ಭಾನುವಾರ, ಜನವರಿ 26, 2014

ದಲ್ಲಾಳಿ ದೇವರು : (ಕವಿತೆ)























ಕಾಡದೇವರು  ನಾಡದೇವರು
ಬಿಡಾಡಿ ದೇವರು ಪಿಕನಾಸಿ ದೇವರು
ಎಲ್ಲಾ ಸುಸ್ತಾಗಿ ಚಿತ್ತಾಗಿ ಮಲಗಿವೆ.

ಸಿಕ್ಕಸಿಕ್ಕಲ್ಲಿ ಧನಮಧದ ಸೊಕ್ಕಲ್ಲಿ
ಕುಣಿದು ಕುಪ್ಪಳಿಸುತಿದೆ ಮಾರುಕಟ್ಟೆ ದೇವರು
ಹನ್ನೆರಡನೇ ಅವತಾರವಿದು ಶರಣು ಹೇಳು ಗುರು..

ಎಲ್ಲಾ ದೇವರಿಗೆ ಕೈಕಾಲು ಮುಖ ಮೂತಿಗಳಿದ್ದರೆ
ಮಾರುಕಟ್ಟೆ ದೇವರಿಗಿರುವುದೊಂದೆ ಬಾಯಿ
ಸಿಕ್ಕಿದ್ದನ್ನೆಲ್ಲಾ ನುಂಗುವ ದೈತ್ಯ ನಾಯಿ....

ಅನುರೇಣು ತೃಣಕಾಷ್ಟದಲ್ಲಿ ದೇವರಿರುವುನೆಂಬುದು ಸುಳ್ಳು
ಹಿರಿದಾದ ಮಾಲ್ ಗಳಲಿ,.. ಕ್ರೆಡಿಟ್ ಕಾರ್ಡುಗಳಲಿ...
ಟಿವಿ ಜಾಹಿರಾತುಗಳಲಿಹನು ನಮ್ಮ ದಲ್ಲಾಳಿ ದೇವರು...

ಕಾಯಿಕರ್ಪೂರ ಕುಂಕುಮಕ್ಕೆ ವರಕೊಡುವುದಿಲ್ಲ
ನಮ್ಮ ದೇವರು.... ನೋಟು ಡಾಲರ್ಗಳ ವಹಿವಾಟಿನವನು
ಸಾಲ ರಿಯಾಯಿತಿಯೊಂದಿಗೆ ಕೇಳಿದ್ದೆಲ್ಲಾ ಕೊಡುವವನು.

ಎಲ್ಲ ದೇವರ ಹಾಗೆ ಒಂದು ಜಾತಿ ಧರ್ಮಕ್ಕೆ ಸೇರಿದವನಲ್ಲ
ನಮ್ಮ ದೇವರು... ಜಗದ ತುಂಬ ಜಾಲ ಬೀಸಿದ ಬೇಟೆಗಾರ
ಸುಲಿಗೆಯಲ್ಲೂ ಸಮಾನತೆ ಸಾಧಿಸಿದ ಬಂಡವಾಳಗಾರ.

ಇತರೆಲ್ಲಾ ದೇವರಿಗೂ ನಮ್ಮ ಮಾರುಕಟ್ಟೆ ದೇವರಿಗೂ ಒಂದೇ ಸಾಮ್ಯತೆ
ಇಬ್ಬರೂ ಕಣ್ಣಿಗೆ ಕಾಣಿಸುವುದಿಲ್ಲ, ಸುಲಿಗೆಗೆ ರಿಯಾಯಿತಿಇಲ್ಲ.
ಈ ದೇವರುಗಳಾಟ ಬಲ್ಲವರಾರು? ಅದರೆದುರು ನಿಂತು ಗೆಲ್ಲುವವರಾರು?

ಮಾರುಕಟ್ಟೆ ದೇವರು ಮುನಿದರೆ ಶೇರುಗಳು ಧರೆಶಾಹಿ,
ಸರಕಾರಗಳು ದಿವಾಳಿ, ಸಿರಿವಂತರೂ ಬಿಕಾರಿ,
ಒಲಿದರೆ ಭೋಗಜೀವನ, ಬದುಕೆಲ್ಲಾ ಬಳಕೆಬಾಕುತನ.

ನಮ್ಮ ಜಾಗತಿಕ ದಲ್ಲಾಳಿ ದೇವರಿಗೆ ಜಗದಗಲ ಗಿರಾಕಿಗಳು
ದೇಶ ವಿದೇಶದಲೆಲ್ಲಾ ಸಾಲುಗಟ್ಟಿದ್ದಾರೆ ಬಕರಾಗಳು
ಶರಣು ಹೇಳಿ ಹೊಸ ಅವತಾರಕ್ಕೆ, ಉಧೋ ಉಧೋ ಆತನ ವಿಶ್ವರೂಪಕ್ಕೆ......

                                                -ಶಶಿಕಾಂತ ಯಡಹಳ್ಳಿ

 




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ