ಭಾನುವಾರ, ನವೆಂಬರ್ 17, 2019

ತಹ ತಹ.. 102 ಅವೈಚಾರಿಕ ಅಧ್ಯಕ್ಷನ ವ್ಯರ್ಥ ಪ್ರಲಾಪ; ಸಾಹಿತ್ಯ ಅಕಾಡೆಮಿಗೆ ಒಕ್ಕರಿಸಿದೆ ಶಾಪ.



ಪ್ರಾರ್ಥನೆ ಇಲ್ಲದೇ ಹುಟ್ಟುವ ಮಕ್ಕಳು ಸಮಾಜಕ್ಕೆ ಶಾಪವಾಗುತ್ತಾರೆ.. ಎಂಬ ನುಡಿಮುತ್ತುಗಳು ಯಾವಾಗ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರ ಬಾಯಿಂದ ಉದುರಿ ಪತ್ರಿಕೆಯಲ್ಲಿ ಪ್ರಕಟವಾದವೋ ಆಗ ಹಲವಾರು ಜನ ಸಾಮಾಜಿಕ ಜಾಲತಾಣಗಳಲ್ಲಿ ಈ ಡಾ.ಬಿ.ವಿ.ವಸಂತಕುಮಾರ ಎನ್ನುವ ಸಂಘಪರಿವಾರದ ಅಂಗಕ್ಕೆ  ಕ್ಯಾಕರಿಸಿ ಥೂಕರಿಸತೊಡಗಿದರು. ಸಾಹಿತ್ಯ ಅಕಾಡೆಮಿUಸೀ ವಸಂತಕುಮಾರ್ ಅತೀ ದೊಡ್ಡ ಶಾಪ, ಇವರ ಹೆತ್ತವರು ಸರಿಯಾಗಿ ಪ್ರಾರ್ಥನೆ ಮಾಡಿಲ್ಲವಾದ್ದರಿಂದ ಇಂತಹ ಸಮಾಜಭಂಜಕ ಮಗ ಹುಟ್ಟಿದ್ದು, ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಆಗೋದಕ್ಕೆ ನಾಲಾಯಕ್ಕು.. ಎಂದೆಲ್ಲಾ ತರಾವರಿ ಕಾಮೆಂಟುಗಳು ವಾಟ್ಸಾಪ್ ಫೇಸ್ಬುಕ್‌ಗಳಲ್ಲಿ ಹರಿದಾಡತೊಡಗಿದವು. ಯಾವಾಗ ಸಿಕ್ಕಸಿಕ್ಕವರೆಲ್ಲಾ ಈ ಸೋಕಾಲ್ಡ್ ಚೆಡ್ಡಿ ಸಾಹಿತಿಗೆ ಮಂಗಳಾರತಿ ಮಾಡಲು ಶುರುಮಾಡಿದರೋ ಆಗ ಎಚ್ಚೆತ್ತುಕೊಂಡ ವಸಂತಕುಮಾರ್ ಎನ್ನುವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಮಹಾಶಯರು ತಾವಾಡಿದ ಮಾತುಗಳಿಗೆ ವಿತಂಡವಾದದ ಸಮರ್ಥನೆಗಳನ್ನೂ ಹಾಗೂ ಕ್ಷಮೆಯನ್ನೂ ಕೋರಿದ್ದು ಪ್ರಜಾವಾಣಿಯಲ್ಲಿ ಪ್ರಕಟಗೊಂಡಿತು.

ಆದರೆ.. ಕ್ಷಮಿಸಲಾರದ ಮಾತುಗಳನ್ನು ಆಡಿದವರನ್ನು ಕ್ಷಮಿಸುವುದಾದರೂ ಹೇಗೆ. ಮೊದಲಾದರೆ ವ್ಯಕ್ತಿಗತವಾಗಿ ಹೀಗೆ ಹೇಗೇಗೋ ನಾಲಿಗೆ ಹರಿಬಿಟ್ಟಿದ್ದರೆ ಯಾರೂ ಕೇಳಿಸಿಕೊಳ್ಳಲು ಹೋಗುತ್ತಿರಲಿಲ್ಲ, ಪ್ರಾಮುಖ್ಯತೆಯನ್ನೂ ಕೊಡುತ್ತಿರಲಿಲ್ಲ, ಇಷ್ಟಕ್ಕೂ ಈ ವಸಂತಕುಮಾರ್ ಯಾರು ಹಾಗೂ ಸಾಹಿತ್ಯಕ್ಷೇತ್ರದಲ್ಲಿ ಕಡಿದು ಕಟ್ಟೆ ಹಾಕಿದ್ದೇನು ಎಂಬುದೇ ಬಹುತೇಕರಿಗೆ ಗೊತ್ತಿರಲಿಲ್ಲ. ಆದರೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷತೆಯಂತಹ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದಾಗ ಇಂತಹ ಅಕ್ಷಮ್ಯ ಅವಿವೇಕದ ಮಾತುಗಳನ್ನು ಆಡಿ ಕ್ಷಮಿಸಿ ಎಂದು ಕೇಳಿದರೆ ಕ್ಷಮಿಸುವವರಾದರೂ ಯಾರು?

ನವೆಂಬರ್ 15 ರಂದು ನಡೆದ ಕನಕ ಜಯಂತಿಯ ಕಾರ್ಯಕ್ರಮದಲ್ಲಿ ಅಕಾಡೆಮಿಯ ಅಧ್ಯಕ್ಷ ಅಂತಾ ಆಹ್ವಾನಿಸಿ ಮಾತಾಡಲು ಅವಕಾಶಮಾಡಿಕೊಟ್ಟರೆ ಈ ಶಾಪಗ್ರಸ್ತ ವ್ಯಕ್ತಿ ಯಡವಟ್ಟು ಮಾತಾಡಿ ತಮ್ಮ ಯೋಗ್ಯತೆ ಎಂತಹುದು ಎಂಬುದನ್ನು ಜಗಜ್ಜಾಹೀರು ಮಾಡಿಕೊಂಡರು. ಹೇಳಿದ್ದಾದ ಮೇಲೆ ಸುಮ್ಮನಿರಲಾರದೆ ಪ್ರಜಾವಾಣಿ ವಾಚಕರವಾಣಿಗೆ ವ್ಯರ್ಥ ಸಮರ್ಥನೆ ಬರೆದು ತಮ್ಮ ಮನಸಿನ ಗಾಯವನ್ನು ಕೆರೆದುಕೊಂಡು ಅದರ ದುರ್ವಾಸನೆಯನ್ನು ಎಲ್ಲರಿಗೂ ಹಂಚಿಕೊಂಡರು. ಕನಕಜಯಂತಿ ದಿನ  ವೈದಿಕಶಾಹಿಯ ಈ ಅನಧೀಕೃತ ವಕ್ತಾರ ಹೇಳಿದ ಸಾರ ಇಷ್ಟೇ.. ಕನಕದಾಸರ ಹೆತ್ತವರು ತಿರುಪತಿ ತಮ್ಮಪ್ಪನಿಗೆ ಪ್ರಾರ್ಥನೆ ಮಾಡಿಕೊಂಡಿದ್ದರಿಂದಲೇ ಕನಕದಾಸರಂತವರು ಹುಟ್ಟಿದರು, ಹೀಗೆ ಪ್ರಾರ್ಥನೆ ಇಲ್ಲದೆ ಹುಟ್ಟುವ ಮಕ್ಕಳು ಸಮಾಜಕ್ಕೆ ಶಾಪವಾಗುತ್ತಾರೆ ಎಂದು. ತಮ್ಮ ಈ ಅಧಿಕಪ್ರಸಂಗತನದ ಮಾತಿಗೆ ಸ್ವಾಮಿವಿವೇಕಾನಂದರನ್ನು ಹೆಸರನ್ನು ಎಳೆತಂದು ವಿವೇಕಾನಂದರ ಮಾತನ್ನು ಉಲ್ಲೇಖಿಸಿದ್ದೇನೆ ಎಂದು ತಿಪ್ಪೇ ಸಾರಿಸಿ ರಂಗೋಲಿ ಬಿಟ್ಟು ಡ್ಯಾಮೇಜ್ ಕಂಟ್ರೋಲಿಗೆ ಪ್ರಯತ್ನಿಸಿದರು.

ವಿವೇಕಾನಂದರು ಯಾವಾಗ, ಯಾವ ಸಂದರ್ಭದಲ್ಲಿ, ಎಲ್ಲಿ ಪ್ರಾರ್ಥನೆ ಇಲ್ಲದೆ ಹುಟ್ಟುವ ಮಕ್ಕಳು ಸಮಾಜಕ್ಕೆ ಶಾಪವಾಗುತ್ತಾರೆ ಎಂದು ಹೇಳಿದರೋ ಗೊತ್ತಿಲ್ಲಾ. ಹಾಗೆ ಹೇಳಿದ್ದರೂ ಅದೇ ಪರಮ ಸತ್ಯವೂ ಅಲ್ಲಾ. ಯಾವುದೋ ಸಂದರ್ಭದಲ್ಲಿ ಆಡಿದ ಮಾತು ಸಾರ್ವಕಾಲಿಕ ಸತ್ಯವೂ ಅಗುವುದಿಲ್ಲ. ಇಷ್ಟೂ ಗೊತ್ತಿಲ್ಲದ ವ್ಯಕ್ತಿ ಸಾಹಿತ್ಯ ಅಕಾಡೆಮಿಗೆ ಅಧ್ಯಕ್ಷರಾಗಲೂ ಅರ್ಹರೂ ಅಲ್ಲಾ. ಕನಕದಾಸರಾದ ನಂತರ ಮಾತ್ರ ತಿರುಪತಿ ತಿಮ್ಮಪ್ಪನಿಗೆ ಮಾಡಿಕೊಂಡ ಪ್ರಾರ್ಥನೆ ಫಲಿಸಿತಾ.. ಕನಕದಾಸನಾಗುವ ಮೊದಲು ತಿಮ್ಮಪ್ಪನಾಯಕ ಪಾಳೇಗಾರನಾಗಿದ್ದಾಗ ಪಾಲ್ಗೊಂಡ ಕದನಗಳಲ್ಲಿ ಸಾವಿರಾರು ಜನರ ಮಾರಣ ಹೋಮ ಮಾಡಿ ರಕ್ತಪಾತ ಮಾಡಿದಾಗ ಪ್ರಾರ್ಥನೆಯ ಫಲ ಇರಲಿಲ್ಲವೇ? ಪ್ರಾರ್ಥನೆಗೂ ಹುಟ್ಟಿಗೂ ಎತ್ತನಿಂದೆತ್ತ ಸಂಬಂಧವಿದೆ.

ಈಗ ಈ ದೇಶಾದ್ಯಂತ ಕೋಮುವಾದದ ಹೆಸರಲ್ಲಿ, ಗೋವಿನ ಹೆಸರಲ್ಲಿ, ದೇವರ ಹೆಸರಲ್ಲಿ, ಧರ್ಮದ ಹೆಸರಲ್ಲಿ ಈ ವಸಂತಕುಮಾರ್‌ರವರು ಪ್ರತಿನಿಧಿಸುವ ಸಂಘಪರಿವಾರದವರು ಮಾಡುವ ಅಗಣಿತ ಹಲ್ಲೆ ಹತ್ಯೆಗಳನ್ನು ಪರಿಗಣಿಸಿದರೆ ಇವರ‍್ಯಾರ ಹೆತ್ತವರೂ ಪ್ರಾರ್ಥನೆ ಮಾಡಿಲ್ಲವೆಂಬುದು ಸ್ಪಷ್ಟವಾಗುತ್ತದೆ. ಇವರ ವಾದದಂತೆಯೇ ಪ್ರಾರ್ಥನೆಯಿಂದ ಈ ಎಲ್ಲಾ ಪ್ರತಿಗಾಮಿ ವ್ಯಕ್ತಿ ಶಕ್ತಿಗಳು ಹುಟ್ಟಿದ್ದೇ ದಿಟವಾಗಿದ್ದರೆ ದೇಶದಲ್ಲಿ ಕೋಮು ಸಾಮರಸ್ಯ ಹಾಳು ಮಾಡುತ್ತಿರಲಿಲ್ಲ, ಗೋವಿನ ಹೆಸರಲ್ಲಿ ಗುಂಪು ಹತ್ಯೆಗಳು ನಡೆಯುತ್ತಿರಲಿಲ್ಲ. ಮತ ಮಂದಿರ ಮಸೀದಿಗಳ ನೆಪದಲ್ಲಿ ರಕ್ತಪಾತ ಆಗುತ್ತಿರಲಿಲ್ಲ. ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುತ್ತಿರಲಿಲ್ಲ, ಸಾರ್ವಜನಿಕವಾಗಿ ಸುಡುತ್ತಿರಲಿಲ್ಲ. ಸಮಾಜದ ಸೌಹಾರ್ಧತೆಗೆ ಶಾಪವಾಗಿ ಕಾಡುತ್ತಿರುವ ಈ ಮನುವಾದಿಗಳಿಗೆ, ವೈದಿಕಶಾಹಿಗಳಿಗೆ ಮೊದಲು ಪ್ರಾರ್ಥನೆ ಮಾಡಿ ನಂತರ ಮಕ್ಕಳನ್ನು ಹುಟ್ಟಿಸಲು ಈ ವಸಂತಕುಮಾರರಂತವರು ತಿಳಿಸಿ ಹೇಳಿದ್ದರೆ ಸಮಾಜ ನೆಮ್ಮದಿಯಾಗಿರುತ್ತಿತ್ತೇನೋ. ಪ್ರಾರ್ಥನೆಯಿಂದ ಈ ಉಡುಪಿ ಮಠದ ಪೂರ್ವೀಕರು ಹುಟ್ಟಿದ್ದರೆ ಕೃಷ್ಣದರ್ಶನಕ್ಕಾಗಿ ಬಂದ ಕನಕದಾಸರನ್ನು ಮಠದ ದ್ವಾರದಿಂದ ಹೊರಗೆ ಹಾಕುತ್ತಿರಲಿಲ್ಲ. ಹೀಗೆ ಶೂದ್ರರಿಗೆ, ದಲಿತರಿಗೆ ಶತಮಾನಗಳಿಂದ ಅಸಮಾನತೆಯನ್ನು ಸೃಷ್ಟಿಸಿ ಶಾಪವಾಗಿ ಕಾಡುತ್ತಿರಲಿಲ್ಲ. ಪಂಥಿಬೇಧ ಮಾಡುತ್ತಿರಲಿಲ್ಲ.

ಕನಕದಾಸರನ್ನು ಹೊಗಳುತ್ತಲೇ ತಮ್ಮ ವೈದಿಕತ್ವವನ್ನು ಬಲು ನಾಜೂಕಾಗಿ ಹೇಳುವ ಈ ವಸಂತಕುಮಾರರವರು ಕನಕರು ಉಡುಪಿಯ ಕೃಷ್ಣನನ್ನು ತಿರುಗಿಸಿದರು ಎಂಬುದರ ಅರ್ಥವೂ ಕೃಷ್ಣಭಕ್ತರನ್ನೂ ತಿರುಗಿಸಿದರು ಎಂಬುದಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಹೌದು ಅಬ್ರಾಹ್ಮಣರಾದ ಸಕಲ ಕೃಷ್ಣ ಭಕ್ತರನ್ನು ಗೋಡೆಯ ಆಚೆಗೆ ನಿಲ್ಲಿಸಿ ಕೃಷ್ಣದರ್ಶನ ಮಾಡಿಸುವ ಈ ಶ್ರೀಕೃಷ್ಣನ ಪಾಳೇಗಾರರಾದ ವೈದಿಕರು ಕೃಷ್ಣಭಕ್ತರನ್ನು ಗರ್ಭಗುಡಿಯ ಹಿಂದಿನ ಗೋಡೆಯಾಚೆಗೆ ತಿರುಗಿಸಿದ್ದೂ ಸತ್ಯ. ಎಲ್ಲಿ ಗರ್ಭಗುಡಿಯ ಪಾವಿತ್ರ್ಯತೆ ನಾಶವಾಗುವುದೋ ಎಂದು ಹೆದರಿದ ಪುರೋಹಿತರು ಜನಾಕ್ರೋಶಕ್ಕೆ ಹೆದರಿ ಹಿಂದಿನ ಗೋಡೆಯನ್ನು ಒಡೆದು ಕೃಷ್ಣನ ವಿಗ್ರಹವನ್ನು ತಿರುಗಿಸಿ ಜನರಿಗೆ ಹಿಂಬಾಗಿಲ ಮೂಲಕ ದರ್ಶನ ಭಾಗ್ಯ ಒದಗಿಸಿಕೊಟ್ಟು ತಮ್ಮ ಮಡಿಹುಡಿ ಪಾವಿತ್ರ್ಯತೆಯನ್ನು ಕಾಪಾಡಿಕೊಂಡಿದ್ದೂ ಚಾರಿತ್ರಿಕ ಸತ್ಯ. ಎಷ್ಟಾದರೂ ಈ ಪುರೋಹಿತ ಪುಂಗವರು ಪ್ರಾರ್ಥನೆಗೆ ಹುಟ್ಟಿದವರಲ್ಲವೇ..? ಸಂಘಪರಿವಾರದ ಕೃಪಾಕಟಾಕ್ಷದಿಂದ ಸಾಹಿತ್ಯ ಅಕಾಡೆಮಿಗೆ ಒಕ್ಕರಿಸಿದ ಈ ವಸಂತಕುಮಾರ್ ಎನ್ನುವ ಮಹನೀಯರಿಗೆ ಕುಲವಿಲ್ಲದ ಕನಕದಾಸರು ಬೇಕಾಗಿದೆಯಂತೆ. ಅದೇ ರೀತಿ ಸಾಹಿತ್ಯ ಅಕಾಡೆಮಿಗೂ ಜಾತಿ, ಕುಲ, ಮತ, ಸಂಘಪರಿವಾರದ ಸಿದ್ದಾಂತದ ಹಂಗಿಲ್ಲದ ವೈಚಾರಿಕ ಪ್ರಜ್ಞೆ ಇರುವ ಅಧ್ಯಕ್ಷರು ಬೇಕಾಗಿದ್ದಾರೆ.


ಈ ಹಿಂದೆಯೂ ಅಷ್ಟೇ. ಸಚಿವ ಸಿ.ಟಿ.ರವಿಯವರು ಕಳೆದ ನಾಲ್ಕು ದಶಕಗಳಿಂದ ಅಕಾಡೆಮಿ ಪ್ರಾಧಿಕಾರಕ್ಕೆ ಆಯ್ಕೆ ಆಗಿದ್ದ ಸಾಹಿತಿ ಕಲಾವಿದರನ್ನು ಮನೆಹಾಳರು ಎಂದು ಹೀಯಾಳಿಸಿದಾಗ ಇಡೀ ಸಾಹಿತ್ಯ ಹಾಗೂ ಕಲಾಲೋಕ ಸಿಡಿದೆದ್ದು ಪ್ರತಿರೋಧಿಸಿತ್ತು. ಆದರೆ.. ಆ ಸಚಿವರ ಹಂಗಿರಲ್ಲಿರುವ ಈ ವಸಂತಕುಮಾರ್ ಮಾತ್ರ ಸಚಿವರ ಹೇಳಿಕೆಯನ್ನು ಸಮರ್ಥಿಸಿಕೊಂಡು ಲೇಖನ ಬರೆದು ತಮ್ಮ ಮಾಲೀಕರಿಗೆ ನಿಷ್ಟೆಯನ್ನು ತೋರಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಇರುವುದು ವ್ಯಕ್ತಿಗತ ಹಿಡನ್ ಅಜೆಂಡಾಗಳನ್ನು ಪ್ರತಿಪಾದಿಸಲೂ ಅಲ್ಲಾ, ಸಂಘಪರಿವಾರದವರನ್ನು  ಮೆಚ್ಚಿಸಲಂತೂ ಮೊದಲೇ ಅಲ್ಲಾ. ಅಕಾಡೆಮಿ ಅಧ್ಯಕ್ಷರಾಗುವ ಮುನ್ನ ಎಬಿವಿಪಿ ರಾಷ್ಟ್ರೀಯ ಉಪಾದ್ಯಕ್ಷರಾಗಿದ್ದಾಗ ಏನೇ ಆಚಾರ ವಿಚಾರ ಸಿದ್ದಾಂತಗಳಿದ್ದರೆ ಇರಲಿ. ಆದರೆ ಅಕಾಡೆಮಿ ಅಧ್ಯಕ್ಷರಾದ ನಂತರ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಕೆಲಸಮಾಡುವ ಬದ್ಧತೆಯನ್ನು ಬೆಳೆಸಿಕೊಳ್ಳಬೇಕು. ಸಿಕ್ಕ ಅವಕಾಶವನ್ನು ಸಮಗ್ರ ಸಾಹಿತ್ಯಕ್ಷೇತ್ರದ ವಿಸ್ತರಣೆಗಾಗಿ ಬಳಸಿಕೊಳ್ಳಬೇಕು. ನುಡಿದರೆ ಮಾತುಗಳು ಮುತ್ತಿನ ಹಾರದಂತಿರಬೇಕೆ ಹೊರತು ಸಂಘಪರಿವಾರದವರು ಮೆಚ್ಚಿ ಅಹುದಹುದೆನ್ನುವಂತೆ ಇರಬಾರದು. ಸಾಹಿತ್ಯ ಅಕಾಡೆಮಿಗೆ ಈಗಿರುವ ಅಧ್ಯಕ್ಷರು ಶಾಪವಾಗದೇ ಇರಲಿ ಎಂದು ಪ್ರಾರ್ಥಿಸೋಣ.

-ಶಶಿಕಾಂತ ಯಡಹಳ್ಳಿ   


        





ಮಂಗಳವಾರ, ಅಕ್ಟೋಬರ್ 22, 2019

ತಹ ತಹ..101 ಮನೆಹಾಳರಿಗೆ ಮಾರ್ಗದರ್ಶಿ ಸೂತ್ರ



ಸನ್ಮಾನ್ಯ ಸಂಸ್ಕೃತಿ ಸಚಿವರೆ..

ನೀವು ಸಾಹಿತಿ ಕಲಾವಿದರಿಗೆ ಮನೆಹಾಳರು ಎಂದಿದ್ದಕ್ಕೆ ಹಲವಾರು ಜನ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವಿರೋಧಿಸಲಿ ಬಿಡಿ ಅದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯ. ಅದರೆ ಯಾರು ಏನೇ ಹೇಳಲಿ ನಾನು ಮಾತ್ರ ನಿಮ್ಮ ಮಾತನ್ನು ಅನುಮೋದಿಸುತ್ತೇನೆ, ಸಮರ್ಥಿಸಿಕೊಳ್ಳುತ್ತೇನೆ, ಒಪ್ಪಿಕೊಳ್ಳುತ್ತೇನೆ.

ಯಾಕೆಂದರೆ ನೀವು ಹೇಳಿದಂತೆ ಈ ಸಾಹಿತಿ ಕಲಾವಿದರೆಲ್ಲಾ ನಿಮ್ಮಾಣೆಗೂ ಮನೆಹಾಳರೇ.  ಬೇರೆಯವರ ಮನೆ ಹಾಳು ಮಾಡದಿದ್ದರೇನಾಯ್ತು ತಮ್ಮ ಮನೆಗಳನ್ನೇ ಹಾಳು ಮಾಡಿಕೊಂಡು ಕಲೆ ಸಾಹಿತ್ಯ ಅಂತಾ ಬದುಕುತ್ತಿದ್ದಾರೆ. ನಿಜವಾದ ಸಾಹಿತಿ ಕಲಾವಿದರ ಮನೆಗೆ ಹೋಗಿ ಅವರ ಹೆಂಡತಿ ಮಕ್ಕಳನ್ನು ಕೇಳಿದರೆ ಗೊತ್ತಾಗುತ್ತೆ ತಮ್ಮ ಮನೆಯವರಿಗೆ ಇವರು ಏನೂ ಮಾಡಿಲ್ಲವೆಂಬುದು. ಮಕ್ಕಳ ಬಗ್ಗೆ ಕಾಳಜಿ ತೋರಲಿಲ್ಲ, ಹೆಂಡತಿಯ ಬಗ್ಗೆ ಕಳಕಳಿ ತೋರಲಿಲ್ಲ, ಎಂದೂ ಸಂಜೆಗೆ ಸರಿಯಾಗಿ ಮನೆಗೆ ಹೋಗಿಲ್ಲ...ಮನೆಗೆ ಬಂದರೂ ಕಲೆ ಸಾಹಿತ್ಯ ಹೊರತು ಪಡಿಸಿ ಇವರಿಗೆ ಬೇರೆ ಪ್ರಪಂಚವೇ ಇಲ್ಲ.  ಕಲೆ ಸಾಹಿತ್ಯ ಸಂಸ್ಕೃತಿಗಾಗಿ ತಮ್ಮದೇ ಕುಟುಂಬವನ್ನು ನಿರ್ಲಕ್ಷಿಸಿದ ಇಂತವರಿಗೆ ಮನೆಹಾಳರು ಎನ್ನದೇ ಇನ್ನೇನು ತಾನೇ ಅನ್ನಲು ಸಾಧ್ಯ.. ಸರಿಯಾಗಿಯೇ ಹೇಳಿದ್ದೀರಿ.

ಇವರೆಲ್ಲಾ  ಮನೆಉದ್ಧಾರಕರನ್ನು ನೋಡಿ ಕಲಿಯುವುದು ಬೇಕಾದಷ್ಟಿದೆ. ಶೂನ್ಯದಿಂದ ನೂರಾರು ಕೋಟಿಗಳನ್ನು ಹೇಗೆ ಅಕ್ರಮವಾಗಿ ಸಂಪಾದಿಸಬೇಕು ಎಂಬುದನ್ನು  ಈ ಮನೆಹಾಳರೆಲ್ಲಾ ತಿಳಿದುಕೊಳ್ಳಬೇಕಿದೆ. ಕೋಮು ಸೌಹಾರ್ಧತೆಯನ್ನು ಹಾಳುಮಾಡಿ, ಧರ್ಮಾಂಧತೆಯ ವಿಷಬೀಜ ಬಿತ್ತಿ ಹೇಗೆ ಓಟುಗಳನ್ನು ಬೆಳೆದು ಅಧಿಕಾರದ ಫಲ ಪಡೆಯಬೇಕೆಂಬ (ಕು)ತಂತ್ರಗಾರಿಕೆಯನ್ನು ಈ ಮನೆಹಾಳರು ಅನುಕರಿಸಬೇಕಿದೆ. "ಸಮಾಜವನ್ನು ಒಡೆದು ಮನಸುಗಳ ನಡುವೆ ಕಂದರ ಸೃಷ್ಟಿಸಿ ತಮ್ಮ ಮನೆಯನ್ನು ಹೇಗೆ ಉದ್ದಾರ ಮಾಡಿಕೊಳ್ಳಬೇಕು, ಸಮಾಜದಿಂದ ಲೂಟಿ ಹೊಡೆದ ಸಂಪತ್ತಿನಲ್ಲಿ ಹೇಗೆ ಮಕ್ಕಳನ್ನು ವಿದೇಶದಲ್ಲಿ ಓದಿಸಬೇಕು, ಮುಂದಿನ ಹತ್ತಾರು ತಲೆಮಾರಿಗಾಗುವಷ್ಟು ಆಸ್ತಿ ಸಂಪಾದಿಸಬೇಕು" ಎನ್ನುವ ಗುಟ್ಟುಗಳನ್ನು ಈ ಮನೆಹಾಳರು ಅರಿತು ನಡೆದಿದ್ದರೆ ಈ ಹಾಳು ಕಲೆ ಸಾಹಿತ್ಯಗಳನ್ನೆಲ್ಲಾ ಬಿಟ್ಟು  ಅಧಿಕಾರ ಮತ್ತು ಸಿರಿವಂತಿಕೆ ಅನುಭವಿಸಬಹುದಾಗಿತ್ತು. 

ಆದರೆ ಬೇರೆಯವರ ಮನೆಹಾಳು ಮಾಡದೆ, ಸಮಾಜದ ಸಂಪತ್ತನ್ನು ಲೂಟಿಮಾಡದೆ, ಧರ್ಮಾಂಧತೆ ಬೀಜ ಬಿತ್ತಿ ಅಧಿಕಾರದ ಬೆಳೆ ತೆಗೆಯದೆ, ಜನರ ನಡುವಿನ ಶಾಂತಿ ಕದಡದೆ, ತಮ್ಮ ಸಂತಾನಕ್ಕೆ ಸಂಪತ್ತನ್ನು ಕೂಡಿಡದೇ ಇರುವ ಈ ಸಾಹಿತಿ ಕಲಾವಿದರು ಸಮಾಜವನ್ನು ಉದ್ದಾರ ಮಾಡುವ ಕಾಯಕದಲ್ಲಿ ನಿರತರಾಗಿ ತಮ್ಮ ಮನೆಯನ್ನು ಹಾಳುಮಾಡಿಕೊಂಡಿದ್ದಂತೂ ಅಪ್ಪಟ ಸತ್ಯ. ಸತ್ಯ ಹೇಳಲು ಸಂತನೇ ಬೇಕೆಂದೇನಿಲ್ಲ. ಸೈತಾನನ ಬಾಯಲ್ಲಿ ಸತ್ಯ ಬಂದರೂ ಅದು ಸತ್ಯವೇ. ಹೀಗಾಗಿ ತಮ್ಮ ಮನೆಯನ್ನು ಹಾಳು ಮಾಡಿಕೊಂಡ ಘನಘೋರ ಪ್ರಮಾದ ಮಾಡಿದವರನ್ನು ದೂರವಿಟ್ಟು ತಮ್ಮ ತಮ್ಮ ಮನೆಗಳನ್ನು ಉದ್ದಾರ ಮಾಡಿಕೊಳ್ಳುವಂತವರನ್ನು ಹಾಗೂ ನಿಮ್ಮ ತವರಾದ ಸಂಘದ ಹಿತಾಸಕ್ತಿಗಾಗಿ ದುಡಿದವರನ್ನು ಹಾಗೂ ದುಡಿಯುವಂತವರನ್ನು ಅಕಾಡೆಮಿ ಪ್ರಾಧಿಕಾರಗಳಿಗೆ ಅಧ್ಯಕ್ಷ ಸದಸ್ಯರನ್ನಾಗಿ ಆಯ್ಕೆ ಮಾಡಿದ ನಿಮ್ಮ ದೂರದೃಷ್ಟಿಯ ಕ್ರಮ ಅಭಿನಂದನೀಯ. 

ಅಪರೂಪಕ್ಕೊಮ್ಮೆ ನಿಜವನ್ನು ನುಡಿದ ನಂಜಿನ ನಾಲಿಗೆಗೆ ಬಹುಪರಾಕು. ಇನ್ಮೇಲೆ ಸಾಹಿತಿ ಕಲಾವಿದರು ಸಾಂಸ್ಕೃತಿಕ ಲೋಕದಲ್ಲಿ ಇರಬೇಕೆಂದರೆ ತಮ್ಮ ಮನೆಗಳನ್ನು ಹಾಳು ಮಾಡಿಕೊಂಡು ಮನೆಹಾಳರಾಗಿ ಕಲೋದ್ದಾರ ದೇಶೋದ್ದಾರಗಳನ್ನೆಲ್ಲಾ ಮಾಡದೇ  ಅವರಿವರ ಮನೆಮುರಿದು, ಸಮಾಜದ ಐಕ್ಯತೆ ಒಡೆದು, ತಮ್ಮ ಮನೆಗಳ ತಳಪಾಯ ಕಂಬಗಳನ್ನೆಲ್ಲಾ ಗಟ್ಟಿಗೊಳಿಸಿಕೊಂಡು, ಅಧಿಕಾರ ಮತ್ತು ಸಂಪನ್ಮೂಲಗಳನ್ನು ಪಡೆಯುವ ನಿಟ್ಟಿನಲ್ಲಿ ಕಾರ್ಯತತ್ಪರರಾಗಬೇಕಿದೆ. ಈ ಮನೆಹಾಳರಿಗೆ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿದರೆ ಇನ್ನೂ ಉತ್ತಮ. ಎಲ್ಲರೂ ನಿಮ್ಮನ್ನು ಮಾದರಿಯಾಗಿ ಸ್ವೀಕರಿಸಿ ಉದ್ದಾರವಾಗಲಿ. 

ಜೈ ಶ್ರೀರಾಮ್

- ಶಶಿಕಾಂತ ಯಡಹಳ್ಳಿ

ತಹ ತಹ - 100.. ಮನೆಹಾಳರು ಯಾರು?.. ಕಿತ್ತೆಸೆಯಬೇಕಿದೆ ನಂಜಿನ ನಾಲಿಗೆಯ ಬೇರು..



ಅದ್ಯಾಕೊ ಎಂದೋ ಕೇಳಿದ ಕಥೆಯೊಂದು ನೆನಪಾಯ್ತು. ಒಂಚೂರು ಬದಲಾಯಿಸಿ ಹೇಳುತ್ತಿದ್ದೇನಷ್ಟೇ.
 
ಎಲ್ಲಿಂದಲೋ ಹಿಡಿದುಕೊಂಡು ಬಂದ ಎರಡು ಗಿಳಿಮರಿಗಳನ್ನು ಸಂತೆಯಲಿಟ್ಟು ಮಾರಲಾಗುತ್ತಿತ್ತು. ಒಬ್ಬ ಕಲಾವಿದ ಒಂದನ್ನು ಕೊಂಡು ಮನೆಗೆ ತೆಗೆದುಕೊಂಡು ಹೋಗಿ ಸಾಕಿದ. ಇನ್ನೊಂದನ್ನು ಕೋಮುವಾದಿಯೊಬ್ಬ ಖರೀದಿಸಿ ಸಾಕಿದ. ಮರಿಗಳು ಬೆಳೆದು ಗಿಳಿಗಳಾದವು. ತನ್ನ ಸುತ್ತಲಿನ ಪರಿಸರಕ್ಕೆ ಸ್ಪಂದಿಸಿ ಮಾತನಾಡತೊಡಗಿದವು. ಕಲಾವಿದನ ಮನೆಗೆ ಯಾರೇ ಬಂದರೂ ಅಲ್ಲಿದ್ದ ಗಿಳಿ 'ನಮಸ್ಕಾರ, ಬನ್ನಿ ಕುಳಿತುಕೊಳ್ಳಿ,  ಚೆನ್ನಾಗಿದ್ದೀರಾ' ಎಂದು ಕಕ್ಕುಲಾತಿಯಿಂದ ಉಲಿಯುತ್ತಿತ್ತು. ಅದನ್ನು ಕೇಳಿದವರಿಗೆಲ್ಲ ಸಂತಸವಾಗುತ್ತಿತ್ತು. ಕೋಮುವಾದಿಯ ಮನೆಯ ಗಿಳಿ ಮಾತ್ರ ಯಾರೇ ಬಂದರೂ "ಹಿಡೀರಿ ಹೊಡೀರಿ ಬಿಡಬೇಡಿ ಬೆಂಕಿ ಹಚ್ಚಿ.." ಎಂದೆಲ್ಲಾ ಅರಚುತ್ತಿತ್ತು. ಕೇಳಿದವರಿಗೆ ದಿಗಿಲಾದರೆ ಮನೆಯ ಮಾಲೀಕನಿಗೆ ಕರ್ಣಾನಂದವಾಗುತ್ತಿತ್ತು. 

ಈಗ ಅಂತದೇ ಒಂದು ಗಿಳಿಗೆ ಮಂತ್ರಿಗಿರಿ ಸಿಕ್ಕಿದೆ. 'ಸಾಹಿತಿ ಕಲಾವಿದರಿಗೆಲ್ಲಾ ಮನೆಮುರುಕರು' ಎಂದು  ಅರಚುತ್ತಿದೆ. ಕಲಾವಿದರ ಮನೆಯ ಗಿಳಿಸಂತಾನ ಮಾತ್ರ  ಅದ್ಯಾಕೋ ಆತಂಕದಿಂದ ಮೌನವಹಿಸಿವೆ.

ಹೌದು.. ಸಂಸ್ಕೃತಿ ಇಲಾಖೆಯ ಹಾಲಿ ಸಚಿವರ ನಾಲಿಗೆ ಮಾಮೂಲಿನಂತೆ ನಂಜು ಕಾರುತ್ತಿದೆ. 

ಇಷ್ಟಕ್ಕೂ ಆದದ್ದಾದರೂ ಏನಂದರೆ.. ಅಕಾಡೆಮಿ ಪ್ರಾಧಿಕಾರಗಳಿಗೆ ಆಯ್ಕೆ ಆದವರ ಅಧಿಕಾರದ ಅವಧಿಯನ್ನು ಅಕಾಲಿಕವಾಗಿ ವಜಾ ಮಾಡಿದ ಬಿಜೆಪಿ ಸರಕಾರ ಮೂರು ತಿಂಗಳ ನಂತರ ಸಂಘಪರಿವಾರದ ಸಾಂಗತ್ಯ ಹೊಂದಿರುವವರನ್ನು ಅಕಾಡೆಮಿಗಳ ನಿಯಮಾವಳಿ (ಬೈಲಾ) ಹಾಗೂ ಸಾಂಸ್ಕೃತಿಕ ನೀತಿಯನ್ನು ಉಲ್ಲಂಘಿಸಿ ಆಯ್ಕೆ ಮಾಡಿತು. ಸಂಸ್ಕೃತಿ ಸಚಿವಾಲಯದ ಸಚಿವರಾದ ಮಾನ್ಯ ಸಿ.ಟಿ.ರವಿಯವರು ಅಕ್ಟೋಬರ್ 18 ರಂದು ಹೊಸದಾಗಿ ಆಯ್ಕೆಯಾದ ಎಲ್ಲಾ ಅಕಾಡೆಮಿ ಪ್ರಾಧಿಕಾರಗಳ ಅಧ್ಯಕ್ಷರು ಹಾಗೂ ಸದಸ್ಯರ ಸಭೆಯನ್ನು ವಿಧಾನಸಭೆಯ ಸಭಾಂಗಣದಲ್ಲಿ ಕರೆದಿದ್ದರು. ಎಲ್ಲರಿಗೂ ಶುಭಹಾರೈಸಿ ಸಾಧ್ಯವಾದರೆ ಒಂದಿಷ್ಟು ಮಾರ್ಗದರ್ಶನ ನೀಡಿ ಕಳಿಸಿದ್ದರೆ ಈ ಲೇಖನ ಬರೆಯುವ ಅಗತ್ಯವೇ ಇರಲಿಲ್ಲ. 

ಆದರೆ.. ಹಿಂದೆ ಕಲಿತದ್ದನ್ನ ಈ ಕೋಮುಗಿಳಿ ಹೇಗೆ ತಾನೇ ಮರೆತು ಬದಲಾದೀತು.  *"ಅಕಾಡೆಮಿ ಪ್ರಾಧಿಕಾರಗಳಿಗೆ ಈಗ ಆಯ್ಕೆ ಮಾಡುವಾಗ ಮನೆಹಾಳರನ್ನು ದೂರವಿಟ್ಟಿದ್ದೇವೆ. ಸಾಂಸ್ಕೃತಿಕ ಕ್ಷೇತ್ರವನ್ನು ಕದಡುವ, ಒಡೆಯುವ ಮನಸ್ಥಿತಿ ಇರುವವರನ್ನು ನಾವು ಆಯ್ಕೆ ಮಾಡಿಲ್ಲ. ಮನೆಹಾಳು ಮಂದಿಗೆ ಅಧಿಕಾರ ಕೊಟ್ಟಿಲ್ಲ. ಸಾಂಸ್ಕೃತಿಕ ಕ್ಷೇತ್ರದ ಕೆಲ ಮನೆಮುರುಕರು ಬಂದರೆ ಎಲ್ಲವನ್ನೂ ಹಾಳುಮಾಡುತ್ತಾರೆ..."* ಎಂದು ಸಂಘಪರಿವಾರದ ಈ ಪ್ರಮುಖ ಅಂಗದ ನಾಲಿಗೆ ಉಲಿಯಿತು. ಇದನ್ನು ಕೇಳಿಯೂ ಆಯ್ಕೆಯಾದ ಋಣದಲ್ಲಿರುವ ಎಲ್ಲಾ ಅಕಾಡೆಮಿ ಪ್ರಾಧಿಕಾರದ ಅಧ್ಯಕ್ಷ- ಸದಸ್ಯರುಗಳೂ ಮೌನ ಸಮ್ಮತಿ ಸೂಚಿಸಿ ಜಾಣಕಿವುಡು ಕುರುಡನ್ನು ತೋರಿದ್ದೊಂದು ಸಾಂಸ್ಕೃತಿಕ ದುರಂತ.

ಪ್ರಭುತ್ವದ ತಪ್ಪು ನಿರ್ಧಾರಗಳನ್ನು ಜನವಿರೋಧಿ ನಿಲುವುಗಳನ್ನು ವಿರೋಧಿಸುವವರನ್ನು ದೇಶದ್ರೋಹಿಗಳು ಎಂದು ಆರೋಪಿಸಿ ಕಿರುಕುಳ ಕೊಡುವ ಉರಿ ನಾಲಿಗೆಯವರಲ್ಲಿ ಉದುರುವುದೇ ಇಂತಹ ನಂಜಿನ ಪದಗಳು. ಇಲ್ಲಿ ಈಗ "ಮನೆಮುರುಕರು ಯಾರು? ಎನ್ನುವ ಪ್ರಶ್ನೆ ಪ್ರಮುಖವಾಗಿದೆ. ಯಾವ ಸಾಹಿತಿ ಕಲಾವಿದರು ಯಾರ ಮನೆಯನ್ನು ಮುರಿದಿದ್ದಾರೆ? ಇಲ್ಲಿವರೆಗೂ ಅಕಾಡೆಮಿ ಪ್ರಾಧಿಕಾರಕ್ಕೆ ಆಯ್ಕೆ ಆದವರಲ್ಲಿ ಯಾರು ಸಾಂಸ್ಕೃತಿಕ ಕ್ಷೇತ್ರವನ್ನು ಹಾಳುಮಾಡಿದ್ದಾರೆ?. ಕದಡುವ ಒಡೆಯುವ ಮನಸ್ಥಿತಿ ಯಾರು ಹೊಂದಿದ್ದಾರೆ..?"  ಎನ್ನುವುದಕ್ಕೆ ಮೊದಲು ಸಚಿವರು ಉತ್ತರಿಸಬೇಕಾಗಿದೆ. 

'ತಲೆ ಕತ್ತರಿಸುತ್ತೇವೆ, ಬೆಂಕಿ ಹಚ್ಚುತ್ತೇವೆ' ಎಂದು ಸಾರ್ವಜನಿಕವಾಗಿ ಕಿಚ್ಚು ಹಚ್ಚುವ, 'ಸಂವಿಧಾನವನ್ನು ಬದಲಾಯಿಸುತ್ತೇವೆ' ಎಂದು ಹೇಳುವ, ಸಂವಿಧಾನವನ್ನೇ ಸಾರ್ವತ್ರಿಕವಾಗಿ ಸುಡುವ ಇಂತಹ ದೇಶಭಂಜಕ ಸಂಘಪರಿವಾರದ ಅಂಗಗಳು ಮನೆಮುರುಕರೋ ಅಥವಾ ಸರಕಾರಗಳ ಜನದ್ರೋಹಿ ನೀತಿಗಳ ವಿರುದ್ದ ಎಚ್ಚರದ ದ್ವನಿಯಾಗಿರುವ ಸಾಹಿತಿ ಕಲಾವಿದರು ಮನೆಮುರುಕರೋ?..  ಚಿಕ್ಕಮಗಳೂರಿನಲ್ಲಿ ಕೋಮುಸೌಹಾರ್ಧತೆಗೆ ಕಿಚ್ಚು ಹಚ್ಚಿ, ಬಾಬಾಬುಡನ್ ಗಿರಿಗೆ ದ್ವೇಷದ ಬೆಂಕಿ ಇಟ್ಟು ಅದರ ಶಾಖದಲ್ಲಿ ಅಧಿಕಾರದ ಸುಖ ಅನುಭವಿಸುತ್ತಿರುವ ಈ ಸಚಿವ ಮಹಾಶಯರು ಮತಧರ್ಮದ ಹೆಸರಲ್ಲಿ ಜನರನ್ನು ಒಡೆದಾಳುವ ಮನೆಮುರುಕರೋ.. ಇಲ್ಲವೇ ಕೋಮುಸೌಹಾರ್ದವನ್ನು ಸಾರುವ ನಾಟಕಗಳನ್ನು ಮಾಡುವ ಕಲಾವಿದರು, ಧರ್ಮದ್ವೇಷವನ್ನು ವಿರೋಧಿಸುವಂತಹ ಬರಹಗಳನ್ನು ಬರೆಯುವ ಸಾಹಿತಿಗಳು ಮನೆಮುರುಕರೋ..?  

ನಿಜ ಏನೆಂದರೆ ಹಲವಾರು ಸಾಹಿತಿ ಕಲಾವಿದರು ಕಲೆ ಸಾಹಿತ್ಯದ ಮೇಲಿನ ಪ್ರೀತಿ ಮತ್ತು ವ್ಯಾಮೋಹದಿಂದ ತಮ್ಮ ಮನೆಯನ್ನು ಮುರಿದುಕೊಂಡು, ಕುಟುಂಬದ ವಿರೋಧವನ್ನು ಎದುರಿಸಿಕೊಂಡು ಸಾಂಸ್ಕೃತಿಕ ಲೋಕಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆಯನ್ನು ಕೊಟ್ಟಿರುವುದಕ್ಕೇ ಬೇಕಾದಷ್ಟು ಉದಾಹರಣೆಗಳಿವೆ. ಆದರೆ ಬೇರೆಯವರ ಮನೆ ಮುರಿಯುವ ಇಲ್ಲವೇ ಸಾಂಸ್ಕೃತಿಕ ಕ್ಷೇತ್ರವನ್ನು ಕದಡುವ ಇಲ್ಲವೇ ಒಡೆಯುವ ಕೆಲಸವನ್ನೂ ನಿಜವಾದ ಸಾಹಿತಿ ಕಲಾವಿದರು ಮಾಡಿಲ್ಲ ಮಾಡುವುದೂ ಇಲ್ಲ.. ಹಾಗೇನಾದರೂ ಮಾಡಿದ್ದರೆ ಅಂತವರು ಸಾಹಿತಿ ಕಲಾವಿದರೇ ಅಲ್ಲ ಎನ್ನುವ ಅರಿವು ಈ ನಂಜಿನ ನಾಲಿಗೆಯವರಿಗಿಲ್ಲ. 

ಇಷ್ಟಕ್ಕೂ ಈಗ ಸಾಂಸ್ಕೃತಿಕ ಕ್ಷೇತ್ರವನ್ನು ಕದಡಿ ಒಡೆದವರು ಯಾರು? ಇದೇ ಬಿಜೆಪಿ ಪಕ್ಷದ ಸರಕಾರದವರು. ಎಲ್ಲಾ ಅಕಾಡೆಮಿ ಪ್ರಾಧಿಕಾರಗಳಿಗೆ ಆಯ್ಕೆಯಾಗಿದ್ದ ಅಧ್ಯಕ್ಷ ಸದಸ್ಯರುಗಳು ತಮ್ಮ ಇತಿಮಿತಿಯಲ್ಲಿ ಅಧಿಕಾರಿಗಳ ಅಡೆತಡೆ ಕಿರುಕುಳಗಳ ನಡುವೆಯೂ ತಮ್ಮ ಕಾರ್ಯವ್ಯಾಪ್ತಿಯ ಕೆಲಸಗಳನ್ನು ಮಾಡಿಕೊಂಡಿದ್ದರು. ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದರು. ಅವರೆಲ್ಲರ ಅವಧಿ ಮುಗಿಯಲು ಇನ್ನೂ ಒಂದು ವರ್ಷ ಬಾಕಿ ಇತ್ತು.  ಅವಧಿ ಪೂರ್ವದಲ್ಲಿ ಯಾವುದೇ ಕಾರಣವನ್ನೂ ಕೊಡದೇ ಅಕಾಲಿಕವಾಗಿ ಅಕಾಡೆಮಿ ಪ್ರಾಧಿಕಾರಗಳ ಆಯ್ಕೆಗಳನ್ನೆಲ್ಲಾ ಸಾರಾಸಗಟಾಗಿ ವಜಾಮಾಡಿದ್ದು ಸಾಂಸ್ಕೃತಿಕ ಕ್ಷೇತ್ರವನ್ನು ಕದಡುವ ಒಡೆಯುವ ಕೆಲಸ ಅಲ್ಲವಾ? ಸರಕಾರಗಳೇ ಒಪ್ಪಿದ್ದ ಬೈಲಾ ನಡಾವಳಿಗಳು ಮತ್ತು ಸಾಂಸ್ಕೃತಿಕ ನೀತಿಯನ್ನು ಉಲ್ಲಂಘಿಸಿ ಅವಧಿಪೂರ್ವದಲ್ಲಿ ಅಕಾಡೆಮಿ ಪ್ರಾಧಿಕಾರದ ಕಾರ್ಯನಿರತರನ್ನು ನಿಯಮ ಬಾಹಿರವಾಗಿ  ಮನೆಗೆ ಕಳಿಸಿದ್ದು ಮನೆಮುರುಕತನವಲ್ಲವಾ? ರಂಗಕೈಂಕರ್ಯದಲ್ಲಿ ತೊಡಗಿದ್ದ ರಂಗಾಯಣಗಳ ನಿರ್ದೇಶಕರನ್ನು ಹೊರಗೆ ಕಳಿಸಿ ರಂಗಾಯಣದ ನಡಾವಳಿಗಳಿಗೆ ವಿರುದ್ದವಾಗಿ ರಂಗಸಮಾಜದ ಸದಸ್ಯರ ಆಯ್ಕೆಯನ್ನೂ ರದ್ದು ಮಾಡಿದ್ದು ಕದಡುವ ಒಡೆಯುವ ಮನೆಮುರುಕ ನಡೆಯಲ್ಲವಾ?

ಹಿಂದಿನ ಸರಕಾರವೊಂದು ಇದೇ ಕೆಲಸ ಮಾಡಿತೆಂದು ದ್ವೇಷಸಾಧನೆಗೋ, ಸ್ವಾರ್ಥ ಸಾಧನೆಗೋ ಈ ಸರಕಾರವೂ ಅದನ್ನೇ ಮಾಡಿ, ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳು ಸರಿಯಾಗಿ ಕೆಲಸಮಾಡದಂತೆ ಅಡ್ಡಿ ಮಾಡಿ, ಜನರ ತೆರಿಗೆ ಹಣ ಪೋಲಾಗುವುದಕ್ಕೆ ಕಾರಣವಾಗಿದ್ದು ಕದಡುವ ಕಾರ್ಯ ಅಲ್ಲವಾ?

ಹೇಳುತ್ತಾ ಹೋದರೆ ಈ ಆಳುವ ಅಧಿಕಾರಸ್ತರು ಮಾಡುವ ಬೇಕಾದಷ್ಟು ಮನೆಮುರುಕ ಕೆಲಸಗಳ ಪಟ್ಟಿ ಇದೆ. ಈ ಬಹುತೇಕ ಸ್ವಾರ್ಥಿ ರಾಜಕಾರಣಿಗಳ ಕಸುಬೇ ಸಮಾಜದ ಶಾಂತಿಯನ್ನು ಕದಡುವ ಹಾಗೂ ಸೌಹಾರ್ಧತೆಯನ್ನು ಒಡೆಯುವುದಾಗಿದೆ. ಇವರು ಮಾಡುವ ಕೆಡುವುವ ಕೆಲಸಗಳನ್ನು ಮರೆಮಾಚಲು ಕಟ್ಟುವ ಕೆಲಸದಲ್ಲಿ ನಿರತರಾಗಿರುವ ಸಾಹಿತಿ ಕಲಾವಿದರ ಮೇಲೆ ಆರೋಪ ಮಾಡುತ್ತಿರುವುದು ಅಕ್ಷಮ್ಯ. ಇಂತಹ ನಂಜಿನ ಆರೋಪವನ್ನು ಆಲಿಸಿ ಅರಗಿಸಿಕೊಳ್ಳುವ ಬದಲು ಸಾಹಿತಿ ಕಲಾವಿದರು ವಿರೋಧಿಸಲೇಬೇಕಿದೆ. ಸಾಂಸ್ಕೃತಿಕ ಕ್ಷೇತ್ರದ ಮೇಲೆ ಯಾರೇ ದಾಳಿ ದಬ್ಬಾಳಿಕೆ ಮಾಡಿದರೂ ಜಾತಿ ಧರ್ಮ ಪಕ್ಷಗಳನ್ನು ಪಕ್ಕಕ್ಕಿಟ್ಟು ಪ್ರತಿಭಟಿಸುವ ಮಹತ್ಕಾರ್ಯವನ್ನು ಕನ್ನಡ ಸಾಂಸ್ಕೃತಿಕ ಲೋಕ ಮಾಡುತ್ತಲೇ ಬಂದಿದೆ. ಸಾಹಿತಿ ಕಲಾವಿದರಿಗೆ ಆತ್ಮಗೌರವ ಹಾಗೂ ಸ್ವಾಭಿಮಾನ ಎಲ್ಲಕ್ಕಿಂತಾ ಬಹುಮುಖ್ಯವಾದದ್ದು. ಸಾಂಸ್ಕೃತಿಕ ಹಿತಾಸಕ್ತಿಗೆ ದಕ್ಕೆಯಾದಾಗ ಸಿಡಿದೇಳುವಂತಹುದು. "ಕಲಾವಿದರು ಕದಡುವವರಲ್ಲ ಕಟ್ಟುವವರು ಸಮಾಜದ ಎಚ್ಚರದ ದ್ವನಿಗಳು" ಎಂಬುದನ್ನು ದೊಡ್ಡ ದ್ವನಿಯಲ್ಲಿ ಸಾರಬೇಕಿದೆ. ಸಾಧ್ಯವಾದ ಎಲ್ಲಾ ರೀತಿಯಲ್ಲೂ ಸಚಿವರ ಅನುಚಿತ ಮಾತುಗಳನ್ನು ವಿರೋಧಿಸಬೇಕಿದೆ. ಎಲ್ಲವನ್ನೂ ಒಡೆದಾಳುವ ಹಾಗೆ ಸಾಂಸ್ಕೃತಿಕ ಕ್ಷೇತ್ರವನ್ನೂ ಒಡೆಯುವ ಹುನ್ನಾರದ ವಿರುದ್ದ ಸಿಡಿದೇಳಬೇಕಿದೆ. ಇಲ್ಲವಾದರೆ ಸಾಂಸ್ಕೃತಿಕ ಲೋಕದ ಮೇಲೆ ಪ್ರಭುತ್ವ ಮಾಡುವ ದಬ್ಬಾಳಿಕೆ ದಮನಗಳಿಗೆ ಬಲಿಯಾಗಲು ಸಿದ್ದವಾಗಬೇಕಿದೆ.

ಅಗೋ ಅಲ್ಲಿ ಕೋಮುವಾದಿಗಳು ಸಾಕಿದ ಕೋಮುಸೌಹಾರ್ಧ ಕದಡಿದ ಗಿಳಿ " ಮನೆಮುರುಕರು, ಮನೆಮುರುಕರು.." ಅಂತಾ ಅರಚುತ್ತಿದೆ. ಕಲಾವಿದರ ಮನೆಯಂಗಳದ ಗಿಳಿಗಳು ಈಗ ಸುಮ್ಮನಿದ್ದರೆ ಸರ್ವನಾಶ. ಮೌನವಾಗಿದ್ದರೆ ವಿನಾಶ..

- ಶಶಿಕಾಂತ ಯಡಹಳ್ಳಿ

ಗುರುವಾರ, ಸೆಪ್ಟೆಂಬರ್ 7, 2017

ತಹ ತಹ …99 ಸೈದ್ದಾಂತಿಕ ಬದ್ದತೆಯ ದಾರಿ; ಮತಾಂಧರಿಗೆ ಬಲಿಯಾದ ಗೌರಿ :



ಈ ಒಂದು ಅಮಾನುಷ ಹತ್ಯೆ ಈ ರೀತಿಯಲ್ಲಿ ಸಂಚಲನವನ್ನು ಹುಟ್ಟಿಸುತ್ತದೆಂದು ಸ್ವತಃ ಕೊಲೆ ಮಾಡಿದವರಿಗೆ ಹಾಗೂ ಕೊಲೆ ಮಾಡಿಸಿದವರಿಗೆ ಗೊತ್ತೇ ಇರಲಿಲ್ಲ. ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಮತಾಂಧರ ಹಿಂಸಾಪಾತದ ಕೃತ್ಯ ಇಷ್ಟೊಂದು ದೊಡ್ಡ ಸುದ್ದಿ ಆದೀತೆಂಬ ಕಲ್ಪನೆಯೂ ಆ ಪಾತಕಿಗಳ ಮಹಾಪೋಷಕರಿಗೂ ಬಂದಿರಲಿಲ್ಲ. ರಾಜ್ಯದಲ್ಲಷ್ಟೇ ಅಲ್ಲಾ ದೇಶಾದ್ಯಂತ ಪ್ರತಿಭಟನೆಗಳು ಹೀಗೆಲ್ಲಾ ತೀವ್ರತೆಯನ್ನು ಪಡೆಯುತ್ತವೆ ಎಂಬ ಊಹೆಯೂ ಆ ಕೋಮುವಾದಿ ಪಡೆಗಳಿಗೆ ಅಂದಾಜಿರಲಿಲ್ಲ. ಅಂತಿಮ ದರ್ಶನಕ್ಕೆ ಜನರು ತಂಡೋಪತಂಡವಾಗಿ ಹರಿದು ಬರುತ್ತಾರೆಂಬ ಆಲೋಚನೆಯೂ ಆ ದುರುಳರಿಗಿರಲಿಲ್ಲ. ಕೊಂದವರು ಇಲ್ಲಿ ಹೇಡಿಗಳಾಗಿದ್ದರೆ ಕೊಲೆಯಾದವರು ಗಟ್ಟಿ ಮನಸ್ಸಿನ ದಿಟ್ಟ ಮಹಿಳೆಯಾಗಿದ್ದರು.


ಹೌದು... ಅವರು ಗೌರಿ ಲಂಕೇಶ್. ಕನ್ನಡ ನಾಡು ಕಂಡ ಅತ್ಯಂತ ನಿಷ್ಟುರ ಪತ್ರಕರ್ತ ಪ್ರಗತಿಪರ ಚಿಂತಕ ಲಂಕೇಶ್‌ರವರ ಮಗಳಾಗಿದ್ದವರು. ತಮ್ಮ ಪ್ರಖರವಾದ ಲೇಖನಗಳು, ಜನಮುಖಿ ಚಿಂತನೆಗಳು ಹಾಗೂ ಜನಪರ ಹೋರಾಟಗಳಿಂದಾಗಿ ಗೌರಿ ಲಂಕೇಶರವರು ನಾಡಿನಾದ್ಯಂತ ಗುರುತಿಸಿಕೊಂಡಿದ್ದವರು. ಹಿಂದುತ್ವವಾದಿಗಳು ಹುಟ್ಟಿಸುವ ಉನ್ಮಾದವನ್ನು, ಮತಾಂಧ ಶಕ್ತಿಗಳ ಹಿಂಸಾಪಾತಗಳನ್ನು, ಕೋಮುವಾದಿಗಳ ಒಳ ಹುನ್ನಾರಗಳನ್ನು ತಮ್ಮ ಗೌರಿ ಲಂಕೇಶ ಪತ್ರಿಕೆಯ ಮೂಲಕ ನಿರಂತರವಾಗಿ ಬೆತ್ತಲೆಗೊಳಿಸುತ್ತಲೇ ಬಂದಿದ್ದರು. ಕೋಮು ಸೌಹಾರ್ಧತೆಗಾಗಿ ಸಂಘಟನಾತ್ಮಕ ಪ್ರಯತ್ನಗಳನ್ನು ಮಾಡಿದ್ದರು. ಆಳುವ ವರ್ಗಗಳ ಜನವಿರೋಧಿತನಗಳ ವಿರುದ್ಧ ನಡೆದ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಇದನ್ನು ಕೋಮುವಾದಿ ಪಡೆಗಳಿಗೆ ಸಹಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲಾ. ತಮ್ಮ ಕರಾಳ ಮುಖವಾಡಗಳೆಲ್ಲಾ ಬಯಲು ಮಾಡುತ್ತಿದ್ದ ಬೆಳಕನ್ನೇ ನಂದಿಸಿಬಿಟ್ಟರು. ಮತಾಂಧ ಆಗುಂತಕರು 2017 ಸೆಪ್ಟಂಬರ್ 5ರಂದು ಗೌರಿಯವರ ಮನೆಯ ಆವರಣದಲ್ಲಿ ಹೊಂಚು ಹಾಕಿ ಗುಂಡಿಟ್ಟು ಕೊಂದುಬಿಟ್ಟರು. ಜೀವಪರ ದ್ವನಿಯೊಂದು ಮೌನವಾಯಿತು. ಪ್ರಜ್ಞಾವಂತ ಜೀವವೊಂದು ನಿರ್ಜಿವಗೊಂಡಿತು. ಈ ನಾಡಿನ ಸಮಸ್ತ ಪ್ರಗತಿಪರ, ಪ್ರಜ್ಞಾವಂತ ಮನಸುಗಳಿಗೆ ಅನಿರೀಕ್ಷಿತ ಆಘಾತವನ್ನುಂಟುಮಾಡಿತು.

ಮತಿಹೀನ ಮತಾಂಧರು ಮಾಡುತ್ತಿರುವುದು ಇದೇ ಮೊದಲನೆಯ ಹತ್ಯೆ ಏನಲ್ಲಾ. ಕಳೆದ ಮೂರುವರೆ ಸಾವಿರ ವರ್ಷಗಳ ಈ ದೇಶದ ಮನುಕುಲದ ಇತಿಹಾಸವನ್ನೊಮ್ಮೆ ನೋಡಿದರೆ ಬುದ್ದನಿಂದ ಬಸವಣ್ಣನವರೆಗೆ ಮನುಧರ್ಮದ ಶೋಷಣೆಯ ವಿರುದ್ಧ ದ್ವನಿಯೆತ್ತಿ ಜನಜಾಗೃತಿ ಮೂಡಿಸಿದವರನ್ನೆಲ್ಲಾ ಕೊಲೆ ಮಾಡುತ್ತಲೇ ಬರಲಾಗಿದೆ.  ತೀರಾ ಇತ್ತೀಚೆಗೆ ಮಹಾರಾಷ್ಟ್ರದ ಮೌಢ್ಯ ವಿರೋಧಿ ಆಂದೋಲನದ ನೇತೃತ್ವವಹಿಸಿದ್ದ ವಿಚಾರವಾದಿ ನರೇಂದ್ರ ದಾಬೋಲ್ಕರ್ ರವರನ್ನು 2013 ಆಗಸ್ಟ್ 20 ರಂದು ಪುಣೆಯಲ್ಲಿ ಕೊಲ್ಲಲಾಯಿತು. ಎಡಪಂಥೀಯ ವಿಚಾರಧಾರೆಯ ಗೋವಿಂಧ ಪನ್ಸಾರೆಯವರನ್ನು 2015 ಫೆಬ್ರವರಿ 16 ರಂದು ಕೊಲ್ಲಾಪುರದಲ್ಲಿ ಹತ್ಯೆಮಾಡಲಾಯಿತು. ಹಾಗೆಯೇ ಕರ್ನಾಟಕದ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿಯವರನ್ನು 2015 ಆಗಸ್ಟ್ 30 ರಂದು ಧಾರವಾಡದಲ್ಲಿ ಸಾಯಿಸಲಾಯಿತು. ಈಗ 2017ರ ಸೆಪ್ಟಂಬರ್ 5 ರಂದು ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಪತ್ರಕರ್ತೆ ಗೌರಿ ಲಂಕೇಶರನ್ನು ಬಲಿ ತೆಗೆದುಕೊಳ್ಳಲಾಯಿತು.


ವ್ಯಕ್ತಿಗಳನ್ನು ಕೊಲೆ ಮಾಡಿ ಗೆದ್ದೆವೆಂಬ ಭ್ರಮೆಯಲ್ಲಿರುವ ಕೊಲೆಪಾತಕ ಶಕ್ತಿಗಳಿಗೆ ಒಂದು ಸತ್ಯ ಇಲ್ಲಿವರೆಗೂ ತಿಳಿದಿಲ್ಲ. ಬುದ್ದನನ್ನು ಕೊಂದು ತದನಂತರ ಬೌದ್ದ ಧರ್ಮವನ್ನೇ ದೇಶಭ್ರಷ್ಟ ಗೊಳಿಸಿದರೂ ಸಾವಿರಾರು ವರ್ಷಗಳ ನಂತರವೂ ಬುದ್ದ ಎಲ್ಲರ ಅರಿವಿನ ಬೆಳಕಾಗಿ ದಾರಿದೀಪವಾಗಿದ್ದಾನೆ. ಬಸವಣ್ಣ ಹಾಗೂ ಅವರ ಶಿವಶರಣರನ್ನು ಹತ್ಯೆ ಮಾಡಲಾಯಿತಾದರೂ ಅವರ ಜ್ಯಾತ್ಯಾತೀತ ವಿಚಾರಗಳನ್ನು ಕೊಲ್ಲಲು ಸಾಧ್ಯವಾಗಲೇ ಇಲ್ಲಾ. ಈಗಲೂ ಶಿವಶರಣರು ಜನರೆದೆಯಲ್ಲಿ ಬೇರುಬಿಟ್ಟಿದ್ದಾರೆ. ಗಾಂಧಿಯನ್ನೂ ಸಹ ಈ ಧರ್ಮಾಧ ಪಡೆ ಹತ್ಯೆ ಮಾಡಿತಾದರೂ ಗಾಂಧೀಜಿ ಪ್ರತಿಪಾದಿಸಿದ ಸತ್ಯ, ಅಹಿಂಸೆ ತತ್ವಗಳನ್ನು ನಾಶಮಾಡಲು ಆಗಲೇ ಇಲ್ಲಾ.. ಆಗುವುದೂ ಇಲ್ಲಾ. ಇಂತಹ ಎಲ್ಲಾ ಮಹನೀಯರೂ ಹಾಗೂ ಅವರು ಪ್ರತಿಪಾದಿಸಿದ ಸಿದ್ದಾಂತಗಳು ಅವರು ಬದುಕಿದ್ದಾಗಿನಿಕಿಂತಾ ಹುತಾತ್ಮರಾದ ಮೇಲೆಯೇ ಬಹುಸಂಖ್ಯಾತ ಸಮುದಾಯವನ್ನು ಕಾಲದೇಶಾತೀತವಾಗಿ ಆವರಿಸಿಕೊಂಡು ಆದರಣೀಯರಾಗಿದ್ದಾರೆ. ಇಂದಿಲ್ಲಾ ನಾಳೆ ನಾಶವಾಗಬಹುದಾದ ಬೌತಿಕ ದೇಹವನ್ನು ಕೊಲ್ಲಬಹುದೇ ವಿನಃ ಅವರು ಪ್ರತಿಪಾದಿಸಿದ ವೈಚಾರಿಕತೆಯನ್ನು ನಾಶ ಮಾಡುವುದಂತೂ ಅಸಾಧ್ಯದ ಮಾತು. ಇಂದು ಒಬ್ಬ ವಿಚಾರವಾದಿಯ ಪ್ರತಿಭಟನೆಯ ದ್ವನಿಯನ್ನು ಅಡಗಿಸಿದರೆ ಇಂದಲ್ಲಾ ನಾಳೆ ಅದೇ ದ್ವನಿ ಹಲವಾರು ಕೊರಳುಗಳಲ್ಲಿ ಮಾರ್ಧನಿಸುತ್ತದೆ ಎನ್ನುವುದು ಐತಿಹಾಸಿಕ ಸತ್ಯ. ಆದರೆ.. ಈ ಮನುವಾದಿ ಪ್ರೇರಿತ ಕೊಲೆಪಾತಕರಿಗೆ ಇದೆಲ್ಲಾ ಅರ್ಥವಾಗುವುದಂತೂ ಸಾಧ್ಯವೇ ಇಲ್ಲಾ.. ಇನ್ನೆಷ್ಟು ಜನ ಸೈದ್ದಾಂತಿಕ ಬದ್ದತೆಗೆ ಬಲಿಯಾಗಬೇಕಾಗುತ್ತದೋ ಗೊತ್ತಿಲ್ಲಾ. ಗೌರಿ ಲಂಕೇಶ್‌ರ ಆಶಯವನ್ನು ಮುಂದುವರೆಸಿಕೊಂಡು ಹೋಗುವ ಪ್ರಜ್ಞಾವಂತರಿಗಂತೂ ಕೊರತೆ ಇಲ್ಲಾ.


ಈಗ ಹತ್ಯೆಯಾದ ನಾಲ್ಕೂ ಜನರೂ ಸಕ್ರೀಯ ರಾಜಕಾರಣಿಗಳಾಗಿರಲಿಲ್ಲಾ.. ಮಂತ್ರಿ ಮಾನ್ಯರೂ ಆಗಿರಲಿಲ್ಲಾ. ಭ್ರಷ್ಟ ದುಷ್ಟರಂತೂ ಅಲ್ಲವೇ ಅಲ್ಲಾ. ಸಮಾಜವಿರೋಧಿ ಕೃತ್ಯಗಳಲ್ಲಿ ತೊಡಗಿಕೊಂಡವರಲ್ಲಾ.. ಇವರ ಸಾವಿನಿಂದ ಯಾರಿಗೂ ಆರ್ಥಿಕವಾಗಿ ಲಾಭಗಳೂ ಇರಲಿಲ್ಲ. ಆದರೂ ಯಾಕೆ ಹತ್ಯೆಗೊಳಗಾದರು? ಯಾಕೆಂದರೆ.. ಇವರು ರೂಢಿಗತ ಮೌಢ್ಯಗಳ ವಿರುದ್ದ ದ್ವನಿ ಎತ್ತಿದ್ದರು. ಕೋಮುದ್ವೇಷಗಳಂತಹ ಸಮಾಜವಿರೋಧಿ ಕೃತ್ಯಗಳನ್ನು ನಿರಂತರವಾಗಿ ಖಂಡಿಸುತ್ತಿದ್ದರು. ಶೋಷಣಾಮುಕ್ತ ಸ್ವಸ್ಥ ಸಶಕ್ತ ಸಮಾಜ ನಿರ್ಮಾಣದ ಕುರಿತು ಕನಸು ಕಾಣುತ್ತಿದ್ದರು. ದೇಶವನ್ನು ಜಾತಿ, ಮತ, ಧರ್ಮಗಳ ಮೂಲಕ ಒಡೆಯುವ ವಿನಾಶಕಾರಿ ಶಡ್ಯಂತ್ರಗಳ ವಿರುದ್ಧ ತಿರುಗಿ ಬಿದ್ದಿದ್ದರು. ಹಾಗೂ ಮನುಕುಲ ವಿರೋಧಿ ವ್ಯಕ್ತಿಗಳು ಹಾಗೂ ಶಕ್ತಿಗಳ ಶಡ್ಯಂತ್ರಗಳನ್ನು ಜನತೆಯ ಮುಂದೆ ತಮ್ಮ ಮಾಧ್ಯಮಗಳ ಮೂಲಕ ಬೆತ್ತಲುಗೊಳಿಸುತ್ತಿದ್ದರು. ಮತೀಯವಾದಿಗಳ ವಿರುದ್ಧ ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದರು. ಇದು ಮತೀಯಶಕ್ತಿಗಳಿಗೆ ಸಹಿಸಲು ಸಾಧ್ಯವೇ ಇಲ್ಲದಾಯಿತು. ತಮ್ಮ ಮುಖವಾಡಗಳನ್ನು ಬೆತ್ತಲೆಗೊಳಿಸುವವರನ್ನು ಬಲಿ ಪಡೆಯಲು ಆರಂಭಿಸಿದರು.  ಇದೇ ಕಾರಣಕ್ಕೆ ಗೌರಿ ಲಂಕೇಶರವರ ಹತ್ಯೆ ಮಾಡಲಾಯಿತು.

ಲಂಕೇಶ್ ಎನ್ನುವ ದೈತ್ಯ ಪ್ರತಿಭೆಯ ಮಗಳಾಗಿದ್ದರೂ, ಎಲ್ಲಾ ಅನುಕೂಲಗಳ ಜೊತೆಗೆ ಬೆಳೆದಿದ್ದರೂ ಗೌರಿಯವರ ಹಾದಿ ಅಷೊಂದು ಸುಗಮವಾಗಿರಲಿಲ್ಲಾ. ನ್ಯಾಷನಲ್ ಕಾಲೇಜಿನಲ್ಲಿ ವಿದ್ಯಾಬ್ಯಾಸ ಮುಗಿಸಿ, ದೆಹಲಿಯ ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಕಲಿತಾದ ನಂತರ ಟೈಮ್ಸ್ ಆಪ್ ಇಂಡಿಯಾ ಎನ್ನುವ ಆಂಗ್ಲ ಪತ್ರಿಕೆಯಿಂದಾ ತಮ್ಮ ಪತ್ರಕರ್ತ ವೃತ್ತಿಯನ್ನು ಆರಂಭಿಸಿದರು. ಆಂಗ್ಲಭಾಷೆಯಲ್ಲಿ ಪ್ರಭುತ್ವ ಪಡೆದು, ತನಿಖಾ ಪತ್ರಿಕೋದ್ಯಮದಲ್ಲಿ ಕೌಶಲ್ಯವನ್ನು ಹೊಂದಿದ್ದ ಗೌರಿಯವರು ರಾಷ್ಟ್ರೀಯ ಪತ್ರಿಕೋದ್ಯಮದಲ್ಲೇ ಮುಂದುವರೆಯಬಹುದಾಗಿತ್ತು. ಆದರೆ 2000 ನೇ ಇಸ್ವಿಯಲ್ಲಿ ಲಂಕೇಶ್‌ರವರ ಅಕಾಲಿಕ ಸಾವು ಗೌರಿಯವರನ್ನು ಕರ್ನಾಟಕದ ಪತ್ರಿಕೋದ್ಯಮಕ್ಕೆ ಎಳೆತಂದಿತು. ಅಲ್ಲಿಂದ ಅವರ ಹೋರಾಟದ ಬದುಕು ಆರಂಭವಾಯಿತು.

ತಂದೆಯವರ ಜನಪ್ರೀಯ ಲಂಕೇಶ್ ವಾರಪತ್ರಿಕೆಯನ್ನು ಅವರ ಆಶಯಕ್ಕೆ ದಕ್ಕೆ ಬಾರದಂತೆ ಮುನ್ನಡೆಸಿಕೊಂಡು ಹೋಗಬೇಕೆಂದರೆ ಸಹೋದರ ಇಂದ್ರಜಿತ್ ಲಂಕೇಶ್‌ರವರ ಅಸಹಕಾರ ಗೌರಿಯವರನ್ನು ಹೈರಾಣಾಗಿಸಿತು. ತೀವ್ರವಾದ ಭಿನ್ನಾಭಿಪ್ರಾಯ ಹಾಗೂ ನಿತ್ಯ ಸಂಘರ್ಷಗಳ ಜೊತೆಗೆ ಸಹೋದರನ ಪಾಲುದಾರಿಕೆಯಲ್ಲಿ ಲಂಕೇಶ್ ಪತ್ರಿಕೆಯಲ್ಲಿ ಮುಂದುವರೆಯಲು ಅಸಾಧ್ಯವಾದಾಗ ತಮ್ಮದೇ ಆದ ಗೌರಿ ಲಂಕೇಶ್ ಪತ್ರಿಕೆಯನ್ನು ಆರಂಭಿಸಿದರು. ಆರಂಭಿಕ ಬಂಡವಾಳದ ಸಮಸ್ಯೆ, ನುರಿತ ಬರಹಗಾರರ ಕೊರತೆ ಹಾಗೂ ಸ್ವತಃ ಕನ್ನಡ ಭಾಷೆಯ ಮೇಲೆ ಪ್ರಭುತ್ವ ಇಲ್ಲದ ತಾಪತ್ರಯಗಳೆಲ್ಲವನ್ನೂ ಆದಷ್ಟು ಬೇಗ ಬಗೆಹರಿಸಿಕೊಂಡು ಪ್ರತಿ ವಾರ ಸೈದ್ದಾಂತಿಕ ಬದ್ಧತೆಯಿಂದ, ಜನಪರ ದ್ಯೇಯ ದೋರಣೆಯಲ್ಲಿ ರಾಜಿಯಾಗದೇ, ಜಾಹೀರಾತು ರಹಿತವಾಗಿ ಪತ್ರಿಕೆಯನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದೇ ಒಂದು ವಿಸ್ಮಯ. 


ಕೇವಲ ಪತ್ರಿಕೆಯ ಮೂಲಕವೇ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಿದ್ದರೆ ಗೌರಕ್ಕ ಸಹ ನಿಂತ ನೀರಾಗುತ್ತಿದ್ದರೋ ಏನೋ. ಆದರೆ.. ಸಾಮಾಜಿಕ ಹೊಣೆಗಾರಿಕೆಯ ಜವಾಬ್ದಾರಿಯನ್ನು ವಿಸ್ತರಿಸಿಕೊಂಡರು. ನಾಲ್ಕು ಗೋಡೆಗಳಿಂದ ಹೊರ ಬಂದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾಯಕವನ್ನು ದಿಟ್ಟತೆಯಿಂದ ಮಾಡಿದರು. 2002ರಲ್ಲಿ ಗುಜರಾತಿನಲ್ಲಿ ನಡೆದ ಕೋಮುದ್ವೇಷದ ಮಾರಣಹೋಮ ಗೌರಿಯವರನ್ನು ತಲ್ಲಣಗೊಳಿಸಿತು. ಮತಾಂಧರು ಮಾಡಿದ ನರಹತ್ಯೆಗಳು ತಳಮಳಗಳನ್ನು ಹುಟ್ಟು ಹಾಕಿದವರು. ಅವತ್ತಿನಿಂದ ಕೋಮುವಾದಿಗಳನ್ನು ಶತಾಯ ಗತಾಯ ವಿರೋಧಿಸತೊಡಗಿದರು. ನಾಡಿನಾದ್ಯಂತ ಕೋಮುಸೌಹಾರ್ಧತೆಗೆ ಶ್ರಮಿಸತೊಡಗಿದರು. ನಂತರ 2003ರಲ್ಲಿ ಚಿಕ್ಕಮಗಳೂರಿನ ಬಾಬಾಬುಡನ್‌ಗಿರಿಯಲ್ಲಿ ಸಂಘಪರಿವಾರಿಗಳು ಧಾರ್ಮಿಕ ಅಸಹನೆಯನ್ನು ಬಿತ್ತಿ ಕೋಮುಪ್ರಚೋದನೆಗಿಳಿದಾಗ ಗೌರಕ್ಕ ಸಿಡಿದೆದ್ದರು. ಕೋಮುವಾದಿಗಳ ವಿರುದ್ಧ ಹೋರಾಟವನ್ನೂ ಹಮ್ಮಿಕೊಂಡು ಜೈಲುವಾಸವನ್ನೂ ಅನುಭವಿಸಿದರು. ಪ್ರಗತಿಪರ ಆಲೋಚನೆಯ ಸಮಾನ ಮನಸ್ಕರ ಜೊತೆ ಸೇರಿ 2004ರಲ್ಲಿ ಕೋಮು ಸೌಹಾರ್ಧ ವೇದಿಕೆಯನ್ನು ಹುಟ್ಟು ಹಾಕಿ ಸಂಘಿಗಳ ಹುನ್ನಾರಗಳನ್ನು ತಡೆದು ಅಲ್ಲಿ ಕೋಮುಸೌಹಾರ್ಧ ವಾತಾವರಣವನ್ನು ಮರುಸ್ಥಾಪಿಸಲು ಪ್ರಯತ್ನಿಸಿದರು. ಅವತ್ತಿನಿಂದ ಇವತ್ತಿನವರೆಗೂ ಪ್ರತಿವರ್ಷ ಬಾಬಾಬುಡನ್‌ಗಿರಿಯ ದತ್ತಪೀಠದಲ್ಲಿ ಸಂಘಪರಿವಾರದವರು ಕಾನೂನುಭಂಗ ಮಾಡುತ್ತಾ ಭಕ್ತರನ್ನು ಪ್ರಚೋದಿಸುತ್ತಲೇ ಇದ್ದಾರೆ.. ಅವರ ಮಂತ್ರಕ್ಕೆ ತಿರುಮಂತ್ರ ಹಾಕುವ ಕೆಲಸವನ್ನು ಕೋಮು ಸೌಹಾರ್ಧ ವೇದಿಕೆ ಮಾಡುತ್ತಲೇ ಬಂದಿದೆ. ಗೌರಿ ಲಂಕೇಶ್ ಸದಾ ಮುಂಚೂಣಿಯಲ್ಲಿದ್ದೇ ಇದ್ದು ಪತ್ರಿಕೆ ಹಾಗೂ ಹೋರಾಟದ ಮೂಲಕ ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿರುವುದು ಕೋಮುವಾದಿ ಪಡೆಯನ್ನು ಕೆರಳಿಸಿತು. 



ಅವತ್ತಿನಿಂದಲೂ ಗೌರಿಯವರ ಮೇಲೆ ಸೇಡಿನ ಮನೋಭಾವವನ್ನು ಸಂಘಪರಿವಾರದವರು ಬೆಳೆಸಿಕೊಂಡೇ ಬಂದರು. ದೇಶಾದ್ಯಂತ ಎಲ್ಲಿಯೇ ಆಗಲಿ ಕೋಮುಪ್ರಚೋದಿತ ಗಲಭೆಗಳಾದರೆ ಅದನ್ನು ವಿರೋಧಿಸಿ ಕೋಮುವಾದಿಗಳ ಶಡ್ಯಂತ್ರವನ್ನು ಬಯಲುಗೊಳಿಸುತ್ತಲೇ ಬಂದರು. ಸೂರತ್‌ಕಲ್ ಗಲಭೆ, ಚರ್ಚ ಮೇಲಿನ ದಾಳಿ, ನೈತಿಕ ಪೊಲೀಸ್‌ಗಿರಿ.. ಹೀಗೆ ಎಲ್ಲೆಲ್ಲಿ ಮನುವಾದಿಗಳ ಅಟ್ಟಹಾಸ ಇರುತ್ತಿತ್ತೋ ಅಲ್ಲಲ್ಲಿ ಗೌರಕ್ಕನ ಪ್ರತಿಭಟನೆಯೂ ಇದ್ದೇ ಇರುತ್ತಿತ್ತು. ಪತ್ರಿಕೆ ಎನ್ನುವುದು ಸಮಾಜವಿರೋಧಿ ಶಕ್ತಿಗಳ ವಿರುದ್ಧ ಅಕ್ಷರಾಸ್ತ್ರವಾಗಿ ಮಾರ್ಪಾಡಾಯಿತು. ಬಜರಂಗದಳವು ಪಾಕಿಸ್ತಾನದ ಬಾವುಟ ಹಾರಿಸಿ ಗಲಭೆ ಹುಟ್ಟುಹಾಕಿದ ಪ್ರಕರಣ, ಮಲೇಗಾಂವ್ ಸ್ಪೋಟದಂತಹ ಸಂಘಪರಿವಾರದ ಭಯೋತ್ಪಾದನೆಗಳನ್ನು ಖಂಡಿಸಿ ಪತ್ರಿಕೆಯ ಮೂಲಕ ಜನರಿಗೆ ತಿಳಿಸಿ ಸಂಘಪರಿವಾರದ ದುಷ್ಟತನಗಳ ವಿರುದ್ಧ ಜನಾಭಿಪ್ರಾಯ ರೂಪಿಸಲು ಸತತವಾಗಿ ಪ್ರಯತ್ನಿಸಿದರು. ಮೋದಿ ಮೇನಿಯಾ ಶುರುವಾಗಿ ಏನೆನೆಲ್ಲಾ ಅನಾಹುತಗಳಾದವು ಎನ್ನುವುದನ್ನು ತಮ್ಮ ಪ್ರತಿವಾರದ ಪತ್ರಿಕಾ ಅಂಕಣಗಳಲ್ಲಿ ಬರೆದರು. ಅದು ಹೇಗೆ ಈ ಸಂಘಪರಿವಾರ ಹಾಗೂ ಪ್ರಧಾನಿ ಮೋದಿ ಜನರಲ್ಲಿ ರಾಷ್ಟ್ರೀಯತೆಯ ಉನ್ಮಾದ ಹಾಗೂ ಅಚ್ಚೇ ದಿನ್ ಎನ್ನುವ ಭ್ರಮೆಯನ್ನು ಹುಟ್ಟುಹಾಕಿ ಇಡೀ ದೇಶದ ದಿಕ್ಕು ತಪ್ಪಿಸಿದ್ದಾರೆ ಎನ್ನುವುದನ್ನು ಎಳೆಎಳೆಯಾಗಿ ತಮ್ಮ ಲೇಖನಗಳಲ್ಲಿ ಬಿಡಿಸಿಟ್ಟರು.  ಇನ್ನೇನು ಬೇಕು ಈ ಸಂಘಿಗಳ ಮಂಗಗಳ ಬಾಲಕ್ಕೆ ಬೆಂಕಿ ಹಚ್ಚಲು.  ಗೌರಿ ಎಂದರೆ ಸಾಕು ಮೋದಿ ಭಕ್ತಾದಿಗಳು ಬೆಚ್ಚಿ ಬೀಳತೊಡಗಿದರು. ಗೌರಿಯವರು  ಎತ್ತಿದ ಪ್ರಶ್ನೆಗಳಿಗೆ ಸೂಕ್ತ ಉತ್ತರ ಕೊಡಲು ಅಸಮರ್ಥರಾದ ಭಕ್ತಾದಿಗಳು ಅವರನ್ನು ಜಾಲತಾಣಗಳಲ್ಲಿ ಅಶ್ಲೀಲಕರವಾಗಿ ನಿಂದಿಸಿ ವಿಕೃತ ಸಂತೋಷ ಅನುಭವಿಸತೊಡಗಿದರು.


ಯಾವಾಗ ನಕ್ಸಲ್ ಸಿದ್ದಾಂತವನ್ನು ಒಪ್ಪಿಕೊಂಡಿರುವವರನ್ನು ಮುಖ್ಯವಾಹಿನಿಗೆ ತರುವ ಕೆಲಸದಲ್ಲಿ ಗೌರಿ ಆಸಕ್ತಿವಹಿಸಿ ಸರಕಾರವನ್ನೂ ಒಪ್ಪಿಸಿದರೋ ಆಗ ಸಂಘಿಗಳಿಗೆ ಸಂಕಟ ಶುರುವಾಯಿತು. ನಕ್ಸಲರು ಅಂದರೆ ಕನಸಿನಲ್ಲೂ ಬೆಚ್ಚಿಬೀಳುವ ಪರಿವಾರಿಗಳಿಗೆ ಕಾಡಲ್ಲಿರುವ ನಕ್ಸಲ್ ವಾದಿಗಳು ಅಧೀಕೃತವಾಗಿ ನಾಡಿಗೆ ಬಂದರೆ ತಮ್ಮ ಮುಖವಾಡಗಳು ಬಯಲಾಗಲಿವೆ ಎನ್ನುವ ಸಂಗತಿ ಗೊತ್ತಾಗಿದ್ದೇ ಚಟಪಡಿಕೆ ಶುರುವಾಯಿತು.  2004 ರಲ್ಲೇ ಶಾಂತಿಗಾಗಿ ನಾಗರೀಕರು ಎನ್ನುವ ಸಮಾನಮನಸ್ಕರ ವೇದಿಕೆಯಡಿಯಲ್ಲಿ ಅತ್ತ ಮಾವೋವಾದಿಗಳು ಹಾಗೂ ಇತ್ತ ಕಾಂಗ್ರೆಸ್ ಸರಕಾರದ ಮನವೊಲಿಸಿ ನಕ್ಸಲ್ ಚಳುವಳಿಯಲ್ಲಿ ತೊಡಗಿಸಿಕೊಂಡು ಕಾಡು ಸೇರಿದವರನ್ನು ಮತ್ತೆ ಸಮಾಜದ ಮುಖ್ಯವಾಹಿನಿಗೆ ತರುವ ಸಂಧಾನ ಪ್ರಯತ್ನ ಗೌರಿಯವರ ನೇತೃತ್ವದಲ್ಲಿ ನಡೆಯಿತು. ನಕ್ಸಲ್ ವಾದಿಗಳು ಹಿಂಸಾಮಾರ್ಗ ತೊರೆದು ಜನರ ನಡುವೆಯೇ ಇದ್ದು ಪ್ರಜಾಸತ್ತಾತ್ಮಕ ಹೋರಾಟಗಳಿಂದ ವ್ಯವಸ್ಥೆಯನ್ನು ಬದಲಾಯಿಸಲು ಜನಹೋರಾಟಗಳನ್ನು ಸಂಘಟಿಸಬೇಕು ಎನ್ನುವುದು ಗೌರಿಯವರ ಆಶಯವಾಗಿತ್ತು. ಹಾಗೂ ಆ ಸಂಧಾನ ಪ್ರಕ್ರಿಯೆಯಲ್ಲಿ ಗೌರಿ ಯಶಸ್ವಿಯೂ ಆದರು. ನೂರ್ ಶ್ರೀಧರ್, ಸಿರಿಮನೆ ನಾಗರಾಜ್ ಮುಂತಾದ ಭೂಗತ ಮಾವೋವಾದಿ ಕಾಮ್ರೇಡ್‌ಗಳನ್ನು ಕಾನೂನಾತ್ಮಕವಾಗಿ ಮುಖ್ಯವಾಹಿನಿಗೆ ಸೇರ್ಪಡೆಯಾಗುವಂತೆ ಮಾಡಿದರು. ಹಾಗೆ ಕಾನೂನಿನ ಬಿಕ್ಕಟ್ಟುಗಳಿಂದ ಪಾರಾಗಿ ಹೊರಗೆ ಬಂದ ಈ ಕಾಮ್ರೇಡ್ಗಳು ಸುಮ್ಮನೇ ಕೂಡದೇ ಗೌರಿಯವರ ಆಶಯದಂತೆ ಜನರ ಸಂಘಟನೆಯಲ್ಲಿ ತೊಡಗಿದರು. ಕೋಮುವಾದಿಗಳ ವಿರುದ್ಧ ತೊಡೆ ತಟ್ಟಿ ನಿಂತರು. ಅನೇಕಾನೇಕ ಹೋರಾಟಗಳನ್ನು ಸಂಘಟಿಸಿದರು. ಗ್ರಾಮ ಶಹರ ಪಟ್ಟಣಗಳಲ್ಲೆಲ್ಲಾ ಜನರನ್ನು ಜಾಗೃತ ಗೊಳಿಸತೊಡಗಿದರು. ಮೋದಿ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ತಳಮಟ್ಟದಲ್ಲಿ ಜನಾಭಿಪ್ರಾಯ ರೂಪಿಸತೊಡಗಿದರು. ಇದರಿಂದಾಗಿ ಸಂಘಪರಿವಾರದವರು ಬೆಚ್ಚಿ ಬಿದ್ದರು. ತಮ್ಮ ಅಸ್ತಿತ್ವಕ್ಕೆ ಆತಂಕ ಆರಂಭವಾಗಿದ್ದನ್ನು ಕಂಡು ಹಲ್ಲು ಮಸಿಯತೊಡಗಿದರು. ಮೊದಲಾದರೆ ನಕ್ಸಲರ ಮೇಲೆ ದೇಶದ್ರೋಹದ ಆರೋಪ ಮಾಡಿ ಎನ್ ಕೌಂಟರ್ ಮಾಡಿಸಬಹುದಾಗಿತ್ತು.  ಆದರೆ ಯಾವಾಗ ಅದೇ ನಕ್ಸಲ್ ಯುವಕರು ಹಿಂಸೆಯನ್ನು ತೊರೆದು ಜನರ ನಡುವೆಯೇ ಪ್ರಜಾಸತ್ತಾತ್ಮಕ ರೀತಿಯಲ್ಲಿ ಜನಹೋರಾಟಗಳನ್ನು ಸಂಘಟಿಸಿ ಸಂಘಪರಿವಾರದ ಬುಡಕ್ಕೆ ಬಿಸಿನೀರು ಕಾಯಿಸತೊಡಗಿದರೋ ಸಂಘಿಗಳು ತತ್ತರಿಸತೊಡಗಿದರು. ಕರ್ನಾಟಕದಲ್ಲೂ ತಮ್ಮ ಆಡಳಿತವನ್ನು ಜಾರಿಗೊಳಿಸಬೇಕೆಂದು ಪ್ರಯತ್ನಿಸುತ್ತಿದ್ದ ಬಿಜೆಪಿಗಳಿಗೆ ಈ ಸಂಘಟನೆಗಳ ಪ್ರತಿರೋಧದಿಂದಾಗಿ ಹಿನ್ನಡೆಯಾಗತೊಡಗಿತು. ಅವರ ಸಿಟ್ಟು ಕಾಡಲ್ಲಿದ್ದ ಮಾವೋವಾದಿಗಳನ್ನು ನಾಡಿಗೆ ಕರೆತಂದು ತಮ್ಮ ವಿರುದ್ದ ಹೋರಾಟಕ್ಕೆ ನಿಲ್ಲಿಸಿದ ಗೌರಿ ಲಂಕೇಶರ ಮೇಲೆ ತಿರುಗಿತು. 


ಕೋಮುವಾದಿ ಪಡೆಗಳು ಗೌರಿ ಲಂಕೇಶರವರನ್ನು ಹೆದರಿಸಿ ಬೆದರಿಸಿ ಬಾಯಿ ಮುಚ್ಚಿಸಲು ಬೇಕಾದಷ್ಟು ಪ್ರಯತ್ನ ಮಾಡಿತು. ಸಾಮಾಜಿಕ ಜಾಲತಾಣಗಳಲ್ಲಿ ಗೌರಿಯವರ ವಿರುದ್ಧ ಪೇಕು ಭಕ್ತಾದಿಗಳು ನಿಂದನಾಸ್ತುತಿಯನ್ನು ಆರಂಭಿಸಿ ಅವರ ನೈತಿಕ ಸ್ತೈರ್ಯವನ್ನು ಹಾಳುಮಾಡಲು ಪ್ರಯತ್ನಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದಲ್ಲಿ ಅತಿಥಿಯಾಗಿ ಬಾಗವಹಿಸಿದ್ದಾಗ ಸಂಘಪರಿವಾರದ ಅಂಗಗಳಾದ ಎಬಿವಿಪಿ ಹಾಗೂ ಭಜರಂಗದಳದ ಮಂಗಗಳು ಗೌರಿಯವರ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದರು. ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಲಂಕೇಶ್ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗೌರಿ ಲಂಕೇಶ್ ಪತ್ರಿಕೆಯ ಅಂಕಣಕಾರಾದ ಯೊಗೇಶ್ ಮಾಸ್ತರರ ಮೇಲೆ ಮಸಿ ಬಳಿದು ಹಲ್ಲೆ ಮಾಡಲಾಯಿತು. ಬೆದರಿಕೆಯ ಪತ್ರಗಳು ಹಾಗೂ ಪೋನ್‌ಗಳಿಗಂತೂ ಲೆಕ್ಕವೇ ಇರಲಿಲ್ಲಾ. ಇಂತಹ ನಿಂದನೆ, ಹಲ್ಲೆ, ಬೆದರಿಕೆಗಳಿಗೆಲ್ಲಾ ಅಂಜದೇ ಯಾವಾಗ ಕೋಮುವಾದಿಗಳ ವಿರುದ್ಧ ಅಘೋಷಿತ ಸಮರವನ್ನು ಗೌರಿಯವರು ಸಾರಿದರೋ ಆಗ ಮತಾಂಧರ ಪಿತ್ತ ನೆತ್ತಿಗೇರಿತು. ಈ ಪ್ರತಿರೋಧದ ದಿಟ್ಟ ದ್ವನಿಯನ್ನು ಖಾಯಂ ಆಗಿ ನಿಲ್ಲಿಸಿ ಬಿಡುವ ನಿರ್ಧಾರಕ್ಕೆ ಬಂದರು. ಅದಕ್ಕೆ ಸೆಪ್ಟಂಬರ್ 5 ರಂದು ಮುಹೂರ್ತ ಇಟ್ಟು ಹೇಡಿಗಳಂತೆ ಕತ್ತಲಲ್ಲಿ ಹೊಂಚು ಹಾಕಿ ಗುಂಡಿಟ್ಟು ಕೊಂದು ಕತ್ತಲಲ್ಲಿ ಓಡಿಹೋದರು. 



ಗೌರಿಯವರ ಹತ್ಯೆ ಯಾರಿಂದ ಯಾವಕಾರಣಕ್ಕಾಗಿ ಆಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ.. ಜನರ ದಿಕ್ಕು ತಪ್ಪಿಸಿ ತಮ್ಮ ತಲೆ ಹಾಗೂ ನೆಲೆ ರಕ್ಷಿಸಿಕೊಳ್ಳುವ ಕೆಲಸವನ್ನು ಮಾಡುವಲ್ಲಿ ಸಂಘಪರಿವಾರದ ಪಡೆ ನಿರತವಾಗಿದೆ. ಸಾವಿನ ಸುದ್ದಿ ತಿಳಿದು ಇನ್ನೂ ಗಂಟೆ ಕೂಡಾ ಕಳೆದಿರಲಿಲ್ಲಾ ಆರ್ ಎಸ್ ಎಸ್ ಮೆಂಟಾಲಿಟಿಯ ವಾಹಿನಿಗಳು ನಕ್ಸಲರಿಂದ ಗೌರಿ ಹತ್ಯೆ ಎನ್ನುವ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡತೊಡಗಿದವು. ಕಾಂಗ್ರೆಸ್ ಸರಕಾರದಲ್ಲಿ ಎಂಎಲ್‌ಸಿ ಆಗಲು ಪ್ರಯತ್ನಿಸಿ ವಿಫಲಗೊಂಡು ಬಿಜೆಪಿ ಸೇರಿದ ಗೌರಿಯವರ ಸಹೋದರ ಇಂದ್ರಜಿತ್ ಕೂಡಾ ನಕ್ಸರೇ ತನ್ನ ಅಕ್ಕನನ್ನು ಕೊಂದಿರುವ ಬಗ್ಗೆ ಗುಮಾನಿ ಇದೆ ಎಂದು ಹೇಳಿಕೆ ಕೊಡತೊಡಗಿದರು. ಇದು ಕೋತಿ ತಾನು ಬೆಣ್ಣೆ ತಿಂದು ಮೇಕೆಯ ಬಾಯಿಗೆ ಸವರಿದಂತಾ ಪ್ರಕರಣ. ಚುನಾವಣೆಯ ವರ್ಷದಲ್ಲಿ ಬಿಜೆಪಿಗೆ ಎಲ್ಲಿ ಗೌರಿ ಹತ್ಯೆ ಹಿನ್ನಡೆಯನ್ನು ಒದಗಿಸುತ್ತದೋ ಎನ್ನುವ ಭಯದಿಂದ ಬಿಜೆಪಿ ಹಾಗೂ ಅದರ ಸಮರ್ಥಕರು ಗೌರಿ ಕೊಲೆಯನ್ನು ನಕ್ಸಲರ ತಲೆಗೆ ಕಟ್ಟಲು ಪ್ರಯತ್ನಿಸುತ್ತಿದ್ದಾರೆ. ಇದು ನಿಜಕ್ಕೂ ಖಂಡನೀಯವಾದದ್ದು. ನಕ್ಸಲರು ಈ ಮತಾಂಧ ಭಯೋತ್ಪಾದಕರಂತೆ ಹೇಡಿಗಳಲ್ಲಾ. ಜನವಿರೋಧಿಗಳನ್ನು ಅವರು ಕೊಲೆ ಮಾಡಿದ್ದರೆ ಈ ಕಾರಣಕ್ಕೆ ಮಾಡಿದ್ದೇವೆ ಎಂದು ಘೋಷಿಸಿಕೊಳ್ಳುತ್ತಾರೆ. ಆದರೆ.. ವಿಚಾರವಾದಿಗಳನ್ನು ಟಾರ್ಗೆಟ್ ಮಾಡಿ ಕೊಲ್ಲಿಸಿ ನಾವೇನೂ ಮಾಡೇ ಇಲ್ಲಾ ಎನ್ನುವ ಈ ಗೋಸುಂಬೆ ಧರ್ಮಾಂಧರು ಜಗತ್ತಿನ ಅತೀ ಅಪಾಯಕಾರಿ ಭಯೋತ್ಪಾದಕರು ಎಂಬುದರಲ್ಲಿ ಎರಡು ಮಾತಿಲ್ಲಾ. ನೇರವಾಗಿ ಕದನಕ್ಕೆ ನಿಂತವರನ್ನು ಎದುರಿಸಬಹುದು.. ಹೀಗೆ ಹೇಡಿಗಳಂತೆ ಅವಿತುಕೊಂಡು ಕೊಂದು ಓಡಿಹೋಗಿ ನಾವೇನೂ ಮಾಡಿಸಿಯೇ ಇಲ್ಲಾ ಎನ್ನುವವರನ್ನು ಮಟ್ಟಹಾಕಲು ಹೊಸ ಪಟ್ಟುಗಳೇ ಬೇಕಿವೆ. 



ಗೌರಿ ಲಂಕೇಶರವರು ಶಾಂತಿ ಅಹಿಂಸೆಗಾಗಿ ಹೋರಾಡಿದ ಧೀರ ದಿಟ್ಟ ಮಹಿಳೆ. ಹಿಂಸಾ ಮಾರ್ಗದಲ್ಲಿ ಸiಸಮಾಜ ನಿರ್ಮಾಣ ಮಾಡುವ ನಕ್ಸಲರನ್ನು ಮುಖ್ಯವಾಹಿನಿಗೆ ಸೇರಿಸಿ ಅಹಿಂಸಾತ್ಮಕ ಹೋರಾಟದ ಮಾರ್ಗದಲ್ಲಿ ತೊಡಗಿಕೊಳ್ಳುವಂತೆ ಮಾಡಿದವರು. ಅಲ್ಪಸಂಖ್ಯಾತರ ಬದುಕುವ ಹಕ್ಕುಗಳಿಗಾಗಿ,  ಕೋಮು ಸಾಮರಸ್ಯಕ್ಕಾಗಿ, ಮಾನವ ಹಕ್ಕುಗಳಿಗಾಗಿ, ಜಾತ್ಯಾತೀತ ಮೌಲ್ಯಗಳಿಗಾಗಿ, ಪ್ರಜಾಸತ್ತಾತ್ಮಕ ಮೌಲ್ಯಗಳಿಗಾಗಿ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ನಿರಂತರವಾಗಿ ಹೋರಾಡಿದವರು. ಕೋಮುವಾದ ಹಾಗೂ ಜಾತೀವಾದಗಳ ವಿರುದ್ಧ ಅಘೋಷಿತ ಯುದ್ದವನ್ನೇ ಸಾರಿದ್ದರು. ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ಧತೆ ಕಾಪಾಡಿಕೊಂಡು ಸ್ವಸ್ಥ ಸಮಾಜವನ್ನು ನಿರ್ಮಿಸುವ ತಮ್ಮ ಆಶಯಕ್ಕೆ ಪೂರಕವಾಗಿ ದಲಿತ, ಮಹಿಳಾ, ರೈತ, ಪ್ರಗತಿಪರ, ಎಡಪಂಥೀಯ ಸಂಘಟನೆಗಳ ಜೊತೆಗೆ ಸದಾ ಸಂಪರ್ಕವನ್ನಿಟ್ಟುಕೊಂಡಿದ್ದರು. ಇಂತಾ ಜೀವಪರವಾಗಿರುವ ಮಹಿಳೆಯನ್ನು ಜೀವವಿರೋಧಿಗಳು ಮಾತ್ರ ಕೊಲ್ಲಲು ಸಾಧ್ಯ!. ಆ ಜೀವವಿರೋಧಿಗಳು ಯಾರು ಎನ್ನುವುದು ಎಲ್ಲರಿಗೂ ಗೊತ್ತಿರುವ ಬಹಿರಂಗ ಸತ್ಯ.

ಇಂದಿಲ್ಲಾ ನಾಳೆ ಕೊಲೆಪಾತಕರು ಸಿಕ್ಕಿ ಬೀಳಬಹುದು. ಜಾಳು ಜಾಳಾದ ಈ ಕಾನೂನು ವ್ಯವಸ್ಥೆ ಹಾಗೂ ರಾಜಕೀಯ ಒತ್ತಡಗಳಲ್ಲಿ ಅವರು ಕಾನೂನು ಹಿಡಿತದಿಂದ ಪಾರಾಗಲೂ ಬಹುದು. ಇಲ್ಲವೇ ಶಿಕ್ಷೆಗೂ ಗುರಿಯಾಗಬಹುದು. ಆದರೆ.. ಗೌರಿಯಂತಹ ದಿಟ್ಟ ಪತ್ರಕರ್ತೆ, ಜನಪರ ಬದ್ದತೆಯುಳ್ಳ ಹೋರಾಟಗಾರ್ತಿ ಮತ್ತೆ ಮರಳಿ ದೊರೆಯಲು ಸಾಧ್ಯವೇ ಇಲ್ಲಾ. ಕೊಂದವರು ಇಲ್ಲಿ ಕೇವಲ ಕೊಲ್ಲಿಸುವವರ ಕೈಯಲ್ಲಿರುವ ಪರಿಕರಗಳಾಗಿದ್ದಾರಷ್ಟೇ. ಆದರೆ ಸೈದ್ದಾಂತಿಕ ಭಿನ್ನತೆಯಿರುವವರನ್ನು ಕೊಲ್ಲ ಬಯಸುವ ಮತಾಂಧ ಶಕ್ತಿಗಳು ನಾಶವಾಗದೇ ಈ ಕೊಲೆಗಳು ನಿಲ್ಲುವುದಿಲ್ಲಾ. ಕೊಲೆಗಡುಕರ ಹಿಂದಿರುವವರ ಉದ್ದೇಶ ಕೇವಲ ಒಬ್ಬ ಕಲಬುರ್ಗಿ ಇಲ್ಲವೇ ಗೌರಿಯವರ ಹತ್ಯೆ ಮಾತ್ರವಲ್ಲಾ.. ಈ ಸಾಂಕೇತಿಕ ಕೊಲೆಗಳ ಮೂಲಕ ಮೌಢ್ಯಗಳ ವಿರುದ್ದ, ಕೋಮುವಾದಿಗಳ ವಿರುದ್ದ, ಸಂಘಪರಿವಾರದ ಜನವಿರೋಧಿತನಗಳ ವಿರುದ್ದ ಇರುವವರ ಬಾಯಿಮುಚ್ಚಿಸುವ ಹುನ್ನಾರವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡಿ ಪ್ಯಾಸಿಸ್ಟ್ ಪ್ರಭುತ್ವವನ್ನು ಸ್ಥಾಪಿಸುವುದೇ ಈ ಮನುವಾದಿ ದುಷ್ಟ ಶಕ್ತಿಗಳ ಶಡ್ಯಂತ್ರವಾಗಿದೆ. ಆದರೆ.. ಮನುಕುಲದ ಇತಿಹಾಸ ಹೇಳುತ್ತದೆ ದಮನ ಹೆಚ್ಚಿದಷ್ಟೂ ದಂಗೆ ತೀವ್ರಗೊಳ್ಳುತ್ತದೆ ಎಂದು. ಗೌರಿಯಂತಹ ಜನಪರ ಹೋರಾಟಗಾರ್ತಿಯವರ ಸಾವು ವ್ಯರ್ಥವಾಗುವುದಿಲ್ಲಾ. ಪ್ರಜ್ಞಾವಂತರ ಎದೆಯಲ್ಲಿ ಬೂದಿ ಮುಚ್ಚಿದ ಬೆಂಕಿಯಾಗಿ ಉರಿಯುತ್ತದೆ. ಸಮಯ ಸಂದರ್ಬ ನೋಡಿಕೊಂಡು, ಮತ್ತೆ ಜನಹೋರಾಟದ ತೀವ್ರತೆಯ ಗಾಳಿ ಬೀಸಿದಾಗ ಬೆಂಕಿ ಪ್ರಜ್ವಲಿಸುತ್ತದೆ. ಈ ಕೋಮುವಾದಿ ಮನುಪಡೆಯನ್ನು ಸುಟ್ಟು ಹಾಕುತ್ತದೆ. ಅಂತಹ ಕಾಲ ಬೇಗ ಬರಲಿ, ಹುತಾತ್ಮಳಾದ ಗೌರಿಯವರ ಹಿಂಸಾರಹಿತ ಸಮಸಮಾಜದ ಆಶಯ ನಿರ್ಮಾಣಗೊಳ್ಳಲಿ ಎಂಬುದು ಎಲ್ಲಾ ಪ್ರಗತಿಪರರ ಅಂತರಂಗದ ಬಯಕೆಯಾಗಿದೆ. ಗೌರಿಯವರ ಭೌತಿಕ ದೇಹ ಇಲ್ಲವಾದರೂ ಅವರ ವೈಚಾರಿಕತೆ ಹಾಗೂ ಸೈದ್ದಾಂತಿಕ ಬದ್ದತೆಗಳು ಬದುಕಿರುವವರಿಗೆ ಮಾದರಿಯಾಗಬೇಕಿದೆ.

ದೀಪವೊಂದನು ಆರಿಸಿ
ಬೆಳಕ ಕೊಂದೆನೆಂದು
ಸೊಕ್ಕಿನಿಂದ ಬೀಗದಿರು..
ಮತ್ತೆ ಪಂಜುಗಳ ಹಚ್ಚುವ
ಕೆಚ್ಚೆದೆಯ ಮನಸುಗಳ
ತಡೆಯುವವರು ಯಾರು..?    

-ಶಶಿಕಾಂತ ಯಡಹಳ್ಳಿ