ಸೋಮವಾರ, ಏಪ್ರಿಲ್ 10, 2023

ಪ್ರಧಾನಿಯ ಸಫಾರಿಯೂ …..ಸಿಂಹನ ದುರಹಂಕಾರವು..

 


ತಹ ತಹ..

ಪ್ರಧಾನಿಯ ಸಫಾರಿಯೂ …..ಸಿಂಹನ ದುರಹಂಕಾರವು..

“ಕುರಿ ಚರ್ಬಿ ತಿಂದು ತಿಂದು ಕೊಬ್ಬು ಜಾಸ್ತಿಯಾಗಿದೆ, ಹುಲಿ ಯೋಜನೆಗೆ 50 ವರ್ಷ ತುಂಬಿದ ಕಾರಣಕ್ಕೆ ಮೋದಿ ಬಂಡೀಪುರಕ್ಕೆ ಬಂದು ಹೋಗಿದ್ದಾರೆ. ಬೇಸಿಗೆ ಇರುವ ಕಾರಣಕ್ಕೆ ಹುಲಿ ಕಾಣಿಸಿಲ್ಲ. ಅದಕ್ಕೂ ಕೊಂಕು ಮಾತಾಡುವುದೇಕೆ?” ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಸಂಸದ ಪ್ರತಾಪ ಸಿಂಹ ಹೇಳಿದ್ದು ಅತಿರೇಕದ ಗುಲಾಮಗಿರಿ ವರ್ತನೆ.

ಮೊದಲನೆಯದಾಗಿ.. ‘ಕುರಿ ತಿನ್ನುವವರಿಗೆ ಕೊಬ್ಬು ಜಾಸ್ತಿ’ ಎನ್ನುವ ಹೇಳಿಕೆ ಮಾಂಸಾಹಾರ ಸಂಸ್ಕೃತಿಗೆ ಅವಮಾನ ಮಾಡುವಂತಹುದಾಗಿದೆ. “ಮಾಂಸ ತಿನ್ನುವವರು ಕನಿಷ್ಟ ಹಾಗೂ ಸಸ್ಯಾಹಾರಿಗಳು ಶ್ರೇಷ್ಠ’ ಎನ್ನುವ ಇಂತಹ ಬ್ರಾಹ್ಮಣ್ಯದ ಭ್ರಮೆಯೇ ಮನುಕುಲದ ವಿರೋಧಿಯಾಗಿದೆ. ಸಿದ್ದರಾಮಯ್ಯನವರು ಕುರುಬ ಸಮಾಜದವರಾಗಿದ್ದರಿಂದ ಇಂತಹ ಕೊಬ್ಬಿನ ಮಾತಾಡಿದ  ಈ ಕಾಗದದ ಸಿಂಹ ಕುರುಬ ಜನಾಂಗಕ್ಕೂ ಅವಮಾನ ಮಾಡಿ ತನ್ನ ಮೇಲ್ಜಾತಿ ಅಹಂಕಾರವನ್ನು ತೋರಿಸಿದೆ. “ಈ ತುಪ್ಪ ತಿನ್ನುವವರಿಂದ ಈ ದೇಶ ಹಾಳಾಗಿದೆಯೇ ಹೊರತು ಮಾಂಸ ತಿನ್ನುವವರಿಂದಲ್ಲ” ಎಂದು ನಿಜಗುಣಾನಂದ ಸ್ವಾಮೀಜಿಯವರು ಹೇಳಿದ್ದನ್ನು ಈ ವಿಕ್ಷಿಪ್ತ ವ್ಯಕ್ತಿಗೆ ನೆನಪಿಸಿಕೊಡಬೇಕಾಗಿದೆ. ಯಾಕೆ ಸಂಘಪರಿವಾರದವರಲ್ಲಿ ಯಾರೂ ಮಾಂಸ ತಿನ್ನುವವರು ಇಲ್ಲವಾ?. ಸಿ.ಟಿ.ರವಿ ಮೀನು ತಿಂದು ದೇವಸ್ಥಾನಕ್ಕೆ ಹೋಗಲಿಲ್ಲವಾ? ಈಶ್ವರಪ್ಪನಂತವರು ಕುರಿ ತಿಂದು ತಿಂದು ಕೊಬ್ಬಿದ್ದಾರಾ?. ಬಿಜೆಪಿಗರಲ್ಲಿ ಮುಕ್ಕಾಲು ಭಾಗ ಮಾಂಸಾಹಾರಿಗಳಿದ್ದಾರೆಂಬುದು ಈ ಹುಚ್ಚು ಹಿಡಿದು ಕಚ್ಚುವ ಸಿಂಹಕ್ಕೆ ಗೊತ್ತಿಲ್ಲವೆ.

ಎರಡನೆಯದಾಗಿ… ಮೋದಿಯವರು ಬಂಡೀಪುರ ಅಭಿಯಾರಣ್ಯಕ್ಕೆ ಬಂದಿದ್ದರ ಕುರಿತು.. “ಎಲ್ಲಿ ಹಿಡಿದು ಮಾರಿಬಿಡುತ್ತಾರೋ ಎಂದು ಹೆದರಿ ಮೋದಿಯವರ ಕಣ್ಣಿಗೆ ಬೀಳದೇ ಹುಲಿಗಳು ಅಡಗಿ ಕುಳಿತಿವೆ” ಎಂದು ಸಿದ್ದರಾಮಯ್ಯನವರು ಟೀಕಿಸಿದ್ದಾರೆ. ಹಾಗೆ ಟೀಕಿಸುವುದಕ್ಕೂ ಬಲವಾದ ಕಾರಣವಿದೆ. ಕಳೆದ 9 ವರ್ಷಗಳಿಂದ ಈ ದೇಶದ ಪ್ರಮುಖವಾದ ಅನೇಕ ಸರಕಾರಿ ಕಂಪನಿಗಳನ್ನು ಕೇಂದ್ರದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಖಾಸಗಿಯವರಿಗೆ ಮಾರಾಟ ಮಾಡಿದ್ದು ಸುಳ್ಳೇನಲ್ಲವಲ್ಲ. ಬಂದರು ವಿಮಾನ ನಿಲ್ದಾಣಗಳನ್ನೂ ಬಿಡದೇ ಆದಾನಿಗೆ ಮಾರಿದ್ದು ಮರೆಮಾಚುವಂತಹುದೇನೂ ಅಲ್ಲವಲ್ಲ. ಮೋದಿಯವರು ಪ್ರಧಾನಿಯಾದ ಮೇಲೆ ಖಾಸಗಿಯವರಿಗೆ ಮಾರಾಟ ಮಾಡಲಾದ ಸರಕಾರಿ ಒಡೆತನದ ಸ್ವತ್ತು, ಆಸ್ತಿ, ಕಂಪನಿಗಳ ಲೆಕ್ಕ ಎಲ್ಲರಿಗೂ ಗೊತ್ತಿರುವಂತಹುದಲ್ಲ. ಈ ಹಿನ್ನೆಲೆಯಲ್ಲಿ ಎಂದೂ ಬರದೇ ಇರುವ ಮೋದಿ ಇಂದು ಬಂಡೀಪುರಕ್ಕೆ ಬಂದಿದ್ದಾರೆ ಅಂದಮೇಲೆ ಅದನ್ನು ಖಾಸಗಿಯವರಿಗೆ ಮಾರಬಹುದು ಇಲ್ಲವೇ ನಿರ್ವಹಣೆಯ ಹೆಸರಲ್ಲಿ ಲೀವೆವಾರಿ ಮಾಡಬಹುದು ಎನ್ನುವ ಆತಂಕ ಯಾರಿಗಾದರೂ ಅನ್ನಿಸದೇ ಇರದು.  ವಿಪಕ್ಷ ನಾಯಕರಾಗಿ ಟೀಕೆಯನ್ನೇ ಮಾಡಬಾರದು ಎಂಬುದು ಈ ಸಂಘಿಗಳ ಅಸಹನೆಯ ಪರಮಾವಧಿ.

ಹೋಗಲಿ..ಹುಲಿ ಯೋಜನೆ ಘೋಷಣೆಯಾಗಿ 50 ವರ್ಷ ಆಗಿದ್ದಕ್ಕೆ ಪ್ರಧಾನಿ ಮೋದಿಯವರು ದೆಲ್ಲಿಯಿಂದಾ ಬಂಡಿಪುರಕ್ಕೆ ಸಪಾರಿ ಹಾಕಿ ಸಫಾರಿ ನಡೆಸಲು ತಮ್ಮ ಐರನ್ ಲೆಗ್ ಬೆಳಸಿದ್ದಾರೆ ಎಂದೇ ಅಂದುಕೊಳ್ಳೋಣ.  1973 ರಲ್ಲಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ರಾಷ್ಟ್ರೀಯ ಉದ್ಯಾನ ಹಾಗೂ ಹುಲಿ ಯೋಜನೆ ಜಾರಿಮಾಡಿದ್ದರು. ಆಯ್ತು ಈ ಸುವರ್ಣ ಸಂಭ್ರಮಕ್ಕೆ ಸಾಕ್ಷಿಯಾಗಲು ಮೋದಿಯವರು ಬಂದಿದ್ದಾರೆ ಎಂದುಕೊಳ್ಳೋಣ. ಅದಕ್ಕೆ ಬಂಡೀಪುರ ಅರಣ್ಯವೇ ಯಾಕೆ? ದೇಶದಲ್ಲಿ ಒಟ್ಟು 53 ಹುಲಿ ಸಂರಕ್ಷಿತಾ ಅಭಿಯಾರಣ್ಯಗಳಿವೆಯಲ್ಲಾ. ದೆಲ್ಲಿಗೆ ಹತ್ತಿರವಿರುವ ಮಧ್ಯಪ್ರದೇಶದಲ್ಲಿಯೇ ಕರ್ನಾಟಕಕ್ಕಿಂತ ಹೆಚ್ಚು ಹುಲಿಗಳಿವೆಯಲ್ಲಾ. ಯಾಕೆ ಎಲ್ಲಿಯೂ ಹೋಗದೇ ಕರ್ನಾಟಕದ ಕಾಡನ್ನು ಹುಡುಕಿ ಬಂದರು? ಯಾಕೆಂದರೆ ಈಗ ಕರ್ನಾಟಕದಲ್ಲಿ ಚುನಾವಣೆ ಘೋಷಣೆಯಾಗಿದೆ. ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಪಕ್ಷಕ್ಕೆ ನೆಲೆ ಇಲ್ಲವಾಗಿದೆ. ಮತ್ತೆ ಮತ್ತೆ ಬಂದು ಇಲ್ಲಿ ಜನರನ್ನು ಮರಳು ಮಾಡಬೇಕಿದೆ. ಧರ್ಮದ್ವೇಷ ಹುಟ್ಟಿಸುವ ಹಾಗೂ ಭಾವತೀವ್ರತೆ ಬಡಿದೆಬ್ಬಿಸುವ ತಂತ್ರಗಳು ಮೊದಲಿನಂತೆ ಫಸಲು ನೀಡುತ್ತಿಲ್ಲ. ಹೀಗಾಗಿ ಇಂತಹ ಹೊಸ ಗಿಮಿಕ್ ಗಳನ್ನು ಮಾಡಿ ಜನರ ಗಮನ ಸೆಳೆದು ಮತಗಳನ್ನು ಪಡೆಯುವ ಹುನ್ನಾರದ ಭಾಗವೇ ಪ್ರಧಾನಿಯವರ ಅಭಿಯಾರಣ್ಯದ ಸಫಾರಿ.

ಈ ದೇಶದ ಪ್ರಧಾನಿಗೆ ತನಗನ್ನಿಸಿದಲ್ಲಿ ಹೋಗುವ ಸ್ವಾತಂತ್ರ್ಯ ಇಲ್ಲವೇ? ಎನ್ನುವುದು ಭಕ್ತಾದಿಗಳ ಪ್ರಶ್ನೆ. ಇದೆ.. ಹೋಗಬಹುದಾಗಿದೆ. ಆದರೆ.. ನೆರೆ  ಬರ  ಕೋವಿಡ್ ಸಾವು ನೋವಿನಿಂದ ಕನ್ನಡ ನಾಡಿನ ಜನರು ಸಂಕಷ್ಟದಲ್ಲಿದ್ದಾಗ ಎಂದೂ ಬರದ ಪ್ರಧಾನಿ ಮೋದಿಯವರು ಕರ್ನಾಟಕದಲ್ಲಿ ಚುನಾವಣೆ ಇರುವುದರಿಂದ ಮತ್ತೆ ಮತ್ತೆ ಈಗೇಕೆ ಬರುತ್ತಿದ್ದಾರೆ?  ‘ಬಂದರೆ ನಿಮಗೇನು ಹೊಟ್ಟೆಉರಿ’ ಎಂಬುದು ಮೋದಿ ಮೇನಿಯಾ ಪೀಡಿತರ ಮರುಪ್ರಶ್ನೆ. ಬರಲಿ ಬೇಡವೆಂದವರು ಯಾರು? ಆದರೆ ಪ್ರಧಾನಿಗಳು ಪ್ರತಿ ಸಲ ಸರಕಾರಿ ಕಾರ್ಯಕ್ರಮಗಳ ನೆಪದಲ್ಲಿ ಬಂದು ತಮ್ಮ ಪಕ್ಷದ ಪರವಾಗಿ ಚುನಾವಣಾ ಪ್ರಚಾರ ಮಾಡುವುದು ಯಾಕೆ? ಎಂದರೆ, ಪ್ರಚಾರ ಮಾಡಲಿ ಬಿಡಿ ಇದರಲ್ಲಿ ತಪ್ಪೇನು? ಮತ್ತೆ ಮರು ಪ್ರಶ್ನೆ. ಆದರೆ.. ಮೋದಿ ಮಹಾತ್ಮರು ಪ್ರತಿ ಸಲವೂ ಬಂದು ಹೋದಾಗ ಕನಿಷ್ಟ 10 ರಿಂದ 20 ಕೋಟಿಯಷ್ಟು ಹಣ ರಾಜ್ಯಸರಕಾರದ ಬೊಕ್ಕಸದಿಂದ ಖರ್ಚಾಗುತ್ತದಲ್ಲಾ ಇದಕ್ಕೆ ಯಾರು ಹೊಣೆ. ಹೀಗೆ ಖರ್ಚಾಗುವ ಹಣ ಕನ್ನಡಿಗರು ಕಟ್ಟಿದ ತೆರಿಗೆಯಿಂದ ಬಂದಿದ್ದು ಅದನ್ನು ಯಾವುದೇ ಒಂದು ಪಕ್ಷದ ಕಾರ್ಯಕ್ರಮಕ್ಕೆ ಅದು ಹೇಗೆ ಬಳಸಿಕೊಳ್ಳುತ್ತಿದ್ದಾರೆ? ಎಂದು ಕೇಳಿದರೆ ನಿರುತ್ತರ. ಸರಕಾರಿ ಯೋಜನೆಗಳ ಉದ್ಘಾಟನೆಗೋ, ಶಿಲಾನ್ಯಾಸಕ್ಕೋ ಇಲ್ಲವೇ ಅಭಯಾರಣ್ಯದ ಸಫಾರಿಗೋ ಬರುವ ಪ್ರಧಾನಿಗಳು ತಮ್ಮ ಪಕ್ಷದ ಪ್ರಚಾರಕ್ಕೆ ಪೂರಕವಾಗಿ ಕೆಲಸ ಮಾಡಿದರೆ ಅದನ್ನು ತೆರಿಗೆ ಕಟ್ಟುವ ಜನರು ಪ್ರಶ್ನಿಸಬಾರದಾ? ವಿರೋಧ ಪಕ್ಷದವರು ಆಕ್ಷೇಪಿಸಬಾರದಾ?

“ವಾಯುದಳದ ಮೂರು ಹೆಲಿಕಾಪ್ಟರ್ಗಳು ಏಕಕಾಲಕ್ಕೆ ಬಂದಿದ್ದರಿಂದ ಉಂಟಾದ ಶಬ್ದಮಾಲಿನ್ಯದಿಂದ ಪ್ರಾಣಿಗಳು ದಟ್ಟ ಅರಣ್ಯದೊಳಗೆ ಹೋಗಿ ಹುಲಿಗಳು ಕಣಿಸಿಲ್ಲ. ಈ ಸಾಮಾನ್ಯ ಜ್ಞಾನವೂ ಸಿದ್ದರಾಮಯ್ಯನವರಿಗೆ ಇಲ್ಲವೆ?” ಎಂದು ಈ ನಾಡಿನ ಸಿಂಹ ಪ್ರಶ್ನಿಸಿದೆ. ಪ್ರಧಾನಿ ಬಂದಿದ್ದರಿಂದ ಶಬ್ದಮಾಲಿನ್ಯ ಉಂಟಾಗಿ ಪ್ರಾಣಿಗಳಿಗೆ ಹಿಂಸೆಯಾಗಿದೆ ಎಂದು ಒಪ್ಪಿಕೊಂಡಂತಾಯ್ತು. ಆಮೇಲೆ ಪ್ರಧಾನಿಗಳ ಸಫಾರಿ ಸಮಯದಲ್ಲಿ ಜಿಂಕೆಗಳು ಜಿಗಿದಾಡುತ್ತಿದ್ದವಲ್ಲಾ ಅವುಗಳಿಗೆ ಶಬ್ದಮಾಲಿನ್ಯದ ಕಿರಿಕಿರಿ ಆಗಿಲ್ಲವೇ? ಅಥವಾ ಹುಲಿಗಳನ್ನು ಹೊರತು ಪಡಿಸಿ ಬೇರೆ ಪ್ರಾಣಿಗಳೆಲ್ಲಾ ಕಿವುಡಾಗಿವೆಯಾ? ಇಷ್ಟು ಸಾಮಾನ್ಯ ಪರಿಜ್ಞಾನ ಇಲ್ಲದವನನ್ನು ಸಂಸದನನ್ನಾಗಿ ಆರಿಸಿ ಕಳಿಸಿದವರು ಮತ್ತೊಮ್ಮೆ ಯೋಚಿಸಬೇಕಾಗಿದೆ.

ಇಂತಹ ಅಹಾರ ಸಂಸ್ಕೃತಿ ವಿರೋಧಿ, ಶ್ರೇಷ್ಟತೆಯ ವ್ಯಸನ ಪೀಡಿತ ಪಕ್ಷದವರಿಗೆ ಕರ್ನಾಟಕದ ಜನತೆ ಚುನಾವಣೆಯಲ್ಲಿ ಮುಟ್ಟಿ ನೋಡಿಕೊಳ್ಳುವಂತಹ ಪಾಠ ಕಲಿಸಬೇಕಿದೆ. ಇವತ್ತು ‘ನಂದಿನಿ’ ಯನ್ನು ನುಂಗಲು ನೋಡಿದವರು ಮುಂದೆ ಮತ್ತೆ ಅಧಿಕಾರಕ್ಕೆ ಬಂದರೆ ಅಭಿಯಾರಣ್ಯವನ್ನೂ ಸ್ವಾಹಾ ಮಾಡುವುದರಲ್ಲಿ ಸಂದೇಹವಿಲ್ಲ.

-ಶಶಿಕಾಂತ ಯಡಹಳ್ಳಿ

10-4-2023




ಭಾನುವಾರ, ಏಪ್ರಿಲ್ 9, 2023

ದೇಗುಲಗಳಲ್ಲಿ ದಲಿತರ ಮೇಲೆ ಪ್ರಬಲರ ದಮನ; ಮಾನವೀಯತೆಯ ಸೋಲಿನ ಕಥನ.

 


ತಹ ತಹ..

ದೇಗುಲಗಳಲ್ಲಿ ದಲಿತರ ಮೇಲೆ ಪ್ರಬಲರ ದಮನ; ಮಾನವೀಯತೆಯ ಸೋಲಿನ ಕಥನ.

ಅವರ್ಣೀಯರ ಅಸಹಾಯಕತೆ ಮತ್ತು ಸವರ್ಣೀಯರ ಶ್ರೇಷ್ಠತೆಯ ವ್ಯಸನಕ್ಕೆ ಈ ದೇಶದಲ್ಲಿ ಕೊನೆಮೊದಲಿಲ್ಲ. ಅದರಲ್ಲೂ ಸಮಾಜದಲ್ಲಿ ಜಾತೀಯತೆಯೆಂಬ ಸನಾತನ ವಿಷವೃಕ್ಷದ ಬೇರುಗಳು ಇನ್ನೂ ಗಟ್ಟಿಯಾಗಿ ಹಬ್ಬಿ ತನ್ನ ವಿಕಾರತೆಗಳನ್ನು ಆಗಾಗ ಅನಾವರಣಗೊಳಿಸುತ್ತಲೇ ಇರುತ್ತವೆ. ಈ ಹಿಂದುತ್ವವಾದಿಗಳು ಅದೆಷ್ಟೇ “ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು” ಎಂದು ಬಾಯಿಬಡಿದುಕೊಂಡರೂ ಪಂಚಮರನ್ನು ಕನಿಷ್ಟ ಚತುರ್ವರ್ಣದ ಚೌಕಟ್ಟಿನಲ್ಲೂ ತರದೇ ಬಹಿಷ್ಕೃತರಾಗಿ ಉಳಿಸಲಾಗಿದೆ. ಸಮಾನತೆ ಸಾರುವ ಸಂವಿಧಾನವೂ ಮೇಲ್ಜಾತಿಗಳು ಮತ್ತು ಪುರೋಹಿತಶಾಹಿಗಳ ಮೇಲಾಟದಲ್ಲಿ ಸೋತುಹೋಗಿದೆ. ಈಗ ಮತ್ತೆ ದಲಿತರ ಮೇಲಿನ ದಮನದ ಕುರಿತ ಎರಡು ಘಟನೆಗಳು ನಿನ್ನೆ ಘಟಿಸಿ ಮಾನವೀಯತೆ ತಲೆತಗ್ಗಿಸುವಂತೆ ಮಾಡಿದೆ.

ಒಂದು.. ಕರ್ನಾಟಕದ ತಿಪಟೂರಿನಲ್ಲಿ ದೇವಾಲಯ ಪ್ರವೇಶವನ್ನು ನಿರಾಕರಿಸಿ ದಲಿತರ ಮೇಲೆ ಸವರ್ಣೀಯರು ಹಲ್ಲೆ ನಡೆಸಿದ್ದಾರೆ. ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಕಸಬಾ ಹೋಬಳಿಯಲ್ಲಿರುವ ಶ್ರೀ ಬಿದಿರಾಂಬಿಕಾ ದೇವಾಲಯದ ಪ್ರವೇಶಕ್ಕೆ ದಲಿತ ಯುವಕನೊಬ್ಬ ಪ್ರವೇಶಿಸಲು ಪ್ರಯತ್ನಿಸಿದ ಎನ್ನುವ ಕಾರಣಕ್ಕೆ ಆ ದೇವಾಲಯದ ಧರ್ಮದರ್ಶಿಯ ಆದೇಶದಂತೆ ಅರ್ಚಕರೂ ಸೇರಿದಂತೆ 20ಕ್ಕೂ ಹೆಚ್ಚು ಜನ ಪ್ರಬಲ ಜಾತಿಯವರ ಗುಂಪು ಲಿಂಗರಾಜು ಎನ್ನವ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಕಳೆದ ವರ್ಷವೂ ಸಹ ದಲಿತರು ಉತ್ಸವ ಮೂರ್ತಿಗೆ ಈಡುಗಾಯಿ ಒಡೆದದ್ದನ್ನು ವಿರೋಧಿಸಿದ ಈ ದೇವಸ್ಥಾನದ ಅರ್ಚಕರುಗಳು ‘ದಲಿತರು ಈಡುಗಾಯಿ ಒಡೆದರೆ ದೇವರಿಗೆ ಮೈಲಿಗೆಯಾಗುತ್ತದೆ’ ಎಂದು ತಕರಾರು ತೆಗೆದಿದ್ದರು. ಈ ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಪೊಲೀಸರು ಈ ಅರ್ಚಕರಿಗೆ ಎಚ್ಚರಿಕೆ ಕೊಟ್ಟಿದ್ದರೂ ಈ ವರ್ಷ ಮತ್ತೆ ದಲಿತನ ಮೇಲೆ ಗುಂಫು ಹಲ್ಲೆ ಮಾಡಲಾಗಿದೆ. ಇದೆಲ್ಲಾ ಗೊತ್ತಿದ್ದೂ ಬಿದಿರಮ್ಮದೇವಿ ಬಿದಿರು ಕೋಲಿನಂತೆ ಸ್ಥಬ್ದವಾಗಿದ್ದಾಳೆ. ಈ ದೇವಸ್ಥಾನದ ಮುಂಬಾಗದಲ್ಲಿ ಹಾಕಲಾದ “ಅಸ್ಪೃಶ್ಯತೆ ಆಚರಣೆ ಕಾನೂನು ಬಾಹಿರ “ ಎಂಬ ನಾಮಫಲಕ ಸಂವಿಧಾನ ಮತ್ತು ಕಾನೂನನ್ನು ಅಣಕಿಸುವಂತಿದೆ.

ಇನ್ನೊಂದು ಇಂತಹುದೇ ದುರ್ಘಟನೆ ಸಂಭವಿಸಿದ್ದು ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಕೊಲಿಯನೂರು ಪಕ್ಕದ ಮೇಲ್ಪತಿ ಗ್ರಾಮದಲ್ಲಿ. ದ್ರೌಪತಿ ಅಮ್ಮನ್ ದೇವಾಲಯದ ಉತ್ಸವದ ದಿನ ದೇವತೆಯನ್ನು ನೋಡಲು ದಲಿತರು ದೇವಾಲಯಕ್ಕೆ ಪ್ರವೇಶಿಸಿದ್ದನ್ನೇ ನೆಪವಾಗಿಟ್ಟುಕೊಂಡ ಪ್ರಬಲ ಜಾತಿಯ ಜನರ ಗುಂಪು ವಾಗ್ವಾದಕ್ಕೆ ಇಳಿದು ದಲಿತರನ್ನು ಮನಬಂದಂತೆ ತಳಿಸಿ ಗಾಯಗೊಳಿಸಿದರು. ದಲಿತ ಸುಮುದಾಯದವರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರಾದರೂ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ಕೊಟ್ಟ ಭರವಸೆಯಿಂದ ಪ್ರತಿಭಟನೆ ಕೈಬಿಟ್ಟರು.

ಇಂತಹ ಘಟನೆಗಳು ಭಾರತದ ಒಂದಿಲ್ಲೊಂದು ಭಾಗದಲ್ಲಿ ಪ್ರತಿದಿನ ಘಟಿಸುತ್ತಲೇ ಇರುತ್ತವೆ. ಕೆಲವು ವರದಿಯಾದರೆ ಹಲವಾರು ಘಟನೆಗಳು ಬೆಳಕಿಗೆ ಬರುವುದೇ ಇಲ್ಲ. ಟಿಆರ್ಪಿ ಸಿಗುವುದಿಲ್ಲವಾದ್ದರಿಂದ ಇಂತಹ ಘಟನೆಗಳಿಗೆ ಮಾಧ್ಯಮಗಳು ಬೆಳಕು ಚೆಲ್ಲುವುದೂ ಇಲ್ಲ. ದಲಿತ ಸಮುದಾಯದವರ ಮೇಲೆ ಪ್ರಬಲ ಜಾತಿಯವರ ದೌರ್ಜನ್ಯ ನಿಲ್ಲುವುದೂ ಇಲ್ಲ. ಪೊಲೀಸರ ಮದ್ಯಸ್ತಿಕೆ ಖಾಯಂ ಪರಿಹಾರವನ್ನೂ ಕೊಡುವುದಿಲ್ಲ.

ಹೆಸರಿಗೆ ಜ್ಯಾತ್ಯಾತೀತ ಭಾರತ ಎಂದಿದ್ದರೂ ಈ ಜಾತಿ ವೈಷಮ್ಯಕ್ಕೆ ಕೊನೆಮೊದಲಿಲ್ಲ. ಯಾವಾಗಲೂ ಮೇಲ್ಜಾತಿ ಪರವಾಗಿಯೇ ಇರುವ ಆಳುವ ವರ್ಗಗಳು ದಲಿತರನ್ನು ಕೇವಲ ಮತಕ್ಕಾಗಿ ಬಳಸಿಕೊಂಡು ಶೋಷಿಸುತ್ತವೆ. ಉಳ್ಳವರ ದಬ್ಬಾಳಿಕೆಗೆ ಬೇಸತ್ತ ದಲಿತರು ಎಲ್ಲಿ ಮತಾಂತರ ಹೊಂದುತ್ತಾರೋ ಎನ್ನುವ ಆತಂಕದಲ್ಲಿ ಹಿಂದುತ್ವವಾದಿ ಸಂಘಟನೆಗಳು ದಲಿತರೂ ಸಹ ಹಿಂದುಗಳು ಎಂದು ಬೊಗಳೆ ಬಿಡುತ್ತಲೇ ಬಂದಿವೆ. ಆದರೆ ದಲಿತ ಸಮುದಾಯಕ್ಕೆ ಸಂವಿಧಾನಬದ್ದ ಸಮಾನತೆ ಮತ್ತು ಸ್ವಾಭಿಮಾನದ ಬದುಕನ್ನೂ ಕೊಡದೇ ಶೋಷಿಸುತ್ತಿವೆ.

ವೈದಿಕ ದೇವರುಗಳನ್ನು ಬಿಡಿ ಅವೈದಿಕರ ಗ್ರಾಮದೇವತೆಗಳಿಂದಲೂ ಸಹ ದಲಿತ ಸಮುದಾಯವನ್ನು ದೂರವಿಡುವ ಸನಾತನ ಹುನ್ನಾರ ಪುರೋಹಿತಶಾಹಿ ಮನಸ್ಥಿತಿಯವರದ್ದು. ಅದಕ್ಕೆ ಹೇಳುವುದು ಪುರೋಹಿತಶಾಹಿ ಸಂತಾನ ಕೇವಲ ವೈದಿಕರಲ್ಲಿ ಮಾತ್ರವಿಲ್ಲ ಅವರು ಎಲ್ಲಾ ಜಾತಿ ಧರ್ಮಗಳಲ್ಲೂ ಬೇರುಬಿಟ್ಟು ಮಾನವೀಯತೆಗೆ ಕಳಂಕವಾಗಿದ್ದಾರೆ. ಜಾತೀವಾದದ ಮುಂದೆ ಮಾನವೀಯತೆ ಸೋಲುತ್ತಲೇ ಇದೆ. ಪುರೋಹಿತಶಾಹಿಗಳ ಶೋಷಣೆಗೆ ಆದಿ ಅಂತ್ಯವಿಲ್ಲವಾಗಿದೆ. ಸಂವಿಧಾನದ ರಕ್ಷಣೆ ಇರುವಾಗಲೇ ಹೀಗಾದರೆ ಮುಂದೊಮ್ಮೆ ಮನುವಾದಿಗಳು ಈ ದೇಶದ ಚುಕ್ಕಾಣಿ ಹಿಡಿದು ಮನುಧರ್ಮಶಾಸ್ತ್ರವನ್ನೇ ಸಂವಿಧಾನ ಮಾಡಿಕೊಂಡರೆ ಬಹುಜನರ ಬದುಕು ಮತ್ತೆ ಗುಲಾಮಗಿರಿಗೆ ಒಳಗಾಗುವುದರಲ್ಲಿ ಸಂದೇಹವೇ ಇಲ್ಲ. ಮತ್ತೆ ವರ್ಣವ್ಯವಸ್ಥೆ ಜಾರಿಗೆ ಬರುವ ಅಪಾಯವನ್ನೂ ಅಲ್ಲಗಳೆಯುವಂತಿಲ್ಲ.

-ಶಶಿಕಾಂತ ಯಡಹಳ್ಳಿ

9-04-2023


 

ಶನಿವಾರ, ಏಪ್ರಿಲ್ 8, 2023

ನಮ್ಮ ನಂದಿನಿ ವರ್ಸಸ್ ಗುಜರಾತಿ ಅಮೂಲ್




 ತಹ ತಹ..

ನಮ್ಮ ನಂದಿನಿ ವರ್ಸಸ್ ಗುಜರಾತಿ ಅಮೂಲ್


ಕೇಂದ್ರ ಸರಕಾರದ ಗ್ರಹಮಂತ್ರಿಗಳಾದ ಅಮಿತ್ ಶಾ ರವರು ಕರ್ನಾಟಕಕ್ಕೆ ಬಂದು ನಂದಿನಿ ಮತ್ತು ಗುಜರಾತಿನ ಅಮೂಲ್ ವಿಲೀನದ ಕುರಿತು ಸೂಕ್ಷ್ಮವಾಗಿ ಹಿಂಟ್ ಕೊಟ್ಟು ಹೋದ ನಂತರವೇ ಕನ್ನಡಿಗರಿಗೆ ಆತಂಕ ಶುರುವಾಗಿತ್ತು. ನಂತರದ ಬೆಳವಣಿಗೆಗಳು ಶಾ ರವರ ಆಸೆಗೆ ಪೂರಕವಾಗಿ ಶುರುವಾಗಿದ್ದು ಕಾಕತಾಳೀಯವೇನಲ್ಲ.

ನಂದಿನಿ ಮೊಸರಿನ ಪಾಕೆಟ್ ಮೇಲೆ ದಹಿ ಎಂದು ನಮೂದಿಸುವುದು ಖಡ್ಡಾಯ ಮಾಡುವ ಪ್ರಯತ್ನ ಕರ್ನಾಟಕ ಮತ್ತು ತಮಿಳುನಾಡಿನವರ ಪ್ರತಿರೋಧದಿಂದಾಗಿ ತಡೆಹಿಡಿಯಲಾಯಿತು. ನಂತರ ನಂದಿನಿ ಉತ್ಪನ್ನಗಳ ಕೃತಕ ಅಭಾವ ಸೃಷ್ಟಿಸಿ ಅಮೂಲ್ ಉತ್ಪನ್ನಗಳ ಮಾರಾಟಕ್ಕೆ ಪೂರ್ವಭಾವಿ ವೇದಿಕೆ ಸಿದ್ದಗೊಳಿಸಲಾಯ್ತು. ತದನಂತರ ಅಮೂಲ್ ಬ್ರ್ಯಾಂಡ್ ಮಾರಾಟವನ್ನು ಬೆಂಗಳೂರಿನಲ್ಲಿ ಆನ್ ಲೈನ್ ಮೂಲಕ ಮಾರಾಟ ಮಾಡುವ ಯೋಜನೆ ಆರಂಭಿಸಲಾಯ್ತು.

ಎಪ್ಪತ್ತು ಸಾವಿರ ಕೋಟಿ ವ್ಯವಹಾರದ ದೊಡ್ಡದಾದ ಗುಜರಾತಿನ ಅಮೂಲ್ ಕಂಪನಿಯೊಂದು ಇಪ್ಪತ್ತು ಸಾವಿರ ಕೋಟಿ ಟರ್ನೊವರ್ ಇರುವ ಕೆಎಂಎಪ್ ಜೊತೆ ಸ್ಪರ್ಧೆಗಿಳಿದು ನಂದಿನಿ ಬ್ರ್ಯಾಂಡನ್ನು ಮುಳುಗಿಸುವ ದುರಾಲೋಚನೆ ಮಾಡಿದ್ದು ಗೊತ್ತಾಗಿದ್ದೇ ತಡ ಕನ್ನಡಿಗರು ಎಚ್ಚೆತ್ತುಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ತೀವ್ರ ಪ್ರತಿರೋಧ ವ್ಯಕ್ತಪಡಿಸತೊಡಗಿದರು.

ಆದರೆ ಕೇಂದ್ರ ಸರಕಾರದ ಗುಲಾಮರಂತೆ ವರ್ತಿಸುವ ರಾಜ್ಯ ಸರಕಾರದ ಬಿಜೆಪಿಗರು ನಂದಿನಿ ವಿರುದ್ದ ಅಮೂಲ್ ಸ್ಪರ್ಧೆಯನ್ನು ಸಮರ್ಥಿಸಿಕೊಳ್ಳತೊಡಗಿದರು.
"ಕೆಎಂಎಪ್ ಮತ್ತು ಅಮೂಲ್ ನಡುವೆ ಒಪ್ಪಂದವಾದರೆ ತಪ್ಪೇನು?" ಎಂದು ಹಾಲಿ ಮುಖ್ಯಮಂತ್ರಿ ಬೊಮ್ಮಾಯಿಯವರು ಹೇಳಿ ತಮ್ಮ ಗುಲಾಮತನವನ್ನು ಸಾಬೀತುಗೊಳಿಸಿದರು. "ಯಾವುದೇ ಉತ್ಪನ್ನ ಯಾವುದೇ ಭಾಗದಲ್ಲಿ ಮಾರಾಟವಾಗಬಹುದು" ಎಂದು ಸಚಿವ ಸುಧಾಕರ್ ಸಮರ್ಥಿಸಿಕೊಂಡರು. ಬಿಜೆಪಿ ಸರಕಾರದ ತಲೆ ಬಾಲಗಳೂ ಸಹ ಅಮೂಲ್ ಪರ ಹೇಳಿಕೆ ಕೊಟ್ಟವು. ಕರ್ನಾಟಕದ ಬಹುತೇಕ ಎಂಪಿ ಗಳು ಅಮಿತ್ ಶಾ ರವರ ಮುಂದೆ ಉಸಿರು ಬಿಡಲೂ ಧೈರ್ಯ ಸಾಲದೇ ಯಥಾಪ್ರಕಾರ ಜಾಣ ಮೌನಕ್ಕೆ ಜಾರಿದರು.

ವಿರೋಧ ಪಕ್ಷಗಳ ವಿರೋಧ, ಕನ್ನಡಿಗರ ಪ್ರತಿರೋಧಗಳೆಲ್ಲಾ ಬಿಜೆಪಿ ಸರಕಾರಕ್ಕೆ ಲೆಕ್ಕಕ್ಕೇ ಇಲ್ಲ. ಇದ್ದಿದ್ದರೆ ಚುನಾವಣಾ ಸಂದರ್ಭದಲ್ಲಿ ಅಮೂಲ್ ವಿಚಾರ ಪ್ರಸ್ತಾಪಿಸುತ್ತಲೇ ಇರಲಿಲ್ಲ. ಮೋದಿ ಮೇನಿಯಾ ಹುಟ್ಟಿಸಿ, ಮುಸ್ಲಿಂ ವಿರೋಧ ಹೆಚ್ಚಿಸಿ, ಹಿಂದೂ ಭಾವನೆ ಕೆರಳಿಸಿ ಮತ್ತೆ ಸಲೀಸಾಗಿ ಕರ್ನಾಟಕದ ಗದ್ದುಗೆ ಹಿಡಿಯಬಹುದೆಂಬ ಕಾನ್ಪಿಡೆನ್ಸ್ ಬಿಜೆಪಿಗರದ್ದು. ಓಟಿಂಗ್ ಮಶಿನ್ ಎಡ್ಜಸ್ಟ್ ಮಾಡಿಕೊಂಡೋ ಇಲ್ಲವೇ ಕಡಿಮೆ ಸೀಟ್ ಬಂದರೆ ಎದುರಾಳಿ ಪಕ್ಷದ ಶಾಸಕರನ್ನು ಕೊಂಡುಕೊಂಡೋ ವಾಮಮಾರ್ಗದಿಂದಾದರೂ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆಂಬ ಪಕ್ಕಾ ಲೆಕ್ಕಾಚಾರ  ಇದ್ದಿದ್ದರಿಂದಲೇ ವಿರೋಧ ಪಕ್ಷದ ವಿರೋಧಗಳಿಗೆ ಹಾಗೂ ಕನ್ನಡಿಗರ ಪ್ರತಿರೋಧಗಳಿಗೆ ಕ್ಯಾರೇ ಅಂತಾನೂ ಸಂಘ ಪರಿವಾರಿಗಳು ಅನ್ನುತ್ತಿಲ್ಲ.

ಮತ್ತೆ ಕರುನಾಡಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿದ್ದೆ ಆದಲ್ಲಿ ಕೆಎಂಎಪ್ ಮುಳುಗುವುದಂತೂ ಗ್ಯಾರಂಟಿ, ಗುಜರಾತಿ ಅಮೂಲ್ ಇಡೀ ಹಾಲಿನ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುವುದೂ ಗ್ಯಾರಂಟಿ, ನಮ್ಮ ಹಾಲೋದ್ಯಮ ಕುಂಟಿತಗೊಂಡು ಅದನ್ನೇ ನಂಬಿ ಬದುಕುವ ಕೋಟ್ಯಾಂತರ ಕೃಷಿ ಕೂಲಿ ಜನರ ಬದುಕು ಬರ್ಬಾದಾಗೋದಂತೂ ಗ್ಯಾರಂಟಿ.

ಕರ್ನಾಟಕದಲ್ಲಿ ಈಗ ಚುನಾವಣಾ ಕಾಲ. ಜನರು ಯೋಚಿಸಿ ಮತದಾನ ಮಾಡಬೇಕಿದೆ. ಆಮಿಷಕ್ಕೆ ಇಲ್ಲವೇ ಹುಸಿ ಭಾವತೀವ್ರತೆಗೆ ಬಲಿಯಾದರೆ ಕೇಂದ್ರದ ಗುಲಾಮಗಿರಿಗೆ ಕರ್ನಾಟಕವನ್ನು ಈಡುಮಾಡಬೇಕಾಗುತ್ತದೆ. ಬೇರೆ ದಾರಿಯಿಲ್ಲ.

- ಶಶಿಕಾಂತ ಯಡಹಳ್ಳಿ

09-04-2023 




ಧರ್ಮಾಂಧರ ದರ್ಬಾರಿನಲ್ಲಿ ಗೋಮುಖ ವ್ಯಾಘ್ರಗಳು




ತಹ ತಹ.. 

ಧರ್ಮಾಂಧರ ದರ್ಬಾರಿನಲ್ಲಿ ಗೋಮುಖ ವ್ಯಾಘ್ರಗಳು 

ಕಳೆದ ದಶಕಗಳಿಂದೀಚೆಗೆ ಈ ದೇಶದಲ್ಲಿ ಗೋವಿನ ಹೆಸರಿನ ಧರ್ಮರಾಜಕಾರಣಕ್ಕೆ ಕೊನೆಮೊದಲಿಲ್ಲ. ಗೋವು ಎಂಬ ನಾಲ್ಕು ಕಾಲಿನ ಪ್ರಾಣಿಯು ಮನುಜರ ಪ್ರಾಣ ತೆಗೆಯಲು ನೆಪವಾಗುವುದು ದುರಿತ ಕಾಲದ ದುರಂತ. ಇತ್ತೀಚೆಗೆ ರಾಮನಗರದಲ್ಲಿ ಗೋರಕ್ಷಣೆ ಹೆಸರಲ್ಲಿ ಹಪ್ತಾ ವಸೂಲಿಗಿಳಿದು ಇದ್ರೀಸ್ ಪಾಷಾ ಎನ್ನುವ ಮುಸ್ಲಿಂ ವ್ಯಕ್ತಿಯನ್ನು ಕ್ರೂರವಾಗಿ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಪುನೀತ್ ಕೆರೆಹಳ್ಳಿ ಆಂಡ್ ಗ್ಯಾಂಗನ್ನು ರಾಜಸ್ಥಾನದ ಗಡಿಯಲ್ಲಿ ಬಂಧಿಸಿ ತಂದ ಕರ್ನಾಟಕದ ಪೊಲೀಸರು ಕಂಬಿ ಹಿಂದೆ ದಬ್ಬಿದ್ದರು. ಆತ ಮತ್ತು ಆತನ ಜೊತೆಗಿದ್ದ ಇನ್ನೂ ನಾಲ್ಕು ಮಾತಾಂಧರು ಹಿಂದೂ ರಾಷ್ಟ್ರ ರಕ್ಷಣಾ ಪಡೆಯ ಕಾರ್ಯಕರ್ತರು. ಈಗ ಅಖಿಲ ಭಾರತ ಮಹಾ ಸಭಾದ ರಾಷ್ಟ್ರೀಯ ವಕ್ತಾರ ಸಂಜಯ್ ಜಾಟ್ ಮತ್ತು ಆತನ ಮೂವರು ಸಹಚರರು ಗೋವನ್ನು ಕೊಂದು ಆ ಆರೋಪವನ್ನು ಮುಸ್ಲಿಂ ವ್ಯಕ್ತಿಗಳ ಮೇಲೆ ಆರೋಪಿಸಿ ತಾವೇ ಪೋಲೀಸರಿಂದ ಬಂಧಿಸಲ್ಪಟ್ಟಿರುವ ಘಟನೆ ಆಗ್ರಾದ ಗೌತಮ್ ಬುದ್ದ ನಗರದಲ್ಲಿ ನಡೆದಿದೆ. 

ಆಗಿದ್ದಿಷ್ಟೇ... ಈ ಸೋ ಕಾಲ್ಡ್ ಸಂಘ ಪರಿವಾರದ ಅಂಗವಾದ ಸಂಜಯ್ ಜಾಟ್ ಭಾರೀ ಪ್ಲಾನ್ ಮಾಡಿದ್ದ. ಅವತ್ತು ಮಾರ್ಚ್ 29 ರ ರಾಮನವಮಿ. ಒಂದಿನ ಮುಂಚೆ ತನ್ನ ಸಹಚರರ ಜೊತೆ ಸೇರಿ ಹಸುವೊಂದನ್ನು ಕೊಂದು ಪೊಲೀಸ್ ಠಾಣೆಗೆ ಹೋಗಿ ಮಹಮದ್ ರಿಜ್ವಾನ್, ನಕೀಂ ಮತ್ತು ಶಾನು ಎಂಬ ಮೂವರು ಮುಸ್ಲಿಂ ಯುವಕರ ಮೇಲೆ ಗೋಹತ್ಯೆ ದೂರು ದಾಖಲಿಸಿದ್ದಷ್ಟೇ ಅಲ್ಲದೇ ಹಿಂದೂ ಕಾರ್ಯಕರ್ತರನ್ನು ಸೇರಿಸಿ ಆರೋಪಿಗಳನ್ನು ಬಂಧಿಸಬೇಕೆಂದು ಪೊಲೀಸ್ ಸ್ಟೇಶನ್ನಿಗೆ ಮುತ್ತಿಗೆ ಹಾಕಿ ಗಲಾಟೆ ಮಾಡಿಸಲಾಯ್ತು. ಇದಕ್ಕೆ ಮುಸ್ಲಿಂ ಯುವಕರ ಮೇಲಿದ್ದ ವೈಯಕ್ತಿಕ ದ್ವೇಷವೂ ಕಾರಣವಾಗಿತ್ತಂತೆ. ಇದೇ ವಿಷಯ ಇಟ್ಟುಕೊಂಡು ರಾಮನವಮಿಯ ದಿನ ಕೋಮುಗಲಭೆ ಹುಟ್ಟು ಹಾಕುವ ಹುನ್ನಾರ ಇವರದ್ದಾಗಿತ್ತಂತೆ. ಇದರ ಸುಳಿವರಿತ ಪೋಲೀಸರು ಮೊಬೈಲ್ ಲೊಕೇಶನ್ ಚೆಕ್ ಮಾಡಿದಾಗ ಹತ್ಯೆಯಾದ ಜಾಗದಲ್ಲಿ ಸಿಕ್ಕಿದ್ದು ಇದೇ ಗಲಾಟೆ ಮಾಡಿದ ಆಗುಂತಕರ ಮೊಬೈಲ್ ಜಾಡು. ದೂರುದಾರರೇ ಅಪರಾಧಿಗಳಾಗಿ ಬಂಧಿಸಲ್ಪಟ್ಟಿದ್ದರಿಂದ ಕೋಮು ಗಲಭೆಯೊಂದರ ಸಂಚು ವಿಫಲವಾಯಿತು. ಜೊತೆಗೆ ಈ ಸಂಘ ಪರಿವಾರದ ಅಂಗಾಧಿಪತಿಗಳ ಮುಖವಾಡವೂ ಬಯಲಾಯಿತು. 

 ಹಿಂದೂ ಮುಸ್ಲಿಂ ಗಲಭೆ ಹುಟ್ಟಿಸಲು ಈ ಹಿಂದೆ ಮಸೀದಿಯಲ್ಲಿ ಹಂದಿ ಮಾಂಸ ಇಲ್ಲವೇ ದೇವಸ್ಥಾನದಲ್ಲಿ ಗೋಮಾಂಸ ಎಸೆಯುವ ಕುತಂತ್ರ ಮಾಡಲಾಗುತ್ತಿತ್ತು. ಅದರ ಮುಂದುವರೆದ ಭಾಗವಾಗಿ ಈ ಹಿಂದುತ್ವವಾದಿ ಹಂತಕರು ಪವಿತ್ರವೆಂದು ಹೇಳುವ ಗೋಮಾತೆಯನ್ನು ಹತ್ಯೆ ಮಾಡಿ ಮುಸ್ಲಿಂ ಹುಡುಗರ ತಲೆಗೆ ಕಟ್ಟಿ ಕೋಮು ಭಾವನೆ ಕೆರಳಿಸಿ ಗಲಭೆ ಸೃಷ್ಟಿಸಿ ಧರ್ಮ ದ್ವೇಷ ಹುಟ್ಟಿಸುವ ಹುನ್ನಾರ ಮಾಡಿ ತಾವೇ ತಗಲಾಕಿಕೊಂಡಿದ್ದಾರೆ. ಗೋವಿನ ಹೆಸರಲ್ಲಿ ಭಾವನೆಗಳನ್ನು ಕೆರಳಿಸುವ, ಧರ್ಮದ ಹೆಸರಲ್ಲಿ ಉಮ್ಮಾದವನ್ನು ಹುಟ್ಟಿಸುವ ಅನೇಕ ಘಟನೆಗಳು ನಡೆಯುತ್ತಲೇ ಇವೆ. ರಕ್ಷಕರೆಂಬ ಈ ಸ್ವಘೋಷಿತ ನೈತಿಕ ಪೋಲೀಸ್ ಪಡೆ ಇಂತಹ ಕುಕೃತ್ಯಗಳನ್ನು ಆಗಾಗ ಮಾಡುತ್ತಾ ಸಮಾಜದ ನೆಮ್ಮದಿ ಹಾಳು ಮಾಡುತ್ತಾ ಅಸಹನೆಯ ವಾತಾವರಣ ಸೃಷ್ಟಿಸುತ್ತಿವೆ. ಇವರು ಮಾಡುವ ಈ ರೀತಿಯ ಪ್ರಚೋದನೆಗೆ ಇನ್ನೊಂದು ಸಮುದಾಯದವರೂ ಉದ್ವಿಗ್ನಗೊಂಡು ಪ್ರತಿಕ್ರಿಯಿಸಿದಾಗ ಹಿಂಸೆ ಹೆಚ್ಚಾಗಿ ಅಶಾಂತಿ ವ್ಯಾಪಿಸುತ್ತದೆ. ಇದರಿಂದ ಬಹುಸಂಖ್ಯಾತ ಹಿಂದೂಗಳೆಂಬುವವರು ಕಲಿಯಬೇಕಾದ ಪಾಠ ಏನೆಂದರೆ.. 

ಮತಾಂಧ ಶಕ್ತಿಗಳ ಪ್ರಚೋದನೆಯಿಂದ ಭಾವತೀವ್ರತೆಗೆ ಒಳಗಾಗಿ ಅನ್ಯಧರ್ಮದ್ವೇಷಕ್ಕೆ ಅವಕಾಶ ಕೊಡಬಾರದು ಹಾಗೂ ಮುಸ್ಲಿಂ ಸಮುದಾಯದವರು ತಿಳಿಯಬೇಕಾದದ್ದು ಏನೆಂದರೆ ಕೋಮುಕ್ರಿಮಿಗಳ ಸಂಚಿನಿಂದ ಉದ್ರೇಕಕ್ಕೆ ಒಳಗಾಗಿ ವಿವೇಚನೆ ಕಳೆದುಕೊಂಡು ಕ್ರಿಯೆಗೆ ಹಿಂಸಾತ್ಮಕ ಪ್ರತಿಕ್ರಿಯೆ ತೋರುವುದನ್ನು ಬಿಟ್ಟು ಅಹಿಂಸಾತ್ಮಕ ಮಾರ್ಗಗಳನ್ನು ಅಳವಡಿಸಿಕೊಳ್ಳುವುದು ಈ ದುರಿತ ಕಾಲದ ಅನಿವಾರ್ಯತೆಯಾಗಿದೆ. ಹಿಂದೂ ಮುಸ್ಲಿಂ ಹಾಗೂ ಇತರೆಲ್ಲ ಧರ್ಮದ ಸಮುದಾಯಗಳು ಮತ್ತು ಅನುಯಾಯಿಗಳು ಈ ಹಿಂದಿತ್ವವಾದಿಗಳ ಹುನ್ನಾರವನ್ನು ಅರಿತು ಮತಾಂಧತೆಯನ್ನು ಸೋಲಿಸಬೇಕಿದೆ.. ಮಾನವೀಯತೆಯನ್ನು ಗೆಲ್ಲಿಸಬೇಕಿದೆ. 

- ಶಶಿಕಾಂತ ಯಡಹಳ್ಳಿ 

 08-04-2023

ತಹ ತಹ… ಹೆಣ್ಮಕ್ಕಳು ಶೂರ್ಪನಖಿಯರಾ?

 

ಕೈಲಾಶ್ ವಿಜಯವರ್ಗೀಯ


ಹೆಣ್ಮಕ್ಕಳು ಶೂರ್ಪನಖಿಯರಾ?

ಹೌದು ಹೀಗೊಂದು ಅದ್ಭುತ ಸಂಶೋಧನಾ ಸಂದೇಶವನ್ನು ಕೈಲಾಶ್ ವಿಜಯವರ್ಗೀಯರವರು ಇಂದೋರಿನಲ್ಲಿ ಹನುಮ ಜಯಂತಿಯ ದಿನದಂದು ರಾಮಭಕ್ತಾಧಿಗಳಿಗೆ ಕೊಟ್ಟಿದ್ದಾರೆ. ಮಹಿಳೆಯರನ್ನು ಎರಡನೇ ದರ್ಜೆ ಪ್ರಜೆಗಳು ಎಂಬಂತೆ ಪರಿಗಣಿಸುವ ಮನುವಾದಿ ಪಕ್ಷವಾದ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಬಾಯಲ್ಲಿ ಇದಕ್ಕಿಂತಾ ಇನ್ನೇನು ತಾನೆ ನಿರೀಕ್ಷಿಸಲು ಸಾಧ್ಯ?

ಕೆಟ್ಟ ಉಡುಪು ಅಂದರೆ ಯಾವುದು? ಶೂರ್ಪನಖಿ ಯಾವ ರೀತಿಯ ಉಡುಗೆ ತೊಡುತ್ತಿದ್ದಳು? ಈ ಮನುವಾದಿಗಳ ಮಾನದಂಡಕ್ಕೆ ಮಹಿಳೆಯರು ತೊಡುವ ಉಡುಪುಗಳು ವ್ಯತಿರಿಕ್ತವಾದರೆ ಅದು ಖಂಡನೀಯವೇ? ಮಹಿಳೆಯರು ಬೂರ್ಕಾ ಹಿಜಾಬ್ ಮಾತ್ರ ಧರಿಸಿ ಹೊರಗೆ ಬರಬೇಕು ಎನ್ನುವ ತಾಲಿಬಾನಿ ಮಾದರಿಯಲ್ಲಿ ಮನುವಾದಿ ಆದೇಶವೇ?

ಮುಂದೊಂದು ದಿನ ಸಂವಿಧಾನವನ್ನೇ ಬದಲಾಯಿಸಿ ಮನುಧರ್ಮಶಾಸ್ತ್ರದ ಆಧಾರದ ಮೇಲೆ ದೇಶವನ್ನು ಈ ಸಂಘ ಪರಿವಾರದವರು ಆಳಿದ್ದೇ ಆದರೆ ಈ ದೇಶದ ಮಹಿಳೆಯರ ಕನಿಷ್ಟ ಸ್ವಾತಂತ್ರ್ಯಕ್ಕೂ ಎಳ್ಳುನೀರು ಬಿಟ್ಟಂತಲ್ಲವೆ? “ಕೆಟ್ಟ ಉಡುಪು ಧರಿಸಿ ಹೆಣ್ಣುಮಕ್ಕಳು ಓಡಾಡುವುದನ್ನು ನೋಡಿದರೆ ಅವರು ದೇವತೆಗಳಂತೆ ಕಾಣುವುದಿಲ್ಲ ಶೂರ್ಪನಖಿಯಂತೆ ಕಾಣುತ್ತಾರೆ” ಎನ್ನುವ ಕೈಲಾಶ್ ರವರಂತವರು ನೋಡುವ ದೃಷ್ಟಿಕೋನದಲ್ಲೇ ದೋಷವಿದೆ ಹಾಗೂ ಅವರು ಪ್ರತಿಪಾಧಿಸುವ ಮನುವಾದಿ ಸಿದ್ದಾಂತವೇ ಮಹಿಳಾ ವಿರೋಧಿಯಾಗಿದೆ.

ಸಂಘಪರಿವಾರದ ನಾಯಕರೊಬ್ಬರು ಹೇಳುತ್ತಾರೆ ‘ಹಿಂದೂ ಹೆಂಗಸರು ಹೆಚ್ಚು ಮಕ್ಕಳನ್ನು ಹೆರಬೇಕೆಂದು”, ಇನ್ನೊಬ್ಬರು ಪುಂಗುತ್ತಾರೆ ಹೆಣ್ಮಕ್ಕಳು ಮನೆಯ ಚೌಕಟ್ಟಿನಲ್ಲಿ ಇರಬೇಕೆಂದು. ಅದೇ ಮುಸ್ಲಿಮ್ ಮಹಿಳೆಯರ ವಿಚಾರ ಬಂದಾಗ ಅವರು ಹಿಜಾಬ್ ಧರಿಸಬಾರದು ಎನ್ನುತ್ತಾರೆ. ಸಮಾನ ವಸ್ತ್ರ ಸಂಹಿತೆ ಇರಬೇಕೆಂದು ಪ್ರತಿಪಾದಿಸುತ್ತಾರೆ.

ಹೀಗೆ.. ಮಹಿಳೆಯರು ಯಾವ ರೀತಿಯ ಉಡುಪು ಧರಿಸಬೇಕು, ಏನನ್ನು ಧರಿಸಬಾರದು ಎನ್ನುವುದನ್ನು ಇವರು ಅಂದರೆ ಈ ಸಂಘಿ ಗಂಡಸರು ನಿರ್ಧರಿಸುತ್ತಾರೆ. ಇದು ಯಾವುದೋ ಮತಿಹೀನನೊಬ್ಬನ ಮಾತು ಎಂದು ನಿರ್ಲಕ್ಷಿಸುವಂತಿಲ್ಲ ಯಾಕೆಂದರೆ ಮನುವಾದಿಗಳ ಹಿಡನ್ ಅಜೆಂಡಾ ಇದೇ ಆಗಿದೆ. ಮಹಿಳೆಯರನ್ನು ಪಿತೃಪ್ರಧಾನ ವ್ಯವಸ್ಥೆಯಲ್ಲೇ ಬಂಧಿಸಿ ಇಡಬೇಕು ಎಂಬುದೇ ಮನುಧರ್ಮಶಾಸ್ತ್ರದ ಓಪನ್ ಅಜೆಂಡಾ ಆಗಿದೆ. ಅದಕ್ಕೆ ಅಲ್ಲವೇ “ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ” ಎನ್ನುವುದು. ಸಂಘಪರಿವಾರದ ರಾಜಕೀಯ ಪಕ್ಷವಾದ ಬಿಜೆಪಿಯನ್ನು ಬೆಂಬಲಿಸುವ ಪ್ರತಿಯೊಬ್ಬ ಮಹಿಳೆಯರೂ ಯೋಚಿಸಬೇಕಾಗಿದೆ.

ಇರಾನ್ ಅಪಘಾನಿಸ್ತಾನದಲ್ಲಿರುವ ಮಹಿಳೆಯರಿಗೆ ಬಂದ ಅತಂತ್ರ ಸ್ಥಿತಿ ಭಾರತದ ಮಹಿಳೆಯರಿಗೂ ಬರಬಾರದು ಎಂಬುದಾದರೆ ಮೊದಲು ಮನುವಾದಿ ಮನಸ್ಥಿತಿಯ ಈ ಕೇಸರಿ ಪಕ್ಷವನ್ನು ವಿರೋಧಿಸದೇ ಬೇರೆ ದಾರಿಯಿಲ್ಲ. ಬೆಂಬಲಿಸಿದರೆ ಪಿತೃಪ್ರಧಾನತೆ ಹುಟ್ಟು ಹಾಕುವ ಲಿಂಗತಾರತಮ್ಯದ ಗುಲಾಮಗಿರಿಗೆ ಮಹಿಳೆಯರು ಈಡಾಗುವುದರಲ್ಲಿ ಸಂದೇಹವಿಲ್ಲ.

ಕೆಟ್ಟ ಉಡುಪಿನ ನಗ್ನ ದೃಶ್ಯಗಳನ್ನು ಜನಪ್ರತಿನಿಧಿ ಸಭೆಗಳಲ್ಲೇ ಗುಟ್ಟಾಗಿ ನೋಡುವ ಬಿಜೆಪಿ ನಾಯಕರು, ಮಹಿಳೆಯರನ್ನು ನಂಬಿಸಿ ಲೈಂಗಿಕವಾಗಿ ಬಳಸಿಕೊಳ್ಳುವ, ಅತ್ಯಾಚಾರ ಮಾಡಿ ಸಿಕ್ಕಿಹಾಕಿಕೊಳ್ಳುವ ಬಿಜೆಪಿ ನಾಯಕರು ಕೀಚಕ ರಾವಣರಲ್ಲವೇ? ನೈತಿಕತೆ ಸಭ್ಯತೆ ಎನ್ನುವುದು ಧರಿಸುವ ಉಡುಪಿನಲ್ಲಿರುವುದಿಲ್ಲ ನೋಡುವ ದೃಷ್ಟಿಕೋನದಲ್ಲಿ ಮತ್ತು ಸಕಾರಾತ್ಮಕ ಆಲೋಚನೆಗಳಲ್ಲಿ ಇರುತ್ತವೆ ಎಂದು ಈ ಸಂಘಿ ನಾಯಕರುಗಳಿಗೆ ಹೇಳುವವರಾದರೂ ಯಾರು? ಇಂತವರ ವಿರುದ್ದ ಪ್ರತಿಭಟಿಸಬೇಕಾದ ಮಹಿಳೆಯರು ಮೌನವಾಗಿದ್ದಷ್ಟೂ ಕಾಲ ಇಂತಹ ಕೀಚಕರು ಕಿರುಚುತ್ತಲೇ ಇರುತ್ತಾರೆ. ಇಂತವರನ್ನು ನಾಯಕರೆಂದು ನಂಬಿದ ಭಕ್ತಾದಿಗಳು ಅನುಸರಿಸುತ್ತಲೇ ಇರುತ್ತಾರೆ. ಮಹಿಳೆಯರ ಮೇಲೆ ನಡೆಯುವ ಶೋಷಣೆ, ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ.

-ಶಶಿಕಾಂತ ಯಡಹಳ್ಳಿ

08-04-2023