ಶುಕ್ರವಾರ, ನವೆಂಬರ್ 25, 2016

ತಹ ತಹ.... 62 ಮೋದಿಪಡೆ ಗೆದ್ದಿತು.... ಜನತೆ ಖೆಡ್ಡಾಕೆ ಬಿದ್ದಿತು...




ದೇಶಾದ್ಯಂತ ದಲಿತರು ತಮ್ಮ ಮೇಲಿನ ದಮನದ ವಿರುದ್ದ ಸಾವಕಾಶವಾಗಿ ಜಾಗ್ರತರಾಗಿ ಆಹಾರದ ಆಯ್ಕೆ ಹಾಗೂ ಭೂಮಿಯ ಹಕ್ಕಿಗಾಗಿ ಆಗ್ರಹಿಸಿ ಸಂಘಟಿತ ಪ್ರತಿಭಟನೆಗೆ ತೊಡಗಿಸಿಕೊಂಡಿದ್ದರು. ವೇಮುಲ ಆತ್ಮಹತ್ಯೆ ಹಾಗೂ ಕನ್ಹಯ್ಯಲಾಲ್ ಬಂಧನದ ಪ್ರಕರಣಗಳು ಸಂಘ ಪರಿವಾರದ ಮುಖವಾಡಗಳನ್ನು ಬಯಲಿಗೆಳೆದಿದ್ದವು. ಸಂಘಿಗಳ ಅಂಗಗಳು ಗೋರಕ್ಷಣೆಯ ಹೆಸರಲ್ಲಿ ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲೆ ಹಲ್ಲೆ ಹಾಗೂ ಹತ್ಯೆ ನಡೆಸಿದ್ದು   ಭಕ್ತೇತರ ದೇಶವಾಸಿಗಳಲ್ಲಿ ಅಸಹನೆಯನ್ನು ಹುಟ್ಟಿಸಿತ್ತು. ಚುಣಾವಣಾ ಪೂರ್ವದಲ್ಲಿ  ವಿದೇಶಿ ಬ್ಯಾಂಕಿನಿಂದ ಭಾರತೀಯರ ಕಪ್ಪು ಹಣ ತಂದು ದೇಶದ ಪ್ರತಿಯೊಬ್ಬರ ಬ್ಯಾಂಕ್ ಅಕೌಂಟಲ್ಲಿ ಹದಿನೈದು ಲಕ್ಷ ಹಣ ಜಮಾ ಮಾಡುತ್ತೇನೆಂಬ ಮೋದಿಯವರ ಭರವಸೆ ಈಡೇರದೇ ಬಿಜೆಪಿಗೆ ಓಟು ಹಾಕಿದ ಬಹುಜನರು ಭ್ರಮನಿರಸನ ಗೊಂಡಿದ್ದರು. ಬೆಲೆ ಏರಿಕೆ ನಿಯಂತ್ರಣಕ್ಕೆ ಬರದಂತಾಗಿತ್ತು. ಮೋದಿ ಸೃಷ್ಟಿಸಿದ ಹಾಗೂ ಅವರ ಭಕ್ತರು ಹುಟ್ಟಿಸಿದ ದೇಶಭಕ್ತಿಯ ಉನ್ಮಾದ ಮೇಲಿನ ಎಲ್ಲಾ ತಾಪತ್ರಯಗಳನ್ನು ಪರಿಹರಿಸಲು ಸಾಲದಾಯಿತು. 

ಇಂತಾ ಸಂದರ್ಭದಲ್ಲಿ ಮೋದಿ ಮಹಾತ್ಮರು ಬಿಟ್ಟ ನೋಟು ನಿಷೇಧದ ಬ್ರಹ್ಮಾಸ್ತ್ರ ಮೇಲಿನ ಎಲ್ಲವನ್ನೂ ಜನರ ತಲೆಯಿಂದ ಅಳಿಸಿಹಾಕಿತು. ಜನ ತಮ್ಮ ಅಸಮಾಧಾನವನ್ನೆಲ್ಲಾ ಬದಿಗಿಟ್ಟು ಇದ್ದ ಬದ್ದ ಹಳೆ ನೋಟುಗಳನ್ನು ಹೊಸದಕ್ಕೆ ಬದಲಾಯಿಸಲು ಸರತಿ ಸಾಲಲ್ಲಿ ನಿಂತು ತಮ್ಮ ಶಕ್ತಿ ಸಮಯವನ್ನು ವ್ಯಯಿಸತೊಡಗಿದರು. ಇನ್ನೇನು ಕಪ್ಪು ಹಣವರಲ್ಲಾ ಹೊರಗೆ ಬಂದು ಸುಲಿಗೆ ಮಾಡಿ ಶ್ರೀಮಂತರಾದವರೆಲ್ಲಾ ಬೀದಿಗೆ ಬರುತ್ತಾರೆ.. ಭವ್ಯ ಭಾರತ ನಿರ್ಮಾಣವಾಗುತ್ತದೆ ಎಂದು ಮೋದಿ ಭಕ್ತರು ನಿತ್ಯ ಭಜನೆ ಶುರುಮಾಡಿಕೊಂಡರು. ಯಾರು ಏನೇ ಮಾಡಿದರು ಶೇಕಡ ಮೂರರಷ್ಟು ಕಪ್ಪು ಹಣ ಹೊರಬರಬಹುದು ಎಂದು ಆರೆಸ್ಸೆಸ್ಸಿನ ನಾಯಕ ಗೋವಿಂದಾಚಾರ್ಯಾರೇ ಖುದ್ದಾಗಿ ಹೇಳಿದರೂ ಭಕ್ತಗಣ ನಂಬಲು ತಯಾರಿಲ್ಲ. ಪಾಕಿಸ್ತಾನದಿಂದ ಪ್ರಿಂಟಾಗಿ ಬರುವ ನಕಲಿ ನೋಟುಗಳು ನಾಶವಾದವು ಎಂದು  ಪೇಕುಗಳು ಪುಂಗುತ್ತಿದ್ದಾರೆ. ಆದರೆ  ಹಳೇ ನೋಟುಗಳನ್ನೇ ನಕಲಿ ಮಾಡುವ ಪಾಕಿಗಳು ಹೊಸ ನೋಟು ಮಾಡದಿರುತ್ತಾರೆಯೆ?

ಲಂಚ ರುಶುವತ್ತಿಲ್ಲದೇ ಈ ದೇಶದ ಸರಕಾರಿ ಯಂತ್ರಾಂಗ ಒಂದಿಂಚೂ ಕದಲದು. ಇಂತಾ ಭ್ರಷ್ಟ ವ್ಯವಸ್ಥೆಯಲ್ಲಿ ಲಂಚ ಪಡೆದದ್ದೆಲ್ಲಾ ಕಪ್ಪು ಹಣವಾಗಿಯೇ ಮತ್ತೆ ಶೇಖರಣೆಯಾಗುವ ಸಮಾಜದಲ್ಲಿ ಕಪ್ಪು ಹಣ ನಿರ್ಮೂಲನ ಎನ್ನುವುದು ಕನಸಿನ ಮಾತು. 

ಯಾರು ಏನೇ ಭಜನೆ ಮಾಡಲಿ. ಆದರೆ ಈ ನೋಟು ರದ್ದತಿಯಿಂದಾ ಜನಸಾಮಾನ್ಯರಿಗೆ, ಮಧ್ಯಮ ವರ್ಗದವರಿಗೆ, ಬಹುಸಂಖ್ಯಾತ ದುಡಿಯುವ ವರ್ಗದವರಿಗೆ, ಚಿಕ್ಕ ಪುಟ್ಟ ವ್ಯಾಪಾರಸ್ತರಿಗೆ ಲಾಭಕ್ಕಿಂತಾ ನಷ್ಟವೇ ಹೆಚ್ಚು. ಇನ್ನು ಸರಕಾರದ ಬೊಕ್ಕಸಕ್ಕೆ ಕಪ್ಪು ಹಣ ತೆರಿಗೆ ರೂಪದಲ್ಲಿ ಹರಿದು ಬರುತ್ತದೆಂಬುದೂ ಶತಮಾನದ ಸುಳ್ಳು. ಮೋದಿಯವರ ಈ ಬ್ರಹ್ಮಾಸ್ರ್ತದಿಂದ ಲಾಭ ಆಗುವುದೇನಿದ್ದರೂ ಸ್ವತಃ ಮೋದಿ ಮತ್ತು ಅವರ ಸಂಘ ಪರಿವಾರಿಗಳಿಗೆ. ಮೋದಿ ಕಿಂಕರರಂತಿರುವ ಅಂಬಾನಿ, ಆದಾನಿ, ರಾಂದೇವ್ ಬಾಬಾ ಮುಂತಾದ ಬ್ರಹತ್ ಬಂಡವಾಳಗಾರರಿಗೆ ಹಾಗೂ ಭಾರತವನ್ನು ತಮ್ಮ ಸರಕು ಮಾರಾಟದ ಮಾರುಕಟ್ಟೆಯನ್ನಾಗಿಸಿಕೊಂಡ ಸಮಸ್ತ ಕಾರ್ಪೋರೇಟ್ ಸಂಸ್ಥೆಗಳಿಗೆ. 

ಈಗ  ಎಲ್ಲೂ ಯಾರೂ  ಗೋರಕ್ಷಕರೆಂಬ ನರಹಂತಕರ ಕುರಿತು ಮಾತಾಡುತ್ತಿಲ್ಲ. ದಲಿತರ ಆಹಾರದ ಆಯ್ಕೆ ಹಾಗೂ ಭೂಮಿಯ ಹಕ್ಕು ಕುರಿತು ಉಸಿರೆತ್ತುತ್ತಿಲ್ಲ. ಅಲ್ಪಸಂಖ್ಯಾತರ ಸಮಾನ ನಾಗರಿಕ ಸಂಹಿತೆಯ ಬಗ್ಗೆಯೂ ಚರ್ಚಿಸುತ್ತಿಲ್ಲ. ರೈತರ ಆತ್ಮಹತ್ಯೆ ಕುರಿತು, ಕಾರ್ಮಿಕರ ಅತಂತ್ರತೆಯ ಕುರಿತು, ಮಹಿಳೆಯರ ಸಮಾನತೆ ಕುರಿತು ಅಷ್ಟೇ ಯಾಕೆ ಕಾವೇರಿ ಹಾಗೂ ಮಹದಾಯಿ ಸಮಸ್ಯೆಗಳ ಕುರಿತು ಯಾರೆಂದರೆ ಯಾರೂ ಮಾತಾಡುತ್ತಿಲ್ಲ. ಈಗ ನೋಡಿ ಎಲ್ಲರೂ ನೋಟು ಹಾಗೂ ಕಪ್ಪು ಹಣದ ಬಗ್ಗೆಯೇ ಮಾತಾಡುತ್ತಿದ್ದಾರೆ. ಎಲ್ಲಾ ಜನಸಾಮಾನ್ಯರ ಗಮನ ಸರದಿಯಲ್ಲಿ ನಿಂತು ನೋಟು ಬದಲಾಯಿಸುವುದರತ್ತಲೇ ಇದೆ. 

ಮೋದಿ ಮಹಾತ್ಮರಿಗೆ ಬೇಕಾದದ್ದೇ ಇದು. ಜನರ ತಲೆಗಿಂತ ದೇಹಕ್ಕೆ ಕೆಲಸ ಕೊಟ್ಟರೆ ಪ್ರತಿರೋಧ ನಿಯಂತ್ರಿಸಬಹುದು ಎನ್ನುವ ಮೋದಿ ಲೆಕ್ಕಾಚಾರ ತಾತ್ಕಾಲಿಕವಾಗಿ ಭಾರೀ ಯಶಸ್ಸನ್ನು ತಂದು ಕೊಟ್ಟಿದೆ. ಬ್ರಮನಿರಸನಗೊಳ್ಳುತ್ತಿರುವ ಜನರ ಗಮನವನ್ನು ಬೇರೆಡೆ ತಿರುಗಿಸುವಲ್ಲಿ ಕೇಂದ್ರ ಸರಕಾರ ಯಶಸ್ಸು ಗಳಿಸಿದೆ.  ಕಪ್ಪು ಹಣ ಹೊರತರಲು ಜನಸಾಮಾನ್ಯರು ಐವತ್ತು ದಿನಗಳ ಕಾಲ ಕಷ್ಟ ನಷ್ಟಗಳನ್ನು ಅನುಭವಿಸಿದರೆ ಮುಂಬರುವ ದಿನಗಳಲ್ಲಿ ಅಚ್ಚೇ ದಿನ್ ಬರುತ್ತದೆಂದು ಮೋದಿ ಹಾಗೂ ಅವರ ಸಮರ್ಥಕರು ನಿರಂತರ ಪ್ರಚಾರ ಮಾಡುತ್ತಲಿದ್ದಾರೆ.

ಆದರೆ... ಕಪ್ಪು ಹಣವೆಲ್ಲಾ ಹೊರಗೆ ಬರದಿದ್ದರೆ.... ಜನಸಾಮಾನ್ಯರ ವ್ಯಾಪಾರಗಳನ್ನೆಲ್ಲಾ ಕಾರ್ಪೋರೇಟ್ ಕಂಪನಿಗಳು ಆಕ್ರಮಿಸಿ ಸುಲಿಗೆಯನ್ನು ಆರಂಭಿಸಿದರೆ... ಈ ಮೋದಿ ಕಟ್ಟಿಕೊಡುತ್ತಿರುವ ಹುಸಿ ಕನಸಿನ ಬಲೂನು ಇಂದಲ್ಲ ನಾಳೆ ಒಡೆದು ಅಸಲಿಯತ್ತು ಜನರಿಗೆ ತಿಳಿದರೆ.... ಮತ್ತೆ ರೈತರ ಆತ್ಮಹತ್ಯಾ ಸರಣಿ ದೇಶಾದ್ಯಂತ ಮುಂದುವರೆದರೆ... ಉಳ್ಳವರು ಹಾಗೂ ಇಲ್ಲದವರ ನಡುವೆ ಅಸಮಾನತೆಯ ಅಂತರ ಹೆಚ್ಚಾಗತೊಡಗಿದರೆ...ಸುಶಿಕ್ಷಿತ ಯುವ ಜನಾಂಗ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾದರೆ.... ದೇಶಕ್ಕೆ ದೇಶವೇ ಈ ಮೋದಿ ವಿರುದ್ದ ತಿರುಗಿ ಬೀಳುವುದರಲ್ಲಿ ಸಂದೇಹವಿಲ್ಲ. ಈ ಮೋದಿ ಮಹಾತ್ಮರು ಸೃಷ್ಟಿಸುವ ಸರಣಿ ಉನ್ಮಾದಗಳು ನಿರಂತರ ಫಲ ಕೊಡುವುದಿಲ್ಲ. ಇಡೀ ದೇಶವಾಸಿಗಳನ್ನು ಬಹುಕಾಲದವರೆಗೂ ಮೂರ್ಖರನ್ನಾಗಿಸಲು ಸಾಧ್ಯವೂ ಇಲ್ಲ. ಮೋದಿ ಮೇನಿಯಾ ಆದಷ್ಟು ಬೇಗ ಮುಖವಾಡ ಕಳಚಿಕೊಳ್ಳುವುದರಲ್ಲಿ ಸಂದೇಹವಿಲ್ಲ. 

- ಶಶಿಕಾಂತ ಯಡಹಳ್ಳಿ

ಗುರುವಾರ, ನವೆಂಬರ್ 10, 2016

ತಹ ತಹ..... 61 ಕಪ್ಪು ಹಣ ನಿಯಂತ್ರಣದಾಟದಲಿ ಜನಸಾಮಾನ್ಯರ ಪರದಾಟ :

ಬೆಟ್ಟ ಅಗೆದು ಇಲಿ ಹಿಡಿಯೋದಂದ್ರೆ ಇದೇನಾ? :


ಹೌದು! ಬೆಟ್ಟ ಅಗೆದು ಇಲಿ ಹಿಡಿಯೋದಂದ್ರೆ ಇದೇನಾ? ಇಂತಾದ್ದೊಂದು ಪ್ರಶ್ನೆ ಕೆಲವರಾದರೂ ಪ್ರಜ್ಞಾವಂತರನ್ನು ಕಾಡುತ್ತಲೇ ಇದೆ. ಯಾವಾಗ ಇದ್ದಕ್ಕಿದ್ದಂತೆ ಐನೂರು ಸಾವಿರ ರೂಪಾಯಿಯ ನೋಟುಗಳನ್ನು ಮೋದಿ  ಸರಕಾರ ರದ್ದು ಮಾಡಿತೋ ಆಗಿನಿಂದಲೂ ಮೋದಿಭಕ್ತರ ಸಂಭ್ರಮದ ನಡುವೆಯೂ ಸಂದೇಹಗಳು ಕಾಡಿದ್ದಂತೂ ಸುಳ್ಳಲ್ಲ. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ಹೀಗೇ ಮೋದಿ ಮೇನಿಯಾ ಶುರುವಾಗಿತ್ತು.  ವಿದೇಶದಲ್ಲಿರುವ ಕಪ್ಪು ಹಣವನ್ನು ವಾಪಸ್ ತರುವುದಷ್ಟೇ ಅಲ್ಲಾ.. ಪ್ರತಿ  ಭಾರತೀಯರ ಬ್ಯಾಂಕ್ ಅಕೌಂಟಿಗೆ ಹದಿನೈದು ಲಕ್ಷ ರೂಪಾಯಿಗಳ ಇಡಿಗಂಟನ್ನು ಹಾಕಲಾಗುವುದು ಎಂದು ಮೋದಿಯವರು ಭಾರತೀಯರಿಗೆ ಭರವಸೆ ಕೊಟ್ಟು ಓಟು ಪಡೆದಿದ್ದರು. ಆದರೆ.. ಸರಕಾರ ಬಂದು ಎರಡೂವರೇ ವರ್ಷ ಕಳೆದರೂ ಬ್ಲಾಕ್ಮನಿ ವಿದೇಶದಿಂದ ವಾಪಸ್ ತರಲಾಗಲೇ ಇಲ್ಲಾ..  ಯಾವೊಬ್ಬ ಪ್ರಜೆಯ ಖಾತೆಗೂ ಒಂದುರೂಪಾಯಿ ಸಂದಾಯವಾಗಲಿಲ್ಲ. ಯಾವೊಬ್ಬ ಕಪ್ಪುಹಣದ ತೆರಿಗೆ ಕಳ್ಳನಿಗೂ ಶಿಕ್ಷೆಯಾಗಲೇ ಇಲ್ಲ. ಅಷ್ಟೇ ಯಾಕೆ ಕಳ್ಳಹಣಕ್ಕೆ ತೆರಿಗೆ ಕಟ್ಟಿದ ಕಳ್ಳರ ಹೆಸರನ್ನೂ ಸಹ ಸರಕಾರ ಗುಟ್ಟಾಗಿಟ್ಟು  ರಕ್ಷಿಸಿತು.  ಚಿಕ್ಕಪುಟ್ಟ ರಿಕವರಿಗಳಾದರೂ ಅವು ಹೇಳಿಕೊಳ್ಳುವಂತಹ ಸಾಧನೆಯಾಗಿರಲಿಲ್ಲ.


ಈಗ ಕೊಟ್ಟ ಭರವಸೆಯನ್ನು ಉಳಿಸಿ ಕೊಳ್ಳದೇ ಹೋದರೆ ಉತ್ತರ ಭಾರತದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಜನ ತಿರುಗಿಬೀಳಬಹುದೆಂಬ ಭಯ ಮೋದಿ ಸರಕಾರವನ್ನು ಇನ್ನಿಲ್ಲದಂತೆ ಕಾಡತೊಡಗಿತು. ಅದ್ಯಾಕೋ ಸರ್ಜಿಕಲ್ ಸ್ಟ್ರೈಕ್ ಹೆಸರಲ್ಲಿ ಹುಟ್ಟುಹಾಕಿದ ದೇಶಭಕ್ತಿಯ ಮೇನಿಯಾ ಬಹಳ ದಿನ ಕೆಲಸ ಮಾಡಲಿಲ್ಲ. ಏಕ ರೂಪದ ನಾಗರೀಕತೆಯ ಕಾನೂನೂ ತರಲು ಪ್ರಯತ್ನಿಸಿ ಮುಸ್ಲಿಂ ವಿರೋಧಿ ಅಲೆ ಹುಟ್ಟಿಸುವ ಉಪಾಯಗಳೂ  ಫಲಪ್ರದವಾಗಲಿಲ್ಲ. ದಲಿತರ ಹತ್ಯೆ ಹಾಗೂ ಗೋರಕ್ಷಕರ ಹಾವಳಿಗಳಿಂದಾಗಿ ಮೋದಿ ಸರಕಾರದ ಇಮೇಜ್ ಡ್ಯಾಮೇಜ್ ಆಗತೊಡಗಿತ್ತು. ದೇಶಾದ್ಯಂತ ದಲಿತ ದಮನಿತರು ಸಂಘಪರಿವಾರದ ಸರಕಾರದ ವಿರುದ್ಧ ತಿರುಗಿಬಿದ್ದಿದ್ದರು. ಜನರೂ ಸಹ ಮೋದಿ ಬಗ್ಗೆ ಬ್ರಮನಿರಸರಾಗಿದ್ದರು. ಇಂತಹ ಪರಿಸ್ಥಿತಿಯಲ್ಲಿ ಸರಕಾರದ ವೈಪಲ್ಯಗಳನ್ನು ಮರೆಮಾಚಲು, ಈಡೇರಿಸಲಾಗದ ಕೊಟ್ಟ ಭರವಸೆಗಳಿಂದ ಜನರ ಗಮನ ಬೇರೆಡ ಸೆಳೆಯಲು ಇನ್ನೊಂದು ಪ್ರಚಂಡ ಅಲೆಯೊಂದನ್ನು ಸೃಷ್ಟಿಸುವ ಅನಿವಾರ್ಯತೆ ಪ್ರಧಾನಿಯವರಿಗೆ ಇತ್ತು. ಕಪ್ಪು ಹಣದ ಹೆಸರು ಹೇಳಿಕೊಂಡೇ ಆಡಳಿತದ ಗದ್ದುಗೆ ಹಿಡಿದ ಮೋದಿಯವರಿಗೆ ಈಗ ಅದೇ ಕಪ್ಪುಹಣದ ಹೆಸರೇ ತಮ್ಮ ಅಸ್ತಿತ್ವ ಗಟ್ಟಿಗೊಳಿಸಲು ಸಾಧ್ಯವೆಂಬುದು ಅರಿವಾಗಿತ್ತು. ವಿದೇಶದಿಂದ ಬ್ಲಾಕ್ಮನಿ ತರದಿದ್ದರೇನಾಯ್ತು..? ಸ್ವದೇಶದಲ್ಲಿರುವ ಬ್ಲಾಕ್ಮನಿ ಹೊರತೆಗೆದು ಜನರಿಗೆ ಕಣ್ಕಟ್ಟು ಮಾಡಿದರಾಯಿತು ಎಂದುಕೊಂಡು ಬಹುದೊಡ್ಡ ಆರ್ಥಿಕ ತಂತ್ರಗಾರಿಕೆಯ ಮಾಸ್ಟರ್ ಸ್ಟ್ರೋಕ್ ಹೆಣೆಯಲಾಯಿತು. ಅದಕ್ಕೆ ಮೋದಿಯವರ ಗುಜರಾತಿ ಗೆಳೆಯ ರಿಜರ್ವ ಬ್ಯಾಂಕಿನ ಹಾಲಿ ಗವರ್ನರ್ ಊರ್ಜಿತ್ ಪಟೇಲ್ ಸಾತ್ ಕೊಟ್ಟರು. 2016, ನವೆಂಬರ್ 8ರಂದು 5೦೦ ಹಾಗೂ 1೦೦೦ ರೂಪಾಯಿಗಳ ನೋಟುಗಳನ್ನು ಹಿಂಪಡೆದು ಹೊಸ ನೋಟು ಚಲಾವಣೆ ಮಾಡುವ ಘೋಷಣೆಯನ್ನು ಮೋದಿ ಸಾಹೇಬರು ಮಾಡಿದರು. 2೦೦೦ ಮುಖಬೆಲೆಯ ನೋಟುಗಳು ಚಲಾವಣೆಗೆ ತರುವುದನ್ನು ಒತ್ತಿ ಹೇಳಿದರು.

ಈ ಸಂಗತಿ ತಿಳಿದದ್ದೇ ಮೋದಿ ಭಕ್ತರು ಹರ್ಷೋದ್ಗಾರ ಮಾಡಿ ಕುಣಿದು ಕುಪ್ಪಳಿಸಿದರು. ಇನ್ನೇನು ಈ ದೇಶ ಸುಭಿಕ್ಷೆಯ ನಾಡಾಗಿಬಿಡುತ್ತದೆ. ಕಳ್ಳದಂದೆಗಳೆಲ್ಲಾ ನಿಂತು ಹೋಗುತ್ತವೆ. ೫೬ ಇಂಚಿನೆದೆಯ ಮೋದಿಯೊಬ್ಬರೇ ಯಾರೂ ಮಾಡದ ಸಾಧನೆ ಮಾಡಿದ್ದಾರೆ.. ಜೈ.. ಮೋದಿ.. ಎಂದು ಪ್ರಧಾನಿಯನ್ನು ಹಾಡಿ ಹೊಗಳಿ ಕುಣಿದಾಡತೊಡಗಿದರು. ಮೋದಿ ಅಭಿಮಾನಿಗಳಲ್ಲದವರೂ,. ಸಂಘ ಪರಿವಾರದ ಸಂಪರ್ಕ ಇಲ್ಲದವರೂ ಸಹ ಮೋದಿಯ ಮೋಡಿಗೆ ಮರುಳಾಗಿ ಅದ್ಭುತ ಕ್ರಮವೆಂದು ಶ್ಲಾಘಿಸತೊಡಗಿದರು. ಮೋದಿಯವರ ತಂತ್ರಗಾರಿಕೆ ಈ ಸಧ್ಯಕ್ಕಂತೂ ಫಲ ನೀಡಿ ದೇಶಾದ್ಯಂತ ಸಂಚಲನವನ್ನು ಹುಟ್ಟುಹಾಕಿದ್ದಂತೂ ಸತ್ಯ. ಆದರೆ.. ಈ ಅಕಾಲಿಕ ಆರ್ಥಿಕ ಕ್ರಾಂತಿ ಅದೆಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಹಾಗೂ ಜನಸಾಮಾನ್ಯರ ಮೇಲೆ ಅದು ಹೇಗೆ ದುಷ್ಪರಿಣಾಮವನ್ನು ಬೀರುತ್ತದೆ.. ಎಂಬುದನ್ನು ಕೆಲವಾರು ಪ್ರಜ್ಞಾವಂತರು ಪ್ರಶ್ನಿಸಿದ್ದಾರೆ.

ಮೊದಲನೆಯದಾಗಿ ದೊಡ್ಡ ದೊಡ್ಡ ಕುಳಗಳು ತಮ್ಮ ಅಕ್ರಮ ಸಂಪಾದನೆಯ ಕಪ್ಪುಹಣ ಎನ್ನುವುದನ್ನು ಬಹುದೊಡ್ಡ ಮಟ್ಟದಲ್ಲಿ ವಿದೇಶಿ ಬ್ಯಾಂಕುಗಳಲ್ಲಿ ಇಟ್ಟಿದ್ದರಿಂದ ಅವರ ಎಲ್ಲಾ ಹಣ ಸೇಫಾಗಿಯೇ ಇದೆ. ಅದನ್ನು ಭಾರತಕ್ಕೆ ಮರಳಿ ತರುವುದು ಅಂದುಕೊಂಡಷ್ಟು ಸುಲಭಸಾಧ್ಯವಾದುದಲ್ಲ. ಸ್ವಿಸ್ ಬ್ಯಾಂಕಲ್ಲಿ ಬ್ಲಾಕ್ಮನಿ ಇಟ್ಟವರ ಮೊದಲ ಕಂತಿನ ಹೆಸರುಗಳನ್ನು ವೀಕಿಲೀಕ್ಸ್ ಈಗಾಗಲೇ ಬಯಲುಗೊಳಿಸಿದೆ.  ಅದರಲ್ಲಿ ಎಲ್.ಕೆ.ಅಡ್ವಾನಿ (5600ಕೋಟಿ), ಎ.ರಾಜಾ (7800ಕೋಟಿ), ಕರುಣಾನಿಧಿ (15800ಕೋಟಿ),  ಜಯಲಲಿತಾ (150000ಕೋಟಿ), ಕುಮಾರಸ್ವಾಮಿ (1450ಕೋಟಿ), ಹೀಗೆ 24 ಕುಬೇರರು ತಮ್ಮ ಕಪ್ಪುಹಣವನ್ನು ಸ್ವಿಸ್ ಬ್ಯಾಂಕಲ್ಲಿ ಇಟ್ಟಿದ್ದಾರೆಂಬುದನ್ನು ಬಯಲಾಗಿದೆ. ಮಾಹಿತಿಯ ಪ್ರಕಾರ ಸ್ವಿಸ್ ಬ್ಯಾಂಕಿನಲ್ಲಿ 2೦೦೦ ಭಾರತೀಯ ಕಾಳಧನಿಕರು ತೆರಿಗೆ ತಪ್ಪಿಸಿ ಇಟ್ಟ ಒಟ್ಟು ಕಳ್ಳ ಹಣ 1.3 ಮಿಲಿಯನ್ ಡಾಲರ್ಸ್ ಅಂದರೆ ಇಷ್ಟು ಹಣ ಇದ್ದರೆ ಭಾರತ ಜಗತ್ತಿನ ಸಮೃದ್ದ ದೇಶವಾಗುವುದರಲ್ಲಿ ಸಂದೇಹವಿಲ್ಲ. ಆದರೆ.. ಈ ಹಣವನ್ನು ತಂದು ಕಪ್ಪುಹಣದ ಧನಿಗಳನ್ನು ಶಿಕ್ಷೆಗೆ ಗುರಿಪಡಿಸುವುದಂತೂ ಮೋದಿ ಸರಕಾರಕ್ಕೆ ಅಸಾಧ್ಯವಾದ ಮಾತು. ಅವರು ಅಂತಹ ಕ್ರಮ ಕೈಗೊಂಡರೆ ಅವರದೇ ಪಕ್ಷದ ಮುಖಂಡರು ಹಾಗೂ ಪೋಷಕರು ಮೊದಲು ಬಟಾಬಯಲಾಗುತ್ತಾರೆ. ಹೀಗಾಗಿ.. ವಿದೇಶಿ ಬ್ಲಾಕ್ಮನಿಯ ವಿಚಾರವನ್ನು ಅಲ್ಲಲ್ಲಿಗೇ ಕೈಬಿಟ್ಟು ಈಗ ಸ್ವದೇಶಿ ಬ್ಲಾಕ್ಮನಿಗೆ ಮೋದಿ ಶಿಪ್ಟ್ ಆಗಿದ್ದಾರೆ.

ಹೋಗಲಿ ದೇಶದಲ್ಲಿರುವ ಕಪ್ಪುಹಣವೆಲ್ಲಾ ನಿರ್ಣಾಮವಾದರೂ ದೇಶ ಅಭಿವೃದ್ದಿಯಾಗಬಹುದೆಂದು ಸಮಾಧಾನಪಟ್ಟುಕೊಳ್ಳಬಹುದಾಗಿದೆ. ಆದರೆ.. ಅದೆಷ್ಟು ಜನ ತೆರಿಗೆಕಳ್ಳರು ಹಾರ್ಡಕ್ಯಾಶನ್ನು ಮನೆಯಲ್ಲಿ ಬಚ್ಚಿಟ್ಟುಕೊಂಡಿರುತ್ತಾರೆ. ಕಳ್ಳರ ಮನಸ್ಸು ಯಾವಾಗಲೂ ಆತಂಕದಲ್ಲಿರುವುದರಿಂದ ಹಾಗೂ ಇನ್ಕಮ್ ಟ್ಯಾಕ್ಸ್ ರೇಡ್ ಯಾವಾಗ ಬೇಕಾದರೂ ಆಗಬಹುದಾದ ಭಯವೂ ಇರುವುದರಿಂದ ಕೊಟ್ಯಾಂತರ ಹಣವನ್ನು ಕ್ಯಾಶ್ ರೂಪದಲ್ಲಿ ಇಟ್ಟುಕೊಂಡು ಅಪಾಯವನ್ನು ಎದುರಿಸಲು ಯಾವುದೇ ದೊಡ್ಡ ತೆರಿಗೆಗಳ್ಳರಿಗೆ ಸಾಧ್ಯವಿಲ್ಲ. ಅದರರ್ಥ ಅವರಲ್ಲಿ ಕಪ್ಪುಹಣ ಇಲ್ಲವೆಂದಲ್ಲ. ಆದರೆ.. ಆದು ಹಣದ ರೂಪದಲ್ಲಿರದೇ ಬಂಗಾರ, ಬೇನಾಮಿ ಶೇರು ಇಲ್ಲವೇ ಭೂಮಿ ರೂಪದಲ್ಲಿರುತ್ತದೆ. ಅದೆಷ್ಟೋ ಆಸ್ತಿಗಳು ಬೇನಾಮಿ ಹೆಸರಲ್ಲಿರುತ್ತವೆ. ಮೋದಿಯವರ ಈ ಆರ್ಥಿಕ ಸರ್ಜಿಕಲ್ ಸ್ಟೋಕ್ ಕಪ್ಪುಹಣದ ಮೇಲಿದೆಯೇ ಹೊರತು ಅಕ್ರಮ ಭೂಮಿ ಹಾಗೂ ಬಂಗಾರದ ಸಂಪತ್ತಿನ ಮೇಲಿಲ್ಲವಲ್ಲ. ಅಕಸ್ಮಾತ್ ದೊಡ್ಡ ದೊಡ್ಡ ತಿಮಿಂಗಿಲುಗಳ ಬಳಿ  ಹಣದ ರೂಪದಲ್ಲಿ ಬ್ಲಾಕ್ಮನಿ ಇದ್ದರೂ ಅದು ಇಂಡಿಯನ್ ಕರೆನ್ಸಿ ಆಗುವುದರ ಬದಲಾಗಿ ಡಾಲರ್ ರೂಪದಲ್ಲಿರುತ್ತದೆ.

ಹೀಗಾಗಿ ಸ್ವದೇಶಿ ಕಪ್ಪುಹಣದ ಧನಿಗಳೂ ಸಹ ಆದಷ್ಟೂ ಸೇಫಾಗಿದ್ದಾರೆ. ಅಕಸ್ಮಾತ್ ನಾಲ್ಕೈದು ಕೋಟಿ ಇಂಡಿಯನ್ ಹಣ ಕ್ಯಾಶ್ ರೂಪದಲ್ಲಿದ್ದವರೂ ಅವರಿಗಿರುವ ಪ್ರಭಾವದಿಂದ ಅದನ್ನು ಬಿಳಿಯಾಗಿ ಪರಿವರ್ತಿಸುವ ಕಲೆ ಅವರಿಗೆ ಗೊತ್ತಿದೆ. ಆರ್ಥಿಕ ವ್ಯವಹಾರದಲ್ಲಿ ಪಳಗಿರದೆ  ಕಪ್ಪು ಹಣವನ್ನು ಕ್ಯಾಶ್ ರೂಪದಲ್ಲಿ ಇಟ್ಟುಕೊಂಡ ಶೇಕಡಾ ಎರಡು ಪರ್ಸಂಟೇಜ್ ಜನರು ಮಾತ್ರ ಸಂಕಷ್ಟಕ್ಕೊಳಗಾಗಬಹುದಾಗಿದೆ. ಅವರ ಕಪ್ಪು ಹಣವನ್ನೂ ಸಹ ಬಿಳಿ ಮಾಡುವ ಕೆಲಸವನ್ನು ಉಳಿದ 50 ದಿನಗಳಲ್ಲಿ ಮಾಡಿ ಮುಗಿಸುತ್ತಾರೆ. ಅಷ್ಟಕ್ಕೂ ಬಿಳಿಮಾಡಲಾಗದೇ ಪರಿತಪಿಸುವವರ ಒಂದಿಷ್ಟು ಕೋಟಿಗಳು ದೇವಸ್ಥಾನದ ಹುಂಡಿಗೆ ಅರ್ಪಿತವಾಗಬಹುದು ಇಲ್ಲವೇ ಬೆಂಕಿಗೆ ಆಹುತಿಯಾಗಬಹುದು.. ಒಟ್ಟಾರೆ ಆರ್ಥಿಕ ವ್ಯವಸ್ಥೆಯಲ್ಲಿ ಅಂತಹುದರ ಪರ್ಸಂಟೇಸ್ ತುಂಬಾನೇ ಕಡಿಮೆಯಾಗಿರುತ್ತದೆ. ನೂರಾರು ಕೋಟಿ ರೂಪಾಯಿ ಕಪ್ಪುಹಣ ಇಟ್ಟುಕೊಂಡು ಕೂಡುವವನು ವ್ಯವಹಾರಸ್ತನಲ್ಲವೇ ಅಲ್ಲ. ಅದನ್ನು ಯಾವುದೋ ರೂಪದಲ್ಲಿ ತೊಡಗಿಸಿ ಮತ್ತೆ ಲಾಭಗಳಿಸಲು ಪ್ರಯತ್ನಿಸುವುದೇ ಬಂಡವಾಳಶಾಹಿಯ ಲಕ್ಷಣವಾಗಿದೆ.

ಕಾಪೋರೇಟ್ ಕಂಪನಿಗಳು ಹಾಗೂ ಬಂಡವಾಳಗಾರರ ಸಹಕಾರದಿಂದಲೇ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಕಪ್ಪು ಹಣದ ಸಹಕಾರವಿಲ್ಲದೇ ಯಾವುದೆ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲವೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಇಂತಹುದರಲ್ಲಿ ಮೋದಿ ತಮ್ಮ ಪೋಷಕರ ವಿರುದ್ದ ಸಮರ ಸಾರಲು ಸಾಧ್ಯವೇ..? ಖಂಡಿತಾ ಸಾಧ್ಯವಿಲ್ಲ. ಈಗಿನ ನೋಟು ನಿಷೇದದಿಂದಾಗಿ ಅಂಬಾನಿ ಆದಾನಿಯಂತಹ ದೇಶಿ ಬಂಡವಾಳಿಗರಿಗೆ ಎಂತದೂ ಅಪಾಯವಿಲ್ಲ. ಇನ್ನು ಈ ಆರ್ಥಿಕ ಸುಧಾರಣೆಯನ್ನು ಸ್ವಾಗತಿಸಿದ ಇನ್ಪೋಸಿಸ್ಸಿನ ನಾರಾಯಣಮೂರ್ತಿಯಂತಹ ಭಾರತೀಯ ಕಾರ್ಪೋರೇಟ್ ಕಂಪನಿಗಳಿಗೂ ಬ್ಲಾಕ್ಮನಿ  ಸ್ಟ್ರೋಕ್ ಬಾದಿಸದು. ಯಾಕೆಂದರೆ ಇವರ ವ್ಯವಹಾರವೆಲ್ಲಾ ಇರುವುದೇ ಡಾಲರ್ ಲೆಕ್ಕದಲ್ಲಿ ಹಾಗೂ ಹೆಚ್ಚು ಹಣ ಇರುವುದೂ ವಿದೇಶಿ ಬ್ಯಾಂಕುಗಳಲ್ಲಿ. ನಮ್ಮ ದೇಶದ ಅರ್ಧದಷ್ಟು ಸಂಪತ್ತು ಇರುವುದೇ ಶೇಕಡಾ ಒಂದರಷ್ಟು ಕುಬೇರರ ಕಬ್ಜಾದಲ್ಲಿ.


ಹೀಗಾಗಿ ವಿದೇಶದಲ್ಲಿ ಬ್ಲಾಕ್ಮನಿ ಇಟ್ಟವರೂ ಹಾಗೂ ಸ್ವದೇಶದಲ್ಲಿ ಬ್ಲಾಕ್ಮನಿಯನ್ನು ಹಣಕಾಸೇತರ ಮಾರ್ಗದಲ್ಲಿ ತೊಡಗಿಸಿಕೊಂಡವರೂ ಸೇಫಾಗಿದ್ದಾರೆ. ಕಪ್ಪನ್ನು ಬಿಳಿಮಾಡಲಾಗದ ಕೆಲವೇ ಕೆಲವು ಶ್ರೀಮಂತರು ತೆರಿಗೆ ಕಟ್ಟಬಹುದೇ ಹೊರತು ಅವರ ಶ್ರೀಮಂತಿಗೆಗಂತೂ ಯಾವುದೇ ಅಪಾಯವಿಲ್ಲ. ಆದರೆ.. ನಿಜಕ್ಕೂ ಮೋದಿಜಿಯವರ ಸರ್ಜಿಕಲ್ ಸ್ಟ್ರೋಕ್ ಎಫೆಕ್ಟ್ ಆಗುವುದು ಜನಸಾಮಾನ್ಯರು ಅದರಲ್ಲೂ ಮಧ್ಯಮವರ್ಗ ಮತ್ತು ಚಿಕ್ಕಪುಟ್ಟ ವ್ಯಾಪಾರಗಳನ್ನು ಮಾಡಿ ಬದುಕುವವರ ಮೇಲೆ. ಈ ಕಪ್ಪು ಹಾಗೂ ಬಿಳಿ ಹಣದ ಬಗ್ಗೆ ಅರಿವೇ ಇಲ್ಲದ ಬಹುಸಂಖ್ಯಾತ ವರ್ಗವೊಂದಿದೆ. ರೈತಾಪಿ ಕೂಲಿ ಕಾರ್ಮಿಕರೂ ಸಹ ತಮ್ಮಲ್ಲಿ ಸಾವಿರಗಳ ನೋಟುಗಳನ್ನು ಭವಿಷ್ಯದ ತಾಪತ್ರಯಗಳಿಗೆ ಇರಲೆಂದು ಉಳಿಸಿಕೊಂಡಿರುತ್ತಾರೆ. ಅದರಲ್ಲಿ ಅದೆಷ್ಟೋ ಜನರ ಬಳಿ ಬ್ಯಾಂಕ್ ಅಕೌಂಟು, ಪ್ಯಾನ್ ಕಾರ್ಡುಗಳಿರುವುದಿಲ್ಲ. ಅದೆಷ್ಟೋ ದುಡಿಯುವ ವರ್ಗಗಳಿಗೆ ಬ್ಯಾಂಕ್ ವ್ಯವಹಾರಗಳೇ ಗೊತ್ತಿರುವುದಿಲ್ಲ. ಇನ್ನೂ ಅನಕ್ಷರಸ್ತರು ಈ ದೇಶದಲ್ಲಿದ್ದಾರೆ. ಇನ್ನು ಕೆಲವರು ಕಷ್ಟಕ್ಕಿರಲಿ ಎಂದು ದುಡಿದ ಹಣವನ್ನು ಕೂಡಿಟ್ಟಿರುತ್ತಾರೆ. ಅದನ್ನು ತೆಗೆದುಕೊಂಡು ಹೋಗಿ ಬ್ಯಾಂಕಲ್ಲಿ ಬದಲಾಯಿಸಲೂ ಸಂಕೋಚ ಹಾಗೂ ಅಜ್ಞಾನ. ಇನ್ನು ಮಹಿಳೆಯರು ಮುಂಬರುವ ಗೃಹಸಂಕಟಗಳಿಗೆ ಉಪಯೋಗಕ್ಕೆ ಇರಲಿ ಎಂದು ಹೊಟ್ಟೆ ಬಟ್ಟೆ ಕಟ್ಟಿ ಯಾವುಯಾವುದೋ ಗುಪ್ತ ಜಾಗಗಳಲ್ಲಿ ಐನೂರು ಸಾವಿರ ರೂಪಾಯಿಗಳನ್ನು ಮನೆಯಜಮಾನನಿಗೆ ಗೊತ್ತಾಗದ ಹಾಗೆ ಗುಟ್ಟಾಗಿ ಇಟ್ಟಿರುತ್ತಾರೆ. ಮಗನ ವಿದ್ಯಾಬ್ಯಾಸಕ್ಕೋ, ಮಗಳ ಮದುವೆಗೂ ಕೂಡಿಟ್ಟ ಹಣ ಕೂಡಿಟ್ಟಲ್ಲೆ ಮೌಲ್ಯರಹಿತವಾಗುತ್ತದೆ. ಈಗ ಗುಟ್ಟಾಗಿ ಉಳಿಸಿಟ್ಟ ಹಣವನ್ನು ಬಹಿರಂಗವಾಗಿ ತೆಗೆದುಕೊಂಡು ಹೋಗಿ  ಪಟ್ಟಣದ ಬ್ಯಾಂಕುಗಳಲ್ಲಿ ಬದಲಾಯಿಸಲೂ ಬಹುತೇಕ ಗ್ರಾಮೀಣರಿಗೆ ಸಾಧ್ಯವಾಗುತ್ತಿಲ್ಲ. ಎಲ್ಲಿ ತಮ್ಮ ಗುಟ್ಟು ರಟ್ಟಾಗುತ್ತದೋ ಎನ್ನುವ ಆತಂಕದಲ್ಲಿ ಸರಕಾರವನ್ನು ಬೈದುಕೊಂಡು ಸುಮ್ಮನಾಗುತ್ತಾರೆ. ಇಂತವರ ಸಂಖ್ಯೆ ಕೋಟಿಗಳಲ್ಲಿ ಇದೆ. ನೂರು ಕೋಟಿ ಜನರು ಸಾವಿರ ರೂಪಾಯಿಯ ಒಂದೇ ನೋಟನ್ನು ಇಟ್ಟುಕೊಂಡಿದ್ದರೂ ಅದರ ಒಟ್ಟು ಮೊತ್ತ ಒಂದು ಲಕ್ಷ ಕೋಟಿಯಾಗುತ್ತದೆ. ಅಂದರೆ.. ಇದರಲ್ಲಿ ಬ್ಯಾಂಕಲ್ಲಿ ವಿನಿಮಯ ಆಗದ ಬಡಜನರ ದುಡ್ಡೆಲ್ಲವೂ ಸಹ ಕಪ್ಪುಹಣದ ಲೆಕ್ಕಕ್ಕೆ ದಕ್ಕುತ್ತದೆ. ಅದೆಷ್ಟೋ ಜನರ ಬೆವರಿನ ಪ್ರತಿಫಲ ಸರ್ವನಾಶವಾಗುತ್ತದೆ. ಅಕೌಂಟೇ ಇಲ್ಲದ ಬಡಜನರು ತಮ್ಮಲ್ಲಿರುವ ಐನೂರು ಸಾವಿರ ರೂಪಾಯಿಯ ನೋಟನ್ನು ಬದಲಾಯಿಸಿಕೊಳ್ಳಲೂ ಸಾಧ್ಯವಾಗದೇ ಅಸಹಾಯಕರಾಗಿದ್ದಾರೆ. ಅದರರ್ಥ ಈ ದಿಡೀರ್ ಆರ್ಥಿಕ ಕ್ರಾಂತಿಯಿಂದಾಗಿ ಶ್ರೀಮಂತರಿಗಿಂತಾ ಬಡಜನರ ಬದುಕು ಇನ್ನಷ್ಟು ಬಿಗಡಾಯಿಸುತ್ತದೆ.

ತೆರಿಗೆ ಕಟ್ಟಲಾಗದ್ದೆಲ್ಲವೂ ಕಪ್ಪು ಹಣ ಎನ್ನುವುದು ಸರಕಾರದ ಲೆಕ್ಕಾಚಾರ. ಆದರೆ.. ಅದೆಷ್ಟೋ ರೈತ ಕೂಲಿ ಜನರು ತಮ್ಮ ಶ್ರಮದ ಫಲವಾಗಿ ಸಾವಿರಾರು ರೂಪಾಯಿಗಳನ್ನು ತಮ್ಮಲ್ಲಿ ಇಟ್ಟುಕೊಂಡಿರುತ್ತಾರೆ. ಸರಕಾರಿ ಲೆಕ್ಕದಲ್ಲಿ ಅದೆಲ್ಲಾ ಕಳ್ಳಹಣ ಎಂದಾಗುತ್ತದೆ. ಅಂದರೆ ಬೆವರಿನ ಫಲದಿಂದ ಪಡೆದ ಹಣ ಕಿಸೆಯಲ್ಲಿದ್ದರೂ ಅದು ಕಪ್ಪು ಹಣ. ಅದನ್ನು ಬ್ಯಾಂಕಲ್ಲಿ ಅಕೌಂಟಿಲ್ಲದೇ ನೇರವಾಗಿ ಬದಲಾಯಿಸಲಾಗದು. ಶ್ರೀಮಂತರ ಬಳಿ ಇರುವ ಕಪ್ಪು ಹಣಕ್ಕೂ ಹಾಗೂ ಬಡವರ ಬಳಿ ಇರುವ ಲೆಕ್ಕಕೊಡಲಾಗದ ದುಡಿಮೆಯ ಹಣಕ್ಕೂ ವ್ಯತ್ಯಾಸವಿದೆ. ಆದರೆ.. ಸರಕಾರ ಇದನ್ನು ಎಂದೂ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ನಿಮ್ಮಲ್ಲಿ ಸಾವಿರದ ಒಂದೇ ಒಂದು ನೋಟಿದ್ದರೂ ಅದು ಬ್ಯಾಂಕ್ ಮೂಲಕವೇ ಬದಲಾವಣೆಗೊಳ್ಳಬೇಕು ಹಾಗೂ ಅದಕ್ಕೆ ಅಧೀಕೃತವಾಗಿ ಗುರುತಿನ ಚೀಟಿ ಕೊಡಬೇಕು ಮತ್ತು ಬ್ಯಾಂಕಲ್ಲಿ ಅಕೌಂಟ್ ಇಲ್ಲದಿದ್ದರೆ ತೆರೆಯಬೇಕು. ಒಂದು ನೋಟು ಬದಲಾಯಿಸಲು ದೂರದ ಪಟ್ಟಣದಲ್ಲಿರುವ ಬ್ಯಾಂಕಿಗೆ ಹೋಗಿ ಅಕೌಂಟ್ ತೆರೆದು ನೋಟು ಬದಲಾಯಿಸಲು ರೈತಾಪಿ ಕೂಲಿಗಳಿಗೆ, ದಲಿತರಿಗೆ, ಮಹಿಳೆಯರಿಗೆ ಸಾಧ್ಯವಿದೆಯೇ. ಬದಲಾಯಿಸಲಾರದೇ ಇರುವ ಹಣ ಕಪ್ಪು ಹಣವೆಂದು ಸರಕಾರ ಘೋಷಿಸುತ್ತದೆ. ಕೊನೆಗೆ ಇಷ್ಟೊಂದು ಕೋಟಿ ಅಗಾಧ ಪ್ರಮಾಣದ ಕಪ್ಪು ಹಣವನ್ನು ಚಲಾವಣೆರಹಿತಗೊಳಿಸಿ ಆರ್ಥಿಕವಾಗಿ ಸ್ವಚ್ಚಭಾರತ ಅಭಿಯಾನವನ್ನು ಯಶಸ್ವಿಗೊಳಿಸಲಾಯಿತು ಎಂದು ಕೇಂದ್ರ ಸರಕಾರ ಘೋಷಿಸುತ್ತದೆ. ಭಕ್ತರು ಮೋದಿ ಸಾಧನೆಗೆ ಜೈಕಾರ ಹಾಕಿ ಕುಣಿದಾಡುತ್ತದೆ.

ಇಲ್ಲಿವರೆಗೂ ಅನೇಕಾನೇಕ ಚಿಕ್ಕಪುಟ್ಟ ವ್ಯವಹಾರಗಳು ಯಾವುದೇ ಅಕೌಂಟಿಲ್ಲದೇ ನಡೆದುಕೊಂಡು ಬರುತ್ತಿದ್ದವು. ಗ್ರಾಮೀಣ ಪ್ರದೇಶದಲ್ಲಿ ಇರುವ ಪೆಟ್ಟಿ ಅಂಗಡಿಗಳ ಆದಾಯ ಅದರ ಮಾಲೀಕರ ಕುಟಂಬ ನಿರ್ವಹಣೆಗೆ ಸರಿಹೋಗುತ್ತಿತ್ತು. ಈಗ ಎಲ್ಲದಕ್ಕೂ ಲೆಕ್ಕ ಕೊಡುವಂತಹ ಬಿಗಿ ಆರ್ಥಿಕ ನೀತಿ ಜಾರಿಗೆ ಬಂದರೆ ಮೊಟ್ಟ ಮೊದಲು ಬರ್ಬಾದಾಗೋದು ಚಿಕ್ಕಪುಟ್ಟ ವ್ಯಾಪಾರಸ್ತರು, ಬೀದಿ ಬದಿಯ ಮಾರಾಟಗಾರರು ಹಾಗೂ ಸಣ್ಣ ಪುಟ್ಟ ಪ್ರಮಾಣದ ಲೇವೀದಾರರು. ಬಡಜನರು ತಮ್ಮ ತುರ್ತಿಗೆ ಹಣಕಾಸಿನ ಸಹಾಯ ಬೇಕೆಂದರೆ ಮೊದಲು ಹೋಗುವುದೇ ಸ್ಥಳೀಯ ಲೇವಾದೇವಿದಾರರ ಬಳಿಗೆ. ಏನೂ ಇಲ್ಲದವರಿಗೆ ಯಾವ ಬ್ಯಾಂಕೂ ಅಡಮಾನವಿಡದೇ ಒಂದು ರೂಪಾಯಿ ಸಾಲವನ್ನೂ ಕೊಡುವುದಿಲ್ಲ. ಲೇವಿದಾರರು ಕಪ್ಪು ಬಿಳಿ ಹಣದ ಲೆಕ್ಕಾಚಾರದಲ್ಲಿ ಸಿಕ್ಕು ಅಗತ್ಯವಿದ್ದವರಿಗೆ ಹಣ ಕೊಡಲು ಸಾಧ್ಯವಿಲ್ಲವೆಂದರೆ ಬಡವರು ಎಲ್ಲಿಗೆ ಹೋಗಬೇಕು?


ದೇಶದ ಹಣವೆಲ್ಲಾ ಬಿಳಿಯಾಗಿ ಕಪ್ಪು ಹಣದ ಚಲಾವಣೆಯೇ ನಿಂತು ಹೋಯಿತೆಂದು ಭಾವಿಸೋಣ.. ಆಗ ಅದರ ಸಂಪೂರ್ಣ ಲಾಭವಾಗುವುದು ಮತ್ತೆ ಬಹುರಾಷ್ಟ್ರೀಯ ಹಾಗೂ ಕಾಪೋರೇಟ್ ಕಂಪನಿಗಳಿಗೆ ಎನ್ನುವುದು ಸತ್ಯ. ಯಾಕೆಂದರೆ ಕಪ್ಪು ಹಣದ ಚಲಾವಣೆ ನಿಂತರೆ ಬಹುತೇಕ ವ್ಯವಹಾರಗಳು ಅಧಿಕೃತಗೊಳ್ಳುತ್ತವೆ. ಸಣ್ಣ ಪುಟ್ಟ ವ್ಯಾಪಾರಸ್ತರು ಈ ತೆರಿಗೆ ಲೆಕ್ಕಾಚಾರದ ಜಂಜಾಟದಲ್ಲಿ ಬೀಳದಿರುವುದರಿಂದ ದೊಡ್ಡ ವ್ಯಾಪಾರಸ್ತ ಮಳಿಗೆಗಳು ತೆರಿಗೆಯನ್ನು ಗ್ರಾಹಕರ ಮೇಲೆ ಹಾಕಿ ಲಾಭ ದೋಚತೊಡಗುತ್ತಾರೆ. ಸರಕಾರಕ್ಕೇನೋ ತೆರಿಗೆ ರೂಪದಲ್ಲಿ ಜನರ ಹಣ ಬಂಡವಾಳಿಗರ ಮೂಲಕ ಸೇರುತ್ತದೆ. ಆದರೆ.. ಚಿಕ್ಕ ಪುಟ್ಟ ವ್ಯಾಪಾರಸ್ತರು ಬರುಬರುತ್ತಾ ನಾಶವಾಗುತ್ತಾರೆ. ಇದರಿಂದಾಗಿ ಬಡವರು ಹೆಚ್ಚೆಚ್ಚು ಬಡವರಾಗುತ್ತಾರೆ. ಶ್ರೀಮಂತರು ಇನ್ನೂ ಹೆಚ್ಚೆಚ್ಚು ಶ್ರೀಮಂತರಾಗಿ ಅಸಮಾನತೆ ಎನ್ನುವುದು ಮಿತಿಮೀರುತ್ತದೆ. ಸಾವಕಾಶವಾಗಿ ಕಾರ್ಪೋರೇಟ್ ದಿಗ್ಗಜ ಕಂಪನಿಗಳು ಇಡೀ ದೇಶದ ವ್ಯಾಪಾರ ವಹಿವಾಟನ್ನು ತಮ್ಮ ವಶಕ್ಕೆ ತೆಗೆದುಕೊಂಡು ತಮ್ಮಿಷ್ಟದಂತೆ ಇಡೀ ದೇಶದ ಆರ್ಥಿಕತೆಯನ್ನು ನಿರ್ವಹಿಸುವ ಅಪಾಯವೂ ಬೇಕಾದಷ್ಟಿವೆ. ಯಾಕೆಂದರೆ ಈ  ದೇಶದ ಬ್ರಷ್ಟತೆ ಆ ರೀತಿ ಇದೆ.


ದೊಡ್ಡ ದೊಡ್ಡ ತಿಮಿಂಗಿಲುಗಳನ್ನು ಹಿಡಿಯಲಾರದ ಸರಕಾರವು ಚಿಕ್ಕಪುಟ್ಟ ಮೀನುಗಳಿಗೆ ಬಲೆಯನ್ನು ಹರಡಿ ಕೂತಿದೆ. ಸಾವಿರಾರು ಕೋಟಿ ಬ್ಲಾಕ್ಮನಿಯೊಂದಿಗೆ ವಿದೇಶಕ್ಕೆ ಪಲಾಯನ ಮಾಡಿದ ವಿಜಯ್ ಮಲ್ಯರಂತರವರನ್ನು, ಸರಕಾರಕ್ಕೆ ಸಾವಿರಾರು ಕೋಟಿ ಪಂಗನಾಮ ಹಾಕಿ ದೇಶಬಿಟ್ಟು ಓಡಿ ಹೋದ ಲಲಿತ್ ಮೋದಿಯಂತಹ ದೊಡ್ಡ ಪ್ರಾಡಗಳಿಂದ ಒಂದು ರೂಪಾಯಿಯನ್ನು ವಸೂಲಿ ಮಾಡಲಾಗದ ಕೇಂದ್ರ ಸರಕಾರವು ಈಗ ಬಡಜನರ ಕಿಸೆಗೆ ಕೈಹಾಕಿ ಇರುವ ನಾಲ್ಕಾರು ನೋಟುಗಳಿಗೂ ಬೆಲೆ ಇಲ್ಲದಂತೆ ಮಾಡುತ್ತಿದೆ. ನಿಜವಾಗಿ ಕಪ್ಪು ಹಣ ಇರುವ ಶ್ರೀಮಂತರಿಗೆ ಬಿಳಿ ಹಣವನ್ನಾಗಿಸುವ ಮಾರ್ಗಗಳು ಗೊತ್ತಿವೆ ಹಾಗೂ ಅಂತವರು ಪ್ರಭಾವಶಾಲಿಗಳೂ ಆಗಿದ್ದಾರೆ. ಆದರೆ.. ಯಾವುದೂ ಗೊತ್ತಿಲ್ಲದೇ ಒಂದಿಷ್ಟು ನೋಟುಗಳನ್ನು  ಮನೆಯಲ್ಲಿ ಇಟ್ಟುಕೊಂಡ ಅಮಾಯಕ ದುಡಿಯುವ ಜನರು ಮಾತ್ರ ಇದ್ದದ್ದನ್ನೂ ಕಳೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚಿವೆ. ಆದರೆ.. ಅವರ ಗೋಳನ್ನು ಕೇಳುವವರು ಯಾರೂ ಇಲ್ಲವಾಗಿದೆ. ಹೀಗಾಗಿ ಬರುಬರುತ್ತಾ ಈ ತುಘಲಕ್ ಸರಕಾರದ ಆರ್ಥಿಕ ನೀತಿಯ ಮೇಲೆಯೇ ಬಡಜನರಿಗೆ ನಂಬಿಕೆ ಹೋಗುತ್ತದೆ. ಮಧ್ಯಮವರ್ಗದವರೂ ಸಹ ಹಣಕ್ಕಿಂತಲೂ ಬಂಗಾರವೇ ವಾಸಿ ಎಂದು ಸರಕಾರಿ ಲೆಕ್ಕದ ಕಪ್ಪು ಹಣವನ್ನು ಬೇರೆ ಕಡೆಗೆ ಹೂಡಿಕೆ ಮಾಡಲು ಶುರು ಮಾಡುತ್ತಾರೆ.

ಕಪ್ಪು ಹಣದ ನಿಯಂತ್ರಣಕ್ಕೆ ನೋಟುಗಳ ಬದಲಾವಣೆ ಮಾಡಿದ್ದು ಇದೇ ಮೊದಲನೆಯದೂ ಅಲ್ಲಾ.. ಕೊನೆಯದೂ ಅಲ್ಲಾ. ಸ್ವಾತಂತ್ರ್ಯ ಪೂರ್ವದಲ್ಲಿ 1946 ರಲ್ಲಿ ಸಹ ಆಗ ಚಲಾವಣೆಂiiಲ್ಲಿದ್ದ ಒಂದು ಸಾವಿರ ಹಾಗೂ ಹತ್ತು ಸಾವಿರ ಮುಖಬೆಲೆಯ ನೋಟುಗಳನ್ನು ಕಪ್ಪು ಹಣ ತಡೆಯುವ ಉದ್ದೇಶದಿಂದ ರದ್ದು ಮಾಡಲಾಗಿತ್ತು.  ಮತ್ತೆ 1954 ರಲ್ಲಿ 1೦೦೦, 5೦೦೦ ಹಾಗೂ 1೦೦೦೦ ಮುಖಬೆಲೆಯ ನೋಟುಗಳನ್ನು ಪರಿಚಯಿಸಲಾಯಿತು. ಆದರೆ ಮತ್ತೆ ಕಪ್ಪು ಹಣ ನಿಯಂತ್ರಣಕ್ಕಾಗಿ ಈ ನೋಟುಗಳನ್ನು 1978 ರಲ್ಲಿ ಮೊರಾರ್ಜಿ ದೇಸಾಯಿಯವರು ಸಹ ಇದೇ ಮೋದಿಯವರಂತೆ ಇದ್ದಕ್ಕಿದ್ದಂತೆ ಹಿಂಪಡೆದು ಅಚ್ಚರಿ ಹುಟ್ಟಿಸಿದ್ದರು. ಆದರೆ.. ಆಗ ಈ ದೊಡ್ಡ ಮೊತ್ತದ ನೋಟುಗಳನ್ನು ಕೇವಲ ಶ್ರೀಮಂತರೇ ಹೊಂದಿದ್ದರಿಂದ ಬಡಜನರಿಗೆ ಯಾವುದೇ ರೀತಿಯ ತೊಂದರೆಯಾಗಿರಲಿಲ್ಲ. ಬ್ಯಾಂಕುಗಳನ್ನು ಆಗಲೂ ಬಂದ್ ಮಾಡಿ ಎಲ್ಲಾ ವ್ಯವಹಾರಗಳೂ ಸಹ ಕಾನೂನು ಬದ್ದವಾಗಿಯೇ ನಡೆಯಬೇಕು ಎಂದು ಮುರಾರ್ಜಿ ಸರಕಾರ ಉದ್ದೇಶಿಸಿತ್ತು. ಈ ಆರ್ಥಿಕ ಬದಲಾವಣೆ ಜಾರಿಮಾಡಲು ಮೊರಾರ್ಜಿ ಡಿಮೊನಟೈಸೇಷನ್ ಆಕ್ಟ್ ಜಾರಿಗೆ ತಂದರು. ಇದಾದ 20 ವರ್ಷಗಳ ನಂತರ 1998 ರಲ್ಲಿ ಅಧಿಕಾರಕ್ಕೆ ಬಂದ ಎನ್.ಡಿ.ಎ ಸರಕಾರ ಈ ಕಾಯಿದೆಯನ್ನು ಹಿಂಪಡೆದು ಸಾವಿರ ರೂಪಾಯಿಗಳ ನೋಟನ್ನು ಜಾರಿಗೆ ತಂದಿತು. ಕಳೆದ ವರ್ಷವೂ ಸಹ ಕಪ್ಪು ಹಣವನ್ನು ನಿಯಂತ್ರಿಸುವ ಉದ್ದೇಶದಿಂದ ಇದೇ ಮೋದಿ ಸರಕಾರವು 2005ಕ್ಕಿಂತಾ ಮುಂಚೆ ಮುದ್ರಣಗೊಂಡಿದ್ದ ಎಲ್ಲಾ 5೦೦ ರೂ ಬೆಲೆಯ ನೋಟುಗಳನ್ನು ಹಿಂಪಡೆಯಿತು. ಹೀಗೆ ಕಾಲ ಕಾಲಕ್ಕೆ ನೋಟುಗಳ ಬದಲಾವಣೆ ನಡೆಯುತ್ತಲೇ ಇದೆ. 

ಆದರೆ.. ಕಪ್ಪು ಹಣವಂತೂ ನಿಂತಿಲ್ಲ ಹಾಗೂ ನಿಯಂತ್ರಣಕ್ಕೂ ಬಂದಿಲ್ಲ. ದಿನದಿಂದ ದಿನಕ್ಕೆ ಬಂಡವಾಳಿಗರ ವ್ಯಾಪಾರ ವಹಿವಾಟು ಹೆಚ್ಚಿದಂತೆಲ್ಲಾ ತೆರಿಗೆ ಕಳ್ಳತನ ಹೆಚ್ಚುತ್ತಲೇ ಇದೆ.. ಕಪ್ಪು ಹಣ ಯಾವುಯಾವುದೋ ರೂಪದಲ್ಲಿ ರೂಪಾಂತರಗೊಳ್ಳುತ್ತಲೇ ಇದೆ. ಹಿಂದೆಯೂ ನೋಟುಗಳ ರದ್ದತಿಯಿಂದಾಗಿ ಕೇವಲ ಕೆಲವೇ ಕೆಲವು ಶ್ರೀಮಂತರು ತೊಂದರೆಗೊಳಗಾಗಿದ್ದರು. ಆಗ ಜನಸಾಮಾನ್ಯರಲ್ಲಿ ದೊಡ್ಡ ಬೆಲೆಯ ನೋಟುಗಳು ಹೆಚ್ಚಾಗಿ ಸಂಗ್ರಹವಾಗಿರಲಿಲ್ಲ.  ಆದರೆ ಈಗ ಕಾಳಧನಿಕರಿಗಿಂತಾ ಬಹುತೇಕ ಜನಸಾಮಾನ್ಯರು ವಿಪರೀತ ತೊಂದರೆಗೊಳಗಾಗಿದ್ದಾರೆ. ಯಾಕೆಂದರೆ ಈಗ ಬಹುತೇಕರ ಬಳಿ ಐನೂರು ಸಾವಿರ ರೂಪಾಯಿಯ ನೋಟುಗಳು ಹರಿದಾಡುತ್ತಿವೆ. ಅವುಗಳ ಚಲಾವಣೆ ಇದ್ದಕ್ಕಿದಂತೆ ನಿಲ್ಲಿಸಿದ್ದರಿಂದ ಅಧೀಕೃತವಾಗಿ ಬದಲಾವಣೆ ಮಾಡಿಕೊಳ್ಳಲು ಆಗದಿರುವ ದುಡಿಯುವ ಜನರು ತಮ್ಮಲ್ಲಿರುವ ನೋಟುಗಳ ಮಾನ್ಯತೆಯನ್ನೇ ಕಳೆದುಕೊಂಡು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಕಪ್ಪು ಹಣದ ಸಂಪಾದನೆ ಹಾಗೂ ಸಂಗ್ರಹ ನಿಲ್ಲುತ್ತದೆ ಎನ್ನುವುದಂತೂ ಕನಸಿನ ಮಾತು...

ಆರೆಸ್ಸೆಸ್ ನಾಯಕ ಗೋವಿಂದಾಚಾರ್ಯರು ತಮ್ಮ ಫೇಸ್ಬುಕ್ಕಲ್ಲಿ  "ಮೋದಿಯವರ  ಈ ನೋಟು ಬದಲಾವಣೆಯು ಕಪ್ಪು ಹಣ ಹೊರತರುವಲ್ಲಿ  ಮಹತ್ತರ ಬದಲಾವಣೆ ತರಲು ಸಾಧ್ಯೆವಿಲ್ಲ. ಶೇಕಡಾ ಮೂರರಷ್ಟು ಬ್ಲಾಕ್ಮನಿ ಹೊರಗೆ ಬರಬಹುದಾಗಿದೆ" ಎಂದು ಬರೆದುಕೊಂಡಿದ್ದಾರೆ. ಸತ್ಯ ಸಂತನ ಬಾಯಲ್ಲಿ ಬರಲಿ ಇಲ್ಲವೇ ಸೈತಾನನ ಬಾಯಲ್ಲಿ ಬರಲಿ.. ಸತ್ಯ ಸತ್ಯವೇ ಆಗಿದೆ. ಅಸಂಖ್ಯಾತ ಜನರಿಗೆ ತೊಂದರೆಕೊಟ್ಟು ಬೆಟ್ಟ ಅಗಿದು ಇಲಿ ಹಿಡಿಯುವ ಕಾಯಕದಲ್ಲಿ ಮೋದಿ ಪಡೆ ನಿರತವಾಗಿದೆ. ಮೋದಿ ಭಕ್ತರು ಹೇಳುವಂತೆ ಈ ಆರ್ಥಿಕ ವಿಪ್ಲವ  ಇದ್ದಕ್ಕಿದ್ದಂತೆ ಯಾರಿಗೂ ಸುಳಿವು ಕೊಡದಂತೆ ಘಟಿಸಿದ್ದಂತೂ ಅಲ್ಲವೇ ಅಲ್ಲ. ಇದರ ಬಗ್ಗೆ ಗುಜರಾತಿನ ಪತ್ರಿಕೆಯಲ್ಲಿ ಏಳು ತಿಂಗಳ ಹಿಂದೆ ಅಂದರೆ ಎಪ್ರಿಲ್ 1 ರಂದೇ ವರದಿ ಪ್ರಕಟವಾಗಿತ್ತು. ಗುಜರಾತಿನ ಸಮಸ್ತ ಮಾರವಾಡಿಗಳು ಹಾಗೂ ಕಪ್ಪುಹಣದ ಕುಳಗಳು ಜಾಗ್ರತವಾಗಿ ಐದು ತಿಂಗಳಲ್ಲಿ ತಮ್ಮ ಕಪ್ಪು ಹಣವನ್ನು ಸಾಧ್ಯವಾದಷ್ಟು ಬಿಳಿ ಗೊಳಿಸಿಕೊಂಡರು ಹಾಗೂ ಮಿಕ್ಕಿದ್ದನ್ನು ಡಾಲರ್ ಇಲ್ಲವೇ ಚಿನ್ನದ ರೂಪದಲ್ಲಿ ಪರಿವರ್ತಿಸಿಕೊಂಡು ಸೇಫ್ ಆದರು. ಹಾಗೆಯೇ ಸಂಘಪರಿವಾರದ ದೊಡ್ಡ ಕುಳಗಳಿಗೆ ಹಾಗೂ ಪೋಷಕರಿಗೆ ಮೊದಲೇ ವಿಷಯವನ್ನು ತಿಳಿಸಿಲಾಗಿತ್ತು. ಆದ್ದರಿಂದ ಅಂತವರೆಲ್ಲರೂ ತಮ್ಮ ಹಣ ಪರಿವರ್ತನೆಗೆ ಬೇಕಾದ ಅಗತ್ಯ ವ್ಯವಸ್ಥೆಯನ್ನು ರೂಪಿಸಿಕೊಳ್ಳಲು ಸಾಕಷ್ಟು ಕಾಲಾವಕಾಶ ಸಿಕ್ಕಿತು. ಅಕಸ್ಮಾತ್ ಯಾರಿಗೂ ತಿಳಿಸದೇ ಮೋದಿಯವರು ಈ ರೀತಿ ಕ್ರಮವನ್ನು ತೆಗೆದುಕೊಂಡಿದ್ದರೆ ಸಂಘಪರಿವಾರದವರೇ ಮೊದಲು ತಿರುಗಿ ಬೀಳುತ್ತಿದ್ದರು. ಆ ನಂತರ ಮೋದಿ ಬೆಂಬಲಿಗರಾದ ವ್ಯಾಪಾರಸ್ತರು ಹಾಗೂ ಬಂಡವಾಳಶಾಹಿಗಳು ತೀವ್ರವಾಗಿ ವಿರೋಧಿಸುತ್ತಿದ್ದರು. ಕಾರ್ಪೋರೇಟ್ ಕಂಪನಿಗಳಂತೂ ಮೋದಿ ವಿರುದ್ದ ಸಮರವನ್ನೇ ಸಾರುತ್ತಿದ್ದವು. ಆದರೆ ಇದ್ಯಾವುದೂ ಆಗಲೇ ಇಲ್ಲ.. ಯಾಕೆಂದರೆ ಅಂತವರಿಗೆಲ್ಲಾ ಮೊದಲೇ ವಿಷಯ ಗೊತ್ತು ಮಾಡಿಕೊಟ್ಟಿದ್ದರಿಂದ ಎಲ್ಲರೂ ಜಾಗೃತರಾಗಿ ತಮ್ಮ ಕಾಳಧನದ ರಕ್ಷಣೆಗೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದರು ಹಾಗೂ ಅದಕ್ಕೆ ಬೇಕಾದಷ್ಟು ಸಮಯವೂ ಅವರಿಗೆ ಸಿಕ್ಕಿತ್ತು.  ದೇಶದ ಸಾಮಾನ್ಯ ಜನತೆ ಬೇಸ್ತುಬಿದ್ದು ಪರದಾಡುವಂತಾಯಿತು. ದೇಶದಾದ್ಯಂತ ಆರ್ಥಿಕ ತುರ್ತು ಪರಿಸ್ಥಿತಿ ನಿರ್ಮಾಣವಾದಂತಾಯಿತು. 

ಆರ್ಥಿಕ ತುರ್ತು ಪರಿಸ್ಥಿತಿ ಕುರಿತು ಹಾಗೂ ಕಪ್ಪುಹಣ ರದ್ದಾಗಬಹುದಾದ ಯೋಜನೆ ಕುರಿತು ಎಲ್ಲಕ್ಕಿಂತಲೂ ಮೊದಲು ಗೊತ್ತಾಗಿದ್ದು ಅಂಬಾನಿಗೆ. ಅದಕ್ಕಾಗಿಯೇ ಇರುವ ಕಪ್ಪು ಹಣವನ್ನು ವಿನಿಯೋಗಿಸಿ ಸೂಕ್ತ ವ್ಯವಸ್ಥೆಗಳಿಲ್ಲದಿದ್ದರೂ  ಜಿಯೋ ಮೊಬೈಲ್ ನೆಟ್ವರ್ಕನ್ನು ಅವಸರದಲ್ಲಿ ಶುರುಮಾಡಲಾಯಿತು. ಕೊಟ್ಟ ಸೇವೆಗೆ ತಕ್ಕ ಹಣ ಕೊಡಲು ಹೇಳಿದರೆ  ಹೆಚ್ಚು ಜನ ಜಿಯೋ ನೆಟ್ವರ್ಕಗೆ ಬರುವುದಿಲ್ಲ ಎಂದುಕೊಂಡು ಮೂರು ತಿಂಗಳುಗಳ ಕಾಲ ಪುಕ್ಕಟೆ ಸಿಮ್ ಹಾಗೂ ಕನೆಕ್ಷನ್ ಕೊಟ್ಟು ಕೊಟ್ಯಾಂತರ ಜನರನ್ನು ಆಕರ್ಷಿಸಲಾಯಿತು. ಹೀಗೆ ದೇಶಾದ್ಯಂತ ಸಂಪೂರ್ಣ ಉಚಿತ ಸಿಮ್, ಕಾಲ್ ಹಾಗೂ ಇಂಟರ್ನೆಟ್ಟನ್ನು ಕೊಟ್ಟ ಉದಾಹರಣೆ ಇಡೀ  ದೇಶದಲ್ಲೇ ಇಲ್ಲ. ಆದರೆ..ಅಂಬಾನಿಯ ರಿಲಾಯನ್ಸ್ ಆ ಕೆಲಸ ಮಾಡಿತು. ಯಾಕೆಂದರೆ.. ಅದು ಇನ್ವೆಸ್ಟ್ ಮಾಡಿದ್ದು ತೆರಿಗೆ ಕಳ್ಳತನದಿಂದ ಉಳಿಸಿದ ಕಪ್ಪು ಹಣವನ್ನು. ಹಾಗೂ ಜನವರಿ 1 ರಿಂದ ಏನು ಜನರಿಂದ ಮೊಬೈಲ್ ಕರೆನ್ಸಿ ವಸೂಲಿ ಮಾಡಲಾಗುತ್ತದೆಯೋ ಅದೆಲ್ಲಾ ಬಿಳಿ ಹಣವಾಗಿ ರಿಲೈಯನ್ಸ್ ಅಕೌಂಟಲ್ಲಿ ಬಂದು ಬೀಳುತ್ತಿದೆ. ಹೇಗಿದೆ ನೋಡಿ ಬ್ರಹತ್ ಪ್ರಮಾಣದ ಅನಧೀಕೃತ ಕಪ್ಪು ಹಣವನ್ನು ನಿರಂತರ ಹರಿದು ಬರುವ ಅಧೀಕೃತ ಬಿಳಿ ಹಣವನ್ನಾಗಿ ಪರಿವರ್ತಿಸುವ ಐನಾತಿ ಐಡಿಯಾ... ಇಂತಹ ವಾಮಮಾರ್ಗಗಳನ್ನು ಬಳಸಿದ್ದರಿಂದಲೇ ಇಂದು ಅಂಬಾನಿ ದೇಶದ ನಂ.1 ಶ್ರೀಮಂತನಾಗಿದ್ದು. ಮೋದಿಯವರ ಬಿಜೆಪಿಯ ಆರ್ಥಿಕತೆಯ ಬೆನ್ನೆಲುಬಾದದ್ದು. ಯಾರು ಏನೇ ಹೇಳಲಿ ಈ ನೋಟು ಬದಲಾವಣೆ ಪ್ರಕ್ರಿಯೆಯಲ್ಲಿ ಯಾರ ಊಹೆಗೂ ನಿಲುಕದ ಬ್ರಹನ್ನಾಟಕ ನೇಪತ್ಯದಲ್ಲಿ ನಡೆದಿದೆ. ಇಲ್ಲಿ ಸಾವಿರಾರು ರೂಪಾಯಿಗಳ ಬದಲಾವಣೆಗಾಗಿ ಜನಸಾಮಾನ್ಯರ ಪರದಾಟ ಮುಂದುವರೆದಿದೆ.  

ಇನ್ನೊಂದು ಮೂಲದ ಪ್ರಕಾರ... ಉತ್ತರ ಭಾರತದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಚಲಾವಣೆ ಮಾಡಲು ವಿರೋಧ ಪಕ್ಷಗಳಿಗೆ ಹಣಕಾಸಿನ ಬರವನ್ನು ಸೃಷ್ಟಿಸಲು ಮೋದಿ ಮಾಡಿದ ಮಾಸ್ಟರ್ ಪ್ಲಾನ್ ಇದೆಂದು ಹೇಳಲಾಗುತ್ತಿದೆ. ಕಾಂಗ್ರೆಸ್, ಸಮಾಜವಾದಿ, ಬಹುಜನ.. ಹೀಗೆ ಬಿಜೆಪಿಯ ವಿರೋಧಿ ಪಕ್ಷಗಳಲ್ಲಿಯೂ ಕೂಡಾ ಬಿಜೆಪಿಯಲ್ಲಿರುವಂತೆಯೇ ದೊಡ್ಡ ದೊಡ್ಡ ಕಪ್ಪುಹಣದ ದೈತ್ಯ ಕಳ್ಳರಿದ್ದಾರೆ. ಅಗಣಿತ ಹಣ ಭೂಗತವಾಗಿದೆ. ಅದೆಲ್ಲಾ ಮುಂಬರುವ ಚುನಾವಣೆಯಲ್ಲಿ  ಮತದಾರರನ್ನು ಸೆಳೆಯಲು ಬಳಕೆಯಾಗುತ್ತದೆ. ಆದ್ದರಿಂದ  ಆ ಹಣವನ್ನೇ ಮೌಲ್ಯರಹಿತವಾಗಿಸಿಬಿಟ್ಟರೆ ವಿರೋಧ ಪಕ್ಷಗಳು ಅದು ಹೇಗೆ ಚುನಾವಣೆಗೆ ಬೇಕಾದ ಅಗಾಧ ಪ್ರಮಾಣದ ಹಣವನ್ನು ತರುತ್ತಾರೆ? ಎಂದುಕೊಂಡ ಮೋದಿ ಪಟಾಲಂ ವಿರೋಧ ಪಕ್ಷಗಳನ್ನು ಆರ್ಥಿಕವಾಗಿ ಹಣಿಯಲು ಚುನಾವಣಾ ಸಂದರ್ಭದಲ್ಲಿ ಈ ತಂತ್ರಗಾರಿಕೆಯನ್ನು ಹೆಣೆದಂತಿದೆ. 1978ರಲ್ಲಿ ಮೊರಾರ್ಜಿ ದೇಸಾಯಿಯವರೂ ಸಹ ಕಾಂಗ್ರೆಸ್ಸನ್ನು ಮಣಿಸಲು ಇದೇ ತಂತ್ರಗಾರಿಕೆಯನ್ನು ಬಳಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.  

ರೋಗದ ಮೂಲಕ್ಕೆ ಮದ್ದರಿಯದೇ ಕೇವಲ ತಕ್ಷಣದ ಪರಿಣಾಮಕ್ಕೆ ಆಂಟಿಬಯಾಟಿಕ್ಸ್ ಕೊಟ್ಟು ಸೈಡ್ ಎಫೆಕ್ಟಗಳನ್ನು ಅನುಭವಿಸುವಂತಿದೆ ಈ ಆರ್ಥಿಕ ಬದಲಾವಣೆ. ಈ ದೇಶದ ಬಹುತೇಕ ಸಮಸ್ಯೆಗಳ ಮೂಲ ಇರುವುದು ಅನಿಯಂತ್ರಿತ ಬ್ರಷ್ಟಾಚಾರದಲ್ಲಿ. ಎಲ್ಲಿವರೆಗೂ ಬ್ರಷ್ಟಾಚಾರವೆನ್ನುವುದು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಲ್ಲಿ ಹಾಸುಹೊಕ್ಕಾಗಿರುತ್ತದೋ  ಅಲ್ಲಿವರೆಗೂ ಅದೆಂತಹ ಆರ್ಥಿಕ ಸುಧಾರಣೆಗಳನ್ನು ತಂದರೂ ಅದು ಮತ್ತೆ ಉಳ್ಳವರ ಪರವಾಗಿಯೇ ಇರುತ್ತದೆಯೇ ಹೊರತು ದುಡಿಯುವ ವರ್ಗಗಳ ಪರವಾಗಿಯಂತೂ ಅಲ್ಲವೇ ಅಲ್ಲ. ಅಧೀಕೃತ ವಹಿವಾಟುದಾರರಾದ ಬಂಡವಾಳಿಗ ಕಂಪನಿಗಳು ಆಳುವ ವ್ಯವಸ್ಥೆಯೊಳಗಿನ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ನೌಕರರನ್ನು ಕೊಂಡುಕೊಂಡು ದೇಶದ ಸಂಪನ್ಮೂಲಗಳನ್ನು ಅಧೀಕೃತವಾಗಿಯೇ ಲೂಟಿಹೊಡೆಯುವುದರಲ್ಲಿ  ಸಂದೇಹವಿಲ್ಲ. ಪ್ರಧಾನಿ ಮೋದಿಯವರಿಗೆ ನಿಜಕ್ಕೂ ಈ ದೇಶದ ಬಗ್ಗೆ ಕಾಳಜಿ ಹಾಗೂ ದುಡಿಯುವ ಬಹುಸಂಖ್ಯಾತ ಜನರ ಬಗ್ಗೆ ಕಳಕಳಿ ಇದ್ದಲ್ಲಿ ಮೊದಲು ಬ್ರಷ್ಟಾಚಾರ ಮುಕ್ತ ಭಾರತವನ್ನು ಮಾಡಲು ಪ್ರಯತ್ನಿಸಲಿ. ಎಲ್ಲಿವರೆಗೂ ಈ ದೇಶದಲ್ಲಿ ಬ್ರಷ್ಟಾಚಾರ ಎನ್ನುವುದು ಸರ್ವವ್ಯಾಪಿಯಾಗಿರುವುದೋ ಅಲ್ಲಿವರೆಗೂ ಯಾವುದೇ ಆರ್ಥಿಕ ಸುಧಾರಣೆ ತಂದರೂ ಅದು ತುಘಲಕ್ ಆಡಳಿತವೇ ಆಗುತ್ತದೆ. ತುಘಲಕ್ ನಾಟಕದ ಅಜೀಜನಂತಹ ಬಹುರೂಪಿ ಕಳ್ಳರ ಸಂತಾನ ದೇಶಾದ್ಯಂತ ತುಂಬಿದೆ. ನೈತಿಕ ಪ್ರಜ್ಞೆ ಎನ್ನುವುದೇ ಸತ್ತ ದೇಶದಲ್ಲಿ ಎಂತಹ ಬದಲಾವಣೆ ತಂದರೂ ಅದು ಹೇಗೆ ಯಶಸ್ವಿಯಾದೀತು? ಕಳ್ಳರನ್ನು ಹಿಡಿಯಲು ನಿಯಮಿಸಿದ ಪೊಲೀಸರುಗಳೇ ಕಳ್ಳರ ಜೊತೆ ಶಾಮೀಲಾಗಿ ಜನಸಾಮಾನ್ಯರನ್ನು ದೋಚುವ ಅವ್ಯವಸ್ಥೆಯಲ್ಲಿ ಅದೆಂತಾ ಆರ್ಥಿಕ ನೀತಿ ಫಲಿಸೀತು? ಬಂಡವಾಳಶಾಹಿ ಪ್ರಜಾಪ್ರಭುತ್ವದಲ್ಲಿ ಮನುಷ್ಯ ಸಂಬಂಧಗಳಿಗಿಂತಾ ಸ್ವಾರ್ಥ ಹಾಗೂ ಲಾಭವೆನ್ನುವುದೇ ಬದುಕಾಗಿರುವಾಗ ಮಾನವೀಯತೆ ಎನ್ನುವುದು ಹೇಗೆ ಉಳಿದೀತು? ಓಟಿಗಾಗಿ ಹಾಗೂ ನೋಟಿಗಾಗಿ ಇಡೀ ವ್ಯವಸ್ಥೆಯೇ ಕರಪ್ಟ್ ಆಗಿರುವಾಗ ಜನಸಾಮನ್ಯರ ಬದುಕು ಯಾವಾಗ ಹಸನಾದೀತು?

                         -ಶಶಿಕಾಂತ ಯಡಹಳ್ಳಿ 


ಮಂಗಳವಾರ, ನವೆಂಬರ್ 8, 2016

ತಹ ತಹ.....60 ಸರಕಾರಿ ಸರಾಯಿ ಅಂಗಡಿ ದುಪ್ಪಟ್ಟು; ಬಡಜನರ ಬದುಕಿಗೆ ದೊಡ್ಡ ಪೆಟ್ಟು :

 ಸರಕಾರಕ್ಕೆ ಸರಾಯಿಯ ಚೆಲ್ಲಾಟ, ಗ್ರಾಮೀಣ ಮಹಿಳೆಯರಿಗೆ ಪ್ರಾಣಸಂಕಟ :



ಅತ್ತ ರಾಯಚೂರಿನಲ್ಲಿ ಕಳೆದ ತಿಂಗಳು ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಹತ್ತಾರು ಸಾವಿರ ಗ್ರಾಮೀಣ ಮಹಿಳೆಯರು ಸ್ವಯಂಪ್ರೇರಣೆಯಿಂದ ಮಧ್ಯ ಮಾರಾಟ ನಿಷೇಧಿಸಿ ಎಂದು ಬೀದಿಗಿಳಿದು ಸಮಾವೇಶ ಮಾಡಿ  ಪ್ರತಿಭಟಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಅದು ನಡೆದು ಇನ್ನೂ ಒಂದು ತಿಂಗಳು ಕಳೆದಿದೆಯಷ್ಟೇ.  ಆದರೆ.. ಇತ್ತ ಸರಕಾರ ಮದ್ಯ ಮಾರಾಟದ ಮಳಿಗೆಗಳನ್ನು ನಾಡಿನಾದ್ಯಂತ ತೆರೆಯಲು ಯೋಜನೆ ಹಮ್ಮಿಕೊಂಡು ಕಾರ್ಯಗತ ಮಾಡಿದೆ. ಎಂಎಸ್‌ಐಎಲ್ ಎನ್ನುವ ಸರಕಾರಿ ಕೃಪಾಪೋಷಿತ ಸಗಟು ಸರಾಯಿ ಮಾರಾಟದ ಅಂಗಡಿಗಳ ಸಂಖ್ಯೆಯನ್ನು 402 ರಿಂದ 1302ಕ್ಕೆ  ಏರಿಸಲು  ರಾಜ್ಯ ಸರಕಾರ ಮುಂದಾಗಿದೆ. ಇದು ನಿನ್ನೆ ಮೊನ್ನೆಯದಲ್ಲ. ಈ ಕಾಂಗ್ರೆಸ್ ಸರಕಾರ ಬಂದಾಗಿನಿಂದಲೂ ಜನಸಂಖ್ಯೆಗೆ ಅನುಗುಣವಾಗಿ ಹೊಸ ಮದ್ಯ ಮಾರಾಟ ಮಳಿಗೆಗಳನ್ನು ನಡೆಸಲು ಲೈಸನ್ಸ್ ನೀಡಬೇಕೆನ್ನುವ ಬೇಡಿಕೆಗಳು ಮಂತ್ರಿಗಳಿಂದಲೇ ಬಂದಿತ್ತು. ಆಗ ಅಬಕಾರಿ ಸಚಿವರಾಗಿದ್ದ ಸತೀಶ್ ಜಾರಕಿಹೊಳಿಯವರು ರಾಜ್ಯದಲ್ಲಿ 1750 ಮದ್ಯದ ಅಂಗಡಿಗಳನ್ನು  ಹೊಸದಾಗಿ  ತೆರೆಯುವ ಪ್ರಸ್ತಾಪ ಮಂಡಿಸಿದ್ದರು.  ಸರಕಾರಕ್ಕೆ ಕೆಟ್ಟ ಹೆಸರು ಬಂದೀತೆಂದು ಕೆಲವು ಹಿರಿಯ ಮಂತ್ರಿಗಳು ಹೇಳಿದ್ದರಿಂದ ಹಾಗೂ ಸಾರ್ವಜನಿಕರಿಂದ ಪ್ರತಿರೋಧ ಬಂದಿದ್ದರಿಂದ ಯಾವುದೇ ಅಧೀಕೃತ ತೀರ್ಮಾಣ ತೆಗೆದುಕೊಳ್ಳದೇ ಸರಕಾರ ತೆಪ್ಪಗಿತ್ತು. ಆದರೆ.. ಈಗ ಅಧಿಕೃತವಾಗಿಯೇ ಮದ್ಯದಂಗಡಿಗಳನ್ನು ಹೆಚ್ಚಿಸುವ ನಿರ್ಧಾರಕ್ಕೆ ಸರಕಾರ ಬದ್ದವಾಗಿದೆ. ಬಡಜನರ ಬದುಕು ಹಾಗೂ ಕುಟುಂಬಗಳ ನೆಮ್ಮದಿಯ ಜೊತೆಗೆ ಸಾವಿನಾಟವಾಡಲು ಶುರುಮಾಡಿಕೊಂಡಿದೆ.

ಒಂದೆರಡು ಮಳಿಗೆಗಳಲ್ಲಾ.. ಈಗಿರುವ ಸರಾಯಿ ಮಳಿಗೆಗಳನ್ನು ದುಪ್ಪಟ್ಟಿಗಿಂತಾ ಹೆಚ್ಚು ಮಾಡುವ ಪ್ರಯತ್ನವು ಬಡವರ ಪರ ಎಂದು ಹೇಳುತ್ತಿರುವ ಈ ಸರಕಾರದ ಜನವಿರೋಧಿ ದೋರಣೆಗೆ ಪೂರಕವಾಗಿದೆ. ಕರ್ನಾಟಕದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 900 ಹೆಚ್ಚುವರಿ ಎಂಎಸ್‌ಐಎಲ್ (ಮೈಸೂರು ಸೇಲ್ಸ್ ಇಂಟರನ್ಯಾಷನಲ್ ಲಿಮಿಟೆಡ್) ಸಗಟು ಮಳಿಗೆಗಳಿಗೆ ಸರಕಾರ ಅನುಮೋದನೆ ನೀಡಿದ್ದು, ಆದರ ಜಾರಿಗಾಗಿ ಈಗಾಗಲೇ ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.  ಈ ಹಿಂದೆ ಎಸ್.ಎಂ.ಕೃಷ್ಣ ಮುಖ್ಯ ಮಂತ್ರಿಗಳಾಗಿದ್ದಾಗ ಕಿರಾಣಿ ಅಂಗಡಿಗಳಲ್ಲೂ ಮದ್ಯ ಮಾರಾಟ ಮಾಡಬಹುದಾದ ಪ್ರಯತ್ನ ನಡೆದಿತ್ತು. ಆದರೆ ಜನರ ತೀವ್ರ ವಿರೋಧದಿಂದಾಗಿ ಅದು ಆಚರಣೆಗೆ ಬರಲಿಲ್ಲ. ಯಾವುದೇ ಸರಕಾರಗಳು ಬಂದರೂ ಮಧ್ಯ ಮಾರಾಟವನ್ನು ಈ ರೀತಿ ದೊಡ್ಡ ಮಟ್ಟದಲ್ಲಿ ಶುರುಮಾಡಿರಲಿಲ್ಲ. ಜನರ ವಿರೋಧವನ್ನು ಕಟ್ಟಿಕೊಳ್ಳ ಬಯಸಲಿಲ್ಲ. ಒಂದೆರಡಲ್ಲ ಕಳೆದ 24 ವರ್ಷಗಳಿಂದ ಹೊಸದಾಗಿ ಮದ್ಯದಂಗಡಿಗಳ ಪರವಾಣಿಗೆಯನ್ನು ಯಾವ ಸರಕಾರಗಳೂ ನೀಡಿಲ್ಲ. ಹಿಂದಿದ್ದ ಬಿಜೆಪಿ ಸರಕಾರವೂ ಹೊಸದಾಗಿ ಯಾರಿಗೂ ಲೈಸನ್ಸ್ ಕೊಡದಿದ್ದರೂ ನವೀಕರಣವಾಗದ 4೦೦ ಕ್ಕೂ ಹೆಚ್ಚು ಮದ್ಯದ ಅಂಗಡಿಗಳ ಲೈಸನ್ಸನ್ನು ಸರಕಾರಿ ಸಾಮ್ಯದ ಎಂಎಸ್‌ಐಎಲ್ ಗೆ ನೀಡಿ ಅವುಗಳ ಮೂಲಕ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿತ್ತು. ಖಾಸಗಿಯವರಿಗೆ ಮದ್ಯ ಮಾರಾಟದ ಲೈಸೆನ್ಸ್ ನೀಡಿದರೆ ವಿರೋಧ ಪಕ್ಷಗಳು ವಿರೋಧಿಸುತ್ತಾರೆಂದುಕೊಂಡು ಸರಕಾರಿ ಸಾಮ್ಯದ ಎಂಎಸ್‌ಐಎಲ್ ಮಾರಾಟ ಮಳಿಗೆಗಳ ಮೂಲಕ ಮದ್ಯ ಮಾರಾಟ ಮಾಡಲು ಸಿ.ಎಂ.  ಸಿದ್ದರಾಮಯ್ಯನವರು ಒಪ್ಪಿಗೆ ಕೊಟ್ಟಿದ್ದಾರೆ.

ಮಧ್ಯ ಮಾರಾಟವನ್ನು ಖಾಸಗಿಯವರು ಮಾಡಲಿ ಇಲ್ಲವೇ ಸರಕಾರೀ ಸಂಸ್ಥೆಯೇ ಮಾಡಲಿ ಆದರೆ ಅದರಿಂದಾಗುವ ದುಷ್ಪರಿಣಾಮಕ್ಕೆ ಬಲಿಯಾಗುವವರು ದುಡಿಯುವ ವರ್ಗದ ಜನರೇ ಆಗಿದ್ದಾರೆ. ಈಗಾಗಲೇ ರಾಜ್ಯದಲ್ಲಿ 10,051 ಮದ್ಯದ ಅಂಗಡಿಗಳು ಕಾರ್ಯಗತವಾಗಿವೆ. ನಾಲ್ಕು ಸಾವಿರದಷ್ಟು ರಿಟೇಲ್ ಅಂಗಡಿಗಳು, ಮೂರುವರೆ ಸಾವಿರದಷ್ಟು ಬಾರ್ ರೆಸ್ಟೋರೆಂಟಗಳು ಹಾಗೂ 402 ಎಂಎಸ್‌ಐಎಲ್  ಮಾರಾಟ ಮಳಿಗೆಗಳು ಕರ್ನಾಟಕದ ಜನರಿಗೆ ಅಮಲನ್ನು ಹಂಚುತ್ತಿವೆ. ಇದರ ಜೊತೆಗೆ ಮತ್ತೆ 900 ಹೆಚ್ಚುವರಿ ಮಳಿಗೆಗಳು ಶುರುವಾಗಿ ಹೆಂಡದ ಹೊಳೆ ರಾಜ್ಯಾದ್ಯಂತ ಹರಿಯುತ್ತದೆ. ಅದೆಷ್ಟೋ ಕುಟುಂಬಗಳ ಬದುಕು ಮೂರಾಬಟ್ಟೆ ಆಗುವುದಕ್ಕೆ ಸರಕಾರವೇ ಪ್ರೇರೇಪಿಸುತ್ತಿದೆ.

ಬಿಹಾರದಂತಹ ಹಿಂದುಳಿದ ರಾಜ್ಯ ಸರಕಾರ ಸಹ ಮದ್ಯಮಾರಾಟ ಹಾಗೂ ಸೇವನೆಯಿಂದಾಗುವ ಸಾಮಾಜಿಕ ಹಾಗೂ ಆರ್ಥಿಕ ಅಪಾಯಗಳನ್ನು ಮನಗಂಡು ರಾಜ್ಯಾದ್ಯಂತ ಸರಾಯಿ ಮಾರಾಟ ಹಾಗೂ ಕುಡಿತವನ್ನು ನಿಷೇಧಿಸಿತ್ತು. ಪಾನ ನಿಷೇಧವು ಗ್ರಾಮಸ್ವರಾಜ್ಯದ ಅಡಿಪಾಯ ಎಂದು ಮಹಾತ್ಮಾ ಗಾಂಧಿಯವರು ಹೇಳಿದ್ದರು. ಆದರೆ.. ಗಾಂಧೀಜಿಯ ಅಧೀಕೃತ ವಾರಸುದಾರರು ಎಂದು ಹೇಳಿಕೊಳ್ಳುವ ಈ ಕಾಂಗ್ರೆಸ್ಸಿಗರು ರಾಜ್ಯಾದ್ಯಂತ ಮದ್ಯ ಮಾರಾಟವನ್ನು ಹೆಚ್ಚಿಸುತ್ತಿರುವುದು ಆ ಪಕ್ಷದ ನೈತಿಕ ದಿವಾಳಿತನವನ್ನು ತೋರಿಸುತ್ತದೆ. ಮೂರುವರೆ ವರ್ಷಗಳ ಕಾಲ ಸುಮ್ಮನಿದ್ದು ಈಗ ಯಾಕೆ ಸರಕಾರ ಈ ಸಾಹಸಕ್ಕೆ ಮುಂದಾಯಿತು? ಎನ್ನುವುದಕ್ಕೆ ಉತ್ತರ ಮುಂಬರುವ ಚುನಾವಣೆ ಎಂಬುದು ಸ್ಪಷ್ಟವಾಗಿದೆ.

ಇನ್ನೊಂದು ವರ್ಷಕಳೆಯುವುದರೊಳಗೆ ಕರ್ನಾಟಕದಲ್ಲಿ ಅಸೆಂಬ್ಲಿ ಚುನಾವಣೆಗಳು ಶುರುವಾಗುತ್ತವೆ. ಈಗ ಮೊದಲಿನಂತೆ ಕೇವಲ ತತ್ವ ಸಿದ್ದಾಂತ ಹಾಗೂ ಜನಪರ ಕೆಲಸಗಳನ್ನು ಮುಂದಿಟ್ಟುಕೊಂಡು ಚುನಾವಣೆಗಳಲ್ಲಿ ಗೆಲ್ಲಬಹುದೆಂಬ ಆಸೆ ಯಾವುದೇ ಪಕ್ಷಗಳಲಿಲ್ಲ. ಚುನಾವಣೆ ಗೆಲ್ಲಬೇಕಾದರೆ ಹಣ ಹೆಂಡಗಳ ಹೊಳೆ ಹರಿಸಲೇಬೇಕು ಎನ್ನುವ ತೀರ್ಮಾನಕ್ಕೆ ಎಲ್ಲಾ ಪ್ರಮುಖ ಪಕ್ಷಗಳೂ ಬಂದಿವೆ. ಬಿಜೆಪಿಗಾದರೆ ಕೇಂದ್ರ ಸರಕಾರದಿಂದ ಹಣ ಬರುತ್ತದೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಎನ್ನುವುದೂ  ಕೂಡಾ ಎಲ್ಲಾ ಕಡೆ ಸೋತು ಕರ್ನಾಟಕ ಸರಕಾರದ ಮೇಲೆಯೇ ಅವಲಂಬಿತವಾಗಿ ಕುಳಿತಿದೆ. ಈಗ ಮುಂದಿನ ಚುನಾವಣೆಗೆ ಬೇಕಾದ ಹಣವನ್ನು ಹೊಂದಿಸಿಕೊಳ್ಳುವ ಮಹತ್ತರ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಅದಕ್ಕಾಗಿಯೇ ಸ್ಟೀಲ್ ಬ್ರಿಜ್ ಎನ್ನುವ ಪರಿಸರ ವಿರೋಧಿ ಯೋಜನೆಯನ್ನು ಬೆಂಗಳೂರಿನಲ್ಲಿ ರೂಪಿಸಿ ಅದರಲ್ಲಿ ಐನೂರು ಕೋಟು ರೂಪಾಯಿಗಳ ಕಿಕ್‌ಬ್ಯಾಕ್ ಪಡೆಯಲು ಸರಕಾರ ಪ್ರಯತ್ನಿಸಿದೆ. ಈಗ ಇನ್ನೂ ಹೆಚ್ಚು ಹಣವನ್ನು ರಾಜ್ಯ  ಕಾಂಗ್ರೆಸ್ಸಿಗರಿಗೆ ತರಬಹುದಾದದ್ದು ಈ ಮದ್ಯ ದಂದೆ.

ಈಗಾಗಲೇ ಕಾಂಗ್ರೆಸ್ ಚುನಾವಣೆಗೆ ಸಿದ್ದತೆ ಆರಂಭಗೊಳಿಸಿದೆ. ಅದರ ಭಾಗವಾಗಿ ಹಣಸಂಗ್ರಹಣೆಯ ಮೂಲಗಳಿಗೆ ಕೈಹಾಕಿದೆ. ಸರಕಾರವೇ ಅಬಕಾರಿ ಇಲಾಖೆಯಿಂದ ಸರಾಯಿ ಮಾರಾಟ ಮಾಡಬಹುದೇ ಹೊರತು ಮದ್ಯ ತಯಾರಿಯನ್ನು ಮಾಡುತ್ತಿಲ್ಲ.  ಮದ್ಯ ತಯಾರಿ ಮಾಡುವ ಉದ್ಯಮಿಗಳೊಂದಿಗೆ ಸರಕಾರ ಶಾಮೀಲಾಗಿದೆ. ಅದೆಷ್ಟು ಕೋಟಿ ಕಿಕ್‌ಬ್ಯಾಕ್ ಯಾರ‍್ಯಾರಿಂದ ಪಡೆಯುತ್ತದೋ ಎನ್ನುವ ಲೆಕ್ಕಾಚಾರ ಊಹೆಗೂ ನಿಲುಕದ್ದು ಹಾಗೂ ಅನಧೀಕೃತ ಅವ್ಯವಹಾರ ಲೆಕ್ಕಕ್ಕೆ ಸಿಗಲಾರದ್ದು. ಮದ್ಯೋದ್ಯಮಿಗಳಿಂದ ಕೋಟಿ ಕೋಟಿಗಳನ್ನು ತೆಗೆದುಕೊಂಡು ಸರಾಯಿ ಮಾರಾಟವನ್ನು ಹೆಚ್ಚಳಮಾಡುವ ಕೈಂಕರ್ಯವನ್ನು ಸರಕಾರ ಮಾಡುತ್ತಿದೆ. ಹೆಚ್ಚೆಚ್ಚು ಮದ್ಯದ ಮಳಿಗೆಗಳನ್ನು ತೆರೆದಷ್ಟು ಹೆಚ್ಚು ಸರಾಯಿ ಮಾರಾಟವಾಗುತ್ತದೆ. ಹೆಚ್ಚೆಚ್ಚು ಮಾರಾಟವಾದಷ್ಟೂ ತೆರಿಗೆ ರೂಪದಲ್ಲಿ ಸರಕಾರಕ್ಕೆ ಹಣ ಬರುತ್ತದೆ. ಹಾಗೆ ಬಂದ ಹಣವನ್ನು ಅಭಿವೃದ್ದಿ ಕಾರ್ಯಗಳಿಗೆ ಬಳಸಲಾಗುತ್ತದೆ.. ಎನ್ನುವುದು ಅಬಕಾರಿ ಇಲಾಖೆಯ ಸಾರ್ವಕಾಲಿಕ ಘೋಷಣೆಯಾಗಿದೆ. ಆದರೆ.. ಅಭಿವೃದ್ದಿಗೋ ಇಲ್ಲವೇ ಪಕ್ಷದ ಚುನಾವಣೆಗೋ ಹಣ ಸಂಗ್ರಹಿಸುವ ಸರಕಾರದ ಮಹತ್ಕಾರ್ಯದ ಹಿಂದೆ ಹಾಳಾಗುವ ಕುಟುಂಬಗಳೆಷ್ಟೋ.. ತೊಂದರೆಗೊಳಗಾಗುವ ಮಹಿಳೆಯರೆಷ್ಟೋ.. ಇದರ ಲೆಕ್ಕ ಇಟ್ಟವರ‍್ಯಾರು?

ಇರುವ ಸರಾಯಿ ಅಂಗಡಿಗಳನ್ನು ಮುಚ್ಚಬೇಕೆಂದು ಮಹಿಳೆಯರೇ ಹೋರಾಟಕ್ಕೆ ಇಳಿದಿದ್ದಾರೆ. ಅದಕ್ಕೆ ರಾಯಚೂರಿನಲ್ಲಿ 2016 ಅಕ್ಟೋಬರ್ ಎರಡರಂದು ನಡೆದ ಸರಾಯಿ ವಿರೋಧಿ ಮಹಿಳಾ ಸಮಾವೇಶವೇ ಸಾಕ್ಷಿಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸರಾಯಿ ಮಾಡುವ ಹಾವಳಿಯನ್ನು ಅಲ್ಲಿಯ ಮಹಿಳೆಯರು ಪ್ರತಿನಿತ್ಯ ಅನುಭವಿಸುತ್ತಿದ್ದಾರೆ. ಊರಿಗೆ ಊರೆ ವ್ಯಸನಿಗಳ ಸಂತೆಯಾಗಿದೆ. ಇದು ಕೇವಲ ಕುಟುಂಬಗಳ ಮೇಲಷ್ಟೇ ಅಲ್ಲಾ.. ಗ್ರಾಮೀಣ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತ ಕೊಡುತ್ತಿದೆ. ಒಂದು ಕಡೆ ಉಚಿತವಾಗಿಯೋ ಇಲ್ಲಾ ಒಂದುರೂಪಾಯಿಗೊಂದು ಕೆಜಿ ಅಕ್ಕಿಯನ್ನೋ ಕೊಟ್ಟು ಜನರ ಬದುಕಿಗೆ ಆಸರೆಯಾದೆ ಎಂದು ಹೇಳಿಕೊಳ್ಳುವ ಸರಕಾರವು ಇನ್ನೊಂದು ಕಡೆ ಕುಡಿಯಲು ಸರಾಯಿಯನ್ನು ಸರಬರಾಜು ಮಾಡಿ ಜನರ ಅಲ್ಪಸ್ವಲ್ಪ ಆದಾಯವನ್ನೂ ಕಬಳಿಸುತ್ತಿದೆ ಹಾಗೂ ಜನರನ್ನು ವ್ಯಸನಪೀಡಿತರನ್ನಾಗಿ ಮಾಡುತ್ತಿದೆ. ಉಳ್ಳವರಿಗೆ ಈ  ಕುಡಿತ ಎನ್ನುವುದು ಆರ್ಥಿಕ ಸಂಕಷ್ಟವನ್ನು ಒಡ್ಡದಿದ್ದರೂ ಬಹುಸಂಖ್ಯಾತ ದುಡಿಯುವ ವರ್ಗಗಳಂತೂ ಕುಡಿತದ ದಾಸ್ಯಕ್ಕೆ ಬಿದ್ದು ತಲ್ಲಣಿಸಿ ಹೋಗಿವೆ. ಕುಡಿತದಿಂದಾಗುವ ಅನಾರೋಗ್ಯದಿಂದಾಗಿ ಅದೆಷ್ಟೋ ಕುಟುಂಬಗಳು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಶಾಪ ಎನ್ನುವುದು ನಿಜಕ್ಕೂ ಕಾರ್ಯಗತವಾಗುವ ಹಾಗಿದ್ದರೆ ಗ್ರಾಮೀಣ ಭಾಗದ ನೊಂದ ಮಹಿಳೆಯರ ಶಾಪದಿಂದ ಎಲ್ಲಾ ನಮೂನಿಯ ಜನವಿರೋಧಿ ಸರಕಾರಗಳು ಸುಟ್ಟುಹೋಗಬಹುದಾಗಿತ್ತು. ಆದರೆ.. ಆತ್ಮಸಾಕ್ಷಿಯನ್ನೇ ಮಾರಿಕೊಂಡಿರುವ ಆಳುವ ವರ್ಗಗಳು ಬಡಜನರ ಬದುಕಿಗೆ ಬೆಂಕಿ ಇಟ್ಟು ತಮ್ಮ ಮೈಕಾಯಿಸಿಕೊಳ್ಳುತ್ತಿರುವುದಂತೂ ಅಕ್ಷಮ್ಯ.

ಆಳುವ ವರ್ಗಗಳಿಗೆ ಬೇಕಾಗಿರುವುದು ಜನರ ಕ್ಷೇಮವೂ ಅಲ್ಲಾ, ಸಾಮಾಜಿಕ ಸ್ವಾಸ್ಥ್ಯವೂ ಅಲ್ಲಾ. ಕೇವಲ ಅಧಿಕಾರದಾಹ. ಜನರ ಗೋರಿಯ ಮೇಲೆ ಗದ್ದುಗೆ ಕಟ್ಟುವ ಇಂತಹ ಲಾಭಕೋರತನದ ಸರಕಾರಗಳು ಇದ್ದರೆಷ್ಟು ಇರದಿದ್ದರೆಷ್ಟು. ಪಕ್ಷ ಯಾವುದೇ ಆಗಿರಲಿ ಪ್ರಜಾಪ್ರಭುತ್ವ ಎನ್ನುವುದು ಜನರನ್ನು ಯಾಮಾರಿಸಲು ಬೇಕಾದ ಮುಖವಾಡವಾಗಿದೆ. ಜನರು ಎಚ್ಚೆತ್ತು ತಮ್ಮ ಮೇಲಾಗುವ ಶೋಷಣೆಗಳ ವಿರುದ್ಧ ಪ್ರತಿಭಟಿಸುವುದನ್ನು ತಪ್ಪಿಸಲು ಅವರನ್ನು ಯಾವಾಗಲೂ ವ್ಯಸನದ ಗುಂಗಲ್ಲಿ ಇಡುವುದು ಹಾಗೂ ದುಡಿಯುವ  ಜನರು ದಂಗೆ ಏಳದಂತೆ ಮಾಡಲು ಪುಕ್ಕಟೆ ಭಾಗ್ಯಗಳನ್ನು ಒದಗಿಸುವುದು ಆಳುವ ವರ್ಗಗಳ ಒಳಹುನ್ನಾರವಾಗಿದೆ. ಈ ವ್ಯಸನ ಪೀಡಿತರು ಹಾಗೂ ಸರಾಯಿ ಪ್ರಾಯೋಜಕರಾದ ಸರಕಾರದವರ ನಡುವೆ ಅತೀವ ಕಷ್ಟನಷ್ಟಕ್ಕೆ ಸಿಲುಕಿದವರು ಮಹಿಳೆಯರು. ಅದರಲ್ಲೂ ಗ್ರಾಮೀಣ ಪ್ರದೇಶದ ಮಹಿಳೆಯರ ಗೋಳು ಹೇಳತೀರದಾಗಿದೆ. ಅಸೆ ಆಮಿಷಗಳನ್ನು ತೋರಿಸಿ ಓಟು ಗಿಟ್ಟಿಸಿಕೊಳ್ಳುವ ಈ  ರಾಜಕೀಯ  ಪಕ್ಷಗಳು ಮಹಿಳೆಯರ ತೊಂದರೆಗಳಿಗೆ ಸ್ಪಂದಿಸುವ ಬದಲು ಅವರ ಮನೆಯ ಗಂಡಸರಿಗೆ ಸರಾಯಿ ಮಾರಾಟ ಮಾಡಿ ಮನೆಯನ್ನೇ ನರಕವನ್ನಾಗಿಸುವ ಜೀವವಿರೋಧಿತನವನ್ನು ಎಲ್ಲರೂ ಖಂಡಿಸಬೇಕಿದೆ.

ಸರಾಯಿ ಮಾರಾಟ ಮಳಿಗೆಗಳನ್ನು ದುಪ್ಪಟ್ಟುಗೊಳಿಸುವ ಅಬಕಾರಿ ಇಲಾಖೆಯ ಆದೇಶದ ವಿರುದ್ದ ಜನರು ಸಿಡಿದೇಳಬೇಕಾಗಿತ್ತು. ಆದರೆ.. ಅದ್ಯಾಕೋ ಯಾವುದೇ ಸಂಚಲನವಾಗುತ್ತಿಲ್ಲ. ಮದ್ಯ ಬೇಡವಾಗಿರುವುದು ಕೇವಲ ಅದರಿಂದ ನೊಂದ ಮಹಿಳೆಯರಿಗೆ ಮಾತ್ರ. ವ್ಯಸನ ಪೀಡಿತ ಬಹುಸಂಖ್ಯಾತರು ಸರಾಯಿಯ ವ್ಯಾಪಕ ಮಾರಾಟದಿಂದ ಸಂತಸ ಪಡುತ್ತಾರೆಯೇ ಹೊರತು ವಿರೋಧಿಸುವುದಿಲ್ಲ. ಹೀಗಾಗಿ ಅಸಂಘಟಿತ ಗ್ರಾಮೀಣ ಮಹಿಳೆಯರ ನೋವಿಗೆ ಸ್ಪಂದಿಸುವವರು ಯಾರೂ ಇಲ್ಲವಾಗಿದೆ. ಮಹಿಳಾ ಪರ ಎನ್‌ಜಿಓ ಗಳು ಮೌನಕ್ಕೆ ಶರಣಾಗಿವೆ. ಮಹಿಳಾ ಸಂಘಟನೆಗಳು ಅದ್ಯಾಕೋ ಸುಮ್ಮನಾಗಿವೆ. ವಿರೋಧ ಪಕ್ಷಗಳಿಗೆ ಇದು ಸಾಮಾಜಿಕ ಸಮಸ್ಯೆ ಎಂದು ಅನ್ನಿಸುತ್ತಲೇ ಇಲ್ಲ. ಹೀಗಾಗಿ ಯಾವುದೇ ಪ್ರಭಲ ಪ್ರತಿಭಟನೆ ರೂಪಗೊಳ್ಳದೇ ಇರುವುದರಿಂದ ಸರಕಾರಿ ಕೃಪಾಪೋಷಿತ ಸರಾಯಿ ಮಾರಾಟ ದಂದೆ ದ್ವಿಗುಣಗೊಂಡಿದೆ. ಸರಾಯಿ ತಯಾರಕರ ಲಾಭ ನಾಲ್ಕಾರು ಪಟ್ಟು ಹೆಚ್ಚುತ್ತದೆ. ಸರಕಾರಕ್ಕೆ ಬೇಕಾದಷ್ಟು ಕಿಕ್‌ಬ್ಯಾಕ್ ಹಣ ಸಿಕ್ಕುತ್ತದೆ. ಈ ಸರಾಯಿ  ಉತ್ಪಾದಕರು, ಮಾರಾಟಗಾರರು ಹಾಗೂ ಪ್ರಾಯೋಜಕರ ನಡುವೆ ಸರಾಯಿ ಬಳಕೆದಾರರ ಬದುಕು ಕಂತು ಕಂತಿನಲ್ಲಿ ಮುಗಿದು ಹೋಗುತ್ತದೆ. ಅವರ ಕುಟುಂಬಗಳು ತಲ್ಲಣಗೊಂಡಿವೆ. ಒಂದು ಕೈಯಿಂದ ಕೊಟ್ಟು  ಇನ್ನೊಂದು ಕೈಯಿಂದ ಕಿತ್ತುಕೊಳ್ಳುವ ಈ ಆಳುವ ವರ್ಗಗಳ ಶಡ್ಯಂತ್ರಕ್ಕೆ ಸಿಕ್ಕು ಇಡೀ ನಾಡಿಗೆನಾಡೇ ವ್ಯಸನಪೀಡಿತರ ಆಡಂಬೋಲವಾಗುವುದರಲ್ಲಿ ಸಂದೇಹವಿಲ್ಲ.

ರಾಯಚೂರಿನಲ್ಲಿ ಹತ್ತಾರುಸಾವಿರ ಮಹಿಳೆಯರು ಸೇರಿ ನಮಗೆ ಸರಾಯಿ ಬೇಡ, ಕುಡಿಯಲು ನೀರು ಕೊಡಿ. ನಮಗೆ ಹೆಂಡ ಬೇಡ ವಸತಿ ಕೊಡಿ. ಹೆಂಡದಂಗಡಿ ಬೇಡ ಶಾಲೆ ಕಾಲೇಜು ತೆರೆಯಿರಿ ಎಂದು ಬೇಡಿಕೆ ಇಟ್ಟು ಹೋರಾಟ ಮಾಡಿದ್ದನ್ನು ಮಾದರಿಯಾಗಿಟ್ಟುಕೊಂಡು ಕರ್ನಾಟಕದ ಎಲ್ಲಾ ಮಹಿಳಾ ಸಂಘಟನೆಗಳು ಜನಹೋರಾಟವನ್ನು ಕೈಗೊಳ್ಳಬೇಕಾಗಿದೆ. ಉಡುಪಿ ಮಠದಲ್ಲಿ ಸಹಪಂಕ್ತಿ ಭೋಜನಕ್ಕೆ ಹೋರಾಟ ರೂಪಿಸುವ ಮನಸ್ಸುಗಳು ಸರಾಯಿ ನಿಷೇಧಕ್ಕೆ ಮೊದಲ ಆದ್ಯತೆ ಕೊಡಬೇಕಿದೆ. ಸರಾಯಿ ಮಾರಾಟದ ತೀವ್ರತೆಯಿಂದ ಮೊದಲು ತೊಂದರೆಗೊಳಗಾಗುವುದೇ ಹಿಂದುಳಿದವರು ಹಾಗೂ ದಲಿತರು. ಆದ್ದರಿಂದ ಎಲ್ಲಾ ದಲಿತ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳು ಮೊದಲು ನಾಡಿನಾದ್ಯಂತ ಸರಾಯಿ ಬ್ಯಾನ್ ಚಳುವಳಿಯನ್ನು ಆಯೋಜಿಸಿ ಸರಕಾರದ ಮೇಲೆ ಒತ್ತಡ ತಂದು ಮದ್ಯವನ್ನು ನಿಷೇಧಿಸಲು ಒತ್ತಾಯಿಸಬೇಕಿದೆ. ದಲಿತರಿಗೆ ಭೂಮಿ ಬೇಕು ಎನ್ನುವ ಚಳುವಳಿ ಅಗತ್ಯವಾದದ್ದೇ ಆಗಿದೆ. ಆದರೆ ಮುಂದೊಮ್ಮೆ ಬಹುಜನರ ಬೇಡಿಕೆಗೆ ಸ್ಪಂದಿಸಿದ ಸರಕಾರ ಭೂಮಿಯನ್ನು ಕೊಟ್ಟರೂ.. ಸರಾಯಿ ದಾಸ್ಯಕ್ಕೊಳಗಾದ ದಮನಿತ ವರ್ಗದವರು ಇರುವ ಭೂಮಿಯನ್ನೂ ಉಳ್ಳವರಿಗೆ ಮಾರಿಕೊಂಡು ಮತ್ತೆ ಬೀದಿಪಾಲಾಗುತ್ತಾರೆ.

ಜನಾಲೋಂದನಗಳ ಮಹಾಮೈತ್ರಿ ಮಾಡಿ ದೊಡ್ಡ ಪ್ರಮಾಣದ ಜನಹೋರಾಟವನ್ನು ಹುಟ್ಟುಹಾಕುವ ಹುಮ್ಮಸ್ಸಿನಲ್ಲಿರುವ ಪ್ರಜ್ಞಾವಂತರು ಮೊದಲು ಸರಾಯಿ ನಿಷೇಧದ ಇಸ್ಯೂ ಇಟ್ಟುಕೊಂಡು ಜನಹೋರಾಟ ಮಾಡಿದರೆ ಗ್ರಾಮೀಣ ಪ್ರದೇಶದ ಮಹಿಳೆಯರ ಬೆಂಬಲವನ್ನು ಗಳಿಸಿಕೊಂಡು ತಮ್ಮ ಹೋರಾಟವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಬಹುದಾಗಿದೆ. ವ್ಯಸನ ಮುಕ್ತರಾದ ದುಡಿಯುವ ಜನತೆ ಪ್ರಜ್ಞೆಯನ್ನು ಗಳಿಸಿಕೊಂಡು ತಾತ್ವಿಕ ಜನಾಲೋಂದನಕ್ಕೆ ಜೊತೆಯಾಗುತ್ತಾರೆ. ಈ ನಿಟ್ಟಿನಲ್ಲಿ ಸಂಘಟನಾತ್ಮಕ ಐಕ್ಯ ಹೋರಾಟಗಳು ನಡೆಯಬೇಕಿದೆ. ನಿಜವಾಗಿಯೂ ದುಡಿಯುವ ಜನರ ಬಗ್ಗೆ, ಹಿಂದುಳಿದವರು ಹಾಗೂ ದಲಿತರ ಬಗ್ಗೆ ಕಾಳಜಿ ಕಳಕಳಿ ಇದ್ದದ್ದೇ ಆದರೆ  ಎಲ್ಲಾ ಜನಪರ ಸಂಘಟನೆಗಳು ಸರಾಯಿ ಮಾರಾಟ ಹೆಚ್ಚಿಸಿರುವ ಸರಕಾರದ ದೋರಣೆಯ ವಿರುದ್ದ ಹೋರಾಟ ರೂಪಿಸಿ ಮದ್ಯ ಮಾರಾಟವನ್ನೇ ನಿಲ್ಲಿಸುವ ಇಲ್ಲವೇ ನಿಯಂತ್ರಿಸುವ ನಿಟ್ಟಿನಲ್ಲಿ  ಸರಕಾರದ ಮೇಲೆ ಒತ್ತಡ ತರಬೇಕಾಗಿದೆ. ಎಲ್ಲಿವರೆಗೂ ಶ್ರಮಜೀವಿ ಜನರು ನಷೆಯಿಂದ ಹೊರಬಂದು ತಮ್ಮ ಮೇಲಿನ ಶೋಷಣೆಗೆ ಕಾರಣವನ್ನು ಅರಿಯಲಾರರೋ ಅಲ್ಲಿವರೆಗೂ ಯಾವುದೇ ಹೋರಾಟಗಳೂ ಯಶಸ್ವಿಯಾಗಲಾರವು.. ಕೇವಲ ಧರಣಿ, ಪತ್ರಿಕಾ ಹೇಳಿಕೆ ಇಲ್ಲವೇ ವಾಹಿನಿಗಳ ಪ್ಯಾನಲ್ ಚರ್ಚೆಗಳಿಂದ ದುಡಿಯುವ ವರ್ಗದವರ ಬದುಕು ಹಸನಾಗದು. ಸಂಪೂರ್ಣ ಸರಾಯಿ ನಿಷೇಧಕ್ಕೆ ಈ ಕೂಡಲೇ ಆಗ್ರಹಿಸುವ ಚಳುವಳಿ ಶುರುವಾಗಬೇಕಿದೆ. ಅದು ಜನಾಲೋಂದನ ಕಟ್ಟುವ ನಿಟ್ಟಿನಲ್ಲಿ ಮೊದಲ ಮೆಟ್ಟಿಲಾಗಬೇಕಿದೆ.

-                                                       - ಶಶಿಕಾಂತ ಯಡಹಳ್ಳಿ 



ಸೋಮವಾರ, ನವೆಂಬರ್ 7, 2016

ತಹ ತಹ ..... 59 ಮತಾಂಧತೆ ವಿರುದ್ದ ಎದ್ದು ನಿಲ್ಲಲಿ ಜನಾಲೋಂದನ ಮಹಾಮೈತ್ರಿ :



ಮತಾಂಧ ಶಕ್ತಿಗಳು ಕೇಂದ್ರದಲ್ಲಿ ಅಧಿಕಾರವನ್ನು ವಹಿಸಿಕೊಂಡ ನಂತರ ದೇಶಾದ್ಯಂತ ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಂಡಿವೆ. ಮನುವಾದಿ ಪ್ಯಾಸಿಸ್ಟ್ ಪ್ರಭುತ್ವ ಸ್ಥಾಪನೆಯ ನಿಟ್ಟಿನಲ್ಲಿ ಸಂಘಪರಿವಾರವು ಜನರ ಮೆದುಳಲ್ಲಿ ದೇಶಭಕ್ತಿ, ಧರ್ಮನಿಷ್ಟೆಗಳನ್ನು ತುಂಬಿ ಕೋಮುದ್ವೇಷವನ್ನು ಬಿತ್ತುವ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಬರುತ್ತಿವೆ. ಇಂತಹ ಜನವಿರೋಧಿ  ನಕಾರಾತ್ಮಕ ಬೆಳವಣಿಗೆಯನ್ನು ದೇಶದ ಎಲ್ಲಾ ಪ್ರಗತಿಪರ ಮನಸುಗಳು ವೈಯಕ್ತಿಕ ನೆಲೆಯಲ್ಲಿ ವಿರೋಧಿಸುತ್ತಿವೆ. ಹಾಗೂ ಬಿಡಿ ಬಿಡಿಯಾಗಿ ಸಂಘಟಿತ ಹೋರಾಟಗಳೂ ವ್ಯಕ್ತಪಡಿಸುತ್ತವೆ. ಆದರೆ.. ಸಂಘಪರಿವಾರದ ಸಂಘಟಿತ ಹುನ್ನಾರಗಳ ಮುಂದೆ ಈ ಬಿಡಿ ಹೋರಾಟಗಳು ಯಾವುದಕ್ಕೂ ಸಾಲದಾಗಿವೆ. ಎಪ್ಪತ್ತರ ದಶಕದಲ್ಲಿ ಕೋಮುವಾದಿ ಶಕ್ತಿಗಳಿಗೆ ತೀವ್ರವಾದ ಪ್ರತಿರೋಧವನ್ನು ಒಡ್ಡಿ ನಿಯಂತ್ರಿಸುತ್ತಿದ್ದ ಹೋರಾಟಗಳು ಬರುಬರುತ್ತಾ ತಮ್ಮೊಳಗಿನ ಅವಕಾಶವಾದಿ ನಾಯಕತ್ವದಿಂದಾಗಿ ವಿಘಟನೆ ಹೊಂದುತ್ತಾ ಬಲಹೀನವಾಗಿದ್ದಂತೂ ಚಾರಿತ್ರಿಕ ವಿಪರ್ಯಾಸ. ಆಳುವ ಎಲ್ಲಾ ನಮೂನಿಯ ಬಂಡವಾಳಶಾಹಿ ಪರ ಸರಕಾರಗಳೂ ಸಹ ಜನಪರವಾಗಿದ್ದ ರೈತ, ದಲಿತ, ಬಂಡಾಯ ಹಾಗೂ ಕಮ್ಯೂನಿಸ್ಟ್ ಹೋರಾಟಗಳ ತೀವ್ರತೆಯನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾದವು. ಆಗ ಸರಕಾರಗಳನ್ನೇ ಅಲ್ಲಾಡಿಸುತ್ತಿದ್ದ ಜನಹೋರಾಟಗಳು ಈಗ ನಗಣ್ಯವಾಗಿವೆ. ತತ್ವನಿಷ್ಟ ನಾಯಕತ್ವ ಮರೆಯಾಗಿ ಅವಕಾಶವಾದಿ ನಾಯಕತ್ವ ಮುಂಚೂಣಿಯಲ್ಲಿದೆ. ಇನ್ನೂ ಕೆಲವಾರು ಸಿದ್ದಾಂತ ಬದ್ದ ಪ್ರಗತಿಪರರು ಇದ್ದಾರಾದರೂ ಅವರೆಲ್ಲಾ ಅಸಹಾಯಕರಾಗಿದ್ದಾರೆ.

ಇಂತಹ ಸಂದರ್ಭದಲ್ಲಿ ಮತಾಂಧ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಅಳಿದುಳಿದ ಹೋರಾಟನಿರತ ಸಕ್ರೀಯ ಸಂಘಟನೆಗಳನ್ನು ಒಂದುಗೂಡಿಸುವ ಅನಿವಾರ್ಯತೆ ಇದೆ. ಹಾಗೂ ಜನಪರವಾಗಿರುವ ಮನಸ್ಸುಗಳನ್ನೆಲ್ಲಾ ಒಂದು ವೇದಿಕೆಯಲ್ಲಿ ಒಗ್ಗೂಡಿಸಿ ಐಕ್ಯ ಹೋರಾಟವನ್ನು ರೂಪಿಸುವ ಅಗತ್ಯತೆಯೊಂದೇ ಪ್ಯಾಸಿಸ್ಟ್ ಮಾದರಿ ವ್ಯವಸ್ಥೆಯ ನಾಶಕ್ಕೆ ಪರ್ಯಾಯವಾಗಿದೆ. ಐಕ್ಯ ಹೋರಾಟಗಳನ್ನು ರೂಪಿಸುವ ನಿಟ್ಟಿನಲ್ಲಿ ಈ ಹಿಂದೆಯೂ ಹಲವಾರು ಪ್ರಯತ್ನಗಳಾಗಿವೆಯಾದರೂ ನಾಯಕತ್ವದಲ್ಲಿರುವ ಭಿನ್ನಾಭಿಪ್ರಾಯಗಳಿಂದಾಗಿ ಉದ್ದೇಶಿತ ಯಶಸ್ಸು ಸಿಗಲಿಲ್ಲ. ಈಗ ಅಂತಹದೊಂದು ಪ್ರಯತ್ನ ಆರಂಭಗೊಂಡಿದ್ದೊಂದು ಅಂಧಕಾರದಲ್ಲಿ ಆಶಾಕಿರಣವೊಂದು ಮೂಡಿದಂತಾಗಿದೆ. ಅಸಹಾಯಕರಾಗಿ ನಿರ್ಲಿಪ್ತವಾಗಿರುವ ಹಲವಾರು ಪ್ರಗತಿಪರ ವ್ಯಕ್ತಿಗಳಿಗೆ ಹೊಸ ಹುಮ್ಮಸ್ಸನ್ನು ತುಂಬುವಂತಾಗಿದೆ. ಯಾವುದೇ ಒಂದು ಅಥವಾ ಎರಡು ಸಂಘಟನೆಗಳಿಂದ ಅಥವಾ ಕೆಲವೇ ಪ್ರಗತಿಪರ ವ್ಯಕ್ತಿಗಳಿಂದ ಜನವಿರೋಧಿ ಶೋಷಕ ವ್ಯವಸ್ಥೆಯನ್ನು ಎದುರಿಸಲು ಸಾಧ್ಯವಿಲ್ಲ. ಅದಕ್ಕೆ ಜನಪರ ಸಂಘಟನೆಗಳ ಮಹಾಐಕ್ಯತೆ ಬೇಕಾಗಿದೆ. ಅಂತಹ ಪ್ರಯತ್ನವೊಂದು ಈಗ ಆರಂಭಗೊಂಡಿದೆ.

ಹೌದು.. ಕೆಲವಾರು ಜನಹೋರಾಟಪರ ಸಂಘಟನೆಗಳು ಸೇರಿಕೊಂಡು ಜನಾಂದೋಲನಗಳ ಮಹಾಮೈತ್ರಿಗೆ ವೇದಿಕೆಯನ್ನು ಸಿದ್ದಪಡಿಸಿವೆ. ಜನಪರವಾದ ಐಕ್ಯ ಚಳುವಳಿಯನ್ನು ಕಟ್ಟುವ ಆಶಯದೊಂದಿಗೆ ಅಕ್ಟೋಬರ್ ೬ ರಂದು ಮೈಸೂರಿನಲ್ಲಿ ಮಹಾಮೈತ್ರಿಗೆ ಚಾಲನೆ ದೊರಕಿತು. ಕರ್ನಾಟಕದ ಸಮಾನ ಮನಸ್ಕ ವ್ಯಕ್ತಿಗಳು ಹಾಗೂ ಶಕ್ತಿಗಳನ್ನು ಒಂದುಗೂಡಿಸಿ ಸಶಕ್ತ ಹೋರಾಟವನ್ನು ಕಟ್ಟುವ ನಿಟ್ಟಿನಲ್ಲಿ ಜನಾಲೋಂದನ ಮಹಾಮೈತ್ರಿ ಘೋಷಣಾ ಸಮಾವೇಶ ಆರಂಭಗೊಂಡಿದ್ದು ನಿಜಕ್ಕೂ ಆಶಾದಾಯಕವಾದ ಬೆಳವಣಿಗೆ. ಭ್ರಷ್ಟತೆಯ ಆಗರವಾಗಿರುವ ಹಾಗೂ ಜನವಿರೋಧಿಯಾದ ಆಳುವ ವ್ಯವಸ್ಥೆಗಳ ವಿರುದ್ಧ ಜನಹೋರಾಟವನ್ನು ಗಟ್ಟಿಗೊಳಿಸುವ ಪ್ರಯತ್ನವೊಂದು ಆರಂಭವಾಯಿತು. ಜನವಿರೋಧಿಯಾದ ಆಳುವ ವರ್ಗಗಳು ಹಾಗೂ ಜೀವವಿರೋಧಿಯಾದ ಸಂಘಪರಿವಾರದ ವಿರುದ್ಧ ಜನರನ್ನು ಜಾಗೃತಗೊಳಿಸಿ ಜನಾಂದೋಲನಕ್ಕೆ ಸಿದ್ದಗೊಳಿಸಬೇಕಾದ ಅನಿವಾರ್ಯತೆ ಇದೆ. ಛಿದ್ರಗೊಂಡ ಜನಪರ ಸಂಘಟನೆಗಳನ್ನು ಹಾಗೂ ಪ್ರಗತಿಪರ ಆಶಯಗಳುಳ್ಳ ನಾಯಕರನ್ನು ಒಂದುಗೂಡಿಸುವ ಪ್ರಯತ್ನವೊಂದು ಜನಾಲೋಂದನ ಮೈತ್ರಿಕೂಟ ಆರಂಭಿಸಿದ್ದು ಕಾಲದ ಅಗತ್ಯತೆಯಾಗಿದೆ. ಜನಾಲೊಂದನಗಳೇ ಸುಸ್ತಾಗಿ ಸುಧಾರಿಸಿಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಮತ್ತೆ ಮಹಾಮೈತ್ರಿಯನ್ನು ಹುಟ್ಟುಹಾಕುವ ಮೂಲಕ ಶೋಷಿತ ಜನತೆಯನ್ನು ಒಗ್ಗೂಡಿಸಬೇಕಾಗಿದೆ. ಸಂಘಟಿತ ಹೋರಾಟವೊಂದು ಪ್ರಭಲಗೊಳ್ಳಲೇಬೇಕಿದೆ.

ಬಹುತೇಕ ಜನಾಲೋಂದನಗಳು ಟ್ರೇಡ್ ಯುನಿಯನ್ ಸ್ವಬಾವ ಪಡೆದು ಬಾವಿಕಪ್ಪೆಗಳಾಗಿವೆ. ಇಡಿಯಾಗಿ ನೋಡುವ ಕಣ್ಣೋಟ ಹಾಗೂ ಗ್ರಹಿಕೆಯನ್ನು ಜನಾಲೋಂದನಗಳೂ ಪಡೆದುಕೊಳ್ಳಬೇಕಿದೆ. ದಾಯಾದಿಯಂತಿರುವ ಜನಾಂದೋಲನಗಳು ಸೋದರತೆ ಪಡೆದುಕೊಂಡಾಗ ಖಾಸಗಿ ಮಿಥ್ಯ ರಾಜಕಾರಣಕ್ಕೆ ಮುಖಾಮುಖಿಯಾಗುವ ತ್ರಾಣ ಜನಾಲೋಂದನಕ್ಕೆ ದಕ್ಕಬಹುದು ಎಂದು ದೇವನೂರ ಮಹಾದೇವರವರು ಈ ಮಹಾಮೈತ್ರಿ ಸಮಾವೇಶದ ಆಶಯ ಭಾಷಣದಲ್ಲಿ ಹೇಳಿದ್ದು ಪ್ರಸ್ತುತ ಹೋರಾಟಗಳಿಗೆ ಕನ್ನಡಿ ಹಿಡಿದಂತಿದೆ.

ವ್ಯಕ್ತಿಕೇಂದ್ರಿತವಾಗಿರುವ ಬಹುತೇಕ ಜನಪರ ಸಂಘಟನೆಗಳು ಮೊದಲು ಜನಶಕ್ತಿಕೇಂದ್ರಗಳಾಗಬೇಕಿವೆ. ತಮ್ಮ ವ್ಯಯಕ್ತಿಕ ರಾಗದ್ವೇಷ  ಮಹತ್ವಾಂಕಾಂಕ್ಷೆ ಹಾಗೂ ಅಹಮಿಕೆಗಳನ್ನು ಬಿಟ್ಟು ಐಕ್ಯ ಹೋರಾಟವನ್ನು ಕಟ್ಟಿ ಮುನ್ನಡೆಸುವ ಆಶಯವನ್ನು ಬೆಳೆಸಿಕೊಳ್ಳಬೇಕಿದೆ. ಸಂಘಟನೆಗಳ ನಾಯಕರುಗಳು ತಮ್ಮ ಅಧಿಕಾರದಾಹ ಹಾಗೂ ಪದವಿ ಪುರಸ್ಕಾರ ಪ್ರಶಸ್ತಿಗಳ ಮೋಹಗಳನ್ನು ತೊರೆದು ಒಕ್ಕೂಟ ಮಾದರಿಯ ಜನಾಲೋಂದನವನ್ನು ಹುಟ್ಟು ಹಾಕುವ  ಮಹತ್ತರವಾದ  ಕಾರ್ಯಕ್ಕೆ ಬದ್ದರಾದಾಗ ಮಾತ್ರ ಐಕ್ಯ ಹೋರಾಟಕ್ಕೆ ಅರ್ಥ ಬರುತ್ತದೆ. ಕರ್ನಾಟಕದಲ್ಲಿ ರಾಜಕೀಯ ಪ್ರಾತಿನಿದ್ಯತೆಗಳೇ ಇಲ್ಲದೇ ಸೋತು ಸುಸ್ತಾಗಿ ತಮ್ಮ ಅಸ್ತಿತ್ವಕ್ಕಾಗಿ ಹೆಣಗಾಡುತ್ತಿರುವ ಕಮ್ಯೂನಿಸ್ಟ್ ಪಕ್ಷಗಳು ಸಹ ಈ ಮಹಾಮೈತ್ರಿ ಕೂಟದ ಭಾಗವಾಗಿ ಜನಾಲೋಂದನ ಮುನ್ನಡೆಯಲು ಸಹಕರಿಸಬೇಕಿದೆ. ಶತ್ರುಗಳು ದೈತ್ಯಶಕ್ತಿಯನ್ನು ಪಡೆದುಕೊಂಡು ವಿಜ್ರಂಬಿಸುತ್ತಿರುವಾಗ ಜನಸಂಘಟನೆಗಳು ಹಾಗೂ ಪ್ರಗತಿಪರರು ಇನ್ನೊಬ್ಬರ ಕಾಲುಗಳನ್ನು ಎಳೆದುಕೊಂಡು, ತಮ್ಮವರನ್ನು ತಾವೇ ಟೀಕಿಸುತ್ತಾ  ಶಕ್ತಿಹೀನರಾಗುವುದು ಜನರಿಗೆ ಮಾಡಿದ ದ್ರೋಹವೇ ಆಗಿದೆ. ತಾತ್ವಿಕ ಭಿನ್ನಾಭಿಪ್ರಾಯಗಳನ್ನು ನೇರ ಮಾತುಕತೆಗಳಿಂದ ಬಗೆಹರಿಸಿಕೊಳ್ಳುತ್ತಾ.. ಬಗೆಹರಿಯದ ಅಭಿಪ್ರಾಯಬೇದಗಳನ್ನು ಪಕ್ಕಕ್ಕಿಟ್ಟು ಆಶಯಕ್ಕೆ ಬದ್ದವಾದ ಹೋರಾಟವನ್ನು ಕಟ್ಟಬೇಕಾಗಿದೆ.

ಆದರೆ.. ಅವಕಾಶವಾದಿ ರಾಜಕೀಯದಲ್ಲಿ ತೊಡಗಿಸಿಕೊಂಡಿರುವ, ರಾಜೀಕೋರತನವನ್ನೇ ಮೈಗೂಡಿಸಿಕೊಂಡ ಜನಪರ ಮುಖವಾಡದ ಕೆಲವು ನಾಯಕರುಗಳು ಇಂತಹ ಮಹಾಮೈತ್ರಿಗೆ ಬಲು ಅಪಾಯಕಾರಿಗಳಾಗುವ ಸಾಧ್ಯತೆಗಳಿವೆ. ರಾಜಾಶ್ರಿತವಾಗಿ  ಬೆಳೆದಿರುವ ಸಂಘಟನೆಗಳೂ ಸಹ ಮಗ್ಗುಲು ಮುಳ್ಳಾಗುವುದರಲ್ಲಿ ಸಂದೇಹವಿಲ್ಲ. ಆಳುವ ಸರಕಾರಗಳಿಂದ ಸಕಲ ಸವಲತ್ತುಗಳನ್ನು ಪಡೆದೂ ಜನಪರವಾಗಿದ್ದೇವೆಂದು ತಮ್ಮನ್ನು ಸಮರ್ಥಿಸಿಕೊಳ್ಳುವವರೂ ಸಹ ಪ್ರಸ್ತುತ ಮಹಾಮೈತ್ರಿಯ ಜೊತೆಗಿದ್ದಾರೆ. ಇಂತಹ ರಾಜೀಕೋರರನ್ನು ದೂರವಿಟ್ಟೂ ಸಂಘಟನೆ ಕಟುವಂತಿಲ್ಲಾ.. ಜೊತೆಗಿಟ್ಟುಕೊಂಡಷ್ಟೂ ಅಪಾಯ ತಪ್ಪಿದ್ದಲ್ಲ. ಇಂತಹ ಸಿಕ್ಕುಗಳನ್ನು ಜನಾಂದೋಲನ ಮಹಾಮೈತ್ರಿ ಅದು ಹೇಗೆ ನಿರ್ವಹಿಸುತ್ತದೆ ಎನ್ನುವುದರಲ್ಲಿ ಅದರ ಯಶಸ್ಸು ಇಲ್ಲವೇ ವಿಫಲತೆ ಇದೆ. ಅವಕಾಶವಾದಿತನವೆಂಬುದೇ ಎಲ್ಲಾ ಸಂಘಟನೆಗಳ ವಿಘಟನೆಗೆ ಕಾರಣವಾಗಿದ್ದು ಸ್ಪಷ್ಟವಾಗಿದೆ. ಬದ್ದತೆ ಇರುವವರ ಜೊತೆಗೆ ಈ ರಾಜೀಕೋರರೂ ಸೇರಿಕೊಂಡರೆ ಅದೆಷ್ಟೇ ಮುತುವರ್ಜಿವಹಿಸಿ ಕಟ್ಟಿದ ಐಕ್ಯ ಹೋರಾಟಗಳೂ ಹಳ್ಳಹಿಡಿದು ಹೋಗುವುದರಲ್ಲಿ ಸಂದೇಹವೇ ಇಲ್ಲ. 

ಈ  ಪ್ರಜ್ಞಾವಂತರೆನಿಸಿಕೊಂಡ ಪ್ರಗತಿಪರ ಸಂಘಟನೆಗಳ ನಾಯಕರುಗಳ ಸಮಸ್ಯೆ ಏನೆಂದರೆ ಎಲ್ಲರೂ ತಮ್ಮ ವಾದವೇ ಸರಿ ಮತ್ತೊಬ್ಬರದು ತಪ್ಪು ಎನ್ನುವ ದೋರಣೆಯನ್ನು ಬೆಳೆಸಿಕೊಂಡಿರುವುದು.  ಉದಾಹರಣೆಗೆ.. ಕಮ್ಯೂನಿಸ್ಟ ಪಕ್ಷಗಳಿಗೆ ಸಂಬಂಧಿಸಿದ ಎಲ್ಲಾ ಸಂಘಟನೆಗಳೂ ಸಹ ಪರಸ್ಪರ ತಮ್ಮ ತಮ್ಮಲ್ಲೇ ಭಿನ್ನಾಭಿಪ್ರಾಯಗಳನ್ನು ಬೆಳೆಸಿಕೊಂಡು ಐಕ್ಯತೆಯನ್ನು ಬೆಳೆಸಿಕೊಳ್ಳದೇ ಬಿಡಿ ಬಿಡಿ ಹೋರಾಟಗಳನ್ನು ಮಾಡುತ್ತಿವೆ. ಒಂದೇ ಸಿದ್ದಾಂತದ ಈ  ಕೆಂಬಾವುಟದ ಜನರಲ್ಲೇ ಐಕ್ಯಮತ್ಯ ಇಲ್ಲದಿರುವಾಗ ಐಕ್ಯ ಹೋರಾಟವನ್ನು ರೂಪಿಸುವುದಾದರೂ ಹೇಗೆ ಸಾಧ್ಯ? ಜೊತೆಗೆ ಅಂಬೇಡ್ಕರರನ್ನೇ ಕೇಂದ್ರವಾಗಿಟ್ಟುಕೊಂಡು ಅವರ ಸಿದ್ದಾಂತಗಳನ್ನೇ ನಂಬಿರುವ ಅನೇಕಾನೇಕ ದಲಿತಪರ ಸಂಘಟನೆಗಳ ನಾಯಕರುಗಳಲ್ಲಿರುವ ಭಿನ್ನಾಭಿಪ್ರಾಯಗಳಿಂದಾಗಿ ಇಲ್ಲಿವರೆಗೂ ದಲಿತ ಸಂಘಟನೆಗಳು ಒಂದಾಗಲು ಸಾಧ್ಯವಾಗಿಲ್ಲ. ದಲಿತ ಸಂಘರ್ಷ ಸಮಿತಿ ಎನ್ನುವ ಒಂದೇ ಒಂದು ಸಂಘಟನೆ ಇದ್ದದ್ದು ಈಗ ದಲಿತರ ಹೆಸರಲ್ಲಿ ನೋಂದನಿಯಾದ ಸಂಘಟನೆಗಳೇ ಮೂರು ಸಾವಿರದಷ್ಟಿವೆ. ವರ್ಗಸಂಘರ್ಷದಿಂದ ಸಮಾನತೆ ಸಾಧಿಸುವುದು ಎಲ್ಲಾ ಕಮ್ಯೂನಿಸ್ಟರ ಪ್ರಮುಖ ಗುರಿಯಾದರೆ.. ಜಾತಿಸಂಘರ್ಷದಿಂದ ದೇಶಾಧಿಕಾರ ಹಿಡಿದು ಜಾತಿವಿನಾಶ ಮಾಡುವುದು ನೀಲಿ ಬಾವುಟದ ಅಂಬೇಡ್ಕರ್‌ವಾದಿಗಳ ಗುರಿಯಾಗಿದೆ. ಜಾತಿನಾಶ ಮತ್ತು ವರ್ಗನಾಶ ಎರಡೂ ಸಂಭವಿಸಿ ಸಮಾನತೆ ಬರಬೇಕು ಎನ್ನುವುದು ಈ ಎಲ್ಲರ ಗುರಿಯಾಗಿದೆ.  ಆದರೆ ಅದಕ್ಕಾಗಿ ಹುಡುಕಿಕೊಂಡ ದಾರಿಗಳು ಬಿನ್ನವಾಗಿವೆ. ಹೋರಾಟದ ದಾರಿಯ ದಿಕ್ಕು ತೋರಿಸುವ ನಾಯಕತ್ವದ ಸ್ವಾರ್ಥತನದಿಂದಾಗಿಯೇ ಐಕ್ಯತೆ ಸಾಧಿಸುವುದು ಅಸಾಧ್ಯವಾಗಿದೆ. ಕೊನೆಗೆ ಕಮ್ಯೂನಿಸ್ಟರನ್ನು ದಲಿತ ಚಿಂತಕರು ಅನುಮಾನದಿಂದಲೇ ನೋಡುತ್ತಾ ನಿಂದಿಸುವುದು ಹಾಗೂ ದಲಿತ ನಾಯಕರ ನಡೆಗಳನ್ನು ಕಮ್ಯೂನಿಸ್ಟರು ವಿಮರ್ಶಿಸುವುದು ನಿರಂತರವಾಗಿ ನಡೆದೇ ಇದೆ. ಇಂತಹ ಅನುಮಾನಗಳು ಹಾಗೂ ವಿಪರೀತ ಸಂದೇಹಗಳನ್ನು ಇಟ್ಟುಕೊಂಡು ಜನಾಂದೋಲನಗಳ ಮಹಾಮೈತ್ರಿಯನ್ನು ಕಟ್ಟುವುದು ಅಂದುಕೊಂಡಷ್ಟು ಸುಲಭಸಾಧ್ಯವಲ್ಲ. ರೈತ ಸಂಘಟನೆಗಳೂ ಸಹ ವಿಭಜನೆಗೊಂಡು ತಮ್ಮ ಪಾಡಿಗೆ ತಾವು ಬಿಡಿ ಹೋರಾಟಗಳನ್ನು ಮಾಡುತ್ತಲೇ ಇವೆ. ಹೀಗೆ ಪರಸ್ಪರ ಅಪನಂಬಿಕೆಯನ್ನು ಹೊಂದಿರುವ ವ್ಯಕ್ತಿ ಹಾಗೂ ಸಂಘಟನೆಗಳನ್ನು ಒಂದು ವೇದಿಕೆಯಲ್ಲಿ ತಂದು ಐಕ್ಯ ಜನಹೋರಾಟವನ್ನು ಕಟ್ಟುವುದು ಪ್ರಯಾಸದಾಯಕ ಕೆಲಸವಾಗಿದೆ. 

ಆದರೂ ಅಂತಹ ಪ್ರಯತ್ನವನ್ನಂತೂ ಮಾಡಲೇಬೇಕಿದೆ. ಸಮಾನಾಸಕ್ತ ಸಂಘಟನೆಗಳು ಹಾಗೂ ವ್ಯಕ್ತಿಗಳಾದರೂ ಜೊತೆಗೂಡಬೇಕಿದೆ. ಜಂಟಿ ಹೋರಾಟಗಳು ಸಶಕ್ತಗೊಂಡು ತೀವ್ರಗೊಂಡಷ್ಟೂ ಬಾಕಿ ಸಮಾನಾಸಕ್ತ ಸಂಘಟನೆಗಳೂ ಜೊತೆಗೂಡುತ್ತವೆ. ಪ್ರಸ್ತುತವಾಗಿ ಜನಸಂಗ್ರಾಮ ಪರಿಷತ್ತು, ಕರ್ನಾಟಕ ರಾಜ್ಯ ರೈತ ಸಂಘ, ಸವೋದಯ ಕರ್ನಾಟಕ ಪಕ್ಷ,, ದಲಿತ ಸಂಘರ್ಷ ಸಮಿತಿ, ಕರ್ನಾಟಕ ಜನಶಕ್ತಿ... ಹೀಗೆ 28 ಸಂಘಟನೆಗಳ ಮುಖಂಡರುಗಳು ಸೇರಿ ಜನಾಲೋಂದನದ ಮಹಾಮೈತ್ರಿಗೆ ಚಾಲನೆ ಕೊಟ್ಟಿದ್ದಾರೆ. ಮೊದಲು ಈ ಸಂಘಟನೆಗಳ ಮುಖಂಡರುಗಳು ಸೇರಿ ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳ ಬಗ್ಗೆ ಹಾಗೂ ಒಟ್ಟಾಭಿಪ್ರಾಯಗಳು ಇರಬಹುದಾದ ವಿಷಯಗಳ ಕುರಿತು ಚರ್ಚಿಸಬೇಕಾಗಿದೆ. ಸಮಾನ ಆಶಯದ ಕುರಿತು ಒಮ್ಮತದ ನಿರ್ಣಯಗಳನ್ನು ತೆಗೆದುಕೊಂಡು ಇರುವ ತಮ್ಮ ಸಂಘಟನೆಗಳ ಒಟ್ಟು ಶಕ್ತಿಯನ್ನು ಜೊತೆಗೂಡಿಸಿಕೊಂಡು ಜಂಟಿ ಹೋರಾಟಗಳನ್ನು ರೂಪಿಸುವ ಮೂಲಕ  ಜನಾಲೋಂದನ ಮಹಾಮೈತ್ರಿಯ ಅಗತ್ಯತೆ ಹಾಗೂ ಸಾಧ್ಯತೆಗಳನ್ನು ಸಾಬೀತುಪಡಿಸಬೇಕಿದೆ. ಈಗ ಒಂದಾಗಿ ತದನಂತರ ಪರಸ್ಪರ ಕಾಲೆಳೆದುಕೊಳ್ಳುವ ಸಂಕುಚಿತತೆಯಿಂದ ಪ್ರಗತಿಪರರು ಎಂದು ಹೇಳಿಕೊಳ್ಳುವವರು ಮುಕ್ತವಾಗಬೇಕಿದೆ. ಶೋಷಕ ಸರಕಾರಗಳು ಹಾಗೂ ಮತಾಂಧ ಸಂಘಟನೆಗಳ ವಿರುದ್ದ ಜನರನ್ನು ಜಾಗೃತಗೊಳಿಸಿ ಜನಾಲೋಂದನವನ್ನು ತೀವ್ರಗೊಳಿಸುವುದೊಂದೇ ಈ ಮಹಾಮೈತ್ರಿಯ ಮಹಾಉದ್ದೇಶವಾಗಬೇಕಿದೆ. ಹಾಗೂ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಸೋಷಿಯಲ್ ಮೀಡಿಯಾಗಳಲ್ಲಿ ಸಾರ್ವತ್ರಿಕಗೊಳಿಸಿ ವಿರೋಧಿಗಳ ಕೈಗೆ ಅಸ್ತ್ರಗಳನ್ನು ಕೊಡುವ ಇಲ್ಲವೇ ಸಹವರ್ತಿಗಳಲ್ಲಿ ಅಸಹನೆ ಹುಟ್ಟಿಸುವ ಕೆಲಸವನ್ನು ಕೈಬಿಟ್ಟು ತಾತ್ವಿಕ ಭಿನ್ನಾಭಿಪ್ರಾಯಗಳನ್ನು ಸಭೆಗಳಲ್ಲಿ ಬಗೆಹರಿಸಿಕೊಳ್ಳುವುದುತ್ತಮ. ಇಲ್ಲವಾದರೆ ಒಗ್ಗಟ್ಟಾಗಿ ಉಡುಪಿ ಚಲೋ ಮಾಡಿದ ಕೆಂಪು ನೀಲಿ ಬಾವುಟಗಳ ಜನರು ಆ ನಂತರ ಪರಸ್ಪರ ಭಿನ್ನಾಭಿಪ್ರಾಯಗಳನ್ನು ವಾಟ್ಸಾಪ್ ಫೇಸ್ಬುಕ್ಗಳಲ್ಲಿ ಪರವಿರೋಧವಾಗಿ ಚರ್ಚಿಸಿದ್ದು ಅನುಕರಣೀಯವಲ್ಲ. ಇದು ಜಂಟಿ ಹೋರಾಟದ ಆಶಯವನ್ನೇ ದಿಕ್ಕೆಡಿಸುವಂತಹುದಾಗಿದೆ. ಬಾವುಟದ ಬಣ್ಣ ಹಾಗೂ ಸಂಘಟನೆಗಳ ಆಶಯಗಳು ಯಾವುದೇ ಆಗಿರಲಿ.. ಆದರೆ ಮೈತ್ರಿಕೂಟದಲ್ಲಿದ್ದಾಗ ಒಗ್ಗಟ್ಟಿಗೆ ಬದ್ದರಾಗಿರಬೇಕಾದ ಅಗತ್ಯತೆ ಇದೆ. ಇಲ್ಲವಾದರೆ ಬಾಹ್ಯದ ದುಷ್ಟ ಶಕ್ತಿಗಳ ವಿರುದ್ಧದ ಹೋರಾಟಗಳಿಗಿಂತಾ ಆಂತರಿಕ ಭಿನ್ನಾಭಿಪ್ರಾಯಗಳ ವಿರುದ್ದ ಬಡಿದಾಡುವುದೇ ಮಹಾಮೈತ್ರಿಯ ಕೆಲಸವಾಗುವ ಅಪಾಯವೂ ಇದೆ.

ಸಧ್ಯ.. ಒಂದಿಷ್ಟು ಪ್ರಜ್ಞಾವಂತರಾದರು ಒಂದು ಕಡೆ ಸೇರಿ ಜನಾಲೋಂದನಗಳ ಮಹಾಕೂಟವನ್ನು ಸ್ಥಾಪಿಸುವ ಪ್ರಯತ್ನವನ್ನಾದರೂ ಮಾಡಿದ್ದು ನಿರಾಶೆಯ ವಾತಾವರಣದಲ್ಲಿ ಆಶಾದಾಯಕ ಬೆಳವಣಿಗೆಯಾಗಿದೆ. ಒಂದು ಕರಡು ಪ್ರತಿಯನ್ನು ತಯಾರಿಸಿ ಅದಕ್ಕೆ ಬದ್ದವಾಗಿ ನಡೆಯುವ ನಿರ್ಣಯವನ್ನು ಈ ಸಮಾವೇಶದಲ್ಲಿ ತೆಗೆದುಕೊಂಡಿದ್ದು ಸರಿಯಾಗಿದೆ. ಕರಡು ಪ್ರತಿಯ ಮುಖ್ಯಾಂಶಗಳು ಹೀಗಿವೆ.

1.        ಸಮಾಜದ ನಾನಾ ಕ್ಷೇತ್ರಗಳನ್ನು ಪ್ರಭಾವಿಸುವ ರೀತಿಯಲ್ಲಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.
2.       ಜನಪರ ಕೆಲಸಗಳನ್ನು ಮಾಡುತ್ತಿರುವ ಸಂಘಟನೆಗಳ ಮಹಾಮೈತ್ರಿಯ ಸಹಯೋಗವನ್ನು ಗಟ್ಟಿಗೊಳಿಸುವುದು.
3.       ಜನವಿರೋಧಿ ರಾಜಕೀಯ ಶಕ್ತಿಗಳ ವಿರುದ್ದದ ಜನಪರ್ಯಾಯದ ಸಮಾವೇಶಗಳನ್ನು ಮಾಡುವುದು.
4.       ಜನತೆಯ ಪ್ರಣಾಳಿಕೆಯೊಂದನ್ನು ಸಿದ್ದಗೊಳಿಸಿ ಬಿಡುಗಡೆ ಮಾಡುವುದು.
5.       ರಾಜ್ಯಾದ್ಯಂತ ಜನರನ್ನು ತಲುಪುವುದಕ್ಕೆ ಜಾಥಾಗಳನ್ನು ಆಯೋಜಿಸುವುದು.
6.       ರಾಜ್ಯ ಮತ್ತು ಕೇಂದ್ರ ಸರಕಾರಗಳ ಮೇಲೆ ಒತ್ತಡ ತರುವ ಆಂದೋಲನಗಳನ್ನು ಶುರುಮಾಡುವುದು.
7.      ಭ್ರಷ್ಟ ಹಾಗೂ ಜನವಿರೋಧಿ ರಾಜಕೀಯ ವ್ಯವಸ್ಥೆಯನ್ನು  ಅಮೂಲಾಗ್ರವಾಗಿ ಬದಲಾಯಿಸುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವುದು...

ಹೀಗೆ.. ಕೆಲವಾರು ಪ್ರಮುಖವಾದ ನಿರ್ಣಯಗಳನ್ನು ಕರಡು ಪ್ರತಿಯಲ್ಲಿ ಘೋಷಿಸಲಾಗಿದೆ. ಆದರೆ.. ಆ ನಿರ್ಣಯಗಳ ಆಶಯಗಳಿಗೆ ಎಲ್ಲಾ ಸಹ ಸಂಘಟನೆಗಳು ಬದ್ದವಾಗಿದ್ದರೆ ಸಾಕು ಜನಾಲೋಂದನ ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ. ಇದಕ್ಕಿಂತಾ ಹೆಚ್ಚಾಗಿ ಈ ಮಹಾಮೈತ್ರಿಯನ್ನು ಒಡೆಯಲು ರಾಜ್ಯ ಹಾಗೂ ಕೇಂದ್ರ ಸರಕಾರಗಳು ಸರ್ವರೀತಿಯ ಪ್ರಯತ್ನಗಳನ್ನು ಮಾಡುತ್ತವೆ. ಸಂಘಟನೆಗಳ ನಾಯಕರುಗಳಿಗೆ ಪ್ರಲೋಭನೆಗಳನ್ನು ಒಡ್ಡುತ್ತವೆ. ಒಪ್ಪದಿದ್ದರೆ ಹೆದರಿಸುತ್ತವೆ. ಅದೂ ಆಗದಿದ್ದರೆ ಮತಾಂಧ ಶಕ್ತಿಗಳು ಹಲ್ಲೆ ಮಾಡುತ್ತವೆ. ಇಂತಹ ಎಲ್ಲಾ ಸಂಭವನೀಯ ಅಪಾಯಗಳನ್ನು ಒಗ್ಗಟ್ಟಿನಿಂದ ಎದುರಿಸುವ ತಾಕತ್ತನ್ನು ಈ ಮೈತ್ರಿಕೂಟ ಉಪಾಯವಾಗಿ ನಿರ್ವಹಿಸಬೇಕಾಗಿದೆ. ಏನೇ ಆದರೂ ದೈತ್ಯಶಕ್ತಿಯಾಗಿರುವ ಶೋಷಕ ವ್ಯವಸ್ಥೆಯನ್ನು ಎದುರಿಸಲು ಈಗಿರುವ ಮೈತ್ರಿಕೂಟದ ಶಕ್ತಿ ಸಾಲದು. ನಾಡಿನಲ್ಲಿರುವ ನಿರ್ಲಿಪ್ತ ಹಾಗೂ ಅಲಿಪ್ತ ಪ್ರಗತಿಪರರನ್ನು ಜೊತೆಗೆ ಸೇರಿಸಿಕೊಳ್ಳಬೇಕಾಗಿದೆ. ವೈಯಕ್ತಿಕ ನೆಲೆಯಲ್ಲಿ ತಮ್ಮದೇ ಆದ ರೀತಿಯಲ್ಲಿ ವ್ಯವಸ್ಥೆಯನ್ನು ವಿರೋಧಿಸುತ್ತಿರುವ ಕಲಾವಿದರುಗಳು, ಸಾಹಿತಿಗಳ ಸಹಕಾರವನ್ನು ಪಡೆದುಕೊಳ್ಳಬೇಕಿದೆ. ಕೋಮುಬಣ್ಣವಿಲ್ಲದ ಜನಪರ ಸಂಘಟನೆಗಳ ನಾಯಕರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜೊತೆಗಾರರನ್ನಾಗಿಸಿಕೊಳ್ಳಬೇಕಿದೆ. ಶೋಷಣೆ ಹಾಗೂ ಮತಾಂಧತೆಯ ವಿರುದ್ದ ರೋಸಿ ಹೋಗಿರುವ ಎಲ್ಲರನ್ನೂ  ಎಲ್ಲವನ್ನೂ ಒಳಗೊಂಡು ಈ ಜನಾಲೋಂದನ ಮಹಾಮೈತ್ರಿ ಸಹನೆ, ವಿವೇಚನೆ ಹಾಗೂ ಮಾನವೀಯತೆಯಿಂದ ಕೆಲಸ ಮಾಡಿದರೆ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಬಹು ದೊಡ್ಡ ಜನಶಕ್ತಿಯಾಗಬಹುದಾಗಿದೆ. ಎಲ್ಲಾ ಜಾತಿ ಕೋಮು ವರ್ಗದ ದಮನಿತ ಜನರು ಒಂದಾಗಿ ಮಾನವೀಯ ಹಕ್ಕುಗಳು ಹಾಗೂ ಸಮಾನತೆಗಾಗಿ ಹೋರಾಡಿ ಗೆಲ್ಲಬೇಕಾಗಿದೆ. ಮತಾಂಧ ಶಕ್ತಿಗಳು ಹಾಗೂ ಶೋಷಕ ಆಳುವ ವರ್ಗಗಳು ಸರ್ವನಾಶವಾಗಿ ಜನಸ್ನೇಹಿ ವ್ಯವಸ್ಥೆಯೊಂದು ಈ ದೇಶದಲ್ಲಿ ನಿರ್ಮಾಣವಾಗಬೇಕಾಗಿದೆ. ಅದು ಸಾಧ್ಯವಾಗುವುದು ತಾರ್ಕಿಕ ಮುನ್ನೋಟದ ಜನಾಲೋಂದಲನಗಳಿಂದ ಮಾತ್ರ ಸಾಧ್ಯ. ಅಂತಹ ಸಾಧ್ಯತೆಯ ಹಾದಿಯಲ್ಲಿ ಪಯಣ ಆರಂಭಿಸಿದ ಜನಾಲೋಂದನದ ಮಹಾಮೈತ್ರಿ ಕಟ್ಟುತ್ತಿರುವ ಎಲ್ಲಾ ಜನಪರ ವ್ಯಕ್ತಿ ಹಾಗೂ ಶಕ್ತಿಗಳಿಗೆ ಅಭಿನಂದನೆಗಳು.

-ಶಶಿಕಾಂತ ಯಡಹಳ್ಳಿ   

     



ಗುರುವಾರ, ನವೆಂಬರ್ 3, 2016

ತಹ ತಹ..... 58 ಜಾರಿಯಾಗಲಿ ಮಾತೃ ಭಾಷೆಯಲ್ಲಿ ಶಿಕ್ಷಣ; ಇಂಗ್ಲೀಷ್ ದಬ್ಬಾಳಿಕೆ ನಿಲ್ಲಿಸಬೇಕಾಗಿದೆ ತಕ್ಷಣ:




ಕನ್ನಡ ಮಧ್ಯಮದ  ಪ್ರಾಥಮಿಕ  ಶಾಲೆಗಳಲ್ಲಿ  ಇಂಗ್ಲೀಷನ್ನು ಎಷ್ಟನೇ ತರಗತಿಯಿಂದ ಕಲಿಸಬೇಕು?’ ಎಂಬುದು  ವಾದವಿವಾದವಾಗಿ  ರೂಪಗೊಂಡಿದೆ. ಪ್ರಗತಿಪರರು, ಬುದ್ದಿಜೀವಿಗಳು, ಜನಪರ ಸಂಘಟನೆಗಳು  ಪರ ವಿರೋಧವೆಂಬ ಎರಡು ಗುಂಪುಗಳಾಗಿ ಆಳುವ  ವರ್ಗದ ಒಡೆದು ಆಳುವ ಕುತಂತ್ರದ ದಾಳಕ್ಕೆ ಬಲಿಯಗಿ ಪರಸ್ಪರ ವಾದವಿವಾದಗಳಲ್ಲಿ  ಮಗ್ನರಾಗಿದ್ದಾರೆ. ಯಾಕೆ ಅವರೆಲ್ಲರೂ ಒಂದಾಗಿ ಸಮನ ಶಿಕ್ಷಣ ನೀತಿ ಜಾರಿಗೆ ಒತ್ತಾಯಿಸಿ ಹೋರಾಡಬಾರದು? ಇಂಗ್ಲೀಷ ಮಧ್ಯಮದ ಪಿಡುಗನ್ನು ನಾಶ ಮಾಡಿ  ಮತೃಭಾಷಾ ಮಧ್ಯಮದಲ್ಲಿ  ಕಡ್ಡಾಯ ಶಿಕ್ಷಣ ಜಾರಿಗಾಗಿ  ಪ್ರತಿಭಟಿಸಬಾರದು? ಅದ್ಯಾಕೆ ಶಿಕ್ಷಣದ ತಾರತಮ್ಯ  ನೀತಿಯ ವಿರುದ್ಧ  ಬೀದಿಗಿಳಿಯಬಾರದು? ಇಂತವೇ ಹಲವಾರು ಪ್ರಶ್ನೆಗಳು ಪ್ರಜ್ಞಾವಂತ ಜನರ ಮುಂದಿವೆಕನ್ನಡ ಭಾಷೆಯ ಉಳಿವಿನ ದೃಷ್ಟಿಯಿಂದ  ಮೊದಲು  ಮಾತೃಭಾಷೆಯಲ್ಲಿ  ಶಿಕ್ಷಣ ಜಾರಿಯಾಗಲೇಬೇಕಿದೆ ಇಂಗ್ಲೀಷನ್ನು ಒಂದು ಭಾಷೆಯಾಗಿ ಮಾತ್ರ ಕಲಿಸಬೇಕಾಗಿದೆ. ಎಲ್ಲಕ್ಕಿಂತ  ಮೊದಲು ಇಂಗ್ಲೀಷ  ದಬ್ಬಾಳಿಕೆ  ನಿಲ್ಲಲೇಬೇಕಾಗಿದೆ. ಅದಕ್ಕಾಗಿ  ಮಾತೃಭಾಷಾ  ಶಿಕ್ಷಣದ ಅಗತ್ಯತೆ ಮತ್ತು  ಅನಿವಾರ್ಯತೆ ಕುರಿತು ಲೇಖನ.

ಮಾನವ  ಜೀವನಕ್ಕೂ-ಭಾಷೆಗೂ  ಬಿಡಿಸಲಾರದ  ಸಂಬಂಧವಿದೆಮಾನವನ ಶ್ರಮ ಮತ್ತು  ಮಾತು ಎರಡೇ ಭಾಷೆಯ ಬೆಳವಣಿಗೆಗೆ ಮೂಲ. ಮಾನವನ ನಾಗರೀಕತೆ ಬೆಳೆದಂತೆಲ್ಲ ಅದಕ್ಕನುಗುಣವಾಗಿ  ಭಾಷೆ ಬೆಳೆಯುತ್ತಲೇ ಬಂದಿದೆಒಂದು  ಜನಾಂಗದ  ಇರುವನ್ನು  ಗುರಿತಿಸಲು ಭಾಷೆ  ಪ್ರಮುಖ ಪಾತ್ರ ವಹಿಸುತ್ತದೆ. ಜಾತಿ, ಧರ್ಮ, ರಕ್ತ ಸಂಬಂಧಗಳಿಗೆ ಪ್ರಜಾತಾಂತ್ರಿಕ ಮೌಲ್ಯಗಳಿಲ್ಲದೇ ಹೋದರೂ, ಭಾಷೆಯಲ್ಲಿ ಮಾತ್ರ ಮೌಲ್ಯಗಳು ಅಡಗಿವೆ. ಭಾಷೆಯನ್ನು ಕಳೆದುಕೊಳ್ಳುವುದು ಎಂದರೆ ಒಂದು ಜನಾಂಗದ ಗುರುತಿಸುವಿಕೆಯನ್ನೇ ನಾಶಮಾಡಿಕೊಂಡಂತೆ. ಅಂದರೆ ಸ್ವಂತಿಕೆಯನ್ನೇ ಕಳೆದುಕೊಂಡಂತೆ. ಒಂದು ಭಾಷೆ  ನಾಶವಾಗುವುದೆಂದರೆ ಸಾವಿರಾರು ವರ್ಷಗಳ ಕೋಟ್ಯಾನುಕೋಟಿ ಮಾನವರ ಶ್ರಮವು ನಾಶವಾದಂತೆ. ಆದ್ದರಿಂದಲೇ ಭಾಷೆ ಎಂಬುದು ಒಂದು ಜನಾಂಗದ ಬದುಕಿನ ಪ್ರಶ್ನೆಯಾಗಿದೆ. ಅವರ ಅಸ್ಥಿತ್ವದ ಪ್ರಶ್ನೆಯಾಗಿದೆ. ಆದ್ದರಿಂದಲೇ ಭಾಷೆಯ ಪ್ರಶ್ನೆ ಬಂದಾಗ ಎಲ್ಲಾ ಧರ್ಮಗಳು, ಎಲ್ಲಾ ಜಾತಿಗಳು, ರಕ್ತ ಸಂಬಂಧಗಳು, ವರ್ಣ ಬೇಧ, ಗಡಿಗಳ ಮಿತಿ ಇಲ್ಲದೇ ಒಂದಾಗಲು ಜನ ಮುಂದಾಗುತ್ತಾರೆ. ಹಾಗಾದರೆ ಒಂದು ಜನಾಂಗದ ಬದುಕು ಮತ್ತು ಭವಿಷ್ಯವನ್ನು  ನಿರ್ಧರಿಸುವಂತಹ ಭಾಷಾ ಕಲಿಕೆಯು ಯಾವ ಮಧ್ಯಮದಲ್ಲಿರಬೇಕು ?

ಜನ ಸಮೂಹವನ್ನು  ಸಂಪರ್ಕಿಸಲು, ಸಮುದಾಯದಲ್ಲಿ  ಸಕ್ರಿಯವಾಗಿ ಪಾಲ್ಗೊಳ್ಳಲು, ಒಬ್ಬ  ವ್ಯಕ್ತಿಯಿಂದ ಇನ್ನೊಬ್ಬ  ವ್ಯಕ್ತಿಗೆ, ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ವಿಷಯಗಳನ್ನು  ತಲುಪಿಸುವಲ್ಲಿ ಮಾತೃಭಾಷೆ ಪ್ರಮುಖ ಪಾತ್ರ ವಹಿಸುತ್ತದೆ. ಭಾಷೆ ಕೇವಲ ಪದಗಳ ವಾಕ್ಯಗಳ ಮೊತ್ತವಾಗಿರದೇ, ಮಾನವನ ಆಲೋಚನಾ ವಿಧಾನವನ್ನು ವ್ಯವಸ್ಥಿತವಾಗಿ  ರಚಿಸುವಂತಹುದಾಗಿದೆ. ಯಾವುದೇ ದೇಶ ಅಭಿವೃದ್ದಿ ಹೊಂದುವಲ್ಲಿ  ಶಿಕ್ಷಣ  ಸಾರ್ಥಕವಾಗಬೇಕಾದರೆ  ಶಿಕ್ಷಣದ ಕಲಿಸುವಿಕೆಯು ಮತೃಭಾಷೆಯಲ್ಲಿ ಇರಬೇಕು. ಪ್ರಪಂಚದ ಯಾವುದೇ ಅಭಿವೃದ್ಧಿಶೀಲ ದೇಶಗಳನ್ನು  ತೆಗೆದುಕೊಂಡರೂ ಅಲ್ಲಿಯ ಶಿಕ್ಷಣ ಮಾತೃಭಾಷೆಯಲ್ಲಿಯೇ ನಡೆಯುತ್ತದೆ.

ಮಾತೃ ಭಾಷಾ ಶಿಕ್ಷಣ :
ಶಿಕ್ಷಣದಲ್ಲಿ  ಮಾತೃಭಾಷೆಯ ಮಹತ್ವವನ್ನು  ಕುರಿತು  ಆಂಗ್ಲ  ಸಾಹಿತಿ  ಬ್ರೈಲ್ಸ್ಫೆರ್ಟ  ರೀತಿ  ಹೇಳಿದ್ದಾರೆ. “ ನಮ್ಮ ಭಾವನೆಗಳ ಬೀಗದ ಕೈ ಇರುವುದು ಮಾತೃ ಭಾಷೆಯಲ್ಲಿ. ಸೂಕ್ಷಾತಿಸೂಕ್ಷ  ಸಂವೇದನೆಗಳನ್ನೂ  ಸಹಜವಾಗಿ ಅಂತಃಕರಣ ಪ್ರೇರಣೆಯಿಂದ ಮನವರಿಕೆ ಮಾಡಿಕೊಡುವ ಶಕ್ತಿ ಮಾತೃ ಭಾಷೆಗಿದೆ. ತಾಯಿಯ  ತೊಡೆಯ  ಮೇಲೆ ಕಲಿತ ಭಾಷೆ ಅದು. ನಮ್ಮ ದುಃಖ ಮತ್ತು ಸಂತೋಷಗಳ ಸುಲಭ  ಅಭಿವ್ಯಕ್ತಿ ಮಧ್ಯಮವದುಅನ್ಯ ಭಾಷೆಯನ್ನು  ಶಿಕ್ಷಣ ಮಧ್ಯಮವಾಗಿ ಅಂಗೀಕರಿಸುವುದರಿಂದ  ವಿದ್ಯಾರ್ಥಿಗಳು ಅನೂಹ್ಯವಾದ ಕಷ್ಟಕ್ಕೆ  ಗುರಿಯಾಗಬೇಕಾಗುತ್ತದೆ. ಅವರ  ಮನಸ್ಸು ಮತ್ತು  ಬುದ್ದಿ  ಚಲನ ಸ್ವಾತಂತ್ರ್ಯವನ್ನು  ಕಳೆದುಕೊಳ್ಳುತ್ತವೆ.”

ಹೌದು. ಮಗು ಪ್ರಪಂಚವನ್ನು  ಅರಿಯುವುದು ತನ್ನ  ಇಂದ್ರಿಯಗಳ ಮೂಲಕ. ಅದರ  ಕಲಿಕೆಯಲ್ಲಿ  ಓದು, ಬರಹ, ದೃಶ್ಯ, ಸ್ವರ್ಶತರ್ಕ, ಚಿಂತನೆಗ್ರಹಿಕೆ, ಅಭಿವ್ಯಕ್ತಿನೆನಪು. ಎಲ್ಲ ವಿಚಾರಗಳಲ್ಲಿ   ಮಗುವಿನ ಮಾತೃಭಾಷೆ ಅತ್ಯಂತ ಮಹತ್ವದ ನಿರ್ಣಾಯಕ ಪಾತ್ರ ವಹಿಸುತ್ತದೆ. ಐದನೇ ವರ್ಷದ ನಂತರ ಮಗು ತನ್ನ ಶಿಕ್ಷಣ, ಸಂಸ್ಕೃತಿ ಮತ್ತು  ಬೌದ್ಧಿಕ ವಿಕಾಸಕ್ಕಾಗಿ  ಶಾಲೆ ಸೇರಬೇಕಾಗುತ್ತದೆ ಸಂದರ್ಭದಲ್ಲಿ ಕಲಿಕೆ, ಭೋಧನೆ ಇವುಗಳನ್ನು  ಮಾತೃಭಾಷೆಯಲ್ಲಿ ಕೊಡಿಸಬೇಕೆ ಹೊರತು ಅಪರಿಚಿತವಾದ ಅನ್ಯಭಾಷೆಗಳಲ್ಲಲ್ಲ. ತನ್ನ  ಪರಿಸರದಲ್ಲಿ, ತನ್ನ ಪರಿವಾರ, ಆಟದ ಮೈದಾನ, ಸ್ನೇಹಿತರೊಂದಿಗೆ ಮಾತೃಭಾಷೆಯಲ್ಲಿ  ವ್ಯವಹರಿಸುವ ಮಗುವಿಗೆ ತಾಯಿ ಭಾಷೆಯಲ್ಲಿ ಶಿಕ್ಷಣ ಕೊಟ್ಟಲ್ಲಿ ಯಾವುದೇ ಮನಸಿಕ ಒತ್ತಡಕ್ಕೂ  ಒಳಗಾಗದೆ ಎಲ್ಲವನ್ನೂ  ಸರಾಗವಾಗಿ ಕಲಿಯಲು  ಅನುಕೂಲವಾಗುತ್ತದೆ. ಅಷ್ಟೇ ಅಲ್ಲದೇ ಮಕ್ಕಳು  ಶಿಕ್ಷಣವನ್ನು  ಮತೃಭಾಷೆಯ  ಮೂಲಕ  ಸುಲಭವಾಗಿ  ಗ್ರಹಿಸಬಲ್ಲರು.
 
ಭಾಷೆಯ ಮಧ್ಯಮದ  ಮೂಲಕವೇ ಮನುಷ್ಯ ಹೊರಗಣ  ಪ್ರಭಾವಗಳಿಗೆ  ತುತ್ತಾಗುತ್ತಾನೆ. ಅಂತೆಯೇ ಭಾಷೆಯ ಮೂಲಕವೇ ತನ್ನ ಅಂತರ್ಭಾವಗಳನ್ನು ಅಭಿವ್ಯಕ್ತಿ ಪಡಿಸುತ್ತಾನೆ. ಪ್ರಸ್ತುತ ಅನುಭವವು ಭಾಷೆಯಲ್ಲಿ  ಸೆರೆಯಾಗಿರುತ್ತದೆ. ಭಾಷೆಯ ಮೂಲಕವೇ ವ್ಯಕ್ತಿಯ ಮತ್ತು  ಸಮೂಹ ಅಭೀಷ್ಠೆಗಳು ರೂಪಗೊಂಡು ಸ್ಥಾಯಿಯಗುತ್ತವೆವ್ಯಕ್ತಿಯ ವ್ಯಕ್ತಿತ್ವದ ಸೃಜನತೆಯಲ್ಲಿ  ಭಾಷೆ  ಮಹತ್ವದ ಪಾತ್ರ ವಹಿಸುತ್ತದೆ. ಅಪರಿಚಿತ ಭಾಷೆಯಿಂದ ಅತ್ಯಂತ ಬುದ್ದಿಮತಿಯ ವ್ಯಕ್ತಿಯೂ ಕಂಪನ ಪೀಡಿತನಾಗುತ್ತಾನೆ.

ಆದ್ದರಿಂದ ಯಾವ ಭಾಷೆ ತನ್ನ  ಸುತ್ತಮುತ್ತಲಿನ  ಪರಿಸರಸ್ಥಳೀಯ ಸಂಸ್ಕೃತಿಬದಲಾಗುತ್ತಿರುವ  ಸಾಮಾಜಿಕ ಗತಿಯನ್ನು  ಹಾಗೂ  ಸಾಮಾಜಿಕ ಉತ್ಪಾದನೆ ಹಾಗೂ ಅದರ ಸಂಬಂಧಗಳನ್ನು  ಅರ್ಥೈಸುವಂತೆ ಮಾಡುತ್ತದೋ, ಯಾವ ಭಾಷೆ ವಿದ್ಯಾರ್ಥಿಗಳಲ್ಲಿ ವಿಮರ್ಶಿಸುವ, ಪ್ರಶ್ನಿಸುವ, ಸ್ವತಂತ್ರವಾಗಿ ಆಲೋಚಿಸುವ ಅವಕಾಶವನ್ನು ಒದಗಿಸುತ್ತದೋ.. ಅಂತಹ  ಭಾಷೆಯನ್ನು   ಶಿಕ್ಷಣ ಮಧ್ಯಮವನ್ನಾಗಿ  ಮಾಡಬೇಕು. ಇದು ಪರಕೀಯ  ಭಾಷೆಗಳಿಂದ ಸಾಧ್ಯವಿಲ್ಲಅದು ಮತೃಭಾಷೆಯಿಂದ ಮಾತ್ರ ಸಾಧ್ಯ. ಕನ್ನಡ  ಭಾಷಿಕರಿಗೆ  ಕನ್ನಡದಲ್ಲೇ ಶಿಕ್ಷಣ ಕೊಡುವುದು ವೈಜ್ಞಾನಿಕ ದೃಷ್ಟಿಕೋನವಾಗಿದೆ.

ಇಂಗ್ಲೀಷ್  ಭಾಷಾ  ಅಧಿಪತ್ಯ :   
ಭಾರತವನ್ನು  ಆಕ್ರಮಿಸಿಕೊಂಡು  ವಸಾಹತನ್ನಾಗಿಸಿದ ಬ್ರಿಟಿಷರು ತಮ್ಮ ಹಿತಾಸಕ್ತಿಗನುಗುಣವಾಗಿ ಇಂಗ್ಲೀಷನ್ನು ಭಾರತದ ಆಡಳಿತ ಭಾಷೆಯನ್ನಾಗಿ ಜಾರಿಗೆ ತಂದರು. ತಮ್ಮ ಖರ್ಚು- ವೆಚ್ಚಗಳನ್ನು  ಮಿತಗೊಳಿಸಲು  ತಮಗೆ ಬೇಕಾದ ಸರಕಾರಿ  ನೌಕರರನ್ನು ತಯರಿಸಲು ಅಭಿವೃದ್ದಿ  ಪತದಲ್ಲಿದ್ದ ಪ್ರಾದೇಶಿಕ ಭಾಷೆಗಳನ್ನು  ಮೊಟಕುಗೊಳಿಸಿ ಸ್ಥಾನದಲ್ಲಿ ಇಂಗ್ಲೀಷನ್ನು  ಶಿಕ್ಷಣದ ಮಾಧ್ಯಮವಾಗಿ  ಬಲವಂತದಿಂದ ಜಾರಿಗೆ ತಂದರು. ಅದರ  ಮೂಲಕ ತಮ್ಮ  ಸಂಸ್ಕೃತಿಯನ್ನು ಸಹ  ಒತ್ತಾಯವಾಗಿ ಹೇರುವ ಮೂಲಕ  ತನ್ನದೇ ಆದ ಒಂದು ವಿದೇಶಿ ಅನುಕರಣಾಶೀಲ  ವರ್ಗವನ್ನು  ಭಾರತದಲ್ಲಿ  ಬೆಳೆಸಲು  ಪ್ರಾರಂಭಿಸಿದರು. ದಿನನಿತ್ಯದ  ಆಡಳಿತದ ವ್ಯವಹಾರಗಳನ್ನು ನೋಡಿಕೊಳ್ಳುವುದಕ್ಕೆ ಇಂತಹ ವಿಧೇಯ ಸೇವಕರ  ಅಗತ್ಯ  ಬ್ರಿಟೀಷರಿಗಿದ್ದುದರಿಂದ ಅವರು ಒಂದು ವಿದ್ಯಾವಂತ ಪ್ರತಿಷ್ಟಿತ ವರ್ಗವನ್ನು ಸೃಷ್ಟಿಸಿದರು. ಅವರೆಂತವರಾಗಿರಬೇಕೆಂದರೆ, “ರಕ್ತದಿಂದ ಭಾರತೀಯರಾಗಿದ್ದು, ಆಸಕ್ತಿ, ಅಭಿರುಚಿಅಭ್ಯಾಸ, ನಡವಳಿಕೆ ಮತ್ತು  ಸಂಪ್ರದಾಯಗಳಿಂದ  ಬ್ರಿಟೀಷರಾಗಿರಬೇಕುಎಂದು ಇಂಗ್ಲೀಷ್ ಅಧಿಕಾರಿ ಮೆಕಾಲೆ ಹೇಳಿದ್ದನು. ಇದರಿಂದಾಗಿ  ಬ್ರಿಟೀಷ್ ಆಳ್ವಿಕೆ ಉದ್ದಕ್ಕೂ  ಇಂಗ್ಲೀಷ್ ಶಿಕ್ಷಣ ಮಧ್ಯಮವಾಗಿದ್ದುವಸಾಹತು ಮೌಲ್ಯಗಳಿಗೆ ಒತ್ತು  ನೀಡುತ್ತಿತ್ತು.

1916 ರಲ್ಲಿ ಇಂಗ್ಲೀಷ್ ಕುರಿತು ಗಾಂಧೀಜಿ, “ ವಿದೇಶಿಯರ ಆಡಳಿತದಿಂದ ಬಂದೊದಗಿದ ಪೀಡನೆ ಎಂದರೆ ಆಂಗ್ಲ   ಶಿಕ್ಷಣ ಮಧ್ಯಮ. ಇದು ರಾಷ್ಟ್ರದ ಶಕ್ತಿಯನ್ನು ಕುಂದಿಸಿ, ಮಕ್ಕಳ ಆಯುಷ್ಯವನ್ನು ಮೊಟಕುಗೊಳಿಸಿದೆ. ಮಕ್ಕಳನ್ನು ಸಾರ್ನಜನಿಕರೊಂದಿಗೆ ಬೇರ್ಪಡಿಸಿದೆಯಲ್ಲದೆ ಶಿಕ್ಷಣ ವೆಚ್ಚವನ್ನು ಹೆಚ್ಚಿಸಿದೆ. ಶಿಕ್ಷಣ ಮಧ್ಯಮ ಹೀಗೇಯೇ ಮುಂದುವರಿದರೆ, ಇದು ರಾಷ್ಟ್ರದ ಆತ್ಮ ವಿನಾಶಕ್ಕೆ ಕಾರಣವಾಗುತ್ತದೆ. ಅನಿಷ್ಟವಾದ ಇಂಗ್ಲೀಷ್ ತೊಲಗಿಸಲು ಸೂಕ್ತ ವಿಧಾನವನ್ನು ಕಂಡುಕೊಳ್ಳಬೇಕಾಗಿದೆಎಂದು ಹೇಳಿದ್ದರು.

ಆದರೆ....  ಭಾರತದ  ಬೂಟಕದ ಸ್ವಾತಂತ್ರ್ಯವು  ಬ್ರಿಟೀಷರಿಂದ ಭಾರತದ ಬಂಡವಾಳಿಗರಿಗೆ ಹಸ್ತಾಂತರಗೊಂಡ (1947) ನಂತರ ಅಧಿಕಾರ ವಹಿಸಿಕೊಂಡ ದಲ್ಲಾಳಿ ಬಂಡವಾಳಶಾಹಿ ಆಡಳಿತ ವರ್ಗವು  ಬ್ರಿಟೀಷರ  ಶಿಕ್ಷಣ ನೀತಿ ಮತ್ತು  ಸಂಸ್ಕೃತಿಯನ್ನೇ ಮುಂದುವರಿಸಿದವು. ಅದೇ ಇಂಗ್ಲೀಷೆ ಇಂದೂ ಸಹ ಆಡಳಿತದಲ್ಲಿ, ಕೋರ್ಟು  ಕಛೇರಿಗಳಲ್ಲಿಶಿಕ್ಷಣದಲ್ಲಿ ರಾಜಾರೋಷವಾಗಿ ಮೆರೆಯುತ್ತಿದೆ. ಉಳ್ಳವರ ಸೇವೆಗೆಂದೇ ಇರುವ ಭಾಷೆಗೆ ಸಿಕ್ಕುವ ಪ್ರೋತ್ಸಾಹವು ಸಾಮ್ರಾಜ್ಯಶಾಹಿ  ಹಿತಾಸಕ್ತಿಗನುಗುಣವಾಗಿದ್ದು, ಜನತೆಯ ಮೇಲೆ ಇಂಗ್ಲೀಷ್ ಬಾಷೆಯ ಮೂಲಕ ಪರಕೀಯ  ಸಂಸ್ಕೃತಿಯನ್ನು  ಹೇರಿ, ಇಡೀ ಭಾರತವನ್ನು  ಪರಕೀಯರಿಗೆ ಅಡವಿಡಲು ಇಂಗ್ಲೀಷ್ ಸಹಕಾರಿಯಾಗಿದೆ. ಕನ್ನಡಿಗರ ಮೇಲಂತೂ ಇಂಗ್ಲೀಷ್ ಭಾಷೆಯ ದಮನ ತೀವ್ರವಾಗಿದೆ.

ಕರ್ನಾಟಕದ ಆಳುವ ವರ್ಗಗಳು ಕನ್ನಡದ ಬಗ್ಗೆ  ವಿಪರೀತ  ಕಾಳಜಿ ತೋರಿಸುತ್ತಲೇ ಒಳಗೊಳಗೆ ಅಸಂಖ್ಯಾತ ಇಂಗ್ಲೀಷ್ ಶಾಲೆಗಳನ್ನು ಸ್ಥಾಪಿಸುವ ಮೂಲಕ ಕನ್ನಡ ಶಾಲೆಗಳನ್ನು  ಕಡೆಗಣಿಸಿ ಜನತೆಯಲ್ಲಿ ಕನ್ನಡದ  ಬಗ್ಗೆ  ಕೀಳರಿಮೆ ಮೂಡಿಸಿದ್ದಾರೆ. ನಮ್ಮ  ನಾಡಿನ ಆಡಳಿತ, ಉದ್ಯಮ, ವ್ಯವಹಾರವೆಲ್ಲ  ಇಂಗ್ಲೀಷಿನಲ್ಲೆ  ನಡೆಯುವಂತೆ ನೋಡಿಕೊಳ್ಳುತ್ತಾ, ಸಾಮ್ರಾಜ್ಯಶಾಹಿ  ಹಿತಾಸಕ್ತಿಗಳನ್ನು  ಕಾಪಾಡುತ್ತಾವ್ಯವಸ್ಥಿತವಾಗಿ  ಜನರಲ್ಲಿ  ಗುಲಾಮಿ  ಭಾವನೆ ಬೆಳೆಸುತ್ತಿದ್ದಾರೆ. ಇನ್ನು  ಇಂಗ್ಲಿಷ್ ಕಲಿಯುವ ಕನ್ನಡ ನಾಡಿನ ಮಕ್ಕಳ ಸ್ಥಿತಿಯಂತೂ ನೀರಿಳಿಯದ  ಗಂಟಲಿಗೆ ಕಡುಬು  ತುರುಕಿದಂತಾಗಿದೆ. ಇಂಗ್ಲೀಷ್ ಪರಬಾಷೆಯಾಗಿದ್ದರಿಂದ ಅದರ  ಧ್ವನಿಪದ, ವಾಕ್ಯ ರಚನೆ, ಸಂಸ್ಕೃತಿ ಯಾವುದಕ್ಕೂ  ಸಹಜವಾಗಿ  ಹೊಂದಿಕೊಳ್ಳದ ಮಕ್ಕಳು  ಏನನ್ನೂ ಕಲಿಯಲಾರದೇ, ಬಾಯಿಪಾಠ  ಮಾಡುವ ಗಿಳಿಗಳನ್ನಾಗಿ ಮಾಡಿ ಮಕ್ಕಳ ಸಹಜ ಪ್ರತಿಭೆ ಅರಳಿ ವಿಕಾಸವಾಗದಂತೆ  ತಡೆಯುವಲ್ಲಿ  ಇಂಗ್ಲೀಷ್ ಯಶಸ್ಸು ಸಾಧಿಸಿದೆ.

ಇಂಗ್ಲೀಷ್ನಲ್ಲಿ  ಮಾಡುವ  ಪಾಠ ಮಕ್ಕಳಿಗೆ ಅರ್ಥವಾಗದೇ, ಮಕ್ಕಳು  ಅದನ್ನು  ಮತ್ತೊಮ್ಮೆ ಮನಸ್ಸಿನಲ್ಲಿ ತಮ್ಮ ಮತೃಭಾಷೆಯಲ್ಲಿ ಅನುವಾದ ಮಾಡಿಕೊಂಡು ಆಲೋಚಿಸಿ  ನಂತರ ಇಂಗ್ಲೀಷಿನಲ್ಲಿ  ಪ್ರತಿಕ್ರಯಿಸಬೇಕಾಗುತ್ತದೆ. ಇಂಗ್ಲೀಷ್ನಲ್ಲಿ  ಕೇಳಿದ್ದನ್ನು ಅರ್ಥ ಮಾಡಿಕೊಳ್ಳುವ, ಕಲಿತದ್ದನ್ನು  ನೆನಪಿಟ್ಟುಕೊಳ್ಳುವ ಮತ್ತು ಅದನ್ನು  ತನ್ನ  ಮಾತಲ್ಲಿ ಹೇಳುವ ಸಾಮರ್ಥ್ಯದ ಕೊರತೆಯುಂಟಾಗಿ, ಮಕ್ಕಳ  ಗ್ರಹಿಕೆಯ ಮಿತಿಯರಿಯದೆ ಅದನ್ನು  ದಡ್ಡತನವೆಂದು  ತಿಳಿದು ಮಕ್ಕಳನ್ನು  ಟ್ಯೂಷನ್ ಹಾಗೂ ಹೋಂವರ್ಕ್ಗಳ ಬಲೆಯಲ್ಲಿ  ಸಿಕ್ಕಿಸಿ ಹಿಂಸಿಸಲಾಗುತ್ತಿದೆ. ಕಾರಣಗಳಿಂದಾಗಿ ಮಗು  ತನ್ನ  ಮತೃಭಾಷೆಯಲ್ಲಿ  ಸರಿಯಾಗಿ ಕಲಿಯದೇ, ಅತ್ತ  ಇಂಗ್ಲೀಷನ್ನೂ  ಅರಗಿಸಿಕೊಳ್ಳದೇ  ತ್ರಿಶಂಕು  ಸ್ಥಿತಿಯಲ್ಲಿ  ನರಳಬೇಕಾಗಿದೆ. ಆಳುವ ವರ್ಗದ ಹಿತಾಸಕ್ತಿಗಾಗಿಪೋಷಕರ  ಪ್ರತಿಷ್ಟೆ   ಮತ್ತು  ಇಂಗ್ಲೀಷ್ ವ್ಯಾಮೋಹಕ್ಕಾಗಿ  ಮಗುವಿನ  ಸಹಜ ಜೀವನದ ವಿಕಾಸವನ್ನೇ  ಬಲಿಕೊಡಬೇಕಾಗುತ್ತದೆ. ಇದರ ಮೂಲಕ ನಾಡಿನ ಪ್ರಗತಿಗೂ ತಡೆಯುಂಟಾಗುತ್ತದೆ.

ನರಕವೋ- ಇಂಗ್ಲೀಷ್ ಶಾಲೆಯೋ ?  
ಇಂದಿನ  ಇಂಗ್ಲೀಷ್ ಶಾಲೆಗಳು ಮಕ್ಕಳ ಪಾಲಿಗೆ ನರಕಗಳಾಗಿವೆಶಾಲಾ ಕೊಠಡಿಗೆ ಒಂದು ಭಾಷೆ, ಬಾಹ್ಯ ಪ್ರಪಂಚಕ್ಕೆ ಮತ್ತೊಂದು ಭಾಷೆ, ರೀತಿ ಎರಡು ಭಾಷೆಗಳ ವಾತಾವರಣದಲ್ಲಿ ಬೆಳೆಯುತ್ತಿರುವ ಮಕ್ಕಳು ತೀವ್ರ ಗೊಂದಲಕ್ಕೊಳಗಾಗುತ್ತಾರೆ. ಇಂಗ್ಲೀಷ್ ಕಲಿತರೆ  ಒಳ್ಳೆ ಘನತೆ  ಗೌರವ  ಸಿಗುತ್ತದೆಂದೂ, ಒಳ್ಳೆಯ ಉದ್ಯೋಗ ಸಿಗುತ್ತದೆಂದೋ, ಮಕ್ಕಳು  ಬುದ್ದಿವಂತರಾಗುತ್ತಾರೆಂದೊ,.. ವ್ಯವಸ್ಥೆ  ಮೂಡಿಸಿರುವ ಭ್ರಮೆಗೆ  ಒಳಗಾಗಿ ಇಂದಿನ ತಂದೆ-ತಾಯಂದಿರು ತಮ್ಮ  ಮಕ್ಕಳನ್ನು  ಇಂಗ್ಲೀಷ  ಶಾಲೆಗಳಿಗೆ ಸೇರಿಸಲು ಮುನ್ನಗ್ಗುತ್ತಿದ್ದಾರೆ. ಪಾಪ! ಅವರಿಗೆ  ಗೊತ್ತಿಲ್ಲವೆಂದು ಕಾಣುತ್ತದೆ. ಇಂಗ್ಲೀಷ್ ಶಾಲೆಗಳಲ್ಲಿ  ಓದಿ  ಬಂದ ಎಷ್ಟು  ಮಕ್ಕಳು  ಬುದ್ದಿವಂತರಾಗಿದ್ದಾರೆ?, ಎಷ್ಟು  ಮಕ್ಕಳು ವಿಚಾರಶೀಲರಾಗಿ , ಅರ್ಥಶಾಸ್ತ್ರಜ್ಞರಾಗಿ, ವಿಜ್ಞಾನಿಗಳಾಗಿ   ದೇಶಕ್ಕೆ ಕೊಡುಗೆ ಕೊಟ್ಟಿದ್ದಾರೆಮತ್ತು  ಕನ್ನಡ ಶಾಲೆಗಳಿಂದ  ಬಂದ ಅದೆಷ್ಟು  ಮಂದಿ ಇಂದು ವಿಜ್ಞಾನಿಗಳಾಗಿಯೂ, ಪ್ರಗತಿಶೀಲರಾಗಿಯೂ ಮುಂದೆ ಬಂದಿದ್ದಾರೆಂದು.

ಶಿಕ್ಷಣ ಯಶಸ್ವಿಯಾಗಬೇಕಾದರೆ  ಅದರ  ಮಾಧ್ಯಮ ಉಪಧ್ಯಾಯರಿಗೂ ಹಾಗೂ ಮಕ್ಕಳಿಗೂ ಗೊತ್ತಿರಬೇಕು. ಆಗ ಮಾತ್ರ ಇವರಿಬ್ಬರ  ನಡುವೆ ಅನನ್ಯ ಸಂಬಂಧ ಬೆಳೆಯುತ್ತದೆ. ಉಪಧ್ಯಾಯರು  ಹೇಳುವ  ವಿಚಾರ  ಮಕ್ಕಳಿಗೆ ಸುಲಭವಾಗಿ  ಅರ್ಥವಾಗುವುದಷ್ಟೇ ಅಲ್ಲದೇ, ಯಕ್ಷ ಪ್ರಶ್ನೆಗಳನ್ನು  ಹಾಕುವ ಮೂಲಕ ವಿದ್ಯಾರ್ಥಿಗಳು ಸಂತೋಷವನ್ನು  ಜ್ಞಾನವನ್ನೂ ಪಡೆಯುತ್ತಾರೆ. (ಉತ್ಸಾಹ ಭರಿತರಾಗುತ್ತಾರೆ,) ಆಗ  ಜ್ಞಾನವು  ಸಹ  ಹೇರಿಕೆಯಾಗದೆ, ಸಂತೋಷದ  ಪ್ರಕ್ರಿಯೆ ಆಗುತ್ತದೆ. ಇಂತಹ ಯಾವುದೇ ಸಂತೋಷದ ಪ್ರಕ್ರಿಯೆ   ಇಂಗ್ಲೀಷ್ ಶಾಲೆಗಳಲ್ಲಿ ಕಾಣುವುದಿಲ್ಲ. ಬದಲು ಬಲವಂತವಾಗಿ ಹೇರುವ ಪ್ರಕ್ರಿಯೆ ಹೆಚ್ಚಾಗಿದೆ. ಮಾತೃಭಾಷೆಯಲ್ಲಿ ಒಂದು  ವರ್ಷದಲ್ಲಿ ಕಲಿಯಬೇಕಾದ  ಜ್ಞಾನವನ್ನು, ಇಂಗ್ಲೀಷ್ನಲ್ಲಿ ಪಡೆಯಲು  ಐದಾರು ವರ್ಷಗಳೇ ಬೇಕಾಗುತ್ತದೆ.    ರೀತಿ ಮಕ್ಕಳು  ತಮ್ಮ  ಬಾಲ್ಯದ  ಅತ್ಯಮೂಲ್ಯವಾದ  ವರ್ಷಗಳನ್ನು  ಕಳೆದುಕೊಳ್ಳುತ್ತಿದ್ದಾರೆ. ಒಂದು ಅಂದಾಜು ಲೆಕ್ಕ ಮಾಡಿದರೆ, ಇಡೀ ದೇಶದಲ್ಲಿನ ಕೋಟ್ಯಾನುಕೋಟಿ ಮಕ್ಕಳು  ತಮ್ಮ  ಬಾಲ್ಯದ ಅತ್ಯಮೂಲ್ಯವಾದ ಹಲವಾರು ವರ್ಷಗಳನ್ನು ಕಳೆದುಕೊಳ್ಳುತ್ತಾರೆ.   ಮೂಲಕ ದೇಶದ ಉನ್ನತಿಗೆ ಎಷ್ಟು ನಷ್ಟ ಉಂಟಾಗಬಹುದೆಂದು ಯೋಚಿಸಿದರೆ. ಅಪಾರ ! !

ಉಪಾಧ್ಯಾಯರು  ಭೋದಿಸುವ ವಿಚಾರವು ಅರ್ಥವಾಗದ ಕಾರಣ  ಮಕ್ಕಳು  ಬೇರೆ  ಮಾರ್ಗವಿಲ್ಲದೆ. ಕಂಠಪಾಠ   ಮಾಡುವ  ಅಭ್ಯಾಸಕ್ಕೆ  ಒಳಗಾಗುತ್ತಾರೆ. ಅದಕ್ಕನುಗುಣವಾಗಿ ಇಂದಿನ ಪಠ್ಯಗಳು, ಪರೀಕ್ಷೆಗಳು ಇವೆ. ಇಂದಿನ ಪರೀಕ್ಷೆಗಳೊ.......!  ಜ್ಞಾಪಕ ಶಕ್ತಿಯನ್ನು ಪರೀಕ್ಷೆ ಮಾಡುವುದೇ ಆಗಿದೆಯೇ ಹೊರತು, ವಿದ್ಯಾರ್ಥಿಗಳಲ್ಲಿ ಯಾವುದೇ ರೀತಿಯ ಸೃಜನಶೀಲತೆಯನ್ನು ತುಂಬುವಂತಹುದಲ್ಲಮಾತೃ ಭಾಷೆಯಲ್ಲಿ ಆಡಳಿತ, ಶಿಕ್ಷಣ ನೀಡಲಾರದ ದೇಶವು  ಒಂದು  ಪ್ರಜಾಪ್ರಭುತ್ವ ರಾಷ್ಟ್ರವಾಗಲು  ಸಾಧ್ಯವೇ ಇಲ್ಲ. ಪರಕೀಯ  ಭಾಷೆಯನ್ನು  ಆಡಳಿತ ಭಾಷೆಯಾಗಿ ಹಾಗೂ ಶಿಕ್ಷಣ ಮಾಧ್ಯಮವಾಗಿ ಮಂದುವರೆಸಿದರೆ  ಅದು ಜನರಿಂದ ಸರ್ಕಾರವನ್ನು, ಮಕ್ಕಳಿಂದ ತಂದೆ-ತಾಯಂದಿರನ್ನು ಬೇರ್ಪಡಿಸಿದಂತಾಗುತ್ತದೆ.

ಪ್ರತಿ ವರ್ಷವೂ  ಇಂಗ್ಲೀಷ್ ಬಲಿಪೀಠಕ್ಕೆ ಲಕ್ಷಾಂತರ  ಮಕ್ಕಳ ಕೊರಳೊಡ್ಡಿ  ಬಲಿ ತೆಗೆದುಕೊಳ್ಳುತ್ತಿರುವ ಆಳುವ ವರ್ಗಗಳು, ಇಂಗ್ಲೀಷ್ ಶ್ರೇಷ್ಠ  ಹಾಗೂ ಅನಿವಾರ್ಯವೆಂಬ ಭ್ರಮೆ ಮೂಡಿಸಿವೆ. ವೈಜ್ಞಾನಿಕ ಹಾಗೂ ಅತ್ಯಾಧುನಿಕ  ಶಿಕ್ಷಣವು ಇಂಗ್ಲೀಷ್ ನಲ್ಲಿ   ಮಾತ್ರ ಸಾಧ್ಯವೆಂದು  ಸುಳ್ಳು ಹೇಳಲಾಗುತ್ತಿದೆ. ಮಕ್ಕಳ ಶಿಕ್ಷಣದ ಬಗ್ಗೆ ದೂರದೃಷ್ಟಿ, ಪ್ರಾಮಾಣಿಕ ಕಾಳಜಿ ಇಲ್ಲದ  ಅಪ್ಪ-ಅಮ್ಮಂದಿರು  ತಮ್ಮ  ಮಕ್ಕಳನ್ನು  ‘ಮಮ್ಮಿ-ಡ್ಯಾಡಿಸಂಸ್ಕೃತಿಗೆ ದೂಡಿ ವಿಕ್ಷಿಪ್ತ ಸಂತೋಷ ಪಡುತ್ತಿದ್ದಾರೆ.

ಸಾಮಾನ್ಯ ಜನರಿಗೆ ಇಂಗ್ಲೀಷ್ ಭಾಷೆ ಗೊತ್ತಿಲ್ಲದಿರುವುದನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿರುವ  ಸರಕಾರ ಹಾಗೂ ಅದರ  ಪಾಲಕರು ಮತ್ತು  ನೌಕರಶಾಹಿಗಳಿಗೆ ಜನರನ್ನು ಮೋಸ ಮಾಡಿ  ಶೋಷಣೆ  ಮಾಡವಲ್ಲಿಲ  ಇಂಗ್ಲೀಷ ಒಂದು  ಅಸ್ತ್ರವಾಗಿ  ಉಪಯೋಗವಾಗುತ್ತಿದೆಆದ್ದರಿಂದ  ಇಂಗ್ಲೀಷಿನ  ದಬ್ಬಾಳಿಕೆಯನ್ನು, ಆಳುವ ವರ್ಗದವರ ಕುತಂತ್ರವನ್ನು ಶತಾಯ  ಗತಾಯ  ಕೊನೆಗೊಳಿಸದಿದ್ದಲ್ಲಿ   ನಾವು  ನಮ್ಮ  ಮಕ್ಕಳನ್ನು    ಮೂಲಕ    ನಾಡನ್ನು  ಸಾಮ್ರಾಜ್ಯಶಾಹಿಗಳ  ಬಲಿಪೀಠಕ್ಕೆ  ಬಲಿಪಶುವನ್ನಾಗಿಸಬೇಕಾಗುತ್ತದೆ ಎನ್ನುವುದು ನಿಸ್ಸಂದೇಹ.

ನಾಡು ನುಡಿಯ ಬಗ್ಗೆ ಪ್ರೀತಿ ಕಳಕಳಿ ಇರುವಂತಹ ಕನ್ನಡಿಗರು ಹಾಗೂ ಕನ್ನಡಪರ ಸಂಘಟನೆಗಳು ತೀವ್ರ ಹೋರಾಟಗಳನ್ನು ರೂಪಿಸುವ ಮೂಲಕವೇ ಮಾತೃಭಾಷಾ ಮಾಧ್ಯಮ ಶಿಕ್ಷಣ ನೀತಿಯ ಜಾರಿಗಾಗಿ ಪ್ರಯತ್ನಿಸಬೇಕಾಗಿದೆ. 1994 ರಲ್ಲಿ ಕರ್ನಾಟಕ ಸರಕಾರವು ಮಾತೃಭಾಷಾ ಶಿಕ್ಷಣ ಮಾಧ್ಯಮ ನೀತಿ ಘೋಷಿಸಿದ್ದನ್ನು 2014ರಲ್ಲಿ ಸುಪ್ರೀಂ ಕೋರ್ಟ ತಿರಸ್ಕರಿಸಿತು. ಶಿಕ್ಷಣ ಮಾಧ್ಯಮ ಪೋಷಕರ ವಿವೇಚನೆಗೆ ಬಿಟ್ಟಿದ್ದು ಎಂಬ ಅವೈಜ್ಞಾನಿಕ ತೀರ್ಪನ್ನು ಕೊಟ್ಟಿತು. ಎಷ್ಟೇ ಆಗಲೀ ಶಾಸಕಾಂಗ, ಕಾರ್ಯಾಂಗದಂತೆಯೇ ನ್ಯಾಯಾಂಗವೂ ಕೂಡಾ ಕಾರ್ಪೋರೇಟ್ ಸಂಸ್ಕೃತಿಯ ಪ್ರತಿಪಾದನೆ ಮಾಡುತ್ತಿರುವುದು ಹಲವಾರು ಸಲ ಸಾಬೀತಾಗಿದೆ. ಇವತ್ತಿನವರೆಗೂ ಕೋರ್ಟು ವ್ಯವಹಾರಗಳಲ್ಲಿ ಇಂಗ್ಲೀಷ್ ಭಾಷೆಯೇ ಪ್ರಭುತ್ವ ಹೊಂದಿರುವುದನ್ನು ಗಮನಿಸಬೇಕಾಗಿದೆ. ಭಾರತದ ಮುಂದಿನ ಜನಾಂಗವನ್ನು ಜಾಗತೀಕರಣದ ಭಾಗವಾಗಿ ಸಿದ್ದಗೊಳಿಸುವ ಬದ್ಧತೆಯನ್ನು ಬಂಡವಾಳಶಾಹಿ ಪ್ರಜಾಪ್ರಭುತ್ವದ ಅಂಗಗಳು ಹೊಂದಿವೆ.

ಹೀಗಾಗಿ ಪ್ರಾದೇಶಿಕ ಭಾಷಾವಿರೋಧಿ ಹಾಗೂ ದೇಸಿ ಸಂಸ್ಕೃತಿಯ ವಿರೋಧಿಯಾದ ಬಂಡವಾಳಶಾಹಿ ವ್ಯವಸ್ಥೆಯನ್ನು ಬದಲಾಯಿಸಲು ಜನಾಲೋಂದನದಿಂದ ಮಾತ್ರ ಸಾಧ್ಯವಾಗುವಂತಹುದು. ಕನ್ನಡಿಗರು ಜಾಗೃತರಾಗಿ ಮಾತೃಭಾಷೆಯಲ್ಲಿ ಸಮಾನ ಶಿಕ್ಷಣ ಜಾರಿಯಾಗಬೇಕೆಂದು ಪಟ್ಟು ಹಿಡಿದು ಆಳುವ ವರ್ಗಗಳ ಮೇಲೆ ಒತ್ತಡ ತರಬೇಕಿದೆ. ಮಾತೃಭಾಷಾ ಶಿಕ್ಷಣ ನೀತಿಗೆ ಮಾರಕವಾಗಿರುವ ಸುಪ್ರೀಂ ಕೋರ್ಟಿನ ನಿರ್ಣಯವನ್ನು ಬದಲಾಯಿಸಲು ಸಂಸತ್ತಿನಿಂದ ಮಾತ್ರ ಸಾಧ್ಯ. ಹೀಗಾಗಿ ರಾಜ್ಯ ಸರಕಾರವನ್ನು ಕನ್ನಡಿಗರು ಎಚ್ಚರಿಸಬೇಕಿದೆ. ಕೇಂದ್ರ ಸರಕಾರವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳ ಮೇಲೆ ಅತೀವ ಒತ್ತಡ ಹೇರಬೇಕಿದೆ. ಕನ್ನಡಿಗರ ಭಾಷಾ ಹೋರಾಟದ ಪರವಾಗಿ ನಿಲ್ಲದಿದ್ದರೆ ಕನ್ನಡಿಗರ ಓಟು ಇಲ್ಲವೆಂದು ರಾಷ್ಟ್ರೀಯ ಪಕ್ಷಗಳಿಗೆ ಬಿಸಿಮುಟ್ಟಿಸಬೇಕಿದೆ. ಬಿಡಿ ಬಿಡಿಯಾದ ದ್ವನಿಗಳು ಹಾಗೂ ಹೋರಾಟಗಳು ಕೇಂದ್ರ ಸರಕಾರವನ್ನು ಮಣಿಸಲು ಸಾಧ್ಯವಿಲ್ಲ. ರಾಜಕೀಯೇತರ ಸಮಸ್ತ ಕನ್ನಡ ಸಂಘಟನೆಗಳು ಒಂದಾಗಿ ರಾಜೀರಹಿತ ಐಕ್ಯ ಹೋರಾಟವನ್ನು ರೂಪಿಸಬೇಕಿದೆ. ಸಮಾನ ಮಾತೃಭಾಷಾ ಮಾಧ್ಯಮ ಶಿಕ್ಷಣ ಜಾರಿಯಾಗುವವರೆಗೂ ಜನಾಂದೋಲನವು ನಿರಂತರವಾಗಬೇಕಿದೆ. ಆಗ ಮಾತ್ರ ಕನ್ನಡ ಭಾಷೆ ಮತ್ತು ಸಂಸ್ಕೃತಿ ಮುಂದಿನ ತಲೆಮಾರಿಗೆ ಉಳಿಯಲು ಸಾಧ್ಯ. ಇಲ್ಲವಾದರೆ ಕನ್ನಡ ಕನ್ನಡಿಗರ ಮನೆಯಲ್ಲೇ ಅನಾಥವಾಗುವುದರಲ್ಲಿ  ಸಂದೇಹವೇ ಇಲ್ಲ. ಜೈ ಕರ್ನಾಟಕ ಮಾತೆ ಬರಿ ಮಾತಲ್ಲಿ ಘೋಷಣೆಯಲ್ಲಿ ಮಾತ್ರ ಇರದೇ ಮಾತೆಯನ್ನು ಸಂರಕ್ಷಿಸುವತ್ತ, ಉಳಿಸಿ ಬೆಳೆಸುವತ್ತ ಸಮಸ್ತ ಕನ್ನಡಿಗರೂ ಪ್ರಯತ್ನಿಸಬೇಕಿದೆ. ಮೂರುಸಾವಿರ ವರ್ಷಗಳಿಂದ ಕನ್ನಡಿಗರನ್ನು ಒಂದು ಗೂಡಿಸಿದ ಭಾಷೆ ಇನ್ನೂ ಸಾವಿರಾರು ವರ್ಷಗಳ ಕಾಲ ಕನ್ನಡ ನಾಡಿನಲ್ಲಿ ನೆಲೆಯಾಗಬೇಕಿದೆ. ರಾಷ್ಟ್ರಕವಿ ಕುವೆಂಪುರವರ ಕವಿತೆಯಾದರೂ ಕನ್ನಡಿಗರಲ್ಲಿ ಜಾಗೃತಿ ಮೂಡಿಸಬೇಕಿದೆ.

ಇಂಗಿ ಹೋಗುತ್ತಿದೆ ಇಂಗ್ಲೀಷಿನ ಮರುಭೂಮಿಯಲಿ,
          ನಿನ್ನ  ಮಕ್ಕಳ  ಶಕ್ತಿ-ಬುದ್ಧಿ-ಪ್ರತಿಭೆ
          ಕಲ್ಲ ಕುಂಡದಿ ನೆಟ್ಟ  ಅಶ್ವತ್ಥ  ಸಸಿಯಂತೆ
          ಕಿಮುಳ್ಷಿ ಗುಜ್ಜಾಗುತ್ತಿದೆ ಮೊಳೆವ ಚೈತನ್ಯ.
          ಕನ್ನಡದ ಕ್ರಿಸ್ತನದೋ, ಇಂಗ್ಲೀಷರ ಶಿಲುಬೆಯಲಿ
          ಸಿಲುಕಿ ಬಾಯ್ಬಿಡುತಿಹನು ನೀರಡಿಸಿ ಪ್ರಾಣ
          ಇಂಗ್ಲೀಷಿನ ಜೀಲೋಟಿನ್ನಿ  ನಡಿ ನಿಮ್ಮ  ಕೊರಳೊಡ್ಡಿ
          ವರುಷ ವರುಷವು ಕೋಟಿ ಕೊಲೆಯಪ್ಪಿರೇಕೆ ?
          ಏಳು ಎಚ್ಚರಗೊಳ್ಳು ಭಾರತೀಯ ಕಂದ
          ನಿನ್ನ  ಸ್ವಾತಂತ್ರ ವನ್ನು ನೀನೇ ರಕ್ಷಿಸಿಕೋ.

                                     -ಶಶಿಕಾಂತ ಯಡಹಳ್ಳಿ