ಭಾನುವಾರ, ಫೆಬ್ರವರಿ 11, 2024

ಕನಸಿನ ಲೋಕದಲಿ ಅರಳಿದ ಕಣಿವೆಯ ಹಾಡೆಂಬ ದೃಶ್ಯಕಾವ್ಯ

ತಹ ತಹ - 508.  ರಂಗವಿಮರ್ಶೆ

ಕನಸಿನ ಲೋಕದಲಿ ಅರಳಿದ ಕಣಿವೆಯ ಹಾಡೆಂಬ ದೃಶ್ಯಕಾವ್ಯ


ದೇಶ ಯಾವುದಾದರೇನು ಜನರ ಬಾದೆ ಬವಣೆ ಒಂದೇ. ಜಗದ ಬದಲಾಯಿಸಲಾಗದ ನಿಯಮ ಬದಲಾವಣೆಯೊಂದೇ. ದೂರದ ದಕ್ಷಿಣ ಆಫ್ರಿಕಾದ ಹಳೆ ತಲೆಮಾರಿನ ಶ್ರಮಿಕನ ಕಥೆಯೊಂದು ನಮ್ಮದೇ ಆಗಬಹುದಾಗಿದೆ. ಅಲ್ಲಿಯ ಹೊಸ ತಲೆಮಾರಿನ ಪ್ರಾಯದವರ ಆಸೆ ಕನಸು ತರುಣ ಜನಾಂಗದವರದ್ದೆ ಆಗಬಹುದಾಗಿದೆ. 

ಅದು 'ದಿ ವ್ಯಾಲಿ ಸಾಂಗ್'. ದಕ್ಷಿಣ ಆಫ್ರಿಕಾದ ಪ್ರಸಿದ್ದ ನಾಟಕಕಾರ ಅತೋಲ್ ಫ್ಯುಗಾರ್ಡ್ ಬರೆದ ನಾಟಕ. ಡಾ.ಮೀರಾ ಮೂರ್ತಿ ಯವರು 'ಕಣಿವೆಯ ಹಾಡು' ಹೆಸರಲ್ಲಿ ಈ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಮೈಸೂರಿನ ನಟನ ರೆಪರ್ಟರಿ ತಂಡಕ್ಕೆ ಡಾ.ಶ್ರೀಪಾದ ಭಟ್ ರವರು ನಿರ್ದೇಶಿಸಿದ್ದಾರೆ.‌

ಎರಡು ರೀತಿಯ ಜನರು ಯಾವಾಗಲೂ ಇದ್ದೇ ಇರುತ್ತಾರೆ. ಮೊದಲನೆಯವರು ಯಥಾಸ್ಥಿತಿವಾದಿಗಳು. ದೇವರ ಮೇಲೆ ಭಾರ ಹಾಕಿ ಇದ್ದಂತೆ ಬದುಕನ್ನು ಸಾಗಿಸುವವರು. ಎರಡನೇ ರೀತಿಯವರು ಬದಲಾವಣೆಯ ಕನಸು ಕಾಣುತ್ತಾ ಅದರ ಸಾಕಾರಕ್ಕಾಗಿ ಪ್ರಯತ್ನಿಸುವವರು. ಮೊದಲನೆಯ ಕೆಟಗರಿಯ ಅಜ್ಜನಿಗೆ ತುಂಡು ಭೂಮಿ, ಮನೆ ಹಾಗೂ ಪ್ರಾರ್ಥನೆಗೆ ಇರುವ ಚರ್ಚೇ ಬದುಕು ಸರ್ವಸ್ವ. ಹಾಡನ್ನೇ ಬದುಕಾಗಿಸಿಕೊಂಡ ಆತನ ಮೊಮ್ಮಗಳಿಗೆ ಸದಾ ಹಾಡಿನದ್ದೇ ಧ್ಯಾನ. ತಲೆಮಾರಿನ ಅಂತರದ ವಿಭಿನ್ನ ಆಲೋಚನೆಯ ಅಜ್ಜ ಮತ್ತು ಮೊಮ್ಮಗಳ ಕಥಾನಕವೇ ಕಣಿವೆಯ ಹಾಡು.


ಈಗಲೂ ಪ್ರತಿ ಗ್ರಾಮಗಳಲ್ಲೂ ಈ ರೀತಿಯ ತಲೆಮಾರುಗಳ ನಡುವಿನ ತಾಕಲಾಟ ನಿತ್ಯ ನಿರಂತರವಾಗಿರುತ್ತದೆ. ಭೂಮಿಯನ್ನೇ ನಂಬಿಕೊಂಡ ಶ್ರಮಜೀವಿಗಳಿಗೆ ತಮ್ಮ ಕೆಲಸ ಮತ್ತು ವಾಸಸ್ಥಳವೇ ಜಗತ್ತು. ಆದರೆ ಹೊರಜಗತ್ತಿನ ಸಂಪರ್ಕಕ್ಕೆ ಹಾತೊರೆಯುವ ಯುವಜನಾಂಗಕ್ಕೆ ಅಜ್ಜ ಕಟ್ಟಿಕೊಂಡ ತಲ್ಲಣದ ಚೌಕಟ್ಟನ್ನು ಮೀರುವ ತವಕ. ಈ ತಾಕಲಾಟಗಳೆ ತಲೆಮಾರಿನ ನಡುವೆ ಮಾನಸಿಕ ಸಂಘರ್ಷಕ್ಕೆ ಕಾರಣವಾಗುತ್ತಾ ಹಳ್ಳಿಗಳಿಂದ ನಗರಗಳತ್ತ ವಲಸೆ ಆರಂಭವಾಗುತ್ತದೆ. ಹಿರಿಯರು ಗ್ರಾಮವಾಸಿಗಳಾದರೆ, ಉತ್ಸಾಹಿ ಯುವಕರು ಪಟ್ಟಣ ಸೇರುತ್ತಾರೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಾ  ಅನೇಕ ಗ್ರಾಮಗಳು ಈಗ ವೃದ್ದಾಶ್ರಮಗಳಾಗಿವೆ. ಪಟ್ಟಣಗಳು ವಲಸೆಗಾರರಿಂದ ಕಿಕ್ಕಿರಿದಿವೆ. ಈ ರೀತಿಯ ಜಾಗತಿಕ ವಿದ್ಯಮಾನದ ಅನಿವಾರ್ಯತೆಯನ್ನು ಅಜ್ಜ ಮೊಮ್ಮಗಳ ಸಂಬಂಧದ ಮೂಲಕ "ಕಣಿವೆಯ ಹಾಡು" ಕಟ್ಟಿಕೊಡುತ್ತದೆ.

ವಯೋವೃದ್ಧ ಅಬ್ರಾಮ್ ಜೋಂಕರ್ಸ್ ತುಂಡು ಭೂಮಿಯಲ್ಲಿ ಕುಂಬಳ ಬೆಳೆದು ಬದುಕುವ ಶ್ರಮಿಕ. ಆತನ ಮಗಳು ಯಾರ ಜೊತೆಯೋ ಪಟ್ಟಣಕ್ಕೆ ಓಡಿ ಹೋಗಿ ಮಗುವನ್ನು ಹೆತ್ತು ಸಾಯುತ್ತಾಳೆ. ಆ ಮಗುವನ್ನು ತಂದು ಸಾಕುವ ಅಜ್ಜಿಯೂ ತೀರಿಕೊಂಡಾಗ ಕೂಸಿನ ರಕ್ಷಣೆ ಅಜ್ಜನ ಹೊಣೆಗಾರಿಕೆಯಾಗುತ್ತದೆ.‌ ಬೆಳೆದು ನಿಂತ ಮೊಮ್ಮಗಳು ವೆರೋನಿಕಾಗೆ ಹಾಡು ಕಟ್ಟುವ, ಕಟ್ಟಿದ್ದನ್ನು ಹಾಡುವ ಹುಚ್ಚು. ಹಾಡಿದ್ದನ್ನು ಜಗದ ಜನ ಮೆಚ್ಚಿಕೊಳ್ಳಬೇಕೆಂಬ ಕನಸು. ಅದಕ್ಕಾಗಿ ಪಟ್ಟಣಕ್ಕೆ ವಲಸೆ ಹೋಗುವ ಆಸೆ ಅವಳದು. ಮಳೆ ಬೆಳೆ ಹಾಗೂ ಬದುಕಿಗೆ ಪ್ರಾರ್ಥನೆಯನ್ನೇ ನಂಬಿದ ಅಜ್ಜನಿಗೆ ಪಟ್ಟಣ ಸೇರಿ ಸತ್ತು ಹೋದ ಮಗಳಂತೆ ಮೊಮ್ಮಗಳ ಬದುಕೂ ಆಗಬಹುದೆಂಬ ಆತಂಕ. ಅಜ್ಜ ಒಪ್ಪುತ್ತಿಲ್ಲ ಮೊಮ್ಮಗಳು ಬಿಡುತ್ತಿಲ್ಲ. ಕೊನೆಗೂ ಒಪ್ಪದಿದ್ದರೆ ಓಡಿ ಹೋಗುತ್ತೇನೆಂದ ಮೊಮ್ಮಗಳ ಮಾತಿಗೆ ಅಜ್ಜ ಅನಿವಾರ್ಯವಾಗಿ ಒಪ್ಪುತ್ತಾನೆ. ಮೊಮ್ಮಗಳು ಕನಸು ನನಸಾಗಿಸಿಕೊಳ್ಳಲು ಪಟ್ಟಣಕ್ಕೆ ಹೊರಡುತ್ತಾಳೆ. 


ಇಷ್ಟು ಸರಳವಾದ ಸಾಮಾನ್ಯ ಕಥೆಯ ಎಳೆಯನ್ನು ಅಸಾಮಾನ್ಯ ರೀತಿಯಲ್ಲಿ ಕಟ್ಟಿಕೊಟ್ಟಿರುವುದೇ ಈ ನಾಟಕದ ವಿಶೇಷತೆ.‌ ಮೂರೇ ಪಾತ್ರಗಳನ್ನು ಇಬ್ಬರೇ ಪಾತ್ರಧಾರಿಗಳು ತಮ್ಮ ಅಭಿನಯದ ಮೂಲಕ ಒಂದೂ ಮುಕ್ಕಾಲು ಗಂಟೆಗಳ ಕಾಲ ನೋಡುಗರ ಗಮನವನ್ನು ಹಿಡಿದಿಡುವುದು ಈ ನಾಟಕದ ಯಶಸ್ಸಿಗೆ ಸಾಕ್ಷಿ.  ಅಜ್ಜನ ಪಾತ್ರವನ್ನು ಆವಾಹಿಸಿಕೊಂಡು ಅಭಿನಯಿಸಿದ ಮೇಘ ಸಮೀರ್ ರವರ ನಟನೆಗೆ ಪೈಪೋಟಿ ಕೊಡುವಂತೆ ಮೊಮ್ಮಗಳ ಪಾತ್ರದಲ್ಲಿ ನಟಿಸಿದ್ದು ದಿಶಾ ರಮೇಶ್. ಈ ನಾಟಕದ ನಾಯಕಿ ಜೊತೆಗೆ ಗಾಯಕಿಯೂ ಆಗಿರುವ ದಿಶಾ ಕಂಠಸಿರಿಗೆ ಮಾರುಹೋಗದ ಪ್ರೇಕ್ಷಕರೇ ಇಲ್ಲ.  ಸ್ಪಟಿಕದಂತಹ ಸ್ಪಷ್ಟ ಮಾತು, ಪಾದರಸದಂತಹ ಚಲನೆ, ಕಣ್ಮನಸೆಳೆಯುವ ಅಭಿನಯವನ್ನು ನೋಡಿದವರಿಗೆ ಹಾಡಿನ ಕಣಿವೆಯಲಿ ಹಾರಾಡಿದ ಅನುಭವ. ನಾಟಕದಲ್ಲಿ ನಟದ್ವಯರ ಅಭಿನಯ ನಿರ್ದೇಶಕನ ಅಗೋಚರ ಅಸ್ತಿತ್ವವನ್ನೇ ಮರೆಸಿರುವುದು ಈ ಯುವ ಕಲಾವಿದರ ಪ್ರೌಢ ಪ್ರತಿಭೆಗೆ ಸಾಕ್ಷಿಯಾಗಿದೆ.

ಇಬ್ಬರೇ ಅನುಭವಿ ಪ್ರತಿಭಾನ್ವಿತ ಕಲಾವಿದರ ಮೂಲಕ ಶ್ರೀಪಾದ ಭಟ್ ರು ದೃಶ್ಯ ಕಾವ್ಯವನ್ನು ಕಟ್ಟಿಕೊಟ್ಟಿದ್ದಾರೆ. ಅವರ ಬ್ಲಾಕಿಂಗ್ ಮತ್ತು ಮೂವಮೆಂಟಗಳ ವಿನ್ಯಾಸ ಇಡೀ ನಾಟಕದಲ್ಲಿ ಸಂಚಲನವನ್ನು ಸೃಷ್ಟಿಸಿದೆ. ಕಣಿವೆಯ ಪೇಂಟಿಂಗ್ ಹಿನ್ನೆಲೆಯ ಅತ್ಯಂತ ಸರಳವಾದ ರಂಗಸಜ್ಜಿಕೆ ಹಾಗೂ ಕೈಗಾಡಿಯೊಂದೇ ನಾಟಕದ ಪ್ರಮುಖ ಪರಿಕರವಾಗಿದ್ದು, ಸೆಟ್ ಮತ್ತು ಪ್ರಾಪ್ಸ್ ಸರಳತೆಯೇ ನಾಟಕ ಇನ್ನಷ್ಟು ಕಳೆಗಟ್ಟಲು ಸಾಧ್ಯವಾಗಿದೆ. ನಟರು ಹಾಗೂ ನಿರ್ದೇಶಕರ ಪ್ರತಿಭೆಯ ಹದವಾದ ಮಿಶ್ರಣದಿಂದ ನಾಟಕವು ಹಾಡಾಗಿ ಹೊರಹೊಮ್ಮಿದೆ. ನಾಟಕ ಮಾಡಿದರೆ ಇಂತಹುದ್ದನ್ನು ಮಾಡಬೇಕು, ನೋಡಿದರೆ ಇಂತಹ ನಾಟಕ ನೋಡಬೇಕು ಎಂದೆನ್ನಿಸುವಂತಹ ಕ್ಲಾಸಿಕ್ ರಂಗಪ್ರಯೋಗವಿದು. 

ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಮಾಡಬಹುದಾದ ಸಾಧ್ಯತೆಗಳೂ ಇವೆ. ದಕ್ಷಿಣ ಆಫ್ರಿಕಾದ ಪ್ರಚಲಿತ ಹೆಸರುಗಳನ್ನು ಬಿಟ್ಟು ಈ ನೆಲವನ್ನು ಪ್ರತಿನಿಧಿಸುವ ಹೆಸರುಗಳನ್ನೇ ಪ್ರಸ್ತಾವಿತ ಪಾತ್ರಗಳಿಗೆಲ್ಲಾ ಇಟ್ಟಿದ್ದರೆ ಇಡೀ ನಾಟಕ ನಮ್ಮದೇ ಎಂದೆನಿಸುತ್ತಿತ್ತು. ನಮ್ಮ ನೆಲಮೂಲದ ಸಂಸ್ಕೃತಿಗೆ ಆಫ್ರಿಕಾದ ನಾಟಕವನ್ನು ಮರುಹೊಂದಾಣಿಕೆ ಮಾಡಬಹುದಾಗಿತ್ತು. ಯಥಾವತ್ತು ಅನುವಾದದ ಬದಲಾಗಿ ಈ ನಾಟಕವನ್ನು ರೂಪಾಂತರದ ಮೂಲಕ ಕಟ್ಟಿಕೊಟ್ಟು ಈ ನೆಲದ ಕಣಿವೆಯ ಹಾಡನ್ನು ನೋಡುಗರೆದೆಗೆ ತಲುಪಿಸಬಹುದಾಗಿತ್ತು. ಅಪರಿಚಿತ ಸ್ಥಳ ಪರಿಸರ ಹೆಸರುಗಳಿಗಿಂತಾ ನಮ್ಮದೇ ಪರಿಸರದ ಅನಾವರಣ ಆಗಿದ್ದರೆ ಇಡೀ ನಾಟಕ ನೋಡುಗರದ್ದಾಗಬಹುದಾಗಿತ್ತು. ಈ ನಾಟಕದಲ್ಲಿ ಬಳಸಿದ ಹಾಡುಗಳಿಗೆ ಪಾಶ್ಚಾತ್ಯ ಸಂಗೀತ ಬಳಸಲಾಗಿದ್ದು ಅದರ ಅಬ್ಬರದಲ್ಲಿ ಹಾಡಿನ ಸಾಲುಗಳೇ ಅಸ್ಪಷ್ಟವಾಗಿವೆ. ಒಂದಿಷ್ಟು ಮೆಲೋಡಿ ಹಾಡು ಹಾಗೂ ನೆಲಮೂಲ ಸಂಸ್ಕೃತಿಯ ಸಂಗೀತವನ್ನು ಬಳಸಿದ್ದರೆ ಕೇಳುಗರಿಗೆ ಆಪ್ತತೆಯ ಅನುಭೂತಿಯ ಸಾಕ್ಷಾತ್ಕಾರವಾಗುತ್ತಿತ್ತು. ಇಡಿ ನಾಟಕ ದೃಶ್ಯ ಕಾವ್ಯವಾಗಿ ಒಡಮೂಡಿದ್ದು ಸತ್ಯ. ಆದರೆ ಅದು ವಿದೇಶಿ ಮೂಲದ ಕಾವ್ಯಪ್ರಸ್ತುತಿಯಂತಾಗಿದ್ದು ಅದನ್ನು ಎಲ್ಲಾ ರೀತಿಯಿಂದಲೂ ಸ್ವದೇಶಿಕರಣ ಮಾಡಿದ್ದರೆ ಇಡೀ ನಾಟಕ ನಮ್ಮದೇ ಆಗುತ್ತಿತ್ತು. ನೋಡುಗರೆದೆಯಾಳಕ್ಕೆ ನಾಟಕ ಇಳಿಯುತ್ತಿತ್ತು.


ನಾಟಕ ಮುಗಿದ ನಂತರವೂ ಈ ದೃಶ್ಯಕಾವ್ಯವು ನೋಡುಗರನ್ನು ಕಾಡುತ್ತದೆ. ಹಲವಾರು ಕನಸು ಕಟ್ಟಿಕೊಂಡು ಬದುಕನ್ನರಿಸಿ ಹಳ್ಳಿ ಬಿಟ್ಟು ಬಂದು ಪಟ್ಟಣದಲ್ಲಿ ಕಳೆದುಹೋದವರಿಗಂತೂ ಮೂಲ ನೆಲೆಯನ್ನು "ಕಣಿವೆಯ ಹಾಡು" ನೆನಪಿಸಿ ಕಾಡುತ್ತದೆ. ನಗರ ಸೇರಿ ಯಾರು ಅದೆಷ್ಟು ಟೊಂಗೆ ಟಿಸುಳುಗಳನ್ನು ಚಾಚಿದ್ದರೂ ಹಳ್ಳಿಯಲ್ಲೇ ಉಳಿದ ಸಂಬಂಧದ ಬೇರುಗಳು ಸೆಳೆಯುತ್ತವೆ. ಬಾಲ್ಯದ ಆಟ ನೋಟ ಪಾಠ ಹಾಗೂ ಪ್ರಕೃತಿಯೊಡಗಿನ ಒಡನಾಟಗಳನ್ನು ಈ ನಾಟಕ ಪ್ರೇಕ್ಷಕರ ಚಿತ್ತದಲ್ಲಿ ಮತ್ತೆ ಬಿತ್ತರಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ನೋಡುಗರನ್ನು ನೆನಪಿನ ಕಣಿವೆಯಲ್ಲಿ ಇಳಿಸಿ, ಕನಸಿನ ಲೋಕದಲಿ ತೇಲಿಸಿ, ಹಾಡಿನ ಲೋಕದಲಿ ಮೈಮರೆಸುವ ಕಣಿವೆಯ ಹಾಡನ್ನು ನೋಡಿ ಅನುಭವಿಸುವುದೇ ಒಂದು ಸೊಗಸು.  ವಿಷಾದದಲಿ ಹದಗೊಂಡು ವಿನೋದದಲಿ ಮುದಗೊಳ್ಳುವುದು ಮನಸು.

- ಶಶಿಕಾಂತ ಯಡಹಳ್ಳಿ

10-02-2024

ತೆರಿಗೆ ಹಂಚಿಕೆಯಲ್ಲಿ ಕೇಂದ್ರದ ಪಾರುಪತ್ಯ; ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಿದ್ದು ಸತ್ಯ

ತಹ ತಹ - 507

ತೆರಿಗೆ ಹಂಚಿಕೆಯಲ್ಲಿ ಕೇಂದ್ರದ ಪಾರುಪತ್ಯ; 
ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಿದ್ದು ಸತ್ಯ


ಉತ್ತರ ಭಾರತದ ಬಿಹಾರ್, ಮಧ್ಯಪ್ರದೇಶ, ರಾಜಸ್ತಾನ ಮತ್ತು ಉತ್ತರಪ್ರದೇಶ ರಾಜ್ಯಗಳ ಮೊದಲ ಇಂಗ್ಲಿಷ್ ಅಕ್ಷರಗಳನ್ನು ಸೇರಿಸಿ BIMARU ರಾಜ್ಯಗಳೆಂದು ಕರೆಯಲಾಗುತ್ತದೆ. ಹಿಂದಿಯಲ್ಲಿ ಬಿಮಾರು ರಾಜ್ಯಗಳೆಂದರೆ  ರೋಗಗ್ರಸ್ತ ರಾಜ್ಯಗಳು ಎಂದೇ ಅರ್ಥ. ಹೀಗೆ ಕರೆಯುವುದಕ್ಕೆ ಅನ್ವರ್ಥಕವಾಗಿ ಈ ರಾಜ್ಯಗಳು ಆರ್ಥಿಕವಾಗಿ ಬಡತನದಲ್ಲಿರುವ, ಅಭಿವೃದ್ದಿಯಲ್ಲಿ ಹಿಂದಿರುವ ರಾಜ್ಯಗಳು ಎಂದು ಪರಿಗಣಿಸಲಾಗುತ್ತದೆ. ಈ ಮಾನದಂಡಗಳ ಲೆಕ್ಕದಲ್ಲಿ ಕೇಂದ್ರ ಸರಕಾರಕ್ಕೆ ಈ ರಾಜ್ಯಗಳಿಂದ 100 ರೂ ತೆರಿಗೆ ಸಂದಾಯವಾದರೆ ಅದಕ್ಕೆ ಪ್ರತಿಯಾಗಿ ಬಿಹಾರಕ್ಕೆ 922.5 ರೂಗಳನ್ನೂ, ಮಧ್ಯಪ್ರದೇಶಕ್ಕೆ 279.1 ರೂಗಳನ್ನೂ, ರಾಜಸ್ಥಾನಕ್ಕೆ 154.1 ರೂ ಹಾಗೂ ಉತ್ತರ ಪ್ರದೇಶಕ್ಕೆ 333.2 ರೂ. ಗಳನ್ನು ಕೇಂದ್ರ ಸರಕಾರ ಹಂಚಿಕೆ ಮಾಡಬೇಕೆಂದು 15 ನೇ ಕೇಂದ್ರ ಹಣಕಾಸು ಆಯೋಗ ನಿಗದಿ ಮಾಡಿದೆ. ಆದರೆ ಕೇಂದ್ರ ಸರಕಾರಕ್ಕೆ ಅತೀ ಹೆಚ್ಚು ತೆರಿಗೆ ಕಟ್ಟುವ ಕರ್ನಾಟಕವು 100 ರೂ ತೆರಿಗೆ ಕೇಂದ್ರಕ್ಕೆ ಕಟ್ಟಿದರೆ ವಾಪಸ್ ಸಿಗೋದು ಕೇಬಲ 13.9 ರೂ ಮಾತ್ರ. 

"ಯಾವ ರಾಜ್ಯಕ್ಕೆ ಎಷ್ಟು ತೆರಿಗೆ ಹಣ ಹಂಚಬೇಕು ಎನ್ನುವುದನ್ನು ಸ್ವಾಯತ್ತ ಸಂಸ್ಥೆಯಾದ ಕೇಂದ್ರ ಹಣಕಾಸು ಆಯೋಗ ನಿರ್ಧರಿಸುತ್ತದೆ. ಅದನ್ನು ಮೀರಲು ನಮಗೆ ಸಾಧ್ಯವಿಲ್ಲ"ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರು ಫೆ.7 ರಂದು ಸಂಸತ್ತಿನ ಅಧಿವೇಶನದಲ್ಲಿ ಗುಡುಗಿದರು. ಹಾಗಾದರೆ ಐದು ವರ್ಷದ ಅವಧಿಯ ಈ ಪೈನಾನ್ಸ್ ಕಮೀಷನ್ನಿನ ಪದಾಧಿಕಾರಿಗಳನ್ನು ಆಯ್ಕೆ ಮಾಡುವವರು ಯಾರು? ಕೇಂದ್ರ ಸರಕಾರ ತಾನೆ. ತಮಗೆ ಅನುಕೂಲ ಆಗುವವರನ್ನು ಬಿಟ್ಟು ವಿರೋಧಿಸುವವರನ್ನು ಯಾವುದಾದರೂ ಸರಕಾರ ಆಯ್ಕೆ ಮಾಡಲು ಸಾಧ್ಯವೇ? ಹೋಗಲಿ 15 ನೇ ಕಮಿಷನ್ ನಲ್ಲಿ ದಕ್ಷಿಣ ಭಾರತದ ರಾಜ್ಯಗಳನ್ನು ಪ್ರತಿನಿಧಿಸುವ ಸದಸ್ಯರೇ ಇಲ್ಲವಾಗಿರುವಾಗ ದಕ್ಷಿಣದ ರಾಜ್ಯಗಳಿಗೆ ನ್ಯಾಯವಾದ ಪಾಲು ಸಿಗಲು ಸಾಧ್ಯವೇ? ಸಾಧ್ಯವಿಲ್ಲ ಎನ್ನುವುದಾದರೆ ಇದು ಅನ್ಯಾಯವಲ್ಲದೇ ಮತ್ತೇನು?

ಅದಕ್ಕೆ  14 ನೇ ಕಮಿಷನ್  ಕೇಂದ್ರ ಸರಕಾರ ಸಂಗ್ರಹಿಸಿದ ಒಟ್ಟು ತೆರಿಗೆಯಲ್ಲಿ 4.71% ನ್ನು ಕರ್ನಾಟಕಕ್ಕೆ ಹಂಚಿಕೆ ಮಾಡಬೇಕೆಂದು ಆದೇಶಿಸಿದ್ದರೆ ಈ 15 ನೇ ಕಮಿಷನ್ ಅದರಲ್ಲೂ ಖೋತಾ ಮಾಡಿ 3.62% ಹಂಚಿಕೆ ಮಾಡಲು ಆದೇಶಿಸಿತು. ಇದು ಅನ್ಯಾಯ ಅಲ್ವಾ? ಕೇಂದ್ರ ಮತ್ತು ರಾಜ್ಯಗಳ ಪಾಲನ್ನು 14 ನೇ ಹಣಕಾಸು ಆಯೋಗ 58:42 ಅನುಪಾತ ಎಂದು ನಿಗದಿಪಡಿಸಿದ್ದರೆ ಈ 15 ನೇ ಆಯೋಗ ರಾಜ್ಯದ ಪಾಲಿನಲ್ಲೂ 1% ಕಡಿಮೆ ಮಾಡಿ 59:41 ಅನುಪಾತದಲಿ ಕೇಂದ್ರಕ್ಕೆ ಹಂಚಿತು. ಯಾಕೆ ಹೀಗೆಂದು ಕೇಳಿದರೆ ನಾವು 1971 ರ ಜನಗಣತಿ ಬದಲು 2011 ರ ಜನಗಣತಿಯನ್ನು ಪರಿಗಣಿಸಿದ್ದೇವೆಂಬ ಉತ್ತರ ಸಿದ್ದವಾಗಿತ್ತು.  ಹೀಗಾಗಿ 15 ನೇ ಹಣಕಾಸು ಆಯೋಗ ಸಂಪೂರ್ಣವಾಗಿ ಕೇಂದ್ರ ಸರಕಾರದ ನಿಯಂತ್ರಣದಲ್ಲಿದೆ ಎಂಬ ಸಂದೇಹ ಬಲವಾಗತೊಡಗಿತು.


ಇಷ್ಟಕ್ಕೂ ತೆರಿಗೆ ಹಂಚಿಕೆಯ ಮಾನದಂಡಗಳೇ ಔಟಾಪ್ ಡೇಟೆಡ್ ಆಗಿವೆ. ರಾಜ್ಯಗಳ ಜನಸಂಖ್ಯೆ, ವಿಸ್ತೀರ್ಣ, ಅರಣ್ಯ ಪ್ರದೇಶ ಮತ್ತು ತಲಾದಾಯಗಳ ಲೆಕ್ಕದಲ್ಲಿ ಯಾವ ರಾಜ್ಯಕ್ಕೆ ಎಷ್ಟು ತೆರಿಗೆ ಹಂಚಿಕೆ ಎಂದು ನಿರ್ಧರಿಸಲಾಗುತ್ತದೆ. ಸ್ವಾತಂತ್ರ್ತ ಬಂದು 75 ವರ್ಷವಾದರೂ ಜನಸಂಖ್ಯೆಯನ್ನು ನಿಯಂತ್ರಿಸದ, ಆದಾಯ ಹೆಚ್ಚಿಸುವಂತಹ ಯೋಜನೆಗಳನ್ನು ಕೈಗೊಳ್ಳದೇ ನಿರುದ್ಯೋಗ ಸೃಷ್ಟಿಸಿ ತಲಾದಾಯ ಕಡಿಮೆ ಮಾಡಿಕೊಂಡ ಉತ್ತರ ಭಾರತದ ರಾಜ್ಯಗಳು ತೆರಿಗೆಯಲ್ಲಿ ಹೆಚ್ಚಿನ ಪಾಲನ್ನು ಪಡೆಯುತ್ತಲೇ ಇವೆ. ಶಿಕ್ಷಣ ವ್ಯವಸ್ಥೆ, ಕೈಗಾರಿಕೆ ಸ್ಥಾಪನೆಗಳ ಮೂಲಕ ಜನಸಂಖ್ಯೆ ಹಾಗೂ ನಿರುದ್ಯೋಗವನ್ನು ನಿಯಂತ್ರಿಸಿದ ದಕ್ಷಿಣ ರಾಜ್ಯಗಳು ಅತೀ ಕಡಿಮೆ ತೆರಿಗೆ ಪಾಲನ್ನು ಪಡೆಯುತ್ತಿವೆ. ಉತ್ತರದ ರಾಜ್ಯಗಳ ಅರಾಜಕ ವ್ಯವಸ್ಥೆಯ ಭಾರವನ್ನು ಇನ್ನೂ ಎಷ್ಟು ಕಾಲ ದಕ್ಷಿಣದ ರಾಜ್ಯಗಳು ಹೊರಬೇಕು. ಸರ್ವರಿಗೂ ಸಮಪಾಲು ಸಮಬಾಳು ಬರಬೇಕೆಂದರೆ ಇನ್ನೂ ಎಷ್ಟು ದಶಕಗಳ ಕಾಲ ದಕ್ಷಿಣದ ರಾಜ್ಯಗಳು ಕಾಯಬೇಕು? 

ಫೆ. 9 ರಂದು ಲಖನೌ ನಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ ಮಾತಾಡುತ್ತಾ "ರಾಜಕೀಯ ಕಾರಣಗಳಿಂದ ಉತ್ತರಪ್ರದೇಶವನ್ನು ಬಿಮಾರು ರಾಜ್ಯವೆಂದು ಬಿಂಬಿಸಲಾಗುತ್ತದೆ. ರಾಜ್ಯವು ಈಗ ಈ ಶ್ರೇಣಿಯನ್ನು ಮೀರಿ ಬೆಳದಿದೆ.ಯುಪಿ ಈಗ ದೇಶದಲ್ಲಿ ಎರಡನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದೆ" ಎಂದು ಹೆಮ್ಮೆಯಿಂದ ಪ್ರತಿಪಾದಿಸಿದರು. ಯೋಗಿಯವರು ಹೇಳುವುದು ನಿಜವೇ ಆಗಿದ್ದರೆ ಆ ರಾಜ್ಯ ಕಟ್ಟುವ 100 ರೂ. ಕೇಂದ್ರ ತೆರಿಗೆಯ ಬದಲಾಗಿ 333.2 ರೂ. ಪಡೆಯುತ್ತಿರುವುದಾದರೂ ಯಾಕೆ?  ಸಂಗ್ರಹವಾಗುತ್ತಿರುವ ಆದಾಯಕ್ಕಿಂತಲೂ ಮೂರುಪಟ್ಟು ಹೆಚ್ಚು ಹಣವನ್ನು ಯುಪಿ ಗೆ ಹಂಚಿಕೆ ಮಾಡಿದ ಹಣಕಾಸು ಆಯೋಗದ ಮಾನದಂಡದಲ್ಲಿ ಎಂತಹ ದೋಷವಿದೆ? ಈ ಹಣಕಾಸು ಆಯೋಗದ ಹಂಚಿಕೆಯನ್ನು ಸಮರ್ಥಿಸಿಕೊಳ್ಳುವ ನಿರ್ಮಲಾ ಸೀತಾರಾಂರವರಿಗೆ ಆತ್ಮಸಾಕ್ಷಿ ಎಲ್ಲಿದೆ? ಆರ್ಥಿಕವಾಗಿ ಬಲಿಷ್ಟವಾಗಿರುವ ಯುಪಿ ರಾಜ್ಯಕ್ಕೆ ಮೂರುಪಟ್ಟು ತೆರಿಗೆ ಹಣ ಹಂಚಿಕೆ ಮಾಡಿದ ಹಣಕಾಸು ಆಯೋಗದ ವಿಶ್ವಾಸಾರ್ಹತೆಯೇ ಪ್ರಶ್ನಾರ್ಹವಾಗಿರುವಾಗ ತಾರತಮ್ಯದಿಂದ ಕೂಡಿದ ಅದರ ಹಂಚಿಕೆ ನಿರ್ಧಾರಗಳಿಗೆ ಬೆಲೆ ಎಲ್ಲಿದೆ? 

ಹೋಗಲಿ ಅಭಿವೃದ್ಧಿಯಲ್ಲಿ ಮೋದೀಜಿಯವರ ತವರು ರಾಜ್ಯ ಗುಜರಾತ್ ದೇಶದಲ್ಲೇ ನಂಬರ್ ಒನ್ ಎಂದು ಬಿಜೆಪಿ ಪ್ರಚಾರ ಮಾಡುತ್ತಲೇ ಇದೆ. ಅದಕ್ಕೆ ಗುಜರಾತ್ ಮಾಡೆಲ್ ಎಂದೇ ದೇಶವನ್ನು ನಂಬಿಸಲು ಸಂಘ ಪರಿವಾರ ಪ್ರಯತ್ನಿಸುತ್ತಿದೆ. ಗುಜರಾತಿನ ವ್ಯಾಪಾರಿಗಳು ದೇಶದಾದ್ಯಂತ ವ್ಯಾಪಾರ ವಹಿವಾಟನ್ನು ಮಾಡುತ್ತಿದ್ದು ಈ ರಾಜ್ಯ ಆರ್ಥಿಕವಾಗಿ ಶಕ್ತಿಯುತ ಎಂದು ಹೇಳಲಾಗುತ್ತದೆ. ಆದರೆ ಫೈನಾನ್ಸ್ ಕಮಿಷನ್ ಮಾತ್ರ ಗುಜರಾತನ್ನೂ ಬಡ ರಾಜ್ಯವೆಂದು ಪರಿಗಣಿಸಿ ನೂರು ರೂಪಾಯಿ ಬದಲಿಗೆ 31.3 ರೂ ಹಂಚಿಕೆ ಮಾಡುತ್ತಿದೆ. ಅಂದರೆ ಕರ್ನಾಟಕಕ್ಕಿಂತಲೂ 17.4 ರೂ ಹೆಚ್ಚು ಹಣ ಗುಜರಾತಿಗೆ ಹಂಚಿಕೆ ಮಾಡಲಾಗುತ್ತಿದೆ. ನಂ ಒನ್ ಅಭಿವೃದ್ದಿಯ ಗುಜರಾತ್ ಮಾಡೆಲ್ಲಿಗೆ ಯಾಕೆ ಹೆಚ್ಚಿನ ಹಣದ ಹಂಚಿಕೆ? ಎಂದು ಪ್ರಶ್ನಿಸುವವರು ದೇಶದ್ರೋಹಿಗಳಾಗುತ್ತಾರೆ. 

ಈ ರೀತಿಯ ಕೆಲವಾರು ಉದಾಹರಣೆಗಳ ಮೂಲಕ ಅರ್ಥವಾಗುವುದೇನೆಂದರೆ 14 ಮತ್ತು 15 ನೇ ಹಣಕಾಸು ಆಯೋಗವೇ ಕೇಂದ್ರ ಸರಕಾರದ ಕೈಗೊಂಬೆಯಾಗಿದೆ. ಸ್ವಾಯತ್ತತೆ ಎಂಬುದು ಹೆಸರಿಗಷ್ಟೇ. ಆದರೆ ತಮ್ಮ ಮಾತು ಕೇಳುವವರನ್ನೇ  ಬಿಜೆಪಿ ಸರಕಾರ ಆಯೋಗಕ್ಕೆ ನೇಮಕ ಮಾಡಿ ತಮಗೆ ಬೇಕಾದ ರಾಜ್ಯಗಳಿಗೆ ಹೆಚ್ಚು ತೆರಿಗೆ ಹಣ ಹಂಚಿಕೆ ಮಾಡುವಂತೆ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ದಕ್ಷಿಣ ಭಾರತದ ರಾಜ್ಯಗಳು ದುಡಿದುಡಿದು ಹೆಚ್ಚೆಚ್ಚು  ತೆರಿಗೆ ಕಟ್ಟಿ ಉತ್ತರ ಭಾರತದ ರಾಜ್ಯಗಳಿಗೆ ಕೊಡುವಂತಾಗಿದೆ.

ಹೌದು.. ಸಂವಿಧಾನದ 7 ನೇ ಶಡ್ಯೂಲ್ ಪ್ರಕಾರ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರಕಾರ ಸಂಗ್ರಹಿಸುವ ತೆರಿಗೆಯನ್ನು ರಾಜ್ಯಸರಕಾರಗಳಿಗೆ  ಮರುಹಂಚಿಕೆ ಮಾಡಲು ಕೆಲವು ಮಾನದಂಡಗಳನ್ನು ವಿಧಿಸಲಾಗಿದೆ. ಅತೀ ಹೆಚ್ಚು ಕರ ಪಡೆದು ಅತೀ ಕಡಿಮೆ ಪಾಲನ್ನು ದಕ್ಷಿಣದ ರಾಜ್ಯಗಳಿಗೆ ಕೊಡುವುದು ಅನ್ಯಾಯ ಅಲ್ಲವೇ ಎಂದು ಕೇಳಿದರೆ  "ಸಂವಿಧಾನ ಹೇಳಿದ ಹಂಚಿಕೆ ಸೂತ್ರದ ಪ್ರಕಾರವೇ ತೆರಿಗೆ ರೀ ಅಲೋಕೇಶನ್ ಮಾಡಲಾಗಿದೆ" ಎಂದು ಕೇಂದ್ರ ಸರಕಾರ ಹಾಗೂ ಅದರ ಸಮರ್ಥಕರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಕಳೆದ ಏಳು ದಶಕದಲ್ಲಿ ದೇಶದಲ್ಲಿ ಬೇಕಾದಷ್ಟು ಆರ್ಥಿಕ ಸಾಮಾಜಿಕ ಬದಲಾವಣೆಗಳಾಗಿವೆ. ಒಕ್ಕೂಟ ವ್ಯವಸ್ಥೆಯ ಸಮತೋಲನ ಕಾಪಾಡಲು 'ಸಮಪಾಲು ಸಮಬಾಳು' ತತ್ವದ ಮೇಲೆ ಈಗ ಸಂವಿಧಾನದ 7 ನೇ ಷೆಡ್ಯೂಲಿಗೆ ತಿದ್ದುಪಡಿ ತರಬೇಕಾದ ಅಗತ್ಯತೆ ಇದೆ. ಅದಕ್ಕಾಗಿ ಕಡಿಮೆ ತೆರಿಗೆ ಪಾಲನ್ನು ಪಡೆದು ಅನ್ಯಾಯಕ್ಕೊಳಗಾದ ರಾಜ್ಯಗಳು ಆಗ್ರಹಿಸಬೇಕಿದೆ.  ಅಭಿವೃದ್ದಿ ಹೊಂದಿದ ರಾಜ್ಯಗಳಿಂದ ಹೆಚ್ಚು ಆದಾಯ ಪಡೆದು ಹಿಂದುಳಿದ ರಾಜ್ಯಗಳಿಗೆ ಇನ್ನೂ ಎಷ್ಟು ವರ್ಷಗಳ ಕಾಲ ಹೆಚ್ಚಿನ ಪಾಲು ಕೊಡುತ್ತಲೇ ಇರುವುದು ಎಂಬ ಪ್ರಶ್ನೆಯನ್ನು ಕೇಂದ್ರ ಸರಕಾರಕ್ಕೆ ಕೇಳಬೇಕಿದೆ. ಇದೇ ರೀತಿಯ ತಾರತಮ್ಯ ಮುಂದುವರೆದರೆ ಒಕ್ಕೂಟ ವ್ಯವಸ್ಥೆಯಲ್ಲಿ ಅಸಮಾಧಾನ ಹೆಚ್ಚಾಗುತ್ತದೆ. ಅನ್ಯಾಯ ಹೆಚ್ಚಾದಂತೆಲ್ಲಾ ಪ್ರತ್ಯೇಕತೆಯ ಕೂಗೂ ಅನಿವಾರ್ಯವಾಗುತ್ತದೆ.

ಅತೀ ಹಿಂದುಳಿದ ರಾಜ್ಯಗಳ ಸರ್ವತೋಮುಖ ಬೆಳವಣಿಗೆ ಕಾಪಾಡಲು ಆರ್ಥಿಕ ಅಭಿವೃದ್ದಿ ಕಾಣದ ರಾಜ್ಯಗಳಿಗೆ ಕೇಂದ್ರ ಸರಕಾರ ಸಂಗ್ರಹಿಸುವ ತೆರಿಗೆಯಲ್ಲಿ ಹೆಚ್ಚಿನ ಪಾಲನ್ನು ಕೊಡುವುದು ತಪ್ಪಲ್ಲ. ಸಂವಿಧಾನದ ಆಶಯವೂ ಅದೇ ಆಗಿದೆ. ಆದರೆ ಅದಕ್ಕೊಂದು ಕಾಲಮಿತಿ ಇರಬೇಕು.‌ ಅತೀ ಹಿಂದುಳಿದ ರಾಜ್ಯಗಳ ಆರ್ಥಿಕ ಆದಾಯ ಹೆಚ್ಚಿಸುವಲ್ಲಿ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು. ಹಾಗೆ ಮಾಡದೇ ಅನ್ಯ ರಾಜ್ಯಗಳ ಆದಾಯವನ್ನು ಹಂಚುತ್ತಲೇ ಹೋದರೆ ಆ ಬೀಮಾರು ರಾಜ್ಯಗಳು ಅಭಿವೃದ್ದಿ ಹೊಂದುವುದು ಯಾವಾಗ? ಅಭಿವೃದ್ದಿ ಅಂದರೆ ಕೇವಲ ಎಕ್ಸಪ್ರೆಸ್ ಹೆದ್ದಾರಿಗಳು, ರೈಲು  ವಿಮಾನ ನಿಲ್ದಾಣಗಳು,  ಭಾರೀ ಕಟ್ಟಡಗಳಲ್ಲ. ಆಯಾ ಪರಿಸರಕ್ಕೆ ಸೂಕ್ತವಾದ ಕೈಗಾರಿಕೆಗಳ ಆರಂಭದ ದೂರದೃಷ್ಟಿ, ಅಲ್ಲಿಯ ಜನರ ತಲಾದಾಯ ಹೆಚ್ಚಿಸುವಂತಹ ಉದ್ಯೋಗ ಸೃಷ್ಟಿ ಮುಖ್ಯವಾಗುತ್ತದೆ.    ತಲಾದಾಯ ಹೆಚ್ಚಿಸುವಂತಹ ಯೋಜನೆಗಳನ್ನು ಜಾರಿ ಮಾಡಲು ಕೇಂದ್ರ ಸರಕಾರ ಹಿಂದುಳಿದ ರಾಜ್ಯಗಳಿಗೆ ಕಾಲಮಿತಿಯಲ್ಲಿ ಸಹಾಯ ಸಹಕಾರ ಕೊಟ್ಟು ಆ ರಾಜ್ಯಗಳನ್ನೂ ಆರ್ಥಿಕ ಸಾಮಾಜಿಕ ಅಭಿವೃದ್ದಿ ಪಥದಲ್ಲಿ ತರುವುದೇ ಈ ಅಸಮಾನ ತೆರಿಗೆ ಹಂಚಿಕೆಯಲ್ಲಾಗುವ ತಾರತಮ್ಯಕ್ಕೆ ಪರಿಹಾರವಾಗಿದೆ.

ಸ್ವಾಯತ್ತ ಸಂಸ್ಥೆಗಳೆಂದೇ ಅಸ್ತಿತ್ವಕ್ಕೆ ಬಂದ ಐಟಿ, ಈಡಿ, ಸಿಬಿಐಗಳನ್ನೇ ತಮ್ಮಿಚ್ಚೆಯಂತೆ ನಿಯಂತ್ರಿಸುವ, ತಮಗಾಗದವರ ವಿರುದ್ದ ದಾಳಿಮಾಡಿಸಿ ಬೆದರಿಸುವ ಮೋದಿ ಸರಕಾರವು ಹಣಕಾಸು ಇಲಾಖೆಯನ್ನು ಸ್ವತಂತ್ರವಾಗಿರಲು ಬಿಡಲು ಸಾಧ್ಯವೇ? ಛಾನ್ಸೇ ಇಲ್ಲ. ಸರಕಾರಿ ವ್ಯವಸ್ಥೆಯನ್ನು ನಿಯಂತ್ರಿಸುವ ಎಲ್ಲಾ ಸಂಸ್ಥೆಗಳನ್ನೂ ತಮ್ಮ ಹಿಡಿತದಲ್ಲಿಟ್ಟುಕೊಂಡ ಈ ಪ್ಯಾಸಿಸ್ಟ್  ಸರ್ವಾಧಿಕಾರಿ ಸರಕಾರದಲ್ಲಿ ನ್ಯಾಯಯುತವಾದ ಪಾಲು ಕೇಳುವುದೇ ಅನ್ಯಾಯ. ಪ್ರಶ್ನಿಸುವುದೇ ಅಕ್ಷಮ್ಯ. ಹಕ್ಕಿಗಾಗಿ ಆಗ್ರಹಿಸುವುದೇ ದೇಶದ್ರೋಹ. ತಾರತಮ್ಯವನ್ನು ವಿರೋಧಿಸುವುದೇ ದೇಶವಿಭಜನೆಯ ಸಂಕೇತ. 

ಇದೆಲ್ಲವನ್ನೂ ಅರಿತುಕೊಂಡ ಜನರು ಸರ್ವಾಧಿಕಾರಿ ಸರಕಾರವನ್ನು ಬರುವ ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳುಹಿಸದೇ ಇದ್ದರೆ ಒಕ್ಕೂಟ ವ್ಯವಸ್ಥೆಯ ಅವಸಾನ ತಡೆಯಲು ಸಾಧ್ಯವೇ ಇಲ್ಲ. ರಾಜ್ಯಗಳು ಕೇಂದ್ರದ ಗುಲಾಮಗಿರಿಗೆ ಒಳಗಾಗದಿರುವುದಕ್ಕೆ ಬೇರೆ ಪರ್ಯಾಯಗಳಿಲ್ಲ.

- ಶಶಿಕಾಂತ ಯಡಹಳ್ಳಿ
10-02-2024

ರದ್ದಾದ ಕಲಾಕ್ಷೇತ್ರ ನವೀಕರಣ; ಸಮಾಲೋಚನೆಯಲ್ಲಿ ಸಚಿವರ ಅಸಮಾಧಾನ

ತಹ ತಹ - 506

ರದ್ದಾದ ಕಲಾಕ್ಷೇತ್ರ ನವೀಕರಣ; 
ಸಮಾಲೋಚನೆಯಲ್ಲಿ ಸಚಿವರ ಅಸಮಾಧಾನ


ರವೀಂದ್ರ ಕಲಾಕ್ಷೇತ್ರದ ನವೀಕರಣದ ಕುರಿತು ಚರ್ಚಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಮಾನ್ಯ ಶಿವರಾಜ ತಂಗಡಗಿಯವರು ಜನವರಿ 8 ರಂದು ಕನ್ನಡ ಭವನದಲ್ಲಿ ಆಯ್ದ ರಂಗಕರ್ಮಿಗಳ ಸಮಾಲೋಚನಾ ಸಭೆಯೊಂದನ್ನು ಕರೆದಿದ್ದರು. ಕಲಾಕ್ಷೇತ್ರವನ್ನು ನವೀಕರಣ ಮಾಡಬೇಕೋ ಬೇಡವೋ ಎನ್ನುವುದೇ ಸಭೆಯ ಏಕೈಕ ಅಜೆಂಡಾ ಆಗಿತ್ತು. ಹೀಗೆ ಆತಂಕ ಮತ್ತು ಆತುರದಲ್ಲಿ ಈ ಸಭೆ ಕರೆಯಲು ಕಾರಣಗಳೂ ಹಲವಾರಿತ್ತು. ಅವು ಯಾವವೆಂದರೆ..

1. ಕಲಾಕ್ಷೇತ್ರವನ್ನು 24 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲು ಸಂಸ್ಕೃತಿ ಇಲಾಖೆ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿದ ಸಂಗತಿ ಪತ್ರಿಕೆಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ಹಾಗೂ ಚರ್ಚೆಗೆ ಒಳಗಾಗಿ ಸರಕಾರಕ್ಕೆ ಮುಜುಗರ ತಂದಿತ್ತು.

2. 24 ಕೋಟಿಯಲ್ಲಿ ಹೊಸ ರಂಗಮಂದಿರವನ್ನೇ ಕಟ್ಟಬಹುದು ಬರೀ ನವೀಕರಣ ಅನಗತ್ಯವೆಂದು  ರಂಗಕರ್ಮಿಗಳು ಈ ಯೋಜನೆಯನ್ನು ವಿರೋಧಿಸಿದ್ದರು.

3. ಜ.31 ರಂದು ಕಲಾಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯನವರ ಉಪಸ್ಥಿತಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ. ಕೆ.ಎಂ.ಮರುಳಸಿದ್ದಪ್ಪನವರು 24 ಕೋಟಿಯ ಅನಗತ್ಯ ನವೀಕರಣ ವಿರೋಧಿಸಿ ಮುಖ್ಯಮಂತ್ರಿಗಳ ಗಮನ ಸೆಳೆದರು.

4. ತದನಂತರ ಮುಖ್ಯಮಂತ್ರಿಗಳು ಸಚಿವರನ್ನು ಕರೆದು ತರಾಟೆಗೆ ತೆಗೆದುಕೊಂಡರಂತೆ. 

ಇಷ್ಟೆಲ್ಲಾ ವಿದ್ಯಮಾನಗಳಿಂದ ವಿಚಲಿತರಾದ ಸಚಿವ ತಂಗಡಿಗಿಯವರು ಡ್ಯಾಮೇಜ್ ಕಂಟ್ರೋಲಿಗಾಗಿ ಈ ಸಭೆಯನ್ನು ಕರೆದಿದ್ದರು. ಹಾಗೂ ಆ ಸಮಾಲೋಚನಾ ಸಭೆಯಲ್ಲಿ ಮೂಡಿ ಬಂದ ಅಭಿಪ್ರಾಯಗಳು ಹೀಗಿವೆ.

1. 24 ಕೋಟಿಯ ನವೀಕರಣದ ಕಾಮಗಾರಿ ರವೀಂದ್ರ ಕಲಾಕ್ಷೇತ್ರಕ್ಕೆ ಅಗತ್ಯವಿಲ್ಲ.

2.  ಅತೀ ವೆಚ್ಚದ ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ ರಂಗಚಟುವಟಿಕೆಗಳಿಗೆ ಅನಿವಾರ್ಯವಲ್ಲ.

3. ತಿಂಗಳಿಗೆ ಎರಡೋ ಮೂರೋ ದಿನ ನಡೆಯುವ ಜಯಂತಿಗಳಂತಹ ಸರಕಾರಿ ಕಾರ್ಯಕ್ರಮಗಳಿಗಾಗಿ ಇಡೀ ಕಲಾಕ್ಷೇತ್ರವನ್ನು ಹವಾನಿಯಂತ್ರಿತ ಮಾಡುವುದು ಸೂಕ್ತವಲ್ಲ.

4. ಅಪಾರ ವೆಚ್ಚದಲ್ಲಿ ರಂಗಮಂದಿರವನ್ನು ಅತ್ಯಾಧುನೀಕರಣ ಮಾಡಿದಾಗ ಕೊಟ್ಟ ಅನುಕೂಲಕ್ಕೆ ತಕ್ಕಂತೆ ಕಲಾಕ್ಷೇತ್ರದ ದಿನಬಾಡಿಗೆಯನ್ನು ಹೆಚ್ಚಿಸಲಾಗುತ್ತದೆ. ಅದನ್ನು ಭರಿಸಿ ನಾಟಕ ಪ್ರದರ್ಶಿಸುವ ಶಕ್ತಿ ಕನ್ನಡ ರಂಗಭೂಮಿಗೆ ಇಲ್ಲ.

5. ಎಸಿ ನಿರ್ವಹಣೆ ಹಾಗೂ ಅದಕ್ಕೆ ಬೇಕಾಗುವ ಹೆಚ್ಚುವರಿ ವಿದ್ಯುತ್ ಅಥವಾ ಡೀಸಲ್ ಗಳಿಗಾಗುವ ವೆಚ್ಚವೂ ರಂಗತಂಡಗಳ ಜೇಬಿಗೆ ಭಾರವಾಗುತ್ತದೆ ಆದ್ದರಿಂದ ಸೆಂಟ್ರಲ್ ಎಸಿ ಸಿಸ್ಟಂ ಸೂಕ್ತವಲ್ಲ.

6. ಕಲಾಕ್ಷೇತ್ರದ ಒಳಾಂಗಣದ ಎತ್ತರ 60 ಅಡಿಗೂ ಎತ್ತರವಿದೆ. ಮೇಲೆ ತಗಡಿನ ಹೊದಿಕೆ ಇದೆ. ಹೀಗಾಗಿ ಅದೆಂತಹ ಆಧುನಿಕ ಹವಾನಿಯಂತ್ರಿತ ವ್ಯವಸ್ಥೆ ಅಳವಡಿಸಿದರೂ ಅದು ಪೂರ್ಣ ಪ್ರಮಾಣದಲ್ಲಿ ಪ್ರಯೋಜನಕ್ಕೆ ಬರುವುದು ಅನುಮಾನ.

7. ಖುರ್ಚಿಗಳನ್ನು ಬದಲಾಯಿಸುವ ಬದಲು ಅಗತ್ಯ ರಿಪೇರಿ ಮಾಡಿಸಿದರೆ ಸಾಕು. ಬೇಕಾದರೆ ವಿಐಪಿ ಗಳು ಕೂಡುವ ಮುಂದಿನ ಮೂರು ಸಾಲಿನ ಖುರ್ಚಿಗಳನ್ನು ಹೊಸದಾಗಿ ಹಾಕಿಸಬಹುದು. ವಾಟರ್ ಪ್ರೂಪ್ ಖುರ್ಚಿಗಳ ಅಗತ್ಯವಿಲ್ಲ.

8. ಹಾಳಾಗಿರುವ ಬೆಳಕಿನ ಹಾಗೂ ಸೌಂಡ್ ಸಿಸ್ಟಂ ಪರಿಕರಗಳನ್ನು ರಿಪೇರಿ ಮಾಡಿಸಿ ಹಾಗೂ ಅಗತ್ಯವಿದ್ದರೆ ಬದಲಾಯಿಸಿ.

9. ಮಳೆಗಾಲದಲ್ಲಿ ಕಲಾಕ್ಷೇತ್ರದ ಚಾವಣಿ ಸೋರುತ್ತದೆ ಅದನ್ನು ರಿಪೇರಿ ಮಾಡಿಸಿ. 

10. ಸಂಸ ಬಯಲುಮಂದಿರದ ಕಾರ್ಯಕ್ರಮಗಳ ಸೌಂಡ್ ಕಲಾಕ್ಷೇತ್ರದಲ್ಲಿ ಕೇಳಿಸದಂತೆ ವ್ಯವಸ್ಥೆ ಮಾಡಿ. 

11. ಕಲಾಕ್ಷೇತ್ರದಲ್ಲಿ ಕಾರ್ಯಕ್ರಮಗಳನ್ನು ಮಾಡಿದಾಗ ವೇದಿಕೆ ಮೇಲೆ ಅತಿಥಿಗಳಿಗೆ ಹಾಕಲು ಅಲಂಕೃತ ಖುರ್ಚಿಗಳನ್ನು ಖರೀದಿಸಿ ಕೊಡಿ.

12. ಕಲಾಕ್ಷೇತ್ರದ ಬಾಡಿಗೆಯನ್ನು ಪ್ರತಿ ವರ್ಷ 5% ಹೆಚ್ಚಿಸುವ ಇಲಾಖೆಯ ನಿರ್ಧಾರವನ್ನು ಕೈಬಿಟ್ಟು  ಮೊದಲಿದ್ದಂತೆ ರಾಜ್ಯಾದ್ಯಂತ ಏಕರೂಪದ ಕಡಿಮೆ ಬಾಡಿಗೆ ವ್ಯವಸ್ಥೆಯನ್ನು ಜಾರಿಗೆ ಮಾಡಿ.

13. ಕಲಾಕ್ಷೇತ್ರದ ನಿರ್ವಹಣೆಗೆ ಸಿಬ್ಬಂದಿಗಳ ಕೊರತೆ ಇದ್ದು ಕೂಡಲೇ ನೇಮಕಾತಿ ಮಾಡಲು ವ್ಯವಸ್ಥೆ ಮಾಡಿ.

ಇಷ್ಟು ಅಭಿಪ್ರಾಯಗಳ ಜೊತೆಗೆ ಕಲಾಕ್ಷೇತ್ರದ ಸಮಸ್ಯೆಗಳ ಹೊರತಾದ ಕೆಲವು ಸಂಗತಿಗಳನ್ನೂ ಸಭೆಯಲ್ಲಿ ಪ್ರಸ್ತಾಪಿಸಲಾಯ್ತು. 

1. ಬೆಂಗಳೂರಿನಲ್ಲಿ ಹಲವಾರು ಖಾಸಗಿ ಕಿರುರಂಗಮಂದಿರಗಳಿವೆ. ಕಲಾಸೇವೆಯಲ್ಲಿ ನಿರತವಾಗಿರುವ ಇಂತಹ ಆಪ್ತರಂಗಮಂದಿರಗಳಿಗೂ ಬಿಬಿಎಂಪಿ ಯು ಕಮರ್ಷಿಯಲ್ ಟ್ಯಾಕ್ಸ್ ವಿಧಿಸುತ್ತಿದೆ. ಇದರಿಂದ ರಿಯಾಯತಿ ಕೊಡಿಸುವ ವ್ಯವಸ್ಥೆ ಮಾಡಿ.

2. ದುಬಾರಿ ವೆಚ್ಚದಲ್ಲಿ ಕಲಾಕ್ಷೇತ್ರವನ್ನು ನವೀಕರಣ ಮಾಡುವ ಬದಲಾಗಿ ಬಡಾವಣೆಗಳಲ್ಲಿ ಸುಸಜ್ಜಿತ ಕಿರುರಂಗಮದಿರಗಳನ್ನು ನಿರ್ಮಿಸಿ ಕೊಡಿ. 

3. ಕಳೆದ ಸರಕಾರದ ಅವಧಿಯಲ್ಲಿ ಬೆಂಗಳೂರಿನ ನಾಲ್ಕು ದಿಕ್ಕಿನಲ್ಲಿ ನಾಲ್ಕು ರಂಗಮಂದಿರ ಕಟ್ಟಲು ನಿರ್ಧರಿಸಲಾಗಿದ್ದು ಜಾಗವನ್ನೂ ಗುರುತಿಸಿ 80 ಕೋಟಿ ಹಣವನ್ನೂ ಮೀಸಲಿರಿಸಲಾಗಿದೆ. ನಾಲ್ಕು ರಂಗಮಂದಿರಗಳ ಕಾಮಗಾರಿ ಆರಂಭಿಸಿ.

4. ಅಕಾಡೆಮಿ ಪ್ರಾಧಿಕಾರ ಮತ್ತು ರಂಗಾಯಣಗಳಿಗೆ ಕೂಡಲೇ ನೇಮಕಾತಿ ಮಾಡಿ.

5. ಆದೇಶವಾಗಿ ನಿರ್ಲಕ್ಷಕ್ಕೆ ಒಳಗಾದ ಸಾಂಸ್ಕೃತಿಕ ನೀತಿಯನ್ನು ಪೂರ್ಣಪ್ರಮಾಣದಲ್ಲಿ ಅನುಷ್ಟಾನಕ್ಕೆ ತನ್ನಿ. 

( ಈ ಮೇಲಿನ ಮೂರು ಬೇಡಿಕೆಗಳಿಗೆ ಸಚಿವರು ಉತ್ತರಕೊಡಲಿಲ್ಲ. ಕಡೆಯ ಎರಡು ಬೇಡಿಕೆಗಳಿಗೆ ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುವುದು ಎಂದು ಹಾರಿಕೆಯ ಉತ್ತರ ನೀಡಿದರು)

ಸಮಾಲೋಚನಾ ಸಭೆಯ ಅನಿಸಿಕೆಗಳನ್ನು ಕೇಳಿ ಮಾನ್ಯ ಸಚಿವರು ವ್ಯಕ್ತಪಡಿಸಿದ ಅಭಿಪ್ರಾಯಗಳೇನೆಂದರೆ.

1. ಕಲಾಕ್ಷೇತ್ರದ ನವೀಕರಣ ಕುರಿತು ಪತ್ರಿಕೆಗಳಲ್ಲಿ ಬಂದಿರುವ ವರದಿಗಳು ಹಾಗೂ ಜಾಲತಾಣಗಳ ಚರ್ಚೆಗಳನ್ನು ಓದಿ ಅತ್ಯಂತ ಬೇಸರವಾಯ್ತು. 

2. ನನ್ನ ಅಧಿಕಾರದ ಅವಧಿಯಲ್ಲಿ ಹೆಸರು ಉಳಿಯುವಂತಹ ಏನಾದರೂ ಕೆಲಸವನ್ನು ಮಾಡಬೇಕೆಂದು ಈ ಯೋಜನೆಯ ಹಿಂದಿನ ಉದ್ದೇಶವಾಗಿತ್ತು. 

3. ಈ ಸಭೆಯಲ್ಲಿ ಇರುವವರೆಲ್ಲಾ ಒಪ್ಪಿದ್ದರೆ ಕಲಾಕ್ಷೇತ್ರದ ನವೀಕರಣ ಕೆಲಸ ಮಾಡಿಸೋಣ ಎಂದುಕೊಂಡಿದ್ದೆ. ಆದರೆ ಬಹುತೇಕರು ಹವಾನಿಯಂತ್ರಣ ವ್ಯವಸ್ಥೆ ಬೇಡ, ಖುರ್ಚಿ ಬದಲಾವಣೆ ಬೇಕಾಗಿಲ್ಲ ಎಂದು ಹೇಳುತ್ತಿರುವುದರಿಂದ ನಾನು ಈ ನವೀಕರಣ ಯೋಜನೆಯನ್ನು ಇಲ್ಲಿಗೆ ನಿಲ್ಲಿಸಿ ಕಲಾಕ್ಷೇತ್ರವನ್ನು ಯಥಾಸ್ಥಿತಿಯಲ್ಲಿ ಬಿಡುತ್ತೇನೆ.

4. ಮಾಡಿದರೆ ಪೂರ್ತಿಯಾಗಿ ನವೀಕರಣ ಮಾಡಿಸುವೆ. ಅದು ಬೇಡ ಇದು ಬೇಡ ಎಂದರೆ ಇಡೀ ಯೋಜನೆ ನಿಲ್ಲಿಸುವೆ.

5. ಕೆಲಸ ಮಾಡಿ ವಿರೋಧ ಕಟ್ಟಿಕೊಳ್ಳುವ ಬದಲಾಗಿ ಕೆಲಸ ಮಾಡದೇ ವಿರೋಧ ಕಟ್ಟಿಕೊಳ್ಳುವುದೇ ಒಳ್ಳೆಯದು. 

ಇದು ಸಚಿವರ ಮಾತುಗಳ ಒಟ್ಟು ಅಭಿಪ್ರಾಯದ ಸಂಕ್ಷಿಪ್ತ ರೂಪ. ಆದರೆ ಕೆಲವು ಪ್ರಶ್ನೆಗಳು ಹಾಗೆಯೇ ಉಳಿದವು. ಅವು ಹೀಗಿವೆ.

ಸ್ವಾಮಿ ಸಚಿವರೇ...

1. ಸಾರ್ವಜನಿಕ ಕೆಲಸದಲ್ಲಿರುವ ನಿಮಗೆ ಪ್ರತಿರೋಧಗಳಿಂದ ಬೇಸರ ಯಾಕೆ? ಅಭಿಪ್ರಾಯಬೇಧಗಳೇ ಇರಬಾರದೇ? 

2. ನಿಮ್ಮ ಸಹೋದರರು ಗುತ್ತಿಗೆದಾರರಾಗಿದ್ದು ಸುಳ್ಳಲ್ಲವಲ್ಲವೇ? ನೀವು ಈ ನವೀಕರಣ ಯೋಜನೆಗೆ ಅತೀವ ಆಸಕ್ತಿ ವಹಿಸಿದ್ದೂ ಸತ್ಯ ಅಲ್ಲವೇ? ಕಲಾಕ್ಷೇತ್ರದ ನವೀಕರಣಕ್ಕೆ 24 ಕೋಟಿ ಎನ್ನುವುದು ಸಂದೇಹಕ್ಕೆ ಕಾರಣ ಆಗುತ್ತದಲ್ಲವೇ? 

3. ಹೊಸ ರಂಗಮಂದಿರ ನಿರ್ಮಿಸಿಕೊಟ್ಟರೆ ನಿಮ್ಮ ಮಹತ್ಕಾರ್ಯವನ್ನು  ಭವಿಷ್ಯದಲ್ಲಿ ಸ್ಮರಿಸಬಹುದು. ಆದರೆ ನವೀಕರಣ ಮಾಡಿಸುವುದರಿಂದ ಯಾರು ತಾನೆ ನೆನಪಿಸಿಕೊಳ್ಳಲು ಸಾಧ್ಯ? ಈಗಾಗಲೇ ಮೂರು ಸಲ ಕಲಾಕ್ಷೇತ್ರ ನವೀಕರಣ ಮಾಡಿಸಲಾಗಿದೆಯಾದರೂ ಯಾರು ಮಾಡಿಸಿದವರು ಎಂಬುದು ದಾಖಲಾಗುವಂತಹುದಲ್ಲ.

4. ಹೋಗಲಿ ಇಷ್ಟು ಖರ್ಚು ಮಾಡಿ ನವೀಕರಣ ಮಾಡಿ ಬಾಡಿಗೆ ಹೆಚ್ಚಿಸಿದರೆ ರಂಗಚಟುವಟಿಕೆಗಳನ್ನು ಮಾಡುವುದಾದರೂ ಹೇಗೆ? ನೀವು ಹೆಚ್ಚಿಸದೇ ಹೋದರೂ ಮುಂದಿನ ಸರಕಾರದವರು ಬಾಡಿಗೆ ಹೆಚ್ಚಿಸಿದರೆ ಯಾರನ್ನು ಕೇಳುವುದು? 

5. ಮಾಡಿಸಿದರೆ ಸಂಪೂರ್ಣ ನವೀಕರಣ ಮಾಡಿಸುವೆ ಇಲ್ಲವಾದರೆ ಇಡೀ ಯೋಜನೆಯನ್ನೇ ಕೈಬಿಡುವೆ ಎಂದು ಹೇಳುತ್ತಿದ್ದೀರಿ. ಈ ಮಾತಿನ ಹಿಂದಿನ ಮರ್ಮ ಏನು? ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಗತ್ಯವಿರುವ ಲೈಟ್ ಮತ್ತು ಸೌಂಡ್ ವ್ಯವಸ್ಥೆ ಮಾಡಿ ಕೊಡುವುದು ಸಂಸ್ಕೃತಿ ಇಲಾಖೆಯ ಕರ್ತವ್ಯ ಅಲ್ಲವೇ? ಇಡೀ ಕಲಾಕ್ಷೇತ್ರದ ಸಮರ್ಪಕ ನಿರ್ವಹಣೆಯ ಜವಾಬ್ದಾರಿ ನಿಮ್ಮದೇ ಇಲಾಖೆಯದ್ದಲ್ಲವೇ? ಹಾಗಾದರೆ ನಿಮ್ಮ ಹೊಣೆಗಾರಿಕೆಯಿಂದ ಹೇಗೆ ಜಾರಿಕೊಳ್ಳುತ್ತೀರಿ. "ಸಂಸ್ಕೃತಿ ಇಲಾಖೆ ಇರುವುದು ಲಾಭಕ್ಕಾಗಿ ಅಲ್ಲಾ ಸೇವೆಗಾಗಿ" ಅಂತಾ ಹೇಳುವ ನೀವು ಮೊದಲು ಕಲಾಕ್ಷೇತ್ರದ ಅಗತ್ಯಗಳಿಗೆ ಸ್ಪಂದಿಸಲೇಬೇಕಲ್ಲವೇ? ಸಮಸ್ಯೆಗಳನ್ನು ಪರಿಹರಿಸಲೇ ಬೇಕಲ್ಲವೇ? ಅದು ಸಚಿವರಾಗಿ ನಿಮ್ಮ ಕರ್ತವ್ಯ ಆಗಿದೆಯಲ್ಲವೇ? 

6. ಹೋಗಲಿ 24 ಕೋಟಿಯ ನವೀಕರಣ ಯೋಜನೆಯ ಅಂದಾಜು ಖರ್ಚು ವೆಚ್ಚಗಳ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವೇ? 

7. ನವೀಕರಣದ ನೆಪದಲ್ಲಿ ಮತ್ತೆ ಒಂದೆರಡು ವರ್ಷ ಕಲಾಕ್ಷೇತ್ರ ಹಾಗೂ ಸಂಸ ಬಯಲು ರಂಗಮಂದಿರವನ್ನು ಮುಚ್ಚಿದರೆ ರಂಗಚಟುವಟಿಕೆಗಳು ಕುಂಟಿತವಾಗುವುದಿಲ್ಲವೆ? ಅದಕ್ಕೆ ಇಲಾಖೆಯ ಪರ್ಯಾಯ ವ್ಯವಸ್ಥೆಗಳೇನಿವೆ? 

8. ಎಂಟು ತಿಂಗಳಾದರೂ ಅಕಾಡೆಮಿ ಪ್ರಾಧಿಕಾರ ರಂಗಾಯಣಗಳಿಗೆ ನೇಮಕಾತಿ ಮಾಡದೇ ವಿಳಂಬ ಧೋರಣೆ ಅನುಸರಿಸುತ್ತಿರುವ ಇಲಾಖೆ ಸಚಿವರಾದ ನಿಮಗೆ ಕಲಾಕ್ಷೇತ್ರದ ನವೀಕರಣದ ಮಾಡಲು ಯಾಕೆ ಇಂತಹ ಅತೀವ ಆಸಕ್ತಿ?

9. ಕಲಾಕ್ಷೇತ್ರದ ನಿರ್ವಹಣೆಗೆ ಬೇಕಾದಷ್ಟು ಸಿಬ್ಬಂದಿ ಇಲ್ಲ, ಇರುವ ಸಿಬ್ಬಂದಿಗಳಿಗೆ ಆರು ತಿಂಗಳಾದರೂ ಸಂಬಳ ಕೊಟ್ಟಿಲ್ಲ. ಕಲಾಸಂಸ್ಥೆಗಳಿಗೆ ಅನುದಾನ ಮಂಜೂರಾಗಿಲ್ಲ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರಾಯೋಜನೆ ಕೊಡುತ್ತಿಲ್ಲ. ಇವೆಲ್ಲವೂ ಸಂಸ್ಕೃತಿ ಸಚಿವಾಲಯದ ಮುಂಚೂಣಿ ಆದ್ಯತೆಗಳಲ್ಪವೇ? ಕಲಾಕ್ಷೇತ್ರ ನವೀಕರಣಕ್ಕಿಂತಲೂ ಇವೆಲ್ಲಾ ಮೊದಲು ಮಾಡಬೇಕಾದ ಕೆಲಸಗಳಲ್ಲವೇ. 

10. ಹೊಟ್ಟೆಗೆ ಹಿಟ್ಟಿಲ್ಲದಿರುವಾಗ ಜುಟ್ಟಿಗೆ ಮಲ್ಲಿಗೆ ಅಲಂಕಾರ ಬೇಕೆ? ಮೊದಲು ರಂಗಭೂಮಿಯ ಅಗತ್ಯ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸವನ್ನು ನೀವು ಮತ್ತು ನಿಮ್ಮ ಸಚಿವಾಲಯದ ಅಧಿಕಾರಿಗಳು ಮಾಡಿ ತೋರಿಸಿ. ಎಲ್ಲಾ ಬೇಸಿಕ್ ಅಗತ್ಯಗಳು ಪೂರೈಸಿದ ಮೇಲೆ ರಂಗಮಂದಿರಕ್ಕೆ ಹವಾನಿಯಂತ್ರಣ ವ್ಯವಸ್ಥೆ ಮಾಡಿ ವಾಟರ್ ಪ್ರೂಪ್ ಖುರ್ಚಿ ಅಳವಡಿಸುವಿರಂತೆ. 

ತುಂಬಾ ಅಗತ್ಯವಾದವುಗಳನ್ನು ನಿರ್ಲಕ್ಷಿಸಿ ಅನಗತ್ಯ ಆಡಂಬರದ ಯೋಜನೆಗಳನ್ನು ರೂಪಿಸಿದಾಗಲೇ ಅದರ ಹಿಂದಿನ ಉದ್ದೇಶದ ಮೇಲೆ ಸಂದೇಹ ಹೆಚ್ಚಾಗುತ್ತದೆ. ಸಂದೇಹ ವ್ಯಕ್ತಪಡಿಸಿ ಪತ್ರಿಕೆಗಳಲ್ಲಿ ಬರೆದರೆ ನಿಮಗೆ ಬೇಸರವಾಗುತ್ತದೆ. ಹಾಗಾಗಬಾರದು ಎಂದರೆ ಮೊದಲು ಸರಕಾರಿ ಕೃಪಾ ಪೋಷಿತ ಸಾಂಸ್ಕೃತಿಕ ಸಂಸ್ಥೆಗಳಿಗೆ ಅರ್ಹರನ್ನು ನೇಮಿಸಿ ಅಧಿಕಾರಶಾಹಿಗಳಿಂದ ಮುಕ್ತಿದೊರಕಿಸಿಕೊಡಿ. ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಡುವಂತಹ ಯೋಜನೆ ರೂಪಿಸಿ. ಇಂತಹ ಕೆಲಸಗಳನ್ನು ಸಚಿವರಾಗಿ ಮಾಡಿದ್ದೇ ಆದರೆ ಸಾಂಸ್ಕೃತಿಕ ಕ್ಷೇತ್ರ ಸ್ಮರಿಸಿಕೊಳ್ಳುತ್ತದೆ. ರಂಗಚರಿತ್ರೆಯಲ್ಲಿ ಹೆಸರು ದಾಖಲಾಗುತ್ತದೆ. ಅಂತಹ ಮಹತ್ತರವಾದ ಕಾರ್ಯಗಳನ್ನು ರಂಗಭೂಮಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಂದ ನಿರೀಕ್ಷಿಸುತ್ತದೆ.

- ಶಶಿಕಾಂತ ಯಡಹಳ್ಳಿ
9-02-2024

ರಂಗಕರ್ಮಿಗಳ ಒತ್ತಾಯದ ಕರೆ; ಕಲಾಕ್ಷೇತ್ರ ಕಾರ್ಯಾಚರಣೆಗೆ ತಡೆ

ತಹ ತಹ - 505

ರಂಗಕರ್ಮಿಗಳ ಒತ್ತಾಯದ ಕರೆ; 
ಕಲಾಕ್ಷೇತ್ರ ಕಾರ್ಯಾಚರಣೆಗೆ ತಡೆ


ಬೆಂಗಳೂರಿಗರ ಹೆಮ್ಮೆಯ ರವೀಂದ್ರ ಕಲಾಕ್ಷೇತ್ರವನ್ನು ಅತ್ಯಾಧುನೀಕರಣ ಮಾಡುತ್ತೇವೆ ಎಂದು ಸ್ವತಃ ಸಂಸ್ಕೃತಿ ಇಲಾಖೆಯ ಸಚಿವರು ಆಸಕ್ತಿ ವಹಿಸಿದ್ದರು. ಇಲಾಖೆಯ ಅಧಿಕಾರಿಗಳು ಕ್ಷೇತ್ರ ಸರ್ವೆ ಮಾಡಿಸಿ ಅಂದಾಜು ವೆಚ್ಚವನ್ನೂ ಲೆಕ್ಕಹಾಕಿಸಿ ಪ್ರಸ್ತಾವನೆ ಸಿದ್ದಗೊಳಿಸಿ ಅನುಮೋದನೆಗಾಗಿ ಮುಖ್ಯಮಂತ್ರಿಯವರಿಗೆ ಕಳುಹಿಸಿಕೊಡಲಾಗಿತ್ತು. ಆದರೆ ಇದಕ್ಕೆ ವಿರೋಧ ರಂಗಭೂಮಿಯವರಿಂದಲೇ ವ್ಯಕ್ತವಾಗಿತ್ತು. 

ಯಾಕೆಂದರೆ ಪ್ರಸ್ತಾವಿತ ಕಲಾಕ್ಷೇತ್ರದ ಆಧುನೀಕರಣ ಯೋಜನೆಗೆ ಸಾಂಸ್ಕೃತಿಕ ಕ್ಷೇತ್ರದ ಯಾರೂ ಬೇಡಿಕೆ ಇಟ್ಟಿರಲಿಲ್ಲ. ಡಿಸೆಂಬರ್ 15 ರಂದು ಬಾಕಿ ಪ್ರಶಸ್ತಿ ಪ್ರದಾನ ಮಾಡುವ ಕುರಿತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಕರೆದ  ರಂಗಕರ್ಮಿಗಳ ಸಮಾಲೋಚನಾ ಸಭೆಯಲ್ಲಿ ಸಂಸ ಬಯಲು ರಂಗಮಂದಿರದಲ್ಲಿ ಆಯೋಜಿಸುವ ಸಂಗೀತ ಕಾರ್ಯಕ್ರಮಗಳ ಸದ್ದು ಕಲಾಕ್ಷೇತ್ರದೊಳಗಿನ ಕಾರ್ಯಕ್ರಮಗಳಿಗೆ ತೊಂದರೆ ಮಾಡುತ್ತದೆ. ಆದ್ದರಿಂದ ಕಲಾಕ್ಷೇತ್ರಕ್ಕೂ ಹಾಗೂ ಸಂಸ ದ ನಡುವೆ ಇರುವ ಶೆಟರ್ ತೆಗೆದು ಗೋಡೆ ಕಟ್ಟಿ ಆಕಡೆ ಸದ್ದು ಈಕಡೆ ಬರದಂತೆ ತಡೆಯಬೇಕು ಹಾಗೂ ಸಂಸ ದಲ್ಲಿ ಸೈಡ್ ವಿಂಗ್ ನಿರ್ಮಿಸಿ  ಲೈಟಿಂಗ್ ಬಾರ್ ಅಳವಡಿಸಬೇಕು ಎಂದಷ್ಟೇ ಚರ್ಚೆ ಆಗಿತ್ತು. ಕೇಂದ್ರೀಕೃತ ಎಸಿ, ವಾಟರ್ ಪ್ರೂಪ್ ಖುರ್ಚಿ ಮುಂತಾದ ನವೀಕರಣದ ಬಗ್ಗೆ ಚರ್ಚೆ ಆಗಿರಲಿಲ್ಲ. ಹಾಗೂ ರವೀಂದ್ರ ಕಲಾಕ್ಷೇತ್ರದ ಅಗತ್ಯಗಳ ಬಗ್ಗೆ ರಂಗಕರ್ಮಿಗಳ ಸಭೆ ಕರೆದು ಸಲಹೆಗಳನ್ನೂ ಅಧಿಕಾರಿಗಳು ಪಡೆದಿರಲಿಲ್ಲ. ಕರೆತಂದ ಗುತ್ತಿಗೆದಾರರು ಹಾಗೂ ಇಂಜನೀಯರುಗಳಿಗೆ ಕಲಾಕ್ಷೇತ್ರದ ವಿನ್ಯಾಸ ಮತ್ತು ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಜ್ಞಾನವೂ ಇರಲಿಲ್ಲ. ಆದರೂ 24 ಕೋಟಿ ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ತರಾತುರಿಯಲ್ಲಿ ಸರಕಾರಕ್ಕೆ ಸಲ್ಲಿಸಲಾಗಿತ್ತು. 

ಈ ಸಂಗತಿ ಕುರಿತ ವಿವರ ಹಾಗೂ ವಿರೋಧಗಳು ಪ್ರಜಾವಾಣಿ ವಾರ್ತಾಭಾರತಿ ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಪ್ರಕಟವಾದವು. ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿರೋಧ ವ್ಯಕ್ತವಾಯಿತು. ಜ.31 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಾಧಕರ ಪರವಾಗಿ ಮಾತಾಡಿದ ಡಾ.ಕೆ.ಎಂ. ಮರುಳಸಿದ್ದಪ್ಪನವರು ಅನಗತ್ಯವಾಗಿ 24 ಕೋಟಿ ವೆಚ್ಚದಲ್ಲಿ ರವೀಂದ್ರ ಕಲಾಕ್ಷೇತ್ರ ನವೀಕರಣಕ್ಕೆ ಇಲಾಖೆ ನೀಡಿರುವ ಪ್ರಸ್ತಾವನೆ ಬಗ್ಗೆ ಪ್ರಸ್ತಾಪಿಸಿ ಅಲ್ಲಿಯೇ ಇದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತಂದರು. ಈ ರೀತಿಯ ಅನಿರೀಕ್ಷಿತ ಪ್ರತಿರೋಧದಿಂದ ವಿಚಲಿತರಾದ ಮುಖ್ಯಮಂತ್ರಿಗಳು
 "ಸಲಹೆ ಬಂದಿದೆ 24 ಕೋಟಿ ಇನ್ನೂ ನಿರ್ಧಾರ ಆಗಿಲ್ಲ" ಎಂದು ಹೇಳಿದರು. ಆ ನಂತರ ಈ ವಿಷಯಕ್ಕೆ ಸಂಬಂಧಿಸಿದಂತೆ ಸಚಿವರನ್ನು ಕರೆಸಿ ಮುಖ್ಯಮಂತ್ರಿಗಳು ತರಾಟೆಗೆ ತೆಗೆದುಕೊಂಡರೆಂಬ ಮಾಹಿತಿಯೂ ಇದೆ. 

ಬಹುಷಃ ಈ ರೀತಿಯಲ್ಲಿ ವಿರೋಧ ವ್ಯಕ್ತವಾಗಬಹುದು ಎನ್ನುವ ಅಂದಾಜು ಈ ನವೀಕರಣ ಯೋಜನೆಯ ರೂವಾರಿಯಾದ ಸಂಸ್ಕೃತಿ ಇಲಾಖೆಯ ಸಚಿವರಾದ ಮಾನ್ಯ ಶಿವರಾಜ ತಂಗಡಗಿಯವರಿಗೂ ಇರಲಿಲ್ಲ. ಪ್ರಸ್ತಾವಿತ ಯೋಜನೆಯನ್ನು ಮಾಡದೇ ಹೋದರೆ ಮುಖಭಂಗ. ಮಾಡಿದರೆ ಪ್ರತಿರೋಧ. ಇಂತಹ ಸಂಧಿಗ್ದ ಸಮಯದಲ್ಲಿ ಪಳಗಿದ ರಾಜಕಾರಣಿ ಏನು ಮಾಡಬೇಕೋ ಅದನ್ನೇ ತಂಗಡಿಗಿಯವರು ಮಾಡಿದರು.‌ತಮ್ಮ ಮೇಲೆ ಬರಬಹುದಾದ ಆರೋಪದಿಂದ ಮುಕ್ತವಾಗಲು ಉಪಾಯವೊಂದನ್ನು ಮಾಡಿದರು.  ಜ.8 ರಂದು ಕಲಾಕ್ಷೇತ್ರದ ನವೀಕರಣದ ಕುರಿತು ಚರ್ಚಿಸಲು ಕನ್ನಡ ಭವನದಲ್ಲಿ ರಂಗಕರ್ಮಿಗಳ ಸಮಾಲೋಚನಾ ಸಭೆ ಕರೆದರು. 

ಸಭೆಯಲ್ಲಿ ಭಾಗವಹಿಸಿದ ಅನುಭವಿ ರಂಗಕರ್ಮಿಗಳು " ಕಲಾಕ್ಷೇತ್ರಕ್ಕೆ ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ ಅಗತ್ಯವಿಲ್ಲ. ಅಳವಡಿಸಿದರೂ ಅದು ಸೂಕ್ತವಾಗಿ ಕಾರ್ಯಾಚರಣೆ ಮಾಡಲು ಸಾಧ್ಯವಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಎಸಿ ಬೇಕೇಬೇಕೆಂದೇನಿಲ್ಲ. ತಿಂಗಳಿಗೆ ಎರಡು ಮೂರು ದಿನ ನಡೆಯಬಹುದಾದ ಸರಕಾರಿ ಕಾರ್ಯಕ್ರಮಗಳಿಗೋಸ್ಕರ ಅಷ್ಟೊಂದು ಹಣ ಖರ್ಚು ಮಾಡಿ ಹವಾನಿಯಂತ್ರಣ ವ್ಯವಸ್ಥೆ ಮಾಡಿಸುವುದು ಸೂಕ್ತವಲ್ಲ" ಎಂದು ಸಚಿವರಿಗೆ ತಿಳಿಸಿದರು. "ಅಗತ್ಯವಿದ್ದರೆ ಮುಂದಿನ ಮೂರು ಸಾಲಿನ ಖುರ್ಚಿಗಳನ್ನು ಬದಲಾಯಿಸಿದರೆ ಸಾಕು ಎಲ್ಲವನ್ನು ಬದಲಾಯಿಸುವ ಅಗತ್ಯವಿಲ್ಲ ಹಾಗೂ ಅಗತ್ಯವಾಗಿ ಬೇಕಾಗಿರುವ ಬೆಳಕು ಹಾಗೂ ಧ್ವನಿವರ್ಧಕ ಪರಿಕರಗಳನ್ನು ಸರಿಪಡಿಸಿ ಮತ್ತು ಬದಲಾಯಿಸಿ ಕೊಡಿ" ಎಂದು ಸಚಿವರಿಗೆ ಮನವಿ ಮಾಡಲಾಯ್ತು. " 24 ಕೋಟಿ ವೆಚ್ಚ ಬೇಕಾಗಿಲ್ಲ, ಸಂಪೂರ್ಣ ಆಧುನೀಕರಣ ಅಗತ್ಯವಿಲ್ಲ. ಬೇಕಾಗಿರುವಷ್ಟು ಮಾತ್ರ ಸರಿಪಡಿಸಿ ಬದಲಾಯಿಸಿಕೊಟ್ಟರೆ ಸಾಕು" ಎನ್ನುವುದೇ ಸಭೆಯಲ್ಲಿರುವ ಬಹುತೇಕ ರಂಗಕರ್ಮಿಗಳ ಅಭಿಪ್ರಾಯವಾಗಿತ್ತು.

ಆಧುಕೀಕರಣ ಮಾಡಿದ ನಂತರ ಮುಂದೆ ಬರುವ ಸರಕಾರ ಅದಕ್ಕೆ ತಕ್ಕಂತೆ ಬಾಡಿಗೆ ಹೆಚ್ಚಿಸುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ? ದಿನಕ್ಕೆ 2500ರೂ. ಬಾಡಿಗೆಗೆ ಸಿಗುತ್ತಿದ್ದ ಕಲಾಕ್ಷೇತ್ರದ ಪಕ್ಕದ ಪುರಭವನ ನವೀಕರಣದ ನಂತರ 50 ಸಾವಿರ ಬಾಡಿಗೆ ಹೆಚ್ಚಳವಾಗಿ ರಂಗಭೂಮಿಯವರ ಕೈಗೆಟುಕದಂತಾದಂತೆ ಆಧುನೀಕರಣಗೊಂಡ ಕಲಾಕ್ಷೇತ್ರವೂ ಆಗುವುದಿಲ್ಲವೆನ್ನುವುದಕ್ಕೆ ಏನು ಖಾತರಿ? ಎನ್ನುವುದು ಸಭೆಯಲ್ಲಿದ್ದ ರಂಗಕರ್ಮಿಗಳ ಸಂದೇಹವಾಗಿತ್ತು. ಅದಕ್ಕೆ ಸಚಿವರಿಂದ ಯಾವುದೇ ಖಾತರಿ ಸಿಗದೇ ಹೋಯಿತು. 

ಎಲ್ಲರ ಅಭಿಪ್ರಾಯ ತಿಳಿದ ಸಚಿವರು ಕೊನೆಗೆ ತಮ್ಮ ಅಭಿಪ್ರಾಯ ಹೇಳಿದರು. "ಸಚಿವನಾಗಿ ಎಲ್ಲರೂ ಗುರುತಿಸುವಂತಹ ಕೆಲಸ ಮಾಡಬೇಕು ಎನ್ನುವುದು ನನ್ನ ಉದ್ದೇಶವಾಗಿತ್ತು. ನೀವೆಲ್ಲಾ ಒಪ್ಪಿದ್ದರೆ ಕಲಾಕ್ಷೇತ್ರ ನವೀಕರಣ ಮಾಡಬಹುದಾಗಿತ್ತು. ಆದರೆ ವಿರೋಧ ಬಂದಿರುವುದರಿಂದ ಈ ಯೋಜನೆಯನ್ನು ಸ್ಥಗಿತಗೊಳಿಸುತ್ತಿದ್ದೇನೆ. ಕಲಾಕ್ಷೇತ್ರ ಈಗಿರುವಂತೆ ಯಥಾಸ್ಥಿತಿಯಲ್ಲಿ ಇರಲಿ" ಎಂದರು. ಕೊನೆಗೆ ರಂಗಕರ್ಮಿಗಳ ಒತ್ತಾಯಕ್ಕೆ ಕಟ್ಟುಬಿದ್ದು ಅಗತ್ಯವಾದ ಲೈಟಿಂಗ್ಸ್ ಮತ್ತು ಸೌಂಡ್ ಸಮಸ್ಯೆಗಳನ್ನು ಬಗೆಹರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ ಸಚಿವರು ಎಲ್ಲರಿಗೂ ಕೈಮುಗಿದು ನಿರ್ಗಮಿಸಿದರು. 

ಸಭೆಗೆ ಬರುವ ಮುಂಚೆಯೇ ಸಚಿವರು ನಿರ್ಧರಿಸಿಯೇ ಬಂದಿದ್ದರು. ಸಭೆಯಲ್ಲಿ ಬಹುಮತದ ತೀರ್ಮಾನ ಯಾವುದೇ ರೀತಿ ಬಂದರೂ ಅದು ಅವರಿಗೆ ಒಪ್ಪಿಗೆಯಾಗಿತ್ತು. ಎಲ್ಲರೂ ಸಚಿವರ ಯೋಜನೆಗೆ ಬೆಂಬಲಿಸಿ 24 ಕೋಟಿಯ ಯೋಜನೆ ಬೇಕೆ ಬೇಕೆಂದಿದ್ದರೆ ಸಚಿವರ ಬಾಯಿಗೆ ಲಡ್ಡು ಬಿದ್ದಂತಾಗುತ್ತಿತ್ತು. ರಂಗಕರ್ಮಿಗಳ ಒಕ್ಕೋರಲಿನ ಒತ್ತಾಯದ ಮೇರೆಗೆ ಕಲಾಕ್ಷೇತ್ರವನ್ನು  ಆಧುನೀಕರಣ ಮಾಡಲಾಗುತ್ತದೆ ಎಂದು ಪತ್ರಿಕಾ ಹೇಳಿಕೆ ನೀಡುತ್ತಿದ್ದರು ಹಾಗೂ ಮುಖ್ಯ ಮಂತ್ರಿಗಳ ಬಳಿ ಹೋಗಿ ಈ ಯೋಜನೆಗೆ ಸಾಂಸ್ಕೃತಿಕ ಲೋಕದವರ ಸಂಪೂರ್ಣ ಬೆಂಬಲವಿದೆ ಅನುಮೋದನೆ ಕೊಡಿ ಎಂದು ಆಗ್ರಹಿಸುತ್ತಿದ್ದರು. ಆ ಮೂಲಕ ಯಾವುದ್ಯಾವುದೋ ಹಿಡನ್ ಅಜೆಂಡಾಗಳನ್ನು ಈಡೇರಿಸಿಕೊಳ್ಳುವ ಜೊತೆಗೆ ಕನಸಿನ ಯೋಜನೆಯನ್ನು ನನಸಾಗಿಸಿದ ಕೀರ್ತಿಯೂ ತಂಗಡಿಯವರ ಕಿರೀಟಕ್ಕೆ ಸೇರುತ್ತಿತ್ತು.

ಕಲಾಕ್ಷೇತ್ರದ ಆಧುನೀಕರಣಕ್ಕೆ ಸಭೆಯಲ್ಲಿ ವಿರೋಧ ಬಂದಿದ್ದೂ ಸಚಿವರ ಕಳಂಕ ನಿವಾರಣೆಗೆ ಹಾದಿ ಸುಗಮವಾದಂತಾಯಿತು. "ಅಯ್ಯೋ ನಾನೇನು ಮಾಡಲಿ ಹೇಳಿ. 24 ಕೋಟಿ ವೆಚ್ಚದಲ್ಲಿ ಕಲಾಕ್ಷೇತ್ರವನ್ನು  ಅತ್ಯಾಧುನಿಕ ರಂಗಮಂದಿರವಾಗಿ ಪರಿವರ್ತಿಸಬೇಕೆಂಬುದು ನನ್ನ ಉದ್ದೇಶವಾಗಿತ್ತು. ಆದರೆ ರಂಗಕರ್ಮಿಗಳೇ ಅದಕ್ಕೆ ಅಡ್ಡಗಾಲು ಹಾಕಿದರು. ನನ್ನ ಕನಸನ್ನು ನುಚ್ಚುನೂರು ಮಾಡಿದರು. ಅದಕ್ಕಾಗಿ ಈ ಮಹತ್ತರವಾದ ಯೋಜನೆಯನ್ನು ನಿಲ್ಲಿಸುತ್ತಿರುವೆ" ಎಂದು ಸಚಿವರು ತಮಗಾದ ಮುಖಭಂಗಕ್ಕೆ ಸಮರ್ಥನೆ ಕೊಡಲು ರಂಗಕರ್ಮಿಗಳ ನಿರಾಕರಣೆಯನ್ನೆ ಬಳಸಿಕೊಳ್ಳಲು ಅನುಕೂಲವಾಯ್ತು.

ರಾಜಕಾರಣಿಗಳೇ ಹೀಗೆ. ಬೆಟ್ಟಕ್ಕೆ ಕೂದಲು ಕಟ್ಟಿ ಎಳೆಯುವ ಯೋಜನೆ ರೂಪಿಸುವುದು. ಬಂದರೆ ಬೆಟ್ಟ ಹೋದರೆ ಕೂದಲು ಎನ್ನುವಂತವರು. ಮಾನ್ಯ ಸಚಿವರಿಗೆ ತಮ್ಮ ಹೆಸರು ರಂಗಭೂಮಿಯ ಚರಿತ್ರೆಯಲ್ಲಿ ಉಳಿಯಲೇಬೇಕೆಂಬ ಉದ್ದೇಶವಿದ್ದರೆ ತಾಲೂಕಿಗೊಂದು ಇಲ್ಲವೇ ಜಿಲ್ಲೆಗೊಂದು ಸುಸಜ್ಜಿತ ಕಿರುರಂಗಮಂದಿರ ಕಟ್ಟಿಸಿ ಕೊಡಲಿ. ಅಲ್ಲಿಯ ಜನತೆ ನೆನಪಿಸಿಕೊಳ್ಳುತ್ತಾರೆ. ಬೆಂಗಳೂರಿನ ಕೆಲವು ಬಡಾವಣೆಗಳಲ್ಲಿಯಾದರೂ ಕಿರುರಂಗಮಂದಿರ ಕಟ್ಟಿಸಿ ಕೊಡಲಿ ಬೆಂಗಳೂರಿಗರು ಸ್ಮರಿಸಿಕೊಳ್ಳುತ್ತಾರೆ. ಇಲ್ಲವೇ ಹಿಂದಿನ ಸರಕಾರ ಬೆಂಗಳೂರಿನ ನಾಲ್ಕು ದಿಕ್ಕಿನಲ್ಲಿ ನಾಲ್ಕು ರಂಗಮಂದಿರ ಕಟ್ಟಲು ಯೋಜನೆ ರೂಪಿಸಿ ಜಾಗವನ್ನೂ ಗುರಿತಿಸಿದ್ದಾರೆ. ಅದಕ್ಕೆ ತಲಾ  20 ಕೋಟಿಯಂತೆ ಒಟ್ಟು 80 ಕೋಟಿ ಹಣವನ್ನು ಬಜೆಟ್ಟಿನಲ್ಲಿ ಮೀಸಲಾಗಿರಿಸಿದ್ದಾರೆ. ಘೋಷಿತ ಜಾಗ ಹಣ ಎರಡನ್ನೂ ಬಳಸಿಕೊಂಡು ನಾಲ್ಕೂ ರಂಗಮಂದಿರಗಳನ್ನು ನಿರ್ಮಿಸಿಕೊಟ್ಟು ಬೆಂಗಳೂರಿನ ಸಾಂಸ್ಕೃತಿಕ ಲೋಕದ ಚರಿತ್ರೆಯಲ್ಲಿ ತಮ್ಮ ಹೆಸರನ್ನು ದಾಖಲಿಸಲಿ. ಅದು ಬಿಟ್ಟು ಈಗಾಗಲೇ ಪ್ರಸಿದ್ದವಾಗಿರುವ ರವೀಂದ್ರ ಕಲಾಕ್ಷೇತ್ರವನ್ನು ನವೀಕರಣ ಮಾಡಿದರೆ ಯಾರು ತಾನೇ ಭವಿಷ್ಯದಲ್ಲಿ ಈ ಸಚಿವರ ಹೆಸರನ್ನು ನೆನಪಿಸಿಕೊಳ್ಳಲು ಸಾಧ್ಯ? ಈಗಾಗಲೇ ಮೂರು ಸಲ ಕಲಾಕ್ಷೇತ್ರ ನವೀಕರಣವಾಗಿದೆ. ಅಷ್ಟೂ ಸಲ ದೀರ್ಘಕಾಲ ನವೀಕರಣಕ್ಕೆ ರಂಗಮಂದಿರ ಮುಚ್ಚಿದ್ದರಿಂದಾಗಿ ಹಾಗೂ ತಾಂತ್ರಿಕದೋಷಗಳಿಂದಾಗಿ ಸರಕಾರಕ್ಕೆ ಅಪಕೀರ್ತಿಯೇ ಬಂದಿದೆ. 

ಹಾಗಂತ ಕಲಾಕ್ಷೇತ್ರ ನವೀಕರಣವಾಗಲೇ ಬಾರದೆಂದಲ್ಲ. ನವೀಕರಣದ ಹೆಸರಲ್ಲಿ ದಿನಬಾಡಿಗೆ ಹೆಚ್ಚಿಸಿ ರಂಗಚಟುವಟಿಕೆಗಳ ಕೈಗೆಟುಕದಿರುವಂತೆ ಆಗಬಹುದು ಎನ್ನುವುದೇ ಸಾಂಸ್ಕೃತಿಕ ಕ್ಷೇತ್ರದವರ ಆತಂಕವಾಗಿದೆ. ಅನಗತ್ಯ ಕಾಮಗಾರಿಗಳನ್ನು ನಿಲ್ಲಿಸಿ ಅತ್ಯಗತ್ಯವಾದ ತಾಂತ್ರಿಕ ಪರಿಕರಗಳ ಲೋಪ ಪರಿಹರಿಸಿ ಎಂಬುದೇ ರಂಗಭೂಮಿಯವರ ಒತ್ತಾಯವಾಗಿದೆ. 

- ಶಶಿಕಾಂತ ಯಡಹಳ್ಳಿ
   09-02-2024

ಮತಾಂಧರಿದ್ದಾರೆ ಎಚ್ಚರಿಕೆ

ತಹ ತಹ -504

ಮತಾಂಧರಿದ್ದಾರೆ ಎಚ್ಚರಿಕೆ

ಈ ಕೋಮುವಾದದ ಮತ್ತೇರಿಸಿಕೊಂಡ ಮತಾಂಧರ ಮನಸ್ಥಿತಿ ಅರಿಯಲು ನಿನ್ನೆ ನಡೆದ ಈ ಎರಡು ಲೇಟೆಸ್ಟ್ ಘಟನೆಗಳು ಸಾಕ್ಷಿಯಾಗಿವೆ. 

ಬಿಜೆಪಿ ಪಕ್ಷದಿಂದ ನಿರ್ಲಕ್ಷಕ್ಕೊಳಗಾಗಿ ಯಾವುದೇ ಪದವಿ ಅಧಿಕಾರ ಇಲ್ಲದೇ ಪರಿತಪಿಸುತ್ತಿರುವ ಚಿಕ್ಕಮಗಳೂರಿನ  ಸಿಟಿ ರವಿ ಎನ್ನುವ ಔಟಾಪ್ ಡೇಟೆಡ್ ರಾಜಕಾರಣಿ ಆಗಾಗ ಅನಗತ್ಯ ಅಧಿಕಪ್ರಸಂಗಿತನದ ಹೇಳಿಕೆಗಳನ್ನು ಕೊಟ್ಟು ಹೈಕಮಾಂಡ್ ಗಮನ ಸೆಳೆಯಲು ವಿದೂಷಕನಂತೆ ವರ್ತಿಸುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಈಗ "ಕುಂಕುಮ ಬೇಡ ಎನ್ನುವ ಸಿದ್ದರಾಮಯ್ಯ ಹಿಂದೂನಾ?"  ಎಂದು ಪ್ರಶ್ನಿಸುವ ಮೂಲಕ ತನ್ನ ಬೌದ್ಧಿಕ ದಿವಾಳಿತನವನ್ನು ಹಾಗೂ ಮತಾಂಧತೆಯ ಅತಿರೇಕವನ್ನೂ ಪ್ರದರ್ಶಿಸಿದ್ದಾರೆ.

ಭಾರತದ ಸಂವಿಧಾನ ಎಲ್ಲರಿಗೂ ಅವರವರ ಇಷ್ಟದಂತೆ ಧಾರ್ಮಿಕ ಆಚರಣೆಗಳನ್ನು ಮಾಡಲು ಹಾಗೂ ಧಾರ್ಮಿಕ ಸಂಕೇತಗಳನ್ನು ಬಳಸಲು  ಅವಕಾಶವನ್ನು ಕೊಟ್ಟಿದೆ. ಹಿಂದೂ ಎನ್ನುವುದು ಧರ್ಮವೇ ಅಲ್ಲಾ ಅದೊಂದು ಜೀವನ ಕ್ರಮ ಎಂದು ಸರ್ವೋಚ್ಛ ನ್ಯಾಯಾಲಯವೇ ಹೇಳಿದೆ. ಆದರೆ ಈ ಕೇಸರಿಗರು ಈಗ ಹಿಂದೂ ಧರ್ಮ ಎಂದು ಹೇಳುತ್ತಲೇ ವೈದಿಕಶಾಹಿ ಹಿಂದುತ್ವವನ್ನು ಜಾರಿಗೆ ತರಲು ಪ್ರಯತ್ನಿಸುತ್ತಲೇ ಇರುತ್ತಾರೆ.

ಯಾರು ಈ ಕೇಸರಿಗರು ಕೊಟ್ಟ ಮಂತ್ರಾಕ್ಷತೆ ಸ್ವೀಕರಿಸುವುದಿಲ್ಲ. ಯಾರು ಶ್ರೀರಾಮನನ್ನು ಪೂಜಿಸುವುದಿಲ್ಲ. ಯಾರು ಕೇಸರಿ ಬಾವುಟವನ್ನು ಇವರು ಹೇಳಿದಲ್ಲಿ ಹಾರಿಸುವುದಿಲ್ಲ ಅಂತವರೆಲ್ಲಾ ಹಿಂದೂ ವಿರೋಧಿಗಳು, ದೈವದ್ರೋಹಿಗಳು ಎಂದು ನಿಂದನೆಗೆ ಗುರಿಯಾಗಬೇಕಾಗುತ್ತದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಸಿಟಿ ರವಿಯಂತವರು "ಯಾರು ಹಣೆಗೆ ಕುಂಕುಮ ಇಟ್ಟುಕೊಳ್ಳುವುದಿಲ್ಲವೋ ಅಂತವರು ಹಿಂದೂ ಆಗುವುದಿಲ್ಲ"ವೆಂಬ ಹೊಸ ವರಸೆ ಶುರು ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯನವರನ್ನೂ ಸಹ "ಕುಂಕುಮ ಬೇಡ ಎನ್ನುವ ಸಿದ್ದರಾಮಯ್ಯ ಹಿಂದೂನಾ?" ಎಂದು ಪ್ರಶ್ನಿಸುವ ಮೂಲಕ ಈ ಕೋಮುರವಿ ತನ್ನ ಕೋಮುವಿಷವನ್ನು ಸಾರ್ವಜನಿಕವಾಗಿ ಕಕ್ಕಿದ್ದಾನೆ.

ಸಿದ್ದರಾಮಯ್ಯನವರಿಲ್ಲಿ ಸಾಂಕೇತಿಕ ಟಾರ್ಗೆಟ್ ಆಗಿದ್ದು ಈ ಹೇಳಿಕೆಯ ಹಿಂದಿನ ಉದ್ದೇಶ ಹಣೆಗೆ ಕುಂಕುಮ ಹಾಕದವರೆಲ್ಲಾ ಹಿಂದೂದ್ರೋಹಿಗಳು ಎನ್ನುವುದೇ ಆಗಿದೆ. ಬೂರ್ಖಾ ಹಿಜಾಬ್ ಧರಿಸದೇ ಯಾವ ಮಹಿಳೆಯೂ ಮನೆಯಿಂದ ಹೊರಗೆ ಬರಕೂಡದು ಎಂದು ಅಪಘಾನಿಸ್ಥಾನದ ತಾಲಿಬಾನ್ ಸರಕಾರ ಆದೇಶ ಮಾಡಿದ ಹಾಗೆ ಈ ಹಿಂದಿತ್ವವಾದಿ ತಾಲಿಬಾನಿಗಳು ಕುಂಕುಮ ಹಾಕದೇ ಹೊರಗೆ ಬಂದವರೆಲ್ಲಾ ಹಿಂದೂ ವಿರೋಧಿಗಳು ಎಂದು ಆದೇಶಿಸುವ ದಿನಗಳೂ ದೂರವಿಲ್ಲ.

ಕುಂಕುಮ ಹಾಗದವರು ಹಿಂದೂನಾ? ಭಗವಾದ್ವಜ ಹಾರಿಸದವರು ಹಿಂದೂನಾ? ಮಂತ್ರಾಕ್ಷತೆ ನಿರಾಕರಿಸಿದವರು ಹಿಂದೂನಾ? ಜೈಶ್ರೀರಾಮ್ ಹೇಳದವರು ಹಿಂದೂನಾ? ಎಂದು ಪ್ರಶ್ನಿಸುವ ಈ ಕೇಸರಿ ತಾಲಿಬಾನಿಗಳ ಕೈಗೆ ಮತ್ತೆ ದೇಶದ ಆಡಳಿತ ಸಿಕ್ಕರೇ ಹಿಂದೂರಾಷ್ಟ್ರವೆಂದು ಘೋಷಿಸಿ ಮನುಸ್ಮೃತಿಯನ್ನು ಸಂವಿಧಾನವಾಗಿಸುವುದಂತೂ ನಿಶ್ಚಿತ. ಸಂವಿಧಾನ ಪ್ರತಿಯೊಬ್ಬರಿಗೂ ಕೊಟ್ಟ ಧರ್ಮಾಚರಣೆಯ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರಶ್ನಿಸುವ ಈ ಮತಾಂಧ ರವಿಯಂತವರು ಸಂವಿಧಾನದ ವಿರೋಧಿಗಳು. ದೇಶದ ಸಂವಿಧಾನಕ್ಕೆ ಗೌರವ ಕೊಡದ ಇಂತವರು ದೇಶದ್ರೋಹಿಗಳು. ಪ್ರಜಾತಂತ್ರಕ್ಕೆ ಮಾರಕವಾಗಿರುವ ಇಂತವರ ಬಗ್ಗೆ ಜನರು ಎಚ್ಚರದಿಂದ ಇರಬೇಕು. ಮತೀಯವಾದಿಯನ್ನು ಸೋಲಿಸಿ ಮನೆಗೆ ಕಳುಹಿಸಿದ ಚಿಕ್ಕಮಗಳೂರಿನ ಜನತೆ ಮಾಡಿದಂತೆ ಸಂವಿಧಾನದ ಆಶಯಗಳ ವಿರುದ್ದ ಇರುವ ಮತಾಂಧ ಶಕ್ತಿಗಳನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸಾರಾಸಗಟಾಗಿ ಸೋಲಿಸುವ ಮೂಲಕ ಜನತಂತ್ರ ವ್ಯವಸ್ಥೆಯನ್ನು ಬಲಪಡಿಸಬೇಕು.

ಎಲ್ಲೂ ಸಲ್ಲದ ಇನ್ನೊಬ್ಬ ವಿದೂಷಕನ ಹೆಸರು ಹೆಂಗ್ ಪುಂಗ್ಲಿ ಅಲಿಯಾಸ್ ಸೂಲಿಬೆಲೆ. ಮತಾಂಧ ಶಕ್ತಿಗಳ ವಿಕ್ಷಿಪ್ತ ಸಮರ್ಥಕ. ಬಾಯಿ ಬಿಟ್ಟರೆ ಬರೀ ಸುಳ್ಳುಗಳನ್ನು ಹೇಳುವುದನ್ನೇ ವೃತ್ತಿ ಮಾಡಿಕೊಂಡಿದ್ದರಿಂದಾಗಿ ಕರುನಾಡ ಜನತೆ ಹೆಂಗ್ ಪುಂಗ್ಲಿ ಎನ್ನುವ ಬಿರುದನ್ನು ದಯಪಾಲಿಸಿದ್ದಾರೆ. ಈ ಪುಂಗ್ಲಿಯ ನರನಾಡಿಯಲ್ಲಿ ಹರಿಯುತ್ತಿರುವುದು ಅನ್ಯ ಧರ್ಮದ್ವೇಷ ಮತ್ತು ಸಂಘಿ ಪ್ರೇಮ. ಈಗ ಲೇಟೆಸ್ಟಾಗಿ ವಿದ್ಯಾರ್ಥಿಗಳ ಪರೀಕ್ಷಾ ದಿನದ ಕುರಿತು ಈ ಬಾಡಿಗೆ ಭಾಷಣಕಾರ ಕೋಮುವಿಷ ಕಾರಿದೆ.

ಮುಸ್ಲಿಂ ನಮಾಜು ಸಮಯವೆಂದು ಎಸೆಸೆಲ್ಸಿ ಪರೀಕ್ಷೆಯ ಕೊನೆಯ ದಿನ ಶುಕ್ರವಾರ ಬೆಳಿಗ್ಗೆ ಬದಲು ಮಧ್ಯಾಹ್ನ 2 ಗಂಟೆಗೆ ಪರೀಕ್ಷೆ ಸಮಯ ನಿಗಧಿಮಾಡಲಾಗಿದೆ ಎಂದು ಪುಂಗ್ಲಿ ಟ್ರೀಟ್ ಮಾಡಿದೆ. ಶಾಲಾ ಮಕ್ಕಳ ಪರೀಕ್ಷೆ ಸಮಯದಲ್ಲೂ ಹಿಂದೂ ಮುಸ್ಲಿಂ ದ್ವೇಷವನ್ನು ಕಾರಿಕೊಳ್ಳುವ ಈ ಮತಾಂಧನ ನೀಚತನ ಅಕ್ಷಮ್ಯ. ಇಷ್ಟಕ್ಕೂ ಅವತ್ತು ಶುಕ್ರವಾರ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕೊನೆಯ ದಿನ. ಅವತ್ತೆ ಪಿಯುಸಿ ಪರೀಕ್ಷೆಗಳೂ ಆರಂಭವಾಗುತ್ತಿವೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಇರುವ ಪರೀಕ್ಷಾ ಕೇಂದ್ರಗಳಲ್ಲಿ ಪಿಯುಸಿ ಪರೀಕ್ಷೆ ಇರುತ್ತದೆ. ಎರಡೂ ಕ್ಲಾಶ್ ಆಗಬಾರದು ಎನ್ನುವ ಕಾರಣಕ್ಕೆ ಪಿಯುಸಿ ಪರೀಕ್ಷೆಯನ್ನು ಬೆಳಿಗ್ಗೆ ನಡೆಸಿ ಮದ್ಯಾಹ್ನ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದಾಗಿ ಶಿಕ್ಷಣ ಇಲಾಖೆ ಮೊದಲೇ ಘೋಷಿಸಿದೆ. ಆದರೆ ಅವತ್ತು ಶುಕ್ರವಾಗಿದ್ದರಿಂದಾ ಮುಸ್ಲಿಂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಳಿಗ್ಗೆಯ ಪರೀಕ್ಷೆಗಳನ್ನು ನಮಾಜ್ ಸಮಯದ ನಂತರ ಇಡಲಾಗಿದೆ ಎಂದು ಪುಂಗ್ಲಿ ಕೋಮುದ್ವೇಷ ಭಾವನೆ ಕೆರಳಿಸುವ ನೀಚತನ ಮಾಡಿದೆ. ಕೇಸರಿ ಕನ್ನಡಕ ಹಾಕಿಕೊಂಡು ಎಲ್ಲದರಲ್ಲೂ ಮುಸ್ಲಿಂ ದ್ವೇಷ ವನ್ನೇ ಕಾಣುವ ಹಾಗೂ ಕಂಡದ್ದನ್ನು ಕಕ್ಕುವ ಈ ವಿಷ ಸರ್ಪದ ದರ್ಪ ದಿನದಿಂದ ದಿನಕ್ಕೆ ಅತಿಯಾಗುತ್ತಿದೆ. ಈ ಹೆಂಗ್ ಪುಂಗ್ಲಿಯ ಕೋಮುದ್ವೇಷದ ಹಿಂದಿರುವ ಉದ್ದೇಶವೂ ಆರೆಸ್ಸೆಸ್ ಸಂಘಿ ನಾಯಕರ ಗಮನಸೆಳೆಯುವುದೇ ಆಗಿದೆ. ಹೇಗಾದರೂ ಮಾಡಿ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಟಿಕೆಟ್ ಪಡೆಯುವುದೇ ಆಗಿದೆ. ಆದರೆ ಈ ಬಾಡಿಗೆ ಭಾಷಣಕಾರ ಹೀಗೆ ಬಹಿರಂಗವಾಗಿ ಕೋಮುದ್ವೇಷ ಕಾರುವುದಕ್ಕೆ ಪರೋಕ್ಷ ಬೆಂಬಲ ಕೊಡುವ ಸಂಘವು ಪ್ರತ್ಯಕ್ಷವಾಗಿ ಈತನನ್ನು ಪಕ್ಷಕ್ಕೋ ಇಲ್ಲವೇ ಸಂಘಕ್ಕೋ ಸೇರಿಸಿಕೊಳ್ಳಲು ನಿರಾಕರಿಸುತ್ತದೆ. ಇಂತಹ ಕೊಳಕು ಬಾಯಿಯ ನಾಗರವನ್ನು ಸೇರಿಸಿಕೊಂಡರೆ ಸಂಘದ ಹುಸಿ ವರ್ಚಸ್ಸಿಗೆ ದಕ್ಕೆ ಆಗಬಹುದು ಎನ್ನುವುದು ಸಂಘದ ನಾಯಕರ ಲೆಕ್ಕಾಚಾರ. ಹೀಗಾಗಿ ಎಲ್ಲಿಯೂ ಸಲ್ಲದೇ ಸುಳ್ಳುಗಳ ಬುನಾದಿ ಮೇಲೆ ದ್ವೇಷಭಾಷಣ ಮಾಡಿಕೊಂಡು ಅಂಡಲೆಯುತ್ತಿರುವ  ಪುಂಗ್ಲಿ ಈ ಶತಮಾನದ ಅತ್ಯಂತ ಹಾಸ್ಯಾಸ್ಪದ ವ್ಯಕ್ತಿಯಾಗಿದ್ದಾನೆ.

ಹಾಗಂತ ಈ ಮತಾಂಧ ರವಿ ಹಾಗೂ ದ್ವೇಷಾಂಧ ಪುಂಗ್ಲಿಯನ್ನು ಸಂಪೂರ್ಣ ನಿರ್ಲಕ್ಷಿಸುವಂತೆಯೂ ಇಲ್ಲ. ಯಾಕೆಂದರೆ ಇವರು ಹೇಳುವ ಸುಂದರ ಸುಳ್ಳುಗಳನ್ನು ನಂಬುವ ಅಂಧಭಕ್ತರೂ ಇದ್ದಾರೆ. ಇಂತವರ ಪ್ರಚೋದನೆಗೆ ಒಳಗಾಗಿ ಕೋಮುಸಾಮರಸ್ಯ ಹಾಳು ಮಾಡುವ ಸಾಧ್ಯತೆಯೂ ಇದೆ. ಹೀಗಾಗಿ ಸರಕಾರ ಈ ಕೂಡಲೇ ಈ ಇಬ್ಬರೂ ಕೋಮುವಾದಿಗಳ ವಿರುದ್ಧ ಕೇಸು ದಾಖಲಿಸಬೇಕಿದೆ. ಕೋಮು ಸಾಮರಸ್ಯ ಕದಡುವಂತಹ ಯಾವುದೇ ಹೇಳಿಕೆಗಳನ್ನು ಯಾವುದೇ ರೂಪದಲ್ಲಿ ಕೊಡದಂತೆ ನ್ಯಾಯಾಲಯದಿಂದ ಆದೇಶ ತರಬೇಕಿದೆ. ಅದಕ್ಕಿಂತ ಹೆಚ್ಚಾಗಿ ಈ ನಾಡಿನ ಜನರು ಕೋಮುದ್ವೇಷ ಪ್ರಚೋದಿಸುವವರನ್ನು ದೂರವಿಡಬೇಕಿದೆ. ಪ್ರಜಾತಂತ್ರ ಹಾಗೂ ಸಂವಿಧಾನ ಉಳಿಸಬೇಕಿದೆ.

- ಶಶಿಕಾಂತ ಯಡಹಳ್ಳಿ
    07-02-2024

ರಾಮರಥಯಾತ್ರೆಯ ರೂವಾರಿಗೆ ಭಾರತರತ್ನ; ಮತ್ತೆ ಹಿಂದೂಮತ ಕ್ರೂಢೀಕರಣಕ್ಕೆ ಬಿಜೆಪಿ ಯತ್ನ

ತಹ ತಹ - 503

ರಾಮರಥಯಾತ್ರೆಯ ರೂವಾರಿಗೆ ಭಾರತರತ್ನ; ಮತ್ತೆ ಹಿಂದೂಮತ ಕ್ರೂಢೀಕರಣಕ್ಕೆ ಬಿಜೆಪಿ ಯತ್ನ


ರಾಮರಥಯಾತ್ರೆಯ ರೂವಾರಿ, ಬಿಜೆಪಿ ಪಕ್ಷದ ಬುನಾದಿ ಗಟ್ಟಿಗೊಳಿಸಿದ ಲೋಹಪುರುಷ, ಭಾವಪ್ರಚೋದನೆಯ ಮೂಲಕ ಹಿಂದೂ ಮತಗಳ ಕೇಂದ್ರೀಕರಿಸಿದ ನಾಯಕ ಲಾಲ್ ಕೃಷ್ಣ ಅದ್ವಾಣಿಯವರಿಗೆ ಇವತ್ತು ಈ ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತರತ್ನವನ್ನು ಮೋದಿ ಸರಕಾರ ಘೋಷಿಸಿದೆ. ಇದರಿಂದಾಗಿ ಸಂಘ ಪರಿವಾರದವರು ಸಂಭ್ರಮಿಸುತ್ತಿದ್ದಾರೆ. ಯಾರಾದರೂ ವಿರೋಧಿಸಿದರೆ ಅಂತವರನ್ನು ದೇಶದ್ರೋಹಿ ಎಂದು ಆರೋಪಿಸಲು ಕಾಯುತ್ತಿದ್ದಾರೆ.

ಬಿಜೆಪಿಗೆ ಬಲ ತುಂಬಿದ ಎಲ್.ಕೆ. ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಶಿಯವರನ್ನು ಮೋದಿಯವರು ಸೈಡ್ಲೈನ್ ಮಾಡಿ ಮೂಲೆಗೆ ಕೂಡಿಸಿದ್ದಾರೆ ಎನ್ನುವ ಕಳಂಕ ಮೋದಿಯವರ ಮೇಲಿತ್ತು. ಈ ವಿಷಯದಲ್ಲಿ ಸಂಘ ಪರಿವಾರದ ಹಿಂದುತ್ವವಾದಿಗಳಿಗೆ ಅಸಮಾಧಾನವಿತ್ತು. ಈ ಒಳಬೇಗುದಿಯನ್ನು ಕಡಿಮೆ ಗೊಳಿಸಲು, ರಾಜಕೀಯ ಗುರುವನ್ನೇ ಅಧಿಕಾರದ ಪಟ್ಟದಿಂದ ದೂರವಿಟ್ಟ ಆರೋಪದಿಂದ ಹೇಗಾದರೂ ಮುಕ್ತರಾಗಲು ಈ ಪ್ರಶಸ್ತಿ ಕೊಡಲಾಗಿದೆ ಎಂಬುದು ಅಘೋಷಿತ ಸತ್ಯ. 

ಬಾಬರಿ ಮಸೀದಿ ದ್ವಂಸದ ನಂತರ ಹಿಂದೂಗಳಲ್ಲಿ ಭಾರೀ ಜನಪ್ರೀಯತೆ ಗಳಿಸಿದ್ದ ಅಡ್ವಾಣಿಯವರು ವಾಜಪೇಯಿಯವರ ನಂತರ ಭಾರತದ ಪ್ರಧಾನಿ ಆಗಬೇಕಾಗಿತ್ತು. ಆದರೆ ಪಾಕಿಸ್ತಾನಕ್ಕೆ ಬೇಟಿಕೊಟ್ಟಿದ್ದ ಅಡ್ವಾಣಿಯವರು ಅದ್ಯಾವುದೋ ಕಾರಣಕ್ಕೆ ಆ ದೇಶದ ಪಿತಾಮಹ ಬುಟ್ಟೋರವರನ್ನು ಹೊಗಳಿದರು. ಸಂಘ ಪರಿವಾರಕ್ಕೆ ಅದೊಂದೇ ನೆಪ ಸಾಕಿತ್ತು. ಅಡ್ವಾಣಿ ಜಾಗದಲ್ಲಿ ನರೇಂದ್ರ ಮೋದಿಯವರನ್ನು ತರಬೇಕಿತ್ತು. ಅವತ್ತಿನಿಂದಲೇ ಅಡ್ವಾಣಿಯವರನ್ನು ಅಧಿಕಾರ ಕೇಂದ್ರದಿಂದ ಬೇರ್ಪಡಿಸಲಾಯ್ತು. ಉದ್ದೇಶಪೂರ್ವಕವಾಗಿ ನಿರ್ಲಕ್ಷಕ್ಕೊಳಗಾದ ಲೋಹಪುರುಷನಿಗೆ ತುಕ್ಕು ಹಿಡಿಯಿತು. ನಂತರ ವಯಸ್ಸಾಗಿದೆ ಎನ್ನುವ ಕಾರಣಕ್ಕೆ ರಥಯಾತ್ರೆಯ ಸಾರಥಿಗಳಾದ ಅಡ್ವಾಣಿ ಹಾಗೂ ಜೋಶಿಯವರನ್ನು ಸಂಪೂರ್ಣವಾಗಿ ಕಡೆಗಣಿಸಲಾಯ್ತು. ಇದರಲ್ಲಿ ಮೋದಿಯವರ ಕೈವಾಡ ಹಾಗೂ ಸಂಘದ ಬೆಂಬಲ ಎರಡೂ ಕಾರಣವಾಗಿದ್ದವು.

ರಾಜಕೀಯ ಅಂದ್ರೆ ಹೀಗೇನೆ. ರಾಮಮಂದಿರಕ್ಕಾದ ಹೋರಾಟದಲ್ಲಿ ಸಾವಿರಾರು ಜನ ಕರಸೇವಕರು ನೋವು ಸಾವಿಗೆ ತುತ್ತಾದರು. ಮಸೀದಿ ದ್ವಂಸದಿಂದಾಗಿ ಕೊಟ್ಯಾಂತರ ಮುಸ್ಲಿಮರು ನೊಂದುಕೊಂಡರು. ಮಂದಿರದ ಹೆಸರಲ್ಲಿ ಹಿಂದೂ ಮುಸ್ಲಿಂ ನಡುವೆ ಕಂದರ ಸೃಷ್ಟಿಸಿ ಧಾರ್ಮಿಕ ಸೌಹಾರ್ಧತೆಯನ್ನು ಹಾಳು ಮಾಡಿದ ಅಪಕೀರ್ತಿ ಅಡ್ವಾಣಿಯವರದ್ದಾಗಿದೆ. ಗೋದ್ರಾ ರೈಲು ದುರಂತ ನಡೆಯದೇ ಇದ್ದಿದ್ದರೆ, ಕರಸೇವಕರು ಸುಟ್ಟು ಸಾಯದೇ ಇದ್ದಿದ್ದರೆ ಗುಜರಾತ್ ನಲ್ಲಿ ಮುಸ್ಲಿಂ ನರಮೇಧ ನಡೆಯುತ್ತಲೇ ಇರಲಿಲ್ಲ. ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಕುಮ್ಮಕ್ಕು ಹಾಗೂ ಪ್ರಚೋದನೆಯಿಂದ ಸಹಸ್ರಾರು ಮುಸ್ಲಿಂ ಅಮಾಯಕರ ಹತ್ಯೆ ಆಯಿತು ಎಂಬುದು ಆಗಿನ ಸುದ್ದಿ. ನಿರ್ದಯವಾಗಿ ಇಂತಹ ಹತ್ಯಾಕಾಂಡ ಸಂಘಟಿಸಿದ್ದಕ್ಕಾಗಿ ಹಾಗೂ ಕರಸೇವಕರ ಸಾವಿಗೆ ಸೇಡು ತೀರಿಸಿಕೊಂಡಿದ್ದಕ್ಕಾಗಿ ಮೋದಿಯವರು ಸಮಸ್ತ ಸಂಘರಿವಾರದವರ ಕಣ್ಣಲ್ಲಿ ಮಹಾನಾಯಕರಾಗಿ ಹೊರಹೊಮ್ಮಿದರು ಎಂದು ಸಂಘಿಗಳೇ ಹೆಮ್ಮೆಯಿಂದ ಹೇಳುತ್ತಾರೆ. ದೇಶವನ್ನು ಆಳಲು ಮೋದಿಯಂತವರೇ ಸೂಕ್ತ ಎನ್ನುವುದನ್ನು ಮನಗಂಡ ಆರೆಸ್ಸೆಸ್ ಅವರ ದೆಹಲಿ ಆರೋಹಣಕ್ಕೆ ಅಡ್ಡವಾಗಬಹುದಾಗಿದ್ದ ಅಡ್ವಾಣಿಯವರನ್ನು ಅವರೋಹಣಕ್ಕೀಡು ಮಾಡುವ ನಿರ್ಧಾರ ತೆಗೆದುಕೊಂಡಿತು. ಅಡ್ವಾಣಿಯವರ ಬುಟ್ಟೋ ಪರ ಹೇಳಿಕೆ ಹಾಗೂ ವಯಸ್ಸು ನೆಪವಾಯಿತು. ಅಂದುಕೊಂಡಂತೆ ಅಡ್ವಾಣಿ ಮನೆಗೆ ಹೋದರೆ ಮೋದೀಜಿ ದೆಹಲಿಗೆ ಪದೋನ್ನತಿ ಪಡೆದರು. 

ಆದರೆ ರಾಮಭಕ್ತರ ಮನಸ್ಸಲ್ಲಿ ಇನ್ನೂ ಅಡ್ವಾಣಿ ಜೀವಂತವಾಗಿಯೇ ಇದ್ದಾರೆ. ಅಡ್ವಾಣಿಯವರ ನೇತೃತ್ವದ ರಾಮ ರಥಯಾತ್ರೆಯ ಪರಿಣಾಮದಿಂದಲೇ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದು ನಂಬಿದ್ದಾರೆ. ಸಂಘ ಪರಿವಾರದ ಕಾರ್ಯಕರ್ತರ ಮನದಿಂದ ಅಡ್ವಾಣಿಯವರನ್ನು ಸಂಪೂರ್ಣವಾಗಿ ಮರೆಮಾಚುವುದು ಮೋದಿಯವರಿಂದಲೂ ಸಾಧ್ಯವಿಲ್ಲ ಎನ್ನುವ ಅರಿವು ಸಂಘದವರಿಗೂ ಹಾಗೂ ಮೋದಿಯವರಿಗೂ ಇದೆ. ಆದ್ದರಿಂದ ಅಡ್ವಾಣಿಯವರಿಗೆ ಆದ ಚಾರಿತ್ರಿಕ ಅನ್ಯಾಯವನ್ನು ಸರಿಪಡಿಸಲು ಹಾಗೂ ಅದಕ್ಕೆ  ಮೋದಿಯವರೇ ಕಾರಣರು ಎನ್ನುವ ಕಳಂಕವನ್ನು ದೂರಮಾಡಲು ಈಗ ಭಾರತ ರತ್ನ ಪ್ರಶಸ್ತಿಯನ್ನು ಕೊಟ್ಟು ಗೌರವಿಸುವ ತಂತ್ರಗಾರಿಕೆ ಮೋದಿಯವರದ್ದಾಗಿದೆ. ಅಡ್ವಾಣಿಯವರನ್ನು ಮೂಲೆಗುಂಪು ಮಾಡಿದ ಪಾಪಪ್ರಜ್ಞೆಯಿಂದ ಬಳಲುತ್ತಿರುವ ಆರೆಸ್ಸೆಸ್ ಬೆಂಬಲವೂ ಇದಕ್ಕಿದೆ. ಅಡ್ವಾಣಿಯವರ ಮೇಲೆ ಅನುಕಂಪ ಹೊಂದಿದವರಿಗೆಲ್ಲಾ ಈ ಪ್ರಶಸ್ತಿ ಘೋಷಣೆಯಿಂದ ಸಂತಸವಾಗಿದೆ. 

ಈ ಭಾರತರತ್ನ ಘೋಷಣೆಯ ಹಿಂದೆ ಬಿಜೆಪಿ ಪಕ್ಷದ ರಾಜಕೀಯ ಮಹತ್ವಾಂಕಾಂಕ್ಷೆಯೂ ಅಡಗಿದೆ. ಲೋಕಸಭಾ ಚುನಾವಣೆ ಹತ್ತಿರದಲ್ಲಿದೆ. ಹಿಂದೂ ಮತಗಳನ್ನು ಕ್ರೂಢೀಕರಿಸಲು ರಾಮಮಂದಿರ ಎಷ್ಟು ಮುಖ್ಯವೋ ರಾಮರಥಯಾತ್ರೆಯ ರೂವಾರಿ ಸಹ ಅಷ್ಟೇ ಮುಖ್ಯವಾಗಿದ್ದಾರೆ. ಅದಕ್ಕಾಗಿ ಅಡ್ವಾಣಿಯವರಿಗೆ ಭಾರತರತ್ನ ಪ್ರಶಸ್ತಿ ಘೋಷಣೆ ಮಾಡುವ ಮೂಲಕ ಸಂಘ ಪರಿವಾರದಲ್ಲಿರುವ ಅಡ್ವಾಣಿ ಅಭಿಮಾನಿಗಳಲ್ಲಿ, ರಾಮಭಕ್ತರಲ್ಲಿ  ಭಾವತೀವ್ರತೆಯನ್ನು ಹೆಚ್ಚಿಸುವ ಯೋಜನೆ ಈ ಪ್ರಶಸ್ತಿ ಘೋಷಣೆಯ ಹಿಂದಿದೆ. ಅಡ್ವಾಣಿಯವರಿಗೆ ಈ ಪ್ರಶಸ್ತಿ ಕೊಡಬೇಕೆಂದಿದ್ದರೆ ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರಕಾರವೇ ಇತ್ತಲ್ಲಾ. ಆಗ ಕೊಡಬಹುದಾಗಿತ್ತಲ್ಲಾ. ಆದರೆ ಈಗ ಕೊಡುವ ಉದ್ದೇಶ ಇಷ್ಟೇ. ಮೋದಿಯವರ ಪ್ರಭಾವ ಕಡಿಮೆಯಾಗಿದೆ. ಅದನ್ನು ಹೆಚ್ಚು ಮಾಡಿ ಚುನಾವಣೆಯಲ್ಲಿ ಬಹುಮತ ಪಡೆಯಲು ರಾಮದೇವರ ಭಕ್ತಿ ಹಾಗೂ ಅಡ್ವಾಣಿಯವರ ಹೆಸರಿನ ಶಕ್ತಿ ಎರಡೂ ಬೇಕಾಗಿದೆ, ಅದಕ್ಕಾಗಿಯೇ ಈಗ ಚುನಾವಣೆಯ ಹೊಸ್ತಿಲಲ್ಲಿ ಈ ಪ್ರಶಸ್ತಿ ಘೋಷಿಸಲಾಗಿದೆ. ಇದೂ ಕೂಡಾ ಕೇಸರಿ ಪಕ್ಷದ ಚುನಾವಣಾ ಪ್ರಚಾರ ಗಿಮಿಕ್ಕಿನ ಭಾಗವೇ ಆಗಿದೆ. 

ತನ್ನೆಲ್ಲಾ ಅಧಿಕಾರ ಕಳೆದುಕೊಂಡು ಮಹಾಭಾರತದ ಭೀಷ್ಮನಂತೆ ಶರಶಯ್ಯೆಯಲ್ಲಿ ಮಲಗಿ ದೇಶಾದ್ಯಂತ ನಡೆಯುತ್ತಿರುವ ಕೋಮುಸಂಘರ್ಷ ಹಾಗೂ ಧರ್ಮದ್ವೇಷದ ಸಮರಕ್ಕೆ ಸಾಕ್ಷಿಯಾಗಿರುವ ಅಡ್ವಾಣಿಯವರು ತಮ್ಮ 92 ನೇ ವಯಸ್ಸಿನಲ್ಲಿ ಬಂದ ಪ್ರಶಸ್ತಿಯಿಂದ ಸ್ವಲ್ಪವಾದರೂ ನೆಮ್ಮದಿ ಪಡಲಿ. ಅವರು ಹಚ್ಚಿದ ಮತಾಂಧತೆಯ ಕಿಡಿ ದೇಶಾದ್ಯಂತ ಹೇಗೆಲ್ಲಾ ವಿಸ್ತರಿಸಿದೆ ಎಂಬುದನ್ನು ನೋಡುತ್ತಲೇ ಪ್ರಶಸ್ತಿಯನ್ನು ಸ್ವೀಕರಿಸಲಿ. ದ್ವೇಷರಾಜಕಾರಣ ಹಾಗೂ ಧರ್ಮಾಂಧತೆಯ ಪ್ರಚೋದನೆಗೆ ನಾಯಕತ್ವ ವಹಿಸಿದವರಿಗೂ ಭಾರತರತ್ನ ದಂತಹ ಅತ್ಯುನ್ನತ ಗೌರವ ಸಿಗಬಹುದು ಎನ್ನುವುದಕ್ಕೆ ಈ ಪ್ರಶಸ್ತಿ ಘೋಷಣೆ ಸಾಕ್ಷಿಯಾಗಲಿ.

- ಶಶಿಕಾಂತ ಯಡಹಳ್ಳಿ

03-02-2024

ಶುಕ್ರವಾರ, ಫೆಬ್ರವರಿ 2, 2024

ಕೇಂದ್ರದ ದಬ್ಬಾಳಿಕೆ ಹಾಗೂ ಪ್ರತ್ಯೇಕ ರಾಷ್ಟ್ರ ಬೇಡಿಕೆ

ತಹ ತಹ - 502

ಕೇಂದ್ರದ ದಬ್ಬಾಳಿಕೆ ಹಾಗೂ ಪ್ರತ್ಯೇಕ ರಾಷ್ಟ್ರ ಬೇಡಿಕೆ


ಪತ್ಯೇಕತೆಯ ಕೂಗು ಯಾವಾಗ ಬರುತ್ತೆ? ಯಾವಾಗ ಶೋಷಣೆ ತಾರತಮ್ಯ ಅತಿಯಾಗುತ್ತೋ ಆವಾಗ. ಹಾಗಾದಾಗ ಏನು ಮಾಡಬೇಕು? ಸಮಗ್ರತೆ ಕಾಪಾಡಲು ಹಾಗೆ ಕೂಗುವವರ ದ್ವನಿಯನ್ನು ಅಡಗಿಸಬೇಕು. ಹೌದು ಅದೇ ಆಗೋದು ಹಾಗೂ ಆಗ್ತಿರೋದು.

ಕೇಂದ್ರ ಸರಕಾರದಿಂದ ಎಲ್ಲದರಲ್ಲೂ ನಮ್ಮ ನಾಡಿಗೆ ಅನ್ಯಾಯ ಆಗುತ್ತಿರುವುದನ್ನು ನೋಡಿಯೂ ಕರ್ನಾಟಕದ ಅಷ್ಟೂ ಬಿಜೆಪಿ ಶಾಸಕರು ತಮ್ಮ ಪಂಚೇಂದ್ರಿಯಗಳನ್ನು ಮುಚ್ಚಿಕೊಂಡು ಸುಮ್ಮನಿರುವಾಗ ಕಾಂಗ್ರೆಸ್ಸಿನ ಏಕೈಕ ಸಂಸದ ಡಿಕೆ ಸುರೇಶ್ ರವರು ಒಂದೇ ಒಂದು ಪ್ರಶ್ನೆ ಎತ್ತಿದ್ದು ಸಂಸತ್ತಿನ ಒಳಗೆ ಹೊರಗೆ ಬೆಂಕಿ ಹಚ್ಚಿಬಿಟ್ಟಿತು. ನಕಲಿ ದೇಶಪ್ರೇಮಿಗಳಲಿ ಒಡಲುರಿ ಹೆಚ್ಚಿಸಿತು.

ಅವರು ಹೇಳಬಾರದ್ದೇನೂ ಹೇಳಿರಲಿಲ್ಲ. "ದಕ್ಷಿಣ ಭಾರತಕ್ಕೆ ಕೇಂದ್ರ ಸರಕಾರದಿಂದ ಭಾರಿ ಅನ್ಯಾಯ ಆಗುತ್ತಿದೆ. ಹೀಗೇ ಆದರೆ  ಪ್ರತ್ಯೇಕ ರಾಷ್ಟ್ರದ ಬೇಡಿಕೆ ಅನಿವಾರ್ಯವಾಗುತ್ತದೆ" ಅಂತಾ ಸಂಸದ ಸುರೇಶರವರ ಒಂದೇ ಒಂದು ಹೇಳಿಕೆ ಸಂಘ ಪರಿವಾರದಲ್ಲಿ ಸಂಚಲನವನ್ನುಂಟು ಮಾಡಿದೆ. ಮೊದಲೆ ಕಡ್ಡಿಯನ್ನು ಗುಡ್ಡ ಮಾಡಿ ಜನರನ್ನು ದಡ್ಡರಾಗಿಸುವಲ್ಲಿ ಎಕ್ಸಪರ್ಟ್ ಆಗಿರುವ ಸಂಘಿಗಳು ಇಂತಹ ಅವಕಾಶವನ್ನು ಸುಮ್ಮನೇ ಬಿಡಲು ಸಾಧ್ಯವೇ? "ನೋಡಿ ದೇಶವನ್ನು ವಿಭಜನೆ ಮಾಡುವುದೇ ಕಾಂಗ್ರೆಸ್ಸಿನ ಉದ್ದೇಶ. ಕಾಂಗ್ರೆಸ್ ದೇಶದ್ರೋಹಿ ಪಕ್ಷ" ಎನ್ನುವ ಅಪಪ್ರಚಾರ ಶುರುಮಾಡಿದರು. "ರಾಹುಲ್ ಗಾಂಧಿ ಭಾರತ್ ಜೋಡೋ ಅಂದರೆ ಕಾಂಗ್ರೆಸ್ ಸಂಸದ ಭಾರತ್ ತೊಡೋ ಎನ್ನುತ್ತಿದ್ದಾರೆ" ಎನ್ನುವ ಹೇಳಿಕೆಗಳು ಬಿಜೆಪಿ ಪಾಳಯದಿಂದ ತೂರಿ ಬಂದವು. 

ತಪ್ಪು.. ಮಹಾ ತಪ್ಪು. ಅಖಂಡ ಭಾರತವನ್ನು ಹೀಗೆ ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಅಂತಾ ಪ್ರತ್ಯೇಕ ದೇಶ ಮಾಡುವ ಯೋಚನೆಯೇ ಮಹಾಪ್ರಮಾದ. ಇದನ್ನು ಖಂಡಿಸೋಣ, ಇಂತಹ ಯೋಚನೆಯನ್ನು ವಿರೋಧಿಸೋಣ.‌ 

ಆದರೆ.. ನಿರಂತರವಾಗಿ ಆಗುತ್ತಿರುವ ತಾರತಮ್ಯವನ್ನು ಏನು ಮಾಡೋಣ? ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರದ ದಬ್ಬಾಳಿಕೆಯನ್ನು ಎಷ್ಟೂಂತ ಸಹಿಸೋಣ?  ದಕ್ಷಿಣ ಭಾರತದ ಆದಾಯ ಪಡೆದು ಉತ್ತರ ಭಾರತದ ರಾಜ್ಯಗಳಿಗೆ ಹಂಚುವ ಕೇಂದ್ರ ಸರಕಾರದ ಅನೀತಿಯನ್ನು ಹೇಗೆ ಒಪ್ಪಿಕೊಳ್ಳೋಣ?. ನಮಗೆ ಕೇಂದ್ರ ಸರಕಾರದ ಹಣ ಬೇಡ, ನಮ್ಮ ರಾಜ್ಯದಿಂದ ಕೇಂದ್ರದ ಬೊಕ್ಕಸಕ್ಕೆ ಜಮೆಯಾದ ಹಣದ ಪಾಲು ಕೊಡಿ ಎಂದು ಕರ್ನಾಟಕ ಕೇಳುತ್ತಿದ್ದರೂ ಕೊಡುತ್ತಿಲ್ಲವಲ್ಲಾ, ಇದು ತಪ್ಪಲ್ವಾ?

ಪ್ರತಿ ವರ್ಷ ಕರ್ನಾಟಕದಿಂದ 4 ಲಕ್ಷ ಕೋಟಿಯಷ್ಟು ತೆರಿಗೆ ಹಣ ಕೇಂದ್ರ ಸರಕಾರಕ್ಕೆ ಹೋಗುತ್ತಿದೆಯಲ್ಲಾ, ಅದರಲ್ಲಿ ವಾಪಸ್ ಕರ್ನಾಟಕಕ್ಕೆ ಶೇಕಡಾ 10 ರಷ್ಟನ್ನು ವಾಪಸ್ ಕೊಡಲು ಸತಾಯಿಸಲಾಗುತ್ತಿದೆಯಲ್ಲಾ ಇದು ತಪ್ಪಲ್ವಾ? ಅದೂ ರಾಜ್ಯ ಸರಕಾರ ಕೇಂದ್ರವನ್ನು ಬೇಡಿಕೊಳ್ಳಬೇಕು, ಗೋಗರಿಯಬೇಕು, ಪತ್ರಗಳನ್ನು ಬರೆಯುತ್ತಲೇ ಇರಬೇಕು. ಆದರೂ ಜಿಎಸ್ಟಿ ಪಾಲು ಕಾಲಮಿತಿಯಲ್ಲಿ ಬರುವುದಿಲ್ಲ. ಬಂದರೂ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಷ್ಟು ಯಾತಕ್ಕೂ ಸಾಲುವುದಿಲ್ಲ.  ಕಳೆದ ಸಲ ಬೊಮ್ಮಾಯಿ ನೇತೃತ್ವದ ಸರಕಾರ ಇದ್ದಾಗ " ಬೇಕಿದ್ದರೆ ಸಾಲ ಮಾಡಲು ಅನುಮತಿ ಕೊಡುತ್ತೇವೆಯೇ ಹೊರತು ಜಿಎಸ್ಟಿ ಕೇಳಬೇಡಿ" ಅಂತಾ ಕೇಂದ್ರ ಸರಕಾರ ಹೇಳಿದ್ದು ಪ್ರಮಾದ ಅಲ್ಲವೇ. 

ಕರ್ನಾಟಕ ಸರಕಾರ ಕೇಂದ್ರದ ಬೊಕ್ಕಸಕ್ಕೆ 100 ರೂ ತೆರಿಗೆ ಕಟ್ಟಿದರೆ ವಾಪಸ್ ಕರ್ನಾಟಕಕ್ಕೆ ಕೇಂದ್ರ ಕೊಡುವುದು ಕೇವಲ 13.9 ರೂಪಾಯಿಗಳಷ್ಟು ಚಿಲ್ಲರೆ ಹಣವನ್ನು ಅಂದರೆ ಕನ್ನಡಿಗರಿಗೆ ಸಿಟ್ಟು ಬಾರದೇ ಇರುತ್ತದಾ?  ಅದಕ್ಕಿಂತಾ ಬೇಸರದ ಸಂಗತಿ ಏನೆಂದರೆ 100 ರೂ ತೆರಿಗೆ ಪಾವತಿಸುವ ಉತ್ತರ ಭಾರತದ ರಾಜ್ಯಗಳಾದ ಉತ್ತರ ಪ್ರದೇಶಕ್ಕೆ 333.2 ರೂ. ಮದ್ಯಪ್ರದೇಶಕ್ಕೆ 279.1 ರೂ, ಬಿಹಾರಕ್ಕೆ 922.5 ರೂ. ರಾಜಸ್ತಾನಕ್ಕೆ 154.1 ರೂ. ಹೀಗೆ ಉತ್ತರ ಭಾರತದ ಬಹುತೇಕ ರಾಜ್ಯಗಳಿಂದ ಸಂಗ್ರಹಿಸಿದ ನೂರು ರೂ ತೆರಿಗೆಗೆ ಪ್ರತಿಯಾಗಿ ಎರಡು ಮೂರು ಪಟ್ಟು ಹೆಚ್ಚುವರಿಯಾಗಿ ಅವುಗಳಿಗೆ ವಾಪಸ್ ಕೊಡಲಾಗುತ್ತದೆ. ಆದರೆ ದಕ್ಷಿಣ ಭಾರತದ ರಾಜ್ಯಗಳಿಗೆ ಚಿಲ್ಲರೆ ಕಾಸು ಕೊಡಲಾಗುತ್ತದೆ. ಈ ರೀತಿಯ ತಾರತಮ್ಯ ಗೊತ್ತಾದರೆ ಕನ್ನಡಿಗರ ರಕ್ತ ಕುದಿಯದೇ ಇರುತ್ತದಾ? 

2024-25 ರ ಬಜೆಟ್ನಲ್ಲಿ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರಕಾರ ಮೀಸಲಿಟ್ಟಿದ್ದೇನೆ ಎಂದು ಘೋಷಿಸಿದ ಹಣ ಕೇವಲ 44,485 ಕೋಟಿ ಅಷ್ಟೇ. ಅದೇ ವಾರ್ಷಿಕವಾಗಿ ಕರ್ನಾಟಕದಿಂದ ಕೇಂದ್ರ ವಸೂಲಿ ಮಾಡಿದ್ದು 4 ಲಕ್ಷ ಕೋಟಿ ಹಣವನ್ನು. ಅಂದರೆ ಹೋಗಿದ್ದು 100% ಆದರೆ ಕೊಡುತ್ತೇವೆ ಎಂದಿದ್ದು ಕೇವಲ 11%. ಅದೂ ಸಹ ವಾಪಸ್ ಕೊಡುತ್ತಾರೆ ಎನ್ನುವ ಗ್ಯಾರಂಟಿ ಇಲ್ಲ. ಅದೂ ಸಹ ಕೇವಲ ಬಜೆಟ್ ಘೋಷಣೆ ಅಷ್ಟೇ. ಈ ಅನ್ಯಾಯ ನೋಡಿಯೂ ಕನ್ನಡಿಗರು ಸುಮ್ಮನಿರಬೇಕಾ? 


ಅದೇ ಉತ್ತರ ಪ್ರದೇಶಕ್ಕೆ ಹಂಚಿಕೆ ಮಾಡಲಾದ ಹಣ 2,18,816 ಕೋಟಿ. ಬಿಹಾರಕ್ಕೆ 1,22,685 ಕೋಟಿ,  ಮಧ್ಯಪ್ರದೇಶಕ್ಕೆ 95,752 ಕೋಟಿ. ಯಾಕೆ ಹೀಗೆ? ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣ ಭಾರತದ ರಾಜ್ಯಗಳಿಗೆ ಬಜೆಟ್ನಲ್ಲಿ ಹಂಚಿಕೆಯಾದ ಹಣ ಅತೀ ಕಡಿಮೆ. ಆದರೆ ಕೇಂದ್ರ ಸರಕಾರಕ್ಕೆ ಹೆಚ್ಚು ತೆರಿಗೆ ಹಣ ಸಂಗ್ರಹಿಸಿ ಕೊಡುತ್ತಿರುವುದು ದಕ್ಷಿಣ ಭಾರತದ ರಾಜ್ಯಗಳು. ದ್ರಾವಿಡ ನಾಡಿನ ರಾಜ್ಯಗಳಿಗೆ ಇಷ್ಟೊಂದು ತಾರತಮ್ಯ ಅನ್ಯಾಯ ಆಗುತ್ತಿದ್ದರೂ ಕೇಂದ್ರದ ದಬ್ಬಾಳಿಕೆಯನ್ನು ಸಹಿಸಿಕೊಂಡು ಸುಮ್ಮನಿರಬೇಕಾ?

ಕಳೆದ ಹತ್ತು ವರ್ಷದಲ್ಲಿ ಕೇಂದ್ರ ಸರಕಾರವು 110 ಲಕ್ಷ ಕೋಟಿಗಳಷ್ಟು  ಹಿಂದೆಂದೂ ಯಾರೂ ಮಾಡದಷ್ಟು ಸಾಲವನ್ನು ಮಾಡಿ ಅದರ ಹೊರೆಯನ್ನು ದೇಶದ ಮೇಲೆ ಹೊರೆಸಿದೆ. ಈಗ ಈ ಸಾಲಕ್ಕೆ ವಾರ್ಷಿಕವಾಗಿ ದೇಶದ ಒಟ್ಟು ಆದಾಯದ 20 % ಅಂದರೆ 11.9 ಲಕ್ಷ ಕೋಟಿ ಹಣವನ್ನು ಬಡ್ಡಿ ಕಟ್ಟಬೇಕಿದೆ. ಇಷ್ಟೆಲ್ಲಾ ಸಾಲ ಇದ್ದರೂ  ಕಾರ್ಪೋರೇಟ್ ಕಂಪನಿಗಳ ಲಕ್ಷಾಂತರ ಕೋಟಿ ಹಣ ಸಾಲಮನ್ನಾ ಮಾಡಿ ಕೇಂದ್ರ ಸರಕಾರ ದೇಶವನ್ನೇ ದಿವಾಳಿ ಅಂಚಿಗೆ ತಂದು ನಿಲ್ಲಿಸಿದೆ. 

ಅಷ್ಟೇ ಯಾಕೆ ಫೆ.1 ರಂದು ಮಂಡಿಸಲಾದ ಬಜೆಟ್ನಲ್ಲೂ ಮತ್ತೆ ಸಾಲ ಎತ್ತುವ ಯೋಜನೆಗೆ ಚಾಲನೆ ಕೊಡಲಾಗಿದೆ.  16.85 ಲಕ್ಷ ಕೋಟಿ ರೂಪಾಯಿಗಳ ವಿತ್ತೀಯ ಕೊರತೆ ಬಜೆಟ್ ಮಂಡಿಸಿದ್ದು 11.75 ಲಕ್ಷ ಕೋಟಿಗಳನ್ನು ಮಾರುಕಟ್ಟೆಯಿಂದ ಸಾಲ ಪಡೆದು ಕೊರತೆಯನ್ನು ತೀರಿಸಲಾಗುತ್ತದೆಯಂತೆ. 19 ಸಾವಿರ ಕೋಟಿ ಅಲ್ಪಾವಧಿ ಸಾಲ, 4.66 ಲಕ್ಷ ಕೋಟಿ ಸಣ್ಣ ಉಳಿತಾಯದ ಭದ್ರತೆ ಮೇಲಿನ ಸಾಲ. 16 ಸಾವಿರ ಕೋಟಿ ವಿದೇಶಿ ಸಾಲ, 3549 ಕೋಟಿ ರಿಜರ್ವ್ ಬ್ಯಾಂಕಿನ ಮೀಸಲು ನಿಧಿ ಮೇಲೆ ಸಾಲವನ್ನು ಪಡೆಯಲಾಗುವುದಂತೆ. ಅಂದರೆ ಮತ್ತೆ ಹೆಚ್ಚುವರಿ ಸಾಲ ಮತ್ತು ಹೆಚ್ಚುವರಿ ಬಡ್ಡಿ. ಬರುವ ಆದಾಯದಲ್ಲಿ ದೊಡ್ಡ ಪಾಲು ಬಡ್ಡಿ ಕಟ್ಟಲು ಬಳಸಿದರೆ ಅಸಲು ತೀರಿಸುವುದು ಯಾವಾಗ? ರಾಜ್ಯಗಳಿಗೆ ಕೊಡಬೇಕಾದ ಪಾಲು ಕೊಡುವುದು ಯಾವಾಗ? ಈ ದೇಶ ಸಾಲದ ಸುಳಿಯಿಂದ ಹೊರಬರುವುದು ಯಾವಾಗ?  ಕೇಂದ್ರ ಸರಕಾರ ತನ್ನ ವಿವೇಚನಾ ರಹಿತ ಯೋಜನೆಗಳಿಗಾಗಿ, ಕಾರ್ಪೋರೇಟ್ ಕುಳಗಳ ಹಿತರಕ್ಷಣೆಗಾಗಿ, ಬಂಡವಾಳಿಗರ ಸಾಲವಸೂಲಾತಿ ಮಾಡಲಾಗದ ಅಸಮರ್ಥತೆಗಾಗಿ ಮಾಡಿಕೊಂಡ ಸಾಲಕ್ಕೆ ದಕ್ಷಿಣ ಭಾರತದ ರಾಜ್ಯಗಳೇಕೆ ತಮ್ಮ ಆದಾಯದ ಬಹುಪಾಲನ್ನು ಕೊಡಬೇಕು? ಕರ್ನಾಟಕ ಏಕೆ ತನ್ನೆಲ್ಲಾ ಜಿಎಸ್ಟಿ ಆದಾಯವನ್ನು ಕೇಂದ್ರಕ್ಕೆ ದಾರೆಯರೆದು ಚಿಲ್ಲರೆ ಹಣಕ್ಕಾಗಿ ಭಿಕ್ಷೆ ಬೇಡಬೇಕು. ಇನ್ನೆಷ್ಟು ದಿನ ಕೇಂದ್ರದ ಲೂಟಿಕೋರತನವನ್ನು ರಾಜ್ಯ ಸಹಿಸಿಕೊಳ್ಳಬೇಕು.?

 ದಬ್ಬಾಳಿಕೆ ಮಿತಿ ಮೀರಿದರೆ ಪ್ರತಿರೋಧ ಸಹಜ ಪ್ರಕ್ರಿಯೆ. ಅದಕ್ಕೂ ಪ್ರತಿಫಲ ಸಿಗದೇ ಇದ್ದಾಗ ಆಕ್ರೋಶ ಹೆಚ್ಚಾಗದೇ ಇದ್ದೀತೆ? ಹಾಗೆ ಹುಟ್ಟಿದ ಆಕ್ರೋಶದ ಪರಿಣಾಮವೇ ಸಂಸರ ಡಿಕೆ ಸುರೇಶರವರ ಪ್ರತ್ಯೇಕ ರಾಷ್ಟ್ರದ ಬೇಡಿಕೆಯ ಮಾತು. 

ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರ ಆಗಬೇಕಾಗುತ್ತದೆ ಎನ್ನುವ ಆಕ್ರೋಶದ ಹಿಂದೆ ದಕ್ಷಿಣ ಭಾರತದ ರಾಜ್ಯಗಳಿಗೆ ಸಿಗಬೇಕಾದ ಪಾಲು ದೊರೆಯಬೇಕು ಹಾಗೂ ದಕ್ಷಿಣ ರಾಜ್ಯಗಳ ಹಣವನ್ನು ಉತ್ತರದ ರಾಜ್ಯಗಳಿಗೆ ಹಂಚಿಕೆ ಮಾಡುವ ಅನ್ಯಾಯ ನಿಲ್ಲಬೇಕು ಎನ್ನುವುದಾಗಿದೆ. ಸುರೇಶರವರ ಮಾತಿನ ಹಿಂದಿರುವ ರಾಜ್ಯದ ಪರವಾದ ಕಳಕಳಿಯನ್ನು ಅರ್ಥ ಮಾಡಿಕೊಂಡು ಆದ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ಎನ್ನುವುದು ರಾಜ್ಯದ ಸಮಸ್ತ ಸಂಸದರ ಒಕ್ಕೊರಲಿನ ಒತ್ತಾಯವಾಗಬೇಕಿತ್ತು. ಆದರೆ ಅವರೆಲ್ಲಾ ಮೋದಿ ಗುಲಾಮಗಿರಿಯನ್ನೇ ದೇಶ ಸೇವೆ ಎಂದುಕೊಂಡಿದ್ದರಿಂದಾಗಿ ಸುರೇಶರವರ ಪ್ರತ್ಯೇಕ ರಾಷ್ಟ್ರ ಬೇಡಿಕೆಯನ್ನೇ ದೊಡ್ಡದು ಮಾಡಿ ಕಾಂಗ್ರೆಸ್ ಪಕ್ಷವನ್ನೇ ದೇಶದ್ರೋಹಿ ಎಂದು ಸಾಬೀತುಪಡಿಸುವ ಪ್ರಯತ್ನದಲ್ಲಿದ್ದಾರೆ. 

ಇಷ್ಟಕ್ಕೂ ಸಂಸದ ಸುರೇಶರವರು ಹೇಳಿದ್ದಾದರೂ ಏನು? " ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರಕಾರ ಹಣ ಬಿಡುಗಡೆ ಮಾಡುತ್ತಿಲ್ಲ. ಜಿಎಸ್ಟಿ ಹಾಗೂ ತೆರಿಗೆಯ ಸೂಕ್ತ ಪಾಲನ್ನೂ ನೀಡುತ್ತಿಲ್ಲ. ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಿದೆ. ಇದೇ ಧೋರಣೆ ಮುಂದುವರಿಸಿದರೆ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಮುಂದಿಡಬೇಕಾಗುತ್ತದೆ" ಎಂದು ಕೇಂದ್ರ ಸರಕಾರದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅವರೇನೂ ಪ್ರತ್ಯೇಕ ರಾಷ್ಟ್ರ ಕೇಳಿಲ್ಲ, ಬೇಡಿಕೆ ಮುಂದಿಡಬೇಕಾಗುತ್ತದೆ ಅಂದಿದ್ದಾರಷ್ಟೇ. ಆದರೆ ಅವರ ಮಾತಿನಲ್ಲಿರುವ 'ಪ್ರತ್ಯೇಕ ರಾಷ್ಟ್ರದ ಬೇಡಿಕೆ' ಎನ್ನುವ ಮೂರು ಶಬ್ದಗಳನ್ನು ಮಾತ್ರ ತೆಗೆದುಕೊಂಡ ಬಿಜೆಪಿ ಪಕ್ಷ ತನ್ನ ದ್ವೇಷದಾಟ ಶುರುಮಾಡಿದೆ. ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಆಗಿದೆ ಎನ್ನುವುದನ್ನು ಮರೆಮಾಚಲು ದೇಶದ್ರೋಹದ ಟ್ರಂಪ್ ಕಾರ್ಡ್ ಬಳಸಲು ಮುಂದಾಗಿದೆ. ಕಾಂಗ್ರೆಸ್ ಸಹ ಬಿಜೆಪಿಯ ಪ್ರಹಾರಕ್ಕೆ ಆತಂಕಗೊಂಡು ಸಂಸದನ ಪ್ರತ್ಯೇಕ ರಾಷ್ಟ್ರ ಬೇಡಿಕೆಯ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ನಿರಾಕರಿಸಿದೆ.  ಅಂತರ ಕಾಪಾಡಿಕೊಂಡಿದೆ. 

ಸಂವಿಧಾನಕ್ಕೂ ಅಂಬೇಡ್ಕರ್ ಅವರಿಗೂ ಘೋರ ಅವಮಾನ ಮಾಡಿರುವ ಸುರೇಶ್ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತಾ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ ಜೋಶಿಯವರು ಸಂಸತ್ತಿನಲ್ಲಿ ಆಗ್ರಹಿಸಿದ್ದಾರೆ. ಸರಿ ಯಾವುದೇ ಕ್ರಮ ಕೈಗೊಳ್ಳಲಿ. ಹಾಗೆಯೇ ಸಂವಿಧಾನದಲ್ಲಿ ಒಕ್ಕೂಟ ವ್ಯವಸ್ಥೆಗೆ ಪ್ರಾಧಾನ್ಯತೆ ಕೊಡಲಾಗಿದೆಯಲ್ಲವೇ.  ಆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿರುವ ಕೇಂದ್ರ ಸರಕಾರದ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು. ನ್ಯಾಯವಾಗಿ ಕರ್ನಾಟಕಕ್ಕೆ ಸಿಗಬೇಕಾದ ತೆರಿಗೆ ಪಾಲನ್ನೂ ಕೊಡದೇ ವಂಚಿಸುತ್ತಿರುವ ಮೋದಿ ಸರಕಾರದ ವಿರುದ್ಧ ಯಾರು ಕ್ರಮ ಕೈಗೊಳ್ಳಬೇಕು. ಕೇಂದ್ರ ಸರಕಾರವು ಒಕ್ಕೂಟ ವ್ಯವಸ್ಥೆಗೆ ಗೌರವ ಕೊಟ್ಟು ತಾರತಮ್ಯ ಮಾಡದೇ ಇದ್ದಿದ್ದರೆ, ರಾಜ್ಯದ ಪಾಲನ್ನು ಕೊಟ್ಟಿದ್ದರೆ ಈ ರೀತಿ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಕೇಳಿ ಬರುತ್ತಿರಲಿಲ್ಲವಲ್ಲಾ. ಇಂತಹ ಹೇಳಿಕೆ ಬಂದಿದ್ದಕ್ಕೆ ಕೇಂದ್ರದ ಮಲತಾಯಿ ಧೋರಣೆ ಹಾಗೂ ನಿರ್ಲಕ್ಷವೇ ಕಾರಣವಲ್ಲವೇ. ಮೊದಲು ಕ್ರಮ ಕೈಗೊಳ್ಳಬೇಕಾದದ್ದು ಕಾರಣಕ್ಕೆ ಹೊರತು ಪರಿಣಾಮಕ್ಕಲ್ಲ. 

"ಅನುದಾನ ಹಂಚಿಕೆಯಲ್ಲಿ ಅನ್ಯಾಯವಾಗಿದ್ದರೆ ಬಜೆಟ್ ಚರ್ಚೆ ವೇಳೆ ಮಾತಾಡಬೇಕು" ಎಂದು ಮಾನ್ಯ ದೇವೇಗೌಡರು ಸಲಹೆ ಕೊಟ್ಟಿದ್ದಾರೆ. ಆದರೆ ಮಾತಾಡುವವರು ಯಾರು? ಇವರ ಮೊಮ್ಮಗ ಪ್ರಜ್ವಲ್ ರವರನ್ನೂ ಸೇರಿಸಿ ಕರ್ನಾಟಕದ ಯಾವುದಾದರೂ ಸಂಸದರು ಕೇಂದ್ರದ ತಾರತಮ್ಯದ ಬಗ್ಗೆ ಇಲ್ಲಿವರೆಗೂ ಚರ್ಚಿಸಿದ್ದಾರಾ? ಬಿಜೆಪಿಯ  ಇಪ್ಪತ್ತಾರು ಸಂಸದರಲ್ಲಿ ಒಬ್ಬರಾದರೂ ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಬರಬೇಕಾದ ಪಾಲಿಗಾಗಿ ಯಾವತ್ತಾದರೂ ಒತ್ತಾಯಿಸಿದ್ದಾರಾ? ಈ ಹಿಂದೆ ರಾಜ್ಯದಲ್ಲಿ ಪ್ರವಾಹ ಬಂದಾಗ ರಾಜ್ಯದಲ್ಲೂ ಬಿಜೆಪಿ ಸರಕಾರವೇ ಇದ್ದಾಗ ಈ ಯಾವ ಸಂಸದರೂ ಕೇಂದ್ರದ ಪರಿಹಾರಕ್ಕೆ ಆಗ್ರಹಿಸಲಿಲ್ಲ ಹಣವನ್ನೂ ತರಲಿಲ್ಲ. ಈಗ ರಾಜ್ಯದಲ್ಲಿ ತೀವ್ರ ಬರ ಬಿದ್ದಿದೆ. ಈಗಿನ ಆಡಳಿತಾರೂಢ ಸರಕಾರ ಬರ ಪರಿಹಾರ ಕೊಡಿ ಎಂದು ಕೇಂದ್ರಕ್ಕೆ ಕೇಳುತ್ತಲೇ ಇದೆ. ಇಲ್ಲಿವರೆಗೂ ಒಂದು ಪೈಸೆ ಕೂಡಾ ಹಣ ಬಂದಿಲ್ಲ. ಈ ಯಾವ ಸಂಸದರೂ ಒತ್ತಾಯಿಸಲಿಲ್ಲ. ವಿಷಯ ಹೀಗಿರುವಾಗ ಬಜೆಟ್ ಮೇಲೆ ನಡೆವ ಚರ್ಚೆಯಲ್ಲಿ ಕರ್ನಾಟಕದ ಸಂಸದರು ಬಾಯಿಬಿಡಲು ಸಾಧ್ಯವೇ ಇಲ್ಲ. ಕರ್ನಾಟಕಕ್ಕೆ ತಾರತಮ್ಯ ತಪ್ಪುವುದಿಲ್ಲ.

ಆಕ್ರಮಣಕೋರ ಸಂಘ ಪರಿವಾರದ ನಾಯಕತ್ವಕ್ಕೆ ವಿಸ್ತರಣಾವಾದದಲ್ಲಿ ಅಪಾರ ನಂಬಿಕೆ. ಪಾಕಿಸ್ತಾನ ಅಪಘಾನಿಸ್ಥಾನ ಬಾಂಗ್ಲಾ ಸೇರಿದಂತೆ ಭಾರತದ ಅಕ್ಕಪಕ್ಕದ ದೇಶಗಳನ್ನೆಲ್ಲಾ ಸೇರಿಸಿ ಅಖಂಡ ಭಾರತ ಕಟ್ಟುವ ಕನಸು ಸಂಘದ್ದಾಗಿದೆ. ಇಂತಹುದರಲ್ಲಿ ಪ್ರತ್ಯೇಕತೆಯ ಕೂಗು ಬಂದರೆ ಸುಮ್ಮನಿರಲು ಸಾಧ್ಯವೇ? ಯಥಾ ಪ್ರಕಾರ ಸಂಘದ ಸಾಕು ಕೂಸುಗಳಾದ ಕೂಗುಮಾರಿ ಮಾಧ್ಯಮಗಳು ದೇಶ ಇಬ್ಬಾಗವಾಗಿ ಹೋಯಿತೇನೋ ಎನ್ನುವ ರೇಂಜಿಗೆ ಬಾಯಿಬಡಿದುಕೊಳ್ಳುತ್ತಿವೆ. ಆದರೆ ಯಾರೂ ಕೇಂದ್ರ ಸರಕಾರದಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ ಎಂದು ದ್ವನಿ ಎತ್ತುತ್ತಿಲ್ಲ. ನಮ್ಮ ರಾಜ್ಯದ ಹಣವನ್ನು ಪಡೆದು ಪಾಲನ್ನು ಕೊಡದೇ ವಂಚಿಸಲಾಗುತ್ತಿದೆ ಎಂಬುದನ್ನು ವಿರೋಧಿಸುತ್ತಿಲ್ಲ. ಕೇಂದ್ರದ ದಬ್ಬಾಳಿಕೆಯಿಂದ ನಲುಗಿರುವ ಕನ್ನಡಿಗರೂ ಪ್ರತಿಭಟಿಸುತ್ತಿಲ್ಲ. ಎಲ್ಲರೂ ಅಖಂಡ ಭಾರತದ ಏಕತೆ ಬಗ್ಗೆ ಮಾತಾಡುತ್ತಿದ್ದಾರೆ. ಆದರೆ ಒಕ್ಕೂಟ ವ್ಯವಸ್ಥೆಯ ಮೇಲೆ ಕೇಂದ್ರ ಸರಕಾರದ ದಮನದ ಬಗ್ಗೆ ಹೇಳುತ್ತಿಲ್ಲ. ಗಟ್ಟಿ ದ್ವನಿಯಲ್ಲಿ ಹೇಳಿದರೆ ಎಲ್ಲಿ ದೇಶದ್ರೋಹದ ಪಟ್ಟ ಗಟ್ಟಿಯಾಗುತ್ತದೋ ಎನ್ನುವ ಆತಂಕ. ಹೀಗೇ ಆದರೆ ಕರ್ನಾಟಕವು ಕೇಂದ್ರದ ದಾಳಿಕೋರರಿಗೆ ಸುಲಭದ ತುತ್ತಾಗುತ್ತದೆ. ನಕಲಿ ರಾಷ್ಟ್ರೀಯವಾದದ ಕೆಸರಲ್ಲಿ ಕರ್ನಾಟಕದ ಅಸ್ಮಿತೆಯೇ ಹೂತುಹೋಗುತ್ತದೆ. 

ಸಂಸದ ಸುರೇಶರವರ ಪ್ರತ್ಯೇಕ ದೇಶದ ಬೇಡಿಕೆ ತಪ್ಪಾಗಿ ಗೋಚರಿಸಬಹುದು ಆದರೆ ಅದರ ಹಿಂದಿರುವ ಆತಂಕ ಆಕ್ರೋಶದಲ್ಲಿ ಮಾತ್ರ ತಪ್ಪಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಮೇಲೆ ಕೇಂದ್ರ ಸರಕಾರದ ದಾಳಿ ಹೀಗೆಯೇ ಮುಂದುವರೆದರೆ ದಕ್ಷಿಣ ಭಾರತದ ರಾಜ್ಯಗಳ ದಾಸ್ಯತನಕ್ಕೆ ಮುಕ್ತಿಯೆಂಬುದಿಲ್ಲ.

- ಶಶಿಕಾಂತ ಯಡಹಳ್ಳಿ
  02-02-2024