ಶುಕ್ರವಾರ, ಏಪ್ರಿಲ್ 28, 2017

ತಹ ತಹ... 87 ಭಾಷಾಂಧತೆ ಬಿಟ್ಟು.. ಸ್ವಾಭಿಮಾನದ ಬದುಕು ಕಟ್ಟು...






ನೆರೆಹೊರೆಯ ರಾಜ್ಯಗಳಲ್ಲಿ ಒಮ್ಮೆ ಹೋಗಿ ಕೇಳಿ " ಕನ್ನಡಿಗರು ಜಗಳಗಂಟರು" ಎಂದೇ ಹೇಳುತ್ತಾರೆ. ಆದರೆ ಕನ್ನಡಿಗರನ್ನು ಕೇಳಿದರೆ " ನಾವು ಕನ್ನಡಿಗರು ಸಹಿಷ್ಣುತತೆ ಹೊಂದಿದವರು" ಎಂದು ಹೇಳುತ್ತಾ 'ನೋಡಿ ಎಲ್ಲಾ ಭಾಷಿಕರಿಗೂ ಬೆಂಗಳೂರನ್ನೇ ಬಿಟ್ಟುಕೊಟ್ಟಿದ್ದೇವೆ' ಎಂದು ಸಮರ್ಥನೆಗಳನ್ನು ಕೊಡುತ್ತಾರೆ. ಎರಡೂ ರೀತಿಯ ಅನಿಸಿಕೆಗಳಲ್ಲಿ ಅರ್ಧ ಸತ್ಯವಿದೆ. ಕನ್ನಡಿಗರೆಲ್ಲರೂ ಜಗಳಗಂಟರಲ್ಲದಿದ್ದರೂ ಕನ್ನಡಿಗರ ಸ್ವಾಭಿಮಾನದ ಪ್ರತಿನಿಧಿಗಳೆಂದು ಹೇಳಿಕೊಳ್ಳುತ್ತಿರುವ ಕೆಲವು ಕನ್ನಡ ಪರ ಸಂಘಟನೆಗಳು ಕೆಲವು ಸಲ ಅನಗತ್ಯ ಸಂಗತಿಗಳನ್ನು ದೊಡ್ಡದು ಮಾಡಿ ಅಸಹಿಷ್ಣುತತೆಯ ವಾತಾವರಣ ಸೃಷ್ಟಿಸಿ ಕನ್ನಡಿಗರೆಲ್ಲರ ಮೇಲೆ ಜಗಳಗಂಟತನದ ಆರೋಪವನ್ನು ಹೊರೆಸಿದ್ದಂತೂ ಸತ್ಯ


ಉದಾಹರಣೆಗೆ ಬಾಹುಬಲಿ ಚಿತ್ರದ ಬ್ಯಾನ್ ಹಾಗೂ ಬೆಂಗಳೂರು ಬಂಧ್ ವಿಚಾರ. ಸತ್ಯರಾಜ್ ಎನ್ನುವ ತಮಿಳು ಚಿತ್ರರಂಗದ ನಟ 9 ವರ್ಷದ ಹಿಂದೆ ಕಾವೇರಿ ವಿಚಾರದಲ್ಲಿ ಕನ್ನಡ, ಕನ್ನಡಿಗರ ಕುರಿತು ಅವಮಾನಕಾರಿಯಾಗಿ ಮಾತಾಡಿದ್ದನ್ನೇ ಈಗ ಕನ್ನಡಿಗರ ಸ್ವಾಭಿಮಾನದ ಹೋರಾಟವಾಗಿಸುವ ಪ್ರಯತ್ನ ಮಾಡಲಾಗುತ್ತಿದ್ದು ಬಾಹುಬಲಿ ಬಿಡುಗಡೆಯಾಗುತ್ತಿರುವ ಎಪ್ರಿಲ್ 28 ರಂದು ಬೆಂಗಳೂರು ಬಂಧ್ ಗೆ ಕರೆಕೊಡಲಾಗಿದೆ. 9 ವರ್ಷದಲ್ಲಿ ಸತ್ಯರಾಜ್ ನಟಿಸಿದ ಕೆಲವಾರು ತಮಿಳು ಸಿನೆಮಾಗಳು ಕರ್ನಾಟಕದಲ್ಲೂ ಪ್ರದರ್ಶನ ಕಂಡಿವೆ. ಬಾಹುಬಲಿ 1 ನೇ ಅವತರಣಿಕೆಯಲ್ಲಿ ಸತ್ಯರಾಜ್ ಮಾಡಿದ ಕಟ್ಟಪ್ಪನ ಪಾತ್ರವನ್ನೂ ಕನ್ನಡಿಗರು ತಮ್ಮ ನೆಲದಲ್ಲೇ ತಮಿಳು ಹಿಂದಿ ಭಾಷೆಯಲ್ಲೂ ನೋಡಿದ್ದಾರೆ. ಆಗ ಇಲ್ಲದ ವಿರೋಧ ಬಾಹುಬಲಿಯ 2 ನೇ ಅವತರಣಿಕೆಯ ಬಿಡುಗಡೆ ಸಂದರ್ಭದಲ್ಲಿ ಯಾಕೆ ದೊಡ್ಡದಾಯಿತು? ಇದರ ಹಿಂದೆ ಕೆಲವು ಕನ್ನಡಪರ ಸಂಘಟನೆಗಳ ನಾಯಕರ ಹಿತಾಸಕ್ತಿಯಾದರೂ ಏನು

 ಸತ್ಯರಾಜ್ ಕನ್ನಡಿಗರನ್ನು ಅವಮಾನಿಸಿದ್ದೇ ನಿಜವಾದರೆ ಅವರನ್ನು ವಿರೋಧಿಸಲಿ. ಆದರೆ ಬಾಹುಬಲಿಯಲ್ಲಿ ಸಂಭಾವನೆ ಪಡೆದು ಅಭಿನಯಿಸಿದ್ದನ್ನು ಬಿಟ್ಟು ಸತ್ಯರಾಜಗೂ ಬಾಹುಬಲಿ ನಿರ್ಮಾಣಕ್ಕೂ ಬೇರೆ ಯಾವ ಸಂಬಂಧವೂ ಇಲ್ಲಾ. "ಬಾಹುಬಲಿಗೆ ತೊಂದರೆ ಆಗುವುದರಿಂದ ಸತ್ಯರಾಜ್ ಗೆ ಆಗುವ ನಷ್ಟವೇನೂ ಇಲ್ಲಾ. ಆದರೆ ಐದು ವರ್ಷ ತಪಸ್ಸಿನಂತೆ ಕೆಲಸ ಮಾಡಿದ ಕಲಾವಿದರು, ತಂತ್ರಜ್ಞರು ಮತ್ತು ಕರ್ನಾಟಕದ ಹಂಚಿಕೆದಾರರಿಗೆ ತೊಂದರೆಯಾಗುತ್ತದೆ. ಸತ್ಯರಾಜ್ ಮೇಲಿನ ಸಿಟ್ಟನ್ನು ಬಾಹುಬಲಿಯ ಮೇಲೆ ತೋರಿಸಬಾರದು" ಎಂದು ಬಾಹುಬಲಿ ನಿರ್ದೇಶಕ ಈಗಾಗಲೇ ಮನವಿ ಮಾಡಿಕೊಂಡಿದ್ದಾರೆ. ಯಾವುದೋ ಒಬ್ಬ ನಟ ತನ್ನ ವ್ಯಕ್ತಿಗತ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಒಂದು ಸಿನೆಮಾವನ್ನೇ ನಿಷೇಧಿಸುವುದು ಅಪೇಕ್ಷಣೀಯವಲ್ಲ. ಅನಗತ್ಯವಾಗಿ ಕನ್ನಡಿಗರ ಭಾವನೆಗಳನ್ನು ಬಡಿದೆಬ್ಬಿಸಿ ಭಾಷಾ ದ್ವೇಷ ಹೆಚ್ಚಿಸುವುದು ಅಕ್ಷಮ್ಯ. ಹಾಗೆ ನೋಡಿದರೆ ಕಾವೇರಿ ನೀರು ಹಂಚಿಕೆಯ ವಿವಾದದ ಹೋರಾಟ ತೀವ್ರಗೊಂಡಾಗ ಟೌನ್ ಹಾಲ್ ಮುಂದೆ ಇದೇ ವಾಟಾಳ್ ನಾಗರಾಜ್ ಸೇರಿದಂತೆ ಕೆಲವು ಕನ್ನಡದ ಕಟ್ಟಾಳುಗಳು ಎಂದೆನಿಸಿಕೊಂಡವರು ಜಯಲಲಿತಾ ಬಗ್ಗೆ ಅತೀ ಕೆಟ್ಟದಾಗಿ ಮಾತಾಡಿದರು. ತಮಿಳರ ಬಗ್ಗೆ ತುಚ್ಚವಾಗಿ ಗೇಲಿಮಾಡಿದರು. ಜಯಲಲಿತಾರ ಅಣಕು ಶ್ರಾದ್ಧವನ್ನೂ ಮಾಡಿದರು. ಇದೆಲ್ಲವೂ ಮಾಧ್ಯಮಗಳಲ್ಲಿ ಪ್ರಚಾರಗೊಂಡಿತು. ಇದನ್ನೇ ಮುಂದಿಟ್ಟುಕೊಂಡು ತಮಿಳಿಗರು ಕನ್ನಡ ಸಿನೆಮಾಗಳನ್ನು ತಮಿಳುನಾಡಿನಲ್ಲಿ ನಿಷೇಧಿಸಬೇಕಾಗಿತ್ತು.. ಕನ್ನಡ ಸಿನೆಮಾಗಳ ನಿರ್ಮಾಣದಲ್ಲಿ ಯಾವ ತಮಿಳಿಗನೂ ಭಾಗ ವಹಿಸದಂತೆ ನಿರ್ಬಂಧಿಸಬಹುದಿತ್ತು. ಆದರೆ ಹಾಗೇನೂ ಆಗಲಿಲ್ಲ. ಎಂದೋ ಒಬ್ಬ ತಮಿಳು ಭಾಷಾ ನಟ ಭಾಷಾಂಧತೆಯಿಂದಾ ಕನ್ನಡಿಗರ ವಿರುದ್ಧ ಮಾತಾಡಿದನೆಂಬ ನೆಪದಲ್ಲಿ ಪ್ರತಿಭಟನೆ, ಬಂದ್ ಗಳನ್ನು ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುವುದು ಭಾಷಾಭಿಮಾನದ ಹೆಸರಲ್ಲಿ ಕನ್ನಡಿಗರಿಗೆ ಕೊಡುವ ಅನಗತ್ಯ ಕಿರುಕುಳವಾಗಿದೆ. ಇಂತಹ ಅಕಾರಣಗಳಿಂದಲೇ ಕನ್ನಡಿಗರು ಜಗಳಗಂಟರು ಎನ್ನುವ ಆರೋಪಕ್ಕೆ ಈಡಾಗಬೇಕಿದೆ

ನಮ್ಮ ಕನ್ನಡ ಸಂಘಟನೆಗಳ ಉಟ್ಟು ಓರಾಟಗಾರರಿಗೆ ನಿಜಕ್ಕೂ ಕನ್ನಡಪರ ಕಾಳಜಿ ಇದ್ದರೆ ಬರದಿಂದ ಕಂಗೆಟ್ಟ ಕನ್ನಡಿಗರ ಸಹಾಯಕ್ಕೆ ಧಾವಿಸಲಿ. ಜನರಿಗೆ ನೀರು , ಜಾನುವಾರುಗಳಿಗೆ ಮೇವು ಕೇಂದ್ರಗಳನ್ನು ಸ್ಥಾಪಿಸಲಿ. ಕೇಂದ್ರ ಸರಕಾರ ಹಿಂಬಾಗಿಲಿನಿಂದ ಹಿಂದಿ ಭಾಷೆ ಹೇರಲು ಪ್ರಯತ್ನಿಸುತ್ತಿದೆಯಲ್ಲಾ ಅದನ್ನು ವಿರೋಧಿಸಲಿ. ಕೇಂದ್ರ ಸರಕಾರದ ಇಲಾಖೆಗಳಲ್ಲಿಯ ನೌಕರಿಗಳಲ್ಲಿ ಕನ್ನಡಿಗರನ್ನು ನಿರ್ಲಕ್ಷಿಸಲಾಗುತ್ತಿದೆಯಲ್ಲಾ ಅದರ ಬಗ್ಗೆ ಇವರ ಸ್ವಾಭಿಮಾನದ ಕಿಚ್ಚು ಹೆಚ್ಚಲಿ. ಸಮಾನ ಶಿಕ್ಷಣ ನೀತಿಗಾಗಿ ಒತ್ತಾಯಿಸಲಿ, ಕರ್ನಾಟಕದ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಕನಿಷ್ಟ ಶೇಕಡಾ 50 ರಷ್ಟು ಖಡ್ಡಾಯ ನೌಕರಿ ಕೊಡಬೇಕೆಂದು ಪಟ್ಟು ಹಿಡಿಯಲಿ... ಕನಿಷ್ಟ ಸವಲತ್ತು ಹಾಗೂ ಬೆಳೆದ ಬೆಳೆಗೆ ಬೆಲೆ ಇಲ್ಲದೇ ದಲ್ಲಾಳಿಗಳ ಹಾವಳಿಯಿಂದ ತತ್ತರಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಅನ್ನದಾತನ ಸಮಸ್ಯೆಗೆ ಖಾಯಂ ಪರಿಹಾರ ದೊರಕಿಸಲು ರಾಜ್ಯ ಹಾಗೂ ಕೇಂದ್ರ ಸರಕಾರಗಳ ವಿರುದ್ದ ಸ್ವಾಭಿಮಾನದ ಸಿಟ್ಟು ಸ್ಪೋಟಗೊಳ್ಳಲಿ. ಇವೆಲ್ಲಾ ಮೂಲಭೂತ ಆತಂಕಗಳನ್ನು ನಿರ್ಲಕ್ಷಿಸಿ ಯಾವುದೊ ಭಾಷೆಯ ನಟ ತರಲೆ ಮಾತಾಡಿದ್ದಕ್ಕೆ ಬೆಂಗಳೂರನ್ನೇ ಬಂದ್ ಮಾಡುವುದರಲ್ಲಿ ಯಾವುದೇ ತಾತ್ವಿಕತೆ ಇಲ್ಲಾ. ಅಗತ್ಯತೆ ಇರುವುದನ್ನು ಬಿಟ್ಟು ಇಲ್ಲದಿರುವುದನ್ನೇ ದೊಡ್ಡದು ಮಾಡುವ ಅಗತ್ಯವೂ ಇಲ್ಲಾ. ಹೀಗೆ ಮಾಡಿದಾಗಲೆಲ್ಲಾ ಕನ್ನಡಿಗರಿಗೆ ಇಂತಹ ಕನ್ನಡ ಸಂಘಟನೆಗಳ ಮೇಲೆ ಸಂದೇಹಗಳು ಕಾಡುತ್ತವೆ. ಬಾಹುಬಲಿ ನಿರ್ಮಾಪಕರು ಹಾಗೂ ಹಂಚಿಕೆದಾರರ ಜೊತೆಗೆ ಡೀಲ್ ಕುದುರಿಸಲು ರೀತಿ ಒತ್ತಡ ಸೃಷ್ಟಿಸಲಾಗುತ್ತದೆ ಎನ್ನುವ ಆರೋಪಕ್ಕೆ ರೆಕ್ಕೆ ಪುಕ್ಕಗಳು ಬೆಳೆಯುತ್ತವೆ. ಕನ್ನಡಿಗರು ಜಗಳಗಂಟರು ಎನ್ನುವ ಅನ್ಯಭಾಷೀಯರ ದೂಷಣೆಗೆ ನಾವೇ ಸಾಕ್ಷಗಳನ್ನು ಒದಗಿಸಿದಂತಾಗುತ್ತದೆ.
ಹೀಗೆ ಬಂದ್ ಮಾಡುವುದರಿಂದ ಸತ್ಯರಾಜ್ ಹಾಗೂ ತಮಿಳರಿಗೆ ಏನೇನೂ ನಷ್ಟವೆಂಬುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಸತ್ಯರಾಜನಂತಹ ಅಪ್ರಭುದ್ದ ಭಾಷಾಂಧ ವ್ಯಕ್ತಿ ತಮಿಳುನಾಡಿನ ಸ್ವಾಭಿಮಾನದ ಸಂಕೇತವಾಗಿಬಿಡುತ್ತಾನೆ. ಜಗತ್ತಿನಾದ್ಯಂತ ಸಾವಿರ ಕೋಟಿ ವ್ಯವಹಾರ ಮಾಡುವ ಬಾಹುಬಲಿ ನಿರ್ಮಾಪಕರಿಗೂ ಕರ್ನಾಟಕದಿಂದ ಬರಬಹುದಾದ ಮೂವತ್ತು ಕೋಟಿ ಲಾಭ ಬರದೇ ಹೋದರೂ ಅಂತಹ ನಷ್ಟವೇನಿಲ್ಲಾ. ಆದರೆ ಹರತಾಳ ಬಂಧ್ ಗಳಿಂದಾಗಿ ಕನ್ನಡಿಗರ ಒಂದು ದಿನದ ಬದುಕು ಅಸ್ತವ್ಯಸ್ತವಾಗುತ್ತದೆ. ಜಗತ್ತೇ ನೋಡಬಹುದಾದ ಬಾಹುಬಲಿ ನೋಡಬಯಸುವ ಕರ್ನಾಟಕದ ಜನರಿಗೆ ಸಿನೆಮಾ ನೋಡಲು ಸಾಧ್ಯವಾಗದೇ ಹೋಗುತ್ತದೆ. ಇಂತಹ ಸಣ್ಣ ಸಣ್ಣ ವಿಚಾರಗಳು ಗೊತ್ತಿದ್ದರೂ ಅನಗತ್ಯ ಬಂದ್ ಗೆ ಕರೆಕೊಡುವ ವಾಟಾಳ್ ನಾಗರಾಜರಂತಹ ವೃತ್ತಿಪರ ಹೋರಾಟಗಾರರು ತಮ್ಮ ಗಮನವನ್ನು ಕನ್ನಡಿಗರ ಬೇರೆ ಅಗತ್ಯ ಸಮಸ್ಯೆಗಳತ್ತ ತಿರುಗಿಸಿದರೆ ಕನ್ನಡಿಗರ ಹಿತರಕ್ಷಣೆಗೆ ಸಹಾಯವಾಗುತ್ತದೆ

ಅಂತೂ ಇಂತೂ ಸತ್ಯರಾಜ್ ಬಾಹುಬಲಿ ನಿರ್ಮಾಪಕರು ಹಾಗೂ ನಿರ್ದೇಶಕರ ಮನವಿಯನ್ನು ಪರಿಗಣಿಸಿ ಕ್ಷಮಾಪಣೆಯನ್ನು ಕೇಳಿದ್ದಾರೆ. ಕನ್ನಡ ಪರ ಹೋರಾಟದ ಗುತ್ತಿಗೆದಾರರಾದ  ವಾಟಾಳ್ ನಾಗರಾಜ್ ಮತ್ತು ಇತರರು ತಮ್ಮ ಒಂದಂಶದ ಬ್ಲಾಕ್ಮೇಲ್ ಅಜೆಂಡಾ ಯಶಸ್ವಿಯಾಗಿದ್ದಕ್ಕೆ ಬಂದ್ ಪ್ರಹಸನವನ್ನು ನಿಲ್ಲಿಸಿ ಬಾಹುಬಲಿ ಪ್ರದರ್ಶನಕ್ಕೆ ಅನುಮತಿ ನೀಡಿದ್ದಾರೆ. ಜೊತೆಗೆ ತಮ್ಮ 9 ವರ್ಷದ ಹಿಂದಿನ ವ್ಯಯಕ್ತಿಕ ದ್ವೇಷಕ್ಕೆ  ವಾಟಾಳ್ ಈಗ ಸೇಡು ತೀರಿಸಿಕೊಂಡು ಸಂತೃಪ್ತರಾಗಿದ್ದಾರೆ. ಈ ನಡುವೆ ಯಾವ್ಯಾವ ಹಿಡನ್ ಡೀಲ್ ಗಳು ನಡೆದವೋ ಗೊತ್ತಿಲ್ಲಾ. ಆದರೆ.. ಈ ಕನ್ನಡಪರ ಸ್ವಘೋಷಿತ ನಾಯಕರಿಂದಾಗಿ ಕನ್ನಡಿಗರು ಜಗಳಗಂಟರು ಎನ್ನುವ ಆರೋಪವಂತೂ ಮತ್ತೊಮ್ಮೆ ಸಾಬೀತಾಯಿತು ಹಾಗೂ ಕೆಲವು ಕನ್ನಡಪರ ಸಂಘಟನೆಗಳು ರೋಲ್ ಕಾಲ್ ಗಾಗಿಯೇ ಹೋರಾಟ ಮಾಡುತ್ತವೆ ಎನ್ನುವ ಸಂದೇಹ ಮತ್ತೊಮ್ಮೆ ಬಲಯುತವಾಯಿತು.     

ಇಷ್ಟಕ್ಕೂ ಕನ್ನಡದ ಸ್ವಾಭಿಮಾನ ಕೇವಲ ಭಾಷೆಯಲ್ಲಿರದೇ ಕನ್ನಡಿಗ ಸ್ವಾವಲಂಬಿಯಾಗಿ ಬದುಕುವುದರಲ್ಲಿದೆ ಎಂಬ ಸತ್ಯ ಅರಿವಾದ ದಿನ ಕನ್ನಡಪರ ಸಂಘಟನೆಗಳ ಅಸ್ತಿತ್ವ ಸಾರ್ಥಕವಾಗುತ್ತದೆ..  ಜೈ ಕರ್ನಾಟಕ...

- ಶಶಿಕಾಂತ ಯಡಹಳ್ಳಿ


ಬುಧವಾರ, ಏಪ್ರಿಲ್ 19, 2017

ತಹ ತಹ....86 "ಸರ್ವ ಧರ್ಮಗಳ ಶಬ್ದ ಭಯೋತ್ಪಾದನೆ ನಿಲ್ಲಲಿ"


"ಈ ಮಸೀದಿಗಳು ದಿನನಿತ್ಯ ಉತ್ಪಾದಿಸುವ ಶಬ್ದಾಸುರನ ಕಾಟ ಸಹಿಸಲಸಾಧ್ಯ ಕೂಡಲೇ ಬ್ಯಾನ್ ಮಾಡಲೇಬೇಕು. ನಮಗೆ ಅಂದರೆ ಇಸ್ಲಾಮೇತರ ಬಹುಸಂಖ್ಯಾತರಿಗೆ ನಿದ್ರಾಭಂಗ ಮಾಡ್ತಿರೋದು ಅಕ್ಷಮ್ಯ, ಮೊದಲು ಈ ಅಲ್ಲಾ ಹೋ ಆಜಾನ್ ಎನ್ನುವ ದ್ವನಿವರ್ಧಕದ ಮೂಲಕ ಪ್ರಾರ್ಥನೆ ಆಹ್ವಾನ ನಿಲ್ಲಿಸಲೇಬೇಕು... ನಮ್ಮ ಮನೆಯ ಪುಟ್ಟ ಮಕ್ಕಳಿಗೆಲ್ಲಾ ನಿದ್ರಾಭಂಗವಾಗುತ್ತದೆ..."

ಹೀಗೆ ಮುಸ್ಲಿಮೇತರರಾದ ಹಿಂದುತ್ವವಾದಿಗಳು ಆಗಾಗ ತಮ್ಮ ಅಸಮಾಧಾನ ಹೇಳಿಕೊಳ್ಳುವುದು ಈ ಮೈಕಾಸುರ ಅನ್ನೋದು ಬಂದ ಮೇಲೆ ಜಾಸ್ತಿಯಾಗಿದೆ. ಈಗ ಸೋನು ನಿಗಮ್ ಎನ್ನುವ ಪ್ರಸಿದ್ದ ಹಾಡುಗಾರ " ಮಸೀದಿಗಳಲ್ಲಿ ಧರ್ಮಬೋಧನೆ ಹಾಗೂ ಪ್ರಾರ್ಥನೆಗಾಗಿ ಧ್ವನಿವರ್ಧಕಗಳ ಬಳಕೆ ಗೂಂಡಾಗಿರಿಯಾಗಿದೆ. ಈ ಆಜಾನ್ ಸದ್ದಿಗೆ ಪ್ರತಿ ದಿನ ಬೆಳಿಗ್ಗೆ ಏಳಬೇಕಾಗಿದೆ. ಭಾರತದಲ್ಲಿ ಹೀಗೆ ಧರ್ಮವನ್ನು ಒತ್ತಾಯ ಪೂರ್ವಕವಾಗಿ ಹೇರುವುದು ಯಾವಾಗ ಕೊನೆಯಾಗುತ್ತದೋ? ಯಾವುದೇ ಮಂದಿರ ಹಾಗೂ ಗುರುದ್ವಾರಗಳು ಧರ್ಮವನ್ನು ಪಾಲಿಸದ ಜನರನ್ನೆಬ್ಬಿಸಲು ದ್ವನಿವರ್ಧಕ ಬಳಸುವುದಿಲ್ಲ. ಈ ಖಯಾಲಿ ಕೊನೆಯಾಗಬೇಕು.." ಎಂದು ಟ್ವೀಟ್ ಮಾಡಿದ್ದು ಮಾಧ್ಯಮಗಳಲ್ಲಿ ಚರ್ಚೆಯ ಸಂಗತಿಯಾಗಿದೆ. ಹಿಂದೂ ಕೋಮುವಾದಿಗಳಿಗಂತೂ ಸೋನು ನಿಗಮ್ ಹೇಳಿಕೆ ಮುಸ್ಲಿಂ ವಿರೋಧಿ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಹೌದು... ಮುಸ್ಲಿಂ ಬಾಂಧವರು ಹೀಗೆ ಸಾರ್ವಜನಿಕವಾಗಿ ಧ್ವನಿವರ್ಧಕಗಳ ಮೂಲಕ ಪ್ರಾರ್ಥನೆಗೆ ಕೂಗುವುದು ಅನ್ಯ ಧರ್ಮೀಯರಿಗೆ ಶಬ್ದ ಮಾಲಿನ್ಯ ಎನ್ನಿಸುವುದರಲ್ಲಿ ತಪ್ಪೇನಿಲ್ಲ. ಬೆಳ್ಳಂಬೆಳಿಗ್ಗೆ 5 ಗಂಟೆಗೆ ತಮ್ಮದಲ್ಲದ ಪ್ರಾರ್ಥನೆ ಕೇಳಿಬಂದರೆ ನಿದ್ರಾಭಂಗವಾಗುವುದೂ ಸಹಜವೇ ಆಗಿದೆ. ಇದು ನಿಲ್ಲಬೇಕು ಎನ್ನುವುದು ಸಹ ಮಸೀದಿಗಳ ನೆರೆಹೊರೆಯಲ್ಲಿ ಬದುಕುವ ಮುಸ್ಲಿಮೇತರರ ಆಗ್ರಹವೂ ಆಗಿದೆ. ಆದರೆ... ಈ ಶಬ್ದಭಯೋತ್ಪಾದನೆ ನಿಲ್ಲಬೇಕು ಎಂದು ಒತ್ತಾಯಿಸುವ ಹಿಂದೂಗಳು ಎಂದುಕೊಳ್ಳುವವರು ಮೊದಲು ತಮ್ಮ ಧಾರ್ಮಿಕ ಆಚರಣೆಗಳು ಹುಟ್ಟು ಹಾಕುವ ಶಬ್ದ ಮಾಲಿನ್ಯದ ಕಡೆಯೂ ಲಕ್ಷವಹಿಸಬೇಕಿದೆ. ನಮ್ಮ ಮನೆಯ ಮಗು ಅತ್ತರೆ ಪರವಾಗಿಲ್ಲ... ಆದರೆ ಪಕ್ಕದ ಮನೆಯ ಮಗುವಿನ ಅಳು ಅಸಹನೀಯ ಅನ್ನುವ ಅಸಹಿಷ್ಣುತತೆ ಅಕ್ಷಮ್ಯ.

ಈ ಮಸೀದಿಗಳ ಸಂಖ್ಯೆಗೆ ಹೋಲಿಸಿದರೆ ಹಿಂದೂ ದೇವಸ್ಥಾನಗಳ ಸಂಖ್ಯೆ ನಾಲ್ಕಾರು ಪಟ್ಟು ಹೆಚ್ಚಿವೆ. ಇಸ್ಲಾಂ ಆಚರಣೆಗಳಿಗೆ ಹೋಲಿಸಿದರೆ ಹಿಂದೂ ಧಾರ್ಮಿಕ ಆಚರಣೆಗಳು ನೂರಾರು ಪಟ್ಟು ಜಾಸ್ತಿ. ಇಸ್ಲಾಂಗೆ ಒಬ್ಬ ದೇವರಿದ್ದರೆ ಈ ಹಿಂದೂ ಧರ್ಮೀಯರಿಗೆ ಕನಿಷ್ಟ ಮೂವತ್ತಮೂರು ಕೋಟಿ ದೇವರುಗಳು. ಹೀಗಾಗಿ ದೇವರ ಕಾರ್ಯ, ಜಾತ್ರೆ, ಹಬ್ಬ ಹರಿದಿನ, ಜನ್ಮಾಷ್ಟಮಿ, ನವಮಿ...ಹೀಗೆ ಮುಂತಾದ ಧಾರ್ಮಿಕ ಆಚರಣೆಗಳಲ್ಲಿ ಹಿಂದೂಗಳು ಮಾಡುವ ಶಬ್ದಮಾಲಿನ್ಯಕ್ಕೆ ನಿಯಂತ್ರಣವೇ ಇಲ್ಲಾ. ಕಾರ್ತಿಕ ಮಾಸದಲ್ಲಿ, ಅಯ್ಯಪ್ಪ ದೇವರ ಪೂಜಾ ಮಾಸದಲ್ಲಿ ತಿಂಗಳಾನುಗಂಟಲೇ ಧ್ವನಿವರ್ಧಕಗಳು ಗಂಟಲು ಹರಿದುಕೊಳ್ಳುತ್ತವೆ. ದೇವರ ಹಾಡು, ಭಜನೆಗಳು ಬೆಳ್ಳಂಬೆಳಗ್ಗೆ ಕಿವಿ ತುಂಬುತ್ತವೆ. ಈ ಶಿಷ್ಟ ದೇವರುಗಳ ಪೂಜಾರಿಗಳ ಮಂತ್ರ ಘೋಷಣೆ ಮುಗಿಲು ಮುಟ್ಟುತ್ತವೆ.. ಆದರೂ ಈ ಎಲ್ಲವೂ ದೇವರ ಮೇಲಿನ ಭಕ್ತಿ ಹಾಗೂ ಪುರೋಹಿತಶಾಹಿಗಳು ಹುಟ್ಟಿಸುವ ಭಯದಿಂದಾಗಿ ಅಪ್ಯಾಯಮಾನವಾಗುತ್ತವೆ. ಇನ್ನು ಗಣೇಶ ಹಬ್ಬ ಬಂದರೆ ಸಾಕು ಬೆಂಗಳೂರಂತಾ ಬೆಂಗಳೂರೆ ಶಬ್ದ ಭಯೋತ್ಪಾದನೆಯ ಕೇಂದ್ರವಾಗುತ್ತದೆ. ಪಟಾಕಿಗಳಂತೂ ಶಬ್ದಮಾಲಿನ್ಯದ ಜೊತೆಗೆ ವಾಯುಮಾಲಿನ್ಯಕ್ಕೂ ಅಪಾರ ಕೊಡುಗೆ ಕೊಡುತ್ತದೆ. ಆರ್ಕೆಸ್ಟಾಗಳ ಹಾವಳಿ ಬಡಾವಣೆಗಳನ್ನೇ ನಡುಗಿಸುತ್ತವೆ. ಕಾನೂನು ಪ್ರಕಾರ ರಾತ್ರಿ ಹತ್ತಕ್ಕೆ ನಿಲ್ಲಬೇಕಾದ ಈ ದ್ವನಿವರ್ಧಕಗಳು ಮಧ್ಯರಾತ್ರಿ ಹನ್ನೆರಡಾದರೂ ಕಿವಿಗಡಚಿಕ್ಕುವ ಹಾಡು ಸಂಗೀತವನ್ನು ಉತ್ಪಾದಿಸುತ್ತಲೇ ಇರುತ್ತವೆ. ಆದರೂ... ಇವೆಲ್ಲವೂ ಮೋಜು ಮಸ್ತಿ ಹಾಗೂ ಆಚರಣೆಗಳ ಹೆಸರಲ್ಲಿ.. ಭಯ ಭಕ್ತಿಯ ನೆಲೆಯಲ್ಲಿ ಸಹ್ಯವಾಗುತ್ತವೆ.. ಆದರೆ ಮಸೀದಿಯಲ್ಲಿ ಪ್ರತಿದಿನ ಐದು ಸಲ ಒಂದೊಂದು ನಿಮಿಷದಂತೆ ಶಬ್ದೋತ್ಪಾದನೆ ಮಾಡಿದರೆ ಅದು ಅಸಹನೀಯವಾಗುತ್ತದೆ. ಇದಕ್ಕೆ ಅಸಹಿಷ್ಣುತತೆ ಎನ್ನುವುದು.

ಮುಸ್ಲಿಂ ಬಾಂಧವರ ಧ್ವನಿವರ್ಧಕದ ಪ್ರಾರ್ಥನಾ ಕರೆಗಳನ್ನು ಧಾರ್ಮಿಕ ಗೂಂಡಾಗಿರಿ ಅನ್ನುವುದಾದರೆ... ಹಿಂದೂ ಪುರೋಹಿತಶಾಹಿ ಪ್ರಣೀತ ಧಾರ್ಮಿಕ ಆಚರಣೆಗಳು ಹುಟ್ಟು ಹಾಕುವ ಎಲ್ಲಾ ನಮೂನಿಯ ಸಾರ್ವತ್ರಿಕ ಶಬ್ದೋತ್ಪಾದನೆಯೂ ಸಹ ಗೂಂಡಾಗಿರಿಯೇ ಆಗಿದೆ. ಇಲ್ಲಿ ಅವರದು ಹೆಚ್ಚು...ಇವರದು ಕಡಿಮೆ ಎನ್ನುವ ಮಾನದಂಡ ಅನಗತ್ಯ. ಶಬ್ದೋತ್ಪಾದನೆಯ ಸಮಯ ಮತ್ತು ತೀವ್ರತೆಯನ್ನು ಲೆಕ್ಕ ಹಾಕಿದರೆ ಹಿಂದೂ ಧರ್ಮೀಯ ಆಚರಣೆಗಳಿಂದಾಗುವ ಶಬ್ದ ಮಾಲಿನ್ಯ ಅತೀ ಹೆಚ್ಚಿನದಾಗಿದೆ. ಎಲ್ಲಾ ಧರ್ಮಗಳು ತಮ್ಮ ನಂಬಿಕೆ ಸಾಮರ್ಥ್ಯಕ್ಕೆ ತಕ್ಕಂತೆ ಪ್ರಾರ್ಥನೆ ಭಜನೆ ಹಾಗೂ ಆಚರಣೆಗಳ ಹೆಸರಲ್ಲಿ ಸಾರ್ವಜನಿಕವಾಗಿ ಶಬ್ದವನ್ನು ಉತ್ಪಾದನೆ ಮಾಡುತ್ತಲೇ ಬಂದಿವೆ... ಬರುತ್ತವೆ. ಬಹುತೇಕ ಜನರೂ ಸಹ ತಮಗಿಷ್ಟ ಇರಲಿ ಬಿಡಲಿ ಈ ಧಾರ್ಮಿಕ ಶಬ್ದಮಾಲಿನ್ಯದ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಬದುಕುತ್ತಿದ್ದಾರೆ. ಇಷ್ಟಕ್ಕೂ ಬಹುತೇಕ ಮಸೀದಿಗಳು ಇರುವುದು ಇಸ್ಲಾಂ ಧರ್ಮೀಯರ ಸಂಖ್ಯೆ ಜಾಸ್ತಿ ಇರುವ ಕಡೆಗೆ. ಹಾಗೆಯೇ ಗುಡಿ ಮಠಗಳಿರೋದು ಹಿಂದೂ ಧರ್ಮೀಯರು ಹೆಚ್ಚಿರುವಲ್ಲಿ. ಇದಕ್ಕೆ ಅಪವಾದಗಳೂ ಇಲ್ಲದಿಲ್ಲ. ಆದರೆ ಧಾರ್ಮಿಕ ಸಹಿಷ್ಣುತತೆ ಕೋಮುಸಾಮರಸ್ಯದ ಭಾಗವೇ ಆಗಿದ್ದು ಈ ಧಾರ್ಮಿಕ ಶಬ್ದಾಸುರನ ಹಾವಳಿಗೆ ಕಿವಿಗಳು ಹೊಂದಾಣಿಕೆಯಾಗಿವೆ.

ಆದರೆ... ಕೋಮುವಾದಿ ಭಯೋತ್ಪಾದಕ ಮನುವಾದಿ ಮನಸ್ಥಿತಿಯವರಿಗೆ ಈ ರೀತಿಯ ಕೋಮುಸಾಮರಸ್ಯ ಎಂದೂ ಸಹನೀಯವಲ್ಲ. ಧ್ವನಿವರ್ಧಕದ ಸಮಸ್ಯೆಯನ್ನೇ ಆಗಾಗ ದೊಡ್ಡದು ಮಾಡಿ ಕೋಮುವಾದವನ್ನು ಹುಟ್ಟುಹಾಕಿ ಧಾರ್ಮಿಕವಾಗಿ ಜನರಲ್ಲಿ ಅಸಹಿಷ್ಣುತತೆಯನ್ನು ಬೆಳೆಸುವುದು ಕೋಮುವಾದಿಗಳ ಕಾಯಕವೇ ಆಗಿದೆ. ಕೋಮುವಾದಿಗಳಲ್ಲದವರ ಮನಸ್ಸಲ್ಲೂ ಸಹ ಕೋಮು ವಿಷಬೀಜ ಬಿತ್ತಿ ಧಾರ್ಮಿಕ ಸಂಘರ್ಷವನ್ನು ಹುಟ್ಟುಹಾಕಲು ಪ್ರಯತ್ನಿಸಲಾಗುತ್ತದೆ. ಅದರ ಭಾಗವಾಗಿಯೇ ಸೋನು ನಿಗಮ್ ಎನ್ನುವ ಗಾಯಕ ತನ್ನ ಟ್ವೀಟರ್ ನಲ್ಲಿ ಬರೆದ ವೈಯಕ್ತಿಕ ಅನಿಸಿಕೆಗಳನ್ನು ಸಾರ್ವತ್ರಿಕಗೊಳಿಸಿ ದೇಶಾದ್ಯಂತ ಚರ್ಚೆ ಹುಟ್ಟಿಸಿ ಧಾರ್ಮಿಕ ಅಸಹನೆಯನ್ನು ಹೆಚ್ಚಿಸುವ ಕೆಲಸವನ್ನು ಸಂಘಿಗಳು ಶುರುಮಾಡಿಕೊಂಡಿದ್ದಾರೆ.

ಇಷ್ಟಕ್ಕೂ ಈ ಧರ್ಮ ದೇವರ ನಂಬಿಕೆಗಳೆಲ್ಲಾ ತುಂಬಾನೇ ವ್ಯಕ್ತಿಗತವಾದದ್ದು. ಪ್ರತಿಯೊಬ್ಬ ವ್ಯಕ್ತಿ ತನ್ನ ನಂಬಿಕೆಗೆ ಅನುಗುಣವಾಗಿ ತಾನು ನಂಬಿದ ದೇವರನ್ನು ಪೂಜಿಸುತ್ತಾನೆ. ಒಪ್ಪಿಕೊಂಡ ಧರ್ಮವನ್ನು ಆಚರಿಸುತ್ತಾನೆ. ಇದಕ್ಕೆ ನಮ್ಮ ಸಂವಿಧಾನವೂ ಅವಕಾಶ ಮಾಡಿಕೊಟ್ಟಿದೆ. ಆದರೆ ದೇವರನ್ನು ನಂಬುವವರು, ನಂಬದೇ ಇರುವವರು... ಯಾವುದೋ ಧರ್ಮವನ್ನು ಅಪ್ಪಿಕೊಂಡವರು.. ಯಾವ ಧರ್ಮವನ್ನೂ ಒಪ್ಪದೇ ಇರುವವರೂ ಈ ದೇಶದಲ್ಲಿದ್ದಾರೆ. ಸಂಖ್ಯೆಯಲ್ಲಿ ಕಡಿಮೆ ಇದ್ದರೂ ನಾಸ್ತಿಕರೂ ಈ ದೇಶವಾಸಿಗಳೇ. ಯಾವುದೇ ಪ್ರಾರ್ಥನೆ.. ಭಜನೆ... ಆಚರಣೆ ಕೌಟುಂಬಿಕ ನೆಲೆಯಲ್ಲಿ ವೈಯಕ್ತಿಕವಾಗಿ ಇದ್ದಷ್ಟೂ ಯಾರಿಗೂ ತೊಂದರೆ ಇರುವುದಿಲ್ಲ. ಯಾವಾಗ ಧರ್ಮಾಚರಣೆಗಳು ಸಾರ್ವತ್ರಿಕವಾಗುತ್ತವೆಯೋ ಆಗ ಅಸಹನೆಗಳು ಮೂಡುತ್ತವೆ. ಯಾವಾಗ ನಿದ್ರಾಭಂಗವಾಗುತ್ತದೆ ಎಂದು ಮುಸ್ಲಿಂ ಬಾಂಧವರಿಗೆ ಧ್ವನಿವರ್ಧಕಗಳ ಮೂಲಕ ಪ್ರಾರ್ಥನೆಗೆ ಕರೆಕೊಡುವುದನ್ನು ಗೂಂಡಾಗಿರಿ ಎಂದು ಕರೆದು ಅದನ್ನು ನಿಲ್ಲಿಸಲು ಒತ್ತಾಯಿಸಲಾಗುತ್ತದೆಯೋ... ಆಗ ಶಬ್ದೋತ್ಪಾದನೆ ಮಾಡುವ ಹಿಂದೂ ಬಾಂಧವರ ಎಲ್ಲಾ ನಮೂನೆಯ ಪ್ರಾರ್ಥನೆ, ಕೀರ್ತನೆ, ಭಜನೆ, ಆಚರಣೆಗಳನ್ನು ಸಹ ನಿರ್ಬಂದಿಸಬೇಕಾಗುತ್ತದೆ. ಈ ಧಾರ್ಮಿಕ ಪ್ರಧಾನ ದೇಶದಲ್ಲಿ ಜನರು ಒಂದೊತ್ತು ಊಟ ಇಲ್ಲದೇ ಇರಬಲ್ಲರು, ಆದರೆ ದೇವಸ್ಥಾನದಲ್ಲಿ ಗಂಟೆ ಜಾಗಟೆ ಮಂತ್ರಗಳ ಸದ್ದು ಕೇಳದೇ ಇರಲಾರರು. ಇದು ಆಯಾ ಧರ್ಮೀಯರ ನಂಬಿಕೆ ಹಾಗೂ ಭಾವನೆಗಳಿಗೆ ಸಂಬಂಧಿಸಿದ ಸಂಗತಿ. ಆದರೆ ಈ ಎಲ್ಲಾ ಧರ್ಮಗಳ ಜಾಡ್ಯಗಳನ್ನು ಮೀರಿದ ನಿಜವಾದ ಧರ್ಮವೊಂದಿದೆ. ಅದು ಮಾನವತಾ ಧರ್ಮ. ಬೇರೆ ಯಾರಿಗೂ ನೋವು ತೊಂದರೆ ಕೊಡದೇ, ಎಲ್ಲರನೂ ತನ್ನಂತೆ ಬಗೆದು, ಪರಸ್ಪರ ಹೊಂದಾಣಿಕೆ ಮಾಡಿಕೊಂಡು ನೆಮ್ಮದಿಯಿಂದಾ ಬದುಕುವ ಆದರ್ಶವಾದಿ ಧರ್ಮವದು. ಅಂತಹ ಧರ್ಮವೊಂದು ಈ ದೇಶದ ಜನರ ಬದುಕಿನ ಅವಿಭಾಜ್ಯ ಅಂಗವಾದಾಗ ಈ ಧಾರ್ಮಿಕ ಭಯೋತ್ಪಾದನೆ, ಶಬ್ದ ಮಾಲಿನ್ಯ, ಅಸಹಿಷ್ಣುತತೆ ಹಾಗೂ ಭಾವನಾತ್ಮಕ ಮೌಢ್ಯಗಳು ಕೊನೆಗೊಂಡು ಎಲ್ಲರೂ ನೆಮ್ಮದಿಯಿಂದಾ ಬದುಕಲು ಸಾಧ್ಯವಾಗುತ್ತದೆ.

ಆದರೆ... ಮಾನವೀಯ ಧರ್ಮವೆಂಬುದು ಈ ಪ್ರಚಲಿತ ಧರ್ಮದ ಗುತ್ತಿಗೆದಾರರಿಗೆ ಬೇಕಾಗಿಲ್ಲ. ಎಲ್ಲಿವರೆಗೂ ಮನುಕುಲದಲ್ಲಿ ಈ ಧಾರ್ಮಿಕ ಭಿನ್ನತೆ, ಜಾತಿ ಬೇಧ ಹಾಗೂ ಪರಸ್ಪರ ಅಸಹಿಷ್ಣುತತೆ ಇರುತ್ತದೋ ಅಲ್ಲಿವರೆಗೂ ಈ ತಾರತಮ್ಯವನ್ನು ಪೋಷಿಸುವ ಧರ್ಮಗಳು ಹಾಗೂ ಧರ್ಮಪೀಠಗಳು ಇದ್ದೇ ಇರುತ್ತವೆ. ಎಲ್ಲಿವರೆಗೂ ಸಾಮಾಜಿಕ ತಾರತಮ್ಯ, ಆರ್ಥಿಕ ಅಸಮಾನತೆ ಹಾಗೂ ವರ್ಣಾಶ್ರಮವಾಧಾರಿತ ಮೇಲುಕೀಳುಗಳು ಈ ದೇಶದಲ್ಲಿ ಅಸ್ತಿತ್ವದಲ್ಲಿರುತ್ತವೋ ಅಲ್ಲಿವರೆಗೂ ನೆಮ್ಮದಿಯ ಬದುಕೆಂಬುದು ನಾಸ್ತಿ.. ಎಲ್ಲಿವರೆಗೂ ಎಲ್ಲಾ ಜಾತಿ ಧರ್ಮಗಳಲ್ಲಿರುವ ಜನಶೋಷಕ ಪುರೋಹಿತಶಾಹಿ ವ್ಯವಸ್ಥೆ ಜನರ ಭಾವನೆಗಳನ್ನೇ ಬಂಡವಾಳ ಮಾಡಿಕೊಂಡು ಭ್ರಮೆಗಳನ್ನು ಪೋಷಿಸುತ್ತಾ ಅನ್ಯ ಜಾತಿ ಕುಲ ಮತಗಳ ವಿರುದ್ದ ಅಸಹನೆಯನ್ನು ಉತ್ಪಾದಿಸುತ್ತಿರುತ್ತದೋ ಅಲ್ಲಿವರೆಗೂ ಈ ದೇಶವಾಸಿಗಳು ಪರಸ್ಪರ ಸಾಮರಸ್ಯದ ಬದಲು ಸಂಘರ್ಷವನ್ನು ಎದುರಿಸಲೇಬೇಕು.

ಈಗ ಈ ಧಾರ್ಮಿಕ ಆಚರಣೆಗಳು ಉಂಟು ಮಾಡುವ ಶಬ್ದಭಯೋತ್ಪಾದನೆಯನ್ನು ನಿಲ್ಲಿಸಬೇಕೆಂದರೆ ಎಲ್ಲಾ ಧರ್ಮಗಳ ಸಾರ್ವಜನಿಕ ಆಚರಣೆಗಳನ್ನು ನಿಷೇಧಿಸಬೇಕು. ಅದು ಈ ವ್ಯವಸ್ಥೆಯಲ್ಲಿ ಅಸಾಧ್ಯ? ಎಲ್ಲಾ ಧರ್ಮೀಯರಿಗೂ ತಮ್ಮ ಆಚರಣೆಗಳ ಮೇಲೆ ಭಯ ಭಕ್ತಿ ಹಾಗೂ ಮೋಹಗಳಿರುವುದರಿಂದಾ ಪರಸ್ಪರ ಹೊಂದಾಣಿಕೆ ಮಾಡಿಕೊಂಡೇ ಬದುಕಬೇಕು. ಇದು ಬಿಟ್ಟು ಯಾವುದೇ ಪರ್ಯಾಯ ಮಾರ್ಗಗಳಿಲ್ಲ. 'ನಾವು ಬಹುಸಂಖ್ಯಾತರಾದ್ದರಿಂದ ಧಾರ್ಮಿಕ ಶಬ್ದ ಭಯೋತ್ಪಾದನೆ ನಮ್ಮ ಹಕ್ಕು...ಆದರೆ ಅಲ್ಪಸಂಖ್ಯಾತ ಧರ್ಮೀಯರು ಅದನ್ನು ಮಾಡುವಂತಿಲ್ಲ' ಎನ್ನುವುದು ಧಾರ್ಮಿಕ ದಮನವಾಗುತ್ತದೆ. ಇದರಿಂದಾಗಿ ಸಮಾಜದಲ್ಲಿ ಅಸಹನೆ ಹೆಚ್ಚಾಗಿ ಸಂಘರ್ಷಗಳು ಮಿತಿ ಮೀರುತ್ತವೆ. ಇದೇ ಕೋಮುವಾದಿಗಳಿಗೆ ಬೇಕಾದದ್ದು. ಜನಾಂಗೀಯ ದ್ವೇಷವನ್ನು ಪ್ರಚೋದಿಸಿ ಮನುವಾದಿ ಪ್ರಣೀತ ಪ್ಯಾಸಿಸ್ಟ್ ಪ್ರಭುತ್ವವನ್ನು ತರಲು ಶತಾಯ ಗತಾಯ ಪ್ರಯತ್ನಿಸುತ್ತಿದೆ. ಕೋಮುಸಾಮರಸ್ಯತೆಯಿಂದ ತಲೆತಲಾಂತರದಿಂದ ಬದುಕುತ್ತಿರುವ ಜನರು ಈ ಸಂಘಿಗಳ ಕುತಂತ್ರಕ್ಕೆ ಒಳಗಾಗದೇ ಹೊಂದಾಣಿಕೆಯಿಂದ ಬದುಕುವುದರಲ್ಲಿ ಸಾಮಾಜಿಕ ನೆಮ್ಮದಿ ಇದೆ... ಮೊದಲು ಮನದೊಳಿರುವ ಕೋಮುವ್ಯಾಧಿ ಮಾಲಿನ್ಯ ತೊಳೆದುಕೊಂಡರೆ. ಹೊರಗಿನ ಶಬ್ದ ಮಾಲಿನ್ಯವನ್ನೂ ಕಳೆದುಕೊಳ್ಳಬಹುದಾಗಿದೆ. ಆ ದಿನ ಆದಷ್ಟು ಬೇಗ ಬರಲಿ...

- ಶಶಿಕಾಂತ ಯಡಹಳ್ಳಿ

ತಹ ತಹ ...85 ಕಲಾರತ್ನ ಕಪ್ಪಣ್ಣರವರಿಗೆ ಕಾರಂತ್ ಪ್ರಶಸ್ತಿ



ಅಂತೂ ಇಂತೂ ಪ್ರಚಲಿತ ಮುಂಚೂಣಿ ಸಾಂಸ್ಕೃತಿಕ ಸಂಘಟಕರಾದ ಶ್ರೀನಿವಾಸ್ ಜಿ ಕಪ್ಪಣ್ಣರವರಿಗೆ 2016 ರ ಬಿ.ವಿ.ಕಾರಂತ ಪ್ರಶಸ್ತಿ ಅನೌನ್ಸ್ ಆಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಮಾಡುವ ಈ ಪ್ರಶಸ್ತಿಯ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದವರು ಬಿ.ಜಯಶ್ರೀಯವರು. ತರ್ಕಬದ್ದವಾಗಿ ನೋಡಿದರೆ ಕಾರಂತರ ಹೆಸರಿನ ಈ ಪ್ರಶಸ್ತಿ ಕೊಡಬೇಕಾಗಿರುವುದು ಕ್ರಿಯಾಶೀಲ ನಿರ್ದೇಶಕರಿಗೆ ಹೊರತು ರಂಗಸಂಘಟಕರಿಗಲ್ಲಾ. ಯಾಕೆಂದರೆ ಬಿ.ವಿ.ಕಾರಂತರು ಆಧುನಿಕ ಕನ್ನಡ ರಂಗಭೂಮಿಯ ಸೃಜನಶೀಲ ರಂಗ ನಿರ್ದೇಶಕರಾಗಿದ್ದವರು. ಆದರೆ ಬಿ.ಜಯಶ್ರೀಯವರೊಂದಿಗೆ ಮೊದಲಿಂದಲೂ ಕೊಡುಕೊಳ್ಳುವ ಸಂಬಂಧವನ್ನು ಹೊಂದಿರುವ ಕಪ್ಪಣ್ಣರವರಿಗೆ ಜಯಶ್ರೀಯವರು ಋಣಸಂದಾಯದ ಭಾಗವಾಗಿ ಕಾರಂತ್ ಪ್ರಶಸ್ತಿ ಕೊಡಲು ನಿರ್ಣಯಿಸಿದ್ದರಲ್ಲಿ ಅಚ್ಚರಿ ಏನಿಲ್ಲಾ. 

ಈ ಆಯ್ಕೆ ಮೂರು ತಿಂಗಳ ಮುಂಚೆಯೇ ನಿರ್ಣಯವಾಗಿತ್ತು. ಆಗಲೇ ಈ ಪ್ರಶಸ್ತಿ ಘೋಷಣೆಯಾಗಬೇಕಿತ್ತು. ಆದರೆ ಸಚಿವೆ ಉಮಾಶ್ರೀಯವರಿಗೆ ಜಯಶ್ರೀಯವರ ಆಯ್ಕೆಯ ಬಗ್ಗೆ ಅಸಮಾಧಾನವಿತ್ತು. ಮರುಪರಿಶೀಲಿಸಲು ಕೇಳಿಕೊಂಡು ಅನೌನ್ಸ್ ಮಾಡುವುದನ್ನು ಸಾಧ್ಯವಾದಷ್ಟೂ ವಿಳಂಬ ಮಾಡಿದರು. ಆದರೆ ಜಯಶ್ರೀಯವರು ಪಟ್ಟು ಸಡಿಲಿಸಲಿಲ್ಲ. ಮರು ಪರಿಶೀಲನೆಗೂ ಒಪ್ಪಲಿಲ್ಲ. ಕೊನೆಗೆ ಅನಿವಾರ್ಯವಾಗಿ ಸಚಿವೆ ಕಪ್ಪಣ್ಣರವರಿಗೆ ಪ್ರಶಸ್ತಿ ಕೊಡಲು ಒಪ್ಪಲೇಬೇಕಾಯ್ತು.

ಕಪ್ಪಣ್ಣನವರ ಬಗ್ಗೆ ದೂರುಗಳೇನೇ ಇರಲಿ... ಅಸಮಾಧಾನಗಳು ನೂರಾರಿರಲಿ.. ಸ್ವಾರ್ಥಕ್ಕಾಗಿ ರಂಗಭೂಮಿಯನ್ನು ಬಳಸಿಕೊಂಡ ಆರೋಪಗಳಿರಲಿ... ಆದರೆ ಪ್ರಶಸ್ತಿ ಬಂದ ಈ ಸಂದರ್ಭದಲ್ಲಿ ಅವುಗಳನ್ನೆಲ್ಲಾ ಪಕ್ಕಕ್ಕಿಟ್ಟು ಅಭಿನಂದನೆಗಳನ್ನು ಹೇಳಲೇಬೇಕಿದೆ. ಈ ರಂಗ ರಾಜಕಾರಣಿಯ ಚತುರತೆಗೆ ಬೆರಗಾಗಿ ಬೇಷ್ ಎನ್ನಲೇಬೇಕಿದೆ. ರಂಗಭೂಮಿಯ ಪ್ರತಿಷ್ಠಿತ ಬಿ.ವಿ.ಕಾರಂತ್ ಪ್ರಶಸ್ತಿ ಪಡೆದ ನಂತರವಾದರೂ ರಂಗಭೂಮಿಯಿಂದ ಕೇವಲ ಪಡೆಯುವುದನ್ನು ಬಿಟ್ಟು ಸ್ವಾರ್ಥರಹಿತವಾಗಿ ರಂಗಭೂಮಿಗೆ ಕೊಡುವುದನ್ನೂ ಕಪ್ಪಣ್ಣ ರೂಢಿಸಿಕೊಳ್ಳುವ ಜವಾಬ್ದಾರಿಯನ್ನು ನಿಭಾಯಿಸಲಿ ಎಂಬುದೇ ರಂಗಕರ್ಮಿ ಕಲಾವಿದರ ಆಶಯವಾಗಿದೆ.

ಏನೇ ಆಗಲಿ ರಂಗ ನಿರ್ದೇಶಕ ಕಾರಂತರ ಹೆಸರಿನ ಪ್ರಶಸ್ತಿಯನ್ನು ರಂಗ ಸಂಘಟಕ ಕಪ್ಪಣ್ಣರವರಿಗೆ ಕೊಡಮಾಡಿದ ಬಿ.ಜಯಶ್ರೀಯವರಿಗೂ, ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದುಕೊಂಡ ಕಲಾರತ್ನ ಕಪ್ಪಣ್ಣರವರಿಗೂ ಹಾಗೂ ಆಯ್ಕೆ ಸಮಿತಿಯ ನಿರ್ಣಯಕ್ಕೆ ಸಹಮತ ಇಲ್ಲದಿದ್ದರೂ ಆ ಸಮಿತಿಯ ಅಂತಿಮ ನಿರ್ಣಯವನ್ನು ಗೌರವಿಸಿ ಕಾರಂತ್ ಪ್ರಶಸ್ತಿಯನ್ನು ಕಪ್ಪಣ್ಣರವರಿಗೆ ಕೊಡಲು ಒಪ್ಪಿ ಘೋಷಿಸಿದ ಸಚಿವೆ ಉಮಾಶ್ರೀಯವರಿಗೂ ಅಭಿನಂದನೆಗಳು...

- ಶಶಿಕಾಂತ ಯಡಹಳ್ಳಿ

ಮಂಗಳವಾರ, ಏಪ್ರಿಲ್ 18, 2017

ತಹ ತಹ...84 ಮೀಸಲಾತಿ ಇಲ್ಲಾ; ಉಳ್ಳವರಿಗೆ ಸವಲತ್ತುಗಳೆಲ್ಲಾ :


ಯೋಗಿಗಳು ಉತ್ತರದ ಅಧಿಪತ್ಯದಲಿ ಆಸೀನರಾದ ನಂತರ ಮೇಲ್ವರ್ಗದ ಭಕ್ತರಿಗೆ ಕ್ರಾಂತಿಕಾರಿ ಎಂದೆನಿಸುವ ಕ್ರಮ ಕೈಗೊಂಡಿದ್ದಾರೆ. ಖಾಸಗಿ ವೈದ್ಯಕೀಯ ಹಾಗೂ ಡೆಂಟಲ್ ಕಾಲೇಜುಗಳಲ್ಲಿ ಪರಿಶಿಷ್ಟ ಸಮುದಾಯಕ್ಕಿದ್ದ ಮೀಸಲಾತಿಯನ್ನು ರದ್ದು ಪಡಿಸುವ ಆದೇಶ ಹೊರಡಿಸಿದ್ದಾರೆ. ಅದೂ ಮೀಸಲಾತಿ ಒದಗಿಸಿ ದಲಿತ ದಮನಿತ ಶೂದ್ರರಿಗೆ ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಿದ ಬಾಬಾ ಸಾಹೇಬರ 126 ನೇ ಜನ್ಮ ಜಯಂತಿಯ ಸಂದರ್ಭದಲ್ಲಿ ಈ ಮೀಸಲಾತಿ ರದ್ದತಿ ಆದೇಶ ಹೊರಡಿಸಲಾಗಿದೆ. ಮೀಸಲಾತಿ ವಿರೋಧಿಗಳಾದ ಮೇಲ್ವರ್ಗದ ನಕಲಿ ದೇಶಭಕ್ತರು ಕುಂಡಿ ಬಡಿದುಕೊಂಡು ಕುಣಿದಾಡುತ್ತಿದ್ದಾರೆ. 

ಇನ್ನು ಮೇಲೆ ಉತ್ತರ ಪ್ರದೇಶದ ಕೆಳ ತಳ ಸಮುದಾಯದವರು ಡಾಕ್ಟರುಗಳಾಗುವ ಅಗತ್ಯವಿಲ್ಲ. ವೈದ್ಯರಾಗುವ ಯೋಗ್ಯತೆ ಏನಿದ್ದರೂ ಸಕಲ ಸವಲತ್ತುಗಳನ್ನು ಹೊಂದಿರುವ ಮೇಲ್ವರ್ಗದವರ ಮಕ್ಕಳಿಗೆ ಮಾತ್ರ. 'ಯೋಗ್ಯತೆ ಇದ್ದರೆ ಅವರೂ ತಮ್ಮ ಪ್ರತಿಭೆ ತೋರಿಸಿ ಹೆಚ್ಚು ಅಂಕ ಗಳಿಸಿ ವೈದ್ಯಕೀಯ ಕಾಲೇಜಲ್ಲಿ ಸೀಟು ಗಿಟ್ಟಿಸಿಕೊಳ್ಳಲಿ ಬಿಡಿ' ಎನ್ನುವ ವಾದ ಈ ಉತ್ತಮ ಕುಲದವರದು. ಹೌದು... ಇನ್ನು ಮೇಲೆ ತಿನ್ನಲು ಪೌಷ್ಟಿಕ ಆಹಾರವೂ ಇಲ್ಲದ ಬಡ ಸಣಕಲರು ಪುಷ್ಟಿದಾಯಕ ಆಹಾರ ತಿಂದು ಕೊಬ್ಬಿ ಆಧುನಿಕ ತರಬೇತಿ ಪಡೆದ ಪೈಲ್ವಾನರ ಜೊತೆಗೆ ಸ್ಪರ್ದಿಸಿ ಗೆಲ್ಲಬೇಕು. ಅದೆಷ್ಟೇ ಪ್ರತಿಭೆ ಇದ್ದರೂ ನಿತ್ಯ ಬದುಕಿನ ಆರ್ಥಿಕ ಬವಣೆಯಲ್ಲಿ ಬೇಯುತ್ತಿರುವ ಕೆಳ ಸಮುದಾಯದ ಯುವಕರು ವಿಪರೀತ ಡೊನೇಶನ್ ಕೊಟ್ಟು ಅತಿರೇಕದ ಪೀಸ್ ಕಟ್ಟಿ ವೈದ್ಯಕೀಯ ಕಾಲೇಜು ಸೇರಬೇಕು. ಅದೆಲ್ಲಾ ಸಾಧ್ಯವಾಗದೇ ಹೋದರೆ ಡಾಕ್ಟರಾಗುವ ಕನಸನ್ನು ಮರೆತು ವೈದ್ಯರಾಗುವ ಉತ್ತಮರ ಕ್ಲಿನಿಕ್- ಆಸ್ಪತ್ರೆಗಳಲ್ಲಿ ಕಂಪೌಂಡರ ಕೆಲಸವೂ ಸಿಗದೆ ವಾಚ್ಮನ್ ಕೆಲಸಕ್ಕೆ ಅರ್ಜಿ ಹಾಕಬೇಕು.

ವೈದ್ಯಕೀಯ ಕಾಲೇಜಲ್ಲಿ ಮೀಸಲಾತಿ ತೆಗೆದು ಹಾಕಿದ್ದು ಮನುವಾದಿ ಅಜೆಂಡಾದ ಅನುಷ್ಠಾನದ ಆರಂಭ ಅಷ್ಟೇ... ಕಂತು ಕಂತುಗಳಲ್ಲಿ ಮೀಸಲಾತಿ ಮರೆಯಾಗುತ್ತಾ ಈ ದೇಶದ ಸಕಲ ಸಂಪತ್ತು ಸವಲತ್ತು ಅವಕಾಶಗಳೆಲ್ಲಾ ಉಳ್ಳವರ ಪಾಲಾಗುವ ಅಪಾಯವನ್ನು ಅಲ್ಲಗಳೆಯುವಂತಿಲ್ಲ. ದಲಿತ ಶೂದ್ರ ಸಮುದಾಯವು ಈಗಲೇ ಎಚ್ಚೆತ್ತು ಈ ಸಂವಿಧಾನ ವಿರೋಧಿ ಅಕ್ರಮಗಳನ್ನು ಶಾತಾಯ ಗತಾಯ ವಿರೋಧಿಸದೇ ಹೋದರೆ ವರ್ಗ ಅಸಮಾನತೆ ಅತಿರೇಕವಾಗುವುದರಲ್ಲಿ ಸಂದೇಹವಿಲ್ಲ. ಸಂಘ ಪರಿವಾರವನ್ನು ಯಾವಯಾವುದೋ ಕಾರಣಗಳಿಗೆ ಬೆಂಬಲಿಸುವ ಎಸ್ ಸಿ, ಎಸ್ ಟಿ ಹಾಗೂ ಓಬಿಸಿ ಸಮುದಾಯದ ಕೆಲವರು ತಮ್ಮ ಮುಂದಿನ ತಲೆಮಾರು ಮೂಲಭೂತ ಸವಲತ್ತುಗಳಿಂದ ವಂಚಿತವಾಗಿ ಮನುವಾದಿಗಳ ಮನೆಯಲ್ಲಿ ಜೀತ ಮಾಡುವ ದುರಂತದ ಬಗ್ಗೆ ಈಗಲೇ ಎಚ್ಚರ ವಹಿಸಬೇಕಿದೆ.

ಯಾರು ಏನೇ ಹೇಳಲಿ ಈ ದೇಶ ಸಾವಕಾಶವಾಗಿ ಪ್ಯಾಸಿಸ್ಟ್ ಆಡಳಿತದತ್ತ ಒಂದೊಂದೆ ಹೆಜ್ಜೆಗಳನ್ನು ಹಾಕುತ್ತಿದೆ. ಸಂವಿಧಾನವನ್ನು ಅಸ್ತಿರಗೊಳಿಸಿ ಮನುಸ್ಮೃತಿಯಾಧಾರಿತ ವೈದಿಕಶಾಹಿ ಸಂವಿಧಾನವನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಈ ಅಪಾಯವನ್ನು ಗ್ರಹಿಸಿ ಪ್ಯಾಸಿಜಂ ಮನಸ್ಥಿತಿಯ ವಿರುದ್ದ ಬಹುಜನರು ಎಚ್ಚೆತ್ತು ಒಟ್ಟಾಗಿ ನಿಂತು ಜನಾಂದೋಲನ ಮಾಡದೇ ಹೋದರೆ... ಚುನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸದೇ ಹೋದರೆ ಈ ದೇಶವನ್ನು ಪ್ಯಾಸಿಸ್ಟ್ ಆಡಳಿತದಿಂದ ಪಾರುಮಾಡಲು ಯಾರಿಂದಲೂ ಸಾಧ್ಯವಿಲ್ಲ.. ಮನುವಾದಿಗಳಿಗೆ ಮಾತ್ರ ಬರುವ ಅಚ್ಚೇ ದಿನ್ ಬಹುಸಂಖ್ಯಾತ ದುಡಿಯುವ ವರ್ಗಗಳಿಗಂತೂ ಎಂದೂ ಬರುವುದಿಲ್ಲ...

- ಶಶಿಕಾಂತ ಯಡಹಳ್ಳಿ

ಶುಕ್ರವಾರ, ಏಪ್ರಿಲ್ 14, 2017

ತಹ ತಹ.... 83 ಮನುವ್ಯಾಧಿಗಳ ಕುತಂತ್ರದ ವಿರುದ್ಧ ಅಂಬೇಡ್ಕರರ ಸಮಾನತಾ ಮಂತ್ರ :



ಕೇಸರಿ ದಾಳಿಗೆ ಆರದಿರಲಿ  ಬಾಬಾಸಾಹೇಬ ಹಚ್ಚಿಟ್ಟ ನೀಲಿ ಬೆಳಕು:
 

ಮನುವಾದ ಎನ್ನುವ ಜೀವವಿರೋಧಿ ವ್ಯಾಧಿ ಇಡೀ ದೇಶಾದ್ಯಂತ ಶತಮಾನಗಳಿಂದ ಪಸರಿಸಿ ಬಹುಸಂಖ್ಯಾತ ದಲಿತ ಶೂದ್ರರನ್ನು ದಮನಿಸಿ ಇಡೀ ದೇಶವನ್ನೇ ರೋಗಗ್ರಸ್ತವಾಗಿರುವಾಗ ಸಾಮಾಜಿಕ ಚಿಕಿತ್ಸಕರಾಗಿ ಬಂದಿದ್ದು ಬಾಬಾ ಸಾಹೇಬ ಅಂಬೇಡ್ಕರ್. ಅವರು ಇದ್ದಿದ್ದರೆ ಎಪ್ರಿಲ್ 14 ಕ್ಕೆ ಸರಿಯಾಗಿ 126 ವರ್ಷಗಳು ತುಂಬುತ್ತಿದ್ದವು. ಇಷ್ಟು ವರ್ಷಗಳ ಕಾಲ ಅವರು ಭೌತಿಕವಾಗಿ ಬದುಕಿರಲು ಸಾಧ್ಯವಿಲ್ಲದೇ ಹೋದರೂ ಅವರು ಪ್ರತಿಪಾದಿಸಿದ ಮಾನವೀಯ ಮೌಲ್ಯಗಳು ಹಾಗೂ ಸಮಾನತೆಯ ಸಿದ್ದಾಂತಗಳು ಮನುಕುಲ ಇರುವವರೆಗೂ ಶಾಶ್ವತ.

ಅಂಬೇಡ್ಕರರವರನ್ನು ಒಂದು ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸಿ ಅವರ ಪ್ರಭಾವವನ್ನು ಮಿತಿಗೊಳಿಸಲು ಮನುವಾದಿ ಪಡೆ ಪ್ರಯತ್ನಿಸುತ್ತಲೇ ಇದೆ. ಜೊತೆಗೆ ದಲಿತ ಸಮುದಾಯದ ಸ್ವಾಭಿಮಾನದ ಸಂಕೇತವಾದ ಅಂಬೇಡ್ಕರರನ್ನು ದಲಿತ ಸಮುದಾಯದ ಆಸ್ತಿಯನ್ನಾಗಿಸಿಕೊಳ್ಳುವ ಸೀಮಿತ ಪ್ರಯತ್ನಗಳೂ ನಡೆಯುತ್ತಿವೆ. ಆದರೆ.. ಅಂಬೇಡ್ಕರ್ ಕೇವಲ ಒಂದು ನಿರ್ದಿಷ್ಟ ಸಮುದಾಯವನ್ನಷ್ಟೇ ದೃಷ್ಟಿಯಲ್ಲಿಟ್ಟುಕೊಂಡು ತಮ್ಮ ಸಿದ್ದಾಂತವನ್ನು ಪ್ರತಿಪಾದಿಸಲಿಲ್ಲಾ. ಈ ದೇಶದ ಎಲ್ಲಾ ದಲಿತರು, ದಮನಿತರು, ಬಡವರು, ಶ್ರಮಿಕರು ಹಾಗೂ ಮಹಿಳೆಯರು ಸ್ವಾಭಿಮಾನದಿಂದ ಬದುಕುವಂತಹ ವ್ಯವಸ್ಥೆಯೊಂದನ್ನು ರೂಪಿಸಬೇಕೆಂಬ ಮಹತ್ವಾಕಾಂಕ್ಷೆಯಿಂದಾ ತಮ್ಮ  ಬದುಕನ್ನೇ ದೀಪದಂತೆ ಉರಿಸಿ ಮನುಕುಲಕೆ ಬೆಳಕಾದರು. ಆದರೆ ಅವರು ಇದ್ದಾಗಲೂ ಹಾಗೂ ಅವರು ಇಲ್ಲವಾದಾಗಲೂ ಬಾಬಾಸಾಹೇಬರನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಹುನ್ನಾರಗಳ ಬಗ್ಗೆ ಎಚ್ಚರವಹಿಸಬೇಕಾಗಿದೆ.

ಅಂಬೇಡ್ಕರರವರ ವಿಶಾಲವಾದ ಜನಮುಖಿ ಸಮಗ್ರ ದೃಷ್ಟಿಕೋನ ಅವರ ಅಧ್ಯಕ್ಷತೆಯಲ್ಲಿ ರಚನೆಯಾದ ಭಾರತದ ಸಂವಿಧಾನದಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ. ಯಾವುದೇ ಜಾತಿ ಧರ್ಮ ವರ್ಣಗಳ ಬೇಧಭಾವವಿಲ್ಲದೇ ಎಲ್ಲರಿಗೂ ಸಮಾನವಾಗಿ ರಚಿತವಾದ ಕಾನೂನುಗಳು ಹಾಗೂ ಸಮಾಜದಲ್ಲಿ ಕೆಳಸ್ತರದಲ್ಲಿರುವ ತಳಸಮುದಾಯದ ದಮನಿತ ವರ್ಗದವರಿಗೂ ಸಮಾನತೆ ಸಾಧಿಸಲು ಒದಗಿಸಿದ ಮೀಸಲಾತಿಗಳು ಅಂಬೇಡ್ಕರರವರ ಸಾಮಾಜಿಕ ಸಮಾನತೆಯ ಆಶಯವನ್ನು ಪ್ರತಿನಿಧಿಸುತ್ತವೆ.

ಇವತ್ತು ಕೆಳ ಹಾಗೂ ತಳಸಮುದಾಯಗಳನ್ನು ಪ್ರತಿನಿಧಿಸುವ ಕೆಲವರಾದರೂ ಸರಕಾರದ ಆಡಳಿತದಲ್ಲಿ ಪ್ರಾತಿನಿದ್ಯತೆಯನ್ನು ಪಡೆದಿದ್ದರೆ ಅದಕ್ಕೆ ಅಂಬೇಡ್ಕರರವರೇ ಕಾರಣ. ದಲಿತ ಶೂದ್ರ ಸಮುದಾಯದ ಹಲವಾರು ಜನ ಸರಕಾರಿ ನೌಕರಿಗಳನ್ನು ಪಡೆದು ಆರ್ಥಿಕವಾಗಿ ಮುಂದುವರೆದಿದ್ದರೆ ಅದಕ್ಕೆ ಬಾಬಾಸಾಹೇಬರ ನೀತಿ ನಿರೂಪಣೆಯೆ ಕಾರಣ. ಈ  ಮೀಸಲಾತಿ ಎನ್ನುವುದು ಇಲ್ಲದೇ ಹೋಗಿದ್ದರೆ ಉಳ್ಳವರೇ ಈಡೀ ವ್ಯವಸ್ಥೆಯ ಫಲಾನುಭವಿಗಳಾಗಿ ದಲಿತ ಶೂದ್ರ ಸಮುದಾಯ ಈಗಲೂ ಜೀತ ಮಾಡಿಕೊಂಡೇ ಬದುಕುವಂತಹ ವ್ಯವಸ್ಥೆ ಜಾರಿಯಲ್ಲಿರುತ್ತಿತ್ತು ಎನ್ನುವುದನ್ನು ಮರೆಯುವಂತಿಲ್ಲ. ಕೂಲಿಯವನ ಮಗ ಕೂಲಿಯವನೇ ಆಗಿರುತ್ತಿದ್ದಾ. ಬಂಗಿಯವನ ಮಗ ಉಳ್ಳವರ ಅಮೇಧ್ಯವನ್ನು ತಲೆಯ ಮೇಲೆ ಹೊರುತ್ತಿದ್ದ. ಆದರೆ ಮೀಸಲಾತಿ ಹಾಗೂ ಶಿಕ್ಷಣ ಎನ್ನುವುದು ಇವತ್ತು ಅನೇಕಾನೇಕ ಜನ ದಲಿತ ಶೂದ್ರರನ್ನು ಆರ್ಥಿಕವಾಗಿ ಸಬಲರನ್ನಾಗಿಸಿ ಸ್ವಾಭಿಮಾನದ ಬದುಕನ್ನು ರೂಪಿಸಿಕೊಳ್ಳಲು ಕಾರಣವಾಗಿದೆ. ಇದಕ್ಕಾಗಿ ಎಲ್ಲರೂ ಅಂಬೇಡ್ಕರ್‌ರವರನ್ನು ನಿತ್ಯ ಸ್ಮರಿಸಬೇಕಿದೆ.

ಹಾಗೆಯೇ ಪುರೋಹಿತಶಾಹಿ ಪ್ರಣೀತ ವ್ಯವಸ್ಥೆಯಲ್ಲಿ ಎರಡನೇ ದರ್ಜೆಯ ಪ್ರಜೆಗಳಂತೆ ಯಾವುದೇ ಹಕ್ಕುಗಳಿಲ್ಲದೇ ಅತಂತ್ರತೆಯಲ್ಲೇ ಪರಾವಲಂಬಿಯಾಗಿ ಬದುಕುತ್ತಿದ್ದ ಮಹಿಳೆಯರಿಗೆ ಕಾನೂನಿನ ರಕ್ಷಣೆ ಕೊಟ್ಟು ಕಾಪಾಡಿದ್ದೂ ಸಹ ಅಂಬೇಡ್ಕರರ ಸಮಾನತಾ ಸಿದ್ದಾಂತವೇ ಆಗಿದೆ. ಇಲ್ಲವಾಗಿದ್ದರೆ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರು ಗುಲಾಮರಾಗಿ ಬದುಕು ಸವೆಸುವುದನ್ನು ಯಾರಿಂದಲೂ ತಡೆಯಲು ಸಾಧ್ಯವೇ ಇರಲಿಲ್ಲಾ.  ಹಠಕ್ಕೆ ಬಿದ್ದು ಬಹುಪತ್ನಿತ್ವ ವ್ಯವಸ್ಥೆಯನ್ನು ಸಂವಿಧಾನದಲ್ಲಿ ಅಂಬೇಡ್ಕರರವರು ನಿಷೇಧಿಸದೇ ಹೋಗಿದ್ದರೆ ಈಗಲೂ ಮಹಿಳೆಯರು ಪುರುಷರ ಭೋಗದ ವಸ್ತುವಾಗಿ ಸದಾ ಆತಂಕದಲ್ಲೇ ಜೀವಿಸುತ್ತಿದ್ದರು. ಅದೇ ರೀತಿ ಮಹಿಳೆಯರಿಗೆ ಆಸ್ತಿಯಲ್ಲೂ ಹಕ್ಕನ್ನು ಅಂಬೇಡ್ಕರರು ಪ್ರತಿಪಾದಿಸದೇ ಹೋಗಿದ್ದರೆ ಮಹಿಳೆಯ ಬದುಕು ಅಸಹನೀಯವಾಗುತ್ತಿತ್ತು.

ಈ ದೇಶದ ಜನಸಂಖ್ಯೆಯಲ್ಲಿ ಮುಕ್ಕಾಲು ಭಾಗಕ್ಕಿಂತಲೂ ಹೆಚ್ಚು ದುಡಿಯುವ ವರ್ಗದ ದಲಿತ ಶೂದ್ರ ಸಮುದಾಯದವರಿದ್ದಾರೆ. ಹಾಗೂ ಜನಸಂಖ್ಯೆಯ ಅರ್ಧದಷ್ಟು ಮಹಿಳೆಯರಿದ್ದಾರೆ.  ಅವರೆಲ್ಲರಿಗೂ ಮೀಸಲಾಗಿ, ಶಿಕ್ಷಣ ಹಾಗೂ ಸಮಾನ ಕಾನೂನುಗಳನ್ನು ಸಂವಿಧಾನದ ಮೂಲಕ ಅಂಬೇಡ್ಕರ್ ಕೊಡದೇ ಹೋಗಿದ್ದರೆ ನಮ್ಮ ಇಡೀ ದೇಶ ವೈದಿಕಶಾಹಿಯ ಕರ್ಮಸಿದ್ದಾಂತದ ವರ್ಣಾಶ್ರಮದ ವ್ಯಾಧಿಯಲ್ಲಿ ನರಳಬೇಕಿತ್ತು. ಎಲ್ಲಾ ಜಾತಿ ಧರ್ಮದಲ್ಲಿರುವ ಪುರುಷ ಪ್ರಧಾನ ಪುರೋಹಿತಶಾಹಿಗಳ ಹಿಡಿತದಲ್ಲಿ ಸಿಕ್ಕು ಮಹಿಳೆಯರು ಗುಲಾಮಗಿರಿಯ ಬದುಕು ಸವೆಸಬೇಕಾಗುತ್ತಿತ್ತು. ಆದರೆ.. ಅಂಬೇಡ್ಕರರವರ ದೂರದೃಷ್ಟಿ ಹಾಗೂ ಸಮಾನತಾ ಸಿದ್ದಾಂತಗಳು ಇಂದು ಬಹುಸಂಖ್ಯಾತ ದಮನಿತ ಜನರಿಗೆ ಕನಿಷ್ಟ ಸ್ವಾಭಿಮಾನದ ಬದುಕನ್ನು ರೂಪಿಸಿ ಕೊಟ್ಟಿವೆ. ಮನುಸ್ಮೃತಿಯ ಅಸಮಾನತೆಯ ರೋಗಪೀಡಣೆಯಿಂದ ಸಾಧ್ಯವಾದಷ್ಟೂ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿವೆ. ಇದಕ್ಕಾಗಿಯಾದರೂ ಎಲ್ಲರೂ ಬಾಬಾಸಾಹೇಬರನ್ನು ನೆನಪಿಸಿಕೊಳ್ಳಬೇಕಾಗಿದೆ. ಅವರು ಹಾಕಿ ಕೊಟ್ಟ ಸ್ವಾತಂತ್ರ್ಯ ಸಮಾನತೆ  ಸ್ವಾಭಿಮಾನ ಹಾಗೂ ಸ್ವಾವಲಂಬನೆಯ ದಾರಿಯಲ್ಲಿ ಮುನ್ನಡೆಯಬೇಕಾಗಿದೆ.

ಆದರೆ.. ಈಗ ಬಹುಸಂಖ್ಯಾತ ದುಡಿಯುವ ವರ್ಗಗಳ ಸ್ವಾಭಿಮಾನದ ಸಂಕೇತವಾದ ಅಂಬೇಡ್ಕರರವರ ಹೆಸರನ್ನು ಮನುವಾದಿಗಳು ಬಳಸಿಕೊಂಡು ದಲಿತ ಶೂದ್ರ ಸಮುದಾಯಗಳ ದಿಕ್ಕು ತಪ್ಪಿಸುತ್ತಿದ್ದಾರೆ. ಸಮಾನತೆ ಬರುವವರೆಗೂ ಮೀಸಲಾತಿ ಇರಬೇಕೆಂದು ಬಯಸಿದ ಅಂಬೇಡ್ಕರರ ಆಶಯವನ್ನೇ ಸಾವಕಾಶವಾಗಿ ಇಲ್ಲವಾಗಿಸುವ ಹುನ್ನಾರಗಳು ನಡೆಯುತ್ತಿವೆ. ಉತ್ತರ ಪ್ರದೇಶದಲ್ಲಿ ಜನರಲ್ಲಿ  ಭ್ರಮೆಗಳನ್ನು ಬಿತ್ತಿ ಬಹುಮತ ಪಡೆದು ಆಡಳಿತದ ಚುಕ್ಕಾಣಿ ಹಿಡಿದ ಬಿಜೆಪಿ ಮೀಸಲಾತಿಯನ್ನು ರದ್ದು ಮಾಡುವ ಆದೇಶವನ್ನು ಹೊರಡಿಸಿದೆ. ಈ  ಪ್ಯಾಸಿಸ್ಟ್ ಪ್ರಭುತ್ವ ಇಡೀ ದೇಶವನ್ನು ಓಟ್ ರಾಜಕಾರಣದ ಮೂಲಕವೇ ಆಕ್ರಮಿಸಿಕೊಂಡು ಮೀಸಲಾತಿಯನ್ನೇ ತೆಗೆದುಹಾಕಿ ಮತ್ತೆ ದಲಿತ ದಮನಿತರನ್ನು ವಂಚಿತರನ್ನಾಗಿಸುವ ಶಡ್ಯಂತ್ರಗಳನ್ನು ಅಲ್ಲಗಳೆಯುವಂತಿಲ್ಲ. ಹೀಗೇನಾದರೂ ಆದರೆ.. ಅಂಬೇಡ್ಕರವರ ಸಮಾಜದಲ್ಲಿ  ಸಮಾನತೆಯನ್ನು ತರುವ ಉದ್ದೇಶವೇ ಸರ್ವನಾಶವಾಗುತ್ತದೆ. ಜೊತೆಗೆ ಪ್ಯಾಸಿಸ್ಟ್ ಪ್ರಭುತ್ವ ಶಕ್ತಿಯುತವಾದಂತೆ ಭಾರತದ ಸಂವಿಧಾನವೇ ಅವರ ಮನುವ್ಯಾಧಿಗೆ ತಕ್ಕಂತೆ ಬದಲಾವಣೆಗೊಳಗಾಗುತ್ತಾ ಕೊನೆಗೆ ಮನುಸ್ಮೃತಿಯೇ ಸಂವಿಧಾನವಾಗುವ ಅಪಾಯವನ್ನೂ ನಿರ್ಲಕ್ಷಿಸುವ ಹಾಗಿಲ್ಲಾ.

ಈಗ ಮನುವಾದಿ ಸಂಘಪರಿವಾರದ ಸಂತಾನಗಳಿಗೆ ಕಮ್ಯೂನಿಸ್ಟರಿಗಿಂತಾ ಅಂಬೇಡ್ಕರ್‌ವಾದಿಗಳೇ ಬಹಳ ಮುಖ್ಯ ಅಡತಡೆಯಾಗಿದ್ದಾರೆ. ಯಾಕೆಂದರೆ ಅಂಬೇಡ್ಕರರವನ್ನು ತಮ್ಮ ವಿಮೋಚನೆಯ ಹರಿಕಾರ ಎಂದು ನಂಬಿದವರ ಬಲು ದೊಡ್ಡ ಜನಸಂಖ್ಯೆ ಭಾರತದಲ್ಲಿದೆ. ಅಂಬೇಡ್ಕರರ ನೀಲಿ ಬಾವುಟದಡಿಯಲ್ಲಿ ಈ ದಮನಿತ ದಲಿತ ಶಕ್ತಿ ಒಂದಾಗಿ ನಿಂತರೆ ಮನುವಾದಿಗಳು ಮೂಲೆಗುಂಪಾಗುತ್ತಾರೆ. ಈ ಸತ್ಯದ ಅರಿವಿದ್ದ ಮೋದಿ ನೇತೃತ್ವದ ಬಿಜೆಪಿ ಪಕ್ಷ ಈಗ ಅಂಬೇಡ್ಕರ್ ಭಜನೆಯನ್ನು ಆರಂಭಿಸಿದೆ. ಅಂಬೇಡ್ಕರ್ ಹೆಸರಲ್ಲಿಯೇ ಬಹುಜನರನ್ನು ಒಡೆದು ಆಳುವ ಹುನ್ನಾರಗಳು ನಡೆಯುತ್ತಿವೆ. ದಲಿತರನ್ನು ದಿಕ್ಕುತಪ್ಪಿಸಿ ಇಲ್ಲದ ಭರವಸೆಗಳನ್ನು ತೋರಿಸಿ ಮತಗಳನ್ನು ಪಡೆದು ಇಡೀ ದೇಶದ ಮೇಲೆ ಪ್ರಭುತ್ವವನ್ನು ಸ್ಥಾಪಿಸಿ ವರ್ಣಬೇಧ ನೀತಿಯನ್ನು ಸಾವಕಾಶವಾಗಿ ಹೇರುವುದು ಸಂಘಪರಿವಾರದ ಹಿಡನ್ ಅಜೆಂಡಾ ಆಗಿದೆ. ಈ ಕುತಂತ್ರವನ್ನು ಮೊದಲು ದಲಿತ ಶೂದ್ರ ಸಮುದಾಯ ಅರಿಯಬೇಕಿದೆ.

ದಲಿತ ಸಮುದಾಯದ ನಾಯಕರುಗಳು ತಮ್ಮ ಅವಕಾಶವಾದಿತನವನ್ನು ಬದಿಗಿಟ್ಟು ಎಲ್ಲಾ ದಲಿತ ಸಂಘಟನೆಗಳನ್ನು ಒಂದು ಸಂಯುಕ್ತ ವೇದಿಕೆಯಡಿ ತಂದು ಮನುವಾದಿ ಮನಸ್ಥಿತಿಯ ಸಂಘಪರಿವಾರದ ಕೇಸರಿ ಪಡೆಯ ವಿರುದ್ದ  ನೀಲಿ ಪಡೆಯನ್ನು ಸಿದ್ದಗೊಳಿಸಬೇಕಿದೆ. ಚಿಕ್ಕ ಪುಟ್ಟ ರಾಜಕೀಯ ಅವಕಾಶಗಳ ಮೋಹಕ್ಕೊಳಗಾಗಿ ಅವರವರ ಕಾಲುಗಳನ್ನು ಅವರವರೇ ಎಳೆದುಕೊಳ್ಳುತ್ತಾ ಅಂಬೇಡ್ಕರ್ ರವರ ಹೆಸರಲ್ಲಿ ದಲಿತ ಸಂಘಗಳೆಂಬ ದ್ವೀಪಗಳನ್ನು ಕಟ್ಟಿ ಸರಕಾರಿ ಸವಲತ್ತುಗಳ ಫಲಾನುಭವಿಯಾಗುವಂತಹ ರಾಜೀಕೋರತನವನ್ನು ಈ ಎಲ್ಲಾ ನಾಯಕರುಗಳು ತೊರೆಯಬೇಕಿದೆ. ಅಂಬೇಡ್ಕರರವರು ಇದ್ದಿದ್ದರೆ ಅವರೂ ಸಹ ಇದನ್ನೇ ಬಯಸುತ್ತಿದ್ದರು.

ಅಂಬೇಡ್ಕರ್ ಈಗ ಕೇವಲ ತೋರುಂಬ ಲಾಭವಾಗದೇ ಅಸಮಾನತೆಯ ವಿರುದ್ದದ ಸಶಕ್ತ ಆಯುಧವಾಗಬೇಕಿದೆ. ಬಾಬಾಸಾಹೇಬರು ದಲಿತ ಸಮುದಾಯದವರ ವಿಜ್ರಂಭಣೆಗೆ ಕೇವಲ ಉತ್ಸವ ಮೂರ್ತಿಯಾಗದೇ ವಿಚಾರವಾದಕ್ಕೆ ಪ್ರೇರಣೆಯಾಗಬೇಕಿದೆ. ಅಂಬೇಡ್ಕರರವರನ್ನು ನಿಜಕ್ಕೂ ಒಪ್ಪಿಕೊಂಡು ಅಂಬೇಡ್ಕರ್ ವಾದವನ್ನು ಪ್ರತಿನಿಧಿಸುವ ಪ್ರತಿಯೊಬ್ಬರೂ ವೈದಿಕಶಾಹಿಯ ವಿರುದ್ಧ ಸಮರವನ್ನೇ ಸಾರಬೇಕಿದೆ. ಇಲ್ಲವಾದರೆ ಮನುವಾದಿ ಪ್ಯಾಸಿಸ್ಟ್‌ರು ಪ್ರಭಲಗೊಂಡು ಮತ್ತೆ ಇನ್ನೂರು ವರ್ಷಗಳ ಕಾಲ ಈ ದೇಶ ವೈದಿಕಶಾಹಿಯ ಆಡಳಿತದಲ್ಲಿ ನಲುಗುತ್ತದೆ. ಮತ್ತೆ ಇನ್ನೊಬ್ಬ ಸಮಾನತಾವಾದಿ ಅಂಬೇಡ್ಕರ್ ಹುಟ್ಟಿ ಬಂದು ಹೋರಾಟದ ಮುಂದಾಳತ್ವವಹಿಸಿಕೊಳ್ಳುವವರೆಗೂ ಇಡೀ ದಲಿತ ಶೂದ್ರ ಮಹಿಳಾ ಸಮುದಾಯ ವರ್ಣಾಶ್ರಮದ ಬಚ್ಚಲಿನಲ್ಲಿ ಹುಳುಗಳಂತೆ ಕೊಳೆಯಬೇಕಾಗುತ್ತದೆ. ಮುಂದಿನ ತಲೆಮಾರು ಸ್ವಾತಂತ್ರ್ಯ ಹಾಗೂ ಸ್ವಾಭಿಮಾನವನ್ನು ಕಳೆದುಕೊಂಡು ವೈದಿಕಶಾಹಿಯ ಅಡಿಯಾಳಾಗಿ, ಮನುವಾದಿಗಳ ಜೀತದಾರರಾಗಿ ಬದುಕನ್ನು ಸವೆಸಬೇಕಾಗುತ್ತದೆ. ಅಕಸ್ಮಾತ್ ಈಗಿನ ತಲೆಮಾರಿನವರ ಅವಕಾಶವಾದಿತನದಿಂದಾಗಿ ಮನುವ್ಯಾಧಿ ದೇಶಾದ್ಯಂತ ವ್ಯಾಪಿಸಿ ಬಹುಜನರನ್ನು ಬಲಿತೆಗೆದುಕೊಂಡರೆ ಅದನ್ನು ಮುಂದಿನ ಹಲವಾರು ತಲೆಮಾರು ಅನುಭವಿಸಬೇಕಾಗುತ್ತದೆ. ರಾಜೀತನವನ್ನು ಬಿಸಾಕಿ, ವ್ಯಯಕ್ತಿಕ ಅಹಂ ಪಕ್ಕಕ್ಕಿಟ್ಟು ಅಂಬೇಡ್ಕರರವರ ಆಶಯಗಳ ಸಾಕಾರಕ್ಕಾಗಿ ಅಂಬೇಡ್ಕರ್‌ವಾದಿಗಳು, ಅಂಬೇಡ್ಕರರ ಅನುಯಾಯಿಗಳು ಹಾಗೂ ಎಲ್ಲಾ ಪ್ರಗತಿಪರರು ಒಂದಾಗಿ ವೈದಿಕಶಾಹಿಗಳ ಹುನ್ನಾರಗಳ ವಿರುದ್ದ ನಿಲ್ಲಬೇಕಾದದ್ದು ಈಗಿನ ತುರ್ತು ಅಗತ್ಯವಾಗಿದೆ. ಅದು ಸಾಧ್ಯವಾಗದಿದ್ದರೆ ಮುಂದಿನ ತಲೆಮಾರು ನಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ ಎನ್ನುವ ಅರಿವಾದರೂ ಇರಬೇಕಾಗಿದೆ. ಅಂಬೇಡ್ಕರ್ ಪ್ರತಿಯೊಬ್ಬರಲ್ಲೂ ಜಾಗೃತಗೊಳ್ಳಬೇಕು ಹಾಗೂ ಮನುವಾದಿಗಳ ವಿರುದ್ದ ಮಾನವೀಯತಾವಾದ ಗೆಲ್ಲಬೇಕು ಎಂಬುದೇ ಈ ಲೇಖನದ ಆಶಯವಾಗಿದೆ. 

                         -ಶಶಿಕಾಂತ ಯಡಹಳ್ಳಿ