ಮಂಗಳವಾರ, ಅಕ್ಟೋಬರ್ 22, 2019

ತಹ ತಹ..101 ಮನೆಹಾಳರಿಗೆ ಮಾರ್ಗದರ್ಶಿ ಸೂತ್ರ



ಸನ್ಮಾನ್ಯ ಸಂಸ್ಕೃತಿ ಸಚಿವರೆ..

ನೀವು ಸಾಹಿತಿ ಕಲಾವಿದರಿಗೆ ಮನೆಹಾಳರು ಎಂದಿದ್ದಕ್ಕೆ ಹಲವಾರು ಜನ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವಿರೋಧಿಸಲಿ ಬಿಡಿ ಅದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯ. ಅದರೆ ಯಾರು ಏನೇ ಹೇಳಲಿ ನಾನು ಮಾತ್ರ ನಿಮ್ಮ ಮಾತನ್ನು ಅನುಮೋದಿಸುತ್ತೇನೆ, ಸಮರ್ಥಿಸಿಕೊಳ್ಳುತ್ತೇನೆ, ಒಪ್ಪಿಕೊಳ್ಳುತ್ತೇನೆ.

ಯಾಕೆಂದರೆ ನೀವು ಹೇಳಿದಂತೆ ಈ ಸಾಹಿತಿ ಕಲಾವಿದರೆಲ್ಲಾ ನಿಮ್ಮಾಣೆಗೂ ಮನೆಹಾಳರೇ.  ಬೇರೆಯವರ ಮನೆ ಹಾಳು ಮಾಡದಿದ್ದರೇನಾಯ್ತು ತಮ್ಮ ಮನೆಗಳನ್ನೇ ಹಾಳು ಮಾಡಿಕೊಂಡು ಕಲೆ ಸಾಹಿತ್ಯ ಅಂತಾ ಬದುಕುತ್ತಿದ್ದಾರೆ. ನಿಜವಾದ ಸಾಹಿತಿ ಕಲಾವಿದರ ಮನೆಗೆ ಹೋಗಿ ಅವರ ಹೆಂಡತಿ ಮಕ್ಕಳನ್ನು ಕೇಳಿದರೆ ಗೊತ್ತಾಗುತ್ತೆ ತಮ್ಮ ಮನೆಯವರಿಗೆ ಇವರು ಏನೂ ಮಾಡಿಲ್ಲವೆಂಬುದು. ಮಕ್ಕಳ ಬಗ್ಗೆ ಕಾಳಜಿ ತೋರಲಿಲ್ಲ, ಹೆಂಡತಿಯ ಬಗ್ಗೆ ಕಳಕಳಿ ತೋರಲಿಲ್ಲ, ಎಂದೂ ಸಂಜೆಗೆ ಸರಿಯಾಗಿ ಮನೆಗೆ ಹೋಗಿಲ್ಲ...ಮನೆಗೆ ಬಂದರೂ ಕಲೆ ಸಾಹಿತ್ಯ ಹೊರತು ಪಡಿಸಿ ಇವರಿಗೆ ಬೇರೆ ಪ್ರಪಂಚವೇ ಇಲ್ಲ.  ಕಲೆ ಸಾಹಿತ್ಯ ಸಂಸ್ಕೃತಿಗಾಗಿ ತಮ್ಮದೇ ಕುಟುಂಬವನ್ನು ನಿರ್ಲಕ್ಷಿಸಿದ ಇಂತವರಿಗೆ ಮನೆಹಾಳರು ಎನ್ನದೇ ಇನ್ನೇನು ತಾನೇ ಅನ್ನಲು ಸಾಧ್ಯ.. ಸರಿಯಾಗಿಯೇ ಹೇಳಿದ್ದೀರಿ.

ಇವರೆಲ್ಲಾ  ಮನೆಉದ್ಧಾರಕರನ್ನು ನೋಡಿ ಕಲಿಯುವುದು ಬೇಕಾದಷ್ಟಿದೆ. ಶೂನ್ಯದಿಂದ ನೂರಾರು ಕೋಟಿಗಳನ್ನು ಹೇಗೆ ಅಕ್ರಮವಾಗಿ ಸಂಪಾದಿಸಬೇಕು ಎಂಬುದನ್ನು  ಈ ಮನೆಹಾಳರೆಲ್ಲಾ ತಿಳಿದುಕೊಳ್ಳಬೇಕಿದೆ. ಕೋಮು ಸೌಹಾರ್ಧತೆಯನ್ನು ಹಾಳುಮಾಡಿ, ಧರ್ಮಾಂಧತೆಯ ವಿಷಬೀಜ ಬಿತ್ತಿ ಹೇಗೆ ಓಟುಗಳನ್ನು ಬೆಳೆದು ಅಧಿಕಾರದ ಫಲ ಪಡೆಯಬೇಕೆಂಬ (ಕು)ತಂತ್ರಗಾರಿಕೆಯನ್ನು ಈ ಮನೆಹಾಳರು ಅನುಕರಿಸಬೇಕಿದೆ. "ಸಮಾಜವನ್ನು ಒಡೆದು ಮನಸುಗಳ ನಡುವೆ ಕಂದರ ಸೃಷ್ಟಿಸಿ ತಮ್ಮ ಮನೆಯನ್ನು ಹೇಗೆ ಉದ್ದಾರ ಮಾಡಿಕೊಳ್ಳಬೇಕು, ಸಮಾಜದಿಂದ ಲೂಟಿ ಹೊಡೆದ ಸಂಪತ್ತಿನಲ್ಲಿ ಹೇಗೆ ಮಕ್ಕಳನ್ನು ವಿದೇಶದಲ್ಲಿ ಓದಿಸಬೇಕು, ಮುಂದಿನ ಹತ್ತಾರು ತಲೆಮಾರಿಗಾಗುವಷ್ಟು ಆಸ್ತಿ ಸಂಪಾದಿಸಬೇಕು" ಎನ್ನುವ ಗುಟ್ಟುಗಳನ್ನು ಈ ಮನೆಹಾಳರು ಅರಿತು ನಡೆದಿದ್ದರೆ ಈ ಹಾಳು ಕಲೆ ಸಾಹಿತ್ಯಗಳನ್ನೆಲ್ಲಾ ಬಿಟ್ಟು  ಅಧಿಕಾರ ಮತ್ತು ಸಿರಿವಂತಿಕೆ ಅನುಭವಿಸಬಹುದಾಗಿತ್ತು. 

ಆದರೆ ಬೇರೆಯವರ ಮನೆಹಾಳು ಮಾಡದೆ, ಸಮಾಜದ ಸಂಪತ್ತನ್ನು ಲೂಟಿಮಾಡದೆ, ಧರ್ಮಾಂಧತೆ ಬೀಜ ಬಿತ್ತಿ ಅಧಿಕಾರದ ಬೆಳೆ ತೆಗೆಯದೆ, ಜನರ ನಡುವಿನ ಶಾಂತಿ ಕದಡದೆ, ತಮ್ಮ ಸಂತಾನಕ್ಕೆ ಸಂಪತ್ತನ್ನು ಕೂಡಿಡದೇ ಇರುವ ಈ ಸಾಹಿತಿ ಕಲಾವಿದರು ಸಮಾಜವನ್ನು ಉದ್ದಾರ ಮಾಡುವ ಕಾಯಕದಲ್ಲಿ ನಿರತರಾಗಿ ತಮ್ಮ ಮನೆಯನ್ನು ಹಾಳುಮಾಡಿಕೊಂಡಿದ್ದಂತೂ ಅಪ್ಪಟ ಸತ್ಯ. ಸತ್ಯ ಹೇಳಲು ಸಂತನೇ ಬೇಕೆಂದೇನಿಲ್ಲ. ಸೈತಾನನ ಬಾಯಲ್ಲಿ ಸತ್ಯ ಬಂದರೂ ಅದು ಸತ್ಯವೇ. ಹೀಗಾಗಿ ತಮ್ಮ ಮನೆಯನ್ನು ಹಾಳು ಮಾಡಿಕೊಂಡ ಘನಘೋರ ಪ್ರಮಾದ ಮಾಡಿದವರನ್ನು ದೂರವಿಟ್ಟು ತಮ್ಮ ತಮ್ಮ ಮನೆಗಳನ್ನು ಉದ್ದಾರ ಮಾಡಿಕೊಳ್ಳುವಂತವರನ್ನು ಹಾಗೂ ನಿಮ್ಮ ತವರಾದ ಸಂಘದ ಹಿತಾಸಕ್ತಿಗಾಗಿ ದುಡಿದವರನ್ನು ಹಾಗೂ ದುಡಿಯುವಂತವರನ್ನು ಅಕಾಡೆಮಿ ಪ್ರಾಧಿಕಾರಗಳಿಗೆ ಅಧ್ಯಕ್ಷ ಸದಸ್ಯರನ್ನಾಗಿ ಆಯ್ಕೆ ಮಾಡಿದ ನಿಮ್ಮ ದೂರದೃಷ್ಟಿಯ ಕ್ರಮ ಅಭಿನಂದನೀಯ. 

ಅಪರೂಪಕ್ಕೊಮ್ಮೆ ನಿಜವನ್ನು ನುಡಿದ ನಂಜಿನ ನಾಲಿಗೆಗೆ ಬಹುಪರಾಕು. ಇನ್ಮೇಲೆ ಸಾಹಿತಿ ಕಲಾವಿದರು ಸಾಂಸ್ಕೃತಿಕ ಲೋಕದಲ್ಲಿ ಇರಬೇಕೆಂದರೆ ತಮ್ಮ ಮನೆಗಳನ್ನು ಹಾಳು ಮಾಡಿಕೊಂಡು ಮನೆಹಾಳರಾಗಿ ಕಲೋದ್ದಾರ ದೇಶೋದ್ದಾರಗಳನ್ನೆಲ್ಲಾ ಮಾಡದೇ  ಅವರಿವರ ಮನೆಮುರಿದು, ಸಮಾಜದ ಐಕ್ಯತೆ ಒಡೆದು, ತಮ್ಮ ಮನೆಗಳ ತಳಪಾಯ ಕಂಬಗಳನ್ನೆಲ್ಲಾ ಗಟ್ಟಿಗೊಳಿಸಿಕೊಂಡು, ಅಧಿಕಾರ ಮತ್ತು ಸಂಪನ್ಮೂಲಗಳನ್ನು ಪಡೆಯುವ ನಿಟ್ಟಿನಲ್ಲಿ ಕಾರ್ಯತತ್ಪರರಾಗಬೇಕಿದೆ. ಈ ಮನೆಹಾಳರಿಗೆ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿದರೆ ಇನ್ನೂ ಉತ್ತಮ. ಎಲ್ಲರೂ ನಿಮ್ಮನ್ನು ಮಾದರಿಯಾಗಿ ಸ್ವೀಕರಿಸಿ ಉದ್ದಾರವಾಗಲಿ. 

ಜೈ ಶ್ರೀರಾಮ್

- ಶಶಿಕಾಂತ ಯಡಹಳ್ಳಿ

ತಹ ತಹ - 100.. ಮನೆಹಾಳರು ಯಾರು?.. ಕಿತ್ತೆಸೆಯಬೇಕಿದೆ ನಂಜಿನ ನಾಲಿಗೆಯ ಬೇರು..



ಅದ್ಯಾಕೊ ಎಂದೋ ಕೇಳಿದ ಕಥೆಯೊಂದು ನೆನಪಾಯ್ತು. ಒಂಚೂರು ಬದಲಾಯಿಸಿ ಹೇಳುತ್ತಿದ್ದೇನಷ್ಟೇ.
 
ಎಲ್ಲಿಂದಲೋ ಹಿಡಿದುಕೊಂಡು ಬಂದ ಎರಡು ಗಿಳಿಮರಿಗಳನ್ನು ಸಂತೆಯಲಿಟ್ಟು ಮಾರಲಾಗುತ್ತಿತ್ತು. ಒಬ್ಬ ಕಲಾವಿದ ಒಂದನ್ನು ಕೊಂಡು ಮನೆಗೆ ತೆಗೆದುಕೊಂಡು ಹೋಗಿ ಸಾಕಿದ. ಇನ್ನೊಂದನ್ನು ಕೋಮುವಾದಿಯೊಬ್ಬ ಖರೀದಿಸಿ ಸಾಕಿದ. ಮರಿಗಳು ಬೆಳೆದು ಗಿಳಿಗಳಾದವು. ತನ್ನ ಸುತ್ತಲಿನ ಪರಿಸರಕ್ಕೆ ಸ್ಪಂದಿಸಿ ಮಾತನಾಡತೊಡಗಿದವು. ಕಲಾವಿದನ ಮನೆಗೆ ಯಾರೇ ಬಂದರೂ ಅಲ್ಲಿದ್ದ ಗಿಳಿ 'ನಮಸ್ಕಾರ, ಬನ್ನಿ ಕುಳಿತುಕೊಳ್ಳಿ,  ಚೆನ್ನಾಗಿದ್ದೀರಾ' ಎಂದು ಕಕ್ಕುಲಾತಿಯಿಂದ ಉಲಿಯುತ್ತಿತ್ತು. ಅದನ್ನು ಕೇಳಿದವರಿಗೆಲ್ಲ ಸಂತಸವಾಗುತ್ತಿತ್ತು. ಕೋಮುವಾದಿಯ ಮನೆಯ ಗಿಳಿ ಮಾತ್ರ ಯಾರೇ ಬಂದರೂ "ಹಿಡೀರಿ ಹೊಡೀರಿ ಬಿಡಬೇಡಿ ಬೆಂಕಿ ಹಚ್ಚಿ.." ಎಂದೆಲ್ಲಾ ಅರಚುತ್ತಿತ್ತು. ಕೇಳಿದವರಿಗೆ ದಿಗಿಲಾದರೆ ಮನೆಯ ಮಾಲೀಕನಿಗೆ ಕರ್ಣಾನಂದವಾಗುತ್ತಿತ್ತು. 

ಈಗ ಅಂತದೇ ಒಂದು ಗಿಳಿಗೆ ಮಂತ್ರಿಗಿರಿ ಸಿಕ್ಕಿದೆ. 'ಸಾಹಿತಿ ಕಲಾವಿದರಿಗೆಲ್ಲಾ ಮನೆಮುರುಕರು' ಎಂದು  ಅರಚುತ್ತಿದೆ. ಕಲಾವಿದರ ಮನೆಯ ಗಿಳಿಸಂತಾನ ಮಾತ್ರ  ಅದ್ಯಾಕೋ ಆತಂಕದಿಂದ ಮೌನವಹಿಸಿವೆ.

ಹೌದು.. ಸಂಸ್ಕೃತಿ ಇಲಾಖೆಯ ಹಾಲಿ ಸಚಿವರ ನಾಲಿಗೆ ಮಾಮೂಲಿನಂತೆ ನಂಜು ಕಾರುತ್ತಿದೆ. 

ಇಷ್ಟಕ್ಕೂ ಆದದ್ದಾದರೂ ಏನಂದರೆ.. ಅಕಾಡೆಮಿ ಪ್ರಾಧಿಕಾರಗಳಿಗೆ ಆಯ್ಕೆ ಆದವರ ಅಧಿಕಾರದ ಅವಧಿಯನ್ನು ಅಕಾಲಿಕವಾಗಿ ವಜಾ ಮಾಡಿದ ಬಿಜೆಪಿ ಸರಕಾರ ಮೂರು ತಿಂಗಳ ನಂತರ ಸಂಘಪರಿವಾರದ ಸಾಂಗತ್ಯ ಹೊಂದಿರುವವರನ್ನು ಅಕಾಡೆಮಿಗಳ ನಿಯಮಾವಳಿ (ಬೈಲಾ) ಹಾಗೂ ಸಾಂಸ್ಕೃತಿಕ ನೀತಿಯನ್ನು ಉಲ್ಲಂಘಿಸಿ ಆಯ್ಕೆ ಮಾಡಿತು. ಸಂಸ್ಕೃತಿ ಸಚಿವಾಲಯದ ಸಚಿವರಾದ ಮಾನ್ಯ ಸಿ.ಟಿ.ರವಿಯವರು ಅಕ್ಟೋಬರ್ 18 ರಂದು ಹೊಸದಾಗಿ ಆಯ್ಕೆಯಾದ ಎಲ್ಲಾ ಅಕಾಡೆಮಿ ಪ್ರಾಧಿಕಾರಗಳ ಅಧ್ಯಕ್ಷರು ಹಾಗೂ ಸದಸ್ಯರ ಸಭೆಯನ್ನು ವಿಧಾನಸಭೆಯ ಸಭಾಂಗಣದಲ್ಲಿ ಕರೆದಿದ್ದರು. ಎಲ್ಲರಿಗೂ ಶುಭಹಾರೈಸಿ ಸಾಧ್ಯವಾದರೆ ಒಂದಿಷ್ಟು ಮಾರ್ಗದರ್ಶನ ನೀಡಿ ಕಳಿಸಿದ್ದರೆ ಈ ಲೇಖನ ಬರೆಯುವ ಅಗತ್ಯವೇ ಇರಲಿಲ್ಲ. 

ಆದರೆ.. ಹಿಂದೆ ಕಲಿತದ್ದನ್ನ ಈ ಕೋಮುಗಿಳಿ ಹೇಗೆ ತಾನೇ ಮರೆತು ಬದಲಾದೀತು.  *"ಅಕಾಡೆಮಿ ಪ್ರಾಧಿಕಾರಗಳಿಗೆ ಈಗ ಆಯ್ಕೆ ಮಾಡುವಾಗ ಮನೆಹಾಳರನ್ನು ದೂರವಿಟ್ಟಿದ್ದೇವೆ. ಸಾಂಸ್ಕೃತಿಕ ಕ್ಷೇತ್ರವನ್ನು ಕದಡುವ, ಒಡೆಯುವ ಮನಸ್ಥಿತಿ ಇರುವವರನ್ನು ನಾವು ಆಯ್ಕೆ ಮಾಡಿಲ್ಲ. ಮನೆಹಾಳು ಮಂದಿಗೆ ಅಧಿಕಾರ ಕೊಟ್ಟಿಲ್ಲ. ಸಾಂಸ್ಕೃತಿಕ ಕ್ಷೇತ್ರದ ಕೆಲ ಮನೆಮುರುಕರು ಬಂದರೆ ಎಲ್ಲವನ್ನೂ ಹಾಳುಮಾಡುತ್ತಾರೆ..."* ಎಂದು ಸಂಘಪರಿವಾರದ ಈ ಪ್ರಮುಖ ಅಂಗದ ನಾಲಿಗೆ ಉಲಿಯಿತು. ಇದನ್ನು ಕೇಳಿಯೂ ಆಯ್ಕೆಯಾದ ಋಣದಲ್ಲಿರುವ ಎಲ್ಲಾ ಅಕಾಡೆಮಿ ಪ್ರಾಧಿಕಾರದ ಅಧ್ಯಕ್ಷ- ಸದಸ್ಯರುಗಳೂ ಮೌನ ಸಮ್ಮತಿ ಸೂಚಿಸಿ ಜಾಣಕಿವುಡು ಕುರುಡನ್ನು ತೋರಿದ್ದೊಂದು ಸಾಂಸ್ಕೃತಿಕ ದುರಂತ.

ಪ್ರಭುತ್ವದ ತಪ್ಪು ನಿರ್ಧಾರಗಳನ್ನು ಜನವಿರೋಧಿ ನಿಲುವುಗಳನ್ನು ವಿರೋಧಿಸುವವರನ್ನು ದೇಶದ್ರೋಹಿಗಳು ಎಂದು ಆರೋಪಿಸಿ ಕಿರುಕುಳ ಕೊಡುವ ಉರಿ ನಾಲಿಗೆಯವರಲ್ಲಿ ಉದುರುವುದೇ ಇಂತಹ ನಂಜಿನ ಪದಗಳು. ಇಲ್ಲಿ ಈಗ "ಮನೆಮುರುಕರು ಯಾರು? ಎನ್ನುವ ಪ್ರಶ್ನೆ ಪ್ರಮುಖವಾಗಿದೆ. ಯಾವ ಸಾಹಿತಿ ಕಲಾವಿದರು ಯಾರ ಮನೆಯನ್ನು ಮುರಿದಿದ್ದಾರೆ? ಇಲ್ಲಿವರೆಗೂ ಅಕಾಡೆಮಿ ಪ್ರಾಧಿಕಾರಕ್ಕೆ ಆಯ್ಕೆ ಆದವರಲ್ಲಿ ಯಾರು ಸಾಂಸ್ಕೃತಿಕ ಕ್ಷೇತ್ರವನ್ನು ಹಾಳುಮಾಡಿದ್ದಾರೆ?. ಕದಡುವ ಒಡೆಯುವ ಮನಸ್ಥಿತಿ ಯಾರು ಹೊಂದಿದ್ದಾರೆ..?"  ಎನ್ನುವುದಕ್ಕೆ ಮೊದಲು ಸಚಿವರು ಉತ್ತರಿಸಬೇಕಾಗಿದೆ. 

'ತಲೆ ಕತ್ತರಿಸುತ್ತೇವೆ, ಬೆಂಕಿ ಹಚ್ಚುತ್ತೇವೆ' ಎಂದು ಸಾರ್ವಜನಿಕವಾಗಿ ಕಿಚ್ಚು ಹಚ್ಚುವ, 'ಸಂವಿಧಾನವನ್ನು ಬದಲಾಯಿಸುತ್ತೇವೆ' ಎಂದು ಹೇಳುವ, ಸಂವಿಧಾನವನ್ನೇ ಸಾರ್ವತ್ರಿಕವಾಗಿ ಸುಡುವ ಇಂತಹ ದೇಶಭಂಜಕ ಸಂಘಪರಿವಾರದ ಅಂಗಗಳು ಮನೆಮುರುಕರೋ ಅಥವಾ ಸರಕಾರಗಳ ಜನದ್ರೋಹಿ ನೀತಿಗಳ ವಿರುದ್ದ ಎಚ್ಚರದ ದ್ವನಿಯಾಗಿರುವ ಸಾಹಿತಿ ಕಲಾವಿದರು ಮನೆಮುರುಕರೋ?..  ಚಿಕ್ಕಮಗಳೂರಿನಲ್ಲಿ ಕೋಮುಸೌಹಾರ್ಧತೆಗೆ ಕಿಚ್ಚು ಹಚ್ಚಿ, ಬಾಬಾಬುಡನ್ ಗಿರಿಗೆ ದ್ವೇಷದ ಬೆಂಕಿ ಇಟ್ಟು ಅದರ ಶಾಖದಲ್ಲಿ ಅಧಿಕಾರದ ಸುಖ ಅನುಭವಿಸುತ್ತಿರುವ ಈ ಸಚಿವ ಮಹಾಶಯರು ಮತಧರ್ಮದ ಹೆಸರಲ್ಲಿ ಜನರನ್ನು ಒಡೆದಾಳುವ ಮನೆಮುರುಕರೋ.. ಇಲ್ಲವೇ ಕೋಮುಸೌಹಾರ್ದವನ್ನು ಸಾರುವ ನಾಟಕಗಳನ್ನು ಮಾಡುವ ಕಲಾವಿದರು, ಧರ್ಮದ್ವೇಷವನ್ನು ವಿರೋಧಿಸುವಂತಹ ಬರಹಗಳನ್ನು ಬರೆಯುವ ಸಾಹಿತಿಗಳು ಮನೆಮುರುಕರೋ..?  

ನಿಜ ಏನೆಂದರೆ ಹಲವಾರು ಸಾಹಿತಿ ಕಲಾವಿದರು ಕಲೆ ಸಾಹಿತ್ಯದ ಮೇಲಿನ ಪ್ರೀತಿ ಮತ್ತು ವ್ಯಾಮೋಹದಿಂದ ತಮ್ಮ ಮನೆಯನ್ನು ಮುರಿದುಕೊಂಡು, ಕುಟುಂಬದ ವಿರೋಧವನ್ನು ಎದುರಿಸಿಕೊಂಡು ಸಾಂಸ್ಕೃತಿಕ ಲೋಕಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆಯನ್ನು ಕೊಟ್ಟಿರುವುದಕ್ಕೇ ಬೇಕಾದಷ್ಟು ಉದಾಹರಣೆಗಳಿವೆ. ಆದರೆ ಬೇರೆಯವರ ಮನೆ ಮುರಿಯುವ ಇಲ್ಲವೇ ಸಾಂಸ್ಕೃತಿಕ ಕ್ಷೇತ್ರವನ್ನು ಕದಡುವ ಇಲ್ಲವೇ ಒಡೆಯುವ ಕೆಲಸವನ್ನೂ ನಿಜವಾದ ಸಾಹಿತಿ ಕಲಾವಿದರು ಮಾಡಿಲ್ಲ ಮಾಡುವುದೂ ಇಲ್ಲ.. ಹಾಗೇನಾದರೂ ಮಾಡಿದ್ದರೆ ಅಂತವರು ಸಾಹಿತಿ ಕಲಾವಿದರೇ ಅಲ್ಲ ಎನ್ನುವ ಅರಿವು ಈ ನಂಜಿನ ನಾಲಿಗೆಯವರಿಗಿಲ್ಲ. 

ಇಷ್ಟಕ್ಕೂ ಈಗ ಸಾಂಸ್ಕೃತಿಕ ಕ್ಷೇತ್ರವನ್ನು ಕದಡಿ ಒಡೆದವರು ಯಾರು? ಇದೇ ಬಿಜೆಪಿ ಪಕ್ಷದ ಸರಕಾರದವರು. ಎಲ್ಲಾ ಅಕಾಡೆಮಿ ಪ್ರಾಧಿಕಾರಗಳಿಗೆ ಆಯ್ಕೆಯಾಗಿದ್ದ ಅಧ್ಯಕ್ಷ ಸದಸ್ಯರುಗಳು ತಮ್ಮ ಇತಿಮಿತಿಯಲ್ಲಿ ಅಧಿಕಾರಿಗಳ ಅಡೆತಡೆ ಕಿರುಕುಳಗಳ ನಡುವೆಯೂ ತಮ್ಮ ಕಾರ್ಯವ್ಯಾಪ್ತಿಯ ಕೆಲಸಗಳನ್ನು ಮಾಡಿಕೊಂಡಿದ್ದರು. ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದರು. ಅವರೆಲ್ಲರ ಅವಧಿ ಮುಗಿಯಲು ಇನ್ನೂ ಒಂದು ವರ್ಷ ಬಾಕಿ ಇತ್ತು.  ಅವಧಿ ಪೂರ್ವದಲ್ಲಿ ಯಾವುದೇ ಕಾರಣವನ್ನೂ ಕೊಡದೇ ಅಕಾಲಿಕವಾಗಿ ಅಕಾಡೆಮಿ ಪ್ರಾಧಿಕಾರಗಳ ಆಯ್ಕೆಗಳನ್ನೆಲ್ಲಾ ಸಾರಾಸಗಟಾಗಿ ವಜಾಮಾಡಿದ್ದು ಸಾಂಸ್ಕೃತಿಕ ಕ್ಷೇತ್ರವನ್ನು ಕದಡುವ ಒಡೆಯುವ ಕೆಲಸ ಅಲ್ಲವಾ? ಸರಕಾರಗಳೇ ಒಪ್ಪಿದ್ದ ಬೈಲಾ ನಡಾವಳಿಗಳು ಮತ್ತು ಸಾಂಸ್ಕೃತಿಕ ನೀತಿಯನ್ನು ಉಲ್ಲಂಘಿಸಿ ಅವಧಿಪೂರ್ವದಲ್ಲಿ ಅಕಾಡೆಮಿ ಪ್ರಾಧಿಕಾರದ ಕಾರ್ಯನಿರತರನ್ನು ನಿಯಮ ಬಾಹಿರವಾಗಿ  ಮನೆಗೆ ಕಳಿಸಿದ್ದು ಮನೆಮುರುಕತನವಲ್ಲವಾ? ರಂಗಕೈಂಕರ್ಯದಲ್ಲಿ ತೊಡಗಿದ್ದ ರಂಗಾಯಣಗಳ ನಿರ್ದೇಶಕರನ್ನು ಹೊರಗೆ ಕಳಿಸಿ ರಂಗಾಯಣದ ನಡಾವಳಿಗಳಿಗೆ ವಿರುದ್ದವಾಗಿ ರಂಗಸಮಾಜದ ಸದಸ್ಯರ ಆಯ್ಕೆಯನ್ನೂ ರದ್ದು ಮಾಡಿದ್ದು ಕದಡುವ ಒಡೆಯುವ ಮನೆಮುರುಕ ನಡೆಯಲ್ಲವಾ?

ಹಿಂದಿನ ಸರಕಾರವೊಂದು ಇದೇ ಕೆಲಸ ಮಾಡಿತೆಂದು ದ್ವೇಷಸಾಧನೆಗೋ, ಸ್ವಾರ್ಥ ಸಾಧನೆಗೋ ಈ ಸರಕಾರವೂ ಅದನ್ನೇ ಮಾಡಿ, ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳು ಸರಿಯಾಗಿ ಕೆಲಸಮಾಡದಂತೆ ಅಡ್ಡಿ ಮಾಡಿ, ಜನರ ತೆರಿಗೆ ಹಣ ಪೋಲಾಗುವುದಕ್ಕೆ ಕಾರಣವಾಗಿದ್ದು ಕದಡುವ ಕಾರ್ಯ ಅಲ್ಲವಾ?

ಹೇಳುತ್ತಾ ಹೋದರೆ ಈ ಆಳುವ ಅಧಿಕಾರಸ್ತರು ಮಾಡುವ ಬೇಕಾದಷ್ಟು ಮನೆಮುರುಕ ಕೆಲಸಗಳ ಪಟ್ಟಿ ಇದೆ. ಈ ಬಹುತೇಕ ಸ್ವಾರ್ಥಿ ರಾಜಕಾರಣಿಗಳ ಕಸುಬೇ ಸಮಾಜದ ಶಾಂತಿಯನ್ನು ಕದಡುವ ಹಾಗೂ ಸೌಹಾರ್ಧತೆಯನ್ನು ಒಡೆಯುವುದಾಗಿದೆ. ಇವರು ಮಾಡುವ ಕೆಡುವುವ ಕೆಲಸಗಳನ್ನು ಮರೆಮಾಚಲು ಕಟ್ಟುವ ಕೆಲಸದಲ್ಲಿ ನಿರತರಾಗಿರುವ ಸಾಹಿತಿ ಕಲಾವಿದರ ಮೇಲೆ ಆರೋಪ ಮಾಡುತ್ತಿರುವುದು ಅಕ್ಷಮ್ಯ. ಇಂತಹ ನಂಜಿನ ಆರೋಪವನ್ನು ಆಲಿಸಿ ಅರಗಿಸಿಕೊಳ್ಳುವ ಬದಲು ಸಾಹಿತಿ ಕಲಾವಿದರು ವಿರೋಧಿಸಲೇಬೇಕಿದೆ. ಸಾಂಸ್ಕೃತಿಕ ಕ್ಷೇತ್ರದ ಮೇಲೆ ಯಾರೇ ದಾಳಿ ದಬ್ಬಾಳಿಕೆ ಮಾಡಿದರೂ ಜಾತಿ ಧರ್ಮ ಪಕ್ಷಗಳನ್ನು ಪಕ್ಕಕ್ಕಿಟ್ಟು ಪ್ರತಿಭಟಿಸುವ ಮಹತ್ಕಾರ್ಯವನ್ನು ಕನ್ನಡ ಸಾಂಸ್ಕೃತಿಕ ಲೋಕ ಮಾಡುತ್ತಲೇ ಬಂದಿದೆ. ಸಾಹಿತಿ ಕಲಾವಿದರಿಗೆ ಆತ್ಮಗೌರವ ಹಾಗೂ ಸ್ವಾಭಿಮಾನ ಎಲ್ಲಕ್ಕಿಂತಾ ಬಹುಮುಖ್ಯವಾದದ್ದು. ಸಾಂಸ್ಕೃತಿಕ ಹಿತಾಸಕ್ತಿಗೆ ದಕ್ಕೆಯಾದಾಗ ಸಿಡಿದೇಳುವಂತಹುದು. "ಕಲಾವಿದರು ಕದಡುವವರಲ್ಲ ಕಟ್ಟುವವರು ಸಮಾಜದ ಎಚ್ಚರದ ದ್ವನಿಗಳು" ಎಂಬುದನ್ನು ದೊಡ್ಡ ದ್ವನಿಯಲ್ಲಿ ಸಾರಬೇಕಿದೆ. ಸಾಧ್ಯವಾದ ಎಲ್ಲಾ ರೀತಿಯಲ್ಲೂ ಸಚಿವರ ಅನುಚಿತ ಮಾತುಗಳನ್ನು ವಿರೋಧಿಸಬೇಕಿದೆ. ಎಲ್ಲವನ್ನೂ ಒಡೆದಾಳುವ ಹಾಗೆ ಸಾಂಸ್ಕೃತಿಕ ಕ್ಷೇತ್ರವನ್ನೂ ಒಡೆಯುವ ಹುನ್ನಾರದ ವಿರುದ್ದ ಸಿಡಿದೇಳಬೇಕಿದೆ. ಇಲ್ಲವಾದರೆ ಸಾಂಸ್ಕೃತಿಕ ಲೋಕದ ಮೇಲೆ ಪ್ರಭುತ್ವ ಮಾಡುವ ದಬ್ಬಾಳಿಕೆ ದಮನಗಳಿಗೆ ಬಲಿಯಾಗಲು ಸಿದ್ದವಾಗಬೇಕಿದೆ.

ಅಗೋ ಅಲ್ಲಿ ಕೋಮುವಾದಿಗಳು ಸಾಕಿದ ಕೋಮುಸೌಹಾರ್ಧ ಕದಡಿದ ಗಿಳಿ " ಮನೆಮುರುಕರು, ಮನೆಮುರುಕರು.." ಅಂತಾ ಅರಚುತ್ತಿದೆ. ಕಲಾವಿದರ ಮನೆಯಂಗಳದ ಗಿಳಿಗಳು ಈಗ ಸುಮ್ಮನಿದ್ದರೆ ಸರ್ವನಾಶ. ಮೌನವಾಗಿದ್ದರೆ ವಿನಾಶ..

- ಶಶಿಕಾಂತ ಯಡಹಳ್ಳಿ

ಗುರುವಾರ, ಸೆಪ್ಟೆಂಬರ್ 7, 2017

ತಹ ತಹ …99 ಸೈದ್ದಾಂತಿಕ ಬದ್ದತೆಯ ದಾರಿ; ಮತಾಂಧರಿಗೆ ಬಲಿಯಾದ ಗೌರಿ :



ಈ ಒಂದು ಅಮಾನುಷ ಹತ್ಯೆ ಈ ರೀತಿಯಲ್ಲಿ ಸಂಚಲನವನ್ನು ಹುಟ್ಟಿಸುತ್ತದೆಂದು ಸ್ವತಃ ಕೊಲೆ ಮಾಡಿದವರಿಗೆ ಹಾಗೂ ಕೊಲೆ ಮಾಡಿಸಿದವರಿಗೆ ಗೊತ್ತೇ ಇರಲಿಲ್ಲ. ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಮತಾಂಧರ ಹಿಂಸಾಪಾತದ ಕೃತ್ಯ ಇಷ್ಟೊಂದು ದೊಡ್ಡ ಸುದ್ದಿ ಆದೀತೆಂಬ ಕಲ್ಪನೆಯೂ ಆ ಪಾತಕಿಗಳ ಮಹಾಪೋಷಕರಿಗೂ ಬಂದಿರಲಿಲ್ಲ. ರಾಜ್ಯದಲ್ಲಷ್ಟೇ ಅಲ್ಲಾ ದೇಶಾದ್ಯಂತ ಪ್ರತಿಭಟನೆಗಳು ಹೀಗೆಲ್ಲಾ ತೀವ್ರತೆಯನ್ನು ಪಡೆಯುತ್ತವೆ ಎಂಬ ಊಹೆಯೂ ಆ ಕೋಮುವಾದಿ ಪಡೆಗಳಿಗೆ ಅಂದಾಜಿರಲಿಲ್ಲ. ಅಂತಿಮ ದರ್ಶನಕ್ಕೆ ಜನರು ತಂಡೋಪತಂಡವಾಗಿ ಹರಿದು ಬರುತ್ತಾರೆಂಬ ಆಲೋಚನೆಯೂ ಆ ದುರುಳರಿಗಿರಲಿಲ್ಲ. ಕೊಂದವರು ಇಲ್ಲಿ ಹೇಡಿಗಳಾಗಿದ್ದರೆ ಕೊಲೆಯಾದವರು ಗಟ್ಟಿ ಮನಸ್ಸಿನ ದಿಟ್ಟ ಮಹಿಳೆಯಾಗಿದ್ದರು.


ಹೌದು... ಅವರು ಗೌರಿ ಲಂಕೇಶ್. ಕನ್ನಡ ನಾಡು ಕಂಡ ಅತ್ಯಂತ ನಿಷ್ಟುರ ಪತ್ರಕರ್ತ ಪ್ರಗತಿಪರ ಚಿಂತಕ ಲಂಕೇಶ್‌ರವರ ಮಗಳಾಗಿದ್ದವರು. ತಮ್ಮ ಪ್ರಖರವಾದ ಲೇಖನಗಳು, ಜನಮುಖಿ ಚಿಂತನೆಗಳು ಹಾಗೂ ಜನಪರ ಹೋರಾಟಗಳಿಂದಾಗಿ ಗೌರಿ ಲಂಕೇಶರವರು ನಾಡಿನಾದ್ಯಂತ ಗುರುತಿಸಿಕೊಂಡಿದ್ದವರು. ಹಿಂದುತ್ವವಾದಿಗಳು ಹುಟ್ಟಿಸುವ ಉನ್ಮಾದವನ್ನು, ಮತಾಂಧ ಶಕ್ತಿಗಳ ಹಿಂಸಾಪಾತಗಳನ್ನು, ಕೋಮುವಾದಿಗಳ ಒಳ ಹುನ್ನಾರಗಳನ್ನು ತಮ್ಮ ಗೌರಿ ಲಂಕೇಶ ಪತ್ರಿಕೆಯ ಮೂಲಕ ನಿರಂತರವಾಗಿ ಬೆತ್ತಲೆಗೊಳಿಸುತ್ತಲೇ ಬಂದಿದ್ದರು. ಕೋಮು ಸೌಹಾರ್ಧತೆಗಾಗಿ ಸಂಘಟನಾತ್ಮಕ ಪ್ರಯತ್ನಗಳನ್ನು ಮಾಡಿದ್ದರು. ಆಳುವ ವರ್ಗಗಳ ಜನವಿರೋಧಿತನಗಳ ವಿರುದ್ಧ ನಡೆದ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಇದನ್ನು ಕೋಮುವಾದಿ ಪಡೆಗಳಿಗೆ ಸಹಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲಾ. ತಮ್ಮ ಕರಾಳ ಮುಖವಾಡಗಳೆಲ್ಲಾ ಬಯಲು ಮಾಡುತ್ತಿದ್ದ ಬೆಳಕನ್ನೇ ನಂದಿಸಿಬಿಟ್ಟರು. ಮತಾಂಧ ಆಗುಂತಕರು 2017 ಸೆಪ್ಟಂಬರ್ 5ರಂದು ಗೌರಿಯವರ ಮನೆಯ ಆವರಣದಲ್ಲಿ ಹೊಂಚು ಹಾಕಿ ಗುಂಡಿಟ್ಟು ಕೊಂದುಬಿಟ್ಟರು. ಜೀವಪರ ದ್ವನಿಯೊಂದು ಮೌನವಾಯಿತು. ಪ್ರಜ್ಞಾವಂತ ಜೀವವೊಂದು ನಿರ್ಜಿವಗೊಂಡಿತು. ಈ ನಾಡಿನ ಸಮಸ್ತ ಪ್ರಗತಿಪರ, ಪ್ರಜ್ಞಾವಂತ ಮನಸುಗಳಿಗೆ ಅನಿರೀಕ್ಷಿತ ಆಘಾತವನ್ನುಂಟುಮಾಡಿತು.

ಮತಿಹೀನ ಮತಾಂಧರು ಮಾಡುತ್ತಿರುವುದು ಇದೇ ಮೊದಲನೆಯ ಹತ್ಯೆ ಏನಲ್ಲಾ. ಕಳೆದ ಮೂರುವರೆ ಸಾವಿರ ವರ್ಷಗಳ ಈ ದೇಶದ ಮನುಕುಲದ ಇತಿಹಾಸವನ್ನೊಮ್ಮೆ ನೋಡಿದರೆ ಬುದ್ದನಿಂದ ಬಸವಣ್ಣನವರೆಗೆ ಮನುಧರ್ಮದ ಶೋಷಣೆಯ ವಿರುದ್ಧ ದ್ವನಿಯೆತ್ತಿ ಜನಜಾಗೃತಿ ಮೂಡಿಸಿದವರನ್ನೆಲ್ಲಾ ಕೊಲೆ ಮಾಡುತ್ತಲೇ ಬರಲಾಗಿದೆ.  ತೀರಾ ಇತ್ತೀಚೆಗೆ ಮಹಾರಾಷ್ಟ್ರದ ಮೌಢ್ಯ ವಿರೋಧಿ ಆಂದೋಲನದ ನೇತೃತ್ವವಹಿಸಿದ್ದ ವಿಚಾರವಾದಿ ನರೇಂದ್ರ ದಾಬೋಲ್ಕರ್ ರವರನ್ನು 2013 ಆಗಸ್ಟ್ 20 ರಂದು ಪುಣೆಯಲ್ಲಿ ಕೊಲ್ಲಲಾಯಿತು. ಎಡಪಂಥೀಯ ವಿಚಾರಧಾರೆಯ ಗೋವಿಂಧ ಪನ್ಸಾರೆಯವರನ್ನು 2015 ಫೆಬ್ರವರಿ 16 ರಂದು ಕೊಲ್ಲಾಪುರದಲ್ಲಿ ಹತ್ಯೆಮಾಡಲಾಯಿತು. ಹಾಗೆಯೇ ಕರ್ನಾಟಕದ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿಯವರನ್ನು 2015 ಆಗಸ್ಟ್ 30 ರಂದು ಧಾರವಾಡದಲ್ಲಿ ಸಾಯಿಸಲಾಯಿತು. ಈಗ 2017ರ ಸೆಪ್ಟಂಬರ್ 5 ರಂದು ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಪತ್ರಕರ್ತೆ ಗೌರಿ ಲಂಕೇಶರನ್ನು ಬಲಿ ತೆಗೆದುಕೊಳ್ಳಲಾಯಿತು.


ವ್ಯಕ್ತಿಗಳನ್ನು ಕೊಲೆ ಮಾಡಿ ಗೆದ್ದೆವೆಂಬ ಭ್ರಮೆಯಲ್ಲಿರುವ ಕೊಲೆಪಾತಕ ಶಕ್ತಿಗಳಿಗೆ ಒಂದು ಸತ್ಯ ಇಲ್ಲಿವರೆಗೂ ತಿಳಿದಿಲ್ಲ. ಬುದ್ದನನ್ನು ಕೊಂದು ತದನಂತರ ಬೌದ್ದ ಧರ್ಮವನ್ನೇ ದೇಶಭ್ರಷ್ಟ ಗೊಳಿಸಿದರೂ ಸಾವಿರಾರು ವರ್ಷಗಳ ನಂತರವೂ ಬುದ್ದ ಎಲ್ಲರ ಅರಿವಿನ ಬೆಳಕಾಗಿ ದಾರಿದೀಪವಾಗಿದ್ದಾನೆ. ಬಸವಣ್ಣ ಹಾಗೂ ಅವರ ಶಿವಶರಣರನ್ನು ಹತ್ಯೆ ಮಾಡಲಾಯಿತಾದರೂ ಅವರ ಜ್ಯಾತ್ಯಾತೀತ ವಿಚಾರಗಳನ್ನು ಕೊಲ್ಲಲು ಸಾಧ್ಯವಾಗಲೇ ಇಲ್ಲಾ. ಈಗಲೂ ಶಿವಶರಣರು ಜನರೆದೆಯಲ್ಲಿ ಬೇರುಬಿಟ್ಟಿದ್ದಾರೆ. ಗಾಂಧಿಯನ್ನೂ ಸಹ ಈ ಧರ್ಮಾಧ ಪಡೆ ಹತ್ಯೆ ಮಾಡಿತಾದರೂ ಗಾಂಧೀಜಿ ಪ್ರತಿಪಾದಿಸಿದ ಸತ್ಯ, ಅಹಿಂಸೆ ತತ್ವಗಳನ್ನು ನಾಶಮಾಡಲು ಆಗಲೇ ಇಲ್ಲಾ.. ಆಗುವುದೂ ಇಲ್ಲಾ. ಇಂತಹ ಎಲ್ಲಾ ಮಹನೀಯರೂ ಹಾಗೂ ಅವರು ಪ್ರತಿಪಾದಿಸಿದ ಸಿದ್ದಾಂತಗಳು ಅವರು ಬದುಕಿದ್ದಾಗಿನಿಕಿಂತಾ ಹುತಾತ್ಮರಾದ ಮೇಲೆಯೇ ಬಹುಸಂಖ್ಯಾತ ಸಮುದಾಯವನ್ನು ಕಾಲದೇಶಾತೀತವಾಗಿ ಆವರಿಸಿಕೊಂಡು ಆದರಣೀಯರಾಗಿದ್ದಾರೆ. ಇಂದಿಲ್ಲಾ ನಾಳೆ ನಾಶವಾಗಬಹುದಾದ ಬೌತಿಕ ದೇಹವನ್ನು ಕೊಲ್ಲಬಹುದೇ ವಿನಃ ಅವರು ಪ್ರತಿಪಾದಿಸಿದ ವೈಚಾರಿಕತೆಯನ್ನು ನಾಶ ಮಾಡುವುದಂತೂ ಅಸಾಧ್ಯದ ಮಾತು. ಇಂದು ಒಬ್ಬ ವಿಚಾರವಾದಿಯ ಪ್ರತಿಭಟನೆಯ ದ್ವನಿಯನ್ನು ಅಡಗಿಸಿದರೆ ಇಂದಲ್ಲಾ ನಾಳೆ ಅದೇ ದ್ವನಿ ಹಲವಾರು ಕೊರಳುಗಳಲ್ಲಿ ಮಾರ್ಧನಿಸುತ್ತದೆ ಎನ್ನುವುದು ಐತಿಹಾಸಿಕ ಸತ್ಯ. ಆದರೆ.. ಈ ಮನುವಾದಿ ಪ್ರೇರಿತ ಕೊಲೆಪಾತಕರಿಗೆ ಇದೆಲ್ಲಾ ಅರ್ಥವಾಗುವುದಂತೂ ಸಾಧ್ಯವೇ ಇಲ್ಲಾ.. ಇನ್ನೆಷ್ಟು ಜನ ಸೈದ್ದಾಂತಿಕ ಬದ್ದತೆಗೆ ಬಲಿಯಾಗಬೇಕಾಗುತ್ತದೋ ಗೊತ್ತಿಲ್ಲಾ. ಗೌರಿ ಲಂಕೇಶ್‌ರ ಆಶಯವನ್ನು ಮುಂದುವರೆಸಿಕೊಂಡು ಹೋಗುವ ಪ್ರಜ್ಞಾವಂತರಿಗಂತೂ ಕೊರತೆ ಇಲ್ಲಾ.


ಈಗ ಹತ್ಯೆಯಾದ ನಾಲ್ಕೂ ಜನರೂ ಸಕ್ರೀಯ ರಾಜಕಾರಣಿಗಳಾಗಿರಲಿಲ್ಲಾ.. ಮಂತ್ರಿ ಮಾನ್ಯರೂ ಆಗಿರಲಿಲ್ಲಾ. ಭ್ರಷ್ಟ ದುಷ್ಟರಂತೂ ಅಲ್ಲವೇ ಅಲ್ಲಾ. ಸಮಾಜವಿರೋಧಿ ಕೃತ್ಯಗಳಲ್ಲಿ ತೊಡಗಿಕೊಂಡವರಲ್ಲಾ.. ಇವರ ಸಾವಿನಿಂದ ಯಾರಿಗೂ ಆರ್ಥಿಕವಾಗಿ ಲಾಭಗಳೂ ಇರಲಿಲ್ಲ. ಆದರೂ ಯಾಕೆ ಹತ್ಯೆಗೊಳಗಾದರು? ಯಾಕೆಂದರೆ.. ಇವರು ರೂಢಿಗತ ಮೌಢ್ಯಗಳ ವಿರುದ್ದ ದ್ವನಿ ಎತ್ತಿದ್ದರು. ಕೋಮುದ್ವೇಷಗಳಂತಹ ಸಮಾಜವಿರೋಧಿ ಕೃತ್ಯಗಳನ್ನು ನಿರಂತರವಾಗಿ ಖಂಡಿಸುತ್ತಿದ್ದರು. ಶೋಷಣಾಮುಕ್ತ ಸ್ವಸ್ಥ ಸಶಕ್ತ ಸಮಾಜ ನಿರ್ಮಾಣದ ಕುರಿತು ಕನಸು ಕಾಣುತ್ತಿದ್ದರು. ದೇಶವನ್ನು ಜಾತಿ, ಮತ, ಧರ್ಮಗಳ ಮೂಲಕ ಒಡೆಯುವ ವಿನಾಶಕಾರಿ ಶಡ್ಯಂತ್ರಗಳ ವಿರುದ್ಧ ತಿರುಗಿ ಬಿದ್ದಿದ್ದರು. ಹಾಗೂ ಮನುಕುಲ ವಿರೋಧಿ ವ್ಯಕ್ತಿಗಳು ಹಾಗೂ ಶಕ್ತಿಗಳ ಶಡ್ಯಂತ್ರಗಳನ್ನು ಜನತೆಯ ಮುಂದೆ ತಮ್ಮ ಮಾಧ್ಯಮಗಳ ಮೂಲಕ ಬೆತ್ತಲುಗೊಳಿಸುತ್ತಿದ್ದರು. ಮತೀಯವಾದಿಗಳ ವಿರುದ್ಧ ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದರು. ಇದು ಮತೀಯಶಕ್ತಿಗಳಿಗೆ ಸಹಿಸಲು ಸಾಧ್ಯವೇ ಇಲ್ಲದಾಯಿತು. ತಮ್ಮ ಮುಖವಾಡಗಳನ್ನು ಬೆತ್ತಲೆಗೊಳಿಸುವವರನ್ನು ಬಲಿ ಪಡೆಯಲು ಆರಂಭಿಸಿದರು.  ಇದೇ ಕಾರಣಕ್ಕೆ ಗೌರಿ ಲಂಕೇಶರವರ ಹತ್ಯೆ ಮಾಡಲಾಯಿತು.

ಲಂಕೇಶ್ ಎನ್ನುವ ದೈತ್ಯ ಪ್ರತಿಭೆಯ ಮಗಳಾಗಿದ್ದರೂ, ಎಲ್ಲಾ ಅನುಕೂಲಗಳ ಜೊತೆಗೆ ಬೆಳೆದಿದ್ದರೂ ಗೌರಿಯವರ ಹಾದಿ ಅಷೊಂದು ಸುಗಮವಾಗಿರಲಿಲ್ಲಾ. ನ್ಯಾಷನಲ್ ಕಾಲೇಜಿನಲ್ಲಿ ವಿದ್ಯಾಬ್ಯಾಸ ಮುಗಿಸಿ, ದೆಹಲಿಯ ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಕಲಿತಾದ ನಂತರ ಟೈಮ್ಸ್ ಆಪ್ ಇಂಡಿಯಾ ಎನ್ನುವ ಆಂಗ್ಲ ಪತ್ರಿಕೆಯಿಂದಾ ತಮ್ಮ ಪತ್ರಕರ್ತ ವೃತ್ತಿಯನ್ನು ಆರಂಭಿಸಿದರು. ಆಂಗ್ಲಭಾಷೆಯಲ್ಲಿ ಪ್ರಭುತ್ವ ಪಡೆದು, ತನಿಖಾ ಪತ್ರಿಕೋದ್ಯಮದಲ್ಲಿ ಕೌಶಲ್ಯವನ್ನು ಹೊಂದಿದ್ದ ಗೌರಿಯವರು ರಾಷ್ಟ್ರೀಯ ಪತ್ರಿಕೋದ್ಯಮದಲ್ಲೇ ಮುಂದುವರೆಯಬಹುದಾಗಿತ್ತು. ಆದರೆ 2000 ನೇ ಇಸ್ವಿಯಲ್ಲಿ ಲಂಕೇಶ್‌ರವರ ಅಕಾಲಿಕ ಸಾವು ಗೌರಿಯವರನ್ನು ಕರ್ನಾಟಕದ ಪತ್ರಿಕೋದ್ಯಮಕ್ಕೆ ಎಳೆತಂದಿತು. ಅಲ್ಲಿಂದ ಅವರ ಹೋರಾಟದ ಬದುಕು ಆರಂಭವಾಯಿತು.

ತಂದೆಯವರ ಜನಪ್ರೀಯ ಲಂಕೇಶ್ ವಾರಪತ್ರಿಕೆಯನ್ನು ಅವರ ಆಶಯಕ್ಕೆ ದಕ್ಕೆ ಬಾರದಂತೆ ಮುನ್ನಡೆಸಿಕೊಂಡು ಹೋಗಬೇಕೆಂದರೆ ಸಹೋದರ ಇಂದ್ರಜಿತ್ ಲಂಕೇಶ್‌ರವರ ಅಸಹಕಾರ ಗೌರಿಯವರನ್ನು ಹೈರಾಣಾಗಿಸಿತು. ತೀವ್ರವಾದ ಭಿನ್ನಾಭಿಪ್ರಾಯ ಹಾಗೂ ನಿತ್ಯ ಸಂಘರ್ಷಗಳ ಜೊತೆಗೆ ಸಹೋದರನ ಪಾಲುದಾರಿಕೆಯಲ್ಲಿ ಲಂಕೇಶ್ ಪತ್ರಿಕೆಯಲ್ಲಿ ಮುಂದುವರೆಯಲು ಅಸಾಧ್ಯವಾದಾಗ ತಮ್ಮದೇ ಆದ ಗೌರಿ ಲಂಕೇಶ್ ಪತ್ರಿಕೆಯನ್ನು ಆರಂಭಿಸಿದರು. ಆರಂಭಿಕ ಬಂಡವಾಳದ ಸಮಸ್ಯೆ, ನುರಿತ ಬರಹಗಾರರ ಕೊರತೆ ಹಾಗೂ ಸ್ವತಃ ಕನ್ನಡ ಭಾಷೆಯ ಮೇಲೆ ಪ್ರಭುತ್ವ ಇಲ್ಲದ ತಾಪತ್ರಯಗಳೆಲ್ಲವನ್ನೂ ಆದಷ್ಟು ಬೇಗ ಬಗೆಹರಿಸಿಕೊಂಡು ಪ್ರತಿ ವಾರ ಸೈದ್ದಾಂತಿಕ ಬದ್ಧತೆಯಿಂದ, ಜನಪರ ದ್ಯೇಯ ದೋರಣೆಯಲ್ಲಿ ರಾಜಿಯಾಗದೇ, ಜಾಹೀರಾತು ರಹಿತವಾಗಿ ಪತ್ರಿಕೆಯನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದೇ ಒಂದು ವಿಸ್ಮಯ. 


ಕೇವಲ ಪತ್ರಿಕೆಯ ಮೂಲಕವೇ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಿದ್ದರೆ ಗೌರಕ್ಕ ಸಹ ನಿಂತ ನೀರಾಗುತ್ತಿದ್ದರೋ ಏನೋ. ಆದರೆ.. ಸಾಮಾಜಿಕ ಹೊಣೆಗಾರಿಕೆಯ ಜವಾಬ್ದಾರಿಯನ್ನು ವಿಸ್ತರಿಸಿಕೊಂಡರು. ನಾಲ್ಕು ಗೋಡೆಗಳಿಂದ ಹೊರ ಬಂದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾಯಕವನ್ನು ದಿಟ್ಟತೆಯಿಂದ ಮಾಡಿದರು. 2002ರಲ್ಲಿ ಗುಜರಾತಿನಲ್ಲಿ ನಡೆದ ಕೋಮುದ್ವೇಷದ ಮಾರಣಹೋಮ ಗೌರಿಯವರನ್ನು ತಲ್ಲಣಗೊಳಿಸಿತು. ಮತಾಂಧರು ಮಾಡಿದ ನರಹತ್ಯೆಗಳು ತಳಮಳಗಳನ್ನು ಹುಟ್ಟು ಹಾಕಿದವರು. ಅವತ್ತಿನಿಂದ ಕೋಮುವಾದಿಗಳನ್ನು ಶತಾಯ ಗತಾಯ ವಿರೋಧಿಸತೊಡಗಿದರು. ನಾಡಿನಾದ್ಯಂತ ಕೋಮುಸೌಹಾರ್ಧತೆಗೆ ಶ್ರಮಿಸತೊಡಗಿದರು. ನಂತರ 2003ರಲ್ಲಿ ಚಿಕ್ಕಮಗಳೂರಿನ ಬಾಬಾಬುಡನ್‌ಗಿರಿಯಲ್ಲಿ ಸಂಘಪರಿವಾರಿಗಳು ಧಾರ್ಮಿಕ ಅಸಹನೆಯನ್ನು ಬಿತ್ತಿ ಕೋಮುಪ್ರಚೋದನೆಗಿಳಿದಾಗ ಗೌರಕ್ಕ ಸಿಡಿದೆದ್ದರು. ಕೋಮುವಾದಿಗಳ ವಿರುದ್ಧ ಹೋರಾಟವನ್ನೂ ಹಮ್ಮಿಕೊಂಡು ಜೈಲುವಾಸವನ್ನೂ ಅನುಭವಿಸಿದರು. ಪ್ರಗತಿಪರ ಆಲೋಚನೆಯ ಸಮಾನ ಮನಸ್ಕರ ಜೊತೆ ಸೇರಿ 2004ರಲ್ಲಿ ಕೋಮು ಸೌಹಾರ್ಧ ವೇದಿಕೆಯನ್ನು ಹುಟ್ಟು ಹಾಕಿ ಸಂಘಿಗಳ ಹುನ್ನಾರಗಳನ್ನು ತಡೆದು ಅಲ್ಲಿ ಕೋಮುಸೌಹಾರ್ಧ ವಾತಾವರಣವನ್ನು ಮರುಸ್ಥಾಪಿಸಲು ಪ್ರಯತ್ನಿಸಿದರು. ಅವತ್ತಿನಿಂದ ಇವತ್ತಿನವರೆಗೂ ಪ್ರತಿವರ್ಷ ಬಾಬಾಬುಡನ್‌ಗಿರಿಯ ದತ್ತಪೀಠದಲ್ಲಿ ಸಂಘಪರಿವಾರದವರು ಕಾನೂನುಭಂಗ ಮಾಡುತ್ತಾ ಭಕ್ತರನ್ನು ಪ್ರಚೋದಿಸುತ್ತಲೇ ಇದ್ದಾರೆ.. ಅವರ ಮಂತ್ರಕ್ಕೆ ತಿರುಮಂತ್ರ ಹಾಕುವ ಕೆಲಸವನ್ನು ಕೋಮು ಸೌಹಾರ್ಧ ವೇದಿಕೆ ಮಾಡುತ್ತಲೇ ಬಂದಿದೆ. ಗೌರಿ ಲಂಕೇಶ್ ಸದಾ ಮುಂಚೂಣಿಯಲ್ಲಿದ್ದೇ ಇದ್ದು ಪತ್ರಿಕೆ ಹಾಗೂ ಹೋರಾಟದ ಮೂಲಕ ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿರುವುದು ಕೋಮುವಾದಿ ಪಡೆಯನ್ನು ಕೆರಳಿಸಿತು. 



ಅವತ್ತಿನಿಂದಲೂ ಗೌರಿಯವರ ಮೇಲೆ ಸೇಡಿನ ಮನೋಭಾವವನ್ನು ಸಂಘಪರಿವಾರದವರು ಬೆಳೆಸಿಕೊಂಡೇ ಬಂದರು. ದೇಶಾದ್ಯಂತ ಎಲ್ಲಿಯೇ ಆಗಲಿ ಕೋಮುಪ್ರಚೋದಿತ ಗಲಭೆಗಳಾದರೆ ಅದನ್ನು ವಿರೋಧಿಸಿ ಕೋಮುವಾದಿಗಳ ಶಡ್ಯಂತ್ರವನ್ನು ಬಯಲುಗೊಳಿಸುತ್ತಲೇ ಬಂದರು. ಸೂರತ್‌ಕಲ್ ಗಲಭೆ, ಚರ್ಚ ಮೇಲಿನ ದಾಳಿ, ನೈತಿಕ ಪೊಲೀಸ್‌ಗಿರಿ.. ಹೀಗೆ ಎಲ್ಲೆಲ್ಲಿ ಮನುವಾದಿಗಳ ಅಟ್ಟಹಾಸ ಇರುತ್ತಿತ್ತೋ ಅಲ್ಲಲ್ಲಿ ಗೌರಕ್ಕನ ಪ್ರತಿಭಟನೆಯೂ ಇದ್ದೇ ಇರುತ್ತಿತ್ತು. ಪತ್ರಿಕೆ ಎನ್ನುವುದು ಸಮಾಜವಿರೋಧಿ ಶಕ್ತಿಗಳ ವಿರುದ್ಧ ಅಕ್ಷರಾಸ್ತ್ರವಾಗಿ ಮಾರ್ಪಾಡಾಯಿತು. ಬಜರಂಗದಳವು ಪಾಕಿಸ್ತಾನದ ಬಾವುಟ ಹಾರಿಸಿ ಗಲಭೆ ಹುಟ್ಟುಹಾಕಿದ ಪ್ರಕರಣ, ಮಲೇಗಾಂವ್ ಸ್ಪೋಟದಂತಹ ಸಂಘಪರಿವಾರದ ಭಯೋತ್ಪಾದನೆಗಳನ್ನು ಖಂಡಿಸಿ ಪತ್ರಿಕೆಯ ಮೂಲಕ ಜನರಿಗೆ ತಿಳಿಸಿ ಸಂಘಪರಿವಾರದ ದುಷ್ಟತನಗಳ ವಿರುದ್ಧ ಜನಾಭಿಪ್ರಾಯ ರೂಪಿಸಲು ಸತತವಾಗಿ ಪ್ರಯತ್ನಿಸಿದರು. ಮೋದಿ ಮೇನಿಯಾ ಶುರುವಾಗಿ ಏನೆನೆಲ್ಲಾ ಅನಾಹುತಗಳಾದವು ಎನ್ನುವುದನ್ನು ತಮ್ಮ ಪ್ರತಿವಾರದ ಪತ್ರಿಕಾ ಅಂಕಣಗಳಲ್ಲಿ ಬರೆದರು. ಅದು ಹೇಗೆ ಈ ಸಂಘಪರಿವಾರ ಹಾಗೂ ಪ್ರಧಾನಿ ಮೋದಿ ಜನರಲ್ಲಿ ರಾಷ್ಟ್ರೀಯತೆಯ ಉನ್ಮಾದ ಹಾಗೂ ಅಚ್ಚೇ ದಿನ್ ಎನ್ನುವ ಭ್ರಮೆಯನ್ನು ಹುಟ್ಟುಹಾಕಿ ಇಡೀ ದೇಶದ ದಿಕ್ಕು ತಪ್ಪಿಸಿದ್ದಾರೆ ಎನ್ನುವುದನ್ನು ಎಳೆಎಳೆಯಾಗಿ ತಮ್ಮ ಲೇಖನಗಳಲ್ಲಿ ಬಿಡಿಸಿಟ್ಟರು.  ಇನ್ನೇನು ಬೇಕು ಈ ಸಂಘಿಗಳ ಮಂಗಗಳ ಬಾಲಕ್ಕೆ ಬೆಂಕಿ ಹಚ್ಚಲು.  ಗೌರಿ ಎಂದರೆ ಸಾಕು ಮೋದಿ ಭಕ್ತಾದಿಗಳು ಬೆಚ್ಚಿ ಬೀಳತೊಡಗಿದರು. ಗೌರಿಯವರು  ಎತ್ತಿದ ಪ್ರಶ್ನೆಗಳಿಗೆ ಸೂಕ್ತ ಉತ್ತರ ಕೊಡಲು ಅಸಮರ್ಥರಾದ ಭಕ್ತಾದಿಗಳು ಅವರನ್ನು ಜಾಲತಾಣಗಳಲ್ಲಿ ಅಶ್ಲೀಲಕರವಾಗಿ ನಿಂದಿಸಿ ವಿಕೃತ ಸಂತೋಷ ಅನುಭವಿಸತೊಡಗಿದರು.


ಯಾವಾಗ ನಕ್ಸಲ್ ಸಿದ್ದಾಂತವನ್ನು ಒಪ್ಪಿಕೊಂಡಿರುವವರನ್ನು ಮುಖ್ಯವಾಹಿನಿಗೆ ತರುವ ಕೆಲಸದಲ್ಲಿ ಗೌರಿ ಆಸಕ್ತಿವಹಿಸಿ ಸರಕಾರವನ್ನೂ ಒಪ್ಪಿಸಿದರೋ ಆಗ ಸಂಘಿಗಳಿಗೆ ಸಂಕಟ ಶುರುವಾಯಿತು. ನಕ್ಸಲರು ಅಂದರೆ ಕನಸಿನಲ್ಲೂ ಬೆಚ್ಚಿಬೀಳುವ ಪರಿವಾರಿಗಳಿಗೆ ಕಾಡಲ್ಲಿರುವ ನಕ್ಸಲ್ ವಾದಿಗಳು ಅಧೀಕೃತವಾಗಿ ನಾಡಿಗೆ ಬಂದರೆ ತಮ್ಮ ಮುಖವಾಡಗಳು ಬಯಲಾಗಲಿವೆ ಎನ್ನುವ ಸಂಗತಿ ಗೊತ್ತಾಗಿದ್ದೇ ಚಟಪಡಿಕೆ ಶುರುವಾಯಿತು.  2004 ರಲ್ಲೇ ಶಾಂತಿಗಾಗಿ ನಾಗರೀಕರು ಎನ್ನುವ ಸಮಾನಮನಸ್ಕರ ವೇದಿಕೆಯಡಿಯಲ್ಲಿ ಅತ್ತ ಮಾವೋವಾದಿಗಳು ಹಾಗೂ ಇತ್ತ ಕಾಂಗ್ರೆಸ್ ಸರಕಾರದ ಮನವೊಲಿಸಿ ನಕ್ಸಲ್ ಚಳುವಳಿಯಲ್ಲಿ ತೊಡಗಿಸಿಕೊಂಡು ಕಾಡು ಸೇರಿದವರನ್ನು ಮತ್ತೆ ಸಮಾಜದ ಮುಖ್ಯವಾಹಿನಿಗೆ ತರುವ ಸಂಧಾನ ಪ್ರಯತ್ನ ಗೌರಿಯವರ ನೇತೃತ್ವದಲ್ಲಿ ನಡೆಯಿತು. ನಕ್ಸಲ್ ವಾದಿಗಳು ಹಿಂಸಾಮಾರ್ಗ ತೊರೆದು ಜನರ ನಡುವೆಯೇ ಇದ್ದು ಪ್ರಜಾಸತ್ತಾತ್ಮಕ ಹೋರಾಟಗಳಿಂದ ವ್ಯವಸ್ಥೆಯನ್ನು ಬದಲಾಯಿಸಲು ಜನಹೋರಾಟಗಳನ್ನು ಸಂಘಟಿಸಬೇಕು ಎನ್ನುವುದು ಗೌರಿಯವರ ಆಶಯವಾಗಿತ್ತು. ಹಾಗೂ ಆ ಸಂಧಾನ ಪ್ರಕ್ರಿಯೆಯಲ್ಲಿ ಗೌರಿ ಯಶಸ್ವಿಯೂ ಆದರು. ನೂರ್ ಶ್ರೀಧರ್, ಸಿರಿಮನೆ ನಾಗರಾಜ್ ಮುಂತಾದ ಭೂಗತ ಮಾವೋವಾದಿ ಕಾಮ್ರೇಡ್‌ಗಳನ್ನು ಕಾನೂನಾತ್ಮಕವಾಗಿ ಮುಖ್ಯವಾಹಿನಿಗೆ ಸೇರ್ಪಡೆಯಾಗುವಂತೆ ಮಾಡಿದರು. ಹಾಗೆ ಕಾನೂನಿನ ಬಿಕ್ಕಟ್ಟುಗಳಿಂದ ಪಾರಾಗಿ ಹೊರಗೆ ಬಂದ ಈ ಕಾಮ್ರೇಡ್ಗಳು ಸುಮ್ಮನೇ ಕೂಡದೇ ಗೌರಿಯವರ ಆಶಯದಂತೆ ಜನರ ಸಂಘಟನೆಯಲ್ಲಿ ತೊಡಗಿದರು. ಕೋಮುವಾದಿಗಳ ವಿರುದ್ಧ ತೊಡೆ ತಟ್ಟಿ ನಿಂತರು. ಅನೇಕಾನೇಕ ಹೋರಾಟಗಳನ್ನು ಸಂಘಟಿಸಿದರು. ಗ್ರಾಮ ಶಹರ ಪಟ್ಟಣಗಳಲ್ಲೆಲ್ಲಾ ಜನರನ್ನು ಜಾಗೃತ ಗೊಳಿಸತೊಡಗಿದರು. ಮೋದಿ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ತಳಮಟ್ಟದಲ್ಲಿ ಜನಾಭಿಪ್ರಾಯ ರೂಪಿಸತೊಡಗಿದರು. ಇದರಿಂದಾಗಿ ಸಂಘಪರಿವಾರದವರು ಬೆಚ್ಚಿ ಬಿದ್ದರು. ತಮ್ಮ ಅಸ್ತಿತ್ವಕ್ಕೆ ಆತಂಕ ಆರಂಭವಾಗಿದ್ದನ್ನು ಕಂಡು ಹಲ್ಲು ಮಸಿಯತೊಡಗಿದರು. ಮೊದಲಾದರೆ ನಕ್ಸಲರ ಮೇಲೆ ದೇಶದ್ರೋಹದ ಆರೋಪ ಮಾಡಿ ಎನ್ ಕೌಂಟರ್ ಮಾಡಿಸಬಹುದಾಗಿತ್ತು.  ಆದರೆ ಯಾವಾಗ ಅದೇ ನಕ್ಸಲ್ ಯುವಕರು ಹಿಂಸೆಯನ್ನು ತೊರೆದು ಜನರ ನಡುವೆಯೇ ಪ್ರಜಾಸತ್ತಾತ್ಮಕ ರೀತಿಯಲ್ಲಿ ಜನಹೋರಾಟಗಳನ್ನು ಸಂಘಟಿಸಿ ಸಂಘಪರಿವಾರದ ಬುಡಕ್ಕೆ ಬಿಸಿನೀರು ಕಾಯಿಸತೊಡಗಿದರೋ ಸಂಘಿಗಳು ತತ್ತರಿಸತೊಡಗಿದರು. ಕರ್ನಾಟಕದಲ್ಲೂ ತಮ್ಮ ಆಡಳಿತವನ್ನು ಜಾರಿಗೊಳಿಸಬೇಕೆಂದು ಪ್ರಯತ್ನಿಸುತ್ತಿದ್ದ ಬಿಜೆಪಿಗಳಿಗೆ ಈ ಸಂಘಟನೆಗಳ ಪ್ರತಿರೋಧದಿಂದಾಗಿ ಹಿನ್ನಡೆಯಾಗತೊಡಗಿತು. ಅವರ ಸಿಟ್ಟು ಕಾಡಲ್ಲಿದ್ದ ಮಾವೋವಾದಿಗಳನ್ನು ನಾಡಿಗೆ ಕರೆತಂದು ತಮ್ಮ ವಿರುದ್ದ ಹೋರಾಟಕ್ಕೆ ನಿಲ್ಲಿಸಿದ ಗೌರಿ ಲಂಕೇಶರ ಮೇಲೆ ತಿರುಗಿತು. 


ಕೋಮುವಾದಿ ಪಡೆಗಳು ಗೌರಿ ಲಂಕೇಶರವರನ್ನು ಹೆದರಿಸಿ ಬೆದರಿಸಿ ಬಾಯಿ ಮುಚ್ಚಿಸಲು ಬೇಕಾದಷ್ಟು ಪ್ರಯತ್ನ ಮಾಡಿತು. ಸಾಮಾಜಿಕ ಜಾಲತಾಣಗಳಲ್ಲಿ ಗೌರಿಯವರ ವಿರುದ್ಧ ಪೇಕು ಭಕ್ತಾದಿಗಳು ನಿಂದನಾಸ್ತುತಿಯನ್ನು ಆರಂಭಿಸಿ ಅವರ ನೈತಿಕ ಸ್ತೈರ್ಯವನ್ನು ಹಾಳುಮಾಡಲು ಪ್ರಯತ್ನಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದಲ್ಲಿ ಅತಿಥಿಯಾಗಿ ಬಾಗವಹಿಸಿದ್ದಾಗ ಸಂಘಪರಿವಾರದ ಅಂಗಗಳಾದ ಎಬಿವಿಪಿ ಹಾಗೂ ಭಜರಂಗದಳದ ಮಂಗಗಳು ಗೌರಿಯವರ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದರು. ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಲಂಕೇಶ್ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗೌರಿ ಲಂಕೇಶ್ ಪತ್ರಿಕೆಯ ಅಂಕಣಕಾರಾದ ಯೊಗೇಶ್ ಮಾಸ್ತರರ ಮೇಲೆ ಮಸಿ ಬಳಿದು ಹಲ್ಲೆ ಮಾಡಲಾಯಿತು. ಬೆದರಿಕೆಯ ಪತ್ರಗಳು ಹಾಗೂ ಪೋನ್‌ಗಳಿಗಂತೂ ಲೆಕ್ಕವೇ ಇರಲಿಲ್ಲಾ. ಇಂತಹ ನಿಂದನೆ, ಹಲ್ಲೆ, ಬೆದರಿಕೆಗಳಿಗೆಲ್ಲಾ ಅಂಜದೇ ಯಾವಾಗ ಕೋಮುವಾದಿಗಳ ವಿರುದ್ಧ ಅಘೋಷಿತ ಸಮರವನ್ನು ಗೌರಿಯವರು ಸಾರಿದರೋ ಆಗ ಮತಾಂಧರ ಪಿತ್ತ ನೆತ್ತಿಗೇರಿತು. ಈ ಪ್ರತಿರೋಧದ ದಿಟ್ಟ ದ್ವನಿಯನ್ನು ಖಾಯಂ ಆಗಿ ನಿಲ್ಲಿಸಿ ಬಿಡುವ ನಿರ್ಧಾರಕ್ಕೆ ಬಂದರು. ಅದಕ್ಕೆ ಸೆಪ್ಟಂಬರ್ 5 ರಂದು ಮುಹೂರ್ತ ಇಟ್ಟು ಹೇಡಿಗಳಂತೆ ಕತ್ತಲಲ್ಲಿ ಹೊಂಚು ಹಾಕಿ ಗುಂಡಿಟ್ಟು ಕೊಂದು ಕತ್ತಲಲ್ಲಿ ಓಡಿಹೋದರು. 



ಗೌರಿಯವರ ಹತ್ಯೆ ಯಾರಿಂದ ಯಾವಕಾರಣಕ್ಕಾಗಿ ಆಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ.. ಜನರ ದಿಕ್ಕು ತಪ್ಪಿಸಿ ತಮ್ಮ ತಲೆ ಹಾಗೂ ನೆಲೆ ರಕ್ಷಿಸಿಕೊಳ್ಳುವ ಕೆಲಸವನ್ನು ಮಾಡುವಲ್ಲಿ ಸಂಘಪರಿವಾರದ ಪಡೆ ನಿರತವಾಗಿದೆ. ಸಾವಿನ ಸುದ್ದಿ ತಿಳಿದು ಇನ್ನೂ ಗಂಟೆ ಕೂಡಾ ಕಳೆದಿರಲಿಲ್ಲಾ ಆರ್ ಎಸ್ ಎಸ್ ಮೆಂಟಾಲಿಟಿಯ ವಾಹಿನಿಗಳು ನಕ್ಸಲರಿಂದ ಗೌರಿ ಹತ್ಯೆ ಎನ್ನುವ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡತೊಡಗಿದವು. ಕಾಂಗ್ರೆಸ್ ಸರಕಾರದಲ್ಲಿ ಎಂಎಲ್‌ಸಿ ಆಗಲು ಪ್ರಯತ್ನಿಸಿ ವಿಫಲಗೊಂಡು ಬಿಜೆಪಿ ಸೇರಿದ ಗೌರಿಯವರ ಸಹೋದರ ಇಂದ್ರಜಿತ್ ಕೂಡಾ ನಕ್ಸರೇ ತನ್ನ ಅಕ್ಕನನ್ನು ಕೊಂದಿರುವ ಬಗ್ಗೆ ಗುಮಾನಿ ಇದೆ ಎಂದು ಹೇಳಿಕೆ ಕೊಡತೊಡಗಿದರು. ಇದು ಕೋತಿ ತಾನು ಬೆಣ್ಣೆ ತಿಂದು ಮೇಕೆಯ ಬಾಯಿಗೆ ಸವರಿದಂತಾ ಪ್ರಕರಣ. ಚುನಾವಣೆಯ ವರ್ಷದಲ್ಲಿ ಬಿಜೆಪಿಗೆ ಎಲ್ಲಿ ಗೌರಿ ಹತ್ಯೆ ಹಿನ್ನಡೆಯನ್ನು ಒದಗಿಸುತ್ತದೋ ಎನ್ನುವ ಭಯದಿಂದ ಬಿಜೆಪಿ ಹಾಗೂ ಅದರ ಸಮರ್ಥಕರು ಗೌರಿ ಕೊಲೆಯನ್ನು ನಕ್ಸಲರ ತಲೆಗೆ ಕಟ್ಟಲು ಪ್ರಯತ್ನಿಸುತ್ತಿದ್ದಾರೆ. ಇದು ನಿಜಕ್ಕೂ ಖಂಡನೀಯವಾದದ್ದು. ನಕ್ಸಲರು ಈ ಮತಾಂಧ ಭಯೋತ್ಪಾದಕರಂತೆ ಹೇಡಿಗಳಲ್ಲಾ. ಜನವಿರೋಧಿಗಳನ್ನು ಅವರು ಕೊಲೆ ಮಾಡಿದ್ದರೆ ಈ ಕಾರಣಕ್ಕೆ ಮಾಡಿದ್ದೇವೆ ಎಂದು ಘೋಷಿಸಿಕೊಳ್ಳುತ್ತಾರೆ. ಆದರೆ.. ವಿಚಾರವಾದಿಗಳನ್ನು ಟಾರ್ಗೆಟ್ ಮಾಡಿ ಕೊಲ್ಲಿಸಿ ನಾವೇನೂ ಮಾಡೇ ಇಲ್ಲಾ ಎನ್ನುವ ಈ ಗೋಸುಂಬೆ ಧರ್ಮಾಂಧರು ಜಗತ್ತಿನ ಅತೀ ಅಪಾಯಕಾರಿ ಭಯೋತ್ಪಾದಕರು ಎಂಬುದರಲ್ಲಿ ಎರಡು ಮಾತಿಲ್ಲಾ. ನೇರವಾಗಿ ಕದನಕ್ಕೆ ನಿಂತವರನ್ನು ಎದುರಿಸಬಹುದು.. ಹೀಗೆ ಹೇಡಿಗಳಂತೆ ಅವಿತುಕೊಂಡು ಕೊಂದು ಓಡಿಹೋಗಿ ನಾವೇನೂ ಮಾಡಿಸಿಯೇ ಇಲ್ಲಾ ಎನ್ನುವವರನ್ನು ಮಟ್ಟಹಾಕಲು ಹೊಸ ಪಟ್ಟುಗಳೇ ಬೇಕಿವೆ. 



ಗೌರಿ ಲಂಕೇಶರವರು ಶಾಂತಿ ಅಹಿಂಸೆಗಾಗಿ ಹೋರಾಡಿದ ಧೀರ ದಿಟ್ಟ ಮಹಿಳೆ. ಹಿಂಸಾ ಮಾರ್ಗದಲ್ಲಿ ಸiಸಮಾಜ ನಿರ್ಮಾಣ ಮಾಡುವ ನಕ್ಸಲರನ್ನು ಮುಖ್ಯವಾಹಿನಿಗೆ ಸೇರಿಸಿ ಅಹಿಂಸಾತ್ಮಕ ಹೋರಾಟದ ಮಾರ್ಗದಲ್ಲಿ ತೊಡಗಿಕೊಳ್ಳುವಂತೆ ಮಾಡಿದವರು. ಅಲ್ಪಸಂಖ್ಯಾತರ ಬದುಕುವ ಹಕ್ಕುಗಳಿಗಾಗಿ,  ಕೋಮು ಸಾಮರಸ್ಯಕ್ಕಾಗಿ, ಮಾನವ ಹಕ್ಕುಗಳಿಗಾಗಿ, ಜಾತ್ಯಾತೀತ ಮೌಲ್ಯಗಳಿಗಾಗಿ, ಪ್ರಜಾಸತ್ತಾತ್ಮಕ ಮೌಲ್ಯಗಳಿಗಾಗಿ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ನಿರಂತರವಾಗಿ ಹೋರಾಡಿದವರು. ಕೋಮುವಾದ ಹಾಗೂ ಜಾತೀವಾದಗಳ ವಿರುದ್ಧ ಅಘೋಷಿತ ಯುದ್ದವನ್ನೇ ಸಾರಿದ್ದರು. ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ಧತೆ ಕಾಪಾಡಿಕೊಂಡು ಸ್ವಸ್ಥ ಸಮಾಜವನ್ನು ನಿರ್ಮಿಸುವ ತಮ್ಮ ಆಶಯಕ್ಕೆ ಪೂರಕವಾಗಿ ದಲಿತ, ಮಹಿಳಾ, ರೈತ, ಪ್ರಗತಿಪರ, ಎಡಪಂಥೀಯ ಸಂಘಟನೆಗಳ ಜೊತೆಗೆ ಸದಾ ಸಂಪರ್ಕವನ್ನಿಟ್ಟುಕೊಂಡಿದ್ದರು. ಇಂತಾ ಜೀವಪರವಾಗಿರುವ ಮಹಿಳೆಯನ್ನು ಜೀವವಿರೋಧಿಗಳು ಮಾತ್ರ ಕೊಲ್ಲಲು ಸಾಧ್ಯ!. ಆ ಜೀವವಿರೋಧಿಗಳು ಯಾರು ಎನ್ನುವುದು ಎಲ್ಲರಿಗೂ ಗೊತ್ತಿರುವ ಬಹಿರಂಗ ಸತ್ಯ.

ಇಂದಿಲ್ಲಾ ನಾಳೆ ಕೊಲೆಪಾತಕರು ಸಿಕ್ಕಿ ಬೀಳಬಹುದು. ಜಾಳು ಜಾಳಾದ ಈ ಕಾನೂನು ವ್ಯವಸ್ಥೆ ಹಾಗೂ ರಾಜಕೀಯ ಒತ್ತಡಗಳಲ್ಲಿ ಅವರು ಕಾನೂನು ಹಿಡಿತದಿಂದ ಪಾರಾಗಲೂ ಬಹುದು. ಇಲ್ಲವೇ ಶಿಕ್ಷೆಗೂ ಗುರಿಯಾಗಬಹುದು. ಆದರೆ.. ಗೌರಿಯಂತಹ ದಿಟ್ಟ ಪತ್ರಕರ್ತೆ, ಜನಪರ ಬದ್ದತೆಯುಳ್ಳ ಹೋರಾಟಗಾರ್ತಿ ಮತ್ತೆ ಮರಳಿ ದೊರೆಯಲು ಸಾಧ್ಯವೇ ಇಲ್ಲಾ. ಕೊಂದವರು ಇಲ್ಲಿ ಕೇವಲ ಕೊಲ್ಲಿಸುವವರ ಕೈಯಲ್ಲಿರುವ ಪರಿಕರಗಳಾಗಿದ್ದಾರಷ್ಟೇ. ಆದರೆ ಸೈದ್ದಾಂತಿಕ ಭಿನ್ನತೆಯಿರುವವರನ್ನು ಕೊಲ್ಲ ಬಯಸುವ ಮತಾಂಧ ಶಕ್ತಿಗಳು ನಾಶವಾಗದೇ ಈ ಕೊಲೆಗಳು ನಿಲ್ಲುವುದಿಲ್ಲಾ. ಕೊಲೆಗಡುಕರ ಹಿಂದಿರುವವರ ಉದ್ದೇಶ ಕೇವಲ ಒಬ್ಬ ಕಲಬುರ್ಗಿ ಇಲ್ಲವೇ ಗೌರಿಯವರ ಹತ್ಯೆ ಮಾತ್ರವಲ್ಲಾ.. ಈ ಸಾಂಕೇತಿಕ ಕೊಲೆಗಳ ಮೂಲಕ ಮೌಢ್ಯಗಳ ವಿರುದ್ದ, ಕೋಮುವಾದಿಗಳ ವಿರುದ್ದ, ಸಂಘಪರಿವಾರದ ಜನವಿರೋಧಿತನಗಳ ವಿರುದ್ದ ಇರುವವರ ಬಾಯಿಮುಚ್ಚಿಸುವ ಹುನ್ನಾರವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡಿ ಪ್ಯಾಸಿಸ್ಟ್ ಪ್ರಭುತ್ವವನ್ನು ಸ್ಥಾಪಿಸುವುದೇ ಈ ಮನುವಾದಿ ದುಷ್ಟ ಶಕ್ತಿಗಳ ಶಡ್ಯಂತ್ರವಾಗಿದೆ. ಆದರೆ.. ಮನುಕುಲದ ಇತಿಹಾಸ ಹೇಳುತ್ತದೆ ದಮನ ಹೆಚ್ಚಿದಷ್ಟೂ ದಂಗೆ ತೀವ್ರಗೊಳ್ಳುತ್ತದೆ ಎಂದು. ಗೌರಿಯಂತಹ ಜನಪರ ಹೋರಾಟಗಾರ್ತಿಯವರ ಸಾವು ವ್ಯರ್ಥವಾಗುವುದಿಲ್ಲಾ. ಪ್ರಜ್ಞಾವಂತರ ಎದೆಯಲ್ಲಿ ಬೂದಿ ಮುಚ್ಚಿದ ಬೆಂಕಿಯಾಗಿ ಉರಿಯುತ್ತದೆ. ಸಮಯ ಸಂದರ್ಬ ನೋಡಿಕೊಂಡು, ಮತ್ತೆ ಜನಹೋರಾಟದ ತೀವ್ರತೆಯ ಗಾಳಿ ಬೀಸಿದಾಗ ಬೆಂಕಿ ಪ್ರಜ್ವಲಿಸುತ್ತದೆ. ಈ ಕೋಮುವಾದಿ ಮನುಪಡೆಯನ್ನು ಸುಟ್ಟು ಹಾಕುತ್ತದೆ. ಅಂತಹ ಕಾಲ ಬೇಗ ಬರಲಿ, ಹುತಾತ್ಮಳಾದ ಗೌರಿಯವರ ಹಿಂಸಾರಹಿತ ಸಮಸಮಾಜದ ಆಶಯ ನಿರ್ಮಾಣಗೊಳ್ಳಲಿ ಎಂಬುದು ಎಲ್ಲಾ ಪ್ರಗತಿಪರರ ಅಂತರಂಗದ ಬಯಕೆಯಾಗಿದೆ. ಗೌರಿಯವರ ಭೌತಿಕ ದೇಹ ಇಲ್ಲವಾದರೂ ಅವರ ವೈಚಾರಿಕತೆ ಹಾಗೂ ಸೈದ್ದಾಂತಿಕ ಬದ್ದತೆಗಳು ಬದುಕಿರುವವರಿಗೆ ಮಾದರಿಯಾಗಬೇಕಿದೆ.

ದೀಪವೊಂದನು ಆರಿಸಿ
ಬೆಳಕ ಕೊಂದೆನೆಂದು
ಸೊಕ್ಕಿನಿಂದ ಬೀಗದಿರು..
ಮತ್ತೆ ಪಂಜುಗಳ ಹಚ್ಚುವ
ಕೆಚ್ಚೆದೆಯ ಮನಸುಗಳ
ತಡೆಯುವವರು ಯಾರು..?    

-ಶಶಿಕಾಂತ ಯಡಹಳ್ಳಿ 
  


ಬುಧವಾರ, ಜೂನ್ 28, 2017

ತಹ ತಹ.....98 ಆಳುವ ವರ್ಗಗಳಿಂದ ಪತ್ರಿಕಾ ಸ್ವಾತಂತ್ರ್ಯದ ದಮನ :



 
ಶಾಸಕಾಂಗ ತನ್ನ ಸರ್ವಾಧಿಕಾರತ್ವವನ್ನು ಮೀಡಿಯಾಂಗದ ಮೇಲೆ ಹೇರಲು ಪ್ರಯತ್ನಿಸುತ್ತಲೇ ಇರುತ್ತದೆ. ಭಿನ್ನಾಭಿಪ್ರಾಯ ಹಾಗೂ ವಿರೋಧಗಳನ್ನು ಸಾಮ ಬೇಧ ದಂಡಾದಿಗಳಿಂದ ದಮನಿಸಲು ಪ್ರಯತ್ನಿಸುತ್ತದೆ.  ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮಟ್ಟಹಾಕಲು ಅನೇಕಾನೇಕ ಪಟ್ಟುಗಳನ್ನು ಹಾಕುತ್ತಲೇ ಇರುತ್ತದೆ. ರಾಜಕಾರಣಿಗಳ ಹಲ್ಕಾ ಕೆಲಸಗಳನ್ನು ಹುಡುಕುಡುಕಿ ತೆಹಲ್ಕಾ ಪತ್ರಿಕೆಯಲ್ಲಿ ಬರೆದಾಗ ಅದರ ಸಂಪಾದಕನನ್ನು ಲೈಂಗಿಕ ಹಗರಣದಲ್ಲಿ  ಸಿಲುಕಿ ಹಾಕಿಸಿ ಮತ್ತೆ ತಲೆ ಎತ್ತದಂತೆ ನೋಡಿಕೊಳ್ಳಲಾಯಿತು. ಇತ್ತೀಚೆಗೆ ಸಂಘಪರಿವಾರದ ವಿರುದ್ಧದ ನಿಲುವನ್ನು ತೆಗೆದುಕೊಂಡ ಎನ್‌ಡಿ ಟಿವಿಯ ಮಾಲೀಕರ ಮನೆಯ ಮೇಲೆ ರೇಡ್ ಮಾಡಿಸಿ ಹೆದರಿಸಲು ಕೇಂದ್ರ ಸರಕಾರ ಪ್ರಯತ್ನಿಸಿತು. ಈಗ  ಕರ್ನಾಟಕದಲ್ಲಿ ಇಬ್ಬರು ಪತ್ರಕರ್ತರ ಮೇಲೆ ರಾಜಕಾರಣಿಗಳ ಕುರಿತು ಮಾನಹಾನಿಕರ ಲೇಖನ ಪ್ರಕಟಿಸಲಾಗಿದೆ ಎಂದು ಆರೋಪಿಸಿ ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸಿ ಆದೇಶ ಹೊರಡಿಸಲಾಯಿತು. ಸರಕಾರ ಯಾವುದೇ ಪಕ್ಷದ್ದಾಗಿರಲಿ ತಮ್ಮ ಪರವಾಗಿ ಬರೆಯುವವವರಿಗೆ ಎಲ್ಲಾ ರೀತಿಯಲ್ಲೂ ಸಹಕರಿಸುವುದು ಹಾಗೂ ತಮ್ಮ ವಿರುದ್ಧ ಬರೆಯುವವರಿಗೆ ಸರ್ವ ರೀತಿಯ ಕಿರುಕುಳಗಳನ್ನು ನೀಡುವುದು ನಿರಂತರವಾಗಿ ನಡೆದುಕೊಂಡೇ ಬಂದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ನಡೆಯುತ್ತಲೇ ಇದೆ.

  ಹಿಂದೆ ಪತ್ರಿಕೆಗಳು ಆಳುವವರ ವಿರುದ್ಧ ಮಾನಹಾನಿಕರವಾಗಿ ಲೇಖನ ಪ್ರಕಟಿಸಿದ್ದರ ಬಗ್ಗೆ ಆಕ್ಷೇಪಣೆ ಇದ್ದವರು ನ್ಯಾಯಾಲಯಕ್ಕೆ ಹೋಗಿ ಮಾನನಷ್ಟ ಮೊಕದ್ದಮೆ ಹಾಕುತ್ತಿದ್ದರು. ಅಂತಹ ಹವರು ಕೇಸುಗಳು ಹತ್ತಾರು ವರ್ಷ ನ್ಯಾಯಾಲಯದ ಕಂಬಗಳನ್ನು ಸುತ್ತಿ ಸುಸ್ತಾಗಿ ಕೊನೆಗೊಮ್ಮೆ ಬಿದ್ದೇ ಹೋಗುತ್ತಿದ್ದವು. ಪ್ರಕಟಿತ ಲೇಖನ ಸುಳ್ಳಾಗಿದ್ದಲ್ಲಿ ಪತ್ರಿಕೆಯ ಸಂಪಾದಕರನ್ನು ಸದನಕ್ಕೋ ಇಲ್ಲವೇ ಸಂಸತ್ತಿಗೋ ಕರೆಯಿಸಿ ವಾಗ್ದಂಡನೆಯನ್ನು ವಿಧಿಸಲಾಗುತ್ತಿತ್ತು ಅಥವಾ ಕೆಲವೊಮ್ಮೆ ಛೀಮಾರಿ ಹಾಕಲಾಗುತ್ತಿತ್ತು. ಈಗ ಕರ್ನಾಟಕ ಸರಕಾರದ ಸದನ ಸಮಿತಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಶಾಸಕರು ಕೊಟ್ಟ ದೂರನ್ನು ಆಧರಿಸಿ ತಾನೇ ವಿಚಾರಣೆ ಮಾಡಿ ಜೈಲು ಶಿಕ್ಷೆಯನ್ನೂ ವಿಧಿಸಿ ನ್ಯಾಯಾಲಯದ ಕೆಲಸವನ್ನು ತಾನೇ ಮಾಡಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಪತ್ರಿಕೋದ್ಯಮದ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ಹುನ್ನಾರವನ್ನು ಅರಂಭಿಸಿದೆ. 


2017, ಜೂನ್ 22 ರಂದು ಕರ್ನಾಟಕ ಸರಕಾರದ ಸಭಾಧ್ಯಕ್ಷ (ಸ್ಪೀಕರ್) ಹಾಗೂ ಹಕ್ಕು ಬಾಧ್ಯತಾ ಸಮಿತಿಯ ಅಧ್ಯಕ್ಷರಾದ ಕೆ.ಬಿ.ಕೋಳಿವಾಡರವರು ಪತ್ರಿಕೋದ್ಯಮಕ್ಕೆ ಆಘಾತಕಾರಿಯಾದ ಆದೇಶವೊಂದನ್ನು ಹೊರಡಿಸಿದರು. ಅವಹೇಳನಕಾರಿ ವರದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಸದನ ಹಕ್ಕು ಬಾಧ್ಯತಾ ಸಮಿತಿಯ ಶಿಫಾರಸ್ಸಿನಂತೆ ಶಾಸಕರ ಹಕ್ಕು ಚ್ಯುತಿಯಾಯ್ತು ಎಂಬ ಕಾರಣಕ್ಕೆ ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಹಾಗೂ ಅನಿಲ್ ರಾಜ್ ಈ ಇಬ್ಬರಿಗೂ ಒಂದು ವರ್ಷ ಜೈಲು ಶಿಕ್ಷೆ ಹಾಗೂ ಹತ್ತು ಸಾವಿರ ರೂಪಾಯಿ ದಂಡವನ್ನು ವಿಧಿಸಿ ತಕ್ಷಣ ಬಂಧಿಸಲು ಆದೇಶಿಸಿದರು. ಇದೂ ಸಹ ಏಕಪಕ್ಷೀಯವಾದ ತೀರ್ಮಾನವಾಗಿದೆ. ಹಕ್ಕು ಬಾಧ್ಯತಾ ಸಮಿತಿ ನೀಡಿರುವ ವರದಿಯನ್ನು ಕುರಿತು ಸದನದಲ್ಲಿ ಚರ್ಚಿಸದೇ, ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಾಯಕರುಗಳ ಗಮನಕ್ಕೆ ತರದೇ ಪತ್ರಕರ್ತರಿಗೆ ಜೈಲು ಶಿಕ್ಷೆ ವಿಧಿಸಿರುವುದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಮನಕಾರಿ ನಿಲುವಾಗಿದೆ. 

ಈ ಕೋಳಿವಾಡಾದಿಗಳಿಗೆ ಸದನದ ಕಾನೂನುಗಳ ಬಗ್ಗೆ ತಪ್ಪು ತಿಳುವಳಿಕೆ ಇರುವುದು ಈ ಪ್ರಕರಣದಿಂದ ಸ್ಪಷ್ಟವಾಗಿದೆ. ಸದನದೊಳಗೆ  ಹಕ್ಕುಚ್ಯುತಿಯಾದರೆ ಮಾತ್ರ ಸ್ಪೀಕರ್ ಆದವರಿಗೆ ವಿಚಾರಣೆ ಮಾಡಿ ಶಿಕ್ಷೆಯನ್ನು ವಿಧಿಸುವ ಅಧಿಕಾರವಿದೆ. ಸದನದ ಹೊರಗೆ ಶಾಸಕರಿಗೆ ಆಗುವ ಅವಮಾನಗಳಿಗೆ ಶಿಕ್ಷೆ ವಿಧಿಸುವ ಯಾವುದೇ ಅಧಿಕಾರ ಸದಸ ಸಮಿತಿಗಾಗಲೀ ಇಲ್ಲವೇ ಸ್ಪೀಕರ್ ರವರಿಗಾಗಲೀ ಸಂವಿಧಾನ ಕೊಟ್ಟಿಲ್ಲಾ. ಲೋಕಸಭೆಯ ಹಕ್ಕುಬಾಧ್ಯತಾ ನಿಯಮಾವಳಿಗಳನ್ನಾದರೂ ಪರಿಶೀಲಿಸಿದ್ದರೆ ಈ ಸ್ಪೀಕರ್ ಮಹಾಶಯರಿಗೆ ಸ್ಪಷ್ಟವಾಗಿ ಅರಿವಾಗುತ್ತಿತ್ತು. ಸದನದ ಹೊರಗೆ ನಡೆಯುವ ಪ್ರಜಾಪ್ರತಿನಿಧಿಗಳ ಅವಹೇಳನಕ್ಕೆ ಮಾನನಷ್ಟ ಮೊಕದ್ದಮೆಯನ್ನು ಹೂಡಬಹುದಾಗಿದೆ. ಯಾವಾಗ ನ್ಯಾಯಾಲಯ ಮಾಡುವ ನ್ಯಾಯನಿರ್ಣಯ ಮತ್ತು ಶಿಕ್ಷೆಯ ಜಾರಿಯ ಕೆಲಸವನ್ನು ಈ ಅರೆಬೆಂದ ಸ್ಪೀಕರ್ ಮಾಡಲು ಹೊರಟರೋ ಆಗಲೇ ಇವರ ಯೋಗ್ಯತೆ ಗೊತ್ತಾಗಿ ಹೋಯಿತು.  ಸದನದ ಕಾನೂನನ್ನು ಸರಿಯಾಗಿ ತಿಳಿದುಕೊಳ್ಳದೇ ಆತುರಕ್ಕೆ ಬಿದ್ದು ತೆಗೆದುಕೊಂಡು ನಿರ್ಣಯವು ಸದನಕ್ಕೆ ಹಾಗೂ ಸಭಾಧ್ಯಕ್ಷರಿಗೆ ತಿರುಗುಬಾಣವಾಗುವುದರಲ್ಲಿ ಸಂದೇಹವೇ ಇಲ್ಲಾ. ಸಜೆ ಶಿಕ್ಷೆಗೊಳಗಾದ ಪತ್ರಕರ್ತರು ಕೋರ್ಟಲ್ಲಿ ಸದನ ಸಮಿತಿಯ ತೀರ್ಮಾಣವನ್ನು ಪ್ರಶ್ನೆ ಮಾಡಿದರೆ ಸದನದ ಮರ್ಯಾದೆ ಹೋಗುವುದರಲ್ಲಿ ಅನುಮಾನವೇ ಇಲ್ಲಾ. ಸದನ ಹಾಗೂ ಅದರ ಅಧ್ಯಕ್ಷರಾದವರು ಸದನವನ್ನು ಸಂಬಾಳಿಸಬೇಕೆ ಹೊರತು ಸದನದ ಹೊರಗೆ ನಡೆಯುವ ಸಮಸ್ಯೆಗಳಿಗೆ ತೀರ್ಪುಗಾರರಾಗಬಾರದು. ತಮ್ಮ ಇತಿ  ಮಿತಿಗಳನ್ನು ಮೀರಿ ನಡೆದರೆ ಕೊನೆಗೆ ನಗೆಪಾಟಲಿಗೆ ಈಡಾಗಬೇಕಾಗುತ್ತದೆ. ಈಗ ಈ ಪ್ರಕರಣದಲ್ಲೂ ಸಹ ಸದನದ ಗರ್ವ ಭಂಗ ಆಗುವುದರಲ್ಲಿ ಯಾವ ಗುಮಾನಿಗಳೂ ಇಲ್ಲವೇ ಇಲ್ಲಾ.


ರವಿ ಬೆಳಗೆರೆಯವರ ಮೇಲೆ ಸಾಕಷ್ಟು ಜನರಿಗೆ ಅಸಮಾಧಾನವಿದೆ. ಹಲವಾರು ಪತ್ರಕರ್ತರಿಗೆ ಬೆಳಗೆರೆಯವರ ಅಕ್ಷರ ವ್ಯಾಪಾರದ ಒಳವ್ಯವಹಾರಗಳ ಬಗ್ಗೆ ಬೇಸರವಿದೆ. ತುಂಬಾ ವ್ಯಕ್ತಿಗತವಾಗಿ ನಿಂದನೆಗೆ ಇಳಿಯುವ ಈ ಟ್ಯಾಬ್ಲೈಡ್ ಪತ್ರಿಕೆಯ ಮೇಲೆ ಆಳುವ ವರ್ಗಗಳಿಗೆ ವಿಪರೀತ ಕೋಪವೂ ಇದೆ. ಅತಿರೇಕದ ವರದಿಗಳನ್ನು ರಂಜನೀಯವಾಗಿ ಹೇಳುವ ಈ ಪತ್ರಿಕೆಯ ಆಕ್ರಮಣಶೀಲತೆಯಿಂದಾಗಿ ಹಲವಾರು ಪ್ರಜ್ಞಾವಂತರೂ ಸಹ ಅವಮಾನಕ್ಕೊಳಗಾಗಿದ್ದಾರೆ. ಈ ಪತ್ರಿಕೆಯ ವಿಕ್ಷಿಪ್ತ ವರದಿ, ಲೇಖನಗಳು ಸಮಾಜದಲ್ಲಿ ನಕಾರಾತ್ಮಕತೆಯನ್ನು ಹುಟ್ಟಿಸಲು ಪ್ರೇರಣೆಯಾಗಿವೆ ಎಂಬುದರಲ್ಲಿ ಸುಳ್ಳಿಲ್ಲಾ. ಆದರೆ.. ಯಾವುದೇ ಪತ್ರಿಕೆ ಏನನ್ನೇ ಬರೆಯಲಿ ಅದನ್ನು ಪ್ರಶ್ನಿಸಲು ನ್ಯಾಯಾಲಯದಲ್ಲಿ ಅವಕಾಶವಿದೆ. ಮಾನಹಾನಿಕರವಾಗಿ ವರದಿಯನ್ನು ಯಾವುದೇ ಪತ್ರಿಕೆ ಪ್ರಕಟಿಸಿದರೆ ಆ ಪತ್ರಿಕೆಯ ಸಂಪಾದಕರು ಹಾಗೂ ಮಾಲೀಕರ ಮೇಲೆ ಮಾನನಷ್ಟ ಮೊಕದ್ದಮೆಯನ್ನು ಹೂಡಬಹುದಾಗಿದೆ. ಆದರೆ.. ಈ ರೀತಿ ಶಾಸಕಾಂಗದ ಹಕ್ಕು ಬಾಧ್ಯತಾ ಸಮೀತಿಯೊಂದು ತಾನೇ ಏಕಪಕ್ಷೀಯವಾಗಿ ವಿಚಾರಣೆ ಮಾಡಿ ಶಿಕ್ಷೆಯನ್ನೂ ವಿಧಿಸಿರುವುದು ಪತ್ರಿಕಾ ಅಭಿವ್ಯಕ್ತಿ ಸ್ವಾತಂತ್ಯದ ಮೇಲೆ ನಡೆದ ಹಲ್ಲೆಯಾಗಿದೆ. ಇಷ್ಟಕ್ಕೂ ಜೈಲು ಶಿಕ್ಷೆ ವಿಧಿಸುವ ಅಧಿಕಾರವೇ ಶಾಸಕಾಂಗ ಸಮಿತಿಗಿಲ್ಲ. ತನ್ನ ಅಧಿಕಾರವನ್ನು ಅತಿರೇಕವಾಗಿ ಬಳಸಿಕೊಂಡು ಆರೋಪಿತರಿಗೆ ತಮ್ಮ ವಾದವನ್ನು ಮಂಡಿಸಲು ಅವಕಾಶವನ್ನೂ ಕೊಡದೇ ಜೈಲು ಶಿಕ್ಷೆಯನ್ನು ಪ್ರಕಟಿಸಿ ಬಂಧನಕ್ಕೆ ಆದೇಶ ಹೊರಡಿಸಿದ್ದು ಅಸಂವಿಧಾನಿಕ ಕ್ರಮವಾಗಿದೆ. ಮತ್ತೊಬ್ಬ ಪತ್ರಕರ್ತ ಅನಿಲ್ ರಾಜ್ ಸಮಿತಿಯ ಮುಂದೆ ಹಾಜರಾಗಿ ಬೇಷರತ್ ಕ್ಷಮೆಯಾಚಿಸಿದ್ದರೂ ಅವರಿಗೂ ಜೈಲು ಶಿಕ್ಷೆ ವಿಧಿಸಲಾಗಿದೆ. ಇಂತಹ ಆದೇಶವನ್ನು ಪ್ಯಾಸಿಸ್ಟ್ ಮನಸ್ಥಿತಿಯ ಸರಕಾರ ಹೊರಡಿಸಿದ್ದರೆ ಅದು ಅಪೇಕ್ಷಣೀಯವಾಗಿರುತ್ತಿತ್ತು. ಆದರೆ ಜನಪರ ಸರಕಾರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಸರಕಾರದ ಆಡಳಿತ ಇರುವಾಗಲೇ ಪತ್ರಿಕಾ ಸ್ವಾತಂತ್ರ್ಯದ ದಮನವಾಗಿರುವುದನ್ನು ಪ್ರಗತಿಪರರೆಂದು ಅನ್ನಿಸಿಕೊಂಡವರಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲಾ. ಎಲ್ಲಾ ಆಳುವ ಪಕ್ಷಗಳ ಜಂಡಾ ಬೇರೆ ಬೇರೆಯಾಗಿದ್ದರೂ ತಮ್ಮ ಸ್ವಾರ್ಥ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುವ ಅಜೆಂಡಾ ಒಂದೇ ಎನ್ನುವುದು ಸಾಬೀತಾದಂತಾಯಿತು.


ಇಂದು ಈ ಇಬ್ಬರು ಪೀತ ಪತ್ರಕರ್ತರಿಗೆ ಆದ ಜೈಲು ಶಿಕ್ಷೆ ನಾಳೆ ಬೇರೆ ನಿಷ್ಟುರ ಪತ್ರಕರ್ತರಿಗೂ ಆಗುವುದರಲ್ಲಿ ಸಂದೇಹವಿಲ್ಲಾ.  ಪತ್ರಕರ್ತರಿಗೆ ಜೈಲು ಶಿಕ್ಷೆ ಜಾರಿ ಆಗಿದ್ದನ್ನು ಕರ್ನಾಟಕದ ಕಾರ್ಯನಿರತ ಪತ್ರಕರ್ತರ ಸಂಘಗಳು, ಅವುಗಳ ಘಟಕಗಳು ತೀವ್ರವಾಗಿ ವಿರೋಧಿಸಬೇಕಾಗಿತ್ತು, ಸರಕಾರದ ಮೇಲೆ ಒತ್ತಡ ತಂದು ಹಕ್ಕು ಚ್ಯುತಿ ನಿರ್ಣಯವನ್ನು ಹಿಂಪಡೆಯಬೇಕೆಂದು ಆಗ್ರಹಿಸಬೇಕಾಗಿತ್ತು, ಇಡೀ ಪತ್ರಿಕಾ ಮಾಧ್ಯಮವೇ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧ ಶಾಸಕಾಂಗದ ಪ್ರಹಾರವನ್ನು ಒಕ್ಕೂರಲಿನಿಂದ ಪ್ರತಿಭಟಿಸಬೇಕಾಗಿತ್ತು. ಆದರೆ ಹಾಗಾಗಲೇ ಇಲ್ಲಾ. ಬೆಂಗಳೂರಿನ ಪ್ರೆಸ್ ಕ್ಲಬ್ ಪದಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ನಾಮಕಾವಸ್ತೆ ಮನವಿ ಸಲ್ಲಿಸಿ ಸುಮ್ಮನಾಗಿದ್ದಾರೆ. ಇದಕ್ಕೆ ಮೂಲ ಕಾರಣ ರವಿ ಬೆಳಗೆರೆಯ ಮೇಲಿರುವ ತೀವ್ರ ಅಸಮಾಧಾನ ಹಾಗೂ ಆಳುವವರನ್ನು ವಿರೋಧ ಕಟ್ಟಿಕೊಳ್ಳಲಾಗದ ಅನಿವಾರ್ಯತೆಗಳೇ ಆಗಿವೆ. ಹೀಗಾಗಿ ಎಲ್ಲರೂ ಜಾಣ ಮೌನಕ್ಕೆ ಜಾರಿಕೊಂಡರು. ಆದರೆ.. ದೂರದ ದೆಹಲಿಯಲ್ಲಿರುವ ರಾಷ್ಟ್ರೀಯ ಪತ್ರಕರ್ತರ ಒಕ್ಕೂಟ (ಎನ್‌ಯುಜೆ)ವು ಇದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಮುಕ್ತ ದಾಳಿ ಎಂದು ಪತ್ರಿಕಾ ಹೇಳಿಕೆ ನೀಡಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿತು. ಕೂಡಲೇ ಜೈಲು ಶಿಕ್ಷೆಯನ್ನು ಹಿಂಪಡೆಯುವ ನಿಟ್ಟಿನಲ್ಲಿ ನಿರ್ಣಯ ಮಂಡಿಸುವಂತೆ ಕರ್ನಾಟಕ ಸರಕಾರಕ್ಕೆ ಎನ್‌ಯುಜೆ ಹಾಗೂ ಅದರ ದಿಲ್ಲಿ ಘಟಕ ದಿಲ್ಲಿ ಪತ್ರಕರ್ತರ ಸಂಘ (ಡಿಜೆಎ) ಕರ್ನಾಟಕ ಸರ್ಕಾರಕ್ಕೆ ಆಗ್ರಹಿಸಿತು. ಎಡಿಟರ್ ಗಿಲ್ಡ್ ಆಪ್ ಇಂಡಿಯಾ ಕೂಡಾ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ಪತ್ರಕರ್ತರಿಗೆ ಜೈಲು ಶಿಕ್ಷೆ ವಿಧಿಸಿರುವುದನ್ನು ತೀವ್ರವಾಗಿ ವಿರೋಧಿಸಿ, ಶಾಸಕಾಂಗದ ಈ ನಿರ್ಣಯವು ಸಂವಿಧಾನವು ಕೊಟ್ಟ ಮೂಲಭೂತ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಮೇಲೆ ಹಲ್ಲೆ ಮಾಡಿ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ತನ್ನ ತೀಕ್ಷ್ಣ ಪ್ರತಿಭಟನೆಯನ್ನು ವ್ಯಕ್ತಪಡಿಸಿತು.


ಪ್ರತಿಯೊಬ್ಬ ಪತ್ರಕರ್ತರಿಗೂ ಹಾಗೂ ಪತ್ರಿಕೆಗಳಿಗೂ ಚುನಾಯಿತ ಪ್ರತಿನಿಧಿಗಳ ಕುರಿತು ವಿಶ್ಲೇಷನಾತ್ಮಕ ಲೇಖನಗಳನ್ನು ಬರೆಯುವ ಹಕ್ಕಿದೆ. ಹಾಗೂ ಜನರಿಂದ ಆಯ್ಕೆಯಾದವರು ಜನವಿರೋಧಿಯಾದಾಗ, ಜನತೆ ಕೊಟ್ಟ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಾಗ, ಇಲ್ಲವೇ ಬ್ರಷ್ಟಾಚಾರದಲ್ಲಿ ಭಾಗಿಯಾಗಿ ಫಲಾನುಭವಿಯಾದಾಗ ಅವರ ಬಗ್ಗೆ ಬರೆದು ಜನರಲ್ಲಿ ಜಾಗೃತಿ ಮೂಡಿಸಬೇಕಾದದ್ದು ಪತ್ರಕರ್ತರಾದವರ ಹೊಣೆಗಾರಿಕೆಯಾಗಿದೆ. ದುರುದ್ದೇಶಪೂರ್ವಕ ಮಾನಹಾನಿಕರ ವರದಿ ಲೇಖನಗಳಿದ್ದರೆ ಅದನ್ನು ಪ್ರಕಟಿಸಿದವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಶ್ನಿಸಿ ತಮ್ಮ ಪ್ರಾಮಾಣಿಕತೆಯನ್ನು ಸಾಕ್ಷಿ ಸಮೇತ ಸಾಬೀತು ಪಡಿಸಬಹುದಾಗಿದೆ. ಅದನ್ನೆಲ್ಲಾ ಬಿಟ್ಟು ಶಾಸಕರ ದೂರನ್ನು ಆಧರಿಸಿ ಹಕ್ಕು ಬಾಧ್ಯತಾ ಸಮಿತಿ ತಾನೇ ವಿಚಾರಣೆಯನ್ನು ಆರಂಭಿಸಿ ಜೈಲು ಶಿಕ್ಷೆಯನ್ನೂ ವಿಧಿಸುವುದು ಪಕ್ಕಾ ಸಂವಿಧಾನ ವಿರೋಧಿತನವಾಗಿದೆ. ಇನ್ನು ಮುಂದೆ ಶಾಸಕರುಗಳು ಮಾನಹಾನಿಯಾಯಿತೆಂದು ನ್ಯಾಯಾಲಯಗಳಿಗೆ ಹೋಗುವ ಅಗತ್ಯವೇ ಇಲ್ಲಾ. ತಮ್ಮ ವಿರುದ್ದವಾಗಿ ಬರೆದ ಪತ್ರಕರ್ತರನ್ನು ಜೈಲಿಗಟ್ಟಲು ಹಕ್ಕು ಬಾಧ್ಯತಾ ಸಮೀತಿಯೇ ಇದೆಯಲ್ಲಾ..? ಈ ರಾಜಕಾರಣಿಗಳೆಲ್ಲಾ ಸಾಚಾ ಅಂದರೆ ಯಾರೂ ನಂಬುವುದಿಲ್ಲಾ. ಸಂಪೂರ್ಣ ಪ್ರಾಮಾಣಿಕರಾದವರು ಈ ವ್ಯವಸ್ಥೆಯಲ್ಲಿ ಶಾಸಕರಾಗುವುದೂ ಕಷ್ಟಸಾಧ್ಯ. ಸ್ವಜನಪಕ್ಷಪಾತ, ಭ್ರಷ್ಟಾಚಾರ, ಅಧಿಕಾರ ದುರುಪಯೋಗಗಳು ಬಹುತೇಕ ಜನಪ್ರತಿನಿಧಿಗಳ ದಿನಚರಿಯ ಭಾಗವೇ ಆಗಿವೆ. ಇಂತಹ ಸಂದರ್ಭದಲ್ಲಿ ಅವರ ಕರ್ಮಕಾಂಡಗಳ ಬಗ್ಗೆ ಪತ್ರಿಕೆಯಲ್ಲಿ ಬರೆಯಲೇ ಬಾರದು, ಬರೆದರೆ ಜೈಲಿಗೆ ಕಳಿಸುವ ನಿರ್ಣಯ ಕೈಗೊಳ್ಳಲಾಗುವುದು ಎಂದರೆ ಸಂವಿಧಾನದತ್ತ ಪತ್ರಿಕಾ ಸ್ವಾತಂತ್ರ್ಯ ಉಳಿದೀತೆ?


ಕಾಂಗ್ರೆಸ್ ಸರಕಾರವಿದ್ದಾಗಲೇ ಹೀಗೆ ಪತ್ರಕರ್ತರನ್ನು ಜೈಲಿಗಟ್ಟುವುದು ಶುರುವಾದರೆ ಮುಂದೊಮ್ಮೆ ಪ್ಯಾಸಿಸ್ಟ್ ಸರಕಾರವೇನಾದರೂ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ವ್ಯವಸ್ಥೆಯ ಅವ್ಯವಸ್ಥೆಗಳ ಬಗ್ಗೆ ಬರೆಯುವ ಪತ್ರಕರ್ತರು ಹಾಗೂ ಪತ್ರಿಕೆಯ ಸಂಪಾದಕರುಗಳೆಲ್ಲಾ ಜೈಲಿನಲ್ಲಿರಬೇಕಾಗುತ್ತದೆ. ಇಲ್ಲವೇ ಈಗಾಗಲೇ ಇರುವ ಕೆಲವಾರು ರಾಜೀಕೋರ ಪತ್ರಕರ್ತರಂತೆ ಆಳುವ ಪಕ್ಷಗಳ ಹೊಗಳುಭಟ್ಟರಾಗಿ ಬಾಲ ಅಲ್ಲಾಡಿಸಬೇಕಾಗುತ್ತದೆ. ಇವೆರಡರಲ್ಲಿ ಯಾವುದೇ ಆದರೂ ಅದು ಸಾಮಾಜಿಕ ಸ್ವಾಸ್ತ್ಯವನ್ನು ಹಾಳುಮಾಡುವುದರಲ್ಲಿ ಸಂದೇಹವಿಲ್ಲಾ. ಸಂವಿಧಾನದ ನಾಲ್ಕನೇ ಆಧಾರ ಸ್ಥಂಬವನ್ನು ದುರ್ಬಲಗೊಳಿಸುವ ಪ್ರಯತ್ನವಂತೂ ಜಾರಿಯಲ್ಲಿದೆ. 


ಈಗ ಕನ್ನಡದಲ್ಲಿ ಕಳೆದ ಒಂದೂವರೆ ದಶಕದಿಂದ ವಾರ್ತಾಭಾರತಿ ದಿನಪತ್ರಿಕೆ ತುಂಬಾ ವಸ್ತುನಿಷ್ಟವಾಗಿ ಪ್ರಕಟಗೊಳ್ಳುತ್ತಿದೆ. ಅದರ ಲೇಖನಗಳು ಸಾಮಾಜಿಕ ತಾಣವಾದ ಫೇಸ್‌ಬುಕ್‌ನಲ್ಲಿಯೂ ಸಹ ಬಿತ್ತರಗೊಳ್ಳುತ್ತದೆ.ಫೇಸ್ಬುಕ್ಕಿನಲ್ಲಿ ಲಿಂಕ್ ಮೂಲಕ ಬರುವ ಸುದ್ದಿಗಳು ಯಾರಿಗಾದರೂ ಇಷ್ಟವಾಗದಿದ್ದರೆ ಅದರ ವಿರುದ್ಧವಾಗಿ ತಮ್ಮ ಅಭಿಪ್ರಾಯಗಳನ್ನು ಬರೆಯುವ ಸ್ವಾತಂತ್ರ್ಯ ಎಲ್ಲರಿಗೂ ಮುಕ್ತವಾಗಿದೆ.  ಆದರೆ ಸಂಘಪರಿವಾರದ ಟ್ರೋಲ್‌ಗಳು ಫೇಸ್ಬುಕ್ಕಿಗೆ ಸುಳ್ಳು ದೂರುಗಳನ್ನು ನಿರಂತರವಾಗಿ ನೀಡಿವೆ.  ಈ ಟ್ರೋಲ್‌ಗಳ ದ್ವೇಷಪೂರಿತ ಹಾವಳಿ ಎಷ್ಟಾಗಿದೆ ಎಂದರೆ ಫೇಸ್‌ಬುಕ್ ಸಂಸ್ಥೆ ವಾರ್ತಾಭಾರತಿಯ ಫೇಸ್‌ಬುಕ್ ಅಕೌಂಟಿನ ನ್ಯೂಜ್ ಲಿಂಕ್ ಸೌಲಭ್ಯವನ್ನು ಒಂದು ವಾರದಿಂದಾ ಬ್ಲಾಕ್ ಮಾಡಿಬಿಟ್ಟಿದೆ. ಈ ರೀತಿಯ ದಮನದ ವಿರುದ್ಧವೂ ಸಹ  ಪತ್ರಕರ್ತರ ಹಿತಕಾಯಲು ಹುಟ್ಟಿರುವ, ಪತ್ರಿಕೋದ್ಯಮದ ಹಿತರಕ್ಷಣೆಯ ಹೊಣೆಗಾರಿಕೆ ಹೊತ್ತ ಯಾವ ಸಂಘಗಳೂ ಚಕಾರ ಎತ್ತಲಿಲ್ಲಾ. ಎನ್‌ಡಿಟಿವಿ ಇಂಡಿಯಾದ ಕಾರ್ಯನಿರ್ವಾಹಕ ಸಂಪಾಕದರಾದ ರವೀಶ್ ಕುಮಾರ್‌ರವರು ಈ ಪೇಸ್‌ಬುಕ್ ಬ್ಲಾಕ್ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನವನ್ನು ಪ್ರೆಸ್ ಕ್ಲಬ್ ಆಪ್ ಇಂಡಿಯಾದಲ್ಲಿ ಪ್ರಸ್ತಾಪಿಸಿ ವಿರೋಧಿಸಿದರು. ಈಗ ಅತ್ಯಂತ ಮಹತ್ವದ ಹುದ್ದೆಯಾದ ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್‌ರವರೇ ಪತ್ರಕರ್ತರು ಅಪ್ರೀಯ ಸತ್ಯಗಳನ್ನು ಹೇಳಬಾರದು ಎಂದು ಫರ್ಮಾನು ಹೊರಡಿಸಿದ್ದಾರೆ. ಸರಕಾರದ ಜೊತೆಗೆ ಪ್ರೀತಿಯಿಂದ ಮಾತಾಡಿ ಎಂದು ಕರೆಕೊಟ್ಟಿದ್ದಾರೆ. ಈಗ ಯಾವುದು ಸತ್ಯ ಹಾಗೂ ಯಾವುದು ಅಪ್ರೀಯ ಸತ್ಯ ಎಂಬುದನ್ನು ಸರಕಾರ ನಿರ್ಧರಿಸುತ್ತದೆ. ಇನ್ನು ಈ ಬೆದರಿಕೆಯ ಯೋಜನೆಗಳು ಯಾವುದೇ ಹೆದರಿಕೆ ಇಲ್ಲದೇ ಖುಲಂ ಖುಲ್ಲಾ ನಡೆಯುತ್ತವೆ.. ಎಂದು ಹೇಳಿದ ರವೀಶ್‌ರವರು ಆಳುವವರ ಸರ್ವಾಧಿಕಾರಿ ದಮನವನ್ನು ವಿವರಿಸಿದ್ದಾರೆ. ಈ ಸಾಮಾಜಿಕ ಜಾಲ ತಾಣ ಮಾಧ್ಯಮಗಳು ಅಭಿವ್ಯಕ್ತಿ  ಸ್ವಾತಂತ್ರ್ಯಕ್ಕೆ ಪರ್ಯಾಯ ಮಾರ್ಗವನ್ನು ಕಲ್ಪಿಸಿವೆ. ಅಸಲಿ ವಿಚಾರಗಳು, ಮುಚ್ಚಿಟ್ಟ ಸತ್ಯಗಳು ಲಕ್ಷಾಂತರ ಜನರನ್ನು ತಲುಪಲು ಸಾಧ್ಯವಾಗಿದೆ. ಈ ಮಾರ್ಗಗಳನ್ನೂ ಬಂದ್ ಮಾಡುವ ಹುನ್ನಾರಗಳು ನಡೆಯುತ್ತಿವೆ. ವಾರ್ತಾಭಾರತಿ ಫೇಸ್ ಬುಕ್ ಅಕೌಂಟ್ ಮಾಡಿದ್ದು ಕೇವಲ ಒಂದು ಸ್ಯಾಂಪಲ್ ಮಾತ್ರ. ಇನ್ನು ಮುಂದೆ ಆಳುವವರ ಜನವಿರೋಧಿತನ ಕುರಿತು ಬರೆದು ಜನತೆಯನ್ನು ಜಾಗೃತ ಮಾಡುವ ಎಲ್ಲರ ವಿರುದ್ಧ ಈ ಬ್ಲಾಕಾಸ್ತ್ರ ಪ್ರಯೋಗಗಳು ನಡೆಯುತ್ತವೆ. ಅಘೋಷಿತ ತುರ್ತು ಪರಿಸ್ಥಿತಿ ಯಾವುಯಾವುದೋ ರೂಪದಲ್ಲಿ ದೇಶದಲ್ಲಿ ಜಾರಿಯಲ್ಲಿದೆ. ಇನ್ನೂ ಕರಾಳ ದಿನಗಳು ಮುಂದಿವೆ.

-ಶಶಿಕಾಂತ ಯಡಹಳ್ಳಿ