ಶುಕ್ರವಾರ, ಫೆಬ್ರವರಿ 2, 2024

ಕೇಂದ್ರದ ದಬ್ಬಾಳಿಕೆ ಹಾಗೂ ಪ್ರತ್ಯೇಕ ರಾಷ್ಟ್ರ ಬೇಡಿಕೆ

ತಹ ತಹ - 502

ಕೇಂದ್ರದ ದಬ್ಬಾಳಿಕೆ ಹಾಗೂ ಪ್ರತ್ಯೇಕ ರಾಷ್ಟ್ರ ಬೇಡಿಕೆ


ಪತ್ಯೇಕತೆಯ ಕೂಗು ಯಾವಾಗ ಬರುತ್ತೆ? ಯಾವಾಗ ಶೋಷಣೆ ತಾರತಮ್ಯ ಅತಿಯಾಗುತ್ತೋ ಆವಾಗ. ಹಾಗಾದಾಗ ಏನು ಮಾಡಬೇಕು? ಸಮಗ್ರತೆ ಕಾಪಾಡಲು ಹಾಗೆ ಕೂಗುವವರ ದ್ವನಿಯನ್ನು ಅಡಗಿಸಬೇಕು. ಹೌದು ಅದೇ ಆಗೋದು ಹಾಗೂ ಆಗ್ತಿರೋದು.

ಕೇಂದ್ರ ಸರಕಾರದಿಂದ ಎಲ್ಲದರಲ್ಲೂ ನಮ್ಮ ನಾಡಿಗೆ ಅನ್ಯಾಯ ಆಗುತ್ತಿರುವುದನ್ನು ನೋಡಿಯೂ ಕರ್ನಾಟಕದ ಅಷ್ಟೂ ಬಿಜೆಪಿ ಶಾಸಕರು ತಮ್ಮ ಪಂಚೇಂದ್ರಿಯಗಳನ್ನು ಮುಚ್ಚಿಕೊಂಡು ಸುಮ್ಮನಿರುವಾಗ ಕಾಂಗ್ರೆಸ್ಸಿನ ಏಕೈಕ ಸಂಸದ ಡಿಕೆ ಸುರೇಶ್ ರವರು ಒಂದೇ ಒಂದು ಪ್ರಶ್ನೆ ಎತ್ತಿದ್ದು ಸಂಸತ್ತಿನ ಒಳಗೆ ಹೊರಗೆ ಬೆಂಕಿ ಹಚ್ಚಿಬಿಟ್ಟಿತು. ನಕಲಿ ದೇಶಪ್ರೇಮಿಗಳಲಿ ಒಡಲುರಿ ಹೆಚ್ಚಿಸಿತು.

ಅವರು ಹೇಳಬಾರದ್ದೇನೂ ಹೇಳಿರಲಿಲ್ಲ. "ದಕ್ಷಿಣ ಭಾರತಕ್ಕೆ ಕೇಂದ್ರ ಸರಕಾರದಿಂದ ಭಾರಿ ಅನ್ಯಾಯ ಆಗುತ್ತಿದೆ. ಹೀಗೇ ಆದರೆ  ಪ್ರತ್ಯೇಕ ರಾಷ್ಟ್ರದ ಬೇಡಿಕೆ ಅನಿವಾರ್ಯವಾಗುತ್ತದೆ" ಅಂತಾ ಸಂಸದ ಸುರೇಶರವರ ಒಂದೇ ಒಂದು ಹೇಳಿಕೆ ಸಂಘ ಪರಿವಾರದಲ್ಲಿ ಸಂಚಲನವನ್ನುಂಟು ಮಾಡಿದೆ. ಮೊದಲೆ ಕಡ್ಡಿಯನ್ನು ಗುಡ್ಡ ಮಾಡಿ ಜನರನ್ನು ದಡ್ಡರಾಗಿಸುವಲ್ಲಿ ಎಕ್ಸಪರ್ಟ್ ಆಗಿರುವ ಸಂಘಿಗಳು ಇಂತಹ ಅವಕಾಶವನ್ನು ಸುಮ್ಮನೇ ಬಿಡಲು ಸಾಧ್ಯವೇ? "ನೋಡಿ ದೇಶವನ್ನು ವಿಭಜನೆ ಮಾಡುವುದೇ ಕಾಂಗ್ರೆಸ್ಸಿನ ಉದ್ದೇಶ. ಕಾಂಗ್ರೆಸ್ ದೇಶದ್ರೋಹಿ ಪಕ್ಷ" ಎನ್ನುವ ಅಪಪ್ರಚಾರ ಶುರುಮಾಡಿದರು. "ರಾಹುಲ್ ಗಾಂಧಿ ಭಾರತ್ ಜೋಡೋ ಅಂದರೆ ಕಾಂಗ್ರೆಸ್ ಸಂಸದ ಭಾರತ್ ತೊಡೋ ಎನ್ನುತ್ತಿದ್ದಾರೆ" ಎನ್ನುವ ಹೇಳಿಕೆಗಳು ಬಿಜೆಪಿ ಪಾಳಯದಿಂದ ತೂರಿ ಬಂದವು. 

ತಪ್ಪು.. ಮಹಾ ತಪ್ಪು. ಅಖಂಡ ಭಾರತವನ್ನು ಹೀಗೆ ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಅಂತಾ ಪ್ರತ್ಯೇಕ ದೇಶ ಮಾಡುವ ಯೋಚನೆಯೇ ಮಹಾಪ್ರಮಾದ. ಇದನ್ನು ಖಂಡಿಸೋಣ, ಇಂತಹ ಯೋಚನೆಯನ್ನು ವಿರೋಧಿಸೋಣ.‌ 

ಆದರೆ.. ನಿರಂತರವಾಗಿ ಆಗುತ್ತಿರುವ ತಾರತಮ್ಯವನ್ನು ಏನು ಮಾಡೋಣ? ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರದ ದಬ್ಬಾಳಿಕೆಯನ್ನು ಎಷ್ಟೂಂತ ಸಹಿಸೋಣ?  ದಕ್ಷಿಣ ಭಾರತದ ಆದಾಯ ಪಡೆದು ಉತ್ತರ ಭಾರತದ ರಾಜ್ಯಗಳಿಗೆ ಹಂಚುವ ಕೇಂದ್ರ ಸರಕಾರದ ಅನೀತಿಯನ್ನು ಹೇಗೆ ಒಪ್ಪಿಕೊಳ್ಳೋಣ?. ನಮಗೆ ಕೇಂದ್ರ ಸರಕಾರದ ಹಣ ಬೇಡ, ನಮ್ಮ ರಾಜ್ಯದಿಂದ ಕೇಂದ್ರದ ಬೊಕ್ಕಸಕ್ಕೆ ಜಮೆಯಾದ ಹಣದ ಪಾಲು ಕೊಡಿ ಎಂದು ಕರ್ನಾಟಕ ಕೇಳುತ್ತಿದ್ದರೂ ಕೊಡುತ್ತಿಲ್ಲವಲ್ಲಾ, ಇದು ತಪ್ಪಲ್ವಾ?

ಪ್ರತಿ ವರ್ಷ ಕರ್ನಾಟಕದಿಂದ 4 ಲಕ್ಷ ಕೋಟಿಯಷ್ಟು ತೆರಿಗೆ ಹಣ ಕೇಂದ್ರ ಸರಕಾರಕ್ಕೆ ಹೋಗುತ್ತಿದೆಯಲ್ಲಾ, ಅದರಲ್ಲಿ ವಾಪಸ್ ಕರ್ನಾಟಕಕ್ಕೆ ಶೇಕಡಾ 10 ರಷ್ಟನ್ನು ವಾಪಸ್ ಕೊಡಲು ಸತಾಯಿಸಲಾಗುತ್ತಿದೆಯಲ್ಲಾ ಇದು ತಪ್ಪಲ್ವಾ? ಅದೂ ರಾಜ್ಯ ಸರಕಾರ ಕೇಂದ್ರವನ್ನು ಬೇಡಿಕೊಳ್ಳಬೇಕು, ಗೋಗರಿಯಬೇಕು, ಪತ್ರಗಳನ್ನು ಬರೆಯುತ್ತಲೇ ಇರಬೇಕು. ಆದರೂ ಜಿಎಸ್ಟಿ ಪಾಲು ಕಾಲಮಿತಿಯಲ್ಲಿ ಬರುವುದಿಲ್ಲ. ಬಂದರೂ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಷ್ಟು ಯಾತಕ್ಕೂ ಸಾಲುವುದಿಲ್ಲ.  ಕಳೆದ ಸಲ ಬೊಮ್ಮಾಯಿ ನೇತೃತ್ವದ ಸರಕಾರ ಇದ್ದಾಗ " ಬೇಕಿದ್ದರೆ ಸಾಲ ಮಾಡಲು ಅನುಮತಿ ಕೊಡುತ್ತೇವೆಯೇ ಹೊರತು ಜಿಎಸ್ಟಿ ಕೇಳಬೇಡಿ" ಅಂತಾ ಕೇಂದ್ರ ಸರಕಾರ ಹೇಳಿದ್ದು ಪ್ರಮಾದ ಅಲ್ಲವೇ. 

ಕರ್ನಾಟಕ ಸರಕಾರ ಕೇಂದ್ರದ ಬೊಕ್ಕಸಕ್ಕೆ 100 ರೂ ತೆರಿಗೆ ಕಟ್ಟಿದರೆ ವಾಪಸ್ ಕರ್ನಾಟಕಕ್ಕೆ ಕೇಂದ್ರ ಕೊಡುವುದು ಕೇವಲ 13.9 ರೂಪಾಯಿಗಳಷ್ಟು ಚಿಲ್ಲರೆ ಹಣವನ್ನು ಅಂದರೆ ಕನ್ನಡಿಗರಿಗೆ ಸಿಟ್ಟು ಬಾರದೇ ಇರುತ್ತದಾ?  ಅದಕ್ಕಿಂತಾ ಬೇಸರದ ಸಂಗತಿ ಏನೆಂದರೆ 100 ರೂ ತೆರಿಗೆ ಪಾವತಿಸುವ ಉತ್ತರ ಭಾರತದ ರಾಜ್ಯಗಳಾದ ಉತ್ತರ ಪ್ರದೇಶಕ್ಕೆ 333.2 ರೂ. ಮದ್ಯಪ್ರದೇಶಕ್ಕೆ 279.1 ರೂ, ಬಿಹಾರಕ್ಕೆ 922.5 ರೂ. ರಾಜಸ್ತಾನಕ್ಕೆ 154.1 ರೂ. ಹೀಗೆ ಉತ್ತರ ಭಾರತದ ಬಹುತೇಕ ರಾಜ್ಯಗಳಿಂದ ಸಂಗ್ರಹಿಸಿದ ನೂರು ರೂ ತೆರಿಗೆಗೆ ಪ್ರತಿಯಾಗಿ ಎರಡು ಮೂರು ಪಟ್ಟು ಹೆಚ್ಚುವರಿಯಾಗಿ ಅವುಗಳಿಗೆ ವಾಪಸ್ ಕೊಡಲಾಗುತ್ತದೆ. ಆದರೆ ದಕ್ಷಿಣ ಭಾರತದ ರಾಜ್ಯಗಳಿಗೆ ಚಿಲ್ಲರೆ ಕಾಸು ಕೊಡಲಾಗುತ್ತದೆ. ಈ ರೀತಿಯ ತಾರತಮ್ಯ ಗೊತ್ತಾದರೆ ಕನ್ನಡಿಗರ ರಕ್ತ ಕುದಿಯದೇ ಇರುತ್ತದಾ? 

2024-25 ರ ಬಜೆಟ್ನಲ್ಲಿ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರಕಾರ ಮೀಸಲಿಟ್ಟಿದ್ದೇನೆ ಎಂದು ಘೋಷಿಸಿದ ಹಣ ಕೇವಲ 44,485 ಕೋಟಿ ಅಷ್ಟೇ. ಅದೇ ವಾರ್ಷಿಕವಾಗಿ ಕರ್ನಾಟಕದಿಂದ ಕೇಂದ್ರ ವಸೂಲಿ ಮಾಡಿದ್ದು 4 ಲಕ್ಷ ಕೋಟಿ ಹಣವನ್ನು. ಅಂದರೆ ಹೋಗಿದ್ದು 100% ಆದರೆ ಕೊಡುತ್ತೇವೆ ಎಂದಿದ್ದು ಕೇವಲ 11%. ಅದೂ ಸಹ ವಾಪಸ್ ಕೊಡುತ್ತಾರೆ ಎನ್ನುವ ಗ್ಯಾರಂಟಿ ಇಲ್ಲ. ಅದೂ ಸಹ ಕೇವಲ ಬಜೆಟ್ ಘೋಷಣೆ ಅಷ್ಟೇ. ಈ ಅನ್ಯಾಯ ನೋಡಿಯೂ ಕನ್ನಡಿಗರು ಸುಮ್ಮನಿರಬೇಕಾ? 


ಅದೇ ಉತ್ತರ ಪ್ರದೇಶಕ್ಕೆ ಹಂಚಿಕೆ ಮಾಡಲಾದ ಹಣ 2,18,816 ಕೋಟಿ. ಬಿಹಾರಕ್ಕೆ 1,22,685 ಕೋಟಿ,  ಮಧ್ಯಪ್ರದೇಶಕ್ಕೆ 95,752 ಕೋಟಿ. ಯಾಕೆ ಹೀಗೆ? ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣ ಭಾರತದ ರಾಜ್ಯಗಳಿಗೆ ಬಜೆಟ್ನಲ್ಲಿ ಹಂಚಿಕೆಯಾದ ಹಣ ಅತೀ ಕಡಿಮೆ. ಆದರೆ ಕೇಂದ್ರ ಸರಕಾರಕ್ಕೆ ಹೆಚ್ಚು ತೆರಿಗೆ ಹಣ ಸಂಗ್ರಹಿಸಿ ಕೊಡುತ್ತಿರುವುದು ದಕ್ಷಿಣ ಭಾರತದ ರಾಜ್ಯಗಳು. ದ್ರಾವಿಡ ನಾಡಿನ ರಾಜ್ಯಗಳಿಗೆ ಇಷ್ಟೊಂದು ತಾರತಮ್ಯ ಅನ್ಯಾಯ ಆಗುತ್ತಿದ್ದರೂ ಕೇಂದ್ರದ ದಬ್ಬಾಳಿಕೆಯನ್ನು ಸಹಿಸಿಕೊಂಡು ಸುಮ್ಮನಿರಬೇಕಾ?

ಕಳೆದ ಹತ್ತು ವರ್ಷದಲ್ಲಿ ಕೇಂದ್ರ ಸರಕಾರವು 110 ಲಕ್ಷ ಕೋಟಿಗಳಷ್ಟು  ಹಿಂದೆಂದೂ ಯಾರೂ ಮಾಡದಷ್ಟು ಸಾಲವನ್ನು ಮಾಡಿ ಅದರ ಹೊರೆಯನ್ನು ದೇಶದ ಮೇಲೆ ಹೊರೆಸಿದೆ. ಈಗ ಈ ಸಾಲಕ್ಕೆ ವಾರ್ಷಿಕವಾಗಿ ದೇಶದ ಒಟ್ಟು ಆದಾಯದ 20 % ಅಂದರೆ 11.9 ಲಕ್ಷ ಕೋಟಿ ಹಣವನ್ನು ಬಡ್ಡಿ ಕಟ್ಟಬೇಕಿದೆ. ಇಷ್ಟೆಲ್ಲಾ ಸಾಲ ಇದ್ದರೂ  ಕಾರ್ಪೋರೇಟ್ ಕಂಪನಿಗಳ ಲಕ್ಷಾಂತರ ಕೋಟಿ ಹಣ ಸಾಲಮನ್ನಾ ಮಾಡಿ ಕೇಂದ್ರ ಸರಕಾರ ದೇಶವನ್ನೇ ದಿವಾಳಿ ಅಂಚಿಗೆ ತಂದು ನಿಲ್ಲಿಸಿದೆ. 

ಅಷ್ಟೇ ಯಾಕೆ ಫೆ.1 ರಂದು ಮಂಡಿಸಲಾದ ಬಜೆಟ್ನಲ್ಲೂ ಮತ್ತೆ ಸಾಲ ಎತ್ತುವ ಯೋಜನೆಗೆ ಚಾಲನೆ ಕೊಡಲಾಗಿದೆ.  16.85 ಲಕ್ಷ ಕೋಟಿ ರೂಪಾಯಿಗಳ ವಿತ್ತೀಯ ಕೊರತೆ ಬಜೆಟ್ ಮಂಡಿಸಿದ್ದು 11.75 ಲಕ್ಷ ಕೋಟಿಗಳನ್ನು ಮಾರುಕಟ್ಟೆಯಿಂದ ಸಾಲ ಪಡೆದು ಕೊರತೆಯನ್ನು ತೀರಿಸಲಾಗುತ್ತದೆಯಂತೆ. 19 ಸಾವಿರ ಕೋಟಿ ಅಲ್ಪಾವಧಿ ಸಾಲ, 4.66 ಲಕ್ಷ ಕೋಟಿ ಸಣ್ಣ ಉಳಿತಾಯದ ಭದ್ರತೆ ಮೇಲಿನ ಸಾಲ. 16 ಸಾವಿರ ಕೋಟಿ ವಿದೇಶಿ ಸಾಲ, 3549 ಕೋಟಿ ರಿಜರ್ವ್ ಬ್ಯಾಂಕಿನ ಮೀಸಲು ನಿಧಿ ಮೇಲೆ ಸಾಲವನ್ನು ಪಡೆಯಲಾಗುವುದಂತೆ. ಅಂದರೆ ಮತ್ತೆ ಹೆಚ್ಚುವರಿ ಸಾಲ ಮತ್ತು ಹೆಚ್ಚುವರಿ ಬಡ್ಡಿ. ಬರುವ ಆದಾಯದಲ್ಲಿ ದೊಡ್ಡ ಪಾಲು ಬಡ್ಡಿ ಕಟ್ಟಲು ಬಳಸಿದರೆ ಅಸಲು ತೀರಿಸುವುದು ಯಾವಾಗ? ರಾಜ್ಯಗಳಿಗೆ ಕೊಡಬೇಕಾದ ಪಾಲು ಕೊಡುವುದು ಯಾವಾಗ? ಈ ದೇಶ ಸಾಲದ ಸುಳಿಯಿಂದ ಹೊರಬರುವುದು ಯಾವಾಗ?  ಕೇಂದ್ರ ಸರಕಾರ ತನ್ನ ವಿವೇಚನಾ ರಹಿತ ಯೋಜನೆಗಳಿಗಾಗಿ, ಕಾರ್ಪೋರೇಟ್ ಕುಳಗಳ ಹಿತರಕ್ಷಣೆಗಾಗಿ, ಬಂಡವಾಳಿಗರ ಸಾಲವಸೂಲಾತಿ ಮಾಡಲಾಗದ ಅಸಮರ್ಥತೆಗಾಗಿ ಮಾಡಿಕೊಂಡ ಸಾಲಕ್ಕೆ ದಕ್ಷಿಣ ಭಾರತದ ರಾಜ್ಯಗಳೇಕೆ ತಮ್ಮ ಆದಾಯದ ಬಹುಪಾಲನ್ನು ಕೊಡಬೇಕು? ಕರ್ನಾಟಕ ಏಕೆ ತನ್ನೆಲ್ಲಾ ಜಿಎಸ್ಟಿ ಆದಾಯವನ್ನು ಕೇಂದ್ರಕ್ಕೆ ದಾರೆಯರೆದು ಚಿಲ್ಲರೆ ಹಣಕ್ಕಾಗಿ ಭಿಕ್ಷೆ ಬೇಡಬೇಕು. ಇನ್ನೆಷ್ಟು ದಿನ ಕೇಂದ್ರದ ಲೂಟಿಕೋರತನವನ್ನು ರಾಜ್ಯ ಸಹಿಸಿಕೊಳ್ಳಬೇಕು.?

 ದಬ್ಬಾಳಿಕೆ ಮಿತಿ ಮೀರಿದರೆ ಪ್ರತಿರೋಧ ಸಹಜ ಪ್ರಕ್ರಿಯೆ. ಅದಕ್ಕೂ ಪ್ರತಿಫಲ ಸಿಗದೇ ಇದ್ದಾಗ ಆಕ್ರೋಶ ಹೆಚ್ಚಾಗದೇ ಇದ್ದೀತೆ? ಹಾಗೆ ಹುಟ್ಟಿದ ಆಕ್ರೋಶದ ಪರಿಣಾಮವೇ ಸಂಸರ ಡಿಕೆ ಸುರೇಶರವರ ಪ್ರತ್ಯೇಕ ರಾಷ್ಟ್ರದ ಬೇಡಿಕೆಯ ಮಾತು. 

ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರ ಆಗಬೇಕಾಗುತ್ತದೆ ಎನ್ನುವ ಆಕ್ರೋಶದ ಹಿಂದೆ ದಕ್ಷಿಣ ಭಾರತದ ರಾಜ್ಯಗಳಿಗೆ ಸಿಗಬೇಕಾದ ಪಾಲು ದೊರೆಯಬೇಕು ಹಾಗೂ ದಕ್ಷಿಣ ರಾಜ್ಯಗಳ ಹಣವನ್ನು ಉತ್ತರದ ರಾಜ್ಯಗಳಿಗೆ ಹಂಚಿಕೆ ಮಾಡುವ ಅನ್ಯಾಯ ನಿಲ್ಲಬೇಕು ಎನ್ನುವುದಾಗಿದೆ. ಸುರೇಶರವರ ಮಾತಿನ ಹಿಂದಿರುವ ರಾಜ್ಯದ ಪರವಾದ ಕಳಕಳಿಯನ್ನು ಅರ್ಥ ಮಾಡಿಕೊಂಡು ಆದ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ಎನ್ನುವುದು ರಾಜ್ಯದ ಸಮಸ್ತ ಸಂಸದರ ಒಕ್ಕೊರಲಿನ ಒತ್ತಾಯವಾಗಬೇಕಿತ್ತು. ಆದರೆ ಅವರೆಲ್ಲಾ ಮೋದಿ ಗುಲಾಮಗಿರಿಯನ್ನೇ ದೇಶ ಸೇವೆ ಎಂದುಕೊಂಡಿದ್ದರಿಂದಾಗಿ ಸುರೇಶರವರ ಪ್ರತ್ಯೇಕ ರಾಷ್ಟ್ರ ಬೇಡಿಕೆಯನ್ನೇ ದೊಡ್ಡದು ಮಾಡಿ ಕಾಂಗ್ರೆಸ್ ಪಕ್ಷವನ್ನೇ ದೇಶದ್ರೋಹಿ ಎಂದು ಸಾಬೀತುಪಡಿಸುವ ಪ್ರಯತ್ನದಲ್ಲಿದ್ದಾರೆ. 

ಇಷ್ಟಕ್ಕೂ ಸಂಸದ ಸುರೇಶರವರು ಹೇಳಿದ್ದಾದರೂ ಏನು? " ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರಕಾರ ಹಣ ಬಿಡುಗಡೆ ಮಾಡುತ್ತಿಲ್ಲ. ಜಿಎಸ್ಟಿ ಹಾಗೂ ತೆರಿಗೆಯ ಸೂಕ್ತ ಪಾಲನ್ನೂ ನೀಡುತ್ತಿಲ್ಲ. ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಿದೆ. ಇದೇ ಧೋರಣೆ ಮುಂದುವರಿಸಿದರೆ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಮುಂದಿಡಬೇಕಾಗುತ್ತದೆ" ಎಂದು ಕೇಂದ್ರ ಸರಕಾರದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅವರೇನೂ ಪ್ರತ್ಯೇಕ ರಾಷ್ಟ್ರ ಕೇಳಿಲ್ಲ, ಬೇಡಿಕೆ ಮುಂದಿಡಬೇಕಾಗುತ್ತದೆ ಅಂದಿದ್ದಾರಷ್ಟೇ. ಆದರೆ ಅವರ ಮಾತಿನಲ್ಲಿರುವ 'ಪ್ರತ್ಯೇಕ ರಾಷ್ಟ್ರದ ಬೇಡಿಕೆ' ಎನ್ನುವ ಮೂರು ಶಬ್ದಗಳನ್ನು ಮಾತ್ರ ತೆಗೆದುಕೊಂಡ ಬಿಜೆಪಿ ಪಕ್ಷ ತನ್ನ ದ್ವೇಷದಾಟ ಶುರುಮಾಡಿದೆ. ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಆಗಿದೆ ಎನ್ನುವುದನ್ನು ಮರೆಮಾಚಲು ದೇಶದ್ರೋಹದ ಟ್ರಂಪ್ ಕಾರ್ಡ್ ಬಳಸಲು ಮುಂದಾಗಿದೆ. ಕಾಂಗ್ರೆಸ್ ಸಹ ಬಿಜೆಪಿಯ ಪ್ರಹಾರಕ್ಕೆ ಆತಂಕಗೊಂಡು ಸಂಸದನ ಪ್ರತ್ಯೇಕ ರಾಷ್ಟ್ರ ಬೇಡಿಕೆಯ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ನಿರಾಕರಿಸಿದೆ.  ಅಂತರ ಕಾಪಾಡಿಕೊಂಡಿದೆ. 

ಸಂವಿಧಾನಕ್ಕೂ ಅಂಬೇಡ್ಕರ್ ಅವರಿಗೂ ಘೋರ ಅವಮಾನ ಮಾಡಿರುವ ಸುರೇಶ್ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತಾ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ ಜೋಶಿಯವರು ಸಂಸತ್ತಿನಲ್ಲಿ ಆಗ್ರಹಿಸಿದ್ದಾರೆ. ಸರಿ ಯಾವುದೇ ಕ್ರಮ ಕೈಗೊಳ್ಳಲಿ. ಹಾಗೆಯೇ ಸಂವಿಧಾನದಲ್ಲಿ ಒಕ್ಕೂಟ ವ್ಯವಸ್ಥೆಗೆ ಪ್ರಾಧಾನ್ಯತೆ ಕೊಡಲಾಗಿದೆಯಲ್ಲವೇ.  ಆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿರುವ ಕೇಂದ್ರ ಸರಕಾರದ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು. ನ್ಯಾಯವಾಗಿ ಕರ್ನಾಟಕಕ್ಕೆ ಸಿಗಬೇಕಾದ ತೆರಿಗೆ ಪಾಲನ್ನೂ ಕೊಡದೇ ವಂಚಿಸುತ್ತಿರುವ ಮೋದಿ ಸರಕಾರದ ವಿರುದ್ಧ ಯಾರು ಕ್ರಮ ಕೈಗೊಳ್ಳಬೇಕು. ಕೇಂದ್ರ ಸರಕಾರವು ಒಕ್ಕೂಟ ವ್ಯವಸ್ಥೆಗೆ ಗೌರವ ಕೊಟ್ಟು ತಾರತಮ್ಯ ಮಾಡದೇ ಇದ್ದಿದ್ದರೆ, ರಾಜ್ಯದ ಪಾಲನ್ನು ಕೊಟ್ಟಿದ್ದರೆ ಈ ರೀತಿ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಕೇಳಿ ಬರುತ್ತಿರಲಿಲ್ಲವಲ್ಲಾ. ಇಂತಹ ಹೇಳಿಕೆ ಬಂದಿದ್ದಕ್ಕೆ ಕೇಂದ್ರದ ಮಲತಾಯಿ ಧೋರಣೆ ಹಾಗೂ ನಿರ್ಲಕ್ಷವೇ ಕಾರಣವಲ್ಲವೇ. ಮೊದಲು ಕ್ರಮ ಕೈಗೊಳ್ಳಬೇಕಾದದ್ದು ಕಾರಣಕ್ಕೆ ಹೊರತು ಪರಿಣಾಮಕ್ಕಲ್ಲ. 

"ಅನುದಾನ ಹಂಚಿಕೆಯಲ್ಲಿ ಅನ್ಯಾಯವಾಗಿದ್ದರೆ ಬಜೆಟ್ ಚರ್ಚೆ ವೇಳೆ ಮಾತಾಡಬೇಕು" ಎಂದು ಮಾನ್ಯ ದೇವೇಗೌಡರು ಸಲಹೆ ಕೊಟ್ಟಿದ್ದಾರೆ. ಆದರೆ ಮಾತಾಡುವವರು ಯಾರು? ಇವರ ಮೊಮ್ಮಗ ಪ್ರಜ್ವಲ್ ರವರನ್ನೂ ಸೇರಿಸಿ ಕರ್ನಾಟಕದ ಯಾವುದಾದರೂ ಸಂಸದರು ಕೇಂದ್ರದ ತಾರತಮ್ಯದ ಬಗ್ಗೆ ಇಲ್ಲಿವರೆಗೂ ಚರ್ಚಿಸಿದ್ದಾರಾ? ಬಿಜೆಪಿಯ  ಇಪ್ಪತ್ತಾರು ಸಂಸದರಲ್ಲಿ ಒಬ್ಬರಾದರೂ ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಬರಬೇಕಾದ ಪಾಲಿಗಾಗಿ ಯಾವತ್ತಾದರೂ ಒತ್ತಾಯಿಸಿದ್ದಾರಾ? ಈ ಹಿಂದೆ ರಾಜ್ಯದಲ್ಲಿ ಪ್ರವಾಹ ಬಂದಾಗ ರಾಜ್ಯದಲ್ಲೂ ಬಿಜೆಪಿ ಸರಕಾರವೇ ಇದ್ದಾಗ ಈ ಯಾವ ಸಂಸದರೂ ಕೇಂದ್ರದ ಪರಿಹಾರಕ್ಕೆ ಆಗ್ರಹಿಸಲಿಲ್ಲ ಹಣವನ್ನೂ ತರಲಿಲ್ಲ. ಈಗ ರಾಜ್ಯದಲ್ಲಿ ತೀವ್ರ ಬರ ಬಿದ್ದಿದೆ. ಈಗಿನ ಆಡಳಿತಾರೂಢ ಸರಕಾರ ಬರ ಪರಿಹಾರ ಕೊಡಿ ಎಂದು ಕೇಂದ್ರಕ್ಕೆ ಕೇಳುತ್ತಲೇ ಇದೆ. ಇಲ್ಲಿವರೆಗೂ ಒಂದು ಪೈಸೆ ಕೂಡಾ ಹಣ ಬಂದಿಲ್ಲ. ಈ ಯಾವ ಸಂಸದರೂ ಒತ್ತಾಯಿಸಲಿಲ್ಲ. ವಿಷಯ ಹೀಗಿರುವಾಗ ಬಜೆಟ್ ಮೇಲೆ ನಡೆವ ಚರ್ಚೆಯಲ್ಲಿ ಕರ್ನಾಟಕದ ಸಂಸದರು ಬಾಯಿಬಿಡಲು ಸಾಧ್ಯವೇ ಇಲ್ಲ. ಕರ್ನಾಟಕಕ್ಕೆ ತಾರತಮ್ಯ ತಪ್ಪುವುದಿಲ್ಲ.

ಆಕ್ರಮಣಕೋರ ಸಂಘ ಪರಿವಾರದ ನಾಯಕತ್ವಕ್ಕೆ ವಿಸ್ತರಣಾವಾದದಲ್ಲಿ ಅಪಾರ ನಂಬಿಕೆ. ಪಾಕಿಸ್ತಾನ ಅಪಘಾನಿಸ್ಥಾನ ಬಾಂಗ್ಲಾ ಸೇರಿದಂತೆ ಭಾರತದ ಅಕ್ಕಪಕ್ಕದ ದೇಶಗಳನ್ನೆಲ್ಲಾ ಸೇರಿಸಿ ಅಖಂಡ ಭಾರತ ಕಟ್ಟುವ ಕನಸು ಸಂಘದ್ದಾಗಿದೆ. ಇಂತಹುದರಲ್ಲಿ ಪ್ರತ್ಯೇಕತೆಯ ಕೂಗು ಬಂದರೆ ಸುಮ್ಮನಿರಲು ಸಾಧ್ಯವೇ? ಯಥಾ ಪ್ರಕಾರ ಸಂಘದ ಸಾಕು ಕೂಸುಗಳಾದ ಕೂಗುಮಾರಿ ಮಾಧ್ಯಮಗಳು ದೇಶ ಇಬ್ಬಾಗವಾಗಿ ಹೋಯಿತೇನೋ ಎನ್ನುವ ರೇಂಜಿಗೆ ಬಾಯಿಬಡಿದುಕೊಳ್ಳುತ್ತಿವೆ. ಆದರೆ ಯಾರೂ ಕೇಂದ್ರ ಸರಕಾರದಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ ಎಂದು ದ್ವನಿ ಎತ್ತುತ್ತಿಲ್ಲ. ನಮ್ಮ ರಾಜ್ಯದ ಹಣವನ್ನು ಪಡೆದು ಪಾಲನ್ನು ಕೊಡದೇ ವಂಚಿಸಲಾಗುತ್ತಿದೆ ಎಂಬುದನ್ನು ವಿರೋಧಿಸುತ್ತಿಲ್ಲ. ಕೇಂದ್ರದ ದಬ್ಬಾಳಿಕೆಯಿಂದ ನಲುಗಿರುವ ಕನ್ನಡಿಗರೂ ಪ್ರತಿಭಟಿಸುತ್ತಿಲ್ಲ. ಎಲ್ಲರೂ ಅಖಂಡ ಭಾರತದ ಏಕತೆ ಬಗ್ಗೆ ಮಾತಾಡುತ್ತಿದ್ದಾರೆ. ಆದರೆ ಒಕ್ಕೂಟ ವ್ಯವಸ್ಥೆಯ ಮೇಲೆ ಕೇಂದ್ರ ಸರಕಾರದ ದಮನದ ಬಗ್ಗೆ ಹೇಳುತ್ತಿಲ್ಲ. ಗಟ್ಟಿ ದ್ವನಿಯಲ್ಲಿ ಹೇಳಿದರೆ ಎಲ್ಲಿ ದೇಶದ್ರೋಹದ ಪಟ್ಟ ಗಟ್ಟಿಯಾಗುತ್ತದೋ ಎನ್ನುವ ಆತಂಕ. ಹೀಗೇ ಆದರೆ ಕರ್ನಾಟಕವು ಕೇಂದ್ರದ ದಾಳಿಕೋರರಿಗೆ ಸುಲಭದ ತುತ್ತಾಗುತ್ತದೆ. ನಕಲಿ ರಾಷ್ಟ್ರೀಯವಾದದ ಕೆಸರಲ್ಲಿ ಕರ್ನಾಟಕದ ಅಸ್ಮಿತೆಯೇ ಹೂತುಹೋಗುತ್ತದೆ. 

ಸಂಸದ ಸುರೇಶರವರ ಪ್ರತ್ಯೇಕ ದೇಶದ ಬೇಡಿಕೆ ತಪ್ಪಾಗಿ ಗೋಚರಿಸಬಹುದು ಆದರೆ ಅದರ ಹಿಂದಿರುವ ಆತಂಕ ಆಕ್ರೋಶದಲ್ಲಿ ಮಾತ್ರ ತಪ್ಪಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಮೇಲೆ ಕೇಂದ್ರ ಸರಕಾರದ ದಾಳಿ ಹೀಗೆಯೇ ಮುಂದುವರೆದರೆ ದಕ್ಷಿಣ ಭಾರತದ ರಾಜ್ಯಗಳ ದಾಸ್ಯತನಕ್ಕೆ ಮುಕ್ತಿಯೆಂಬುದಿಲ್ಲ.

- ಶಶಿಕಾಂತ ಯಡಹಳ್ಳಿ
  02-02-2024

ಮಂಗಳವಾರ, ಜನವರಿ 30, 2024

ರಂಗಾಯಣಗಳಿಗೆ ನಿರ್ದೇಶಕರು ಬೇಕಾ? ಇಲ್ಲವೇ ಆಡಳಿತಾಧಿಕಾರಿಗಳೇ ಸಾಕಾ?

ತಹ ತಹ - 501

ರಂಗಾಯಣಗಳಿಗೆ ನಿರ್ದೇಶಕರು ಬೇಕಾ? ಇಲ್ಲವೇ ಆಡಳಿತಾಧಿಕಾರಿಗಳೇ ಸಾಕಾ?


ಕನ್ನಡ ನಾಡಿನ ಹೆಮ್ಮೆಯ ಸರಕಾರಿ ಸಾಂಸ್ಕೃತಿಕ ಸಂಸ್ಥೆ ರಂಗಾಯಣ ಎಂದು ಹೆಮ್ಮೆಯಿಂದ ಹೇಳುವ ಕಾಲವೊಂದಿತ್ತು. ಬಿ.ವಿ.ಕಾರಂತರ ದೂರದೃಷ್ಟಿಯ ಫಲವಾಗಿ ಅಸ್ತಿತ್ವಕ್ಕೆ ಬಂದ ಮೈಸೂರು ರಂಗಾಯಣ ಈಗ ಕರ್ನಾಟಕದಾದ್ಯಂತ ಮೈಸೂರು ಸೇರಿದಂತೆ ಧಾರವಾಡ, ಕಲಬುರಗಿ, ಶಿವಮೊಗ್ಗ, ಕಾರ್ಕಳ ಹಾಗೂ ದಾವಣಗೆರೆ ಹೀಗೆ ಆರು ಪ್ರದೇಶಗಳಲ್ಲಿ ಸ್ಥಾಪನೆಗೊಂಡಿದೆ. ಆಧುನಿಕ ರಂಗಭೂಮಿ, ವೃತ್ತಿರಂಗಭೂಮಿ, ಜಾನಪದ ರಂಗಭೂಮಿಯನ್ನು ಉಳಿಸಿ ಬೆಳೆಸುವ ಕಾಯಕವನ್ನು ಈ ಎಲ್ಲಾ ರಂಗಾಯಣಗಳ ಹೊಣೆಗಾರಿಕೆಯಾಗಿದೆ.

ಆದರೆ ಈಗ ಆಗುತ್ತಿರುವುದೇನು.? ಎಲ್ಲಾ ರಂಗಾಯಣಗಳೂ ನಿರ್ದೇಶಕರಿಲ್ಲದೇ ಏದುಸಿರು ಬಿಡುತ್ತಿವೆ. ಒಂದೆರಡು ಮಲಗಿವೆ, ಇನ್ನೆರಡು ಹೇಗೋ ಉಸಿರಾಡುತ್ತಿವೆ, ಇರುವುದರಲ್ಲೇ ಮೈಸೂರಿನ ರಂಗಾಯಣ ಒಂದಿಷ್ಟು ಅಸ್ತಿತ್ವ ಉಳಿಸಿಕೊಂಡಿದೆ. ಯಾಕೆ ಹೀಗೆ? 

ಕಾರಣ ಎರಡು. ಒಂದು ಕಾಂಗ್ರೆಸ್ ಸರಕಾರ ಬಂದು ಎಂಟು ತಿಂಗಳಾಗಿದ್ದರೂ ಇನ್ನೂ ಯಾವುದೇ ರಂಗಾಯಣಕ್ಕೆ ನಿರ್ದೇಶಕರ ನೇಮಕಾತಿ ಆಗದೇ ಇರುವುದು. ಎರಡನೆಯದಾಗಿ ರಂಗಚಟುವಟಿಕೆಗಳಿಗೆ ಬೇಕಾದಷ್ಡು ಅನುದಾನ ಬಿಡುಗಡೆಯಾಗದೇ ಇರುವುದು. ಒಂದು ಇನ್ನೊಂದರ ಮೇಲೆ ಅವಲಂಬಿತವಾಗಿವೆ. ಸರಕಾರಕ್ಕೆ ಇವು ಎರಡೂ ಮುಖ್ಯವೆಂದು ಅನ್ನಿಸುತ್ತಿಲ್ಲ. ಹಿರಿಯ ರಂಗಕರ್ಮಿಗಳೂ ಇದಕ್ಕಾಗಿ ತೀವ್ರ ಒತ್ತಡ ಹೇರುತ್ತಿಲ್ಲ. ಅವರಿಗೂ ಅವರದೇ ಆದ ಕಾರಣಗಳಿವೆ. ಎಲ್ಲಿ ಸರಕಾರದ ವಿಳಂಬ ಧೋರಣೆಯನ್ನು ಪ್ರಶ್ನಿಸಿದರೆ ತಮಗೆ ಸಿಗಬಹುದಾದ ಅಕಾಡೆಮಿ ಪ್ರಾಧಿಕಾರ ರಂಗಾಯಣಗಳ ಹುದ್ದೆಗಳು ಸಿಕ್ಕದೆ ಹೋಗಬಹುದು ಎಂಬುದು ಹಿರಿಯ ಸಾಹಿತಿ ಕಲಾವಿದ ರಂಗಕರ್ಮಿಗಳ ಆತಂಕ ಇರಬಹುದು. ಒತ್ತಡ ಬರದೇ, ಯಾವುದೇ ಲಾಭವಿಲ್ಲದೇ ಯಾವುದನ್ನೂ ಮಾಡಲು ಸರಕಾರಗಳು ಸಿದ್ದವಿರುವುದಿಲ್ಲ.

ಸಾಂಸ್ಕೃತಿಕ ಸಂಸ್ಥೆಗಳಿಗೆ ಆಯ್ಕೆ ಮಾಡುವುದು ರಾಜಕೀಯದವರಿಗೆ ಓಟಿನ ದಾರಿಯೂ ಅಲ್ಲಾ, ಅನುದಾನ ಕೊಡುವುದರಿಂದ ಲಾಭವೂ ಇಲ್ಲ. ಹೀಗಾಗಿ ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳ ಬಗ್ಗೆ ಈ ಸರಕಾರಗಳಿಗೆ ಹಾಗೂ ಸಚಿವರುಗಳಿಗೆ ದಿವ್ಯ ನಿರ್ಲಕ್ಷ. ಇದಕ್ಕೆ ವ್ಯತಿರಿಕ್ತವಾಗಿ ಜಾತಿ ಆಧಾರಿತ ಜಯಂತಿಗಳನ್ನು ಆಯೋಜಿಸಲು ಅಧಿಕಾರಿಗಳು, ಸರಕಾರಗಳು ಹಾಗೂ ಸಚಿವರುಗಳು ಅತೀ ಆಸಕ್ತಿ ವಹಿಸುತ್ತವೆ. ಯಾಕೆಂದರೆ ಅಲ್ಲಿ ಓಟು ನೋಟು ಎರಡೂ ದೊರೆಯುತ್ತವೆ. ವಜ್ರಮಹೋತ್ಸವದ ನೆಪದಲ್ಲಿ 24 ಕೋಟಿ ಖರ್ಚು ಮಾಡಿ ಇರುವುದರಲ್ಲೇ ಸುಸಜ್ಜಿತವಾಗಿರುವ ರವೀಂದ್ರ ಕಲಾಕ್ಷೇತ್ರವನ್ನು ಆಧುನೀಕರಣ ಮಾಡಲು ಖುದ್ದಾಗಿ ಸಂಸ್ಕೃತಿ ಇಲಾಖೆಯ ಸಚಿವರೇ ಮುತುವರ್ಜಿವಹಿಸುತ್ತಾರೆ. ಅದೇ ಆಸಕ್ತಿ ಸರಕಾರಿ ಕೃಪಾಪೋಷಿತ ಸಾಂಸ್ಕೃತಿಕ ಸಂಸ್ಥೆಗಳಿಗೆ ನೇಮಕಾತಿ ಮಾಡಲು ಹಾಗೂ ಅನುದಾನ ಬಿಡುಗಡೆ ಮಾಡಲು ತೋರುವುದಿಲ್ಲ.

ಈಗ ರಂಗಾಯಣಗಳು ಸರಕಾರಿ ಆಡಳಿತಾಧಿಕಾರಿಗಳ ಸುಪರ್ಧಿಯಲ್ಲಿವೆ. ರಂಗಭೂಮಿಯ ಆಳ ಅಗಲ ಎತ್ತರ ಗೊತ್ತಿಲ್ಲದ, ಕ್ರಿಯಾಶೀಲತೆ ಇಲ್ಲದ ಅಧಿಕಾರಿಗಳು ಸಾಂಸ್ಕೃತಿಕ ಸಂಸ್ಥೆಯನ್ನು ಮುನ್ನಡೆಸಲು ಹೇಗೆ ಸಾಧ್ಯ? ಆಡಳಿತಕ್ಕೂ ಕ್ರಿಯಾಶೀಲತೆಗೂ ಸಾಮ್ಯತೆ ಅತೀ ಕಡಿಮೆ. ಇಂತಹ ಸಂದರ್ಭದಲ್ಲಿ ಆಡಳಿತಾಧಿಕಾರಿಗಳ ಮೇಲೆಯೇ ರಂಗಾಯಣಗಳ ಪಯಣ ಮುಂದುವರಿಯಲಿ ಎನ್ನುವ ಸರಕಾರದ ಧೋರಣೆ ರಂಗಕ್ರಿಯೆಗೆ ಮಾರಕ. 

ಈಗ ಮೈಸೂರು ರಂಗಾಯಣ ಪ್ರತಿ ವರ್ಷ ಆಚರಿಸುವ "ಬಹುರೂಪಿ ರಾಷ್ಟ್ರೀಯ ರಂಗೋತ್ಸವ- 2024" ಆಯೋಜಿಸಬೇಕಿದೆ. ಮಾರ್ಚ್ 7 ರಿಂದ 11ರವರೆಗೆ ಬಹುರೂಪಿ ನಾಟಕೋತ್ಸವಕ್ಕೆ ದಿನಾಂಕವೂ ನಿಗಧಿಯಾಗಿದೆ. ಆದರೆ ರಂಗಾಯಣ ಯಜಮಾನರಿಲ್ಲದ ಮನೆಯಾಗಿದೆ. ರಂಗಾಯಣದ ಬಹುತೇಕ ಅನುಭವಿ ಹಿರಿಯ ಕಲಾವಿದರು ರಿಟೈರ್ಡ್ ಆಗಿಯಾಗಿದೆ. ಮೊದಲು ನಿರ್ದೇಶಕರನ್ನು ಆಯ್ಕೆ ಮಾಡಿ ನಂತರ ರಂಗೋತ್ಸವ ಮಾಡುವುದು ಅಪೇಕ್ಷಣೀಯ. ಈ ಕುರಿತು ಮೈಸೂರು ರಂಗಾಯಣದ ಆಡಳಿತಾಧಿಕಾರಿ ನಿರ್ಮಲಾ ಮಠಪತಿವರನ್ನು ಕೇಳಿದರೆ "ನಿರ್ದೇಶಕರಿಲ್ಲದ ಕೊರತೆ ಏನೂ ಕಾಣುತ್ತಿಲ್ಲ. ಎಂದಿನಂತೆ ಚಟುವಟಿಕೆಗಳು ನಡೆಯುತ್ತಿದ್ದು ರಂಗೋತ್ಸವದ ತಯಾರಿ ನಡೆದಿದೆ" ಎಂದು ಉತ್ತರಿಸುತ್ತಾರೆ. ಹಾಗಾದರೆ ನಿರ್ದೇಶಕರ ಅಗತ್ಯವೇ ಇಲ್ಲವೆಂದಮೇಲೆ ಎಲ್ಲಾ ರಂಗಾಯಣಗಳ‌ನ್ನು ಖಾಯಂ ಆಗಿ ಅಧಿಕಾರಿಗಳೇ ನೋಡಿಕೊಳ್ಳಬಹುದಾಗಿದೆ ಅಲ್ಲವೇ? 'ನಿರ್ದೇಶಕರಿಗಾಗಿ ಕಾಯದೇ ರಂಗಾಯಣದ ಚಟುವಟಿಕೆಗಳನ್ನು ನೋಡಿಕೊಳ್ಳಿ' ಎಂದು ಸಂಸ್ಕೃತಿ ಇಲಾಖೆಯ ಸಚಿವರು ಎಲ್ಲಾ ಆಡಳಿತಾಧಿಕಾರಿಗಳಿಗೆ ಸೂಚಿಸಿದ್ದಾರಂತೆ. 

ಅಲ್ಲಿಗೆ ಗೊತ್ತಾಯಿತಲ್ಲ ರಂಗಾಯಣ ಅಧಿಕಾರಿಗಳ ಪಾಲು ಎಂದು. ರಂಗಾಯಣ ಎಂದರೆ ಈವೆಂಟ್ ಮ್ಯಾನೇಜ್ಮೆಂಟ್ ಎಂದು ಸಂಸ್ಕೃತಿ ಸಚಿವರು ಭಾವಿಸಿದಂತಿದೆ. ಜಯಂತಿಗಳ ಮಾದರಿಯಲ್ಲಿ ಅಧಿಕಾರಿಗಳ ಮೂಲಕ ನಿಭಾಯಿಸಬಹುದು ಎಂದು ನಿರ್ಧರಿಸಿದಂತಿದೆ. ಆದರೆ ರಂಗ ಸಂಸ್ಥೆ ಮುನ್ನಡೆಸುವುದು, ನಾಟಕಗಳನ್ನು ಕಟ್ಟುವುದು ಎಂದರೆ ಆಡಳಿತ ನಡೆಸಿದಂತಲ್ಲಾ, ಈವೆಂಟ್ ಮ್ಯಾನೇಜ್ಮೆಂಟ್ ಅಂತೂ ಮೊದಲೇ ಅಲ್ಲ. ನಾಟಕದ ಆಯ್ಕೆಯಿಂದಾ ಸೂಕ್ತ ಕಲಾವಿದರು ನಿರ್ದೇಶಕರು ತಂತ್ರಜ್ಞರ ಆಯ್ಕೆಯವರೆಗೂ, ತಾಲಿಂನಿಂದ ಪ್ರದರ್ಶನದವರೆಗೂ ಕ್ರಿಯಾಶೀಲವಾಗಿ ಯೋಚಿಸುವವರು ಬೇಕಾಗುತ್ತದೆ. ಹಾಗೆ ಕಟ್ಟಿದ ನಾಟಕವನ್ನು ರಂಗಾಸಕ್ತರಿಗೆ ಪರಿಣಾಮಕಾರಿಯಾಗಿ ತಲುಪಿಸಬೇಕಾಗುತ್ತದೆ. ಅದನ್ನು ರಂಗಭೂಮಿಯಲ್ಲಿ ಅಪಾರವಾದ ಅನುಭವ ಇರುವವರು ಮಾತ್ರ ಮಾಡಲು ಸಾಧ್ಯ. ಅಂತಹ ಕ್ರಿಯಾಶೀಲ ನಿರ್ದೇಶಕರಿಗಾಗಿ ರಂಗಾಯಣಗಳು ಕಾಯುತ್ತಿವೆ. ಆದರೆ ಸರಕಾರ ಮನಸ್ಸು ಮಾಡುತ್ತಿಲ್ಲ. 

ವಾರ್ಷಿಕ ಮುವತ್ತು ಲಕ್ಷ ಅನುದಾನ ಕೊಟ್ಟು ರಂಗಾಯಣ ಎನ್ನುವ ಬಿಳಿಯಾಣೆಯನ್ನು ಚೆನ್ನಾಗಿ ಸಾಕಿ ಎಂದು ಹೇಳಿದರೆ ಅಧಿಕಾರಿಗಳಾಗಾದರೂ ಏನು ಮಾಡಲು ಸಾಧ್ಯ? ಈ ಹಣ ಕಲಾವಿದರು ಹಾಗೂ ಸಿಬ್ಬಂದಿಯ ಸಂಬಳಕ್ಕೆ ಹಾಗೂ ಕಚೇರಿ ನಿರ್ವಹಣೆಗೇ ಸಾಲದು ಇನ್ನು ನಾಟಕಗಳನ್ನು ನಿರ್ಮಿಸುವುದು ಹೇಗೆ? ರಂಗ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸುವುದು ಹೇಗೆ? ರಂಗೋತ್ಸವಗಳನ್ನು ನಡೆಸುವುದು ಹೇಗೆ? ಅಧಿಕಾರಿಗಳಿಗೆ ರಂಗಭೂಮಿ ಕುರಿತ ಆಳವಾದ ಅನುಭವವೂ ಇಲ್ಲ, ಮಹತ್ವಾಂಕಾಕ್ಷೆಗಳಂತೂ ಮೊದಲೇ ಇರುವುದಿಲ್ಲ. ಬೇಕಾದಷ್ಟು ಆರ್ಥಿಕ ನೆರವೂ ಸಿಕ್ಕುವುದಿಲ್ಲ. ಇದ್ದದ್ದರಲ್ಲಿ ಹೇಗೋ ಸಾವರಿಸಿಕೊಂಡು ಸಂತೆ ಹೊತ್ತಿಗೆ ಮೂರು ಮೊಳ ನೇಯ್ದು ಮಾರುವ ಕೆಲಸ ಮಾಡಬಹುದಷ್ಟೇ. 

ಕಳೆಗುಂದಿದ ರಂಗಾಯಣಕ್ಕೆ ಮತ್ತೆ ಹೊಳಪು ತರಲು ಮೊದಲು ಎಲ್ಲಾ ರಂಗಾಯಣಗಳಿಗೂ ಅನುಭವೀ ರಂಗಕರ್ಮಿಗಳನ್ನು ನಿರ್ದೇಶಕರನ್ನಾಗಿ ಸರಕಾರ ಕೂಡಲೇ ಆಯ್ಕೆ ಮಾಡಬೇಕಾಗಿದೆ. ಈ ಹಿಂದಿನ ಬಿಜೆಪಿ ಸರಕಾರವು ಕೇಶವಕೃಪಾ ಕಟಾಕ್ಷದವರನ್ನು ನೇರವಾಗಿ ನೇಮಕ ಮಾಡಿ ರಂಗಾಯಣವನ್ನು ಸಂಘದ ಕಾರ್ಯಾಲಯ ಮಾಡಿದಂತೆ ಮಾಡದೇ ರಂಗಸಮಾಜದ ಸಲಹೆ ಸೂಚನೆಯ ಮೇರೆಗೆ ನಿರ್ದೇಶಕರ ಆಯ್ಕೆ ನಡೆಯಬೇಕಿದೆ. ನಿರ್ದೇಶಕರುಗಳ ಆಯ್ಕೆಗೆ ಪೂರ್ವಭಾವಿಯಾಗಿ ರಂಗಸಮಾಜಕ್ಕೆ ರಂಗಾನುಭವಿ ಸದಸ್ಯರುಗಳನ್ನು ಸಂಸ್ಕೃತಿ ಇಲಾಖೆ ಆಯ್ಕೆ ಮಾಡಬೇಕಿದೆ. ರಂಗಸಮಾಜದ ಸದಸ್ಯರುಗಳು ಸಭೆ ಸೇರಿ ಸೂಚಿಸುವ ಅರ್ಹ ಕ್ರಿಯಾಶೀಲ ರಂಗಕರ್ಮಿಗಳ ಪಟ್ಟಿಯಲ್ಲಿ ಅತ್ಯಂತ ಸೂಕ್ತವಾದವರನ್ನು ರಂಗಾಯಣಗಳಿಗೆ ನಿರ್ದೇಶಕರನ್ನಾಗಿ ಸಚಿವಾಲಯವು ನೇಮಕಾತಿ ಮಾಡಬೇಕಿದೆ. ನಾಳೆಯಿಂದಲೇ ಈ ಪ್ರಕ್ರಿಯೆ ಶುರುಮಾಡಿದರೂ ನಿರ್ದೇಶಕರುಗಳ ಅಯ್ಕೆಗೆ ಕನಿಷ್ಟ ಎರಡು ಮೂರು ತಿಂಗಳುಗಳೇ ಬೇಕಾಗಬಹುದು. ಈ ನಿಟ್ಟಿನಲ್ಲಿ ಸಂಸ್ಕೃತಿ ಇಲಾಖೆಯ ಸಚಿವರು ಕಾರ್ಯಪ್ರವೃತ್ತರಾಗಬೇಕಾಗಿದೆ. 

ಆದರೆ ಅಧಿಕಾರಿಗಳ ಮೂಲಕ ಸಾಂಸ್ಕೃತಿಕ ಸಂಸ್ಥೆಗಳ ಮೇಲೆ ಹಿಡಿತ ಹೊಂದಲು ಸಂಸ್ಕೃತಿ ಸಚಿವಾಲಯ ನಿರ್ಧರಿಸಿದಂತಿದೆ. ಸುವರ್ಣ ಕರ್ನಾಟಕದ ವಿಶೇಷ ಪ್ರಶಸ್ತಿಗಳಿಗೆ ಸಲಹಾ ಸಮಿತಿಯನ್ನು ನೇಮಿಸುವ ಬದಲಾಗಿ ನೇರವಾಗಿ ಅಧಿಕಾರಿಗಳೇ ಸಾಧಕರ ಹೆಸರನ್ನು ಸೂಚಿಸುವಂತೆ ಇಲಾಖೆಯ ಸಚಿವರು ಪರಮಾನು ಹೊರಡಿಸಿದ್ದಾರೆ. ಯಾವುದೇ ಅಡೆತಡೆ ಇಲ್ಲದೇ ತಮಗೆ ಬೇಕಾದವರಿಗೆ ಪ್ರಶಸ್ತಿ ಕೊಡಲು ಆಯ್ಕೆ ಸಮಿತಿಯ ಬದಲಾಗಿ ಅಧಿಕಾರಿಗಳ ಆಯ್ಕೆಗೆ ಮನ್ನಣೆ ಕೊಡಲಾಗಿದೆ. ಇದೇ ರೀತಿ ರಂಗಾಯಣಗಳ ಪರಿಸ್ಥಿತಿ ಸಹ. ಅಧಿಕಾರಿಗಳ ಮೂಲಕ ರಂಗಾಯಣವನ್ನು ನೇರವಾಗಿ ಸಚಿವಾಲಯ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು. ಯಾವುದೇ ಅಧಿಕಾರಿ ಸಚಿವರನ್ನು ಪ್ರಶ್ನಿಸುವ ಮಾತೇ ಇಲ್ಲ. ಅದೇ ಅನುಭವಿ ಹಿರಿಯ ರಂಗಕರ್ಮಿಗಳನ್ನು ರಂಗಾಯಣಗಳಿಗೆ ನಿರ್ದೇಶಕರನ್ನಾಗಿ ನೇಮಿಸಿದ್ದೇ ಆದರೆ ಸಚಿವಾಲಯದ ರಂಗವಿರೋಧಿ ಆದೇಶಗಳನ್ನು ಪ್ರಶ್ನಿಸುತ್ತಾರೆ. ಹೆಚ್ಚುವರಿ ಅನುದಾನಗಳನ್ನು ಕೇಳುತ್ತಾರೆ. ಆಡಳಿತಾಧಿಕಾರಿ ಹಾಗೂ ನಿರ್ದೇಶಕರ ನಡುವೆ ಸಂಘರ್ಷ ನಿರಂತರವಾಗಿರುತ್ತದೆ. ಅದಕ್ಕೆ ನಿರ್ದೇಶಕರು ಯಾಕೆ ಬೇಕು? ಅಧಿಕಾರಿಗಳೇ ಸಾಕು! ಎನ್ನುವ ನಿರ್ಧಾರಕ್ಕೆ ಸಂಸ್ಕೃತಿ ಇಲಾಖೆ ಹಾಗೂ ಸರಕಾರ ಬಂದಂತಿದೆ. ಈ ನಿರ್ಣಯ ಖಂಡಿತವಾಗಿಯೂ ಖಂಡನೀಯ. 

ಹೀಗೆ ಸರಕಾರಿ ಅನುದಾನಿತ ಸಾಂಸ್ಕೃತಿಕ ಸಂಸ್ಥೆಗಳನ್ನು ಅಧಿಕಾರೀಕರಣ ಮಾಡುವ ಹುನ್ನಾರವನ್ನು ಸಾಂಸ್ಕೃತಿಕ ಲೋಕದ ಸಾಹಿತಿ ಕಲಾವಿದರು, ರಂಗಕರ್ಮಿ ತಂತ್ರಜ್ಞರುಗಳು ವಿರೋಧಿಸಲೇಬೇಕಿದೆ. ಆದಷ್ಟು ಬೇಗ ಅಕಾಡೆಮಿ ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನು ನೇಮಕಾತಿ ಮಾಡಲು ಸರಕಾರವನ್ನು ಒತ್ತಾಯಿಸಬೇಕಿದೆ. ರಂಗಸಮಾಜಕ್ಕೆ ಸದಸ್ಯರುಗಳನ್ನು ಆಯ್ಕೆ ಮಾಡಿ ಆ ಮೂಲಕ ರಂಗಾಯಣಗಳಿಗೆ ನಿರ್ದೇಶಕರನ್ನು ನೇಮಕಾತಿ ಮಾಡಲು ಕ್ರಮ ತೆಗೆದುಕೊಳ್ಳಬೇಕೆಂದು ನೇರವಾಗಿ ಮುಖ್ಯಮಂತ್ರಿಗಳಿಗೆ ಆಗ್ರಹಿಸಬೇಕಿದೆ. ರಂಗಾಯಣಗಳು ಮತ್ತೆ ಮೊದಲಿನಂತೆ ಕ್ರಿಯಾಶೀಲವಾಗಬೇಕಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ರಂಗಭೂಮಿಯ ಹೆಸರನ್ನು ಉಳಿಸಿ ಬೆಳೆಸಬೇಕಿದೆ.

- ಶಶಿಕಾಂತ ಯಡಹಳ್ಳಿ.
  30-01-2024

ಹನುಮಧ್ವಜದ ಹೆಸರಲ್ಲಿ ಭಾವಪ್ರಚೋದನೆ; ಚುನಾವಣಾ ಪೂರ್ವತಯಾರಿ ಯೋಜನೆ

ತಹ ತಹ - 500

ಹನುಮಧ್ವಜದ ಹೆಸರಲ್ಲಿ ಭಾವಪ್ರಚೋದನೆ; ಚುನಾವಣಾ ಪೂರ್ವತಯಾರಿ ಯೋಜನೆ


ಕೇಸರಿ ಪಡೆಗಳ ಪೂರ್ವ ತಯಾರಿ ಯೋಜನೆ ಅಂದ್ರೆ ಹೀಗಿರುತ್ತದೆ. ಜನರಲ್ಲಿರುವ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸಿ, ಶಾಂತಿ ಸೌಹಾರ್ಧತೆಗೆ ಭಂಗ ತಂದು, ಅಸಹನೆ ಸೃಷ್ಟಿಸುವುದು ಈ ಮತಾಂಧ ಸಂಘ ಪರಿವಾರಿಗರಿಗೆ ಸುಲಭದ ಸಂಗತಿಯಾಗಿದೆ. ಅದಕ್ಕೆ ಉದಾಹರಣೆಯಾಗಿ ಮಂಡ್ಯದ ಕೆರಗೋಡು ಪ್ರಕರಣವನ್ನು ನೋಡಬಹುದಾಗಿದೆ. ಪ್ಯಾಸಿಸ್ಟ್ ಶಕ್ತಿಗಳ ಪರ್ಪೆಕ್ಟ್ ಪ್ಲಾನಿಂಗ್ ಹೇಗಿರುತ್ತದೆ ಎಂದು ತಿಳಿಯಬಹುದಾಗಿದೆ. 

ಎಲ್ಲಿ ಬಿಜೆಪಿ ಶಕ್ತಿ ಕಡಿಮೆ ಇದೆಯೋ ಅದನ್ನು ವಿಸ್ತರಿಸಲು ಅಲ್ಲಿಯ ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಕೆರಗೋಡನ್ನು ಆಯ್ಕೆ ಮಾಡಿಕೊಳ್ಳಲಾಯ್ತು.

ಅಲ್ಲಿರುವ ಬಿಜೆಪಿ ಬೆಂಬಲದ ಧಾರ್ಮಿಕ ಮತಾಂಧ ಸಂಘಟನೆಯನ್ನು ಗುರುತಿಸುವುದು. ಗೌರಿಶಂಕರ ಸೇವಾ ಟ್ರಸ್ಟ್ ನ್ನು ಗುರುತಿಸಿ ದ್ವಜಸ್ಥಂಭ ಸ್ಥಾಪನೆಗೆ ಗ್ರಾಮ ಪಂಚಾಯತಿಯಲ್ಲಿ ಅರ್ಜಿ ಅಲ್ಲಿ ಸಲ್ಲಿಸಲಾಯ್ತು.

ಗ್ರಾಮ ಪಂಚಾಯತಿಯ ಸರಕಾರಿ ಜಾಗದಲ್ಲಿ ಧಾರ್ಮಿಕ ಧ್ವಜಸ್ಥಂಭ ಸ್ಥಾಪಿಸಲು ಕಾನೂನಲ್ಲಿ ಅವಕಾಶ ಇಲ್ಲವಾದ್ದರಿಂದ ರಾಷ್ಟ್ರದ್ವಜ ಹಾಗೂ ಕನ್ನಡ ದ್ವಜ ಹಾರಿಸಲೆಂದು ದ್ವಜಸ್ಥಂಭ ನಿರ್ಮಿಸುತ್ತೇವೆಂದು ಮುಚ್ಚಳಿಕೆ ಬರೆದುಕೊಟ್ಟು ಪಂಚಾಯತಿಯಿಂದ ಅನುಮತಿ ಪಡೆದು ನಿರ್ಮಾಣ ಕಾರ್ಯ ಶುರುಮಾಡುವುದು. ಹೇಳದ್ದು 60 ' ಎತ್ತರದ ಕಂಬ, ನಿರ್ಮಿಸಿದ್ದು 108 ಅಡಿ ಎತ್ತರದ ಸ್ಥಂಭ. ಎತ್ತರದ ಬಗ್ಗೆ ಯಾರೂ ಕೇಳಲಿಲ್ಲ ಕೇಳಿದ್ದರೂ ರಾಷ್ಟ್ರದ್ವಜ ಎನ್ನುವ ನೆಪ. ಪ್ರಶ್ನಿಸಿದ್ದರೆ ರಾಷ್ಟ್ರದ್ರೋಹಿ ಎನ್ನುವ ಆರೋಪ.

ಮುಚ್ಚಳಿಕೆ  ಪ್ರಕಾರ ಆ ಸ್ತಂಭದಲ್ಲಿ ಹಾರಿಸಬೇಕಾದದ್ದು ರಾಷ್ಟ್ರಧ್ವಜ, ಆದರೆ ಧರ್ಮಾಂಧರ ಯೋಜನೆಯ ಪ್ರಕಾರ ಅಲ್ಲಿ ಹಾರಿಸಿದ್ದು ಹನುಮಧ್ವಜ. ಯಾಕೆಂದು ಕೇಳಿದಾಗ ಮೂರು ದಿನ ಹಾರಿಸಿ ಇಳಿಸುತ್ತೇವೆಂದು ಪಂಚಾಯತಿಯವರಿಗೆ ಸಮಜಾಯಿಸಿ ಕೊಡಲಾಯಿತಾದರೂ ಅದನ್ನೂ ಉಲ್ಲಂಘಿಸಿ ಹನುಮಧ್ವಜ ಇಳಿಸಲು ನಿರಾಕರಣೆ.

ಜನವರಿ 26 ಭಾರತದ ಗಣರಾಜ್ಯೋತ್ಸವದ ದಿನ ರಾಷ್ಟ್ರದ್ವಜ ಹಾರಬೇಕಿತ್ತು ಆದರೆ ಹನುಮಧ್ವಜ ತೆರುವಾಗಲೇ ಇಲ್ಲ. ವಿಷಯ ಜಿಲ್ಲಾಡಳಿತಕ್ಕೆ ತಲುಪಿತೊ ಅಥವಾ ಇವರೇ ತಲುಪಿಸಿದರೋ ಗೊತ್ತಿಲ್ಲ. ಪೊಲೀಸರ ರಕ್ಷಣೆಯಲ್ಲಿ ಬಂದ ಅಧಿಕಾರಿಗಳು ಹನುಮಧ್ವಜ ಇಳಿಸಿ ರಾಷ್ಟ್ರದ್ವಜ ಹಾರಿಸಿ ತಮ್ಮ ಕರ್ತವ್ಯ ನಿಭಾಯಿಸಿದರು.

ಇಲ್ಲಿಗೆ ಕೇಸರಿಪಡೆಯವರು ಅಂದುಕೊಂಡಂತೆ ಮೊದಲನೇ ಹಂತದ ಕಾರ್ಯಾಚರಣೆ ಮುಗಿದು ಎರಡನೇ ಹಂತಕ್ಕೆ ವಿಸ್ತರಿಸಲು ವೇದಿಕೆ ಸಜ್ಜುಗೊಳಿಸಲಾಯ್ತು. ಹನುಮಧ್ವಜಕ್ಕೆ ಅಪಮಾನ ಮಾಡಲಾಗಿದೆಯೆಂದು ಊರವರನ್ನೆಲ್ಲಾ ಸೇರಿಸಲಾಯ್ತು. ಹಿಂದೂ ಧರ್ಮಕ್ಕೆ ಅಪಚಾರವೆಂದು ಸುದ್ದಿ ಹಬ್ಬಿಸಿ ಸುತ್ತಲಿನ ಹನ್ನೆರಡು ಹಳ್ಳಿಯ ಜನರನ್ನು ಕೆರಗೋಡಿಗೆ ಬರುವಂತೆ ಮಾಡಲಾಯಿತು. ಮಂಡ್ಯ ಜಿಲ್ಲೆಯ ಸಂಘ ಪರಿವಾರದ ಅಂಗಗಳಾದ ಬಿಜೆಪಿ, ವಿಶ್ವ ಹಿಂದೂ ಪರಿಷತ್ತು ಹಾಗೂ ಭಜರಂಗದಳದ ಕಾರ್ಯಕರ್ತರನ್ನು ಕರೆಸಿಕೊಳ್ಳಲಾಯಿತು. ಗಲಾಟೆ ವಾಗ್ವಾದ ಆರಂಭಿಸಿ ಪೊಲೀಸರ ಜೊತೆ ಸಂಘರ್ಷ ಶುರುವಾಯಿತು. 

ಇಂತಹ ಸುವರ್ಣ ಅವಕಾಶಕ್ಕಾಗಿಯೇ ಕಾಯುತ್ತಿದ್ದ   ಕೇಸರಿ ಪಕ್ಷದ ರಾಜ್ಯ ನಾಯಕರ ಪಡೆ ಕೈಯಲ್ಲಿ ಕೇಸರಿ ದ್ವಜ ಹಿಡಿದು ಹಿಂಡು ಹಿಂಡಾಗಿ ಕೆರಗೋಡು ಗ್ರಾಮಕ್ಕೆ ಲಗ್ಗೆ ಇಟ್ಟಿತು. ಪೊಲೀಸರು ಹಾಕಿದ ಬ್ಯಾರಿಕೇಡ್ ಗಳನ್ನು ತಳ್ಳಿ ನುಗ್ಗಿ ಕಾನೂನನ್ನು ಉಲ್ಲಂಘಿಸಲಾಯ್ತು. ಭಾವಪ್ರಚೋದನಾತ್ಮಕ ಭಾಷಣ ಮಾಡಲಾಯ್ತು. ಹಿಂದೂ ವಿರೋಧಿ ಸರಕಾರ ಎಂದು ಕೂಗಾಡಿದ್ದಾಯ್ತು. ಈ ನಾಯಕರನ್ನು ಪೊಲೀಸರು ಬಂಧಿಸಬೇಕು. ಅದು ರಾಜ್ಯಾದ್ಯಂತ ಪ್ರಚೋದನೆಗೆ ಪ್ರೇರಕವಾಗಬೇಕು ಎನ್ನುವುದು ಹಾಗೂ ಒಂದು ಗ್ರಾಮದ ಸಮಸ್ಯೆಯನ್ನು ರಾಜ್ಯಾದ್ಯಂತ ವಿಸ್ತರಿಸಬೇಕು ಎಂಬುದು ಬಿಜೆಪಿಗರ ಮೆಗಾ ಪ್ಲಾನಿಂಗ್ ಆಗಿತ್ತು. 

ಬಿಜೆಪಿಗರು ಹಚ್ಚಿದ ಕೋಮುಕಿಡಿಗೆ ತುಪ್ಪ ಸುರಿದು ಬೆಂಕಿಯಾಗಿಸುವ ಕೆಲಸವನ್ನು ಸಂಘ ಪರಿವಾರದ ಅಂಗಗಳೇ ಆಗಿರುವ ಮಾರಿಕೊಂಡ ಮಾಧ್ಯಮಗಳು ಅವ್ಯಾಹತವಾಗಿ ಮಾಡಿದವು. ಧ್ವಜಸ್ಥಂಭದ ನಿರ್ಮಾಣಕ್ಕೂ ಮುಂಚೆ ಬರೆದುಕೊಟ್ಟ ಮುಚ್ಚಳಿಕೆ ಹಾಗೂ ಶರತ್ತುಗಳಿರುವ ಅನುಮತಿ ಪತ್ರಗಳ ವಿಷಯ ಮರೆಮಾಚಿ 'ಹನುಮಧ್ವಜವನ್ನು ಬಲವಂತವಾಗಿ ಇಳಿಸಿ ಅಪಮಾನ ಮಾಡಿದರು'  ಎನ್ನುವ ಹುಸಿ ಸಂಗತಿಯನ್ನು ಮೀಡಿಯಾಂಗಗಳು ಪ್ರಚೋದನಾತ್ಮಕವಾಗಿ ಪ್ರಚಾರ ಮಾಡಿದವು. 

ಕಮಲಪಡೆ ಅಂದುಕೊಂಡಂತೆ ಆಯಿತು. ಕಾನೂನು ಸುವ್ಯವಸ್ಥೆಯ ಭಾಗವಾಗಿ ಪೊಲೀಸರು ಮಾಮೂಲಿಯಂತೆ ಪ್ರಚೋದನೆ ಮಾಡುತ್ತಿದ್ದ ಕೇಸರಿ ನಾಯಕರನ್ನು ಬಂಧಿಸಿ ಕರೆದೊಯ್ದು ನಂತರ ಬಿಡುಗಡೆ ಮಾಡಿದರು. ಈ ಎಲ್ಲಾ ಪೂರ್ವಯೋಜಿತ ಹೈಡ್ರಾಮಾವನ್ನು ಮಾಧ್ಯಮಗಳು ಇನ್ನಷ್ಟು ಮಸಾಲೆ ಬೆರೆಸಿ 'ಹಿಂದೂಗಳ ಭಾವನೆಗಳಿಗೆ ದಕ್ಕೆ ಆಯ್ತು' ಎನ್ನುವಂತೆ ಬಿಂಬಿಸಿ ರಾಜ್ಯ ಸರಕಾರದ ವಿರುದ್ದ ರಾಜ್ಯದ ಜನರು ಆಕ್ರೋಶಗೊಳ್ಳುವಂತೆ ಮಾಡಲು ಪ್ರಯತ್ನಿಸಿದರು. 

ಮತ್ತೆ ಸಂಘ ಪರಿವಾರಿಗರಿಂದ ಅಲ್ಲಲ್ಲಿ ಪ್ರತಿಭಟನೆ, ಬಜರಂಗದಳದವರಿಂದ ಉಗ್ರ ಹೇಳಿಕೆ, ಮಂಡ್ಯ ಬಂದ್ ಗೆ ಕರೆ, ರಾಜ್ಯಾದ್ಯಂತ ಪ್ರತಿಭಟನೆ ವಿಸ್ತರಿಸುವ ಘೋಷಣೆ ಇವೆಲ್ಲವೂ ಮಾಮೂಲು.

ಅಂತೂ ಇಂತೂ ಒಂದು ಹಂತದಲ್ಲಿ ಸಂಘಿಗಳ ಯೋಜನೆ ಯಶಸ್ವಿಯಾಯಿತು. ಕೋಮುಸೌಹಾರ್ಧಕ್ಕೆ ಹೆಸರಾದ ಮಂಡ್ಯದ ನೆಲದಲ್ಲಿ ಕೋಮುದ್ವೇಷದ ಬೀಜ ಬಿತ್ತಲಾಯಿತು. ಹನುಮನ ಹೆಸರಲ್ಲಿ ಹಿಂದೂ ಭಾವನೆ ಕೆರಳಿಸಿ, ಅದನ್ನು ಆಳುವ ಸರಕಾರದ ವಿರುದ್ದ ತಿರುಗಿಸಿದರೆ  ಕೇಸರಿಗರ ಉದ್ದೇಶ ಈಡೇರಿದಂತಾಯ್ತು. 

ಯಾಕೆಂದರೆ ಇನ್ನು ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಇದೆ. ಈಗಾಗಲೇ ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಸೋತು ಸುಣ್ಣವಾಗಿದೆ. ಆ ಪಕ್ಷಕ್ಕೆ ಸಮರ್ಥ ನಾಯಕತ್ವವೇ ಇಲ್ಲವಾಗಿದೆ. ಮತ್ತೆ ಲೋಕಸಭೆಯಲ್ಲಿ ಅತೀ ಹೆಚ್ಚು ಸೀಟು ಗೆಲ್ಲಲು ಈಗ ಬಿಜೆಪಿಗೆ ಉಳಿದದ್ದು ಮೋದಿ ಎನ್ನುವ ಬ್ರ್ಯಾಂಡ್ ನೇಮ್. ಕಳೆದ ಸಲ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆ ಬ್ರ್ಯಾಂಡ್ ಕೂಡಾ ವರ್ಕೌಟ್ ಆಗಲಿಲ್ಲ. ಹೀಗಾಗಿ ಈಗ ಬಿಜೆಪಿಗರಿಗೆ ಉಳಿದಿರುವುದು ರಾಮ ನಾಮ ಹಾಗೂ ಹನುಮಧ್ವಜಗಳಂತಹ ಭಾವನಾತ್ಮಕ ವಿಷಯಗಳು ಮಾತ್ರ. 

ಮಂಡ್ಯದಲ್ಲಿ ಬಿಜೆಪಿಗೆ ಗಟ್ಟಿ ನೆಲೆಯಿಲ್ಲ. ಜೆಡಿಎಸ್ ಜೊತೆ ಕೈಜೋಡಿಸಿ ಇಡೀ ಮಂಡ್ಯವನ್ನು ಕೇಸರೀಕರಣ ಮಾಡಲು ಅವರಿಗೆ ಇದೇ ಸದಾವಕಾಶ. ಅದಕ್ಕಾಗಿ ಜೆಡಿಎಸ್ ನ ಅವಕಾಶವಾದಿ ನಾಯಕ ಕುಮಾರಸ್ವಾಮಿಯವರಿಗೂ ಕೇಸರಿ ಶಾಲು ಹಾಕಿಸಿ ಹನುಮ ಜಪ ಮಾಡಲು ಹಚ್ಚಿ ಮಂಡ್ಯದ ಒಕ್ಕಲಿಗರ ಮತವನ್ನು ಕ್ರೂಢೀಕರಿಸಲು ಈ ಹನುಮದದ್ವಜ ಪ್ರಸಂಗ ಸೃಷ್ಟಿಸಲಾಗಿದೆ. ಕೇಸರಿಗರ ಬ್ರಹನ್ನಾಟಕದಲ್ಲಿ ಕುಮಾರಸ್ವಾಮಿ ಕೂಡಾ ಪಾತ್ರದಾರಿಗಳಾಗಿದ್ದಾರೆ. 

ಈ ಸಂಘ ಪರಿವಾರಕ್ಕೆ ರಾಷ್ಟ್ರಧ್ವಜಕ್ಕಿಂತಲೂ ಹನುಮಧ್ವಜಕ್ಕೆ ಅತೀ ಮಹತ್ವ. ದೇಶದ ಕಾನೂನಿಗಿಂತಲೂ ಧಾರ್ಮಿಕ ಭಾವನೆಗಳೇ ಅವರಿಗೆ ಮುಖ್ಯ. ಸಂವಿಧಾನಕ್ಕಿಂತಲೂ ಧರ್ಮವೇ ದೊಡ್ಡದು. ಹಿಂದೂರಾಷ್ಟ್ರ ಮಾಡುತ್ತೇನೆ ಎನ್ನುವವರಿಗೆ, ಸಂವಿಧಾನ ಬದಲಾಯಿಸಲೆಂದೇ ಬಂದಿರುವವರಿಗೆ ದೇಶದ ಕಾನೂನು ಸಂವಿಧಾನ ಪ್ರಜಾಪ್ರಭುತ್ವ ಅದ್ಯಾವ ಲೆಕ್ಕ.

ಸಾರ್ವಜನಿಕ ಸರಕಾರಿ ಸ್ಥಳದಲ್ಲಿ ಅನುಮತಿ ಇಲ್ಲದೇ ಕಾನೂನು ಉಲ್ಲಂಘಿಸಿ ಸಂಘಿಗಳು ಏನುಮಾಡಿದರೂ ಸುಮ್ಮನಿರಬೇಕು. ರಾಷ್ಟದ್ವಜಕ್ಕೆ ಅಪಮಾನ ಮಾಡಿ ಹನುಮದ್ವಜ ಹಾರಿಸಿದರೂ ಮೌನವಹಿಸಬೇಕು. ಯಾವುದಕ್ಕೋ ಅನುಮತಿ ಪಡೆದು ಇನ್ಯಾವುದನ್ನೋ ಮಾಡಿದರೆ ಯಾರೂ ಪ್ರಶ್ನಿಸದಂತಿರಬೇಕು. ಇದೆಲ್ಲಾ ಗೊತ್ತಿದ್ದೂ ಪಂಚಾಯತಿ, ಪೊಲೀಸ್ , ಜಿಲ್ಲಾಡಳಿತ ಹಾಗೂ ಸರಕಾರ ನಿಷ್ಕ್ರೀಯವಾಗಿ ಜಾಣಕುರುಡು ತೋರಿಸಿ ಸತ್ತಂತಿರಬೇಕು ಎಂಬುದು ಮತಾಂಧರ ಮನದಿಚ್ಚೆ. 

 ಆಡಳಿತ ವ್ಯವಸ್ಥೆಯು ಧರ್ಮದ ಹೆಸರಲ್ಲಿ ನಡೆಯುವ ಕಾನೂನು ಉಲ್ಲಂಘನೆಯನ್ನು ಪ್ರಶ್ನಿಸಿದರೆ ಅದು ಹಿಂದೂ ವಿರೋಧಿತನವಾಗುತ್ತದಂತೆ. ಸರಕಾರಿ ಜಾಗದ ದುರುಪಯೋಗವನ್ನು ವಿರೋಧಿಸಿದ  ಸರಕಾರ ಧರ್ಮದ್ರೋಹಿಯಾಗುತ್ತದಂತೆ. ಆದರೆ ಕೋಮುಪ್ರಚೋದನೆಯನ್ನು ನಿಯಂತ್ರಿಸಿದರೆ  ಅದು ಹೇಗೆ ಧರ್ಮದ್ರೋಹವಾಗುತ್ತದೆ? ಎಂದು ಕೇಳಿದರೆ ಅದೂ ಸಹ ಧರ್ಮನಿಂದನೆಯ ಭಾಗವಾಗುತ್ತದಂತೆ.

ಆಯಿತು ಭಕ್ತರ ಭಾವನೆಗೆ ಬೆಲೆ ಕೊಡಬೇಕು ಅಂದುಕೊಳ್ಳೋಣ. ಈಗ ಹನುಮಧ್ವಜ ಹಾರಿಸಲು ರಾಮನವಮಿಯೂ ಇಲ್ಲಾ, ಹನುಮ ಜಯಂತಿಯೂ ಅಲ್ಲಾ. ಅಕಾಲದಲ್ಲಿ ಕೇಸರಿ ಬಾವುಟ ಹಾರಿಸುವ ಅಗತ್ಯವೇನಿತ್ತು? ಹಾರಿಸಲೇ ಬೇಕೆಂದಿದ್ದರೆ ಹನುಮ ದೇವಸ್ಥಾನದ ಮೇಲೆ ಎಷ್ಟು ದೊಡ್ಡ ಬಾವುಟವನ್ನಾದರೂ ಹಾರಿಸಲಿ. ಇಲ್ಲವೇ ಹನುಮ ಭಕ್ತರ ಪ್ರತಿ ಮನೆಯ ಮೇಲೆ ಸನಾತನ ಬಾವುಟ ರಾರಾಜಿಸಲಿ. ಆದರೆ ಪಂಚಾಯತಿಯ ಸಾರ್ವಜನಿಕ ಜಾಗದಲ್ಲೇ ಅನಧೀಕೃತವಾಗಿ ಹನುಮಧ್ವಜ ಹಾರಿಸಿಯೇ ತೀರುತ್ತೇವೆ ಎಂದು ಗಲಾಟೆ ಮಾಡುವುದು ತಪ್ಪಲ್ಲವೇ? ಹೀಗೆ ತಪ್ಪು ಅಂತಾ ಹೇಳುವುದೇ ಕೇಸರಿಗರ ಪ್ರಕಾರ ಧರ್ಮದ್ರೋಹವಾಗುತ್ತದಂತೆ. ಹಿಂದೂ ಭಾವನೆಗಳಿಗೆ ಘಾಸಿಯಾಗುತ್ತದೆಯಂತೆ. ಹಾಗಾದಾಗ ಈ ದೇಶವನ್ನು ಸಂವಿಧಾನದ ಕಾನೂನುಗಳು ನಿಯಂತ್ರಿಸಬೇಕೋ ಇಲ್ಲವೇ ಹಿಂದೂ ಧಾರ್ಮಿಕ ಭಾವನೆಗಳು ನಿರ್ಣಯಿಸಬೇಕೋ? ಎಲ್ಲರಿಗೂ ಒಂದು ಕಾನೂನಾದರೆ ಈ ಸಂಘಿ ಭಕ್ತರು ಆಡಿದ್ದು ಹಾಗೂ ಮಾಡಿದ್ದು ಕಾನೂನಾಗಬೇಕೋ?  ಭಕ್ತಿ ಆಚರಣೆಗಳೆಂಬುದು ಅವರವರ ವ್ಯಯಕ್ತಿಕ ನಂಬಿಕೆಗಳು. ಅವು ಯಾವತ್ತೂ ಹೀಗೆ ಕಾನೂನು ಉಲ್ಲಂಘನೆಗೆ ಕಾರಣವಾಗಬಾರದು. ಸಾರ್ವಜನಿಕ ಅಸಹನೆಗೆ ಆಕರವಾಗಬಾರದು. ಆದರೆ ಹಾಗಾಗಲೇಬೇಕು ಎನ್ನುವುದೇ ಸಂಘ ಪರಿವಾರದ ಕೇಸರಿ ಪಡೆಗಳ ತಂತ್ರಗಾರಿಕೆ. ಕೋಮುಬಾವನೆ ಕೆರಳಿಸುವ ಮೂಲಕವೇ ಆಳುವ ಅಧಿಕಾರ ಗಿಟ್ಟಿಸಲು ಸಾಧ್ಯವೆಂಬುದು ಅವರ ನಾಯಕರುಗಳ ನಂಬಿಕೆ. ಹೀಗಾಗಿ ಆಗಾಗ ಅಂದರೆ ಚುನಾವಣೆಗಳು ಮುಂದಿದ್ದಾಗ ಈ ರೀತಿಯ ಕೋಮಸೌಹಾರ್ಧತೆ ಹಾಳು ಮಾಡಿ ಭಾವಪ್ರಚೋದಿಸುವ ಸನ್ನಿವೇಶಗಳನ್ನು ಸೃಷ್ಟಿಸಲಾಗುತ್ತದೆ. ಅದರ ಭಾಗವಾಗಿಯೇ ಈ ಕೆರಗೋಡು ಗ್ರಾಮದ ಹನುಮಧ್ಜಜ ಪ್ರಕರಣ ಮತ್ತು ನಂತರ ನಡೆದ ಕೇಸರಿ ಕಲಿಗಳ ಬ್ರಹನ್ನಾಟಕ. 

ಇದು ಇಲ್ಲಿಗೆ ಮುಗಿಯುವುದಿಲ್ಲ. ಲೋಕಸಭಾ ಚುನಾವಣೆ ಮುಗಿಯುವವರೆಗೂ ರಾಜ್ಯಾದ್ಯಂತ ಸಾಧ್ಯವಾದಲ್ಲೆಲ್ಲಾ ಕೋಮುಕಿಡಿ ಹಚ್ಚುವ, ಸೌಹಾರ್ಧತೆ ಕದಡುವ, ಮತಾಂಧ ಕಾರ್ಯಾಚರಣೆಗಳನ್ನು ಸೃಷ್ಟಿಸಲಾಗುತ್ತದೆ. ಅದಕ್ಕೆ ಧರ್ಮ ದೇವರುಗಳ ಬಣ್ಣ ಬಳಿಯಲಾಗುತ್ತದೆ. ಅಭಿವೃದ್ದಿ ರಾಜಕಾರಣದ ಬದಲಾಗಿ ಧರ್ಮರಾಜಕಾರಣವನ್ನು ಕಾರ್ಯಗತಗೊಳಿಸಿ ಪಟ್ಟ ಗಿಟ್ಟಿಸುವ  ಪ್ರಯತ್ನವನ್ನು ಕರ್ನಾಟಕ ರಾಜ್ಯದ ಪ್ರಜ್ಞಾವಂತ ಜನರು ಹಿಮ್ಮೆಟ್ಟಿಸಬೇಕಿದೆ. ಮೊದಲು  ಪ್ರಜಾಪ್ರಭುತ್ವವೇ ಧರ್ಮ, ಸಂವಿಧಾನವೇ ಧರ್ಮಗ್ರಂಥವಾಗಬೇಕಿದೆ. ಆ ನಂತರ ಅವರವರ ಇಚ್ಚಾನುಸಾರ ಧರ್ಮ ದೇವರ ಆಚರಣೆಗಳು ವ್ಯೆಯಕ್ತಿಕ ನೆಲೆಗಟ್ಟಿನಲ್ಲಿ ನಡೆಸಬಹುದಾಗಿದೆ ಹಾಗೂ ಅದಕ್ಕೆ ಸಂವಿಧಾನದ ಮಾನ್ಯತೆಯೂ ಇದೆ. 

ರಾಷ್ಟ್ರದ್ವಜಕ್ಕೆ ಅಪಮಾನ ಮಾಡಿದ ಬಿಜೆಪಿಯವರು ರಾಷ್ಟ್ರಭಕ್ತರಾ ಇಲ್ಲಾ ನಕಲಿ ರಾಷ್ಟ್ರಪ್ರೇಮಿಗಳಾ?  ಕಾನೂನು ಮತ್ತು ಸಂವಿಧಾನವನ್ನು ಉಲ್ಲಂಘಿಸುವ ಈ ಮತಾಂಧರು ದೇಶಭಕ್ತರಾ ಇಲ್ಲಾ ದೇಶದ್ರೋಹಿಗಳಾ? ಎಂಬುದನ್ನು ಈ ಕೆರಗೋಡು ಹೈಡ್ರಾಮಾಗೆ ಸಾಕ್ಷಿಯಾಗಿರುವ ಕರ್ನಾಟಕದ ಜನರು ಆಲೋಚಿಸಬೇಕಿದೆ. ಸತ್ಯವನ್ನು ಮರೆಮಾಚಿ ಬಿಜೆಪಿ ಪಕ್ಷದ ವಕ್ತಾರರಂತೆ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವ ಸುದ್ದಿ ವಾಹಿನಿಗಳಿಗೆ ಆತ್ಮಸಾಕ್ಷಿ ಇದ್ದಲ್ಲಿ ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬೇಕಿದೆ. ಕಾನೂನು ಭಂಜಕರಿಗೆ, ಸಂವಿಧಾನದ ವಿರೋಧಿಗಳಿಗೆ ಪ್ರಚಾರ ಕೊಡುವುದೂ ಸಹ ದೇಶದ್ರೋಹದ ಕೆಲಸವಾಗಿದೆ ಎಂಬುದನ್ನು ಈ ಮಾರಿಕೊಂಡ ಮಾಧ್ಯಮಗಳು ತಿಳಿದುಕೊಳ್ಳಬೇಕಿದೆ. ಇಲ್ಲದೇ ಹೋದರೆ ಧರ್ಮ ದೇವರ ಹೆಸರಲ್ಲಿ ಸಮಾಜದ ಶಾಂತಿ ನೆಮ್ಮದಿ ಸೌಹಾರ್ದತೆ ಕದಡುವ ಪ್ರಯತ್ನಗಳು ಅವ್ಯಾಹತವಾಗಿ ನಡೆಯುತ್ತಲೇ ಇರುತ್ತವೆ. ಕರಾವಳಿಯ ಹಾಗೆ ಮಂಡ್ಯ ಜಿಲ್ಲೆ ಸಹ ಸಂಘ ಪರಿವಾರದ ಕೋಮುವಾದಿ ಪ್ರಯೋಗಶಾಲೆಯಾಗುತ್ತದೆ. ಸೌಹಾರ್ಧತೆಗೆ ಆಧ್ಯತೆ ನೀಡುವ ಮಂಡ್ಯದ ಜನತೆ ಈಗಲೇ ಎಚ್ಚೆತ್ತುಕೊಳ್ಳಬೇಕಿದೆ. ಇಡೀ ಜಿಲ್ಲೆಯಲ್ಲಿ ಕೋಮುಸೌಹಾರ್ಧತೆಯನ್ನು ಕಾಪಾಡಿಕೊಳ್ಳಲೇಬೇಕಿದೆ. 

- ಶಶಿಕಾಂತ ಯಡಹಳ್ಳಿ
29-01-2024

ಆಧುನೀಕರಣದ ಹಿಂದಿರುವ ಹಕೀಕತ್ತು; ರಂಗಚಟುವಟಿಕೆಗೆ ಭಾರೀ ಕುತ್ತು

ತಹ ತಹ - 499

ಆಧುನೀಕರಣದ ಹಿಂದಿರುವ ಹಕೀಕತ್ತು; ರಂಗಚಟುವಟಿಕೆಗೆ ಭಾರೀ ಕುತ್ತು


'ರವೀಂದ್ರ ಕಲಾಕ್ಷೇತ್ರವನ್ನು ನವೀಕರಣ ಮಾಡಲಾಗುತ್ತದಂತೆ' ಎನ್ನುವ ಸುದ್ದಿ ಕೇಳಿದರೆ ಬೆಂಗಳೂರಿನ ರಂಗಭೂಮಿ ವಲಯ ಬೆಚ್ಚಿ ಬೀಳುತ್ತದೆ. ರಿಪೇರಿ ನೆಪದಲ್ಲಿ ವರ್ಷಾನುಗಂಟಲೇ ಕಲಾಕ್ಷೇತ್ರವನ್ನು ಮುಚ್ಚಿದ ಹಿಂದಿನ ಕಹಿ ನೆನಪು ಮರುಕಳಿಸುತ್ತವೆ. ಈಗ ಮತ್ತೆ ರವೀಂದ್ರ ಕಲಾಕ್ಷೇತ್ರದ ವಜ್ರ ಮಹೋತ್ಸವದ ನೆಪದಲ್ಲಿ ಕಲಾಕ್ಷೇತ್ರದ ನವೀಕರಣ ಕಾರ್ಯವನ್ನು ಮಾಡಲು ಸಂಸ್ಕೃತಿ ಇಲಾಖೆಯು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆಯಂತೆ ಹಾಗೂ ಅದಕ್ಕೆ ಆಗುವ ಅಂದಾಜು ವೆಚ್ಚ 24 ಕೋಟಿಯಂತೆ. ಖುದ್ದಾಗಿ ಸಂಸ್ಕೃತಿ ಇಲಾಖೆಯ ಸಚಿವರೇ ನವೀಕರಣದ ಬಗ್ಗೆ ಅತೀವ ಆಸಕ್ತಿ ವಹಿಸಿದ್ದಾರಂತೆ. ಅವರ ಸಹೋದರನಿಗೆ ಗುತ್ತಿಗೆ ಕೊಡಲು ಈ ಯೋಜನೆಯಂತೆ ಎನ್ನುವ ಸುದ್ದಿಗಳು ರಂಗಕರ್ಮಿಗಳಲ್ಲಿ ಆತಂಕ ಸೃಷ್ಟಿಸುತ್ತಿವೆ. 

ಕಲಾಕ್ಷೇತ್ರದ ಕಾಮಗಾರಿ ನಿರ್ವಹಣೆ ಮಾಡುತ್ತಿರುವುದು ಸಂಸ್ಕೃತಿ ಇಲಾಖೆಯಲ್ಲಾ ಲೋಕೋಪಯೋಗಿ ಇಲಾಖೆ. ಐದು ವರ್ಷಗಳ ಹಿಂದೆ ಕಲಾಕ್ಷೇತ್ರದ ನವೀಕರಣ ಕಾರ್ಯವನ್ನು ಕೈಗೆತ್ತಿಕೊಂಡಾಗ ಈ ಎರಡೂ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ವರ್ಷಾನುಗಂಟಲೇ ಕಾಮಗಾರಿ ಕುಂಟುತ್ತಾ ಸಾಗಿತ್ತು. ರಂಗಮಂದಿರದ ವಿನ್ಯಾಸ ಹಾಗೂ ತಂತ್ರಜ್ಞತೆ ಇತರೇ ಕಟ್ಟಡಗಳಂತಲ್ಲಾ. ಪಿಡ್ಬ್ಲುಡಿ ಇಂಜನೀಯರುಗಳಿಗೆ ಎಲ್ಲಾ ಕಟ್ಟಡಗಳೂ ಒಂದೇ. ಅವರಿಗೆ  ತಾಂತ್ರಿಕ ಸಲಹೆ ಕೊಡಲೆಂದೇ ರಂಗತಜ್ಞರ ಸಲಹಾ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿತ್ತು. ಆದರೆ ಲೋಕೋಪಯೋಗಿ ಅಧಿಕಾರಿಗಳ ಅಸಹಕಾರ ಹಾಗೂ ಅಜ್ಞಾನಕ್ಕೆ ಬೇಸತ್ತು ಸಮಿತಿಯಲ್ಲಿದ್ದ ಶಶಿಧರ್ ಅಡಪ, ಅಪ್ಪಯ್ಯ ಮುಂತಾದವರು ರಾಜೀನಾಮೆ ಕೊಡಬೇಕಾಯ್ತು. ಹಲವಾರು ತಿಂಗಳುಗಳ ಕಾಲ ಕಾಮಗಾರಿಯೇ ಸ್ಥಗಿತಗೊಂಡಿತ್ತು.
ಕಾಯ್ದು ಕಾಯ್ದು ಬೇಸತ್ತ ರಂಗಕರ್ಮಿ ಕಲಾವಿದರುಗಳು ಕಲಾಕ್ಷೇತ್ರ ರೀಓಪನ್ ಮಾಡಿ ಎಂದು ಪ್ರತಿಭಟನೆ ಮಾಡಬೇಕಾಯ್ತು. ಒತ್ತಾಯಕ್ಕೊಳಗಾಗಿ ತರಾತುರಿಯಲ್ಲಿ ಬಾಕಿ ಕೆಲಸ ಮುಗಿಸಿದಂತೆ ಮಾಡಿ ಹಾಗೂ ಹೀಗೂ ಹೇಗೋ ಕಲಾಕ್ಷೇತ್ರ ತೆರೆಯಲಾಯ್ತು. ಆದರೆ ದ್ವನಿ ಮತ್ತು ಬೆಳಕಿನ ಕಳಪೆ ಪರಿಕರಗಳಿಂದಾಗಿ ಅತೀ ಶೀಘ್ರದಲ್ಲಿ ನವೀಕರಣದ ಉದ್ದೇಶ ವಿಫಲವಾಯಿತು. ಕಾರ್ಯಕ್ರಮ ಮಾಡುವವರು ಹೆಚ್ಚುವರಿ ಲೈಟಿಂಗ್ಸ್ ಗಳನ್ನು ಹೊರಗಡೆಯಿಂದಾ ಬಾಡಿಗೆಗೆ ತರಬೇಕಾದ ಅನಿವಾರ್ಯತೆ ಉಂಟಾಯಿತು. ಅದೇ ರೀತಿ ಕಲಾಗ್ರಾಮದಲ್ಲಿರುವ ರಂಗಮಂದಿರದ ಲೈಟಿಂಗ್ ರೂಂ ಬೆಂಕಿಗೆ ಆಹುತಿಯಾಯಿತು. ಒಂದು ತಿಂಗಳಲ್ಲಿ ರಿಪೇರಿ ಮಾಡಬಹುದಾಗಿತ್ತು ಮಾಡಲಿಲ್ಲ. ಒಂದೂವರೆ ವರ್ಷವಾದರೂ ಸರಿಪಡಿಸಲಿಲ್ಲ. ಕೊನೆಗೆ ರಂಗಕರ್ಮಿಗಳು ಧರಣಿ ಸತ್ಯಾಗ್ರಹ ಪ್ರತಿಭಟನೆ ಮಾಡಿಯೇ ರಂಗಮಂದಿರ ಪಡೆಯಬೇಕಾಯ್ತು.

ಹಿಂದಿನ ಇಂತಹ ಆತಂಕಕಾರಿ ಅನುಭವಗಳಿಂದಾಗಿ ಕಲಾಕ್ಷೇತ್ರದ ನವೀಕರಣ ಎಂದರೆ ಸಾಂಸ್ಕೃತಿಕ ಕ್ಷೇತ್ರದವರು ಬೆಚ್ಚಿ ಬೀಳುತ್ತಾರೆ. ಆದರೆ ಈಗ ಮತ್ತೆ ಅದೇ ಕಲಾಕ್ಷೇತ್ರ ನವೀಕರಣಗೊಂಡು ಅತ್ಯಾಧುನೀಕರಣಗೊಳ್ಳುತ್ತಿದೆ. 

24 ಕೋಟಿ ಯೋಜನೆ ಅಂದ್ರೆ ಸುಮ್ಮನೇನಾ? ಕನಿಷ್ಟ ಎರಡು ವರ್ಷಗಳ ಕಾಲ ಕಲಾಕ್ಷೇತ್ರ ಮುಚ್ಚುಗಡೆಯಾಗುವುದು ಖಂಡಿತ. ಯಾರೂ ಕೇಳದಿದ್ದರೂ ಸ್ವಯಂ ಆಸಕ್ತಿಯಿಂದ ಸಂಸ್ಕೃತಿ ಇಲಾಖೆಯ ಸಚಿವರ ಒತ್ತಾಸೆಯ ಮೇರೆಗೆ ಮಾಡಬಯಸುವ ಈ ನವೀಕರಣದಿಂದಾಗುವ ಸಮಸ್ಯೆಗಳು ಹೀಗಿವೆ.

1. ಸುದೀರ್ಘ ಕಾಲ ನವೀಕರಣಕ್ಕಾಗಿ ಕಲಾಕ್ಷೇತ್ರ ಮುಚ್ಚುವುದರಿಂದ ಸಾಂಸ್ಕೃತಿಕ ಚಟುವಟಿಕೆಗಳು ಕುಂಟಿತಗೊಳ್ಳುತ್ತವೆ.

2. 24 ಕೋಟಿ ವೆಚ್ಚದಲ್ಲಿ ಉನ್ನತೀಕರಣ ಮಾಡಿ ಹೈಟೆಕ್ ರಂಗಮಂದಿರವಾಗಿ ರೂಪಾಂತರಿಸುವುದರಿಂದ ಕಲಾಕ್ಷೇತ್ರದ ಬಾಡಿಗೆ ಗಗನಕ್ಕೇರಿ ರಂಗಭೂಮಿಯವರ ಕೈಗೆಟುಕದಂತಾಗುತ್ತದೆ. 

3. ಕಲೆಗಾಗಿಯೇ ಮೀಸಲಿರಬೇಕಾದ ಕಲಾಕ್ಷೇತ್ರವು ಕಾರ್ಪೋರೇಟ್ ಕಾರ್ಯಕ್ರಮಗಳಿಗೆ, ರಿಯಾಲಿಟಿ ಶೋಗಳಿಗೆ ಮಾತ್ರ ಬಳಕೆಯಾಗುತ್ತದೆ. ಅತೀ ಹೆಚ್ಚು ಬಾಡಿಗೆ ಕಟ್ಟಲಾಗದ ರಂಗಭೂಮಿಯವರಿಗೆ ರಂಗಮಂದಿರ ಗಗನಕುಸುಮವಾಗುತ್ತದೆ.

4. ನವೀಕರಣದ ನಂತರ ದುಬಾರಿ ಬಾಡಿಗೆ ವಸೂಲಾತಿಯಿಂದಾಗಿ ಟೌನ್ ಹಾಲ್ ನಲ್ಲಿ ರಂಗಚಟುವಟಿಕೆಗಳು ಸಂಪೂರ್ಣ ನಿಂತಿದ್ದು ಅದೇ ಪರಿಸ್ಥಿತಿ ರವೀಂದ್ರ ಕಲಾಕ್ಷೇತ್ರಕ್ಕೂ ಬರುತ್ತದೆ.

5. ಈ ನವೀಕರಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಮಾಡುವುದರಿಂದ ಹಾಗೂ ಆ ಇಲಾಖೆಯ ಮೇಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಯಾವುದೇ ನಿಯಂತ್ರಣ ಇಲ್ಲದೇ ಇರುವುದರಿಂದ ಕಳಪೆ ಕಾಮಗಾರಿ ಮಾಡಲಾಗುತ್ತದೆ ಹಾಗೂ ಕಡಿಮೆ ಆಯಸ್ಸು ಹೊಂದಿರುವ, ಕಡಿಮೆ ಬೆಲೆಯ ಚೀನೀ ಮೇಡ್ ದ್ವನಿ ಹಾಗೂ ಬೆಳಕಿನ ಪರಿಕರಗಳನ್ನು ಬಳಸುವ ಸಾಧ್ಯತೆಯೇ ಹೆಚ್ಚಾಗಿ ಕೆಲವೇ ಸಮಯದಲ್ಲಿ ಅವು ನಿರುಪಯುಕ್ತವಾಗುತ್ತವೆ. ಮಾಡಿದ ಅಪಾರ ಪ್ರಮಾಣದ ಖರ್ಚು ವ್ಯರ್ಥವಾಗುತ್ತದೆ.

6. ಪಿಡ್ಬ್ಲುಡಿ ಅಧಿಕಾರಿಗಳು ಹಾಗೂ ಇಂಜನೀಯರುಗಳಿಗೆ ರಂಗಮಂದಿರ ಕುರಿತ ತಾಂತ್ರಿಕ ಅಗತ್ಯ ಮತ್ತು ವಿನ್ಯಾಸದ ಕುರಿತು ಯಾವುದೇ ಜ್ಞಾನ ಹಾಗೂ ಅನುಭವ ಇಲ್ಲದೇ ಇರುವುದರಿಂದ ರಂಗಮಂದಿರಗಳಿಗೆ ಬೇಕಾದ ತಾಂತ್ರಿಕ ಅಗತ್ಯಗಳನ್ನು ಅಳವಡಿಸಲು ಸಾಧ್ಯವಾಗದೇ ಹೋಗುತ್ತದೆ.

*ಇಷ್ಟೆಲ್ಲಾ ತಾಪತ್ರಯ ಇರುವಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡಬೇಕಾದದ್ದಾದರೂ ಏನು?*

1. ರವೀಂದ್ರ ಕಲಾಕ್ಷೇತ್ರಕ್ಕೆ 75 ವರ್ಷ ತುಂಬಿರುವ ಸ್ಮರಣೆಯಲ್ಲಿ ಬೆಂಗಳೂರಿನ ಬೇರೆ ಸ್ಥಳದಲ್ಲಿ ಅದೇ 24 ಕೋಟಿ ಹಣವನ್ನು ಬಳಸಿ ಕಲಾಕ್ಷೇತ್ರದಂತಹ ಇನ್ನೊಂದು ರಂಗಮಂದಿರ ಕಟ್ಟಬಹುದಾಗಿದೆ.

2. ತಲಾ ಎರಡು ಕೋಟಿಯ ವೆಚ್ಚದಲ್ಲಿ ರಾಜ್ಯದ 12 ಜಿಲ್ಲಾ ಕೇಂದ್ರಗಳಲ್ಲಿ ಕಿರುರಂಗಮಂದಿರಗಳನ್ನು ಅಂದರೆ ಮಿನಿ ಕಲಾಕ್ಷೇತ್ರಗಳನ್ನು ನಿರ್ಮಿಸಿ ಸಾಂಸ್ಕೃತಿಕ ಕ್ಷೇತ್ರಕ್ಕೆ ಶಾಶ್ವತ ಕೊಡುಗೆಯಾಗಿ ಕೊಡಬಹುದಾಗಿದೆ.

3 . ಕಲಾಕ್ಷೇತ್ರದ ಆವರಣದಲ್ಲಿ ತಾಲಿಂ ಕೊಠಡಿಗಳಿರುವ ಜಾಗದಲ್ಲಿ ಬಹು ಅಂತಸ್ತಿನ ಥೇಯಟರ್ ಕಾಂಪ್ಲೆಕ್ಸ್ ಕಟ್ಟಿಸಿ ಅದರಲ್ಲಿ ಹಲವಾರು ತಾಲಿಂ ಕೊಠಡಿ, ಕಿರುರಂಗಮಂದಿರ ಹಾಗೂ ರಂಗಶಿಕ್ಷಣ ಕೇಂದ್ರದ ಕಟ್ಟಡ ಕಟ್ಟಿ ರಂಗಭೂಮಿಯ ಚಟುವಟಿಕೆಗಳಿಗೆ ಪೂರಕವಾಗಿ ಸ್ಪಂದಿಸಬಹುದಾಗಿದೆ.

*ಈಗ ಸಾಂಸ್ಕೃತಿಕ ಲೋಕದವರು ಏನು ಮಾಡಬೇಕು?*

1.  ರವೀಂದ್ರ ಕಲಾಕ್ಷೇತ್ರದ ಅತ್ಯಾಧುನೀಕರಣವನ್ನು ಸಂಘಟಿತರಾಗಿ ಪ್ರತಿಭಟನೆಗಳ ಮೂಲಕ ವಿರೋಧಿಸಬೇಕಿದೆ.

2. ಬಹುಕೋಟಿ ವೆಚ್ಚದಲ್ಲಿ ಅನಗತ್ಯವಾಗಿ ಕಲಾಕ್ಷೇತ್ರದ ಆಧುನೀಕರಣದ ಯೋಜನೆಯನ್ನು ಕೈಬಿಟ್ಟು ಅದೇ ಹಣದಲ್ಲಿ ಬೇರೆ ರಂಗಮಂದಿರಗಳನ್ನು ಕಟ್ಟಿಸಿ ಕೊಡಲು ಆಗ್ರಹಿಸಬೇಕಿದೆ. 

3. ಬೆಂಗಳೂರಲ್ಲಿ ಹಲವಾರು ಬಡಾವಣೆಗಳಲ್ಲಿ ವಿಶಾಲವಾದ ಪಾರ್ಕ್ ಗಳಿವೆ. ಅದರಲ್ಲಿ ಸುಸಜ್ಜಿತ ಕಿರುರಂಗ ಮಂದಿರಗಳನ್ನು ನಿರ್ಮಿಸಿ  ರಂಗಕರ್ಮಿಗಳಿಗೆ ನಿರ್ವಹಣೆ ಹೊಣೆಗಾರಿಕೆ ವಹಿಸಿಕೊಟ್ಟರೆ ಬಡಾವಣಾ ರಂಗಭೂಮಿ ಬೆಳೆದು ಸಾಂಸ್ಕೃತಿಕ ಚಟುವಟಿಕೆಗಳು ವಿಕೇಂದ್ರಿಕರಣಗೊಳ್ಳಲು ಸಹಕಾರಿಯಾಗುತ್ತದೆ ಎಂದು ಸಚಿವರನ್ನು ಒತ್ತಾಯಿಸಬೇಕಿದೆ.

4 . ಪಿವಿಆರ್ ಸಿನೆಮಾ ಮಂದಿರದ ಮಾದರಿಯಲ್ಲಿ ಉದ್ದೇಶಿತ ಕೇಂದ್ರಿಕೃತ ಹವಾನಿಯಂತ್ರಣ ವ್ಯವಸ್ಥೆಯ ಬದಲಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಈಗಾಗಲೇ ಅಳವಡಿಸಿರುವ ಎಸಿ ಗಳನ್ನು  ರಿಪೇರಿ ಸರ್ವಿಸ್ ಮಾಡಿಸಿ ಬಳಸಬಹುದಾಗಿದೆ. 

5. ಈಗಿರುವ ದ್ವನಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಸರಿಪಡಿಸಿ, ಅಗತ್ಯವಿರುವ ಹೆಚ್ಚುವರಿ ಲೈಟಿಂಗ್ ಮತ್ತು ದ್ವನಿಪರಿಕರಗಳನ್ನು ಖರೀದಿಸಿ ಅಳವಡಿಸಿದರೆ ಸಾಕು ಅದಕ್ಕಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡುವ ಅಗತ್ಯವೇ ಬೇಕಿಲ್ಲ ಎಂದು ಅಧಿಕಾರಿಗಳಿಗೆ ಮನದಟ್ಟುಮಾಡಬೇಕಿದೆ.

6. ಸಂಸ ಬಯಲು ರಂಗಮಂದಿರದಲ್ಲಾಗುವ ಕಾರ್ಯಕ್ರಮಗಳ ಸೌಂಡ್ ಕಲಾಕ್ಷೇತ್ರದ ಒಳಗೆ ಕೇಳಿಬರುತ್ತಿದ್ದು ಎರಡರ ನಡುವೆ ಶೆಟರ್ ಇರುವುದನ್ನು ತೆಗೆದು ಶಾಶ್ವತ ಗೋಡೆ ಕಟ್ಟಿಸಿದರೆ ಈ ಸಮಸ್ಯೆಯೂ ಪರಿಹಾರವಾಗುತ್ತದೆ. 

*ಇಷ್ಟೆಲ್ಲಾ ಸಕಾರಾತ್ಮಕ ಸಲಹೆಗಳನ್ನು ಕೊಟ್ಟರೂ ಸಂಸ್ಕೃತಿ ಇಲಾಖೆ ಹಠಕ್ಕೆ ಬಿದ್ದು ಕಲಾಕ್ಷೇತ್ರದ ಅತ್ಯಾಧುನೀಕರಣಕ್ಕೆ ಉತ್ಸಾಹ ತೋರಿದರೆ ರಂಗಕರ್ಮಿ ಕಲಾವಿದರು, ಸಾಂಸ್ಕೃತಿಕ ಸಂಘ ಸಂಸ್ಥೆಗಳು ಏನು ಮಾಡಬೇಕು?*

1. ಹಿರಿಯ ರಂಗಕರ್ಮಿಗಳ ನೇತೃತ್ವದಲ್ಲಿ 'ಅನಗತ್ಯ ಆಧುನೀಕರಣದ ಅಗತ್ಯವಿಲ್ಲ'ಎಂಬ ಮನವಿ ಪತ್ರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಿಗೆ ಹಾಗೂ ಸಚಿವರಿಗೆ ತಲುಪಿಸಬೇಕು.

2. ಸಾಹಿತಿ ಕಲಾವಿದರ ಒಂದು ನಿಯೋಗ ಹೋಗಿ ಮುಖ್ಯಮಂತ್ರಿಗಳ ಸಮಯ ಪಡೆದು ಬೇಟಿಯಾಗಿ ಅನಗತ್ಯ ಆಧುನಿಕರಣದ ನಿರರ್ಥಕತೆಯನ್ನು ಮನದಟ್ಟುಮಾಡಿ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಬೇಕು.

3. ಅದೂ ವರ್ಕೌಟ್ ಆಗದೇ ಇದ್ದರೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಎಲ್ಲಾ ಸರಕಾರಿ ಕಾರ್ಯಕ್ರಮಗಳನ್ನು ಬೈಕಾಟ್ ಮಾಡುತ್ತೇವೆಂದು ಸರಕಾರಕ್ಕೆ ತಿಳಿಸಬೇಕು. ಸರಕಾರಿ ಕಾರ್ಯಕ್ರಮಗಳಲ್ಲಿ ಕಪ್ಪು ಬಾವುಟ ಪ್ರದರ್ಶಿಸಬೇಕು.

4. ನವೀಕರಣ ಮಾಡಲೇಬೇಕೆಂದರೆ ಕಾಮಗಾರಿ ಆರಂಭ ಹಾಗೂ ಅಂತ್ಯದ ಕಾಲಮಿತಿಯ ಬಗ್ಗೆ ಸಂಸ್ಕೃತಿ ಇಲಾಖೆ ಲಿಖಿತವಾಗಿ ಬರೆದುಕೊಡಬೇಕು ಹಾಗೂ ನವೀಕರಣದ ನಂತರ ಯಾವುದೇ ಕಾರಣಕ್ಕೂ ಬಾಡಿಗೆ ಹೆಚ್ಚಿಸುವುದಿಲ್ಲ ಹಾಗೂ ರಂಗಭೂಮಿಯ ಚಟುವಟಿಕೆಗಳಿಗೆ ತಿಂಗಳಲ್ಲಿ 15 ದಿನ ಮೀಸಲಿರಿಸಲಾಗುತ್ತದೆ ಎಂದು ಸರಕಾರ ಅಧಿಕೃತವಾಗಿ ಮುಚ್ಚಳಿಕೆ ಬರೆದು ಕೊಡಬೇಕೆಂದು ಆಗ್ರಹಿಸಬೇಕು. 

ಇಷ್ಟನ್ನಾದರೂ ಮಾಡದೇ ಹೋದರೆ ಉಳ್ಳವರ ಪಾಲಾಗುವ ರವೀಂದ್ರ ಕಲಾಕ್ಷೇತ್ರ ಸಾಂಸ್ಕೃತಿಕ ಚಟುವಟಿಕೆಗಳಿಗೆ ದಕ್ಕುವುದಿಲ್ಲ. ವಿಶ್ವದರ್ಜೆಯ ರಂಗಮಂದಿರದ ದುಬಾರಿ ಬಾಡಿಗೆ ಕಟ್ಟಿ ನಾಟಕ ಪ್ರದರ್ಶಿಸಲೂ ಸಾಧ್ಯವಿಲ್ಲ. ರವೀಂದ್ರ ಕಲಾಕ್ಷೇತ್ರ ಎನ್ನುವುದು ನಾಟಕದವರ ಕೈಗೆಟುಕ ಮತ್ತೊಂದು ಟೌನ್ ಹಾಲ್ ಇಲ್ಲವೇ ಚೌಡಯ್ಯ ಮೇಮೋರಿಯಲ್ ಹಾಲ್ ಅಥವಾ ಅಂಬೇಡ್ಕರ್ ಭವನ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. 

- ಶಶಿಕಾಂತ ಯಡಹಳ್ಳಿ
29-01-2024

ಕಲಾಕ್ಷೇತ್ರಕ್ಕೆ ಅನಗತ್ಯ ನವೀಕರಣ; ಸಾಂಸ್ಕೃತಿಕ ಕ್ಷೇತ್ರದ ಆತಂಕಕ್ಕೆ ಕಾರಣ

ತಹ ತಹ - 498

ಕಲಾಕ್ಷೇತ್ರಕ್ಕೆ ಅನಗತ್ಯ ನವೀಕರಣ;  ಸಾಂಸ್ಕೃತಿಕ ಕ್ಷೇತ್ರದ ಆತಂಕಕ್ಕೆ ಕಾರಣ


ಬ್ರ್ಯಾಂಡ್ ಬೆಂಗಳೂರಿನ ಅಬ್ಬರ ಈಗ ರವೀಂದ್ರ ಕಲಾಕ್ಷೇತ್ರಕ್ಕೆ ಆವರಿಸುವಂತಿದೆ. ಕಲಾಕ್ಷೇತ್ರಕ್ಕೆ 75 ವರ್ಷಗಳು ತುಂಬಿದ ಸಂಭ್ರಮವನ್ನು ರಂಗಮಂದಿರದ  ನವೀಕರಣದ ಮೂಲಕ ಆಚರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. 

ವಜ್ರ ಮಹೋತ್ಸವದ ಅಂಗವಾಗಿ  ರಂಗಮಂದಿರದಲ್ಲಿ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಮಾಡಿಸಿ, ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ದ್ವನಿ ಬೆಳಕಿನ ಪರಿಕರಗಳನ್ನು ಅಳವಡಿಸಿ, ವಾಟರ್ ಪ್ರೂಪ್ ಆಸನಗಳನ್ನು ಹಾಕಿಸಿ ಇಡೀ ಕಲಾಕ್ಷೇತ್ರವನ್ನು ಅಂತರಾಷ್ಟ್ರೀಯ ಮಟ್ಟದ ರಂಗಮಂದಿರವನ್ನಾಗಿ ಮಾಡುವ ಯೋಜನೆ ರೂಪಿಸಿ ಸರಕಾರದ ಅನುಮೋದನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಳುಹಿಸಿದೆ.

ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಡಾ. ಧರಣಿದೇವಿ ಮಾಲಗತ್ತಿಯವರು "ಸಾಂಸ್ಕೃತಿಕ ಕ್ಷೇತ್ರದ ಸಮಸ್ಯೆಗಳು ಹಾಗೂ ಪರಿಹಾರದ ಸಾಧ್ಯತೆಗಳು" ಕುರಿತು ಚರ್ಚಿಸಲು ಡಿಸೆಂಬರ್ 15 ರಂದು ಆಯ್ದ ರಂಗಕರ್ಮಿಗಳ ಸಭೆಯನ್ನು ಕರೆದಿದ್ದರು. ಆಗ ಕಲಾಕ್ಷೇತ್ರ ಮತ್ತು ಸಂಸ ಬಯಲು ರಂಗಮಂದಿರದ ನವೀಕರಣದ ಬಗ್ಗೆಯೂ ಮಾಹಿತಿಯನ್ನು ಪಡೆದುಕೊಂಡರು. ಇಲಾಖೆಯ ಸಚಿವರಾದ ಮಾನ್ಯ ಶಿವರಾಜ ತಂಗಡಿಗಿಯವರು ಕಲಾಕ್ಷೇತ್ರದ ನವೀಕರಣ ಮಾಡಿಸಲು ಉತ್ಸುಕರಾಗಿದ್ದಾರೆ ಎಂದೂ ತಿಳಿಸಿದರು. ಈಗ ಸಚಿವರ ಒತ್ತಾಸೆಯಂತೆ ನವೀಕರಣ ಯೋಜನೆಯ ರೂಪರೇಷೆಗಳು ಸಿದ್ದವಾಗಿ ಸರಕಾರದ ಅನುಮೋದನೆಗೆ ರವಾನೆಯಾಗಿದೆ.

ಇದೆಲ್ಲಾ ಸಂತಸದ ಸಂಗತಿಯೇ ಆಗಿದೆ. ಕಲಾಕ್ಷೇತ್ರ ಬ್ರ್ಯಾಂಡ್ ಬೆಂಗಳೂರಿನ ಐಕಾನ್ ಆಗುವುದಾದರೆ ಬೇಡ ಎನ್ನುವವರಾದರೂ ಯಾರು? ವಿಶ್ವದರ್ಜೆಯ ಥೇಯಟರ್ ನಮ್ಮದೆಂದು ಹೇಳಿಕೊಳ್ಳುವುದರಲ್ಲೇನಿದೆ ತಕರಾರು?  ಆದರೆ ದಿಗಿಲು ಹುಟ್ಟಿಸುವ ಸಂಗತಿ ಏನೆಂದರೆ ಈ ನವೀಕರಣಕ್ಕೆ ಮಾಡಲಾದ ಅಂದಾಜು ವೆಚ್ಚ 24 ಕೋಟಿಯಂತೆ. ಇದನ್ನು ಕೇಳಿಯೇ ಸಾಂಸ್ಕೃತಿಕ ಲೋಕದವರು ಬೆಚ್ಚಿಬಿದ್ದಿದ್ದಾರೆ. ಇಷ್ಟೊಂದು ಹಣದಲ್ಲಿ ಇನ್ನೊಂದು ಭವ್ಯವಾದ ಕಲಾಕ್ಷೇತ್ರವನ್ನೇ ಕಟ್ಟಬಹುದಾಗಿತ್ತಲ್ಲಾ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ರೀತಿಯ ಆತ್ಯಾಧುನಿಕ ರಂಗಮಂದಿರದಲ್ಲಿ ಕಲೆ ಸಾಹಿತ್ಯ ನಾಟಕಾದಿ ಕಾರ್ಯಕ್ರಮಗಳನ್ನು ಮಾಡಲು ಕನ್ನಡ ಸಾಂಸ್ಕೃತಿಕ ಕ್ಷೇತ್ರದವರಿಗೆ ಸಾಧ್ಯವಿದೆಯಾ? ಎಂದು ಆತಂಕವನ್ನೂ ಹೊರಹಾಕುತ್ತಿದ್ದಾರೆ.

ಹೌದು, ಈ ಆತಂಕ ನಿಜಕ್ಕೂ ಕಳವಳಕಾರಿಯಾಗಿರುವಂತಹುದು. ಈಗಾಗಲೇ ಬಿಜೆಪಿ ಸರಕಾರ ಇದ್ದಾಗ ರವೀಂದ್ರ ಕಲಾಕ್ಷೇತ್ರದ ಬಾಡಿಗೆಯನ್ನು ದುಪ್ಪಟ್ಟು ಮಾಡಲಾಗಿತ್ತು. ಜೊತೆಗೆ ಪ್ರತಿ ವರ್ಷ ಶೇಕಡಾ ಐದರಷ್ಟು ಬಾಡಿಗೆಯನ್ನು ಹೆಚ್ಚು ಮಾಡುವ ನಿರ್ಣಯವನ್ನೂ ಸರಕಾರ ಕೈಗೊಂಡಿತ್ತು. ಮೊದಲು  ರವೀಂದ್ರ ಕಲಾಕ್ಷೇತ್ರದ ಬಾಡಿಗೆ ದಿನವೊಂದಕ್ಕೆ ಕೇವಲ ನಾಲ್ಕು ಸಾವಿರವಿತ್ತು. ಕೇವಲ ಕಲಾಕ್ಷೇತ್ರ ಮಾತ್ರವಲ್ಲ ಕರ್ನಾಟಕದಾದ್ಯಂತ ಸಂಸ್ಕೃತಿ ಇಲಾಖೆಯ ನಿಯಂತ್ರಣದಲ್ಲಿರುವ ಎಲ್ಲಾ ರಂಗಮಂದಿರಗಳ ಬಾಡಿಗೆ ಇದೇ ರೀತಿ ಏಕರೂಪದಲ್ಲಿ ಇರಬೇಕೆಂದು ಆಗ ಸಚಿವೆಯಾಗಿದ್ದ ಮಾನ್ಯ ಉಮಾಶ್ರೀಯವರು ಆದೇಶ ಹೊರಡಿಸಿ ರಂಗಭೂಮಿಗೆ ದೊಡ್ಡ ಉಪಕಾರ ಮಾಡಿದ್ದರು. ಆದರೆ ನಂತರ ಬಂದ ಸರಕಾರ ಒಂದೊಂದು ರಂಗಮಂದಿರಕ್ಕೂ ಒಂದೊಂದು ರೀತಿ ಬಾಡಿಗೆ ನಿಗದಿಪಡಿಸಿ ಬೆಲೆ ಹೆಚ್ಚು ಮಾಡಿತು. ಇದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮಾಡುವವರಿಗೆ ಆರ್ಥಿಕ ಭಾರ ಹೆಚ್ಚಾಗಿ ನಾಟಕ ಪ್ರದರ್ಶನಗಳ ಸಂಖ್ಯೆ ಇಳಿಮುಖವಾಗಿತ್ತು.

ಈಗ ಒಂದು ದಿನಕ್ಕೆ ರವೀಂದ್ರ ಕಲಾಕ್ಷೇತ್ರದ ಬಾಡಿಗೆ ಒಟ್ಟು 25000 ರೂಪಾಯಿಯಾಗಿದೆ. ಇದರಲ್ಲಿ ಹತ್ತು ಸಾವಿರ ಠೇವಣಿ ಹಣ ಸೇರಿದ್ದರೂ ಮೇಂಟೇನನ್ಸ್, ಕರೆಂಟ್ ಅಂತಾ ಕಟ್ಟಿಂಗ್ ಮಾಡಿಕೊಳ್ಳಲಾಗುತ್ತದೆ. ಒಂದು ನಾಟಕ ಪ್ರದರ್ಶನ ಆಗಬೇಕೆಂದರೆ ಬೆಳಿಗ್ಗೆ ಟೆಕ್ನಿಕಲ್ ರಿಹರ್ಸಲ್ಸ ಮಾಡಿ ಸಂಜೆ ಪ್ರದರ್ಶನ ಕೊಡಬೇಕಾಗುತ್ತದೆ. ಮೊದಲೇ ಪ್ರೇಕ್ಷಕರ ಕೊರತೆಯಿಂದ ಬಡವಾಗಿರುವ ಕನ್ನಡ ರಂಗಭೂಮಿ ಆದಾಯ ತರುವ ಉದ್ಯಮವಂತೂ ಅಲ್ಲ. ಎಷ್ಟೋ ನಾಟಕ ಪ್ರದರ್ಶನಗಳು ಆರ್ಥಿಕ ನಷ್ಟದಲ್ಲಿ ಅಂತ್ಯವಾಗುತ್ತವೆ.

ಪರಿಸ್ಥಿತಿ ಹೀಗಿರುವಾಗ, ಕಲಾಕ್ಷೇತ್ರವನ್ನು ಅತ್ಯಾಧುನಿಕೀಕರಣ ಮಾಡಿದರೆ ಅದಕ್ಕೆ ತಕ್ಕಂತೆ ವಿಪರೀತ ಬಾಡಿಗೆಯನ್ನು ನಿಗಧಿಪಡಿಸಲಾಗುತ್ತದೆ. ಅಷ್ಟೊಂದು ಹಣ ಕೊಟ್ಟು ನಾಟಕ ಪ್ರದರ್ಶನಗಳನ್ನು ಮಾಡುವ ಶ್ರೀಮಂತಿಕೆ ಕನ್ನಡ ರಂಗಭೂಮಿಗೆ ಇಲ್ಲವಾಗಿದೆ. ಈಗ ರಂಗಭೂಮಿಯವರನ್ನು ಕಾಡುವ ಆತಂಕ ಇದೇ ಆಗಿದೆ. ಮತ್ತು ಸರಕಾರಕ್ಕೂ ಇದೇ ಬೇಕಾಗಿದೆ. ರಂಗಮಂದಿರವನ್ನು ಉನ್ನತೀಕರಿಸಿ ಸ್ಥಳೀಯ ನಾಟಕ ತಂಡದವರ ಕೈಗೆಟುಕದಂತೆ ಮಾಡುವುದು ಹಾಗೂ ಕಾರ್ಪೋರೇಟ್ ಕಾರ್ಯಕ್ರಮಗಳಿಗೆ, ರಿಯಾಲಿಟಿ ಶೋಗಳಿಗೆ ಕಲಾಕ್ಷೇತ್ರವನ್ನು ಬಾಡಿಗೆಗೆ ಕೊಡುವುದು ಸರಕಾರದ ಉದ್ದೇಶವಾಗಿದೆ. ಈಗಾಗಲೇ ರವೀಂದ್ರ ಕಲಾಕ್ಷೇತ್ರವನ್ನು ವಿಸ್ತಾರ ಟಿವಿ ವಾಹಿನಿಯವರಿಗೆ ಬಾಡಿಗೆಗೆ ಕೊಡಲಾಗುತ್ತಿದೆ. ಮುಂದೆ ಆಧುನಿಕೀಕರಣಗೊಂಡ ಕಲಾಕ್ಷೇತ್ರ ಅಂತವರ ಪಾಲಾಗುತ್ತದೆ.

ಕಲಾಕ್ಷೇತ್ರದ ಪಕ್ಕದಲ್ಲಿ ಟೌನ್  ಹಾಲ್ ಇದೆ. ಆರೇಳು ವರ್ಷಗಳ ಹಿಂದೆ ಅಲ್ಲಿ ಅನೇಕ ನಾಟಕ ಪ್ರದರ್ಶನಗಳು, ನಾಟಕೋತ್ಸವಗಳು, ರಂಗಸ್ಪರ್ಧೆಗಳು ನಿರಂತರವಾಗಿ ನಡೆಯುತ್ತಿದ್ದವು. ಮತ್ತು ಕಡಿಮೆ ಬಾಡಿಗೆಗೆ ಅದು ದೊರಕುತ್ತಿತ್ತು. ಆದರೆ ಯಾವಾಗ ಬಿಬಿಎಂಪಿ ಯವರು ಪುರಭವನದ ನವೀಕರಣ ಮಾಡಿದರೋ ಆಗ ಅದರ ಬಾಡಿಗೆ ದಿನವೊಂದಕ್ಕೆ ಐವತ್ತು ಸಾವಿರ ನಿಗದಿಪಡಿಸಿದರು. ಅಷ್ಟೊಂದು ಹಣ ಕೊಟ್ಟು ಕನ್ನಡ ರಂಗತಂಡಗಳಿಗೆ ನಾಟಕ ಮಾಡಲು ಸಾಧ್ಯವೇ? ಆ ನಂತರ ಟೌನ್ ಹಾಲ್ ನಲ್ಲಿ ರಂಗಚಟುವಟಿಕೆಗಳೇ ನಿಂತು ಹೋದವು. ಕಲಾಕ್ಷೇತ್ರ ಅತ್ಯಾಧುನಿಕರಣಗೊಂಡರೆ ಟೌನ್ ಹಾಲ್ ನಂತೆಯೇ ವಿಪರೀತ ಬಾಡಿಗೆ ತೆತ್ತಬೇಕಾಗುತ್ತದೆ ಎನ್ನುವುದು ರಂಗಕರ್ಮಿಗಳ ಭಯ. ಇದೇ ರೀತಿ ಹನುಮಂತನಗರದಲ್ಲಿರುವ ಕೆ.ಹೆಚ್.ಕಲಾಸೌಧವನ್ನು ನವೀಕರಣ ಮಾಡಿ ಬಿಬಿಎಂಪಿ ಅದರ ಟೆಂಡರ್ ಹಣ ಹೆಚ್ಚಿಸಿದ್ದರಿಂದಾಗಿ ಬಾಡಿಗೆ ದುಪ್ಪಟ್ಟಾಯಿತು. ಬನಶಂಕರಿನಗರದಲ್ಲಿರುವ ಸುಚಿತ್ರಾ ರಂಗಮಂದಿರವನ್ನು ಪೂರ್ವಂಕರ ಎನ್ನುವ ಖಾಸಗಿ ಕಂಪನಿಯವರು ನವೀಕರಣ ಮಾಡಿ ಬಾಡಿಗೆ ದರವನ್ನು ಮೂರು ಪಟ್ಟು ಹೆಚ್ಚಿಸಿದರು. ನವೀಕರಣದಿಂದಾಗುವ ಆರ್ಥಿಕ ಹಣದುಬ್ಬರದ ಬಗ್ಗೆ, ಸಾಂಸ್ಕೃತಿಕ ಕ್ಷೇತ್ರದ ಮೇಲಾಗುವ ಹೆಚ್ಚುವರಿ ಹೊರೆಯ ಬಗ್ಗೆ ಇಂತಹ ಹಲವಾರು ಉದಾಹರಣೆ ಕೊಡಬಹುದಾಗಿದೆ.

ಇಷ್ಟಕ್ಕೂ ಸಂಪೂರ್ಣ ಆಧುನೀಕರಣ ಮಾಡುವಂತಹ ಅನಿವಾರ್ಯತೆ ಕಲಾಕ್ಷೇತ್ರಕ್ಕೆ ಏನಿದೆ?  ಕೇವಲ ಐದು ವರ್ಷಗಳ ಹಿಂದೆ ಇದೇ ಕಾಂಗ್ರೆಸ್ ಸರಕಾರ ಇದ್ದಾಗ ವರ್ಷಗಳ ಕಾಲ ಕಲಾಕ್ಷೇತ್ರವನ್ನು ಮುಚ್ಚಿ ಎರಡೂಕಾಲು ಕೋಟಿ ರೂಪಾಯಿಗಳಷ್ಟು ಖರ್ಚು ಮಾಡಿ ನವೀಕರಣ ಮಾಡಿಯಾಗಿದೆ. ದ್ವನಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಅಪಗ್ರೇಡ್ ಮಾಡಲಾಗಿದೆ. ಈಗಲೂ  ಹೆಚ್ಚುವರಿ ಲೈಟಿಂಗ್ ಅಳವಡಿಸಿ, ಹಾಳಾದ ಲೈಟ್ಸಗಳನ್ನು ಬದಲಾಯಿಸಿ, ಹೆಚ್ಚುವರಿ ಸ್ಪೀಕರ್ ಗಳನ್ನು ಹಾಕಿಸಿ, ಈಗಾಗಲೇ ಇದ್ದು ಕೆಲಸ ಮಾಡದೇ ಇರುವ ಹವಾನಿಯಂತ್ರಣದ ವ್ಯವಸ್ಥೆಯನ್ನು ಸರಿಪಡಿಸಿದರೆ ಸಾಕು ನೆಮ್ಮದಿಯಾಗಿ ಎಂತಹುದೇ ಕಾರ್ಯಕ್ರಮಗಳನ್ನು ಕಲಾಕ್ಷೇತ್ರದಲ್ಲಿ ಮಾಡಬಹುದಾಗಿವೆ. ಕಡಿಮೆ ವೆಚ್ಚದಲ್ಲಿ, ಕಡಿಮೆ ಸಮಯದಲ್ಲಿ ಆಗಬಹುದಾದ ರಿಪೇರಿ ಕೆಲಸಗಳನ್ನು ಮಾಡಿಸುವುದು ಬಿಟ್ಟು ಇಡೀ ಕಲಾಕ್ಷೇತ್ರವನ್ನೇ ಅತ್ಯಾಧಿಕರಣ ಮಾಡುತ್ತೇವೆ ಎನ್ನುವುದರ ಹಿಂದೆ ಇರುವಂತಿದೆ ಅಗೋಚರ ಆರ್ಥಿಕ ಅವ್ಯವಹಾರದ ಗುಟ್ಟು. 

ಹೌದು, ಸಂಸ್ಕೃತಿ ಇಲಾಖೆಯ ಕೃಪಾ  ಕಟಾಕ್ಷದಲ್ಲಿರುವ ಅಕಾಡೆಮಿ ಪ್ರಾಧಿಕಾರಗಳಿಗೆ ಹಾಗೂ ರಂಗಾಯಣಗಳಿಗೆ ಬಿಡುಗಡೆ ಮಾಡಲು ಅನುದಾನವಿಲ್ಲ. ಎಲ್ಲಿ ಈ ಸರಕಾರಿ ಸಂಸ್ಥೆಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಿದರೆ ಕೊಟ್ಯಾಂತರ ಹಣ ಬಿಡುಗಡೆ ಮಾಡಬೇಕಾಗುತ್ತದೆಯೋ ಎಂದು ಸರಕಾರ ಎಂಟು ತಿಂಗಳಾದರೂ ಇನ್ನೂ ನೇಮಕಾತಿ ಮಾಡುತ್ತಿಲ್ಲ. ಸಂಸ್ಕೃತಿ ಇಲಾಖೆಯ ಕಾರ್ಯಕ್ರಮದಲ್ಲಿ ಪ್ರದರ್ಶನ ಕೊಟ್ಟ ಜಾನಪದ ಕಲಾವಿದರಿಗೆ ಎರಡು ವರ್ಷಗಳಾದರೂ ಇನ್ನೂ ಗೌರವಧನ ಬಿಡುಗಡೆಯಾಗಿಲ್ಲ. ಸಾಂಸ್ಕೃತಿಕ ತಂಡಗಳಿಗೆ ಪ್ರಾಯೋಜನೆ ಕೊಡಲು ಹಣವಿಲ್ಲದಾಗಿದೆ, ಕಲಾ ತಂಡಗಳಿಗೆ ಕೊಡಲಾಗುವ ಅನುದಾನವನ್ನು ಕಡಿತಗೊಳಿಸಲಾಗಿದೆ, ಕಲಾವಿದರಿಗೆ ಮಾಸಿಕ ಪಿಂಚಣಿ ಎಂದೂ ಪ್ರತಿ ತಿಂಗಳು ಪಾವತಿಯಾಗುತ್ತಿಲ್ಲ. ಇಲಾಖೆಯ ರಂಗಮಂದಿರಗಳಲ್ಲಿರುವ ಸಿಬ್ಬಂದಿಗಳಿಗೆ ಆರೇಳು ತಿಂಗಳಿಗೊಮ್ಮೆ ಸತಾಯಿಸಿ ಸಂಬಳ ಕೊಡಲಾಗುತ್ತಿದೆ.  ಇಂತಹ ಆರ್ಥಿಕ ದುಸ್ಥಿತಿಯಲ್ಲಿ 24 ಕೋಟಿ ಖರ್ಚು ಮಾಡಿ ಕಲಾಕ್ಷೇತ್ರ ನವೀಕರಣ ಮಾಡುವ ಅಗತ್ಯವಾದರೂ ಏನಿದೆ? ಕಟ್ಟಿಸಲೇ ಬೇಕೆಂದಿದ್ದರೆ ಇದೇ ಹಣದಲ್ಲಿ ಬೆಂಗಳೂರಿನ ಬೇರೆ ಕಡೆ ಇನ್ನೊಂದು ಕಲಾಕ್ಷೇತ್ರವನ್ನೇ ಕಟ್ಟಲಿ. ಇಲ್ಲವೇ ಇಷ್ಟೇ ಹಣದಲ್ಲಿ ತಲಾ ಎರಡು ಕೋಟಿಗೊಂದರಂತೆ ಒಟ್ಟು 12 ಆಪ್ತ ರಂಗಮಂದಿರಗಳನ್ನು 12 ಜಿಲ್ಲಾ ಕೇಂದ್ರಗಳಲ್ಲಿ ಕಟ್ಟಿಸಬಹುದಾಗಿತ್ತು. ಹಾಗೆ ಮಾಡಿದರೆ ಆ ಜಿಲ್ಲಾಕೇಂದ್ರಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಗರಿಗೆದರಬಹುದಾಗಿತ್ತು. ಕನ್ನಡ ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಅಗತ್ಯವಾದ ಇಂತಹ ಕಾರ್ಯಯೋಜನೆಗಳನ್ನು ಅನುಷ್ಟಾನಕ್ಕೆ ತರುವ ಬದಲಾಗಿ ದುಂದುವೆಚ್ಚದ ಅನಗತ್ಯ ಯೋಜನೆ ರೂಪಿಸುವ ಅಗತ್ಯವಾದರೂ ಏನಿದೆ? ಇಂತಹ ಅತೀ ವೆಚ್ಚದ ಆಧುನೀಕರಣಕ್ಕೆ ಈಗ ಒತ್ತಾಯ ಮಾಡಿದ್ದಾದರೂ ಯಾರು? ಇಂತಹುದನ್ನು ಯಾವೊಬ್ಬ ರಂಗಕರ್ಮಿಯೂ ಕೇಳಿಲ್ಲ, ಯಾವ ಸಾಹಿತಿ ಕಲಾವಿದರೂ ಒತ್ತಾಯಿಸಿಲ್ಲ. ಯಾವುದೇ ಸಂಘ ಸಂಸ್ಥೆಯೂ ಬೇಕೆ ಬೇಕೆಂದು ಪ್ರತಿಭಟನೆ ಮಾಡಿಲ್ಲ. ಆದರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸ್ವಯಂಪ್ರೇರಿತವಾಗಿ ಇಂತಹ ಅನಗತ್ಯ ವೆಚ್ಚದಾಯಕ ಯೋಜನೆ ರೂಪಿಸಿ ಸರಕಾರದ ಅನುಮೋದನೆಗೆ ಒತ್ತಾಯಿಸುತ್ತಿದೆಯೆಂದರೆ ಇದರ ಹಿಂದೆ ಇರುವ ಗುತ್ತಿಗೆ ಲಾಭಗಳ ಲೆಕ್ಕಾಚಾರಗಳ ಬಗ್ಗೆ ಗುಮಾನಿ ಪಡಲೇಬೇಕಿದೆ. ಈ ರೀತಿಯ ದುಂದು ವೆಚ್ಚಕ್ಕೆ ಮಾನ್ಯ ಮುಖ್ಯಮಂತ್ರಿಗಳು ಅನುಮತಿ ಕೊಡದೇ ನಿರಾಕರಿಸಬೇಕಿದೆ. ಇಂತಹ ಅನಗತ್ಯ ಅದ್ದೂರಿ ಯೋಜನೆಗಳ ವಿರುದ್ದ ಸಾಂಸ್ಕೃತಿಕ ಕ್ಷೇತ್ರದ ಕಲಾವಿದರು ಸಾಹಿತಿಗಳು ಹಾಗೂ ಸಂಘ ಸಂಸ್ಥೆಗಳು ದ್ವನಿ ಎತ್ತಲೇಬೇಕಿದೆ. ಕಲಾಕ್ಷೇತ್ರವನ್ನು ಕಲೆಗಾಗಿಯೇ ಮೀಸಲಿಡಬೇಕಾಗಿದೆ. 

- ಶಶಿಕಾಂತ ಯಡಹಳ್ಳಿ
28-01-2024

ಬಾಕಿ ಪ್ರಶಸ್ತಿಗಳ ಘೋಷಣೆ; ಸರಕಾರಕ್ಕೆ ಅಭಿನಂದನೆ

ತಹ ತಹ - 497

ಬಾಕಿ ಪ್ರಶಸ್ತಿಗಳ ಘೋಷಣೆ; ಸರಕಾರಕ್ಕೆ ಅಭಿನಂದನೆ


ಕರ್ನಾಟಕ ಸರಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಾಂಸ್ಕೃತಿಕ ಕ್ಷೇತ್ರದ ಸಾಧಕರಿಗೆ ಕೊಡಮಾಡುವ ಪ್ರಶಸ್ತಿಗಳು ನಾಲ್ಕು ವರ್ಷದಿಂದ ಬಾಕಿಯಾಗಿದ್ದವು. 2020-21 ಹಾಗೂ 2021-22 ನೇ ಸಾಲಿನ ಪ್ರಶಸ್ತಿಗಳು ಘೋಷಣೆಯಾಗಿ ಮೂರ್ನಾಲ್ಕು ವರ್ಷಗಳು ಕಳೆದರೂ ಬಾಕಿಯಾದ 31 ಪ್ರಶಸ್ತಿಗಳನ್ನು ಪ್ರದಾನ ಮಾಡದೇ ನಿರ್ಲಕ್ಷಿಸಲಾಗಿತ್ತು. ಹಾಗೂ 2022- 23 ನೇ ಸಾಲಿನ ಪ್ರಶಸ್ತಿಗಳ ಆಯ್ಕೆ ಪ್ರಯತ್ನವನ್ನೇ ಮಾಡಲೇ ಇಲ್ಲ. ಈಗ 2022-23 ಹಾಗೂ 2023-24 ನೇ ಸಾಲಿನ ಪ್ರಶಸ್ತಿಗಳಿಗಾಗಿ ಸಾಧಕರನ್ನು ಆಯ್ಕೆ ಮಾಡಲು ಸಮಿತಿ ರಚಿಸಿ ಸಂಭವನೀಯರ ಪಟ್ಟಿಯನ್ನೂ ಸಿದ್ದಪಡಿಸಲಾಗಿತ್ತಾದರೂ ಘೋಷಣೆ ಮಾಡಿರಲಿಲ್ಲ.

ಪ್ರಶಸ್ತಿ ಪ್ರದಾನ ಮಾಡುವಲ್ಲಾದ ವಿಪರೀತ ವಿಳಂಬವನ್ನು ಪ್ರಶ್ನಿಸಿ ಇತ್ತೀಚೆಗೆ ನಾನು ಲೇಖನವನ್ನೂ ಬರೆದಿದ್ದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆ ಪ್ರಕಟಿತ ಲೇಖನವನ್ನು ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಚಿವರುಗಳಿಗೂ ಕಳುಹಿಸಲಾಗಿತ್ತು. ಬೇರೆ ಬೇರೆ ಕಡೆಗಳಿಂದಲೂ ಸರಕಾರದ ಮೇಲೆ ಒತ್ತಡ ಬರತೊಡಗಿತು. ಈಗಾಗಲೇ ಸಿದ್ದವಾಗಿರುವ, ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಬಿಡುಗಡೆ ಮಾಡಲು ಸರಕಾರವು ಮೀನಾಮೇಷ ಎನಿಸುತ್ತಿತ್ತು. 

ಅಂತಹ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನದಲ್ಲಾಗಿರುವ ವಿಳಂಬದ ಕುರಿತು ಲೇಖನ ಪ್ರಕಟವಾಯಿತು. ಈ ಲೇಖನದ ಪರೋಕ್ಷ ಪ್ರಭಾವವೋ, ಕಾಕತಾಳೀಯವೋ, ಪೂರ್ವನಿರ್ಧಾರಿತವೋ, ಸಾಂಸ್ಕೃತಿಕ ಲೋಕದ ಒತ್ತಡವೋ ಗೊತ್ತಿಲ್ಲ. ಅಂತೂ ಇಂತೂ ಎರಡು ವರ್ಷಗಳ ಪ್ರಶಸ್ತಿಗಳ ಪಟ್ಟಿ ಬಿಡುಗಡೆ ಮಾಡಲಾಯಿತು. ಜೊತೆಗೆ ಘೋಷಿಸಿ ಪ್ರದಾನ ಮಾಡದೇ ಇರುವ ಪ್ರಶಸ್ತಿಗಳಿಗೂ ಮುಕ್ತಿ ದೊರಕಿಸುವ ದಿನವೂ ನಿಗಧಿಯಾಯ್ತು. 

ಜನವರಿ 31 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಂದ ಎಲ್ಲಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜ.25 ರಂದು ಅಧೀಕೃತ ಆದೇಶ ಹೊರಡಿಸಿತು.

ಕಾಲಮಿತಿಯಲ್ಲಿ ಸಾಧಕರಿಗೆ ಪ್ರಶಸ್ತಿ ಕೊಡಬೇಕು ಎನ್ನುವುದನ್ನು ಕಾಡಿ ಬೇಡಿ ಒತ್ತಾಯಿಸಿ ಹೇಳಬೇಕಾದ ಅನಿವಾರ್ಯತೆಯನ್ನು ಸರಕಾರಗಳು ಸೃಷ್ಟಿ ಮಾಡಿವೆ. ಸರಕಾರ ಯಾವುದೇ ಪಕ್ಷದ್ದಾಗಿರಲಿ ಸಾಂಸ್ಕೃತಿಕ ಕ್ಷೇತ್ರದ ವಾರ್ಷಿಕ ಪ್ರಶಸ್ತಿಗಳು ಆಯಾ ವರ್ಷದಲ್ಲೇ ಘೋಷಣೆಯಾಗಿ ಪ್ರದಾನ ಮಾಡುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕರ್ತವ್ಯವಾಗಿದೆ. ಅದಕ್ಕಾಗಿಯೇ ಬಜೆಟ್ನಲ್ಲಿ ಇಲಾಖೆಗೆ ಅನುದಾನ ಮಂಜೂರಾಗಿರುತ್ತದೆ. ಇಲಾಖೆ ಮತ್ತು ಸರಕಾರ ಕಾಲಮಿತಿಯಲ್ಲಿ ಪ್ರಶಸ್ತಿ ಕೊಡಬೇಕಾದ ತನ್ನ  ಕರ್ತವ್ಯವನ್ನು ನಿರ್ಲಕ್ಷಿಸಿದಾಗ ಅದಕ್ಕಾಗಿ ಒತ್ತಾಯಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ.

ಪ್ರಶಸ್ತಿಗಳನ್ನು  ಘೋಷಿಸಿ ಕೊಡದೇ ಸತಾಯಿಸಿದಾಗ ಸಾಧಕರ ಮಾನಸಿಕ ವೇದನೆ ಅಸಹನೀಯ. ಪ್ರಶಸ್ತಿಯ ನಿರೀಕ್ಷೆಯಲ್ಲಿಯೇ ನೊಂದು ಮರಣ ಹೊಂದಿದ ಸಾಧಕರೂ ಇದ್ದಾರೆ. ಸರಕಾರಗಳ ಈ ವಿಳಂಬ ನೀತಿ ಅಕ್ಷಮ್ಯ. ಸರಕಾರ ಯಾವುದೇ ಬಂದರೂ ಪ್ರಶಸ್ತಿಗಳು ಆಯಾ ವರ್ಷವೇ ಘೋಷಣೆ ಮಾಡಿ ಪ್ರದಾನ ಮಾಡಬೇಕು ಎನ್ನುವ ನಿಯಮ ಜಾರಿಮಾಡಬೇಕಿದೆ. 

ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ಆದೇಶವೂ ಆದ ಸಾಂಸ್ಕೃತಿಕ ನೀತಿಯಲ್ಲಿ ಈ ನಿಯಮ ಖಡ್ಡಾಯವಾಗಿದೆ. ಆದರೆ ಸಾಂಸ್ಕೃತಿಕ ನೀತಿ ಆದೇಶವಾಗಿ ಆರು ವರ್ಷಗಳೇ ಕಳೆದರೂ ಇನ್ನೂ ಅನುಷ್ಠಾನಕ್ಕೆ ಬರದೇ ಇರುವುದೇ ಈ ರೀತಿಯ ವಿಳಂಬಗಳಿಗೆ ಕಾರಣವಾಗಿದೆ. ಈಗಲಾದರೂ ಈ ಸರಕಾರ ಮುತುವರ್ಜಿ ವಹಿಸಿ ತಾನೇ ಆರು ವರ್ಷಗಳ ಹಿಂದೆ ಆದೇಶ ಮಾಡಿದ ಸಾಂಸ್ಕೃತಿಕ ನೀತಿಯನ್ನು ಜಾರಿಗೆ ತರುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಬೇಕಿದೆ. 

ಕಳೆದ ಒಂದು ವರ್ಷದಿಂದ ಸಂಸ್ಕೃತಿ ಇಲಾಖೆಯ ಕೃಪಾಪೋಷಣೆಯಲ್ಲಿ ಬರುವ ಎಲ್ಲಾ ಅಕಾಡೆಮಿ ಪ್ರಾಧಿಕಾರಗಳಿಗೆ ಅಧ್ಯಕ್ಷರು ಸದಸ್ಯರ ಆಯ್ಕೆಯನ್ನೇ ಮಾಡಿಲ್ಲ. ರಂಗಸಮಾಜಕ್ಕೆ ಸದಸ್ಯರನ್ನು ನೇಮಿಸಿಲ್ಲ. ಆರೂ ರಂಗಾಯಣಗಳಿಗೆ ನಿರ್ದೇಶಕರ ಆಯ್ಕೆಯಾಗಿಲ್ಲ. ಈ ಎಲ್ಲಾ ಸರಕಾರಿ ಸಂಸ್ಥೆಗಳು ಇದ್ದೂ ಇಲ್ಲದಂತಾಗಿದ್ದು ನಿಷ್ಕ್ರೀಯವಾಗಿವೆ. ಅವುಗಳಿಗೆ ಸೂಕ್ತವಾದವರನ್ನು ಬೇಗನೇ ನೇಮಕ ಮಾಡಿ ಸಾಂಸ್ಕೃತಿಕ ಕ್ಷೇತ್ರದ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಡುವ ಕೆಲಸವನ್ನು ಈ ಸರಕಾರ ಶೀಘ್ರವಾಗಿ ಮಾಡಬೇಕಾಗಿದೆ. ಈ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಸರಕಾರಿ ಸಂಸ್ಥೆಗೆ ನೇತಾರರನ್ನು ಆಯ್ಕೆ ಮಾಡಲಾಗುತ್ತದೆ ಎನ್ನುವ ನಿರೀಕ್ಷೆ ಮುಂದೂಡುತ್ತಲೇ ಬಂದಿದೆ. ಇನ್ನೂ ವಿಳಂಬವಾದರೆ ಈ ಸರಕಾರವೂ ಸಾಂಸ್ಕೃತಿಕ ಲೋಕದ ವಿರೋಧಿ ಎಂಬುದು ಖಾತ್ರಿಯಾಗುತ್ತದೆ. 

ಕಲೆ ಸಾಹಿತ್ಯ ಭಾಷೆಗಳನ್ನು ಉಳಿಸಿ ಬೆಳೆಸುವುದು ಆಳುವ ಸರಕಾರದ ಜವಾಬ್ಧಾರಿಯಾಗಿದೆ.  ತನ್ನ ವಿಳಂಬ ಧೋರಣೆಯನ್ನು ಬದಿಗಿಟ್ಟು ಈ ಕೂಡಲೇ ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳಿಗೆ ಅರ್ಹರನ್ನು ನೇಮಕಾತಿಗಳನ್ನು ಮಾಡಿ ತನ್ನ ಹೊಣೆಗಾರಿಕೆಯನ್ನು ಹಾಲಿ ಸರಕಾರ  ನಿಭಾಯಿಸಬೇಕೆಂಬುದು ಕನ್ನಡ ನಾಡಿನ ಸಾಂಸ್ಕೃತಿಕ ಲೋಕದವರ ಒತ್ತಾಯವಾಗಿದೆ.

ಈಗಾಗಲೇ ಸಂಭಾವ್ಯರ ಆಯ್ಕೆ ಪಟ್ಟಿ ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯ ತಲುಪಿದೆ. ಅಂತಿಮ ಪಟ್ಟಿಯೂ ಸಿದ್ದವಾಗಿ ಮುಖ್ಯಮಂತ್ರಿಗಳ ಅನುಮತಿಗಾಗಿ ಕಾಯುತ್ತಿದೆ. ಆದರೆ ಘೋಷಣೆ ಮಾಡುವಲ್ಲಿ ಅನಗತ್ಯ ವಿಳಂಬ ಮಾಡಲಾಗುತ್ತಿದೆ. ರಾಜಕೀಯ ಕಾರಣಗಳು ಏನೇ ಇರಲಿ, ಸಾಂಸ್ಕೃತಿಕ ಸಂಸ್ಥೆಗಳನ್ನು ಹೀಗೆ ನಿರ್ಲಕ್ಷಿಸದೇ ಇರಲಿ. ತಕ್ಷಣವೇ ಎಲ್ಲಾ ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳಿಗೆ ಪದಾಧಿಕಾರಿಗಳ ನೇಮಕಾತಿ ಘೋಷಣೆಯಾಗಲಿ. ಅಕಾಡೆಮಿ ಪ್ರಾಧಿಕಾರಗಳು ಕೊಡಮಾಡುವ ವಾರ್ಷಿಕ ಪ್ರಶಸ್ತಿಗಳೂ ಸಹ ಎರಡು ಮೂರು ವರ್ಷಗಳಿಂದ ಬಾಕಿಯಾಗಿವೆ. ನೇಮಕಾತಿ ಆದ ತಕ್ಷಣ ಅರ್ಹ ಸಾಧಕರನ್ನು ಪ್ರಶಸ್ತಿಗಳಿಗೆ ಅಕಾಡೆಮಿ ಪ್ರಾಧಿಕಾರಗಳು ಆಯ್ಕೆ ಮಾಡಿ ಪ್ರಧಾನ ಮಾಡಲಿ. ಸಾಧಕರನ್ನು ಗುರುತಿಸಿ ಪ್ರಶಸ್ತಿಗಳ ಮೂಲಕ ಗೌರವಿಸುವುದು ನಾಗರೀಕ ಸಮಾಜ ಹಾಗೂ ಸರಕಾರದ ಜವಾಬ್ದಾರಿ. ಸಂಸ್ಕೃತಿ ಉಳಿದರೆ ನಾಡು ಉಳಿಯುತ್ತದೆ. ಸಂಸ್ಕೃತಿ ಶ್ರೀಮಂತವಾದಷ್ಟೂ ನಾಗರೀಕತೆಗೆ ಅರ್ಥಬರುತ್ತದೆ. ಇದನ್ನೆಲ್ಲಾ  ಆಳುವ ಸರಕಾರಗಳು ಹೇಳಿಸಿಕೊಳ್ಳದೇ ಅರ್ಥಮಾಡಿಕೊಂಡು ಈ ನಾಡಿನ ಜನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಅಗತ್ಯವಾಗಿದೆ. 

- ಶಶಿಕಾಂತ ಯಡಹಳ್ಳಿ
27-01-2024

ಮನುವಾದಿಗಳ ರಾಮರಾಜ್ಯ Vs ಸಮಾನತೆಯ ಪ್ರಜಾರಾಜ್ಯ

ತಹ ತಹ.. 496

ಮನುವಾದಿಗಳ ರಾಮರಾಜ್ಯ Vs  ಸಮಾನತೆಯ ಪ್ರಜಾರಾಜ್ಯ


ಈಗ ದೇಶಾದ್ಯಂತ ರಾಮಮಂದಿರದ ಕುರಿತೇ ಮಾತುಕತೆ. ಬಹುತೇಕ ಮಾಧ್ಯಮಗಳಂತೂ ಶ್ರೀರಾಮನ ಕುರಿತು ಚರ್ಚೆಗೆ ಪ್ರಚಾರಕ್ಕೆ ತಮ್ಮ ಬಹುತೇಕ ಸಮಯ ಮೀಸಲಾಗಿಟ್ಟಿವೆ. ಸಂಘ ಪರಿವಾರದವರು ರಾಮರಾಜ್ಯ ಸ್ಥಾಪನೆಯೇ ತಮ್ಮ ಲಕ್ಷವೆಂದು ಘೋಷಿಸಿದ್ದಾರೆ. ರಾಮರಾಜ್ಯ ಬರಬೇಕು ಎಂದು ಮಾಧ್ಯಮಾಂಗಗಳು ಹೇಳುತ್ತಲೇ ಇವೆ. ಜನರೂ ಅದನ್ನು ನಂಬಿಕೊಂಡು ರಾಮರಾಜ್ಯ ಬಂದರೆ ತಮ್ಮೆಲ್ಲಾ ಗೋಳಿಗೆ ಮುಕ್ತಿ ಸಿಕ್ಕಿ ಸುಖ ಸಮೃದ್ಧಿ ವೃದ್ದಿಯಾಗುತ್ತದೆ ಎಂದುಕೊಂಡಿದ್ದಾರೆ. 

ಹಾಗಾದರೆ ರಾಮರಾಜ್ಯ ಅಂದರೆ ಏನು? ತೇತ್ರಾಯುಗದಲ್ಲಿ ರಾಮ ತನ್ನ ಪ್ರಜೆಗಳನ್ನೆಲ್ಲಾ ಸುಖವಾಗಿಟ್ಟಿದ್ದು ಕಳ್ಳತನ ಮೋಸ ವಂಚನೆ ಸುಲಿಗೆ ಇಲ್ಲದಂತೆ ನೋಡಿಕೊಂಡಿದ್ದ. ಹೀಗಾಗಿ ಅಂತಹ ವ್ಯವಸ್ಥೆ ಇರುವ ರಾಮರಾಜ್ಯ ಮತ್ತೆ ಸ್ಥಾಪನೆ ಆಗಬೇಕು ಎನ್ನುವುದು ಬಹುತೇಕರ ಆಶಯವಾಗಿದೆ.‌ ಹಾಗೂ ಹಾಗೆ ಜನತೆಯನ್ನು ನಂಬಿಸಲಾಗಿದೆ.

ಆದರೆ.. ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ಇಲ್ಲಿ ಪ್ರಜೆಗಳಿಗಾಗಿ ಪ್ರಜೆಗಳಿಂದ ಪ್ರಜೆಗಳಿಗೋಸ್ಕರ  ಆಡಳಿತ ವ್ಯವಸ್ಥೆ ಇರಬೇಕೆಂಬುದು ಸಂವಿಧಾನದ ಉದ್ದೇಶ. ಪ್ರಜಾತಂತ್ರದಲ್ಲಿ ಪ್ರಜೆಗಳ ಬಹುಮತದ ಮೇರೆಗೆ ಪ್ರಜಾಪ್ರತಿನಿಧಿಗಳ ಆಯ್ಕೆ ನಡೆಯುವ ಮೂಲಕ ದೇಶ ಮುನ್ನಡೆಯುತ್ತದೆ. ಆದರೆ ಶ್ರೀರಾಮನದು ರಾಜಪ್ರಭುತ್ವ. ಅಂದರೆ ಜನರು ಇಚ್ಚಿಸಲಿ ಬಿಡಲಿ ತಲೆತಲೆಮಾರುಗಳಿಂದ ರಾಜರುಗಳ ಸಂತಾನವೇ ರಾಜ್ಯಾಡಳಿತಕ್ಕೆ ಉತ್ತರಾಧಿಕಾರಿಯಾಗಿ ಆಳ್ವಿಕೆ ಮಾಡಬೇಕು ಎಂಬುದು ರಾಜಪ್ರಭುತ್ವದ ನಿಯಮ. ಈಗ ಅಂತಹ ರಾಜಪ್ರಭುತ್ವದ ವ್ಯವಸ್ಥೆಯನ್ನು ಮರು ಸ್ಥಾಪಿಸಲಂತೂ ಸಾಧ್ಯವಿಲ್ಲ. ಅದೆಷ್ಟೋ ಶತಮಾನಗಳಷ್ಟು ಮುಂದೆ ಬಂದಿರುವ ಆಧುನಿಕ ಕಾಲವನ್ನು ಮತ್ತೆ ತೇತ್ರಾಯುಗಕ್ಕೆ ಹಿಮ್ಮುಖವಾಗಿ ಚಲಿಸುವಂತೆ ಮಾಡಲು ಅವಕಾಶವೇ ಇಲ್ಲ.

ರಾಜಪ್ರಭುತ್ವ ಅಂದರೆ ಸರ್ವಾಧಿಕಾರಿ ವ್ಯವಸ್ಥೆ. ಅಲ್ಲಿ ರಾಜ ಹೇಳಿದ್ದೇ ಶಾಸನ. ಮಾಡಿದ್ದೇ ಕಟ್ಟಲೆ  ಕಾನೂನು. ನ್ಯಾಯ ನಿರ್ಣಯ ಮಾಡುವಲ್ಲಿಯೂ  ರಾಜನಾದವನ ತೀರ್ಪೇ ಅಂತಿಮ. ಆದರೆ ಈಗ ಅಂತಹ ರಾಜ್ಯಾಡಳಿತ ಅಸಾಧ್ಯವಾದರೂ ಸರ್ವಾಧಿಕಾರಿ ಪ್ರಭುತ್ವ ಸ್ಥಾಪನೆ ಸಾಧ್ಯವಿದೆ. ಅದೇ ಸಂಘ ಪರಿವಾರದ ಉದ್ದೇಶವೂ ಆಗಿದೆ. ಈ ದೇಶವನ್ನು ಹಿಂದೂರಾಷ್ಟ್ರ ಮಾಡಿ, ಪ್ರಜಾಪ್ರಭುತ್ವದ ಬದಲಾಗಿ ಸರ್ವಾಧಿಕಾರಿ ಪ್ಯಾಸಿಸ್ಟ್ ಪ್ರಭುತ್ವವನ್ನು ಸ್ಥಾಪಿಸಿ ಮತ್ತೆ ಮನುಸ್ಮೃತಿ ಆಧಾರಿತ ವರ್ಣಾಶ್ರಮ ಪ್ರಣೀತ ವ್ಯವಸ್ಥೆಯನ್ನು ರೂಪಿಸುವುದು ಹಿಂದುತ್ವವಾದಿಗಳ ಅಂತಿಮ ಗುರಿಯಾಗಿದೆ. ಆ ಗುರಿಯನ್ನು ಮುಟ್ಟಲು ರಾಮರಾಜ್ಯದ ಪರಿಕಲ್ಪನೆಯನ್ನು ಜನರ ಮನಸಲ್ಲಿ ಅಚ್ಚೊತ್ತುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಅದರ ಭಾಗವಾಗಿಯೇ ರಾಮನ ಸಂಕೀರ್ಥನೆ ದೇಶಾದ್ಯಂತ ಪ್ರತಿದ್ವನಿಸುತ್ತಿದೆ.

ಹೋಗಲಿ ರಾಮರಾಜ್ಯ ಅಂದರೆ ರಾಮನ ಆದರ್ಶಗಳ ಪಾಲನೆಯಾಗಬೇಕಲ್ಲವೇ. ವಚನ ಪಾಲನೆ ಎಂಬುದು ಶ್ರೀರಾಮನ ಆದರ್ಶಗಳಲ್ಲಿ ಪ್ರಮುಖವಾದದ್ದು ತಾನೆ. ಹಾಗಾದರೆ ರಾಮರಾಜ್ಯ ಸ್ಥಾಪನೆ ಬಯಸಿರುವ ಬಿಜೆಪಿ ಪಕ್ಷ ಹಾಗೂ ಅದರ ವಿಶ್ವಗುರುಗಳಾಗಿರುವ ಮೋದಿಯವರು ಕಳೆದ ಹತ್ತು ವರ್ಷಗಳಿಂದ ಜನರಿಗೆ ಕೊಟ್ಟ ಭರವಸೆಗಳನ್ನು ಸಮರೋಪಾದಿಯಲ್ಲಿ ಈಡೇರಿಸಿದ್ದೇ ಆದರೆ ಅವರು ನಿಜವಾದ ರಾಮನ ಆದರ್ಶದ ಪರಿಪಾಲಕರು ಎನ್ನಬಹುದಾಗಿದೆ. ಆದರೆ ಧಾರ್ಮಿಕ ಭಾವನಾತ್ಮಕ ಸಂಗತಿಗಳನ್ನು ಹೊರತು ಪಡಿಸಿ ಇಲ್ಲಿಯವರೆಗೂ ಜನರಿಗೆ ಕೊಟ್ಟ ಬಹುತೇಕ ವಚನಗಳನ್ನು ಈಡೇರಿಸದೇ ಇರುವುದರಿಂದ ಈ ವಿಶ್ವಗುರುವನ್ನು ವಚನಭ್ರಷ್ಟ ಎಂದು ಕರೆಯಬಹುದಲ್ಲವೇ. ವಚನ ಭ್ರಷ್ಟರಾದವರು ರಾಮನ ಅನುಯಾಯಿಯಾಗಲೂ ಸಾಧ್ಯವಿಲ್ಲ ಹಾಗೂ ಅಂತವರಿಂದ ರಾಮರಾಜ್ಯ ಸ್ಥಾಪನೆಯೂ ಆಗುವುದಿಲ್ಲ. 

ವಿದೇಶದ ಕಪ್ಪು ಹಣ ಭಾರತಕ್ಕೆ ತರಲಿಲ್ಲಾ, ಜನರಿಗೆಲ್ಲಾ ಹಂಚಿಕೆಯಾಗಲಿಲ್ಲ. ವರ್ಷಕ್ಕೆರಡು ಕೋಟಿಯಂತೆ ಕಳೆದ ಹತ್ತು ವರ್ಷಗಳಿಂದ ಇಪ್ಪತ್ತು ಕೋಟಿ ಉದ್ಯೋಗ ಸೃಷ್ಟಿಯಾಗಿ ನಿರುದ್ಯೋಗ ತೊಲಗಬಹುದಾಗಿತ್ತು ಆದರೆ ಈಗ ನಿರುದ್ಯೋಗ ಸಮಸ್ಯೆಯೇ ದೊಡ್ಡದಾಗಿದೆ. ರೈತರ ಆದಾಯ ದ್ವಿಗುಣವಾಗಬಹುದಾಗಿತ್ತು ಆಗಲಿಲ್ಲ. ರಸಗೊಬ್ಬರ ರೇಟು, ಗ್ಯಾಸ್ ದರ, ಇಂದನ ಬೆಲೆ ಕಡಿಮೆಯಾಗಬೇಕಿತ್ತು ಆದರೆ ಇರುವ ಸಬ್ಸಿಡಿಯನ್ನೂ ತೆಗೆದು ಹಾಕಲಾಯಿತು. ಅಭಿವೃದ್ದಿ ಅಂದರೆ ವಿಸ್ತಾರವಾದ ರಸ್ತೆ ಸೇತುವೆ ನಿರ್ಮಿಸಿ ಟೋಲ್ ಸಂಗ್ರಹಿಸಿ ಜನರ ಜೇಬಿಗೆ ಕತ್ತರಿ ಹಾಕುವುದೇ ಆಗಿರುವಾಗ, ಸರಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರುವುದೇ ಆರ್ಥಿಕ ನೀತಿಯಾಗಿರುವಾಗ ರಾಮರಾಜ್ಯ ಸ್ಥಾಪನೆ ಎನ್ನುವುದು ಕನಸಿನ ಮಾತೇ ಹೊರತು ಜಾರಿಮಾಡಲು ವಚನಭ್ರಷ್ಟತೆಯನ್ನೇ ರೂಢಿಸಿಕೊಂಡಿರುವ ಮಹಾನಾಯಕರಿಂದ ಸಾಧ್ಯವೇ ಇಲ್ಲ. ಆದರೂ ರಾಮರಾಜ್ಯ ಸ್ಥಾಪಿಸುತ್ತೇವೆಂದು ಹೇಳುವ ಸಂಘ ಪರಿವಾರ ಜನರಲ್ಲಿ ಭ್ರಮೆಯನ್ನು ಬಿತ್ತುತ್ತಲೇ ಇದೆ. ಹಾಗೂ ರಾಮರಾಜ್ಯದ ಪರಿಕಲ್ಪನೆ ಹಿಂದುತ್ವವಾದಿ ಸಂಘದ ಕನಸೂ ಆಗಿದೆ.

ಅದು ಹೇಗೆಂದರೆ. ರಾಮರಾಜ್ಯ ಎನ್ನುವುದು ಚಾತುರ್ವರ್ಣ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾಗಿತ್ತು. ಕ್ಷತ್ರೀಯರು ಆಳುತ್ತಿದ್ದರು, ಬ್ರಾಹ್ಮಣರು ಮಾರ್ಗದರ್ಶನ ಮಾಡುತ್ತಿದ್ದರು, ವೈಶ್ಯರು ವ್ಯಾಪಾರ ವ್ಯವಹಾರ ನೋಡಿಕೊಳ್ಳುತ್ತಿದ್ದರು, ಅಕ್ಷರ ವಂಚಿತ ಶೂದ್ರರು ಇವರಿಗೆಲ್ಲಾ ದುಡಿದು ಪರಿಶ್ರಮ ಪಡುತ್ತಿದ್ದರು. ಈ ನಾಲ್ಕೂ ವರ್ಣಗಳನ್ನು ಹೊರತುಪಡಿಸಿ ಇದ್ದ ಬಹುಸಂಖ್ಯಾತ ದಲಿತರು ಸಮಾಜದಿಂದಲೇ ಬಹಿಷ್ಕೃತರಾಗಿ ಅಸ್ಪೃಶ್ಯರಾಗಿ ಪ್ರಾಣಿಗಳಿಗಿಂತಲೂ ಕೀಳಾಗಿ ಬದುಕುತ್ತಿದ್ದರು. ಇದೇ ವರ್ಣಾಶ್ರಮ ಸಿದ್ದಾಂತದ ಮೂಲ ವ್ಯವಸ್ಥೆ. ಈ ವ್ಯವಸ್ಥೆಯನ್ನು ವಿರೋಧಿಸಿ ಶೂದ್ರ ಶಂಭೂಕನಂತವರು ತಪಸ್ಸು ಮಾಡಿದರೆ ಅವರ ಶಿರಸ್ಸನ್ನೇ ಸಂಹಾರ ಮಾಡಲು ಬ್ರಾಹ್ಮಣರು ರಾಮನನ್ನು ಬಳಸಿಕೊಂಡರು. ಶೂದ್ರ ಸಮೂಹಕ್ಕೆ ಅಕ್ಷರ ವಿದ್ಯೆ ನಿಷಿದ್ಧವಾಗಿತ್ತು. ಊರುಗಳಲ್ಲಿ ದಲಿತರ ಪ್ರವೇಶ ನಿಸೇಧಿಸಲಾಗಿತ್ತು. ಆದಿವಾಸಿ ಕಾಡು ಜನಾಂಗವನ್ನು ರಾಕ್ಷಸರು ಎಂದು ಹೇಳಿ ಹತ್ಯೆ ಮಾಡಲಾಗುತ್ತಿತ್ತು. ಮಹಿಳೆಯರನ್ನೂ ವಿದ್ಯೆ ಹಾಗೂ ಸಂಪತ್ತಿನಿಂದ ವಂಚಿತರನ್ನಾಗಿಸಿ ನಿಕೃಷ್ಟವಾಗಿ ಪರಿಗಣಿಸಲಾಗುತ್ತಿತ್ತು. ಇದು ರಾಮರಾಜ್ಯದಲ್ಲಿದ್ದ ವರ್ಣಾಶ್ರಮ ಪದ್ದತಿಯ ಆಚರಣೆ. ಇದಕ್ಕೆ ರಾಜನೂ ಬದ್ದನಾಗಿರಬೇಕಿತ್ತು. ಇಂತಹ ವ್ಯವಸ್ಥೆಯನ್ನು ರಕ್ಷಿಸುವುದೇ ರಾಜನಾದವನ ಕರ್ತವ್ಯವಾಗಿತ್ತು. 

ಈಗ ಇಂತಹ ರಾಮರಾಜ್ಯದ ಸ್ಥಾಪನೆ ಸಂಘ ಪರಿವಾರದ ಪ್ರಮುಖರ ಅಂತಿಮ ಗುರಿಯಾಗಿದೆ. ಇಂತಹ ಅಸಮಾನ ವ್ಯವಸ್ಥೆಯನ್ನು ಒಪ್ಪಿಕೊಳ್ಳ ಬಯಸುವವರು, ವೈದಿಕಶಾಹಿ ಶೋಷಣೆಯನ್ನು ಅಪ್ಪಿಕೊಳ್ಳಲು ಇಚ್ಚಿಸುವವರು ರಾಮರಾಜ್ಯದ ಕನಸನ್ನು ಕಾಣಬಹುದಾಗಿದೆ. 

ಇನ್ನು ರಾಮನನ್ನು ಆದರ್ಶ ಪುರುಷ ಎಂದು ಜನರಲ್ಲಿ ಬಿತ್ತಲು ಶತಮಾನಗಳಿಂದ ಪ್ರಯತ್ನಗಳು ನಡೆಯುತ್ತಲೇ ಇವೆ. ಅದಕ್ಕೆ ರಾಮನ ಆದರ್ಶಗಳನ್ನು ವೈಭವೀಕರಿಸಲಾಗುತ್ತಿದೆ. ಮಂದಿರಗಳನ್ನು ನಿರ್ಮಿಸುವ ಮೂಲಕ ರಾಮದೇವರ ಕುರಿತು ಶ್ರದ್ಧೆ, ಭಕ್ತಿ ಹಾಗೂ ನಂಬಿಕೆಯನ್ನು ಮಾರ್ಕೆಟಿಂಗ್ ಮಾಡಲಾಗುತ್ತಿದೆ. ಸಂಘದ ಉದ್ದೇಶ ಬಹಳ ಸ್ಪಷ್ಟವಾಗಿದೆ. ದೇವರು ಧರ್ಮದ ಭ್ರಮೆಯನ್ನು ಜನರಲ್ಲಿ ಬಿತ್ತುವ ಮೂಲಕ ಮನುಸ್ಮೃತಿ ಆಧಾರಿತ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದೇ ಅವರ ಉದ್ದೇಶವಾಗಿದೆ. ಅಂತಹ ವ್ಯವಸ್ಥೆಗೆ ರಾಮರಾಜ್ಯ ಅಂತಾ ಕರೆಯಲಾಗುತ್ತಿದೆ. 

ಹೋಗಲಿ, ರಾಮನ ಆದರ್ಶಗಳನ್ನು ಅಂಧಶ್ರದ್ದೆಯಿಂದ ನಂಬುವ ಬದಲು ವಿಮರ್ಶಾತ್ಮಕವಾಗಿ ನೋಡಬಹುದಾಗಿದೆ. ವಚನ ಪಾಲನೆ ಹೆಸರಲ್ಲಿ ವಯೋವೃದ್ದ ತಂದೆಯನ್ನು ಬಿಟ್ಟು ಹೋಗಿ ದಶರಥ ರಾಜನ ನೋವು ಸಾವಿಗೆ ಕಾರಣವಾಗಿದ್ದು ರಾಮನ ಆದರ್ಶ ಹೇಗೆ ಎಂದು ಪ್ರಶ್ನಿಸಬಹುದಾಗಿದೆ. ತಂದೆಯ ಭಾವ ಜೀವಕ್ಕಿಂತಲೂ ವಚನಪಾಲನೆ ಮುಖ್ಯವಾಗಿತ್ತಾ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ. 

ಏಕಪತ್ನೀವೃತಸ್ಥ ಎಂಬುದು ಶ್ರೀರಾಮನ ಆದರ್ಶ ಗುಣದಲ್ಲಿ ಪ್ರಧಾನವಾದದ್ದು. ಅಂದರೆ ಮಹಿಳೆಗೆ ಅತೀ ಹೆಚ್ಚು ಗೌರವವನ್ನು ರಾಮ ಕೊಡುತ್ತಿದ್ದ ಹಾಗೂ ಆಗಿನ ಕಾಲದಲ್ಲಿ ಸಹಜವಾಗಿದ್ದ ಬಹುಪತ್ನಿತ್ವ ವ್ಯವಸ್ಥೆಯನ್ನು ಮುರಿದು ಮರ್ಯಾದಾ ಪುರುಷೋತ್ತಮನಾದ ಎಂಬುದೆಲ್ಲಾ ಸರಿ. ಆದರೆ ಪ್ರಶ್ನೆ ಇರುವುದು ಬರೀ ಏಕಪತ್ನಿವೃತಸ್ಥನಾಗಿದ್ದರೆ ಮಾತ್ರ ಮರ್ಯಾದಾ ಪುರುಷೋತ್ತಮನಾಗಲು ಸಾಧ್ಯವಿಲ್ಲ. ತನ್ನನ್ನೇ ನಂಬಿಕೊಂಡು ಬಂದ ಪತ್ನಿಯನ್ನು ಕೊನೆಯವರೆಗೂ ರಕ್ಷಿಸುವುದೂ ಪತಿಯಾಗಿ ಮಾತ್ರವಲ್ಲ ರಾಜನಾಗಿಯೂ ಶ್ರೀರಾಮನ ಕರ್ತವ್ಯವಾಗಿರಬೇಕಿತ್ತಲ್ಲವೇ? ಆದರೆ ಆಗಿದ್ದೇನು? ಅಗಸನೊಬ್ಬನ ಮಾತಿನ  ಹಿನ್ನಲೆಯನ್ನು ಪರಿಶೀಲಿಸದೇ, ಯಾವುದೇ ವಿಚಾರಣೆಯೂ ಇಲ್ಲದೇ ಗರ್ಭಿಣಿಯಾದ ಹೆಂಡತಿಯನ್ನು ದಟ್ಟವಾದ ಅರಣ್ಯದಲ್ಲಿ ಒಂಟಿಯಾಗಿ ಬಿಟ್ಟಿದ್ದು ಮರ್ಯಾದಾ ಪುರುಷೋತ್ತಮನಿಗೆ ಶೋಭೆ ತರುವಂತಹುದಲ್ಲವಲ್ಲವೇ. ಪ್ರಜೆಗಳ ಮಾತಿಗೆ ಅಷ್ಟು ಗೌರವವನ್ನು ರಾಮ ಕೊಡುತ್ತಿದ್ದ ಎಂದು ನಂಬಿಸಲಾಗಿದೆ. ಆದರೆ ಸೀತೆಯೂ ರಾಮರಾಜ್ಯದ ಪ್ರಜೆಯಲ್ಲವೇ. ಒಬ್ಬ ಪ್ರಜೆಗಾಗಿ ಇನ್ನೊಬ್ಬ ಪ್ರಜೆಯನ್ನು ವಿನಾಕಾರಣ ಘೋಷ ಘೋರ ಶಿಕ್ಷೆಗೆ ಅಳವಡಿಸಿದ್ದು ಅಮಾನವೀಯತೆ ಅಲ್ಲವೇ? ಪ್ರೀತಿಯನ್ನು ಬಯಸಿ ಬಂದ ಆದಿವಾಸಿ ಮಹಿಳೆಯ ಮೊಲೆ ಮೂಗು ಕತ್ತರಿಸಿ ಅವಮಾನಿಸಿದ್ದಕ್ಕೆ ಸಾಕ್ಷಿಯಾದ ರಾಮ ಅದು ಹೇಗೆ ಮಹಿಳಾಪರ ಆಗಿರಲು ಸಾಧ್ಯ? 

ಇನ್ನು ಸಹೋದರನ ಪತ್ನಿಯನ್ನು ಅಕ್ರಮವಾಗಿ ಇಟ್ಟುಕೊಂಡಿದ್ದ ಅರಣ್ಯವಾದಿ ಸುಗ್ರೀವನಿಗೆ ಬುದ್ದಿ ಹೇಳುವ ಬದಲಾಗಿ ಆತನ ಅಣ್ಣ ವಾಲಿಯನ್ನು ಮೋಸದಿಂದ ಕೊಂದಿದ್ದು ಯಾವ ಆದರ್ಶ? ವಾನರನನ್ನು ಹೇಗಾದರೂ ಕೊಲ್ಲಬಹುದು ಎನ್ನುವುದು ಶಾಸ್ತ್ರಸಮ್ಮತವಂತೆ. ಆದರೆ ವಾನರರೋ ಆದಿವಾಸಿಗಳೋ ಎಲ್ಲರನ್ನೂ ಸಲುಹುವುದು ದೇವರ ಅವತಾರದ ಕಾಯಕವಲ್ಲವೇ? 

ಹೌದು, ರಾಮ ಧರ್ಮ ರಕ್ಷಣೆಗಾಗಿಯೇ ಅವತರಿಸಿದ್ದು. ಆದರೆ ಯಾವ ಧರ್ಮ? ಯಾರ ಧರ್ಮ ರಕ್ಷಣೆ ಎನ್ನುವುದೇ ಪ್ರಶ್ನೆ. ಅರಣ್ಯದಲಿ ಆತಂಕ ಸೃಷ್ಟಿಸಿದ್ದ ಋಷಿಮುನಿಗಳ ಯಜ್ಞಯಾಗಾದಿಗಳಿಗೆ ಭಂಗ ತಂದ ಅರಣ್ಯವಾಸಿಗಳನ್ನು ರಾಕ್ಷಸರೆಂದು ಆಪಾದಿಸಿ ಹತ್ಯೆ ಮಾಡಿದ್ದು ಬ್ರಾಹ್ಮಣ ಕುಲಸಂಜಾತ ಮುನಿಗಳಿಗಾಗಿ. ತಪೋನಿರತ ಶೂದ್ರ ಶಂಭೂಕನನ್ನು ಸಂವರಿಸಿದ್ದು ಅಸಹಿಷ್ಣುತತೆಯ ವೈದಿಕರಿಗಾಗಿ. ನಂಬಿ ಬಂದ ಪತ್ನಿಯನ್ನು ಅಗ್ನಿಪರೀಕ್ಷೆಗೆ ಒಳಪಡಿಸಿದರೂ ಸಮಾಧಾನವಾಗದೇ ಕುಂಟು ನೆಪ ಹೇಳಿ ಕಾಡಿಗೆ ಕಳುಹಿಸಿದ್ದು ಪುರುಷ ಪ್ರಧಾನ ವ್ಯವಸ್ಥೆಯ ರಕ್ಷಣೆಗಾಗಿ. ಕೊನೆಗೆ ಘನಘೋರ ಯುದ್ದಮಾಡಿದ್ದು ಕ್ಷತ್ರೀಯ ಧರ್ಮ ರಕ್ಷಣೆಗಾಗಿ. ಅಂದರೆ ಪುರೋಹಿತಶಾಹಿ ವೈದಿಕ ಧರ್ಮವನ್ನು ಹಾಗೂ ತನ್ನ ಕ್ಷತ್ರೀಯ ಧರ್ಮವನ್ನು ಪಾಲಿಸಿ, ಪಿತೃಪ್ರಧಾನ ವ್ಯವಸ್ಥೆಯನ್ನು ಪಾಲಿಸಿದ ರಾಮನ ರಾಜ್ಯದಲ್ಲಿ ಶೂದ್ರರು ಶೂದ್ರರಾಗಿಯೇ ಇರಬೇಕಿತ್ತು, ಮಹಿಳೆಯರು ಪುರುಷರ ಆಜ್ಞಾವರ್ತಿಯಾಗಿರಬೇಕಿತ್ತು, ದಲಿತರ ಅಸ್ತಿತ್ವವಂತೂ ನಗಣ್ಯವಾಗಿತ್ತು. ಒಟ್ಟಾರೆಯಾಗಿ ವೈದಿಕಶಾಹಿಯ ಅನತಿಯಂತೆ ವರ್ಣಾಶ್ರಮ ಧರ್ಮವನ್ನು ರಕ್ಷಿಸುವುದಕ್ಕೆ ಕ್ಷತ್ರೀಯ ರಾಮನ ಅವತಾರ ಸೃಷ್ಟಿಸಲಾಯಿತು ಎಂಬುದು ನಿರ್ವಿವಾದ. ಈಗ ಹಿಂದೂ ಧರ್ಮದ ಸ್ಥಾಪನೆಯಾಗಬೇಕು ಎನ್ನುವ ಹಿಂದುತ್ವವಾದಿಗಳ ಉದ್ದೇಶವೂ ವೈದಿಕಶಾಹಿ ಮನುಧರ್ಮದ ರಕ್ಷಣೆಯೇ ಆಗಿದೆ. ಅದಕ್ಕಾಗಿ ರಾಮನಂತಹ ಸನಾತನ ಧರ್ಮರಕ್ಷಕ ಹಾಗೂ ರಾಮರಾಜ್ಯದಂತಹ ಸರ್ವಾಧಿಕಾರಿ ವ್ಯವಸ್ಥೆ ಬೇಕಾಗಿದೆ. ಅದಕ್ಕಾಗಿ ಈಗ ರಾಮನಿಲ್ಲದಿದ್ದರೂ ರಾಮನ ನಾಮಬಲದಿಂದ ಹಿಂದುತ್ವ ರಾಷ್ಟ್ರ ಸ್ಥಾಪನೆಗೆ ಪ್ರಯತ್ನ ಮಾಡಲಾಗುತ್ತಿದೆ. ರಾಮನ ಬದಲಾಗಿ ಮೋದಿಯಂತಹ ವರ್ಣಾಶ್ರಮ ಧರ್ಮರಕ್ಷಕನನ್ನು ಅವತಾರಪುರುಷನನ್ನಾಗಿ ಚಿತ್ರಿಸಲಾಗುತ್ತಿದೆ.

ದುಷ್ಟರ ಸಂಹಾರ ರಾಮಾವತಾರದ ಉದ್ದೇಶವಾಗಿದೆ ಎಂಬುದು ರಾಮಾಯಣದ ಸಮರ್ಥನೆ. ಆದರೆ ರಾಮರಾವಣರ ಕದನದಲ್ಲಿ ನೊಂದವರು ಹಾಗೂ ಸತ್ತವರ ಜೀವಕ್ಕೆ ಬೆಲೆ ಇಲ್ಲವೇ. ಧರ್ಮಸಂಸ್ಥಾಪನೆಗೆ ಹಿಂಸೆಯೂ ಆದರ್ಶ ಅನ್ನುವುದೇ ಆದಲ್ಲಿ ದಯೆ ಇಲ್ಲದ ಧರ್ಮ ಯಾವುದಿದ್ದರೇನು? ಯುದ್ದವೆಂದರೆ ಮತ್ತದೇ ಹಿಂಸೆ ಪ್ರತಿಹಿಂಸೆ, ತಂತ್ರ ಪ್ರತಿತಂತ್ರ, ಮೋಸ ವಂಚನೆ ಶಡ್ಯಂತ್ರಗಳು ತಾನೆ. ಇವೆಲ್ಲವನ್ನೂ ಮೀರಿ ಅಹಿಂಸೆ ಮೂಲಕ ಶಾಂತಿ ಸ್ಥಾಪನೆ ಮಾಡಿದ್ದೇ ಆಗಿದ್ದರೆ ರಾಮ ನಿಜಕ್ಕೂ ಆದರ್ಶವಾದಿಯಾಗುತ್ತಿದ್ದ. ಅಹಿಂಸೆ ಮೂಲಕ ದುಷ್ಟರ ಮನಪರಿವರ್ತನೆ ಹಾಗೂ ಸಮಾಜ ಪರಿವರ್ತನೆ ಮಾಡುವ ಮಹತ್ಕಾರ್ಯವನ್ನು ಮಾಡಿದ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ರಂತವರು ನಿಜವಾದ ಆದರ್ಶ ವ್ಯಕ್ತಿಗಳಾಗಬೇಕಿದೆ. ನಿಜವಾಗಿ ಬೇಕಿರುವುದು ಹಿಂಸಾತ್ಮಕ ದುಷ್ಟಸಂವಾರವಲ್ಲಾ, ದುಷ್ಟರು ಎನ್ನುವವರ ಪರಿವರ್ತನೆ. ಯಾಕೆಂದರೆ ಪ್ರತಿಯೊಬ್ಬರಲ್ಲೂ ಒಳಿತು ಹಾಗೂ ಕೆಡುಕಿನ ಗುಣಗಳು ಇದ್ದೇ ಇರುತ್ತವೆ. ಕೆಡುಕುತನಕ್ಕೆ ಕೊಲೆಯೇ ಅಂತಿಮವಲ್ಲ.

ಆದರೆ ಹಿಂದುತ್ವವಾದಿಗಳಿಗೆ ಬೇಕಿರುವುದು ಧರ್ಮಸಂಸ್ಥಾಪನೆ. ಅದೂ ಹಿಂದುತ್ವದ ರಕ್ಷಣೆ. ಅಂದರೆ ವರ್ಣಾಶ್ರಮ ಧರ್ಮದ ಸಂರಕ್ಷಣೆ ಮತ್ತು ಪುನರ್ ಪ್ರತಿಷ್ಠಾಪನೆ. ಅದಕ್ಕಾಗಿಯೇ ಅವರಿಗೆ ರಾಮ ಬೇಕು, ರಾಮರಾಜ್ಯ ಬರಬೇಕು. ಚಾತುರ್ವರ್ಣ್ಯದ ಧರ್ಮ ರಕ್ಷಣೆಗಾಗಿ ಅದೆಷ್ಟೇ ಸೌಹಾರ್ಧತೆ ಕದಡಲಿ, ಮನಸುಗಳು ಒಡೆಯಲಿ, ಹೆಣಗಳು ಉರುಳಲಿ, ರಕ್ತಪಾತವಾಗಲಿ ಅದೆಲ್ಲವೂ ಸಮರ್ಥನೀಯವೇ ಧರ್ಮದ ಗುತ್ತಿಗೆದಾರರಿಗೆ. ಈಗ ಬೇಕಿರುವುದು ಪುರೋಹಿತಶಾಹಿ ಪ್ರಣೀತ ರಾಮರಾಜ್ಯವಲ್ಲಾ, ಅಂಬೇಡ್ಕರ್ ಸಂವಿಧಾನ ಪ್ರೇರಿತ ಪ್ರಜಾರಾಜ್ಯ. ಧರ್ಮದ ಹೆಸರಲ್ಲಿ ಹಿಂಸೆಯನ್ನು ಪ್ರಚೋದಿಸುವ ಬಿಜೆಪಿಯ ರಾಮನಿಗಿಂತಲೂ ಅಹಿಂಸೆ ಸಮಾನತೆ ಸಾಮರಸ್ಯ ಸಾರುವ ಬುದ್ದ ಬಸವ ಅಂಬೇಡ್ಕರ್ ಈಗ ಹೆಚ್ಚು ಪ್ರಸ್ತುತ. ಈಗ ಆಯ್ಕೆ ಈ ದೇಶದ ಜನರ ಮುಂದಿದೆ. ಭಾವಪ್ರಚೋದನೆಗೆ ಒಳಗಾಗಿ ಹಿಂದುತ್ವವಾದಿಗಳ ಹಿಂದೆ ಹೋಗಿ ಸಂವಿಧಾನ ಕೊಟ್ಟ ಸಮಾನತೆಯ ಅವಕಾಶಗಳನ್ನು ಬಿಟ್ಟುಕೊಡುವುದೋ ಇಲ್ಲಾ ಪ್ರಜಾಪ್ರಭುತ್ವವನ್ನು ಉಳಿಸಲು ಹಾಗೂ ಸಂವಿಧಾನವನ್ನು ರಕ್ಷಿಸಲು ಮತಾಂಧ ಶಕ್ತಿಗಳ ಶಡ್ಯಂತ್ರವನ್ನು ವಿಫಲಗೊಳಿಸುವುದೋ ಎಂಬುದನ್ನು ಈ ದೇಶದ ಜನತೆ ತೀರ್ಮಾನಿಸಬೇಕಿದೆ. ಸರ್ವಾಧಿಕಾರದ ರಾಮರಾಜ್ಯವೋ ಇಲ್ಲಾ ಸಮಾನತೆಯ ಪ್ರಜಾರಾಜ್ಯವೋ ಎನ್ನುವ ಆಯ್ಕೆಯ ಮೇಲೆ ಈ ದೇಶದ ಮುಂದಿನ ಭವಿಷ್ಯ ನಿರ್ಧಾರವಾಗುತ್ತದೆ. ಸಮಾನತೆ ಸೌಹಾರ್ಧತೆ ಸಾಮರಸ್ಯ ಹಾಗೂ ಸ್ವಾತಂತ್ರ್ಯಗಳಿಗಾಗಿ ಪ್ರಜಾತಂತ್ರವನ್ನು ಉಳಿಸಿಕೊಳ್ಳಲೇ ಬೇಕಿದೆ. ಜನರು ಭಾವನಾತ್ಮಕ ಭ್ರಮೆಯನ್ನು ಬದಿಗಿರಿಸಿ ವಾಸ್ತವವನ್ನು ಅರಿತುಕೊಳ್ಳಬೇಕಿದೆ. ನಿಜವಾದ ಅರ್ಥದಲ್ಲಿ ಪ್ರಜಾರಾಜ್ಯ ಸ್ಥಾಪನೆಯಾಗಬೇಕಿದೆ.

- ಶಶಿಕಾಂತ ಯಡಹಳ್ಳಿ

   25-01-2024