ಬುಧವಾರ, ಏಪ್ರಿಲ್ 19, 2023

ಗೋರಕ್ಷಣೆಯೆಂಬ ಪ್ರಹಸನ ಮತ್ತು ಗೋತ್ಯಾಜ್ಯ ಸೇವನೆಯ ಅಪಾಯ

ತಹ ತಹ..


ಗೋರಕ್ಷಣೆಯೆಂಬ ಪ್ರಹಸನ ಮತ್ತು  ಗೋತ್ಯಾಜ್ಯ ಸೇವನೆಯ ಅಪಾಯ

‘ಗೋಮಾತೆಯಲ್ಲಿ ಮುಕ್ಕೋಟಿ ದೇವತೆಗಳು ವಾಸಿಸುತ್ತವೆ ಎಂದರು. ಎಲ್ಲಾ ದೇವರೂ ಗೋಮಾತೆಯಲ್ಲೇ ಇದ್ದಿದ್ದೆ ನಿಜವಾದರೆ ದೇವಸ್ಥಾನಗಳಿಗೆ ಯಾಕೆ ಹೋಗಬೇಕು? ಎಂದು ಯಾರೂ ಪ್ರಶ್ನಿಸಲಿಲ್ಲ. ಬರುಡಾದರೂ ಮುದಿಯಾದರೂ ಗೋವು ಪವಿತ್ರ ಯಾರೂ ಮಾರಬಾರದು ಕೊಲ್ಲಬಾರದು ತಿನ್ನಬಾರದು ಎಂದು ಕಾನೂನು ಹೇರಿದರು, ಮುದಿ ಹಸುಗಳನ್ನು ನೀವೇ ಕೊಂಡುಕೊಂಡು ಪರಿಹಾರ ಕೊಡಿ ಎಂದು ಯಾವ ಗೋಪಾಲಕರೂ ಕೇಳಲಿಲ್ಲ. ಗೋಮೂತ್ರದಲ್ಲಿ  ಔಷಧೀಯ ಗುಣಗಳಿವೆ ದಿನವೂ ಸೇವಿಸಿ ಎಂದರು ಜನ ಮರುಪ್ರಶ್ನೆ ಕೇಳದೇ ಕುಡಿದರಾದರೂ ಯಾವುದೇ ರೋಗ ಗುಣವಾಗಲಿಲ್ಲ. ಗೋತ್ಯಾಜ್ಯದಲ್ಲಿ ರೋಗನಿರೋಧಕ ಗುಣವಿದೆ, ಕ್ಯಾನ್ಸರ್ ನಂತಹ ರೋಗಗಳೂ ವಾಸಿಯಾಗುತ್ತವೆ ಎಂದು ನಂಬಿಸಿದರು, ಸಕಲ ಖಾಯಿಲೆಗಳು ವಾಸಿಯಾಗುವುದೇ ನಿಜವಾದಲ್ಲಿ ಆಸ್ಪತ್ರೆಗಳನ್ನೆಲ್ಲಾ ಮುಚ್ಚಿ ಅಲ್ಲಿ ಗೋತ್ಯಾಜ್ಯಗಳ ಅಂಗಡಿಗಳನ್ನು ತೆಗೆಯಿರಿ ಎಂದು ಯಾರೂ ಕೇಳಲೇ ಇಲ್ಲ.

ಯಾಕೆಂದರೆ ಹಾಗೆ ಕೇಳಿದವರನ್ನು ಧರ್ಮದ ಹೆಸರಲ್ಲಿ ಹೆದರಿಸುವವರ ಗುಂಪು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾಗಿತ್ತು. ಗೋರಕ್ಷಣೆಯ ಹೆಸರಲ್ಲಿ ನಕಲಿ ನೈತಿಕ ಪೊಲೀಸರ ಗೂಂಡಾ ಪಡೆಯೇ ಹುಟ್ಟಿಕೊಂಡು ಹಾವಳಿಯನ್ನೆಬ್ಬಿಸಿತು. ಒಟ್ಟಾರೆಯಾಗಿ ನಾಲ್ಕು ಕಾಲಿನ ದನವನ್ನು ದೇವರನ್ನಾಗಿಸಿ ಇಲ್ಲದ ಗುಣಗಳನ್ನು ಆರೋಪಿಸಿದ ಬ್ರಾಹ್ಮಣ್ಯ ತನ್ನ ಆಟ ಶುರುಮಾಡಿಕೊಂಡಿತ್ತು. ಅದಕ್ಕೆ ತಕ್ಕಂತೆ ಹಿಂದುತ್ವವಾದಿ ಪ್ರಭುತ್ವವು ಗೋವಿನ ಹೆಸರಿನಲ್ಲಿ ರಾಜಕೀಯ ಮಾಡುತ್ತಾ ಮತಾಂಧತೆಯನ್ನು ಬಿತ್ತುತ್ತಾ ಹಸುವನ್ನು ಧರ್ಮದ್ವೇಷದ ಸಾಧನವನ್ನಾಗಿಸಿಕೊಂಡಿತು. ಗೋಹತ್ಯಾ ನಿಷೇಧ ಕಾನೂನನ್ನು ಜಾರಿಗೆ ತರುವ ಮೂಲಕ ಮುಸ್ಲಿಂ ಸಮುದಾಯದ ಆದಾಯದ ಮೂಲವನ್ನು ಮೊಟಕುಗೊಳಿಸುವ ಹಾಗೂ ಗೋಮಾಂಸ ರಪ್ತು ಮಾಡುವ ಕಾರ್ಪೋರೇಟ್ ಹಿಂದೂ ಮಾಂಸೋದ್ಯಮಕ್ಕೆ ಲಾಭ ಮಾಡಿಕೊಡಲಾಯ್ತು. ಗೋಸಾಕಣೆ ಮಾಡಿ ಬದುಕುತ್ತಿದ್ದ ಕೊಟ್ಯಾಂತರ ರೈತರಿಗೂ ಸಂಕಷ್ಟವನ್ನುಂಟು ಮಾಡಲಾಯ್ತು. ಗೋರಕ್ಷಕರ ಹಿಂಸೆಗೆ ಹೆದರಿದ ರೈತಾಪಿಜನರು ಗೋಪಾಲನೆ ಮಾಡುವುದನ್ನೇ ಕೈಬಿಟ್ಟಿದ್ದರಿಂದ ಗೋವುಗಳ ಸಂಖ್ಯೆಯೂ ಕ್ಷೀಣಿಸಿ ಕ್ಷೀರ ಕೊರತೆ ಉಂಟಾಗತೊಡಗಿತು.  ರೈತರು ಗೋಸಾಕಣೆಗೆಂದು ಗೋಸಾಗಣೆ ಮಾಡಿದರೂ ಗೋರಕ್ಷಕರ ಗೂಂಡಾಗಿರಿಗೆ ಹೆದರುವಂತಾಯ್ತು. ಅಂತೂ ಇಂತೂ ಗೋವು ಎನ್ನುವ ಪ್ರಾಣಿ ಹಿಂದುತ್ವವಾದಿಗಳ ಅಧಿಕಾರದ ಅಟ್ಟಕ್ಕೆ ಮೆಟ್ಟಲಾಯ್ತು.

ಇದೆಲ್ಲಾ ಗೊತ್ತಿರುವಂತಹುದೇ, ಆದರೆ ಇತ್ತೀಚೆಗೆ ಬಂದ ವರದಿಯೊಂದು ಈ ಗೋಮುಖ ವ್ಯಾಘ್ರಗಳಿಗೆ ಆಘಾತಕಾರಿಯಾಗಿದೆ. ಗೋವಿನ ತ್ಯಾಜ್ಯಗಳನ್ನು ಮೆಡಿಸಿನ್ ಎಂದು ಮಾರ್ಕೆಟ್ ಮಾಡಿ ಜನರನ್ನು ವಂಚಿಸುತ್ತಿದ್ದವರ ಮುಖವಾಡ ಕಳಚಿಬಿದ್ದಂತಾಗಿದೆ. ‘ತಾಜಾ ಗೋಮೂತ್ರದಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾಗಳಿವೆ ಹಾಗೂ ಮಾನವ ಸೇವನೆಗೆ ಅಪಾಯಕಾರಿ’ ಎಂದು ಭಾರತೀಯ ಪಶು ಸಂಶೋಧನಾ ಸಂಸ್ಥೆಯ ಅಧ್ಯಯನ ಹೇಳಿದೆ.

ಹಸು ಮತ್ತು ಹೋರಿಗಳ ಮೂತ್ರದಲ್ಲಿ ಒಂದಲ್ಲಾ ಎರಡಲ್ಲಾ 14ಕ್ಕೂ ಹೆಚ್ಚು ವಿಧದ ಹಾನಿಕಾರಕ ಬ್ಯಾಕ್ಟೀರಿಯಾಗಳಿವೆ ಎಂದು ಮೂತ್ರದ ಮಾದರಿಗಳ ಅಧ್ಯಯನದಿಂದ ಕಂಡುಕೊಳ್ಳಲಾಗಿದೆ. ಮಾನವನ ಉದರದಲ್ಲಿ ಸೋಂಕನ್ನು ಸೃಷ್ಟಿಸಬಹುದಾದ ಎಸ್ಚೇರಿಚಿಯಾ ಕೋಲಿ ಎನ್ನುವ ಅಪಾಯಕಾರಿ ಬ್ಯಾಕ್ಟೀರಿಯಾ ಸಹ ಗೋಮೂತ್ರದಲ್ಲಿರುವುದು ಕಂಡುಬಂದಿದೆಯಂತೆ. ಇಷ್ಟೇ ಅಲ್ಲ ಹಸುಗಳು ಹಾಗೂ ಎಮ್ಮೆಗಳ ಮೂತ್ರದ ಮಾದರಿಯನ್ನು ಅಧ್ಯಯನ ಮಾಡಲಾಗಿದ್ದು ಹಸುಗಳಿಗಿಂತಲೂ ಎಮ್ಮೆಗಳ ಮೂತ್ರದಲ್ಲಿ ಬ್ಯಾಕ್ಟೀರಿಯಾ ನಿರೋಧಕ ಹೆಚ್ಚಿವೆಯಂತೆ.

ಇದು ತಾಜಾ ಮೂತ್ರದ ಮಾತಾಯಿತು. ಶುದ್ಧೀಕರಿಸಿ ಕುಡಿದರೆ ಕಾಯಿಲೆ ವಾಸಿಯಾಗುತ್ತದೆ ಎಂದು ಈ ಗೋವಿನಾರಾಧಕರು ಸಮರ್ಥಿಸಿಕೊಳ್ಳದೇ ಇರಲಾರರು. ಆದರೆ ಶುದ್ದೀಕರಿಸಿದ ಮೂತ್ರದಲ್ಲಿ ಬ್ಯಾಕ್ಟೀರಿಯಾಗಳಿಲ್ಲವೆಂಬುದು ಬಹುತೇಕರ ನಂಬಿಕೆಯಾದರೂ ಅದರ ಬಗ್ಗೆಯೂ ಸಂಶೋಧನೆ ನಡೆಯುತ್ತಿದೆ ಎಂದು ಪಶು ಸಂಶೋಧನಾ ಸಂಸ್ಥೆಯ ಡಾ.ಭೋಜರಾಜ ಸಿಂಗ್ ಹೇಳಿದ್ದಾರೆ. ಐವಿಆರ್ ಐ ಸಂಸ್ಥೆಯ ಮಾಜಿ ನಿರ್ದೇಶಕ ಆರ್.ಎಸ್.ಚೌಹಾಣ್ ರವರು ಈ ಸಂಶೋಧನೆಯನ್ನು ಪ್ರಶ್ನಿಸಿ ಮತ್ತೆ ಗೊಂದಲವನ್ನು ಸೃಷ್ಟಿಸಿದ್ದಾರೆ. ಕ್ಯಾನ್ಸರ್ ಹಾಗೂ ಕೋವಿಡ್ ವಿರುದ್ಧ ಶುದ್ಧೀಕರಿಸಿದ ಗೋಮೂತ್ರ ಸೇವನೆ ಪರಿಣಾಮಕಾರಿ ಎಂದು ಸಮರ್ಥಿಸಿಕೊಂಡಿದ್ದಾರೆ.

ನಮ್ಮದು ತುಂಬಾ ಸರಳವಾದ ಪ್ರಶ್ನೆ. ಕ್ಯಾನ್ಸರ್ ಮತ್ತು ಕೋವಿಡ್ ವೈರಸ್ ಗಳಿಂದಾಗುವ ಜೀವಹಾನಿಯನ್ನು ತಪ್ಪಿಸಲು ಹೆಚ್ಚು ವೆಚ್ಚದಾಯಕ  ಔಷಧೋಪಚಾರಗಳನ್ನು ಮಾಡುವುದಾದರೂ ಯಾಕೆ? ಹಲವಾರು ಡೋಜ್ ಲಸಿಕೆಗಳನ್ನು ಕೊಡುವುದಾದರೂ ಯಾಕೆ? ಗೋಮೂತ್ರ ಸೇವನೆಯಿಂದಲೇ ಮಾರಕ ಕಾಯಿಲೆಗಳು ವಾಸಿಯಾಗುವುದಾದರೆ ಯಾಕೆ ಸರಕಾರ ಗೋಮೂತ್ರವನ್ನೇ ಸಕಲ ಖಾಯಲೆಗಳಿಗೆ ರಾಮಬಾಣವೆಂದು ಘೋಷಿಸಿ ಎಲ್ಲಾ ಊರುಗಳಲ್ಲಿ ಈಗಿರುವ ಶುದ್ಧನೀರಿನ ಘಟಕಗಳ ಹಾಗೆ ಶುದ್ಧ ಗೋಮೂತ್ರ ಘಟಕಗಳನ್ನು ಸ್ಥಾಪಿಸಬಾರದು.

ಸತ್ಯ ಏನೆಂದರೆ ಹಸು ಮಾತ್ರವಲ್ಲ ಯಾವುದೇ ಪ್ರಾಣಿಯ ಮೂತ್ರ ಅಮೇದ್ಯಗಳು ಆಯಾ ಪ್ರಾಣಿಯ ತ್ಯಾಜ್ಯಗಳಷ್ಟೇ. ಅವುಗಳನ್ನು ರೀಸೈಕಲ್ ಮಾಡಿ ಬಳಸುವುದು ಪರಿಣಾಮಕಾರಿಯೇನಲ್ಲ. ಸ್ವಮೂತ್ರಪಾನದಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎನ್ನುವುದಕ್ಕೂ ಯಾವುದೇ ಸಮರ್ಥನೀಯ ಪುರಾವೆಗಳಿಲ್ಲ.  ಭಾರತದ ಪ್ರಧಾನಿಯಾಗಿದ್ದ ಮುರಾರ್ಜಿ ದೇಸಾಯಿಯವರು ಸ್ವಮೂತ್ರ ಸೇವಿಸುತ್ತಿದ್ದರು ಎನ್ನುವ ಕಥೆ ಜಗಜ್ಜನಿತ. ಆದರೆ ತ್ಯಾಜ್ಯವನ್ನು ಸೇವಿಸಿದ್ದರಿಂದಲೇ ಗುಣಮುಖರಾದರು ಎನ್ನುವುದು ಅವರವರ ನಂಬಿಕೆಯ ಸಂಗತಿ. ಯಾಕೆಂದರೆ ಅನಕ್ಷರಸ್ತ ಮುದುಕಿಯೊಬ್ಬಳು ತನಗಾದ ಗಾಯಕ್ಕೆ ಮುಲಾಮೆಂದು ತಿಳಿದು ಟೂತ್ ಪೇಸ್ಟ್ ಹಚ್ಚಿದರೂ ಗಾಯ ವಾಸಿಯಾದಂತೆ ಈ ಮೂತ್ರಪಾನದ ಕಥೆಯೂ ಸಹ.

ಯಾರು ಏನೇ ಹೇಳಲಿ. ಅದೆಷ್ಟೇ ಸಂಶೋಧನೆಗಳಾಗಲಿ. ದೇವರು ಧರ್ಮದ ಹೆಸರಲ್ಲಿ ಮೌಡ್ಯವನ್ನು ಸೃಷ್ಟಿಸುವವರು ಮತ್ತು ಆಚರಿಸುವವರು ಇರುವವರೆಗೂ ಗೋತ್ಯಾಜ್ಯವೂ ರೋಗಬಾಧೆಗೆ ಔಷಧಿಯಾಗಬಲ್ಲುದು. ಸ್ವಮೂತ್ರಪಾನವೂ ರೋಗನಿರೋಧಕತೆ ಹೆಚ್ಚಿಸಬಹುದು. ಆದರೆ ಈ ವಿಕ್ಷಿಪ್ತ ನಂಬಿಕೆಗಳನ್ನು, ವಿಚಿತ್ರ ಪ್ರಚಾರಗಳನ್ನು ನಂಬಿಕೊಂಡು ಗೋತ್ಯಾಜ್ಯವನ್ನು ಸೇವಿಸಿದರೆ ಅಡ್ಡಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ಹಾಗೂ ಹಸುವನ್ನು ದೇವರೆಂದು ಹುಯಿಲೆಬ್ಬಿಸುವ ಪುರೋಹಿತಶಾಹಿ ಮನಸ್ಥಿತಿಯವರ ಮಾತನ್ನು ನಂಬಿ ಗೋಮೂತ್ರಪಾನ ನಿರತರಾದರೆ ಅಪಾಯ ಕಟ್ಟಿಟ್ಟ ಬುತ್ತಿ.

ಸತ್ಯ ಏನೆಂದರೆ ಯಾವುದೇ ಗೋವು ಮಾತೆಯೂ ಅಲ್ಲಾ, ದೇವತೆಯೂ ಅಲ್ಲಾ. ಅದೊಂದು ಪ್ರಾಣಿ ಅಷ್ಟೇ. ಸ್ವತಃ ಯಾವುದೇ ಹಸುವಿಗೂ ಸಹ ತಾನೊಂದು  ಸಕಲ ದೇವರುಗಳಿರುವ ಕಾಂಪ್ಲೆಂಕ್ಸ್ ಎಂದು ಗೊತ್ತಿರುವುದಿಲ್ಲ. ಯಾಕೆ ತನ್ನನ್ನು ಪೂಜಿಸುತ್ತಾರೆ ಎಂಬುದರ ಕುರಿತ ಅರಿವೂ ಆ ಪ್ರಾಣಿಗೆ ಇರಲು ಸಾಧ್ಯವಿಲ್ಲ.

ಈ ಹಿನ್ನೆಲೆಯಲ್ಲಿ ಕೆಲವು ಪ್ರಶ್ನೆಗಳು ಕಾಡುತ್ತಲೇ ಇವೆ.

·         ಭಾರತದ ಗೋವುಗಳು ಮಾತ್ರ ಗೋಮಾತೆಯಾದರೆ ಅನ್ಯ ದೇಶಗಳ ಗೋವುಗಳು ಯಾಕಲ್ಲ.

·         ಪ್ರಪಂಚದ ಯಾವುದೇ ದೇಶಗಳಲ್ಲಿ ಇರದ ಗೋಹತ್ಯಾ ನಿಷೇಧ ಕಾನೂನು ಭಾರತದಲ್ಲಿ ಮಾತ್ರ ಯಾಕೆ?

·         ಗೋಮೂತ್ರದಿಂದ ಕಾಯಿಲೆಗಳು ವಾಸಿಯಾಗುವುದೇ ದಿಟವಾಗಿದ್ದಲ್ಲಿ ದವಾಖಾನೆಗಳು ಹಾಗೂ ವೈದ್ಯರೇಕೆ?

·         ಗೋಮಾತೆಯಲ್ಲಿ ಮೂಕ್ಕೋಟಿ ದೇವತೆಗಳಿರುವುದೇ ನಿಜವಾಗಿದ್ದಲ್ಲಿ ಅಗಣಿತ ದೇವಸ್ಥಾನಗಳೇಕೆ?

·         ಬರಡು ಹಾಗೂ ಮುದಿ ದನಗಳ ಹತ್ಯೆ ನಿಷೇಧವಾದರೆ ಅವುಗಳನ್ನು ಸರಕಾರ ಹಣಕೊಟ್ಟು ಯಾಕೆ ಕೊಳ್ಳುತ್ತಿಲ್ಲ.

·         ಗೋಹತ್ಯೆ ನಿಷೇಧ ಕಾನೂನು ಮಾಡಿದರೂ ಗೋಮಾಂಸ ರಪ್ತು ಉದ್ಯಮದಲ್ಲಿ ಭಾರತ ಮುಂಚೂಣಿಯಲ್ಲಿರುವುದೇಕೆ.

·         ಗೋಸಾಗಣೆಗೆ ಅಡೆತಡೆಮಾಡುವುದರಿಂದ ಗೋಸಾಕಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದಕ್ಕೆ ಪರಿಹಾರ ಏನು?

·         ಮುಸ್ಲಿದ್ವೇಷ ಸಾಧನೆಗೆ ಬಹುಸಂಖ್ಯಾತ ಹಿಂದೂ ಗೋಸಾಕಣೆದಾರರಿಗೆ ಸಂಕಷ್ಟ ತಂದಿದ್ದು ಯಾಕೆ?

·         ಗೋಮಾಂಸ ಸೇವನೆಯ ಕುರಿತು ವೇದಗಳಲ್ಲೇ ಉಲ್ಲೇಖಗಳಿರುವಾಗ ಬ್ರಾಹ್ಮಣವ್ಯಾಧಿಗಳ ವಿರೋಧಯಾಕೆ?

·         ಗೋರಕ್ಷಣೆಯ ಹೆಸರಲ್ಲಿ ಹಲವಾರು ಹಲ್ಲೆ ಹತ್ಯೆ ಪ್ರಾಣಹಾನಿಗಳಾಗಿದ್ದಕ್ಕೆ ಹೊಣೆಗಾರರು ಯಾರು?

ಹೀಗೆ ಪ್ರಶ್ನೆಗಳೇನೋ ಬೇಕಾದಷ್ಟಿವೆ. ಆದರೆ ಉತ್ತರಿಬೇಕಾದವರು ಗೋರಕ್ಷಣೆ ಹೆಸರಲ್ಲಿ ಭಾವಪ್ರಚೋದನೆಯಲ್ಲಿ ನಿರತರಾಗಿದ್ದಾರೆ.

ಶಶಿಕಾಂತ ಯಡಹಳ್ಳಿ

16-4-2023

 


 

 

ಶನಿವಾರ, ಏಪ್ರಿಲ್ 15, 2023

ಅಂಬೇಡ್ಕರ್ ಮತ್ತು ಚುನಾವಣೆ ವ್ಯವಸ್ಥೆ

 

ತಹ ತಹ

ಅಂಬೇಡ್ಕರ್ ಮತ್ತು ಚುನಾವಣೆ ವ್ಯವಸ್ಥೆ

ಬಂಡವಾಳಶಾಹಿ  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಎನ್ನುವುದು ಉಳ್ಳವರ ಮೇಲ್ವರ್ಗದವರ ಹಣಬಲ ಜಾತಿಬಲ ತೋಳ್ಬಲ ಇದ್ದವರ ಆಡಂಬೋಲವಾಗಿದೆ ಎಂಬುದು ಬಹಿರಂಗ ಸತ್ಯ. ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ರವರಂತಹ ಮಹಾನ್ ಮಾನವತಾವಾದಿಯವರೂ ಸಹ ಈ ಚುನಾವಣಾ ವ್ಯವಸ್ಥೆಯಲ್ಲಿ ಸೋಲನ್ನು ಅನುಭವಿಸಿದ್ದು ಮಹಾ ವಿಪರ್ಯಾಸ.

ಅಂಬೇಡ್ಕರ್ ರವರು ಮೊದಲ ಸಲ ಚುನಾವಣೆಗೆ ಸ್ಪರ್ಧಿಸಿದ್ದು 1952 ರಲ್ಲಿ ಉತ್ತರ ಮುಂಬಯಿ ಮೀಸಲು ಕ್ಷೇತ್ರದಿಂದ.ಅಖಿಲ ಭಾರತ ಪರಿಶಿಷ್ಟ ಜಾತಿ ಒಕ್ಕೂಟದ ಅಭ್ಯರ್ಥಿಯಾಗಿ. (ನಂತರ ಈ ಒಕ್ಕೂಟವು ರೀಪಬ್ಲಿಕನ್ ಪಾರ್ಟಿ ಆಪ್ ಇಂಡಿಯಾ ಆಯಿತು.) ಆಗ ಅಂಬೇಡ್ಕರ್ ರವರಿಗೆ ಅವಿರೋಧವಾಗಿ ಆಯ್ಕೆಯಾಗಬಹುದೆಂಬ ನಿರೀಕ್ಷೆ ಇತ್ತು. ಆದರೆ.. ಅಂಬೇಡ್ಕರ್ ರವರನ್ನು ಸೋಲಿಸಲೇಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ಪಕ್ಷವು  ನಾರಾಯಣ ಕಾಜರೋಳ್ಕರ್ ಎನ್ನುವವರನ್ನು ಸ್ಪರ್ಧೆಗೆ ಇಳಿಸಿತು. ಹಿಂದುಳಿದ ವರ್ಗದ ಈ ನಾರಾಯಣ್  ಅಂಬೇಡ್ಕರ್ ರವರಿಗೆ ಸಹಾಯಕರಾಗಿದ್ದವರು. ಅವರನ್ನೇ ಎತ್ತಿಕಟ್ಟಿದ ಕಾಂಗ್ರೆಸ್ ನವರು ಅಂಬೇಡ್ಕರ್ ವಿರುದ್ದವೇ ಸ್ಪರ್ಧಿಸುವಂತೆ ಮಾಡಿದ್ದರು. ಬಾಬಾಸಾಹೇಬರ ವಿರುದ್ಧ ಮೇಲ್ಜಾತಿ ಉಳಿಗಮಾನ್ಯ ಶಕ್ತಿಗಳು ಒಂದಾದವು. ಅಂಬೇಡ್ಕರ್ ರವರ ವಿರುದ್ಧ ಕಾಂಗ್ರೆಸ್, ಕಮ್ಯೂನಿಸ್ಟ್ ಪಕ್ಷ ಹಾಗೂ ಹಿಂದೂ ಮಹಾಸಭಾದವರೆಲ್ಲಾ ಒಟ್ಟಾಗಿ ಅಂಬೇಡ್ಕರ್ ರವರ ವಿರುದ್ಧ ಅಬ್ಯರ್ಥಿಗಳನ್ನು ಹಾಕಿ ಮತವಿಭಜನೆ ತಂತ್ರ ಹೂಡಿದರು. ಆಗಿನ ಕಾಲದಲ್ಲೆ ಮತದಾರರಿಗೆ ಹಣ ಹಂಚಿದರು, ಪರಿಶಿಷ್ಟ ಜಾತಿ ಪಂಗಡಗಳ ನಡುವೆಯೇ ದ್ವೇಷದ ಬೀಜ ಬಿತ್ತಿದರು. ಅಶೋಕ ಮೆಹತಾ ನೇತೃತ್ವದ ಸಮಾಜವಾದಿಗಳು ಮಾತ್ರ ಚುನಾವಣೆಯಲ್ಲಿ ಅಂಬೇಡ್ಕರ್ ರವರನ್ನು ಬೆಂಬಲಿಸಿದ್ದರು.

ಚುನಾವಣೆಯಲ್ಲಿ ಅಂಬೇಡ್ಕರ್ ವಿರುದ್ದ ತೀವ್ರವಾಗಿ ಪ್ರಚಾರ ಮಾಡಿದವರು ಸಿಪಿಐ ಪಕ್ಷದ ಎಸ್.ಐ. ಡಾಂಗೆ. ಕಮ್ಯೂನಿಸ್ಟ್ ಪಕ್ಷ ಮಾಡಿದ ಈ ಅವಗಡದಿಂದಾಗಿ ಅಂದಿನಿಂದ ಇಂದಿನವರೆಗೂ ಮಹಾರಾಷ್ಟ್ರದಲ್ಲಿ ದಲಿತ ಹಾಗೂ ಕಮ್ಯೂನಿಸ್ಟರ್ ನಡುವಿನ ಅಸಹನೆ ಕಡಿಮೆಯಾಗಿಲ್ಲ. ಎಲ್ಲಾ ಶಕ್ತಿಗಳೂ ಸೇರಿ ಚುನಾವಣೆಯಲ್ಲಿ ಅಂಬೇಡ್ಕರ್ ರವರನ್ನು ಹೀನಾಯವಾಗಿ ಸೋಲಿಸಿದರು. ಕಾಜರೋಳ್ಕರ್ ಹದಿನೈದು ಸಾವಿರ ಮತಗಳಿಂದ ಗೆದ್ದರು. ಬಾಬಾಸಾಹೇಬರು ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಸ್ವತಂತ್ರ ಭಾರತದ ಮೊದಲ ಸಾರ್ವತ್ರಿಕ  ಚುನಾವಣೆಯಾಗಿದ್ದರಿಂದ  ಮತದಾರರಿಗೆ ಮತದಾನದ ಬಗ್ಗೆ ತಿಳುವಳಿಕೆಯ ಕೊರತೆಯೂ ಇದ್ದಿದ್ದರಿಂದ ಐವತ್ತು ಸಾವಿರದಷ್ಟು ಮತಗಳು ತಿರಸ್ಕೃತಗೊಂಡಿದ್ದವು. ಸರಿಯಾಗಿ ಮತ ಚಲಾವಣೆಗಳಾಗಿದ್ದರೆ ಅಂಬೇಡ್ಕರ್ ರವರು ಗೆಲ್ಲುವ ಸಾಧ್ಯತೆಯೇ ಹೆಚ್ಚಿತ್ತು.  ಈ ಹಿನ್ನೆಡೆ ಅಂಬೇಡ್ಕರ್ ರವರಿಗೆ ಘಾಸಿಯನ್ನುಂಟು ಮಾಡಿತು. ಆಳುವ ವರ್ಗಗಳು ಅದು ಹೇಗೆ ದಲಿತ ವರ್ಗದವರನ್ನೇ ಒಡೆದು ತಮ್ಮ ಹಿತಾಸಕ್ತಿಗೆ ಪೂರಕವಾಗಿರುವವರನ್ನು ಆಯ್ಕೆಯಾಗುವಂತೆ ಮಾಡುತ್ತವೆ ಎಂಬ ಸತ್ಯ ಅರಿವಿಗೆ ಬಂತು.

ಈ ಚುನಾವಣೆಯಲ್ಲಿ ಸೋತ ನಂತರ ಅಂಬೇಡ್ಕರ್ ರವರು ಚಾರಿತ್ರಿಕ ಭಾಷಣ ಮಾಡಿದರು. “ಹೌದು ನಾವು ಮಾರಾಟಕ್ಕೆ ಸಿದ್ದರಿಲ್ಲವಾದ್ದರಿಂದ ಸೋತಿದ್ದೇವೆ . ಪಕ್ಷಾಂತರ ಮಾಡಲಾರದ ನಾವು ಮುಂದೆಯೂ ಸೋಲುತ್ತೇವೆ. ಗೆಲ್ಲುವುದಷ್ಟೇ ನಮ್ಮ ಆದ್ಯತೆಯಲ್ಲ. ನಾವು ನಮ್ಮ ತತ್ವ ಆದರ್ಶಕ್ಕೆ ಬದ್ದರಾದವರು, ಉತ್ತಮ ಮೌಲ್ಯ ಮತ್ತು ಅರಿವಿಗಾಗಿ ಹೋರಾಡೋಣ” ಎಂದು ಕರೆಕೊಟ್ಟರು.

ಹಣಬಲ ಜಾತಿಬಲ ಹಾಗೂ ತೋಳ್ಬಲಗಳಿಂದ ಉಳ್ಳವರೇ ಚುನಾವಣೆಗಳಲ್ಲಿ ನಿರಂತರವಾಗಿ ಆಯ್ಕೆಯಾಗಿ ದೇಶದ ನೀತಿ ನಿರೂಪಣೆ ತೀರ್ಮಾನ ಮಾಡುವ ಆಡಳಿತದ ಕೇಂದ್ರದಲ್ಲಿ  ಹಿಂದುಳಿದವರು ಹಾಗೂ ದಲಿತರಿಗೆ ಸೂಕ್ತ ಪ್ರಾತಿನಿದ್ಯ ಸಿಕ್ಕಲಾರದು ಎಂಬುದನ್ನು ಮನಗಂಡ ಅಂಬೇಡ್ಕರ್ ರವರು 1927 ರಲ್ಲಿ ದಲಿತರಿಗೆ ಪ್ರತ್ಯೇಕ ಪ್ರಾತಿನಿಧ್ಯಕ್ಕಾಗಿ ಒತ್ತಾಯಿಸಿದರು. ತಳ ಕೆಳ ಸಮುದಾಯದ ದಲಿತರು ಎರಡು ಮತಗಳನ್ನು ಹಾಕುವ ವ್ಯವಸ್ಥೆ ಜಾರಿಗೆ ಬರಬೇಕೆಂಧೂ ಹೋರಾಡಿದರು. ಇದರಿಂದಾಗಿ ಮೇಲ್ವರ್ಗದವರು ಬೆಚ್ಚಿ ಬಿದ್ದರು. ಅಂಬೇಡ್ಕರ್ ರವರ ನ್ಯಾಯಯುತ ಬೇಡಿಕೆಯನ್ನು ಎಲ್ಲಿ ಬ್ರೀಟೀಷರು ಜಾರಿಗೆ ತರುತ್ತಾರೋ ಎಂದು ಆತಂಕಗೊಂಡರು. ಆಗಲೇ ಮಹಾತ್ಮಾ ಗಾಂಧೀಜಿ ಈ ಬೇಡಿಕೆಯ ವಿರುದ್ಧ ಅಮರಣಾಂತ ಉಪವಾಸ ಕೈಗೊಂಡರು. ಗಾಂಧೀಜಿಯವರ ಪ್ರಾಣವನ್ನು ಉಳಿಸಿ ಎಂದು ಅನೇಕರು ಅಂಬೇಡ್ಕರರ ಮೇಲೆ ಭಾವನಾತ್ಮಕವಾದ ಒತ್ತಡವನ್ನು ಹಾಕತೊಡಗಿದರು. ಎಲ್ಲಿ ಗಾಂಧೀಜಿಯವರು ತೀರಿಕೊಂಡು ಸ್ವಾತಂತ್ರ್ಯ ಚಳುವಳಿಕೆ ಹಿನ್ನಡೆಯಾಗುತ್ತದೋ ಎಂದು ಆತಂಕಗೊಡ ಅಂಬೇಡ್ಕರರವರು ಒಲ್ಲದ ಮನಸ್ಸಿನಿಂದ 1932 ರಲ್ಲಿ ಪೂನಾ ಒಪ್ಪಂದಕ್ಕೆ ಸಹಿ ಹಾಕಿ ದಲಿತರ ಪ್ರತ್ಯೇಕ ಪ್ರಾತಿನಿಧ್ಯದ ಬೇಡಿಕೆಯಿಂದ ಹಿಂದೆ ಸರಿದರು. ಮೇಲ್ವರ್ಗದವರ ಕೈ ಮೇಲಾಯಿತು.

ತದನಂತರ 1954 ರಲ್ಲಿ ವಿದರ್ಭ ಭಂಡಾರ ಲೋಕಸಭಾ ಮೀಸಲು ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲೂ ಬಾಬಾಸಾಹೇಬರು ಸ್ಪರ್ಧಿಸಿದರು. ಆಗಲೂ ಸಹ ಈ ಮೇಲ್ವರ್ಗದವರ ಕುತಂತ್ರ ಹಾಗೂ ಕಾಂಗ್ರೆಸ್ ಕಮ್ಯೂನಿಸ್ಟ್ ಪಕ್ಷಗಳ ತಂತ್ರಗಾರಿಕೆಯಿಂದಾಗಿ ಮೂರು ಸಾವಿರ ಮತಗಳಲ್ಲಿ ಅಂಬೇಡ್ಕರ್ ರವರು ಸೋತರು. ಅಂಬೇಡ್ಕರ್ ರವರ ಈ ಸೋಲುಗಳಿಗೆ ನಿಜವಾದ ಕಾರಣ ಜಾತೀಯತೆ ಮತ್ತು ಉಳಿಗಮಾನ್ಯ ವ್ಯವಸ್ಥೆಯಾಗಿತ್ತು. ಜಾತಿವ್ಯವಸ್ಥೆ ನಾಶವಾಗಬೇಕು, ಆರ್ಥಿಕ ಅಸಮಾನತೆ ತೊಲಗಬೇಕು, ದಲಿತರಿಗೂ ಭೂಮಿಯ ಒಡೆತನ ದೊರೆಯಬೇಕು, ಇದಕ್ಕೆ ಪೂರಕವಾಗಿ ಕಾನೂನುಗಳು ರೂಪಗೊಳ್ಳಬೇಕು ಎಂದು ಪ್ರತಿಪಾದಿಸುತ್ತಿದ್ದ ಅಂಬೇಡ್ಕರ್ ರವರನ್ನು ಭೂಮಾಲೀಕರುಗಳೂ, ಮೇಲ್ಜಾತಿಯವರು ಒಪ್ಪಿಕೊಳ್ಳಲು ಸಾಧ್ಯವೇ ಇರಲಿಲ್ಲ. 1950 ಜನವರಿ 26 ರಂದು ಜಾರಿಗೆ ಬಂದ ಭಾರತದ ಸಂವಿಧಾನದಲ್ಲಿ ಸಮಾನತೆಯ ಅಂಶಗಳನ್ನು ಕಟ್ಟಿಕೊಟ್ಟ ಅಂಬೇಡ್ಕರ್ ರವರು ಜಾತಿ ಮತ ವರ್ಗ ತಾರತಮ್ಯವನ್ನು ಕಾನೂನಾತ್ಮಕವಾಗಿ ಬಹಿಷ್ಕರಿಸಿದ್ದರು. ಇದೂ ಕೂಡಾ ಈ ಮೇಲ್ಜಾತಿ ವರ್ಗದವರ ಅಸಮಾಧಾನಕ್ಕೆ ಕಾರಣವಾಗಿತ್ತು. ಎಲ್ಲಿ ಅಂಬೇಡ್ಕರರವರು ಚುನಾವಣೆಯಲ್ಲಿ ಗೆದ್ದು ಸಂಸತ್ತಿಗೆ ಬಂದರೆ ತಮ್ಮ ಅಸ್ತಿತ್ವಕ್ಕೆ ದಕ್ಕೆ ಬರುತ್ತದೋ ಎಂದು ಆತಂಕಗೊಂಡು ಚುನಾವಣೆಯಲ್ಲಿ ಗೆಲ್ಲದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು.

ಆದರೆ.. ಅಂಗೈಯನ್ನು ಅಡ್ಡಹಿಡಿದು ಸೂರ್ಯಕಾಂತಿ ತಡೆಯಬಹುದೇ? ಚುನಾವಣಾ ಸೋಲಿನಿಂದ ಅಂಬೇಡ್ಕರ್ ರವರು ಹತಾಶರಾಗಲಿಲ್ಲ. ದೀನ ದಲಿತ ದಮನಿತರ ಪರವಾದ ಹೋರಾಟಗಳನ್ನು ಕೈಬಿಡಲಿಲ್ಲ. ಸಮಸಮಾಜ ಕಟ್ಟುವ ನಿಟ್ಟಿನಲ್ಲಿ ವಿರಮಿಸಲಿಲ್ಲ. ಮೇಲ್ವರ್ಗದವರು ಒಡ್ಡಿದ ಅಡೆತಡೆಗಳಿಗೆ ಬಗ್ಗಲಿಲ್ಲ. ತಮ್ಮ ಪತ್ರಿಕೆ, ಲೇಖನ, ಭಾಷಣ ಮತ್ತು ಹೋರಾಟಗಳ ಮೂಲಕ ಜನಜಾಗೃತಿ ಮಾಡುವುದನ್ನು ಬಿಡಲಿಲ್ಲ. ಏನೇ ಆದರೂ ಈ ಜಾತಿವಾದಿ ವ್ಯವಸ್ಥೆಯ ಕಿರುಕುಳ ತಪ್ಪಲಿಲ್ಲ. ಕೊನೆಗೆ ಅಸಮಾನತೆಯ ಕೂಪವಾದ ಹಿಂದೂ ಧರ್ಮವನ್ನೇ ತ್ಯಜಿಸಿದ ಬಾಬಾಸಾಹೇಬರು 1956 ಅಕ್ಟೋಬರ್ 14 ರಂದು ಸಂಘ ಪರಿವಾರದ ಶಕ್ತಿ ಕೇಂದ್ರವಾದ ನಾಗಪುರದಲ್ಲಿ ತಮ್ಮ ಲಕ್ಷಾಂತರ ಅನುಯಾಯಿಗಳಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಂಡು ಹಿಂದೂ ಧರ್ಮೀಯ ಮೇಲ್ಜಾತಿ ವರ್ಗಕ್ಕೆ ಮರ್ಮಾಘಾತವನ್ನುಂಟು ಮಾಡಿದರು.

ಭಾರತದ ಭಾಗ್ಯ ವಿಧಾತರಾದ ಅಂಬೇಡ್ಕರ್ ರವರು ಬೌತಿಕವಾಗಿ ಇಲ್ಲವಾಗಿರಬಹುದು. ಆದರೆ ಅವರು ಬಿಟ್ಟು ಹೋದ ಸಮಾನತೆ ಸಹೋದರತ್ವ ಸಿದ್ದಂತಗಳು ಇಂದಿನವರಿಗೆ ಮಾರ್ಗದರ್ಶಕವಾಗಿವೆ. ಅವರು ಕೊಟ್ಟು ಹೋದ ಸಂವಿಧಾನವು ಭಾರತೀಯರಿಗೆಲ್ಲಾ ಧರ್ಮಗ್ರಂಥವಾಗಿವೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಚುನಾವಣಾ ವ್ಯವಸ್ಥೆ ಪ್ರಾಮಾಣಿಕವಾಗಿರಲಂತೂ ಸಾಧ್ಯವೇ ಇಲ್ಲ. ಆದರೆ ಅಂಬೇಡ್ಕರ್ ರವರು ಪ್ರತಿಪಾದಿಸಿದ ಮೌಲ್ಯಗಳು, ತತ್ವಗಳನ್ನು ಅಳವಡಿಸಿಕೊಳ್ಳಬೇಕಿದೆ. ಸಂವಿಧಾನವನ್ನು ಉಳಿಸಿಕೊಳ್ಳಬೇಕಿದೆ. ಜೈ ಭೀಮ್

-ಶಶಿಕಾಂತ ಯಡಹಳ್ಳಿ

14-04-2023

 

 

ಪುಲ್ವಾಮಾ ದಾಳಿಯ ಹಿಂದಿರುವ ಸತ್ಯವೂ ಹಾಗೂ ಸತ್ಯಪಾಲರ ಸತ್ಯ ನಿವೇದನೆಯೂ..

 


ತಹ ತಹ..

ಪುಲ್ವಾಮಾ ದಾಳಿಯ ಹಿಂದಿರುವ ಸತ್ಯವೂ ಹಾಗೂ ಸತ್ಯಪಾಲರ ಸತ್ಯ ನಿವೇದನೆಯೂ..

ಸತ್ಯ ಎನ್ನುವುದು ನಿಗಿನಿಗಿ ಉರಿವ ಕೆಂಡದ ಹಾಗೆ. ಅದರ ಮೇಲೆ ಅದೆಷ್ಟೇ ಸುಳ್ಳಿನ ಬೂದಿ ಮುಚ್ಚಿದರೇನು ಯಾರಾದರೂ ಬಲವಾದ  ಗಾಳಿ ಬೀಸಿದರೆ ಬೂದಿ ಹಾರಿ ಬೆಂಕಿ ಬೆಳಗುವುದು ನಿಶ್ಚಿತ. ಈಗ ಆಗಿದ್ದೂ ಸಹ ಹಾಗೇನೇ..

2019 ಲೋಕಸಭೆಯ ಚುನಾವಣಾ ವರ್ಷ. ಚುನಾವಣೆ ಇನ್ನೇನು ಕೇವಲ ಮೂರು ತಿಂಗಳು ಬಾಕಿ ಇದೆ (ಮೇ 2019) ಎನ್ನುವಾಗ ಒಂದು ಮಹತ್ವದ ದುರಂತ ಘಟನೆ ನಡೆದು ಇಡೀ ದೇಶವನ್ನೇ ತಲ್ಲಣಗೊಳಿಸಿತು. ಅದು ಪುಲ್ವಾಮಾದಲ್ಲಿ ಯೋಧರ ಮೇಲೆ ನಡೆದ ಭಯೋತ್ಪಾದಕ ದಾಳಿ. ಫೆಬ್ರವರಿ 14, 2019 ರಂದು, ಜಮ್ಮುವಿನ  ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ, ಭದ್ರತಾ ಸಿಬ್ಬಂದಿಯನ್ನು ಸಾಗಿಸುವ ವಾಹನಕ್ಕೆ ಪುಲ್ವಾಮಾ ಜಿಲ್ಲೆಯ ಲೆಥ್ಪೊರದಲ್ಲಿ (ಅವಾಂತಿಪೋರಾ ಬಳಿ) ಆತ್ಮಹತ್ಯಾ ಬಾಂಬರ್ ವಾಹನದಿಂದ ದಾಳಿ ಮಾಡಲಾಯಿತು. ದಾಳಿಯಿಂದಾಗಿ ಕೇಂದ್ರ ಮೀಸಲು ಪಡೆಯ  40 ಮಂದಿ ಯೋಧರು ಹತರಾದರು. ಇದಕ್ಕೆ ಪ್ರತಿಯಾಗಿ ಭಾರತದ ವಾಯುಪಡೆಯ ಯೋಧರು ಪಾಕಿಸ್ಥಾನದ ಬಾರಾಕೋಟ್ ನಲ್ಲಿ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿ 250 ಉಗ್ರಗಾಮಿಗಳನ್ನು ಕೊಂದು ಹಾಕಿದರು. ಅದಕ್ಕೆ ಸರ್ಜಿಕಲ್ ಸ್ಟ್ರೈಕ್ ಎಂದು ಹೆಸರಿಸಿದ ಬಿಜೆಪಿಗರು ಇಡೀ ದೇಶಾದ್ಯಂತ ದೇಶಭಕ್ತಿಯ ಅಲೆಯನ್ನೇ ಸೃಷ್ಟಿಸಿ ಸಂಚಲನವನ್ನುಂಟು ಮಾಡಿದರು.

ಈ ಸೋ ಕಾಲ್ಡ್ ಸರ್ಜಿಕಲ್ ಸ್ಟ್ರೈಕ್ ಅನ್ನು ಪಾಕಿಸ್ತಾನ ಅಲ್ಲಗಳೆಯಿತು. ವಿರೋಧ ಪಕ್ಷದವರು ತಕರಾರೆತ್ತಿ ಸಾಕ್ಷಿ ಕೇಳಿದರು. ಪುಲ್ವಾಮಾ ಘಟನೆಯ ಹಿಂದಿರುವ ಹಿಕ್ಮತ್ತನ್ನು ಪ್ರಶ್ನಿಸಿದರು. ಆದರೆ ಕೇಂದ್ರ ಸರಕಾರವು ಸಾಕ್ಷಿ ಕೇಳಿದವರ ವಿರುದ್ಧವೇ ದೇಶದ್ರೋಹಿಗಳು ಎನ್ನುವ ಆರೋಪ ಹೊರೆಸಿತು. ನಮ್ಮ ಯೋಧರ ಸಾವನ್ನು ಅಪಮಾನಿಸಾಗುತ್ತದೆ, ಶೌರ್ಯವನ್ನು ಕಡೆಗಣಿಸಲಾಗುತ್ತದೆ ಎಂದು ವ್ಯಾಪಕವಾಗಿ ಹೇಳುವ ಮೂಲಕ ದೇಶಭಕ್ತಿಯ ಸಮೂಹ ಸನ್ನಿ ಹುಟ್ಟಿಸಲಾಯಿತು. ಹಿಂದೆ ಹಲವಾರು ಸಲ ಸರ್ಜಿಕಲ್ ಸ್ಟ್ರೈಕ್ ಗಳು ನಡೆದರೂ ಅದು ಮಿಲಿಟರಿ ಕಾರ್ಯಾಚರಣೆಗಳಾಗಿದ್ದವೇ ಹೊರತು ಪ್ರಚಾರದ ಸರಕಾಗಿರಲಿಲ್ಲ. ಆದರೆ ಪುಲ್ವಾಮಾ ದಾಳಿ ಹಾಗೂ ಬಾರಾಕೋಟ್ ಸರ್ಜಿಕಲ್ ಸ್ಟ್ರೈಕ್ ನ್ನು ಚುನಾವಣಾ ಪ್ರಚಾರದ ಸರಕನ್ನಾಗಿ ಬಳಸಿಕೊಂಡ ಬಿಜೆಪಿ  ಮೂರು ತಿಂಗಳ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಭಾರೀ ಬಹುಮತವನ್ನು ಗೆದ್ದುಕೊಂಡಿತು.

ಆದರೆ… ಗೋದಿ ಮೀಡಿಯಾಗಳು ಅದೆಷ್ಟೇ ಉತ್ಪ್ರೇಕ್ಷೆ ಮಾಡಿ ಹೇಳಿದರೂ ಪುಲ್ವಾಮಾ ದಾಳಿ ಹಾಗೂ ಸರ್ಜಿಕಲ್ ಸ್ಟ್ರೈಕ್ ಕುರಿತ ಅನುಮಾನಗಳು ಹಾಗೆಯೇ ಉಳಿದುಕೊಂಡವು. ಸಂದೇಹ ವ್ಯಕ್ತಪಡಿಸಿದವರ ಬಾಯಿ ಮುಚ್ಚಿಸಲು ಮೋದಿ ಹಾಗೂ ಅವರ ಸಮರ್ಥಕರು ಅದೆಷ್ಟೇ ಪ್ರಯತ್ನಿಸಿದರೂ ಯಾಕೋ ಸ್ಪಷ್ಟ ಚಿತ್ರಣ ಸಿಕ್ಕಿರಲಿಲ್ಲ. ಆದರೆ ನಿನ್ನೆ ಎಪ್ರಿಲ್ 14 ರಂದು ಯಾವಾಗ ಜಮ್ಮು ಕಾಶ್ಮೀರದ ಕೊನೆಯ ರಾಜ್ಯಪಾಲರಾಗಿದ್ದ ಸತ್ಯಪಾಲ್ ಮಲಿಕ್ ರವರು ದಿ ವೈರ್ ಸುದ್ದಿ ಜಾಲತಾಣದಲ್ಲಿ ನಡೆದ ಸಂದರ್ಶನದಲ್ಲಿ ಕೆಲವೊಂದು ಸತ್ಯಗಳನ್ನು ಬಾಯಿಬಿಟ್ಟರೋ ಆಗ ಗೋದಿ ಮೀಡಿಯಾ ಮತ್ತು ಮೋದಿ ಮೇನಿಯಾಪೀಡಿತರ ಬಾಯಿ ಕಟ್ಟಿತು. ಮಲಿಕ್ ರವರು ಹೇಳಿದ್ದೇನೆಂದರೆ..

“ಪ್ರಧಾನಿಗೆ ಕಾಶ್ಮೀರದ ಬಗ್ಗೆ ಸರಿಯಾದ ತಿಳುವಳಿಕೆಯಿಲ್ಲ ಮತ್ತು ಅವರು ಅಜ್ಞಾನಿಯಾಗಿದ್ದಾರೆ. ಪುಲ್ವಾಮಾದಲ್ಲಿ ಯೋಧರ ಮೇಲೆ ವಿನಾಶಕಾರಿ ಭಯೋತ್ಪಾದಕ ದಾಳಿಗೆ ಕಾರಣವಾಗಿದ್ದ ಕೇಂದ್ರ ಗೃಹ ಸಚಿವಾಲಯದ ಲೋಪಗಳ ಬಗ್ಗೆ ಮಾತನಾಡದಂತೆ ಅವರು ನನಗೆ ಸೂಚಿಸಿದ್ದರು. ಕೇಂದ್ರ ಮೀಸಲು ಪಡೆಯ ವಾಹನಗಳ ಮೇಲಿನ ದಾಳಿಯು ಭಾರತೀಯ ವ್ಯವಸ್ಥೆಯ, ವಿಶೇಷವಾಗಿ ಗೃಹ ಸಚಿವಾಲಯದ  ಅದಕ್ಷತೆ ಮತ್ತು ಬೇಜವಾಬ್ದಾರಿಯ ಫಲಶೃತಿಯಾಗಿತ್ತು. ಸಿಆರ್ಪಿಎಫ್ ತನ್ನ ಪಡೆಗಳನ್ನು ಸಾಗಿಸಲು ವಿಮಾನವನ್ನು ಕೋರಿತ್ತು ಆದರೆ ಗೃಹಸಚಿವಾಲಯವು ಅದನ್ನು ನಿರಾಕರಿಸಿತ್ತು. ವಾಹನಗಳು ಸಾಗಬೇಕಿದ್ದ ಮಾರ್ಗದ ಭದ್ರತಾ ಪರಿಶೀಲನೆಯನ್ನೂ ಸರಿಯಾಗಿ ಮಾಡಲಾಗಿರಲಿಲ್ಲ. ಪುಲ್ವಾಮಾ ದಾಳಿಯ ಬೆನ್ನಲ್ಲೇ ಮೋದಿಯವರು ನನಗೆ ಕರೆ ಮಾಡಿದಾಗ ಈ ಎಲ್ಲಾ ಲೋಪಗಳನ್ನು ತಾನು ನೇರವಾಗಿ ಎತ್ತಿದ್ದೆ. ಆದರೆ ಈ ಕುರಿತು ಸುಮ್ಮನಿರುವಂತೆ ಹಾಗೂ ಯಾರಿಗೂ ತಿಳಿಸದಂತೆ ಪ್ರಧಾನಿಯವರು ನನಗೆ ಸೂಚಿಸಿದ್ದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸಹ ನನಗೆ ಇದೇ ಸೂಚನೆ ನೀಡಿದ್ದರು. ದಾಳಿಯ ಆರೋಪವನ್ನು ಪಾಕಿಸ್ತಾನದ ಮೇಲೆ ಹೊರಿಸುವುದು ಹಾಗೂ ಸರಕಾರ ಮತ್ತು ಬಿಜೆಪಿಗೆ ಚುನಾವಣಾ ಲಾಭಗಳನ್ನು ಪಡೆಯುವುದು ಅವರ ಉದ್ದೇಶವಾಗಿದೆ ಎನ್ನುವುದು ನನಗೆ ತಕ್ಷಣಕ್ಕೆ ಅರ್ಥವಾಗಿತ್ತು.”

ಇದು ಸತ್ಯಪಾಲ್ ಮಲ್ಲಿಕ್ ರವರ ಸಂದರ್ಶನದ ಸಾರ..   ಹಾಗಾದರೆ ಪುಲ್ವಾಮಾ ದುರಂತ ಕೇಂದ್ರ ಸರಕಾರದ ಗೃಹ ಇಲಾಖೆಯ ಪೂರ್ವಯೋಜಿತ ಕೃತ್ಯವಾ? ಅಥವಾ ತಮ್ಮದೇ ಬೇಜವಾಬ್ದಾರಿಯಿಂದಾದ ಪರಿಸ್ಥಿತಿಯ ಲಾಭವನ್ನು ಪಡೆದು ದೇಶದ ಜನರನ್ನು ಭಾವಪ್ರಚೋದನೆಗೆ ಒಳಪಡಿಸಲು ನರೇಂದ್ರ ಮೋದಿ ಮತ್ತು ಅಜಿತ್ ದೋವಲ್  ಹಾಗೂ ಗೃಹಮಂತ್ರಿ ರಾಜನಾಥಸಿಂಗ್ ರವರು ಹೀಗೊಂದು ವ್ಯವಸ್ಥಿತ ಯೋಜನೆ ರೂಪಿಸಿದ್ರಾ? ಗುಪ್ತಚರ ಇಲಾಖೆಯ ಬಹುದೊಡ್ಡ ವೈಫಲ್ಯವಾ? ಭಯೋತ್ಪಾದಕ ಪೀಡಿತ ಪ್ರದೇಶವೆಂದು ಗೊತ್ತಿದ್ದೂ ಸಿಆರ್ಪಿಎಪ್ ವಾಹನಗಳು ಚಲಿಸುವ ಮಾರ್ಗವನ್ನು ಪರಿಶೀಲಿಸದೇ, ಸೂಕ್ತ ರಕ್ಷಣೆಯನ್ನೂ ಕಲ್ಪಿಸದೇ ಕೇಂದ್ರ ಗೃಹ ಸಚಿವಾಲಯವು 40 ಯೋಧರ ಸಾವಿಗೆ ಕಾರಣವಾಯ್ತಾ? ಅವಕಾಶವಾದಿ ರಾಜನೀತಿಯ ಬೇಜವಾಬ್ದಾರಿತನದಿಂದ ಹತರಾದ ಯೋಧರ ಕುಟುಂಬಗಳ ಗತಿ ಏನು? ಗೃಹಸಚಿವಾಲಯ ಮತ್ತು ಬೇಹುಗಾರಿಕಾ ವಿಭಾಗದ ವೈಫಲ್ಯಗಳನ್ನು ಮರೆಮಾಚಲು ದಾಳಿಯ ಆರೋಪವನ್ನು ಪಾಕಿಸ್ತಾನದ ಮೇಲೆ ಹೇರಿ ತನ್ನ ಬೇಜವಾಬ್ದಾರಿತನದಿಂದ ಪಾರಾಗಲು ಮೋದಿಯವರು ಸರ್ಜಿಕಲ್ ಸ್ಟ್ರೈಕ್ ಎನ್ನುವ ಬ್ರಹನ್ನಾಟಕವನ್ನು ರಚಿಸಿದ್ದರಾ? ಈ ಯೋಧರ ಸಾವುಗಳನ್ನೇ ಚುನಾವಣಾ ಪ್ರಚಾರದ ಪ್ರಮುಖ ಸರಕನ್ನಾಗಿ ಮಾಡಿಕೊಂಡ ಮೋದಿ ಸರಕಾರ ದೇಶವಾಸಿಗಳಲ್ಲಿ ದೇಶಭಕ್ತಿಯ ಭಾವನೆಯನ್ನು ಪ್ರೇರೇಪಿಸಿ ದಿಗ್ವಿಜಯವನ್ನು ಸಾಧಿಸಿತಾ? ಹೀಗೆ ಹಲವಾರು ಪ್ರಶ್ನೆಗಳು ಮಲ್ಲಿಕ್ ರವರ ಸಂದರ್ಶನದ ನಂತರ ದೇಶವಾಸಿಗಳನ್ನು ಕಾಡತೊಡಗಿವೆ. ಉತ್ತರಿಸಬೇಕಾದವರು ಜಾಣ ಮೌನಕ್ಕೆ ಜಾರಿ ಮುಂದಿನ ವರ್ಷದ ಚುನಾವಣಾ ಸಮಯಕ್ಕೆ ಮತ್ತೆ ಯಾವ ಕಾಂಡವನ್ನು ಸೃಷ್ಟಿಸಬೇಕು ಎನ್ನುವ ಯೋಚನೆಯಲ್ಲಿ ನಿರತರಾಗಿದ್ದಾರೆ.

“ಸತ್ಯ ಅನ್ನೋದು ಬೆತ್ತಲೆಯಾಗಿರುವಾಗ ಸುಳ್ಳು ಬಣ್ಣದ ವೇಷ ತೊಟ್ಟು ಊರೆಲ್ಲಾ ಸುತ್ತಿ ಬರುತ್ತದೆ” ಎನ್ನುವುದು ಸುಳ್ಳಲ್ಲ.

-ಶಶಿಕಾಂತ ಯಡಹಳ್ಳಿ

15-04-2023     

 

ಶುಕ್ರವಾರ, ಏಪ್ರಿಲ್ 14, 2023

ಮಾನವೀಯತಾವಾದಿ ಬಾಬಾಸಾಹೇಬರ ಸಂವಿಧಾನ ಮತ್ತು ಮನುವಾದಿಗಳ ಆಕ್ರಮಣ

 


ತಹ ತಹ

ಅಂಬೇಡ್ಕರ್ ಆಶಯದ ಸಂವಿಧಾನ ರಕ್ಷಣೆ  ತಕ್ಷಣದ ಆದ್ಯತೆ

ಇವತ್ತು ಎಪ್ರಿಲ್ 14, ಸಂವಿಧಾನಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರ 132 ನೇ ಜಯಂತಿ. ಜನಸಾಮಾನ್ಯರಿಂದ ಹಿಡಿದು ಸರಕಾರದವರೆಗೆ ಈ ದಿನವನ್ನು ಸಂಭ್ರಮದಿಂದ ಮಹಾಪರಿನಿರ್ವಾಣ ದಿನವನ್ನಾಗಿ ಆಚರಿಸಲಾಗುತ್ತದೆ. ಇನ್ನು ಕೆಲವರಿದ್ದಾರೆ ಮೇಲ್ಜಾತಿಯ ಜಾತಿವಾದಿಗಳು, ಹಿಂದುತ್ವವಾದಿಗಳು, ಸಮಾನತೆಯ ವಿರೋಧಿಗಳು, ಅಂಬೇಡ್ಕರ್ ರವರನ್ನು ದ್ವೇಷಿಸುತ್ತಲೇ ಬಂದಿದ್ದಾರೆ. ಇಂತವರು ಅಲ್ಪಸಂಖ್ಯಾತರಾದರೂ ಬಹುಸಂಖ್ಯಾತರ ಮೇಲೆ ಪ್ರಭಾವಬೀರಬಲ್ಲ ಆಳುವ ವರ್ಗದವರಾಗಿದ್ದಾರೆ. ಜಾತಿ ತಾರತಮ್ಯ ಹಾಗೂ ಅಸಮಾನತೆಯ ಪೋಷಕರಾಗಿದ್ದಾರೆ. ಅವರ ಯಜಮಾನಿಕೆಗೆ ಅಂಬೇಡ್ಕರ್ ಹಾಗೂ ಸಂವಿಧಾನ ಅಡೆತಡೆಯನ್ನುಂಟು ಮಾಡುತ್ತಿದೆ. ಹಾಗಾಗಿ ಸಂವಿಧಾನವನ್ನೇ ಬದಲಾಯಿಸುವ ಹುನ್ನಾರ ಹಿಂದುತ್ವವಾದಿ ಸಂಘದವರಿಂದ ನಡೆಯುತ್ತಿದೆ. ಅಂಬೇಡ್ಕರ್ ರವರನ್ನು ಅಪ್ರಸ್ತುತಗೊಳಿಸುವ ಪ್ರಯತ್ನವೂ ಜಾರಿಯಲ್ಲಿದೆ. ಈ ದೇಶದ ಪ್ರಜಾತ್ರಂತ್ರದ ಉಳಿವು ಮತ್ತು ಅಳಿವು ಸಂವಿಧಾನದ ರಕ್ಷಣೆ ಹಾಗೂ ಅಂಬೇಡ್ಕರ್ ರವರ ಸಮಾನತಾವಾದದ ಆಚರಣೆಯಲ್ಲಿದೆ.

ಸಮಾನತೆ ಸಾರುವ ಬಾಬಾಸಾಹೇಬರ ನಾಯಕತ್ವದಲ್ಲಿ ರಚಿತ ಭಾರತದ ಸಂವಿಧಾನ ನಿಜಕ್ಕೂ ಅಪಾಯದಲ್ಲಿದೆ. ಯಾರಿಂದ ಎಂದು ವಿಶೇಷವಾಗಿ ವಿವರಿಸಬೇಕಿಲ್ಲ. ಅಂಬೇಡ್ಕರರ ಸಂವಿಧಾನವನ್ನು ಮನುಸ್ಮೃತಿ ಆಧಾರದಲ್ಲಿ ಮರುನಿರ್ಮಾಣ ಮಾಡಿ ಮತ್ತೆ ಚತುರ್ವರ್ಣ ವ್ಯವಸ್ಥೆಯನ್ನು ಜಾರಿಗೆ ತರುವುದು ಮನುವಾದಿ ಪ್ಯಾಸಿಸ್ಟ್ ಸಂಘಿಗಳ ಅಂತಿಮ ಗುರಿಯಾಗಿದೆ. ಅದಕ್ಕಾಗಿ ಹಿಂದೂರಾಷ್ಟ್ರ, ರಾಷ್ಟ್ರೀಯವಾದ, ಒಂದು ದೇಶ, ಒಂದು ಧರ್ಮ, ಒಂದು ಸಂಸ್ಕೃತಿಯಂತಹ ತರಹೇವಾರಿ ಸಮೂಹ ಸನ್ನಿ ಹತಾರಗಳ ಪ್ರಯೋಗವನ್ನು ನಿರಂತರವಾಗಿ ಮಾಡಲಾಗುತ್ತಿದೆ. ದೇಶಾದ್ಯಂತ ಅನ್ಯ ಧರ್ಮದ್ವೇಷವನ್ನು ಹುಟ್ಟಿಸಿ ಕೋಮುದೃವೀಕರಣದ ಮೂಲಕ ಪ್ರಭುತ್ವದ ಅಧಿಕಾರವನ್ನು ಗಟ್ಟಿಗೊಳಿಸಿಕೊಳ್ಳುತ್ತಲೇ ಈಗಿರುವ ಸಂವಿಧಾನವನ್ನು ದುರ್ಬಲಗೊಳಿಸುವುದು ಹಾಗೂ ಹಿಂದೂರಾಷ್ಟ್ರ ಸ್ಥಾಪನೆಯ ಮೂಲಕ ಹಿಂದುತ್ವವಾದ ಪ್ರಣೀತ ಸಂವಿಧಾನವನ್ನು ಜಾರಿಗೆ ತರುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ಉದ್ದೇಶವಾಗಿದೆ.

ಅವರ ಈ ಗುರಿ ಸಾಧನೆಗೆ ಮೊದಲಿನಿಂದಲೂ ಅಡ್ಡಿಯಾಗಿದ್ದು ಅಂಬೇಡ್ಕರ್ ಹಾಗೂ ಅವರ ಸಮಸಮಾಜ ಪರಿಕಲ್ಪನೆಯ ಸಂವಿಧಾನ ಮತ್ತು ಬಾಬಾಸಾಹೇಬರ ಅಸಂಖ್ಯಾತ ಅಭಿಮಾನಿ ಜನಸಮೂಹ. ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳಲು ಮೊದಲು ಪ್ರಭುತ್ವಾಧಿಕಾರವನ್ನು ಪಡೆಯಬೇಕಿತ್ತು, ಭಾರತದಾದ್ಯಂತ ದೇವರು ಧರ್ಮದ ಹೆಸರಲ್ಲಿ ಭಾವತೀವ್ರತೆಯನ್ನು ಪ್ರಚೋದಿಸಿ, ಕೋಮುದಳ್ಳುರಿ ಹೆಚ್ಚಿಸಿ ಪ್ರಜಾಪ್ರಭುತ್ವದ ದಾರಿಯನ್ನೇ ಬಳಸಿಕೊಂಡು ದೇಶದ ಆಡಳಿತಾಧಿಕಾರದ ಚುಕ್ಕಾಣಿಯನ್ನು ಸಂಘದ ರಾಜಕೀಯ ಅಂಗವಾದ ಬಿಜೆಪಿ ಪಕ್ಷದ ಮೂಲಕ ಹಿಡಿದಿದ್ದಾಯ್ತು.

“ತಾವು ಅಧಿಕಾರಕ್ಕೆ ಬಂದಿದ್ದೇ ಸಂವಿಧಾನ ಬದಲಾಯಿಸಲು” ಎಂದು ಬಿಜೆಪಿಗರು ಬಹಿರಂಗವಾಗಿ ಸಾರಿದ್ದಾಯ್ತು. ಸಂವಿಧಾನದ ಪ್ರತಿಯನ್ನೇ ಕೆಲವು ಸಂಘಿಗಳು ಸಾರ್ವಜನಿಕ ಸ್ಥಳಗಳಲ್ಲಿ ಸುಟ್ಟಿದ್ದಾಯ್ತು.  ಹಲವಾರು ಸ್ಥಳಗಳಲ್ಲಿ ಅಂಬೇಡ್ಕರರ ಪ್ರತಿಮೆಗೆ ಹಾನಿ ಮಾಡಿದ್ದಾಯ್ತು. ಇವರು ಏನೇ ಮಾಡಿದರೂ ಅದಕ್ಕೆ ಪ್ರತಿರೋಧವೂ ಅಷ್ಟೇ ತೀಕ್ಷ್ಣವಾಗಿ ಬರತೊಡಗಿತು. ಬಹುಸಂಖ್ಯಾತ ಸ್ವಾಭಿಮಾನಿ ಅಂಬೇಡ್ಕರ್ ವಾದಿಗಳು ಹಾಗೂ ಪ್ರಜಾತಂತ್ರ ರಕ್ಷಣೆಗೆ ಬದ್ದರಾಗಿರುವವರು ಸಂಘ ಪರಿವಾರದ ಸಂವಿಧಾನ ವಿರೋಧಿತನವನ್ನು ವಿರೋಧಿಸಿದರು. ಇದು ಸಂಘ ಪರಿವಾರದ ಗುರಿ ಸಾಧನೆಗೆ ತೀವ್ರ ಅಡತಡೆಯನ್ನುಂಟುಮಾಡಿತು.

ಹಾಗಂತ ನಾಗಾಪುರದವರೇನೂ ಸುಮ್ಮನಾಗಲಿಲ್ಲ. ಸಂಘ ಪರಿವಾರದ ಅಂಗಗಳ ಮೂಲಕ ಸಮೂಹ ಮಾಧ್ಯಮಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡರು, ಕಾರ್ಯಾಂಗದ ಆಯಕಟ್ಟು ಜಾಗಗಳಿಗೆ ಸಂಘೀವಾದಿಗಳನ್ನು ನಿಯಮಿಸಿಕೊಂಡರು. ಸಂಸತ್ತನ್ನು ತಮ್ಮಿಚ್ಚೆಯಂತೆ ನಡೆಸಲು ಕಾರ್ಯಪ್ರವೃತ್ತರಾದರು. ಅನೇಕ ರಾಜ್ಯಗಳಲ್ಲಿ ಆಪರೇಶನ್ ಕಮಲದ ಮೂಲಕ ರಾಜ್ಯಾಧಿಕಾರವನ್ನು ದಕ್ಕಿಸಿಕೊಂಡರು. ನ್ಯಾಯಾಂಗದ ಮೇಲೆಯೂ ಒತ್ತಡ ಹೇರುವ ಪ್ರಯತ್ನಮಾಡಿ ಕೆಲವೊಮ್ಮೆ ತಮ್ಮ ಸಿದ್ದಾಂತಕ್ಕೆ ಪೂರಕವಾದ ನ್ಯಾಯನಿರ್ಣಯವಾಗುವಂತೆ ನೋಡಿಕೊಂಡರು. ಪ್ರತಿರೋಧಿಸಿದವರನ್ನು ದೇಶದ್ರೋಹಿಗಳೆಂದು ಆರೋಪಿಸಿ ಕಾನೂನಾತ್ಮಕ ಚಿತ್ರಹಿಂಸೆ ಕೊಟ್ಟರು. ಹೀಗೆ ಪ್ರಜಾತಂತ್ರದ ನಾಲ್ಕೂ ಅಂಗಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡಾದ ಮೇಲೆ ಇನ್ನೇನುಳಿದಿದೆ? ಮುಂದಿನ ಹಂತವೇ ಸಂವಿಧಾನವನ್ನು ಸಂಘದ ಆಶಯಕ್ಕೆ ಪೂರಕವಾಗಿ ಸಾವಕಾಶವಾಗಿ ಬದಲಾಯಿಸುವುದು ಅಷ್ಟೇ ಬಾಕಿ ಇದೆ. ಮುಂದಿನ ಸಲ ಕೇಂದ್ರದಲ್ಲಿ ಮತ್ತೆ ಬಹುಮತದಿಂದ ಅಧಿಕಾರಕ್ಕೆ ಬಂದು ಸಂವಿಧಾನವನ್ನು ಬದಲಾಯಿಸುವ ಹಾಗೂ ಮನುಸ್ಮೃತಿ ಆಧಾರಿತ ಮನುವಾದಿ ಪ್ರೇರಿತ ಸಂವಿಧಾನವನ್ನು ಜಾರಿಗೆ ತರಲಾಗುತ್ತದೆ ಎಂಬ ಆತಂಕ ಕಾಡುತ್ತಿದೆ.

ಈ ಹಾರ್ಡಕೋರ್ ಹಿಂದಿತ್ವವಾದಿ ಸಂಘವು ಭಾರತದ ಬಾವುಟವನ್ನು ಸಹ ಒಪ್ಪಿಕೊಳ್ಳದೇ ಮೊದಲಿನಿಂದಲೂ ಸಂವಿಧಾನವನ್ನು ವಿರೋಧಿಸುತ್ತಲೇ ಬಂದಿದೆ. ಈಗಿರುವ ಸಂವಿಧಾನವನ್ನು ಬದಲಾಯಿಸಬೇಕೆಂದರೆ ಮೊದಲು ಅಂಬೇಡ್ಕರ್ ರವರ ಪ್ರಭಾವವನ್ನು ಕಡಿಮೆ ಮಾಡಬೇಕಾಗಿತ್ತು. ಅದಕ್ಕಾಗಿಯೇ ಬಾಬರಿ ಮಸೀದಿ ದ್ವಂದಕ್ಕೆ ಸಂಘಿಗಳು ಆಯ್ಕೆ ಮಾಡಿಕೊಂಡ ದಿನಾಂಕ ಯಾವುದು ಗೊತ್ತಾ? ಅದು ಅಂಬೇಡ್ಕರ್ ರವರು ತೀರಿಕೊಂಡ ಮಹಾಪರಿನಿರ್ವಾಣದ ದಿನಾಂಕ.

ಕೊಟ್ಯಾಂತರ ದೀನ ದಲಿತ ಸಮುದಾಯ ಡಿಸೆಂಬರ್ 6 ರಂದು ಬಾಬಾಸಾಹೇಬರ ಪುಣ್ಯತಿಥಿಯನ್ನು ಆಚರಿಸಿ ಅವರನ್ನು ನೆನಪಿಸಿಕೊಳ್ಳುತ್ತಾರೆ. ಹೇಗಾದರೂ ಮಾಡಿ ಆ ದಿನದ ನೆನಪನ್ನು ಜನಸಮೂಹದಿಂದ ಅಳಿಸಿಹಾಕಿ ಹೊಸದೊಂದು ಘಟನೆಯನ್ನು ಅಚ್ಚೊತ್ತಬೇಕು ಎನ್ನುವುದು ಸಂಘದ ರೂವಾರಿಗಳ ತಂತ್ರಗಾರಿಕೆಯ ಭಾಗವಾಗಿತ್ತು. ಅದಕ್ಕಾಗಿ ರಾಮಮಂದಿರ ಆಂದೋಲನದ ಭಾಗವಾಗಿ ಡಿಸೆಂಬರ್ 6 ರಂದೇ ಬಾಬರಿ ಮಸೀದಿ ದ್ವಂಸವನ್ನು ಮಾಡಿ ಇಡೀ ದೇಶದ ಕೋಮು ಸೌಹಾರ್ಧತೆಗೆ ರಣಗಾಯವನ್ನು ಸಂಘ ಪರಿವಾರದವರು ಮಾಡಿದ್ದಾಯ್ತು.  ಈಗ ಡಿಸೆಂಬರ್ 6 ಎಂದ ಕೂಡಲೇ ಅಂಬೇಡ್ಕರರವರ ಪುಣ್ಯತಿಥಿಗಿಂತಲೂ ಮೊದಲು ಬಹುತೇಕ ದೇಶವಾಸಿಗಳ ನೆನಪಿಗೆ ಬರುವುದು ಬಾಬರಿ ಮಸೀದಿ ಧ್ವಂಸ ಪ್ರಕರಣ ಮಾತ್ರ. ಇದು ಅಂಬೇಡ್ಕರ್ ರವರ ನೆನಪನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಲು ಮಾಡಲಾದ ವ್ಯವಸ್ಥಿತ ಪಿತೂರಿಯಾಗಿತ್ತು. ಹಾಗೂ ಸಮೂಹ ಸನ್ನಿಯನ್ನು ಹುಟ್ಟು ಹಾಕುವ ಮೂಲಕ  ಕಾನೂನು ಮತ್ತು ಸುವ್ಯವಸ್ಥೆಯನ್ನು ಮುರಿದು ಸಂವಿಧಾನವನ್ನೂ ಉಲ್ಲಂಘಿಸಿ ಪ್ರಜಾತಂತ್ರಕ್ಕೆ ಅಪಮಾನ ಮಾಡಲಾಯಿತು. ಇಷ್ಟಕ್ಕೆ ಸುಮ್ಮನಾಗದೇ ಬಹುಜನರು ಆಚರಿಸುವ ಅಂಬೇಡ್ಕರ್ ರವರ ಮಹಾನಿರ್ವಾಣದ ದಿನಾಚರಣೆಯನ್ನು ಮರೆಮಾಚಲು ಪ್ರತಿ ವರ್ಷ ಬಿಜೆಪಿ, ವಿಶ್ವಹಿಂದೂ ಪರಿಷತ್ತು, ಬಜರಂಗದಳ ಮುಂತಾದ ಸಂಘಪರಿವಾರದವರು ಡಿಸೆಂಬರ್ 6 ರಂದು  ಶೌರ್ಯ ದಿವಸ್ ಅಥವಾ ವಿಜಯ್ ದಿವಸ್ ಆಚರಿಸುವ ಪರಂಪರೆಯನ್ನು ಜಾರಿಗೆ ತಂದಿತು.

1949ರಲ್ಲಿ ಸಂವಿಧಾನ ಸಿದ್ದವಾದಾಗ ಆರೆಸ್ಸೆಸ್ಸ್ ಅದನ್ನು ತೀವ್ರವಾಗಿ ವಿರೋಧಿಸಿತು. 30-11-1949 ರಂದು ತನ್ನ ಮುಖವಾಣಿಯಾದ ಆರ್ಗನೈಸರ್ ಪತ್ರಿಕೆಯಲ್ಲಿ “ಭಾರತದ ಹೊಸ ಸಂವಿಧಾನದ ಕೆಟ್ಟ ವಿಷಯವೇನೆಂದರೆ ಅದರಲ್ಲಿ ಭಾರತೀಯತೆ ಇಲ್ಲ. ಪ್ರಾಚೀನ ಭಾರತೀಯತೆಯ ಕುರುಹುಗಳಿಲ್ಲ. ಮನುವಿನ ಕಾನೂನುಗಳು ಬಹಳ ಹಿಂದೆಯೇ ಬರೆಯಲ್ಪಟ್ಟಿವೆ…. ಇಂದಿಗೂ ಮನುಸ್ಮೃತಿಯಲ್ಲಿ ವಿವರಿಸಿರುವ ಕಾನೂನುಗಳು ಪ್ರಪಂಚದ ಮೆಚ್ಚುಗೆಯನ್ನು ಗಳಿಸಿವೆ ಮತ್ತು ಸ್ವಯಂಪ್ರೇರಿತ ವಿಧೇಯತೆ ಮತ್ತು ಅನುಸರಣೆಯನ್ನು ಹೊರಹೊಮ್ಮಿಸುತ್ತವೆ..” ಎಂದು ತನ್ನ ಸಂವಿಧಾನ ವಿರೋಧಿ ಹಾಗೂ ಮನುಸ್ಮೃತಿ ಪರ ನಿಲುವನ್ನು ಆರೆಸ್ಸೆಸ್ಸ್  ಸ್ಪಷ್ಟಪಡಿಸಲಾಗಿತ್ತು. 

ಅವತ್ತಿನಿಂದ ಇವತ್ತಿನ ತನಕ ಸಂಘ ಪರಿವಾರವು ಭಾರತದ ಸಂವಿದಾನವನ್ನು ಒಪ್ಪಲೆ ಇಲ್ಲ, ಮನುವಾದಿ ಸಂವಿಧಾನವನ್ನು ಜಾರಿಗೆ ತರುವ ತನ್ನ ಹಿಡನ್ ಅಜೆಂಡಾವನ್ನು ಬಿಡುತ್ತಿಲ್ಲ. ಅಸಮಾನತೆಯ ಅತಿರೇಕವಾದ ಮನುಸ್ಮೃತಿಯನ್ನು ಸಂವಿಧಾನ ರಚಿಸುವ ಹಲವು ವರ್ಷಗಳ ಮೊದಲೇ ಅಂಬೇಡ್ಕರ್ ರವರು ಸಾರ್ವಜನಿಕವಾಗಿ ಸುಟ್ಟುಹಾಕಿದ್ದರು. ಸಂವಿಧಾನದಲ್ಲಿ ಮನುಸ್ಮೃತಿಯ ನೆರಳೂ ಬೀಳದಂತೆ ನೋಡಿಕೊಂಡಿದ್ದರು. ಇದು ಈ ಮನುವಾದಿಗಳಿಗೆ ಅಪತ್ಯವಾಗಿದ್ದು ಇಂದಲ್ಲ ನಾಳೆ  ಮನುಸ್ಮೃತಿಯನ್ನು ಶತಾಯ ಗತಾಯ ಜಾರಿಗೆ ತಂದೇ ತರುತ್ತೇವೆಂದು ಆರೆಸ್ಸೆಸ್ ನಿರ್ಧರಿಸಿಯಾಗಿದೆ. ಅದಕ್ಕಾಗಿ ಪ್ರಯತ್ನ ತೀವ್ರತರವಾಗಿ ಜಾರಿಯಲ್ಲಿದೆ.

ಅದರ ಭಾಗವಾಗಿಯೇ ಈಗಿರುವ ಸಂವಿಧಾನದ ಮೂಲಭೂತ ಅಂಶಗಳನ್ನು ಬದಲಾಯಿಸಲು ಬಿಜೆಪಿ ಮೂಲಕ ಸಂಘವು ಹಲವಾರು ಬಾರಿ ಪ್ರಯತ್ನಿಸಿದೆ. ಸಂವಿಧಾನ ಪರಿಶೀಲನಾ ಸಮಿತಿಯೊಂದನ್ನು ಆಗಿನ ಪ್ರದಾನ ಮಂತ್ರಿ ವಾಜಪೇಯಿಯವರು ರಚಿಸಿದ್ದನ್ನು ಮರೆಯಲಾಗದು. ಅನಂತ ಹೆಗಡೆಯವರಂತಹ ಸಂಸದರ ಬಾಯಲ್ಲಿ “ನಾವು ಬಂದಿರೋದೇ ಸಂವಿಧಾನ ಬದಲಾಯಿಸೋಕೆ” ಎಂದು ಹೇಳಿಸಲಾಗುತ್ತದೆ. ಸಂವಿಧಾನದ ಪ್ರತಿಯನ್ನು ಬೀದಿಯಲ್ಲಿ ಸುಡಲಾಗುತ್ತದೆ.

ಅಂಬೇಡ್ಕರ್ ರವರ ಜನ್ಮದಿನವನ್ನು ಆಚರಿಸುವ ಸಂದರ್ಭದಲ್ಲಿ ಎಲ್ಲಾ ಅಂಬೇಡ್ಕರ್ ಅಭಿಮಾನಿಗಳೂ ಹಾಗೂ ಸಂವಿಧಾನ ಪರ ಬೆಂಬಲಿಗರು ಮೊದಲು ಸಂವಿಧಾನ ಉಳಿಸಿ ಚಳುವಳಿಯನ್ನು ತೀವ್ರಗೊಳಿಸಬೇಕಿದೆ. ಸಂವಿಧಾನ ಉಳಿದರೆ ಅಂಬೇಡ್ಕರ್ ರವರೂ ಜನಮಾನಸದಲ್ಲಿ ಉಳಿಯುತ್ತಾರೆ. ಅಂಬೇಡ್ಕರ್ ರವರು ಉಳಿದರೆ ದೀನ ದಲಿತ ಶೂದ್ರರಾದಿಯಾಗಿ ಬಹುಜನರು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳುತ್ತಾರೆ. ಮನುವಾದಿಗಳ ಹುನ್ನಾರಕ್ಕೆ ಮುಂದೊಮ್ಮೆ ಸಮಾನತೆ ಸಾರುವ ಸಂವಿಧಾನ ಬದಲಾಗಿ ಮನುಧರ್ಮಶಾಸ್ತ್ರ ಆಧಾರಿತ ಸಂವಿಧಾನವೇನಾದರೂ ಅಸ್ತಿತ್ವಕ್ಕೆ ಬಂದಿದ್ದೇ ಆದರೆ ವೈದಿಕಶಾಹಿಗಳು ಹಾಗೂ ಮೇಲ್ವರ್ಗದವರನ್ನು ಹೊರತು ಪಡಿಸಿ ಅಸಂಖ್ಯಾತ ವರ್ಗ ತಮ್ಮ ಅಸ್ತಿತ್ವ ಹಾಗೂ ಅಸ್ಮಿತೆಯನ್ನು ಕಳೆದುಕೊಂಡು ದಾಸ್ಯದಲ್ಲಿ ಬದುಕಬೇಕಾಗುತ್ತದೆ. ಸಂವಿಧಾನದ ಉಳಿವಿನಲ್ಲಿ ಬಹುಜನರ ಉಸಿರಿದೆ. ಅಂಬೇಡ್ಕರ್ ರವರ ಹೆಸರಿದೆ.

ಅಂಬೇಡ್ಕರ್ ರವರವರಿಗೆ ಈ ಹಿಂದುತ್ವವಾದಿ ಶಕ್ತಿಗಳ ಬಗ್ಗೆ ಮೊದಲಿನಿಂದಲೂ ಆತಂಕ ಇದ್ದೇ ಇತ್ತು. ಅವರು 1949 ನವೆಂಬರ್ 17 ರಂದು ಸಂವಿಧಾನದ ಸಭೆಯಲ್ಲಿ  ಅಂತಕದಿಂದ ಹೇಳಿದ ಈ ಮಾತುಗಳು ಅಂದಿಗಿಂತಲೂ ಈಗ ಹೆಚ್ಚು ಪ್ರಸ್ತುತವಾಗಿವೆ. ಎಚ್ಚರದ ದ್ವನಿಯಾಗಿದೆ.

“ಚರಿತ್ರೆ ಮತ್ತೆ ಮರುಕಳಿಸುತ್ತದೆಯೆ? ಈ ಯೋಚನೆ ನನ್ನಲ್ಲಿ ಆತಂಕ ಮೂಡಿಸುತ್ತಿದೆ. ನಮಗೆ ಈಗಾಗಲೇ ಇದ್ದ ಹಳೆಯ ಶತ್ರುಗಳಾದ ಜಾತಿ ಮತ ಪಂಗಡಗಳ ಜೊತೆಗೆ ಇನ್ನು ಮುಂದೆ ವಿಭಿನ್ನ ಮತ್ತು ವಿರೋಧಿ ರಾಜಕೀಯ ಸಿದ್ದಾಂತಗಳ ಹಲವು ರಾಜಕೀಯ ಪಕ್ಷಗಳೂ ಸೇರಿಕೊಳ್ಳುತ್ತವೆ. ಈ ವಾಸ್ತವ ಅರಿವಾದ ಕೂಡಲೇ ನನ್ನ ಆತಂಕ ಇನ್ನೂ ತೀವ್ರವಾಗುತ್ತದೆ. ಭಾರತೀಯರು ತಮ್ಮ ಜಾತಿ ಮತ ಪಂಗಡಗಳಿಗಿಂತ ದೇಶವನ್ನು ಮುಖ್ಯವೆಂದು ಭಾವಿಸುತ್ತಾರೋ ಅಥವಾ ಅವರಿಗೆ ತಮ್ಮ ದೇಶಕ್ಕಿಂತ ತಮ್ಮ ಜಾತಿ ಮತ ಪಂಗಡಗಳೇ ಹೆಚ್ಚು ಮುಖ್ಯವಾಗುತ್ತದೋ? ನನಗೆ ಗೊತ್ತಾಗುತ್ತಿಲ್ಲ. ಆದರೆ ಇಷ್ಟಂತೂ ಖಚಿತ. ರಾಜಕೀಯ ಪಕ್ಷಗಳು, ಜಾತಿ ಮತ ಪಂಗಡಗಳನ್ನು ದೇಶಕ್ಕಿಂತ ಮುಖ್ಯ ಎಂದು ಭಾವಿಸಿದರೆ ನಮ್ಮ ಸ್ವಾತಂತ್ರ್ಯಕ್ಕೆ ಎರಡನೇ ಬಾರಿ ಗಂಡಾಂತರ ಬಂದಂತೆ. ಹಾಗೇನಾದರೂ ಆದರೆ ಬಹುಶಃ ಸ್ವಾತಂತ್ರ್ಯ ಅನ್ನುವುದು ನಮಗೆ ಮತ್ತೆ ಸಿಗುವುದಿಲ್ಲ. ಅದನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತೇವೆ. ಇದರ ವಿರುದ್ಧ ನಾವೆಲ್ಲರೂ ಅಚಲವಾಗಿ ನಿಲ್ಲಬೇಕು. ನಮ್ಮಲ್ಲಿ ಕೊನೆಯ ಹನಿ ರಕ್ತ ಇರುವವರೆಗೂ ನಮ್ಮ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ದೃಢಸಂಕಲ್ಪ ಮಾಡಬೇಕು..”

ಅಂಬೇಡ್ಕರ್ ರವರ ಈ ಆತಂಕವನ್ನು ಪ್ರಜ್ಞಾಪೂರ್ವಕ ಹೋರಾಟದ ಮೂಲಕ ನಿವಾರಿಸಿಕೊಳ್ಳಬೇಕೋ ಅಥವಾ ಹಿಂದುತ್ವವಾದಿಗಳ ಹುನ್ನಾರಕ್ಕೆ ಬಲಿಯಾಗಿ ಶಾಶ್ವತವಾಗಿ ಸ್ವಾತಂತ್ರ್ಯವನ್ನು ಕಳೆದುಕೊಳ್ಳಬೇಕೋ ಎಂದು ಬಹುಸಂಖ್ಯಾತ ಶ್ರಮಿಕ ವರ್ಗ ಯೋಚಿಸಬೇಕಿದೆ. ನಮ್ಮನ್ನು ಭಾವತೀವ್ರತೆಗೆ ಈಡುಮಾಡಿ ಸಮೂಹ ಸನ್ನಿ ಹುಟ್ಟಿಸುವ ಪ್ಯಾಸಿಸ್ಟ್ ಶಕ್ತಿಗಳನ್ನು ಜನಾಲೋಂದನಗಳ ಮೂಲಕ ಪ್ರತಿರೋಧಿಸುವ ಮೂಲಕ ಸಮತಾವಾದಿ ಮಾನವತಾವಾದಿ ಬಾಬಾಸಾಹೇಬ್ ಅಂಬೇಡ್ಕರ್ ರವರ ಜನುಮ ದಿನವನ್ನು ಸ್ಮರಿಸಿಕೊಳ್ಳೋಣ. ಸಂವಿಧಾನದ ರಕ್ಷಣೆಗೆ ಪಣತೊಡೋಣ.

-ಶಶಿಕಾಂತ ಯಡಹಳ್ಳಿ

14-04-2023