ಮಂಗಳವಾರ, ಏಪ್ರಿಲ್ 25, 2023

ಯಾವುದು ಸಿರಿತನ ಅದೆಲ್ಲಿದೆ ಬಡತನದ ನೆಮ್ಮದಿಯ ಬದುಕಿಗೆ

 


ಎಲ್ಲೋ ಕೇಳಿದ ಇಲ್ಲವೇ ಓದಿದ ಕಥೆ ಇದು.

ಶ್ರೀಮಂತ ರಾಯರಿಗೆ ಬಡತನ ಅಂದರೇನು ಎಂದು ಮೊಮ್ಮಗನಿಗೆ ತೋರಿಸಿ ಸಿರಿತನದ ಮಹತ್ವವನ್ನು ಮನದಟ್ಟು ಮಾಡಬೇಕೆಂಬಾಸೆ. ಒಂದಿನ ಬಿಡುವು ಮಾಡಿಕೊಂಡು ಮೊಮ್ಮಗನನ್ನು ಹಳ್ಳಿಗೆ ಕರೆದುಕೊಂಡು ಹೋಗಿ ಅಲ್ಲಿಯ ಬಡವರ ಬದುಕಿನ ಬಗೆಯನ್ನು ಮೊಮ್ಮಗನ ಅನುಭವಕ್ಕೆ ದಕ್ಕುವ ಹಾಗೆ ತೋರಿಸಿಕೊಂಡು ಮರುದಿನ ಮರಳಿ ಅರಮನೆಯಂತಹ ತನ್ನ ಮನೆಗೆ ಕರೆದುಕೊಂಡು ಬಂದು “ಏನೇನು ಗಮನಿಸಿದೆ ವಿವರಿಸು” ಎಂದು ಕೇಳಿದ.

“ತಾತಾ ವಿಲ್ಲೇಜ್ ಟ್ರಿಪ್ ಚೆನ್ನಾಗಿತ್ತು. ನಿನಗೆ ಗೊತ್ತಾ ತಾತಾ ನಮ್ಮನೇಲಿ ಒಂದೇ ನಾಯಿ ಇದ್ದರೆ ಅಲ್ಲಿ ಮನೆ ಬೀದಿಗಳಲ್ಲಿ ನಾಯಿಗಳ ಗುಂಪೇ ಇತ್ತು. ಎಲ್ಲಾ ಕೂಡಿ ಆಟ ಆಡ್ತಾ ಇದ್ದವು. ಎಷ್ಟೊಂದು ಚೆಂದ ಅಲ್ವಾ ಪಾಪ ನಮ್ಮ ಪಪ್ಪಿ ಇಲ್ಲಿ ಒಂಟಿಯಾಗಿದೆ.” ಎಂದು ಮನೆಯ ನಾಯಿಯ ಬಗ್ಗೆ ಸಿಂಪಥಿ ತೋರಿಸಿದ ಮೊಮ್ಮಗ.

“ತಾತಾ ಇಲ್ಲಿ ಕೇಳು ತಾತಾ... ಅಲ್ಲಿ ಆ ಊರಲ್ಲಿ ದೊಡ್ಡದಾದ ಕೆರೆ, ಊರ ಮುಂದೆ ಪ್ರೆಶ್ ಆಗಿ ಹರಿಯುವ ನದಿ. ಆ ಊರ ಮಕ್ಕಳು ಕೇಕೆ ಹಾಕುತ್ತಾ ಸಂತೋಷದಿಂದ ಈಸುವುದನ್ನು ನೋಡುವುದೇ ಚೆಂದ. ಇಲ್ಲಿ ನಮ್ಮನೇಲಿ ಒಂದೇ ಒಂದು ಚಿಕ್ಕ ಸ್ವಿಮಿಂಗ್ ಪೂಲ್ ಇದೆ ಅಷ್ಟೇ.. ನಾನೊಬ್ಬನೇ ಸ್ವಿಮ್ ಮಾಡಬೇಕು  ಬೇಜಾರು. ಆ ಮಕ್ಕಳಿಗಾಗುವ ಆನಂದ ಇಲ್ಲಿ ಈ ಕ್ಲೋರಿನ್ ಮಿಶ್ರಿತ ನಿಂತ ನೀರಲ್ಲಿ ಇಲ್ಲ ಬಿಡು ತಾತಾ”

“ತಾತಾ ಆ ಊರಲ್ಲಿ ಆಟವಾಡಲು ದೊಡ್ಡ ಆಟದ ಮೈದಾನವೇ ಇತ್ತು. ಅಲ್ಲಿಯ ಮಕ್ಕಳು ಬುಗುರಿ, ಲಗೋರಿ, ಕೊಕೋ ಕುಂಟಾವಿಲ್ಲೆ, ಚಿನ್ನಿದಾಂಡು ಅಂತಾ ಅದೆಷ್ಟೋ ಬಗೆಯ ಆಟಗಳನ್ನು ಗುಂಪುಗುಂಪಲ್ಲಿ ಆಡಿ ಕೇಕೇ ಹಾಕುತ್ತಾ ಸಂತಸ ಪಡುತ್ತಿದ್ದರು. ಆದರೆ ಇಲ್ಲಿ ಮನೆಯ ಕಂಪೌಂಡ್ ದಾಟಿ ಹೋಗಲೂ ನನಗೆ ಪರ್ಮಿಶನ್ ಇಲ್ಲ. ಅಂತಹ ಆಟಗಳನ್ನ ಶಾಲೆಯಲ್ಲಿಯೂ ಆಡಿಸೋದಿಲ್ಲ. ನನಗಂತೂ ಅಲ್ಲಿಯೇ ಆ ಮಕ್ಕಳ ಜೊತೆಗೆ ಆಟವಾಡುತ್ತಾ ನಲಿಯುವ ಆಸೆ.. ಆದರೆ ನೀನು ಬಿಡದೇ ಎಳೆದುಕೊಂಡು ಬಂದೆ.. ಬ್ಯಾಡ್ ತಾತಾ ನೀನು..”

“ತಾತಾ ನೀನು ಗಮನಿಸಿದೆಯಾ, ರಾತ್ರಿಯಾದರೆ ಆ ಊರ ಆಗಸದಲ್ಲಿ ಅದೆಷ್ಟು ನಕ್ಷತ್ರಗಳು ಸ್ಪಷ್ಟವಾಗಿ ಮಿನುಗುತ್ತಿದ್ದವು ಎಂದು. ನೋಡೋಕೆ ನೂರು ಕಣ್ಣು ಸಾಲದು ತಾತಾ. ಆದರೆ ಇಲ್ಲಿ ನಮ್ಮನೆಯ ಟೆರೇಸ್ ಮೇಲೆ ಬರೀ ಲೈಟ್ಸ್ ಗಳೇ  ತುಂಬಿವೆ. ನಕ್ಷತ್ರಗಳು ಹೊಳಪನ್ನೇ ಕಳೆದುಕೊಂಡಿವೆ. ಪ್ರತಿರಾತ್ರಿ ನಕ್ಷತ್ರಗಳ ನೋಡುತ್ತಾ ಆನಂದಿಸುವ ಆ ಊರಿನ ಜನರು ಅದೆಷ್ಟು ಅದೃಷ್ಟವಂತು ಅಲ್ಲವೇ ತಾತಾ”

“ತಾತಾ ಅಲ್ಲಿಯ ಮಕ್ಕಳು ಅಪ್ಪ ಅಮ್ಮ ಅಣ್ಣ ತಮ್ಮ ಅಕ್ಕ ತಂಗಿ ಚಿಕ್ಕಪ್ಪ ಚಿಕ್ಕಮ್ಮ ಹೀಗೆ ಇಡೀ ಕುಟುಂಬ ಸಮೇತ ಖುಷಿಯಾಗಿದ್ದರು. ಆದರೆ ಇಲ್ಲಿ ನಮ್ಮಪ್ಪ ನಾನು ಮಲಗಿದ ನಂತರ ಮನೆಗೆ ಬರುತ್ತಾರೆ. ಅಮ್ಮ ಕ್ಲಬ್ ನಿಂದ ವಾಪಸ್ ಬರುವುದರೊಳಗೆ ನನ್ನ ಊಟ ಮುಗಿದಿರುತ್ತದೆ. ನೀನೋ ನಿನ್ನ ಗೆಳೆಯರ ಜೊತೆಗೆ ಟೆರೆಸ್ನಲ್ಲಿ ಇಸ್ಪೆಟ್ ಆಡ್ತಿರ್ತೀಯಾ. ಅಜ್ಜಿ ಯಾವಾಗಲೂ ಟಿವಿ ನೋಡ್ತಾ ಇರ್ತದೆ. ನಾನು ಒಬ್ಬಂಟಿ ಎನ್ನುವ ಪೀಲ್ ಬರ್ತಿದೆ ತಾತಾ. ನಾನು ಆ ಹಳ್ಳಿಯಲ್ಲೇ ಹುಟ್ಟಿದ್ದರೆ ಚೆನ್ನಾಗಿತ್ತು ಎಂದೆನ್ನಿಸುತ್ತಿದೆ.

“ನಿನಗೆ ಗೊತ್ತಾ ತಾತಾ.. ನಾವು ಕಾಳು ಬೇಳೆ ಹಾಲು ತರಕಾರಿ ಹೀಗೆ ಎಲ್ಲವನ್ನೂ ಕೊಂಡುಕೊಳ್ಳುತ್ತೇವೆ. ಆದರೆ ಆ ಊರಿನ ಜನ ಅವುಗಳನ್ನು ತಾವೇ ಬೆಳೆಯುತ್ತಾರೆ. ತಾವೂ ತಿಂದು ನಮಗಾಗಿಯೂ ಮಾರ್ಕೆಟ್ ಗೆ ಕಳಿಸುತ್ತಾರೆ. ಅವರು ಎಷ್ಟು ಗ್ರೇಟ್ ಅಲ್ವಾ ತಾತಾ. ನಿಜವಾದ ಶ್ರೀಮಂತರು ನಾವಲ್ಲ ತಾತಾ. ಅವರು.. ಆ ಹಳ್ಳಿಯ ಜನ. ಅವರಲ್ಲಿ ಹಣ ಸಂಪತ್ತುಗಳು ಇರದೇ ಇರಬಹುದು ಆದರೆ ಆನಂದ ನೆಮ್ಮದಿಗಳಿವೆ. ನಮಗೆ ಅವುಗಳ ಕೊರತೆ ಇದೆ ಅಲ್ವಾ”

ಮೊಮ್ಮಗ ತನ್ನ ಹಳ್ಳಿಯ ಪ್ರವಾಸದ ಕಥನವನ್ನು ವಿವರಿಸಿ ಹೇಳುತ್ತಿದ್ದ. ಮೊಮ್ಮಗನಿಗೆ ಬಡತನದ ನೋವನ್ನೂ ಹಾಗೂ ಸಿರಿತನದ ಅನುಕೂಲತೆಗಳ ಕುರಿತು ಅರಿವು ಮೂಡಿಸಲು ಹೊರಟಿದ್ದ ತಾತನಿಗೆ ಮೊಮ್ಮಗನ ಮಾತುಗಳನ್ನು ಕೇಳಿ ಜ್ಞಾನೋದಯವಾದಂತಾಯಿತು. ಮೊಮ್ಮಗನನ್ನು ಬರಸೆಳೆದು ಅಪ್ಪಿಕೊಂಡು

“ಹೌದು ಕಂದಾ, ನೀನು ಇಂದು ನನ್ನ ಕಣ್ಣು ತೆರೆಸಿದೆ. ಹಣ ಸಂಪತ್ತು ಸವಲತ್ತುಗಳೇ ಬದುಕಿಗೆ ಮುಖ್ಯ ಎಂದು ತಿಳಿದು ಇಷ್ಟು ವರ್ಷಗಳ ಕಾಲ ನೆಮ್ಮದಿಯ ಬದುಕಿನಿಂದ ದೂರವಾಗಿದ್ದೆ. ಇನ್ಮೇಲಾದರೂ ಬದಲಾಗಬೇಕಿದೆ. ನನ್ನ ಹಳ್ಳಿಗೆ ಹೋಗಿ ಬಾಕಿ ಬದುಕನ್ನು ಸಂತಸದಿಂದ ಕಳೆಯುವೆ. ರಜೆ ಇದ್ದಾಗ ನೀನು ನನ್ನ ಜೊತೆ ಬಂದು ಇರ್ತೀಯಲ್ವಾ..” ಎಂದಾಗ ತಾತನ ಕಣ್ಣಾಲಿಗೆಯಲ್ಲಿ ಪಶ್ಚಾತ್ತಾಪದ ಕಣ್ಣಹನಿಗಳು ಮೊಮ್ಮಗನ ಕೇಕೆಯಲ್ಲಿ ಕರಗಿಹೋದವು.


ಕಥೆ ಇಷ್ಟೇ.. ಆದರೆ ಇದರ ವ್ಯಾಪ್ತಿ ತುಂಬಾನೇ ದೊಡ್ಡದು. ಹಳ್ಳಿಯಲ್ಲಿ ಏನಿದೆ ಎಂದು ಪಟ್ಟಣಕ್ಕೆ ಹೋಗಿ ಸಾಗರ ಸೇರಿದ ನದಿ ತನ್ನ ಅಸ್ತಿತ್ವನ್ನೇ ಕಳೆದುಕೊಂಡಂತೆ ಬದುಕುವ ಎಲ್ಲರಿಗೂ ಈ ಕಥೆಯೊಂದು ಪಾಠ. ಸಂಪಾದನೆಯ ಹಿಂದೆ ಹೋಗಿ ಸಂತಸವನ್ನು ಕಳೆದುಕೊಂಡ ಪ್ರತಿಯೊಬ್ಬರು ಯೋಚನೆ ಮಾಡಬೇಕಿದೆ. ಹುಟ್ಟಿದ ಹಳ್ಳಿಯನ್ನು ತೊರೆದು ಪಟ್ಟಣಕ್ಕೆ ಹೋಗಿ ನಿಜ ನೆಮ್ಮದಿಯನ್ನು ಕಳೆದುಕೊಂಡು ಕೃತಕ ಪರಿಸರದಲ್ಲಿ ಜೀವಿಸುತ್ತಾ ಅದೇ ಬದುಕು ಎಂಬ ಭ್ರಮೆಯಲ್ಲಿರುವ ಎಲ್ಲರೂ ಆಲೋಚಿಸಬೇಕಿದೆ. ಅದೆಷ್ಟೇ ಶ್ರೀಮಂತಿಕೆ ಇದ್ದರೂ ನೆಮ್ಮದಿ ಎನ್ನುವುದು ಐಷಾರಾಮಿ ವಸ್ತುಗಳಲ್ಲಿ ಇಲ್ಲ, ಕಾರು ಬಂಗಲೆಗಳಲ್ಲಿ ಇಲ್ಲ. ಸೂಟು ಕೋಟುಗಳಲ್ಲಿ ಇಲ್ಲ. ಇದೆಲ್ಲಾ ಇಲ್ಲದವರು ಬಡವರೂ ಅಲ್ಲ. ಕೂಡಿ ಬಾಳುವಲ್ಲಿ, ಹಂಚಿ ತಿನ್ನುವುದರಲ್ಲಿ, ಗುಂಪಾಗಿ ಅಟೋಟಗಳಲ್ಲಿ ತೊಡಗಿಕೊಳ್ಳುವುದರಲ್ಲಿ, ಹಬ್ಬ ಹರಿದಿನಗಳನ್ನು ಊರವರ ಜೊತೆ ಸೇರಿ ಸಂಭ್ರಮಿಸುವುದರಲ್ಲಿ, ಒಬ್ಬರ ಕಷ್ಟ ಸುಖಕ್ಕೆ ಇನ್ನೊಬ್ಬರು ಆಗುವುದರಲ್ಲಿ ಸಂತಸವಿದೆ, ಸಿರಿತನವಿದೆ, ನೆಮ್ಮದಿ ಇದೆ. ದುಡ್ಡೇ ದೊಡ್ಡಪ್ಪ ಎನ್ನುವ ದೊಡ್ಡವರ ಆಸೆ ದುರಾಸೆಗಳನ್ನು ಬದಿಗಿಟ್ಟು, ನೆಮ್ಮದಿ ಆನಂದವೇ ಸಿರಿತನಕ್ಕೂ ಅಪ್ಪ ಎನ್ನುವ ಮಕ್ಕಳ ದೃಷ್ಟಿಕೋನವನ್ನು ಅರ್ಥಮಾಡಿಕೊಂಡಾಗ ಮಾತ್ರ ಮನುಷ್ಯರಾಗಲು ಸಾಧ್ಯ. ಜೀವನವನ್ನು ಸಾರ್ಥಕವಾಗಿ ಬದುಕಲು ಸಾಧ್ಯ. ಸಂಪಾದನೆಯೊಂದೇ ಬದುಕಾದರೆ ನಿಜವಾದ ಸುಖ ಶಾಂತಿ ನೆಮ್ಮದಿ ನೈವೇದ್ಯ.

-ಶಶಿಕಾಂತ ಯಡಹಳ್ಳಿ  

 

 
 

 

ಸೋಮವಾರ, ಏಪ್ರಿಲ್ 24, 2023

ನಾಯಿ ಕಥೆ ರಾಯರ ಜೊತೆ..

 


ನಾಯಿ ಕಥೆ ರಾಯರ ಜೊತೆ..

ಇದೊಂದು ನಾಯಿ ಕಥೆ..

ಅವತ್ತು ಬೆಳಿಗ್ಗೆ ರಾಯರು ಪ್ರತಿದಿನದಂತೆ ವಾಯುಸೇವನೆಗೆ ಹೊರಟಿದ್ದರು. ಯಾರೋ ಹಿಂಬಾಲಿಸುತ್ತಿದ್ದಾರೆಂಬ ಅನುಮಾನ ಬಂದು ಹಿಂತಿರುಗಿ ನೋಡಿದರೆ ಯಕಶ್ಚಿತ್  ಕಂತ್ರಿ ನಾಯಿ.

 “ಏ ಥೂ ನಾಯಿ.. ತೊಲಗಾಚೆ “ ಎಂದು ಕ್ಯಾಕರಿಸಿ ಉಗಿದು ಮುಂದೆ ನಡೆದರು.

“ಇರಿ.. ಸ್ವಲ್ಪ ನಿಲ್ಲಿ ರಾಯರೇ” ಎಂದು ಯಾರೋ ಹಿಂದಿನಿಂದ ಕರೆದಂತಾಯ್ತು. ಯಾರು ಎಂದು ಹಿಂತಿರುಗಿ ನೋಡಿದರೆ ಯಾರೂ ಇಲ್ಲ. ಅದೇ ನಾಯಿ ಬಾಲ ಅಲ್ಲಾಡಿಸುತ್ತಾ ಕರುಣೆಯಿಂದ ನೋಡುತ್ತಿತ್ತು.

“ರಾಯರೇ ನಮಸ್ಕಾರ. ನಿಮಗೆ ಬೆಳಗಿನ ವಂದನೆಗಳು” ಎಂದಿತು.

ರಾಯರಿಗೆ ಅಚ್ಚರಿ. ಅರೆ ನಾಯಿ ಮಾತಾಡ್ತಿದೆಯಲ್ಲಾ. ಹತ್ತಿರ ಹೋಗಲು ಹೆದರಿಕೆ. ಕಚ್ಚಿ ಬಿಟ್ಟರೆ ಏನು ಗತಿ ಎಂಬ ಆತಂಕ.

“ಎನೂ ಹೆದರಬೇಡಿ ರಾಯರೇ ನಾನೇನು ನಿಮ್ಮನ್ನು ಕಚ್ಚುವುದಿಲ್ಲ. ಅಷ್ಟಕ್ಕೂ ಸುಮ್ಮಸುಮ್ಮನೇ ಕಚ್ಚುವುದು ನಾಯಿಕುಲದ ಸ್ವಭಾವವೂ ಅಲ್ಲ, ಸ್ವಲ್ಪ ನಿಲ್ಲಿ ನನ್ನ ಮಾತು ಕೇಳಿ” ಎಂದಿತು ಶ್ವಾನ.

ವಿಸ್ಮಯಗೊಂಡು ನಿಂತಲ್ಲೇ ನಿಂತ ರಾಯರು “ ಏನು ಬೇಕು ನಿನಗೆ.. ಥೂ ಹೋಗಾಚೆ.., ಉಳ್ಳವರು ಶ್ರೀಮಂತರು ಸೂಟುಬೂಟುದಾರಿಗಳು ಬಂದರೆ ಬಾಲ ಅಲ್ಲಾಡಿಸುವ ನೀನು ನನ್ನಂತಹ ಬಡವರು ಬಂದರೆ ಬೊಗಳಿ ಬೆದರಿಸಿ ಓಡಿಸುವೆ. ಈಗ ನೋಡಿದರೆ ಮನುಷ್ಯರಂತೆಯೇ ಮಾತಾಡ್ತಿದ್ದೀ, ಏನು ಕಾಲ ಕೆಟ್ಟಿದೆಯಪ್ಪಾ ” ಎಂದು ಗದರಿದರು.

“ರಾಯರೆ ನಾವು ನಾಯಿಗಳು ನೀವು ಅಂದುಕೊಂಡಷ್ಟು ಕೆಟ್ಟವರಂತೂ ಖಂಡಿತಾ ಅಲ್ಲಾ. ನಿಮ್ಮ ಹಾಗೆ ಮೇಲು ಕೀಳು ತಾರತಮ್ಯಗಳು ಶ್ವಾನ ಜಾತಿಯಲ್ಲಿ ಇಲ್ಲ. ನಿಮ್ಮಂತೆ ದುರಾಸೆಗಳೂ ನಮಗಿಲ್ಲ” ಎಂದ ಶ್ವಾನದ ಮಾತು ಕೇಳಿ ಕೆರಳಿದ ರಾಯರು

“ಏನು ಏನೆಂದೆ.. ನನಗೆ ಬುದ್ದಿ ಹೇಳ್ತಿದ್ದೀಯಾ.. ನೀಚ ನಾಯಿ.. “ ಎಂದು ಕೈಎತ್ತಿ ಹೊಡದಂತೆ ಮಾಡಿದರು.

“ಯಾಕೆ ರಾಯರೇ ನಿಜ ಹೇಳಿದರೆ ಕೋಪ ನಿಗುನಿಗುರಿ ಬುಗುರಿಯಂತೆ ತಿರುಗುತ್ತದೆ. ನಿಮ್ಮ ಹಾಗೆ ಮನೆಕಟ್ಟಿಕೊಳ್ಳುವ ಬಯಕೆ ನಮಗಿಲ್ಲ. ಆಸ್ತಿ ಅಂತಸ್ತು ಮಾಡಿಕೊಳ್ಳುವ ಆಸೆಗಳೂ ಇಲ್ಲ. ಹಣ ಬಂಗಾರದ ಗೊಡವೆಗಳು ನಮಗೆ ಬೇಕಿಲ್ಲ. ಬದುಕುವುದಕ್ಕಾಗಿ ತಿನ್ನುತ್ತೇವೇಯೇ ಹೊರತು ನಾಳೆಗೆ ನಮಗೆ ನಮ್ಮ ಸಂತಾನಕ್ಕೆ ಇರಲಿ ಎಂದು ಏನನ್ನೂ ಕೂಡಿಡುವುದಿಲ್ಲ” ಎಂದು ಲೇವಡಿ ಮಾಡಿ ಬಾಲ ಅಲ್ಲಾಡಿಸಿತು ಶ್ವಾನ.

ಅವಮಾನಕ್ಕೊಳಗಾದಂತೆ ಕನಲಿ ಕೆಂಡವಾದ ರಾಯರು “ ಥೂ.. ಶ್ರೇಷ್ಟರಾದ ಮನುಷ್ಯರ ಕುರಿತು ಯಕಶ್ಚಿತ್ ನಾಯಿಯಾದ ನೀನು ಬಾಯಿಗೆ ಬಂದಂತೆ  ಬೊಗಳುತ್ತೀಯಾ..?

“ ಇದೇ ಬೇಡಾ ಎನ್ನುವುದು. ಈ ಶ್ರೇಷ್ಟತೆಯ ವ್ಯಸನವೇ ನಿಮ್ಮನ್ಮು ದುರಹಂಕಾರಿಯಾಗಿ ಮಾಡಿದ್ದು. ನೀವು ಮಾತಾಡುತ್ತೀರಿ, ನಾವೂ ಮಾತಾಡುತ್ತೇವೆ. ನಿಮ್ಮದು ಮಾತೇ ಭಾಷೆಯಾದರೆ ನಮ್ಮದು ಬೊಗಳುವುದೇ ಭಾಷೆ. ನಮ್ಮದು ಆಸೆ, ದುರಾಸೆ, ಮಡಿಹುಡಿ ಮೌಢ್ಯಗಳಿಲ್ಲದ ಸರಳ ಬದುಕು. ನಿಮ್ಮದು ನಂಬಿಕೆ ಅಪನಂಬಿಕೆ ದುರಾಲೋಚನೆ ಅಹಮಿಕೆ ಇರುವ ಬದುಕು. ನಾಯಿಯಾದರೂ ನೆಮ್ಮದಿಯ ಬದುಕು ನಮ್ಮದು. ಬುದ್ದಿ ಭಾಷೆ ಇರುವ ನೀವುಗಳೋ ನೆಮ್ಮದಿಯೇ ಇಲ್ಲದೇ ಅಲೆದಾಡುವ ಅತೃಪ್ತ ಆತ್ಮಗಳಂತಹ ಬದುಕು. ಹೌದೋ ಅಲ್ಲವೋ ಯೋಚನೆ ಮಾಡಿ ರಾಯರೇ” ಎಂದು ಹೇಳಿದ ನಾಯಿ ಕಿವಿ ನಿಮಿರಿಸಿ ಉತ್ತರಕ್ಕಾಗಿ ಕಾಯತೊಡಗಿತು.

ಈಗ ರಾಯರು ಚಿಂತೆಗೆ ಬಿದ್ದರು. ಮುಂದಕ್ಕೆ ತಿರುಗಿ ಹೆಜ್ಜೆ ಹಾಕುತ್ತಾ ಯೋಚಿಸಲು ಶುರುಮಾಡಿದರು. “ಹೌದಲ್ಲಾ.. ಎಷ್ಟೇ ತಿಂದರೂ, ಅದೆಷ್ಟೇ ಸಂಪಾದಿಸಿದರೂ ತೃಪ್ತಿ ಅನ್ನುವುದೇ ಇಲ್ಲವಲ್ಲಾ ನಮಗೆ. ಬೇಕು ಇನ್ನೂ ಬೇಕು ಎನ್ನುವ ಬೇಡಿಕೆಗಳಲ್ಲಿಯೇ ಬದುಕು ಸವೆಯುತ್ತಿದೆಯಲ್ಲಾ. ಒಂದೇ ಒಂದು ದಿನವೂ ನಾಳೆಯ ಚಿಂತೆ ಇಲ್ಲದೇ ನಿದ್ದೆ ಮಾಡಿದ್ದೇ ಇಲ್ಲವಲ್ಲಾ.. ಈ ನಾಯಿ ಹೇಳುವ ಹಾಗೆ ನಮಗಿಂತಲೂ ನಾಳೆಯ ಚಿಂತೆ ಇಲ್ಲದ ಈ ಶ್ವಾನಗಳೇ ತೃಪ್ತ ಜೀವಿಗಳಾ, ಇವುಗಳಿಗೆ ದೇವರು ಧರ್ಮ ಕರ್ಮಗಳ ಭಯವಿಲ್ಲ, ಕೂಡಿ ಹಾಕಬೇಕೆಂಬ ದುರಾಸೆಗಳಿಲ್ಲ, ವರ್ತಮಾನದಲ್ಲಿ ಸ್ವಾರ್ಥರಹಿತವಾಗಿ ಬದುಕಿ ಒಂದು ದಿನ ಸಾಯುತ್ತವೆ. ನಮಗೂ ಸಾವು ತಪ್ಪಿದ್ದಲ್ಲ. ಆದರೆ ಬದುಕಿದ್ದಾಗ ಸ್ವಾರ್ಥಕ್ಕಾಗಿ, ಸಂಪತ್ತಿಗಾಗಿ, ಸಂಪಾದನೆಗಾಗಿ ಏನೆಲ್ಲಾ ಮಾಡುತ್ತೇವೆ. ಅದಕ್ಕಾಗಿ ಎಷ್ಟೊಂದು ಸುಳ್ಳು, ವಂಚನೆ, ನಂಬಿಕೆದ್ರೋಹಗಳನ್ನು ಮಾಡುತ್ತೇವೆ. ಛೇ.. ಮನುಷ್ಯರಿಗಿಂತ ಪ್ರಾಣಿ ಪಕ್ಷಿಗಳ ಜೀವನವೇ ತೃಪ್ತಿದಾಯಕವಾ..” ಎಂದು ಯೋಚಿಸುತ್ತಾ ಹಿಂತಿರುಗಿ ನೋಡಿದರೆ ಅಲ್ಲೇನಿದೆ.. ಹಿಂಬಾಲಿಸುತ್ತಿದ್ದ ನಾಯಿಯೂ ಮಾಯವಾಗಿದೆ. ರಾಯರ ಮನದೊಳಗಿನ ಅರಿವು ಜಾಗೃತವಾಗಿದೆ.

-ಶಶಿಕಾಂತ ಯಡಹಳ್ಳಿ.

ಸುಳ್ಳು ಸತ್ಯಗಳ ನಡುವೆ ಸಾಧನೆ ಮತ್ತು ಸಾವು :

 


ಸುಳ್ಳು ಸತ್ಯಗಳ ನಡುವೆ ಸಾಧನೆ ಮತ್ತು ಸಾವು :

ಅದೊಂದು ಶ್ರೀಮಂತ ಕುಟುಂಬ. ಬಹುದಿನಗಳ ನಂತರ ಮಗುವೊಂದು ಹುಟ್ಟಿದ್ದರಿಂದ ಮನೆಯಲ್ಲಿ ಸಂಭ್ರಮ. ಮಗುವಿನ ಭವಿಷ್ಯ ಹೇಳಲು ಹಲವಾರು ಜ್ಯೋತಿಷಿಗಳನ್ನು ಕರೆಸಲಾಯಿತು.  ಒಬ್ಬ ಹೇಳಿದ “ಈ ಮಗುವಿನ ಮುಖದ ಕಾಂತಿ ಅದ್ಬುತ. ಬಲು ದೊಡ್ಡ ನಾಯಕನಾಗುವುದು ಖಂಡಿತ”. ಇದನ್ನು ಕೇಳಿ ಖುಷಿಗೊಂಡ ಹೆತ್ತವರು ಹೆಮ್ಮೆಯಿಂದ ಬೀಗಿ ಕಾಣಿಕೆಯನ್ನು ಕೊಟ್ಟು ಸನ್ಮಾನಿಸಿದರು.

ಇನ್ನೊಬ್ಬ ಮಗುವನ್ನು ನೋಡಿ ನುಡಿದ.. “ಅದೆಂತಾ ದಿವ್ಯ ಕಳೆ ಮಗುವಿನ ಮುಖದಲ್ಲಿ ಹೊಳೆಯುತ್ತಿದೆ. ಇಡೀ ಜಗತ್ತಿಗೆ ಬೆಳಕಾಗುವ ದಾರ್ಶನಿಕನಾಗುವುದರಲ್ಲಿ ಸಂದೇಹವೇ ಇಲ್ಲ”. ಅವನಿಗೂ ಸನ್ಮಾನ ಮಾಡಿ ಕಾಣಿಕೆ ಕೊಡಲಾಯ್ತು. ಹೀಗೆ ಬಹುತೇಕ ಜ್ಯೋತಿಷಿಗಳು ಸನ್ಮಾನ ಕಾಣಿಕೆಗಳಿಗೆ ಮರುಳಾಗಿ ಮಗುವಿನ ಬಗ್ಗೆ ಹೊಗಳಿಕೆಯ ಮಾತುಗಳನ್ನೇ ಆಡಿ ಕೊಡುಗೆಗಳನ್ನು ಪಡೆದು ಕೃತಾರ್ಥರಾದರು.

ಆದರೆ ಕೊಟ್ಟ ಕೊನೆಗೆ ಪಕೀರನಂತೆ ಕಾಣುವವನೊಬ್ಬ ಮಗುವನ್ನು ಹಾಗೂ ಅದರ ಹೆತ್ತವರನ್ನು ಕೂಲಂಕುಷವಾಗಿ ಪರಿಶೀಲಿಸಿ “ಈ ಮಗು ಮುಂದೆ ಏನಾಗುತ್ತದೆ ಎಂಬುದನ್ನು ಸಮಯ ಸಂದರ್ಭಗಳು ಮಾತ್ರ ನಿರ್ಧರಿಸಲು ಸಾಧ್ಯ.. ಒಂದಂತೂ ಸತ್ಯ ಈ ಮುಗುವಿನ ಕುರಿತು ಹೇಳಬಹುದಾದ ಅಂತಿಮ ಸತ್ಯವೇನೆಂದರೆ ಸಾವು ಮಾತ್ರ ಖಚಿತ..”

ಶುಭ ಸಂದರ್ಭದಲ್ಲಿ ಅಶುಭ ಮಾತಾಡ್ತೀಯಾ ಪಾಪಿ ಪಕೀರಾ ಎಂದವರೇ ಅಲ್ಲಿ ನೆರೆದವರೆಲ್ಲ ಸೇರಿ ಆಳಿಗೊಂದು ಏಟು ಹಾಕಿದರು. ಗಾಯಗೊಂಡ ಪಕೀರ ಎಲ್ಲರಿಂದ ಬಿಡಿಸಿಕೊಂಡು ಅಲ್ಲಿಂದ ಹೋಗುವ ಮುನ್ನ ಹೇಳಿದ್ದೇನೆಂದರೆ. “ ಕೇಳು ಶ್ರೀಮಂತ.. ಸುಳ್ಳು ಮತ್ತು ಸತ್ಯದ ನಡುವಿನ ವ್ಯತ್ಯಾಸ ಇಷ್ಟೇ.. ಸುಂದರವಾದ ಸಿಹಿ ಸುಳ್ಳು ಸನ್ಮಾನಿಸಲ್ಪುಡುತ್ತದೆ. ಆದರೆ ಸತ್ಯ ಯಾವಾಗಲೂ ಕಹಿಯಾಗಿದ್ದು ಶಿಕ್ಷಿಸಲ್ಪಡುತ್ತದೆ. ಇಲ್ಲಿರುವ ಎಲ್ಲರೂ ಸುಳ್ಳಿನಿಂದ ಆಗಬಹುದಾದ ಲಾಭಕ್ಕಾಗಿ ಮಾತ್ರ.  ಏಕ ಕಾಲಕ್ಕೆ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ  ನಾಯಕ, ದಾರ್ಶನಿಕ, ಐಶ್ವರ್ಯವಂತ, ಮಹಾದಾನಿ, ಕಲಾಕಾರ, ಸಾಹಸಿ, ದಯಾಳು, ರಾಜ, ಚಕ್ರವರ್ತಿ ಯಾಗಲು ಅದು ಹೇಗೆ ಸಾಧ್ಯ?. ಆದರೆ ಎಲ್ಲರ ಬದುಕಿನ ಅಂತಿಮ ಸತ್ಯ ಒಂದೇ ಅದು ಸಾವು.. ಸಾವು.. ಇಂದಿಲ್ಲ ನಾಳೆ ಸಾಯಲೇ ಬೇಕು ನಾವು ನೀವು..” 

ಬದುಕು ಅನ್ನೋದು ಇಷ್ಟೇ.. ಯಾರು ಮುಂದೆ ಏನಾಗುತ್ತಾರೆ ಎಂಬುದನ್ನು ಯಾವುದೇ ಭವಿಷ್ಯವಾಣಿಯಾಗಲೀ, ಜ್ಯೋತಿಷ್ಯ ಶಾಸ್ತ್ರವಾಗಲೀ ನಿರ್ಧರಿಸಲು ಸಾಧ್ಯವೇ ಇಲ್ಲ. ಸಾಧ್ಯವಾಗುವುದೇ ದಿಟವಾಗುವುದಿದ್ದರೆ ಜ್ಯೋತಿಷಿಗಳೇ ದೇವರುಗಳಾಗುತ್ತಿದ್ದರು. ಮುಂದಾಗಬಹುದಾಗುವುದು ನಿಖರವಾಗಿ ಮೊದಲೇ ಗೊತ್ತಾಗುವಂತಿದ್ದರೆ ಪ್ರತಿಯೊಬ್ಬ ಮನುಷ್ಯರು ಭಾವೀ ಭವಿಷ್ಯವನ್ನು ವರ್ತಮಾದಲ್ಲಿಯೇ ಬದಲಾಯಿಸಿಕೊಂಡು ನೆಮ್ಮದಿಯಾಗಿರಬಹುದಾಗಿತ್ತು. ಗೌತಮ ಬುದ್ದರು ಹೇಳಿದ ಹಾಗೆ “ಜ್ಯಾತಸ್ಯ ಮರಣಂ ದೃವಂ” ಎಂಬುದೊಂದೇ ಅಂತಿಮ ಸತ್ಯ. ತಾನು ಮುಂದೆ ಏನಾಗಬೇಕು ಎಂಬುದನ್ನು ಜ್ಯೋತಿಷ್ಯ ಭವಿಷ್ಯಗಳನ್ನು ಕೇಳಿ ಯಾರಿಗೂ ನಿರ್ಧರಿಸಿ ಮುನ್ನಡೆಯಲು ಸಾಧ್ಯವೂ ಇಲ್ಲಾ, ಸಾಧುವೂ ಅಲ್ಲ.

ಹುಟ್ಟಿದ ಪ್ರತಿ ವ್ಯಕ್ತಿ ವರ್ತಮಾನದಲ್ಲಿ ತನ್ನ ಸ್ವಸಾಮರ್ಥ್ಯ, ಬದಲಾಯಿಸಿಕೊಳ್ಳಬಹುದಾದ ವ್ಯಕ್ತಿತ್ವ, ಸತತ ಪ್ರಯತ್ನಗಳಿಂದ ಮಾತ್ರ ತನ್ನ ಭವಿಷ್ಯವನ್ನು ತಾನೇ ನಿರ್ಧರಿಸಿಕೊಂಡು ಸಾಧನೆಯತ್ತ ಸಾಗಿ ಇಟ್ಟ ಗುರಿಯನ್ನು ಮುಟ್ಟಬಹುದಾಗಿದೆ. ಅದಕ್ಕಾಗಿ ಸೂಕ್ತ ದಾರಿಗಳನ್ನು ಕಂಡುಕೊಳ್ಳಬೇಕಾಗಿದೆ. ಪ್ರತಿ ವ್ಯಕ್ತಿಯ ಸಾಧನಗೆ ಪೂರಕವಾಗಿ ಆತನ ಹೆತ್ತವರು, ಗೆಳೆಯರು, ಬಂಧು ಬಾಂಧವರು ಒಂದಿಷ್ಟು ಸಹಾಯ ಮಾಡಬಹುದಾಗಿದೆ. ಯಾರು ಕುದುರೆಗೆ ಅದೆಷ್ಟೇ ಪರಿಶುದ್ಧ ನೀರನ್ನು ಕುಡಿಯಲು ಸಲಹೆ ಕೊಟ್ಟು ನೀರನ್ನು ಮುಂದಿಟ್ಟರೂ ಕೊನೆಗೂ ಕುಡಿಯ ಬೇಕಾದದ್ದು ಕುದುರೆಯೇ ಆಗಿದೆ. ಬಲವಂತದ ಉಪದೇಶ, ಬಲವಂತದಿ ಗುರಿ ಸಾಧನೆಯ ಆದೇಶಗಳು ಉದ್ದೇಶಿತ ಪರಿಣಾಮಗಳನ್ನು ಸಾಧಿಸಲಾರವು.

ಹೊಳಪುಳ್ಳ ಹೊಗಳಿಕೆಗಳು ದಾರಿತಪ್ಪಿಸುವ ಸಾಧನಗಳಾಗಿವೆ ಹಾಗೂ ಕಹಿಯಾದರೂ ಸತ್ಯವೆನ್ನುವುದು ಸಾಧನೆಯ ಹಾದಿಯಲ್ಲಿ ದಾರಿದೀಪವಾಗುತ್ತವೆ ಎನ್ನುವುದನ್ನು ಯಾವ ವ್ಯಕ್ತಿ ಅರಿತುಕೊಳ್ಳುತ್ತಾನೋ ಆತ ಸಾಧಕನಾಗುತ್ತಾನೆ. ಇಲ್ಲಿ ಈ ಜಗದಲ್ಲಿ ಯಾರು ಚಿರಂಜೀವಿಗಳಲ್ಲ, ಸಾವು ಎನ್ನುವ ಅನಿವಾರ್ಯ ಅಂತಿಮ ಸತ್ಯವನ್ನು ಅರ್ಥಮಾಡಿಕೊಂಡು ಇರುವಷ್ಟು ದಿನಗಳ ಕಾಲ ಹೇಗೆ ಸ್ವಾರ್ಥರಹಿತವಾಗಿ ಪರೋಪಕಾರಿಯಾಗಿ ಬಾಳಬೇಕು ಎನ್ನುವುದರಲ್ಲಿಯೇ ಜೀವನದ ಸಾರ್ಥಕತೆ ಇದೆ. ಸತ್ತನಂತರವೂ ಇದ್ದವರ ಮನದಲ್ಲಿ ಸಿಹಿ ನೆನಪಾಗಿ ಕಾಡುವುದರ ಮೂಲಕ ಸಾವಿಗೂ ಗೌರವವನ್ನು ತರಬಹುದಾದ ಸಾಧ್ಯತೆ ಮುಖ್ಯವಾಗುತ್ತದೆ. ಸಾವು ಎನ್ನುವ ಸತ್ಯದ ಕುರಿತು ಅಂತರಂಗದಲ್ಲಿರುವ ಪಕೀರ ಸದಾ ಎಚ್ಚರಿಸುತ್ತಲೇ ಬದುಕಿನ ಸಾರ್ಥಕತೆಗಳ ಬಗ್ಗೆ  ಮಾರ್ಗದರ್ಶನ ಮಾಡುತ್ತಲೇ ಇರಬೇಕಾಗುತ್ತದೆ. ಇದೇ ಜೀವನ.. ಇದುವೇ ಬದುಕಿನ ಪಯಣ.. ಅಂತಿಮವಾಗಿ ಬರುವುದಿದ್ದರೆ ಬರಲಿ ಬಿಡಿ ಮರಣ.

-ಶಶಿಕಾಂತ ಯಡಹಳ್ಳಿ.

 

 

ಶನಿವಾರ, ಏಪ್ರಿಲ್ 22, 2023

ಹತ್ಯಾಕಾಂಡದ ಆರೋಪಿಗಳು ಖುಲಾಸೆ; ಕಳೆದುಹೋಗುತ್ತಿದೆ ನ್ಯಾಯಾಂಗದ ಮೇಲಿನ ಭರವಸೆ.

ತಹ ತಹ…

 


ಹತ್ಯಾಕಾಂಡದ ಆರೋಪಿಗಳು ಖುಲಾಸೆ; ಕಳೆದುಹೋಗುತ್ತಿದೆ ನ್ಯಾಯಾಂಗದ ಮೇಲಿನ ಭರವಸೆ.

ಪ್ಯಾಸಿಸ್ಟ್ ಪ್ರಭುತ್ವದಲ್ಲಿ ಇಂತಹದ್ದೊಂದು ತೀರ್ಪು ನಿರೀಕ್ಷಿತವಾಗಿಯೇ ಇತ್ತು. ಆದರೆ ತುಂಬಾ ತಡವಾಗಿ ಪ್ರಕಟಗೊಂಡಿತು. ಈ ದೇಶ ಕಂಡ ಅತ್ಯಂತ ಹೀನಾತಿಹೀನ ಮತಾಂಧ ಹತ್ಯಾಕಾಂಡವೊಂದು ಘಟಿಸಿ 21 ವರ್ಷಗಳೇ ಸಂದಿವೆ. ಅಯೋಧ್ಯೆಯಿಂದ ಮರಳುತ್ತಿದ್ದ ಸಾಬರಮತಿ ರೈಲು ಗೋದ್ರಾದಲ್ಲಿ ಅಗ್ನಿದುರಂತಕ್ಕೊಳಗಾಗಿ ಕರಸೇವಕರು ಬಲಿಯಾದ ನಂತರ ಗುಜರಾತಿನಾದ್ಯಂತ ಆರಂಭವಾದ ಸಂಘಟಿತ ಪ್ರಭುತ್ವ ಪ್ರಾಯೋಜಿತ ಹಿಂಸಾಚಾರ ಅತ್ಯಂತ ಕ್ರೂರ ಹಾಗೂ ಅಮಾನವೀಯವಾಗಿತ್ತು. ಅದರ ಭಾಗವಾಗಿ 2002 ಎಪ್ರಿಲ್ 21 ರಂದು ಅಹಮದಾಬಾದ್ ನ ನರೋದಾ ಗಾಮ್ ನಲ್ಲಿ ಕೋಮುವಾದಿ ಮತಾಂಧರು ನಡೆಸಿದ ನರಮೇಧದಲ್ಲಿ 12 ವರ್ಷದ ಬಾಲಕಿಯೂ ಸೇರಿದಂತೆ ಮುಸ್ಲಿಂ ಸಮುದಾಯದ 11 ಜನರು ಬರ್ಭರವಾಗಿ ಹಾಡುಹಗಲೇ ಹತ್ಯೆಯಾಗಿದ್ದರು.

ಈ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಕಳೆದ 21 ವರ್ಷದಿಂದ 86 ಜನ ಕೊಲೆ ಆರೋಪಿತ ನರಹಂತಕರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಲೇ ಬಂದಿತ್ತು. ಈ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ ನೇಮಿಸಿದ ವಿಶೇಷ ತನಿಖಾ ತಂಡದಿಂದ ನಡೆಸಲಾಗಿತ್ತು. ಸುದೀರ್ಘ ಕಾಲದ ವಿಚಾರಣೆಯ ಅವಧಿಯಲ್ಲಿ 18 ಜನ ತೀರಿಕೊಂಡಿದ್ದರು. ಕೊನೆಗೂ ನಿನ್ನೆ ಅಹ್ಮದಾಬಾದ್ ವಿಶೇಷ ನ್ಯಾಯಾಲಯದಿಂದ ತೀರ್ಪು ಹೊರಬಿತ್ತು. ಹತ್ಯಾರೋಪಿಗಳಾದ ಎಲ್ಲಾ 67 ಜನರನ್ನು ದೋಷಮುಕ್ತರನ್ನಾಗಿಸಿ ಬಿಡುಗಡೆ ಮಾಡಲಾಯಿತು. ಹೀಗೆ ಬಿಡುಗಡೆಯಾದವರಲ್ಲಿ ಹತ್ಯಾಕಾಂಡ ನಡೆದಾಗ ಗುಜರಾತ್ ಸರಕಾರದಲ್ಲಿ ಸಚಿವೆಯಾಗಿದ್ದ ಮಾಯಾ ಕೊಡ್ನಾನಿ ಹಾಗೂ ಬಜರಂಗದಳದ ನಾಯಕ ಬಾಬು ಬಜರಂಗಿ ಸಹ ಸೇರಿದ್ದಾರೆ.


ನ್ಯಾಯದಾನ ಎಂದರೆ ಇದೇನಾ? ಈ ತೀರ್ಮಾನಕ್ಕೆ ಬರಲು ನ್ಯಾಯಾಂಗಕ್ಕೆ 21 ವರ್ಷ ಬೇಕಾಗಿತ್ತಾ? ಆರೋಪಿತರು ಅಪರಾಧಿಗಳು ಅಲ್ಲವೆಂದಾದರೆ ಹಾಡುಹಗಲೇ ನಡೆದ ಅಲ್ಪಸಂಖ್ಯಾತರ ಮಾರಣಹೋಮ ಮಾಡಿದವರು ಯಾರು? ತನಿಖಾ ಸಂಸ್ಥೆಗಳ ವೈಫಲ್ಯವಾ ಅಥವಾ ತನಿಖಾಧಿಕಾರಿಗಳೇ ನ್ಯಾಯಾಲಯದ ದಿಕ್ಕು ತಪ್ಪಿಸುತ್ತಿವೆಯಾ? ನ್ಯಾಯಾಧೀಶರ ಮೇಲೆ ಹೇರಲಾದ ಒತ್ತಡವಾ? ಸತ್ತವರು ಅಲ್ಪಸಂಖ್ಯಾತರು ಎಂಬ ನಿರ್ಲಕ್ಷವಾ? ಆಳುವ ಸರಕಾರದ ಹುನ್ನಾರವಾ? ಅಂತೂ ಇಂತೂ ನ್ಯಾಯಾಲಯದಲ್ಲಿ ನ್ಯಾಯದಾನ ಸಿಕ್ಕಲಿಲ್ಲ. ಸತ್ತವರಿಗೆ ಹಾಗೂ ಅವರ ಕುಟುಂಬದವರಿಗೆ ನ್ಯಾಯ ದೊರೆಯಲಿಲ್ಲ. ಹೋಗಲಿ ಮೇಲಿನ ಕೋರ್ಟಿಗಾದರೂ ಮನವಿ ಸಲ್ಲಿಸಬಹುದಾ ಅಂದರೆ ಅದೂ ಇಲ್ಲವಂತೆ. ತನಿಖಾ ಸಂಸ್ಥೆ ಮೇಲ್ಮನವಿ ಸಲ್ಲಿಸುವುದಿಲ್ಲವೆಂದು ಹೇಳಿಯಾಗಿದೆಯಂತೆ.

“ನ್ಯಾಯಾಲಯದ ವಿಚಾರಣೆಗಳಲ್ಲಿ ಒಂದರ ಹಿಂದೆ ಒಂದರಂತೆ ಅನ್ಯಾಯವೇ ವಿಜ್ರಂಭಿಸುತ್ತಿದೆ. ಇದನ್ನು ನ್ಯಾಯಾಲಯಗಳು ಮೂಕ ಪ್ರೇಕ್ಷಕರಂತೆ ನೋಡುತ್ತಿವೆಯೇ..? ಎಂದು ಹಿರಿಯ ವಕೀಲರಾದ ಕಪಿಲ್ ಸಿಬಲ್ ರವರು ಆತಂಕದಿಂದ ಪ್ರಶ್ನಿಸಿದ್ದಾರೆ. ಬಿಲ್ಕಿಸ್ ಭಾನು ಅತ್ಯಾಚಾರ ಪ್ರಕರಣದ ಆರೋಪಿಗಳ ಬಿಡುಗಡೆಯೂ ಸಹ ಸಿಬಲ್ ರವರ ಮಾತಿಗೆ ಪೂರಕವಾಗಿದೆ. ಯಾಕೆ ಗುಜರಾತಿನ ಅಹ್ಮದಾಬಾದ್ ನ್ಯಾಯಾಲಯದಲ್ಲಿ ತೀರ್ಪುಗಳು ಯಾವಾಗಲೂ ಸಂಘಪರಿವಾರದ ಪರವಾಗಿಯೇ ಬರುತ್ತಿವೆ. ಯೋಚಿಸಬೇಕಾದ ಸಂಗತಿ.

ಕರ್ನಾಟಕದ ಕೋಲಾರದಲ್ಲಿ ರಾಹುಲ್ ಗಾಂಧಿಯವರು ಮಾಡಿದ ಭಾಷಣದ ವಿಚಾರಣೆಯನ್ನು ಅತ್ಯಂತ ತ್ವರಿತಗತಿಯಲ್ಲಿ  ಅಂದರೆ ಕೇವಲ 22 ದಿನಗಳಲ್ಲಿ ನಡೆಸಿದ ಗುಜರಾತ್ ರಾಜ್ಯದ  ಅಹ್ಮದಾಬಾದ್ ಕೋರ್ಟು ಅವರಿಗೆ 2 ವರ್ಷ ಶಿಕ್ಷೆ ವಿಧಿಸಿ ಸಂಸದ ಸ್ಥಾನವನ್ನು ಕಿತ್ತುಕೊಳ್ಳಲು ಕಾರಣವಾಯ್ತು. ಬಿಜೆಪಿಯ ಶಾಸಕ ಮಾಡಾಳ್ ವಿರುಪಾಕ್ಷಪ್ಪನವರ ಮನೆಯಲ್ಲಿ ಕೋಟಿ ಕೋಟಿ ಹಣಗಳು ಸಿಕ್ಕರೂ ಕೇವಲ ಒಂದೇ ದಿನದಲ್ಲಿ ಜಾಮೀನು ಕೊಡಲಾಯ್ತು. ರೆಡ್ ಹ್ಯಾಂಡ್ ಆಗಿ ಲಂಚದ ಹಣದ ಜೊತೆಗೆ ಸಿಕ್ಕಿಬಿದ್ದ ಅವರ ಮಗನಿಗೂ ನಿನ್ನೆ ಜಾಮೀನು ಮಂಜೂರು ಮಾಡಲಾಯ್ತು. ಅಂದರೆ ನ್ಯಾಯಾಧೀಶರು ಯಾರ ತಾಳಕ್ಕೆ ತಕ್ಕ ಹಾಗೆ ಕುಣಿಯುತ್ತಿದ್ದಾರೆ? ಯಾರ ಒತ್ತಡಕ್ಕೆ ಮಣಿಯುತ್ತಿದ್ದಾರೆ? ಯಾಕೆ ಹೀಗೆ ಯಾವಾಗಲೂ ಪ್ರಭುತ್ವದ ಪರವಾಗಿದ್ದವರ ಪರವಾಗಿಯೇ ನ್ಯಾಯಾಲಯಗಳು ಸ್ಪಂದಿಸುತ್ತಿವೆ? ಪ್ರಭುತ್ವ ವಿರೋಧಿ ಪತ್ರಕರ್ತರು ಹಾಗೂ ವಿಚಾರವಂತರ ಮೇಲಿನ ಕೇಸುಗಳಲ್ಲಿ ಜಾಮೀನು ಕೊಡದೇ ಜೈಲಲ್ಲಿ ಕೊಳೆಯುವಂತೆ ಮಾಡುವ ನ್ಯಾಯಾಲಯಗಳು ಆಳುವವವರ ಪರವಾಗಿರುವವರ ಹಿತಾಸಕ್ತಿಯನ್ನು ಯಾಕೆ ಕಾಪಾಡಲು ಮುಂದಾಗುತ್ತವೆ? ಎಂಬುದು ಜನಸಾಮಾನ್ಯರ ಅಸಾಮಾನ್ಯ ಪ್ರಶ್ನೆಯಾಗಿದೆ.


ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಒಂದೇ.. ದೇಶದಲ್ಲಿ ಪ್ಯಾಸಿಸ್ಟ್ ಪ್ರಭುತ್ವ ತನ್ನ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳುತ್ತಿದೆ. ಅದಕ್ಕಾಗಿ ಶಾಸಕಾಂಗ, ಕಾರ್ಯಾಂಗ ಹಾಗೂ ಪತ್ರಿಕಾರಂಗಗಳನ್ನು ಕೈವಶಮಾಡಿಕೊಳ್ಳಲಾಗಿದ್ದು ಈಗ ಒಂದಿಷ್ಟು ಜನರ ನಂಬಿಕೆಯನ್ನು ಉಳಿಸಿಕೊಂಡಿರುವ ನ್ಯಾಯಾಂಗವನ್ನೂ ತನ್ನ ಹಿತಾಸಕ್ತಿಗೆ ಪೂರಕವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ ಎನ್ನುವ ಅನುಮಾನ ಕಾಡುತ್ತಿದೆ. ಅದಕ್ಕೆ ಪೂರಕವಾಗಿ ತೀರ್ಪುಗಳು ಪ್ರಕಟಗೊಳ್ಳುತ್ತಿವೆ. ಹೀಗಾಗಿಯೇ ನ್ಯಾಯಾಲಯದಲ್ಲಿ ಉಳ್ಳವರ ಪರ, ಮೇಲ್ಚಾತಿಯವರ ಪರ, ಆಳುವವರ ಪರ, ಹಿಂದುತ್ವವಾದಿಗಳ ಪರ ತೀರ್ಪುಗಳು ಬರುತ್ತಿವೆ. ದಲಿತರು, ಅಲ್ಪಸಂಖ್ಯಾತರು, ವಿಚಾರವಾದಿಗಳು ಹಾಗೂ ಪ್ರಭುತ್ವವನ್ನು ಪ್ರಶ್ನಿಸುವವರ ವಿರುದ್ಧವಾಗಿಯೇ ನ್ಯಾಯನಿರ್ಣಯಗಳಾಗುತ್ತಿವೆ.

ಯಾಕೆ ಹೀಗೆ? ಯಾಕೆಂದು ಪ್ರಜ್ಞಾವಂತರಾದ ಎಲ್ಲರಿಗೂ ಗೊತ್ತಿರುವಂತಹುದೇ. ಇದು ಹೀಗೆ ಮುಂದುವರೆದರೆ ಎಲ್ಲರೂ ‘ನ್ಯಾಯಾ ಎಲ್ಲಿದೆ? ಎಲ್ಲಿದೆಯೋ ನ್ಯಾಯಾ..’ ಎಂದು ಮನದೊಳಗೆ ಹಾಡು ಗುಣುಗುವುದನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಬಹಿರಂಗವಾಗಿ ಹಾಡಿದರೆ ದೇಶದ್ರೋಹದ ಕೇಸು ದಾಖಲಾಗುತ್ತದೆ. ಸರ್ವಾಧಿಕಾರಕ್ಕೆ ಬಲಿಯಾಗಬಾರದೆಂದರೆ ಈ ದೇಶವನ್ನು ಚುನಾವಣೆಯ ಸಂದರ್ಭದಲ್ಲಿ ಎಚ್ಚೆತ್ತ ಮತದಾರರೇ ಬಚಾವ್ ಮಾಡಬೇಕು. ಅದು ಬಿಟ್ಟು ಸಂವಿಧಾನವನ್ನು ಉಳಿಸಲು, ಪ್ರಜಾಪ್ರಭುತ್ವವನ್ನು ಕಾಪಾಡಲು ಬೇರೆ ದಾರಿ ಯಾವುದಿದೆ?

-ಶಶಿಕಾಂತ ಯಡಹಳ್ಳಿ

22-04-2023