ಸೋಮವಾರ, ಮಾರ್ಚ್ 13, 2017

ತಹ ತಹ ... 77 ಶಾಯರಿ ಕವಿ ಇಟಗಿ ಈರಣ್ಣ ಮರಳಿ ಬಾರದ ಲೋಕಕ್ಕೆ ಹೋದರಣ್ಣಾ...




ಚೆಂದಕ್ಕಿಂತ ಚೆಂದ ನೀನೆ ಸುಂದರ ನಿನ್ನ ನೋಡ ಬಂದ ಬಾನ ಚಂದಿರ.. ಎನ್ನುವ ಗಜಲ್ ಮಾದರಿಯ ಸ್ಪರ್ಶ ಸಿನೆಮಾ ಹಾಡನ್ನು ಕೇಳಿ ಖುಷಿಪಟ್ಟವರು ಅಸಂಖ್ಯಾತರು. ಈ ಹಾಡು ಬರೆದ ಕವಿ ಪ್ರೊ.ಇಟಗಿ ಈರಣ್ಣ ಮಾರ್ಚ 12ರಂದು ಚೆಂದದ ಲೋಕ ಬಿಟ್ಟು ಮರಳಿ ಬಾರದ ಲೋಕಕ್ಕೆ ಹೊರಟುಬಿಟ್ಟರು. ಉರ್ದು ಹಾಗೂ ಹಿಂದಿಯಲ್ಲಿ ಪ್ರಸಿದ್ದಿಯಾದ ಶಾಯರಿ (ಗಜ್ಹಲ್) ಪ್ರಕಾರವನ್ನು ಕನ್ನಡ ಭಾಷೆಯಲ್ಲಿ ರೂಢಿಸಿಕೊಂಡು ಸಾವಿರಕ್ಕೂ ಹೆಚ್ಚು ಕನ್ನಡ ಶಾಯರಿಗಳನ್ನು ಬರೆದ ಈರಣ್ಣ ಕನ್ನಡ ಕಾವ್ಯ ಲೋಕಕ್ಕೆ ಕೊಟ್ಟ ಕೊಡುಗೆ ಬಲು ವಿಶಿಷ್ಟವಾದದ್ದು. ಅವರ ಕನ್ನಡದ ಶಾಯರಿಗಳು ಕವಿತೆ ಸಂಗ್ರಹದ ಪುಸ್ತಕ ಹದಿನೈದಕ್ಕೂ ಹೆಚ್ಚು ಮರುಮುದ್ರಣಗಳನ್ನು ಕಂಡಿದೆ. ಉರ್ದು ಮತ್ತು ಪರ್ಷಿಯನ್ ಭಾಷೆಯನ್ನೂ ಬಲ್ಲವರಾಗಿದ್ದ ಪ್ರೊ.ಈರಣ್ಣ ಆ ಭಾಷೆಗಳ ಕೆಲವಾರು ಗಜ್ಹಲ್‌ಗಳನ್ನು ಕನ್ನಡಕ್ಕೆ ಅನುವಾದಿಸಿ ಕನ್ನಡ ಕಾವ್ಯಾಸಕ್ತರಿಗೆ ಶಾಯರಿ ಪ್ರಕಾರವನ್ನು ಪರಿಚಯಿಸಿದ್ದರು.

ಒಂದೇ ಒಂದು ಸಲ ಅವರನ್ನು ಮಾತಾಡಿಸಿದರೆ ಸಾಕಿತ್ತು.. ಅವರು ಅಪರಿಚಿತರಾಗಿದ್ದರೂ ಸಹ ಜನುಮ ಜನುಮದ ಸಂಬಂಧಿಕರೇನೋ ಎನ್ನುವಂತೆ.. ಹಲವಾರು ವರ್ಷಗಳ ಆತ್ಮೀಯ ಪರಿಚಯವಿದೆಯೇನೋ ಎನ್ನುವಂತೆ ಆತ್ಮೀಯತೆಯಿಂದ ಮಾತಾಡಿಸುತ್ತಿದ್ದ ಅಂತಃಕರಣದ ಕವಿ ಈರಣ್ಣನವರ ನೆನಪು ಅವರ ಆತ್ಮೀಯ ಬಳಗವನ್ನು ಬಹುಕಾಲ ಕಾಡುವುದಂತೂ ಸತ್ಯ. ಚೆಂದಕ್ಕಿಂತಾ ಚೆಂದದ ವ್ಯಕ್ತಿತ್ವ ಹೊಂದಿದ್ದ ಈರಣ್ಣನವರ ಮಾನವೀಯ ಪ್ರೀತಿ ಹಾಗೂ ಅದರ ರೀತಿಯನ್ನು ಅನುಭವಿಸಿದವರು ಎಂದೂ ಮರೆಯಲಾರರು. ಅವರ ಬಹುತೇಕ ಕನ್ನಡ ಶಾಯರಿಗಳಲ್ಲಿ ಸಹ ಗಂಡು ಹೆಣ್ಣಿನ ನಡುವಿನ ಆತ್ಮೀಯ ಕ್ಷಣಗಳೇ ಅಕ್ಷರಗಳಾಗಿವೆ. ಸಂಬಂಧಗಳ ಚೌಕಟ್ಟಿನೊಳಗೇ ತಮ್ಮ ಶಾಯರಿ ಕೃಷಿಯನ್ನು ನಿರಂತರವಾಗಿ ಮಾಡಿದವರು ಈರಣ್ಣ.


ಅವರ ಮಾನವೀಯ ಅಂತಃಕರಣಕ್ಕೆ ಸಾಕ್ಷಿಯಾಗಿದ್ದು ಅವರು ಹೆತ್ತವ್ವನ ಮೇಲಿಟ್ಟಿದ್ದ ಅಪಾರ ಪ್ರೀತಿ. ಅತ್ಯಂತ ಕಡುಬಡತನದಲ್ಲಿ ಅವರಿವರ ಮನೆ ಕೆಲಸ ಮಾಡಿ ಮಗನನ್ನು ಕಷ್ಟಪಟ್ಟು ಓದಿಸಿ ಬೆಳೆಸಿದ ಅವ್ವ ಕೊಟ್ರಮ್ಮನ ಮೇಲೆ ಈರಣ್ಣನವರಿಗೆ ಅಪಾರವಾದ ಗೌರವಾಭಿಮಾನ. ಕೊನೆಯವರೆಗೂ ತಾವೇ ಹಾಸಿಗೆ ಹಿಡಿದ ತಾಯಿಯ ಸೇವೆಯನ್ನು ಈರಣ್ಣನವರು ಮಾಡುತ್ತಿದ್ದರು. 87 ವರ್ಷದ ಕೊಟ್ರಮ್ಮನವರು ಮಾರ್ಚ 8 ರಂದು ವಯೋಸಹಜ ಅನಾರೋಗ್ಯದಿಂದ ತೀರಿಕೊಂಡರು. ಇದರಿಂದ ತೀವ್ರ ತಳಮಳಗೊಂಡ ಈರಣ್ಣನವರನ್ನು ತಾಯಿಯ ಅಗಲಿಕೆ ಕಂಗೆಡಿಸಿತು. ಉಕ್ಕಿ ಬರುತ್ತಿದ್ದ ದುಃSವನ್ನು ಹತ್ತಿಕ್ಕಿಕೊಂಡು ಅವ್ವನ ಅಂತ್ಯಕ್ರಿಯೆ ಮುಗಿಸಿದ ನಂತರ 5ನೇ ದಿನ ಶಿವಗಣಾರಾಧನೆ ಮುಗಿಸಿ ತಮ್ಮ ಕರ್ತವ್ಯವನ್ನು ಮಾಡಿದ ಕೂಡಲೇ ಎದೆ ಹಿಡಿದುಕೊಂಡು ಕುಸಿದು ಕುಳಿತ ಈರಣ್ಣ ಮತ್ತೆ ಮೇಲಕ್ಕೇಳಲೇ ಇಲ್ಲಾ. ಹೃದಯವಂತನ ಹೃದಯ ಸ್ಥಬ್ದವಾಗಿತ್ತು. ಅವ್ವನ ಜಾಡನ್ನು ಹಿಡಿದು ಮಗ ಮರಳಿ ಬಾರದ ಊರಿಗೆ ಪಯಣಿಸಿದ್ದರು. ಉಸಿರು ಉಸಿರಿಗೊಮ್ಮೆ ನಿನ್ನ ಹೆಸರು ತಗೋತೇನಿ. ಉಸಿರು ಉಸಿರಿಗೊಮ್ಮೆ ನಿನ್ನ ಹೆಸರು ಬಿಡತೇನಿ. ಈ ಉಸಿರಿರೋ ತನಕ ಅದರಾಗ ನಿನ್ನ ಹೆಸರಿರಲಿ. ನಿನ್ನ ಹೆಸರಿನ್ಯಾಗ ಒಂದಿನಾ ನನ್ನೀ ಉಸರು ಹೋಗಲಿ.. ಎಂದು ಶಾಯರಿ ಬರೆದ ಈರಣ್ಣನವರ ಮನದಲ್ಲಿ ತಾಯಿಯ ಹೆಸರೇ ಇತ್ತಾ? ಉಸಿರು ಕೊಟ್ಟ ಅವ್ವ ಕೊನೆಯುಸಿರೆಳೆದಾಗ ಮಗನ ಉಸಿರೂ ಎದುಸಿರು ಬಿಡುತ್ತಾ ಉಸಿರು ನಿಂತೇ ಹೋಯಿತಾ...?

ಇಟಗಿ ಈರಣ್ಣನವರು ಹುಟ್ಟಿಬೆಳೆದಿದ್ದು ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿಯಲ್ಲಿ. ಬಿಸಿಲೂರಿನಲ್ಲೂ ತಂಗಾಳಿಯಂತಹ ಶಾಯರಿಗಳನ್ನು ಬರೆದ ಈರಣ್ಣನವರು ಹರಪನಹಳ್ಳಿ, ಕೊಟ್ಟೂರುಗಳಲ್ಲಿ ವಿದ್ಯಾಬ್ಯಾಸ ಮುಗಿಸಿದ ನಂತರ ಬಳ್ಳಾರಿಯ ವೀರಶ್ಯವ ವಿದ್ಯಾವರ್ಧಕ ಕಾಲೇಜಿನಲ್ಲಿ ಮೇಷ್ಟ್ರಗಿರಿ ಆರಂಭಿಸಿದ್ದರು. ತದನಂತರವೂ ಸಹ ಹೂವಿನಹಡಗಲಿಯ ಜಿಬಿಆರ್ ಕಾಲೇಜ್ ಮತ್ತು ವಿಜಯನಗರ ಕಾಲೇಜುಗಳಲ್ಲಿ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿದರು. ಏಳು ವರ್ಷಗಳ ಹಿಂದೆ ನಿವೃತ್ತರಾದ ನಂತರ ಶಿವಮೊಗ್ಗಕ್ಕೆ ಬಂದು ತಾಯಿ, ಹೆಂಡತಿ ಹಾಗೂ ಮಕ್ಕಳ ಜೊತೆಗೆ ನೆಮ್ಮದಿಯ ವಿಶ್ರಾಂತ ಜೀವನ ನಡೆಸುತ್ತಿದ್ದರು. ಕೊನೆಗೂ ಬಯಲುನಾಡು ಬಳ್ಳಾರಿಯ ಈ ಪ್ರತಿಭೆ ಮಲೆನಾಡು ಶಿವಮೊಗ್ಗದ ಪಂಚಭೂತಗಳಲ್ಲಿ ಐಕ್ಯವಾಯಿತು.

ಪ್ರೊ.ಇಟಗಿ ಈರಣ್ಣನವರು ರಂಗಭೂಮಿಗೆ ಕೊಟ್ಟ ಕೊಡುಗೆಗಳನ್ನು ಮರೆಯುವಂತಿಲ್ಲ. ನಾನು ನೀನು ರಾಜಿ ಏನ್ ಮಾಡ್ತಾನ್ ಖಾಜಿ, ರಾವಿ ನದಿಯ ದಂಡೆ, ತಾಜ್ ಮಹಲ್ ಟೆಂಡರ್, ಯಹೂದಿ ಹುಡುಗಿ.. ಹೀಗೆ ಬೇರೆ ಭಾಷೆಯ ಕೆಲವು ಪ್ರಸಿದ್ದ ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡಿ ನಾಟಕಗಳ ಕೊರತೆಯನ್ನು ಅನುಭವಿಸುತ್ತಿದ್ದ ಕನ್ನಡ ರಂಗಭೂಮಿಗೆ ಅಗತ್ಯ ಕೊಡುಗೆ ನೀಡಿದ್ದರು. ಇಡೀ ಆಳುವ ವ್ಯವಸ್ಥೆಯನ್ನು ಅಣಕಿಸುವಂತಹ ತಾಜ್‌ಮಹಲ್ ಟೆಂಡರ್ ನಾಟಕವಂತೂ ಮರೆಯಲು ಸಾಧ್ಯವಿಲ್ಲ. ಕೋಮು ಸಾಮರಸ್ಯವನ್ನು ಸಾರುವ ಯಹೂದಿ ಹುಡುಗಿ.. ಎನ್ನುವ ಅಪರೂಪದ ನಾಟಕವನ್ನು ರೂಪಾಂತರ ರಂಗತಂಡಕ್ಕೆ ವಿಶೇಷ ಆಸಕ್ತಿಯಿಂದಾ ಅನುವಾದಿಸಿಕೊಟ್ಟಿದ್ದರು ಹಾಗೂ ಕೆಎಸ್‌ಡಿಎಲ್ ಚಂದ್ರುರವರ ನಿರ್ದೇಶನದಲ್ಲಿ ಈ ನಾಟಕ ಯಶಸ್ವಿಯಾಗಿ ಹಲವಾರು ಪ್ರದರ್ಶನಗಳನ್ನು ಕಂಡಿತ್ತು. ಈರಣ್ಣನವರು ಶಾಯರಿಗಳ ಸಂಕಲನವನ್ನು ರೂಪಾಂತರ ತಂಡವೇ ಪ್ರಕಟಿಸಿತ್ತು.  ಈರಣ್ಣನವರು ಕಬೀರ್‌ದಾಸರ ದೋಹೆಗಳು ಹಾಗೂ ಹರಿವಂಶರಾಯ್ ಬಚ್ಚನ್ ರವರ ಮಧುಶಾಲಾ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಜೊತೆಗೆ ಈಶನ ವಚನಗಳು ಹಾಗೂ ಬಸವಣ್ಣನವರ ವಚನಗಳ ಸಂಗ್ರಹ ಕೃತಿಗಳೂ ಮಹತ್ತರವಾದದ್ದು. ಇವರ ನಾಟಕಗಳು ಹಾಗೂ ಕವಿತೆಗಳು ಕೆಲವು ವಿಶ್ವವಿದ್ಯಾಲಯಗಳಿಗೆ ಪಠ್ಯವಾಗಿ ಬೋಧನೆಗೊಳ್ಳುತ್ತಿವೆ. 2010ರಲ್ಲಿ ನಡೆದ 14ನೇ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪ್ರೊ.ಈರಣ್ಣನವರು ಗೌರವಿಸಲ್ಪಟ್ಟಿದ್ದರು.

 ಉಸಿರು ನಿಲ್ಲುವ ಮುನ್ನ ಹೆಸರು ನಿಲ್ಲುವ ಕೆಲಸ ಮಾಡಬೇಕು.. ಎಂದು ಶಾಯರಿ ಬರೆದ ಈ ಶಾಯರಿ ಕವಿ ನಿಜಕ್ಕೂ ಹೆಸರು ನಿಲ್ಲುವಂತಹ ಕೊಡುಗೆಗಳನ್ನು ತಮ್ಮ ಗಜ್ಹಲ್‌ಗಳ ಮೂಲಕ ಹಾಗೂ ನಾಟಕಗಳ ಮೂಲಕ ಕೊಟ್ಟಿದ್ದು ಕನ್ನಡ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಲೋಕ ಬಹುಕಾಲ ನೆನಪಿಸಿಕೊಳ್ಳದೇ ಇರದು. ಪ್ರೊ.ಇಟಗಿ ಈರಣ್ಣ ತಮ್ಮ ಕವಿತೆಗಳು, ಶಾಯರಿಗಳು ಹಾಗೂ  ನಾಟಕಗಳ ಮೂಲಕ ಸದಾಕಾಲ ನಮ್ಮೊಂದಿಗೆ ಜೀವಂತವಾಗಿಯೇ ಇರುತ್ತಾರೆನ್ನುವ ಸಂಗತಿಯೇ ಅವರ ಅಗಲಿಕೆಯ ನೋವನ್ನು ಮರೆಸುವಂತಹುದು. ಸಾರ್ಥಕ ಬದುಕನ್ನು ಬದುಕಿದ ಈರಣ್ಣನವರಿಗೆ ರಂಗನಮನಗಳು.

  ಕನ್ನಡದೊಳಗ ಶಾಯಿರಿನಂತೂ ಯಾರೂ ಬರೆದಿಲ್ಲ ಇವತ್ತಿನ ತನಕ
  ನನಗಂತೂ ಬರೀಬೇಕನಸತೈತಿ ಸಾಯೋತನಕ.. 

ಎಂದು ಶಾಯರಿ ಬಗ್ಗೆಯೇ ಈರಣ್ಣನವರು ಕನ್ನಡದಲ್ಲಿ ಶಾಯರಿ ಬರೆದಿದ್ದರು. ಹಾಗೂ ತಾವು ಬರೆದುಕೊಂಡಂತೆಯೇ ಕೊನೆವರೆಗೂ ಶಾಯರಿಗಳನ್ನು ಬರೆಯುತ್ತಲೇ ಬದುಕಿದ್ದರು.  ಈರಣ್ಣನವರು ಕೊನೆಯಾಸೆ ಎನ್ನುವ ಶಾಯರಿಯಲ್ಲಿ ಸುಡುಗಾಡ ತನಕ ಬಂದು ಕಳಿಸಿ ಬಿಡು ನೀ ನನ್ನ. ಅತ್ತಾಗಿಂದ ನಾ ಒಬ್ನ ಹೊಕ್ಕೇನಿ. ಮಣ್ಣಾಗ ಮುಚ್ಚಿ ನನ್ನ ಮಣ್ಣು ಮಾಡಿ ಹೋಗು ನೀನು. ನಿನ್ನ ನೆನಪು ನನ್ನ ಎದಿಯಾಗಿಟಗೊಂಡು ನಾ ಸುಮ್ಮ ಹೊಕ್ಕೇನಿ... ಎಂದು ಬರೆದಿದ್ದಾರೆ. ಈಗ ಅವರು ಮಣ್ಣಲ್ಲಿ ಮಣ್ಣಾಗಿದ್ದಾರೆ. ಅದೆಷ್ಟು ಜನ ಸುಡುಗಾಡ ತನಕ ಬಂದು ಕಳಿಸಿ ಹೋದರು.. ಆದರೆ.. ಈರಣ್ಣನವರು ಎಲ್ಲರ ನೆನಪು ಎದೆಯಾಗಿಟಗೊಂಡು ಹೋದರೋ ಇಲ್ಲವೋ ಗೊತ್ತಿಲ್ಲಾ.. ಆದರೆ ಈರಣ್ಣನವರ ನೆನಪನ್ನು ಮಾತ್ರ ಕಳಿಸಲು ಹೋದವರು ತಮ್ಮ ಎದಿಯಾಗಿಟಗೊಂಡು ಮರಳಿ ಬಂದ್ರು. ಇನ್ನೂ ಸಾಧ್ಯ ಇದ್ರ ಕೊನೆಗಳಿಗೆಯಲ್ಲಿ ಒಂದು ಶಾಯರಿ ಮೂಲಕ ಹೇಳಿ ಬಿಡ್ತಿದ್ದರೋ ಏನೋ.. ಆದರೆ ಸತ್ತ ನಂತರ ಹೇಳಲಾಗದ ಅನಿವಾರ್ಯತೆಯನ್ನು ಮೊದಲೇ ಊಹಿಸಿ ಬರೆದ ಶಾಯರಿ ಹೀಗಿದೆ.. ಸಾಯೋತನಕ ಜೀವನಾಂದ್ರ ಏನು ಅಂತ ಯಾರಿಗೂ ಹೇಳಾಕ ಬರಾಂಗಿಲ್ಲಾ...! ಸತ್ತ ಮ್ಯಾಲೆ ಹೇಳಬೇಕಂದ್ರ ಹೇಳಾಕ ಬಾಯಿ ಇರಾಂಗಿಲ್ಲಾ..!!.  ಸಾವು ಹಾಗೂ ಬದುಕಿನ ಬಗ್ಗೆ ಅವರು ಬರೆದ ಶಾಯರಿ ತುಂಬಾನೇ ಸೊಗಸಾಗಿದೆ..ಸಾವನ್ನೂದು ನಮಗ ಗೊತ್ತಿದ್ದೂ ಬೀಳೋ ಏಟು.. ನಾ ಅದ್ಕ ಅಷ್ಟು ಹೆದರಾಂಗಿಲ್ಲಾ!  ಜೀವನ ಅನ್ನೋದು ನಮಗ ಗೊತ್ತಿಲ್ದ ಬಿದ್ದ ಏಟು ನಾ ಇದ್ಕ ಬಾಳಾ ಹೆದರತೇನಿ... ಹೀಗೆ ಸಾವಿಗೂ ಹೆದರದ ಈರಣ್ಣ ಬದುಕಿನಲ್ಲಿ ಹೆದರುತ್ತಾ ನೊಂದು ಬೆಂದು ಅನುಭವಗಳಿಂದಾ ಗಟ್ಟಿಗೊಳ್ಳುತ್ತಾ ಬೆಳೆದಿದ್ದು ಸೋಜಿಗದ ಸಂಗತಿ. ಸಾವಿನ ಬಗ್ಗೆ ಈರಣ್ಣ ಬೇಕಾದಷ್ಟು ಶಾಯರಿಗಳನ್ನು ಬರೆದಿದ್ದಾರೆ. ಅದರಲ್ಲಿ ಒಂದು ಹೀಗಿದೆ.. ತಮ್ಮಾ ನಿನ್ನ ಜೀವನಾ ಅನ್ನೋದು ನಿನ್ನ ಸಾವಿನ ಆಸ್ತಿ ಐತಿ. ತನ್ನ ಆಸ್ತೀನ ಅದು ತಾನು ಯಾವಾಗ ಬೇಕಾದರೂ ತಗೊಂತೈತಿ..!!. ಈರಣ್ಣ ಸಾವಿಗಿಂತಲೂ ಜೀವನಕ್ಕೆ ಹೆಚ್ಚು ದಿಗಿಲುಗೊಂಡಿದ್ದು ಅವರ ಶಾಯರಿಗಳಲ್ಲಿ ಗೊತ್ತಾಗುತ್ತದೆ. ಅದು ಹೇಗೆಂದರೆ.. ಸಾವನ್ನೋದು ವೈರಿಯಲ್ಲಾ ನನಗ ಅದು ಎದುರಿಗೆ ಬಂದು ಗುಂಡು ಹೊಡೀತೈತಿ..! ಜೀವನ ಅನ್ನೋದು ಗೆಳೆಯಾ ಅಲ್ಲ ನನಗ ಅದು ಹಿಂದಿನಿಂದ ಬಂದು ಚೂರಿ ಹಾಕತೈತಿ...

ಬದುಕು ಸಾವು ಪ್ರೀತಿ ವಿರಹ ಹೀಗೆ ಹಲವಾರು ವಿಷಯಗಳ ಬಗ್ಗೆ ಈರಣ್ಣ ಶಾಯರಿ ಬರೆದಿದ್ದಾರೆ. ಪ್ರೊ. ಇಟಗಿ  ಈರಣ್ಣನವರ ಕೆಲವು ಕನ್ನಡ ಶಾಯರಿಗಳು ಹೀಗಿವೆ..

ಈ ಕತ್ತಲ ರಾತ್ರಿ
ನಿನ್ನ ದಾರಿ ಕಾದೂ ಕಾದೂ
ನನ್ನೆದಿ ಒಂದ ಅಳತಿ
ಸುಡಾಕ್ ಹತ್ತೇತಿ !!
ಕತ್ತಲಾಗೇತಂದ
ಹೆದರಿ ಕುಂದರಬ್ಯಾಡ
ನನ್ನ ಸುಡೂ ಎದಿ
ನಿನ್ನ ದರ‍್ಯಾಗ ಬೆಳಕು ಚೆಲ್ಲೇತಿ. .!

*        *        *        *        *

ನನಗನಸತೈತಿ
ಈ ಹರಿಯೂ ಬೆಳದಿಂಗಳಾ
ಹೆಪ್ಪಾಗಿ ನಿನ್ ಮೈ ಆಗಿರಬೇಕು
ಇಲ್ಲಾಂದ್ರ ನನ್ನ ಬಿಸಿ
ನಿನ್ನ ಮೈಗೆ ತಾಗಿ
ಅದು ಕರಗಿ ಈ
ಬೆಳದಿಂಗಳಾಗಿ ಹರಡಿರಬೇಕು..

*        *        *        *        *

ಕಡಿಮಿ ಸಾಮಾನಿದ್ರ ರೇಲ್ವೇ ಪ್ರಯಾಣಾ
ಭಾಳ ಚೆಂದ ಇರತೈತಿ..!
ಕಡಿಮೆ ಆಸೆ ಇದ್ರ ಬಾಳ ಪ್ರಯಾಣಾನೂ
ಭಾಳ ಚೆಂದ ಇರತೈತಿ..!!

*        *        *        *        *

ಹೊಳಿ ದಾಟಿ ಹೋಗಬೇಕನ್ನಂಗಿದ್ರ
ಡೋಣೀ ಒಳಗ ತೂತು ಇರಬಾರದು..!
ಜೀವನಾನೂ ಜಯಿಸಬೇಕನ್ನಂಗಿದ್ರ
ಸಂಸಾರದಾಗ ಸಂಶೆ ಇರಬಾರದು..!!

                  - ಶಶಿಕಾಂತ ಯಡಹಳ್ಳಿ









  


ತಹ ತಹ.. 76 ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಸಂಘಿಗಳ ದಮನ :



ಯೋಗೇಶ್ ಮಾಸ್ಟರ್ ಮುಖಕ್ಕೆ ಮಸಿ; ಪ್ರಜ್ಞಾವಂತರೆಲ್ಲಾ ತೀವ್ರವಾಗಿ ಪ್ರತಿಭಟಿಸಿ:

ಮತ್ತೊಮ್ಮೆ ಸಂಘಪರಿವಾರದ ಅಂಗಗಳು ತಮ್ಮ ವಿಕೃತತೆಯನ್ನು ಮೆರೆದಿವೆ. ಪ್ರಗತಿಪರ ಚಿಂತಕ ಬರಹಗಾರ ಯೊಗೇಶ್ ಮಾಸ್ಟರ್ ಮುಖ ಮೈಗೆಲ್ಲಾ ಮಸಿ ಬಳಿದು ಹಲ್ಲೆ ಮಾಡುವ ಮೂಲಕ ತಮ್ಮ ಕೊಳಕು ಮನಸ್ಸನ್ನು ಜಗಜ್ಜಾಹೀರು ಮಾಡಿವೆ. ಮಾರ್ಚ 12ರಂದು ದಾವಣಗೆರೆಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಕನ್ನಡ ಭವನದಲ್ಲಿ ಆಯೋಜನೆಗೊಂಡಿದ್ದ ಲಂಕೇಶ್-82 ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಟಿ ಕುಡಿಯಲೆಂದು ಪಕ್ಕದ ಹೊಟೇಲಿಗೆ ಹೋಗಿದ್ದಾಗ ಕಾದು ಕುಳಿತಿದ್ದ ನಕಲಿ ದೇಶಭಕ್ತರು ಸಾಹಿತಿ ಯೊಗೇಶ್‌ರವರ ಮೇಲೆ ರಾಸಾಯನಿಕ ಮಿಶ್ರಿತ ಕಪ್ಪು ಬಣ್ಣದ ಅಭಿಷೇಕ ಮಾಡಿ ಹಲ್ಲೆ ನಡೆಸಿದ್ದಾರೆ. ಸಂಘಿಗಳು ಮತ್ತೆ ಮತ್ತೆ ಪ್ರಗತಿಪರರ ಮೇಲೆ ಹಲ್ಲೆ ಮಾಡುತ್ತಾ ವಿರೋಧಿ ದ್ವನಿಯನ್ನು ದಮನ ಮಾಡುವ ಗುಂಡಾಗಿರಿಯನ್ನು ಕಾಲಕಾಲಕ್ಕೆ ನಡೆಸಿಕೊಂಡು ಬರುತ್ತಲೇ ತಮ್ಮ ವಿಕೃತ ಮನಸ್ಥಿತಿಯನ್ನು ತೋರಿಸುತ್ತಲೇ ಬಂದಿದ್ದಾರೆ. ಯೋಗೇಶ್ ಮಾಸ್ಟರ್ ಮೇಲೆ ಮಸಿ ಬಳಿಯುವ ಮೂಲಕ ಈ ಕೋಮುಪಡೆ ತಮ್ಮ ಮುಖಕ್ಕೆ ತಾವೇ ಮಸಿಬಳಿದುಕೊಂಡು ತಮ್ಮ ಕರಾಳತೆಯನ್ನು ಮೆರೆದಿದ್ದಾರೆ. 
ಈ ಹಿಂದೆಯೂ ಸಹ ಮಂಗಳೂರು ವಿವಿಯ ಪ್ರಾದ್ಯಾಪಕರಾದ ಪಟ್ಟಾಭಿರಾಮ್ ಸೋಮಯಾಜಿ, ಚಿಂತಕ ಸುರೇಶ್ ಭಟ್ ಬಾಕ್ರಬೈಲ್ ಹಾಗೂ ಸಾಹಿತಿ ಭಗವಾನ್ ರವರ ಮೇಲೆಯೂ ಸಹ ಈ ಮಸಿ ಬಳಿಯುವ ಮೂಲಕ ಸಂಘಿಗಳು ತಮ್ಮ ವಿಕಾರತೆಯನ್ನು ಸಾಬೀತುಪಡಿಸಿದ್ದರು. ಯೊಗೇಶ್ ಮಾಸ್ಟರ್ ಈಗ ಹೊಸ ಸೇರ್ಪಡೆ ಅಷ್ಟೆ. ಇದು ಇಲ್ಲಿಗೆ ನಿಲ್ಲುವುದೂ ಇಲ್ಲಾ. ಪ್ರಭುತ್ವಾಧಿಕಾರವನ್ನು ಕೇಂದ್ರದಲ್ಲಿ ಸ್ಥಾಪಿಸಿದಾಗಿನಿಂದಾ ಈ  ಪರಿವಾರಿಗಳು ತಮ್ಮ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಮಾಡುವ ದುಷ್ಕೃತ್ಯವನ್ನು ಮುಂದುವರೆಸಿದ್ದಾರೆ ಹಾಗೂ ಮುಂದುವರೆಸುತ್ತಲೇ ಇರುತ್ತಾರೆ. ಅಷ್ಟೇ ಯಾಕೆ ಸನಾತನ ವಿಕೃತಿಗಳನ್ನು ವಿರೋಧಿಸಿದವರನ್ನು ಕೊಲೆ ಮಾಡುವ ಮೂಲಕ ಸತ್ಯವನ್ನು ಪ್ರತಿಪಾದಿಸುವವರಲ್ಲಿ ಆತಂಕ ಹಾಗೂ ಭಯವನ್ನು ಹುಟ್ಟಿಸಿ ಪ್ರತಿರೋಧದ ನೆಲೆಗಳನ್ನು ಹತ್ತಿಕ್ಕುವ ಹುನ್ನಾರನ್ನು ಸಂಘಿಗಳು ಸಂಘಟನಾತ್ಮಕವಾಗಿಯೇ ಮಾಡುತ್ತಿದ್ದಾರೆ. ಡಾ.ಎಂ.ಎಂ.ಕಲಬುರ್ಗಿಯಂತಹ ವಿಚಾರವಾದಿಗಳನ್ನು ಕೊಲೆ ಮಾಡಿದ್ದೇ ಇದಕ್ಕೆ ಉದಾಹರಣೆಯಾಗಿದೆ.

ಇದು ಸನಾತನವಾದಿಗಳ ಭಯೋತ್ಪಾದನೆಯ ಮಾದರಿಯಾಗಿದೆ. ಪ್ಯಾಸಿಸ್ಟ್ ಪ್ರಭುತ್ವದ ಸ್ಥಾಪನೆಯ ಲಕ್ಷಣವಾಗಿದೆ. ಸೈಂದಾತಿಕ ಭಿನ್ನಾಭಿಪ್ರಾಯಗಳನ್ನು ಸೈಂದಾತಿಕ ಸಂವಾದಗಳ ಮೂಲಕ ಎದುರಿಸುವ ತಾಕತ್ತಿಲ್ಲದ ಈ ಹೇಡಿಗಳು ಹಲ್ಲೆ ಕೊಲೆಗಳನ್ನು ಮಾಡುವ ಮೂಲಕ ಕೋಮುವಾದವನ್ನು ವಿರೋಧಿಸುವ ಹಾಗೂ ಕೋಮುವ್ಯಾದಿಗಳನ್ನು ಖಂಡಿಸುವ ಪ್ರಜ್ಞವಂತರನ್ನು ಹೆದರಿಸುವ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದಾರೆ. ನಾವು ದ್ವೇಷಿಸುವ ಜನರಿಗೂ ವಾಕ್ ಸ್ವಾತಂತ್ರ್ ಇರಬೇಕೆಂದು ನಂಬಿಕೆ ನಮಗೆ ಇರದಿದ್ದರೆ, ಆಗ ನಮಗೆ ನಿಜವಾಗಿಯೂ ವಾಕ್ ಸ್ವಾತಂತ್ರ್ದಲ್ಲಿ ನಂಬಿಕೆಯಿಲ್ಲವೆಂದೇ ಅರ್ಥ ಎಂದು ನೋಮ್ ಚಾಮ್‌ಸ್ಕಿ ಹೇಳಿದಿಂತೆ ಈ ಕೋಮು ಭಯೋತ್ಪಾದಕರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಯಾವುದೇ ನಂಬಿಕೆ ಇಲ್ಲವೆಂಬುದು ಬೇಕಾದಷ್ಟು ಸಲ ಸಾಬೀತಾಗಿದೆ. ಯೊಗೇಶ್ ಮಾಸ್ಟರ್ ಹೇಳಿದ್ದರಲ್ಲಿ  ಇಲ್ಲವೇ ಬರೆದಿದ್ದರಲ್ಲಿ ಅಸಹನೆ ಇದ್ದರೆ ಅದನ್ನು ವಾದ ಸಂವಾದ ಚರ್ಚೆಗಳ ಮೂಲಕ ಪ್ರತಿಪಾದಿಸುವುದನ್ನು ಬಿಟ್ಟು ಮಸಿ ಬಳಿದು ಹಲ್ಲೆ ಮಾಡಲು ಮುಂದಾದವರಿಗೆ ಪ್ರಜಾಪ್ರಭುತ್ವದ ಮೌಲ್ಯಗಳೆ ಗೊತ್ತಿಲ್ಲಾ.. ಮಾನವೀಯತೆಯಂತೂ ಮೊದಲೇ ಇಲ್ಲಾ.

 ಇಷ್ಟಕ್ಕೂ ಈ ಸಲ ಯೊಗೇಶ್ ಮಾಸ್ಟರರನ್ನೇ ಯಾಕೆ ಈ ದೇಶಭಕ್ತರು ಆಯ್ಕೆ ಮಾಡಿಕೊಂಡರು? ಡುಂಡಿ ಕೊಟ್ಟ ಶಾಕ್ ಗುಂಗಿನಿಂದಾ ಇನ್ನೂ ಹೊರಬರದೇ ಪರಿತಪಿಸುತ್ತಿರುವ ಈ ಅತೃಪ್ತಾತ್ಮಗಳು ತಲ್ಲಣಗೊಂಡಿದ್ದವು. ಯೋಗೇಶ್ ಗಣಪತಿ ಹಾಗೂ ಪಾರ್ವತಿಯ ಕುರಿತು ಡುಂಡಿ  ಎನ್ನುವ ಸಂಶೋಧನಾತ್ಮಕ ಕಾದಂಬರಿಯೊಂದನ್ನು ನಾಲ್ಕು ವರ್ಷಗಳ ಹಿಂದೆ ಬರೆದಿದ್ದರು. ಅದು ಪ್ರಕಟಗೊಂಡಕೂಡಲೇ ಸನಾತನಿಗಳು ಬಾಲ ಸುಟ್ಟ ಕೋತಿಯಂತೆ ತಲ್ಲಣಗೊಂಡು ರುದ್ರನರ್ತನದಲ್ಲಿ ತೊಡಗಿದವು. ಧಾರ್ಮಿಕ ಬಾವನೆಗಳ ಮೇಲೆ ಬ್ರಹ್ಮಾಸ್ತ್ರ ಬಿಟ್ಟಂತಾಗಿದೆ ಎಂದು ಆರೋಪಿಸಿ ಕೇಸ್ ದಾಖಲಿಸಿದರು. ಇನ್ನು ಕೆಲವರು ಕೋರ್ಟ ಮೇಲೆ ಒತ್ತಡ ತಂದು ಡುಂಡಿ ಕಾದಂಬರಿಯನ್ನೇ ಬ್ಯಾನ್ ಮಾಡಿಸಿದರು. ಅಷ್ಟಕ್ಕೆ ಬಿಡದೇ ಯೋಗೇಶ್ ಮಾಸ್ಟರ ಎನ್ನುವ ಸೂಕ್ಷ್ಮ ಪ್ರಜ್ಞೆಯ ಲೇಖಕರನ್ನು ಬಂಧಿಸಿ ಜೈಲಿಗೆ ಕಳುಹಿಸಿ ವಿಕೃತಾನಂದ ಪಟ್ಟರು. ಯೋಗೇಶ್ ರವರ ಬಂಧನವನ್ನು ವಿರೋಧಿಸಿ ಕೆಲವರು ಪ್ರತಿಭಟನೆಗಿಳಿದರೂ ಈ ಸಂಘಿಗಳ ಅಬ್ಬರದ ಮುಂದೆ ಅವು ಕ್ಷೀಣವಾಗಿದ್ದವು. ಕೊನೆಗೆ ಸಾಮಾಜಿಕ ಕಾಳಜಿ ಇರುವ ಹಿರಿಯ ವಕೀಲ ಸಿ.ಎಸ್.ದ್ವಾರಕಾನಾಥರವರ ಸಾಮಾಜಿಕ ಕಳಕಳಿಯಿಂದಾಗಿ ಜಾಮೀನಿನ ಮೇಲೆ ಯೋಗೇಶ್ ಬಿಡುಗಡೆಯಾದರು ಆದರೆ ಈಗಲೂ ಕೇಸ್ ನಡೆಯುತ್ತಲೇ ಇದೆ. ಕೇಸ್ ಗೆಲ್ಲುವುದಂತೂ ಈ ಕಮಂಗಿ ಪಡೆಗೆ ಸಾಧ್ಯವಂತೂ ಇಲ್ಲಾ. ಆದರೆ.. ಬರಹಗಾರರನ್ನು ಕಾನೂನಿನ ಕುಣಿಕೆಯಲ್ಲಿ ಸಿಕ್ಕಿಸಿ ಹಿಂಸಿಸುವ ಮೂಲಕ ಅವರ ಆತ್ಮಸ್ತೈರ್ಯವನ್ನು ಕುಗ್ಗಿಸುವ ಕೆಲಸವನ್ನು ಮಾಡುವುದರಲ್ಲಿ ಈ ಕೋಮುಪಡೆ ನಿಸ್ಸೀಮರು. ಆದರೆ.. ಯೊಗೇಶ್ ಮಾಸ್ಟರ್ ಈ ಯಾವ ಕೇಸುಗಳಿಗೆ ಬಗ್ಗದೇ ಕೋಮುವಿರೋಧಿ ಚಳುವಳಿಯ ಜೊತೆ ತೊಡಗಿಸಿಕೊಳ್ಳುತ್ತಲೇ ಬಂದಾಗ ದೇಶಭಕ್ತರ ಸಂಕಟ ಹೆಚ್ಚಾಗತೊಡಗಿತು. ಕೋರ್ಟಲ್ಲಿ ಸೋಲು ಖಂಡಿತ ಎನ್ನುವ ಅರಿವೂ ಅವರಿಗಿತ್ತು. ಆದ್ದರಿಂದ ಈಗ ಕಾನೂನನ್ನು ತಾವೇ ಕೈಗೆ ತೆಗೆದುಕೊಂಡು ಮಸಿ ಬಳಿಯುವ ಹಾಗೂ ಹಲ್ಲೆ ಮಾಡುವ ಮೂಲಕ ಯೋಗೇಶ್ ಮಾಸ್ಟರ್‌ರನ್ನು ಹೆದರಿಸುವ ಹಾಗೂ ಆ ಮೂಲಕ ಕೋಮುವಾದಿಗಳನ್ನು ವಿರೋಧಿಸುವ ಎಲ್ಲಾ ಪ್ರಜ್ಞಾವಂತ ಬರಹಗಾರರಿಗೆ ಎಚ್ಚರಿಕೆ ಕೊಡುವ ಅಮಾನವೀಯ ಕೆಲಸವನ್ನು ಮಾಡಿ ಹೇಡಿಗಳಂತೆ ಓಡಿ ಹೋಗಿದ್ದಾರೆ.  

ಹಲ್ಲೆಯಾದ ದಿನದ ಸಂಜೆಯೇ ಕ್ಯಾಂಪಸ್ ಪ್ರಂಟ್ ಆಪ್ ಇಂಡಿಯಾ ವಿದ್ಯಾರ್ಥಿ ಸಂಘಟನೆ ಮೈಸೂರು ಬ್ಯಾಂಕ್ ಸರ್ಕಲ್ಲಿನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡು ರಾಜ್ಯಾಂದ್ಯಂತ ಪ್ರತಿಭಟನೆಗೆ ಕರೆಕೊಟ್ಟರು. ಮರುದಿನ ಹಲವಾರು ಪ್ರಗತಿಪರ ಸಂಘಟನೆಗಳು ಟೌನ್‌ಹಾಲ್ ಮುಂದೆ ಪ್ರತಿಭಟನೆ ಆಯೋಜಿಸಿವೆ. ದಾವಣಗೆರೆಯಲ್ಲೂ ಪ್ರಗತಿಪರ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿವೆ. ಸಾಮಾಜಿಕ ಜಾಲತಾಣಗಳಲ್ಲಿ ಸಂಘಪರಿವಾರದ ವಟುಗಳಾದ ಎಬಿವಿಪಿಗಳು ಮಾಡಿದ ಈ ದುಷ್ಟಕೃತ್ಯಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ದಾವಣಗೆರೆ ಎಬಿವಿಪಿ ಪತ್ರಿಕಾ ಪ್ರಕಟಣೆ ಹೊರಡಿಸಿ ಈ ಮಸಿ ಘಟನೆಗೂ ತಮಗೂ ಯಾವುದೇ ಸಂಬಂಧವಿಲ್ಲಾ ಎಂದು ಹೇಳಿಕೊಂಡು ಹೊಣೆಗಾರಿಕೆಯಿಂದಾ ಜಾರಿಕೊಳ್ಳಲು ಪ್ರಯತ್ನಿಸಿತು. ಕಾರ್ಯಪ್ರವೃತ್ತರಾದ ದಾವಣಗೆರೆ ಪೊಲೀಸರು ಹಿಂದೂ ಜಾಗರಣ ವೇದಿಕೆಯ ಶಿವಪ್ರಸಾದ್ ಹಾಗೂ ಚೇತನ್ ಎನ್ನುವ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ಚೇತನ್ ಹಿಂದೂ ಜಾಗರಣ ವೇದಿಕೆಯ ಸದಸ್ಯನಾಗಿದ್ದು ಎಬಿವಿಪಿಯ ಕಾರ್ಯಕರ್ತ. ಹಾಗೂ ಈ ಶಿವಪ್ರಸಾದ್ ಎನ್ನುವ ವ್ಯಕ್ತಿ ವಿಶ್ವವಾಣಿ ಪತ್ರಿಕೆಯಲ್ಲಿ ಕೆಲಸಮಾಡುತ್ತಿದ್ದು ಹಿಂದೂ ಜಾಗರಣ ವೇದಿಕೆಯ ಸದಸ್ಯನಾಗಿದ್ದು ಆರೆಸ್ಸೆಸ್ಸ ಹಾಗೂ ಬಿಜೆಪಿಯ ಸಕ್ರೀಯ ಸದಸ್ಯನಾಗಿದ್ದಾನೆ. ಈತ ಯೊಗೇಶ್ ಮಾಸ್ಟರ್ಗೆ ಮಸಿ ಬಳಿದು ಹಲ್ಲೆ ಮಾಡಿದ ಪ್ರಕರಣದಲ್ಲಿ ಬಂಧಿಯಾದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಕೋರ್ಟಿನಲ್ಲಿ ಜಾಮೀನು ಪಡೆದು ಹೊರಬಂದಿದ್ದಾನೆ. ಅದರೆ... ನಮ್ಮ  ಮುಖ್ಯ ಮಂತ್ರಿಗಳು ತಪ್ಪಿತಸ್ತರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿ ತಮ್ಮ ಹೊಣೆಗಾರಿಕೆಯನ್ನು ಪೊಲೀಸರ ಮೇಲೆ ಹಾಕಿ ನಿರಾಳರಾಗಿದ್ದಾರೆ.  ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ಅಭಿವ್ಯಕ್ತ ಸ್ವಾತಂತ್ರ್ಯದ ಮೇಲೆ ನಂಬಿಕೆ ಇದ್ದರೆ ಮೊದಲು ಯೊಗೇಶ್ ಮಾಸ್ಟರರಿಗೆ ಸಾಂತ್ವನ ಹೇಳಬೇಕಿತ್ತು. ತದನಂತರ ತಪ್ಪಿತಸ್ತರನ್ನು ಕೂಡಲೇ ಗೂಂಡಾಕಾಯ್ದೆಯಡಿ ಬಂಧಿಸಿ  ಇತರ ಕೋಮುವಾದಿ ಭಯೋತ್ಪಾದಕರಿಗೆ ತೀವ್ರವಾದ ಎಚ್ಚರಿಕೆಯನ್ನು ಕೊಡಬೇಕಿತ್ತು. ಈ ಶಡ್ಯಂತ್ರವನ್ನು ಕಾರ್ಯರೂಪಕ್ಕೆ ತಂದ ಕಾಲಾಳುಗಳಿಗಿಂತಲೂ ಅದರ ಹಿಂದಿರುವ ಮೆದುಳುಗಳನ್ನು ಹಿಡಿದೆಳೆತಂದು ಜೈಲಿಗಟ್ಟಬೇಕಿತ್ತು.ಈ ಮಸಿ ಬಳಿಯುವ ಗನಂಧಾರಿ ಕೆಲಸವನ್ನು ಮಾಡಿದ್ದು ಶೂದ್ರ ಹುಡುಗರು. ಇವರ ತಲೆಯಲ್ಲಿ ಮತೀಯವಾದವನ್ನು ಬಿತ್ತಿದ ಕಾರಂತ, ಪ್ರಭಾಕರ್ ಭಟ್ ನಂತವರು ಹಿಂದುತ್ವದ ಹೆಸರಲ್ಲಿ ತಮ್ಮ ಬ್ರೇನ್ ವಾಷ್ ಕಾರ್ಯಕ್ರಮವನ್ನು ಮುಂದುವರೆಸಿದ್ದಾರೆ. ಅದರೆ ಈ ಮನುವಾದಿಗಳ ಕುತಂತ್ರವರಿಯದ ಶೂದ್ರ ಯುವಕರು ಇಂತಹ ಹೀನ ಕೆಲಸಕ್ಕೆ ಟೂಲ್ ಆಗಿ ಬಳಕೆಯಾಗುತ್ತಿದ್ದಾರೆ. ಇದೂ ಸಹ ಸಂಘಪರಿವಾರದ ಮಾಸ್ಟರ್ ಮೈಂಡ್ ಗಳ ಶಡ್ಯಂತ್ರದ ಭಾಗವೇ ಆಗಿದೆ. ಶೂದ್ರ ದಲಿತ ಯುವಕರ ತಲೆಯಲ್ಲಿ ಹಿಂದುತ್ವದ ಉನ್ಮಾದವನ್ನು ತುಂಬಿ ಹತ್ಯೆ ಹಲ್ಲೆಗಳನ್ನು ಮಾಡಿಸುತ್ತಲೇ ಬಂದಿರುವ ಪುರೋಹಿತಶಾಹಿಗಳು ಅಬ್ರಾಹ್ಮಣ ಯುವಕರನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವುದು ಬಹಿರಂಗ ಸತ್ಯ.

ಅಕಸ್ಮಾತ್ ಇದೇ ರೀತಿ ಯಾರಾದರೂ ಸಾಮಾಜಿಕ ಚಳುವಳಿಯ ಹುಡುಗರುಗಳು ಬಲಪಂಥೀಯ ಪ್ರತಿಪಾದಕರಾದ ಬೈರಪ್ಪನವರಿಗೋ ಇಲ್ಲಾ ಚಿದಾನಂದಮೂರ್ತಿಯವರಿಗೋ ಮಸಿ ಬಳಿದು ಹಲ್ಲೆ ಮಾಡಿದ್ದರೆ ಇಷ್ಟೊತ್ತಿಗೆ ಅದನ್ನು ರಾಷ್ಟ್ರೀಯ ದುರಂತ ಎನ್ನುವಂತೆ ಈ ಸಂಘಪರಿವಾರಿಗಳು ಬಿಂಬಿಸಿ ಬೀದಿಬೀದಿಯಲ್ಲಿ ನಿಂತು ಬಾಯಿಬಡಿದುಕೊಳ್ಳುತ್ತಿದ್ದರು. ಈ ಸೂಲಿಬೆಲೆಯಂತಾ ವಿಕೃತ ಮನಸ್ಸಿನ ನಕಾರಾತ್ಮಕ ಜೀವಿಗಳು ಆರು ದಾರಿ ಸೇರುವಲ್ಲಿ ನಿಂತು ಮೆದುಳಿನೊಳಗಿರುವ ಕೊಳಕನ್ನು ವಾಂತಿ ಮಾಡಿಕೊಳ್ಳುತ್ತಿದ್ದರು.   ಕೋಮುವಾದಿತ್ವವನ್ನು ಹಿಡನ್ ಅಜೆಂಡಾ ಮಾಡಿಕೊಂಡಿರುವ ಬಹುತೇಕ ಚಾನೆಲ್‌ನವರು ಅದನ್ನು ದಿನದಿಪ್ಪತ್ತುನಾಲ್ಕು ಗಂಟೆಯೂ ಬ್ರೇಕಿಂಗ್ ನ್ಯೂಸ್ ಹೆಸರಲ್ಲಿ ಮತ್ತೆ ಮತ್ತೆ ತೋರಿಸಿ ಇದೊಂದು ದೇಶದ್ರೋಹದ ಕೃತ್ಯವೆಂದು ಪ್ರತಿಪಾದಿಸಿ ಬಲಪಂಥೀಯರ ಪರವಾಗಿ ಜನಾಭಿಪ್ರಾಯವನ್ನು ರೂಪಿಸಲು ಹಗಲಿರುಳು ಶ್ರಮಿಸುತ್ತಿದ್ದರು. ಆದರೆ.. ಈಗ ಮಸಿ ಬಳಿದು ಹಲ್ಲೆ ಮಾಡಿದ್ದು ಸಂಘಪರಿವಾರಿಗಳೇ ಆಗಿದ್ದರಿಂದಾ ಚಾನೆಲ್‌ಗಳು ಹಾಗೂ ಪೀತ ಪತ್ರಿಕೆಗಳು ಪಂಚೇಂದ್ರಿಯಗಳನ್ನು ಮುಚ್ಚಿಕೊಂಡು ಬೇರೆ ಬ್ರೇಕಿಂಗ ನ್ಯೂಸ್‌ಗಾಗಿ ಅಂಡಲೆಯುತ್ತಿವೆ. ಆತ್ಮಸಾಕ್ಷಿಯನ್ನೇ ಮಾರಿಕೊಂಡ ಮಾಧ್ಯಮಗಳನ್ನು ನಿರ್ಲಕ್ಷಿಸಿ ಜನಪರ ಹೋರಾಟಗಾರರು ಹಾಗೂ ಪ್ರಜ್ಞಾವಂತ ಸಾಹಿತಿ ಕಲಾವಿದರುಗಳು ಬೀದಿಗಿಳಿದು ಪ್ರತಿಭಟಿಸುತ್ತಾ ಈ ದೇಶಭಕ್ತರ ನಿಜವಾದ ಮುಖವಾಡವನ್ನು ಜನತೆಯ ಮುಂದೆ ಕಿತ್ತೆಸೆಯಬೇಕಿದೆ. ಯೊಗೇಶ್ ಮಾಸ್ಟರ್ ಇಲ್ಲಿ ಕೇವಲ ನಿಮಿತ್ತ ಮಾತ್ರ. ಎಲ್ಲಾ ಪ್ರಗತಿಪರರಿಗೂ ಕೋಮುವಾದಿಗಳು ಕೊಟ್ಟ ಎಚ್ಚರಿಕೆ ಎಂದೇ ಪರಿಗಣಿಸಬೇಕಿದೆ. ಅಭಿವ್ಯಕ್ತಿ ಸ್ವಾತಂತ್ರವನ್ನು ದಮನಗೊಳಿಸುವವರ ಎಲ್ಲಾ ರೀತಿಯ ಭಯೋತ್ಪಾದಕತೆಯನ್ನು ಶತಾಯ ಗತಾಯ ವಿರೋಧಿಸಬೇಕಿದೆ. ಪ್ರತಿಯೊಬ್ಬ ಪ್ರಜ್ಞಾವಂತರೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಲೇಬೇಕಿದೆ. 
ಪ್ರೀತಿಯ ಸಂಗಾತಿಗಳೇ, ನಿಮ್ಮ ಕಳಕಳಿ ಮತ್ತು ಬದ್ಧತೆಯನ್ನು ಕಂಡು ನನ್ನ ಮೇಲಿನ ಹಲ್ಲೆಯಿಂದ ನನಗಾದ ಆಘಾತ ಕಡಿಮೆಯಾಗಿದೆ. ಜೊತೆಗೆ ನಮ್ಮ ಪ್ರಗತಿಪರವಾದ ಮತ್ತು ಶೋಷಣೆಗಳ ವಿರುದ್ಧವಾದ ಹೋರಾಟ ಮತ್ತು ಚಳುವಳಿಗಳಲ್ಲಿ ನನ್ನ ಬದ್ಧತೆಯ ಪ್ರಜ್ಞೆಯನ್ನು ಮತ್ತಷ್ಟು ಬಲಗೊಳಿಸಿದೆ. ನಮ್ಮ ಹೋರಾಟ ಬಲಗೊಳ್ಳಲಿ ಮತ್ತು ಸಾಧಿಸಬೇಕಾದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಸಾಧಿಸಿಯೇ ತೀರುವ. ಐಕ್ಯತೆ ಚಿರಾಯುವಾಗಲಿ ಎಂದು ಯೋಗೇಶ್ ಮಾಸ್ಟರ್ ವಾಟ್ಸಾಪ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಈ ಸಂಘಪರಿವಾರದ ಉನ್ಮಾದಪೀಡಿತರಿಗೆ ದಮನ ಹೆಚ್ಚಿದಷ್ಟೂ ದಂಗೆ ತೀವ್ರಗೊಳ್ಳುತ್ತದೆ ಎನ್ನುವ ಜಾಗತಿಕ ಸತ್ಯ ಅರಿವಾಗಬೇಕಿದೆ ಹಾಗೂ ಹೀಗೆ ದೌರ್ಜನ್ಯ ಮಾಡುವುದರ ಮೂಲಕ ಜನರ ಪರವಾದ ದ್ವನಿಗಳನ್ನು ಉಡುಗಿಸಲು ಸಾಧ್ಯವೆಂದು ನಂಬಿದ ಕೋಮುವಾದಿ ಭಯೋತ್ಪಾದಕರಿಗೆ ಕಾಲವೇ ಉತ್ತರಿಸುತ್ತದೆ.

ಪೊಲೀಸರು ತಮ್ಮ ಕೆಲಸ ತಾವು ಮಾಡುತ್ತಾರೆ. ಕೋರ್ಟಿನ ವಿಳಂಬ ಧೋರಣೆಯಿಂದಾಗಿ ಇಂತಹ ಕೇಸುಗಳು ಇತ್ಯರ್ಥವಾಗುವುದು ಇನ್ಯಾವ ಕಾಲಕ್ಕೋ. ಈಗಾಗಲೇ ಹಲ್ಲೆ ಮಾಡಿದ ಕೋಮುವಾದಿಗಳಿಗೆ ಇಲ್ಲಿವರೆಗೂ ಶಿಕ್ಷೆಯಾಗಿಲ್ಲಾ.. ಈ ವ್ಯವಸ್ಥೆಯಲ್ಲಿ ಆಗುವುದೂ ಇಲ್ಲಾ. ಈ ಸಂಘಿಗಳಿಗೆ ಯೋಗೇಶ್ ಮಾಸ್ಟರ್ ಆಗಲಿ ಇಲ್ಲವೇ ಡಾ.ಕಲಬುರ್ಗಿಯವರಾಗಲಿ ನಿಜವಾದ ಟಾರ್ಗೆಟ್ ಅಲ್ಲವೇ ಅಲ್ಲಾ. ಈ ರೀತಿಯ ಹಲ್ಲೆ ಕೊಲೆಗಳನ್ನು ಮಾಡುವ ಮೂಲಕ ಎಲ್ಲಾ ಪ್ರಜ್ಞಾವಂತ ಪ್ರಗತಿಪರರು ಹಾಗೂ ಜನಹೋರಾಟಗಾರರಲ್ಲಿ ಭಯಹುಟ್ಟಿಸುವ ಮೂಲಕ ಸಂಘಿಗಳ ಜೀವವಿರೋಧಿ ಸಿದ್ದಾಂತಗಳನ್ನು ಹಾಗೂ ಚರಿತ್ರೆ ಪುರಾಣಗಳ ಸುಳ್ಳುಸೃಷ್ಟಿಗಳನ್ನು ಪ್ರಶ್ನಿಸುವವರ ದ್ವನಿಯನ್ನು ಹತ್ತಿಕ್ಕುವ ಕುತಂತ್ರಗಳನ್ನು ಮಾಡುತ್ತಿದ್ದಾರೆ. 
ಆದ್ದರಿಂದ ಇಂತಹ ಘಟನೆಗಳನ್ನು ವ್ಯಯಕ್ತಿಕ ನೆಲೆಯಲ್ಲಿ ನೋಡದೇ.. ಯಾರೋ ಒಬ್ಬರ ಮೇಲಾದ ದಮನವೆಂದು ನಿರ್ಲಕ್ಷಿಸದೇ ಎಲ್ಲಾ ಪ್ರಗತಿಪರರು ಹಾಗೂ ಜನಹೋರಾಟದ ಪರವಿರುವ ಸಂಘಟನೆಗಳು ಸಂಘನಾತ್ಮಕವಾಗಿ ವಿರೋಧಿಸಲೇಬೇಕಿದೆ. ಇಲ್ಲವಾದರೆ ಅವತ್ತು ಕಲಬುರ್ಗಿಯವರಿಗೆ ಮಾಡಲಾದ ಹತ್ಯೆ ನಾಳೆ ಇನ್ನ್ಯಾರದೋ ಮೇಲಾಗಬಹುದು. ಇವತ್ತು ಯೋಗೇಶ್ ಮೇಷ್ಟ್ರ ಮೇಲಾದ ಹಲ್ಲೆ ನಾಳೆ ಇನ್ಯಾರೋ ಪ್ರಗತಿಪರರ ಮೇಲಾಗಬಹುದು. ನಮ್ಮ ಸರದಿ ಬರುವವರೆಗೆ ಕಾಯುವುದನ್ನು ಬಿಟ್ಟು ಹಾಗೂ ಕೇವಲ ಸಾಂಕೇತಿಕ ಪ್ರತಿಭಟನೆಗಳ ಜೊತೆಗೆ ಸಂಘಪರಿವಾರದ ಹುನ್ನಾರದ ವಿರುದ್ದ ಜನಾಭಿಪ್ರಾಯವನ್ನು ರೂಪಿಸುವುದು ಈ ಸಧ್ಯದ ಅಗತ್ಯವಾಗಿದೆ. ಇನ್ನೊಮ್ಮೆ ಪ್ರಗತಿಪರರ ಮೇಲೆ ಹಲ್ಲೆ ಮಾಡುವ ಮೊದಲು ಸಂಘಿಗಳ ಗೂಂಡಾಪಡೆ ಸಾವಿರ ಸಲ ಯೋಚಿಸುವಂತೆ ಮಾಡಬೇಕಿದೆ. ಅವರು ಮಾಡುವ ಒಂದೊಂದು ಹತ್ಯೆ ಹಲ್ಲೆಗಳೂ ಅವರ ಮುಖವಾಡಗಳನ್ನು ಜನರ ಮುಂದೆ ಬಯಲುಗೊಳಿಸುವಂತೆ ಮಾಡುವುದು ಪ್ರಸ್ತುತ ಅನಿವಾರ್ಯತೆಯಾಗಿದೆ. ಎಲ್ಲಿವರೆಗೂ ಇನ್ನೂ ಜೀವಂತ ಇರುವ ಹಾಗೂ ಜೀವ ಹಿಡಿದುಕೊಂಡಿರುವ ಜನಪರವಾದ ಸಂಘಟನೆಗಳು ಸಂಘಿಗಳ  ದಮನದ ಮೇಲೆ ಒಂದಾಗಿ ತಿರುಗಿ ಬೀಳಬೇಕಿದೆ. ಇಲ್ಲವಾದರೆ ಪ್ರತಿರೋಧದ ದ್ವನಿಗಳನ್ನು ಅಡಗಿಸುವ ಶಡ್ಯಂತ್ರಕ್ಕೆ ಎಲ್ಲರೂ ಕಾಲಕಾಲಕ್ಕೆ ಬಲಿಯಾಗುವುದು ಶತಸಿದ್ದ. ಈ ದೇಶವನ್ನು ಪ್ಯಾಸಿಸ್ಟ್ ಪ್ರಭುತ್ವ ಆಪೋಷನ ತೆಗೆದುಕೊಳ್ಳುವುದು ಹಾಗೂ ಮುಂದಿನ ನೂರಿನ್ನೂರು ವರ್ಷಗಳ ಕಾಲ ಮನುವಾದಿಗಳೇ ಈ ದೇಶವನ್ನು ಕಪಿಮುಷ್ಟಿಯಲ್ಲಿಟ್ಟುಕೊಂಡು ಆಳುವುದನ್ನು ಯಾರಿಂದಲೂ ತಡೆಯಲು ಸಾಧ್ಯವೇ ಇಲ್ಲಾ  

 -ಶಶಿಕಾಂತ ಯಡಹಳ್ಳಿ  



ಬುಧವಾರ, ಫೆಬ್ರವರಿ 1, 2017

ತಹ ತಹ..... 75 ‘ಭಾರತ ಭಾಗ್ಯ ವಿಧಾತ ‘ದಲ್ಲಿ ಗಾಂಧಿಗಿರಿ;



ದಲಿತ ಸೂರ್ಯನಿಗೆ ಟಾರ್ಚ ಹಾಕಿದ ರೂಪಕ  :
 


ಭಾರತದ ಸಂವಿಧಾನ ಕರಡು ಸಮಿತಿಗೆ ಡಾ.ಅಂಬೇಡ್ಕರ್‌ರವರನ್ನು ಅಧ್ಯಕ್ಷರಾಗಲೇಬೇಕೆಂದು ಹೇಳಿ ಒತ್ತಾಯಿಸಿದವರು ಯಾರು? ಅದು ಮಹತ್ಮಾ ಗಾಂಧಿಯವರು. ಬಾಬಾಸಾಹೇಬರು ಆ ಸಮಿತಿಗೆ ಅಧ್ಯಕ್ಷರಾಗುವವರೆಗೂ ಅಂಬೇಡ್ಕರರವರನ್ನು ಬ್ರಾಹ್ಮಣ ಕುಲದವರು ಎಂದು ತಿಳಿದುಕೊಂಡಿದ್ದವರು ಯಾರು? ಅದು ಗಾಂಧೀಜಿಯವರು. ಅಂಬೇಡ್ಕರರು ಅಸ್ಪೃಷ್ಯ ಜನಾಂಗದವರೆಂದು ಗೊತ್ತಾದ ತಕ್ಷಣ ಅಸ್ಪೃಶ್ಯ ಜನಾಂಗದ ಏಳಿಗೆಗಾಗಿ ಬದುಕನ್ನೇ ಮುಡುಪಾಗಿಡುತ್ತೇನೆ.. ಅವರನ್ನು ಹರಿಜನರೆಂದು ಗೌರವಿಸುತ್ತೇನೆ ಎಂದು ಹೇಳಿದವರು ಯಾರು? ಅದೂ ಸಹ ಎಂ.ಕೆ.ಗಾಂಧಿ.

ಸತ್ಯದ ತಲೆಯ ಮೇಲೆ ಹೊಡೆದಂತಹ ಇಂತಹ ಹಸಿ ಸುಳ್ಳುಗಳನ್ನು ವೈಭವಪೂರ್ವಕವಾಗಿ ಕರ್ನಾಟಕದ ಜನತೆಗೆ ಮುಟ್ಟಿಸಲು ದೊಡ್ಡ ಮಟ್ಟದ ತಯಾರಿ ಮಾಡಿಕೊಂಡಿದ್ದು ಯಾರು? ಅದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಎಂದರೆ ಅಚ್ಚರಿ ಆಗದೇ ಇರದು. ಹೌದು.. ವಾರ್ತಾ ಇಲಾಖೆ ಮಹತ್ವಾಂಕಾಂಕ್ಷೆಯಿಂದಾ ಭಾರತ ಭಾಗ್ಯ ವಿಧಾತ ಎನ್ನುವ ಧ್ವನಿ ಹಾಗೂ ಬೆಳಕಿನ ದೃಶ್ಯ ವೈಭವಗಳ ರೂಪಕವನ್ನು ಪ್ರಾಯೋಜಿಸಿದೆ. ಈ ರೂಪಕದ ಮೊದಲ ಪ್ರದರ್ಶನವು ಫೆಬ್ರುವರಿ 1 ರಂದು ಕಲಾಗ್ರಾಮದಲ್ಲಿ ಅದ್ದೂರಿಯಾಗಿ ನಡೆಯಿತು. ಮೂರು ಕೋಟಿ ರೂಪಾಯಿಗಳ ಈ ಸಂಭ್ರಮದ ಸರಕಾರಿ ಪ್ರಾಜೆಕ್ಟಿಗೆ ತಕರಾರೇನಿಲ್ಲಾ. ಕೆಳ ತಳ ಸಮುದಾಯದವರಿಗೆ ಬದುಕು ಹಾಗೂ ಬೆಳಕನ್ನು ಕೊಡಬಯಸಿದ ಡಾ.ಅಂಬೇಡ್ಕರರ ಬದುಕು ಹಾಗೂ ಸಾಧನೆಯ ಕುರಿತು ರೂಪಕದ ಮೂಲಕ ಜನರಿಗೆ ತಿಳಿಸುವ ಪ್ರಯತ್ನದಲ್ಲಿ ಅಪ್ರಾಮಾಣಿಕತೆ ಏನಿಲ್ಲಾ. ಆದರೆ.. ತಕರಾರಿರುವುದು ಇತಿಹಾಸವನ್ನು ಹೊಸದಾಗಿ ಕಟ್ಟುವ ವಿಕ್ಷಿಪ್ತ ಪ್ರಯತ್ನದ ಕುರಿತು. ಅಂಬೇಡ್ಕರರ ಸಾಧನೆಯನ್ನು ಹೇಳುತ್ತಲೇ ಅವರ ಮಹೋನ್ನತ ಸಾಧನೆಯ ಹಿಂದಿನ ರೂವಾರಿ ಗಾಂಧಿ ಎಂದು ಸಮರ್ಥನೆ ಮಾಡಿಕೊಂಡಿರುವ ಕುರಿತು.

ಮಹಾತ್ಮಾಗಾಂಧಿಯನ್ನು ಕಿಂಗ್‌ಮೇಕರ್ ಮಾಡುವ ಎಲ್ಲಾ ಸಾಧ್ಯತೆಗಳೂ ಈ ರೂಪಕದಲ್ಲಿವೆ. ಡಾ.ಅಂಬೇಡ್ಕರ್ ಸ್ವಯಂಪ್ರಭೆ ಇರುವ ಸೂರ್ಯ. ಸೂರ್ಯನಿಗೆ ಬೇರೆಯವರು ಬೆಳಕು ಕೊಡುವ ಅಗತ್ಯವಿದೆಯಾ? ಆದರೆ ಸೂರ್ಯನಿಗೇ ಟಾರ್ಚ ಹಾಕಿ ಟಾರ್ಚಿನ ಸಹಾಯದಿಂದಲೇ ಆ ಸೂರ್ಯ ಬೆಳಗಿದ್ದು ಎಂದು ಹೇಳುವುದು ಬಹುದೊಡ್ಡ ಕುಚೋದ್ಯ. ಇಂತಹ ಚಾರಿತ್ರಿಕ ಬ್ಲಂಡರ್ ಅನ್ನು ಬೇರೆ ಯಾರೋ ಮಾಡಿದ್ದರೆ ಇಷ್ಟೊಂದು ಬೇಸರವಾಗುತ್ತಿರಲಿಲ್ಲ. ಆದರೆ ಒಂದು ಸರಕಾರಿ ಸಂಸ್ಥೆ ಜನರ ಕೊಟ್ಯಾಂತರ ಹಣವನ್ನು ಖರ್ಚು ಮಾಡಿ  ಅಂಬೇಡ್ಕರವರ ಕುರಿತು ರೂಪಕವನ್ನು ಮಾಡಿ ಅದರಲ್ಲಿ ಅಂಬೇಡ್ಕರರನ್ನು ಸಂವಿಧಾನದ ಶಿಲ್ಪಿಯನ್ನಾಗಿಸುವ ಹಿಂದೆ ಗಾಂಧೀಜಿಯವರ ಒತ್ತಾಸೆ ಇದೆ ಎಂದು ಸಮರ್ಥಿಸಿಕೊಂಡಿದ್ದನ್ನು ಅರಗಿಸಿಕೊಳ್ಳುವುದಾದರೂ ಹೇಗೆ. ರೂಪಕ ನೋಡಿದ ಕೇಳಿದ ಅನುಭವಿಸಿದ ಈಗಿನ ತಲೆಮಾರಿನ ಜನತೆ ಇದನ್ನೇ ಸತ್ಯ ಎಂದು ತಿಳಿದುಕೊಂಡರೆ ಇತಿಹಾಸಕ್ಕೆ ಅಪಚಾರವಾದೀತು. ಅಂಬೇಡ್ಕರರಂತಹ ಸ್ವಯಂಪ್ರತಿಭೆಗೆ ಅವಮಾನವಾದೀತು.

ಮೇಲ್ವರ್ಗದ ಪರವಾದ ಧೋರಣೆಹೊಂದಿ ರಾಜಕೀಯ ಕಾರಣಕ್ಕಾಗಿ ಅಸ್ಪೃಷ್ಯರ ಪರವಾದ ಅನುಕಂಪವನ್ನು ಹೊಂದಿದ್ದ ಗಾಂಧಿಯವರ ಭಿನ್ನ ನಡೆ ನುಡಿಗಳು ಅವರ ಬಗ್ಗೆ ಆಳವಾಗಿ ಅಧ್ಯಯನ ಮಾಡಿದವರಿಗೆ ಗೊತ್ತಾಗದಿರುವ ಸತ್ಯವೇನಲ್ಲಾ. ಬಹುಸಂಖ್ಯಾತ ದಲಿತರಿಗೆ ಎರಡು ಮತಗಳನ್ನು ಚಲಾಯಿಸುವ ಹಕ್ಕು ಬೇಕು ಹಾಗೂ ದಲಿತರಿಗೆ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಸಮಾನ ಹಕ್ಕುಗಳು ಬೇಕು ಎಂದು ಆಗ್ರಹಿಸಿ ಒತ್ತಾಯಿಸಿದ ಅಂಬೇಡ್ಕರರನ್ನು ಶತಾಯ ಗತಾಯ ವಿರೋಧಿಸಿ ಉಪವಾಸ ಕೂತು ಭಾವನಾತ್ಮಕ ಬ್ಲಾಕ್ಮೇಲ್ ತಂತ್ರದಿಂದ ಮಣಿಸಿದವರು ಗಾಂಧಿ ಮಹಾತ್ಮರು. ಎಲ್ಲಿ ಹಿಂದೂ ಧರ್ಮದಿಂದ ದಲಿತಜನಾಂಗ ದೂರಾಗಿ ಪುರೋಹಿತಶಾಹಿ ಪ್ರಣೀತ ಹಿಂದುತ್ವದ ಪರಿಕಲ್ಪನೆ ಒಡೆದು ಹೋಗುತ್ತದೋ ಎಂದು ಆತಂಕಗೊಂಡವರು ಗಾಂಧಿ. ದಲಿತರ ಪರವಾದ ಅಂಬೇಡ್ಕರವರ ಅನೇಕ ಪ್ರಸ್ತಾಪಗಳನ್ನು ತರಾವರಿ ತಂತ್ರಗಾರಿಕೆಯಿಂದ ಜಾರಿಯಾಗದಂತೆ ನೋಡಿಕೊಂಡವರು ಗಾಂಧಿ. ಅಂತರಂಗದಲ್ಲಿ ಹಾಗೂ ಬಹಿರಂಗದಲ್ಲಿ ಕೆಳ-ತಳಸಮುದಾಯದ ಐಕಾನ್ ಆದ ಅಂಬೇಡ್ಕರರನ್ನು ವಿರೋಧಿಸುತ್ತಲೇ ಬಂದವರು ಗಾಂಧಿ. ಗಾಂಧೀಜಿಯವರ ಈ ಎಲ್ಲಾ ತಂತ್ರಗಾರಿಕೆಯನ್ನು ಅರಿತಿದ್ದ ಬಾಬಾಸಾಹೇಬರು ಬ್ರಿಟೀಷ ಸರಕಾರವನ್ನೇ ದಲಿತರ ಪರ ಕಾನೂನುಗಳಿಗಾಗಿ ಒತ್ತಾಯಿಸುತ್ತಿದ್ದರು.  ಅಂಬೇಡ್ಕರರ ಅಸಾಮಾನ್ಯ ಪ್ರತಿಭೆ ಹಾಗೂ ಜ್ಞಾನವನ್ನು ಮಾನ್ಯ ಮಾಡಿದ್ದ ಬ್ರಿಟೀಷ್ ಸರಕಾರ ಬಾಬಾಸಾಹೇಬರ ಪರವಾಗಿತ್ತು. ಸಂವಿಧಾನ ಭಾರತದ ಪ್ರಾಂತೀಯ ಸಭೆಗಳಿಂದ ಆಯ್ಕೆಯಾದ ಸದಸ್ಯರುಗಳು ಸಂವಿಧಾನ ರಚನಾ ಸಮಿತಿಯ ಸದಸ್ಯರುಗಳನ್ನು ಆಯ್ಕೆ ಮಾಡಿದರು. ಆಗಲೂ ಗಾಂಧಿ ಹಾಗೂ ಕೆಲವಾರು ಮನುವಾದಿಗಳು ಅಂಬೇಡ್ಕರರನ್ನು ಸಂವಿಧಾನ ಕರಡು ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡುವ ಪ್ರಸ್ತಾಪಕ್ಕೆ ಅಡ್ಡಗಾಲು ಹಾಕಲು ಪ್ರಯತ್ನಿಸಿತು. ಆದರೆ. ಸಂವಿಧಾನ ರಚನಾ ಸಮಿತಿಯಲ್ಲಿದ್ದ ಮೂವತ್ತಕ್ಕೂ ಹೆಚ್ಚು ಸದಸ್ಯರುಗಳು ಹಾಗೂ ಮೂವರು  ಬ್ರಿಟೀಷ್ ಮಂತ್ರಿಗಳ ಬೆಂಬಲದಿಂದಾಗಿ ಡಾ.ಅಂಬೇಡ್ಕರರು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾದರು. ಆಗಲೂ ಸಹ  ಸಂವಿಧಾನ ರಚನಾ ಸಭೆಯ ಅಧ್ಯಕ್ಷರನ್ನಾಗಿ ಡಾ.ರಾಜೇಂದ್ರ ಪ್ರಸಾದ್‌ರವರನ್ನು ಆಯ್ಕೆಮಾಡಲಾಗಿತ್ತು. ಹೀಗೆ ಹೇಳುತ್ತಾ ಹೋದರೆ ಇನ್ನು ಬೇಕಾದಷ್ಟು ಸಂಗತಿಗಳು ಚರಿತ್ರೆಯಲ್ಲಿ ದಾಖಲಾಗಿವೆ. ಸ್ವತಃ ಡಾ.ಅಂಬೇಡ್ಕರರೇ ಸಂವಿಧಾನ ರಚನೆಯ ಹಿಂದೆ ಮುಂದೆ ಇರುವ ಹಲವಾರು ವಿಚಾರಗಳ ಬಗ್ಗೆ ಪ್ರಸ್ತಾಪಿಸಿ ಬರೆದಿದ್ದಾರೆ. ಆದರೆ.. ಇವೆಲ್ಲವನ್ನು ಪರಿಗಣಿಸದೇ ಈ ರೂಪಕದ ಹಿಂದಿನ ಪಂಡಿತರುಗಳು ಅಂಬೇಡ್ಕರರನ್ನು ಸಂವಿಧಾನ ಕರಡು ಸಮಿತಿಗೆ ಅಧ್ಯಕ್ಷರನ್ನಾಗಿಸಿದ್ದು ಗಾಂಧಿಯವರೇ ಎನ್ನುವಂತೆ ಬಿಂಬಿಸಿದ್ದಾರೆ.

 ಗಾಂಧೀಜಿಯವರಿಗೆ ಅಂಬೇಡ್ಕರರು ಯಾವ ಜಾತಿಯವರು ಎನ್ನುವುದೇ ಗೊತ್ತಿರಲಿಲ್ಲ ಎನ್ನುವುದು ಈ ರೂಪಕದ ಇನ್ನೊಂದು ಕುತರ್ಕ. ಹಾಗೂ ಅಂಬೇಡ್ಕರರು ಅಸ್ಪೃಷ್ಯ ಜಾತಿಯವರು ಎಂದು ಗೊತ್ತಾದ ತಕ್ಷಣ ಆ ಕೆಳ ಸಮುದಾಯದವರಿಗಾಗಿ ಜೀವನ ಮುಡುಪಾಗಿಡುತ್ತೇನೆಂದು ಗಾಂಧಿ ಘೋಷಿಸುವುದು ಮತ್ತೊಂದು ಅರಗಿಸಿಕೊಳ್ಳಲಾಗದ ನಿರ್ಣಯ. ಯಾಕೆ ಈ ರೀತಿ ಮಿಥ್ ಗಳನ್ನು ಹೊಸದಾಗಿ ಸೃಷ್ಟಿಸಲು ಈ ರೂಪಕದ ನಿರ್ಮಾತೃಗಳು ಪ್ರಯತ್ನಿಸಿದರು.    ಎಲ್ಲಾ ಕ್ರೆಡಿಟ್‌ನ್ನು ಗಾಂಧಿಯವರ ಮಹಾತ್ಮಗಿರಿಯ ಅಕೌಂಟಿಗೆ ಜಮೆ ಮಾಡುವ ಉದ್ದೇಶದ ಹಿಂದಿರುವ ಒತ್ತಾಸೆ ಎಂತಹುದು. ಕೇವಲ ಮೇಲ್ವರ್ಗದವರೋ ಇಲ್ಲವೇ ಗಾಂಧಿಯವರ ಅಂಧಾನುಯಾಯಿಗಳೋ ಈ ರೀತಿಯ ಪ್ರಯತ್ನ ಮಾಡಿದ್ದರೆ ಮೆಚ್ಚಬಹುದಾಗಿತ್ತು. ಈಗ ಬಿಜೆಪಿಯವರು ಅಂತರಂಗದಲ್ಲಿ ಶತಾಯಗತಾಯ ವಿರೋಧಿಸುವ ಗಾಂಧಿ, ಅಂಬೇಡ್ಕರ್‌ರವರನ್ನೂ ತಮ್ಮ ರಾಜಕೀಯ ಕಾರಣಕ್ಕಾಗಿ ಹೊಗಳುವುದನ್ನು ಶುರುಹಚ್ಚಿಕೊಂಡಿರುವ ಹಿಂದಿನ ಕುತಂತ್ರವನ್ನೂ ಅರಿಯಬಹುದು. ಆದರೆ.. ಈ ಭಾರತ ಭಾಗ್ಯ ವಿಧಾತ ಎನ್ನುವ ಸರಕಾರಿ ರೂಪಕದ ಪರಿಕಲ್ಪನೆ ವಾರ್ತಾ ಇಲಾಖೆಯ ನಿರ್ದೇಶಕರಾದ ಎನ್.ಆರ್.ವಿಶುಕುಮಾರ್‌ರವರದು ಹಾಗೂ ರೂಪಕದ ನಿರ್ದೇಶನ ಬಿ.ಎಂ.ಗಿರಿರಾಜ್‌ರವರದು.  ಆದರೆ ಅಕಸ್ಮಾತ್ ಇವರಿಬ್ಬರ ಗ್ರಹಿಕೆಯಲ್ಲಿ ತಪ್ಪಾದರೆ ತಿದ್ದಲೆಂದೇ ಸಲಹಾ ಮಂಡಳಿಯೊಂದನ್ನು ಮಾಡಲಾಗಿದೆ. ಅದರಲ್ಲಿ ದಲಿತ ಸಮುದಾಯದ ನಾಯಕರೆಂದು ಗುರುತಿಸಿಕೊಂಡಿದ್ದ ಡಾ.ಸಿದ್ದಲಿಂಗಯ್ಯ, ಎಲ್.ಹನುಮಂತಯ್ಯನವರೂ ಇದ್ದಾರೆ. ಅಂಬೇಡ್ಕರ್ ಅದ್ಯಯನ ಕೇಂದ್ರದ ನಿರ್ದೇಶಕರಾಗಿರುವ ಡಾ.ಎಸ್ ನರೇಂದ್ರಕುಮಾರ್‌ರವರೂ ಇದ್ದಾರೆ. ಸರಕಾರಿ ಕೃಪಾಪೋಷಿತ ಪಂಡಿತರಾದ ಹಂಸಲೇಖ, ಸಿ.ಬಸವಲಿಂಗಯ್ಯ ಹಾಗೂ ಡಾ.ಕೆ.ವೈ.ನಾರಾಯಣಸ್ವಾಮಿಯವರು ಗೌರವ ಸಲಹೆಗಾರರಾಗಿದ್ದಾರೆ. ಆದರೂ ಅಂಬೇಡ್ಕರ್ ರೂಪಕದಲ್ಲಿ ಗಾಂಧಿಗಿರಿಯನ್ನು ಸಮರ್ಥಿಸಿಕೊಳ್ಳಲಾಗಿದೆ. ಇದರಲ್ಲಿ ಯಾರ ಪಾತ್ರ ಎಷ್ಟು ಎಂದು ಗೊತ್ತಿಲ್ಲಾ. ಆದರೆ ಕೆವೈಎನ್ ರವರಂತಹ ರಾಜಾಶ್ರಿತ ಪಂಡತರು ರೂಪಕದ ಗಾಂಧಿಯನ್ ನಿಲುವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಹಾಗೂ ಅವರ ಅಂಧಾನುಯಾಯಿ ದಲಿತ ಶಿಷ್ಯಪಡೆ ತಲೆ ಅಲ್ಲಾಡಿಸುತ್ತಿದೆ. ಇನ್ನು ಕೆಲವು ಮೇಲ್ವರ್ಗದವರು ಹಾಗೂ ದಲಿತ ವಿರೋಧಿ ಜನಿವಾರಿಗಳು ಈ ರೂಪಕದ ಗಾಂಧಿಪರ ನಿಲುವನ್ನು ಸಂಭ್ರಮಿಸಿ ಅಂಬೇಡ್ಕರ್ ಸಂವಿಧಾನ ಶಿಲ್ಪಿಯಾಗಲು ಗಾಂಧೀಜಿ ಕಾರಣವೆಂದು ಸಮರ್ಥಿಸಿಕೊಳ್ಳುತ್ತಾ ವಿತಂಡವಾದಕ್ಕಿಳಿಯುತ್ತಿದ್ದಾರೆ.

ಆದರೆ ಈ ಸಮರ್ಥಕರು ಹಾಗೂ ವಿತಂಡವಾದಿಗಳಿಗಿಂತಾ ಈ ರೂಪಕದ ನಿರ್ದೇಶಕರಾದ ಬಿ.ಎಂ.ಗಿರಿರಾಜ್ ರವರ ಪ್ರಾಮಾಣಿಕತೆ ನಿಜಕ್ಕೂ ಮೆಚ್ಚುವಂತಹುದು. ರೂಪಕ ಪ್ರದರ್ಶನದ ನಂತರ ಎಲ್ಲರೂ ರೂಪಕವನ್ನು ಹಾಗೂ ಅದಕ್ಕೆ ಕಾರಣೀಕರ್ತರಾದವರನ್ನು ಹೊಗಳಿ ಅಟಕ್ಕೇರಿಸುತ್ತಿರುವಾಗ ತಲ್ಲಣದಿಂದ ತಳಮಳಿಸುತ್ತಿದ್ದವರು ಗಿರಿರಾಜ್. ರೂಪಕದಲ್ಲಾದ ನ್ಯೂನ್ಯತೆಗಳ ಬಗ್ಗೆ ಅವರಿಗೆ ಗೊತ್ತಾಗಿಹೋಗಿತ್ತು. ತಪ್ಪುಗಳು ಯಾರಿಂದಲೇ ಆಗಿದ್ದರೂ ಅದರ ಹೊಣೆ ಹೊರಬೇಕಾಗಿದ್ದು ರೂಪಕದ ನಿರ್ದೇಶಕರಾದವರೇ ಎನ್ನುವುದು ಗಿರಿರಾಜ್‌ರವರಿಗೆ ಮನದಟ್ಟಾಗಿತ್ತು. ಕೊನೆಗೂ ರೂಪಕದ ಕುರಿತು ತಮ್ಮ ಅತೃಪ್ತಿಯನ್ನು ತೋಡಿಕೊಂಡು ನ್ಯೂನ್ಯತೆಗಳನ್ನು ಸರಿಪಡಿಸಲು ಇನ್ನೊಂದು ಅವಕಾಶ ಕೊಡಿ.. ತಪ್ಪುಗಳನ್ನು ತಿದ್ದಿಕೊಳ್ಳುವೆ ಎಂದು ವೇದಿಕೆಯ ಮೇಲಿಂದಲೇ ಪ್ರೇಕ್ಷಕರ ಪಾದಕ್ಕೆ ನಮಸ್ಕರಿಸಿ ತಪ್ಪೊಪ್ಪಿಕೊಂಡಿದ್ದಂತೂ ಮರೆಯಲಾಗದ ಸಂಗತಿ. ಆ ಒಂದು ಸಾರ್ವಜನಿಕ ತಪ್ಪೊಪ್ಪಿಗೆಯಿಂದಾ ಗಿರಿ ಅಲ್ಲಿದ್ದ ಎಲ್ಲರಿಗಿಂತಲೂ ದೊಡ್ಡವರಾಗಿ ಬಿಟ್ಟರು. ಆತ್ಮಸಾಕ್ಷಿಯನ್ನು ಬಿಟ್ಟು ರೂಪಕವನ್ನು ಆಹಾ ಓಹೋ ಎಂದು ಸಮರ್ಥಿಸಿಕೊಳ್ಳುತ್ತಿದ್ದವರ ಕೆನ್ನೆಗೆ ಗಿರಿರಾಜ್ ಬಾರಿಸಿದಂತೆ ಕೆಲವರಿಗಾದರೂ ಭಾಸವಾಗಿದ್ದಂತೂ ಸತ್ಯ. ತಪ್ಪನ್ನು ಒಪ್ಪಿಕೊಂಡು ಸರಿಪಡಿಸುತ್ತೇನೆ ಇನ್ನೊಂದು ಅವಕಾಶ ಕೊಡಿ ಎಂದು ಸಾರ್ವತ್ರಿಕವಾಗಿ ಕೇಳಿದ ಗಿರಿರಾಜ್ ಪ್ರಾಮಾಣಿಕತೆ ನಿಜಕ್ಕೂ ವಿತಂಡವಾದಿಗಳಿಗೆ ಹಾಗೂ ಹೊಗಳುಬಟ್ಟರಿಗೆ ಪಾಠವಾಗಬೇಕು ಹಾಗೂ ತಪ್ಪುಗಳನ್ನು ಸಮರ್ಥಿಸಿಕೊಳ್ಳುವವರಿಗೆ ಮಾದರಿಯಾಗಬೇಕು.
   
ಆದರೆ.. ಒಂದು ಸರಕಾರಿ ಸಾಂಸ್ಕೃತಿಕ ಕಾರ್ಯಕ್ರಮ ಎಂದರೆ ಇತಿಹಾಸವನ್ನು ತಿರುಚಿದರೂ ಸರಿ ಆದರೆ ಯಾರ ಮನಸ್ಸಿಗೂ ನೋವಾಗಬಾರದು ಎನ್ನುವ ನಿಲುವನ್ನು ಹೊಂದಿರುತ್ತದೆ. ಈ ರೂಪಕದ ಉದ್ದೇಶ ಉದಾತ್ತವಾಗಿರಬಹುದು. ಗಾಂಧಿ ಹಾಗೂ ಅಂಬೇಡ್ಕರರನ್ನು ನಾಯಕರನ್ನಾಗಿ ನಿರೂಪಿಸುವ ಮಹೋನ್ನತ ಬಯಕೆಯೂ ಇರಬಹುದು. ಆದರೆ ಇಂತಹ ಕಲ್ಪಿತ ಆಶಯಗಳಿಗಾಗಿ ಇತಿಹಾಸವನ್ನು ತಿರುಚುವ ಇಲ್ಲವೇ ಮರುನಿರ್ಮಿಸುವ ಪ್ರಯತ್ನ ಅನುಕರಣೀಯವಲ್ಲ.   ಅಂಬೇಡ್ಕರರು ಭಾರತ ಭಾಗ್ಯ ವಿಧಾತ ಎಂದು ಹೇಳುತ್ತಲೇ ಈ ವಿಧಾತನಿಗೆ ದಾತನಾಗಿದ್ದು ಗಾಂಧಿ ಎನ್ನುವುದನ್ನೂ ಪ್ರತಿಪಾದಿಸುವ ಅನಿವಾರ್ಯತೆ ಈ ರೂಪಕದ ನಿರ್ಮಾತೃಗಳಿಗೆ ಇರಬಹುದು. ಅಂಬೇಡ್ಕರ್‌ರವರ ರಾಜಕೀಯ ದೃಷ್ಟಿಕೋನದಲ್ಲಿ ಗಾಂಧಿ ಪ್ರತಿನಾಯಕ, ಗಾಂಧೀಜಿಯವರ ದೃಷ್ಟಿಕೋನದಲಿ ಬಾಬಾಸಾಹೇಬರು ಖಳನಾಯಕ ಎನ್ನುವುದು ಬಹುತೇಕ ಸಂದರ್ಭದಲ್ಲಿ ಸಾಬೀತಾಗಿದೆ. ಆದರೆ.. ಈ ರೂಪಕದಲ್ಲಿ ಇಬ್ಬರನ್ನೂ ನಾಯಕರನ್ನಾಗಿ ಮಾಡುವ ದಾವಂತದಲ್ಲಿ ಗಾಂಧೀಜಿಯನ್ನ ಕಿಂಗ್‌ಮೇಕರ್ ಮಾಡುವ ಅಗತ್ಯವಿರಲಿಲ್ಲ. ಅಂಬೇಡ್ಕರ್ ಜಾತಿ ಯಾವುದೆಂದು ಗೊತ್ತಾದ ತಕ್ಷಣ ಗಾಂಧೀಜಿಯ ಮನಪರಿವರ್ತನೆಯಾಗಿ ದಲಿತೋದ್ದಾರಕನನ್ನಾಗಿ ತೋರಿಸುವ ಅನಿವಾರ್ಯತೆ ಇರಲಿಲ್ಲ. ಇನ್ನೂ ರಾಜ್ಯಾದ್ಯಂತ ೩೦ ಜಿಲ್ಲೆಗಳಲ್ಲಿ ಈ ರೂಪಕವು ಪ್ರದರ್ಶನಗೊಳ್ಳಲಿದೆ. ಮುಂದಿನ ಪ್ರದರ್ಶನದಲ್ಲಾದರೂ ಈ ಐತಿಹಾಸಿಕ ನ್ಯೂನ್ಯತೆಗಳನ್ನು ಸರಿಪಡಿಸುವ ಅಗತ್ಯವಿದೆ. ಇಲ್ಲವಾದರೆ ಅಂಬೇಡ್ಕರ್ ವಾದಿಗಳಷ್ಟೇ ಅಲ್ಲಾ ಪ್ರಗತಿಪರ ವ್ಯಕ್ತಿಗಳೆಲ್ಲಾ ಪ್ರತಿಭಟಿಸಬೇಕಾಗುತ್ತದೆ. ಒಂದು ಉದಾತ್ತ ಉದ್ದೇಶದ ರೂಪಕ ಸುಖಾಸುಮ್ಮನೇ ವಿವಾದಕ್ಕೆ ಒಳಗಾಗುತ್ತದೆ.

ಇಂತಹ ಚಾರಿತ್ರಿಕ ವಿವಾದಾಸ್ಪಕ ಸನ್ನಿವೇಶಗಳನ್ನು ಹೊರತು ಪಡಿಸಿ, ಮುಂದಿನ ಪ್ರದರ್ಶನದಲ್ಲಿ ಬದಲಾಯಿಸಿಕೊಳ್ಳಬಹುದಾದ ತಾಂತ್ರಿಕ ಹಾಗೂ ಅಭಿನಯ ಸಂಬಂಧಿತ ನ್ಯೂನ್ಯತೆಗಳನ್ನು ಹೊರತುಪಡಿಸಿ ಇಡೀ ರೂಪಕ ನಿಜಕ್ಕೂ ಅತ್ಯದ್ಬುತವಾಗಿ ಮೂಡಿಬಂದಿದೆ. ಒಂದೂವರೆ ಗಂಟೆಗಳ ಕಾಲಾವಧಿಯಲ್ಲಿ ಅಂಬೇಡ್ಕರರ ವೇದನೆ ಸಾಧನೆ ಹಾಗೂ ಬದುಕನ್ನು ಕಟ್ಟಿಕೊಡುವಲ್ಲಿ ವಿಶುಕುಮಾರರವರ ಪರಿಕಲ್ಪನೆ ಹಾಗೂ ಬಿ.ಎಂ.ಗಿರಿರಾಜ್‌ರವರ ಸಾಹಿತ್ಯ-ಹಾಗೂ ನಿರ್ದೇಶನ ಯಶಸ್ವಿಯಾಗಿದೆ. ಇನ್ನೂ ಕೆಲವೊಂದಿಷ್ಟು ಬದಲಾವಣೆಗಳೊಂದಿಗೆ ಭಾರತ ಭಾಗ್ಯ ವಿಧಾತನ ಕುರಿತ ರೂಪಕ ಕರ್ನಾಟಕದ ಜನತೆಯನ್ನು ತಲುಪಬೇಕಾಗಿದೆ ಹಾಗೂ ಸರಕಾರ ಹೆಚ್ಚು ಜನರನ್ನು ತಲುಪಿಸಲು ಪ್ರಯತ್ನ ಮಾಡಬೇಕಿದೆ.    

           -ಶಶಿಕಾಂತ ಯಡಹಳ್ಳಿ