ ಬಂದಿದ್ದು ರಂಗಭೂಮಿಗೆ ಹೆಮ್ಮೆ ತರುವಂತಹ ವಿಚಾರ ಹಾಗೂ ಪ್ರಶಸ್ತಿಗೂ ಒಂದು ಗೌರವ ತರುವ ಸಂಗತಿಯಾಗಿದ್ದು ಪ್ರಶಸ್ತಿ ಪಡೆದ ನಯನಾಳಿಗೆ ಅಭಿನಂದನೆಗಳು.

          - ಶಶಿಕಾಂತ ಯಡಹಳ್ಳಿ