ಮಂಗಳವಾರ, ಜನವರಿ 9, 2024

ಬಸವಣ್ಣ ಕೇವಲ ಸಾಂಸ್ಕೃತಿಕ ನಾಯಕನಲ್ಲ, ಸಮಾನತಾ ಧರ್ಮ ಸಂಸ್ಥಾಪಕ

ತಹ ತಹ - 487

ಬಸವಣ್ಣ ಕೇವಲ ಸಾಂಸ್ಕೃತಿಕ ನಾಯಕನಲ್ಲ, 
ಸಮಾನತಾ ಧರ್ಮ ಸಂಸ್ಥಾಪಕ

ಈ ಲಿಂಗಾಯತ ಮಠದ ಸ್ವಾಮಿಗಳಿಗೆ ಏನಾಗಿದೆಯೋ ಗೊತ್ತಿಲ್ಲ. ವೀರಶೈವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಲಿಂಗಾಯತವೇ ಬೇರೆ ವೀರಶೈವವೇ ಬೇರೆ ಎಂದು ಹೇಳುವ ಮಠದವರೂ ಸಹ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಅಂತಾ ಸರಕಾರ ಘೋಷಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ವೀರಶೈವ ಲಿಂಗಾಯತ ಸಮಾವೇಶದಲ್ಲೂ ಸಹ ಈ ನಿರ್ಣಯವನ್ನು ಘೋಷಿಸಲಾಗಿತ್ತು. ಅದರ ಅನುಷ್ಠಾನಕ್ಕೆ ಈಗ ಲಿಂಗಾಯತ ಮಠದ ಸ್ವಾಮಿಗಳು ತೀವ್ರವಾಗಿ ಪ್ರಯತ್ನಿಸುತ್ತಿದ್ದಾರೆ. 

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರಾಗಿರುವ ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದೇವರು ಸ್ವಾಮೀಜಿ, ಗದುಗಿನ ತೋಂಟದಾರ್ಯ ಸ್ವಾಮೀಜಿ, ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಜನವರಿ 8 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬೇಟಿಯಾದ 48 ಮಠಾಧೀಶರ ನಿಯೋಗ 'ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ' ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು. ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧರಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ಕೊಟ್ಟು ಸ್ವಾಮಿಗಳನ್ನು ಬೀಳ್ಕೊಟ್ಟರು. ಲಿಂಗಾಯತ ಸ್ವತಂತ್ರ ಧರ್ಮದ ವಿಷಯದಲ್ಲಿ ಆಸಕ್ತಿ ವಹಿಸಿ ಈಗಾಗಲೇ ಕೈಸುಟ್ಟುಕೊಂಡು ಪಾಠ ಕಲಿತಿರುವ ಸಿದ್ದರಾಮಯ್ಯನವರಿಗೆ ಲಿಂಗಾಯತರ ಆಗ್ರಹಕ್ಕೆ ಒಪ್ಪಿದರೆ ಬೇರೆ ಜಾತಿ ಸಮುದಾಯಗಳ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎನ್ನುವ ಅರಿವು ಇದ್ದಿದ್ದರಿಂದಲೇ ಸಚಿವ ಸಂಪುಟ ಸಭೆಯ ನೆಪ ಹೇಳಿ ಸ್ವಾಮಿಗಳನ್ನು ಸಾಗಹಾಕಿದರು.

ಬಸವಣ್ಣನವರನ್ನು ವಿಶ್ವಗುರು ಎಂದು ಹೇಳುತ್ತಲೇ ಬಂದಿರುವ ಲಿಂಗಾಯತ ಮಠಗಳ ಸ್ವಾಮಿಗಳು ಈಗ ಅದ್ಯಾಕೆ ಬಸವಣ್ಣನವರನ್ನು ಕರ್ನಾಟಕಕ್ಕೆ ಮಾತ್ರ ಸೀಮಿತಗೊಳಿಸಿ ಸಾಂಸ್ಕೃತಿಕ ನಾಯಕ ಎನ್ನುತ್ತಿದ್ದಾರೆ? ವಿಶ್ವಗುರುವಿನ ಹೆಸರನ್ನು ಮೋದಿಯವರು ಹೈಜಾಕ್ ಮಾಡಿದ್ದರಿಂದಾಗಿ ಬಸವಣ್ಣನವರಿಗೆ ನಾಯಕ ಸ್ಥಾನ ಮಾತ್ರ ಇರಲಿ ಎಂದು ಈ ನಿರ್ಣಯಕ್ಕೆ ಬಂದಿದ್ದಾರಾ? ಇದು ಪಂಚಾಚಾರ್ಯ ಪೀಠಗಳ ವೀರಶೈವರ ತಂತ್ರಗಾರಿಕೆ ಎನ್ನುವುದು ಈ ವಿರಕ್ತ ಮಠದ ಸ್ವಾಮಿಗಳಿಗೆ ಯಾಕೆ ಅರ್ಥವಾಗುತ್ತಿಲ್ಲ? 

ಬಸವಣ್ಣನವರು ನಿಜವಾದ ಅರ್ಥದಲ್ಲಿ ವಿಶ್ವಮಾನವ. ಶಿವಶರಣರು ತಮ್ಮ ವಚನಗಳಲ್ಲಿ ವಿಶ್ವಮಾನವ ತತ್ವವನ್ನು ಕಟ್ಟಿಕೊಟ್ಟವರು. ಇಡೀ ಮನುಕುಲಕ್ಕೆ ಕಾಯಕ ಮತ್ತು ದಾಸೋಹ ಎನ್ನುವ ಸಿದ್ದಾಂತವನ್ನು ಹೇಳಿಕೊಟ್ಟವರು. ಯಾವುದೇ ಒಂದು ಪ್ರದೇಶಕ್ಕೆ, ರಾಜ್ಯಕ್ಕೆ, ದೇಶಕ್ಕೆ ಬಸವಣ್ಣನವರನ್ನು ಸೀಮಿತಗೊಳಿಸುವುದು ಬಸವಾದಿ ಶರಣರಿಗೆ ಮಾಡುವ ಅಪಮಾನ. ವಿಶ್ವಮಾನವರಾದ ಬಸವಣ್ಣನವರನ್ನು ಒಂದು ರಾಜ್ಯಕ್ಕೆ ಕಟ್ಟಿ ಹಾಕುವ ಹುನ್ನಾರವನ್ನು ವೀರಶೈವ ಕುಲಸಂಜಾತರು ಮಾಡುತ್ತಿದ್ದಾರೆ. 

ಬಸವಣ್ಣನವರು ಕೇವಲ ನಾಯಕರಲ್ಲಾ ಅವರು ಲಿಂಗಾಯತ ಧರ್ಮದ ಸ್ಥಾಪಕರು. ಪುರೋಹಿತಶಾಹಿ ಶೋಷಣೆಯ ವಿರುದ್ದ ಸಿಡಿದೆದ್ದು ಎಲ್ಲಾ ಜಾತಿಯ ಕಾಯಕಜೀವಿಗಳನ್ನು ಒಂದುಗೂಡಿಸಿ ಶರಣಧರ್ಮವನ್ನು ಅಸ್ತಿತ್ವಕ್ಕೆ ತಂದರು. ಬಹುದೇವೋಪಾಸನೆಯ ವಿರುದ್ದ ಏಕದೇವೋಪಾಸನೆಯನ್ನು ಬೋಧಿಸಿದರು. ಸ್ಥಾವರ ಶಿವಲಿಂಗಕ್ಕೆ ಪ್ರತಿಯಾಗಿ ಇಷ್ಟಲಿಂಗವನ್ನು ಕೊಟ್ಟರು. ಭಗವಂತ ಮತ್ತು ಭಕ್ತರ ನಡುವೆ ಪೂಜಾರಿ ಪುರೋಹಿತರಿಲ್ಲದ ನೇರ ಸಂಪರ್ಕವನ್ನು ಕರಲಿಂಗದ ಮೂಲಕ ಪ್ರತಿಪಾದಿಸಿದರು. ಲಿಂಗಸಮಾನತೆಯನ್ನು ನಡೆ ನುಡಿಯಲ್ಲಿ ಸಮರ್ಥಿಸಿದರು. ಬಸವಧರ್ಮದ ಈ ಎಲ್ಲಾ ಪರಿಕಲ್ಪನೆಗೆ ವಿರುದ್ದವಾಗಿರುವಂತಹುದು ವೈದಿಕಶಾಹಿ ಹಾಗೂ ವೀರಶೈವ ಧರ್ಮಾಚರಣೆಗಳು. 

ವಾಸ್ತವ ಹೀಗಿದ್ದರೂ ಲಿಂಗಾಯತವನ್ನು ಸ್ವತಂತ್ರ ಧರ್ಮವೆಂದು ವೀರಶೈವರು ಒಪ್ಪುತ್ತಿಲ್ಲ. ವೀರಶೈವ ಲಿಂಗಾಯತ ಎರಡೂ ಸೇರಿ ಧರ್ಮವಾಗಬೇಕು ಎಂಬುದು ವೀರಶೈವರ ಒತ್ತಾಯ. ವೀರಶೈವ ಲಿಂಗಾಯತ ಸ್ವತಂತ್ರ ಧರ್ಮವಾಗುವುದಕ್ಕೆ ಹಿಂದುತ್ವವಾದಿ ವೈದಿಕಶಾಹಿ ಬಿಡುತ್ತಿಲ್ಲ. ವೀರಶೈವ ಲಿಂಗಾಯತ ಎಲ್ಲವೂ ಹಿಂದೂ ಧರ್ಮದ ಭಾಗಗಳೆಂದು ಪ್ರತಿಪಾದಿಸಲಾಗುತ್ತಿದೆ.  ಬಸವಣ್ಣನವರೇ ನಮ್ಮ ಧರ್ಮಗುರುಗಳು, ವಚನಗಳೇ ನಮ್ಮ ಧರ್ಮಗ್ರಂಥಗಳು ನಮ್ಮದು ಸ್ವತಂತ್ರ ಧರ್ಮ ಎಂದು ಲಿಂಗಾಯತರು ವೀರಶೈವ ಮತ್ತು ವೈದಿಕಶಾಹಿ ಹಿಡಿತದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರಾದರೂ ಆ ಪುರೋಹಿತಶಾಹಿಗಳು ಸಮ್ಮತಿಸುತ್ತಿಲ್ಲ. ಇಂತಹ ಸಂದರ್ಭದಲ್ಲೇ ಬಸವಣ್ಣನವರನ್ನು ಲಿಂಗಾಯತ ಮತಧರ್ಮ ಸ್ಥಾಪಕರು ಎನ್ನುವುದನ್ನು ಒಪ್ಪಿಕೊಳ್ಳಲು ಸಿದ್ದವಿರದ ವೀರಶೈವ ಮಠ ಪೀಠಗಳು ಬಸವಣ್ಣನವರನ್ನು ಕೇವಲ ಒಂದು ರಾಜ್ಯದ ಸಾಂಸ್ಕೃತಿಕ ನಾಯಕರನ್ನಾಗಿಸಲು ಸಿದ್ದತೆ ನಡೆಸಿದ್ದಾರೆ.  ಕೆಲವು ಲಿಂಗಾಯತ ಮಠಗಳ ಸ್ವಾಮಿಗಳೂ ಸಹ ಬಸವಣ್ಣನವರಿಗೆ ನಾಯಕನ ಪಟ್ಟ ಕಟ್ಟಲು ತುದಿಗಾಲ ಮೇಲೆ ನಿಂತಿದ್ದಾರೆ. ವಿಶ್ವಗುರು ಬಸವಣ್ಣನವರನ್ನು ಒಂದು ರಾಜ್ಯದ ನಾಯಕನನ್ನಾಗಿಸಲು ಪ್ರಯತ್ನಗಳು ಸಾಗಿವೆ. ಅದರ ಹಿಂದೆ ಹುನ್ನಾರಗಳೂ ಬೇಕಾದಷ್ಟಿವೆ.

ಬಸವಣ್ಣನವರನ್ನು ಕೇವಲ ರಾಜ್ಯವೊಂದರ ಸಾಂಸ್ಕೃತಿಕ ನಾಯಕ ಎನ್ನುವುದನ್ನು ಎಂದೂ ಒಪ್ಪಲಾಗದು. ಯಾರು ಏನೇ ಹೇಳಲಿ ಬಸವಣ್ಣ ಲಿಂಗಾಯತ ಧರ್ಮದ ಸ್ಥಾಪಕರು. ಬಸವಧರ್ಮ ಸ್ಥಾಪನೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಶಿವಶರಣರೂ ಸಾಂಸ್ಕೃತಿಕ ನಾಯಕರೇ. ಉದಾಹರಣೆಗೆ ಗೌತಮ ಬುದ್ದನನ್ನು ಬೌದ್ಧ ದಮ್ಮ ಸಂಸ್ಥಾಪಕ ಎನ್ನುವುದು ಸೂಕ್ತವೋ ಇಲ್ಲಾ ಸಾಂಸ್ಕೃತಿಕ ನಾಯಕ ಎನ್ನುವುದು ಸರಿಯೋ? ಗುರುನಾನಕ್ ರವರನ್ನು ಸಿಕ್ ಧರ್ಮದ ಪ್ರವರ್ತಕರು ಎನ್ನುವುದು ಸೂಕ್ತವಾ ಇಲ್ಲಾ ಪಂಜಾಬಿನ ಸಾಂಸ್ಕೃತಿಕ ನಾಯಕ ಎನ್ನುವುದು ಒಪ್ಪಿತವಾ? ಅದೇ ರೀತಿ ಬಸವಣ್ಣನವರನ್ನು ಲಿಂಗಾಯತ ಧರ್ಮದ ಸಂಸ್ಥಾಪಕರು ಎನ್ನುವುದು ಸಮರ್ಥನೀಯವಾ ಅಥವಾ ರಾಜ್ಯವೊಂದರ ಸಾಂಸ್ಕೃತಿಕ ನಾಯಕ ಎನ್ನುವುದು ಅಗತ್ಯವಾ? ಲಿಂಗಾಯತರು ಯೋಚಿಸಬೇಕಿದೆ.

ಹಲವಾರು ಜಾತಿ ಧರ್ಮಗಳಿರುವ ನಮ್ಮ ರಾಜ್ಯದಲ್ಲಿ ಲಿಂಗಾಯತ ಧರ್ಮದ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಬೇರೆ ಜಾತಿಧರ್ಮೀಯ ಸಮುದಾಯಗಳು ಯಾಕೆ ಒಪ್ಪಿಕೊಳ್ಳಬೇಕು? ಪ್ರಭಲ ಕೋಮಿನ ಒಕ್ಕಲಿಗರು ಕೆಂಪೇಗೌಡರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಬೇಕು ಎಂದು ಸರಕಾರವನ್ನು ಆಗ್ರಹಿಸುತ್ತಾರೆ. ವೈದಿಕರು ಶಂಕರಾಚಾರ್ಯರ ಹೆಸರನ್ನೋ ಪೇಜಾವರರ ಹೆಸರನ್ನೋ ಸಾಂಸ್ಕೃತಿಕ ನಾಯಕ ಎಂದು ಪರಿಗಣಿಸಬೇಕು ಎನ್ನುತ್ತಾರೆ. ಕುರುಬ ಸಮಾಜದವರು ಕನಕದಾಸರನ್ನು ಸಾಂಸ್ಕೃತಿಕ ನಾಯಕ ಎಂದು ಗುರುತಿಸಬೇಕು ಎನ್ನುತ್ತಾರೆ. 

ಹೀಗಾಗಿ ವೀರಶೈವರು ಹುಟ್ಟುಹಾಕಿದ ಈ ಸಾಂಸ್ಕೃತಿಕ ನಾಯಕದ ಪಟ್ಟ ಎನ್ನುವುದು ಮತ್ತೆ ವಿವಾದಗಳನ್ನು ಹುಟ್ಟಿಸುತ್ತದೆ. ಅದಕ್ಕಿಂತಲೂ ಬಸವಣ್ಣನವರನ್ನು ಲಿಂಗಾಯತ ಧರ್ಮ ಸ್ಥಾಪಕರು ಎಂದು ಒಪ್ಪಿಕೊಳ್ಳಲು ಹಾಗೂ ಲಿಂಗಾಯತವು ಸ್ವತಂತ್ರ ಧರ್ಮ ಎನ್ನುವ ಮಾನ್ಯತೆ ಪಡೆಯಲು ರಾಜ್ಯ ಹಾಗೂ ಕೇಂದ್ರ ಸರಕಾರಗಳನ್ನು ಒತ್ತಾಯಿಸಬೇಕಿದೆ. ಪುರೋಹಿತಶಾಹಿಗಳ ಹಿಡಿತದಿಂದ ಬಸವಧರ್ಮವನ್ನು ಮುಕ್ತಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಲಿಂಗಾಯತ ಮಠಗಳು, ಮಠಾಧೀಶರುಗಳು ಕಾರ್ಯಪ್ರವೃತ್ತರಾಗಬೇಕಿದೆ.

ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಸರಕಾರ ಅಧೀಕೃತವಾಗಿ ಘೋಷಿಸಿದರೂ ಲಿಂಗಾಯತ ಸಮುದಾಯಕ್ಕೆ ಹೆಚ್ಚು ಪ್ರಯೋಜನವಾಗದು ಹಾಗೂ ಸರಕಾರಿ ಮೀಸಲಾತಿಯೂ ದೊರಕದು. ಅದೇ ಲಿಂಗಾಯತವು ಬೌದ್ದ ಜೈನ ಸಿಕ್ ಧರ್ಮಗಳಂತೆ ಸ್ವತಂತ್ರ ಧರ್ಮ ಎಂದು ಮಾನ್ಯತೆ ಪಡೆದಲ್ಲಿ ಅನೇಕ ಅನುಕೂಲತೆಗಳು ಸಾಧ್ಯ. ಸುತ್ತಲೂ ವೀರಶೈವ ಹಾಗೂ ವೈದಿಕಶಾಹಿ ಕಟ್ಟಿರುವ ಅಬೇಧ್ಯ ಕೋಟೆಯನ್ನು ಬೇಧಿಸಿ ಲಿಂಗಾಯತವು ಸ್ವತಂತ್ರ ಧರ್ಮವಾಗಬೇಕಿದೆ. ಬುದ್ದನ ಹಾಗೆ, ಗುರುನಾನಕ್ ರವರ ಹಾಗೆ ಬಸವಣ್ಣನವರು ಸ್ವತಂತ್ರ ಧರ್ಮದ ಸ್ಥಾಪಕರಾಗಿ ಮಾನ್ಯತೆ ಪಡೆಯಬೇಕಿದೆ. ಕಾಲಕಾಲಕ್ಕೆ ಸಾಂಸ್ಕೃತಿಕ ನಾಯಕರು, ಸಮಾಜ ಸುಧಾರಕರು ಬಂದು ಹೋಗುತ್ತಾರೆ. ಆದರೆ ಸಮಾನತೆಯನ್ನು ಸಾರುವ ಧರ್ಮವೊಂದರ ಸ್ಥಾಪಕರು ಹುಟ್ಟಿ ಬರುವುದು ಅಪರೂಪದಲ್ಲಿ ಅಪರೂಪ. ಮನುವಾದಿ ಧರ್ಮದ ವಿರುದ್ದ ಮಾನವತಾವಾದಿ ಧರ್ಮವನ್ನು ಸ್ಥಾಪಿಸಿದ ಬಸವಣ್ಣನವರು ಕೇವಲ ರಾಜ್ಯವೊಂದರ ಸಾಂಸ್ಕೃತಿಕ ನಾಯಕನಲ್ಲಾ, ವಿಶ್ವಮಾನವ ಧರ್ಮವೊಂದರ ಸಂಸ್ಥಾಪಕ ಎಂಬುದನ್ನು ಎಲ್ಲಾ ಲಿಂಗಾಯತ ಮಠ ಮಾನ್ಯಗಳು, ಸ್ವಾಮೀಜಿಗಳು ಹಾಗೂ ಲಿಂಗಾಯತರು ಅರಿಯಲೇ ಬೇಕಿದೆ. ಪುರೋಹಿತಶಾಹಿಗಳ ಹಿಡಿತದಿಂದ ಬಿಡಿಸಿಕೊಂಡು ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ದೊರೆಯುವವರೆಗೂ ರಾಜಿರಹಿತವಾಗಿ ನಿರಂತರ ಹೋರಾಟ ಮಾಡಬೇಕಿದೆ. ವಿಶ್ವಗುರು ಬಸವಣ್ಣ ಸ್ಥಾಪಿಸಿದ ಸಮಾನತೆ ಸಾರುವ ಕಾಯಕ ತತ್ವದ ಲಿಂಗಾಯತ ಧರ್ಮ ವಿಶ್ವದ ಎಲ್ಲಾ ಶೋಷಕ ಧರ್ಮಗಳಿಗೆ ಮಾದರಿಯಾಗಬೇಕಿದೆ.

- ಶಶಿಕಾಂತ ಯಡಹಳ್ಳಿ
09-01-2024

ಕಂಬಾರರ ‘ಋಷ್ಯಶೃಂಗ’ ನಾಟಕ ಕುರಿತು “ಹೇಳತೇನ ಕೇಳ”

ತಹ ತಹ - 486

ಕಂಬಾರರ ‘ಋಷ್ಯಶೃಂಗ’ ನಾಟಕ ಕುರಿತು “ಹೇಳತೇನ ಕೇಳ”

ಕವಿ, ಕಥೆಗಾರ, ನಾಟಕಕಾರ, ಕಾದಂಬರಿಕಾರ, ನಿರ್ದೇಶಕರಾಗಿ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದಲ್ಲಿ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ,ಚಂದ್ರಶೇಖರ್ ಕಂಬಾರರ 87ನೇ ಜನ್ಮದಿನದ ಅಂಗವಾಗಿ ಹಂಪಿ ವಿಶ್ವವಿದ್ಯಾಲಯದ ಡಾ.ವಿರೇಶ್ ಬಡಿಗೇರ್ ರವರು ತಮ್ಮ “ಹೇಳತೇನಿ ಕೇಳ” ಎನ್ನುವ ಆನ್ಲೈನ್ ಉಪನ್ಯಾಸ ಮಾಲಿಕೆಯಲ್ಲಿ ಕಂಬಾರರ ‘ಋಷ್ಯಶೃಂಗ’ ನಾಟಕದ ಕುರಿತು ಸಂವಾದವನ್ನು ಜನವರಿ 7ನೇ ತಾರೀಕಿನಂದು ಆಯೋಜಿಸಿದ್ದು ವಿಶೇಷವಾಗಿತ್ತು. 

ಈ ಸಂವಾದದಲ್ಲಿ ಹಿರಿಯರಾದ ಹರಿಹರದ ಲಿಂಗರಾಜ್ ಕಮ್ಮಾರರವರು ಕಂಬಾರರ ಬರಹ ಹಾಗೂ ಸಾಧನೆಗಳ ಬಗ್ಗೆ ಮತ್ತು ಋಷ್ಯಶೃಂಗ ನಾಟಕದ ಬಗ್ಗೆ ವಿವರವಾಗಿ ತಮ್ಮ ವಿಚಾರಗಳನ್ನು ಮಂಡಿಸಿದರು. ಈ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ನಾನು ನನ್ನ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಿಪಡಿಸಿದ್ದೆ. ಆಡಿದ ಮಾತುಗಳ ವಿಸ್ತೃತ ರೂಪದ ಲೇಖನ ಇದಾಗಿದೆ.
ಇಪ್ಪತ್ತೈದು ನಾಟಕ, 10 ಕವನ ಸಂಕಲನ, 5 ಕಾದಂಬರಿ ಹಾಗೂ ಚಕೋರಿ ಎನ್ನುವ ಮಹಾಕಾವ್ಯವನ್ನು ರಚಿಸಿದ ಡಾ.ಚಂದ್ರಶೇಖರ್ ಕಂಬಾರರು ಕನ್ನಡ ನಾಡಿನ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಅವರು ಬರೆದ ನಾಟಕಗಳಲ್ಲಿ ಜೋಕುಮಾರಸ್ವಾಮಿ, ಸಂಗ್ಯಾಬಾಳ್ಯಾ, ಕಿಟ್ಟಿಯ ಕಥೆ, ಕಾಡುಕುದುರೆ, ಹರಕೆಯ ಕುರಿ ಮುಂತಾದವು ಚಲನಚಿತ್ರವಾಗಿ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿವೆ.

 ‘ಋಷ್ಯಶೃಂಗ’ವು ಕಂಬಾರರ ಮೂರನೇ ನಾಟಕವಾಗಿದ್ದು 1970ರಲ್ಲಿ ರಚನೆಗೊಂಡಿದೆ. ಈ ನಾಟಕ ಪೌರಾಣಿಕ ಮುನಿ ಋಷ್ಯಶೃಂಗನ ಹೆಸರು ಮತ್ತು ಬದುಕಿನ ಅಂಶಗಳನ್ನು ಸಾಂಕೇತಿಕವಾಗಿ ಪ್ರತಿನಿಧಿಸಿದ್ದರೂ ಸಂಪೂರ್ಣವಾಗಿ ಜಾನಪದೀಯ ಕಥಾನಕದ ವಿನ್ಯಾಸವನ್ನು ಒಳಗೊಂಡಿದೆ. ವಸ್ತು ಯಾವುದೇ ಆಗಿರಬಹುದು ಅದನ್ನು ಜಾನಪದದ ಚೌಕಟ್ಟಿಗೆ ಒಗ್ಗಿಸುವುದರಲ್ಲಿ ಕಂಬಾರರು ಸಿದ್ದಹಸ್ತರು. ಇದಕ್ಕೆ ಕಂಬಾರರ ಶೈಲಿ ಎಂದೇ ಹೆಸರು.

ಕಂಬಾರರ ಬಹುತೇಕ ನಾಟಕಗಳಂತೆ ‘ಋಷ್ಯಶೃಂಗ’ವು ಪ್ಯೂಡಲ್ ವ್ಯವಸ್ಥೆಯ ದಮನ ದೌರ್ಜನ್ಯ ಅತಿರೇಕಗಳನ್ನು ಅನಾವರಣಗೊಳಿಸುತ್ತದೆ. ಅಲ್ಲೊಬ್ಬ ಊರ ಗೌಡ. ಅವನಿಗೊಬ್ಬ ಮಗ ರಾಮಗೊಂಡ. ಒಂದು ದಿನ ಬೇಟೆಗೆ ಹೋಗಿ ಬರುವಾಗ ದೆವ್ವವೊಂದು ಈ ಇಬ್ಬರನ್ನೂ ಕೊಂದು ಹಾಳುಬಾವಿಗೆ ಎಸೆದು ಗೌಡನ ವೇಷದಲ್ಲಿ ಊರು ಸೇರಿ ದಮನ ಶುರುಮಾಡುತ್ತದೆ. ವೇಷದಾರಿ ಗೌಡ ಹಾಗೂ ಗೌಡತಿಗೆ ಹುಟ್ಟಿದ ಬಾಳಗೊಂಡ ಎನ್ನುವ ಮಗನನ್ನು ಊರಿನಿಂದ ಓದಲು ದೂರದೂರಿಗೆ ಕಳುಹಿಸಲಾಗುತ್ತದೆ. ಆ ಪ್ರಾಂತ್ಯಕ್ಕೆ ಬರ ಒಕ್ಕರಿಸಿ ಸಾವು ನೋವುಗಳು ನಿತ್ಯದ ಗೋಳಾಗುತ್ತದೆ. ಅತ್ತ ಬರದಿಂದ, ಇತ್ತ ಈ ವೇಷದಾರಿ ಗೌಡನ ದೌರ್ಜನ್ಯದಿಂದ ತತ್ತರಿಸಿದ ಊರ ಜನರು ದೇವಿಯ ಮೊರೆಹೋಗುತ್ತಾರೆ. ಪಾರಿಯ ಮೈಯಲ್ಲಿ ಬಂದ ದೇವಿ “ದೊಡ್ಡಗೌಡನ ಮಗ ಬಂದು ಅಗಸಿ ಬಾಗಿಲಲ್ಲಿ ಐದು ಹೆಜ್ಜೆ ಇಟ್ಟಾಗ ಮಳೆ ಬರುತ್ತದೆ” ಎಂದು ಭವಿಷ್ಯ ನುಡಿಯುತ್ತಾಳೆ. ಕೊನೆಗೂ ಬಾಳಗೊಂಡ ಕುದುರೆ ಏರಿ ಊರಿಗೆ ಬರುತ್ತಾನಾದರೂ ಮಳೆ ಬರುವುದಿಲ್ಲ. ಊರ ಜನ ಬಾಳಗೊಂಡ ಗೌಡನ ಮಗನೇ ಅಲ್ಲವೆಂದು ಸಂಶಯ ಪಡುತ್ತಾರೆ. ಭಾವಿಯಲ್ಲಿದ್ದ ಸತ್ತ ಗೌಡನ ಪ್ರೇತಾತ್ಮ ತನ್ನ ಹತ್ಯೆಯ ಕಥೆಯನ್ನು ಬಾಳನಿಗೆ ಹೇಳುತ್ತದೆ. ಯಕ್ಷಿಣಿಯೊಬ್ಬಳು ಬಾಳನಿಗೆ ಸಹಾಯ ಮಾಡುತ್ತಾಳೆ. ಪಾರಿ ಮಗಳು ಕಮಲಿಯ ಮೋಹಕ್ಕೆ ಒಳಗಾದ ಬಾಳಗೊಂಡ ಊರಲ್ಲೇ ಉಳಿಯುತ್ತಾನೆ. ಅದೊಂದು ದಿನ ಮಾಯಾವಿ ಗೌಡ ಬಾಳಗೊಂಡನ ವೇಷ ಧರಿಸಿ ಕಮಲಿ ಮನೆಗೆ ಹೋಗಿ ಅವಳನ್ನು ಮೋಸದಿಂದ ಕೂಡುತ್ತಾನೆ. ಅದು ಗೊತ್ತಾಗಿ ಸಿಟ್ಟಿಗೆದ್ದ ಬಾಳಗೊಂಡ ತಂದೆಯನ್ನು ಅಟ್ಟಾಡಿಸಿಕೊಂಡು ಹೋಗಿ ಕೊಂದು ಹಾಳುಬಾವಿಗೆ ಎಸೆಯುತ್ತಾನೆ. ಬಾಳಗೊಂಡ ಬಂದು ಕಮಲಿಯನ್ನು ಕೂಡಿದಾಗ ಮಳೆ ಸಮೃದ್ಧವಾಗಿ ಬರುತ್ತದೆ. ಬರ ನೀಗುತ್ತದೆ. ಇದು  ‘ಋಷ್ಯಶೃಂಗ’ ನಾಟಕದ ಸಂಕ್ಷಿಪ್ತ ಕಥೆ.

ಕಂಬಾರರ ಕೆಲವಾರು ನಾಟಕಗಳಲ್ಲಿರುವಂತೆ ಇಲ್ಲಿಯೂ ಒಂದು ಊರು. ಅದಕ್ಕೊಬ್ಬ ಖಳನಾಯಕನಾದ ಹೆಣ್ಣುಬಾಕ ಜಮೀನ್ದಾರ ಗೌಡ. ಗೌಡನನ್ನು ವಿರೋಧಿಸಿ ಮಟ್ಟಹಾಕಲು ಇನ್ನೊಬ್ಬ ನಾಯಕ. ಈ ಇಬ್ಬರ ಸಂಘರ್ಷದಲ್ಲಿ ಕಾಮದಹನಕ್ಕೆ ಈಡಾಗುವ ಮಹಿಳೆ. ಮುಖ್ಯವಾಗಿ ಈ ಮೂರು ಪಾತ್ರಗಳನ್ನು ಇಟ್ಟುಕೊಂಡೇ  ಋಷ್ಯಶೃಂಗ ನಾಟಕವೂ ರಚನೆಗೊಂಡಿದೆ. ವಸ್ತುವಿನಲ್ಲಿ ವಿಶೇಷ ಎನ್ನುವುದು ಇಲ್ಲದಿದ್ದರೂ ಅದನ್ನು ವಿನ್ಯಾಸಗೊಳಿಸಿದ ರೀತಿಯಲ್ಲಿ ಕಂಬಾರರು ಗೆಲ್ಲುತ್ತಾರೆ. ಅವರು ಬಳಸುವ ಉತ್ತರ ಕರ್ನಾಟಕದ ದೇಸಿ ಭಾಷೆಯ ಸೊಗಡು, ಅದರಲ್ಲಿರುವ ಕಾವ್ಯಾತ್ಮಕತೆ ಹಾಗೂ ಮನಮೋಹಕ ಹಾಡುಗಳು ಗದ್ಯ ನಾಟಕವನ್ನು ದೃಶ್ಯಕಾವ್ಯವನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಕಂಬಾರರ ಬಹುತೇಕ ನಾಟಕಗಳಲ್ಲಿ ಇರುವಂತೆ  ‘ಋಷ್ಯಶೃಂಗ’ ದಲ್ಲಿಯೂ ಪುರುಷಪ್ರಧಾನ ವ್ಯವಸ್ಥೆಯ ಭೋಗದ ಸರಕಾಗಿ ಹೆಣ್ಣು ಚಿತ್ರಿತವಾಗಿದ್ದಾಳೆ. ಯಜಮಾನ ಸಂಸ್ಕೃತಿಯ ಮೌಲ್ಯಗಳನ್ನೇ ಈ ನಾಟಕದಲ್ಲೂ ಪ್ರತಿಪಾದಿಸಲಾಗಿದೆ. ಪುರುಷರ ಕಾಮದ ದಾಹ ತಣೀಸಲೆಂದೇ ಸ್ತ್ರೀ ಪಾತ್ರ ಸೃಷ್ಟಿಮಾಡಲಾಗಿದೆಯೇನೋ ಎಂದು ಭಾಸವಾಗುತ್ತದೆ. ಹಾಗೂ ಹೆಣ್ಣಿಗಾಗಿಯೇ ಪ್ರಮುಖ ಪುರುಷ ಪಾತ್ರಗಳು ಸಂಘರ್ಷಕ್ಕೆ ಈಡಾಗಿ ಕೊನೆಗೆ ದುಷ್ಟ ಪಾತ್ರದ ಸಂಹಾರದಲ್ಲಿ ನಾಟಕ ಕೊನೆಯಾಗುವುದನ್ನು ಕಾಣಬಹುದಾಗಿದೆ.

ವೈದಿಕಶಾಹಿ ಪರಂಪರೆ ಸೃಷ್ಟಿಸಿದ ಈ ನೈತಿಕ ಅನೈತಿಕ, ಪವಿತ್ರ ಅಪವಿತ್ರ, ಶೀಲ ಅಶ್ಲೀಲ ಎನ್ನುವ ಪರಿಕಲ್ಪನೆಗಳೂ ಜನಪದ ಕಾವ್ಯ ಪರಂಪರೆಯಲ್ಲಿ ಪ್ರಮುಖವೆನ್ನಿಸುವುದಿಲ್ಲ. ಗಂಡು ಹೆಣ್ಣಿನ ನಡುವಿನ ಲೈಂಗಿಕ ಸಂಬಂಧದಲ್ಲಿ ಅನೈತಿಕತೆ ಎನ್ನುವುದು ಅಪ್ರಸ್ತುತ. ಹೆಣ್ಣು ಒಮ್ಮೆ ಒಬ್ಬನ ಜೊತೆ ಕೂಡಿದರೆ ಅವಳು ಅಪವಿತ್ರವಾದಳು, ಶೀಲಗೆಟ್ಟಳು ಎನ್ನುವುದೆಲ್ಲಾ ವೈದಿಕರು ಹೆಣ್ಣನ್ನು ಶೋಷಿಸಲು ಹುಟ್ಟು ಹಾಕಿದ ಕಟ್ಟುಪಾಡುಗಳಾಗಿವೆ. ಆದರೆ ಜನಪದರಿಗೆ ಅದರ ಹಂಗಿಲ್ಲ. ‘ಋಷ್ಯಶೃಂಗ’  ನಾಟಕದಲ್ಲೂ ಸಹ ತನ್ನ ತಂದೆ ಮಾಯಾವಿ ಗೌಡ ಬಂದು ಕಮಲಿಯನ್ನು ಕೂಡಿ ಹೋಗಿದ್ದು ಗೊತ್ತಿದ್ದರೂ ಮಗ ಬಾಳಗೊಂಡ ಅವಳನ್ನು ಒಪ್ಪಿಕೊಳ್ಳುತ್ತಾನೆ, ಅಪ್ಪಿಕೊಳ್ಳುತ್ತಾನೆ. ಒಂದಾಗುತ್ತಾನೆ. ಆಗಲೇ ಬರ ಕಳೆದು ಮಳೆ ಬರುತ್ತದೆ. ಯಾಕೆಂದರೆ ಇಲ್ಲಿ ಹೆಣ್ಣು ಪ್ರಕೃತಿಯಾದರೆ ಗಂಡು ಪುರುಷನಾಗಿದ್ದು, ಯಾವಾಗ ಪ್ರಕೃತಿ ಮತ್ತು ಪುರುಷ ಪ್ರೇಮದಿಂದ ಒಂದಾಗುತ್ತಾರೋ ಆಗ ಸಮೃದ್ಧಿ ಫಲವತ್ತತೆ ಸಾಧ್ಯವಾಗುತ್ತದೆ ಎನ್ನುವುದನ್ನು ಹೇಳುವುದೇ ಈ ನಾಟಕದ ಮೂಲ ಆಶಯವಾಗಿದೆ.

ಕಂಬಾರರು ತಮ್ಮ ಬಹುತೇಕ ನಾಟಕಗಳಲ್ಲಿ ಮಹಿಳೆಯರನ್ನು ಚಿತ್ರಿಸಿದ ರೀತಿ ಚರ್ಚಾಸ್ಪದವಾಗಿದೆ. ಲೈಂಗಿಕತೆಯೇ ಅವರ ನಾಟಕಗಳ ಕೇಂದ್ರಬಿಂದುವೇನೋ ಎನ್ನಿಸುವಂತಿದೆ. ಹೆಣ್ಣೆಂಬುದು ಗಂಡಿನ ಸುಖದ ಸರಕಾಗಿದ್ದು, ಹೆಣ್ಣನ್ನು ಪಡೆಯಲು ನಡೆಯುವ ಜಗಳ ಕದನ ಹೋರಾಟಗಳೇ ನಾಟಕದ ಅಂತಸತ್ವವಾದಂತಿವೆ. ಸಿಂಗಾರೆವ್ವ ನಂತಹ ನಾಟಕ ಹೊರತು ಪಡಿಸಿ ಬಹುತೇಕ ನಾಟಕಗಳ ಹೆಣ್ಣು ಪಾತ್ರಗಳು ಗಂಡಿನ ಶೋಷಣೆಯ ವಿರುದ್ದ ಬಂಡೇಳುವುದಿಲ್ಲ ಹಾಗೂ ಎಷ್ಟೋ ಸಲ ಪ್ರತಿರೋಧವನ್ನೂ ವ್ಯಕ್ತಪಡಿಸದೇ ಬಯಕೆಯ ಬೆಂಕಿಗೆ ಬಿದ್ದು ಬಲಿಯಾಗುತ್ತವೆ. ವ್ಯಕ್ತಿಗತ ಕಾಮನೆ ಬಯಕೆಗಳೇ ಕೇಂದ್ರವಾಗಿ ಅದರ ಸುತ್ತಲೂ ಆಸೆ ಅಸೂಯೆ ಅನಾಹುತಗಳೇ ಪರಿಭ್ರಮಿಸುತ್ತಿರುತ್ತವೆ. ಭಾವ-ಬಯಕೆಗಳ ಸಂಘರ್ಷಗಳಲ್ಲೇ ಮುಳುಗೇಳುವ ಕಂಬಾರರ ನಾಟಕದ ಪಾತ್ರಗಳು ಬದುಕಿನ ವಾಸ್ತವಗಳಿಗೆ ಮುಖಾಮುಖಿ ಆಗಿದ್ದೇ ಕಡಿಮೆ. ಪುರುಷ ಪ್ರಧಾನ ವ್ಯವಸ್ಥೆ ಹೆಣ್ಣನ್ನು ಹೇಗೆಲ್ಲಾ ಬಳಸಿಕೊಂಡಿತು, ಅದರಿಂದಾಗಿ ಪುರುಷರ ದುಸ್ಥಿತಿ ಏನಾಯಿತು. ಹೆಣ್ಣು ಹೇಗೆಲ್ಲಾ ಮಾಯವಾಗಿ ಕಾಡಿತು ಎನ್ನುವುದನ್ನು ಹೇಳುವುದಕ್ಕೇ ನಾಟಕ ಮಾಧ್ಯಮವನ್ನು ಕಂಬಾರರು ಬಳಸಿಕೊಂಡಿದ್ದಾರಾ ಎನ್ನುವ ಸಂದೇಹ ಕಾಡದೇ ಇರದು.   

ವೈದಿಕರು ಪುರಾಣಗಳನ್ನು ಕಟ್ಟಿ ಅದರಲ್ಲಿ ಮೌಢ್ಯಗಳ ಬೀಜಗಳನ್ನು ಬಿತ್ತಿದಂತೆ ಕಂಬಾರರೂ ಸಹ ಈ ರೀತಿಯ ನಾಟಕದ ಮೂಲಕ ಮೌಢ್ಯಗಳೇ ತುಂಬಿರುವ ಜಾನಪದ ಪುರಾಣವನ್ನು ಕಟ್ಟಿದ್ದಾರಾ ಎನ್ನುವ ಸಂದೇಹ ಕಾಡದಿರದು. ಈ ‘ಋಷ್ಯಶೃಂಗ’ ನಾಟಕದಲ್ಲಿ ಬರುವ ಮಾಯಾವೇಷದಾರಿ ದೆವ್ವ, ಮೈಮೇಲೆ ಬಂದು ಭವಿಷ್ಯ ಹೇಳುವ ದೈವ, ದೈವವಾಣಿವನ್ನು ನಂಬಿ ನಡೆಯುವ ಜನರು, ಗಂಡು ಹೆಣ್ಣಿನ ಸಂಯೋಗ ಸಂಬಂಧಗಳ ವಿದ್ಯಮಾನಗಳ ಮೇಲೆ ಮಳೆ ಅವಲಂಬಿಸಿರುವುದು, ಇವೆಲ್ಲವೂ ಸಹ ಮೌಢ್ಯದ ಭಾಗಗಳೇ ಆಗಿವೆ. ಇವುಗಳೆಲ್ಲಾ ಸುಳ್ಳು, ಇಂತಹುಗಳನ್ನೆಲ್ಲಾ ನಂಬಬಾರದು ಎಂದು ಹೇಳುವ ಒಂದೇ ಒಂದು ಎಚ್ಚರದ ದ್ವನಿ ಕೂಡಾ ನಾಟಕದಲ್ಲಿಲ್ಲವಾಗಿದೆ. ಮಿಥ್ ಅಂದರೆ ನಂಬಲಾಗದ ಕಟ್ಟುಕತೆಗಳನ್ನೇ ರೂಪಕತೆಗಳ ಮೂಲಕ ನಂಬಿಸುವ ಪ್ರಕ್ರಿಯೆ ಈ ನಾಟಕದಲ್ಲಿದೆ.

ಇದೆಲ್ಲವೂ ಮೇಲ್ನೋಟಕ್ಕೆ ಅನ್ನಿಸುವ ಸಂಗತಿಗಳಾದರೆ. ಈ ನಾಟಕಕ್ಕೆ ಇನ್ನೊಂದು ಆಯಾಮವನ್ನೂ ಗುರುತಿಸಬಹುದಾಗಿದೆ. ಅದು ಅನ್ಯ ಸಂಸ್ಕೃತಿಯ ಹೇರಿಕೆ. ಮೊದಲಿದ್ದ ಗೌಡ ಹಳ್ಳಿ ಸಂಸ್ಕೃತಿಯ ವ್ಯಕ್ತಿಯಾಗಿದ್ದರೆ ಅವನನ್ನು ಕೊಂದು ಗೌಡನ ವೇಷದಾರಿಯಾಗಿ ಬರುವ ದೆವ್ವವು ವಿನಾಶಕಾರಿ ದಮನ ಸಂಸ್ಕೃತಿಯನ್ನು ಗ್ರಾಮದಲ್ಲಿ ಜಾರಿಗೆ ತರುತ್ತದೆ. ತನ್ನಲ್ಲಿರುವ ಹಣ ಬಲದ ಅಧಿಕಾರ ಹಾಗೂ ಅತೀಂದ್ರೀಯ ಶಕ್ತಿಗಳಿಂದಾಗಿ ಇಡೀ ಗ್ರಾಮದ ಜನರನ್ನು ಭಯದಲ್ಲಿ ಬದುಕುವಂತೆ ಮಾಡಲಾಗುತ್ತದೆ. ದ್ರಾವಿಡ ನೆಲವನ್ನು ಆವರಿಸಿಕೊಂಡ ಆರ್ಯರು, ಹಿಂದುಸ್ಥಾನವನ್ನು ಆಕ್ರಮಿಸಿಕೊಂಡ ವಸಾಹತುಶಾಹಿಗಳಾದ ಆಂಗ್ಲರು, ಮೊಗಲರು ಮಾಡಿದ್ದೇ ಸಾಂಸ್ಕೃತಿಕ ಹೇರಿಕೆಯನ್ನು. ದ್ವಾವಿಡ ಸಂಸ್ಕೃತಿಯ ಮೇಲೆ ವೈದಿಕಶಾಹಿ ಆರ್ಯ ಸಂಸ್ಕೃತಿ ಹೇರಿದ್ದರಿಂದಾಗಿ ಇಡೀ ದೇಶ ಮೌಢ್ಯದ ನಾಡಾಯಿತು, ಅಸಮಾನತೆಯ ಬೀಡಾಯಿತು. ಹೊರಗಿನಿಂದ ಬಂದ ಮಾಯಾ ರಕ್ಕಸನು ನೆಲದ ಸಂಸ್ಕೃತಿಯನ್ನು ಕೊಂದು ತನ್ನದೇ ದಮನ ಸಂಸ್ಕೃತಿಯನ್ನು ಹೇರಲಾದ ಚಾರಿತ್ರಿಕ ವಿದ್ಯಮಾನಗಳ ರೂಪಕವಾಗಿ ಈ ‘ಋಷ್ಯಶೃಂಗ’  ನಾಟಕ ಮೂಡಿಬಂದಂತಿದೆ.

ಕಂಬಾರರು ತಮ್ಮ ನಾಟಕಗಳಲ್ಲಿ ರೂಪಕತೆಯ ಜೊತೆಗೆ ಅರ್ಥಲಯ ಮತ್ತು ನಾದಲಯಗಳನ್ನು ಹದವಾಗಿ ಬೆರೆಸಿ ಭಾಷೆಯನ್ನು ಸಮರ್ಥವಾಗಿ ಬಳಸಿದ್ದರಿಂದಾಗಿ ನಾಟಕ ಓದಿಸಿಕೊಂಡು ಇಲ್ಲವೇ ನೋಡಿಸಿಕೊಂಡು ಹೋಗುತ್ತದೆ. ‘ಋಷ್ಯಶೃಂಗ’  ನಾಟಕದ ಪ್ರಮುಖ ಆಕರ್ಷಣೆ ಇರುವುದೇ ಬಳಸಿದ ಹಾಡುಗಳಲ್ಲಿ ಹಾಗೂ ಹಾಡುಗಳಲ್ಲಿ ಇರುವ ಒಳಾರ್ಥಗಳಲ್ಲಿ. ಅಶ್ಲೀಲ ಎನ್ನಿಸಬಹುದಾದದ್ದನ್ನೂ ಸಹ ಶೃಂಗಾರರಸದಲ್ಲಿ ಹಾಡುಗಳನ್ನು ಕಟ್ಟಿಕೊಡುವ ರೀತಿಯಲ್ಲಿ ಕಂಬಾರರಿಗೆ ಕಂಬಾರರೇ ಸಾಟಿ.

ಹೌದು ಕಂಬಾರರ ಮೇಲೆ ಹಲವಾರು ಆರೋಪಗಳಿವೆ. ಮುದೇನೂರು ಸಂಗಣ್ಣನವರ ಸಂಗ್ರಹದ ಲಕ್ಷಾಧಿಪತಿ ರಾಜನ ಕಥೆಯನ್ನು ಕದ್ದು ನಾಟಕವಾಗಿಸಿದರು, ಪತ್ತಾರ ಮಾಸ್ತರರ ಕಥೆಯನ್ನು ಬಳಸಿ ಸಂಗ್ಯಾಬಾಳ್ಯಾ ರಚಿಸಿದರು, ಲಿಯೋ ಟಾಲಸ್ಟಾಯ್ ಕಥೆಯನ್ನು ಸಾಂಬಶಿವ ಪ್ರಹಸನವನ್ನಾಗಿಸಿದರು.. ಹೀಗೆ ಕೃತಿಚೌರ್ಯದ ಆರೋಪಗಳು ಬೇಕಾದಷ್ಟಿವೆ. ಯಾರು ಎಲ್ಲಿಂದ ಏನು ಕದ್ದರು ಅನ್ನುವುದು ನಾಟಕ ಕಟ್ಟುವ ಪ್ರಕ್ರಿಯೆಯಲ್ಲಿ ಅಮುಖ್ಯವೆನಿಸುತ್ತದೆ ಹಾಗೂ ನಾಟಕವೇ ಅಂತಿಮವಾಗುತ್ತದೆ. ಬಹುತೇಕ ನಾಟಕಕಾರರು ಪೌರಾಣಿಕ ಕಥೆಗಳಿಂದ ಇಲ್ಲವೇ ಐತಿಹಾಸಿಕ ಸನ್ನಿವೇಶಗಳಿಂದ ಪ್ರಭಾವಿತರಾಗಿ ನಾಟಕಗಳನ್ನು ಕಟ್ಟಿಕೊಟ್ಟಿದ್ದಿದೆ. ಗಿರೀಶ್ ಕಾರ್ನಾಡರ ಬಹುತೇಕ ನಾಟಕಗಳು ಪುರಾಣ ಪಾತ್ರ ಸನ್ನಿವೇಶಗಳನ್ನು ಆಧರಿಸಿದ್ದಾಗಿವೆ. ತುಘಲಕ್ ನಾಟಕ ಐತಿಹಾಸಿಕವಾಗಿದೆ. ಅಂದರೆ ಕಚ್ಚಾ ಪದಾರ್ಥಗಳನ್ನು ಎಲ್ಲಿಂದಲಾದರೂ ಹೆಕ್ಕಿ ತೆಗೆದು ಕ್ರಿಯಾಶೀಲತೆಯನ್ನು ಬಳಸಿ ಹೊಸ ರೂಪಕೊಡುವುದು ಇದೆಯಲ್ಲಾ ಅದೂ ಸಹ ಕಲೆ, ಅದೂ ಕೂಡಾ ಪ್ರತಿಭೆ. ಅದರಲ್ಲಿ ಕಂಬಾರರು ಎತ್ತಿದ ಕೈ. ನಾಟಕ ಕೃತಿಗಳಿಗೆ ಆಕರಗಳು ಯಾವುದಾದರೇನು? ಸಿಕ್ಕಿದ ವಸ್ತುವನ್ನು ದಕ್ಕಿಸಿಕೊಂಡು ಆಕರ್ಷನೀಯವಾಗಿ ವಿನ್ಯಾಸಗೊಳಿಸುವುದು ಅಷ್ಟು ಸುಲಭಸಾಧ್ಯವಲ್ಲ. ಆದರೆ ಕಂಬಾರರಂತಹ ಸೃಜನಶೀಲ ಬರಹಗಾರರಿಗೆ ಅದು ಅಸಾಧ್ಯವೇನಲ್ಲಾ. ಹೀಗಾಗಿ ಯಾವುದೇ ಯಶಸ್ವಿ ಕೃತಿಯ ಮೂಲವನ್ನು ಹುಡುಕುವ ಬದಲು ಕಣ್ಣ ಮುಂದಿರುವ ಆಕೃತಿಯ ಬಗ್ಗೆ ಚರ್ಚಿಸುವುದು ಇಂದಿನ ಅಗತ್ಯವಾಗಿದೆ.

ಅದ್ಯಾಕೋ ‘ಋಷ್ಯಶೃಂಗ’ ಸಿನೆಮಾ ಆಗಿ ವಿಫಲವಾಯಿತು. ನಾಟಕವೂ ಸಹ ಹೆಚ್ಚು ಪ್ರದರ್ಶನಗಳನ್ನು ಕಾಣಲಿಲ್ಲ. ಕಂಬಾರರ ಜೋಕುಮಾರಸ್ವಾಮಿ, ಸಂಗ್ಯಾಬಾಳ್ಯಾ, ಹರಕೆಯ ಕುರಿ ಯಂತಹ ನಾಟಕಗಳಿಗೆ ಸಿಕ್ಕಷ್ಟು ಯಶಸ್ಸು ಈ ನಾಟಕಕ್ಕೆ ದಕ್ಕಲಿಲ್ಲ. ಈಗಂತೂ ‘ಋಷ್ಯಶೃಂಗ’  ನಾಟಕದ ವಸ್ತು ಔಟ್ ಆಪ್ ಡೇಟೆಡ್ ಎನ್ನಿಸುವಂತಿದೆ. ಹೀಗಾಗಿ ಈ ನಾಟಕವನ್ನು ಬಹುತೇಕ ರಂಗಕರ್ಮಿಗಳೇ ಮರೆತಿದ್ದಾರೆ. ಆದರೂ ಈ ನಾಟಕದ ಹಾಡುಗಳು ಮಾತ್ರ ಜನಪ್ರೀಯವಾಗಿವೆ. ಈಗಲೂ ಜೀವಂತವಾಗಿವೆ.

ಕಂಬಾರರ ಕುರಿತು ಉಪನ್ಯಾಸವನ್ನು ಕೊಟ್ಟ ಲಿಂಗರಾಜ ಕಂಬಾರರನ್ನು ಬ್ರೊನಾಲ್ಟ್ ಬ್ರೆಕ್ಟ್ ಗೆ ಹೋಲಿಕೆ ಮಾಡಿದರು. ಈ ಹಿಂದೆ ಕಂಬಾರರಿಗೆ ಅಭಿನಂದನೆ ಹೇಳುವ ಆತುರದಲ್ಲಿ ಪ್ರೊ.ಬರಗೂರು ರಾಮಚಂದ್ರಪ್ಪನವರೂ ಸಹ ಕಂಬಾರರನ್ನು ಕನ್ನಡದ ಬ್ರೆಕ್ಟ್ ಎಂದು ಹೊಗಳಿ ಹೊನ್ನಶೂಲಕ್ಕೇರಿಸಿದ್ದರು. ಬರಗೂರರು ಕಂಬಾರರನ್ನು ಸಮರ್ಥಿಸಿಕೊಳ್ಳಬೇಕೆಂದಿದ್ದರೆ ಅವರ ನಾಟಕ ಸಾಹಿತ್ಯಗಳ ಅಂಶಗಳನ್ನು ಪ್ರಸ್ತಾಪಿಸಿ ಸಮರ್ಥಿಸಿಕೊಳ್ಳಬಹುದಾಗಿತ್ತು. ಅತ್ಯದ್ಬುತ ನಾಟಕಕಾರ ಎಂದು ಹೇಳಬಹುದಾಗಿತ್ತು. ಆದರೆ ಬ್ರೆಕ್ಟ್ ಗೆ ಹೋಲಿಸಿದ್ದು ಅನಗತ್ಯವಾಗಿತ್ತು. ಬ್ರೆಕ್ಟ್ ಮತ್ತು ಕಂಬಾರ ಈ ಇಬ್ಬರೂ ನಾಟಕಕಾರರು ಎನ್ನುವುದನ್ನು ಹೊರತು ಪಡಿಸಿ ಬೇರೆ ಯಾವುದೇ ರೀತಿಯ ಸಾಮ್ಯತೆಗಳೂ ಇಲ್ಲ. ಬ್ರೆಕ್ಟ್ ಒಬ್ಬ ಮಹಾನ್ ಮಾನವತಾವಾದಿಯಾಗಿದ್ದರೆ ಕಂಬಾರರೊಳಗೊಬ್ಬ ಮನುವಾದಿಯನ್ನು ಅವರ ನಾಟಕಗಳ ಮೂಲಕ ಗುರುತಿಸಬಹುದಾಗಿದೆ. ಬ್ರೆಕ್ಟ್ ಒಬ್ಬ ಎಡಪಂಥೀಯ ಪ್ರಗತಿಪರ ವಿಚಾರವಾದಿಯಾಗಿದ್ದರೆ ಕಂಬಾರರಿಗೆ ಅಂತಹ ಯಾವುದೇ ಪಂಥ ಸಿದ್ದಂತಗಳಿಲ್ಲ. ಧಾರವಾಡದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾಗ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಕಂಬಾರರು “ ನಾನು ಎಡವೋ ಅಥವಾ ಬಲವೋ ಎಂದು ಈಗಲೂ ನನಗೆ ಗೊತ್ತಾಗಿಲ್ಲ. ನನಗೆ ಎರಡು ಕೈಗಳು ಇವೆಯಾದ್ದರಿಂದ ಎಡವೂ ಹೌದು, ಬಲನೂ ಹೌದು” ಎಂದು ಗೊಂದಲದ ಹೇಳಿಕೆ ಕೊಟ್ಟಿದ್ದರು. ಇತ್ತ ಎಡವೂ ಅಲ್ಲದ, ಅತ್ತ ಬಲವೂ ಅಲ್ಲದ, ಯಾವುದೇ ತತ್ವ ಸಿದ್ದಾಂತಗಳಿಗೆ ಅಂಟಿಕೊಳ್ಳದ ಕಂಬಾರರನ್ನು ಪ್ರಭುತ್ವ ವಿರೋಧಿ ವೈಚಾರಿಕ ನಾಟಕಕಾರ ಬ್ರೆಕ್ಟ್ ಗೆ ಹೋಲಿಸೋದೇ ಅನಗತ್ಯ.

ಕಂಬಾರರ ಜೊತೆಗೆ ಅನೇಕ ವಿಷಯಗಳಲ್ಲಿ ನನಗೆ ಭಿನ್ನಾಭಿಪ್ರಾಯಗಳಿವೆ. ಅವರ ನಾಟಕದ ವಸ್ತುವಿನ ಬಗ್ಗೆ ತಕರಾರಿದೆ. ಅವರ ನಾಟಕಗಳಲ್ಲಿ ಮಹಿಳೆಯನ್ನು ಚಿತ್ರಿಸಿದ ರೀತಿಯ ಬಗ್ಗೆ ಪ್ರಶ್ನೆಗಳಿವೆ, ಅವರ ಅವಕಾಶವಾದಿತನದ ಬಗ್ಗೆ ಬೇಕಾದಷ್ಟು ದೂರುಗಳಿವೆ. ಆದರೆ ಅವರ ಕತೃತ್ವ ಶಕ್ತಿಯ ಕುರಿತು, ಅವರ ಕಾವ್ಯಾತ್ಮಕತೆಯ ಕುರಿತು, ನಾಟಕದ ವಿನ್ಯಾಸಗಳ ಕುರಿತು ಮೆಚ್ಚುಗೆ ಇದೆ. ಭಾಷಾ ಬಳಕೆ ಹಾಗೂ ನಿರ್ವಹಣೆ ಬಗ್ಗೆ ಈಗಲೂ ಕುತೂಹಲವಿದೆ. ಅಪ್ಪಟ ದೇಸಿ ಪ್ರತಿಭೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂತಹ ಅಪ್ರತಿಮ ಬರಹಗಾರ ಡಾ.ಚಂದ್ರಶೇಖರ್ ಕಂಬಾರರ 87 ನೇ ಜನ್ಮದಿನಾಚರಣೆಯ (ಜನವರಿ 2) ದಿನಕ್ಕಾಗಿ ಶುಭಕೋರುವೆ ಹಾಗೂ ಅವರ ನೂರನೇ ಜನ್ಮದಿನಾಚರಣೆಯನ್ನೂ ಸಂಭ್ರಮಿಸುವ ಭಾಗ್ಯ ಕನ್ನಡಿಕರಿಗೆ ದೊರಕಲಿ ಎಂದು ಆಶಿಸುವೆ.

- ಶಶಿಕಾಂತ ಯಡಹಳ್ಳಿ
   07-01-2023 

ಗುಜರಾತ್ ಸರಕಾರದ ಬಣ್ಣ ಬಯಲು; ಬಿಡುಗಡೆಗೊಂಡ ಪಾತಕಿಗಳಿಗೆ ಜೈಲು

ತಹ ತಹ - 485

ಗುಜರಾತ್ ಸರಕಾರದ ಬಣ್ಣ ಬಯಲು; 
ಬಿಡುಗಡೆಗೊಂಡ ಪಾತಕಿಗಳಿಗೆ ಜೈಲು

ಇಂದು ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ತೀರ್ಪಿಂದನ್ನು ಕೊಟ್ಟು ಮತಾಂಧರ ವಿರುದ್ಧ ಮಾನವೀಯತೆಯನ್ನು ಎತ್ತಿ ಹಿಡಿದಿದೆ. ಈ ತೀರ್ಪಿನಿಂದಾಗಿ ಗುಜರಾತಿನ ಸಂಘಿ ಸರಕಾರದ ಕೆನ್ನೆಗೆ ಬಾರಿಸಿದಂತಾಗಿದೆ. ಕೇಂದ್ರದ ಬಿಜೆಪಿ ಸರಕಾರದ ಕೋಮುಸಿದ್ದಾಂತಕ್ಕೆ ಮುಖಭಂಗವಾದಂತಾಗಿದೆ. ಇಷ್ಟಕ್ಕೂ ಏನಾಯ್ತು ಎಂದು ತಿಳಿಯುವ ಮುನ್ನ ಇಡೀ ಪ್ರಕರಣದ ಹಿನ್ನೆಲೆ ಅರಿಯಬೇಕಿದೆ.

ಇಪ್ಪತ್ತು ಮೂರು ವರ್ಷಗಳ ಹಿಂದೆ 2002 ರಲ್ಲಿ ದೇಶಕ್ಕೆ ದೇಶವೇ ತಲೆತಗ್ಗಿಸುವಂತಹ ಕೋಮುಗಲಭೆ ಹತ್ಯಾಂಕಾಡಕ್ಕೆ ಗುಜರಾತ್ ಸಾಕ್ಷಿಯಾಗಿತ್ತು. ಮತಾಂಧತೆಯ ಮತ್ಸರದ ಹಾಲಾಹಲವನ್ನು ಮನಸಲ್ಲಿ ತುಂಬಿಕೊಂಡು ಪ್ರಚೋದನೆಗೆ ಒಳಗಾದ ಕೋಮುಕ್ರಿಮಿಗಳ ಗುಂಪೊಂದು ಮುಸ್ಲಿಂ ಕುಟುಂಬವೊಂದನ್ನು ಟಾರ್ಗೆಟ್ ಮಾಡಿತ್ತು. ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನು ಎನ್ನುವ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಯಿತು. ಅವಳ ಮೂರು ವರ್ಷದ ಮಗಳನ್ನು ತಾಯಿಯ ಮುಂದೆ ಹತ್ಯೆಮಾಡಲಾಯಿತು. ಬಾನು ಕುಟುಂಬದ ಇತರ ಏಳೂ ಜನರನ್ನು ಕೊಂದು ಅಟ್ಟಹಾಸ ಮೆರೆಯಲಾಗಿತ್ತು.

ತದನಂತರ ಹತ್ಯಾಕಾಂಡದ ವಿಚಾರಣೆ ನಡೆದು 2008 ರಲ್ಲಿ ಕಿರಾತಕರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ಜೈಲಲ್ಲಿ ಕೊಳೆಯುವಂತೆ ಮಾಡಿತು. ಆದರೆ ಈ ಶಿಕ್ಷೆ ಮೇಲ್ವರ್ಗದ ಹಿಂದೂ ಮತಾಂಧರಿಗೆ ನುಂಗಲಾರದ ತುತ್ತಾಯಿತು. ಸಂಘ ಪರಿವಾರದ ಸರಕಾರದ ಮೇಲೆ ಅಪರಾಧಿಗಳನ್ನು ಬಿಡುಗಡೆಗೊಳಿಸಲು ಒತ್ತಡ ಸೃಷ್ಟಿಸಲಾಯ್ತು. ಸರಕಾರ ಗುಜರಾತಿನ ನ್ಯಾಯಾಲಯದ ಮೇಲೆ ಒತ್ತಡ ತಂದಿದ್ದರಿಂದಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಹನ್ನೊಂದು ಜನ ಕ್ರಿಮಿನಲ್ ಗಳನ್ನು ಅವಧಿಪೂರ್ವವಾಗಿ ಬಿಡುಗಡೆಗೆ ಕೋರ್ಟ್ ಮೇ.13.  2022 ರಂದು ಆದೇಶಿಸಿತು.  ಆಗಸ್ಟ್ 15 ರ ಸ್ವಾತಂತ್ರ್ಯ ದಿನದಂದೇ ಈ ಅತ್ಯಾಚಾರಿ ಹತ್ಯಾರಿಗಳು ಜೈಲಿನಿಂದ ಬಿಡುಗಡೆಯಾಗಿ ಸ್ವತಂತ್ರವಾಗಿದ್ದು ವಿಪರ್ಯಾಸ.

ಘನಘೋರ ಹತ್ಯಾಕಾಂಡ ಮಾಡಿ ಶಿಕ್ಷೆಗೊಳಗಾದ ಕೊಲೆಪಾತಕರನ್ನು ಸಂಘೀ ಸರಕಾರ ಯಾಕೆ ಮುತುವರ್ಜಿ ವಹಿಸಿ ಅವಧಿಗೆ ಮುನ್ನವೇ ಜೈಲಿಂದ ಬಿಡುಗಡೆ ಗೊಳಿಸಿತು? ಯಾಕೆಂದರೆ ಪಾತಕಿಗಳು ಹಿಂದುಗಳಾಗಿದ್ದರು. ಹಿಂದುತ್ವವಾದಿ ಧರ್ಮಾಂಧ ಸಿದ್ದಾಂತದ ಪ್ರತಿಪಾದಕರಾಗಿದ್ದರು. ಕಡು ಮುಸ್ಲಿಂ ವಿರೋಧಿಯಾಗಿದ್ದರು. ಯಾರು ಇವೆಲ್ಲಾ ಆಗಿರುತ್ತಾರೋ ಅಂತವರು ಧರ್ಮರಕ್ಷಣೆಯ ಹೆಸರಲ್ಲಿ ಏನೇ ಮಾಡಿದರೂ ಸರಕಾರ ಬೆಂಬಲಕ್ಕಿರುತ್ತದೆ. ಸಂಘದ ನಾಯಕತ್ವ ರಕ್ಷಣೆಗೆ ದಾವಿಸುತ್ತದೆ, ಎಂತಹುದೇ ಕಠಿನಾತೀಕಠಿನ ಶಿಕ್ಷೆಯಾದರೂ ಬಂಧನದಿಂದ ಬಿಡುಗಡೆ ಗೊಳಿಸುತ್ತದೆ ಎನ್ನುವ ಅಭಯವನ್ನು ಹಿಂದುತ್ವವಾದಿ ಕಾರ್ಯಕರ್ತರಿಗೆ ಮನದಟ್ಟುಮಾಡಬೇಕಿತ್ತು. ಮುಂದೆ ನಡೆಯಬಹುದಾದ ಕೋಮುದಂಗೆಗಳಲ್ಲಿ ತೊಡಗಿಕೊಳ್ಳುವವರಲ್ಲಿ ಇರಬಹುದಾದ ಕಾನೂನು ಶಿಕ್ಷೆಯ ಭಯವನ್ನು ಹೋಗಲಾಡಿಸಬೇಕಿತ್ತು.  ಅನ್ಯ ಧರ್ಮದ್ವೇಷದ ದೌರ್ಜನ್ಯವನ್ನು ಕಾನೂನಿನ ಭಯವಿಲ್ಲದೇ ನಿರ್ಭೀತಿಯಿಂದ ಮಾಡಬಹುದು ಎನ್ನುವ ಅಭಯವನ್ನು ಕೊಡಬೇಕಾಗಿತ್ತು. ಅದಕ್ಕಾಗಿ ಗರಿಷ್ಟ ಶಿಕ್ಷೆಗೆ ಒಳಗಾದ ಸಂಘದ ಕಾರ್ಯಕರ್ತರನ್ನು ಕೇಂದ್ರ ಹಾಗೂ ಗುಜರಾತ್ ಸರಕಾರವು ನ್ಯಾಯಾಲಯದ ದಾರಿ ತಪ್ಪಿಸಿ ಶಿಕ್ಷೆಪೀಡಿತರನ್ನು ಕಾನೂನಾತ್ಮಕವಾಗಿಯೇ ಬಿಡುಗಡೆ ಗೊಳಿಸಿ ಸಾರ್ವಜನಿಕವಾಗಿ ಸನ್ಮಾನಿಸಲಾಯ್ತು. ಸರಕಾರ ಹಾಗೂ ಪಕ್ಷದ ಈ ಅಪರಾಧಿ ರಕ್ಷಣಾ ಕಾರ್ಯವು ಮುಂದೆ ಆಗಬಹುದಾದ ಕೋಮುದ್ವೇಷದ ದಳ್ಳುರಿ ಪ್ರಕರಣದಲ್ಲಿ ಭಾಗವಹಿಸುವವರಿಗೆ ಪ್ರಚೋದನೆ ಕೊಡುವಂತಹುದಾಗಿತ್ತು. ಆದರೆ ಸುಪ್ರೀಂ ಕೋರ್ಟ್ ಈ ಎಲ್ಲಾ ಸಾಧ್ಯತೆಗಳಿಗೆ ಇತಿಶ್ರೀ ಹಾಡಿತು. ಬಿಡುಗಡೆಗೊಂಡ ಅಪರಾಧಿಗಳನ್ನು ಮತ್ತೆ ಬಂಧೀಖಾನೆಗೆ ಸೇರಿಸಿತು.

ಆಘಾತಕಾರಿಯಾದ ಈ ತೀರ್ಪು ದೇಶಾದ್ಯಂತ ಸಂಚಲನವನ್ನುಂಟು ಮಾಡಿತು. ಪ್ರತಿಪಕ್ಷಗಳು, ಪ್ರಗತಿಪರರು, ಸಾಮಾಜಿಕ ಹೋರಾಟಗಾರರಿಂದ ದೇಶಾದ್ಯಂತ ಆಕ್ರೋಶ ಬುಗಿಲೆದ್ದಿತು. ದೇಶವಾಸಿಗಳು ನ್ಯಾಯಾಲಯವನ್ನೇ ಸಂದೇಹದಿಂದ ನೋಡುವಂತೆ ಮಾಡಿತು. ಸಂಘ ಪರಿವಾರದವರು ಮಾತ್ರ ಸಂಭ್ರಮಿಸಿದರು. ಬಿಡುಗಡೆಗೊಂಡ ಪಾತಕಿಗಳನ್ನು ಮರೆವಣಿಗೆಯಲ್ಲಿ ಕರೆದೊಯ್ದು ಅದ್ಧೂರಿಯಾಗಿ ಸನ್ಮಾನಿಸಿದರು. ಬಿಜೆಪಿ ಶಾಸಕ ಹಾಗೂ ಸಂಸದರೇ ಬಹಿರಂಗವಾಗಿ ಈ ಕೊಲೆಪಾತಕರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದ್ದರು. "ಸರಕಾರ ನಮ್ಮದು, ಕೋರ್ಟು ನಮ್ಮದು. ಅನ್ಯ ಧರ್ಮೀಯರ ಮೇಲೆ  ದೌರ್ಜನ್ಯ ಮಾಡಿಯೂ ಬಿಡುಗಡೆಯಾಗಬಲ್ಲೆವು" ಎಂಬ  ಸಂದೇಶವನ್ನು ಸಾರುವ ಹಾಗೂ ಅಲ್ಪಸಂಖ್ಯಾತರಲ್ಲಿ ಭಯ ಹುಟ್ಟಿಸುವುದೇ ಈ ಕೋಮುವ್ಯಾಧಿಗಳು ಪ್ರಾಯೋಜಿಸಿದ ಮೆರವಣಿಗೆ ಮತ್ತು ಸನ್ಮಾನದ ಹಿಂದಿರುವ ಮುಖ್ಯ ಉದ್ದೇಶವಾಗಿತ್ತು.

ಆದರೆ ಪ್ರಜ್ಞಾವಂತರು ಸುಮ್ಮನಿರಲಿಲ್ಲ. ಈ ಅಕಾಲಿಕ ಆದೇಶದ ವಿರುದ್ಧ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿದರು. ನ್ಯಾಯ ಕೊಡಿಸಿ ಎಂದು ಬಿಲ್ಕಿಸ್ ಬಾನು ಅರ್ಜಿ ಸಲ್ಲಿಸಿದರು. ಜೊತೆಗೆ ತೃಣಮೂಲ ಕಾಂಗ್ರೆಸ್ಸಿನ ಸಂಸದೆ ಮಹುವಾ ಮೊಯಿತ್ರಾ, ಸಿಪಿಎಂ ಪಕ್ಷದ ಸುಭಾಷಿಣಿ ಅಲಿ, ಪತ್ರಕರ್ತೆ ರೇವತಿ ಲೌಲ್, ಲಕ್ನೊ ವಿವಿ ಉಪಕುಲಪತಿ ರೂಪ್ ರೇಖಾ ವರ್ಮಾ ಇವರೆಲ್ಲಾ ಗುಜರಾತ್ ಸರಕಾರದ ಕ್ರಮದ ವಿರುದ್ದ ಸುಪ್ರೀಂ ಕೋರ್ಟಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿದರು. 

ಎಲ್ಲಾ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ 11 ದಿನಗಳ ಕಾಲ ನಿರಂತರ ವಿಚಾರಣೆ ನಡೆಸಿ 2023 ಅಕ್ಟೋಬರಿನಲ್ಲಿ ತೀರ್ಪನ್ನು ಕಾಯ್ದಿರಿಸಿತ್ತು. ಅವಧಿಗೆ ಮುನ್ನ ಅಪರಾಧಿಗಳ ಶಿಕ್ಷೆ ಕಡಿತಕ್ಕೆ ಕಾರಣ ಕೇಳಿ ಕೇಂದ್ರ ಹಾಗೂ ಗುಜರಾತ್ ಸರಕಾರಕ್ಕೆ ಸುಪ್ರೀಂ ಸೂಚಿಸಿತ್ತು. 

ಇವತ್ತು 2023 ಜನವರಿ 8 ರಂದು ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿರುವ ಜಸ್ಟೀಸ್ ಬಿ.ವಿ.ನಾಗರತ್ನರವರು ಅಮೋಘವಾದ ನ್ಯಾಯದಪರ ತೀರ್ಪನ್ನು ಪ್ರಕಟಿಸಿದರು. ಈ ಐತಿಹಾಸಿಕ ತೀರ್ಪಿನ ಸಾರಾಂಶ ಹೀಗಿದೆ.

1. ಗುಜರಾತ್ ಸರಕಾರದ ಮನವಿಯಂತೆ ಅಪರಾಧಿಗಳ ಬಿಡುಗಡೆಗೊಳಿಸಿದ ಗುಜರಾತ್ ನ್ಯಾಯಾಲಯದ ಮೇ.13, 2022 ರ ತೀರ್ಪನ್ನು ರದ್ದುಗೊಳಿಸಲಾಗಿದೆ.

2. ಅಪರಾಧಿಗಳ ಪರವಾದ ತೀರ್ಪನ್ನು ಗುಜರಾತ್ ಸರಕಾರವು ನ್ಯಾಯಾಲಯಕ್ಕೆ ವಂಚಿಸಿ ಪಡೆದುಕೊಂಡಿದೆ.

3. ಸಂತ್ರಸ್ಥೆಯ ಹಕ್ಕು ಇಲ್ಲಿ ಮುಖ್ಯ. ಸಂತ್ರಸ್ತ ಮಹಿಳೆ ಗೌರವಕ್ಕೆ ಅರ್ಹಳು. ಮಹಿಳೆಯರ ವಿರುದ್ಧ ನಡೆಸಲಾಗುವ ಬರ್ಬರ ಅಪರಾಧಗಳಲ್ಲಿ ಶಿಕ್ಷೆ ಕಡಿತಗೊಳಿಸಲಾಗದು.

4. ಅಪರಾಧಿಗಳಿಗೆ ಶಿಕ್ಷೆ ಯಾವ ರಾಜ್ಯದ ನ್ಯಾಯಾಲಯದಲ್ಲಿ ವಿಧಿಸಲಾಗಿದೆಯೋ ಅಂತಹ ರಾಜ್ಯದ ಸರಕಾರಗಳು ಶಿಕ್ಷೆ ಕಡಿತಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದೇ ಹೊರತು ಅಪರಾಧ ನಡೆದ ರಾಜ್ಯದ ಸರಕಾರವಲ್ಲ. 

 5. 1992 ರ ಶಿಕ್ಷೆ ಕಡಿತ ಕಾಯಿದೆಯ ಆಧಾರದಲ್ಲಿ ಗುಜರಾತ್ ಸರಕಾರ ಅಪರಾಧಿಗಳನ್ನು ಅವಧಿಗೆ ಮುನ್ನ ಬಿಡುಗಡೆಗೊಳಿಸಿದೆ. ಆದರೆ 2014 ರಲ್ಲಿ ಜಾರಿಗೆ ಗೊಳಿಸಲಾದ ಕಾನೂನಿನ ಪ್ರಕಾರ ಗರಿಷ್ಟ ಶಿಕ್ಷೆ ಎದುರಿಸುವ ಪ್ರಕರಣಗಳಲ್ಲಿ ಶಿಕ್ಷೆ ಕಡಿತಗೊಳಿಸುವುದಕ್ಕೆ ಅವಕಾಶವಿಲ್ಲ.

ಹೀಗೆ ಹೇಳಿದ ಸುಪ್ರೀಂ ಕೋರ್ಟ್ ಎಲ್ಲಾ ಹನ್ನೊಂದು ಜನ ದುಷ್ಕರ್ಮಿಗಳ ಬಿಡುಗಡೆ ಆದೇಶವನ್ನು ರದ್ದು ಮಾಡಿ ಮತ್ತೆ ಜೈಲಿಗೆ ಕಳುಹಿಸಲು ಆದೇಶಿಸಿದೆ. ಇಂತಹ ನ್ಯಾಯಸಮ್ಮತ ತೀರ್ಪುಗಳಿಂದಲೇ ಇನ್ನೂ ಈ ದೇಶದ ಜನರಲ್ಲಿ ನ್ಯಾಯಾಲಯದ ಮೇಲೆ ಒಂದಿಷ್ಟು ನಂಬಿಕೆ ಉಳಿದುಕೊಂಡಿದೆ. ಇಂತಹ ದಿಟ್ಟ ತೀರ್ಪನ್ನು ಪ್ರಕಟಿಸಿದ ಜಸ್ಟೀಸ್ ನಾಗರತ್ನರವರು ಅಭಿನಂದನಾರ್ಹರು. 

ಗುಜರಾತ್ ಸರ್ಕಾರವು ಕೇಂದ್ರ ಗೃಹ ಸಚಿವಾಲಯದ ಅನುಮತಿ ಪಡೆದೇ ಅಪರಾಧಿಗಳ ಬಿಡುಗಡೆಗೆ ನಿರ್ಧಾರ ಮಾಡಿದ್ದು. ಹಾಗಾಗಿ ಕೇಂದ್ರ ಸರ್ಕಾರ ಅದರಲ್ಲೂ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇರವಾಗಿ ಶಿಕ್ಷಾರ್ಹ ಅಪರಾಧಿ ಪ್ರಕರಣದಲ್ಲಿ ಬಾಧ್ಯಸ್ಥರು.

ಧರ್ಮದ ಹೆಸರಲ್ಲಿ, ಮತಾಂಧತೆಯ ಅಮಲಿನಲ್ಲಿ ಎಂತಹುದೇ ಹತ್ಯಾಕಾಂಡ ಮಾಡಿ ಜಿರ್ಣಿಸಿಕೊಳ್ಳುತ್ತೇವೆ ಎಂಬ ದುರಹಂಕಾರದಲ್ಲಿ ಮೆರೆಯುತ್ತಿದ್ದ ಸಂಘಿ ಸಂತಾನಗಳಿಗೆ ಈ ತೀರ್ಪು ಮರ್ಮಾಘಾತವನ್ನುಂಟು ಮಾಡಿದೆ. ಕೇಂದ್ರ ಪ್ರಭುತ್ವದ ಬೆಂಬಲದಿಂದ ಗುಜರಾತ್ ಸರಕಾರವೇ ಹತ್ಯಾಕಾಂಡದ ಅಪರಾಧಿಗಳ ರಕ್ಷಣೆಗೆ ಮುಂದಾಗಿದ್ದು ಅಸಹನೀಯವಾಗಿದೆ. ಮತಾಂಧ ಕೊಲೆಪಾತಕರ ಪರವಾದ ಈ ಸಂಘಿ ಸರಕಾರಗಳ ನಡೆ ಪ್ಯಾಸಿಸಂ ಆಡಳಿತಕ್ಕೆ ಮುನ್ನುಡಿಯಾಗಿದೆ. ಪ್ರಭುತ್ವ ಪ್ರಾಯೋಜಿತ ಹತ್ಯಾಕಾಂಡದ ಅಪರಾಧಿಗಳನ್ನು ಮತ್ತೆ ಜೈಲಿಗಟ್ಟಿದ ಸುಪ್ರೀಂಕೋರ್ಟ್ ಆದೇಶ  ಸ್ವಲ್ಪ ಸಮಾಧಾನಕರವಾಗಿದೆ. 

- ಶಶಿಕಾಂತ ಯಡಹಳ್ಳಿ

    08-01-2023

ರಾಮಮಂದಿರಕ್ಕೆ ಬಾಂಬ್ ಬೆದರಿಕೆ; ಸಂಘಿ ನೇತಾರನಿಂದ ಮುಸ್ಲಿಂ ಹೆಸರು ಬಳಕೆ

ತಹ ತಹ - 484

ರಾಮಮಂದಿರಕ್ಕೆ ಬಾಂಬ್ ಬೆದರಿಕೆ; ಸಂಘಿ ನೇತಾರನಿಂದ ಮುಸ್ಲಿಂ ಹೆಸರು ಬಳಕೆ

ರಾಮಮಂದಿರ ಉದ್ಘಾಟನೆಯ ದಿನಾಂಕ ಹತ್ತಿರ ಇರುವ ಸಂದರ್ಭದಲ್ಲಿ "ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಸ್ಪೋಟಿಸುತ್ತೇವೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರನ್ನು  ಹತ್ಯೆ ಮಾಡುತ್ತೇವೆ" ಎಂದು ಅಲಂ ಅನ್ಸಾರಿ ಮತ್ತು ಜುಬೈರ್ ಖಾನ್ ಎಂಬ ಮುಸ್ಲಿಂ ಯುವಕರ ಹೆಸರಲ್ಲಿ ಕಳುಹಿಸಲಾದ ಬೆದರಿಕೆಯ ಈಮೇಲ್ ನಲ್ಲಿರುವುದು ನಿಜವೇ ಆಗಿದ್ದರೆ ಏನಾಗುತ್ತಿತ್ತು? ಇಷ್ಟೊತ್ತಿಗೆ ದೇಶದ ಅಷ್ಟೂ ಗೋದಿ ಮೀಡಿಯಾಗಳು ಮುಸ್ಲಿಂ ವಿರೋಧಿ ಪ್ರಚಾರಕ್ಕೆ ತಮ್ಮ ಸಮಯವನ್ನು ಮೀಸಲಾಗಿಡುತ್ತಿದ್ದವು. ಮುಸ್ಲಿಮರೆಲ್ಲಾ ಭಯೋತ್ಪಾದಕರು, ಆತಂಕವಾದಿಗಳು ಎಂದು ಸಂಘ ಪರಿವಾರದವರು ತಮ್ಮ ಧರ್ಮದ್ವೇಷದ ಪ್ರಪಗಂಡಾವನ್ನು ರಾಷ್ಟ್ರೀಕರಣಗೊಳಿಸುತ್ತಿದ್ದರು. ಯೋಗಿ ಆದಿತ್ಯನಾಥರವರು ಕಳುಹಿಸಿದ ಬುಲ್ಡೋಜರಗಳು ಬೆದರಿಕೆಯೊಡ್ಡಿದ್ದ ಆಗುಂತಕರ ಮನೆಯನ್ನು ದ್ವಂಸ ಮಾಡುತ್ತಿದ್ದವು. "ಹಿಂದೂಗಳ ಶ್ರದ್ದಾಕೇಂದ್ರವನ್ನು ಹಿಂದೂವಿರೋಧಿಗಳಾದ ಮುಸ್ಲಿಮರು ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ಹಿಂದೂ ದ್ರೋಹಿಗಳನ್ನು ಸುಮ್ಮನೇ ಬಿಡಬಾರದು, ಪಾಕಿಸ್ಥಾನಕ್ಕೆ ಓಡಿಸಬೇಕು, ಹಿಂದೂ ಧರ್ಮ ಅಪಾಯದಲ್ಲಿದೆ, ಹಿಂದೂಗಳು ಆತಂಕಕ್ಕೊಳಗಾಗಿದ್ದಾರೆ " ಎಂದೆಲ್ಲಾ ಧರ್ಮದ್ವೇಷದ ಭಾಷಣಗಳು ದೇಶಾದ್ಯಂತ ಪ್ರತಿದ್ವನಿಸುತ್ತಿದ್ದವು. ಇದನ್ನೇ ಬಂಡವಾಳ ಮಾಡಿಕೊಂಡು ಬಿಜೆಪಿ ಪಕ್ಷವು ಹಿಂದೂ ಧರ್ಮೀಯರ ಭಾವಪ್ರಚೋದನೆ ಮಾಡಿ ಮುಂಬರುವ ಲೋಕಸಭಾ ಚುನಾವಣೆಗಾಗಿ ಮತಕ್ರೂಢೀಕರಣ ಮಾಡಲು ಅಭಿಯಾನ ಶುರುಮಾಡುತ್ತಿತ್ತು. ಆದರೆ ಹಾಗಾಗಲಿಲ್ಲವಲ್ಲಾ ಎನ್ನುವುದೇ ಸಂಘ ಪರಿವಾರದವರಲ್ಲಿ ನಿರಾಸೆ ಹುಟ್ಟಿಸಿದೆ. ಈ ಬೆದರಿಕೆ ಪ್ರಕರಣ ಈಗ ಅರೆಸ್ಸೆಸ್ಸ್ ನವರ ಬುಡಕ್ಕೆ ಬಾಂಬಿಟ್ಟಂತಾಗಿದೆ. 

ಇಷ್ಟಕ್ಕೂ ಆಗಿದ್ದಾದರೂ ಏನೆಂದರೆ. ಭಾರತೀಯ ಕಿಸಾನ್ ಮಂಚ್ ಮತ್ತು ಭಾರತೀಯ ಗೌ ಸೇವಾ ಪರಿಷತ್ ಅಧ್ಯಕ್ಷ ದೇವೇಂದ್ರ ತಿವಾರಿ ಎನ್ನುವ ಸಂಘಪರಿವಾರದ ವ್ಯಕ್ತಿಗೆ ದೊಡ್ಡ ನಾಯಕ ಎನ್ನಿಸಿಕೊಳ್ಳುವ ಉಮೇದು ಆರಂಭವಾಯ್ತು. ಸರಕಾರದ ಭದ್ರತೆ ಪಡೆದು ದೊಡ್ಡವನೆನಿಸಿಕೊಳ್ಳುವ ಬಯಕೆ ಉಲ್ಬಣಿಸಿತು. ಅದಕ್ಕೆ ಮಾಸ್ಟರ್ ಪ್ಲಾನ್ ಸಿದ್ದವಾಯಿತು. ತನ್ನ ಉದ್ಯೋಗಿಗಳಾಗಿದ್ದ ತಹರ್ ಸಿಂಗ್ ಮತ್ತು ಓಂ ಪ್ರಕಾಶ್ ಮಿಶ್ರಾ ಎನ್ನುವ ಯುವಕರಿಬ್ಬರನ್ನು ಈ ಬಾಂಬ್ ಬೆದರಿಕೆ ಶಡ್ಯಂತ್ರದಲ್ಲಿ ಶಾಮೀಲಾಗಿಸಲಾಯ್ತು. ಈ ಇಬ್ಬರೂ ಯುವಕರು ಮುಸ್ಲಿಂ ಹೆಸರಲ್ಲಿ ನಕಲಿ ಈಮೇಲ್ ಐಡಿ ಕ್ರಿಯೇಟ್ ಮಾಡಿ "ತಾವು ಪಾಕಿಸ್ತಾನದ ಐಎಎಸ್ ಎಜೆಂಟಗಳಾಗಿದ್ದು ರಾಮಮಂದಿರವನ್ನು ಬಾಂಬಿಟ್ಟು ಉಡಾಯುಸುತ್ತೇವೆ, ಆದಿತ್ಯನಾಥರನ್ನು ಹತ್ಯೆ ಮಾಡುತ್ತೇವೆ, ಎಸ್ಟಿಪಿ ಮುಖ್ಯಸ್ತರನ್ನು ಸಾಯಿಸುತ್ತೇವೆ" ಎಂಬ ಬೆದರಿಕೆ ಸಂದೇಶವನ್ನು ನಕಲಿ ಐಡಿಗಳ ಮೂಲಕ ಮುಸ್ಲಿಂ ಹೆಸರಲ್ಲಿ ರವಾನಿಸಿದ್ದರು. "ತನ್ನ ಹತ್ಯೆಗೂ ಸಂಚು ರೂಪಿತವಾಗಿದ್ದು  ಬೆದರಿಕೆಯ ಮೇಲ್ ಬಂದಿದೆ ರಕ್ಷಣೆ ಕೊಡಿ" ಎಂದು ಈ ಸಂಚಿನ ರೂವಾರಿ ಸಂಘಪರಿವಾರದ ಮುಖಂಡ ದೇವೇಂದ್ರ ತಿವಾರಿಯೂ ದೂರು ಕೊಟ್ಟಿದ್ದ.

ಈ ಎಲ್ಲಾ ಬೆದರಿಕೆಯ ಈಮೇಲ್ ಗಳಿಂದ ಆತಂಕಕ್ಕೊಳಗಾದ ಎಸ್ಟಿಎಪ್ ತನಿಖೆಯನ್ನು ತೀವ್ರಗೊಳಿಸಿತು. ಇಮೇಲ್ ಐಡಿ ಮೂಲವನ್ನು ಹುಡುಕಿತು. ತಹರ್ ಸಿಂಗ್ ಮತ್ತು ಓಂಪ್ರಕಾಶ್ ಮಿಶ್ರಾ ಎಂಬ ಹೆಸರಿನ ಯುವಕರನ್ನು ಬಂಧಿಸಿತು. ಈ ಹುಸಿ ಬಾಂಬ್ ಬೆದರಿಕೆ ಪ್ರಕರಣದ ಸೂತ್ರದಾರನಾದ ದೇವೇಂದ್ರ ತಿವಾರಿ ತಲೆಮರೆಸಿಕೊಳ್ಳುವಂತಾಯಿತು.

ಈ ಸಂಘಿಗಳು ಹೇಗೆಲ್ಲಾ ಹಿಂದೂ ಯುವಕರನ್ನು ಬಳಸಿಕೊಂಡು ತಮ್ಮ ಸ್ವಾರ್ಥ ಸಾಧನೆ ಮಾಡಿಕೊಳ್ಳುತ್ತಾರೆ ಎನ್ನುವುದಕ್ಕೆ ಇದೊಂದು ತಾಜಾ ಉದಾಹರಣೆ. ಈ ಇಬ್ಬರೂ ಯುವಕರು ಉತ್ತರಪ್ರದೇಶದ ಗೋಂಡಾ ನಿವಾಸಿಗಳಾಗಿದ್ದು ಅರೆ ವೈದ್ಯಕೀಯ ಸಂಸ್ಥೆಯಲ್ಲಿ ಕೆಲಸ ಮಾಡುವವರಾಗಿದ್ದಾರೆ. 

ಇಷ್ಟೆಲ್ಲಾ ಆದರೂ ಗೋದಿ ಮೀಡಿಯಾಗಳು ಕಣ್ಣು ಕಿವಿ ಬಾಯಿ ಮುಚ್ಚಿಕೊಂಡಿವೆ. ಯಾಕೆಂದರೆ ರಾಮಮಂದಿರಕ್ಕೆ ಬಾಂಬಿಡುವಂತಹ ಬೆದರಿಕೆಯೊಡ್ಡಿದ್ದು ಮುಸ್ಲಿಂ ಯುವಕರಲ್ಲಾ ಹಿಂದೂಗಳೇ ಎಂಬುದು ಗೊತ್ತಾಗಿದ್ದೇ ತಡ ಮೀಡಿಯಾಂಗದ ಪಂಚೇಂದ್ರಿಯಗಳು ಬಂದಾಗಿವೆ. ಅಕಸ್ಮಾತ್ ಮುಸ್ಲಿಂ ಯುವಕರೇ ಈ ಕೆಲಸ ಮಾಡಿದ್ದರೆ ಮುಂದೇನಾಗುತ್ತಿತ್ತೆಂಬುದನ್ನು ಊಹಿಸಬಹುದಾಗಿದೆ.

"ಎಲ್ಲಾ ಅನಿಷ್ಟಕ್ಕೂ ಶನೀಶ್ವರನೇ ಕಾರಣ" ಎನ್ನುವ ಗಾದೆಯೊಂದಿದೆ. ಈಗ ಈ ದೇಶದಲ್ಲೂ ಅಂತಹುದೇ ವಾತಾವರಣ ಸೃಷ್ಟಿಸಿ ಏನೇ ಅವಗಡವಾದರೂ ಅದಕ್ಕೆ ಇಸ್ಲಾಂ ಧರ್ಮೀಯರೇ ಕಾರಣ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಅನ್ಯಧರ್ಮದ್ವೇಷವನ್ನೇ ಉಸಿರಾಡುತ್ತಿರುವ ಬಿಜೆಪಿ ಪಕ್ಷದವರಂತೂ ಮುಸ್ಲಿಮರ ಮೇಲೆ, ಆ ಸಮುದಾಯದ ಬಗ್ಗೆ ಸಹಾನುಭೂತಿ ಹೊಂದಿದವರ ಮೇಲೆ ತನ್ನ ಅಸಹನೆಯನ್ನು ತೋರುತ್ತಲೇ ಬಂದಿದೆ. ಧರ್ಮದ್ರೋಹ ದೇಶದ್ರೋಹವೆಂಬ ಆಪಾದನೆಗಳನ್ನು ಮಾಡುತ್ತಲೇ ಬಂದಿದೆ. ಈ ರೀತಿಯ ಅನ್ಯಧರ್ಮ ದ್ವೇಷ ಈ ದೇಶದ ಸಾಮರಸ್ಯವನ್ನು ಕಲಕಿ ನೆಮ್ಮದಿಯನ್ನು ಹಾಳು ಮಾಡುವುದರಲ್ಲಿ ಸಂದೇಹವಿಲ್ಲ.

ತಮ್ಮ ಸ್ವಾರ್ಥ ಸಾಧನೆಗಾಗಿ ಸಂಘ ಪರಿವಾರದ ನಾಯಕರು ಯುವಕರನ್ನು ಪರಿಕರವಾಗಿ ಬಳಸಿಕೊಳ್ಳುತ್ತಿರುವುದು ಆತಂಕದ ಸಂಗತಿಯಾಗಿದೆ. ಮುಸ್ಲಿಂ ಹೆಸರಲ್ಲಿ ಹಿಂದೂ ವಿರೋಧಿ ಶಡ್ಯಂತ್ರಗಳನ್ನು ಸಂಘಿಗಳೇ ರೂಪಿಸಿ ಧರ್ಮದ್ವೇಷವನ್ನು ಪ್ರಚೋದಿಸುತ್ತಿರುವುದು ಇನ್ನೂ ಹೆಚ್ಚು ಆತಂಕದ ವಿಷಯವಾಗಿದೆ. ಪಾಕಿಸ್ತಾನದ ಬಾವುಟವನ್ನು ಹಿಂದೂ ಯುವಕರೇ ಹಾರಿಸಿ, ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿ ಮುಸ್ಲಿಂ ಸಮಾಜದ ಮೇಲೆ ದ್ವೇಷ ಹುಟ್ಟಿಸಿ ಕೋಮುಸೌಹಾರ್ಧತೆ ಕದಡುವ ಪ್ರಯತ್ನಗಳನ್ನು ಕರ್ನಾಟಕದಲ್ಲೇ ಮಾಡಿಸಲಾಗಿದೆ. ಒಂದು ಧರ್ಮೀಯರನ್ನೇ ದೇಶದ್ರೋಹಿಗಳೆಂದು ಬಿಂಬಿಸುವ ಪ್ರಯತ್ನ ಸಂಘಪರಿವಾರದ ಪ್ರಪಗಂಡಾದ ಭಾಗವೇ ಆಗಿದೆ. ಈ ಕೋಮುವಾದಿಗಳ ಹುನ್ನಾರವನ್ನು ತಿರಸ್ಕರಿಸಿ ಸರ್ವಜನಾಂಗದ ಶಾಂತಿಯ ತೋಟವನ್ನು ನಿರ್ಮಿಸುವ ಹೊಣೆಗಾರಿಕೆ ಸಮಸ್ತ ದೇಶವಾಸಿಗಳದ್ದಾಗಿದೆ. 

- ಶಶಿಕಾಂತ ಯಡಹಳ್ಳಿ
    06-01-2023

ರಾಮಮೂರ್ತಿ ಪ್ರತಿಷ್ಟಾಪಿಸುವ ಮೋದಿಗೆ ಸನಾತನ ಸ್ವಾಮಿಗಳೇ ವಿರೋಧಿ

ತಹ ತಹ - 483

ರಾಮಮೂರ್ತಿ ಪ್ರತಿಷ್ಟಾಪಿಸುವ ಮೋದಿಗೆ ಸನಾತನ ಸ್ವಾಮಿಗಳೇ ವಿರೋಧಿ

ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಮೂರ್ತಿ ಪ್ರತಿಷ್ಟಾಪನೆಗೆ ಬಿಜೆಪಿ ಅತ್ಯಂತ ಉತ್ಸುಕವಾಗಿದೆ. ಇನ್ನೂ ಪೂರ್ತಿಯಾಗದೇ ಇರುವ ಅಪೂರ್ಣ ಮಂದಿರದಲ್ಲಿ ಇಷ್ಟೊಂದು ತರಾತುರಿಯಲ್ಲಿ ಯಾಕೆ ಈ ಪ್ರತಿಷ್ಟಾಪನೆ ಎಂದು ಯಾರಾದರೂ ಕೇಳಿದರೆ ಧರ್ಮದ್ರೋಹಿಗಳಾಗುತ್ತಾರೆ. ಇದೆಲ್ಲಾ ಲೋಕಸಭಾ ಚುನಾವಣೆಯ ಪೂರ್ವಯೋಜಿತ ಪೂರ್ವಭಾವಿ ತಯಾರಿ ಎಂಬುದು ಎಲ್ಲರಿಗೂ ಗೊತ್ತಿರುವಂತಹುದೆ. "2019 ರಲ್ಲಿ ಪುಲ್ಲಾಮಾ, 2023ರಲ್ಲಿ ಶ್ರೀರಾಮ" ಎನ್ನುವ ಮಾತು ಸತ್ಯವಾದುದಾಗಿದೆ. ಶ್ರೀರಾಮನ ಹೆಸರಲ್ಲಿ ಹಿಂದೂ ಮತಗಳನ್ನು ಕ್ರೂಢೀಕರಿಸುವ ಪ್ರಯತ್ನದ ಭಾಗವಾಗಿಯೇ ಈ ಅಕಾಲಿಕ ಪ್ರತಿಷ್ಟಾಪನೆ ಎಂಬುದು ಬಿಜೆಪಿಯ ಚುನಾವಣಾ ಕಾರ್ಯತಂತ್ರವಾಗಿದೆ.

ರಾಮ ಮಂದಿರ ಪೂರ್ಣಗೊಳ್ಳಲು ಇನ್ನೂ ಎರಡು ವರ್ಷಗಳಾದರೂ ಬೇಕಿದೆಯಂತೆ. ಪೂರ್ಣಗೊಂಡ ನಂತರವೇ ಶಾಸ್ತ್ರೋಕ್ತವಾಗಿ ಗರ್ಭಗುಡಿಯಲ್ಲಿ ದೇವರ ಮೂರ್ತಿ ಸ್ಥಾಪಿಸುವುದು ವೈದಿಕ ಧರ್ಮ ಸಂಪ್ರದಾಯ. ಈ ಸತ್ ಸಂಪ್ರದಾಯವನ್ನು ಮುರಿದು ಅವಧಿಗೆ ಮುಂಚೆಯೇ ಮೂರ್ತಿ ಪ್ರತಿಷ್ಟಾಪನೆ ಮಾಡಿ ತದನಂತರ ಮಂದಿರ ನಿರ್ಮಾಣ ಪೂರ್ಣಗೊಳಿಸುವುದನ್ನು ಯಾವ ಶಾಸ್ತ್ರ ಸಂಪ್ರದಾಯಗಳೂ ಒಪ್ಪುವುದಿಲ್ಲ. ಆದರೆ ಶ್ರೀರಾಮಚಂದ್ರನನ್ನು ಗುತ್ತಿಗೆ ಪಡೆದಂತೆ ಆಡುತ್ತಿರುವ ಬಿಜೆಪಿ ಪಕ್ಷ ಹಾಗೂ ಅದರ ಮಾತೃ ಸಂಘ ಆರೆಸ್ಸೆಸ್ಸ್ ಗಳಿಗೆ ಮತ್ತೆ ಹೇಗಾದರೂ ಮಾಡಿ ದೇಶದ ಅಧಿಕಾರ ಹಿಡಿಯಲೇಬೇಕೆಂಬ ತವಕ. ಈ ದೇಶದ ಜನರನ್ನು ಭಾವನಾತ್ಮಕ ಪ್ರಚೋದನೆಯ ಮೂಲಕವೇ ಸಮ್ಮೋಹಿತಗೊಳಿಸಲು ಸಾಧ್ಯವೆಂಬ ಸತ್ಯ ಈ ಸಂಘ ಪರಿವಾರದ ಪ್ರಮುಖ ಅಂಗಗಳಿಗೆ ಗೊತ್ತಿದೆ. ಹೀಗಾಗಿಯೇ ಈ ಅವಧಿಪೂರ್ವ ಮೂರ್ತಿ ಪ್ರತಿಷ್ಠಾಪನಾ ಕಣ್ಕಟ್ಟಿನ ಕಾರ್ಯಕ್ರಮ ಅದ್ದೂರಿಯಾಗಿ ಜನವರಿ 22 ರಂದು ಅಯೋಧ್ಯೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಇಲ್ಲಿ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಎಂಬುದು ನೆಪ ಮಾತ್ರ. ಮೋದಿ ಶಾ ರವರ ಕೈಯಲ್ಲಿದೆ ಎಲ್ಲದರ ಸೂತ್ರ. ಅವರಿಬ್ಬರ ಸೂತ್ರ ಸರಸಂಘದವರ ಕೈಬೆರಳಲ್ಲಿದೆ ಎಂಬುದು ಅಸ್ಪಷ್ಟ ಚಿತ್ರ.

ಹತ್ತು ಸಾವಿರ ಜನರನ್ನು ಅಧೀಕೃತವಾಗಿ ಕುಂಭಾಭಿಷೇಕ ಸಮಾರಂಭಕ್ಕೆ ಅಯೋಧ್ಯೆಗೆ ಆಹ್ವಾನಿಸಲಾಗುತ್ತಿದೆಯಂತೆ. ಪ್ರಧಾನಿ ಮೋದೀಯವರು ಶ್ರೀರಾಮ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಲು ಉತ್ಸುಕರಾಗಿದ್ದಾರೆ. ಆದರೆ ಇದಕ್ಕೆ ಸನಾತನವಾದಿ ವೈದಿಕರು  ಅಸಹನೆ ಹೊಂದಿದ್ದಾರೆ.

ಯಾಕೆಂದರೆ ವರ್ಣಾಶ್ರಮ ಧರ್ಮದ ಪ್ರಕಾರ ಈ ಪೂಜೆ ಪುನಸ್ಕಾರ ಕುಂಭಾಭಿಷೇಕ ಮೂರ್ತಿ ಪ್ರತಿಷ್ಟಾಪನೆಗಳೆಲ್ಲಾ ಬ್ರಾಹ್ಮಣ ಕುಲಸಂಜಾತರ ಕಾಯಕ. ಆದರೆ ಮೋದಿಯಂತಹ ಅಬ್ರಾಹ್ಮಣ ಶ್ರೀರಾಮನ ಪವಿತ್ರ ಮೂರ್ತಿಯನ್ನು ಮುಟ್ಟಿ ಅಪವಿತ್ರಗೊಳಿಸುವುದಕ್ಕೆ ಸನಾತನಿಗಳ ಸಮ್ಮತಿ ಇಲ್ಲ. ಇದನ್ನು ವೈದಿಕ ಮತದ ಧಾರ್ಮಿಕ ಪೀಠದವರು ಬಹಿರಂಗವಾಗಿ ವಿರೋಧಿಸದೇ ಇದ್ದರೂ ಓಡಿಶಾದ ಪುರಿ ಮಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರು ಬಹಿರಂಗವಾಗಿಯೇ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ವೈದಿಕರಲ್ಲದ ಮೋದಿಯವರು ಮುಟ್ಟಿದ ಮೂರ್ತಿಯನ್ನು ರಾಮಮಂದಿರದಲ್ಲಿ ಪ್ರತಿಷ್ಠಾಪಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಆಹ್ವಾನವನ್ನು ತಿರಸ್ಕರಿಸಿದ್ದಾರಂತೆ. "ನಾನು ಅಲ್ಲಿ ಹೋಗಿ ಏನು ಮಾಡಬೇಕು? ಪ್ರಧಾನಿ ಮೋದಿ ಮೂರ್ತಿಯನ್ನು ಮುಟ್ಟಿ ಸ್ಥಾಪಿಸುವಾಗ ನಾನು ಅವರನ್ನು ಶ್ಲಾಘಿಸಬೇಕೆ? ಶಾಸ್ತ್ರಗಳಲ್ಲಿ ಹೇಳಿರುವ ನಿಯಮಗಳಂತೆ ಮೂಲ ಮೂರ್ತಿಯನ್ನು ಪ್ರತಿಷ್ಟಾಪಿಸಬೇಕಲ್ಲವೇ? ಎಂದು ಪುರಿ ಮಠದ ಸ್ವಾಮಿಗಳು ತಮ್ಮ ನಿರಾಕರಣೆಗೆ ಸಮರ್ಥನೆಗಳನ್ನು ಕೊಟ್ಟಿದ್ದಾರೆ. ಇದೇ ವೈದಿಕಶಾಹಿ ಧರ್ಮ ಸಂಹಿತೆ. ವರ್ಣಾಶ್ರಮ ಧರ್ಮ ಸೂಕ್ಷ್ಮ. 

ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯನ್ನು ಇದೀಗ ದೇಶದ ನಾಲ್ಕು ಶಂಕರಾಚಾರ್ಯರು ಬಹಿಷ್ಕರಿಸಿದ್ದಾರೆ.  “ನಾವು ನಾಲ್ಕು ಶಂಕರಾಚಾರ್ಯರೂ ಮಂದಿರ ಉದ್ಘಾಟನೆಗೆ ಹೋಗುವುದಿಲ್ಲ. ಅದಕ್ಕೆ ಕಾರಣಗಳು ಅನೇಕ. ಮೊದಲನೆಯದಾಗಿ, ಮಂದಿರ ನಿರ್ಮಾಣ ಅಪೂರ್ಣವಾಗಿದೆ. ಅಪೂರ್ಣ ಮಂದಿರದಲ್ಲಿ ಪ್ರಾಣಪ್ರತಿಷ್ಠೆ ಶಾಸ್ತ್ರಕ್ಕೆ ವಿರುದ್ಧವಾದುದು. ಅಲ್ಲದೆ, ಕೆಲಸ ಪೂರ್ತಿಯಾಗದೆ ಅದನ್ನು ಉದ್ಘಾಟಿಸುವ ತುರ್ತು ಏನೂ ಇರುವುದಿಲ್ಲ. ಎರಡನೆಯದಾಗಿ, ಅದನ್ನು ಸಾಧು ಸಂತರು ಉದ್ಘಾಟಿಸಬೇಕೇ ಹೊರತು ಯಾರು ಯಾರೋ ಅಲ್ಲ. ನಾವು ಧರ್ಮ ಶಾಸ್ತ್ರದಲ್ಲಿ ನಂಬಿಕೆ ಇರುವವರು. ನಮಗೆ ಅದೇ ಶ್ರೇಷ್ಠ. ಅದಕ್ಕೆ ವಿರುದ್ಧವಾಗಿ ಹೋಗುವಂತಿಲ್ಲ. ನಾವು ರಾಮ ವಿರೋಧಿಯೂ ಅಲ್ಲ, ಮೋದಿ ವಿರೋಧಿಯೂ ಅಲ್ಲ, ಧರ್ಮಶಾಸ್ತ್ರಕ್ಕೆ ಅನುಗುಣವಾಗಿ ನಡೆಯದಿರುವುದರ ವಿರೋಧಿ. ಮೂರನೆಯದಾಗಿ, ಈ ಕಾರ್ಯಕ್ರಮಕ್ಕೆ ಶಂಕರಾಚಾರ್ಯರ ಅಗತ್ಯವಿಲ್ಲ, ಅದು ರಾಮಾನಂದ ಪಂಥದವರದ್ದು ಎಂದು ಟ್ರಸ್ಟ್ ಮುಖ್ಯಸ್ಥ ಚಂಪತ್ ರಾಯ್ ಹೇಳಿದ್ದಾರೆ. ಇದು ಕೇವಲ ರಾಮಾನಂದ ಪಂಥದವರದ್ದಾದರೆ ಆ ಪಂಥದವರಲ್ಲವಾದ ಚಂಪತ್ ರಾಯ್ ಮತ್ತು ಅವರ ಸಂಗಾತಿಗಳು ಅಲ್ಲಿ ಏಕೆ ಇದ್ದಾರೆ? ಅವರು ತಕ್ಷಣ ರಾಜಿನಾಮೆ ಕೊಟ್ಟು ಅದನ್ನು ಆ ಪಂಥದವರಿಗೆ ಒಪ್ಪಿಸಲಿ. ಇದು ಕೇವಲ ಆ ಪಂಥದವರಿಗೆ ಸೇರಿದ್ದಾದರೆ ನಮ್ಮಿಂದ ಚಂದಾ ಸಂಗ್ರಹಿಸಿದ್ದು ಏಕೆ? ನಿಜವಾಗಿ ಅದರ ಉಸ್ತವಾರಿ ನೋಡಿಕೊಳ್ಳಬೇಕಾದುದು ನಿರ್ಮೋಹಿ ಅಖಾರಾದವರು. ಅವರಿಗೆ ಒಪ್ಪಿಸಲಿ. ಕನಿಷ್ಠ ನೈತಿಕತೆಯಾದರೂ ಇದ್ದರೆ ಚಂಪತ್ ರಾಯ್ ಮತ್ತು ಅವರ ಸಂಗಾತಿಗಳು ತಕ್ಷಣ ರಾಜಿನಾಮೆ ನೀಡಬೇಕು”. ಎಂದು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಮಹಾರಾಜರು ಬಹಿರಂಗವಾಗಿಯೇ ಹೇಳಿದ್ದಾರೆ.

ಆದಿವಾಸಿ ವಿಧವಾ ಮಹಿಳೆ ಎನ್ನುವ ಕಾರಣಕ್ಕೆ ರಾಷ್ಟ್ರಪತಿ ದ್ರೌಪತಿ ಮರ್ಮುರವರನ್ನು ಹೊಸ ಸಂಸತ್ ಭವನದ ಉದ್ಘಾಟನಾ ವಿಧಿವಿಧಾನಗಳಿಂದ ದೂರವಿಟ್ಟಿದ್ದೂ ಸಹ ಇದೇ ವೈದಿಕಶಾಹಿ ಪುರೋಹಿತರು. ಈಗ ಹಿಂದುಳಿದ ವರ್ಗದವನೆಂಬ ಕಾರಣಕ್ಕೆ ಪ್ರಧಾನಿ ಮೋದಿಯವರಿಂದಾಗುವ ಮೂರ್ತಿ ಪ್ರತಿಷ್ಟಾಪನೆಯನ್ನೂ ವಿರೋಧಿಸುತ್ತಿರುವುದೂ ಬ್ರಾಹ್ಮಣ್ಯ ಧರ್ಮ ಕಾರಣಕ್ಕೆ. 

ಶಿವಾಜಿಯಂತಹ ಶಿವಾಜಿ ರಾಜರ ಪಟ್ಟಾಭಿಷೇಕಕ್ಕೇ ಒಬ್ಬನೇ ಒಬ್ಬ ಪುರೋಹಿತ ಬರದೇ ಭಹಿಷ್ಕರಿಸಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಪ್ರಮುಖ ಮಂದಿರಗಳಿಗೆ ಅಬ್ರಾಹ್ಮಣ ಪ್ರಧಾನಿಗಳು ಬೇಟಿಕೊಟ್ಟ ನಂತರ ದೇವಸ್ಥಾನವನ್ನೇ ಶುದ್ದೀಕರಿಸಿದ ಘಟನೆಗಳಿಗೆ ಚರಿತ್ರೆ ಸಾಕ್ಷಿಯಾಗಿದೆ. ರಾಮಮಂದಿರಕ್ಕಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಹೋರಾಡಿದವರು, ಪ್ರಾಣತೆತ್ತವರ ಕುಟುಂಬಗಳು ರಾಮದೇವರ ಮಂದಿರದ ಹೊರಗೇ ಇರಬೇಕು ಹಾಗೂ ವೈದಿಕ ಪುರೋಹಿತರು ಮಾತ್ರ ಗರ್ಭಗುಡಿಯಲ್ಲಿ ಮೂರ್ತಿ ಪೂಜೆಗೆ ಮೀಸಲಾಗಿರಬೇಕು ಎನ್ನುವುದೇ ವರ್ಣಾಶ್ರಮ ಧರ್ಮದ ಮೂಲ ಮಂತ್ರವಾಗಿದೆ. ಪ್ರಧಾನಿಯಾದರೇನು ರಾಷ್ಟ್ರಪತಿಯಾದರೇನು ಎಲ್ಲರ ಸ್ಥಾನ ಮಂದಿರದ ಹೊರಗೆ. 

ರಾಮಜನ್ಮಭೂಮಿ ಹೋರಾಟಕ್ಕೆ ಅಸಂಖ್ಯಾತ ಕರಸೇವಕರು ಬೇಕು, ಮಂದಿರ ನಿರ್ಮಿಸಲು ಅಗಣಿತ ಹಿಂದೂಗಳ ಪರಿಶ್ರಮದ ಫಲಬೇಕು. ಕೇಂದ್ರ ಸರಕಾರದ ಕೃಪಾಕಟಾಕ್ಷ ಇರಲೇಬೇಕು. ಆದರೆ ದೇವರ ಮೂರ್ತಿ ಮುಟ್ಟಲು ಪುರೋಹಿತರೇ ಆಗಬೇಕು. ಪ್ರತಿಷ್ಠಾಪನೆಗೆ ವೈದಿಕರೇ ಇರಬೇಕು. ಇಂತಹ ವೈದಿಕಶಾಹಿ ಹುನ್ನಾರಗಳಿಗೆ ಹಿಂದೂ ಧರ್ಮೀಯರು ಎನ್ನುವವರು ಜೈ ಎನ್ನಬೇಕು. 

ಹಿಂದುತ್ವವಾದ ಎಂದರೆ ಇದೆ. ಹಿಂದೂಗಳೆಲ್ಲಾ ಒಂದು ಎನ್ನುವ ಉನ್ಮಾದ ಹುಟ್ಟಿಸಿ ವೈದಿಕಶಾಹಿ ನೇತೃತ್ವದ ಹಿಂದುತ್ವವನ್ನು ಸ್ಥಾಪಿಸುವುದೇ ನಾಗಾಪುರದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯ ಉದ್ದೇಶ. ಆ ಉದ್ದೇಶದ ಈಡೇರಿಕೆಗೆ ಮೋದಿಯಂತಹ ಜನಪ್ರೀಯ ನಾಯಕರೂ ಬಳಸಲ್ಪಡುತ್ತಾರೆ ಎಂಬುದು ಮೋದಿಭಕ್ತರಿಗೆ ಅಪತ್ಯವಾದರೂ ಅದೇ ಸತ್ಯ. ಅಸಂಖ್ಯಾತ ಹಿಂದೂಗಳ ಭಾವಪ್ರಚೋದನೆ ಮಾಡುವ ಮೂಲಕ ದೇವರು ಧರ್ಮದ ಹೆಸರಲ್ಲಿ ಮನುಧರ್ಮವನ್ನು ಮತ್ತೆ ಜಾರಿಗೆ ತಂದು ವರ್ಣಾಶ್ರಮ ಪದ್ದತಿಯನ್ನು ಸಂವಿಧಾನವನ್ನಾಗಿ ಘೋಷಿಸುವುದೇ  ಸಂಘದ ಅಂತಿಮ ಆಶಯವಾಗಿದೆ. ಈ ಉದ್ದೇಶದ ಈಡೇರಿಕೆಗಾಗಿಯೇ ಮತಾಂಧತೆ, ಮತಬೇಧ, ಅನ್ಯಧರ್ಮ ದ್ವೇಷವನ್ನು ವ್ಯಾಪಕವಾಗಿ ಸೃಷ್ಟಿ ಮಾಡಲಾಗುತ್ತಿದೆ. ಅದರ ಅನುಷ್ಟಾನಕ್ಕೆ ಅಬ್ರಾಹ್ಮಣರನ್ನೇ ಪರಿಕರವಾಗಿ ಬಳಸಲಾಗುತ್ತಿದೆ.  ಸಂಘದ ಅಂತಿಮ ಗುರಿ ತಲುಪಲು ರಾಮಮಂದಿರ ಎನ್ನುವುದು ಕೇವಲ ಒಂದು ಮೆಟ್ಟಿಲು ಮಾತ್ರ. ಈ ಮೆಟ್ಟಲಿಗೆ ಇಟ್ಟಿಗೆಯಂತೆ ಮೋದಿಯಂತವರೂ ಬಳಕೆಯಾಗುತ್ತಿದ್ದಾರೆ. ಹಿಂದುತ್ವವಾದಿಗಳ ಹಿಂದೂರಾಷ್ಟ್ರದ ಹುನ್ನಾರಕ್ಕೆ ಅಸಂಖ್ಯಾತ ಹಿಂದೂಗಳು ಕಾಲಾಳುಗಳಾಗುತ್ತಿದ್ದಾರೆ. ಈ ಸತ್ಯ ಭಾವಪ್ರಚೋದನೆಗೊಳಗಾಗಿ ಸಮೂಹ ಸನ್ನಿಪೀಡಿತರಿಗೆ ಗೊತ್ತಾಗುವಷ್ಟರಲ್ಲಿ ಈ ದೇಶದಲ್ಲಿ ಪ್ರಜಾಪ್ರಭುತ್ವ ಅಳಿದು ಪ್ಯಾಸಿಸ್ಟ್ ಪ್ರಭುತ್ವ ಆಡಳಿತಕ್ಕೆ ಬಂದಿರುತ್ತದೆ. ಸಂವಿಧಾನದ ಬದಲು ಮನುಸ್ಮೃತಿ ಜಾರಿಯಾಗಿರುತ್ತದೆ. ಮತ್ತೆ ವರ್ಣಾಶ್ರಮ ಆಧಾರಿತ ಅಸಮಾನ ವ್ಯವಸ್ಥೆ ಹೇರಲ್ಪಡುತ್ತದೆ. ವೈದಿಕಶಾಹಿಯ ಹಿಂದುತ್ವದ ಹೋಮಕ್ಕೆ ಹಿಂದೂಗಳು ಹವಿಸ್ಸಾಗುತ್ತಾರೆ.

- ಶಶಿಕಾಂತ ಯಡಹಳ್ಳಿ
    6-01-2023

ಕೋಟಗಾನಹಳ್ಳಿ ರಾಮಯ್ಯನವರ ವಿದಾಯ; ಸಾಂಸ್ಕೃತಿಕ ಕ್ಷೇತ್ರಕ್ಕಾದ ಗಾಯ

ತಹ ತಹ - 482

ಕೋಟಗಾನಹಳ್ಳಿ ರಾಮಯ್ಯನವರ ವಿದಾಯ; ಸಾಂಸ್ಕೃತಿಕ ಕ್ಷೇತ್ರಕ್ಕಾದ ಗಾಯ


ಕನ್ನಡ ನಾಡಿನ ಸಾಕ್ಷೀಪ್ರಜ್ಞೆಯಂತೆ ಬದುಕಿದ ಇನ್ನೊಂದು  ಜೀವ ಕೋಟಗಾನಹಳ್ಳಿ ರಾಮಯ್ಯ. ಕವಿಯಾಗಿ, ಬರಹಗಾರರಾಗಿ, ನಾಟಕಕಾರರಾಗಿ, ಸಂಘಟಕರಾಗಿ, ಹಾಡುಗಾರರಾಗಿ ಸಾಂಸ್ಕೃತಿಕ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆಯನ್ನು  ಕೊಟ್ಟಿದ್ದಾರೆ. ಹಲವಾರು ನಾಟಕಗಳನ್ನು ರಚಿಸಿ ಕನ್ನಡ ರಂಗಭೂಮಿಯನ್ನು ಶ್ರೀಮಂತಗೊಳಿಸಿದ್ದಾರೆ. ಹತ್ತಕ್ಕೂ ಹೆಚ್ಚು ಮಕ್ಕಳ ನಾಟಕಗಳನ್ನೂ ಬರೆದು ಮಕ್ಕಳ ರಂಗಭೂಮಿಯ ಬೆಳವಣಿಗೆಗೂ ಕಾರಣೀಕರ್ತರಾಗಿದ್ದಾರೆ. ಐದು ದಶಕಗಳಿಂದ ದಲಿತ ಚಳುವಳಿಯನ್ನು ಕಟ್ಟಿ ಬೆಳೆಸುವಲ್ಲಿ ಮುಂಚೂಣಿಯಲ್ಲಿದ್ದವರು. ಜನಪರ ಚಳುವಳಿಗಳ ಜೊತೆಗೆ ಬೆಳೆದವರು. ಅತ್ಯಂತ ಸೂಕ್ಷ್ಮಮತಿಯಾದ ಭಾವಜೀವಿ.  ತನಗಾಗಿ ಏನನ್ನೂ ಮಾಡಿಕೊಳ್ಳದೇ ಸಮಾಜದ ಒಳಿತಿಗಾಗಿ, ಸಾಂಸ್ಕೃತಿಕ ಸಂಘಟನೆಗಾಗಿ ತಮ್ಮ ಬದುಕಿನ ಬಹುಭಾಗವನ್ನು ಕಳೆದವರು. 

ಸಮಾನ ಮನಸ್ಕ ಗೆಳೆಯರೊಂದಿಗೆ ಸೇರಿ "ದಿನಕ್ಕೊಂದು ರೂಪಾಯಿ, ಮನೆಗೊಂದು ಹುಂಡಿ" ಯೋಜನೆ ರೂಪಿಸಿ ಒಂದೊಂದು ರೂಪಾಯಿ ಸಂಗ್ರಹಿಸಿ ಕಲ್ಲು ಬಂಡೆಗಳಿದ್ದ  10 ಗುಂಟೆ ಜಾಗ ಖರೀದಿಸಿ ಅಲ್ಲಿ 'ಆದಿಮ' ಎನ್ನುವ ಸಾಂಸ್ಕೃತಿಕ ಲೋಕವನ್ನು ಸೃಷ್ಟಿಸಿದ್ದರ ಹಿಂದೆ ರಾಮಯ್ಯನವರ ಪರಿಕಲ್ಪನೆ, ಶ್ರಮ ಮತ್ತು ಮುಂದಾಲೋಚನೆ ಇತ್ತು.
ಕೋಲಾರದ ಹತ್ತಿರದ ಶಿವಗಂಗೆ ಗ್ರಾಮದ ಪಕ್ಕದಲ್ಲಿರುವ ತೇರಹಳ್ಳಿ ಬೆಟ್ಟದಲ್ಲಿ 2005 ರಿಂದ 'ಆದಿಮ' ವನ್ನು ಆರಂಭಿಸಿದ ರಾಮಯ್ಯನವರು ಅಲ್ಲಿ ಹಲವಾರು ಕಲೆ ಸಾಹಿತ್ಯದ ಕಾರ್ಯಕ್ರಮಗಳನ್ನು  ಆಯೋಜಿಸಿದ್ದರು.ಆದಿಮ ಸ್ಕೂಲ್ ಆಫ್ ಥಾಟ್ ಪರಿಕಲ್ಪನೆಯೊಂದಿಗೆ ರೈತ ಚಳವಳಿ, ಮಹಿಳಾ ಚಳವಳಿ, ಕಾರ್ಮಿಕ ಚಳವಳಿ, ದಲಿತ ಚಳವಳಿ ಸೇರಿದಂತೆ ಎಲ್ಲ ಜನಪರ ಹೋರಾಟಗಳ ಅಧ್ಯಯನ ಶಿಬಿರಗಳಿಗೆ ಆದಿಮ ಅವಕಾಶ ಕಲ್ಪಿಸಿತು. ರಂಗಭೂಮಿಯ ಚಟುವಟಿಕೆಗಳಿಗೆ 'ಆದಿಮ' ಭೂಮಿಕೆಯಾಯಿತು. ಪ್ರತಿ ವರ್ಷ 200 ಕ್ಕೂ ಹೆಚ್ಚು ಮಕ್ಕಳಿಗಾಗಿ 'ಚುಕ್ಕಿ ಮೇಳ' ಎನ್ನುವ ಸಾಂಸ್ಕೃತಿಕ ಶಿಬಿರವನ್ನು ಉಚಿತವಾಗಿ ಪ್ರತಿವರ್ಷ ಆದಿಮ ದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ.  ಪ್ರತಿ ತಿಂಗಳೂ ಹುಣ್ಣಿಮೆಯಂದು 'ಹುಣ್ಣಿಮೆ ಹಾಡು' ಹೆಸರಿನಲ್ಲಿ ಯಾವುದಾದರೊಂದು ನಾಟಕ ತಂಡವನ್ನು ಕರೆಸಿ ನಾಟಕ ಪ್ರದರ್ಶನ ಮಾಡಿಸಲಾಗುತ್ತಿದೆ. ಸಾಂಸ್ಕೃತಿಕ ಮನಸ್ಸಿನ ಯುವಕರ ಪಡೆಯನ್ನೇ ಕಟ್ಟಿದ ರಾಮಯ್ಯನವರು ಪ್ರೇಕ್ಷಕರ ಸಮೂಹವನ್ನೇ ಹುಟ್ಟು ಹಾಕಿದ್ದರು.


ಹತ್ತು ವರ್ಷಗಳ ಕಾಲ ಆದಿಮ ಟ್ರಸ್ಟಿಗೆ ಅಧ್ಯಕ್ಷರಾಗಿದ್ದ ರಾಮಯ್ಯನವರು ತದನಂತರ ಆರಂಭವಾದ ಹಲವಾರು ಭಿನ್ನಾಭಿಪ್ರಾಯಗಳಿಂದ ಆದಿಮದಿಂದ ಬೇರೆಯಾದರು.
ಆದರೆ.. ಈಗ ರಾಮಯ್ಯನವರು ಆದಿಮದಿಂದ ದೂರಾಗಿ ಏಳೆಂಟು ವರ್ಷಗಳೇ ಆಗಿವೆ. ಅದೇ ಆದಿಮದ ಹತ್ತಿರದ ಶಿವಗಂಗೆ ಗ್ರಾಮದಲ್ಲಿ  'ಬುಡ್ಡಿದೀಪ' ಎನ್ನುವ ಹೆಸರಲ್ಲಿ ಪುಟ್ಟ ಮನೆಯೊಂದನ್ನು ಕಟ್ಟಿಕೊಂಡು ಓದು ಬರಹಗಳ ಜೊತೆ ಸರಳವಾಗಿ ಬದುಕುತ್ತಿದ್ದಾರೆ. 

ಆದರೆ ಅದೇನಾಯ್ತೋ ಏನೋ ಈಗ ದಲಿತ ಚಳುವಳಿಯ ಸಹವಾಸವೇ ಸಾಕೆಂದು ನಿರ್ಧರಿಸಿದ್ದಾರೆ. ಹುಟ್ಟಿ ಬೆಳೆದು ಹೋರಾಡಿದ ಕೋಲಾರವನ್ನೇ ತ್ಯಜಿಸಿ ಹೋಗುತ್ತೇನೆಂದು ಘೋಷಿಸಿದ್ದಾರೆ.  ಇನ್ನು ಮೇಲೆ ಈ ಪ್ರಾಂತ್ಯದಲ್ಲೇ ಇರುವುದಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ. ರಾಮಯ್ಯರವರಂತಹ ಹೋರಾಟಗಾರನಿಗೆ ಈ ರೀತಿಯ ನೋವು ಆಗಿದ್ದಾದರೂ ಯಾಕೆ? ಭ್ರಮನಿರಸನಕ್ಕೆ ಕಾರಣಗಳಾದರೂ ಏನು? 'ಆದಿಮ'ದಂತೆ ಕೋಲಾರಕ್ಕೆ ವಿದಾಯ ಹೇಳುವ ನಿರ್ಧಾರ ಬೇಕಿತ್ತೆ? ಎನ್ನುವ ಪ್ರಶ್ನೆಗಳು ಕಾಡುತ್ತವೆ.

ಇತ್ತೀಚೆಗೆ 'ಸಂವಿಧಾನದ ರಕ್ಷಣೆ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ' ಸಮಾವೇಶದ ವೇದಿಕೆಯಲ್ಲಿ ಕೋಟಗಾನಹಳ್ಳಿ ರಾಮಯ್ಯನವರು ಮಾಡಿದ ವಿದಾಯ ಭಾಷಣದಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಅವರ ಆಕ್ರೋಶಕ್ಕೆ ಬಹು ಮುಖ್ಯ ಕಾರಣವೇ ಈ ರಾಜಕಾರಣಿಗಳ ಆಟಾಟೋಪ. ರಾಮಯ್ಯನವರು ಕಟ್ಟಿ ಬೆಳೆಸಿದ 'ಆದಿಮ' ದ ಮೇಲೆ ಈಗ ರಾಜಕೀಯ ನಾಯಕರ ಕಣ್ಣು ಬಿದ್ದಿದೆ. ಕಾಂಗ್ರೆಸ್ ಪಕ್ಷದ ಹಾಲಿ ಶಾಸಕ ಕೊತ್ತೂರು ಮಂಜು ಆದಿಮಕ್ಕೆ ಬಂದು ವ್ಯತಿರಿಕ್ತವಾಗಿ ಮಾತಾಡಿದ್ದರು. ಬಿಜೆಪಿ ಸಂಸದ ಮುನಿಸ್ವಾಮಿಯವರು ಆದಿಮ ಇರುವ ಬೆಟ್ಟವನ್ನೇ ನಿಯಂತ್ರಣಕ್ಕೆ ತೆಗೆದುಕೊಂಡು ಅಲ್ಲಿರುವ ಬಂಡೆಗಳ ಮೇಲೆ ಯೋಗದ ಕುರಿತ ಘೋಷಣೆಗಳನ್ನು ಬರೆಸಿ ಇಡೀ ಸಾಂಸ್ಕೃತಿಕ ವಾತಾವರಣವನ್ನೇ ಕೇಸರಿಮಯ ಮಾಡಲು ಪ್ರಯತ್ನಿಸಿದ್ದಾರೆ. ಈ ರಾಜಕೀಯದವರ ಹಸ್ತಕ್ಷೇಪದಿಂದಾಗಿ ರಾಮಯ್ಯ ಸಿಡಿದೆದ್ದರು. 'ಆದಿಮ' ದಿಂದ ದೂರಾದರೂ ಅದರ ಜೊತೆ ಮಾನಸಿಕ ಸಂಬಂಧವನ್ನು ಬಿಟ್ಟುಕೊಡದ ರಾಮಯ್ಯನವರಿಗೆ ಇಡೀ ಬೆಟ್ಟದ ಸುಂದರ ಪರಿಸರದ ಜೊತೆ ಅವಿನಾಭಾವ ಸಂಬಂಧವಿತ್ತು. ಅದಕ್ಕೆ ಬೆಟ್ಟದ ಪಕ್ಕದ ಗ್ರಾಮದಲ್ಲೇ ಪುಟ್ಟ ಗುಡಿಸಲು ಕಟ್ಟಿಕೊಂಡಿದ್ದರು.

 

ಇದರ ಜೊತೆಗೆ 50 ವರ್ಷಗಳಿಂದ ದಲಿತ ಚಳುವಳಿಗಳಲ್ಲಿ ತೊಡಗಿಕೊಂಡಿದ್ದ ರಾಮಯ್ಯನವರಿಗೆ ಆ ಸಂಘಟನೆಯಲ್ಲಿನ ವ್ಯತಿರಿಕ್ತ ಬೆಳವಣಿಗೆಗಳು ಭ್ರಮನಿರಸನವನ್ನುಂಟು ಮಾಡಿದ್ದವು. ಇತ್ತೀಚೆಗೆ ದಲಿತ ಸಂಘಟನೆಯ ಕಾರ್ಯಕ್ರಮಕ್ಕೆ ರಾಮಯ್ಯನವರು ಹೋಗಿದ್ದಾಗ ರಾಜಕಾರಣಿಯೊಬ್ಬರ ಸ್ವಾಗತಕ್ಕೆ ತಮಟೆ ಬಾರಿಸಿ, ಪಟಾಕಿ ಸಿಡಿಸಿ ಆಯೋಜಕರು ಸಂಭ್ರಮಿಸಿದ್ದರು. ಇದೂ ಸಹ ರಾಮಯ್ಯನವರ ಅಸಹನೆಗೆ ಕಾರಣವಾಗಿತ್ತು. ರಾಜಕಾರಣಿಗಳನ್ನು ಓಲೈಸಲು ಈ ರೀತಿಯ ವಿದ್ಯಮಾನಗಳು ದಲಿತ ಚಳುವಳಿಯಲ್ಲಿ ಹಿಂದೆಂದೂ ಇರಲಿಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದೇ ತಮ್ಮ ವಿದಾಯ ಭಾಷಣದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. 

"ಭಾರತ ದೇಶದಲ್ಲಿ ಈಗ 'ಸಂವಿಧಾನ ರಕ್ಷಿಸಿ, ಪ್ರಜಾಪ್ರಭುತ್ವ ಉಳಿಸಿ' ಎಂದು ಹೋರಾಟ ಮಾಡುತ್ತಿರುವವರಿಗೆ ವಾಸ್ತವದ ಕಲ್ಪನೆ ಇಲ್ಲ ಎಂದು ನಾನು ಅಂದುಕೊಂಡಿದ್ದೇನೆ. ಏಕೆಂದರೆ, ನೀವು ಅಂದುಕೊಂಡಿರುವ ಸಂವಿಧಾನ ಅಥವಾ ನೀವು ಅಂದುಕೊಂಡಿರುವ ಪ್ರಜಾಪ್ರಭುತ್ವ ಉಳಿಸಬೇಕು ಎನ್ನುವುದು ಪರಿಸ್ಥಿತಿಯನ್ನು ಮೀರಿ ಮುಂದೆ ಹೋಗಿವೆ ಎನ್ನುವುದು ನಿಮಗೆ ಗೊತ್ತಾಗುತ್ತಿಲ್ಲ. ಪ್ರಜಾಪ್ರಭುತ್ವ ಉಳಿಸಿ ಎನ್ನುವುದು ಒಂದು ಕ್ಲೀಷೆಯಾಗಿದೆ. ಐವತ್ತು ವರ್ಷದ ನಮ್ಮ ಪ್ರಜ್ಞಾ ಪಯಣ ಎಲ್ಲಿಗೆ ಬಂದಿದೆ ಎಂದರೆ, ನಮ್ಮ ನಾಯಕರು ನಮ್ಮನ್ನು ಎಲ್ಲಿಗೆ ತಂದು ನಿಲ್ಲಿಸಿದ್ದಾರೆ ಎಂದರೆ, ನಾಲ್ಕು ದಾರಿಗಳು ಕೂಡುವ ಕಡೆಗೆ ತಂದು ನಿಲ್ಲಿಸಿದ್ದಾರೆ. ಅವು ಯಾವುವು ಎಂದರೆ, ಸ್ಥಾವರ ಅಂಬೇಡ್ಕರ್ ಮಾಡುವುದು. ಫ್ಲೆಕ್ಸ್ ಅಂಬೇಡ್ಕರ್ ಮಾಡುವುದು. ಪ್ರತಿಮೆಗಳು, ಪೂಜೆ, ಸೆಲಬ್ರೇಷನ್, ಹೂವಿನ ಪಲ್ಲಕ್ಕಿಗಳಲ್ಲಿ, ಮುತ್ತಿನ ಪಲ್ಲಕ್ಕಿಗಳಲ್ಲಿ ಮುಳುಗಿಸಿಬಿಟ್ಟು, ಅವರು ಏನು ಹೇಳಿದ್ದಾರೆ ಎನ್ನುವುದನ್ನು ಮರೆಸುವುದು. ಅದು ಒಂದು ದಾರಿ"
ಎಂದು ಹೇಳುವ ಮೂಲಕ ರಾಮಯ್ಯನವರು ಅಂಬೇಡ್ಕರವರ ಆಶಯವನ್ನು ಮರೆತು ಅಂಬೇಡ್ಕರ್ ಆರಾಧನೆಯಲ್ಲಿ ಸಂಭ್ರಮಿಸುವ ದಲಿತ ಚಳುವಳಿಯ ನಾಯಕತ್ವವನ್ನು ತರಾಟೆಗೆ ತೆಗೆದುಕೊಂಡರು.

" ಅಂಬೇಡ್ಕರ್ ಅಪಹರಣ ಹಾಗೂ ಹುಸಿ ಕಥನಗಳ ನಿರ್ಮಾಣ. ಕಾಂಗ್ರೆಸ್, ಬಿಜೆಪಿಯಿಂದ ಹಿಡಿದು ಎಲ್ಲ ಪಕ್ಷಗಳೂ ಅಂಬೇಡ್ಕರ್ ಅವರನ್ನು ಅಪಹರಣ ಮಾಡಿವೆ. ಹೈಜಾಕ್ ಮಾಡಿವೆ ಅಪ್ರಾಪ್ರಿಯೇಟ್ ಮಾಡಿವೆ. ಮತ್ತು ತಮಗೆ ಬೇಕಾದ ರೀತಿಯಲ್ಲಿ, ತಮ್ಮ ಸಿದ್ಧಾಂತಕ್ಕೆ ಬೇಕಾದ ರೀತಿಯಲ್ಲಿ ಮಂಡಿಸುತ್ತಾ ಬಂದಿವೆ. ಇದು ಶುರುವಾಗಿದ್ದು ಸುಮಾರು 20 ವರ್ಷಗಳ ಹಿಂದೆ. ಆರ್‌ಎಸ್‌ಎಸ್‌ ಹುಟ್ಟುಹಾಕಿದ ಸ್ಕೂಲ್ ಆಫ್ ಥಾಟ್ ಇದು. ಅದೇನು ಮಾಡಿತು ಎಂದರೆ, ಬಾಬಾಸಾಹೇಬ್ ಅವರಲ್ಲಿರುವಂತಹ ಕ್ರಾಂತಿಕಾರಕ ಅಂಶಗಳು, ವೈಚಾರಿಕ ಅಂಶಗಳನ್ನು ತೆಗೆದು ಆ ಜಾಗದಲ್ಲಿ ಸುಳ್ಳು ಸುಳ್ಳು ಕಥೆಗಳನ್ನು ನಿರ್ಮಾಣ ಮಾಡಿತು. ಇದು ಆರಂಭವಾಗಿದ್ದು ತತ್ತೋಪಂತ್ ತೇಂಗಡಿ ಎನ್ನುವಂತಹ ನೆಹರೂ ಆಪ್ತವಲಯದಲ್ಲಿದ್ದವರಿಂದ. ಆತ ಆರ್‌ಎಸ್‌ಎಸ್‌ನವರಾಗಿದ್ದರು. ಆಮೇಲೆ ಅವರೊಂದು ಸ್ಕೂಲ್ ಹುಟ್ಟುಹಾಕಿದ್ದಾರೆ. ಭಾರತದ ಎಲ್ಲ ಪ್ರಾದೇಶಿಕ ಭಾಷೆಗಳಲ್ಲೂ 25 ಜನ ಸಂಶೋಧಕರನ್ನು ಹುಡುಕಿ, ಅವರಿಗೆ ಅಂಬೇಡ್ಕರ್ ಅವರ ಮೇಲೆ ಪುಸ್ತಕಗಳನ್ನು ಬರೆಯಲು ಹೇಳಿ, ಆ ಪುಸ್ತಕಗಳಲ್ಲಿ ಈ ಅಂಶ ಕಿತ್ತಾಕಿ ಬೇರೆ ಅಂಶ ತುಂಬಿ ಎಂದಿದ್ದಾರೆ. ನಮ್ಮ ಕನ್ನಡದಲ್ಲಿಯೇ 25 ವರ್ಷಗಳಲ್ಲಿ ಇಂಥ ಸುಮಾರು 25 ಪುಸ್ತಕ ಬಂದಿವೆ. ನಿಮ್ಮನ್ನು, ನಿಮ್ಮ ಮಕ್ಕಳನ್ನು ದಾರಿ ತಪ್ಪಿಸಲು ರಚನೆಯಾದ ಪುಸ್ತಕಗಳು ಅವು. ಇದು ಇನ್ನೊಂದು ದಾರಿ" ಎನ್ನುವ ಮೂಲಕ ರಾಮಯ್ಯನವರು  ಬಾಬಾಸಾಹೇಬರ ಹೆಸರನ್ನು ಹೇಗೆಲ್ಲಾ ರಾಜಕೀಯ ಪಕ್ಷಗಳು ತಮ್ಮ ಸಿದ್ದಾಂತಗಳಿಗೆ ಪೂರಕವಾಗಿ ಬಳಸಿಕೊಂಡರು ಹಾಗೂ ಅಂಬೇಡ್ಕರ್ ರವರ ಕ್ರಾಂತಿಕಾರಕ ವಿಚಾರಧಾರೆಗಳನ್ನು ತಿರುಚಲು ಪ್ರಯತ್ನಿಸಿದರು ಎನ್ನುವುದರ ಮೇಲೆ ಬೆಳಕು ಚೆಲ್ಲಿದರು.

" ಸರ್ಕಾರವೇ ಪ್ರಾಯೋಜಿಸಿರುವ ಯಾತ್ರಾ ಅಂಬೇಡ್ಕರ್. ಫ್ಲೆಕ್ಸ್ ಅಂಬೇಡ್ಕರ್ ಆಯಿತು. ಪುತ್ಥಳಿ ಅಂಬೇಡ್ಕರ್ ಆಯಿತು. ದೀಕ್ಷಾ ಭೂಮಿ ಚಲೋ, ಚೈತ್ಯ ಭೂಮಿ ಚಲೋ. ಕೋರೆಗಾಂವ್ ಚಲೋ. ಹುಟ್ಟಿದೂರು ಮಾಹೆ ಚಲೋ. ಅಲ್ಲಿಗೆ ನಿಮ್ಮನ್ನು ಯಾತ್ರೆಗಳಲ್ಲೇ ಮುಳುಗಿಸ್ತಾ ಇದ್ದಾರೆ. ಫ್ಲೈಟ್‌ನಲ್ಲಿ ಹೋಗುವಷ್ಟು ದುಡ್ಡಿರುವವರು, ನಮ್ಮ ಕೆಲವು ನಾಯಕರಂತೆ, ಅವರು ಫಾರೆನ್ನಿಗೆ ಹೋಗ್ತಾರೆ, ಕೊಲಂಬಿಯಾ ಯೂನಿವರ್ಸಿಟಿಗೆ ಹೋಗ್ತಾರೆ. ಈ ಎಲ್ಲ ಯಾತ್ರಾ ಸ್ಥಳಗಳಿಗೆ ಹೋಗುವುದೇ ನಮ್ಮ ಜೀವನದ ಧ್ಯೇಯ ಎನ್ನುವಂತೆ ಮಾಡಿ, ಅಂಬೇಡ್ಕರ್ ಏನು ಹೇಳಿದ್ದಾರೆ ಎನ್ನುವುದನ್ನೇ ಮುಚ್ಚಿಹಾಕಿದ್ದಾರೆ. ಅದಕ್ಕೆ ಕೆಲವು ದಿನಾಂಕಗಳನ್ನು ಇಟ್ಟಿದ್ದಾರೆ. ಒಂದು ಡಿಸೆಂಬರ್‌ ಆರು. ಇನ್ನೊಂದು ಕೋರೆಗಾಂವ್ ಜನವರಿ ಒಂದು. ಇನ್ನೊಂದು ದೀಕ್ಷಾ ಭೂಮಿ ಅಕ್ಟೋಬರ್ 14. ಇನ್ನೊಂದು ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನ, ಅದು ಏಪ್ರಿಲ್ 14. ಆದರೆ, ನಮಗೆ ಗೊತ್ತಿಲ್ಲ. ಈ ಎಲ್ಲ ದಿನಾಂಕಗಳನ್ನು ಕಿತ್ತುಹಾಕೋದಕ್ಕೆ ಈಗಾಗಲೇ ಆರ್‌ಎಸ್‌ಎಸ್‌ ಆರಂಭ ಮಾಡಿದೆ. ಅದರೊಳಗೆ ಒಂದು ಯಾವುದಪ್ಪಾ ಅಂದ್ರೆ, ಡಿಸೆಂಬರ್ 6ರಂದು ಬಾಬ್ರಿ ಮಸೀದಿ ಒಡೆದು ಹಾಕಿದ್ದು… ಅಲ್ಲಿಗೆ ಬಾಬಾ ಸಾಹೇಬರ ಪರಿನಿರ್ವಾಣವನ್ನು, ಕ್ರಾಂತಿಕಾರಕವಾದಂಥ ದಾರಿಯನ್ನು ಅಲ್ಲಿ ಮುಚ್ಚಿಹಾಕಲಾಯಿತು. ಇನ್ನೊಂದು ಈಗ ಕೋರೆಗಾಂವ್ ಗುರುತು. ಜನವರಿ ಒಂದು. ಆ ದಿನವನ್ನು ವಿಶ್ವಕರ್ಮ ಜಕಣಾಚಾರಿ ದಿನಾಚರಣೆಯಾಗಿ ಭಾರತದಾದ್ಯಂತ ಆಚರಣೆ ಮಾಡಲಾಗುತ್ತಿದೆ. ಏಪ್ರಿಲ್ 14 ಅನ್ನು ಅಳಿಸಿಹಾಕಲು ಹುನ್ನಾರ ನಡೀತಿದೆ, ಅದೂ ಕೂಡ ಆಗುತ್ತೆ" ಎನ್ನುವ ರಾಮಯ್ಯನವರ ಮಾತುಗಳಲ್ಲಿ ಕಟುವಾದ ಸತ್ಯವೇ ಅಡಗಿತ್ತು. ಈಗಿನ ದಲಿತ ಸಂಘಟನೆಗಳ ನಾಯಕತ್ವವನ್ನು ವಿಮರ್ಶಿಸುತ್ತಲೇ ಅಂಬೇಡ್ಕರ್ ಕುರಿತ ಮಹತ್ವದ ದಿನಾಂಕಗಳನ್ನೇ ಮರೆಸುವ ಶಡ್ಯಂತ್ರ ಹೇಗೆಲ್ಲಾ ನಡೆಯುತ್ತಿದೆ ಎಂಬುದನ್ನು ಅತ್ಯಂತ ನೋವಿನಿಂದಲೇ ಹೇಳಿಕೊಂಡರು.

"ಕರ್ನಾಟಕದಲ್ಲಿ ಅಂಬೇಡ್ಕರ್ ಬಗ್ಗೆ ಅಧ್ಯಯನಗಳು ಶುರುವಾಗಿದ್ದು 1980ರ ಸುಮಾರಿಗೆ. 1978ರಲ್ಲಿ ವಿಧಾನಸೌಧದ ಮೆಟ್ಟಿಲ ಮೇಲೆ ನಾವು ಬೃಹತ್ತಾದ ರೀತಿಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿಯನ್ನು ಸಾರ್ವಜನಿಕವಾಗಿ ಆಚರಣೆ ಆರಂಭ ಮಾಡಿದ್ವಿ. ಯಾಕೆ ಆರಂಭ ಮಾಡಿದ್ವಿ ಅಂದರೆ, ಆಗ ದಲಿತ ಚಳವಳಿ ಎಂಥ ದುಃಸ್ಥಿತಿಯಲ್ಲಿತ್ತು ಅಂದರೆ, ಅನೇಕ ಕಡೆ ನಾವು ದೊಡ್ಡ ದೊಡ್ಡ ಫ್ಯೂಡಲ್ ಲಾರ್ಡ್‌ಗಳನ್ನು ಎದುರು ಹಾಕಿಕೊಂಡಿದ್ವಿ. ರಾಜಕೀಯ ನಾಯಕರನ್ನು ಎದುರು ಹಾಕಿಕೊಂಡಿದ್ವಿ. ಹಳ್ಳಿಗಳಲ್ಲಿ ದೌರ್ಜನ್ಯಗಳು ಶುರುವಾಗಿದ್ದವು. ನಮ್ಮ ಕಾರ್ಯಕರ್ತರು ಕೊಲೆಯಾಗ್ತಿದ್ದರು. ಕಾರ್ಯಕರ್ತರನ್ನು ಸಂರಕ್ಷಿಸಬೇಕಾದರೆ ನಾವು ಬೃಹತ್ ಶಕ್ತಿಯಾಗಬೇಕು ಅಂತ ಆ ಕಾರ್ಯಕ್ರಮವನ್ನು ನಾನೇ ವಿನ್ಯಾಸಗೊಳಿಸಿದ್ದು. ನಾನೇ ಅಂತ ಯಾಕೆ ಹೇಳುತ್ತಿದ್ದೇನೆ ಅಂದ್ರೆ, ಯಾವ ಕಾಲಕ್ಕೆ ಯಾವುದನ್ನು ಮಾಡಬೇಕು ಅದನ್ನು ಮಾಡ್ತಾ ಬಂದಿದ್ದ ಒಬ್ಬ ಚಾಕರ ನಾನಾಗಿದ್ದರಿಂದ ಈ ಮಾತನ್ನು ಹೇಳುತ್ತಿದ್ದೇನೆ. ಆನಂತರ ನಡೆದಿದ್ದು ಜನಕಲಾಮೇಳ. ಈ ಎರಡನ್ನು ಸರಿಯಾಗಿ ನಡೆಸೋದಕ್ಕೆ ನಮಗೆ ಸಾಧ್ಯವಾಗಿದ್ದಿದ್ರೆ ಇವತ್ತು ಈ ರೀತಿಯ ಬಿಕ್ಕಟ್ಟನ್ನು ನಾವು ಅನುಭವಿಸುತ್ತಾ ಇರಲಿಲ್ಲ. ಅದು ಬೇರೆ ವಿಚಾರ." ಎಂದು ರಾಮಯ್ಯನವರು ಅಂಬೇಡ್ಕರ್ ಜಯಂತಿ ಆಚರಣೆಯ ಆರಂಭದ ಹಿಂದಿರುವ ಉದ್ದೇಶವನ್ನು ವಿವರಿಸಿದರು. 

"ನಾನು ಈ ನೆಲದಲ್ಲಿ ಇನ್ನೊಂದು ಬಾರಿ ಅಂಬೇಡ್ಕರ್ ಬಗ್ಗೆ ಆಗಲಿ, ನಿಮ್ಮ ಈ ದಲಿತ ಚಳವಳಿ ಬಗ್ಗೆ ಆಗಲಿ ಒಂದು ನುಡಿ ಆಡಿದರೆ ನನ್ನ ನಾಲಿಗೆಯನ್ನು ನೀವು ಕತ್ತರಿಸಬಹುದು. ಈ ನಾಲ್ಕು ದಾರಿಗಳನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಜೊತೆಗೆ ಅಂಬೇಡ್ಕರ್‌ ಓದಿಗೆ ಹೊಸ ರೀತಿಗಳನ್ನು ನೀವು ಕಂಡುಕೊಳ್ಳಬೇಕು. ಇಲ್ಲದಿದ್ದರೆ ಬಹಳ ಅಪಾಯಕಾರಿ ಪರಿಸ್ಥಿತಿ ಎದುರಿಸಬೇಕಾಗಿ ಬರುತ್ತದೆ. ನನ್ನತ್ರ ಅವರ 22 ಪುಸ್ತಕ ಇದೆ, ಗ್ರಂಥಾಲಯ ಇದೆ, ಅಷ್ಟಿದೆ ಇಷ್ಟಿದೆ ಅನ್ನೋದೆಲ್ಲ ಬೇಕಿಲ್ಲ. ನೀವು ಒಂದು ಪದ ತಗೊಂಡು ಅಂಬೇಡ್ಕರ್‌ ಅವರನ್ನು ಹುಡುಕುತ್ತಾ ಹೋಗಬಹುದು. ನಾಲ್ಕೇ ಪದದ ಮೂಲಕ ಇವತ್ತಿನ ಸ್ಥಿತಿ ಹೇಳತಾ ಇದೀವಿ. ಫ್ಯಾಸಿಸಂ ಇವತ್ತು ಸಂಪೂರ್ಣ ದೇಶವನ್ನು ಕೈವಶಪಡಿಸಿಕೊಂಡಿದೆ. ಮೊದಲು ಇಟಲಿ, ಜರ್ಮನೀಲಿ ಇತ್ತು. ಇದೀಗ ನಮ್ಮ ದೇಶದಲ್ಲಿ ನೆಲೆಗೊಂಡಿದೆ. ನೆಲೆಗೊಳ್ಳಲು ಬೇಕಾದ ಎಲ್ಲ ವ್ಯವಸ್ಥೆಯನ್ನು ಅವರು ಮಾಡಿಕೊಂಡಿದ್ದಾರೆ" ಎಂಬುದಾಗಿ ಹೇಳುತ್ತಾ ಪ್ಯಾಸಿಸ್ಟ್ ಪ್ರಭುತ್ವದ ಅಪಾಯವನ್ನು ಮನದಟ್ಟುಮಾಡಿಸಿದರು. ಈಗಿನ ದಲಿತ ಚಳುವಳಿ ಹಿಡಿದ ಅವಕಾಶವಾದಿತನದ ಬಗ್ಗೆ ಭ್ರಮನಿರಸನಗೊಂಡಿರುವ ರಾಮಯ್ಯನವರು ದಲಿತ ಚಳುವಳಿ ಬಗ್ಗೆ ಇನ್ನು ಮೇಲೆ ಮಾತಾಡುವುದೇ ಇಲ್ಲವೆಂಬ ನಿರ್ಧಾರವನ್ನು ಪ್ರಕಟಿಸಿದರು.

" 2025ಕ್ಕೆ ಆರ್‌ಎಸ್‌ಎಸ್ ಗೆ 100 ವರ್ಷವಾಗುತ್ತದೆ. ದೇಶವನ್ನು ಅವರು ಹಿಂದೂ ರಾಷ್ಟ್ರ ಎಂದು ಡಿಕ್ಲೇರ್ ಮಾಡುತ್ತಾರೆ. ರಾಷ್ಟ್ರಪಿತ ಆಗಿ ಸಾರ್ವಕರ್ ಅವರನ್ನು ನೇಮಕ ಮಾಡುತ್ತಾರೆ. ಏಕೆಂದರೆ, ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಕೊಂದಾಯಿತು. ಅವರ ವಿಚಾರಗಳನ್ನು ಬಿಜೆಪಿ ತನ್ನ ಪ್ರಣಾಳಿಕೆ ಮಾಡಿಕೊಂಡಿತು. ಗಾಂಧಿಯನ್ನು ಕೊಂದು ಗಾಂಧಿ ಪ್ರಣೀತ ಸಮಾಜವಾದ ಅಂತ ಹಾಕ್ಕೊಂಡಿದ್ದಾರೆ. ಇದು ಫ್ಯಾಸಿಸಂ. ಇದನ್ನು ಅಂಬೇಡ್ಕರ್ ಅವರು ಮೈಕ್ರೋ ಫ್ಯಾಸಿಸಮ್‌ ಎಂದು ಹೇಳಿದ್ದಾರೆ. ನಾವೆಲ್ಲ ಮೈಕ್ರೋ ಫ್ಯಾಸಿಸ್ಟ್‌ಗಳು. ಅಂದರೆ ನಮ್ಮ ಕಿರುನಾಳಗಳಿಗೂ ಭೇದ ಅನ್ನೋದು, ಇನ್ನೊಬ್ಬನಿಗಿಂತ ನಾನು ಮೇಲೆ ಅನ್ನೋದು, ತರತಮ ಅನ್ನೋದು ಬಂದುಬಿಟ್ಟಿದೆ. ಇದು ಚಾತುರ್ವರ್ಣದ ಉದ್ದೇಶವಾಗಿತ್ತು. ಅವರಿಗೆ ಅದು ಬೇಕಾಗಿತ್ತು. ಚಾತುರ್ವರ್ಣದ ಭೇದ ಅಸ್ಪಶ್ಯರಿಗೆ, ಹಿಂದುಳಿದವರ ರಕ್ತನಾಳಗಳಿಗೆ ಕಳುಹಿಸಿಬಿಟ್ಟರೆ, ನಾವು ಗೆದ್ದೆವು ಅನ್ನೋದು ಅವರ ಭಾವನೆಯಾಗಿತ್ತು. ಈಗ ಅವರು ದಿಗ್ವಿಜಯಗೊಂಡಿದ್ದಾರೆ. ನಾವು ಕುಬ್ಜಗೊಂಡಿದ್ದೇವೆ. ಇದು ನಾವು ಅರ್ಥ ಮಾಡಿಕೊಳ್ಳಬೇಕಿರುವುದು." ಎನ್ನುವ ಮೂಲಕ ರಾಮಯ್ಯನವರು  ಮುಂದೊದಗಬಹುದಾದ ಅನಾಹುತದ ಕುರಿತು ಆತಂಕ ವ್ಯಕ್ತಪಡಿಸಿದರು.

"ಈಗ ನಾವು ಮುಖ್ಯವಾಗಿ ಅರ್ಥಮಾಡಿಕೊಳ್ಳಬೇಕಿರುವುದೇನೆಂದರೆ, ಇಂಥ ಹುಸಿ ಹೇಳಿಕೆ ಬದಲಾಗಿ ಅದರ ನಿಜವಾದ ಅರ್ಥಗಳಲ್ಲಿ ಪ್ರಜಾಪ್ರಭುತ್ವಕ್ಕೆ ಬಂದಿರುವ ಕುತ್ತನ್ನು ಎದುರಿಸಲು ನಾವು ಸನ್ನದ್ಧರಾಗಬೇಕಿದೆ. ಯಾವ ರೀತಿ ಸನ್ನದ್ದರಾಗಬೇಕು, ತಮಟೆ ಹೊಡೆಯುವುದರಿಂದ ಆಗುತ್ತಾ? ಅದು ಆಗೋದಿಲ್ಲ. ಅದನ್ನು ಬಾಬಾ ಸಾಹೇಬ್ ಅಂಬೇಡ್ಕರ್‌ ಒಳ್ಳೆಯ ಅದ್ಭುತ ಬರಹಗಳ ಮೂಲಕ ನಮ್ಮ ಮುಂದೆ ಇಟ್ಟಿದ್ದಾರೆ. ‘ದ ಚಾಲೆಂಜಸ್ ಬಿಫೋರ್ ದ ಪಾರ್ಲಿಮೆಂಟೆಡ್ ಡೆಮಾಕ್ರಸಿ ಇನ್ ಇಂಡಿಯಾ ಅಂಡ್ ದೇರ್ ರೆಮಿಡೀಸ್’… ಅದರಲ್ಲವರು ಎಷ್ಟು ಸ್ತರಗಳಲ್ಲಿ ಹೇಳ್ತಾರೆ ಅಂದರೆ, ಈ ಕಾಲವನ್ನು 1956ರಲ್ಲೇ ಅಂಬೇಡ್ಕರ್‌ ಅವರು ಪುಸ್ತಕಗಳಲ್ಲಿ ಬರೆದಿಟ್ಟಿದ್ದಾರೆ, ಇವತ್ತು ನಾವು ಅನುಭವಿಸುತ್ತಿರುವ ಈ ಸ್ಥಿತಿ ಬರುತ್ತೆ ಎಂದು. ಅವರು ಸಂವಿದಾನದ ಅರ್ಪಣಾ ದಿನ ಮಾಡಿದ ಭಾಷಣದಲ್ಲಿ ಏನು ಹೇಳಿದ್ದಾರೆ ಅಂದರೆ, 'ಭಾರತ ದೇಶ ಇವತ್ತಿನಿಂದ ಬಹಳ ವಿರೋಧಾಭಾಸದ ಕಡೆಗೆ ನಡೆಯುತ್ತದೆ. ನಾವು ರಾಜಕೀಯ ಮಾಡೋಕೆ ಕೊಟ್ಟಿದ್ದೀವಿ ಹಾಗೂ ಮತದಾನದ ಹಕ್ಕನ್ನು ಕೊಟ್ಟಿದ್ದೀವಿ. ಆದರೆ, ಆರ್ಥಿಕ ಮತ್ತು ಸಾಮಾಜಿಕವಾಗಿ ಆಗಬೇಕಿರುವ ಕೆಲಸಗಳು ಆಗಲಿಲ್ಲವಾದರೆ, ಪ್ರಜಾಪ್ರಭುತ್ವ ಫೇಲ್ ಆಗುತ್ತೆ. ನಮ್ಮ ಪ್ರಜಾಪ್ರಭುತ್ವಕ್ಕೆ ಕಡಿಮೆ ವಯಸ್ಸೆ ಇರಬಹುದು ಆದರೆ, ಅದು ಇಷ್ಟು ಬೇಗ ಬಂಡವಾಳಶಾಹಿಗಳಿಂದ ಹೈಜಾಕ್ ಆಗುತ್ತೆ ಎಂದು ಅಂದುಕೊಂಡಿರಲಿಲ್ಲ. ಒಂದು ಕೆಟ್ಟ ಸಂವಿಧಾನ ಆದರೂ ಅದನ್ನು ಜಾರಿಗೊಳಿಸುವವರು ಉತ್ತಮರಾದರೆ, ಅದನ್ನು ಚೆನ್ನಾದ ರೀತಿಯಲ್ಲಿ ಜಾರಿಗೊಳಿಸಬಹುದು. 'ಅದೆಷ್ಟೇ ಚೆನ್ನಾಗಿರೋ ಸಂವಿಧಾನ ಆದರೂ ಕೆಟ್ಟವರು ಬಂದು ಅದನ್ನು ಕೆಡಿಸಬಹುದು’ ಎಂದು ಅಂಬೇಡ್ಕರ್ ಹೇಳಿದ್ದರು. ‘ಇದು ನಾನು ಪೂರ್ಣ ಸಮಾಧಾನ ಪಟ್ಟುಕೊಳ್ಳುವಂತೆ ಬರೆದಿರುವ ಸಂವಿಧಾನ ಅಲ್ಲ. ಅದನ್ನೇನೂ ತಲೆ ಮೇಲೆ ಹೊತ್ತು ಕುಣಿಯಬೇಕಿಲ್ಲ, ಪೂಜಿಸಬೇಕಿಲ್ಲ. ಸಂವಿಧಾನದ ಒಳಗೆ ಇರಬೇಕಾದದ್ದು ಇಲ್ಲ. ಇರೋದರಲ್ಲೇ ಅದು ಜಾರಿಗೆ ಬರಲಿಲ್ಲ ಅಂದ್ರೆ ನಾನೇ ಮೊದಲಿಗ ಇದನ್ನು ಬೆಂಕಿಗೆ ಹಾಕೋದಕ್ಕೆ’ ಎಂದು ಅಂಬೇಡ್ಕರ್‌ ಅವರು ಹೇಳಿದ್ದರು." ಎನ್ನುವ ಮಾತುಗಳನ್ನಾಡಿದ ರಾಮಯ್ಯನವರು ನಮ್ಮ ಸಂವಿಧಾನದ ಸಮಸ್ಯೆ ಹಾಗೂ ಸವಾಲಿನ ಕುರಿತು ಕಟ್ಟೆಚ್ಚರವನ್ನು ವ್ಯಕ್ತಪಡಿಸಿದರು.

"ಕೋಲಾರ ನೆಲ ಒಂದು ಕಾಲಕ್ಕೆ ಇಡೀ ಭಾರತ ದೇಶಕ್ಕೆ ಅಥವಾ ಇಡೀ ಪ್ರಂಪಚಕ್ಕೆ ಒಂದು ಚಳವಳಿ ಹೇಗೆ ಇರಬೇಕು ಎಂಬುದಕ್ಕೆ ಮಾದರಿಯಾಗಿತ್ತು, ಇದೀಗ ಹೇಗೆ ಇರಬಾರದು ಎಂಬುದಕ್ಕೆ ಮಾದರಿಯಾಗಿದೆ. ಒಂದು ಇಡೀ ಪೊಲಿಟಿಕಲ್ ಫಿಲಾಸಫಿಯನ್ನು, ಲಿಬರೇಷನ್ ಫಿಲಾಸಫಿಯನ್ನು ನಾನು ಬರೆದಿಟ್ಟಿದ್ದೇನೆ. ಯಾರಿಗಾದರೂ ಆಸಕ್ತಿ ಇದ್ದರೆ, ನಿಜವಾಗಿಯೂ ನೀವು ವಿಮೋಚನೆಗೊಳ್ಳಬೇಕು ಅಂದ್ರೆ, ನಮ್ಮ ನೆಲವನ್ನು, ನಮ್ಮ ಮುಂದಿನ ಪೀಳಿಗೆಗಳನ್ನು ವಿಮೋಚನೆಗೊಳಿಸಬೇಕು ಅಂದ್ರೆ, ಅಂಥವರ ಜತೆ ನಾನು ಮಾತಾಡ್ತೇನೆ. ಅದರ ಬ್ಲೂಪ್ರಿಂಟ್ ನನ್ನ ಬಳಿ ಇದೆ. ನಾನು ಹತ್ತು ವರ್ಷ ಟೈಮ್ ತಗೊಂಡಿದ್ದೇನೆ. ಇನ್ನು ನಾನು ಈ ನೆಲದಲ್ಲಿ ಇರಲ್ಲ. ನಾನು ಸೆಲ್ಯೂಟ್ ಹೇಳ್ತಾ ಇದ್ದೀನಿ, ಬೇರೆ ನೆಲವನ್ನು ನಾನು ನನ್ನ ಪ್ರಯೋಗ ಭೂಮಿ ಮಾಡಿಕೊಂಡು ನನ್ನ ಚಟುವಟಿಕೆ ಆರಂಭಿಸ್ತೀನಿ." ಎಂದು ಹೇಳುತ್ತಲೇ ಅತಿಯಾದ ನೋವಿನಿಂದ ಬಾಳಿ ಬದುಕಿದ ಕೋಲಾರದ ನೆಲಕ್ಕೆ ಕೋಟಗಾನಹಳ್ಳಿ ರಾಮಯ್ಯನವರು ಅಂತಿಮ ವಿದಾಯ ಘೋಷಿಸಿದರು. ಇದನ್ನು ಅವರು ಪಾಲಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಅವರು ವಿದಾಯ ಘೋಷಣೆಯ ನೆಪದಲ್ಲಿ ಹೇಳಿದ ಯಾವ ಮಾತುಗಳಲ್ಲೂ ಸುಳ್ಳಿಲ್ಲ. ದಲಿತ ಸಂಘಟನೆಗಳು ವಿಘಟನೆಗೊಂಡು ಸಾವಿರಾರು ಕವಲುಗಳಾಗಿವೆ. ಎಲ್ಲಾ ಸಂಘಟನೆಗಳನ್ನೂ ಒಟ್ಟುಗೂಡಿಸುವ ಪ್ರಯತ್ನಗಳು ವಿಫಲವಾಗಿವೆ. ದಲಿತ ಸಂಘಟನೆಯ ಕೆಲವು ನಾಯಕರು ಒಂದೊಂದು ಪಕ್ಷದ ಪರವಾಗಿದ್ದು ತಮ್ಮ ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಂಡಿದ್ದಾರೆ. ಎಲ್ಲಾ ದಲಿತ ಸಂಘಟನೆಗಳ ಮಹಾನಾಯಕ ಅಂಬೇಡ್ಕರ್ ಒಬ್ಬರೇ. ಆದರೆ ಬಾಬಾಸಾಹೇಬರ ಆಶಯಗಳನ್ನು ಬಿಟ್ಟು ಅವರ ಆರಾಧನೆಗಳನ್ನೇ ಮಾಡುತ್ತಿರುವ, ತಮ್ಮ ಸ್ವಾರ್ಥಕ್ಕೆ ಬಾಬಾಸಾಹೇಬರ ಹೆಸರನ್ನು ಬಳಸಿಕೊಳ್ಳುತ್ತಿರುವ ದಲಿತ ಚಳುವಳಿಯ ನೇತಾರರು ಹಾಗೂ ಅನುಯಾಯಿಗಳ ಕುರಿತು ರಾಮಯ್ಯನವರು ನಿಷ್ಠುರ ಸತ್ಯವನ್ನೇ ಹೇಳಿದ್ದಾರೆ. ರಾಮಯ್ಯನವರ ಪ್ರತಿ ಮಾತುಗಳೂ ದಲಿತ ಸಂಘಟನೆಯಲ್ಲಿರುವವರಿಗೆ ಎಚ್ಚರದ ನುಡಿಗಳಾಗಿವೆ. ಆರೆಸ್ಸೆಸ್ ಎಂಬ ದೈತ್ಯ ಶಕ್ತಿಯನ್ನು ಎಲ್ಲರೂ ಒಂದಾಗಿ ವಿರೋಧಿಸದೇ ಇದ್ದಲ್ಲಿ ವರ್ಣಾಶ್ರಮ ಆಧಾರಿತ ಪ್ಯಾಸಿಸ್ಟ್ ಪ್ರಭುತ್ವ ಖಂಡಿತ ಎನ್ನುವ ರಾಮಯ್ಯನವರ ಮಾತುಗಳು ಸಂವಿಧಾನ ರಕ್ಷಣೆ ಬಯಸುವವರಿಗೆ ಎಚ್ಚರದ ಗಂಟೆಯಾಗಿದೆ.

ಯಾವ ದಲಿತ ಚಳುವಳಿಯನ್ನು ಕಟ್ಟಲು ಐವತ್ತು ವರ್ಷಗಳಿಂದ ರಾಮಯ್ಯನವರು ಶ್ರಮವಹಿಸಿದ್ದರೋ ಅಂತಹ ಚಳುವಳಿಯೇ ದಾರಿ ತಪ್ಪಿದ್ದರಿಂದ ಅತೀವ ಬೇಸರಗೊಂಡು ದಲಿತ ಚಳುವಳಿಗೆ ವಿದಾಯ ಹೇಳಿದ್ದಾರೆ. ಕೋಲಾರ ನೆಲದಿಂದಲೇ ದೂರಾಗುವ ನಿರ್ಧಾರ ಮಾಡಿದ್ದಾರೆ. 

ಆದರೆ ಎಲ್ಲಿಗೆ ಹೋದರೂ ಹೋರಾಟಗಾರ ರಾಮಯ್ಯನವರು ನೆಮ್ಮದಿಯಾಗಿರಲು ಸಾಧ್ಯವಿಲ್ಲ. ನೆಮ್ಮದಿಯಾಗಿರಲು ಈ ಪ್ಯಾಸಿಸ್ಟ್ ಪ್ರಭುತ್ವ ಮತ್ತು ಅವಕಾಶವಾದಿ ರಾಜಕಾರಣ ಬಿಡುವುದಿಲ್ಲ. ಹಾಗಾಗಿ ಇದ್ದಲ್ಲೇ ಇದ್ದು ಬಿಕ್ಕಟ್ಟುಗಳ ವಿರುದ್ದ ದ್ವನಿ ಎತ್ತುವುದೇ ಉತ್ತಮ ಮಾರ್ಗ. ಹೇಳಬೇಕಾದದ್ದನ್ನು ಬರೆಯುವ ಮೂಲಕ, ಬರೆದದ್ದನ್ನು ಜನರಿಗೆ ತಲುಪಿಸುವ ಮೂಲಕ, ತಲುಪಿಸಬೇಕಾದದ್ದನ್ನು ನಾಟಕಗಳನ್ನಾಗಿಸಿ ಪ್ರದರ್ಶಿಸುವ ಮೂಲಕ ರಾಮಯ್ಯನವರು ತಮ್ಮ ಸಾಮಾಜಿಕ ಹಾಗೂ ಸಂವಿಧಾನಿಕ ಬದ್ದತೆಯನ್ನು ಕಾಪಾಡಿಕೊಂಡು ಹೋಗಬೇಕಿದೆ. ಅಲ್ಲೇ ಇದ್ದು ಸಾಂಸ್ಕೃತಿಕ ಪ್ರತಿರೋಧದ ಮೂಲಕ ಪ್ರಭುತ್ವವನ್ನು ಪ್ರಶ್ನಿಸಬೇಕಾಗಿದೆ. ಇಲ್ಲವಾದರೆ ಪಲಾಯನವಾದಿ ಎನ್ನುವ ಅಪವಾದವನ್ನು ಹೊರಬೇಕಾಗುತ್ತದೆ. ರಾಮಯ್ಯನವರು ಅನುಭವಿಸಿದ್ದಕ್ಕಿಂತಾ ಸಾವಿರ ಪಟ್ಟು ಅವಮಾನ ನೋವು ಬೇಸರಗಳನ್ನು ಬಾಬಾಸಾಹೇಬರು ಅನುಭವಿಸಿದ್ದಾರೆ. ಅಂಬೇಡ್ಕರ್ ರವರು ಅಸಮಾನತೆಗೆ ಕಾರಣವಾದ ಧರ್ಮವನ್ನು ಧಿಕ್ಕರಿಸಿದರೇ ಹೊರತು  ನೆಲವನ್ನಲ್ಲ. ಇದು ರಾಮಯ್ಯನವರಿಗೆ ಮಾದರಿಯಾಗಲಿ. ತಮ್ಮ ಇತಿಮಿತಿ ಶಕ್ತಿ ಸಾಮರ್ಥ್ಯದ ಒಳಗೆ ವ್ಯವಸ್ಥೆ ವಿರುದ್ದ ಅವರ ಪ್ರತಿರೋಧದ ದ್ವನಿ ಒಡಮೂಡತ್ತಲೇ ಇರಲಿ. ಸಾಹಿತ್ಯಕ ಮತ್ತು ಸಾಂಸ್ಕೃತಿಕ ಹತಾರಗಳನ್ನು ಇನ್ನಷ್ಟು ಹರಿತಗೊಳಿಸುವ ಮೂಲಕ ಕೋಟಗಾನಹಳ್ಳಿ ರಾಮಯ್ಯನವರು ಈ ನಾಡಿನ ಸಾಂಸ್ಕೃತಿಕ ಎಚ್ಚರದ ಪ್ರಜ್ಞೆಯಾಗಿ ಮುಂದುವರೆಯಲಿ.

- ಶಶಿಕಾಂತ ಯಡಹಳ್ಳಿ
  05-01-2023

ಪ್ರೆಸ್ ಕ್ಲಬ್ ಪ್ರಶಸ್ತಿ; ಆಯ್ಕೆ ಮಾನದಂಡಗಳೇ ನಾಸ್ತಿ

ತಹ ತಹ - 481

ಪ್ರೆಸ್ ಕ್ಲಬ್ ಪ್ರಶಸ್ತಿ; ಆಯ್ಕೆ ಮಾನದಂಡಗಳೇ ನಾಸ್ತಿ

ಎಷ್ಟೋ ಸಲ ಈ ಪ್ರಶಸ್ತಿ ಪಡೆಯುವವರಿಗಿಂತಾ ಕೊಡುವವರ ಮೇಲೆ ಅನುಮಾನ ಹೆಚ್ಚಾಗುತ್ತದೆ. ನಿಜವಾದ ಸಾಧಕರನ್ನು ಸ್ವಾರ್ಥರಹಿತವಾಗಿ ಹಾಗೂ ಪಾರದರ್ಶಕವಾಗಿ ಆಯ್ಕೆ ಮಾಡಿದ್ದೇ ಆದರೆ ಅದು ಕೊಟ್ಟ ಪ್ರಶಸ್ತಿಗೂ ಮೌಲ್ಯ ತೆಗೆದುಕೊಂಡವರಿಗೂ ಗೌರವ. ಆದರೆ.. ಯಾರಿಗೆ ಕೊಟ್ಟರೆ ನಮಗೇನು ಲಾಭ ಎನ್ನುವ ಅವಕಾಶವಾದಿತನದ ಆಶಯದಲ್ಲಿ ಪ್ರಶಸ್ತಿ ಕೊಡುವುದು ತೋರುಂಬ ಲಾಭವಾಗುತ್ತದೆ. ಇದರಿಂದಾಗಿ ಪ್ರಶಸ್ತಿಯ ಗೌರವವೂ ಕಡಿಮೆಯಾಗುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನ ಪ್ರೆಸ್ ಕ್ಲಬ್ ಕೊಡುವ ವಾರ್ಷಿಕ ಪ್ರಶಸ್ತಿ ಪುರಸ್ಕೃತರ ವಿಶೇಷ ಪ್ರಶಸ್ತಿಗೆ ಭಾಜನರಾದವರ ಪಟ್ಟಿ ಗಮನಿಸಿದಾಗ ಈ ಮೇಲೆ ತಿಳಿಸಿದಂತೆ ಸಂದೇಹ ಕಾಡದೇ ಇರದು. ಪ್ರೆಸ್ ಕ್ಲಬ್ ಪ್ರಶಸ್ತಿಗೆ ಆಯ್ಕೆಯ ಮಾನದಂಡಗಳು ಯಾವವು? ಆಯ್ಕೆಯ ವಿಧಾನಗಳು ಹೇಗೆ? ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಮಾರ್ಗದರ್ಶಿ ಸೂಚಿಗಳು ಇಲ್ಲದೇ ಇರುವುದರಿಂದ ಪ್ರೆಸ್ ಕ್ಲಬ್ ಪದಾಧಿಕಾರಿಗಳೇ ಸಭೆ ಕರೆದು ತಮಗೆ ಅನುಕೂಲವಾಗುವವರ ಹೆಸರನ್ನು ಅಂತಿಮಗೊಳಿಸುತ್ತಾರೆ. ಹೆಚ್ಚಾಗಿ ಆಳುವ ವರ್ಗದವರನ್ನು ಅದರಲ್ಲೂ ವರ್ಷದ ವ್ಯಕ್ತಿ ಹಾಗೂ ವ್ಯಕ್ತಿ ವಿಶೇಷ ಪ್ರಶಸ್ತಿಗೆ ರಾಜಕಾರಣಿಗಳ ಹೆಸರನ್ನೇ ಪೈನಲೈಸ್ ಮಾಡಲಾಗುತ್ತದೆ. 

ಉದಾಹರಣೆಗೆ 2021 ರಲ್ಲಿ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೂ ಹಾಗೂ ವಿಶೇಷ ಪ್ರಶಸ್ತಿಯನ್ನು ಆರೋಗ್ಯ ಸಚಿವರಾಗಿದ್ದ ಡಾ.ಕೆ.ಸುಧಾಕರ್ ರವರಿಗೂ ಕೊಡಮಾಡಲಾಗಿತ್ತು. 

2022 ರ ಸಾಲಿನ 'ವರ್ಷದ ವ್ಯಕ್ತಿ' ಪ್ರಶಸ್ತಿಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಹಾಗೂ ವ್ಯಕ್ತಿ ವಿಶೇಷ ಪ್ರಶಸ್ತಿಯನ್ನು ಕೈಗಾರಿಕೆ ಸಚಿವ ಮುರಗೇಶ ನಿರಾಣಿ ಹಾಗೂ ಸಹಕಾರಿ ಸಚಿವರಾಗಿದ್ದ ಎಸ್.ಟಿ.ಸೋಮಶೇಖರ್ ರವರಿಗೆ ಪ್ರದಾನಮಾಡಲಾಗಿತ್ತು.

ಈಗ 2023 ರಲ್ಲಿ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಡಿಸಿಎಂ ಡಿ.ಕೆ.ಶಿವಕುಮಾರರವರಿಗೆ ಹಾಗೂ ವಿಶೇಷ ಪ್ರಶಸ್ತಿಯನ್ನು ಸಚಿವ ಶಾಮನೂರು ಶಿವಶಂಕರಪ್ಪನವರಿಗೆ ಡಿ.31 ರಂದು ಸಿಎಂ ಸಿದ್ದರಾಮಯ್ಯನವರು ಪ್ರದಾನ ಮಾಡಿದರು. 

ಕಳೆದ ಮೂರು ವರ್ಷಗಳ ಪ್ರಶಸ್ತಿಯ ಪಟ್ಟಿ ಗಮನಿಸಿದರೆ ಪ್ರೆಸ್ ಕ್ಲಬ್ ವಿಶೇಷ ಪ್ರಶಸ್ತಿಗಳಿಗೆ ಆಡಳಿತ ಪಕ್ಷದ ಅಧಿಕಾರಸ್ತ ರಾಜಕಾರಣಿಗಳನ್ನು ಹಾಗೂ ಪ್ರಭಾವಶಾಲಿ ವಿರೋಧ ಪಕ್ಷದ ರಾಜಕಾರಣಿಗಳನ್ನು ಮಾತ್ರ ಯಾಕೆ ಆಯ್ಕೆ ಮಾಡಲಾಗುತ್ತಿದೆ. ಬೇರೆ ಕ್ಷೇತ್ರಗಳಲ್ಲಿ ಸಾಧಕರು ಇಲ್ಲವೇ? 

ರಾಜಕಾರಣಿಗಳಿಗೆ ಪ್ರಶಸ್ತಿ ಕೊಡಬಾರದು ಅಂತೇನಿಲ್ಲ. ಆದರೆ ಅವರು ಅಧಿಕಾರದಲ್ಲಿ ಇದ್ದಾಗಲೇ ಪ್ರಶಸ್ತಿಗೆ ಆಯ್ಕೆ ಮಾಡುವುದರ ಹಿಂದೆ ಲಾಭ ಮಾಡಿಕೊಳ್ಳಲು ಇರುವ ಲೆಕ್ಕಾಚಾರಗಳು ಸಂದೇಹವನ್ನು ಹುಟ್ಟಿಸುವಂತಿವೆ. ಆಳುವ ವರ್ಗದ ಕೃಪಾ ಕಟಾಕ್ಷವನ್ನು ಪ್ರೆಸ್ ಕ್ಲಬ್ ಬಯಸಿದಂತೆ ಭಾಸವಾಗುತ್ತಿದೆ. ಪ್ರಶಸ್ತಿ ಕೊಡುವ ಮೂಲಕ ಆಳುವವರನ್ನು ಓಲೈಸುವ ಹಾಗೂ ಅಧಿಕಾರಸ್ತರಿಂದ ಅನುಕೂಲ ಪಡೆಯುವ ಉದ್ದೇಶವೇ ಎದ್ದುಕಾಣುವಂತಿದೆ.

ಇದು ಖಂಡಿತಾ ಪತ್ರಿಕಾ ಧರ್ಮವಲ್ಲ. ಸಂವಿಧಾನದ ನಾಲ್ಕನೇ ಅಂಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಮಾಧ್ಯಮಾಂಗವು ಯಾವಾಗಲೂ ಸಕ್ರೀಯ ವಿರೋಧ ಪಕ್ಷದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಆಳುವ ವರ್ಗಗಳು ಮಾಡುವ ಜನವಿರೋಧಿ ನೀತಿಗಳನ್ನು, ಜೀವವಿರೋಧಿ ನಿರ್ಣಯಗಳನ್ನು, ಭ್ರಷ್ಟಾಚಾರ ಸ್ವಜನಪಕ್ಷಪಾತಗಳನ್ನು ಆಯಾ ಮಾಧ್ಯಮಗಳ ಮೂಲಕ ರಾಜಿರಹಿತವಾಗಿ ಅನಾವರಣಗೊಳಿಸುವ ಹೊಣೆಗಾರಿಕೆ ಪತ್ರಕರ್ತರದ್ದಾಗಿದೆ. ಆದರೆ ಪತ್ರಕರ್ತರ  ಕೂಟವಾದ ಬೆಂಗಳೂರು ಪ್ರೆಸ್ ಕ್ಲಬ್ ಹೀಗೆ ಅಧಿಕಾರಸ್ತರ ಜೊತೆ ಶಾಮೀಲಾಗುವುದು, ಆಳುವವರನ್ನು ಓಲೈಸುವುದು, ಅದಕ್ಕಾಗಿ ಪ್ರಶಸ್ತಿಗಳನ್ನು ಕೊಡುವುದೆಲ್ಲಾ ಪತ್ರಕರ್ತರ ನಿಷ್ಟೆ ಹಾಗೂ ಬದ್ದತೆಯನ್ನು ಪ್ರಶ್ನಿಸುವಂತಿದೆ. 

ಯಾಕೆ ಹೀಗೆ? ಎಂದು ಪ್ರೆಸ್ ಕ್ಲಬ್ ನ ಹಿರಿಯ ಸದಸ್ಯರನ್ನು ಕೇಳಿದಾಗ. " ರಾಜಕೀಯದವರ ಜೊತೆಗೆ ಸಂಬಂಧ ಚೆನ್ನಾಗಿದ್ದರೆ ಪ್ರೆಸ್ ಕ್ಲಬ್ಬಿಗೆ ಹಲವಾರು ರೀತಿಯಲ್ಲಿ ಪ್ರಯೋಜನವಾಗುತ್ತವೆ. ಅಬಕಾರಿ ಇಲಾಖೆಯಿಂದ ಮದ್ಯ ಸರಬರಾಜು ಸಲೀಸಾಗುತ್ತದೆ. ಕ್ಲಬ್ ವರಮಾನ ಹೆಚ್ಚಾಗುತ್ತದೆ. ಕೋವಿಡ್ ಸಮಯದಲ್ಲಿ ಉಚಿತ ಪಡಿತರ ತಂದು ಪತ್ರಕರ್ತರಿಗೆ ಹಂಚಲು ಸಾಧ್ಯವಾಗುತ್ತದೆ. ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದ ಖರ್ಚು ನಿಭಾಯಿಸಬಹುದಾಗಿದೆ. ಪ್ರೆಸ್ ಕ್ಲಬ್ ಡೈರಿಗೆ ಜಾಹಿರಾತುಗಳು ಸಿಗುತ್ತವೆ. ಪತ್ರಕರ್ತರಿಗೆ ವಿಮೆ, ಬಸ್ ಪಾಸ್, ಆಸ್ಪತ್ರೆ ಚಿಕಿತ್ಸೆ ಯಂತಹ ಅನುಕೂಲತೆ ಪಡೆಯಲು ಅಧಿಕಾರಸ್ತರ ಜೊತೆ ಸೌಹಾರ್ಧ ಸಂಬಂಧ ಹೊಂದುವುದು ಅಗತ್ಯವಾಗಿದೆ" ಎಂದು ಉತ್ತರಿಸಿದರು. 

ಅಂದರೆ ಯಾವುದನ್ನು ಹಕ್ಕಿನಿಂದ ಪಡೆಯಬಹುದಾಗಿತ್ತೋ ಅದನ್ನು ಓಲೈಕೆಯಿಂದಾ ಪಡೆದುಕೊಳ್ಳುವ ರಾಜೀತನಕ್ಕೆ ಪ್ರೆಸ್ ಕ್ಲಬ್ ಬಳಕೆಯಾಗುತ್ತಿದೆಯಾ?  ಇದು ನಿಜಕ್ಕೂ ಕಳವಳಕಾರಿಯಾಗಿರುವಂತಹುದು ಹಾಗೂ ಪತ್ರಕರ್ತರ ನೈತಿಕತೆಯನ್ನು ಪ್ರಶ್ನಿಸುವಂತಹುದು.

ಹೌದು ಯಾರಿಗೂ ಹೆದರದ ಅಧಿಕಾರದಲ್ಲಿರುವ ರಾಜಕಾರಣಿಗಳು ಮಾಧ್ಯಮದವರಿಗೆ ಹೆದರುತ್ತಾರೆ. ಎಲ್ಲಿ ತಾವು ಮಾಡುವ ಅಕ್ರಮ ಕೆಲಸಗಳು, ಭ್ರಷ್ಟಾಚಾರ ಪ್ರಕರಣಗಳು ಮಾಧ್ಯಮಗಳಲ್ಲಿ ಪ್ರಸಾರಗೊಂಡು ತಮ್ಮ ವರ್ಚಸ್ಸಿಗೆ ದಕ್ಕೆ ಬರುತ್ತದೋ, ಅಧಿಕಾರಕ್ಕೆ ಕುತ್ತು ತರುತ್ತದೋ ಎಂದು ಎಲ್ಲಾ ಪಕ್ಷದ ನಾಯಕರೂ ಆತಂಕಪೀಡಿತರಾಗುತ್ತಾರೆ. ಅಂತವರೂ ಸಹ ಮಾಧ್ಯಮ ಮಿತ್ರರೊಂದಿಗೆ ಸೌಹಾರ್ಧ ಸಂಬಂಧವನ್ನೇ ಬಯಸುತ್ತಾರೆ. ಕೆಲವು ಪತ್ರಕರ್ತರಿಗೆ ಆಗಾಗ ಕಾಣಿಕೆಗಳನ್ನೂ ಕೊಟ್ಟು ಸಾಕಿಕೊಂಡಿರುತ್ತಾರೆ. ಪತ್ರಕರ್ತರ ಚಿಕ್ಕಪುಟ್ಟ ಬೇಡಿಕೆಗಳನ್ನೂ ಈಡೇರಿಸಿರುತ್ತಾರೆ. ಒಮ್ಮೆ ಈ ಅಧಿಕಾರಸ್ತರ ಆಮಿಷಕ್ಕೆ ಬಲಿಯಾದ ಪತ್ರಕರ್ತ ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯವಾ? 

ಶಾಸಕಾಂಗ ಮತ್ತು ಮಾಧ್ಯಮಾಂಗ ಪರಸ್ಪರ ಕೊಡುತೆಗೆದುಕೊಳ್ಳುವ ಮೂಲಕ ರಾಜಿ ಆದರೆ ಇಡೀ ವ್ಯವಸ್ಥೆ ಅರಾಜಕವಾಗುತ್ತದೆ. ಸತ್ಯ ದರ್ಶನ ಮಾಡಬೇಕಾದ ಪತ್ರಕರ್ತರು ಆಳುವವರ ಮರ್ಜಿಗೆ ಒಳಗಾದರೆ ವಾಸ್ತವ ತಿರಿಚಲ್ಪಡುತ್ತದೆ. ಆಗ ಪತ್ರಕರ್ತರ ಮೇಲೆ ಜನರಿಗಿರುವ ಅಲ್ಪ ಸ್ವಲ್ಪ ನಂಬಿಕೆಯೂ ನಾಶವಾಗುತ್ತದೆ.‌

ಬೇಕಿರಲಿಲ್ಲ. ಬೆಂಗಳೂರಿನ ಪತ್ರಕರ್ತರ ಪ್ರಾತಿನಿಧಿಕ ಸಂಸ್ಥೆಯಂತಿರುವ ಪ್ರೆಸ್ ಕ್ಲಬ್ ಈ ರೀತಿ ಆಳುವ ವರ್ಗದ ಪ್ರಭಾವಿಗಳಿಗೆ ಪ್ರಶಸ್ತಿ ಕೊಡುವ ಅಗತ್ಯವೂ ಇರಲಿಲ್ಲ. ಪ್ರಶಸ್ತಿ ಮೂಲಕ ಓಲೈಸುವುದೂ ಬೇಕಿರಲಿಲ್ಲ. ಇಷ್ಟಕ್ಕೂ ಪತ್ರಕರ್ತರ ಹಿತರಕ್ಷಣೆ ಕುರಿತ ಇಲ್ಲವೇ ಪ್ರೆಸ್ ಕ್ಲಬ್ ಅಗತ್ಯಗಳ ಕುರಿತ ಬೇಡಿಕೆಗಳಿದ್ದರೆ ಅವುಗಳನ್ನು ಡಿಮಾಂಡ್ ಮಾಡುವ ಮೂಲಕವೇ ಪಡೆದುಕೊಳ್ಳಬಹುದಾಗಿದೆ. ಆದರೆ ಹೀಗೆ ಪ್ರತಿ ವರ್ಷ ಪ್ರಭಾವಿ ರಾಜಕಾರಣಿಗಳಿಗೆ ಪ್ರಶಸ್ತಿ ಕೊಟ್ಟು ಗೌರವಿಸಿ ಸನ್ಮಾನಿಸುವುದು ಸಮಂಜಸವೆನ್ನಿಸದು. ಹೀಗೆ ಪ್ರಶಸ್ತಿ ಪಡೆದವರು ಈ ಹಿಂದೆ ಹಗರಣಗಳಲ್ಲಿ ಭಾಗವಹಿಸಿದ್ದರೆ ಅಥವಾ ಮುಂದೊಮ್ಮೆ ಹಗರಣ ಮಾಡಿ ಸಿಕ್ಕಾಕಿಕೊಂಡರೆ ಪ್ರಶಸ್ತಿಗೂ ಹಾಗೂ ಕೊಟ್ಟ ಸಂಸ್ಥೆಗೂ ಕಳಂಕ ತಟ್ಟದೇ ಬಿಡದು.

ಇತ್ತೀಚಿನ ವರ್ಷಗಳಲ್ಲಿ ಪ್ರೆಸ್ ಕ್ಲಬ್ಬಿನ ವಿಶೇಷ ಪ್ರಶಸ್ತಿಗಳು ರಾಜಕಾರಣಿಗಳ ಪಾಲಾಗುತ್ತಿವೆ. ಇದಕ್ಕೂ ಮೊದಲು ಜಸ್ಟೀಸ್ ವೆಂಕಟಾಚಲಯ್ಯ, ಲೋಕಾಯುಕ್ತರಾಗಿ ಭ್ರಷ್ಟರಿಗೆ ಸಿಂಹಸ್ವಪ್ನರಾಗಿದ್ದ ಸಂತೋಷ ಹೆಗ್ಡೆ, ಕ್ರಿಕೆಟ್ ಸಾಧಕ ಅನಿಲ್ ಕುಂಬ್ಳೆಯಂತಹ ಸಾಧಕರಿಗೆ ಪ್ರೆಸ್ ಕ್ಲಬ್ ವಿಶೇಷ ಪ್ರಶಸ್ತಿ ಕೊಡಮಾಡುವ ಮೂಲಕ ಪ್ರಶಸ್ತಿಯ ಮೌಲ್ಯ ಹೆಚ್ಚಿಸಿಕೊಳ್ಳಲಾಗಿತ್ತು. ಈ ಹಿಂದೆ 2020 ರಲ್ಲಿ ವಿಪ್ರೋ ಸಂಸ್ಥೆಯ ಅಧ್ಯಕ್ಷ ಅಜಿಂ ಪ್ರೇಮಜಿ, ನಟ ಸುದೀಪ್, ನಾರಾಯಣ ಹೃದಯಾಲಯದ ಡಾ. ದೇವಿಪ್ರಸಾದ್ ಶೆಟ್ಟಿಯವರಂತಹ ನಿಜವಾದ ಸಾಧಕರಿಗೆ ಪ್ರೆಸ್ ಕ್ಲಬ್ ಪ್ರಶಸ್ತಿ ಕೊಟ್ಟು ಗೌರವಿಸಲಾಗಿತ್ತು. ಆದರೆ ಈಗ ಯಾಕೆ ಪ್ರೆಸ್ ಕ್ಲಬ್ ಈ ಆಳುವ ವರ್ಗದ ಅಧಿಕಾರಸ್ತರ ಓಲೈಕೆಗೆ ಮುಂದಾಗಿದೆ? 

ಪ್ರೆಸ್ ಕ್ಲಬ್ ನಲ್ಲಿ ಸಾವಿರದಾ ಆರನೂರಕ್ಕೂ ಹೆಚ್ಚು ಸದಸ್ಯರಿದ್ದಾರೆ. ಇವರೆಲ್ಲರನ್ನೂ ಪ್ರೆಸ್ ಕ್ಲಬ್ ಆಡಳಿತ ಮಂಡಳಿ ಪ್ರತಿನಿಧಿಸುತ್ತದೆ. ಆಡಳಿತ ಸಮಿತಿ ತೆಗೆದುಕೊಂಡ ನಿರ್ಧಾರಗಳು ಎಲ್ಲಾ ಸದಸ್ಯರ ಪರವಾದ ನಿರ್ಣಯಗಳು ಎಂದೇ ಗುರುತಿಸಲಾಗುತ್ತಿದೆ. ಹೀಗಾಗಿ ಎಲ್ಲರೂ ಮೆಚ್ಚುವಂತಹ ನಿಜವಾದ ಸಾಧಕರನ್ನು ಪ್ರೆಸ್ ಕ್ಲಬ್ ವಿಶೇಷ ಪ್ರಶಸ್ತಿಗಳಿಗೆ  ಆಯ್ಕೆ ಮಾಡುವ ಮೂಲಕ ಪ್ರೆಸ್ ಕ್ಲಬ್ಬಿನ ಗಣತೆಯನ್ನೂ ಹಾಗೂ ಪ್ರಶಸ್ತಿಯ ಮೌಲ್ಯವನ್ನೂ ಹೆಚ್ಚಿಸಬೇಕಾದ ಹೊಣೆಗಾರಿಕೆ ಪ್ರೆಸ್ ಕ್ಲಬ್ಬಿನ ಸಮಿತಿಯ  ಸದಸ್ಯರುಗಳ ಮೇಲಿದೆ.  

ಮುಂದಿನ ವರ್ಷದಿಂದಾದರೂ ಪದಾಧಿಕಾರಿಗಳೇ ಪ್ರಶಸ್ತಿ ಪುರಸ್ಕೃತರಾಗುವವರನ್ನು ಆಯ್ಕೆ ಮಾಡದೇ ತಜ್ಞರ ಸಮಿತಿಯನ್ನು ರಚಿಸಿ, ಸರ್ವ ಸದಸ್ಯರ ಅಭಿಪ್ರಾಯಗಳನ್ನೂ ಪರಿಗಣಿಸಿ ರಾಜಕೀಯೇತರ ಸಾಧಕರಿಗೆ ಪ್ರಶಸ್ತಿ ಘೋಷಿಸುವುದು ಸೂಕ್ತವೆನಿಸುತ್ತದೆ. ಒಟ್ಟಿನ ಮೇಲೆ ಪತ್ರಿಕಾ ಧರ್ಮವನ್ನು ಪಾಲಿಸುವ ಹಾಗೂ ನೈತಿಕ ಪ್ರಜ್ಞೆಯನ್ನು ಹೊಂದಿರುವ ಪತ್ರಿಕಾರಂಗವನ್ನು ಕಟ್ಟುವ ನಿಟ್ಟಿನಲ್ಲಿ ಪ್ರೆಸ್ ಕ್ಲಬ್ ಮಾದರಿಯಾಗಲಿ ಎನ್ನುವುದೇ ಮಾಧ್ಯಮಾಂಗದ ಎಲ್ಲರ ಆಶಯವಾಗಿದೆ. 

- ಶಶಿಕಾಂತ ಯಡಹಳ್ಳಿ
  01-01-2024