ಶನಿವಾರ, ಏಪ್ರಿಲ್ 22, 2023

ಹತ್ಯಾಕಾಂಡದ ಆರೋಪಿಗಳು ಖುಲಾಸೆ; ಕಳೆದುಹೋಗುತ್ತಿದೆ ನ್ಯಾಯಾಂಗದ ಮೇಲಿನ ಭರವಸೆ.

ತಹ ತಹ…

 


ಹತ್ಯಾಕಾಂಡದ ಆರೋಪಿಗಳು ಖುಲಾಸೆ; ಕಳೆದುಹೋಗುತ್ತಿದೆ ನ್ಯಾಯಾಂಗದ ಮೇಲಿನ ಭರವಸೆ.

ಪ್ಯಾಸಿಸ್ಟ್ ಪ್ರಭುತ್ವದಲ್ಲಿ ಇಂತಹದ್ದೊಂದು ತೀರ್ಪು ನಿರೀಕ್ಷಿತವಾಗಿಯೇ ಇತ್ತು. ಆದರೆ ತುಂಬಾ ತಡವಾಗಿ ಪ್ರಕಟಗೊಂಡಿತು. ಈ ದೇಶ ಕಂಡ ಅತ್ಯಂತ ಹೀನಾತಿಹೀನ ಮತಾಂಧ ಹತ್ಯಾಕಾಂಡವೊಂದು ಘಟಿಸಿ 21 ವರ್ಷಗಳೇ ಸಂದಿವೆ. ಅಯೋಧ್ಯೆಯಿಂದ ಮರಳುತ್ತಿದ್ದ ಸಾಬರಮತಿ ರೈಲು ಗೋದ್ರಾದಲ್ಲಿ ಅಗ್ನಿದುರಂತಕ್ಕೊಳಗಾಗಿ ಕರಸೇವಕರು ಬಲಿಯಾದ ನಂತರ ಗುಜರಾತಿನಾದ್ಯಂತ ಆರಂಭವಾದ ಸಂಘಟಿತ ಪ್ರಭುತ್ವ ಪ್ರಾಯೋಜಿತ ಹಿಂಸಾಚಾರ ಅತ್ಯಂತ ಕ್ರೂರ ಹಾಗೂ ಅಮಾನವೀಯವಾಗಿತ್ತು. ಅದರ ಭಾಗವಾಗಿ 2002 ಎಪ್ರಿಲ್ 21 ರಂದು ಅಹಮದಾಬಾದ್ ನ ನರೋದಾ ಗಾಮ್ ನಲ್ಲಿ ಕೋಮುವಾದಿ ಮತಾಂಧರು ನಡೆಸಿದ ನರಮೇಧದಲ್ಲಿ 12 ವರ್ಷದ ಬಾಲಕಿಯೂ ಸೇರಿದಂತೆ ಮುಸ್ಲಿಂ ಸಮುದಾಯದ 11 ಜನರು ಬರ್ಭರವಾಗಿ ಹಾಡುಹಗಲೇ ಹತ್ಯೆಯಾಗಿದ್ದರು.

ಈ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಕಳೆದ 21 ವರ್ಷದಿಂದ 86 ಜನ ಕೊಲೆ ಆರೋಪಿತ ನರಹಂತಕರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಲೇ ಬಂದಿತ್ತು. ಈ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ ನೇಮಿಸಿದ ವಿಶೇಷ ತನಿಖಾ ತಂಡದಿಂದ ನಡೆಸಲಾಗಿತ್ತು. ಸುದೀರ್ಘ ಕಾಲದ ವಿಚಾರಣೆಯ ಅವಧಿಯಲ್ಲಿ 18 ಜನ ತೀರಿಕೊಂಡಿದ್ದರು. ಕೊನೆಗೂ ನಿನ್ನೆ ಅಹ್ಮದಾಬಾದ್ ವಿಶೇಷ ನ್ಯಾಯಾಲಯದಿಂದ ತೀರ್ಪು ಹೊರಬಿತ್ತು. ಹತ್ಯಾರೋಪಿಗಳಾದ ಎಲ್ಲಾ 67 ಜನರನ್ನು ದೋಷಮುಕ್ತರನ್ನಾಗಿಸಿ ಬಿಡುಗಡೆ ಮಾಡಲಾಯಿತು. ಹೀಗೆ ಬಿಡುಗಡೆಯಾದವರಲ್ಲಿ ಹತ್ಯಾಕಾಂಡ ನಡೆದಾಗ ಗುಜರಾತ್ ಸರಕಾರದಲ್ಲಿ ಸಚಿವೆಯಾಗಿದ್ದ ಮಾಯಾ ಕೊಡ್ನಾನಿ ಹಾಗೂ ಬಜರಂಗದಳದ ನಾಯಕ ಬಾಬು ಬಜರಂಗಿ ಸಹ ಸೇರಿದ್ದಾರೆ.


ನ್ಯಾಯದಾನ ಎಂದರೆ ಇದೇನಾ? ಈ ತೀರ್ಮಾನಕ್ಕೆ ಬರಲು ನ್ಯಾಯಾಂಗಕ್ಕೆ 21 ವರ್ಷ ಬೇಕಾಗಿತ್ತಾ? ಆರೋಪಿತರು ಅಪರಾಧಿಗಳು ಅಲ್ಲವೆಂದಾದರೆ ಹಾಡುಹಗಲೇ ನಡೆದ ಅಲ್ಪಸಂಖ್ಯಾತರ ಮಾರಣಹೋಮ ಮಾಡಿದವರು ಯಾರು? ತನಿಖಾ ಸಂಸ್ಥೆಗಳ ವೈಫಲ್ಯವಾ ಅಥವಾ ತನಿಖಾಧಿಕಾರಿಗಳೇ ನ್ಯಾಯಾಲಯದ ದಿಕ್ಕು ತಪ್ಪಿಸುತ್ತಿವೆಯಾ? ನ್ಯಾಯಾಧೀಶರ ಮೇಲೆ ಹೇರಲಾದ ಒತ್ತಡವಾ? ಸತ್ತವರು ಅಲ್ಪಸಂಖ್ಯಾತರು ಎಂಬ ನಿರ್ಲಕ್ಷವಾ? ಆಳುವ ಸರಕಾರದ ಹುನ್ನಾರವಾ? ಅಂತೂ ಇಂತೂ ನ್ಯಾಯಾಲಯದಲ್ಲಿ ನ್ಯಾಯದಾನ ಸಿಕ್ಕಲಿಲ್ಲ. ಸತ್ತವರಿಗೆ ಹಾಗೂ ಅವರ ಕುಟುಂಬದವರಿಗೆ ನ್ಯಾಯ ದೊರೆಯಲಿಲ್ಲ. ಹೋಗಲಿ ಮೇಲಿನ ಕೋರ್ಟಿಗಾದರೂ ಮನವಿ ಸಲ್ಲಿಸಬಹುದಾ ಅಂದರೆ ಅದೂ ಇಲ್ಲವಂತೆ. ತನಿಖಾ ಸಂಸ್ಥೆ ಮೇಲ್ಮನವಿ ಸಲ್ಲಿಸುವುದಿಲ್ಲವೆಂದು ಹೇಳಿಯಾಗಿದೆಯಂತೆ.

“ನ್ಯಾಯಾಲಯದ ವಿಚಾರಣೆಗಳಲ್ಲಿ ಒಂದರ ಹಿಂದೆ ಒಂದರಂತೆ ಅನ್ಯಾಯವೇ ವಿಜ್ರಂಭಿಸುತ್ತಿದೆ. ಇದನ್ನು ನ್ಯಾಯಾಲಯಗಳು ಮೂಕ ಪ್ರೇಕ್ಷಕರಂತೆ ನೋಡುತ್ತಿವೆಯೇ..? ಎಂದು ಹಿರಿಯ ವಕೀಲರಾದ ಕಪಿಲ್ ಸಿಬಲ್ ರವರು ಆತಂಕದಿಂದ ಪ್ರಶ್ನಿಸಿದ್ದಾರೆ. ಬಿಲ್ಕಿಸ್ ಭಾನು ಅತ್ಯಾಚಾರ ಪ್ರಕರಣದ ಆರೋಪಿಗಳ ಬಿಡುಗಡೆಯೂ ಸಹ ಸಿಬಲ್ ರವರ ಮಾತಿಗೆ ಪೂರಕವಾಗಿದೆ. ಯಾಕೆ ಗುಜರಾತಿನ ಅಹ್ಮದಾಬಾದ್ ನ್ಯಾಯಾಲಯದಲ್ಲಿ ತೀರ್ಪುಗಳು ಯಾವಾಗಲೂ ಸಂಘಪರಿವಾರದ ಪರವಾಗಿಯೇ ಬರುತ್ತಿವೆ. ಯೋಚಿಸಬೇಕಾದ ಸಂಗತಿ.

ಕರ್ನಾಟಕದ ಕೋಲಾರದಲ್ಲಿ ರಾಹುಲ್ ಗಾಂಧಿಯವರು ಮಾಡಿದ ಭಾಷಣದ ವಿಚಾರಣೆಯನ್ನು ಅತ್ಯಂತ ತ್ವರಿತಗತಿಯಲ್ಲಿ  ಅಂದರೆ ಕೇವಲ 22 ದಿನಗಳಲ್ಲಿ ನಡೆಸಿದ ಗುಜರಾತ್ ರಾಜ್ಯದ  ಅಹ್ಮದಾಬಾದ್ ಕೋರ್ಟು ಅವರಿಗೆ 2 ವರ್ಷ ಶಿಕ್ಷೆ ವಿಧಿಸಿ ಸಂಸದ ಸ್ಥಾನವನ್ನು ಕಿತ್ತುಕೊಳ್ಳಲು ಕಾರಣವಾಯ್ತು. ಬಿಜೆಪಿಯ ಶಾಸಕ ಮಾಡಾಳ್ ವಿರುಪಾಕ್ಷಪ್ಪನವರ ಮನೆಯಲ್ಲಿ ಕೋಟಿ ಕೋಟಿ ಹಣಗಳು ಸಿಕ್ಕರೂ ಕೇವಲ ಒಂದೇ ದಿನದಲ್ಲಿ ಜಾಮೀನು ಕೊಡಲಾಯ್ತು. ರೆಡ್ ಹ್ಯಾಂಡ್ ಆಗಿ ಲಂಚದ ಹಣದ ಜೊತೆಗೆ ಸಿಕ್ಕಿಬಿದ್ದ ಅವರ ಮಗನಿಗೂ ನಿನ್ನೆ ಜಾಮೀನು ಮಂಜೂರು ಮಾಡಲಾಯ್ತು. ಅಂದರೆ ನ್ಯಾಯಾಧೀಶರು ಯಾರ ತಾಳಕ್ಕೆ ತಕ್ಕ ಹಾಗೆ ಕುಣಿಯುತ್ತಿದ್ದಾರೆ? ಯಾರ ಒತ್ತಡಕ್ಕೆ ಮಣಿಯುತ್ತಿದ್ದಾರೆ? ಯಾಕೆ ಹೀಗೆ ಯಾವಾಗಲೂ ಪ್ರಭುತ್ವದ ಪರವಾಗಿದ್ದವರ ಪರವಾಗಿಯೇ ನ್ಯಾಯಾಲಯಗಳು ಸ್ಪಂದಿಸುತ್ತಿವೆ? ಪ್ರಭುತ್ವ ವಿರೋಧಿ ಪತ್ರಕರ್ತರು ಹಾಗೂ ವಿಚಾರವಂತರ ಮೇಲಿನ ಕೇಸುಗಳಲ್ಲಿ ಜಾಮೀನು ಕೊಡದೇ ಜೈಲಲ್ಲಿ ಕೊಳೆಯುವಂತೆ ಮಾಡುವ ನ್ಯಾಯಾಲಯಗಳು ಆಳುವವವರ ಪರವಾಗಿರುವವರ ಹಿತಾಸಕ್ತಿಯನ್ನು ಯಾಕೆ ಕಾಪಾಡಲು ಮುಂದಾಗುತ್ತವೆ? ಎಂಬುದು ಜನಸಾಮಾನ್ಯರ ಅಸಾಮಾನ್ಯ ಪ್ರಶ್ನೆಯಾಗಿದೆ.


ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಒಂದೇ.. ದೇಶದಲ್ಲಿ ಪ್ಯಾಸಿಸ್ಟ್ ಪ್ರಭುತ್ವ ತನ್ನ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳುತ್ತಿದೆ. ಅದಕ್ಕಾಗಿ ಶಾಸಕಾಂಗ, ಕಾರ್ಯಾಂಗ ಹಾಗೂ ಪತ್ರಿಕಾರಂಗಗಳನ್ನು ಕೈವಶಮಾಡಿಕೊಳ್ಳಲಾಗಿದ್ದು ಈಗ ಒಂದಿಷ್ಟು ಜನರ ನಂಬಿಕೆಯನ್ನು ಉಳಿಸಿಕೊಂಡಿರುವ ನ್ಯಾಯಾಂಗವನ್ನೂ ತನ್ನ ಹಿತಾಸಕ್ತಿಗೆ ಪೂರಕವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ ಎನ್ನುವ ಅನುಮಾನ ಕಾಡುತ್ತಿದೆ. ಅದಕ್ಕೆ ಪೂರಕವಾಗಿ ತೀರ್ಪುಗಳು ಪ್ರಕಟಗೊಳ್ಳುತ್ತಿವೆ. ಹೀಗಾಗಿಯೇ ನ್ಯಾಯಾಲಯದಲ್ಲಿ ಉಳ್ಳವರ ಪರ, ಮೇಲ್ಚಾತಿಯವರ ಪರ, ಆಳುವವರ ಪರ, ಹಿಂದುತ್ವವಾದಿಗಳ ಪರ ತೀರ್ಪುಗಳು ಬರುತ್ತಿವೆ. ದಲಿತರು, ಅಲ್ಪಸಂಖ್ಯಾತರು, ವಿಚಾರವಾದಿಗಳು ಹಾಗೂ ಪ್ರಭುತ್ವವನ್ನು ಪ್ರಶ್ನಿಸುವವರ ವಿರುದ್ಧವಾಗಿಯೇ ನ್ಯಾಯನಿರ್ಣಯಗಳಾಗುತ್ತಿವೆ.

ಯಾಕೆ ಹೀಗೆ? ಯಾಕೆಂದು ಪ್ರಜ್ಞಾವಂತರಾದ ಎಲ್ಲರಿಗೂ ಗೊತ್ತಿರುವಂತಹುದೇ. ಇದು ಹೀಗೆ ಮುಂದುವರೆದರೆ ಎಲ್ಲರೂ ‘ನ್ಯಾಯಾ ಎಲ್ಲಿದೆ? ಎಲ್ಲಿದೆಯೋ ನ್ಯಾಯಾ..’ ಎಂದು ಮನದೊಳಗೆ ಹಾಡು ಗುಣುಗುವುದನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಬಹಿರಂಗವಾಗಿ ಹಾಡಿದರೆ ದೇಶದ್ರೋಹದ ಕೇಸು ದಾಖಲಾಗುತ್ತದೆ. ಸರ್ವಾಧಿಕಾರಕ್ಕೆ ಬಲಿಯಾಗಬಾರದೆಂದರೆ ಈ ದೇಶವನ್ನು ಚುನಾವಣೆಯ ಸಂದರ್ಭದಲ್ಲಿ ಎಚ್ಚೆತ್ತ ಮತದಾರರೇ ಬಚಾವ್ ಮಾಡಬೇಕು. ಅದು ಬಿಟ್ಟು ಸಂವಿಧಾನವನ್ನು ಉಳಿಸಲು, ಪ್ರಜಾಪ್ರಭುತ್ವವನ್ನು ಕಾಪಾಡಲು ಬೇರೆ ದಾರಿ ಯಾವುದಿದೆ?

-ಶಶಿಕಾಂತ ಯಡಹಳ್ಳಿ

22-04-2023

   

 

   

 

ಬುಧವಾರ, ಏಪ್ರಿಲ್ 19, 2023

ಗೋರಕ್ಷಣೆಯೆಂಬ ಪ್ರಹಸನ ಮತ್ತು ಗೋತ್ಯಾಜ್ಯ ಸೇವನೆಯ ಅಪಾಯ

ತಹ ತಹ..


ಗೋರಕ್ಷಣೆಯೆಂಬ ಪ್ರಹಸನ ಮತ್ತು  ಗೋತ್ಯಾಜ್ಯ ಸೇವನೆಯ ಅಪಾಯ

‘ಗೋಮಾತೆಯಲ್ಲಿ ಮುಕ್ಕೋಟಿ ದೇವತೆಗಳು ವಾಸಿಸುತ್ತವೆ ಎಂದರು. ಎಲ್ಲಾ ದೇವರೂ ಗೋಮಾತೆಯಲ್ಲೇ ಇದ್ದಿದ್ದೆ ನಿಜವಾದರೆ ದೇವಸ್ಥಾನಗಳಿಗೆ ಯಾಕೆ ಹೋಗಬೇಕು? ಎಂದು ಯಾರೂ ಪ್ರಶ್ನಿಸಲಿಲ್ಲ. ಬರುಡಾದರೂ ಮುದಿಯಾದರೂ ಗೋವು ಪವಿತ್ರ ಯಾರೂ ಮಾರಬಾರದು ಕೊಲ್ಲಬಾರದು ತಿನ್ನಬಾರದು ಎಂದು ಕಾನೂನು ಹೇರಿದರು, ಮುದಿ ಹಸುಗಳನ್ನು ನೀವೇ ಕೊಂಡುಕೊಂಡು ಪರಿಹಾರ ಕೊಡಿ ಎಂದು ಯಾವ ಗೋಪಾಲಕರೂ ಕೇಳಲಿಲ್ಲ. ಗೋಮೂತ್ರದಲ್ಲಿ  ಔಷಧೀಯ ಗುಣಗಳಿವೆ ದಿನವೂ ಸೇವಿಸಿ ಎಂದರು ಜನ ಮರುಪ್ರಶ್ನೆ ಕೇಳದೇ ಕುಡಿದರಾದರೂ ಯಾವುದೇ ರೋಗ ಗುಣವಾಗಲಿಲ್ಲ. ಗೋತ್ಯಾಜ್ಯದಲ್ಲಿ ರೋಗನಿರೋಧಕ ಗುಣವಿದೆ, ಕ್ಯಾನ್ಸರ್ ನಂತಹ ರೋಗಗಳೂ ವಾಸಿಯಾಗುತ್ತವೆ ಎಂದು ನಂಬಿಸಿದರು, ಸಕಲ ಖಾಯಿಲೆಗಳು ವಾಸಿಯಾಗುವುದೇ ನಿಜವಾದಲ್ಲಿ ಆಸ್ಪತ್ರೆಗಳನ್ನೆಲ್ಲಾ ಮುಚ್ಚಿ ಅಲ್ಲಿ ಗೋತ್ಯಾಜ್ಯಗಳ ಅಂಗಡಿಗಳನ್ನು ತೆಗೆಯಿರಿ ಎಂದು ಯಾರೂ ಕೇಳಲೇ ಇಲ್ಲ.

ಯಾಕೆಂದರೆ ಹಾಗೆ ಕೇಳಿದವರನ್ನು ಧರ್ಮದ ಹೆಸರಲ್ಲಿ ಹೆದರಿಸುವವರ ಗುಂಪು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾಗಿತ್ತು. ಗೋರಕ್ಷಣೆಯ ಹೆಸರಲ್ಲಿ ನಕಲಿ ನೈತಿಕ ಪೊಲೀಸರ ಗೂಂಡಾ ಪಡೆಯೇ ಹುಟ್ಟಿಕೊಂಡು ಹಾವಳಿಯನ್ನೆಬ್ಬಿಸಿತು. ಒಟ್ಟಾರೆಯಾಗಿ ನಾಲ್ಕು ಕಾಲಿನ ದನವನ್ನು ದೇವರನ್ನಾಗಿಸಿ ಇಲ್ಲದ ಗುಣಗಳನ್ನು ಆರೋಪಿಸಿದ ಬ್ರಾಹ್ಮಣ್ಯ ತನ್ನ ಆಟ ಶುರುಮಾಡಿಕೊಂಡಿತ್ತು. ಅದಕ್ಕೆ ತಕ್ಕಂತೆ ಹಿಂದುತ್ವವಾದಿ ಪ್ರಭುತ್ವವು ಗೋವಿನ ಹೆಸರಿನಲ್ಲಿ ರಾಜಕೀಯ ಮಾಡುತ್ತಾ ಮತಾಂಧತೆಯನ್ನು ಬಿತ್ತುತ್ತಾ ಹಸುವನ್ನು ಧರ್ಮದ್ವೇಷದ ಸಾಧನವನ್ನಾಗಿಸಿಕೊಂಡಿತು. ಗೋಹತ್ಯಾ ನಿಷೇಧ ಕಾನೂನನ್ನು ಜಾರಿಗೆ ತರುವ ಮೂಲಕ ಮುಸ್ಲಿಂ ಸಮುದಾಯದ ಆದಾಯದ ಮೂಲವನ್ನು ಮೊಟಕುಗೊಳಿಸುವ ಹಾಗೂ ಗೋಮಾಂಸ ರಪ್ತು ಮಾಡುವ ಕಾರ್ಪೋರೇಟ್ ಹಿಂದೂ ಮಾಂಸೋದ್ಯಮಕ್ಕೆ ಲಾಭ ಮಾಡಿಕೊಡಲಾಯ್ತು. ಗೋಸಾಕಣೆ ಮಾಡಿ ಬದುಕುತ್ತಿದ್ದ ಕೊಟ್ಯಾಂತರ ರೈತರಿಗೂ ಸಂಕಷ್ಟವನ್ನುಂಟು ಮಾಡಲಾಯ್ತು. ಗೋರಕ್ಷಕರ ಹಿಂಸೆಗೆ ಹೆದರಿದ ರೈತಾಪಿಜನರು ಗೋಪಾಲನೆ ಮಾಡುವುದನ್ನೇ ಕೈಬಿಟ್ಟಿದ್ದರಿಂದ ಗೋವುಗಳ ಸಂಖ್ಯೆಯೂ ಕ್ಷೀಣಿಸಿ ಕ್ಷೀರ ಕೊರತೆ ಉಂಟಾಗತೊಡಗಿತು.  ರೈತರು ಗೋಸಾಕಣೆಗೆಂದು ಗೋಸಾಗಣೆ ಮಾಡಿದರೂ ಗೋರಕ್ಷಕರ ಗೂಂಡಾಗಿರಿಗೆ ಹೆದರುವಂತಾಯ್ತು. ಅಂತೂ ಇಂತೂ ಗೋವು ಎನ್ನುವ ಪ್ರಾಣಿ ಹಿಂದುತ್ವವಾದಿಗಳ ಅಧಿಕಾರದ ಅಟ್ಟಕ್ಕೆ ಮೆಟ್ಟಲಾಯ್ತು.

ಇದೆಲ್ಲಾ ಗೊತ್ತಿರುವಂತಹುದೇ, ಆದರೆ ಇತ್ತೀಚೆಗೆ ಬಂದ ವರದಿಯೊಂದು ಈ ಗೋಮುಖ ವ್ಯಾಘ್ರಗಳಿಗೆ ಆಘಾತಕಾರಿಯಾಗಿದೆ. ಗೋವಿನ ತ್ಯಾಜ್ಯಗಳನ್ನು ಮೆಡಿಸಿನ್ ಎಂದು ಮಾರ್ಕೆಟ್ ಮಾಡಿ ಜನರನ್ನು ವಂಚಿಸುತ್ತಿದ್ದವರ ಮುಖವಾಡ ಕಳಚಿಬಿದ್ದಂತಾಗಿದೆ. ‘ತಾಜಾ ಗೋಮೂತ್ರದಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾಗಳಿವೆ ಹಾಗೂ ಮಾನವ ಸೇವನೆಗೆ ಅಪಾಯಕಾರಿ’ ಎಂದು ಭಾರತೀಯ ಪಶು ಸಂಶೋಧನಾ ಸಂಸ್ಥೆಯ ಅಧ್ಯಯನ ಹೇಳಿದೆ.

ಹಸು ಮತ್ತು ಹೋರಿಗಳ ಮೂತ್ರದಲ್ಲಿ ಒಂದಲ್ಲಾ ಎರಡಲ್ಲಾ 14ಕ್ಕೂ ಹೆಚ್ಚು ವಿಧದ ಹಾನಿಕಾರಕ ಬ್ಯಾಕ್ಟೀರಿಯಾಗಳಿವೆ ಎಂದು ಮೂತ್ರದ ಮಾದರಿಗಳ ಅಧ್ಯಯನದಿಂದ ಕಂಡುಕೊಳ್ಳಲಾಗಿದೆ. ಮಾನವನ ಉದರದಲ್ಲಿ ಸೋಂಕನ್ನು ಸೃಷ್ಟಿಸಬಹುದಾದ ಎಸ್ಚೇರಿಚಿಯಾ ಕೋಲಿ ಎನ್ನುವ ಅಪಾಯಕಾರಿ ಬ್ಯಾಕ್ಟೀರಿಯಾ ಸಹ ಗೋಮೂತ್ರದಲ್ಲಿರುವುದು ಕಂಡುಬಂದಿದೆಯಂತೆ. ಇಷ್ಟೇ ಅಲ್ಲ ಹಸುಗಳು ಹಾಗೂ ಎಮ್ಮೆಗಳ ಮೂತ್ರದ ಮಾದರಿಯನ್ನು ಅಧ್ಯಯನ ಮಾಡಲಾಗಿದ್ದು ಹಸುಗಳಿಗಿಂತಲೂ ಎಮ್ಮೆಗಳ ಮೂತ್ರದಲ್ಲಿ ಬ್ಯಾಕ್ಟೀರಿಯಾ ನಿರೋಧಕ ಹೆಚ್ಚಿವೆಯಂತೆ.

ಇದು ತಾಜಾ ಮೂತ್ರದ ಮಾತಾಯಿತು. ಶುದ್ಧೀಕರಿಸಿ ಕುಡಿದರೆ ಕಾಯಿಲೆ ವಾಸಿಯಾಗುತ್ತದೆ ಎಂದು ಈ ಗೋವಿನಾರಾಧಕರು ಸಮರ್ಥಿಸಿಕೊಳ್ಳದೇ ಇರಲಾರರು. ಆದರೆ ಶುದ್ದೀಕರಿಸಿದ ಮೂತ್ರದಲ್ಲಿ ಬ್ಯಾಕ್ಟೀರಿಯಾಗಳಿಲ್ಲವೆಂಬುದು ಬಹುತೇಕರ ನಂಬಿಕೆಯಾದರೂ ಅದರ ಬಗ್ಗೆಯೂ ಸಂಶೋಧನೆ ನಡೆಯುತ್ತಿದೆ ಎಂದು ಪಶು ಸಂಶೋಧನಾ ಸಂಸ್ಥೆಯ ಡಾ.ಭೋಜರಾಜ ಸಿಂಗ್ ಹೇಳಿದ್ದಾರೆ. ಐವಿಆರ್ ಐ ಸಂಸ್ಥೆಯ ಮಾಜಿ ನಿರ್ದೇಶಕ ಆರ್.ಎಸ್.ಚೌಹಾಣ್ ರವರು ಈ ಸಂಶೋಧನೆಯನ್ನು ಪ್ರಶ್ನಿಸಿ ಮತ್ತೆ ಗೊಂದಲವನ್ನು ಸೃಷ್ಟಿಸಿದ್ದಾರೆ. ಕ್ಯಾನ್ಸರ್ ಹಾಗೂ ಕೋವಿಡ್ ವಿರುದ್ಧ ಶುದ್ಧೀಕರಿಸಿದ ಗೋಮೂತ್ರ ಸೇವನೆ ಪರಿಣಾಮಕಾರಿ ಎಂದು ಸಮರ್ಥಿಸಿಕೊಂಡಿದ್ದಾರೆ.

ನಮ್ಮದು ತುಂಬಾ ಸರಳವಾದ ಪ್ರಶ್ನೆ. ಕ್ಯಾನ್ಸರ್ ಮತ್ತು ಕೋವಿಡ್ ವೈರಸ್ ಗಳಿಂದಾಗುವ ಜೀವಹಾನಿಯನ್ನು ತಪ್ಪಿಸಲು ಹೆಚ್ಚು ವೆಚ್ಚದಾಯಕ  ಔಷಧೋಪಚಾರಗಳನ್ನು ಮಾಡುವುದಾದರೂ ಯಾಕೆ? ಹಲವಾರು ಡೋಜ್ ಲಸಿಕೆಗಳನ್ನು ಕೊಡುವುದಾದರೂ ಯಾಕೆ? ಗೋಮೂತ್ರ ಸೇವನೆಯಿಂದಲೇ ಮಾರಕ ಕಾಯಿಲೆಗಳು ವಾಸಿಯಾಗುವುದಾದರೆ ಯಾಕೆ ಸರಕಾರ ಗೋಮೂತ್ರವನ್ನೇ ಸಕಲ ಖಾಯಲೆಗಳಿಗೆ ರಾಮಬಾಣವೆಂದು ಘೋಷಿಸಿ ಎಲ್ಲಾ ಊರುಗಳಲ್ಲಿ ಈಗಿರುವ ಶುದ್ಧನೀರಿನ ಘಟಕಗಳ ಹಾಗೆ ಶುದ್ಧ ಗೋಮೂತ್ರ ಘಟಕಗಳನ್ನು ಸ್ಥಾಪಿಸಬಾರದು.

ಸತ್ಯ ಏನೆಂದರೆ ಹಸು ಮಾತ್ರವಲ್ಲ ಯಾವುದೇ ಪ್ರಾಣಿಯ ಮೂತ್ರ ಅಮೇದ್ಯಗಳು ಆಯಾ ಪ್ರಾಣಿಯ ತ್ಯಾಜ್ಯಗಳಷ್ಟೇ. ಅವುಗಳನ್ನು ರೀಸೈಕಲ್ ಮಾಡಿ ಬಳಸುವುದು ಪರಿಣಾಮಕಾರಿಯೇನಲ್ಲ. ಸ್ವಮೂತ್ರಪಾನದಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎನ್ನುವುದಕ್ಕೂ ಯಾವುದೇ ಸಮರ್ಥನೀಯ ಪುರಾವೆಗಳಿಲ್ಲ.  ಭಾರತದ ಪ್ರಧಾನಿಯಾಗಿದ್ದ ಮುರಾರ್ಜಿ ದೇಸಾಯಿಯವರು ಸ್ವಮೂತ್ರ ಸೇವಿಸುತ್ತಿದ್ದರು ಎನ್ನುವ ಕಥೆ ಜಗಜ್ಜನಿತ. ಆದರೆ ತ್ಯಾಜ್ಯವನ್ನು ಸೇವಿಸಿದ್ದರಿಂದಲೇ ಗುಣಮುಖರಾದರು ಎನ್ನುವುದು ಅವರವರ ನಂಬಿಕೆಯ ಸಂಗತಿ. ಯಾಕೆಂದರೆ ಅನಕ್ಷರಸ್ತ ಮುದುಕಿಯೊಬ್ಬಳು ತನಗಾದ ಗಾಯಕ್ಕೆ ಮುಲಾಮೆಂದು ತಿಳಿದು ಟೂತ್ ಪೇಸ್ಟ್ ಹಚ್ಚಿದರೂ ಗಾಯ ವಾಸಿಯಾದಂತೆ ಈ ಮೂತ್ರಪಾನದ ಕಥೆಯೂ ಸಹ.

ಯಾರು ಏನೇ ಹೇಳಲಿ. ಅದೆಷ್ಟೇ ಸಂಶೋಧನೆಗಳಾಗಲಿ. ದೇವರು ಧರ್ಮದ ಹೆಸರಲ್ಲಿ ಮೌಡ್ಯವನ್ನು ಸೃಷ್ಟಿಸುವವರು ಮತ್ತು ಆಚರಿಸುವವರು ಇರುವವರೆಗೂ ಗೋತ್ಯಾಜ್ಯವೂ ರೋಗಬಾಧೆಗೆ ಔಷಧಿಯಾಗಬಲ್ಲುದು. ಸ್ವಮೂತ್ರಪಾನವೂ ರೋಗನಿರೋಧಕತೆ ಹೆಚ್ಚಿಸಬಹುದು. ಆದರೆ ಈ ವಿಕ್ಷಿಪ್ತ ನಂಬಿಕೆಗಳನ್ನು, ವಿಚಿತ್ರ ಪ್ರಚಾರಗಳನ್ನು ನಂಬಿಕೊಂಡು ಗೋತ್ಯಾಜ್ಯವನ್ನು ಸೇವಿಸಿದರೆ ಅಡ್ಡಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ಹಾಗೂ ಹಸುವನ್ನು ದೇವರೆಂದು ಹುಯಿಲೆಬ್ಬಿಸುವ ಪುರೋಹಿತಶಾಹಿ ಮನಸ್ಥಿತಿಯವರ ಮಾತನ್ನು ನಂಬಿ ಗೋಮೂತ್ರಪಾನ ನಿರತರಾದರೆ ಅಪಾಯ ಕಟ್ಟಿಟ್ಟ ಬುತ್ತಿ.

ಸತ್ಯ ಏನೆಂದರೆ ಯಾವುದೇ ಗೋವು ಮಾತೆಯೂ ಅಲ್ಲಾ, ದೇವತೆಯೂ ಅಲ್ಲಾ. ಅದೊಂದು ಪ್ರಾಣಿ ಅಷ್ಟೇ. ಸ್ವತಃ ಯಾವುದೇ ಹಸುವಿಗೂ ಸಹ ತಾನೊಂದು  ಸಕಲ ದೇವರುಗಳಿರುವ ಕಾಂಪ್ಲೆಂಕ್ಸ್ ಎಂದು ಗೊತ್ತಿರುವುದಿಲ್ಲ. ಯಾಕೆ ತನ್ನನ್ನು ಪೂಜಿಸುತ್ತಾರೆ ಎಂಬುದರ ಕುರಿತ ಅರಿವೂ ಆ ಪ್ರಾಣಿಗೆ ಇರಲು ಸಾಧ್ಯವಿಲ್ಲ.

ಈ ಹಿನ್ನೆಲೆಯಲ್ಲಿ ಕೆಲವು ಪ್ರಶ್ನೆಗಳು ಕಾಡುತ್ತಲೇ ಇವೆ.

·         ಭಾರತದ ಗೋವುಗಳು ಮಾತ್ರ ಗೋಮಾತೆಯಾದರೆ ಅನ್ಯ ದೇಶಗಳ ಗೋವುಗಳು ಯಾಕಲ್ಲ.

·         ಪ್ರಪಂಚದ ಯಾವುದೇ ದೇಶಗಳಲ್ಲಿ ಇರದ ಗೋಹತ್ಯಾ ನಿಷೇಧ ಕಾನೂನು ಭಾರತದಲ್ಲಿ ಮಾತ್ರ ಯಾಕೆ?

·         ಗೋಮೂತ್ರದಿಂದ ಕಾಯಿಲೆಗಳು ವಾಸಿಯಾಗುವುದೇ ದಿಟವಾಗಿದ್ದಲ್ಲಿ ದವಾಖಾನೆಗಳು ಹಾಗೂ ವೈದ್ಯರೇಕೆ?

·         ಗೋಮಾತೆಯಲ್ಲಿ ಮೂಕ್ಕೋಟಿ ದೇವತೆಗಳಿರುವುದೇ ನಿಜವಾಗಿದ್ದಲ್ಲಿ ಅಗಣಿತ ದೇವಸ್ಥಾನಗಳೇಕೆ?

·         ಬರಡು ಹಾಗೂ ಮುದಿ ದನಗಳ ಹತ್ಯೆ ನಿಷೇಧವಾದರೆ ಅವುಗಳನ್ನು ಸರಕಾರ ಹಣಕೊಟ್ಟು ಯಾಕೆ ಕೊಳ್ಳುತ್ತಿಲ್ಲ.

·         ಗೋಹತ್ಯೆ ನಿಷೇಧ ಕಾನೂನು ಮಾಡಿದರೂ ಗೋಮಾಂಸ ರಪ್ತು ಉದ್ಯಮದಲ್ಲಿ ಭಾರತ ಮುಂಚೂಣಿಯಲ್ಲಿರುವುದೇಕೆ.

·         ಗೋಸಾಗಣೆಗೆ ಅಡೆತಡೆಮಾಡುವುದರಿಂದ ಗೋಸಾಕಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದಕ್ಕೆ ಪರಿಹಾರ ಏನು?

·         ಮುಸ್ಲಿದ್ವೇಷ ಸಾಧನೆಗೆ ಬಹುಸಂಖ್ಯಾತ ಹಿಂದೂ ಗೋಸಾಕಣೆದಾರರಿಗೆ ಸಂಕಷ್ಟ ತಂದಿದ್ದು ಯಾಕೆ?

·         ಗೋಮಾಂಸ ಸೇವನೆಯ ಕುರಿತು ವೇದಗಳಲ್ಲೇ ಉಲ್ಲೇಖಗಳಿರುವಾಗ ಬ್ರಾಹ್ಮಣವ್ಯಾಧಿಗಳ ವಿರೋಧಯಾಕೆ?

·         ಗೋರಕ್ಷಣೆಯ ಹೆಸರಲ್ಲಿ ಹಲವಾರು ಹಲ್ಲೆ ಹತ್ಯೆ ಪ್ರಾಣಹಾನಿಗಳಾಗಿದ್ದಕ್ಕೆ ಹೊಣೆಗಾರರು ಯಾರು?

ಹೀಗೆ ಪ್ರಶ್ನೆಗಳೇನೋ ಬೇಕಾದಷ್ಟಿವೆ. ಆದರೆ ಉತ್ತರಿಬೇಕಾದವರು ಗೋರಕ್ಷಣೆ ಹೆಸರಲ್ಲಿ ಭಾವಪ್ರಚೋದನೆಯಲ್ಲಿ ನಿರತರಾಗಿದ್ದಾರೆ.

ಶಶಿಕಾಂತ ಯಡಹಳ್ಳಿ

16-4-2023

 


 

 

ಶನಿವಾರ, ಏಪ್ರಿಲ್ 15, 2023

ಅಂಬೇಡ್ಕರ್ ಮತ್ತು ಚುನಾವಣೆ ವ್ಯವಸ್ಥೆ

 

ತಹ ತಹ

ಅಂಬೇಡ್ಕರ್ ಮತ್ತು ಚುನಾವಣೆ ವ್ಯವಸ್ಥೆ

ಬಂಡವಾಳಶಾಹಿ  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಎನ್ನುವುದು ಉಳ್ಳವರ ಮೇಲ್ವರ್ಗದವರ ಹಣಬಲ ಜಾತಿಬಲ ತೋಳ್ಬಲ ಇದ್ದವರ ಆಡಂಬೋಲವಾಗಿದೆ ಎಂಬುದು ಬಹಿರಂಗ ಸತ್ಯ. ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ರವರಂತಹ ಮಹಾನ್ ಮಾನವತಾವಾದಿಯವರೂ ಸಹ ಈ ಚುನಾವಣಾ ವ್ಯವಸ್ಥೆಯಲ್ಲಿ ಸೋಲನ್ನು ಅನುಭವಿಸಿದ್ದು ಮಹಾ ವಿಪರ್ಯಾಸ.

ಅಂಬೇಡ್ಕರ್ ರವರು ಮೊದಲ ಸಲ ಚುನಾವಣೆಗೆ ಸ್ಪರ್ಧಿಸಿದ್ದು 1952 ರಲ್ಲಿ ಉತ್ತರ ಮುಂಬಯಿ ಮೀಸಲು ಕ್ಷೇತ್ರದಿಂದ.ಅಖಿಲ ಭಾರತ ಪರಿಶಿಷ್ಟ ಜಾತಿ ಒಕ್ಕೂಟದ ಅಭ್ಯರ್ಥಿಯಾಗಿ. (ನಂತರ ಈ ಒಕ್ಕೂಟವು ರೀಪಬ್ಲಿಕನ್ ಪಾರ್ಟಿ ಆಪ್ ಇಂಡಿಯಾ ಆಯಿತು.) ಆಗ ಅಂಬೇಡ್ಕರ್ ರವರಿಗೆ ಅವಿರೋಧವಾಗಿ ಆಯ್ಕೆಯಾಗಬಹುದೆಂಬ ನಿರೀಕ್ಷೆ ಇತ್ತು. ಆದರೆ.. ಅಂಬೇಡ್ಕರ್ ರವರನ್ನು ಸೋಲಿಸಲೇಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ಪಕ್ಷವು  ನಾರಾಯಣ ಕಾಜರೋಳ್ಕರ್ ಎನ್ನುವವರನ್ನು ಸ್ಪರ್ಧೆಗೆ ಇಳಿಸಿತು. ಹಿಂದುಳಿದ ವರ್ಗದ ಈ ನಾರಾಯಣ್  ಅಂಬೇಡ್ಕರ್ ರವರಿಗೆ ಸಹಾಯಕರಾಗಿದ್ದವರು. ಅವರನ್ನೇ ಎತ್ತಿಕಟ್ಟಿದ ಕಾಂಗ್ರೆಸ್ ನವರು ಅಂಬೇಡ್ಕರ್ ವಿರುದ್ದವೇ ಸ್ಪರ್ಧಿಸುವಂತೆ ಮಾಡಿದ್ದರು. ಬಾಬಾಸಾಹೇಬರ ವಿರುದ್ಧ ಮೇಲ್ಜಾತಿ ಉಳಿಗಮಾನ್ಯ ಶಕ್ತಿಗಳು ಒಂದಾದವು. ಅಂಬೇಡ್ಕರ್ ರವರ ವಿರುದ್ಧ ಕಾಂಗ್ರೆಸ್, ಕಮ್ಯೂನಿಸ್ಟ್ ಪಕ್ಷ ಹಾಗೂ ಹಿಂದೂ ಮಹಾಸಭಾದವರೆಲ್ಲಾ ಒಟ್ಟಾಗಿ ಅಂಬೇಡ್ಕರ್ ರವರ ವಿರುದ್ಧ ಅಬ್ಯರ್ಥಿಗಳನ್ನು ಹಾಕಿ ಮತವಿಭಜನೆ ತಂತ್ರ ಹೂಡಿದರು. ಆಗಿನ ಕಾಲದಲ್ಲೆ ಮತದಾರರಿಗೆ ಹಣ ಹಂಚಿದರು, ಪರಿಶಿಷ್ಟ ಜಾತಿ ಪಂಗಡಗಳ ನಡುವೆಯೇ ದ್ವೇಷದ ಬೀಜ ಬಿತ್ತಿದರು. ಅಶೋಕ ಮೆಹತಾ ನೇತೃತ್ವದ ಸಮಾಜವಾದಿಗಳು ಮಾತ್ರ ಚುನಾವಣೆಯಲ್ಲಿ ಅಂಬೇಡ್ಕರ್ ರವರನ್ನು ಬೆಂಬಲಿಸಿದ್ದರು.

ಚುನಾವಣೆಯಲ್ಲಿ ಅಂಬೇಡ್ಕರ್ ವಿರುದ್ದ ತೀವ್ರವಾಗಿ ಪ್ರಚಾರ ಮಾಡಿದವರು ಸಿಪಿಐ ಪಕ್ಷದ ಎಸ್.ಐ. ಡಾಂಗೆ. ಕಮ್ಯೂನಿಸ್ಟ್ ಪಕ್ಷ ಮಾಡಿದ ಈ ಅವಗಡದಿಂದಾಗಿ ಅಂದಿನಿಂದ ಇಂದಿನವರೆಗೂ ಮಹಾರಾಷ್ಟ್ರದಲ್ಲಿ ದಲಿತ ಹಾಗೂ ಕಮ್ಯೂನಿಸ್ಟರ್ ನಡುವಿನ ಅಸಹನೆ ಕಡಿಮೆಯಾಗಿಲ್ಲ. ಎಲ್ಲಾ ಶಕ್ತಿಗಳೂ ಸೇರಿ ಚುನಾವಣೆಯಲ್ಲಿ ಅಂಬೇಡ್ಕರ್ ರವರನ್ನು ಹೀನಾಯವಾಗಿ ಸೋಲಿಸಿದರು. ಕಾಜರೋಳ್ಕರ್ ಹದಿನೈದು ಸಾವಿರ ಮತಗಳಿಂದ ಗೆದ್ದರು. ಬಾಬಾಸಾಹೇಬರು ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಸ್ವತಂತ್ರ ಭಾರತದ ಮೊದಲ ಸಾರ್ವತ್ರಿಕ  ಚುನಾವಣೆಯಾಗಿದ್ದರಿಂದ  ಮತದಾರರಿಗೆ ಮತದಾನದ ಬಗ್ಗೆ ತಿಳುವಳಿಕೆಯ ಕೊರತೆಯೂ ಇದ್ದಿದ್ದರಿಂದ ಐವತ್ತು ಸಾವಿರದಷ್ಟು ಮತಗಳು ತಿರಸ್ಕೃತಗೊಂಡಿದ್ದವು. ಸರಿಯಾಗಿ ಮತ ಚಲಾವಣೆಗಳಾಗಿದ್ದರೆ ಅಂಬೇಡ್ಕರ್ ರವರು ಗೆಲ್ಲುವ ಸಾಧ್ಯತೆಯೇ ಹೆಚ್ಚಿತ್ತು.  ಈ ಹಿನ್ನೆಡೆ ಅಂಬೇಡ್ಕರ್ ರವರಿಗೆ ಘಾಸಿಯನ್ನುಂಟು ಮಾಡಿತು. ಆಳುವ ವರ್ಗಗಳು ಅದು ಹೇಗೆ ದಲಿತ ವರ್ಗದವರನ್ನೇ ಒಡೆದು ತಮ್ಮ ಹಿತಾಸಕ್ತಿಗೆ ಪೂರಕವಾಗಿರುವವರನ್ನು ಆಯ್ಕೆಯಾಗುವಂತೆ ಮಾಡುತ್ತವೆ ಎಂಬ ಸತ್ಯ ಅರಿವಿಗೆ ಬಂತು.

ಈ ಚುನಾವಣೆಯಲ್ಲಿ ಸೋತ ನಂತರ ಅಂಬೇಡ್ಕರ್ ರವರು ಚಾರಿತ್ರಿಕ ಭಾಷಣ ಮಾಡಿದರು. “ಹೌದು ನಾವು ಮಾರಾಟಕ್ಕೆ ಸಿದ್ದರಿಲ್ಲವಾದ್ದರಿಂದ ಸೋತಿದ್ದೇವೆ . ಪಕ್ಷಾಂತರ ಮಾಡಲಾರದ ನಾವು ಮುಂದೆಯೂ ಸೋಲುತ್ತೇವೆ. ಗೆಲ್ಲುವುದಷ್ಟೇ ನಮ್ಮ ಆದ್ಯತೆಯಲ್ಲ. ನಾವು ನಮ್ಮ ತತ್ವ ಆದರ್ಶಕ್ಕೆ ಬದ್ದರಾದವರು, ಉತ್ತಮ ಮೌಲ್ಯ ಮತ್ತು ಅರಿವಿಗಾಗಿ ಹೋರಾಡೋಣ” ಎಂದು ಕರೆಕೊಟ್ಟರು.

ಹಣಬಲ ಜಾತಿಬಲ ಹಾಗೂ ತೋಳ್ಬಲಗಳಿಂದ ಉಳ್ಳವರೇ ಚುನಾವಣೆಗಳಲ್ಲಿ ನಿರಂತರವಾಗಿ ಆಯ್ಕೆಯಾಗಿ ದೇಶದ ನೀತಿ ನಿರೂಪಣೆ ತೀರ್ಮಾನ ಮಾಡುವ ಆಡಳಿತದ ಕೇಂದ್ರದಲ್ಲಿ  ಹಿಂದುಳಿದವರು ಹಾಗೂ ದಲಿತರಿಗೆ ಸೂಕ್ತ ಪ್ರಾತಿನಿದ್ಯ ಸಿಕ್ಕಲಾರದು ಎಂಬುದನ್ನು ಮನಗಂಡ ಅಂಬೇಡ್ಕರ್ ರವರು 1927 ರಲ್ಲಿ ದಲಿತರಿಗೆ ಪ್ರತ್ಯೇಕ ಪ್ರಾತಿನಿಧ್ಯಕ್ಕಾಗಿ ಒತ್ತಾಯಿಸಿದರು. ತಳ ಕೆಳ ಸಮುದಾಯದ ದಲಿತರು ಎರಡು ಮತಗಳನ್ನು ಹಾಕುವ ವ್ಯವಸ್ಥೆ ಜಾರಿಗೆ ಬರಬೇಕೆಂಧೂ ಹೋರಾಡಿದರು. ಇದರಿಂದಾಗಿ ಮೇಲ್ವರ್ಗದವರು ಬೆಚ್ಚಿ ಬಿದ್ದರು. ಅಂಬೇಡ್ಕರ್ ರವರ ನ್ಯಾಯಯುತ ಬೇಡಿಕೆಯನ್ನು ಎಲ್ಲಿ ಬ್ರೀಟೀಷರು ಜಾರಿಗೆ ತರುತ್ತಾರೋ ಎಂದು ಆತಂಕಗೊಂಡರು. ಆಗಲೇ ಮಹಾತ್ಮಾ ಗಾಂಧೀಜಿ ಈ ಬೇಡಿಕೆಯ ವಿರುದ್ಧ ಅಮರಣಾಂತ ಉಪವಾಸ ಕೈಗೊಂಡರು. ಗಾಂಧೀಜಿಯವರ ಪ್ರಾಣವನ್ನು ಉಳಿಸಿ ಎಂದು ಅನೇಕರು ಅಂಬೇಡ್ಕರರ ಮೇಲೆ ಭಾವನಾತ್ಮಕವಾದ ಒತ್ತಡವನ್ನು ಹಾಕತೊಡಗಿದರು. ಎಲ್ಲಿ ಗಾಂಧೀಜಿಯವರು ತೀರಿಕೊಂಡು ಸ್ವಾತಂತ್ರ್ಯ ಚಳುವಳಿಕೆ ಹಿನ್ನಡೆಯಾಗುತ್ತದೋ ಎಂದು ಆತಂಕಗೊಡ ಅಂಬೇಡ್ಕರರವರು ಒಲ್ಲದ ಮನಸ್ಸಿನಿಂದ 1932 ರಲ್ಲಿ ಪೂನಾ ಒಪ್ಪಂದಕ್ಕೆ ಸಹಿ ಹಾಕಿ ದಲಿತರ ಪ್ರತ್ಯೇಕ ಪ್ರಾತಿನಿಧ್ಯದ ಬೇಡಿಕೆಯಿಂದ ಹಿಂದೆ ಸರಿದರು. ಮೇಲ್ವರ್ಗದವರ ಕೈ ಮೇಲಾಯಿತು.

ತದನಂತರ 1954 ರಲ್ಲಿ ವಿದರ್ಭ ಭಂಡಾರ ಲೋಕಸಭಾ ಮೀಸಲು ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲೂ ಬಾಬಾಸಾಹೇಬರು ಸ್ಪರ್ಧಿಸಿದರು. ಆಗಲೂ ಸಹ ಈ ಮೇಲ್ವರ್ಗದವರ ಕುತಂತ್ರ ಹಾಗೂ ಕಾಂಗ್ರೆಸ್ ಕಮ್ಯೂನಿಸ್ಟ್ ಪಕ್ಷಗಳ ತಂತ್ರಗಾರಿಕೆಯಿಂದಾಗಿ ಮೂರು ಸಾವಿರ ಮತಗಳಲ್ಲಿ ಅಂಬೇಡ್ಕರ್ ರವರು ಸೋತರು. ಅಂಬೇಡ್ಕರ್ ರವರ ಈ ಸೋಲುಗಳಿಗೆ ನಿಜವಾದ ಕಾರಣ ಜಾತೀಯತೆ ಮತ್ತು ಉಳಿಗಮಾನ್ಯ ವ್ಯವಸ್ಥೆಯಾಗಿತ್ತು. ಜಾತಿವ್ಯವಸ್ಥೆ ನಾಶವಾಗಬೇಕು, ಆರ್ಥಿಕ ಅಸಮಾನತೆ ತೊಲಗಬೇಕು, ದಲಿತರಿಗೂ ಭೂಮಿಯ ಒಡೆತನ ದೊರೆಯಬೇಕು, ಇದಕ್ಕೆ ಪೂರಕವಾಗಿ ಕಾನೂನುಗಳು ರೂಪಗೊಳ್ಳಬೇಕು ಎಂದು ಪ್ರತಿಪಾದಿಸುತ್ತಿದ್ದ ಅಂಬೇಡ್ಕರ್ ರವರನ್ನು ಭೂಮಾಲೀಕರುಗಳೂ, ಮೇಲ್ಜಾತಿಯವರು ಒಪ್ಪಿಕೊಳ್ಳಲು ಸಾಧ್ಯವೇ ಇರಲಿಲ್ಲ. 1950 ಜನವರಿ 26 ರಂದು ಜಾರಿಗೆ ಬಂದ ಭಾರತದ ಸಂವಿಧಾನದಲ್ಲಿ ಸಮಾನತೆಯ ಅಂಶಗಳನ್ನು ಕಟ್ಟಿಕೊಟ್ಟ ಅಂಬೇಡ್ಕರ್ ರವರು ಜಾತಿ ಮತ ವರ್ಗ ತಾರತಮ್ಯವನ್ನು ಕಾನೂನಾತ್ಮಕವಾಗಿ ಬಹಿಷ್ಕರಿಸಿದ್ದರು. ಇದೂ ಕೂಡಾ ಈ ಮೇಲ್ಜಾತಿ ವರ್ಗದವರ ಅಸಮಾಧಾನಕ್ಕೆ ಕಾರಣವಾಗಿತ್ತು. ಎಲ್ಲಿ ಅಂಬೇಡ್ಕರರವರು ಚುನಾವಣೆಯಲ್ಲಿ ಗೆದ್ದು ಸಂಸತ್ತಿಗೆ ಬಂದರೆ ತಮ್ಮ ಅಸ್ತಿತ್ವಕ್ಕೆ ದಕ್ಕೆ ಬರುತ್ತದೋ ಎಂದು ಆತಂಕಗೊಂಡು ಚುನಾವಣೆಯಲ್ಲಿ ಗೆಲ್ಲದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು.

ಆದರೆ.. ಅಂಗೈಯನ್ನು ಅಡ್ಡಹಿಡಿದು ಸೂರ್ಯಕಾಂತಿ ತಡೆಯಬಹುದೇ? ಚುನಾವಣಾ ಸೋಲಿನಿಂದ ಅಂಬೇಡ್ಕರ್ ರವರು ಹತಾಶರಾಗಲಿಲ್ಲ. ದೀನ ದಲಿತ ದಮನಿತರ ಪರವಾದ ಹೋರಾಟಗಳನ್ನು ಕೈಬಿಡಲಿಲ್ಲ. ಸಮಸಮಾಜ ಕಟ್ಟುವ ನಿಟ್ಟಿನಲ್ಲಿ ವಿರಮಿಸಲಿಲ್ಲ. ಮೇಲ್ವರ್ಗದವರು ಒಡ್ಡಿದ ಅಡೆತಡೆಗಳಿಗೆ ಬಗ್ಗಲಿಲ್ಲ. ತಮ್ಮ ಪತ್ರಿಕೆ, ಲೇಖನ, ಭಾಷಣ ಮತ್ತು ಹೋರಾಟಗಳ ಮೂಲಕ ಜನಜಾಗೃತಿ ಮಾಡುವುದನ್ನು ಬಿಡಲಿಲ್ಲ. ಏನೇ ಆದರೂ ಈ ಜಾತಿವಾದಿ ವ್ಯವಸ್ಥೆಯ ಕಿರುಕುಳ ತಪ್ಪಲಿಲ್ಲ. ಕೊನೆಗೆ ಅಸಮಾನತೆಯ ಕೂಪವಾದ ಹಿಂದೂ ಧರ್ಮವನ್ನೇ ತ್ಯಜಿಸಿದ ಬಾಬಾಸಾಹೇಬರು 1956 ಅಕ್ಟೋಬರ್ 14 ರಂದು ಸಂಘ ಪರಿವಾರದ ಶಕ್ತಿ ಕೇಂದ್ರವಾದ ನಾಗಪುರದಲ್ಲಿ ತಮ್ಮ ಲಕ್ಷಾಂತರ ಅನುಯಾಯಿಗಳಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಂಡು ಹಿಂದೂ ಧರ್ಮೀಯ ಮೇಲ್ಜಾತಿ ವರ್ಗಕ್ಕೆ ಮರ್ಮಾಘಾತವನ್ನುಂಟು ಮಾಡಿದರು.

ಭಾರತದ ಭಾಗ್ಯ ವಿಧಾತರಾದ ಅಂಬೇಡ್ಕರ್ ರವರು ಬೌತಿಕವಾಗಿ ಇಲ್ಲವಾಗಿರಬಹುದು. ಆದರೆ ಅವರು ಬಿಟ್ಟು ಹೋದ ಸಮಾನತೆ ಸಹೋದರತ್ವ ಸಿದ್ದಂತಗಳು ಇಂದಿನವರಿಗೆ ಮಾರ್ಗದರ್ಶಕವಾಗಿವೆ. ಅವರು ಕೊಟ್ಟು ಹೋದ ಸಂವಿಧಾನವು ಭಾರತೀಯರಿಗೆಲ್ಲಾ ಧರ್ಮಗ್ರಂಥವಾಗಿವೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಚುನಾವಣಾ ವ್ಯವಸ್ಥೆ ಪ್ರಾಮಾಣಿಕವಾಗಿರಲಂತೂ ಸಾಧ್ಯವೇ ಇಲ್ಲ. ಆದರೆ ಅಂಬೇಡ್ಕರ್ ರವರು ಪ್ರತಿಪಾದಿಸಿದ ಮೌಲ್ಯಗಳು, ತತ್ವಗಳನ್ನು ಅಳವಡಿಸಿಕೊಳ್ಳಬೇಕಿದೆ. ಸಂವಿಧಾನವನ್ನು ಉಳಿಸಿಕೊಳ್ಳಬೇಕಿದೆ. ಜೈ ಭೀಮ್

-ಶಶಿಕಾಂತ ಯಡಹಳ್ಳಿ

14-04-2023

 

 

ಪುಲ್ವಾಮಾ ದಾಳಿಯ ಹಿಂದಿರುವ ಸತ್ಯವೂ ಹಾಗೂ ಸತ್ಯಪಾಲರ ಸತ್ಯ ನಿವೇದನೆಯೂ..

 


ತಹ ತಹ..

ಪುಲ್ವಾಮಾ ದಾಳಿಯ ಹಿಂದಿರುವ ಸತ್ಯವೂ ಹಾಗೂ ಸತ್ಯಪಾಲರ ಸತ್ಯ ನಿವೇದನೆಯೂ..

ಸತ್ಯ ಎನ್ನುವುದು ನಿಗಿನಿಗಿ ಉರಿವ ಕೆಂಡದ ಹಾಗೆ. ಅದರ ಮೇಲೆ ಅದೆಷ್ಟೇ ಸುಳ್ಳಿನ ಬೂದಿ ಮುಚ್ಚಿದರೇನು ಯಾರಾದರೂ ಬಲವಾದ  ಗಾಳಿ ಬೀಸಿದರೆ ಬೂದಿ ಹಾರಿ ಬೆಂಕಿ ಬೆಳಗುವುದು ನಿಶ್ಚಿತ. ಈಗ ಆಗಿದ್ದೂ ಸಹ ಹಾಗೇನೇ..

2019 ಲೋಕಸಭೆಯ ಚುನಾವಣಾ ವರ್ಷ. ಚುನಾವಣೆ ಇನ್ನೇನು ಕೇವಲ ಮೂರು ತಿಂಗಳು ಬಾಕಿ ಇದೆ (ಮೇ 2019) ಎನ್ನುವಾಗ ಒಂದು ಮಹತ್ವದ ದುರಂತ ಘಟನೆ ನಡೆದು ಇಡೀ ದೇಶವನ್ನೇ ತಲ್ಲಣಗೊಳಿಸಿತು. ಅದು ಪುಲ್ವಾಮಾದಲ್ಲಿ ಯೋಧರ ಮೇಲೆ ನಡೆದ ಭಯೋತ್ಪಾದಕ ದಾಳಿ. ಫೆಬ್ರವರಿ 14, 2019 ರಂದು, ಜಮ್ಮುವಿನ  ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ, ಭದ್ರತಾ ಸಿಬ್ಬಂದಿಯನ್ನು ಸಾಗಿಸುವ ವಾಹನಕ್ಕೆ ಪುಲ್ವಾಮಾ ಜಿಲ್ಲೆಯ ಲೆಥ್ಪೊರದಲ್ಲಿ (ಅವಾಂತಿಪೋರಾ ಬಳಿ) ಆತ್ಮಹತ್ಯಾ ಬಾಂಬರ್ ವಾಹನದಿಂದ ದಾಳಿ ಮಾಡಲಾಯಿತು. ದಾಳಿಯಿಂದಾಗಿ ಕೇಂದ್ರ ಮೀಸಲು ಪಡೆಯ  40 ಮಂದಿ ಯೋಧರು ಹತರಾದರು. ಇದಕ್ಕೆ ಪ್ರತಿಯಾಗಿ ಭಾರತದ ವಾಯುಪಡೆಯ ಯೋಧರು ಪಾಕಿಸ್ಥಾನದ ಬಾರಾಕೋಟ್ ನಲ್ಲಿ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿ 250 ಉಗ್ರಗಾಮಿಗಳನ್ನು ಕೊಂದು ಹಾಕಿದರು. ಅದಕ್ಕೆ ಸರ್ಜಿಕಲ್ ಸ್ಟ್ರೈಕ್ ಎಂದು ಹೆಸರಿಸಿದ ಬಿಜೆಪಿಗರು ಇಡೀ ದೇಶಾದ್ಯಂತ ದೇಶಭಕ್ತಿಯ ಅಲೆಯನ್ನೇ ಸೃಷ್ಟಿಸಿ ಸಂಚಲನವನ್ನುಂಟು ಮಾಡಿದರು.

ಈ ಸೋ ಕಾಲ್ಡ್ ಸರ್ಜಿಕಲ್ ಸ್ಟ್ರೈಕ್ ಅನ್ನು ಪಾಕಿಸ್ತಾನ ಅಲ್ಲಗಳೆಯಿತು. ವಿರೋಧ ಪಕ್ಷದವರು ತಕರಾರೆತ್ತಿ ಸಾಕ್ಷಿ ಕೇಳಿದರು. ಪುಲ್ವಾಮಾ ಘಟನೆಯ ಹಿಂದಿರುವ ಹಿಕ್ಮತ್ತನ್ನು ಪ್ರಶ್ನಿಸಿದರು. ಆದರೆ ಕೇಂದ್ರ ಸರಕಾರವು ಸಾಕ್ಷಿ ಕೇಳಿದವರ ವಿರುದ್ಧವೇ ದೇಶದ್ರೋಹಿಗಳು ಎನ್ನುವ ಆರೋಪ ಹೊರೆಸಿತು. ನಮ್ಮ ಯೋಧರ ಸಾವನ್ನು ಅಪಮಾನಿಸಾಗುತ್ತದೆ, ಶೌರ್ಯವನ್ನು ಕಡೆಗಣಿಸಲಾಗುತ್ತದೆ ಎಂದು ವ್ಯಾಪಕವಾಗಿ ಹೇಳುವ ಮೂಲಕ ದೇಶಭಕ್ತಿಯ ಸಮೂಹ ಸನ್ನಿ ಹುಟ್ಟಿಸಲಾಯಿತು. ಹಿಂದೆ ಹಲವಾರು ಸಲ ಸರ್ಜಿಕಲ್ ಸ್ಟ್ರೈಕ್ ಗಳು ನಡೆದರೂ ಅದು ಮಿಲಿಟರಿ ಕಾರ್ಯಾಚರಣೆಗಳಾಗಿದ್ದವೇ ಹೊರತು ಪ್ರಚಾರದ ಸರಕಾಗಿರಲಿಲ್ಲ. ಆದರೆ ಪುಲ್ವಾಮಾ ದಾಳಿ ಹಾಗೂ ಬಾರಾಕೋಟ್ ಸರ್ಜಿಕಲ್ ಸ್ಟ್ರೈಕ್ ನ್ನು ಚುನಾವಣಾ ಪ್ರಚಾರದ ಸರಕನ್ನಾಗಿ ಬಳಸಿಕೊಂಡ ಬಿಜೆಪಿ  ಮೂರು ತಿಂಗಳ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಭಾರೀ ಬಹುಮತವನ್ನು ಗೆದ್ದುಕೊಂಡಿತು.

ಆದರೆ… ಗೋದಿ ಮೀಡಿಯಾಗಳು ಅದೆಷ್ಟೇ ಉತ್ಪ್ರೇಕ್ಷೆ ಮಾಡಿ ಹೇಳಿದರೂ ಪುಲ್ವಾಮಾ ದಾಳಿ ಹಾಗೂ ಸರ್ಜಿಕಲ್ ಸ್ಟ್ರೈಕ್ ಕುರಿತ ಅನುಮಾನಗಳು ಹಾಗೆಯೇ ಉಳಿದುಕೊಂಡವು. ಸಂದೇಹ ವ್ಯಕ್ತಪಡಿಸಿದವರ ಬಾಯಿ ಮುಚ್ಚಿಸಲು ಮೋದಿ ಹಾಗೂ ಅವರ ಸಮರ್ಥಕರು ಅದೆಷ್ಟೇ ಪ್ರಯತ್ನಿಸಿದರೂ ಯಾಕೋ ಸ್ಪಷ್ಟ ಚಿತ್ರಣ ಸಿಕ್ಕಿರಲಿಲ್ಲ. ಆದರೆ ನಿನ್ನೆ ಎಪ್ರಿಲ್ 14 ರಂದು ಯಾವಾಗ ಜಮ್ಮು ಕಾಶ್ಮೀರದ ಕೊನೆಯ ರಾಜ್ಯಪಾಲರಾಗಿದ್ದ ಸತ್ಯಪಾಲ್ ಮಲಿಕ್ ರವರು ದಿ ವೈರ್ ಸುದ್ದಿ ಜಾಲತಾಣದಲ್ಲಿ ನಡೆದ ಸಂದರ್ಶನದಲ್ಲಿ ಕೆಲವೊಂದು ಸತ್ಯಗಳನ್ನು ಬಾಯಿಬಿಟ್ಟರೋ ಆಗ ಗೋದಿ ಮೀಡಿಯಾ ಮತ್ತು ಮೋದಿ ಮೇನಿಯಾಪೀಡಿತರ ಬಾಯಿ ಕಟ್ಟಿತು. ಮಲಿಕ್ ರವರು ಹೇಳಿದ್ದೇನೆಂದರೆ..

“ಪ್ರಧಾನಿಗೆ ಕಾಶ್ಮೀರದ ಬಗ್ಗೆ ಸರಿಯಾದ ತಿಳುವಳಿಕೆಯಿಲ್ಲ ಮತ್ತು ಅವರು ಅಜ್ಞಾನಿಯಾಗಿದ್ದಾರೆ. ಪುಲ್ವಾಮಾದಲ್ಲಿ ಯೋಧರ ಮೇಲೆ ವಿನಾಶಕಾರಿ ಭಯೋತ್ಪಾದಕ ದಾಳಿಗೆ ಕಾರಣವಾಗಿದ್ದ ಕೇಂದ್ರ ಗೃಹ ಸಚಿವಾಲಯದ ಲೋಪಗಳ ಬಗ್ಗೆ ಮಾತನಾಡದಂತೆ ಅವರು ನನಗೆ ಸೂಚಿಸಿದ್ದರು. ಕೇಂದ್ರ ಮೀಸಲು ಪಡೆಯ ವಾಹನಗಳ ಮೇಲಿನ ದಾಳಿಯು ಭಾರತೀಯ ವ್ಯವಸ್ಥೆಯ, ವಿಶೇಷವಾಗಿ ಗೃಹ ಸಚಿವಾಲಯದ  ಅದಕ್ಷತೆ ಮತ್ತು ಬೇಜವಾಬ್ದಾರಿಯ ಫಲಶೃತಿಯಾಗಿತ್ತು. ಸಿಆರ್ಪಿಎಫ್ ತನ್ನ ಪಡೆಗಳನ್ನು ಸಾಗಿಸಲು ವಿಮಾನವನ್ನು ಕೋರಿತ್ತು ಆದರೆ ಗೃಹಸಚಿವಾಲಯವು ಅದನ್ನು ನಿರಾಕರಿಸಿತ್ತು. ವಾಹನಗಳು ಸಾಗಬೇಕಿದ್ದ ಮಾರ್ಗದ ಭದ್ರತಾ ಪರಿಶೀಲನೆಯನ್ನೂ ಸರಿಯಾಗಿ ಮಾಡಲಾಗಿರಲಿಲ್ಲ. ಪುಲ್ವಾಮಾ ದಾಳಿಯ ಬೆನ್ನಲ್ಲೇ ಮೋದಿಯವರು ನನಗೆ ಕರೆ ಮಾಡಿದಾಗ ಈ ಎಲ್ಲಾ ಲೋಪಗಳನ್ನು ತಾನು ನೇರವಾಗಿ ಎತ್ತಿದ್ದೆ. ಆದರೆ ಈ ಕುರಿತು ಸುಮ್ಮನಿರುವಂತೆ ಹಾಗೂ ಯಾರಿಗೂ ತಿಳಿಸದಂತೆ ಪ್ರಧಾನಿಯವರು ನನಗೆ ಸೂಚಿಸಿದ್ದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸಹ ನನಗೆ ಇದೇ ಸೂಚನೆ ನೀಡಿದ್ದರು. ದಾಳಿಯ ಆರೋಪವನ್ನು ಪಾಕಿಸ್ತಾನದ ಮೇಲೆ ಹೊರಿಸುವುದು ಹಾಗೂ ಸರಕಾರ ಮತ್ತು ಬಿಜೆಪಿಗೆ ಚುನಾವಣಾ ಲಾಭಗಳನ್ನು ಪಡೆಯುವುದು ಅವರ ಉದ್ದೇಶವಾಗಿದೆ ಎನ್ನುವುದು ನನಗೆ ತಕ್ಷಣಕ್ಕೆ ಅರ್ಥವಾಗಿತ್ತು.”

ಇದು ಸತ್ಯಪಾಲ್ ಮಲ್ಲಿಕ್ ರವರ ಸಂದರ್ಶನದ ಸಾರ..   ಹಾಗಾದರೆ ಪುಲ್ವಾಮಾ ದುರಂತ ಕೇಂದ್ರ ಸರಕಾರದ ಗೃಹ ಇಲಾಖೆಯ ಪೂರ್ವಯೋಜಿತ ಕೃತ್ಯವಾ? ಅಥವಾ ತಮ್ಮದೇ ಬೇಜವಾಬ್ದಾರಿಯಿಂದಾದ ಪರಿಸ್ಥಿತಿಯ ಲಾಭವನ್ನು ಪಡೆದು ದೇಶದ ಜನರನ್ನು ಭಾವಪ್ರಚೋದನೆಗೆ ಒಳಪಡಿಸಲು ನರೇಂದ್ರ ಮೋದಿ ಮತ್ತು ಅಜಿತ್ ದೋವಲ್  ಹಾಗೂ ಗೃಹಮಂತ್ರಿ ರಾಜನಾಥಸಿಂಗ್ ರವರು ಹೀಗೊಂದು ವ್ಯವಸ್ಥಿತ ಯೋಜನೆ ರೂಪಿಸಿದ್ರಾ? ಗುಪ್ತಚರ ಇಲಾಖೆಯ ಬಹುದೊಡ್ಡ ವೈಫಲ್ಯವಾ? ಭಯೋತ್ಪಾದಕ ಪೀಡಿತ ಪ್ರದೇಶವೆಂದು ಗೊತ್ತಿದ್ದೂ ಸಿಆರ್ಪಿಎಪ್ ವಾಹನಗಳು ಚಲಿಸುವ ಮಾರ್ಗವನ್ನು ಪರಿಶೀಲಿಸದೇ, ಸೂಕ್ತ ರಕ್ಷಣೆಯನ್ನೂ ಕಲ್ಪಿಸದೇ ಕೇಂದ್ರ ಗೃಹ ಸಚಿವಾಲಯವು 40 ಯೋಧರ ಸಾವಿಗೆ ಕಾರಣವಾಯ್ತಾ? ಅವಕಾಶವಾದಿ ರಾಜನೀತಿಯ ಬೇಜವಾಬ್ದಾರಿತನದಿಂದ ಹತರಾದ ಯೋಧರ ಕುಟುಂಬಗಳ ಗತಿ ಏನು? ಗೃಹಸಚಿವಾಲಯ ಮತ್ತು ಬೇಹುಗಾರಿಕಾ ವಿಭಾಗದ ವೈಫಲ್ಯಗಳನ್ನು ಮರೆಮಾಚಲು ದಾಳಿಯ ಆರೋಪವನ್ನು ಪಾಕಿಸ್ತಾನದ ಮೇಲೆ ಹೇರಿ ತನ್ನ ಬೇಜವಾಬ್ದಾರಿತನದಿಂದ ಪಾರಾಗಲು ಮೋದಿಯವರು ಸರ್ಜಿಕಲ್ ಸ್ಟ್ರೈಕ್ ಎನ್ನುವ ಬ್ರಹನ್ನಾಟಕವನ್ನು ರಚಿಸಿದ್ದರಾ? ಈ ಯೋಧರ ಸಾವುಗಳನ್ನೇ ಚುನಾವಣಾ ಪ್ರಚಾರದ ಪ್ರಮುಖ ಸರಕನ್ನಾಗಿ ಮಾಡಿಕೊಂಡ ಮೋದಿ ಸರಕಾರ ದೇಶವಾಸಿಗಳಲ್ಲಿ ದೇಶಭಕ್ತಿಯ ಭಾವನೆಯನ್ನು ಪ್ರೇರೇಪಿಸಿ ದಿಗ್ವಿಜಯವನ್ನು ಸಾಧಿಸಿತಾ? ಹೀಗೆ ಹಲವಾರು ಪ್ರಶ್ನೆಗಳು ಮಲ್ಲಿಕ್ ರವರ ಸಂದರ್ಶನದ ನಂತರ ದೇಶವಾಸಿಗಳನ್ನು ಕಾಡತೊಡಗಿವೆ. ಉತ್ತರಿಸಬೇಕಾದವರು ಜಾಣ ಮೌನಕ್ಕೆ ಜಾರಿ ಮುಂದಿನ ವರ್ಷದ ಚುನಾವಣಾ ಸಮಯಕ್ಕೆ ಮತ್ತೆ ಯಾವ ಕಾಂಡವನ್ನು ಸೃಷ್ಟಿಸಬೇಕು ಎನ್ನುವ ಯೋಚನೆಯಲ್ಲಿ ನಿರತರಾಗಿದ್ದಾರೆ.

“ಸತ್ಯ ಅನ್ನೋದು ಬೆತ್ತಲೆಯಾಗಿರುವಾಗ ಸುಳ್ಳು ಬಣ್ಣದ ವೇಷ ತೊಟ್ಟು ಊರೆಲ್ಲಾ ಸುತ್ತಿ ಬರುತ್ತದೆ” ಎನ್ನುವುದು ಸುಳ್ಳಲ್ಲ.

-ಶಶಿಕಾಂತ ಯಡಹಳ್ಳಿ

15-04-2023