ಗುರುವಾರ, ಡಿಸೆಂಬರ್ 19, 2013

ಪ್ರೇಮ ಗೀಮ ಇತ್ಯಾದಿ... :











ಕಾವ್ಯ ಹುಟ್ಟೋದೆ
ವಿರಹದಲ್ಲಿ
ಕವಿತೆಗೆಲ್ಲಿದೆ ಸಮಯ
ಪ್ರೇಮದಲ್ಲಿ..
*        *       *

ಎಲ್ಲರೂ ಮಾಡ್ತಾರಂತ ನಾನೂ ಪ್ರೀತಿಸಿದೆ
ಸಿಹಿಜೀನು ಸಿಕ್ಕಿತೆಂದು ಸುಖಿಸಿದೆ
ಜೇನುಗೂಡಿಗೆ ಹಾಕಿದ್ದೆ ಕೈ
ಗಾಸಿ ಆಯ್ತು ಮನಸು ಮೈ...
*        *       *

ಆಕೆ ಹೇಳಿದಂತೆ ನಾ ಕೇಳಿದರವಳು
ಸೂಜಿಮಲ್ಲಿ....
ಮರಳಿ ಪ್ರಶ್ನಿಸಿದ ಮರುಕ್ಷಣ
ನಾಗವಲ್ಲಿ...
ಈ ಸತ್ಯ ಗೊತ್ತಿದ್ದೂ  ಪ್ರೀತಿಸುವ ನನಗೆ
ದಯವಿಟ್ಟು ಗುಂಡಿಕ್ಕಿ ಕಂಡಕಂಡಲ್ಲಿ.....
*        *       *

ಹುಡುಗಿಯರು ಬಲು ಕೆಟ್ಟ ಬಾಡಿಗೆದಾರರು
ಮೊದಲು ನಿಮ್ಮ ಹೃದಯವನ್ನು ಆಕ್ರಮಿಸಿಕೊಳ್ಳುತ್ತಾರೆ
ಸುಲಭವಾಗಿ ಜಾಗ ಖಾಲಿ ಮಾಡುವುದಿಲ್ಲ...
ಎಂದೂ ಬಾಡಿಗೆಯನ್ನೂ ಕೊಡುವುದಿಲ್ಲ....
ಖಾಲಿ ಮಾಡಿ ಹೋಗುವಾಗ ಹೃದಯ ಒಡೆದು ಹೋಗುತ್ತಾರೆ..



ಬಾಪು ಮತ್ತು ನಾವು :












ಬಾಪು ನೀನು ಇದ್ದೀಯಾ
ಅನ್ಯಾಯದ ವಿರುದ್ಧ
ಉಪವಾಸ ಸೆರೆವಾಸ ಎಂದೆಲ್ಲಾ
ಹೋರಾಡಿ ಎಗರಾಡಿದೆ
ಸಿಕ್ಕಿದ್ದೇನು? ಬರೀ ಬೊಕ್ಕು ತಲೆ.

ನೋಡು... ನಾವೂ ಇದ್ದೇವೆ
ಅನ್ಯಾಯದ ಜೊತೆ ರಾಜಿ ಮಾಡಿಕೊಂಡು
ಅದನ್ನೇ ಪರಮ ಸುಖ ಎಂದುಕೊಂಡು
ಮನಸ್ಸು ಕೊಂದುಕೊಂಡು
ದಕ್ಕಿಸಿಕೊಂಡಿದ್ದೇವೆ ಬದಕುವ ಕಲೆ.

ಬಾಪೂ ನೀನೂ ಇದ್ದೀಯಾ
ಬದುಕಿನಾದ್ಯಂತ  ಒಂದೇ ಒಂದು
ಈಸ್ಟ್ ಇಂಡಿಯಾ ಕಂಪನಿ ಒದ್ದೊಡಿಸಲು
ಆಫ್ರಿಕಾದಿಂದ ಬಂದೆ ಸಂಗ್ರಾಮ ಎಂದೆ...
ಸಿಕ್ಕಿದ್ದೇನು? ಎದೆಗೆ ಗೋಡ್ಸೆ ಗುಂಡು.

ನೋಡು ನಾವು ಇದ್ದೇವೆ
ದಿನ ನಿತ್ಯ ವಿದೇಶಿ ಕಂಪನಿಗಳಿಗೆ
ರತ್ನಗಂಬಳಿ ಹಾಕಿ ಸ್ವಾಗತಿಸಿ
ಐಟಿ ಬಿಟಿಗಳಲ್ಲಿ ನಮ್ಮ ಮಕ್ಕಳನ್ನು ಜೀತಕ್ಕಿರಿಸಿ
ಚೆನ್ನಾಗಿದ್ದೇವೆ ಶೋಷಕರೊಂದಿಗೆ ಸಂಧಾನ ಮಾಡಿಕೊಂಡು.

ಅದಕ್ಕೆ ನೀನು ಹುತಾತ್ಮನಾದೆ
ಲೋಕಕ್ಕೆ ಮಹಾತ್ಮನಾದೆ..
ನಿನ್ನ ಪಥವರಿಯದ ನಾವು
ಪಾಪಾತ್ಮರಾದೆವು ನಮ್ಮನ್ನು ನಾವೇ ಮಾರಿಕೊಂಡೆವು...
ಕ್ಷಮಿಸಿಬಿಡು ತಾತಾ... ನಿನ್ನಯ ಮಕ್ಕಳ ಮಹಾಪರಾಧವನ್ನು...

ಆಗ ಮುಂದೆ ಗುರಿಯಿತ್ತು
ಹಿಂದೆ ನಿನ್ನಂತ ಗುರುವಿದ್ದ.
ಈಗ ನಮಗೆ ಗೊತ್ತೂ ಇಲ್ಲಾ ಗುರಿಯೂ ಇಲ್ಲ.
ಚಿತ್ತ ಬಂದತ್ತ ಸಾಗಿದೆ ಬದುಕು ಮತ್ತೆ ಗುಲಾಮಗಿರಿಯತ್ತ
ನೀನು ಮತ್ತೆ ಹುಟ್ಟಿಬರುವ ಕಾಲ ಸನ್ನಿಹಿತವಾಗಿದೆ ತಯಾರಾಗಿರು.




ಬುಧವಾರ, ಡಿಸೆಂಬರ್ 18, 2013

ದಾಂಪತ್ಯ ಗೀತೆ :














ಹೊರಟಿರುವೆ ಹೋಗಿಬಿಡು ತಡೆಯಲಾರೆ
ಹೊರಡುವ ಮುಂಚೆ ಒಂದು ಮಾತು
ಹೇಳಿ  ಹೋಗು ಕಾರಣ.

ಮನಸು ಬಾರ, ಬದುಕಿನ ಪಯಣ ಬಲು ದೂರ
ನಡುಮಧ್ಯದಲ್ಲೆದ್ದು ಹೋಗುವುದಾದರೆ ಹೋಗಿಬಿಡು
ಹೇಳಿ  ಹೋಗು ಕಾರಣ.

ಆಡುತಿರುವೆವು ಒಲವಿನಾಟ, ದಾಂಪತ್ಯದ ಸವಿಯೂಟ
ಆಟ ಕೆಡಿಸಿ  ಊಟ ಬಿಸಾಕಿ ಹೋಗುವುದಾದರೆ ಹೋಗಿಬಿಡು
ಹೇಳಿ  ಹೋಗು ಕಾರಣ.

ಬದುಕು ನೆರಳುಬೆಳಕಿನಾಟ, ಚಿತ್ತ ಬಂದತ್ತ  ಓಟ
ನೆರಳ ನಂಬಿ ಬೆಳಕ ನಂದಿಸಿ ಹೋಗುವುದಾದರೆ ಹೋಗಿಬಿಡು
ಹೇಳಿ  ಹೋಗು ಕಾರಣ.

ಚಿತ್ರ ನಾನು ಚಿತ್ರ ನೀನು, ಚಿತ್ತವಿಲ್ಲದ ಚಿತ್ರ ಉಂಟೆ
ಚಿತ್ತ ಬಂದತ್ತ ಹೊರಡುವುದಾದರೆ ಹೋಗಿಬಿಡು
ಹೇಳಿ  ಹೋಗು ಕಾರಣ.

ಕಡಲು ಹಡಗಿನ ಬಂಧ ನಮ್ಮ ಸಂಬಂಧ
ಅಲೆಗಳ ಹೊಡೆತಕ್ಕೆ ಹೆದರಿ ಹೊರಡುವುದಾದರೆ ಹೋಗಿಬಿಡು
ಹೇಳಿ  ಹೋಗು ಕಾರಣ.

ಬಾಳ ಬಂಡಿಯ ಗಾಳಿಗಳು ನಾವು ಜೊತೆ ಓಡಲೇ ಬೇಕು
ಬಂಡಿ ಬಿಟ್ಟು ಇರುವುದೇ ಗಾಲಿ, ಹೋಗುವುದಾದರೆ ಹೋಗಿಬಿಡು
ಹೇಳಿ  ಹೋಗು ಕಾರಣ.

ದೇಹ ನಾನು ಪ್ರಾಣ ನೀನು ಬಿಟ್ಟು ಇರಲುಂಟೆ
ಅಗಲಿದರೆ ಕೊನೆಗುಳಿವುದು ಸಾವು, ಹೋಗುವುದಾದರೆ ಹೋಗಿಬಿಡು
ಹೇಳಿ  ಹೋಗು ಕಾರಣ.


ಮಂಗಳವಾರ, ಡಿಸೆಂಬರ್ 17, 2013

ಏನಿದೆ.... ಏನಿದೆ... ನಿನ್ನ ಮನದಲಿ ಏನಿದೆ







ಹೀಗೊಂದು ಸಿನೆಮಾ ಹಾಡು...

ಏನಿದೆ.... ಏನಿದೆ... ನಿನ್ನ ಮನದಲಿ ಏನಿದೆ
ಕೇಳಲು ಕಾತರ ಕಸಿವಿಸಿ ಮನದಲಿ ಕಾದಿದೆ. II II

ಅರಿಯದೇ ಮಾಡಿದ ತಪ್ಪಿಗೆ, ಶಿಕ್ಷೆ ಯಾಕೆ ಪ್ರೀತಿಗೆ
ಏನೋ ಕಳೆದ  ಭಾವನೆ, ತಾಳೆನು ನಾನೀ ಯಾತನೆ,
ಮಾತಿಗೂ ಸೂತಕ ತಾಗಿದೆ, ಮೌನವೇ ಮಾತಾಗಿದೆ
ಬದುಕು ಬೇಸರವಾಗಿದೆ, ನೀ ಸಿಗದೇ ಹೋದರೆ ಸಾವಿದೆ.  II II

ತಿಂಗಳ ಬೆಳಕಲಿ ತಂಪಿಲ್ಲ, ಕೋಗಿಲೆ ದನಿಯಲಿ ಇಂಪಿಲ್ಲ
ಮಿಣುಗುವ ಕಣ್ಣಲಿ ಹೊಳಪಿಲ್ಲ, ಹೊಳೆಯುವ ಮುಖದಲಿ ಕಳೆಯಿಲ್ಲ.
ನಿನಗೇನು ಬೇಕು ಹೇಳದೆ... ಅರಿಯುವುದ್ಹೇಗೆ ತಿಳಿಯದೇ....
ಕಲಕಲರವ ಮನದಿ ಕಾಡಿದೆ, ಅಲ್ಲೊಂದು ಶೋಕದ ಹಾಡಿದೆ II II

ಮೌನದ ಕಡಲಲಿ ತೇಲಿ ಬರಲಿ ಮಾತೆಂಬ ಹಾಯಡೋಣಿ.
ದಿಕ್ಕೆಟ್ಟ ಬದುಕಿಗೆ ಸಿಕ್ಕಿ ಬಿಡಲಿ ಮೇಲೇರುವ ಏಣಿ.
ಮಾತೊಂದು ನುಡಿದು ಬಿಡು ಮುತ್ತೊಂದು ಉದುರಿ ಬಿಡಲಿ
ನಕ್ಕಾರ ನಕ್ಕು ಬಿಡು ಬೆಳಕೊಂದು ಮೂಡಿ ಬರಲಿ II II

                                                   -ಶಶಿಕಾಂತ ಯಡಹಳ್ಳಿ

(ಸಂದರ್ಭ : ಮುನಿಸಿಕೊಂಡು ಮಾತುಬಿಟ್ಟು ಮೌನವೃತ ಕೈಗೊಂಡ 
ಹೆಂಡತಿ / ಪ್ರಿಯತಮೆಯ ಕುರಿತು ಆತ ಹಾಡುವ ಹಾಡು )







ಗುರುವಾರ, ಡಿಸೆಂಬರ್ 12, 2013

ನಾನೊಬ್ಬ ಮನುಷ್ಯ:




ಕ್ಷಮಿಸಿ, ನನ್ನಿಂದ ಹೆಚ್ಚಿಗೇನೂ ಬಯಸಬೇಡಿ,
ಅತಿವೃಷ್ಟಿಯಲ್ಲಿ ಊರಿಗೆಲ್ಲಾ ಕೊಡೆ ಹಿಡಿಯಲಾರೆ
ಹಾಗಂತ ನನ್ನ ಸೂರಲ್ಲಿ ಒಂದಿಷ್ಟು ನಿರಾಶ್ರಿತರಿಗಾಶ್ರಯ ಕೊಡದೇ ಇರಲಾರೆ.

ಕ್ಷಮಿಸಿ, ನನ್ನಿಂದ ಹೆಚ್ಚಿನದೇನನ್ನೂ ನಿರೀಕ್ಷಿಸಬೇಡಿ
ಅನಾವೃಷ್ಟಿಯಲ್ಲಿ  ಹಸಿದವರಿಗೆಲ್ಲಾ ಊಟ ನೀಡಿ ಸಾಕಲಾರೆ
ಹಾಗಂತ ನನ್ನ ಊಟದಲ್ಲೊಂದಿಷ್ಟು ಪಾಲು ಹಸಿದವರಿಗೆ ಕೊಡದೇ ಇರಲಾರೆ.

ಕ್ಷಮಿಸಿ, ನನ್ನಿಂದ ಯಾವುದೇ ಕ್ರಾಂತಿ ಅಪೇಕ್ಷಿಸಬೇಡಿ
ಕೆಟ್ಟು ಕೊಳಕಾದ ದುಷ್ಟ ವ್ಯವಸ್ಥೆಯನ್ನು ಬದಲಾಯಿಸಲಾರೆ
ಆದರೆ ದಮನಿತರ ಕಣ್ಣೀರು ವರೆಸಿ ಸಂತೈಸದೇ ಇರಲಾರೆ.

ಹಾಗಂತ ನಾನೇನು ತ್ಯಾಗಿಯೂ ಅಲ್ಲ, ಅವಧೂತನೂ ಅಲ್ಲ
ನೊಂದವರ  ಅಪೇಕ್ಷೆ ಈಡೇರಿಸುವ ಸರ್ವಶಕ್ತನೂ ಅಲ್ಲ.
ಕೇವಲ ನಾನೊಬ್ಬ ಮನುಷ್ಯ, ಮಾನವೀಯತೆ ಮರೆತು ಇರಲಾರೆ.