ಬುಧವಾರ, ಜನವರಿ 11, 2017

ತಹ ತಹ..... 71 ಯೋಧರಿಗಿಲ್ಲಾ ಸವಲತ್ತು ; ಎಲ್ಲಾ ಸೇನಾಧಿಕಾರಿಗಳ ಮಸಲತ್ತು :



ದೇಶ ರಕ್ಷಕರ ಬವಣೆ; ಸಿಕ್ಕಿದ್ದೆಲ್ಲಾ ಅಧಿಕಾರಿಗಳಿಂದಲೇ ಭಕ್ಷಣೆ..
  



ಬಾರ್ಡರ್ ಸೆಕ್ಯೂರಿಟಿ ಪೋರ್ಸ (ಬಿಎಸ್‌ಎಪ್) ನಲ್ಲಿ  ನಡೆದ ವಿಡಿಯೋ ಸ್ಪೋಟವೊಂದು ರಕ್ಷಣಾ ಇಲಾಖೆಯನ್ನು ತಲ್ಲಣಗೊಳಿಸಿದರೆ,  ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದೆ.  ಗಡಿ ಕಾಯುವ ಯೋಧ ತೇಜ್ ಬಹದ್ದೂರ್ ಯಾದವ್ ಯೋಧರ ದುಸ್ತಿತಿಯನ್ನು ಹಾಗೂ ಸೇನಾಧಿಕಾರಿಗಳ ಭ್ರಷ್ಟತೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹರಿಬಿಡುವ ಮೂಲಕ ಮಿಲಿಟರಿಯೊಳಗಿನ ಹೆಗ್ಗಣಗಳ ಹುನ್ನಾರಗಳನ್ನು ಬಯಲುಗೊಳಿಸಿದ್ದಾನೆ. ಸೈನಿಕರ ಬಗ್ಗೆ ಅಪಾರ ಕಾಳಜಿ ಕಳಕಳಿಗಳನ್ನು ಅಭಿವ್ಯಕ್ತಿಸಿ.. ಸೈನಿಕರೇ ಈ ದೇಶದ ಸಂಪತ್ತು ಎನ್ನುವ ಹಾಗೆ ಭಾವನಾತ್ಮಕ ಭ್ರಮೆಯನ್ನು ಹುಟ್ಟು ಹಾಕಿದ ಮೋದಿ ಮಹಾತ್ಮರ ಮಾತುಗಳಿಗೆ ವಿರುದ್ಧವಾಗಿ ಮಿಲಿಟರಿ ಅಧಿಕಾರಿಗಳೇ ಸಾಮಾನ್ಯ ಸೈನಿಕರನ್ನು ಶೋಷಿಸುವುದು ಈಗ ಜಗಜ್ಜಾಹೀರಾಗಿದೆ. ಸೈನ್ಯದ ಬಗ್ಗೆ ಒಂದೇ ಒಂದು ಮಾತು ಕಾಮೆಂಟ್ ಮಾಡಿದರೂ ದೇಶದ್ರೋಹದ ಕೆಲಸವೆಂದು ಹುಯಿಲೆಬ್ಬಿಸುವ ನಕಲಿ ದೇಶಭಕ್ತರಿಗೆ ತೇಜ್ ಬಹದ್ದೂರ್ ವೀಡಿಯೋ ಕ್ಲಿಪ್ ಈಗ ನುಂಗಲಾರದ ತುತ್ತಾಗಿದೆ.

ಅಸಲಿಗೆ ಆಗಿದ್ದೇನು ಅಂದ್ರೆ. ಬಿಎಸ್‌ಎಪ್ ಯೋಧ ತೇಜ್ ಬಹದ್ದೂರ್ ಯಾದವ್ 2017ರ ಜನವರಿ ಮೊದಲ ವಾರದಲ್ಲಿ ಮೂರು ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಗಡಿ ಕಾಯುವ ಸೈನಿಕರ ದುಸ್ಥಿತಿಯನ್ನು ಬಯಲುಗೊಳಿಸಿದೆ.  ಆ ಯೋಧ ಹೇಳಿದ ಮಾತುಗಳು ಹೀಗಿವೆ. ದೇಶವಾಸಿಗಳಿಗೆ ನನ್ನ ನಮನ. ಈ ಮುಖಾಂತರ ನಿಮ್ಮಲ್ಲೊಂದು ನನ್ನ ಮನವಿ. ನಾನು ಬಿಎಸ್‌ಎಪ್-29ನೇ ಬಟಾಲಿಯನ್ನಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಇಲ್ಲಿ ನಾವು ಬೆಳಿಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಿರಂತರವಾಗಿ 11 ಗಂಟೆಗಳ ಕಾಲ ಹಿಮದ ಮಧ್ಯೆ ನಿಂತು ಗಡಿ ರಕ್ಷಿಸುತ್ತೇವೆ. ಮಳೆ, ಹಿಮ ಹಾಗೂ ಬಿರುಗಾಳಿಯ ನಡುವೆಯೂ ನಾವು ದೇಶ ಕಾಯುವ ಕಾಯಕವನ್ನು ಮಾಡುತ್ತಿದ್ದೇವೆ. ಆದರೆ.. ನಮ್ಮ ಕಷ್ಟವನ್ನು ಯಾವುದೇ ಮಾಧ್ಯಮವಾಗಲಿ ಇಲ್ಲವೇ ರಾಜಕಾರಣಿಗಳಾಗಲಿ ಕೇಳುವುದಿಲ್ಲ... ನಾನು ಕೆಲವು ವಿಡಿಯೋಗಳನ್ನು ಕಳುಹಿಸುತ್ತಿದ್ದೇನೆ. ಇದನ್ನು ದೇಶದ ಪ್ರತಿಯೊಂದು ಮಾಧ್ಯಮಗಳು ಹಾಗೂ ರಾಜಕಾರಣಿಗಳಿಗೆ ತೋರಿಸಬೇಕೆಂದು ನನ್ನ ಬಯಕೆಯಾಗಿದೆ. ಇಲ್ಲಿ ನಮ್ಮ ಅಧಿಕಾರಿಗಳು ನಮ್ಮ ಮೇಲೆ ಯಾವ ರೀತಿ ಅನ್ಯಾಯ ಮಾಡುತ್ತಿದ್ದಾರೆ ಎಂಬುದು ವೀಡಿಯೋಗಳಲ್ಲಿ ಸ್ಪಷ್ಟವಾಗಿದೆ. ನಾನು ಸರಕಾರವನ್ನು ದೂಷಿಸುತ್ತಿಲ್ಲಾ. ಯಾಕೆಂದರೆ ಸರಕಾರ ಪ್ರತಿಯೊಂದನ್ನೂ ನೀಡುತ್ತಿದೆ.. ಆದರೆ ಹಿರಿಯ ಅಧಿಕಾರಿಗಳು ಅವುಗಳನ್ನು ನಮಗೆ ತಲುಪಿಸಲು ಬಿಡದೇ ಎಲ್ಲವನ್ನೂ ತಮಗೇ ಇಟ್ಟುಕೊಳ್ಳುತ್ತಾರೆ. ಹೀಗಾಗಿ ನಾವು ಇಲ್ಲಿ ಇಷ್ಟು ಕಷ್ಟ ಅನುಭವಿಸುತ್ತಿದ್ದರೂ ನಮಗೆ ಯಾವುದೇ ಸೌಲಭ್ಯ ಸಿಕ್ಕುತ್ತಿಲ್ಲಾ. ಬಹಳಷ್ಟು ಬಾರಿ ಇಲ್ಲಿರುವ ಯೋಧರು ಊಟವಿಲ್ಲದೆ, ಹಸಿವಿನಿಂದ ಮಲಗಿಕೊಳ್ಳಬೇಕಾಗುತ್ತದೆ. ಬೆಳಗಿನ  ಉಪಹಾರದಲ್ಲಿ ನಮಗೆ ಸಿಗುವುದು ಒಂದು ಒಣ ಪರೋಟ ಹಾಗೂ ಅದರೊಂದಿಗೆ ತಿನ್ನಲು ಉಪ್ಪಿನಕಾಯಿ ಮಾತ್ರ. ಪಲ್ಯ ಸಹ ಇಲ್ಲಾ. ಮಧ್ಯಾಹ್ನ ಊಟಕ್ಕೆ ಸಿಗುವ ಸಾರಿನಲ್ಲಿ ಕೇವಲ ಉಪ್ಪು ಹಾಗೂ ಬೇಳೆ ಮಾತ್ರ ಕಂಡುಬರುತ್ತದೆ. ಭಾರತ ಸರಕಾರ ಎಲ್ಲವನ್ನೂ ನೀಡುತ್ತಿದೆ.. ಇಲ್ಲಿನ ಸ್ಟೋರ್ ತುಂಬಿ ತುಳುಕುತ್ತಿದೆ. ಆದರೆ ಬಂದ ಸಾಮಾನುಗಳು ಮಾರುಕಟ್ಟೆಗೆ ಹೋಗುತ್ತಿವೆ. ಯಾರಿದನ್ನು ಮಾರುತ್ತಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಮಾನ್ಯ ಪ್ರಧಾನ ಮಂತ್ರಿಗಳಲ್ಲಿ ನನ್ನದೊಂದು ವಿನಂತಿ. ದಯವಿಟ್ಟು ಈ ಕುರಿತಾಗಿ ತನಿಖೆ ನಡೆಸಿ. ಈ ವಿಡಿಯೋ ಹಾಕಿದ ನಂತರ ನಾನು ಇರುತ್ತೇನೋ ಇಲ್ಲವೋ ಗೊತ್ತಿಲ್ಲಾ. ಯಾಕೆಂದರೆ ಇದರಲ್ಲಿ ಅಧಿಕಾರಿಗಳ ಬಹುದೊಡ್ಡ ಕೈವಾಡವಿದೆ. ಅವರು ನನಗೆ ಏನು ಬೇಕಾದರೂ ಮಾಡಬಹುದಾಗಿದೆ. ಹೀಗಾಗಿ ಈ ವಿಡಿಯೋವನ್ನು ಸಾಧ್ಯವಾದಷ್ಟೂ ಹೆಚ್ಚು ಶೇರ್ ಮಾಡಿಕೊಳ್ಳಿ. ಈ ಮೂಲಕ ಮಾಧ್ಯಮಗಳೂ ಯೋಧರ ಕಷ್ಟವನ್ನು ಜನರಿಗೆ ತೋರಿಸಲಿ. ಧನ್ಯವಾದಗಳು. ಜೈ ಹಿಂದ್


ಈ ಮೇಲಿನ ಹೇಳಿಕೆಯನ್ನು ವಿಡಿಯೋ ಮೂಲಕ ನೀಡಿ ಯೋಧರ ದಮನೀಯ ಪರಿಸ್ಥಿತಿಯನ್ನು ತೆರೆದಿಟ್ಟ ತೇಜ್ ಬಹದ್ದೂರ್ ಯಾದವ್ ಎಲ್‌ಓಸಿ ಅಂದ್ರೆ ಲೈನ್ ಆಪ್ ಕಂಟ್ರೋಲ್‌ನಲ್ಲಿ ಕಾಯಕನಿರತನಾಗಿರುವ ಬಿಎಸ್‌ಎಪ್  ಬಟಾಲಿಯನ್ನಲ್ಲಿ ಸಾಮಾನ್ಯ ಸೈನಿಕ. ಮೈನಸ್ ಡಿಗ್ರಿ ಚಳಿಯಲ್ಲಿ, ಮೈಕೊರೆಯುವ ಹಿಮದಲ್ಲಿ.. ಪ್ರಾಣವನ್ನೇ ಒತ್ತೇ ಇಟ್ಟು ದೇಶದ ಗಡಿ ಕಾಯುತ್ತಿರುವಾತ. ದೇಶವಾಸಿಗಳು ಸುಖವಾಗಿ ನಿದ್ದೆ ಮಾಡಬೇಕಾದರೆ ಈ ಸೈನಿಕರ ತ್ಯಾಗವೇ ಕಾರಣ ಎಂದು ಪುಂಗುವ ದೇಶಭಕ್ತರಿಗೆ ಸೈನಿಕರ ಮೇಲೆ ಸೇನಾಧಿಕಾರಿಗಳೇ ಶೋಷಣೆ ಮಾಡುತ್ತಿರುವುದು ನಂಬಲಾಗದ ಸತ್ಯವಾಗಿದೆ. ಆದರೆ.. ಅದು ಇಂದು ನಿನ್ನೆಯದಲ್ಲ. ಮೊದಲಿನಿಂದಲೂ ಮಿಲಿಟರಿಯಲ್ಲಿ ಈ ತಾರತಮ್ಯ ನಿರಂತರವಾಗಿದೆ. ಭ್ರಷ್ಟಾಚಾರವೆನ್ನುವುದು ಕೇವಲ ಸಿವಿಲಿಯನ್‌ಗಳಲ್ಲಿ ಮಾತ್ರವಲ್ಲಾ.. ಮಿಲಿಟರಿಯಲ್ಲೂ ಹಾಸು ಹೊಕ್ಕಾಗಿದೆ. ಸೈನಿಕರು ತಿನ್ನುವ ಆಹಾರಗಳನ್ನೂ ಸಹ ಕದ್ದು ಹೊರಗೆ ಮಾರಾಟ ಮಾಡಿ ಲಾಭ ಮಾಡಿಕೊಳ್ಳುವ ನೀಚ ಅಧಿಕಾರಿಗಳಿಗೆ ದೇಶ ಕಾಯುವ ಯೋಧರು ಎಂದು ಹೇಳಿಕೊಳ್ಳುವ ಯಾವುದೇ ನೈತಿಕತೆ ಇಲ್ಲಾ.. ಭ್ರಷ್ಟಾಚಾರದ ಬೇರುಗಳು ಶಾಸಕಾಂಗದಲ್ಲಿ ಹುಟ್ಟಿ.. ಕಾರ್ಯಾಂಗದಲ್ಲಿ ಬೆಳೆದು ನ್ಯಾಯಾಂಗದಲ್ಲಿ ಅಡಗಿ, ಪತ್ರಿಕಾಂಗದಲ್ಲಿ ವಿಜ್ರಂಭಿಸಿ ಕೊನೆಗೆ ಮಿಲಿಟರಿ ಅಂಗದಲ್ಲೂ ಸಹ ವಿಸ್ತರಿಸಿಕೊಂಡಿದ್ದು ಈ ದೇಶದ ಬಹುದೊಡ್ಡ ದುರಂತವಾಗಿದೆ. ಮೋದಿಯಂತವರು ಬ್ರಹತ್ ಬಂಡವಾಳಶಾಹಿಗಳ ಹಿತರಕ್ಷಣೆಗಾಗಿ ನೋಟ್ ರದ್ದತಿ.. ಕ್ಯಾಶಲೆಸ್ ವ್ಯವಹಾರ.. ಕಪ್ಪು ಹಣ ಬ್ಯಾನ್.. ಮುಂತಾದ ವಿಕ್ಷಿಪ್ತ ಯೋಜನೆಗಳನ್ನು ಜಾರಿಗೆ ತಂದರೂ ಸಹ ಬ್ರಷ್ಟಾಚಾರ ಎನ್ನುವ ಬ್ರಹತ್ ವೃಕ್ಷದ ಕೆಲವು ತಪ್ಪಲುಗಳು ಉದುರಬಹುದೇ ಹೊರತು ಆಳವಾಗಿ ಹರಡಿಕೊಂಡ ಬೇರುಗಳನ್ನು ಅಲ್ಲಾಡಿಸಲೂ ಸಾಧ್ಯವಾಗಿಲ್ಲಾ.. ಈ ಸಧ್ಯದ ಬಂಡವಾಳಶಾಹಿ ಪ್ರಜಾಪ್ರಭುತ್ವದಲ್ಲಿ ಅದು ಸಾಧ್ಯವೂ ಇಲ್ಲಾ.. ಇದಕ್ಕೆ ಮಿಲಿಟರಿ ಕೂಡಾ ಹೊರತಲ್ಲಾ.

ಜವಾನ್ ತೇಜ್ ಬಹದ್ದೂರ್ ವಿಡಿಯೋ ಆರೋಪದಿಂದ ದಿಗಿಲಿಗೆ ಬಿದ್ದ ಬಿಎಸ್‌ಎಪ್ ಅಧಿಕಾರಿಗಳು ಹಾಗೂ ರಕ್ಷಣಾ ಇಲಾಖೆಯ ನಾಯಕರುಗಳು ಈಗ ತಮ್ಮ ಕೂಳ ಪಡೆಯ ಹುಳುಕನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ಆರೋಪ ಮಾಡಿದವನ ಮೇಲೆಯೇ ಆರೋಪ ಹೊರೆಸಿ ತಮ್ಮ ತಪ್ಪಿಲ್ಲವೆಂದು ಸಾಬೀತುಪಡಿಸುವ ದಾವಂತದಲ್ಲಿದ್ದಾರೆ. ಸೇನೆಯಲ್ಲಿರುವ ಯೋಧನ ಕೈಯಲ್ಲಿ ಮೊಬೈಲ್ ಸಿಕ್ಕಿದ್ದು ಹೇಗೆ? ಎಂದು ಸೇನೆ ತಲೆಕೆಡಿಸಿಕೊಂಡಿದೆ. ಈ ಹಿಂದೆಯೇ ಅಶಿಸ್ತಿನ ಕಾರಣಕ್ಕೆ ತೇಜ್ ಬಹದ್ದೂರ್ ಕೋರ್ಟ ಮಾರ್ಷಲ್ ಶಿಕ್ಷೆಗೆ ಒಳಗಾಗಿದ್ದಾ ಭಡ್ತಿ ತಡೆಹಿಡಿಯಲಾಗಿತ್ತು.. ಇದರಿಂದ ಭ್ರಮನಿರಸನಗೊಂಡು ಇಂತಹ ಆರೋಪ ಮಾಡಿದ್ದಾನೆ ಎಂದು ಸೇನಾಧಿಕಾರಿಗಳು ಹೇಳತೊಡಗಿದ್ದಾರೆ. ಇರುವುದನ್ನು ಇದ್ದಂತೆ ಹೊರಜಗತ್ತಿಗೆ ತೋರಿಸಿದ ತೇಜ್ ಬಹದ್ದೂರ್ ಮೇಲೆ ಕುಡುಕ, ಅಸಮರ್ಥ, ದುರ್ವರ್ತನೆಗಾರ... ಎನ್ನುವ ಆರೋಪಗಳನ್ನು ಸೈನ್ಯಾಧಿಕಾರಿಗಳು ಹೊರೆಸಿದ್ದಾರೆ. ತಮ್ಮ ಸೈನ್ಯದೊಳಗಿನ ಕೊಳಕನ್ನು ಮುಚ್ಚಿಕೊಳ್ಳಲು ಸೈನಿಕನನ್ನು ಹಿಂಸಿಸುವ ಕೆಲಸವನ್ನು ನಿಯತ್ತಾಗಿ ಮಾಡುತ್ತಿದ್ದಾರೆ. ಈಗಾಗಲೇ ಹುಸಿ ವಿಚಾರಣೆ ಆರಂಭಿಸಿದ್ದು ನ್ಯೂನ್ಯತೆ ತೋರಿದ ಯೋಧನನ್ನು ಸೇನಾ ಶಿಸ್ತು ಉಲ್ಲಂಘನೆಯ ಆಪಾದನೆಯ ಮೇಲೆ ಸೇನೆಯಿಂದ ವಚಾಗೊಳಿಸುವುದಂತೂ ಖಾತ್ರಿಯಾಗಿದೆ. ಕಳಪೆ ಊಟದ ಬಗ್ಗೆ ವಿಡಿಯೋ ಮಾಡಿದ್ದನ್ನೂ ಸಹ ಸೈನ್ಯ ದೇಶದ್ರೋಹವೆಂದು ಪರಿಗಣಿಸಲಾಗಿದೆ. ಬಹದ್ದೂರ್ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂದು ಈಗಾಗಲೇ ರಕ್ಷಣಾ ಇಲಾಖೆಯ ಮಂತ್ರಾಲಯದಿಂದ ಡೈರೆಕ್ಟರ್ ಜನರಲ್ ರವರಿಗೆ ಆದೇಶ ರವಾನೆಯಾಗಿದೆ. ಸೈನ್ಯಾಧಿಕಾರಿಗಳು ತಪ್ಪು ಮಾಡಿಲ್ಲ ಎನ್ನುವುದಾದರೆ ಆಗಿರುವ ಅವಘಡವನ್ನು ಸರಿಪಡಿಸಬೇಕಾಗಿತ್ತು. ಆದರೆ ತಮ್ಮ ಲೋಪಗಳನ್ನು ಮುಚ್ಚಿಟ್ಟುಕೊಳ್ಳಲು ಮಿಲಿಟರಿ ಕ್ಯಾಂಪಗಳ ಪಾಕಶಾಲೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಮೊಬೈಲ್ ಬಳಕೆಯನ್ನೇ ನಿರ್ಬಂಧಿಸಿ ಯೋಧರ ಮೇಲೆ ಕಮಾಂಡೋಗಳು ಹದ್ದಿನ ಕಣ್ಣಿಟ್ಟಿದ್ದು ಅಕ್ಷಮ್ಯ. ಒಳಗಿನ ಹುಳುಕನ್ನು ಸರಿಪಡಿಸುವ ಬದಲು ಹುಳುಕು ಹೊರಗೆ ಗೊತ್ತಾಗದಂತೆ ಮಾಡುವತ್ತಲೇ ಸೈನ್ಯಾಧಿಕಾರಿಗಳ ಚಿತ್ತ ಇರುವುದು ಅವರ ಸರ್ವಾಧಿಕಾರಯುತವಾದ ಆದೇಶದಿಂದ ಸಾಬೀತಾಗುತ್ತದೆ. 



ಸತ್ಯವನ್ನು ಹೇಳಲು ಸತ್ಯವಂತನೇ ಆಗಬೇಕೆಂದೇನಿಲ್ಲಾ. ಆ ಸೈನಿಕ ತಪ್ಪು ಮಾಡಿದ್ದಕ್ಕೂ ಈಗ ಸತ್ಯವನ್ನು ಬಹಿರಂಗ ಪಡಿಸಿದ್ದಕ್ಕೂ ತಾಳೆ ಹಾಕುವ ಅಗತ್ಯವೂ ಇಲ್ಲಾ. ಯಾಕೆಂದರೆ ಸೈನಿಕರಿಗಾಗಿ ಸರಕಾರ ನೀಡುವ ಸವಲತ್ತುಗಳನ್ನು ಸೈನ್ಯಾಧಿಕಾರಿಗಳು ಅಕ್ರಮವಾಗಿ ಮಾರಿಕೊಳ್ಳುತ್ತಿರುವುದರಲ್ಲಿ ಸುಳ್ಳಂತೂ ಇಲ್ಲಾ. ಗಡಿ ಪ್ರದೇಶ ಹೋಗಲಿ.. ಬೆಂಗಳೂರಿನಂತಾ ನಗರದಲ್ಲೂ ಸಹ ಈಗಲೂ ಮಿಲಿಟರಿ ಕ್ಯಾಂಟೀನಿನಲ್ಲಿ ಕಡಿಮೆ ಬೆಲೆಗೆ ಸಿಗುವ ಸಾಮಗ್ರಿಗಳನ್ನು ಪಡೆದು ಮಾರಿಕೊಳ್ಳುವವರೂ ಇದ್ದಾರೆ ಎನ್ನುವುದು ನಿರ್ವಿವಾದ. ಮಿಲಿಟರಿ ವೆಹಿಕಲ್‌ಗಳಿಂದಾ ಪೆಟ್ರೋಲ್ ಡೀಸಲ್ ಕದ್ದು ಮಾರುವವರೂ.. ತಮ್ಮ ಬಂಧು ಬಾಂಧವರಿಗೆ ಹಂಚುವವರೂ ಬೇಕಾದಷ್ಟು ಜನರು ಮಿಲಿಟರಿಯಲ್ಲಿದ್ದಾರೆ. ಇನ್ನು ಹೆಳೋರು ಕೇಳೋರು ಯಾರೂ ಇಲ್ಲದಂತಹ.. ಹಿಮಚ್ಚಾದಿತ ದುರ್ಗಮವಾದ ಗುಡ್ಡುಗಾಡು ಪರ್ವತ ಪ್ರದೇಶದಲ್ಲಿರುವ ಸೈನ್ಯಾಧಿಕಾರಿಗಳನ್ನು ಕೇಳುವವರಾದರೂ ಯಾರು? ಮಿಲಿಟರಿಯಲ್ಲಿರುವವರೆಲ್ಲಾ ಹೀಗೆ ಎಂದು ಹೇಳಲಾಗುವುದಿಲ್ಲವಾದರೂ ಸಿಕ್ಕ ಅವಕಾಶಗಳನ್ನು ಅಕ್ರಮವಾಗಿ ಬಳಿಸಿಕೊಳ್ಳುವವರಿಗೇನೂ ಕಡಿಮೆ ಇಲ್ಲಾ.. 


ಪ್ರಧಾನ ಮಂತ್ರಿಯವರು ದೇಶ ರಕ್ಷಕ ಸೈನಿಕರಿಗಾಗಿ ಪ್ರತಿಯೊಬ್ಬ ದೇಶವಾಸಿಗಳೂ ದಿನಕ್ಕೊಂದು ರೂಪಾಯಿ ದೇಣಿಗೆ ಕೊಡಬೇಕು ಎಂದು ಕರೆಕೊಟ್ಟಿದ್ದಾರೆ. ಪ್ರಧಾನಿಯ ದೇಶಭಕ್ತಿಯ ಭಾವತೀವ್ರತೆಯ ಕರೆಗೆ ಓಗೊಟ್ಟು ಹಲವಾರು ಜನರು ಒಂದು ವರ್ಷಕ್ಕಾಗುವ ಮುನ್ನೂರಾ ಐವತ್ತು ರೂಪಾಯಿಗಳನ್ನು ಸೈನಿಕ ಕಲ್ಯಾಣ ನಿಧಿಗೆ ಕಳುಹಿಸಿಕೊಟ್ಟಿದ್ದಾರೆ. ಹೀಗೆ ಕಳುಹಿಸಿದ ಹಣ ಸೈನಿಕರಿಗೆ ನಿಜಕ್ಕೂ ಉಪಯೋಗವಾಗುತ್ತದೆಯಾ? ದೇಶ ಕಾಯುವ ಯೋಧನಿಗೆ ಕನಿಷ್ಟ ಹೊಟ್ಟೆ ತುಂಬಾ ಪುಷ್ಟಿದಾಯಕ ಆಹಾರವನ್ನಾದರೂ ಒದಗಿಸುತ್ತದಾ? ಎಂದುಕೊಂಡರೆ ಅದೂ ಕೂಡಾ ಸಾಧ್ಯವಿಲ್ಲ ಎನ್ನುವುದು ತೇಜ್ ಬಹದ್ದೂರ್ ಪ್ರಕರಣ ಸಾಕ್ಷ ಹೇಳುತ್ತದೆ. ಇನ್ನು ಸರಕಾರ ಮಿಲಿಟರಿಗೆ ಒದಗಿಸುವ ಬಿಲಿಯಾಂತರ ಹಣ ಎಲ್ಲಿ ಹೋಯಿತು? ಜನರು ಕೊಟ್ಟು ಕೊಟ್ಯಾಂತರ ದೇಣಿಗೆ ಯಾರ ಜೇಬು ಸೇರಿತು? ಎಂಬ ಪ್ರಶ್ನೆಗೆ ಉತ್ತರವನ್ನು ಪ್ರಧಾನಿಗಳು ಹಾಗೂ ಪ್ರಧಾನಿಯ ಸಮರ್ಥಕರು ಕೊಡಬೇಕಾಗಿದೆ. 
 
ತಮಗೆ ಮಿಲಿಟರಿ ಅಧಿಕಾರಿಗಳೇ ಇಂದನಗಳನ್ನು ಹಾಗೂ ಆಹಾರಾದಿ ವಸ್ತುಗಳನ್ನು ಅರ್ಧ ಬೆಲೆಗೆ ಮಾರುತ್ತಾರೆ ಎಂಬ ಆಘಾತಕಾರಿ ವಿಷಯವನ್ನು  ಶ್ರೀನಿಗರದ ಮಿಲಿಟರಿ ಕ್ಯಾಂಪ್ ಅಕ್ಕಪಕ್ಕದ ನಾಗರಿಕ ನಿವಾಸಿಗಳೇ  ಹೇಳುತ್ತಾರೆ. ಬಿಎಸ್‌ಎಪ್ ಹೆಡ್ ಕ್ವಾರ್ಟರ್ ಅಕ್ಕಪಕ್ಕದ ಅಂಗಡಿಯವರು ಹೆಚ್ಚಾಗಿ ಅಕ್ರಮ ವ್ಯವಹಾರದ ಫಲಾನುಭವಿಗಳಾಗಿದ್ದಾರೆ. ಮಿಲಿಟರಿ  ಸ್ಟೋರ್ ಗಳಿಂದಲೂ ಪದಾರ್ಥಗಳು ಕ್ಯಾಂಪಿನ ಹೊರಗಡೆಗೆ ಮಾರಾಟವಾಗುತ್ತಿದ್ದು ಈ ವ್ಯವಹಾರಕ್ಕಾಗಿಯೇ ಕೆಲವು ಸಿವೀಲಿಯನ್ ಎಜಂಟರುಗಳೂ ಸಹ ಕಾರ್ಯಪ್ರವೃತ್ತರಾಗಿದ್ದಾರೆ. ಬಿಎಸ್ಎಪ್ ಅಧಿಕಾರಿಗಳು ಸೇನಾ ವಾಹನದ ಬಳಕೆಗೆ ಇರುವ ಪೆಟ್ರೋಲ್ ಹಾಗೂ ಡೀಸಲ್ ಗಳನ್ನು ಅರ್ಧ ಬೆಲೆಗೆ ಸಿವಿಲಿಯನ್ ಗಳಿಗೆ ಮಾರಾಟ ಮಾಡುತ್ತಿರುವುದು ಸರಕಾರಕ್ಕೆ ಗೊತ್ತಿಲ್ಲದಿದ್ದರೂ ಬಿಎಸ್ ಎಪ್ ಕ್ಯಾಂಪಿನ ಏರಿಯಾದಲ್ಲಿ ಇರುವವರಿಗೆಲ್ಲಾ ಗೊತ್ತಿರುವಂತಹ ಸಂಗತಿಯೇ ಆಗಿದೆ. ಬಿಎಸ್ ಎಪ್ ನಲ್ಲಿ ಪೀಟೋಪಕರಣಗಳನ್ನು ಕೊಂಡುಕೊಳ್ಳಲು ಟೆಂಡರ್ ಪದ್ದತಿ ಜಾರಿಯಲ್ಲಿಲ್ಲಾ. ಹೀಗಾಗಿ ಅವುಗಳನ್ನು ಸಪ್ಲೈ ಮಾಡುವ ಗುತ್ತಿಗೆದಾರರಿಂದ ಕಮಿಷನ್ ಪಡೆದು ಆರ್ಡರ್ ಕೊಡುವ ಪರ್ಚೆಜಿಂಗ್ ಆಫಿಸರ್‌ಗಳಿಗೆ ಕೊರತೆ ಇಲ್ಲಾ. ಮಿಲಿಟರಿಯಲ್ಲಿ ಪುಕ್ಕಟೆ ಇಲ್ಲವೇ ಅತೀ ಕಡಿಮೆ ಬೆಲೆಗೆ ಸಿಗುವ ಎಲ್ಲಾ ನಮೂನಿಯ ಮಧ್ಯಗಳ ಬಾಟಲಿಗಳು ಕ್ಯಾಂಪುಗಳ ಹೊರಗೆ ಬಿಕರಿಯಾಗುವುದಕ್ಕೆ ಸೇನೆಯ ಸಾಮಾನ್ಯ ಯೋಧರಿಂದ ಹಿಡಿದು ಸೇನಾಧಿಕಾರಿಗಳ ವರೆಗೆ ಬಹುತೇಕರು ಕಾರಣೀಕರ್ತರಾಗಿದ್ದಾರೆ. ಆಹಾರ, ಹೆಂಡದ  ಖರೀದಿ ಹಾಗೂ ಮಾರಾಟದಿಂದ ಹಿಡಿದು ವಿಮಾನ, ಹೆಲಿಕ್ಯಾಪ್ಟರ್ ಖರೀದಿಯವರೆಗೂ ಸೇನೆಯೊಳಗಿನವರು ಅಕ್ರಮದಲ್ಲಿ ಪಾಲುದಾರರಾಗಿದ್ದನ್ನು ನಂಬಲಾಗದಿದ್ದರೂ ಅದು ಸತ್ಯವಾಗಿದೆ.
  

ಮಿಲಿಟರಿ ಎನ್ನುವುದು ದೇಶವನ್ನು ಕಾಯಲು ಇರುವ ವ್ಯವಸ್ಥೆ ಎಂಬುದು ಎಲ್ಲರ ನಂಬಿಕೆಯಾಗಿದೆ. ಆದರೆ.. ದೇಶ ಕಾಯುವವರೇ ನಿರಂತರ ದಿನನಿತ್ಯದ ಭ್ರಷ್ಟಾಚಾರದಲ್ಲಿ ನಿರತರಾಗಿ ದೇಶದ ಆಂತರಿಕ ವ್ಯವಸ್ಥೆಗೆ ಮಾರಕವಾಗಿರುವುದು ಸೈನ್ಯದ ಮೇಲೆ ಜನರು ಇಟ್ಟಿರುವ ವಿಶ್ವಾಸಕ್ಕೆ ದಕ್ಕೆ ತರುವಂತಹುದಾಗಿದೆ. ಅದು ಬಿಎಸ್‌ಎಪ್, ಸಿಆರ್‌ಪಿಎಪ್ ಆಗಿರಲಿ, ಮಿಲಿಟರಿ ಇಂಜನೀಯರಿಂಗ್ ಸರ್ವಿಸ್ ಆಗಿರಲಿ ಇಲ್ಲವೇ ದೇಶ ರಕ್ಷಣೆಗೆ ಇರುವ ಯಾವುದೇ ವಿಭಾಗವಾಗಿರಲಿ ಭ್ರಷ್ಟಾಚಾರ ರಹಿತವಾಗಿಲ್ಲದಿರುವುದು ಈ ದೇಶದ ದುರಂತವಾಗಿದೆ. ಇರುವುದರಲ್ಲೇ ಮಿಲಿಟರಿ ಪರವಾಗಿಲ್ಲಾ.. ದೇಶವನ್ನು ನಿಯತ್ತಾಗಿ ಕಾಯುತ್ತಿರುವುದರಿಂದಲೇ ಈ ದೇಶ ಸುರಕ್ಷಿತವಾಗಿದೆ ಎಂದು ಬಹುತೇಕ ದೇಶವಾಸಿಗಳು ನಂಬಿದ್ದಾರೆ ಹಾಗೂ ನಂಬಿಸಲಾಗಿದೆ. ಆದರೆ..  ಬೇರೆ ಎಲ್ಲಾ ವಿಭಾಗಗಳಲ್ಲಿ ಆಗುವ ಬ್ರಷ್ಟಾಚಾರಗಳು ಕಣ್ಣಿಗೆ ಕಾಣುತ್ತವೆ.. ಮಾಧ್ಯಮಗಳ ಮೂಲಕ ಜನರಿಗೆ ಗೊತ್ತಾಗುತ್ತದೆ. ಆದರೆ .. ಸೇನೆಯಲ್ಲಿ ಬೇರೆಯವರಿಗೆ ಪ್ರವೇಶವೇ ಇಲ್ಲಾ.. ಅದರಲ್ಲೂ ಮಾಧ್ಯಮಗಳನ್ನು ಸೇನೆ ಒಳಗೇ ಬಿಟ್ಟುಕೊಳ್ಳುವುದಿಲ್ಲಾ. ಹೀಗಾಗಿ ಅಲ್ಲಿ ನಡೆಯುವ ಅಕ್ರಮ ಅನಾಚಾರಗಳು ಎಂದೂ ಹೊರಗೆ ಬರುವುದೂ ಇಲ್ಲಾ. ಬಂದರೂ ಅದು ಒಳಗಿನವರಿಂದಲೇ ಸುದ್ದಿಯಾಗಬೇಕು. ಹಾಗೇನಾದರೂ ಆದರೆ ಅಕ್ರಮವನ್ನು ಬೆಳಕಿಗೆ ತಂದವರನ್ನು ಶಿಸ್ತಿನ ಹೆಸರಲ್ಲಿ ಕೋರ್ಟ ಮಾರ್ಷಲ್ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಹೀಗಾಗಿ ದೇಶವನ್ನು ಕಾಯುವ ಮಿಲಿಟರಿಯೊಳಗಿನ ಹೆಗ್ಗಣಗಳು ಯಾವ ಬೋನಿಗೂ ಬೀಳದೇ ತಿಂದುಂಡು ಕೊಬ್ಬಿವೆ. ದೇಶದ ಉನ್ನತ ಸೇನಾಧಿಕಾರಿ ತ್ಯಾಗಿ ಕಾಪ್ಟರ್ ಹಗರಣದಲ್ಲಿ ಕಮಿಷನ್ ಪಡೆದ ಆರೋಪದ ಮೇಲೆ ಇತ್ತೀಚೆಗೆ ಆರೆಸ್ಟ್ ಆಗಿದ್ದೂ ಸಹ ಕೆಳಗಿನ ಹಂತದಿಂದ ಉನ್ನತ ಹಂತದವರೆಗೂ ಪಸರಿಸಿದ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ.


ಈ ಮಿಲಿಟರಿ ಎನ್ನುವುದಕ್ಕೆ ಸ್ವಂತ ಆದಾಯ ಎನ್ನುವುದಿಲ್ಲಾ. ಈ ದೇಶದ ಕೊಟ್ಯಾಂತರ ಜನರು ತೆತ್ತ ತೆರಿಗೆಯ ಹಣದ ಬಹುಪಾಲನ್ನು ಬಳಸಿಯೇ ಸೇನೆ ಅಸ್ತಿತ್ವದಲ್ಲಿದೆ. ಕೇವಲ ಗಡಿ ರಕ್ಷಣಾ ಪಡೆಯ ನಿರ್ವಹಣೆಗೆ ವಾರ್ಷಿಕ 14 ಸಾವಿರ ಕೋಟಿ ಹಣವನ್ನು ವಿನಿಯೋಗಿಸಲಾಗುತ್ತಿದೆ.  ದೇಶವನ್ನು ವೈರಿಗಳಿಂದ ಕಾಪಾಡಲೆಂದೇ ಬ್ರಹತ್ ಮಿಲಿಟರಿಯನ್ನು ಸರಕಾರ ಪೋಷಿಸುತ್ತಿದೆ. ಹಾಗೂ ಸೇನೆಯಲ್ಲಿ ಸಾಮಾನ್ಯ ಸೈನಿಕರಾಗಿ ಸೇವೆಸಲ್ಲಿಸುವವರೆಲ್ಲಾ ರೈತಾಪಿ ಕೂಲಿ ಕಾರ್ಮಿಕರುಗಳ ಮಕ್ಕಳೇ ಆಗಿದ್ದಾರೆ. ದೇಶ ಸೇವೆಯ ಕನಸನ್ನು ಹೊತ್ತು ತಮ್ಮ ಕುಟುಂಬ ನಿರ್ವಹಣೆಯ ಜವಾಬ್ದಾರಿಯನ್ನೂ ನಿಭಾಯಿಸಲು ಬಹುತೇಕ ಬಡ ಮಕ್ಕಳು ಮಿಲಿಟರಿ ಸೇರುತ್ತಾರೆ. ಅಸಮಾನ ವ್ಯವಸ್ಥೆಯ ಅನುಕೂಲತೆಗಳನ್ನು ಬಳಿಸಿಕೊಂಡು ಹೆಚ್ಚಿನ ವಿದ್ಯಾಬ್ಯಾಸ ಮಾಡಿ ಸೇನಾಧಿಕಾರಿಗಳಾದವರಲ್ಲಿ ಹೆಚ್ಚಿನವರು ಮೇಲ್ವರ್ಗದವರಾಗಿರುತ್ತಾರೆ. ಸಮಾಜದಲ್ಲಿ ಅದು ಹೇಗೆ ಮೇಲ್ವರ್ಗದವರು ದುಡಿಯುವ ವರ್ಗದವರನ್ನು ದುಡಿಸಿಕೊಂಡು ಶೋಷಿಸುತ್ತಾರೋ ಅದೇ ರೀತಿ ಈ ವರ್ಗ ಹಿತಾಸಕ್ತಿ ಮಿಲಿಟರಿಯಲ್ಲೂ ಮುಂದುವರೆಯುತ್ತದೆ. ಅಲ್ಲಿ ಸೇನಾಧಿಕಾರಿಗಳು ಹಾಗೂ ಸೈನಿಕರು ಎನ್ನುವ ಎರಡು ವರ್ಗಗಳು ಹುಟ್ಟಿಕೊಳ್ಳುತ್ತವೆ. ಆಳುವವರು ಮತ್ತು ಆಳಿಸಿಕೊಳ್ಳುವವರು ಎಂದು ಬೇಕಾದರೂ ಇವರನ್ನು ಕರೆಯಬಹುದು. ಈ ಆಳುವ ಅಧಿಕಾರಿಗಳು ಎಲ್ಲಾ ಸವಲತ್ತುಗಳನ್ನು ತಾವೇ ಪಡೆದು ಕೆಳ ವರ್ಗದಿಂದ ಬಂದ ಸೈನಿಕರ ಸವಲತ್ತುಗಳನ್ನೂ ಕಬಳಿಸಿ ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಂಡು ಬರುತ್ತಾರೆ. ಸೇನೆಯಲ್ಲಿಯೂ ಕೂಡಾ ದೇಶಭಕ್ತಿಯ ಭ್ರಮೆಯನ್ನು ಸೈನಿಕರಲ್ಲಿ ತುಂಬಿ.. ವಿರೋಧಿ ದೇಶಗಳ ಮೇಲೆ ಅಪಾರವಾದ ದ್ವೇಷವನ್ನು ಬಿತ್ತಿ ಸೈನಿಕರನ್ನು ಭಾವನಾತ್ಮಕವಾಗಿ ಹಿಡಿದಿಡಲಾಗುತ್ತದೆ. ಯಾವ ಸವಲತ್ತುಗಳು ಸಿಗಲಿ ಬಿಡಲಿ ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುವುದೇ ಸೌಭಾಗ್ಯ ಎನ್ನುವ ಭಾವತೀವ್ರತೆಯನ್ನು ಸಾಮಾನ್ಯ ಸೈನಿಕರಲ್ಲಿ ಬಿತ್ತಲಾಗುತ್ತದೆ. ಹೀಗೆ ಸೈನಿಕರನ್ನು ಬ್ರಮೆಯಲ್ಲಿಡುತ್ತಾ.. ಅವರನ್ನು ಸದಾ ಅವಾಚ್ಯ ಶಬ್ದಗಳಿಂದಾ ನಿಂದಿಸುತ್ತಾ.. ತಮ್ಮ ಸ್ವಂತ ಕೆಲಸಗಳಿಗೂ ದುಡಿಸಿಕೊಳ್ಳುತ್ತಾ.. ಶಿಸ್ತಿನ ಹೆಸರಲ್ಲಿ ವಿಪರೀತ ಶೋಷಣೆಯನ್ನು ಸೇನಾಧಿಕಾರಿಗಳು ಮಾಡುತ್ತಲೇ ಇರುತ್ತಾರೆ. ಮಿಲಿಟರಿಯಲ್ಲಿ ಸಮಾನತೆ, ಸಹೋದರತೆ, ಸಹಬಾಳ್ವೆ ಎನ್ನುವ ತತ್ವಗಳಿಗೆ ನೆಲೆಯೂ ಇಲ್ಲಾ ಬೆಲೆಯೂ ಇಲ್ಲಾ. ಏನಿದ್ದರೂ ಮೇಲಿನಂದ ಆದೇಶಗಳು ಬರುತ್ತವೆ. ಅದನ್ನು ಕೆಳಹಂತದವರು ಪ್ರಶ್ನೆ ಕೇಳದೇ ಪಾಲಿಸಬೇಕೆಂಬುದು ಮಿಲಿಟರಿಯ ಅಘೋಷಿತ ನಿಯಮವೇ ಆಗಿದೆ. ಅಕಸ್ಮಾತ್ ಯಾರಾದರೂ ಪ್ರಶ್ನಿಸಿದರೆ ಅವರಿಗೆ ಕಿರುಕುಳ, ಕೋರ್ಟ ಮಾರ್ಷಲ್ ಗ್ಯಾರಂಟಿ. 

ಇದು ಕೇವಲ ಒಬ್ಬ ತೇಜ್ ಬಹದ್ದೂರ್ ಮಾಡುವ ಆಪಾದನೆ ಮಾತ್ರ ಅಲ್ಲಾ. ಗಡಿ ರಕ್ಷಕ ದಳದ ಸೇನಾಧಿಕಾರಿಗಳು ಕೇವಲ ಸೈನಿಕರ ಆಹಾರ ಪದಾರ್ಥಗಳನ್ನು ದುರ್ಬಳಕೆ ಮಾಡಿಕೊಳ್ಳಲು ಮಾತ್ರ ಸೀಮಿತವಾಗಿಲ್ಲಾ. ಕಮಿಶನ್ ಆಸೆಗೆ ಬಿದ್ದು ಕಳಪೆ ಗುಣಮಟ್ಟದ ಶಸ್ತ್ರಸ್ತ್ರಗಳನ್ನು ಖರೀದಿಸಿ ದೇಶದ ಭದ್ರತೆಗೆ ಅಪಾಯಕಾರಿಯಾಗಿದ್ದಾರೆ. ಇಂಡೋ ಪಾಕಿ ಗಡಿಯಲ್ಲಿ ಸರಕು ಸಾಗಣೆ ಲಾರಿಗಳಿಂದ ನಿಮಿತವಾಗಿ ಹಪ್ತಾ ವಸೂಲಿ ಮಾಡುವ ಕೆಲಸ ನಡೆಯುತ್ತಲೇ ಇದೆ. ಪಾಕಿಸ್ತಾನದಿಂದ ಬರುವ ಡ್ರಗ್ಸ್ ಮಾಫಿಯಾ ಜೊತೆಗೆ ಕೈಜೋಡಿಸಿ ದೇಶದ್ರೋಹವನ್ನು  ಮಾಡುತ್ತಿರುವ ಗಂಭೀರ ಆರೋಪ  ಸೈನ್ಯಾಧಿಕಾರಿಗಳ ಮೇಲಿದೆ. ಪಂಜಾಬಿನ ಬಿಜೆಪಿ ಬೆಂಬಲಿತ ಶಿರೋಮಣಿ ಅಕಾಲಿದಳ ಸರಕಾರವೇ ಮಾದಕ ವಸ್ತು ಕಳ್ಳ ಸಾಗಾಣಿಕೆದಾರರ ಜೊತೆಗೆ ಬಿಎಸ್ ಎಫ್ ಕೈ ಜೋಡಿಸಿದೆ ಎಂದು ಆರೋಪ ಮಾಡುತ್ತಿದೆ. ಎಲ್ಲ ಕಡೆ ಚೆಕ್ ಪೋಸ್ಟಗಳಿದ್ದರೂ.. ಸಿಸಿ ಕ್ಯಾಮರಾಗಳನ್ನು ಹಾಕಿಸಿದ್ದರೂ ಡ್ರಗ್ಸ್ ಎಗ್ಗಿಲ್ಲದೇ ಭಾರತಕ್ಕೆ ಗಡಿಗಳ ಮೂಲಕ ಬರುತ್ತಿರುವುದಕ್ಕೆ ಅಧಿಕಾರಿಗಳ ಭ್ರಷ್ಟಾಚಾರವೇ ಕಾರಣವಾಗಿದೆ. ಬಾಂಗ್ಲಾ ಭಾರತ ಗಡಿಯಲ್ಲೂ ಸಹ ದನ ಸಾಗಣೆಯ ದಂದೆಯಲ್ಲಿ ಗಡಿ ರಕ್ಷಣಾ ದಳದ ಅಧಿಕಾರಿಗಳ ಪಾತ್ರ ದೊಡ್ಡದಾಗಿದೆ. ಒಂದು ಹಸು ಗಡಿ ದಾಟಿ ಬಾಂಗ್ಲಾಗೆ ಹೋದರೆ ಐದು ಸಾವಿರ ರೂಪಾಯಿ ಅಲ್ಲಿಯ ಅಧಿಕಾರಿ ಜೇಬಿಗಿಳಿಸುತ್ತಾನೆ. ಹೀಗಾಗಿ ಬಿಎಸ್ ಎಫ್ ಎನ್ನುವುದಕ್ಕೆ ಬಾರ್ಡರ್ ಸ್ಮಗ್ಲಿಂಗ್ ಪೋರ್ಸ ಎನ್ನುವ ನ್ವರ್ಥನಾಮ ಗಡಿಭಾಗದಲ್ಲಿ ರೂಢಿಯಲ್ಲಿದೆ ಅಂದರೆ ಈ ಅಧಿಕಾರಿಗಳು ಅದೆಷ್ಟು ಹಣದ ಹಪಾಹಪಿಯಿಂದಾ ಹಸಿದು ಕುಳಿತಿರಬೇಕು. 


ತಮ್ಮ ಮಾತು ಕೇಳದ, ವಿರೋಧಿಸಿದ ಸೈನಿಕರ ಮೇಲೆ ಮೇಲಾಧಿಕಾರಿಗಳು ಅಸಾಧ್ಯ ಕಿರುಕುಳ ನೀಡುವುದು ಮಿಲಿಟರಿಯಲ್ಲಿ ಮಾಮೂಲಾಗಿದೆ. ಕೆಲವೊಮ್ಮೆ ಸಹನೆ ಮೀರಿದ ಸೈನಿಕರು ಮೇಲಾಧಿಕಾರಿಗಳನ್ನು ಕೊಂದು ಹಾಕಿದ ಘಟನೆಗಳೂ ಇವೆ. ದೌರ್ಜನ್ಯ ಸಹಿಸಲಾರದೇ ಮಿಲಿಟರಿ ಬಿಟ್ಟು ಓಡಿ ಹೋದವರೂ ಇದ್ದಾರೆ. ಉನ್ನತಾಧಿಕಾರಿಗಳಿಗೆ ದೂರು  ಕೊಟ್ಟ ಘಟನೆಗಳು ಬೇಕಾದಷ್ಟಿವೆ. ಆದರೆ.. ಇವುಗಳನ್ನೆಲ್ಲಾ ಬಗಾವತ್ ಎಂದು ಸೇನೆಯಲ್ಲಿ ತೀರ್ಮಾನಿಸಿ ಶಿಕ್ಷಿಸಲಾಗುತ್ತದೆ. ದೂರು ಆರೋಪಗಳನ್ನು ವ್ಯವಸ್ಥಿತವಾಗಿ ಮುಚ್ಚಲಾಗುತ್ತದೆ. ಹೀಗಾಗಿ ಮಿಲಿಟರಿ  ಎಂದರೆ ಒಂದು ರೀತಿಯಲ್ಲಿ ಸೈನಿಕರಿಗೆ ಗುಲಾಮರ ಕ್ಯಾಂಪ್ ಆಗಿ ಕಂಡರೆ ಅಚ್ಚರಿ ಏನಿಲ್ಲಾ. ಹೀಗಾಗಿಯೇ ತೇಜ್ ಬಹದ್ದೂರ್ ನಂತವರು ಹತಾಷೆಗೆ ಒಳಗಾಗಿ.. ಸಾವಿಗೂ ಸಿದ್ದವಾಗಿ ತಮ್ಮ ಕಷ್ಟಗಳನ್ನು ಹಾಗೂ ಸೈನ್ಯಾಧಿಕಾರಿಗಳ ಅಕ್ರಮಗಳನ್ನು ಬಯಲಿಗೆಳೆಯಲು ಪ್ರಯತ್ನಿಸಿದ್ದು. ಮುಂದಾಗಬಹುದಾದ ದುಷ್ಪರಿಣಾಮಗಳ ಬಗ್ಗೆ ಅರಿವಿದ್ದೂ,  ಪ್ರಾಣಕ್ಕೆ ಸಂಚಕಾರ ಬರಬಹುದೆಂಬುದು ಗೊತ್ತಿದ್ದು ಬಹದ್ದೂರ್ ಸೇನೆಯ ನ್ಯೂನ್ಯತೆಯನ್ನು ಪಬ್ಲಿಕ್ ಮಾಡಿದ್ದು ಸಾಮಾನ್ಯ ಸೈನಿಕರ ಆಂತರಿಕ ಒತ್ತಡದ ಬದುಕಿನ ಪ್ರತೀಕವಾಗಿದೆ. ತೇಜ್ ಬಹದ್ದೂರ್ ಮಾಡಿದ ಬಹದ್ದೂರ್ ಕೆಲಸಕ್ಕೆ ಆತನಿಗೆ ನ್ಯಾಯ ಸಿಗುವುದಂತೂ ಕನಸಿನ ಮಾತು. ಆದರೆ.. ಸೈನಿಕರು ಎಂದರೆ ದೇಶ ರಕ್ಷಕರು.. ಹಾಗೆ.. ಹೀಗೆ.. ಎಂದು ಭಾವನಾತ್ಮಕವಾಗಿ ಮಾತಾಡಿ ದೇಶಭಕ್ತಿಯ ಮೇನಿಯಾವನ್ನು ಸೃಷ್ಟಿಸುವ ಮೋದಿಯಂತವರು ಹಾಗೂ ಅವರ ಸಮರ್ಥಕರುಗಳ  ಮುಖವಾಡವಂತೂ ತೇಜ್ ಬಹದ್ದೂರ್ ಪ್ರಕರಣದಿಂದಾಗಿ ಕಳಚಿಬಿದ್ದಿದೆ. ದೇಶಕ್ಕಾಗಿ ತ್ಯಾಗ ಮಾಡಿ ರಕ್ಷಿಸುವ ಸೈನಿಕರನ್ನು ನಮ್ಮ ಸೇನೆ ಎಷ್ಟು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ ಎಂಬುದು ಜಗಜ್ಜಾಹೀರಾತಾಗಿ ನಕಲಿ ದೇಶಭಕ್ತರ ಬಾಯಿ ಕಟ್ಟಿದೆ. ದೇಶವನ್ನು ರಕ್ಷಿಸುವ ರಕ್ಷಕರನ್ನು ಮೊದಲು ಸೇನಾಧಿಕಾರಿಗಳ ಕಪಿಮುಷ್ಟಿಯಿಂದಾ ಕಾಪಾಡಬೇಕಿದೆ. ಈಗ ಹೇಳಿ ದೇಶದ್ರೋಹಿಗಳು ಯಾರು? ಸೇನೆಯ ಹುಳುಕನ್ನು ದೃಶ್ಯಗಳ ಸಮೇತ ತೋರಿದ ತೇಜ್ ಬಹದ್ದೂರಾ? ದೇಶ ಕಾಪಾಡುವ ಹೆಸರಲ್ಲಿ ತಮ್ಮದೇ ಸೈನಿಕರನ್ನು ಶೋಷಿಸುತ್ತಿರುವ ಕರಪ್ಟ್ ಸೇನಾಧಿಕಾರಿಗಳಾ? ಇಂತಹ ಸೇನಾಧಿಕಾರಿಗಳಿಗೆ ಸಕಲ ಸವಲತ್ತು  ಹಾಗೂ ಪಾವರನ್ನು ಕೊಟ್ಟ ಈ ದೇಶವನ್ನು ಆಳುವವರಾ? ಅಥವಾ ದೇಶಭಕ್ತಿಯನ್ನೇ ವಿಜ್ರಂಭಿಸಿ ಸೇನೆ ಹಾಗೂ ಸರಕಾರವನ್ನು ಪ್ರಶ್ನಿಸುವ ಎಲ್ಲರನ್ನೂ ನಿಂದಿಸುವ ನಕಲಿ ದೇಶಭಕ್ತರಾ? ಇಲ್ಲವೇ ಎಲ್ಲವನ್ನೂ ನೋಡಿ ಅನುಭವಿಸಿ ತಮ್ಮ ಪಾಡಿಗೆ ತಾವು ಸುಮ್ಮನಿರುವ ಈ ದೇಶದ ಸಾಮಾನ್ಯ ಪ್ರಜೆಗಳಾ? 

            -ಶಶಿಕಾಂತ ಯಡಹಳ್ಳಿ  
  
ತೇಜ್ ಬಹದ್ದೂರ್ ಯಾದವ್ ರಿಲೀಜ್ ಮಾಡಿದ ವಿಡಿಯೋಗಳ ಯುಟ್ಯೂಬ್ ಲಿಂಕ್ ಇಲ್ಲಿದೆ ನೋಡಿ..

https://www.youtube.com/watch?v=AmobJGD40Jc

https://www.youtube.com/watch?v=wpcGF0p_whc

https://www.youtube.com/watch?v=jJEoGa-UaY4

https://www.youtube.com/watch?v=MehcG7OA5WU




ಮಂಗಳವಾರ, ಜನವರಿ 10, 2017

ತಹ ತಹ ... 70 ಬಿಡಿಎ ಫಲಾನುಭವಿಗಳ ಸಂಕಟ :



ಸೈಟು ಯಾರಿಗೆ ಬೇಕು..? ಠೇವಣಿ ವಾಪಸ್ ಕೊಡಿ ಸಾಕು...

 
ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಇತಿಹಾಸದಲ್ಲಿ ಈಗ ಹೊಸ ಇತಿಹಾಸ ಸೃಷ್ಟಿಯಾಗಿದೆ. ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತಗಳಿಗೆ ವಿಶ್ವವಿಖ್ಯಾತವಾಗಿರುವ ಬಿಡಿಎ ದಿಗಿಲು ಬಿದ್ದಿದೆ. ಬಂಗಾರದ ಬೆಲೆಯಿರುವ ಬಿಡಿಎ ನಿವೇಶನಗಳನ್ನು ವಾಪಸ್ ತೆಗೆದುಕೊಂಡು ನಮ್ಮ ಠೇವಣಿ ಹಣ ವಾಪಸ್ ಕೊಡಿ ಎಂದು ಫಲಾನುಭವಿಗಳು ಪತ್ರ ಬರೆದು ಆಗ್ರಹಿಸಿದ್ದಾರೆ. ಅದೂ ಒಬ್ಬಿಬ್ಬರಲ್ಲಾ ಸಾವಿರಾರು ಜನರು ಅಸಂಘಟಿತವಾಗಿಯೇ ಈ ನಿರ್ಧಾರಕ್ಕೆ ಬಂದಿದ್ದಾರೆ. ಇಂತಹುದೊಂದು ನಿರ್ಧಾರಕ್ಕೆ ಮೋದಿ ನೋಟ್ ಬ್ಯಾನ್ ಇಫೆಕ್ಟ್ ಕಾರಣ.. ಬಿಳಿ ಹಣವನ್ನು ಕೊಟ್ಟು ಸರಕಾರಿ ನಿವೇಶನ ಖರೀದಿ ಮಾಡಲಾಗದ ಜನ ಸೈಟಿನ ಸಹವಾಸವೇ ಬೇಡವೆಂದು ಹಿಂದೆ ಸರಿದಿದ್ದಾರೆ ಎಂದು ಭಕ್ತಾದಿಗಳು ವಿಶ್ಲೇಷಿಸುತ್ತಾ ಮೋದಿ ಮಹಾತ್ಮರಿಗೆ ಉಘೇ ಎನ್ನುತ್ತಿದ್ದಾರೆ. ಆದರೆ.. ಅಸಲಿಗೆ ಆಗಿದ್ದು ಬೇರೇನೇ ವಿಷಯ..

ನಾಡಪ್ರಭು ಕೆಂಪೇಗೌಡ ಬಡಾವಣೆಯನ್ನು ಅಭಿವೃದ್ದಿ ಪಡಿಸಿದ ಬಿಡಿಎ ಅಲ್ಲಿ ನಿವೇಶನಗಳನ್ನು ನಿರ್ಮಿಸಿ 2015 ರ ನವೆಂಬರ್ 1 ರಂದು ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಿತ್ತು. ಮಾರುಕಟ್ಟೆ ಬೆಲೆಗಿಂತಾ ಸ್ವಲ್ಪ ಕಡಿಮೆ ಬೆಲೆಗೆ ಹಾಗೂ ತಗಾದೆಗಳಿಲ್ಲದ ಸೆಕ್ಯೂರ‍್ಡ್ ಸೈಟ್ ಸಿಗುತ್ತದೆ ಹಾಗೂ ತದನಂತರ ಮಾರಿದರೂ ಬೇಕಾದಷ್ಟು ಲಾಭ ಬರುತ್ತದೆ ಎನ್ನುವ ಮುಂದಾಲೋಚನೆಯಿಂದ ಮೂವತ್ತು ಸಾವಿರಕ್ಕೂ ಹೆಚ್ಚು ಜನ ನಿಗಧಿಪಡಿಸಿದ ಠೇವಣಿ ಕಟ್ಟಿ ಸೈಟ್ ಹಂಚಿಕೆಗಾಗಿ ಜಾತಕ ಪಕ್ಷಿಗಳಂತೆ ಕಾಯ್ದು ಕುಳಿತರು. ಅರ್ಜಿ ಜೊತೆಗೆ ಸಂಗ್ರಹವಾದ ಒಟ್ಟು ಮೊತ್ತವೇ ಏಳುನೂರಾ ಹದಿನೈದು ಕೋಟಿ ರೂಪಾಯಿಗಳು. ಫಲಾನುಭವಿಗಳ ಪಟ್ಟಿ ತಯಾರಿಸಿ ಆಯ್ಕೆದಾರರ ಹೆಸರು ಘೋಷಿಸಲು ಬೇಕಾದಷ್ಟು ಸಮಯ ತೆಗೆದುಕೊಂಡ ಬಿಡಿಎ ಕೊನೆಗೂ 5೦೦೦ ಜನರಿಗೆ ಲಾಟರಿ ಮೂಲಕ ನಿವೇಶನಗಳನ್ನು ಹಂಚಿಕೆ ಮಾಡಿ ಎರಡು ತಿಂಗಳಲ್ಲಿ ಬಾಕಿ ಹಣ ಪಾವತಿಸಬೇಕೆಂದು ಪತ್ರವನ್ನೂ ಫಲಾನುಭವಿಗಳಿಗೆ ಕಳುಹಿಸಿತು. ಆ ಪತ್ರವನ್ನು ಓದಿದ ಬಹುತೇಕ ಜನರು ನಿಮ್ಮ ಸೈಟೂ ಬೇಡಾ.. ಈ ಬಿಡಿಎ ಸಹವಾಸವೂ ಬೇಡಾ.. ನಮ್ಮ ಠೇವಣಿ ವಾಪಸ್ ಕೊಟ್ಟರೆ ಸಾಕು ಎನ್ನುವ ನಿರ್ಧಾರಕ್ಕೆ ಬಂದರು.  ಐದು ಸಾವಿರದಲ್ಲಿ ಸಾವಿರಕ್ಕೂ ಹೆಚ್ಚು ಜನ ಬಿಡಿಎಗೆ ಪತ್ರ ಬರೆದು ಸೈಟ್ ವಾಪಸಿಗೆ ಒತ್ತಾಯಿಸಿದರು.

ನಿಜವಾಗಿಯೂ ಮೋದಿಯವರ ನೋಟ್ ಬ್ಯಾನ್ ಇಫೆಕ್ಟ್‌ನಿಂದಾಗಿ ಜನ ಕಂಗಾಲಾಗಿ ಹೋಗಿದ್ದಾರಾ? ಕಪ್ಪು ಹಣವೆಲ್ಲಾ ಸರ್ವನಾಶವಾಗಿ ರೊಕ್ಕಿಷ್ಟರು ದಿವಾಳಿಯಾಗಿ ಹೋದರಾ? ಥರ್ಟಿಪಾರ್ಟಿ ವಿಸ್ತೀರ್ಣದ ಸೈಟಿಗೆ ಇಪ್ಪತ್ತುಮೂರು ಲಕ್ಷ ಹಣವನ್ನು ಹೊಂದಾಣಿಕೆ ಮಾಡದಷ್ಟು ಬಡತನ ಬಂದಿದೆಯಾ? ಅರ್ಜಿ ಹಾಕುವಾಗ ಹಣ ಹೊಂದಾಯಿಸಲು ಇದ್ದ ಧೈರ್ಯವು ನಿವೇಶನ ಹಂಚಿಕೆಯಾದಾಗ ಹೊರಟು ಹೋಯಿತಾ? ಅಲ್ಲಾ.. ಇದ್ಯಾವುದೂ ನಿಖರ ಕಾರಣಗಳು ಅಲ್ಲವೇ ಅಲ್ಲಾ. ನೋಟು ಬದಲಾವಣೆ ಆಗುವ ಪ್ರಕ್ರಿಯೆಯಲ್ಲಿ ಎಲ್ಲಾ ಕಪ್ಪು ಹಣವೂ ಯಾವುಯಾವುದೋ ಮಾರ್ಗಗಳಲ್ಲಿ ಬ್ಯಾಂಕಿಗೆ ಹೋಗಿ ಬಿಳಿಯಾಗಿಬಿಟ್ಟಿದೆ. ನೋಟ್ ಬ್ಯಾನಿನಿಂದ ಬಿಡಿಎ ಸೈಟ್ ಫಲಾನುಭವಿಗಳಲ್ಲಿ ಯಾರೂ ದಿವಾಳಿಯೂ ಆದ ವರದಿ ಇಲ್ಲಾ. ಆದರೂ ಚಿನ್ನದ ಮೊಟ್ಟೆ ಇಡುವ ಕೋಳಿಯಂತಿರುವ ಸರಕಾರದ ಅಧೀಕೃತ ನಿವೇಶನವನ್ನು ಜನರು ತಿರಸ್ಕರಿಸಿದ್ದಾದರೂ ಯಾಕೆ?

ಯಾಕೆಂದರೆ.. ನಿವೇಶನಕ್ಕೆ ಅರ್ಜಿ ಹಾಕಿದವರಲ್ಲಿ ಬಹತೇಕರು ಅರ್ಜಿಯಲ್ಲಿ ನಮೂದಿಸಿದ ನಿಯಮವನ್ನು ಉಲ್ಲಂಘಿಸಿದವರೇ ಆಗಿದ್ದಾರೆ. ಯಾವಾಗ ಬಿಡಿಎ ಯಿಂದ ಬಂದ ಹಂಚಿಕೆ ಪತ್ರದಲ್ಲಿ ಬಾಕಿ  ಹಣವನ್ನು ಬೇಗ ಕಟ್ಟಬೇಕು ಎನ್ನುವುದರ ಜೊತೆಗೆ ಕುಟುಂಬದ ಆದಾಯದ ಮೂಲವನ್ನು ವಿವರಿಸಬೇಕು ಎಂದು ನಮೂದಿಸಲಾಗಿತ್ತೋ ಆಗ ಕೆಲವರು ದಿಗಿಲು ಬಿದ್ದರು. ಚಾರ್ಟರ್ಡ ಅಕೌಂಟೆಂಟ್ ಸಹಾಯದಿಂದ ಸುಳ್ಳು ಆದಾಯವನ್ನು ತೋರಿಸಿಯೋ ಇಲ್ಲವೇ ಬ್ಯಾಂಕ್ ಸಾಲ ಮಾಡಿಯಾದರೋ ಹಣ ಕಟ್ಟಿ ಸಿಕ್ಕ ನಿವೇಶನವನ್ನು ದಕ್ಕಿಸಿಕೊಳ್ಳಬಹುದಾಗಿತ್ತು. ಆದರೆ.. ಕುಟುಂಬದ ಸದಸ್ಯರ ಉದ್ಯೋಗ, ಅವರ ಹೆಸರಲ್ಲಿ ಹೊಂದಿರುವ ಆಸ್ತಿ ಹಾಗೂ ಈಗ ವಾಸವಿರುವ ಮನೆಯ ಮಾಹಿತಿ ಕೊಡಬೇಕು ಮತ್ತು ಕೊಟ್ಟ ಮಾಹಿತಿ ಸುಳ್ಳಾಗಿದ್ದರೆ ನಿವೇಶನ ಹಂಚಿಕೆ ರದ್ದಾಗುತ್ತದೆ ಎನ್ನುವ ನಿಬಂಧನೆ ಹಂಚಿಕೆಪತ್ರದಲ್ಲಿ ಇರುವುದನು ಕಂಡ ಫಲಾನುಭವಿಗಳು ಬೆಚ್ಚಿಬಿದ್ದರು. ಸುಳ್ಳು ಮಾಹಿತಿಯನ್ನು ಕೊಟ್ಟು ಸಿಕ್ಕಾಕಿಕೊಂಡರೆ ಕಟ್ಟಿದ ಹಣವೂ ಮುಳುಗುತ್ತದೆ ಹಾಗೂ ಆದಾಯ ತೆರಿಗೆ ಇಲಾಖೆಯ ರೇಡ್ ಕೂಡಾ ಆಗಬಹುದು ಎನ್ನುವ ಭಯ ಫಲಾನುಭವಿಗಳಿಗೆ ಕಾಡಿದ್ದಂತೂ ಸುಳ್ಳಲ್ಲ. ಇದಕ್ಕೆ ಕಾರಣವೂ ಇಲ್ಲದಿಲ್ಲ.


ಯಾಕೆಂದರೆ.. ಸರಕಾರವು ವಸತಿ ಹೀನರಿಗೆ ವಸತಿಯನ್ನು ವದಗಿಸಬೇಕು ಎನ್ನುವ ಸದಾಶಯದಿಂದ ಕರ್ನಾಟಕ ಹೌಸಿಂಗ್ ಬೋರ್ಡ, ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ.. ಮುಂತಾದ ಸರಕಾರಿ ಸಂಸ್ಥೆಗಳಿಂದ ಕಾಲಕಾಲಕ್ಕೆ ರೈತರಿಂದ ಜಮೀನನ್ನು ಕಡಿಮೆ ಬೆಲೆಗೆ ವಶಪಡಿಸಿಕೊಂಡು ನಿವೇಶನ, ಅಪಾರ್ಟಮೆಂಟ್‌ಗಳನ್ನು ಅಭಿವೃದ್ದಿ ಪಡಿಸಿ ವಸತಿಹೀನರಿಗೆ ಹಂಚಿಕೆ ಮಾಡುತ್ತಾ ಬಂದಿದೆ. ಆದರೆ ಮೂಲ ಉದ್ದೇಶವನ್ನು ಮರೆತ ಈ ಸರಕಾರಿ ಸಂಸ್ಥೆಗಳು ತಾರಾತಿಗಡಿ ಮಾಡಿ ಕಾನೂನುಗಳನ್ನು ಕಡೆಗಣಿಸಿ ಲಂಚ ಕೊಟ್ಟವರಿಗೆ ಹಂಚಿಕೆ ಮಾಡುವುದನ್ನು ವೃತದಂತೆ ರೂಢಿಸಿಕೊಂಡ ಬಂದಿವೆ. ದೊಡ್ಡ ದೊಡ್ಡ ಬಿಲ್ಡರ್‌ಗಳು, ಬಂಡವಾಳಶಾಹಿಗಳು.. ಬೇನಾಮಿಯಾಗಿ ಅರ್ಜಿ ಹಾಕಿಸಿ, ಅಧಿಕಾರಿಗಳನ್ನು ಬುಕ್ ಮಾಡಿಕೊಂಡು ಸೈಟ್ ಅಲಾಟ್ ಮಾಡಿಸಿ ಬಳಿಕ ಲಾಭ ಮಾಡಿಕೊಳ್ಳುವ ದಂದೆ ಮಾಡುತ್ತಿವೆ. ಅಧಿಕಾರಿಗಳು ಹಾಗೂ ರಾಜಕಾರಣಿಗಳು ತಮ್ಮ ಬಂಧು ಬಾಂಧವರು ಹಾಗೂ ಬೇಕಾದವರಿಗೆ ಸೈಟ್ ಅಲಾಟ್ ಮಾಡಿಸಿಕೊಳ್ಳುವುದು ಬಹಿರಂಗ ಸತ್ಯ. ಇದನ್ನು ಹೊರತು ಪಡಿಸಿಯೂ ಅದೆಷ್ಟೋ ಜನ ಅರ್ಜಿದಾರರು ಈಗಾಗಲೇ ಬೆಂಗಳೂರಿನಲ್ಲಿ ಸ್ವಂತ ಸೈಟನ್ನೋ ಇಲ್ಲವೇ ಮನೆಯನ್ನೋ ಹೊಂದಿರುತ್ತಾರೆ. ಆದರೂ ಹೆಚ್ಚುವರಿಯಾಗಿ ಸರಕಾರಿ ಸೈಟೂ ಇರಲಿ ಎಂದು ಬಯಸುತ್ತಾರೆ. ಈಗ ಬಿಡಿಎ ಸೈಟ್ ಸಿಕ್ಕರೆ ಮುಂದೆ ಅದನ್ನು ಎರಡು ಮೂರು ಪಟ್ಟಿಗೆ ಮಾರಿ ಲಾಭ ಮಾಡಿಕೊಳ್ಳಬಹುದು ಎನ್ನುವ ಲೆಕ್ಕಾಚಾರ ಬಹುತೇಕರದ್ದು. ಅದಕ್ಕಾಗಿ ಎರಡು ಮೂರು ಅಷ್ಟೇ ಯಾಕೆ ನಾಲ್ಕಾರು ಬಾರಿ ಪ್ರಯತ್ನವನ್ನು ಮಾಡಿ ಅರ್ಜಿ ಹಾಕುವಲ್ಲಿ ತಮ್ಮ ಸೀನಿಯಾರಿಟಿಯನ್ನು ಕಾಪಾಡಿಕೊಂಡು ಬಂದಿರುತ್ತಾರೆ. ತಮಗಲ್ಲದಿದ್ದರೆ ತಮ್ಮ ಮಕ್ಕಳ ಕಾಲಕ್ಕಾದರೂ ಒಂದು ಸರಕಾರಿ ಸೈಟ್ ಅಲಾಟ್ ಆಗಲಿ ಎನ್ನುವ ದೂರಗಾಮಿ ಯೋಜನೆಯೂ ಇಂತವರದ್ದಾಗಿರುತ್ತದೆ.

ಆದರೆ.. ಈ ಹೆಚ್ಚುವರಿ ಆಸ್ತಿಯ ಕನವರಿಕೆಗೆ ಸರಕಾರಿ ಸೈಟು ಅಥವಾ ಅಪಾರ್ಟಮೆಂಟಗಳಲ್ಲಿ ಕಾನೂನಾತ್ಮಕವಾಗಿ ಅವಕಾಶವಿಲ್ಲ. ಯಾವ ಕುಟುಂಬಕ್ಕೆ ಸ್ವಂತ ನಿವೇಶನ ಅಥವಾ ವಾಸಕ್ಕೆ ಮನೆ ಇಲ್ಲವೋ ಅಂತವರಿಗೆ ಮಾತ್ರ ಸರಕಾರಿ ಸೈಟುಗಳು ಹಂಚಿಕೆಯಾಗಬೇಕು ಎನ್ನುವುದು ಸರಕಾರಿ ನಿಯಮ. ಆದರೆ.. ಇಲ್ಲಿವರೆಗೂ ಇದು ಎಂದೂ ಪಾಲನೆ ಆಗಿಯೇ ಇಲ್ಲಾ. ನೂರಕ್ಕೆ ಎಂಬತ್ತಕ್ಕೂ ಹೆಚ್ಚು ಹಂಚಿಕೆಗಳು ಹೆಚ್ಚುವರಿ ಆಸ್ತಿಯಾಗಿರುತ್ತವೆ. ಇಲ್ಲಿವರೆಗೂ ಬಿಡಿಎ ಇಲ್ಲವೇ ಕೆಹೆಚ್‌ಬಿ ಯಿಂದ ಅಲಾಟ್ ಆದ ಅಷ್ಟೂ ನಿವೇಶನ ಹಾಗೂ ಮನೆಗಳ ಲಿಸ್ಟನ್ನು ಪರಿಶೀಲಿಸಿದರೆ ಬಹುತೇಕ ಹಂಚಿಕೆಗಳು ಕಾನೂನು ಬಾಹಿರವಾಗಿರುವಂತಹುವೇ ಆಗಿವೆ. ಈಗ ಕೆಂಪೇಗೌಡ ಬಡಾವಣೆಯ ಹಂಚಿಕೆಯಲ್ಲೂ ಅದೇ ಆಗಿದೆ. ಸುಳ್ಳು ಮಾಹಿತಿಯನ್ನು ಕೊಟ್ಟು, ನಮಗಾಗಲೀ ಇಲ್ಲವೇ ನನ್ನ ಕುಟುಂಬಕ್ಕಾಗಲೀ ಯಾವುದೇ ನಿವೇಶನ ಇಲ್ಲವೇ ಮನೆ ಇರುವುದಿಲ್ಲ ಎಂದು ಘೋಷಿಸಿಕೊಂಡೇ ಅರ್ಜಿ  ಸಲ್ಲಿಸಲಾಗಿರುತ್ತದೆ. ಅದನ್ನು ಪರಿಶೀಲನೆ ಮಾಡುವ ರಗಳೆಗೆ ಇಲ್ಲಿವರೆಗೂ ಯಾವ ಸರಕಾರಿ ಸಂಸ್ಥೆಯೂ ಹೋಗಿಲ್ಲ. ಹೀಗಾಗಿ.. ಸ್ವಂತ ಆಸ್ತಿ ಇರುವವರೇ ಹೆಚ್ಚಾಗಿ ಬಿಡಿಎ ಸೈಟಿಗೆ ಅರ್ಜಿ ಹಾಕಿರುತ್ತಾರೆ. ಹಂಚಿಕೆಯಾದ ನಂತರ ಆದಷ್ಟು ಬೇಗ ಬಂದ ಲಾಭಕ್ಕೆ ಮಾರಿಕೊಂಡು ಕಾಸು ಮಾಡಿಕೊಳ್ಳುವವರೂ ಇದ್ದಾರೆ.. ಇನ್ನೂ ಒಂದಿಷ್ಟು ವರ್ಷ ಇಟ್ಟುಕೊಂಡು ಅಧಿಕ ಲಾಭ ಬಂದಾಗ ಮಾರಿಕೊಂಡರಾಯ್ತು ಎನ್ನುವ ಆಶಾವಾದಿಗಳೂ ಬೇಕಾದಷ್ಟಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ಸ್ವಂತ ಮನೆ ಇದ್ದವರು ಹಂಚಿಕೆಯಾದ ನಿವೇಶನದಲ್ಲಿ ಮನೆ ಕಟ್ಟಿಕೊಂಡು ಹೋಗುವ ಸಾಧ್ಯತೆ ಕಡಿಮೆ ಇದೆ. ಹಾಗೇನಾದರೂ ಹೋದವರೂ  ಸಹ ಇಲ್ಲಿರುವ ಮನೆ ಬಾಡಿಗೆ ಕೊಟ್ಟು ಅಲ್ಲಿ ಮನೆ ಕಟ್ಟಿ ವಾಸ ಮಾಡಿದವರೂ ಇದ್ದಾರಾದರೂ ಅವರ ಸಂಖ್ಯೆ ಕಡಿಮೆ. ಹೀಗಾಗಿ ಸರಕಾರಿ ಸಹ ಸಂಸ್ಥೆಗಳು ಯಾವ ಉದ್ದೇಶಕ್ಕೆ ರೈತರ ಹೊಟ್ಟೆಯ ಮೇಲೆ ಹೊಡೆದು ಬಲವಂತವಾಗಿ ಭೂಮಿಯನ್ನು ಪಡೆದು ಸೈಟನ್ನಾಗಿಸಿ ಹಂಚಿಕೆ ಮಾಡಿ ಬೆಂಗಳೂರನ್ನು ಅಭಿವೃದ್ದಿ ಮಾಡಬೇಕೆಂದು ಬಗೆದಿತ್ತೋ ಆ ಆಶಯ ನೆರವೇರಲೇ ಇಲ್ಲಾ.. ಈ ಭ್ರಷ್ಟ ವ್ಯವಸ್ಥೆಯಲ್ಲಿ ನಿಜವಾಗಿಯೂ ಅಗತ್ಯವಿರುವವರಿಗೆ ವಸತಿ ಒದಗಿಸುವ ಉದ್ದೇಶ ಈಡೇರುವುದೂ ಇಲ್ಲಾ. ಹೀಗಾಗಿ ಇದ್ದವರೇ ಮತ್ತೆ ಮತ್ತೆ ಹೆಚ್ಚಿನ ಅನುಕೂಲತೆ ಪಡೆಯುತ್ತಾರೆ.. ಇಲ್ಲದವರು ಇದ್ದಲ್ಲೇ ಇದ್ದಂಗೆ ವಸತಿ ರಹಿತರಾಗಿ ಇರುತ್ತಾರೆ. 

ಜನ ಈಗ ಅದೆಷ್ಟು ಹೆದರಿದ್ದಾರೆಂದರೆ ಹೆಚ್ಚುವರಿ ಆಸ್ತಿ ಬರುವುದನ್ನು ಬಿಡಿ.. ಇರುವುದನ್ನು ಉಳಿಸಿಕೊಂಡರೆ ಸಾಕು ಎನ್ನುವಷ್ಟು ದಿಗಿಲುಬಿದ್ದಿದ್ದಾರೆ. ಬಿಡಿಎ ತನ್ನ ನಿಬಂಧನೆಗಳನ್ನು ಸರಿಯಾಗಿ ಜಾರಿಗೆ ತಂದಲ್ಲಿ ಹಂಚಿಕೆಯಾದ ನಿವೇಶನಗಳಲ್ಲಿ ಬಹುತೇಕ ಅಮಾನ್ಯಗೊಳ್ಳುತ್ತವೆ. ಈಗಲೂ ಏನೂ ಆಗೋದಿಲ್ಲ. ಸಂಬಂಧಿಸಿದ ಅಧಿಕಾರಿಗಳಿಗೆ ಬೇಕಾದ ಪ್ರಸಾದ ಕೊಟ್ಟು ವರ ಪಡೆಯುವ ಮಾರ್ಗಗಳು ಈ ಭ್ರಷ್ಟ ವ್ಯವಸ್ಥೆಯಲ್ಲಿ ಮುಕ್ತವಾಗಿವೆ. ಕಾನೂನು ಬಾಹಿರವಾಗಿ ಅರ್ಜಿ ಸಲ್ಲಿಸಿದವರಲ್ಲಿ ಒಂದು ರೀತಿಯ ಹಿಂಜರಿಕೆ ಕಾಡುವುದಂತೂ ಸತ್ಯ. ಪ್ರಭಾವಿಗಳ ಸಖ್ಯ ಇರುವವರಿಗೆ ಹಾಗೂ ಕಾಸು ಕೊಟ್ಟು ಕಾನೂನನ್ನು ಕೊಂಡುಕೊಳ್ಳುವ ತಾಕತ್ತು ಇರುವವರಿಗೆ ಹಂಚಿಕೆಯಾದ ನಿವೇಶನವನ್ನು ದಕ್ಕಿಸಿಕೊಳ್ಳುವುದು ಆಗದ ಕೆಲಸವೇನಲ್ಲ. ಆದರೆ.. ಸುಳ್ಳು ಮಾಹಿತಿ ಕೊಟ್ಟು ಅರ್ಜಿ ಸಲ್ಲಿಸಿದವರು ಇದ್ದಾರಲ್ಲಾ.. ಅಂತವರಿಗೆ ಒಳಗುದಿ ಆರಂಭವಾಗಿದೆ. ಹೇಗಾದರೂ ಮಾಡಿ ಹಣ ಕಟ್ಟುವ ಸಾಮರ್ಥ್ಯ ಇದ್ದವರೂ ಸಹ ನಿವೇಶನ ವಾಪಸ್ ಕೊಡುವುದರ ಹಿಂದಿನ ಮರ್ಮ ಇರುವುದೇ ಸುಳ್ಳು ಮಾಹಿತಿ ಘೋಷಣೆ ಮಾಡಿರುವುದರಲ್ಲಿದೆ. ಕೆಲವು ಬೆರಳೆಣಿಕೆಯಷ್ಟು ಜನರಿಗೆ ನಿಜವಾಗಿಯೂ ಹಣ ಕಟ್ಟಲು ಸಮಸ್ಯೆ ಇರಬಹುದಾಗಿದೆ. ಆದರೆ.. ಬಹುತೇಕರಿಗೆ ಸಮಸ್ಯೆಯಾಗಿರುವುದು ಬಿಡಿಎ ಅರ್ಜಿಯಲ್ಲಿ ಇರುವ ಸುಳ್ಳು ಮಾಹಿತಿ ಕೊಟ್ಟಿದ್ದರೆ ಸೈಟು ಹಂಚಿಕೆ ರದ್ದಾಗುವುದು ಎನ್ನುವ ನಿಬಂಧನೆಯಾಗಿದೆ. ಆದಿದ್ದೆಲ್ಲಾ ಒಳಿತೇ ಆಯಿತು. ಈಗಿರುವ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರೆ ಸಾಕು ಸರಕಾರ ಬಿಡಿಎ ಎಂಬ ಸಂಸ್ಥೆ ಹುಟ್ಟು ಹಾಕಿದ ಉದ್ದೇಶ ಸಾರ್ಥಕವಾಗುತ್ತದೆ. ನಿಜವಾಗಿ ವಸತಿರಹಿತರಿಗೆ ನಿವೇಶನ ದೊರೆಯುತ್ತದೆ. ಆದರೆ.. ಎಲ್ಲಿವರೆಗೂ ಭ್ರಷ್ಟಾಚಾರ ಹಾಗೂ ಸ್ವಜನಪಕ್ಷಪಾತ ಕೊನೆಗೊಳ್ಳುವುದಿಲ್ಲವೋ ಅಲ್ಲಿವರೆಗೂ ಸರಕಾರಿ ಉದ್ದೇಶ ಇಡೇರುವುದು ಸಾಧ್ಯವಿಲ್ಲ. ಎಲ್ಲಿವರೆಗೂ ಭ್ರಷ್ಟ ವ್ಯವಸ್ಥೆ ಜಾರಿಯಲ್ಲಿರುವುದೋ ಅಲ್ಲಿವರೆಗೆ ಜನರೂ ಸಹ ಅಡ್ಡದಾರಿ ಹಿಡಿದು ಅಕ್ರಮವಾಗಿ ಸರಕಾರಿ ಸವಲತ್ತು ಪಡೆಯುವುದನ್ನು ತಡೆಯಲು ಸಾಧ್ಯವಿಲ್ಲ.       

-ಶಶಿಕಾಂತ ಯಡಹಳ್ಳಿ


ಶನಿವಾರ, ಡಿಸೆಂಬರ್ 17, 2016

ತಹ ತಹ..... 69 ರಾಷ್ಟ್ರಗೀತೆ ದೇಶಭಕ್ತಿಗೆ ಮಾಪಕವಲ್ಲ; ಜನಗಣಮನ ಕಡ್ಡಾಯ ಬೇಕಿಲ್ಲಾ..



ಯಾರಿಗೂ ಏನನ್ನೂ ಬಾಹ್ಯವಾಗಿ ಹೇರಿಕೆ ಮಾಡಲು ಸಾಧ್ಯವಿಲ್ಲ. ಬರೀ ಕಾನೂನುಗಳನ್ನು ಮಾಡುವ ಮೂಲಕ ಜನರಲ್ಲಿ ದೇಶಭಕ್ತಿಯನ್ನು ಹೇರಲು ಆಗುವುದೂ ಇಲ್ಲ. ಆದರೆ.. ಸುಪ್ರಿಂ ಕೋರ್ಟ ಅಂತಹುದೊಂದು ಠರಾವನ್ನು 2016 ನವೆಂಬರ್ 30ರಂದು ಹೊರಡಿಸಿ ಅದರ ಜಾರಿಗೆ ಹತ್ತು ದಿನಗಳ ಕಾಲಾವಕಾಶ ನೀಡಿತು. ಈ ದೇಶದ ಎಲ್ಲ ಸಿನೆಮಾ ಮಂದಿರಗಳಲ್ಲಿ ಚಲನಚಿತ್ರದ ಆರಂಭಕ್ಕೂ ಮುನ್ನ ರಾಷ್ಟ್ರಗೀತೆಯನ್ನು ನುಡಿಸಬೇಕು ಹಾಗೂ ಪ್ರೇಕ್ಷಕರು ಎದ್ದು ನಿಂತು ಗೌರವ ಸಲ್ಲಿಸುವುದರ ಮೂಲಕ ಅದಕ್ಕೆ ದ್ವನಿಗೂಡಿಸಬೇಕು ಎಂಬುದು ಸುಪ್ರೀಂ ಆದೇಶವಾಗಿದೆ. ಸಿನೆಮಾ ಹಾಲ್‌ಗಳಲ್ಲಿ ಜನಗಣಮನ ಹೊಸದೇನೂ ಅಲ್ಲಾ. ಮೂವತ್ತು ವರ್ಷಗಳ ಹಿಂದೆ ಇದನ್ನು ಖಾಯಂ ವೃತದಂತೆ ಪಾಲಿಸಲಾಗುತ್ತಿತ್ತು. ಆಮೇಲಾಮೇಲೆ ಅದು ತಾನೇ ತಾನಾಗಿ ನಿಂತೇ ಹೋಯಿತು. ಸಿನೆಮಾಹಾಲ್‌ಗಳಲ್ಲಿ ರಾಷ್ಟ್ರಗೀತೆ ಮೊಳಗುವುದು ನಿಂತು ಹೋಯಿತು ಎಂದರೆ ದೇಶವಾಸಿಗಳಲ್ಲಿ  ದೇಶಭಕ್ತಿ ಕಡಿಮೆ ಆಯಿತು ಎಂದರ್ಥವೇ? ಅಥವಾ ಹೀಗೆ ಕಾನೂನಾತ್ಮಕವಾಗಿ ಕಡ್ಡಾಯ ಮಾಡಿದರೆ ಜನರಲ್ಲಿ ದೇಶಭಕ್ತಿ ಜಾಸ್ತಿ ಆಗುತ್ತದೆ ಎನ್ನುವ ಬಯಕೆಯೇ? ಇವೆರಡೂ ಅಲ್ಲಾ. ಕೇವಲ ಜನಗಣಮನ ಕೇಳಿದ ಕೂಡಲೇ ರಾಷ್ಟ್ರಭಕ್ತಿ ಹೆಚ್ಚುವಂತಿದ್ದರೆ ಅದನ್ನು ಕೇವಲ ಸಿನೆಮಾ ಮಂದಿರಗಳಿಗೆ ಮಾತ್ರ ಯಾಕೆ ಎಲ್ಲೆಲ್ಲಿ ಜನರು ಗುಂಪಾಗಿ ಸೇರುತ್ತಾರೋ ಅಲ್ಲೆಲ್ಲಾ ಜನಗಣ ಮೊಳಗಿಸಬಹುದಾಗಿತ್ತು. ಆದರೆ ವಾಸ್ತವ ಅದಲ್ಲಾ

 ಜನನಿ ಜನ್ಮಭೂಮಿ ಸ್ವರ್ಗಾದಪಿ ಗರೀಯಸೆ ಎಂದು ಜಪಿಸುತ್ತಿದ್ದರೆ ಮಾತ್ರ ಮಾತೃಭಕ್ತಿ ಹಾಗೂ ದೇಶಭಕ್ತಿ ಉಕ್ಕುವುದಿಲ್ಲ. ಸಿನೆಮಾ ಮಂದಿರಗಳಲ್ಲಿ ಜನಗಣಮನ ಹೇಳಿಸಿ ಎದ್ದು ನಿಂತು ಗೌರವ ಸೂಚಿಸಿದರೆ ಮಾತ್ರ ಪ್ರತಿಯೊಬ್ಬರ ದೇಶಭಕ್ತಿ ಸಾಬೀತಾಗುವುದಿಲ್ಲ. ಜೊತೆಗೆ ದೇಶದ ಆಳುವ ವರ್ಗಗಳೂ ಸಹ ತನ್ನ ದೇಶವಾಸಿಗಳನ್ನು ಗೌರವಯುತವಾಗಿ ಬದುಕುವಂತಹ ವ್ಯವಸ್ಥೆಯೊಂದನ್ನು ಕಲ್ಪಿಸಿಕೊಡಬೇಕಾಗುತ್ತದೆ. ಒಂದು ಕಡೆ ಕಿತ್ತು ತಿನ್ನುವ ಬಡತನ ಹಾಗೂ ಇನ್ನೊಂದು ಕಡೆಗೆ ಸಿರಿತನದ ವೈಭವೀಕರಣ. ಒಂದು ಕಡೆ ಕಾಸಿಲ್ಲದೇ ಮುರಿದು ಬೀಳುವ ಮದುವೆಗಳು, ಇನ್ನೊಂದು ಕಡೆ ಐನೂರು ಕೋಟಿ ವೆಚ್ಚದ ದುಬಾರಿ ಮದುವೆಗಳು ನಡೆಯುವ ಈ ದೇಶದಲ್ಲಿ ಕನಿಷ್ಟ ಸಮಾನತೆ ಎನ್ನುವುದೂ ಇಲ್ಲವೆಂದರೆ ಈ ದೇಶವನ್ನು ಹೇಗೆ ಪ್ರೀತಿಸುವುದು. ಕೇವಲ ಸಂವಿಧಾನದ ಕಲಮುಗಳಲಿ ಹೊರತು ಪಡಿಸಿ ಯಾವುದೂ ಬಡವರ, ದೀನ ದಲಿತರ ಪರವಾದ ಕಾನೂನುಗಳು ಅನುಷ್ಟಾನಗೊಳ್ಳದೇ ಇರುವ ದೇಶದ ಬಗ್ಗೆ ಅದು ಹೇಗೆ ಹೆಮ್ಮೆಯಿಂದ ಹೇಳಿಕೊಳ್ಳುವುದು? ಶೇಕಡ ೫ರಷ್ಟು ಜನರ ಕೈಯಲ್ಲಿ ಇಡೀ ದೇಶದ ಸಂಪನ್ಮೂಲಗಳು ಸಂಗ್ರಹವಾಗಿ ಬಹುತೇಕ ಜನರು ಬದುಕುವುದಕ್ಕೇ ಪರದಾಡುತ್ತಿರುವ ದಿನಮಾನಗಳಲ್ಲಿ ಅದು ಹೇಗೆ ದೇಶಭಕ್ತಿ ಎನ್ನುವುದು ಬಡವರ ಬದುಕಲ್ಲಿ ಉಕ್ಕಿ ಹರಿಯುವುದು? ಒಂದು ದೇಶದಲ್ಲಿ ಹುಟ್ಟಿ ಆ ದೇಶವನ್ನು ಪ್ರೀತಿಸುವ ಎಲ್ಲರಿಗೂ ಆ ದೇಶದ ಬಗ್ಗೆ ಪ್ರೀತಿ ಗೌರವ ಇದ್ದೇ ಇರುತ್ತದೆ. ಅದನ್ನು ಉಳಿಸಿಕೊಳ್ಳುವ ಇಲ್ಲವೇ ಕಳೆದುಕೊಳ್ಳುವ ತಾಕತ್ತು ದೇಶವಾಳುವವರ ಕೈಯಲ್ಲಿರುತ್ತದೆ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚುವ ದೇಶದಲ್ಲಿ ದೇಶಭಕ್ತಿ ಉಕ್ಕಿಹರಿಯಬೇಕೆಂಬುದೇ ಆದರ್ಶವಾದದ ಪರಿಕಲ್ಪನೆಯಾಗಿದೆ. ಎಲ್ಲರೂ ತಮ್ಮ ತಾಯಿಯನ್ನು ಪ್ರೀತಿಸುತ್ತಾರೆ.. ಹಾಗಂತ ತಾಯಿಯ ಕುರಿತು ಹಾಡು ಹೇಳಬೇಕೆಂದೇನಿಲ್ಲ. ಎಲ್ಲರಲ್ಲೂ ದೇಶಭಕ್ತಿ ಇದ್ದೇ ಇರುತ್ತದೆ.. ಹಾಗಂತ ಅದನ್ನು ರಾಷ್ಟ್ರಗೀತೆ ಹಾಡಿ ಸಾಬೀತುಪಡಿಸಬೇಕೆಂದೇನಿಲ್ಲಾ.. ದೇಶವೆಂದರೆ ಕೇವಲ ಕಲ್ಲು ಮಣ್ಣು ಕಟ್ಟಡ ರಸ್ತೆ ಇಮಾರತುಗಳಲ್ಲಾ.. ದೇಶವೆಂದರೆ ಅಲ್ಲಿ ವಾಸಿಸುವ ದುಡಿಯುವ ಜನ ಮತ್ತು ಅವರ ಘನತೆವೆತ್ತ ಬದುಕು ಎನ್ನುವುದನ್ನು ಆಳುವ ಪ್ರಭುಗಳು ಹಾಗೂ ಅವರನ್ನು ಪ್ರತಿನಿಧಿಸುವ ನ್ಯಾಯಾಲಯ ಮೊದಲು ಅರ್ಥಮಾಡಿಕೊಳ್ಳಬೇಕಾಗಿದೆ.

ಏನೇ ಆದರೂ.. ದೇಶವಾಸಿಗಳು ತಮ್ಮೆಲ್ಲಾ ಸಂಕಷ್ಟಗಳನ್ನು ಮರೆತು ದೇಶದ ಒಳತನ್ನೇ ಬಯಸುತ್ತಾರೆ. ಇಂದಿಲ್ಲ ನಾಳೆ ಈ ದುಷ್ಟರ ಭ್ರಷ್ಟ ಆಳುವ ವರ್ಗ ಹೋಗಿ ಜನರಿಗೆ ಒಳಿತನ್ನು ಬಯಸುವ ಆಡಳಿತ ಬರಬಹುದೆಂಬ ಭರವಸೆಯಿಂದ ಕಾಯುತ್ತಲೇ ಇದ್ದಾರೆ. ಆದರೆ.. ಆಳುವ ವರ್ಗಗಳು ತಮ್ಮ ನ್ಯೂನ್ಯತೆಗಳನ್ನು ಮರೆಮಾಚಿ ಜನರ ದಿಕ್ಕನ್ನು ಬೇರೆ ಕಡೆಗೆ ತಿರುಗಿಸಲು ಆಗಾಗ ದೇಶಭಕ್ತಿಯ ಭಾವನೆಗಳನ್ನು ಕೆರಳಿಸುವ ವರಸೆಗಳನ್ನು ಹುಡುಕುತ್ತಿರುತ್ತಾರೆ. ದೇಶಭಕ್ತಿಯ ಹೆಸರಲ್ಲಿ ಜನರ ದಿಕ್ಕು ತಪ್ಪಿಸುವ ಮಹತ್ಕಾರ್ಯವನ್ನು ಅಂದಿನ ಹಿಟ್ಲರನಿಂದಿ ಹಿಡಿದು ಇಂದಿನ ಮೋದಿವರೆಗೂ ನಿರಂತರವಾಗಿ ನಡೆದುಕೊಂಡೇ ಬಂದಿದೆ. ಅಲ್ಪಸಂಖ್ಯಾತರನ್ನು ದೇಶವಿರೋಧಿಗಳು ಎಂದು ಬಿಂಬಿಸುತ್ತಾ ಅವರ ಮೇಲೆ ಬಹುಸಂಖ್ಯಾತರನ್ನು ಎತ್ತಿಕಟ್ಟುವ ಮೂಲಕ ದೇಶಭಕ್ತಿಯ ರಾಜಕಾರಣವನ್ನು ಆಳುವ ವರ್ಗಗಳು ಮಾಡುತ್ತಲೇ ಬಂದಿವೆ. ಇತ್ತೀಚೆಗಂತೂ ನಮ್ಮ ದೇಶದಲ್ಲಿ ಈ ದೇಶಭಕ್ತಿ ಅನ್ನುವುದೇ ತೋರುಂಬ ಲಾಭವಾಗಿದೆ. ನಿಜ ಹೇಳಬೇಕೆಂದರೆ ಬಹುಸಂಖ್ಯಾತ ಜನರಲ್ಲಿ ಈ ದೇಶದ ಮೇಲೆ ಅಪಾರವಾದ ಪ್ರೀತಿ ಭಕ್ತಿ ಹಾಗೂ ಗೌರವ ಇದೆ. ಆದರೆ.. ತಮ್ಮ ಪ್ರೀತಿಯ ಮಾತೃಭೂಮಿಯನ್ನು ಕೆಲವೇ ಜನ ಖದೀಮರ ಸ್ವತ್ತಾಗಿಸಿದ್ದಕ್ಕೆ ಜನರಲ್ಲಿ ಅಸಮಾಧಾನವಿದೆ. ವಿದೇಶಿ ಲೂಟಿಕೋರ ಕಾರ್ಪೋರೇಟ್ ಕಂಪನಿಗಳಿಗೆ ಈ ದೇಶವನ್ನು ಲೂಟಿ ಮಾಡಲು ಮುಕ್ತ ಅವಕಾಶ ಕೊಟ್ಟಿದ್ದಕ್ಕೆ ಜನರೆದೆಯಲ್ಲಿ ಆಕ್ರೋಶ ಮಡುಗಟ್ಟಿದೆ. ಆದರೆ ಆ ಆಕ್ರೋಶದ ಲಾವಾರಸ ಒತ್ತಡಮೀರಿ ಸ್ಪೋಟಗೊಂಡು ಜ್ವಾಲಾಮುಖಿಯಾಗಿ ಈ ಆಳುವ ವರ್ಗವನ್ನು ಆಪೋಷಣ ತೆಗೆದುಕೊಳ್ಳುವುದನ್ನು ತಡೆದು ನಿಲ್ಲಿಸಲು ಆಳುವ ಜನರು  ಈ ದೇಶಭಕ್ತಿ ಎನ್ನುವ ತಡಗೊಡೆಯನ್ನು ನಿರಂತರವಾಗಿ ಬಳಸಲಾಗುತ್ತಾರೆ. ಅದರ ಭಾಗವಾಗಿಯೇ ಈಗಿನ ಕೋರ್ಟ ಆದೇಶ ಹೊರಗೆ ಬಂದಿದೆ.

ಯಾವುದನ್ನೇ ಆಗಲಿ ಮನಸಾರೆ ಮಾಡಬೇಕೆ ಹೊರತು ಅದು ಖಡ್ಡಾಯವಾಗಬಾರದು. ದೇಶಭಕ್ತಿಯೂ ಸಹ ಇದಕ್ಕೆ ಹೊರತಲ್ಲ. ಜನಗಣಮನವನ್ನು ಖಡ್ಡಾಯವಾಗಿ ಸಿನೆಮಾ ಮಂದಿರದಲ್ಲಿ ನುಡಿಸಲೇಬೇಕು.. ಪ್ರೇಕ್ಷಕರು ಅದಕ್ಕೆ ಸ್ಪಂದಿಸಲೇಬೇಕು ಎನ್ನುವುದು ಜನರಲ್ಲಿರುವ ದೇಶಭಕ್ತಿಯ ಮೇಲೆ ಆಳುವ ವರ್ಗಗಳಿಗಿರುವ ಅನುಮಾನದ ದ್ಯೋತಕವಾಗಿದೆ. ತನ್ನ ದೇಶದ ಜನರನ್ನೇ ನಂಬದ ಈ ಆಳುವ ದೊರೆಗಳನ್ನು ಜನರು ಹೇಗೆ ನಂಬುವುದು? ಈಗಾಗಲೇ ಬಹುಜನರ ತಿರಸ್ಕಾರಕ್ಕೆ ಒಳಗಾದ ಈ ದೇಶದ ಆಳುವ ಪಕ್ಷಗಳು ಹಾಗೂ ಸರಕಾರಗಳು ಕೇವಲ ಅಂಕಿ ಸಂಖ್ಯೆಗಳ ತಂತ್ರಗಾರಿಕೆಯಲ್ಲಿ ಅಧಿಕಾರ ಹಿಡಿದಿವೆಯೇ ಹೊರತು ಬಹುಜನರ ಒಕ್ಕೂರಲಿನ ಆಯ್ಕೆಯಿಂದಲ್ಲಾ. ಎಲ್ಲಾ ನಮೂನಿ ಪಕ್ಷ ಹಾಗೂ ಸರಕಾರಗಳ ಮೇಲೆ ಬಹುತೇಕ ಜನರು ವಿಶ್ವಾಸವನ್ನು ಕಳೆದುಕೊಂಡಿದ್ದು ಅದು ಆಳುವ ಜನರಿಗೂ ಗೊತ್ತಿದೆ. ಹಾಗೆಯೇ ಜನರನ್ನು ಸದಾ ಯಾವುದಾದರೊಂದು ಭ್ರಮೆಯಲ್ಲಿಟ್ಟು ತಮ್ಮ ಅಧಿಕಾರ ಹಂಚಿಕೆಯ ಲಾಭವನ್ನು ಪಡೆಯಲು ಆಳುವ ವರ್ಗಗಳೂ ನಿರಂತರವಾಗಿ ಪ್ರಯತ್ನಿಸುತ್ತಲೇ ಇರುತ್ತವೆ. ಈ ದೇಶಭಕ್ತಿ ಎನ್ನುವುದು ಸಹ ಜನರನ್ನು ಭ್ರಮೆಯಲ್ಲಿಟ್ಟು ತಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಆಳುವ ಸರಕಾರಗಳು ಹೂಡುವ ತಂತ್ರಗಾರಿಕೆಯ ಭಾಗವೇ ಆಗಿದೆ. ದೇಶವಾಸಿಗಳಲ್ಲಿ ದೇಶಭಕ್ತಿಯ ಉನ್ಮಾದವನ್ನು ಬಡಿದೆಬ್ಬಿಸಲು ಬಾಹ್ಯಶತ್ರುಗಳ ಹೆಸರಲ್ಲಿ ಯುದ್ದೋನ್ಮಾದವನ್ನು ಬಡಿದೆಬ್ಬಿಸಲಾಗುತ್ತದೆ ಇಲ್ಲವೇ ಆಂತರಿಕ ಶತ್ರುಗಳ ಭಯವನ್ನು ಸೃಷ್ಟಿಸಿ ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸಲಾಗುತ್ತದೆ ಅಥವಾ ಕೋಮುಸಂಘರ್ಷವನ್ನು ಹುಟ್ಟುಹಾಕುವ ಹುನ್ನಾರಗಳನ್ನು ಮಾಡಲಾಗುತ್ತದೆ.


ಈಗ ಜನರೆಲ್ಲಾ ಮನರಂಜನಾ ಮಂದಿರಗಳಲ್ಲಿ ಜನಗಣಮನವನ್ನು ಹಾಡುವ ಮೂಲಕ ದೇಶಭಕ್ತಿಯನ್ನು ಸಾಬೀತುಪಡಿಸಲೇಬೇಕೆನ್ನುವ ಆದೇಶವನ್ನು ಸುಪ್ರಿಂ ಕೋರ್ಟ ಕೊಟ್ಟಿದೆ. ಮೊದಲೇ ಈ ಜನಗಣಮನ ಹಾಡಿನ ಬಗ್ಗೆಯೇ ಅಪಸ್ವರ ಕಳೆದ ನೂರು ವರ್ಷದಿಂದಲೂ ಇದೆ. ಸ್ವಾತಂತ್ರ್ಯ ಪೂರ್ವದಲ್ಲಿ ರವೀಂದ್ರನಾಥ ಠಾಕೂರರು ಬರೆದ ಭಾರತ ಅಧಿನಾಯಕ ಎನ್ನುವ ಹಾಡನ್ನು 1911 ಡಿಸೆಂಬರ್ 27ರಂದು ಬ್ರಿಟನ್ ದೊರೆ 5ನೇ ಕಿಂಗ್‌ಜಾರ್ಜ ಹಾಗೂ ರಾಣಿಯ ಸ್ವಾಗತಕ್ಕಾಗಿ ಮೊದಲ ಬಾರಿಗೆ ಹಾಡಲಾಯಿತು. ಸ್ವಾತಂತ್ರ್ಯದ ನಂತರ ಈ ಗೀತೆ ರಚಿಸಿದ್ದರೆ ಅದನ್ನು ದೇಶಭಕ್ತಿಯ ನೆಲೆಯಲ್ಲಿ ಸ್ವೀಕರಿಸಬಹುದಾಗಿತ್ತು. ಆದರೆ.. ಸ್ವಾತಂತ್ರ್ಯ ಪೂರ್ವದಲ್ಲಿ ಈ ದೇಶದ ಜನಗಣಮನದ ಅಧಿನಾಯಕರು ಬ್ರಿಟೀಷ್ ದೊರೆ-ರಾಣಿ ಎಂಬುದಂತೂ ಸುಳ್ಳಲ್ಲ. ಇನ್ನೂ ಸ್ವತಂತ್ರ ದೇಶವೇ ಆಗಿರದಿದ್ದ ಕಾಲದಲ್ಲಿ, ಭಾರತ ಇನ್ನೂ ಈಗಿರುವಂತೆ ಇಲ್ಲದಿರುವ ಸಂದರ್ಭದಲ್ಲಿ, ಇನ್ನೂ ಪಾಳೆ ಪಟ್ಟು ರಾಜರುಗಳು ಆಳುತ್ತಿದ್ದ ಪ್ರದೇಶಗಳು ಬೇಕಾದಷ್ಟು ಇರುವಂತಹ ವ್ಯವಸ್ಥೆಯಲ್ಲಿ ಜನಗಣಮನದ ಅಧಿನಾಯಕರು ಬ್ರಿಟೀಷ್ ಪ್ರಭುತ್ವ ಅಲ್ಲದೇ ಬೇರೆ ಯಾರಿರಲು ಸಾಧ್ಯ? ಅಧಿನಾಯಕ ಎನ್ನುವ ಶಬ್ದವೇ ಸರ್ವಾಧಿಕಾರವನ್ನು ಬೆಂಬಲಿಸುವಂತಿದೆ ಹಾಗೂ ಮೂಲದಲ್ಲಿ ಬೆಂಗಾಳಿ ಭಾಷೆಯಲ್ಲಿ ರಚಿತವಾದ ಈ ಹಾಡಿನಲ್ಲಿ ಸಂಸ್ಕೃತ ಶಬ್ದಗಳೇ ತುಂಬಿವೆ. ಜನಗಣಮನ ಕುರಿತು ವಾದವಿವಾದಗಳೇನೇ ಇದ್ದರೂ ಅದನ್ನು ಭಾರತೀಯರು ಒಪ್ಪಿಯಾಗಿದೆ. 1950 ಜನವರಿ 24ರಿಂದ ಜನಗಣಮನ ಗೀತೆ ಈ ದೇಶದ ಅಧೀಕೃತ ರಾಷ್ಟ್ರಗೀತೆಯೂ ಆಗಿದೆ. ಆದರೆ.. ನೀವು ನಿಜಕ್ಕೂ ದೇಶಪ್ರೇಮಿಯಾಗಿದ್ದರೆ ಸಿನೆಮಾ ಮಂದಿರಗಳಲ್ಲೂ ಈ ಗೀತೆಯನ್ನು ನುಡಿಸಿ ಗೌರವಿಸಲೇಬೇಕು ಎನ್ನುವಂತೆ ನ್ಯಾಯಾಲಯ ಹುಕುಂ ಹೊರಡಿಸುವುದರಲ್ಲಿ  ಯಾವ ಅರ್ಥವಿದೆ? ತನ್ನದೇ ದೇಶವಾಸಿಗಳ ದೇಶಪ್ರೇಮದಲ್ಲಿ ಸುಪ್ರಿಂ ಕೋರ್ಟಿಗೆ ನಂಬಿಕೆ ಇಲ್ಲದೇ ಹೋಯಿತೆ? ಹಾಗೇನಾದರೂ ಜನರಲ್ಲಿ ದೇಶಪ್ರೇಮ ಕಡಿಮೆಯಾಗಿದ್ದರೆ ಸಿನೆಮಾ ಹಾಲ್‌ಗಳಲ್ಲಿ ಜನಗಣಮನ ಹಾಡನ್ನು ಹಾಡುವುದರಿಂದ ದೇಶಪ್ರೇಮ ಹೆಚ್ಚಾದೀತೆ? ದೇಶಭಕ್ತಿಯನ್ನು ಕಾನೂನಿನ ಮೂಲಕ ಜನರಲ್ಲಿ ಮೂಡಿಸಬಹುದೇ? ರಾಜಾಜ್ಞೆ ಮಾಡುವ ಮೂಲಕ ಜನರನ್ನು ಹದ್ದುಬಸ್ತಿನಲ್ಲಿಡಬಹುದು ಆದರೆ.. ಜನರ ವಿಶ್ವಾಸವನ್ನು ಗಳಿಸಲು ಸಾಧ್ಯವೇ? ಎಂದು ತುಘಲಕ್ ನಾಟಕದಲ್ಲಿ ಬರುವ ಸಂಬಾಷಣೆ ಸುಪ್ರಿಂ ಕೋರ್ಟಿಗೆ ಅರಿವಾಗಿದ್ದರೆ ಚೆನ್ನಾಗಿತ್ತು.

ರಾಷ್ಟ್ರಗೀತೆಯನ್ನು ಹಾಡುವಾಗ ಎದ್ದು ನಿಲ್ಲಲೇಬೇಕೆಂಬ ಕಡ್ಡಾಯ ಕಾನೂನಾಗಲೀ ಆದೇಶವಾಗಿಲಿ ಇರಲಿಲ್ಲ. ಆದರೂ ಜನರು ತಮ್ಮ ದೇಶಕ್ಕೆ ಸಲ್ಲಿಸುವ ಗೌರವದ ಭಾಗವಾಗಿ ಸ್ವ ಇಚ್ಚೆಯಿಂದ ಕಳೆದ ಏಳು ದಶಕಗಳಿಂದ ಎದ್ದು ನಿಂತು ರಾಷ್ಟ್ರಗೀತೆಗೆ ಮರ್ಯಾದೆ ಕೊಡುತ್ತಲೇ ಬಂದಿದ್ದಾರೆ. ಸುಪ್ರೀಂ ಕೋರ್ಟ ಸಹ ರಾಷ್ಟ್ರಗೀತೆಯನ್ನು ಹಾಡುವಂತೆ ಯಾರನ್ನೂ ಒತ್ತಾಯಿಸುವ ಹಾಗಿಲ್ಲ ಎಂದೇ ತನ್ನ ತೀರ್ಪಿನಲ್ಲಿ ಸ್ಪಷ್ಟನೆ ಕೊಟ್ಟಿತ್ತು. ಒಮ್ಮೆ ಬಿಹಾರದ ಮುಖ್ಯಮಂತ್ರಿಯಾಗಿದ್ದ ಲಾಲೂ ಪ್ರಸಾದ್ ಯಾದವ್ ರಾಷ್ಟ್ರಗೀತೆ ನುಡಿಸುವ ಸಮಯದಲ್ಲಿ ಕುಳಿತಿದ್ದು ಭಾರೀ ವಾದವಿವಾದವನ್ನು ಹುಟ್ಟುಹಾಕಿತ್ತು.  ಕೂಗುಮಾರಿ ಮಾಧ್ಯಮಗಳು ಅದನ್ನೊಂದು ದೇಶದ ದುರಂತ ಎನ್ನುವ ಹಾಗೆ ಹುಯಿಲೆಬ್ಬಿಸಿದವು. ಅವರ ಮೇಲೆ ರಾಷ್ಟ್ರದ್ರೋಹದ ಕೇಸ್ ಕೂಡಾ ದಾಖಲಿಸಲಾಗಿತ್ತು.  ಆಗ ಲಾಲೂ ಎಲ್ಲಾ ಮಾಧ್ಯಮಗಳಿಗೂ ಸುಪ್ರೀಂ ಕೋರ್ಟಿನ ಆದೇಶದ ಪ್ರತಿಯನ್ನು ಕಳುಹಿಸಿಕೊಟ್ಟು ಮಂಗಳಾರತಿ ಮಾಡಿದ್ದರು. ತದನಂತರ ರಾಷ್ಟ್ರಗೀತೆಯನ್ನು ನುಡಿಸುವಾಗ ಅದನ್ನು ಕಡ್ಡಾಯವಾಗಿ ನಿಂತು ಹಾಡಲೇಬೇಕಿಲ್ಲ ಎಂದು ಹೇಳಿದ ಸುಪ್ರಿಂ ಕೋರ್ಟ  ದಾಖಲಾಗಿದ್ದ ಕೇಸನ್ನು ವಜಾಗೊಳಿಸಿತು. ಆದರೆ.. ಸರಕಾರಗಳು ಬದಲಾದ ಹಾಗೆ ಅದಕ್ಕೆ ಪೂರಕವಾಗಿ ತನ್ನ ರಾಗವನ್ನೂ ಬದಲಾಯಿಸುವ ಸುಪ್ರಿಂ ಕೋರ್ಟ ಈಗ ತನ್ನದೇ ಆದೇಶವನ್ನು ಒಂಚೂರು ಬದಲಾಯಿಸಿ ಸಿನೆಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ನುಡಿಸಲೇಬೇಕು ಹಾಗೂ ಪ್ರೇಕ್ಷಕರು ಎದ್ದು ಗೌರವ ಸೂಚಿಸಲೇಬೇಕೆಂದು ಆದೇಶಿಸಿದೆ. ಇದು ನಿಜಕ್ಕೂ ದೇಶಪ್ರೇಮದ ಹೆಸರಲ್ಲಿ ಜನರ ಮೇಲೆ ಕಾನೂನು ನಡೆಸುವ ದಬ್ಬಾಳಿಕೆಯಾಗಿದೆ.ಇಷ್ಟಕ್ಕೂ ಸಿನೆಮಾ ಮಂದಿರಗಳಲ್ಲಿ ಜನಗಣಮನ ನುಡಿಸಿದಾಕ್ಷಣ ದೇಶಪ್ರೇಮ ಹುಟ್ಟುತ್ತದೆ ಎನ್ನುವುದು ಸತ್ಯವಲ್ಲ. ದೂಮಪಾನ ಮಧ್ಯಪಾನಗಳಿಂದಾಗುವ ಅಪಾಯಗಳ ಬಗ್ಗೆ ಎಂತೆಂಥಾ ಭಯಾನಕ ಕ್ಲಿಪ್ಪಿಂಗಗಳನ್ನು ಸಿನೆಮಾ ಮಂದಿರಗಳ ಪ್ರತಿಯೊಂದು ಪ್ರದರ್ಶನಗಳಿಗಿಂತ ಮುಂಚೆ ತೋರಿಸಲಾಗುತ್ತಿದೆ. ಅದನ್ನು ನೋಡಿ ಧೂಮಪಾನ ಮದ್ಯಪಾನ ತ್ಯಜಿಸಿದವರು ಎಲ್ಲಿದ್ದಾರೆ? ಇದರರ್ಥ ಇಷ್ಟೇ.. ಜನರು ಏನನ್ನಾದರೂ ಬಿಡಬೇಕಾದರೆ ಇಲ್ಲವೇ ರೂಢಿಸಿಕೊಳ್ಳಬೇಕಾದರೆ ಆ ಬದಲಾವಣೆ ಅವರ ಒಳಗಿನಿಂದ ಬರಬೇಕೆ ಹೊರತು ಕಡ್ಡಾಯ ಕಾನೂನುಗಳಿಂದಲ್ಲಾ.

1960 ರಲ್ಲಿಯೇ ಸುಪ್ರಿಂ ಕೋರ್ಟ ಸಿನೆಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ನುಡಿಸಲು ಸೂಚಿಸಿತ್ತೇ ಹೊರತು ಕಡ್ಡಾಯಗೊಳಿಸಿರಲಿಲ್ಲ. ಆ ನಂತರ ಅತ್ತ ಯಾರೂ ಗಮನ ಕೊಡಲಿಲ್ಲ. 1990ರಲ್ಲಿ ಮತ್ತೆ ಜಾರಿಗೆ ಬಂತಾದರೂ ಬಹಳ ದಿನ ಅದು ನುಡಿಯಲಿಲ್ಲ. 2003 ರಲ್ಲಿ ಮಹಾರಾಷ್ಟ್ರ ಸರಕಾರ ಸಿನೆಮಾ ಪ್ರದರ್ಶನ ಪೂರ್ವ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಿತು. ಆದರೆ... ಸಿನೆಮಾ ಮಂದಿರ ಅಷ್ಟೇ ಅಲ್ಲಾ.. ಎಲ್ಲಿಯೇ ಆಗಲಿ ರಾಷ್ಟ್ರೀಗೀತೆ ನುಡಿದರೆ ಅಲ್ಲಿ ಜನರು  ಎದ್ದು ಗೌರವವನ್ನು ಸೂಚಿಸುತ್ತಲೇ ಬಂದಿದ್ದಾರೆ.  ಅಕಸ್ಮಾತ್ ಸೂಚಿಸದೇ ಇದ್ದರೂ ಅಂತವರಲ್ಲಿ ದೇಶಪ್ರೇಮ ಇಲ್ಲ ಎಂದು ಆರೋಪಿಸುವುದು ಅವಿವೇಕತನದ ಪರಮಾವಧಿಯಾಗಿದೆ. ರಾಷ್ಟ್ರಗೀತೆಗೆ ಗೌರವಿಸುವುದು ಸ್ವಯಂ ಪ್ರೇರಣೆಯಿಂದಾ ನಡೆಯುವ ವಿದ್ಯಮಾನ. ಅದಕ್ಕೆ ಯಾರ ಅಪ್ಪಣೆ ಆದೇಶಗಳೂ ಅಗತ್ಯವಿಲ್ಲ. ಆದರೆ ಅದನ್ನು ಕಡ್ಡಾಯಗೊಳಿಸುವ ಅಗತ್ಯವೇ ಇರಲಿಲ್ಲ. ಜನರಲ್ಲಿ ದೇಶಭಕ್ತಿಯ ಉನ್ಮಾದ ಹೆಚ್ಚಿಸುವ ಭಾಗವಾಗಿ ಈ ಆದೇಶ ಹೊರಬಿದ್ದಂತಿದೆ. ಈ ದೇಶದ ಜನರಲ್ಲಿರುವ ದೇಶಭಕ್ತಿಯನ್ನು ಸಂದೇಹದಿಂದ ನೋಡುವ ಕೆಲಸ ಇದಾಗಿದೆ. ರಾಷ್ಟ್ರಗೀತೆ ನುಡಿಯುವುದಾಗಲಿ, ಹಾಡುವುದಾಗಲಿ, ಎದ್ದು ನಿಂತು ಗೌರವಿಸುವುದಾಗಲಿ ಒಬ್ಬ ವ್ಯಕ್ತಿಯ ದೇಶಭಕ್ತಿಯನ್ನು ಅಳೆಯುವ ಸಾಧನವೂ ಅಲ್ಲಾ.. ದೇಶದ್ರೋಹಿ ಎಂದು ವಿರೋಧಿಸುವ ಮಾನದಂಡವೂ ಅಲ್ಲಾ..

ಎಲ್ಲರೂ ಒಪ್ಪಿಕೊಂಡ ರಾಷ್ಟ್ರಗೀತೆ ಜನಗಣಮನವನ್ನು ತೀವ್ರವಾಗಿ ವಿರೋಧಿಸುವವರು ಯಾರಾದರೂ ಈ ದೇಶದಲ್ಲಿ ಇದ್ದರೆ ಅದು ಸಂಘಪರಿವಾರದವರು. ರಾಷ್ಟ್ರಗೀತೆಯನ್ನು ಗೌರವಿಸದವರು ದೇಶದ್ರೋಹಿಗಳು ಎನ್ನುವುದಾದರೆ ಮೊಟ್ಟಮೊದಲ ದೇಶದ್ರೋಹಿಗಳ ಪಟ್ಟಿಯಲ್ಲಿ ಸಂಘಪರಿವಾರದ ಅಧಿನಾಯಕರ ಹೆಸರುಗಳಿರುತ್ತವೆ. ಮೊದಲಿನಂದಲೂ ಜನಗಣಮನವನ್ನು ರಾಷ್ಟ್ರಗೀತೆಯಾಗಿ ಒಪ್ಪದಿರುವ ಸಂಘಿಗಳ ಅಧಿನಾಯಕ ಮೋಹನ್ ಭಾಗವತ್ ಎಂಟು ತಿಂಗಳ ಹಿಂದೆ ನಿಜವಾದ ರಾಷ್ಟ್ರಗೀತೆ ವಂದೇಮಾತರಂ.. ಜನಗಣಮನ ಅಲ್ಲಾ ಎಂದು ಬಹಿರಂಗವಾಗಿಯೇ ಘೋಷಿಸಿದ್ದರು. ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಭಯ್ನಾಜಿ ಜ್ಯೋಷಿ ಸಹ ಭಾಗವತ್ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಬಂಕಿಮ್ ಚಂದ್ರ ಚಟ್ಟೋಪಾದ್ಯಾಯರು ರಚಿಸಿದ ವಂದೇಮಾತರಂ ಗೀತೆಯನ್ನು ರಾಷ್ಟ್ರಗೀತೆಯನ್ನಾಗಿ ಮಾಡಬೇಕು ಎನ್ನುವುದು ಸಂಘಪರಿವಾರದ ಓಪನ್ ಅಜೆಂಡಾ ಆಗಿದೆ. ಅದಕ್ಕಾಗಿಯೇ ಈವರೆಗೂ ಆರೆಸ್ಸೆಸ್ ಮುಖ್ಯ ಕಛೇರಿಯಲ್ಲಿ ರಾಷ್ಟ್ರದ್ವಜಾರೋಹನ ಮಾಡುವುದಿಲ್ಲ ಹಾಗೂ ರಾಷ್ಟ್ರಗೀತೆಯನ್ನು ಹಾಡಲಾಗುವುದಿಲ್ಲ. ಹಾಗಾದರೆ ಈಗ ಹೇಳಿ ರಾಷ್ಟ್ರದ್ರೋಹಿಗಳು ಯಾರು ಎಂದು? ಜನಗಣಮನವನ್ನು ಶತಾಯಗತಾಯ ವಿರೋಧಿಸುವ ಹಿಂದುತ್ವವಾದಿಗಳೇ ದೇಶದ ಚುಕ್ಕಣಿ ಹಿಡಿದಿರುವ ಪ್ರಸ್ತುತ ಸಂದರ್ಭದಲ್ಲಿ ಜನರಲ್ಲಿ ದೇಶಭಕ್ತಿಯ ಉನ್ಮಾದವನ್ನು ಹಬ್ಬಿಸಲು ರಾಷ್ಟ್ರಗೀತೆಯನ್ನು ಒಂದು ಭಾವನಾತ್ಮಕ ಪರಿಕರವಾಗಿ ಬಳಸುತ್ತಿರುವುದೂ ಸಹ ಸಂಘಪರಿವಾರದ ಹಿಡನ್ ಅಜೆಂಡಾದ ಭಾಗವಾಗಿದೆ. ಹೀಗಾಗಿ ಜನಗಣಮನ ಜನರ ಮನದ ಭಾವನೆಯಾಗಿ ಉಳಿಯಲಿ. ಕಡ್ಡಾಯವೆನ್ನುವ ಅನಗತ್ಯ ಹೇರಿಕೆ ದೂರಾಗಲಿ. ಅಸಮಾನತೆ ಅಳಿದು ದೇಶವಾಸಿಗಳೆಲ್ಲಾ ತಮ್ಮ ದೇಶವನ್ನು ಪ್ರೀತಿಸಿ ಗೌರವಿಸುವಂತಹ ವಾತಾವರಣ ದೇಶಾದ್ಯಂತ ನಿರ್ಮಾಣವಾಗಲಿ ಎಂಬುದೇ ನಿಜವಾದ ದೇಶಭಕ್ತರ ಆಶಯವಾಗಿದೆ.

-ಶಶಿಕಾಂತ ಯಡಹಳ್ಳಿ