ಮಂಗಳವಾರ, ಫೆಬ್ರವರಿ 20, 2024

ಕರುಣೆ ಇಲ್ಲದ ಕಾಲವೇ! ; ಕೆಂಗನಾಳ ಸಾವು ನ್ಯಾಯವೇ?

ತಹ ತಹ - 515

ಕರುಣೆ ಇಲ್ಲದ ಕಾಲವೇ! ; ಕೆಂಗನಾಳ ಸಾವು ನ್ಯಾಯವೇ?


"ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ" ಎನ್ನುವ ಕುವೆಂಪುರವರ ಸಾರ್ವಕಾಲಿಕ ಸಂದೇಶವನ್ನು ಆತ್ಮೀಯ ರಂಗಮಿತ್ರ ರಾತ್ರಿ 11 ಗಂಟೆಗೆ ವಾಟ್ಸಾಪಲ್ಲಿ  ಕಳುಹಿಸಿದ್ದ. ರಾತ್ರಿ ಕಳೆದು ಇನ್ನೂ ಬೆಳಿಗ್ಗೆ ಆಗಿತ್ತಷ್ಟೇ ಈ ಜನ್ಮಕ್ಕಾಗುವಷ್ಟು ಕ್ರಿಯಾಶೀಲ ಕೆಲಸ ಮಾಡಿ ಯಾವ ಟೀಕೆಗೂ ಒಳಗಾಗದೇ ಬದುಕಿದ ಗೆಳೆಯ ಜಗದೀಶ್ ಕೆಂಗನಾಳ ಫೆ.18 ರಂದು ಜಗಕ್ಕೇ ವಿದಾಯ ಹೇಳಿ ಮರಳಿ ಬಾರದೂರಿಗೆ ಹೊರಟೇ ಹೋದ. 

"ಏಳೋ ಜಗದೀಶಾ ಎದ್ದೇಳೋ. ಇನ್ನೂ ನೀನು ಮಾಡಬೇಕಾದ ರಂಗಕಾರ್ಯ ಬೇಕಾದಷ್ಟಿದೆ, ಎದ್ದೇಳೋ" ಎಂದು ಶವಾಗಾರದ ಕಟ್ಟೆಯ ಮೇಲೆ  ಅಂಗಾತ ಮಲಗಿದ್ದ ಆತನ ನಿಶ್ಚಲ ದೇಹವನ್ನು ಹಿಡಿದು ಅಲ್ಲಾಡಿಸಿ ಗೋಳಾಡಿದೆ. ಮನದಲ್ಲಿ ಗೆಳೆಯನ ಅಗಲಿಕೆಯ ಸಂಕಟ. ಆತ ಏಳುವ ಸ್ಥಿತಿಯಲ್ಲಿರಲಿಲ್ಲ ಎಂಬುದೂ ದಿಟ. ಅದು ಗೊತ್ತಿದ್ದೂ ಎದ್ದರೂ ಏಳಬಹುದೇನೋ ಎನ್ನುವ ಭ್ರಮೆ. ನಂಬುವುದೋ ಬಿಡುವುದೋ ಗೊತ್ತಿಲ್ಲ. ನನ್ನ ಕಣ್ಣಲ್ಲಿ ನೀರು ತೊಟ್ಟಿಕ್ಕಿದೇನೋ ಸಹಜ. ಆತನ ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ, ಜಡವಾಗಿ ಮಲಗಿದವನ ಕಣ್ಣಲ್ಲೂ ನೀರಿನ ಪಸೆ. ಹೃದಯದ ಬಡಿತ ನಿಂತರೇನಾಯ್ತು ಮೆದುಳು ಇನ್ನೂ ಜೀವಂತವಾಗಿರುತ್ತದಂತೆ. ನನ್ನ ಆಕ್ರಂದನ ಅವನ ಮೆದುಳಿಗೆ ಮುಟ್ಟಿರಬಹುದಾ? ಉತ್ತರಿಸಲು ಆತ ಪ್ರಯತ್ನಿಸಿರಬಹುದಾ? ಮಾತಾಡಲಾಗದ ತನ್ನ ಅಸಹಾಯಕತೆಯನ್ನು ಕಣ್ಣೀರ ಮೂಲಕ ವ್ಯಕ್ತಪಡಿಸುತ್ತಿರಬಹುದಾ?  ಎಲ್ಲವೂ ನನ್ನ ಮನದ ಮುಂದನ ಮಾಯೆ. ಕಾಲನಿಗಿಲ್ಲ ಯಾವುದೇ ದಾಕ್ಷಿಣ್ಯ ದಯೆ. ಜಗದೀಶ್ ಕೆಂಗನಾಳ ಎನ್ನುವ ಸ್ಪೂರ್ತಿಯ ಚಿಲುಮೆ ಇನ್ನಿಲ್ಲ. ನೆನಪುಗಳಿಗೆ ಕೊನೆಮೊದಲಿಲ್ಲ.

 
ಆತನ ನನ್ನ ಸ್ನೇಹ ಇಂದು ನಿನ್ನೆಯದ್ದಲ್ಲ. ಮೂವತ್ತು ವರ್ಷದಷ್ಟು ಪುರಾತನ. ಇಬ್ಬರೂ ಅವಿಭಿಜಿತ ಬಿಜಾಪುರ ಜಿಲ್ಲೆಯವರು. ಇಡೀ ಜಿಲ್ಲೆ ವಿಭಜನೆಯಾದಾಗ ಆತನದ್ದು ವಿಜಾಪುರ ಆದರೆ ನನ್ನದು ಬಾಗಲಕೋಟ. ಇಬ್ಬರೂ ಮೊದಲ ಸಲ ಬೇಟಿಯಾಗಿದ್ದು ಮಾತ್ರ ಬೆಂಗಳೂರಲ್ಲಿ. ಬೇಟಿ ಮಾಡಿಸಿದ್ದು ಇಬ್ಬರ ಸಮಾನಾಸಕ್ತಿಯ ಕ್ಷೇತ್ರ ರಂಗಭೂಮಿ. ನಾವಿಬ್ಬರೂ ಬಂದು ಸೇರಿದ್ದು ಎ.ಎಸ್.ಮೂರ್ತಿಯವರ ಭಾನುವಾರದ ರಂಗಶಾಲೆ 'ಅಭಿನಯತರಂಗ'ಕ್ಕೆ. ಒಂದೇ ಜಿಲ್ಲೆಯವರಾಗಿದ್ದಕ್ಕೋ, ಭಾಷೆಯ ಸಾಮ್ಯಕ್ಕೋ, ರಂಗಾಸಕ್ತಿಗೋ, ಸಮಾನಾಸಕ್ತಿಗೋ ಗೊತ್ತಿಲ್ಲ ಬಹುಬೇಗ ಆತ್ಮೀಯ ಗೆಳೆಯರಾದೆವು. "ನಿಮ್ಮಿಬ್ಬರದ್ದು ಫೆವಿಕಾಲ್ ಜೋಡಿ ಕಣ್ರಯ್ಯಾ" ಎಂದು ಗುರುಗಳಾದ ಎ.ಎಸ್.ಮೂರ್ತಿಗಳು ಅನೇಕ ಸಲ ಚೇಡಿಸಿದ್ದರು.‌ ಮೂರ್ತಿಗಳ ಅಚ್ಚುಮೆಚ್ಚಿನ ಶಿಷ್ಯರಾಗಿದ್ದ ನಾವಿಬ್ಬರೂ ರಂಗಭೂಮಿಯನ್ನೇ ಬದುಕಿನ ಅವಿಭಾಜ್ಯ ಅಂಗವಾಗಿ ಮಾಡಿಕೊಂಡೆವು. ಅದೇನು ಕಾಲದ ಕರಾಮತ್ತೋ ಗೊತ್ತಿಲ್ಲ ಫೆವಿಕಾಲ್ ಜೋಡಿಯನ್ನು ಕಾಲ ಬೇರೆಮಾಡಿತು. ಈಗ ಜಗದೀಶ್ ಹೊಸಕೋಟೆಯ ಸರಕಾರಿ ಆಸ್ಪತ್ರೆಯ ಮಾರ್ಚರಿಯಲ್ಲಿ ತಣ್ಣಗೇ ಮಲಗಿದ್ದರೆ ನಾನು ಆತನ ಮುಂದೆ ಶೋಕಾಚರಣೆ ಮಾಡುತ್ತಾ ನಿಂತಿದ್ದೆ. 

ಗೆಳೆಯ ಅಗಲಿದರೇನಾಯ್ತು ಗೆಳೆತನಕ್ಕೆ ಕೊನೆಯಿಲ್ಲ. ಸಾವು ದೇಹಕ್ಕೆ ಬಂದರೇನಾಯ್ತು ನೆನಪುಗಳಿಗೆ ಸಾವಿಲ್ಲ. ಸೂತಕದ ಸಮಯದಲ್ಲೂ ಚಂಪಾರವರ  ಪದ್ಯ ನೆನಪಾಯಿತು. "ಸತ್ತವರು ಎಲ್ಲಿ ಹೋಗುತ್ತಾರೆ. ಎಲ್ಲಿಯೂ ಹೋಗುವುದಿಲ್ಲ ಜೊತೆ ಇದ್ದವರ ನೆನಪಿನಲ್ಲಿ ಜೀವಂತವಾಗಿರುತ್ತಾರೆ".  ಜಗದೀಶ್ ನ ಜೊತೆ ಕಳೆದ ಆ ದಿನಗಳ ನೆನಪು, ಜೊತೆಯಾಗಿ ಅಭಿನಯಿಸಿದ ನಾಟಕಗಳ ಹೊಳಪು, ನಿರಂತರ ಚರ್ಚೆ ಸಂವಾದ ಮಾತುಕತೆ ಎಲ್ಲವೂ ಮನದ ಪಟಲದಲಿ ಸರಣಿಯಾಗಿ ಮೂಡಿದವು. ಎಲ್ಲವನ್ನು ನೆನಪಿಸಿ ಹಂಚಿಕೊಳ್ಳಬಹುದಾಗಿದ್ದ ಗೆಳೆಯ ನನ್ನ ಕಣ್ಮುಂದೆ ತನ್ನ ಕಣ್ಮುಚ್ಚಿ ಮಲಗಿದ್ದ. ನಾನು ಅಸಹಾಯಕನಾಗಿ ನಿಂತಿದ್ದೆ. 

ನಾವಿಬ್ಬರೂ ಜೊತೆಯಾಗಿ ಮೊಟ್ಟ ಮೊದಲ ಬಾರಿಗೆ 'ಅಭಿನಯತರಂಗ'ದಲ್ಲಿ ಅಭಿನಯಿಸಿದ್ದು ಚಂದ್ರಕಾಂತ ಕೂಸನೂರರ 'ವಿದೂಷಕ' ಎನ್ನುವ ಅಸಂಗತ ನಾಟಕ. ಕೋಲಾರದ ವರದರಾಜರವರು ನಿರ್ದೇಶಿಸಿದ್ದರೆ ನಾನು ಮತ್ತು ರಾಜಶೇಖರ್ ನಿಲೋಗಲ್ಮಠ ಹಾಗೂ ಜಗದೀಶ ಕೆಂಗನಾಳ ಈ ಮೂವರು ಅಭಿನಯಿಸಿದ್ದೆವು. ಇರೋದು ಮೂರೇ ಪಾತ್ರ. ಈ ನಾಟಕ ಇರೋದೇ ಸಾವಿಗಾಗಿ ಕಾಯುವ ಮೂವರು ವ್ಯಕ್ತಿಗಳ ಕುರಿತು. "ಕ್ರೂರ ಬಂದನೇನು?" ಎಂದು ಪದೇ ಪದೇ ಈ ಮೂರೂ ಪಾತ್ರಗಳು ಕೇಳುತ್ತಲೇ ಸಾವಿನ ಬರುವಿಕೆಗಾಗಿ ಕೊನೆಯವರೆಗೂ ಕಾಯುತ್ತವೆ. ಆದರೆ ಆ ಕ್ರೂರ ಸಾವು ಬರುವುದೇ ಇಲ್ಲ. ಆದರೆ ನಾಟಕದಲ್ಲಿ ಕೂಗಿ ಕರೆದರೂ ಬಾರದ ಆ ಕ್ರೂರ ಸಾವು ನಿಜಜೀವನದಲ್ಲಿ ಆ ಮೂವರಲ್ಲಿ ಇಬ್ಬರನ್ನು ಹುಡುಕಿಕೊಂಡು ಬಂದಿದ್ದು ಎಂತಹ ವಿಪರ್ಯಾಸ. ರಾಜಶೇಖರ ಸತ್ತು ಏಳೆಂಟು ವರ್ಷಗಳೇ ಆದವು. ಈಗ ಕೆಂಗನಾಳ ಸರದಿ. ಆ ನಾಟಕದ ಮೂರೂ ಪಾತ್ರದಾರಿಗಳಲ್ಲಿ ಈಗ ಬಾಕಿ ಉಳಿದವನು  ನಾನೊಬ್ಬನೇ. ಕಾಯುತ್ತಿದ್ದೇನೆ ಬರಲಿ ಆ ಕ್ರೂರ "ಯಾಕಯ್ಯಾ ಕಾಲಪುರುಷಾ ಯಾಕೆ ಕಲಾವಿದರ ಮೇಲೆ ಅಕಾಲಿಕ ಆಕ್ರಮಣ ಮಾಡಿದೆ" ಎಂದು ಕೇಳಬೇಕಿದೆ. 'ಕಾಲನ ಜೊತೆ ಹೊರಟಿರುವ ನೀನಾದರೂ ಆ ನಿರ್ದಯಿ ಕ್ರೂರನನ್ನು ಹಿಡಿದು ಕೇಳು ಗೆಳೆಯಾ' ಎಂದು ಅಲ್ಲಾಡದೇ ಮಲಗಿದ ಜಗದೀಶನಿಗೆ ಮನದಲ್ಲೇ ಒತ್ತಾಯಿಸಿ ಕಣ್ಣೊರೆಸಿಕೊಳ್ಳುತ್ತಾ ಮಾರ್ಚರಿಯಿಂದ ಹೊರಗೆ ಬಂದೆ. ಮನಸು ಭಾರವಾಗಿತ್ತು. ಮಾತು ಮೌನವಾಗಿತ್ತು.‌

ವೃತ್ತಿಯಲ್ಲಿ ಶಾಲಾ ಶಿಕ್ಷಕನಾಗಿದ್ದ ಜಗದೀಶ್ ತನ್ನ ವೃತ್ತಿ ಬದುಕನ್ನೆಲ್ಲಾ ಕಳೆದದ್ದು ಹೊಸಕೋಟೆ ತಾಲ್ಲೂಕಿನ ಗ್ರಾಮಗಳಲ್ಲಿ. ಆತನ ವಿದ್ಯಾರ್ಥಿಗಳಿಗೆ ಪ್ರೀತಿಯ ಜೆಕೆ ಮಾಸ್ತರ್ ಆಗಿದ್ದರೆ ರಂಗಮಿತ್ರರ ಬಾಯಲ್ಲಿ ಜೆಕೆ ಎಂದೇ ಪ್ರಸಿದ್ದಯಾಗಿದ್ದ. ವೃತ್ತಿಗಿಂತಲೂ ಹೆಚ್ಚಾಗಿ ರಂಗಭೂಮಿಯನ್ನು ಪ್ರವೃತ್ತಿಯಾಗಿಸಿಕೊಂಡು ಗ್ರಾಮೀಣ ರಂಗಭೂಮಿಯ ಬೆಳವಣಿಗೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದ, ಉತ್ತಮ ಕಲಾವಿದ ಹಾಗೂ ಅದ್ಬುತ ರಂಗಸಂಘಟಕನಾಗಿದ್ದ ಕೆಂಗನಾಳನಿಗೆ ಏನಾದರೂ ಮಾಡಬೇಕು ಎನ್ನುವ ತುಡಿತ ಹೃದಯದ ಮಿಡಿತವಾಗಿತ್ತು. ನಾಟಕ ಪ್ರಯೋಗಕ್ಕೆ ಆಯಸ್ಸು ಕಡಿಮೆ, ಏನಾದರೂ ಶಾಶ್ವತವಾದ ಕೊಡುಗೆಯನ್ನು ರಂಗಭೂಮಿಗೆ ಕೊಡಬೇಕು. ಬೆಂಗಳೂರಿನವರಿಗೆ ಬೇಕಾದಷ್ಟು ಅವಕಾಶ ಹಾಗೂ ಅನುಕೂಲತೆಗಳಿವೆ ಆದರೆ ಗ್ರಾಮೀಣ ಭಾಗದಲ್ಲಿ ಅವುಗಳ ಕೊರತೆ ಇದೆ. ಹೊಸಕೋಟೆಯಲ್ಲಿ ರಂಗಭೂಮಿ ಕಟ್ಟಬೇಕು ಬೆಳೆಸಬೇಕು ಎನ್ನುವ ಛಲಕ್ಕೆ ಬಿದ್ದಿದ್ದ. ಹಾಗೂ ಅಂದುಕೊಂಡಂತೆ ಸಾಧಿಸಿಯೇ ಹೋದ.

ಹತ್ತು ವರ್ಷಗಳ ಹಿಂದೆ ನಾನು ದೊಮ್ಮಲೂರಿನಲ್ಲಿರುವ ನನ್ನ ಮನೆಯ ಮೇಲೆ ಸೃಷ್ಟಿ ಎನ್ನುವ ಹೆಸರಲ್ಲಿ ಆಪ್ತ ರಂಗಮಂದಿರವನ್ನು ಕಟ್ಟಿಸಿ ಅಭಿನಯ ತರಬೇತಿ ಹಾಗೂ ನಾಟಕ ನಿರ್ಮಾಣ ಕಾರ್ಯವನ್ನು ಮುಂದುವರೆಸಿದ್ದೆ. ಅದೊಂದು ದಿನ ಜನಪದರು ತಂಡದ 'ಉರುಳು' ನಾಟಕವನ್ನು ನಮ್ಮ ಆಪ್ತ ರಂಗಮಂದಿರದಲ್ಲಿ ಪ್ರದರ್ಶಿಸಲು ಬಂದ ಕೆಂಗನಾಳನಿಗೆ ರಂಗಮಂದಿರ ಹೆಚ್ಚು ಆಕರ್ಷಿಸಿತ್ತು. ಹೊಸಕೋಟೆಯಲ್ಲಿ ಇಂತಹುದೊಂದು ರಂಗಮಂದಿರ ಕಟ್ಟಬೇಕೆಂಬ ಆಸೆಯ ಬೀಜ ಆತನೆದೆಯಲ್ಲಿ ಮೊಳೆತು ಬೆಳೆಯುತ್ತಲೇ ಹೋಯ್ತು. ತನ್ನೆದೆಯ ಬೀಜವನ್ನು ರಂಗಪೋಷಕ ಪಾಪಣ್ಣ,  ಕಲಾವಿದ ಸಿದ್ದೇಶ, ರಂಗನಿರ್ದೇಶಕ ವರ್ತೂರು ಸುರೇಶ ಹಾಗೂ ಪ್ರಸಾದನ ತಜ್ಞ ರಾಮಕೃಷ್ಣ ಬೆಳ್ತೂರರ ತಲೆಯಲ್ಲಿ ಬಿತ್ತಿ ಸಮಯ ಸಿಕ್ಕಾಲೆಲ್ಲಾ ನೆನಪಿಸಿ ನೀರೇರೆದ. ಅವರೆಲ್ಲಾ ಸೇರಿ ಅವರಿವರ ಮನೆಯ ಛಾವಣಿಯ ಮೇಲೆ ಆಪ್ತ ರಂಗಮಂದಿರ ಕಟ್ಟಲು ಹುಡುಕಾಟ ಶುರುಮಾಡಿದರು. ಈ ಯೋಜನೆ ರೂಪಾಂತರಗೊಳ್ಳುತ್ತಾ ಬಂದು ನಿಂತಿದ್ದು ಹೊಸಕೋಟೆಯ ಹೆದ್ದಾರಿಯ ಪಕ್ಕದಲ್ಲಿರುವ ನಿಂಬೆಕಾಯಿಪುರದ ಶ್ರೀ ಆಂಜನೇಯ ದೇವಸ್ಥಾನಕ್ಕೆ. ಈ ಮಂದಿರದ ಪಕ್ಕದಲ್ಲಿ ಹಾಳುಬಿದ್ದ ಬೀಳು ನೆಲವೊಂದಿತ್ತು. ಅದರ ಉದರದಲ್ಲಿ ಬರೀ ಕಲ್ಲುಬಂಡೆಗಳೇ ತುಂಬಿದ್ದವು. ಅಲ್ಲಿ ಬಯಲು ರಂಗಮಂದಿರ ಕಟ್ಟುವುದೆಂದು ಪೈನಲ್ ಆಯ್ತು. ಆದರೆ ಕಲ್ಲು ಬಂಡೆ ಒಡೆದು ಭೂಮಿ ಸಮ ಮಾಡುವುದೇ ಸವಾಲಿನ ಕೆಲಸವಾಗಿತ್ತು. ಕೆಂಗನಾಳ ಸುಮ್ಮನಿರಲಿಲ್ಲ. ಎಲ್ಲರನ್ನೂ ಹುರಿದುಂಬಿಸುವುದು ಬಿಡಲಿಲ್ಲ. ಪಾಪಣ್ಣನವರು ಲೋಕಲ್ ಲೀಡರ್ ಆಗಿದ್ದರಿಂದ ಯಾರೋ ಜೆಸಿಬಿ ಉಚಿತವಾಗಿ ಕೊಟ್ಟರು. ಎರಡು ತಿಂಗಳ ಕಾಲ ನಿರಂತರವಾಗಿ ಜೆಸಿಬಿ ಬಂಡೆಗಳನ್ನು ತೆಗೆದು ಹಾಕಿತು. ಯಾರೋ ಕಲ್ಲು, ಇನ್ಯಾರೋ ಸಿಮೆಂಟು, ಮತ್ಯಾರೋ ಕಬ್ಬಿಣ ಹೀಗೆ ಬೇಕಾದ ವಸ್ತುಗಳನ್ನು ದಾನ ಕೊಟ್ಟರು. ಒಂದು ವರ್ಷದ ಪರಿಶ್ರಮದ ಫಲವಾಗಿ ದೊಡ್ಡದಾದ ರಂಗವೇದಿಕೆ ನಿರ್ಮಾಣವಾಯಿತು. ಪಾಪಣ್ಣನವರನ್ನು ಹೊರತು ಪಡಿಸಿ ಜೊತೆ ಇರುವವರೆಲ್ಲಾ ಆರ್ಥಿಕವಾಗಿ ಸ್ಥಿತಿವಂತರೇನಲ್ಲ. ಆದರೆ ಅವರೆಲ್ಲರ  ಮಹತ್ವಾಂಕಾಂಕ್ಷೆ ದೊಡ್ಡದಾಗಿತ್ತು. ಪಾಪಣ್ಣನವರ ಶ್ರಮ, ವರ್ತೂರು ಸುರೇಶರ ಯೋಜನೆ, ಸಿದ್ದೇಶರವರ ಹಠ ಹಾಗೂ ಜಗದೀಶನ ನಿರಂತರ ಒತ್ತಾಯ ಮತ್ತು ಪ್ರೋತ್ಸಾಹದಿಂದ ಜನಪದರು ಹೆಸರಲ್ಲಿ ಬಯಲು ರಂಗಮಂದಿರ ನಿರ್ಮಾಣವಾಯ್ತು. 


ಈಗ ಅಲ್ಲಿ ನಾಟಕ ಪ್ರದರ್ಶನ ಶುರುಮಾಡಬೇಕಿತ್ತು. ಕೊಡಗಾನಹಳ್ಳಿ ರಾಮಯ್ಯನವರು ಕೋಲಾರದ ಶಿವಗಂಗೆ ಬೆಟ್ಟದಲ್ಲಿ ಆರಂಭಿಸಿದ್ದ 'ಆದಿಮ' ದಲ್ಲಿ ಪ್ರತಿ ತಿಂಗಳೂ ಹುಣ್ಣಿಮೆಯ ದಿನ ಹುಣ್ಣಿಮೆಯ ಹಾಡು ಹೆಸರಲ್ಲಿ ನಾಟಕ ಪ್ರದರ್ಶನ ಮಾಡಿಸುತ್ತಿದ್ದರು. ಅದೇ ರೀತಿ ತಿಂಗಳಿಗೊಂದು ದಿನ ನಾವೂ ನಾಟಕ ಮಾಡಿಸೋಣ ಎಂದು ಜಗದೀಶ್ ಸಲಹೆ ಕೊಟ್ಟರು. ಅದರಂತೆ ಪ್ರತಿ ತಿಂಗಳೂ ಎರಡನೇ ಶನಿವಾರ ಯಾವುದಾದರೊಂದು ನಾಟಕ ಪ್ರದರ್ಶನ ಮಾಡುವುದೆಂದು ನಿರ್ಧರಿಸಲಾಯ್ತು. ಜನಪದರು ತಂಡದ ಕಲಾವಿದರು ಸೇರಿಕೊಂಡು 'ಬುಡ್ಗನಾದ' ಎನ್ನುವ ಅಲೆಮಾರಿಗಳ ಕುರಿತ ನಾಟಕವನ್ನು ನಿರ್ಮಿಸಿ ಈ ರಂಗವೇದಿಕೆಯಲ್ಲಿ ಪ್ರದರ್ಶಿಸಲು ಸಿದ್ದಗೊಳಿಸಿದರು. ರಂಗಮಂದಿರ ಸಿದ್ದವಿದೆ, ನಾಟಕವೂ ನಿರ್ಮಾಣಗೊಂಡಿದೆ ಆದರೆ ಪ್ರೇಕ್ಷಕರು? ಯಾಕೆಂದರೆ ನಾಟಕದ ಗಂಧ ಗಾಳಿ ಗೊತ್ತಿಲ್ಲದಂತಹ ಜನರಿಲ್ಲದ ಜಾಗ ಅದು. ಊಟದ ವ್ಯವಸ್ಥೆ ಮಾಡಿದರೆ ನಾಟಕ ನೋಡಲು ಪ್ರೇಕ್ಷಕರು ಬರುತ್ತಾರೆ ಎಂಬುದು ಜಗದೀಶ್ ನ ಐಡಿಯಾ? ಅದಕ್ಕೆ ಪೂರಕವಾಗಿ ಸಹಾಯಕ್ಕೆ ಬಂದಿದ್ದು ಆಂಜನೇಯ. ಪಕ್ಕದ ಆಂಜನೇಯ ದೇವಸ್ಥಾನಕ್ಕೆ ಬರುವ ಪ್ರತಿಯೊಬ್ಬ ಭಕ್ತಾದಿಗಳಿಗೆ ನಾಟಕ ಹಾಗೂ ಊಟದ ಬಗ್ಗೆ ಪ್ರಚಾರ ಮಾಡಲಾಯ್ತು. ಮೊದಲು ಊಟಕ್ಕಾಗಿ ನಾಟಕ ನೋಡಲು ಬರುತ್ತಿದ್ದವರು ಬರುಬರುತ್ತಾ ನಾಟಕಕ್ಕಾಗಿಯೇ ಪ್ರತಿ ತಿಂಗಳು ಎರಡನೇ ಶನಿವಾರ ತಪ್ಪದೇ ಬರತೊಡಗಿದರು. ಈ ರಂಗಮಿತ್ರರ ಶ್ರಮ ಸಾರ್ಥಕವಾಯ್ತು. ಎಲ್ಲರಲ್ಲೂ ರಂಗಮಂದಿರ ನಿರ್ಮಾಣದ ಬೀಜ ಬಿತ್ತಿ ಆಶಾವಾದದ ನೀರೆರೆದ ಕೆಂಗನಾಳನ ಹರ್ಷಕ್ಕೆ ಪಾರವೇ ಇರಲಿಲ್ಲ. 

ಇಲ್ಲಿಗೇ ಈ ರಂಗಗೆಳೆಯರ ಸಾಹಸ ನಿಲ್ಲಲಿಲ್ಲ. ಪೋಷಕರು, ದಾನಿಗಳು, ರಂಗಾಸಕ್ತರಿಂದ ದಾನ ಪಡೆದು ರಂಗಮಂದಿರದ ನಿರ್ಮಿತಿಯನ್ನು ಮುಂದುವರೆಸಿದರು. ಒಂದು ಸರಕಾರ ಮಾಡಬಹುದಾದ ಕೆಲಸವನ್ನು ಇವರೆಲ್ಲಾ ಸೇರಿ ಮಾಡಿ ಸಕಲ ಸವಲತ್ತುಗಳಿದ್ದ ಪರಿಪೂರ್ಣ ರಂಗಮಂದಿರವನ್ನು ಐದೂವರೆ ಕೋಟಿ ವೆಚ್ಚದಲ್ಲಿ ಕಟ್ಟಿಸಿಯೇ ಬಿಟ್ಟರು. ಸರಕಾರದ ಯೋಜನೆ ಆಗಿದ್ದರೆ ಕನಿಷ್ಟ 25 ಕೋಟಿಯಷ್ಟಾದರೂ ಖರ್ಚಾಗುತ್ತಿತ್ತು. ಆದರೆ ಅವರಿವರ ಆರ್ಥಿಕ ಸಹಾಯದಿಂದ ಸಂಪೂರ್ಣ ಹವಾನಿಯಂತ್ರಿತ ರಂಗಮಂದಿರ ಎದ್ದು ನಿಂತಿತು. 30-06-2021 ರಂದು ಸ್ವತಃ ಮುಖ್ಯ ಮಂತ್ರಿಗಳಾಗಿದ್ದ ಯಡಿಯೂರಪ್ಪನವರು ಈ ಅತ್ಯಾಧುನಿಕ ರಂಗಮಂದಿರವನ್ನು ಉದ್ಘಾಟಿಸಿದ್ದರು. 

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಹೊರತು ಪಡಿಸಿ ಇಂತಹ ಆಧುನಿಕ ರಂಗಮಂದಿರ ಇಡೀ ಕರ್ನಾಟಕದಲ್ಲಿ ಎಲ್ಲಿಯೂ ಇಲ್ಲ. ಐವತ್ತು ಲಕ್ಷ ಖರ್ಚು ಮಾಡಿ ಅತ್ಯಾಧುನಿಕವಾದ ಲೈಟ್ಸ್ ಕಂಟ್ರೋಲ್ ಮಾಡುವ ಅತ್ಯಾಧುನಿಕ ಪರಿಕರಗಳನ್ನು ವಿದೇಶದಿಂದ ತರಿಸಲಾಗಿದೆ. ಇವು ರಂವೀಂದ್ರ ಕಲಾಕ್ಷೇತ್ರದಲ್ಲೂ ಇಲ್ಲ. ರಂಗವೇದಿಕೆಯ ನಡುವೆ ಎರಡು ರೊಟೇಟಿಂಗ್ ರಿಂಗ್ ವ್ಯವಸ್ಥೆ ಇದೆ. ಪಿವಿರ್ ಚಿತ್ರಮಂದಿರವನ್ನು ನೆನಪಿಸುವ 550 ಸೀಟಿಂಗ್ ವ್ಯವಸ್ಥೆ ಇದೆ. ಅತ್ಯಂತ ವಿಶಿಷ್ಟವಾದ ವಿನ್ಯಾಸ ಹೊಂದಿರುವ ಜನಪದರು ರಂಗಮಂದಿರದ ವಿನ್ಯಾಸವನ್ನು ಯಾವ ಆರ್ಕಿಟೆಕ್ಚ ಮಾಡಿರಬಹುದು ಎಂದು ಕೇಳಿದರೆ ಸುರೇಶ್ ವರ್ತೂರ್ ಹೆಸರು ಕೇಳಿ ಬರುತ್ತದೆ. ಇವರು ರಂಗನಿರ್ದೇಶಕರೇ ಹೊರತು ಯಾವ ವಿನ್ಯಾಸಕಾರರೂ ಅಲ್ಲ. ತಮ್ಮ ರಂಗಾನುಭವದ ಮೂಲಕವೇ ಇಂತಹ ಗಮನಾರ್ಹ ವಿನ್ಯಾಸ ಮಾಡಿದ್ದು ಮಾದರಿಯದ್ದಾಗಿದೆ. ಈಗ ನಡೆಯುತ್ತಿರುವುದು 78 ನೇ ತಿಂಗಳ ಮಾಲಿಕೆ. ಕೋವಿಡ್ ಕಾಲವನ್ನು ಹೊರತು ಪಡಿಸಿ ನಿರಂತರವಾಗಿ ಪ್ರತಿ ತಿಂಗಳೂ ಇಲ್ಲಿ ನಾಟಕಗಳನ್ನು ಪ್ರದರ್ಶಿಸಲಾಗುತ್ತದೆ. ಈಗಲೂ ಪ್ರದರ್ಶನದ ನಂತರ ದಾನಿಗಳಿಂದ ಅನ್ನಸಂತರ್ಪನೆ ಇದ್ದೇ ಇರುತ್ತದೆ. ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಲೇ ಇರುತ್ತದೆ. ಗೌರವಧನವನ್ನೂ ಕೊಟ್ಟು ನಾಡಿನಾದ್ಯಂತ ನಿರ್ಮಿಸಲಾದ ನಾಟಕಗಳನ್ನು ಆಹ್ವಾನಿಸಿ ಪ್ರದರ್ಶಿಸಲು ಅವಕಾಶ ಮಾಡಿಕೊಡಲಾಗುತ್ತದೆ. ವಿಶೇಷವೆಂದರೆ ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾತ್ರ ಈ ಥೇಯಟರ್ ಮೀಸಲಾಗಿದೆ.

ಸೃಷ್ಟಿ ಆಪ್ತರಂಗದಲ್ಲಿ ಹುಟ್ಟಿದ ಮಹತ್ವಾಕಾಂಕ್ಷೆಯ ಬೀಜವೊಂದು ಹೀಗೆ ಗ್ರಾಮೀಣ ಪ್ರದೇಶದಲ್ಲಿ ಟೊಂಗೆ ಟಿಸುಳೊಡೆದು ಹೆಮ್ಮರವಾಗಿ ಅನೇಕ ರಂಗಪ್ರದರ್ಶನಗಳಿಗೆ ಆಶ್ರಯವಾಗಿದ್ದು ವಿಸ್ಮಯದ ಸಂಗತಿ. ಇಂತಹ ಅದ್ಬುತ ರಂಗಮಂದಿರದ ಕಲ್ಪನೆಗೆ ಮೂಲ ಕಾರಣೀಕರ್ತನಾದ ಕೆಂಗನಾಳರ ಪಾರ್ಥೀವ ಶರೀರವನ್ನು ಈ ರಂಗಮಂದಿರಕ್ಕೆ ತರಲೇ ಬೇಕು ಅಂತಾ ನಾನು ಹಠಕ್ಕೆ ಬಿದ್ದೆ. ಜನಪದರು ತಂಡದ ಎಲ್ಲರನ್ನೂ ಒತ್ತಾಯಿಸಿದೆ‌. ಈ ರಂಗಮಂದಿರದ ನಿರ್ಮಾಣಕ್ಕೆ ಮೂಲ ಪ್ರೇರಕನಾದವನಿಗೆ ರಂಗ ಮಂದಿರದ ಆವರಣದಲ್ಲಿ ಗೌರವ ಸಲ್ಲಿಸಿ ಅಂತಿಮ ವಿದಾಯ ಹೇಳಲೇಬೇಕು ಎಂದು ಆಗ್ರಹಿಸಿದೆ. ಮೊದಮೊದಲು ಬೇಡಾ, ಆಗೋದಿಲ್ಲಾ, ನೋಡೋಣ ಎಂದವರು ಆ ನಂತರ ನನ್ನ ಒತ್ತಾಯಕ್ಕೆ ಕಟ್ಟು ಬಿದ್ದು ಆಗಲಿ ಎಂದರು. ಆಸ್ಪತ್ರೆಯಿಂದ ಮನೆಗೆ, ಮನೆಯಿಂದ ರಂಗಮಂದಿರಕ್ಕೆ ಕೆಂಗನಾಳರ ಪಾರ್ಥೀವ ಶರೀರವನ್ನು ಸ್ಥಳಾಂತರಿಸಲಾಯ್ತು. ರಂಗಗೀತೆಗಳ ಮೂಲಕ ರಂಗನಮನ ಸಲ್ಲಿಸಿ ಆತನ ಊರಾದ ಬಿಜಾಪುರದಕ್ಕೆ ಭಾರವಾದ ಹೃದಯದಿಂದ ಬೀಳ್ಕೊಡಲಾಯ್ತು. 

ಕೆಂಗನಾಳ ಇದ್ದದ್ದೇ ಹೀಗೆ. ಎಲ್ಲೆಲ್ಲೋ ಇದ್ದವರನ್ನು ನಾಟಕದ ನೆಪದಲ್ಲಿ ಒಂದುಗೂಡಿಸಿದ. ಜನಪದರು ಎನ್ನುವ ಸಾಂಸ್ಕೃತಿಕ ತಂಡದ ಹುಟ್ಟಿಗೆ ಕಾರಣನಾದ. ತಮ್ಮ ತಂಡದ ನಾಟಕದ ಎಲ್ಲಾ ನಾಟಕಗಳಲ್ಲೂ ಅಭಿನಯಿಸಿದ. ರಂಗಸಂಘಟನೆಯಲ್ಲಿ ಯಾವಾಗಲೂ ಮುಂದಿರುತ್ತಿದ್ದ. ಗ್ರಾಮೀಣ ರಂಗಭೂಮಿಗೆ ಕೆಂಗನಾಳ ಕೊಡುಗೆ ಅನನ್ಯವಾದದ್ದು. ಯಾವ ಅನುಕೂಲತೆಗಳೇ ಇಲ್ಲದ ಕಡೆ ರಂಗಭೂಮಿ ಕಟ್ಟುವುದು ಸುಲಭ ಸಾಧ್ಯವಲ್ಲ. ಆದನ್ನು ಮಾಡಿ ತೋರಿಸಿದ ಕೆಂಗನಾಳ ಬದುಕು ನಿಜಕ್ಕೂ ಸಾರ್ಥಕ. 

ಇನ್ನೇನು ವೃತ್ತಿಯಿಂದ ರಿಟೈರ್ಡ್ ಆಗಲು ಒಂದೂವರೆ ವರ್ಷವಿತ್ತು. ಮನೆ ಕಟ್ಟಿದ ಸಾಲದ ಕಂತುಗಳು ಮುಗಿದಿದ್ದವು. ಇರುವ ಒಬ್ಬ ಮಗನ ಮದುವೆಯನ್ನೂ ಮಾಡಿಯಾಗಿತ್ತು. ಕೌಟುಂಬಿಕ ಜವಾಬ್ದಾರಿಗಳನ್ನು ಮುಗಿಸಿಯಾಗಿತ್ತು. ನಿವೃತ್ತನಾದ ನಂತರ ಪೂರ್ಣಪ್ರಮಾಣದಲ್ಲಿ ರಂಗ ವೃತ್ತಿ ಮಾಡುವೆ ಎಂದು ಹೇಳುತ್ತಿದ್ದ. ಜನಪದರು ಥೇಯಟರ್ ನಲ್ಲಿ ರಂಗಶಿಕ್ಷಣ ಕೇಂದ್ರವನ್ನು ಆರಂಭಿಸಬೇಕು ಎಂದು ಕನಸು ಕಂಡಿದ್ದ. "ಕೆಂಗನಾಳ ನೇತೃತ್ವದಲ್ಲಿ  ಶಿಕ್ಷಣ ಕೇಂದ್ರ ಆರಂಭಿಸಲು ಯೋಜನೆ ರೂಪಿಸಿದ್ದೆವು, ಆದರೆ ಆತನ ಜೊತೆಯೇ ಆ ಕನಸೂ ಅಸುನೀಗಿತು" ಎಂದು ವರ್ತೂರ ಸುರೇಶ್ ಕಣ್ಣೀರಾದರು. ಕೆಂಗನಾಳ ಅಗಲಿಕೆ ರಂಗಭೂಮಿಗಾದ ನಷ್ಟ. ಆತ ಇದ್ದಿದ್ದರೆ ಇನ್ನೂ ಎಷ್ಟೊಂದು ರಂಗಯೋಜನೆಗಳು ಜಾರಿಯಾಗುತ್ತಿದ್ದವು. 

ನಾನು ನಾಟಕ ಅಕಾಡೆಮಿಯ ಸದಸ್ಯನಾಗಿದ್ದಾಗ "ಜಗ್ಗಿ ನಿನಗೆ ಅಕಾಡೆಮಿ ಪ್ರಶಸ್ತಿ ಕೊಡಿಸಬೇಕೆಂದಿದ್ದೇನೆ" ಎಂದೆ. ಬೇರೆಯವರಾಗಿದ್ದರೆ ಕೊಡಿಸು ಅಂತಾ ದುಂಬಾಲು ಬೀಳುತ್ತಿದ್ದರು. "ನನಗೆ ಯಾಕೋ.. ರಂಗಮಂದಿರ ಕಟ್ಟಿಸಲು ಪಾಪಣ್ಣ ತುಂಬಾ ಕಷ್ಟ ಪಟ್ಟಿದ್ದಾರೆ ಅವರಿಗೆ ಮೊದಲು ಪ್ರಶಸ್ತಿ ಬರಲಿ" ಎಂದ. "ಪಾಪಣ್ಣ ಒಂದು ಪಕ್ಷದಲ್ಲಿ ಗುರುತಿಸಿಕೊಂಡವರು, ಅವರಿಗೆ ಕೊಡಿಸಲು ಆಗದು" ಎಂದಾಗ.  "ಆಯ್ತು ವರ್ತೂರ್ ಸುರೇಶ್ ಇದ್ದಾರೆ, ಸಿದ್ದೇಶ್ವರ್ ಇದ್ದಾರೆ. ಅವರಿಗೆ ಪ್ರಶಸ್ತಿ ಕೊಡಿಸಿದರೆ ಅವರ ಪರಿಶ್ರಮಕ್ಕೆ ಫಲ ಸಿಕ್ಕಂತಾಗುತ್ತದೆ" ಎಂದು ಆಗ್ರಹಿಸಿದ. "ಅವರೆಲ್ಲಾ ಪ್ರಶಸ್ತಿಗೆ ಅರ್ಹರಾಗಿದ್ದರೂ ಮೊದಲು ನಿನಗೆ ಪ್ರಶಸ್ತಿ ಕೊಡಿಸುವೆ" ಎಂದಾಗ ಮತ್ತೊಂದು ತಕರಾರು ತೆಗೆದ. " ನೋಡು ಶಶಿ, ನಾವಿಬ್ಬರೂ ಆತ್ಮೀಯ ಗೆಳೆಯರು ಎಂದು ರಂಗಭೂಮಿಯವರಿಗೆಲ್ಲಾ ಗೊತ್ತು. ಅಧಿಕಾರ ದುರುಪಯೋಗ ಮಾಡಿಕೊಂಡು ತನ್ನ ಗೆಳೆಯನಿಗೆ ಪ್ರಶಸ್ತಿ ಕೊಡಿಸಿದ ಕಳಂಕ ನಿನ್ನ ಮೇಲೆ ಬರಬಹುದು" ಎಂದು ನನ್ನ ಬಗ್ಗೆ ಕಾಳಜಿ ತೋರಿಸಿದ. ಸುಲಭಕ್ಕೆ ಈತ ಒಪ್ಪುವುದಿಲ್ಲವೆಂದು ಅರ್ಥವಾಯ್ತು. ನನ್ನ ಜೊತೆಗೆ ಅಕಾಡೆಮಿ ಸದಸ್ಯರಾಗಿದ್ದ ರಾಮಕೃಷ್ಣ ಬೆಳ್ತೂರರ ಜೊತೆ ಮಾತಾಡಿದೆ. ಅವರಿಗೂ ಜೆಕೆಗೆ ಪ್ರಶಸ್ತಿ ಕೊಡಿಸುವ ಮನಸಿತ್ತು. ಬೆಳ್ತೂರ ಕೋಟಾದಲ್ಲಿ ಕೆಂಗನಾಳನಿಗೆ ನಾಟಕ ಅಕಾಡೆಮಿ ಪ್ರಶಸ್ತಿ ಘೋಷಿಸಲಾಯ್ತು. 

ಜೆಕೆ ಮಾಸ್ತರನ ರಂಗಬದ್ದತೆ ಬಗ್ಗೆ ಹೇಳಲೇಬೇಕಿದೆ. ಪ್ರತಿ ದಿನ ಶಿಕ್ಷಕ ವೃತ್ತಿಗಾಗಿ ಹೊಸಕೋಟೆಯಿಂದ ಸರಿಸುಮಾರು 150 ಕಿಮಿ ದೂರ ಬಸ್ ನಲ್ಲಿ ಹೋಗಿ ಬರುತ್ತಿದ್ದರೂ ಪ್ರಯಾಣದ ಆಯಾಸ ಹಾಗೂ ವೃತ್ತಿಯ ಒತ್ತಡಗಳನ್ನು ಮರೆತು ನಾಟಕದ ರಿಹರ್ಸಲ್ ಸಮಯಕ್ಕೆ ಸರಿಯಾಗಿ ರಂಗಮಂದಿರಕ್ಕೆ ಹಾಜರಾಗುತ್ತಿದ್ದ. ಬೆಳಿಗ್ಗೆ ಏಳಕ್ಕೆ ಮನೆ ಬಿಟ್ಟರೆ ಮತ್ತೆ ಮನೆ ತಲುಪುತ್ತಿದ್ದದ್ದೇ ರಾತ್ರಿ ಹತ್ತು ಗಂಟೆಗೆ. ಈ ರೀತಿಯ ವಿಪರೀತ ಕಾರ್ಯಪ್ರವೃತ್ತಿ ಹಾಗೂ ರಂಗಬದ್ದತೆಯೇ ಕೆಂಗನಾಳರ ಅಕಾಲಿಕ ಸಾವಿಗೆ ಕಾರಣ ಎನ್ನುವುದೂ ಸುಳ್ಳಲ್ಲ. ನೂರಾರು ವರ್ಷ ಭೂಮಿಗೆ ಭಾರವಾಗಿ ಕೂಳಿಗೆ ದಂಡವಾಗಿ ಹೋಗೋ ಸ್ವಾರ್ಥ ಸಾಧನೆಗಾಗಿ ಬದುಕು ಸವೆಸುವುದಕ್ಕಿಂತಲೂ ಇದ್ದಷ್ಟು ಕಾಲ ಏನಾದರೂ ಸಾಧನೆ ಮಾಡಿ ಮಡಿಯುವುದೇ ಮನುಷ್ಯ ಬದುಕಿನ ಸಾರ್ಥಕತೆಯಾಗಿದೆ. ಈ ವಿಷಯದಲ್ಲಿ ಜೆಕೆ ಬದುಕು ಸಾಗಿ ಮುಗಿದಿದೆ. 

ಇಂತಹ ರಂಗನಿಷ್ಟೆ ಹಾಗೂ ಕಾಯಕ ಬದ್ದತೆ ಇರುವ ರಂಗಗೆಳೆಯನನ್ನು ಅಕಾಲಿಕವಾಗಿ ಕಳೆದುಕೊಂಡಿದ್ದು ಅತ್ಯಂತ ಬೇಸರದ ಸಂಗತಿ. ಸದಾ ಯಾವುದಾದರೂ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದ ಕೆಂಗನಾಳ ತನ್ನ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಿದ್ದರೆ ಇನ್ನೂ ಹಲವಾರು ವರ್ಷ ಬದುಕಿರುತ್ತಿದ್ದ. ವೃತ್ತಿ ಪ್ರವೃತ್ತಿಗಳ ಒತ್ತಡಗಳನ್ನೆಲ್ಲಾ ಮೈಮೇಲೆ ಎಳೆದುಕೊಂಡು ಬಿಪಿ ಶುಗರ್ ಗಳನ್ನು ಆಹ್ವಾನಿಸಿಕೊಂಡಿದ್ದ. ದೇಹದ ತೂಕವನ್ನು ಅಗತ್ಯಕ್ಕಿಂತಲೂ ಅತಿಯಾಗಿ ಹೆಚ್ಚಿಸಿಕೊಂಡಿದ್ದ. ಮೊದಲೇ ಮಾಸ್ತರ. ಬೇರೆಯವರಿಗೆ ಬುದ್ದಿ ಹೇಳುವುದರಲ್ಲಿರುವ ಆಸಕ್ತಿ, ಬೇರೆಯವರು ಹೇಳಿದ ಬುದ್ದಿ ಮಾತನ್ನು ಕೇಳುವುದರಲ್ಲಿರಲಿಲ್ಲ. ದೇಹ ಹಲವಾರು ಸಲ ಮುನ್ಸೂಚನೆ ಕೊಟ್ಟರೂ ಎಚ್ಚರಗೊಳ್ಳದೇ ಸರಿಯಾದ ಸಮಯಕ್ಕೆ ಊಟ ನಿದ್ರೆ ಮಾಡದೇ ಸಾರ್ವಜನಿಕ ಕೆಲಸಗಳಿಗಾಗಿ ವಿಶ್ರಾಂತಿ ರಹಿತ ಓಡಾಟ ಮುಂದುವರಿಸಿದ್ದರ ಪರಿಣಾಮವೇ ಮ್ಯಾಸಿವ್ ಕಾರ್ಡಿಯಾಕ್ ಹಾರ್ಟ್ ಅಟ್ಯಾಕ್, ಕೇವಲ ಅರವತ್ತೇ ಸೆಕೆಂಡುಗಳಲ್ಲಿ ಉಸಿರನ್ನೇ ನಿಲ್ಲಿಸಿತ್ತು. ಆಗಬಾರದು ಆಗಿಹೋಯ್ತು. ಹೀಗೇ ಭಾವುಕತೆಯಿಂದ ಗೆಳೆಯನ ಜೊತೆಗಿನ ನೆನಪುಗಳನ್ನು ಹಂಚಿಕೊಳ್ಳುತ್ತಾ ಹೋದರೆ ಮುಕ್ತಾಯವೆಂಬುದಿಲ್ಲ. 

ವಿದಾಯ ಗೆಳೆಯಾ, ನಿನಗೆ ಅಂತಿಮ ವಿದಾಯ. ಕ್ರೂರ ಬಂದನೇನು? ಅಂತಾ ನಾಟಕದಲ್ಲಿ ಪಾತ್ರವಾಗಿ ಪ್ರಶ್ನಿಸುತ್ತಲೇ ಇದ್ದೆಯಲ್ಲಾ. ಮೂವತ್ತು ವರ್ಷಗಳ ನಂತರ ಆತನೇ ನಿನ್ನನ್ನು ಹುಡುಕಿಕೊಂಡು ಬಂದ. ಕಾಲನಿಗೆ ಕರುಣೆಯಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಯಿತು‌. ಜೆಕೆ ಮಾಸ್ತರ್ ಇನ್ನು ಕೇವಲ ನೆನಪು ಮಾತ್ರ. ಮತ್ತೆ ಚಂಪಾರವರ ಪದ್ಯ ನೆನಪಿಗೆ ಬರುತ್ತಿದೆ.

" ಸತ್ತವರು ಎಲ್ಲಿಗೆ ಹೋಗುತ್ತಾರೆ. 
ಎಲ್ಲಿಗೂ ಹೋಗುವುದಿಲ್ಲ.
ಜೊತೆಯಿರುವವರ ನೆನಪಿನಲ್ಲಿ
ಸದಾ ಜೀವಂತವಾಗಿರುತ್ತಾರೆ"

- ಶಶಿಕಾಂತ ಯಡಹಳ್ಳಿ
18-02-2024

ಅಧಿವೇಶನದಲಿ ಬಜೆಟ್ ಮಂಡನೆ; ಹೊರಗೆ ಪ್ರತಿಪಕ್ಷಗಳ ಸಮೂಹ ಗಾನ ಖಂಡನೆ

ತಹ ತಹ - 514

ಅಧಿವೇಶನದಲಿ ಬಜೆಟ್ ಮಂಡನೆ; ಹೊರಗೆ ಪ್ರತಿಪಕ್ಷಗಳ ಸಮೂಹ ಗಾನ ಖಂಡನೆ

ಸಿಎಂ ಸಿದ್ದರಾಮಯ್ಯನವರು ಫೆ. 16 ರಂದು ವಿಧಾನಸೌಧದಲಿ ನಡೆದ ಅಧಿವೇಶನದಲ್ಲಿ ತಮ್ಮ 15 ನೇ ಬಾರಿಯ ಬಜೆಟ್ ಮಂಡಿಸಿ ದಾಖಲೆ ಸೃಷ್ಟಿಸಿದ್ದಾರೆ.ಯಾವುದೇ ಬಜೆಟ್ಟಿನ ಸಕಾರಾತ್ಮಕ ಇಲ್ಲವೇ ನಕಾರಾತ್ಮಕ ಅಂಶಗಳು ಏನೇ ಇರಲಿ, ವಿರೋಧ ಪಕ್ಷಗಳ ನಾಯಕರು ಅಧಿವೇಶನದಲ್ಲಿದ್ದು ಸಂಪೂರ್ಣ ಬಜೆಟ್ ಕೇಳಿದ ನಂತರ ತಮ್ಮ ಟೀಕೆ ಟಿಪ್ಪಣೆ ಮಾಡುವುದು ಸಂಸದೀಯ ವ್ಯವಸ್ಥೆಯಲ್ಲಿ ಅಪೇಕ್ಷಣೀಯ. ಆದರೆ ಇತ್ತ ಸಿದ್ದರಾಮಯ್ಯನವರು ಬಜೆಟ್ ಮಂಡನೆ ಮಾಡುತ್ತಿದ್ದಂತೆಯೇ ಅತ್ತ ಅಧಿವೇಶನ ಬಹಿಷ್ಕರಿಸಿ ಹೊರಗೆ ನಡೆದ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಾಯಕರುಗಳು ವಿಧಾನ ಸೌಧದ ಮೆಟ್ಟಲುಗಳ ಮೇಲೆ ಬಜೆಟ್ ವಿರುದ್ದ ಘೋಷಣೆ ಕೂಗುತ್ತಾ ಸೆನ್ಸೇಶನ್ ಸೃಷ್ಟಿಸಿದ್ದು ನಿಜಕ್ಕೂ ಅವಿವೇಕತನ.

ಬಜೆಟ್ ಮಂಡನೆಗೆ ಮುನ್ನವೇ ವಾಕೌಟ್ ನಿರ್ಧಾರ ಮಾಡಿಕೊಂಡೇ ಬಂದಿದ್ದ ಈ ವಿಪಕ್ಷಗಳ ನಾಯಕರುಗಳು ತಮ್ಮ ಪೂರ್ವಯೋಜನೆಯಂತೆ ಪ್ಲೇಕಾರ್ಡಗಳನ್ನು ಸಿದ್ದಪಡಿಸಿಕೊಂಡು ಬಂದಿದ್ದವು. ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಬಜೆಟ್ ಮಂಡನೆ ಮಾಡುತ್ತಿದ್ದರೆ ಹೊರಗಡೆ ಟಿವಿ ಕ್ಯಾಮರಾಗಳ ಮುಂದೆ ನಿಂತ ಈ ನಾಯಕರುಗಳು ಪ್ಲೇಕಾರ್ಡ್ ಹಿಡಿದು "ಏನಿಲ್ಲ ಏನಿಲ್ಲಾ ಸಿದ್ದರಾಮಯ್ಯನ ಬಜೆಟ್ನಲ್ಲಿ ಏನಿಲ್ಲಾ" ಎಂದು ಗಾರ್ಧಭ ಸ್ವರದಲ್ಲಿ ಕೋರಸ್ ಹಾಡು ಹಾಡತೊಡಗಿದರು. " ಓಳು ಬರಿ ಓಳು ಸಿದ್ದರಾಮಯ್ಯನವರ ಬಜೆಟ್ ಬರೀ ಓಳು" ಎಂದು ಸಿನೆಮಾ ಹಾಡನ್ನು ತಿರುಚಿ ರೀಲ್ಸ್ ಮಾದರಿಯಲ್ಲಿ ಹಾಡಾದರು. 

" ಇದೊಂದು ಶೂನ್ಯ ಬಜೆಟ್. ರಾಜ್ಯವನ್ನು 20 ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗುವ ಬಜೆಟ್" ಎಂದು ಬಿಜೆಪಿ ಪಕ್ಷದ ರಾಜ್ಯಾದ್ಯಕ್ಷ ಹೇಳಿದರೆ, "ನನ್ನ ಜೀವಮಾನದಲ್ಲೇ ಇಂತಹ ಕಳಪೆ ಬಜೆಟ್ ನೋಡಿರಲಿಲ್ಲ" ಎಂದು ಈ ರಾಜ್ಯದ್ಯಕ್ಷರ ಅಪ್ಪ ಯಡಿಯೂರಪ್ಪ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಬಿಜೆಪಿಯ ವಿರೋಧ ಪಕ್ಷದ ನಾಯಕ ಆರ್.ಅಶೋಕರವರಂತೂ ಏನಿಲ್ಲಾ ಏನಿಲ್ಲಾ ಎಂದು ಗುಂಪು ಸೇರಿಸಿ ಸಮೂಹ ಗಾನದಲ್ಲಿ ತಲ್ಲೀನರಾಗಿದ್ದರು. "ನಿರಾಶಾದಾಯಕ ಬಜೆಟ್" ಎಂದು ಮಾಜಿ ಸಿಎಂ ಕುಮಾರಸ್ವಾಮಿಯವರು ತಮ್ಮ ಅಸಮಾಧಾನ ವ್ಯಕ್ತ ಪಡಿಸಿದರು.

ಯಾವುದೇ ಪಕ್ಷ ಅಧಿಕಾರದಲ್ಲಿದ್ದು ಬಜೆಟ್ ಮಂಡನೆ ಮಾಡಿದರೂ ಅದನ್ನು ವಿರೋಧ ಪಕ್ಷಗಳು ವಿರೋಧಿಸುತ್ತಲೇ ಬರುವುದು ಸಾಮಾನ್ಯ. ಆದರೆ ವಿಧಾನಸಭೆ ಇತಿಹಾಸದಲ್ಲಿ ಮೊದಲ ಬಾರಿಗೆ ಬಜೆಟ್ ಮಂಡನೆ ಕೇಳದೇ, ಅದರಲ್ಲಿ ಏನಿದೆ ಎಂದೂ ತಿಳಿಯದೇ ಅಧಿವೇಶನ ಬಹಿಷ್ಕರಿಸಿ ವಿಧಾನಸೌಧದ ಹೊರಗೆ 'ಏನಿಲ್ಲ ಏನಿಲ್ಲಾ' ಅಂತಾ ಕೂಗಾಡಿದ್ದು ಅತಿರೇಕದ ಪರಮಾವಧಿ. ವಿರೋಧ ಪಕ್ಷಗಳು ಇರುವುದೇ ಆಳುವ ಪಕ್ಷದ ಎಲ್ಲಾ ನಿರ್ಧಾರಗಳನ್ನು ವಿವೇಚನೆ ಇಲ್ಲದೇ ವಿರೋಧಿಸಲಿಕ್ಕೆ ಎಂದು ಬಿಜೆಪಿಯವರು ತಿಳಿದಂತಿದೆ. ಅಧಿವೇಶನದಲ್ಲಿದ್ದು, ಪೂರ್ತಿ ಬಜೆಟ್ ಮಂಡನೆಗೆ ಸಾಕ್ಷಿಯಾಗಿ, ಸಾಧಕ ಬಾಧಕಗಳ ಪಟ್ಟಿ ಮಾಡಿಕೊಂಡು ತದನಂತರ ವಸ್ತುನಿಷ್ಟವಾಗಿ ವಿರೋಧ ವ್ಯಕ್ತಪಡಿಸಿದ್ದರೆ ಅಂತಹ ವಿರೋಧಕ್ಕೂ ಬೆಲೆ ಇರುತ್ತಿತ್ತು. ಅದು ವಿರೋಧ ಪಕ್ಷಗಳ ಹೊಣೆಗಾರಿಕೆಯೂ ಆಗಿತ್ತು.

ಆದರೆ ಬಜೆಟ್ನಲ್ಲಿ ಏನಿದೆಯೆಂದು ಘೋಷಿಸುವ ಮುನ್ನವೇ ಏನಿಲ್ಲಾ ಎಂದು ಸಮೂಹ ಗಾನ ಹಾಡುವುದು, ಬಜೆಟ್ ಮಂಡನೆ ಪೂರ್ಣಗೊಳ್ಳುವ ಮೊದಲೇ ಪ್ಲೇಕಾರ್ಡ್ ಹಿಡಿದು ಓಳು ಬರಿ ಓಳು ಎನ್ನುವುದು ವಿರೋಧ ಪಕ್ಷಗಳ ನಾಯಕರ ಅತಿರೇಕ ಅಧಿಕಪ್ರಸಂಗತನ ಹಾಗೂ ಬೇಜವಾಬ್ದಾರಿತನವಾಗಿದೆ.

ಈ ಬಜೆಟ್ ಎನ್ನುವುದು ಒಂದು ರಾಜ್ಯದ ಮುಂದಿನ ಅಗುಹೋಗುಗಳ ನೀಲಿನಕ್ಷೆಯಾಗಿದ್ದು ಅದಕ್ಕೆ ಸಾಕ್ಷಿಯಾಗಬೇಕಾದದ್ದು ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕರುಗಳ ಕರ್ತವ್ಯವಾಗಿದೆ. ಯಾವುದೇ ಪಕ್ಷವಿರಲಿ, ಅವುಗಳ ಸಿದ್ದಾಂತಗಳು ಏನೇ ಇರಲಿ, ಇಲ್ಲಿ ರಾಜ್ಯದ ಹಿತಾಸಕ್ತಿ ಮುಖ್ಯವಾಗಬೇಕಿದೆ. ಆಳುವ ಪಕ್ಷ ಮಂಡಿಸುವ ಬಜೆಟ್ ನಲ್ಲಿ ಏನಾದರೂ ದೋಷಗಳಿದ್ದರೆ, ಜನವಿರೋಧಿ ಅಂಶಗಳಿದ್ದರೆ ಅವುಗಳ ಕುರಿತು ದ್ವನಿ ಎತ್ತುವ, ಆಳುವ ಪಕ್ಷವನ್ನು ಎಚ್ಚರಿಸುವ ಹಾಗೂ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ವಿರೋಧ ಪಕ್ಷಗಳು ಮಾಡಬೇಕಿದೆ. ಅಧಿವೇಶನವನ್ನೂ ಬಹಿಷ್ಕರಿಸಿ, ಬಜೆಟ್ನಲ್ಲಿ ಏನಿದೆ ಎಂಬುದನ್ನೂ ಅರಿಯದೇ ಬಜೆಟ್ ಮಂಡನೆಗೆ ಮುನ್ನವೇ ಇಡೀ ಬಜೆಟ್ಟಲ್ಲಿ ಏನಿಲ್ಲಾ ಎಂದು ಹೇಳುವುದು ವಿರೋಧ ಪಕ್ಷಗಳ ಮೇಲಿನ ವಿಶ್ವಾಸಾರ್ಹತೆಗೆ ಕುಂದು ತರುವಂತಹದ್ದಾಗಿದೆ. 

ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ಕುರಿತು ಪ್ರತಿಪಕ್ಷಗಳು ಕೇಳಬೇಕಾದ ಮೌಲಿಕ ಪ್ರಶ್ನೆಗಳು ಇದ್ದವು. ಬಜೆಟ್ ಗಾತ್ರ ಯಾಕು 3.71 ಲಕ್ಷ ಕೋಟಿ ಆಯಿತು. ಇಷ್ಟೊಂದು ಖರ್ಚಿನ ಬಾಬತ್ತಿಗೆ ಆದಾಯದ ಮೂಲ ಯಾವುದು. ಈಗಾಗಲೇ ಕರ್ನಾಟಕ ರಾಜ್ಯ ಸಾಲದಲ್ಲಿರುವಾಗ, ಆದಾಯದಲ್ಲಿ 18% ನಷ್ಟು ಈಗಾಗಲೇ ಮಾಡಿದ ಸಾಲಕ್ಕೆ ಬಡ್ಡಿ ಕಟ್ಟುತ್ತಿರುವಾಗ ಮತ್ತೆ 1.1 ಲಕ್ಷ ಕೋಟಿ ಹಣ ಸಾಲ ಮಾಡುವ ಅಗತ್ಯವಿತ್ತಾ? ಮಾಡಿದ ಸಾಲವನ್ನು ಹೇಗೆ ತೀರಿಸಲಾಗುತ್ತದೆ? ಘೋಷಿತ ಅಭಿವೃದ್ದಿ ಯೋಜನೆಗಳನ್ನು ಹೇಗೆ ಕಾಲಮಿತಿಯಲ್ಲಿ ಅನುಷ್ಟಾನಕ್ಕೆ ತಂದು ಕಾರ್ಯಗತಗೊಳಿಸುತ್ತೀರಿ? ಹೀಗೆ ಹಲವಾರು ಮೌಲಿಕ ಹಾಗೂ ಅತ್ಯಗತ್ಯವಾದ ಅನುಮಾನಗಳನ್ನು ಅಧಿವೇಶನದಲ್ಲಿ ಎತ್ತಿದ್ದರೆ, ಇಲ್ಲವೇ ಆ ನಂತರವಾದರೂ ಮಾಧ್ಯಮಗಳ ಮೂಲಕ ಪ್ರಶ್ನಿಸಿದ್ದರೆ ವಿರೋಧ ಪಕ್ಷಗಳ ನಾಯಕರ ಮಾತಿಗೆ ತೂಕ ಇರುತ್ತಿತ್ತು. ಪ್ರತಿಪಕ್ಷವಾಗಿ ಸಂಸದೀಯ ಹೊಣೆಗಾರಿಕೆಯನ್ನು ನಿಭಾಯಿಸಿದಂತಾಗುತ್ತಿತ್ತು.

ಆದರೆ ಈ ಯಾವ ಹೊಣೆಗಾರಿಕೆಯನ್ನೂ ನಿಭಾಯಿಸದೇ ವಿರೋಧಕ್ಕಾಗಿ ವಿರೋಧ ಮಾಡುವುದು, ಆಧಾರ ಪುರಾವೆಗಳಿಲ್ಲದೇ ಆರೋಪ ಮಾಡುವುದು, ಬಾಲಿಶವಾದ ಹೇಳಿಕೆ ಕೊಡುವುದು ಹಾಗೂ ಮಾಧ್ಯಮಗಳ ಮುಂದೆ ಸಮೂಹ ಗಾನ ಹಾಡುವುದೆಲ್ಲಾ ಪ್ರತಿಪಕ್ಷಗಳ ಬೌದ್ದಿಕ ದಿವಾಳಿತನಕ್ಕೆ ಸಾಕ್ಷಿಯಾಗಿವೆ. ಇದೆಲ್ಲವನ್ನೂ ಸುದ್ದಿ ಮಾಧ್ಯಮಗಳ ಮೂಲಕ ಕರ್ನಾಟಕದ ಜನತೆ ಗಮನಿಸುತ್ತಲೇ ಇದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಗಲಾಡಿಗಳ ಪಕ್ಷವನ್ನು ಸೋಲಿಸಿ ಪಾಠ ಕಲಿಸುತ್ತಾರೆ, ಇಲ್ಲವೇ ಆಸೆ ಆಮಿಷಕ್ಕೆ ಒಳಗಾಗಿ ಗೆಲ್ಲಿಸಿದರೆ ಅದರ ಪರಿಣಾಮಗಳನ್ನು ಅನುಭವಿಸುತ್ತಾರೆ.

- ಶಶಿಕಾಂತ ಯಡಹಳ್ಳಿ

16-02-2024

ಕೋಮುವಾದಿಯಿಂದ ಕವಿತೆಯ ಪಾಠ

ತಹ ತಹ - 513

ಕೋಮುವಾದಿಯಿಂದ ಕವಿತೆಯ ಪಾಠ

ನೋಡಿ ಮಕ್ಕಳೇ ಸರಿಯಾಗಿ ಎಲ್ಲರೂ ಕೇಸರಿ ಶಾಲನ್ನು ಹಾಕಿಕೊಳ್ಳಿ. ಎಲ್ಲರೂ ನಿಮ್ಮ ಕೈಯಲ್ಲಿ ಭಗವಾದ್ವಜ ಹಿಡಿದುಕೊಳ್ಳಿ. ಯಾವಾಗಲೂ ಎಲ್ಲರೂ ನಿಮ್ಮ ಮನಸಲ್ಲಿ ಜೈಶ್ರೀರಾಂ ಎಂದು ಹೇಳಿಕೊಳ್ಳುತ್ತಾ ಇರಿ. ಹಿಂದೂ ಧರ್ಮ ಉಳಿಯಬೇಕೆಂದರೆ ಇದನ್ನೆಲ್ಲಾ ಮಾಡಲೇಬೇಕು ಆಯ್ತಾ.

ನಾನು ಈ ಕ್ಷೇತ್ರದ ಎಂಎಲ್ಲೆ. ಕೋಮುವಾಧಿ ಕಾಮತ್, ಕೋಮುವ್ಯಾಧಿ ಕಾಮತ್, ಕೋಮುಪೀಡೆ ಕಾಮತ್, ಮತಾಂಧ ಕಾಮತ್, ಧರ್ಮಾಂಧ ಕಾಮತ್.. ಅಂತೆಲ್ಲಾ ನಮ್ಮ ವಿರೋಧಿಗಳು, ಧರ್ಮದ್ರೋಹಿಗಳು, ದೇಶದ್ರೋಹಿಗಳು ನನ್ನನ್ನು ಕರೀತಾರೆ. ಯಾರು ಏನೇ ಅಂದುಕೊಳ್ಳಲಿ ನಾನು ಮಾತ್ರ ಅಪ್ಪಟ ಹಿಂದೂ, ನನ್ನ ಮೈಯಲ್ಲಿ ಹರೀತಿರೋದು ಪಕ್ಕಾ ಹಿಂದುತ್ವದ ರಕ್ತ. ನಾನು ಖಂಡಿತಾ ಭಜರಂಗಿಯ ಮಹಾನ್ ಭಕ್ತ. 

ಇವತ್ತು ನಿಮಗೆಲ್ಲಾ ಕವಿತೆಯೊಂದರ ಪಾಠ ಮಾಡಲು ಬಂದಿರುವೆ. ನನ್ನ ವಿರೋಧಿಗಳು ಏಳನೇ ಕ್ಲಾಸಿನ ಪಠ್ಯದಲ್ಲಿರುವ ಟ್ಯಾಗೋರರ ಕವಿತೆಯನ್ನು ಪಾಠ ಮಾಡಿ ತೋರಿಸಲಿ ಎಂದು ಸವಾಲು ಹಾಕಿದ್ದಾರೆ. ಸವಾಲನ್ನು ಸ್ವೀಕರಿಸಿ ನಿಮಗೆ ಇವತ್ತು ಇಲ್ಲಿ ನಾನು ಪಾಠ ಮಾಡಲು ಬಂದಿದ್ದೇನೆ. ಜೈಶ್ರೀರಾಂ.

ಈ ಕವಿತೆಯ ಹೆಸರು "ವರ್ಕ ಇಸ್ ವರ್ಕಶಿಪ್". ಈ ಶೀರ್ಷಿಕೆಯೇ ಆಘಾತಕಾರಿಯಾಗಿದೆ. ಕೆಲಸವೇ ದೇವರು ಅನ್ನೋದೇ ಸರಿಯಲ್ಲ. ಕೆಲಸ ಎಂದರೆ ಕೆಲಸ ಅಷ್ಟೇ. ಯಾರಾದರೂ ಮಾಡುವ ಕೆಲಸಕ್ಜೆ ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸಿ ದೀಪ ಹಚ್ಚಿ ದೂಪ ಬೆಳಗಲು ಸಾಧ್ಯವೇ? ಸಾಧ್ಯವೇ ಇಲ್ಲ. ಈ ಶೀರ್ಷಿಕೆಯನ್ನು ಬದಲಾಯಿಸಬೇಕಿದೆ. ಇದನ್ನು "ಪ್ರೇಯರ್ ಇಸ್ ವರ್ಕಶಿಪ್ ಅಂದರೆ ಪ್ರಾರ್ಥನೆಯೇ ದೇವರು" ಅಂತಾ ನಿಮ್ಮ ಪುಸ್ತಕಗಳಲ್ಲಿ ಈಗಲೇ ತಿದ್ದುಪಡಿ ಮಾಡಿಕೊಳ್ಳಿ. ಇನ್ನು ಕವಿತೆಗೆ ಬರೋಣ. ಈ ಕವಿತೆ ಏನು ಹೇಳುತ್ತದೆ ಅಂದರೆ.. 

"ಮಂತ್ರ ಪಠಣಗಳನ್ನು ತೊರೆದು ಬಿಡು
ದೇವರು ಮಂದಿರಗಳಲಿಲ್ಲ ಕಣ್ಣು ತೆರೆದು ನೋಡು"

ನಾನ್ಸೆನ್ಸ್. ದೇವರು ದೇವಸ್ಥಾನಗಳಲ್ಲಿ ಇಲ್ಲದೇ ಕಂಬಗಳಲ್ಲಿ ಇಲ್ಲವೇ ಮಲಗುವ ದಿಂಬುಗಳಲ್ಲಿ ಇರಲು ಸಾಧ್ಯವೇ.? ದೇವರನ್ನು ಮೆಚ್ಚಿಸಬೇಕೆಂದರೆ ಪೂಜಾರಿಗಳಿಂದ ಮಂತ್ರ ಹೇಳಿಸಲೇ ಬೇಕಲ್ಲವೇ? ಮಂತ್ರ ಹೇಳೋದನ್ನ ಬಿಟ್ಟರೆ ಪುರೋಹಿತರ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿಯಾಗುತ್ತದೆ ಅಲ್ಲವೇ? ಯಾರಾದರೂ ಹೀಗೆಲ್ಲಾ ಕವಿತೆ ಬರೆಯುತ್ತಾರಾ? ಇದನ್ನು ನಾನು ವಿರೋಧಿಸಿತ್ತೇನೆ. ಖಂಡಿತಾ ಖಂಡಿಸುತ್ತೇನೆ. ಮಕ್ಕಳೇ ನಾನು ಹೇಳಿದ ಹಾಗೆ ತಿದ್ದುಪಡಿ ಮಾಡಿಕೊಳ್ಳಿ.

"ಸುಮ್ಮನೇ ಕೂರಬೇಡಿ
ಮಂತ್ರಪಠಣ ಮಾಡಿ
ದೇವನಿರುವನು ಮಂದಿರದೊಳಗೆ
ಕಣ್ಣು ತೆರೆದು ನೋಡಿ"
ಶಹಬ್ಬಾಸ್.. ಕವಿತೆ ಅಂದ್ರೆ ಹೀಗಿರಬೇಕು. ಕಲ್ಲು ಕೂಡಾ ಜೀವ ಪಡೆದು ಹೌದೌದು ಎನ್ನಬೇಕು. ಮುಂದಕ್ಕೆ ಹೋಗೋಣ. ಏನಿದು

"ದೇವರು ಮೌಢ್ಯ ಮಡಿವಂತಿಕೆಯಲ್ಲಿಲ್ಲ
ಮೂಢ ಸಂಪ್ರದಾಯದಲ್ಲಿಲ್ಲ
ನೇಗಿಲ ಯೋಗಿಯಲ್ಲಿದ್ದಾನೆ
ಕಠಿಣ ಪರಿಶ್ರಮದಲ್ಲಿದ್ದಾನೆ
ಪರಿಶ್ರಮ ಪಟ್ಟು ಕಾಯಕ ಮಾಡಿದರೆ
ದೇವರ ಕೃಪೆಗೆ ಪಾತ್ರರಾಗುವೆ"

ಶಾಂತಂ ಪಾಪಂ. ಈ ಸಾಲುಗಳನ್ನು ಓದುವುದೇ ಮಹಾಪಾಪ. ಅಲ್ಲಾ ಮಕ್ಕಳೇ ಮಡಿವಂತಿಕೆ ಬಿಟ್ಟು ಬಾಳಲು ಮನುಷ್ಯರಿಗೆ ಸಾಧ್ಯವಿದೆಯಾ? ಸನಾತನ ಸಂಪ್ರದಾಯಗಳನು ಬಿಟ್ಟು ಹಿಂದೂಗಳು ಬದುಕಲು ಸಾಧ್ಯವಿದೆಯಾ? ನೇಗಿಲಯೋಗಿ ಅಂದ್ರೆ ರೈತ. ರೈತರಲ್ಲಿ ದೇವರು ಇದ್ದಿದ್ದೇ ಆದರೆ ರೈತರು ಯಾಕೆ ಹೀಗೆ ಬಡತನದಲ್ಲಿ ಬಾಳುತ್ತಿದ್ದರು, ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಿದ್ದರು. ಈ ಮನೆ ಕಟ್ಟುವ ಕೂಲಿಯವರು, ಬೀದಿ ಗೂಡಿಸುವ ಕಾರ್ಮಿಕರೂ ಕಠಿಣ ಪರಿಶ್ರಮ ಪಡ್ತಾನೇ ಇರ್ತಾರಲ್ವಾ. ಅವರ ಮೇಲೆ ದೇವರ ಕೃಪೆ ಇದ್ದಿದ್ದರೆ ಅವರ್ಯಾಕೆ ದುಡಿದುಡಿದು ಬಡವರಾಗಿ ಸಾಯ್ತಾ ಇದ್ರು. ನೋ..ಈ ಕವಿತೆ ಪ್ರ್ಯಾಕ್ಟಿಕಲ್ ಅಲ್ಲವೇ ಅಲ್ಲ. ದೇವರು ಇರೋದು ಪೂಜಾರಿಗಳು, ಅರ್ಚಕರು, ಪುರೋಹಿತರು, ಸ್ವಾಮಿಗಳಲ್ಲಿ ಅನ್ನುವುದು ವಾಸ್ತವ. ನೋಡಿ ಇವರೆಲ್ಲಾ ಯಾವತ್ತಾದರೂ ದುಡೀತಾರಾ? ಸಾಲಾ ಸೋಲ ಮಾಡಿ ಆತ್ಮಹತ್ಯೆ ಮಾಡಿಕೋತಾರಾ? ತಿಂದುಂಡು ಹೇಗೆ ಆರಾಮಾಗಿ ಇರ್ತಾರೆ ನೋಡಿ. ಯಾಕೆ ಗೊತ್ತಾ? ಯಾಕೆಂದರೆ ಅವರು ದೇವರ ಕೃಪೆಗೆ ಪಾತ್ರರಾಗಿರ್ತಾರೆ. ದೇವರ ಪೂಜೆ ಪ್ರಾರ್ಥನೆ ಭಜನೆ  ಮಂತ್ರಗಳ ಮೂಲಕ ದೇವರನ್ನು ತೃಪ್ತಿ ಪಡಿಸುತ್ತಾರೆ. ಇದನ್ನು ನೀವೆಲ್ಲಾ ಕಣ್ಣಾರೇ ನೋಡಿರ್ತೀರಿ ಅಲ್ವಾ. ಇದೇ ಸತ್ಯ ಅಲ್ವಾ? ಈ ಕವಿಗಳು ಇದ್ದಾರಲ್ಲಾ ಯಾವಾಗಲೂ ಸುಳ್ಳನ್ನೇ ಸತ್ಯ ಅಂತಾ ನಂಬಿಸಿ ಮೋಸ ಮಾಡ್ತಾರೆ. ನಾವಿದ್ದೀವಲ್ಲಾ ನಮ್ಮಂತೋರು ಸತ್ಯ ಏನು ಅನ್ನೋದನ್ನ ಹೇಳ್ತೀವಿ. ಈ ಕವಿತೆಯ ಸಾಲುಗಳು ಹೀಗಿರಬೇಕಿತ್ತು.

" ದೇವನಿಹನು ಮಡಿವಂತಿಕೆಯಲಿ
ಧರ್ಮ ಶಾಸ್ತ್ರ ಸಂಪ್ರದಾಯಗಳಲಿ
ಪೂಜಾರಿ ಪುರೋಹಿತ ಯೋಗಿಗಳಲಿ
ಪರಿಶ್ರಮ ಪಟ್ಟು ಪೂಜೆ ಪ್ರಾರ್ಥನೆ ಮಾಡಿದರೆ
ದೇವರ ಕೃಪೆಗೆ ಪಾತ್ರರಾಗುವೆ"

ಹಾಂ.. ಇದು ಸರಿಯಾದ ಕವಿತೆ. ಹೀಗೆ ತಿದ್ದುಪಡಿ ಮಾಡಿಕೊಂಡು ಕಂಠಪಾಠ ಮಾಡಿಕೊಳ್ಳಿ ಮಕ್ಕಳೇ. ಇಂದಿನ ಮಕ್ಕಳೇ ನಾಳೆಯ ಕರಸೇವಕರು, ಇಂದಿನ ವಿದ್ಯಾರ್ಥಿಗಳೇ ಭವಿಷ್ಯದ ರಾಮಭಕ್ತರು. ನಿಮಗೆಲ್ಲಾ ಆಂಜನೇಯ ಗೊತ್ತಲ್ವಾ. ಹಾಂ. ರಾಮನಿಗೆ ಹೇಗೆ ಹನುಮ ಆಜ್ಞಾಧಾರಕನೋ ಹಾಗೆ ನೀವೆಲ್ಲಾ ಭಜರಂಗಿಗಳಾಗಬೇಕು. ದೇವರು ಅಂದ್ರೆ ರಾಮ, ರಾಮ ಅಂದ್ರೆ ದೇಶ. ದೇಶ ಅಂದ್ರೆ ಧರ್ಮ ಎಂಬುದನ್ನು ಅರ್ಥಮಾಡಿಕೊಳ್ಳಿ. ನಮ್ಮ ಸನಾತನ ಧರ್ಮ ರಕ್ಷಣೆಗೆ ಪ್ರಾಣ ಕೊಡಲೂ ಸಿದ್ದರಾಗಿ. ಯಾಕೆಂದರೆ ನಮ್ಮ ಪವಿತ್ರ ಭಗವದ್ಗೀತೆಯಲ್ಲಿ ಕೃಷ್ಣ ಪರಮಾತ್ಮ "ಧರ್ಮೋ ರಕ್ಷತಿ ರಕ್ಷತಃ" ಅಂತಾ ಹೇಳಿದ್ದಾರೆ. ಅಂದರೆ ಯಾರು ಧರ್ಮವನ್ನು ರಕ್ಷಿಸುತ್ತಾರೋ ಅಂತವರನ್ನು ಧರ್ಮ ರಕ್ಷಿಸುತ್ತದೆ ಅಂತಾ. ನೀವೂ ಸಹ ನಮ್ಮ ಧರ್ಮರಕ್ಷಣೆಗಾಗಿ ಬದುಕನ್ನು ಮೀಸಲಿಡಬೇಕು. ಧರ್ಮದ್ರೋಹಿಗಳನ್ನು ಸೆದೆಬಡಿಯಬೇಕು. ರಾಮ ಹುಟ್ಟಿದ ಈ ಪವಿತ್ರ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕು. 

ಇಂತಹ ದೈವವಿರೋಧಿ ಕವಿತೆಗಳನ್ನು ಬ್ಯಾನ್ ಮಾಡುತ್ತೇವೆ. ಧರ್ಮವಿರೋಧಿ ಪಠ್ಯಗಳನ್ನು ನಿಷೇಧಿಸುತ್ತೇವೆ. ಸನಾತನ ಸಂಪ್ರದಾಯ ಸಾರುವ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರುತ್ತೇವೆ. ರವೀಂದ್ರನಾಥ ಟ್ಯಾಗೋರರು ಈ ಕವಿತೆಯನ್ನು ಜವಾಹರಲಾಲ್ ನೆಹರೂರವರನ್ನು ಮೆಚ್ಚಿಸಲು ಬರೆದದ್ದು ಅಂತಾ ನಾನು ಅಧ್ಯಯನ ಮಾಡಿ ತಿಳಿದುಕೊಂಡಿದ್ದೇನೆ. ಟ್ಯಾಗೋರವರು ಎಲ್ಲಿಯವರು? ಪಶ್ಚಿಮ ಬಂಗಾಳದವರು. ಆ ರಾಜ್ಯವನ್ನು ಸುದೀರ್ಘ ಕಾಲ ಆಳಿದ್ದು ಕಮ್ಯೂನಿಸ್ಟರು. ಹೀಗಾಗಿ ದೈವವಿರೋಧಿಯಾದ ಕಮ್ಯೂನಿಸ್ಟರ ಸಿದ್ದಾಂತವನ್ನು ಸಾರುವ ಕವಿತೆಯನ್ನು ಟ್ಯಾಗೂರರವರು ಬರೆದಿದ್ದಾರೆ ಎಂದು ನಮ್ಮ ಐಟಿ ಸೆಲ್ ನವರು ಸಂಶೋಧನೆ ಮಾಡಿ ಹೇಳಿದ್ದಾರೆ. ಆದ್ದರಿಂದ ನಮ್ಮ ದೇವರು ಧರ್ಮವನ್ನು ಅಪಮಾನ ಮಾಡುವ ಇಂತಹ ಕವಿತೆಗಳು ಪಠ್ಯದಲ್ಲಿ ಇರಬೇಕಾ? ಸಾಧ್ಯವೇ ಇಲ್ಲ. ನಮ್ಮ ಸನಾತನ ಸಂಪ್ರದಾಯವನ್ನು ಪ್ರಶ್ನಿಸುವ ಇಂತಹ ಪದ್ಯಗಳನ್ನು ಶಾಲೆಯಲ್ಲಿ ಮಕ್ಕಳು ಓದಬೇಕಾ? ಬೇಕಾಗಿಲ್ಲ. ಈ ಕವಿತೆಯಿಂದಾಗಿ ಕೋಟ್ಯಾಂತರ ಹಿಂದೂಗಳ ಭಾವನೆಗಳಿಗೆ ದಕ್ಕೆಯಾಗಿದೆ. ಈ ಕವಿತೆಯನ್ನು ಯಾರೇ ಬೋಧಿಸಲಿ ಅದನ್ನು ವಿರೋಧಿಸುತ್ತೇವೆ. ಪಾಠ ಮಾಡುವ ಶಿಕ್ಷಕರನ್ನು ವಜಾಮಾಡಲು ಒತ್ತಾಯಿಸುತ್ತೇವೆ. ಪಾಠಮಾಡುವ ಶಾಲೆಗಳ ಮುಂದೆ ಮಕ್ಕಳ ಜೊತೆ ಸೇರಿಕೊಂಡು ಗಲಾಟೆ ಮಾಡಿಸುತ್ತೇವೆ. ಇದಕ್ಕಾಗಿ ನಮ್ಮ ಭಜರಂಗಿಗಳು ಸದಾ ಸನ್ನದ್ದವಾಗಿರುತ್ತಾರೆ. ಮಕ್ಕಳೇ ಇಂತಹ ದೈವ ನಿಂದನೆಯ ಪಾಠವನ್ನು ಮಾಡುವ ಶಿಕ್ಷಕರನ್ನು ಬಹಿಷ್ಕರಿಸಿ. ಶಾಲೆಗಳನ್ನು ವಿರೋಧಿಸಿ. ಧರ್ಮದ್ರೋಹಿಗಳಿಂದ ನಮ್ಮ ಹಿಂದೂಧರ್ಮ ರಕ್ಷಿಸಲು ಎಲ್ಲಾ ರೀತಿಯ ತ್ಯಾಗ ಬಲಿದಾನಗಳಿಗೆ ಸಿದ್ದರಾಗಿ. ಜೈಶ್ರೀರಾಂ.. ಜೈ ಜೈ ಶ್ರೀರಾಂ.

- ಶಶಿಕಾಂತ ಯಡಹಳ್ಳಿ

     17-02-2024

ಚುನಾವಣಾ ಬಾಂಡ್; ಕೇಂದ್ರದ ನಡೆಗೆ ಸುಪ್ರೀಂ ತಡೆ

ತಹ ತಹ - 512

ಚುನಾವಣಾ ಬಾಂಡ್; ಕೇಂದ್ರದ ನಡೆಗೆ ಸುಪ್ರೀಂ ತಡೆ

ಈ ಸುಪ್ರೀಂ ಕೋರ್ಟ್ ಆದೇಶಗಳೇ ಹೀಗೆ. ಕೆಲವು ತೀರ್ಪುಗಳು ನಿರಾಸೆಯನ್ನು ಹುಟ್ಟಿಸಿದರೆ ಹಲವಾರು ತೀರ್ಪುಗಳು ನ್ಯಾಯಾಂಗದ ಮೇಲಿನ ಭರವಸೆಯನ್ನು ಹೆಚ್ಚಿಸುತ್ತವೆ.  ಫೆ.15 ರಂದು ಸುಪ್ರೀಂ ತೀರ್ಪು ಕೊಟ್ಟ ಏಟಿದೆಯಲ್ಲಾ ಬಿಜೆಪಿಯಂತಹ ಜಗತ್ತಿನ ಸಿರಿವಂತ ಪಕ್ಷವನ್ನೇ ನಡುಗಿಸಿದೆ. ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಕಪಾಳಮೋಕ್ಷ ಮಾಡಿದಂತಿದೆ.

ರಾಜಕೀಯ ಪಕ್ಷಗಳ ಚುನಾವಣೆ ನಿಧಿ ಸಂಗ್ರಹದ ಅಪಾರದರ್ಶಕತೆ ಕುರಿತ ಕೇಸೊಂದು ಕಳೆದ ಐದು ವರ್ಷಗಳಿಂದ ಸುಪ್ರೀಂ ಕೋರ್ಟಲ್ಲಿ ವಿಚಾರಣೆಯಲ್ಲಿತ್ತು.  ಈಗ ಮಹತ್ವದ ತೀರ್ಪು ಹೊರಬಂದಿದೆ. "ಚುನಾವಣಾ ಬಾಂಡ್ ನಿಂದ ಕಪ್ಪು ಹಣ ನಿಗ್ರಹ ಅಸಾಧ್ಯ. ಈ ಬಾಂಡ್ ಯೋಜನೆಯೇ ಅಸಂವಿಧಾನಿಕ.  ಈ ಯೋಜನೆಯೇ ಮೂಲಭೂತ ಹಕ್ಕುಗಳ ಉಲ್ಲಂಘನೆ. ರಾಜಕೀಯ ಪಕ್ಷಗಳಿಗೆ ಬಾಂಡ್ ಕೊಡುವುದನ್ನು ನಿಲ್ಲಿಸಿಬಿಡಿ" ಎಂದು ಸಿಜೆಐ ಡಿ.ವೈ.ಚಂದ್ರಚೂಡ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ಐತಿಹಾಸಿಕ ತೀರ್ಪೊಂದನ್ನು ನೀಡಿದೆ. ಈ ಬಾಂಡಗಳ ಕುರಿತು ಮಾಹಿತಿ ನೀಡುವಂತೆ ಎಸ್ ಬಿ ಐ ಬ್ಯಾಕಿಗೆ ಕೋರ್ಟ್ ಸೂಚನೆ ನೀಡಿದೆ. 

ಮೊದಲು ರಾಜಕೀಯ ಪಕ್ಷಗಳು ಇಪ್ಪತ್ತು ಸಾವಿರಕ್ಕಿಂತ ಹೆಚ್ಚಿನ ದೇಣಿಗೆ ಪಡೆದ ಲೆಕ್ಕವನ್ನು ಸಾರ್ವಜನಿಕವಾಗಿ ನೀಡಬೇಕಿತ್ತು. ಹಾಗೂ ಕಾರ್ಪೋರೇಟ್ ಕಂಪನಿಗಳು ತಮ್ಮ ಒಟ್ಟು ಲಾಭದ 7.5% ಅಥವಾ ಆದಾಯದ 10% ಕ್ಕಿಂತ ಹೆಚ್ಚಿನ ಮೊತ್ತವನ್ನು ಯಾವುದೇ ಪಕ್ಷಗಳಿಗೆ ದೇಣಿಗೆ ನೀಡಲು ಕಾನೂನಿನಲ್ಲಿ ಅವಕಾಶ ಇರಲಿಲ್ಲ. ಇದು ಚುನಾವಣೆಗೆ ಹೆಚ್ಚಿನ ಹಣ ಸಂಗ್ರಹಿಸಲು ಬಿಜೆಪಿ ಪಕ್ಷಕ್ಕೆ ಅಡೆತಡೆಯಾಗಿತ್ತು. ಈ ಕಟ್ಟಳೆಯನ್ನೇ ತೆಗೆದುಹಾಕಲು 2016 ಮತ್ತು 2017 ರಲ್ಲಿ ಬಿಜೆಪಿ ಸರಕಾರವು ಹಣಕಾಸು ಕಾಯಿದೆಯನ್ನೇ ಬದಲಾಯಿಸಿ ಎಲೆಕ್ಟ್ರೋರಲ್ ಬಾಂಡ್ ಯೋಜನೆಯನ್ನು ಪರಿಚಯಿಸಲು ಇದ್ದ ಕಾಯಿದೆಗೆ ತಿದ್ದುಪಡಿ ತಂದಿತು. 2018 ರಲ್ಲಿ ಚುನಾವಣಾ ಬಾಂಡ್ ಯೋಜನೆಯನ್ನು ಸಾಂವಿಧಾನಿಕ ತಿದ್ದುಪಡಿ ಇಲ್ಲದೇ ಹಣಕಾಸು ಮಸೂದೆಯಾಗಿ ಜಾರಿಗೆ ತರಲಾಯಿತು. ಆರ್ ಬಿ ಐ, ಚುನಾವಣಾ ಆಯೋಗ ಹಾಗೂ ಪ್ರತಿಪಕ್ಷಗಳ ಆಕ್ಷೇಪಣೆಯನ್ನು ಲೆಕ್ಕಿಸದೇ ಈ ಮಸೂದೆಯನ್ನು ಜಾರಿಗೆ ತರಲಾಯಿತು. ಈ ಯೋಜನೆ ಜಾರಿಗೆ ಬಂದ ನಂತರ ಸಂಗ್ರಹವಾದ ಒಟ್ಟು ದೇಣಿಗೆಯಲ್ಲಿ  ಕಾಂಗ್ರೆಸ್ ಪಕ್ಷದ್ದು 10% ಇದ್ದರೆ ಬಿಜೆಪಿ ಪಕ್ಷದ್ದು 57% ಹಾಗೂ ಬಾಕಿ ಎಲ್ಲಾ ಪಕ್ಷಗಳದ್ದು 33% ಇದೆ. ಬಿಜೆಪಿ ಪಕ್ಷ ಒಂದೇ ಅತೀ ಗರಿಷ್ಠ ಅಂದರೆ 9200 ಕೋಟಿಗೂ ಅಧಿಕ ದೇಣಿಗೆಯನ್ನು ಪಡೆದು ಶ್ರೀಮಂತ ಪಕ್ಷವಾಗಿ ಮುನ್ನಡೆ ಸಾಧಿಸಿದೆ. ಯಾರಿಂದ ಎಷ್ಟು ಪ್ರಮಾಣದ ದೇಣಿಗೆ ಬಂದಿದೆ ಲೆಕ್ಕ ಕೊಡಿ ಎಂದು ಕೇಳಿದಾಗ  "ಅದನ್ನು ಕೇಳುವ ಹಕ್ಕು ಸಾರ್ವಜನಿಕರಿಗಿಲ್ಲ" ಎಂದು ಸರಕಾರ ಹೇಳಿತು. ಸಾರ್ವಜನಿಕರಿಂದ ಸಂಗ್ರಹಿಸಿದ ಹಣಕ್ಕೆ ಲೆಕ್ಕ ಕೇಳುವುದು ಸಾರ್ವಜನಿಕರ ಹಕ್ಕು ಎಂದು ಕೋರ್ಟಲ್ಲಿ ಪ್ರಶ್ನಿಸಿದಾಗ " ಮೂಲಭೂತ ಹಕ್ಕುಗಳ ಮೇಲೆ ನಿರ್ಬಂಧ ಹೇರುವ ಹಕ್ಕು ಸರಕಾರಕ್ಕಿದೆ" ಎಂದು 2023 ಅಕ್ಟೋಬರ್ 30 ರಂದು ಸರಕಾರ ಸುಪ್ರೀಂ ಕೋರ್ಟ್‌ಗೆ ಅಪಿಡಿವಿಯಟ್ ಸಲ್ಲಿಸಿತು. ಯಾಕೆಂದರೆ ಚುನಾವಣೆಯಲ್ಲಿ ಹಣಬಲದಿಂದ ಗೆಲ್ಲಲು ಬಿಜೆಪಿ ಪಕ್ಷವು ದೊಡ್ಡ ಬಂಡವಾಳಶಾಹಿಗಳಿಂದ, ವಿದೇಶಿ ಹಾಗೂ ಸ್ವದೇಶಿ ಬಹುರಾಷ್ಟ್ರೀಯ ಕಾರ್ಪೋರೇಟ್ ಕಂಪನಿಗಳಿಂದ ಅಪಾರ ಪ್ರಮಾಣದ ದೇಣಿಗೆ ಸಂಗ್ರಹಿಸಿತ್ತು. ಯಾರು ಎಷ್ಟು ಹಣ ಕೊಟ್ಟರು ಎಂಬುದು ಯಾರಿಗೂ ಗೊತ್ತಾಗದ ಹಾಗೆ ಸಿಕ್ರೇಟ್ ಮೇಂಟೇನ್ ಮಾಡಬೇಕಾಗಿತ್ತು. ಅದಕ್ಕಾಗಿಯೇ ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸುವ ಹಕ್ಕನ್ನು ಬಿಜೆಪಿ ಸರಕಾರ ಕೋರ್ಟಲ್ಲಿ  ಸಮರ್ಥಿಸಿಕೊಂಡಿತು.

"ರಾಜಕೀಯದಲ್ಲಿ ಕಪ್ಪು ಹಣದ ಪ್ರಭಾವವನ್ನು ಕಡಿಮೆ ಮಾಡಲು ಹಾಗೂ ಪಕ್ಷಗಳಿಗೆ ದೇಣಿಗೆ ನೀಡಬಯಸುವ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ಕಾನೂನಾತ್ಮಕ ಪಾರದರ್ಶಕ ಕ್ರಮವನ್ನು ಜಾರಿಗೆಗೊಳಿಸಲು ಮತ್ತು ದೇಶದಲ್ಲಿ ರಾಜಕೀಯ ನಿಧಿ ವ್ಯವಸ್ಥೆಯನ್ನು ಶುದ್ದೀಕರಿಸಲು ಎಲೆಕ್ಟ್ರೊರಲ್ ಬಾಂಡ್ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ" ಎಂದು ಕೇಂದ್ರ ಸರಕಾರ ಹೇಳಿತು. ಆದರೆ ನಿಜವಾದ ಹಿಡನ್ ಅಜೆಂಡಾ ಬೇರೆಯದೇ ಆಗಿತ್ತು.  ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡುವವರು ಎಸ್ ಬಿ ಐ ಬ್ಯಾಂಕಲ್ಲಿ ಮಿತಿಯಿಲ್ಲದಷ್ಟು ಮೊತ್ತಕ್ಕೆ ಚುನಾವಣಾ ಬಾಂಡ್ ಖರೀದಿಸಿ ಪಕ್ಷಗಳಿಗೆ ಕೊಡಬಹುದಾಗಿತ್ತು.‌ ಹೀಗೆ ಬಾಂಡ್ ಮೂಲಕ ಹಣ ಕೊಡುವವರು ತಮ್ಮ ಹೆಸರು ಹಾಗೂ ಯಾರಿಗೆ ದೇಣಿಗೆ ಕೊಡಲಾಗುತ್ತದೆ ಎನ್ನುವ ಯಾವುದೇ ಮಾಹಿತಿಯನ್ನು ಬಾಂಡ್ ತೆಗೆದುಕೊಳ್ಳುವಾಗ ನಮೂದಿಸುವ ಅವಶ್ಯಕತೆ ಇಲ್ಲವಾಗಿದೆ.‌ ಹೀಗಾಗಿ ಈ ಬಾಂಡ್ ವ್ಯವಹಾರವೇ ಅನಾಮದೇಯವಾಗಿದೆ. ಯಾರು ಯಾರಿಗೆ ಎಷ್ಟು ಹಣ ಕೊಟ್ಟರು ಎನ್ನುವುದು ಯಾರಿಗೂ ಗೊತ್ತಾಗದ ಹಾಗೆ ಮಾಡಲಾಗಿದೆ. ವಿದೇಶಿ ಕಂಪನಿಗಳ ಭಾರತೀಯ ಅಂಗಸಂಸ್ಥೆಗಳಿಂದಲೂ ದೇಣಿಗೆ ಸಂಗ್ರಹಿಸಲು ಅನುಮತಿ ನೀಡಲಾಗಿದೆ. ಬೇನಾಮಿ ಹೆಸರಿನ ಶೆಲ್ ಕಂಪನಿಗಳೂ ಬೇನಾಮಿ ದೇಣಿಗೆ ಕೊಡಲು ಅನುಕೂಲವಾಗಿದೆ. ವಿಪರ್ಯಾಸ ಅಂದರೆ 2000 ರೂಗಳನ್ನು ನಗದು ರೂಪದಲ್ಲಿ ಪಕ್ಷಕ್ಕೆ ದೇಣಿಗೆ ನೀಡುವ ಪ್ರಜೆಗಳು ತಮ್ಮ ಹೆಸರನ್ನು ಬಹಿರಂಗಪಡಿಸಬೇಕಿದೆ. 

ಈ ಗುಟ್ಟಿನ ವ್ಯವಹಾರವನ್ನು ಪ್ರಶ್ನಿಸಿ, ಈ ಬಾಂಡ್ ಯೋಜನೆಯೇ ಅಸಂವಿಧಾನಿಕ ಹಾಗೂ ಪ್ರಜಾತಂತ್ರಕ್ಕೆ ಮಾರಕ ಎಂದು ಪ್ರಶಾಂತ ಭೂಷಣ್, ಕಪೀಲ್ ಸೀಬಲ್, ನಿಜಾಮ್ ಪಾಷಾ ರವರಂತಹ ಹಿರಿಯ ವಕೀಲರು ಸುಪ್ರೀಂ ಕೋರ್ಟಲ್ಲಿ ದಾವೆ ಹೂಡಿದರು. ಸಿಪಿಎಂ ಪಕ್ಷ ಹಾಗೂ ಕೆಲವಾರು ಸಂಘ ಸಂಸ್ಥೆಗಳೂ ಕೋರ್ಟಲ್ಲಿ ಪ್ರಶ್ನಿಸಿದವು. ಆದರೆ ಈ ಯಾವ ತಕರಾರು ಅರ್ಜಿಗಳ ವಿಚಾರಣೆ ಆಗದಂತೆ ಕೇಂದ್ರ ಸರಕಾರ ನ್ಯಾಯಾಧೀಶರ ಮೇಲೆ ಒತ್ತಡ ಹೇರಿತ್ತು ಎನ್ನುವ ಆರೋಪವೂ ಇದೆ. ಈ ಆರೋಪಕ್ಕೆ ನಾಲ್ಕು ವರ್ಷಗಳ ಕಾಲ ಕೋರ್ಟ್ ಲ್ಲಿ ವಿಚಾರಣೆ ನೆನಗುದಿಗೆ ಬಿದ್ದಿರುವುದೇ ಸಾಕ್ಷಿಯಾಗಿದೆ. ಕೊನೆಗೂ  2022 ಅಕ್ಟೋಬರ್ 31 ರಿಂದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ವಿಚಾರಣೆಯನ್ನು ಆರಂಭಿಸಿ 2024 ಫೆಬ್ರವರಿ 15 ರಂದು ಇಡೀ ಯೋಜನೆಯೇ ಅಸಂವಿಧಾನಿಕ ಎಂದು ತೀರ್ಪನ್ನು ಕೊಟ್ಟಿದೆ. ಕೇಂದ್ರ ಸರಕಾರಕ್ಕೆ ತೀವ್ರ ಮುಖಭಂಗವಾಗಿದೆ. ಆದರೆ ಮುಂದಿನ ಲೋಕಸಭಾ ಚುನಾವಣೆ ಖರ್ಚಿಗೆ ಎಷ್ಟು ಬೇಕೋ ಅದರ ಹಲವು ಪಟ್ಟು ಹಣವನ್ನು ಬಿಜೆಪಿ ಈಗಾಗಲೇ ಸಂಗ್ರಹಿಸಿಟ್ಟುಕೊಂಡಿದೆ. 

ಇಷ್ಟಕ್ಕೂ ಈ ಬಂಡವಾಳಿಗರು, ಬಹುರಾಷ್ಟ್ರೀಯ ಕಾರ್ಪೋರೇಟ್ ಕಂಪನಿಗಳು ಯಾಕೆ ಸಾವಿರಾರು ಕೋಟಿ ಹಣವನ್ನು ಆಳುವ ಪಕ್ಷಕ್ಕೆ ದಾನ ಮಾಡುತ್ತಾರೆ? ಉತ್ತರ ಬಹಳ ಸ್ಪಷ್ಟವಾಗಿದೆ. ಅವರು ಕೊಟ್ಟ ದಾನಕ್ಕಿಂತ ಹಲವು ಪಟ್ಟು ಲಾಭವನ್ನು ಅನುಕೂಲತೆಗಳನ್ನು ಆಳುವ ಸರಕಾರದಿಂದ ಮರಳಿ ಪಡೆಯುತ್ತಾರೆ. ಉದ್ಯಮಿಗಳ ಋಣ ಸಂದಾಯ ಮಾಡಲು ಆಳುವ ಪಕ್ಷ ಸದಾ ಸಿದ್ದವಾಗಿರುತ್ತದೆ. ಉದಾಹರಣೆಗೆ ರೈತರ ಸಾಲ ಮನ್ನಾ ಮಾಡದ ಕೇಂದ್ರ ಸರಕಾರ ಈ ಕಾರ್ಪೋರೇಟ್ ಕಂಪನಿಗಳ 15 ಲಕ್ಷ ಕೋಟಿ ಬ್ಯಾಂಕ್ ಸಾಲ ಮನ್ನಾ ಮಾಡುತ್ತದೆ. ಶೇಕಡಾ 8 ರಷ್ಟು ಕಾರ್ಪೋರೇಟ್ ತೆರಿಗೆ ಕಡಿಮೆ ಮಾಡುತ್ತದೆ. ಈ ದೇಶದ ಸಂಪನ್ಮೂಲಗಳನ್ನು ದೋಚಲು ಅಡ್ಡಿಯಾಗುವ ಅರಣ್ಯ ಕಾಯಿದೆ, ಕೃಷಿ ಕಾಯಿದೆಗಳನ್ನು ಬಂಡವಾಳಿಗರ ಹಿತಾಸಕ್ತಿಗೆ ಪೂರಕವಾಗಿ ತಿದ್ದುಪಡಿ ಮಾಡಲಾಗುತ್ತದೆ. ಲಾಭದಾಯಕ ಸಾರ್ವಜನಿಕ ಉದ್ದಿಮೆಗಳಲ್ಲಿರುವ ಸರಕಾರಿ ಶೇರುಗಳನ್ನು ಆದಾನಿ ಅಂಬಾನಿಯಂತವರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಉದ್ಯಮಿಗಳಿಗೆ ಅನುಕೂಲ ಆಗುವ ಹಾಗೆ ಕಾರ್ಮಿಕ ಕಾಯಿದೆಗಳಿಗೆ ಬದಲಾವಣೆ ತರಲಾಗುತ್ತದೆ. ದೇಶದ ಸಾರ್ವಜನಿಕ ಆಸ್ತಿಗಳಾದ ವಿಮಾನ ಹಾಗೂ ರೈಲು ನಿಲ್ದಾಣಗಳ ನಿರ್ವಹಣೆ,  ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮುಂತಾದವುಗಳು ಈಗಾಗಲೇ ಆದಾನಿ ಅಂಬಾನಿಗಳ ಪಾಲಾಗಿವೆ. ಅದಕ್ಕೆ ಬದಲಾಗಿ ಈ ಉದ್ಯಮಪತಿಗಳು ಉದಾರವಾಗಿ ಬೇನಾಮಿ ದೇಣಿಗೆಯನ್ನು ಆಳುವ ಹಾಗೂ ಗೆಲ್ಲುವ ಪಕ್ಷಕ್ಕೆ ಉದಾರವಾಗಿ ಕೊಡುತ್ತವೆ. ದಾನ ಕೊಟ್ಟವರ ಋಣ ಸಂದಾಯಕ್ಕೆ ಆಳುವ ಸರಕಾರವೂ ಬದ್ದವಾಗಿದೆ. 

ಈಗ ಸುಪ್ರೀಂ ಕೋರ್ಟ್ ತೀರ್ಮಾನದಿಂದ ಮೋದಿ ಸರಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. ಮತ್ತೆ ಇದೇ ಸರಕಾರ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದಿದ್ದೇ ಆದರೆ ಈ ಸುಪ್ರೀಂ ಕೋರ್ಟ್ ಆದೇಶವನ್ನೇ ಬುಡಮೇಲುಮಾಡಲು ಪ್ರಯತ್ನಿಸುತ್ತದೆ. ಸಾಧ್ಯವಾಗದಿದ್ದರೆ ಸುಗ್ರೀವಾಜ್ಞೆ ಮೂಲಕ ಅಂದುಕೊಂಡಿದ್ದನ್ನು ಖಂಡಿತಾ ಜಾರಿಗೊಳಿಸುತ್ತದೆ. ಇಡೀ ದೇಶದ ಸಂಪತ್ತು ಹಾಗೂ ಸಂಪನ್ಮೂಲಗಳನ್ನು ಲೂಟಿ ಮಾಡಲು ಕಾರ್ಪೋರೇಟ್ ಕಂಪನಿಗಳಿಗೆ ಅವಕಾಶವಾಗುತ್ತದೆ.

ಈ ದೇಶದ ಸಂವಿದಾನ, ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕೆಂದರೆ, ಸಾರ್ವಜನಿಕ ಸಂಪನ್ಮೂಲಗಳು ಜನರಿಗಾಗಿಯೇ ಇರಬೇಕೆಂದರೆ ಈ ದೇಶದ ಜನರು ಬಿಜೆಪಿ ಪಕ್ಷವನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಲೇಬೇಕಿದೆ. ಸೋಲಿಸದೇ ಹೋದರೆ ಈ ದೇಶದ ಸಂಪತ್ತು ಕಾರ್ಪೋರೇಟ್ ಕಂಪನಿಗಳ ಪಾಲಾಗುವುದರಲ್ಲಿ ಸಂದೇಹವೇ ಇಲ್ಲ. 

- ಶಶಿಕಾಂತ ಯಡಹಳ್ಳಿ

   15-02-2024

ಪೋಷಕರಿರಬೇಕು ಎಚ್ಚರದಿಂದ; ಮಕ್ಕಳನು ಕಾಪಾಡಿ ಮತಾಂಧರಿಂದ

ತಹ ತಹ - 511

ಪೋಷಕರಿರಬೇಕು ಎಚ್ಚರದಿಂದ; ಮಕ್ಕಳನು ಕಾಪಾಡಿ ಮತಾಂಧರಿಂದ


ಮಂಗಳೂರಿನಲ್ಲಿ ಸಂತ ಜೆರೋಸಾ ಎನ್ನುವ ಕ್ರಿಶ್ಚಿಯನ್‌ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಹಿಂದೂ ಧರ್ಮಕ್ಕೆ ಅವಹೇಳನ ಮಾಡಿದರು ಎನ್ನುವ ಸುದ್ದಿ ಸಂಘಪರಿವಾರಿಗರಿಗೆ ಸಿಟ್ಟು ಉದ್ವೇಗ ಹಾಗೂ ಸಂಭ್ರಮ ತಂದಿದೆ. ಮತೀಯ ಸಾಮರಸ್ಯ ಹಾಳು ಮಾಡಲು ಸದಾ ಕಾಯ್ದು ಕುಳಿತಿರುವ ಈ ಕೇಸರಿಪಡೆ ಕಡ್ಡಿಯನ್ನು ಗುಡ್ಡಮಾಡಿ ಕೋಮುಸಾಮರಸ್ಯಕ್ಕೆ ಬೆಂಕಿ ಹಚ್ಚಲು ಬೀದಿಗಿಳಿದಿದೆ. ಶಿಕ್ಷಕಿಯು ಮಕ್ಕಳ ಮುಂದೆ "ಶ್ರೀರಾಮನ ವಿರುದ್ದ ಮಾತಾಡಿದರಂತೆ, ಹಿಂದೂ ಧರ್ಮವನ್ನು ಅವಮಾನಿಸಿದರಂತೆ, ಕ್ರಿಶ್ಚಿಯನ್ ಧರ್ಮದ ಪರವಾಗಿ ಮಕ್ಕಳಿಗೆ ಪ್ರಚೋದನೆ ಮಾಡಿದರಂತೆ.." ಹೀಗೆ ಅನೇಕ ಗಾಸಿಪ್ ಸುದ್ದಿಗಳು ಕೇಸರಿ ಟ್ರೋಲಿಗರ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಹಿಂದೂ ಧರ್ಮವೇ ನಾಶವಾಗಿ ಮುಳುಗಿಯೇ ಹೋಯ್ತೇನೋ ಎನ್ನುವಂತೆ ಸಂಘಿ ಸಂತಾನಗಳು ಶಾಲೆಯ ಆವರಣದಲ್ಲಿ ಜಮಾವಣೆಗೊಂಡು ಮಕ್ಕಳು ಹಾಗೂ ಪೋಷಕರನ್ನೂ ಸೇರಿಸಿಕೊಂಡು ಘೋಷಣೆ ಕೂಗತೊಡಗಿದರು. ಕೋಮುವ್ಯಾಧಿ ಶಾಸಕ ವೇದವ್ಯಾಸ್  ಕಾಮತ್ ಬೆಂಗಳೂರಿಲ್ಲಿ ನಡೆಯುತ್ತಿದ್ದ ಅಧಿವೇಶನದಲ್ಲಿ ಭಾಗವಹಿಸುವುದು ಬಿಟ್ಟು ಶಾಲೆಯ ಮುಂದೆ ಲೋಕಲ್ ಗೂಂಡಾನಂತೆ ನಿಂತು ಮಕ್ಕಳು ಹಾಗೂ ಪೋಷಕರಲ್ಲಿ ಕೋಮುಭಾವನೆ ಪ್ರಚೋದಿಸುವುದರಲ್ಲಿ ನಿರತರಾದರು. ಶಾಲಾ ಮಕ್ಕಳ ಕೈಗೆ ಕೇಸರಿ ಬಾವುಟ ಕೊಟ್ಟು ಅವರ ಬಾಯಲ್ಲಿ ಜೈಶ್ರೀರಾಂ ಘೋಷಣೆ ಕೂಗಿಸಲಾಯಿತು. ಶಾಲಾ ಮಕ್ಕಳನ್ನು ಅವರು ವಿದ್ಯೆ ಕಲಿಯುವ ಶಾಲೆಯ ವಿರುದ್ಧ, ಪಾಠ ಕಲಿಸುವ ಶಿಕ್ಷಕರ ವಿರುದ್ಧ ಎತ್ತಿಕಟ್ಟುವಲ್ಲಿ ಸಂಘಪರಿವಾರ ಯಶಸ್ವಿಯಾಯಿತು. ಭದ್ರತೆ ಹಾಗೂ ನಿಯಂತ್ರಣಕ್ಕಾಗಿ ಪೊಲೀಸರು ಶಾಲೆಯನ್ನು ಸುತ್ತುವರೆದರು. 

ಇಷ್ಟಕ್ಕೂ ಆಗಿದ್ದಾದರೂ ಏನೆಂದರೆ ಶಾಲಾ ಶಿಕ್ಷಕಿ ರವೀಂದ್ರನಾಥ್ ಠಾಗೋರ್ ಅವರ ‘ವರ್ಕ್ ಇಸ್ ವರ್ಶಿಪ್’ ಎಂಬ ಪದ್ಯದ ಮೇಲೆ ಪಾಠ ಮಾಡುತ್ತಿದ್ದಾಗ ಸಂದರ್ಬೋಚಿತವಾಗಿ "ದೈವ, ದೇವರು ಹೃದಯಲ್ಲಿರಬೇಕು. ಗುಡಿ, ಮಸೀದಿ, ಮಂದಿರಗಳಲ್ಲಿ ಅಲ್ಲ" ಎಂದು ಹೇಳಿದರಂತೆ. "ಕೆಲಸವೇ ದೇವರು, ಕಾಯಕವೇ ಕೈಲಾಸ" ಎಂದು ಪಾಠದ ಭಾಗವಾಗಿ ಶಿಕ್ಷಕರು ವಿವರಿಸುವುದು ಅಪರಾಧವಾ? ಇದರಲ್ಲೇನು ತಪ್ಪಿದೆ. ಇದನ್ನು ಅನೇಕ ಸಾಮಾಜಿಕ ಸುಧಾರಕರು ಹೇಳಿದ್ದಾರೆ. ಕುವೆಂಪುರವರೇ "ನೂರು ದೇವರುಗಳ ನೂಕಾಚೆ ದೂರ" ಎಂದು ಬರೆದಿದ್ದಾರೆ. ಬಸವಣ್ಣನವರು " ಕಲ್ಲು ಮಣ್ಣು ಮರ ಪಂಚಲೋಹದ ದೇವರು ದೇವರಲ್ಲ" ಎಂದು ವಚನ ಬರೆದಿದ್ದಾರೆ. ಆದರೆ ಇಲ್ಲಿ ಈಗ ದೇವರು ಮನದಲ್ಲಿರಲಿ ಎಂದು ಹೇಳಿದ್ದು ಒಬ್ಬ ಕ್ರಿಶ್ಚಿಯನ್ ಶಿಕ್ಷಕಿ ಹಾಗೂ ಅದನ್ನು ಹೇಳಿದ್ದು ಕ್ರಿಶ್ಚಿಯನ್ ಶಾಲೆಯಲ್ಲಿ ಎನ್ನುವುದೇ ಈ ಮತಾಂಧರಿಗೆ ಆಘಾತಕಾರಿ ಎನ್ನಿಸಿತು. ಧರ್ಮದ ಗುತ್ತಿಗೆ ಪಡೆದ ಸಂಘಿಗಳು ಗುಂಪು ಕಟ್ಟಿಕೊಂಡು ಅಲ್ಪಸಂಖ್ಯಾತರ ಶಾಲೆಯ ಮೇಲೆ ದಂಡೆತ್ತಿ ಬಂದು ದಾಳಿಗೆ ಮುಂದಾದರು. ಶಾಲೆಯ ಮಕ್ಕಳು ಹಾಗೂ ಪೋಷಕರಲ್ಲಿ ಕೋಮು ಪ್ರಚೋದನೆಗೆ ಕುಮ್ಮಕ್ಕು ಕೊಟ್ಟರು. ಗೋದಿ ಮಾಧ್ಯಮಗಳು ಇನ್ನಷ್ಟು ಒಗ್ಗರಣೆ ಹಾಕಿ ಸುದ್ದಿ ಪ್ರಸಾರಮಾಡಿದವು. ಶಾಲೆಯ ಆವರಣದಲ್ಲಿ ಸೃಷ್ಟಿಸಲಾದ ಉದ್ವಿಗ್ನತೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಕೇಸರಿಪಡೆ ಪ್ರಯತ್ನಿಸಿತು. ಕೊನೆಗೂ ಈ ಕೋಮುಕ್ರಿಮಿಗಳ ದಬ್ಬಾಳಿಕೆಗೆ ಮಣಿದ ಶಾಲಾಡಳಿತ ಅನಿವಾರ್ಯವಾಗಿ ಆ ಶಿಕ್ಷಕಿಯನ್ನು ಅಮಾನತ್ತು ಮಾಡಿತು. ಮಾನಸಿಕ ಒತ್ತಡ ತಾಳಲಾಗದೇ ಆ ಶಿಕ್ಷಕಿ ಆಸ್ಪತ್ರೆ ಸೇರಬೇಕಾಯ್ತು. ಆದರೂ ಈ ಮತಾಂಧರ ಆಟಾಟೋಪ ಮುಂದುವರೆಯಿತು.

ಇಷ್ಟಕ್ಕೂ ಸಂತ ಜೆರೋಸಾ ಶಾಲೆಯಲ್ಲಿ ಓದುತ್ತಿರುವವರು ಮಧ್ಯಮವರ್ಗದ ಮಕ್ಕಳು. ಬೇರೆ ಖಾಸಗಿ ಶಾಲೆಗೆ ಹೋಲಿಸಿದರೆ ಇಲ್ಲಿ ಪೀಜ್ ತುಂಬಾ ಕಡಿಮೆ. ಉತ್ತಮ ಶಿಕ್ಷಣ ಹಾಗೂ ಶಿಸ್ತಿಗೆ ಹೆಸರಾಗಿದೆ. ಶಿಕ್ಷಣ ದಾಸೋಹ ನಿರತ ವಿದ್ಯಾಲಯಕ್ಕೆ ಮತೀಯ ಮಸಿ ಬಳೆಯುವ ಪ್ರಯತ್ನವೇ ಅಮಾನವೀಯ. ಇಲ್ಲಿಯ ಕೆಲವು ವಿದ್ಯಾರ್ಥಿನಿಯರಲ್ಲಿ ಅದೆಷ್ಟು ಧರ್ಮಾಂಧತೆಯ ವಿಷ ಬೀಜ ಬಿತ್ತಲಾಗಿದೆ ಎಂಬುದು ಕೆಲವು ವಿದ್ಯಾರ್ಥಿನಿಯರ ಹೇಳಿಕೆಯಿಂದಲೇ ಗೊತ್ತಾಗುತ್ತದೆ. "ಶಿಕ್ಷಕಿಯರು ಕ್ರಾಸ್ ಹಾಕಿಕೊಂಡು ಬರುತ್ತಾರೆ, ನಮಗೆ ಏನೂ ಹಾಕಬಾರದು ಎಂದು ನಿರ್ಬಂಧಿಸುತ್ತಾರೆ" ಎಂದು ಒಬ್ಬ ವಿದ್ಯಾರ್ಥಿನಿ ಮೀಡಿಯಾ ಮುಂದೆ ಮಾತಾಡುತ್ತಾಳೆ. ಈ ರೀತಿಯ ಅಸಮಾಧಾನ ಇದ್ದಲ್ಲಿ ಈ ಶಾಲೆಗೆ ಯಾಕೆ ಆ ಹುಡುಗಿ ದಾಖಲಾಗಬೇಕು? ತಮ್ಮ ಆಚಾರ ವಿಚಾರಗಳಿಗೆ ಸೂಕ್ತವಾಗುವ ಶಾಲೆಗೆ ಪೋಷಕರು ಸೇರಿಸಬಹುದಾಗಿತ್ತಲ್ಲವೇ? ಇದಕ್ಕಿಂತಲೂ ಹೆಚ್ಚಾಗಿ ಈ ಹಿಂದೂಧರ್ಮಿಯರಲ್ಲಿ "ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ" ಎಂದು ಗುರುವಿನಲ್ಲಿ ತ್ರಿಮೂರ್ತಿಗಳನ್ನು ಕಾಣಲಾಗುತ್ತದೆ. ಅಂತಹ ಗುರುಗಳ ವಿರುದ್ದವೇ ವಿದ್ಯಾರ್ಥಿಗಳು ತಿರುಗಿ ಬಿದ್ದರೆ, ಬಾಹ್ಯ ಶಕ್ತಿಗಳು ಗುರುಗಳ ಮೇಲೆ ವಿದ್ಯಾರ್ಥಿಗಳನ್ನು ಎತ್ತಿಕಟ್ಟಿದರೆ ಗುರುಶಿಷ್ಯ ಸಂಬಂಧಗಳಿಗೆ ಬೆಲೆ ಎಲ್ಲಿ?

ಆಯ್ತು..ಈ ಸಂಘಿಗಳ ಆರೋಪದಂತೆ ಶಿಕ್ಷಕಿ ಹಿಂದೂ ಧರ್ಮಕ್ಕೆ ಅಪಮಾನ ಆಗುವಂತೆ ಮಾತಾಡಿ ಮಹಾಪರಾಧ ಮಾಡಿದರೂ ಎಂದುಕೊಳ್ಳೋಣ. ಅದನ್ನು ಮಕ್ಕಳು ತಮ್ಮ ಪೋಷಕರಿಗೆ ಹೇಳಿದರು ಎಂದುಕೊಳ್ಳೋಣ. ಆ ಪೋಷಕರು ಹೋಗಿ ದೂರು ಕೊಡಬೇಕಾದದ್ದು ಶಾಲೆಯ ಮುಖ್ಯರಸ್ಥರಿಗೆ ಹೊರತು ಈ ಸಂಘಿ ಭಜರಂಗಿ ನಾಯಕರುಗಳಿಗಲ್ಲ. ಹೋಗಲಿ ಧರ್ಮಕ್ಕೆ ಅಪಚಾರ ಆಗಿದ್ದರೆ  ಮಾಮೂಲಿನಂತೆ 'ಹಿಂದೂ ಧಾರ್ಮಿಕ ನಂಬಿಕೆಗೆ ಧಕ್ಕೆ ಆಗಿದೆ ಹಿಂದೂಗಳ ಭಾವನೆಗೆ ನೋವಾಗಿದೆ' ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದಾಗಿತ್ತು. ಶಿಕ್ಷಣ ಇಲಾಖೆಗೆ ಕಂಪ್ಲೆಂಟ್ ಮಾಡಬಹುದಾಗಿತ್ತು. ತನಿಖೆಗೆ ಆಗ್ರಹಿಸಬಹುದಾಗಿತ್ತು. ನ್ಯಾಯಾಲಯಕ್ಕೂ ಹೋಗಬಹುದಾಗಿತ್ತು. ಹೀಗೆ ಸಾಂವಿಧಾನಿಕ ಕ್ರಮಕ್ಕೆ ಆಗ್ರಹಿಸಿದರೆ ಈ ಸಂಘಿಗಳಿಗೆ ಪ್ರಚಾರ ಸಿಗುತ್ತಿರಲಿಲ್ಲ, ಸಮಾಜದಲ್ಲಿ ಕೋಮುಪ್ರಚೋದನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ, ಹಿಂದೂಗಳನ್ನು ಭಾವನಾತ್ಮಕವಾಗಿ ಪ್ರಚೋದಿಸಿ ಅಲ್ಪಸಂಖ್ಯಾತರ ವಿರುದ್ದ ಎತ್ತಿಕಟ್ಟಲು ಆಗುತ್ತಿರಲಿಲ್ಲ. ಶಾಲಾ ಮಕ್ಕಳು ಮತ್ತು ಪೋಷಕರನ್ನು ಪ್ರಚೋದಿಸಿ ಜೈಶ್ರೀರಾಂ ಹೇಳಿಸಲು ಆಗುತ್ತಿರಲಿಲ್ಲ. ಕೋಮುಭಾವನೆ ಕೇರಳಿಸದೇ ಇದ್ದರೆ ಸಂಘ ಪರಿವಾರಕ್ಕೆ ಅಸ್ತಿತ್ವವೇ ಇರುವುದಿಲ್ಲ. ಅನ್ಯ ಧರ್ಮದ್ವೇಷ ಬಿತ್ತದೇ ಹೋದರೆ ಬಿಜೆಪಿಗರಿಗೆ ಓಟು ಸಿಕ್ಕುವುದಿಲ್ಲ.ಈ  ಹಿಂದೆಯೂ ಕೂಡಾ ಉಡುಪಿ ಕಾಲೇಜಲ್ಲಿ ಹಿಜಾಬ್ ವಿಷಯ ಮುಂದಿಟ್ಟುಕೊಂಡು ಕಾಲೇಜು ವಿದ್ಯಾರ್ಥಿಗಳನ್ನು ಶಿಕ್ಷಕರು ಹಾಗೂ ಕಾಲೇಜಿನ ವಿರುದ್ದ ಎತ್ತಿಕಟ್ಟಿದವರೂ ಇದೇ ಸಂಘಿಗಳು. ಇವರ ದ್ವೇಷರಾಜಕೀಯಕ್ಕೆ ಬಲಿಯಾಗಿ ವಿದ್ಯೆಯಿಂದಲೇ ದೂರಾದವರು ಹಲವಾರು ಮುಸ್ಲಿಂ ವಿದ್ಯಾರ್ಥಿನಿಯರು. ಧಾರ್ಮಿಕ ಅಸಹನೆ ಬಿತ್ತಲು ವಿದ್ಯಾಲಯಗಳನ್ನು ಟಾರ್ಗೆಟ್ ಮಾಡುತ್ತಿರುವ ಸಂಘಿಗಳು ಶಾಲಾಕಾಲೇಜು ಮಕ್ಕಳ ಮನಸಲ್ಲೂ ಮತಾಂಧತೆಯ ನಂಜು ತುಂಬುತ್ತಿರುವುದು ಅಕ್ಷಮ್ಯ.

ಈ ಸಂಘಿಗಳು ಪ್ರತಿಪಾದಿಸುವ ಹಿಂದೂ ಧರ್ಮ ಇಷ್ಟೊಂದು ದುರ್ಬಲವಾಗಿದೆಯಾ? ಯಾವುದೋ ಒಂದು ಶಾಲೆಯಲ್ಲಿ ಯಾರೋ ಒಬ್ಬ ಶಿಕ್ಷಕಿ "ದೇವರು ಗುಡಿ ಮಸೀದಿ ಮಂದಿರಗಳಲ್ಲಿ ಇಲ್ಲಾ, ಮನುಷ್ಯರ ಮನಸ್ಸಲ್ಲಿರುವುದು" ಎಂದು ಹೇಳಿದ ಕೂಡಲೇ ಧರ್ಮ ಅವನತಿ ಹೊಂದಿದಂತಾಯಿತಾ? ಹೋಗಲಿ ಹಾಗೆ ಶಿಕ್ಷಕಿ ಹೇಳಿದ್ದರು ಅಂದ ಕೂಡಲೇ ಮಕ್ಕಳೆಲ್ಲಾ ಮಂದಿರಗಳಿಗೆ ಹೋಗುವುದನ್ನು ಬಿಟ್ಟು ಬಿಡುತ್ತಾರಾ? ಅಥವಾ ಮಕ್ಕಳ ಪೋಷಕರು ದೇವರ ಪೂಜೆ ನಿಲ್ಲಿಸುತ್ತಾರಾ? ಇದು ಯಾವುದೂ ಸಾಧ್ಯವಿಲ್ಲವಾದರೂ ಧರ್ಮವೇ ನಾಶವಾದಂತೆ ಈ ಕೋಮುವಾದಿಗಳು ಬೀದಿಗಿಳಿದು ಅಬ್ಬರಿಸುವುದರ ಹಿಂದೆ ಇರುವುದು ದೇವರ ಮೇಲಿನ ಭಕ್ತಿಯೂ ಅಲ್ಲಾ, ಧರ್ಮದ ಮೇಲಿರುವ ಅಭಿಮಾನವು ಅಲ್ಲಾ. ಕೇವಲ ಜನರ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸಿ ಮತಾಂಧತೆಯನ್ನು ಕೆರಳಿಸಿ ಮತಕ್ರೂಢಿಕರಣ ಮಾಡುವ ಶಡ್ಯಂತ್ರದ ಭಾಗವಷ್ಟೇ. 

ಶಾಲೆಯಲ್ಲಿ ಕಲಿಯುವ ಮಕ್ಕಳ ಮನಸ್ಸಲ್ಲೂ ಧಾರ್ಮಿಕ ಅಸಹನೆ ಬಿತ್ತುವ ಕೋಮುವಾದಿಗಳ ಪ್ರಯತ್ನ ಅಪಾಯಕಾರಿಯಾಗಿದೆ. ಈ ಮಕ್ಕಳ ಪೋಷಕರು ಈಗಲೇ ಈ ಕೋಮುವ್ಯಾಧಿಗಳ ಹುನ್ನಾರವನ್ನು ಅರ್ಥ ಮಾಡಿಕೊಂಡು ಎಚ್ಚರಗೊಳ್ಳಬೇಕಿದೆ. ಇಲ್ಲದೇ ಹೋದರೆ ಇವರ ಮಕ್ಕಳು ಕೈಯಲ್ಲಿ ಕೇಸರಿ ಬಾವುಟ ಹಿಡಿದು ಬೀದಿಗಳಲ್ಲಿ ಘೋಷಣೆ ಕೂಗುತ್ತಾ ತಮ್ಮ ವಿದ್ಯಾಭ್ಯಾಸ ಹಾಗೂ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ. ಕೋಮು  ಪ್ರಚೋದನೆ ಮಾಡುವ ಸಂಘಿ  ನಾಯಕರುಗಳು, ಬಿಜೆಪಿ ಶಾಸಕರುಗಳ ಮಕ್ಕಳು ಮಾತ್ರ ಪ್ರತಿಷ್ಟಿತ ಶಾಲೆಗಳಲ್ಲಿ, ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡಿ, ಸಿಕ್ಕ ಉತ್ತಮ ಅವಕಾಶಗಳನ್ನು ಬಳಸಿಕೊಂಡು ಉದ್ದಾರವಾಗುತ್ತಾರೆ. ಯಾವುದೇ ಬಿಜೆಪಿಯ ಶಾಸಕರು ಹಾಗೂ ನಾಯಕರುಗಳ ಮಕ್ಕಳು ಮೊಮ್ಮಕ್ಕಳು ಯಾವತ್ತಾದರೂ ಕೇಸರಿ ಬಾವುಟ ಹಿಡಿದು ಬೀದಿಯಲ್ಲಿ ನಿಂತು ಘೋಷಣೆ ಕೂಗುತ್ತಿರುವ ಉದಾಹರಣೆಗಳು ಇವೆಯಾ? ತಮ್ಮ ಮಕ್ಕಳು ಕೋಮುಗಲಭೆಗಳಲ್ಲಿ ಭಾಗವಹಿಸಿ ಕೇಸು ಹಾಕಿಸಿಕೊಂಡು ಪೊಲೀಸ್ ಠಾಣೆಯಲ್ಲಿ ಹೊಡೆಸಿಕೊಂಡು ಕೋರ್ಟು ಕಚೇರಿ ಅಲೆದಾಡುತ್ತಾ ಭವಿಷ್ಯವನ್ನು ಹಾಳುಮಾಡಿಕೊಳ್ಳುವುದನ್ನು ಯಾವ ಪೋಷಕರು ಬಯಸುತ್ತಾರೆ? ಹಾಗಾಗಬಾರದು ಎನ್ನುವುದೇ ಆದಲ್ಲಿ ಮತಾಂಧರ ಪ್ರಚೋದನೆಯಿಂದ ಪೋಷಕರು ದೂರ ಇರಬೇಕಾಗಿದೆ. ಧರ್ಮಾಂಧರ ನೆರಳೂ ತಮ್ಮ ಮಕ್ಕಳ ಮೈಮನಸುಗಳ ಮೇಲೆ ಬೀಳದಂತೆ ನೋಡಿಕೊಳ್ಳಬೇಕಿದೆ. ಈ ಕೋಮು ಕಲಹ, ಧಾರ್ಮಿಕ ಅಸಹನೆಗಿಂತಲೂ ತಮ್ಮ ಮಕ್ಕಳ ಭವಿಷ್ಯವೇ ಮುಖ್ಯವೆಂದು ಎಲ್ಲಾ ಪೋಷಕರೂ ಅರಿಯಬೇಕಿದೆ. ಆಗಲೇ ಈ ಸಂಘಪರಿವಾರದ ಶಡ್ಯಂತ್ರಗಳನ್ನು ಸೋಲಿಸಬಹುದಾಗಿದೆ. ಮಕ್ಕಳನ್ನು ಧಾರ್ಮಿಕ ಸಹಿಷ್ಣುಗಳಾಗಿ ಬೆಳೆಸಬೇಕಿದೆ. ಈ ದೇಶವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸಬೇಕಿದೆ.

ಏಳನೇ ತರಗತಿಯ ಪಠ್ಯಪುಸ್ತಕದಲ್ಲಿರುವ Work is Worship ಎನ್ನುವ ರವೀಂದ್ರನಾಥ ಟಾಗೋರರ ಕವಿತೆ ಹಾಗೂ ಕನ್ನಡದಲ್ಲಿ ಕವಿತೆಯ  ಸಂಕ್ಷಿಪ್ತ  ಸಾರ ಈ ಕೆಳಗಿನಂತಿದೆ. 

Leave this chanting and singing 
and telling of beads! Whom dost thou 
worship in this lonely dark corner of a 
temple with doors all shut? Open 
thine eyes and see thy God is not before thee
He is there the tiller is tilling 
the hard ground and where the path-maker 
is breaking stones. He is with them 
in sun and shower, and his 
garment is covered with dust. Put off 
thy holy mantle and even like him come 
down on the dusty soil!

Deliverance? Where is this deliverance
to be found? Our master himself
has joyfully  taken upon him the bonds of 
creation; he is bound with us all forever.
Come out of thy meditations and 
leave aside thy flowers and incense!
What harm is there if thy clothes 
become tattered and stained?Meet 
him and stand by him in toil and in 
sweat of thy brow.

ಕವಿತೆಯ ಪ್ರಕಾರ ದೇವರು ಕೇವಲ ಆರಾಧನಾಲಯಗಳಿಗೆ ಸೀಮಿತವಲ್ಲ. ಕಣ್ಣು ಮುಚ್ಚಿ ಪ್ರಾರ್ಥಿಸುವುದರಿಂದ ಏನನ್ನೂ ಸಾಧಿಸಲಾಗದು. ಆದುದರಿಂದ ಭಜನೆ, ಮತ್ತು ಮಣಿಗಳ ಜಪವನ್ನು ತ್ಯಜಿಸಿ ತಮ್ಮ ಅಜ್ಞಾನದ ಕಣ್ಣುಗಳನ್ನು ತೆರೆದು ಉಳುಮೆ ಅಥಾವಾ ಕಾಯಕಕ್ಕೆ ಹೆಚ್ಚಿನ ಗಮನ ಹರಿಸಬೇಕು. ಕಾಯಕದ ಸಂದರ್ಭದಲ್ಲಿ ದೇವರ ಇರುವಿಕೆಯನ್ನು ಗಮನಿಸಬಹುದು. 

ದೇವರನ್ನು ಬಿಸಿಲು,ಮಳೆಯ ರೂಪದಲ್ಲೂ ಸಂಕಲ್ಪಿಸಬಹುದು. ಧೂಳಿನ ರೂಪವನ್ನು ದೇವರ ವಸ್ತ್ರವೆಂದೂ ತಿಳಿದುಕೊಳ್ಳಬಹುದು. ಆದುದರಿಂದ ತನ್ನ ಪಾವಿತ್ರ್ಯತೆಯೆಂಬ ಕವಚವನ್ನು ತೆಗೆದು ದೇವರಂತೆ ಗೋಚರವಾಗುವ ಮಣ್ಣು ಹಾಗೂ ದೇಹಕ್ಕೆ  ಅಂಟಿಕೊಳ್ಳುವ ಧೂಳಿನಲ್ಲಿ ದುಡಿಯುವ ಕಾಯಕಕ್ಕೆ ಇಳಿಯಿರಿ. ಜೊತೆಗೆ ದೇವಾಲಯಗಲ್ಲಿ ಹಾಗೂ ದೇವಾಲಯಗಳಿಗೋಸ್ಕರ  ಸಮಯ ವ್ಯರ್ಥ ಮಾಡುವ ಬದಲು ಕಾಯಕ/ಕೆಲಸಗಳನ್ನು ಮಾಡಿ ಮುಕ್ತಿ ಪಡೆಯಿರಿ ಎಂದು ವಿಶ್ವಾಸಿಗಳಿಗೆ ಟಾಗೋರರು ಕವಿತೆಯ ಮೂಲಕ ಸಲಹೆ ಮಾಡುತ್ತಾರೆ.

ದೇವರು ಸೃಷ್ಟಿಯ ಮಿತಿಗಳನ್ನು ತನ್ನ ಮೇಲೆ ಅರಗಿಸಿಕೊಂಡು ಮನುಷ್ಯನೊಳಗೆ ಶಾಶ್ವತವಾಗಿ ಬೀಡುಬಿಟ್ಟಿದ್ದಾರೆ  . ಆದುದರಿಂದ ಭಕ್ತರು ತನ್ನ ಧ್ಯಾನವನ್ನು ತ್ಯಜಿಸಿ ಮಂದಿರಕ್ಕೆ ಹೂವು ಮತ್ತು ಧೂಪವನ್ನು ಹೊತ್ತುಕೊಂಡು ಹೋಗುವುದನ್ನು ಬಿಟ್ಟು ದೇವರು ನಮ್ಮಲ್ಲಿಯೇ ಇದ್ದಾನೆ ಎಂದು ಅರಿತುಕೊಳ್ಳುವಂತೆ ಟಾಗೋರರು ವಿಶ್ವಾಸಿಗಳನ್ನು ಎಚ್ಚರಿಸುತ್ತಾರೆ.
(ಇಲ್ಲಿ ಮಂದಿರ ಅಂದರೆ  ಎಲ್ಲಾ ಧರ್ಮಗಳ ಅರಾಧಾನಲಯಗಳು ಎಂದರ್ಥ .ರಾಮ ಮಂದಿರ ಎಂಬ ಪ್ರತ್ಯೇಕ ಅರ್ಥವಿಲ್ಲ)

ಹೋಗಲಿ ಈ ಕವಿತೆಯ ಕುರಿತು ಅರ್ಥ ತತ್ವಕ್ಕೆ ಭಂಗ ಬರದಂತೆ ಈ ಮತಾಂಧ ಶಾಸಕರಾದ ವೇದವ್ಯಾಸ ಹಾಗೂ ಭರತ್ ಶೆಟ್ಟಿ ಪಾಠ ಮಾಡಲು ಸಾಧ್ಯವಿದೆಯಾ? ಹೋಗಲಿ ಸಂಘ ಪರಿವಾರದ ಯಾರಾದರೂ ಈ ಕವಿತೆಯ ಅರ್ಥವನ್ನು ತಿರುಚದೇ ವಿವರಿಸಲು ಸಾಧ್ಯವೇ? ಕೋಮುವ್ಯಾಧಿ ಪೀಡಿತರಿಗೆ ಕವಿತೆಯಾಗಲಿ, ಕವಿತೆಯ ಅಂತರಾರ್ಥವಾಗಲೀ ತಿಳಿಯಲು ಸಾಧ್ಯವಿಲ್ಲ. ತಿಳಿದಿದ್ದರೆ ಹೀಗೆ ತನ್ನ ಕೆಲಸ ಮಾಡಿದ ಶಿಕ್ಷಕಿಯ ಅಮಾನತ್ತಿಗೆ ಒತ್ತಾಯಿಸುತ್ತಲೂ ಇರಲಿಲ್ಲ. ಮಕ್ಕಳಲ್ಲಿ ಮತಾಂಧತೆ ಬಿತ್ತುತ್ತಲೂ ಇರಲಿಲ್ಲ.

- ಶಶಿಕಾಂತ ಯಡಹಳ್ಳಿ
14-02-2024

ಸಂವಿಧಾನ ವಿರೋಧಿ ಕಣ್ಣನ್ ಎನ್ನುವ ಸನಾತನಿ

ತಹ ತಹ - 510

ಸಂವಿಧಾನ ವಿರೋಧಿ ಕಣ್ಣನ್ ಎನ್ನುವ ಸನಾತನಿ


ಬೆಂಗಳೂರಿನಿಂದ ಹೊರಟು ಇನ್ನೇನು ಚಿಕ್ಕಮಗಳೂರು ತಲುಪಬೇಕೆನ್ನುವಷ್ಟರಲ್ಲಿ ಎಡಗಡೆ ಹಿರೇಮಗಳೂರು ಅಂತಾ ಊರಿದೆ. ಅಲ್ಲೊಂದು ಮುಜರಾಯಿ ಇಲಾಖೆಯ ರಾಮಮಂದಿರ. ಅದಕ್ಕೊಬ್ಬ ಪ್ರಧಾನ ಅರ್ಚಕ. ಹೆಸರು ಹಿರೇಮಗಳೂರು ಕಣ್ಣನ್. ಎಲ್ಲಾ ಗುಡಿಗಳ ಪುರೋಹಿತರು ಸಂಸ್ಕೃತದಲ್ಲಿ ಮಂತ್ರ ಪಠಣ ಮಾಡಿದರೆ ಈ ಪ್ರಕಾಂಡ ಪಂಡಿತ ನಾಮದಾರಿ ಅರ್ಚಕ ಕನ್ನಡದಲ್ಲಿ ಮಂತ್ರಗಳನ್ನು ಹೇಳುವುದರಿಂದಾಗಿ ಪ್ರಸಿದ್ದಿ. ಈ ಅಸಾಧ್ಯ ಅಸ್ಕಲಿತ ಮಾತಿನ ಮಲ್ಲನನ್ನು ಹಲವಾರು ಹಾಸ್ಯ ಕಾರ್ಯಕ್ರಮಗಳಲ್ಲಿ ಕಾಣಬಹುದಾಗಿದೆ. 

ಇಂತಿಪ್ಪ ಪೂಜಾರಿಗಳು ಇತ್ತೀಚೆಗೆ ಸುದ್ದಿಯಾಗಿದ್ದು ಅರ್ಚಕರಿಗರ ಮುಜರಾಯಿ ಇಲಾಖೆ ಕೊಡುವ ಸಂಬಳವನ್ನು ಅತಿಯಾಗಿ ಪಡೆದಿದ್ದಕ್ಕಾಗಿ. ಅಧಿಕಾರಿಗಳ ಜೊತೆ ಹೊಂದಾಣಿಕೆಯಿಂದಾಗಿ ಪಡೆದ ಹೆಚ್ಚುವರಿ ಲಕ್ಷಾಂತರ ರೂಪಾಯಿ ಸಂಬಳವನ್ನು ವಾಪಸ್ ಸರಕಾರಕ್ಕೆ ಪಾವತಿಸಬೇಕೆಂದು ಜಿಲ್ಲಾ ವರಿಷ್ಟಾಧಿಕಾರಿಗಳು ಆದೇಶಿಸಿದ್ದರು. ಆದರೂ ರಾಮನ ಹೆಸರು, ರಾಮಭಕ್ತರ ಬೆಂಬಲ ಹಾಗೂ ತನ್ನ ಪುರೋಹಿತಶಾಹಿ ಪ್ರಭಾವ ಬಳಸಿ ಈ ಆದೇಶವನ್ನು ಹಿಂಪಡೆಯುವಂತೆ ಮಾಡಿದ್ದು ಈ ಅರ್ಚಕ ಕಣ್ಣನ್ ರವರ ಇತ್ತೀಚಿನ ಮಹಾಸಾಧನೆ.

ಯಾವಾಗ ಕರ್ನಾಟಕದ ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆಯ ಅಗತ್ಯವಿಲ್ಲವೆಂದು ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯನವರು ಘೋಷಿಸಿದರೋ ಆಗ ಬಹುತೇಕ ಪುರೋಹಿತರಂತೆ ಈ ಕಣ್ಣನ್ ರವರಿಗೂ ಉರಿಕಿತ್ತುಕೊಂಡು ಬಂತು. 

" ವಸ್ತ್ರಸಂಹಿತೆ ಇಲ್ಲವೆಂದು ಸರ್ಕಾರ ಹೇಳಿದಾಗ ಯಾರೂ ಯಾಕೆ ಪ್ರಶ್ನಿಸಲಿಲ್ಲ? ಬೇಕಾದ ಹಾಗೆ ಬಟ್ಟೆ ಧರಿಸಿಕೊಂಡು ಭಕ್ತರು ದೇವಸ್ಥಾನಕ್ಕೆ ಬರುವುದಾದರೆ ಧಾರ್ಮಿಕ ಸ್ವಾತಂತ್ರ್ಯ ಉಳಿಯುವುದಾದರೂ ಹೇಗೆ?" ಎಂದು ಈ ಅರ್ಚಕ ಮಹಾಶಯರು ಮೈಸೂರಲ್ಲಿ ನಡೆದ ಹಿಂದೂ ದೇವಾಲಯ ಭಕ್ತ ಮಂಡಳಿ ಸದಸ್ಯರ ಚಿಂತನಾ ಸಭೆಯಲ್ಲಿ ತಮ್ಮ ಸನಾತನವಾದಿ ಅಸಮಾಧಾನವನ್ನು ಹೊರಹಾಕಿದರು. 

ಇವರ ಧಾರ್ಮಿಕ ಸ್ವಾತಂತ್ರ್ಯ ಇರುವುದು ಭಕ್ತರು ಹಾಕುವ ಬಟ್ಟೆಯಲ್ಲಿ ಎನ್ನುವುದು ಖಾತ್ರಿ ಆಯಿತು. ದೇವಸ್ಥಾನಕ್ಕೆ ಬರುವವರು ದೇವರ ದರ್ಶನಕ್ಕೆ ಬರುತ್ತಾರೆಯೇ ಹೊರತು ಪ್ಯಾಶನ್ ಶೋಗಳಿಗಲ್ಲ. ಅಲ್ಲಿ ಅಂತರಂಗದ ಶೃದ್ದೆ ಮುಖ್ಯವೇ ಹೊರತು ಬಹಿರಂಗದ ಉಡುಪುಗಳಲ್ಲ. ದೇವರು ಮೆಚ್ಚುವುದೇ ಆದರೆ ಅದು ಭಕ್ತಿಭಾವಕ್ಕೇ ಹೊರತು ಬಟ್ಟೆಗಳಿಗಲ್ಲ. ಯಾವುದೇ ದೇವರೂ ಇಂತಹುದೇ ವಸ್ತ್ರ ಧರಿಸಿ ತನ್ನ ಬೇಟಿಗೆ ಬರಬೇಕೆಂದು ಎಲ್ಲೂ ಕಟ್ಟಪ್ಪಣೆ ಮಾಡಿಲ್ಲ. ಈ ಭಗವಂತ ಮತ್ತು ಭಕ್ತರ ನಡುವೆ ಈ ದಲ್ಲಾಳಿ ಪುರೋಹಿತರ ಅಡೆತಡೆಗಳೇ ಅತಿಯಾಗಿವೆ. "ಪ್ಯಾಂಟ್ ಹಾಕಿ ಬರಬಾರದು. ಪಂಚೆ ಮಾತ್ರ ಇರಬೇಕು. ಮೈಮೇಲೆ ಅಂಗಿ ಹಾಕದೇ ಬರಿಮೈಲಿ ಅರೆಬೆತ್ತಲಾಗಿ ಗಂಡಸರು ದೇವಸ್ಥಾನ ಪ್ರವೇಶಿಸಬೇಕು. ಮಹಿಳೆಯರು ಚೂಡಿದಾರ ಹಾಕಿಕೊಂಡು ಬರಕೂಡದು" ಎನ್ನುವ ಅನಗತ್ಯ ಕಟ್ಟುಪಾಡುಗಳನ್ನು ಈ ಪುರೋಹಿತ ಪುಂಗವರೇ ವಿಧಿಸುತ್ತಾರೆ. ಅದಕ್ಕೆ ವಸ್ತ್ರಸಂಹಿತೆ ಬೇಕೆಂದು ಸರಕಾರಕ್ಕೆ ಆಗ್ರಹಿಸುತ್ತಾರೆ. ಬಟ್ಟೆ ಯಾವುದಾದರೇನು ದೇಹ ಮುಚ್ಚುವಂತಿದ್ದರೆ ಸಾಕಲ್ಲವೇ. ಸೌಜನ್ಯದ ಮಿತಿ ಮೀರದಂತಿದ್ದರೆ ಸಾಕಲ್ಲವೇ. ಅದು ಬಿಟ್ಟು ಹೀಗೇ ಇರಬೇಕು ಎನ್ನುವುದು ಭಕ್ತರ ಮೇಲೆ ಈ ಪೂಜಾರಿಗಳು ಮಾಡುವ ದಮನ ಅಲ್ಲವೇ? ಈ ಪೂಜಾರಿಗಳು ಮಾತ್ರ ತಮ್ಮ ಡೊಳ್ಳು ಹೊಟ್ಟೆಯನ್ನು ಭಕ್ತಾದಿಗಳಿಗೆ ಪ್ರದರ್ಶಿಸುತ್ತಾ ಟಾಪಲೆಸ್ ಆಗಿ ದೇವಸ್ಥಾನದ ತುಂಬಾ ಓಡಾಡುವುದರಿಂದ ಮಂದಿರಕ್ಕೆ ಬರುವ ಮಹಿಳೆಯರಿಗೆ ಮುಜುಗರ ಆಗುವುದಿಲ್ಲವೇ? ಕೆಲವಾರು ದೇವಸ್ಥಾನಗಳಲ್ಲಿ ಪುರುಷರು ಮೇಲ್ವಸ್ತ್ರ ಧರಿಸಿ ಹೋಗುವಂತಿಲ್ಲ. ಯಾಕೆಂದರೆ ಪುರೋಹಿತರಿಗೆ ಬಂದ ಭಕ್ತರು ಬ್ರಾಹ್ಮಣರೋ ಇಲ್ಲಾ ಅಬ್ರಾಹ್ಮಣರೋ ಎಂದು ಗೊತ್ತಾಗಬೇಕೆಂದರೆ ಜನಿವಾರ ದರ್ಶನ ಅಗತ್ಯ. ಅದಕ್ಕಾಗಿ ಅರೆನಗ್ನರಾಗಿ ಬಂದ ಗಂಡಸರಿಗೆ ಮಾತ್ರ ಮಂದಿರದೊಳಗೆ ಪ್ರವೇಶ. ಇದೇನಾ ಸಭ್ಯತೆ, ಇದೇನಾ ಸಂಸ್ಕೃತಿ? ಇಲ್ಲಿ ಪ್ರಶ್ನೆ ಇರುವುದು ಧಾರ್ಮಿಕ ಸ್ವಾತಂತ್ರ್ಯ ಯಾರಿಗೆ ಇರಬೇಕು ಎನ್ನುವುದು. ಅನ್ಯರಿಗೆ ಮುಜುಗರವಾಗದಂತೆ ಬಟ್ಟೆ ತೊಟ್ಟು ಭಕ್ತಿಯಿಂದ ದೇವರ ದರ್ಶನಕ್ಕೆ ಬರುವುದು ಭಕ್ತಾದಿಗಳ ಧಾರ್ಮಿಕ ಸ್ವಾತಂತ್ರ್ಯ ಅಲ್ಲವೇ? ಹೀಗೇಯೇ ಬರಬೇಕು ಎಂದು ಈ ಸನಾತನಿಗಳು  ಭಕ್ತರಿಗೆ ಬಲವಂತ ಮಾಡುವುದು ಭಕ್ತಾದಿಗಳ ಧಾರ್ಮಿಕ ಸ್ವಾತಂತ್ರ್ಯದ ದಮನ ಅಲ್ಲವೇ?

"ದೇವಾಲಯ ಸಾರ್ವಜನಿಕರ ಸ್ವತ್ತೇ ಹೊರತು ಸರ್ಕಾರದ್ದಲ್ಲ. ಅವು ಸಂಸ್ಕೃತಿ ಮತ್ತು ಪರಂಪರೆ ಉಳಿಸಲು ಪೂರ್ವಿಕರು ಬಿಟ್ಟು ಹೋದ ಆಸ್ತಿಗಳು. ಅವುಗಳನ್ನು ನಿರ್ವಹಣೆಗಾಗಿ ಸರಕಾರಕ್ಕೆ ನೀಡಿದ್ದೇವಷ್ಟೇ. ದೇವಸ್ಥಾನಗಳು ಸಂಸ್ಕಾರದ ಕೇಂದ್ರಗಳು ಎಂಬುದನ್ನು ಮರೆಯಬಾರದು" ಎಂದು ಕಣ್ಣನ್ ರವರು ಹೇಳಿದ್ದಾರೆ. ಆದರೆ ಸರಕಾರವೂ ಸಾರ್ವಜನಿಕರಿಂದಲೇ ರಚನೆಯಾಗಿದ್ದು ಜನರ ತೆರಿಗೆ ಹಣದಿಂದ ಸರಕಾರ ಕೊಡುವ ಸಂಬಳದಲ್ಲಿ ಈ ತಟ್ಟೆಕಾಸಿನ ಪೂಜಾರಿಗಳು ಬದುಕುತ್ತಿರುವುದು ಎಂಬ ಅರಿವು ಈ ಕಣ್ಣನ್ ರವರಿಗೆ ಇರಬೇಕಲ್ಲವೇ. ಇವರು ಕನ್ನಡದಲ್ಲಿ ಹೇಳುವ ಮಂತ್ರಗಳು ಕಾಸನ್ನು ಸೃಷ್ಟಿಸುವುದಿಲ್ಲ ಹಾಗೂ ಈ ಪರಾವಲಂಬಿ ಅರ್ಚಕರು ಎಂದೂ ಉತ್ತಿ ಬಿತ್ತಿ ಶ್ರಮವಹಿಸಿ ಸಂಪಾದನೆ ಮಾಡುವುದೂ ಇಲ್ಲ. ಸಂಸ್ಕೃತಿ ಮತ್ತು ಪರಂಪರೆಯ ಹೆಸರಲ್ಲಿ ಈ ಪುರೋಹಿತರ ಪೂರ್ವಿಕರು ಕಂದಾಚಾರ ಮೌಢ್ಯಗಳನ್ನೇ ಮುಂದಿನ ಪೀಳಿಗೆಗೆ ಬಿಟ್ಟು ಹೋಗಿದ್ದು ದೇವಸ್ಥಾನಗಳು ಸಂಸ್ಕಾರದ ಕೇಂದ್ರವಾಗಿರದೇ ಶೋಷಣೆಯ ಕೇಂದ್ರಗಳಾಗಿದ್ದಕ್ಕೆ ಇತಿಹಾಸ ಮತ್ತು ವರ್ತಮಾನಗಳೇ ಸಾಕ್ಷಿಯಾಗಿವೆ. ಅಂತಹುದರಲ್ಲಿ ಬಹುತೇಕ ದೇವಲಯಗಳು ಈ ಪುರೋಹಿತರ ಹಿಡಿತದಲ್ಲಿರುವಾಗ ಸಾರ್ವಜನಿಕರ ಸ್ವತ್ತು ಎಂಬುದೇ ಭ್ರಮೆ. ಭಕ್ತರ ಮೇಲೆ ಇಂತವರ ಶೋಷಣೆ ಅತಿಯಾಗಬಾರದೆಂದೇ ಸರಕಾರ ಮುಜರಾಯಿ ಇಲಾಖೆಯ ದೇವಸ್ಥಾನಗಳ ಮೇಲೆ ನಿಯಂತ್ರಣ ಹೊಂದಿದೆ. ಇಲಾಖೆಯ ನಿಯಂತ್ರಣದಲ್ಲಿರುವ ಎಲ್ಲಾ ದೇವಸ್ಥಾನಗಳ ಮುಂದೆ ಎಲ್ಲಾ ಜಾತಿ ಧರ್ಮದವರಿಗೂ ಪ್ರವೇಶ ಇದೆ ಎಂದು ಬೋರ್ಡು ಹಾಕಿಸಲಾಗಿದೆ. ಇಲ್ಲದೇ ಹೋಗಿದ್ದರೆ ಈ ಪುರೋಹಿತರು ಜಾತಿ ಧರ್ಮ ಬೇಧಗಳು ಹಿಂದೂ ಸಂಸ್ಕೃತಿ ಹಾಗೂ ಪರಂಪರೆಯ ಭಾಗವೆಂದು ವರ್ಣಾಧಾರಿತ ಅಧಿಪತ್ಯ ನಡೆಸುತ್ತಿದ್ದವು. ಇಷ್ಟಕ್ಕೂ ಈ ದೇವಸ್ಥಾನಗಳು ಸರ್ಕಾರದ ಸ್ವತ್ತಲ್ಲ ಎನ್ನುವುದೇ ಆದರೆ ಸರಕಾರದ ಅನುದಾನವನ್ನು, ಮಂದಿರಗಳ ಅಭಿವೃದ್ದಿಗೆ ಸಹಾಯಧನವನ್ನು, ಅರ್ಚಕರಿಗೆ ಸಂಬಳ ಸವಲತ್ತುಗಳನ್ನು ಯಾಕೆ ಈ ಪುರೋಹಿತರು ಪಡೆಯುತ್ತಾರೆ?

ಇಷ್ಟಕ್ಕೇ ಸುಮ್ಮನಾಗದ ಈ ಅರ್ಚಕ ಮಹೋದಯರು "ನಮ್ಮ ಸಂಸ್ಕೃತಿ ಮತ್ರು ಜನರ ಸಂಸ್ಕಾರದ ಉಳಿವಿಗೆ ದೇವಸ್ಥಾನದ ಅರ್ಚಕ ವೃತ್ತಿಯನ್ನು ಪುರುಷರಿಗೆ ಮಾತ್ರವೇ ಮೀಸಲಿಡಬೇಕು. ಮಹಿಳೆಯರನ್ನು ಅರ್ಚಕರನ್ನಾಗಿ ನೇಮಿಸುವ ನಿರ್ಧಾರ ಸೂಕ್ತವಲ್ಲ" ಎಂದು ಹೇಳವ ಮೂಲಕ ತಮ್ಮ ಸನಾತನ ಪರಂಪರೆಯ ಮಹಿಳಾ ವಿರೋಧಿತನವನ್ನು ಸಾಬೀತುಪಡಿಸಿದ್ದಾರೆ. ಇವರ ದೇವರ ಸೃಷ್ಟಿಯಲ್ಲಿ ಗಂಡು ಹೆಣ್ಣು ಎರಡೂ ಸಮಾನವಾಗಿರುವಾಗ ಯಾಕೆ ಮಹಿಳೆಯರು ಅರ್ಚಕರಾಗಬಾರದು. ಯಾಕೆಂದರೆ  ಇವರೆಲ್ಲಾ "ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ" ಎನ್ನುವ ಡಿ ಎನ್ ಎ ಗೆ ಸಂಬಂಧಿಸಿದವರು. ಇವರ ವರ್ಣಾಶ್ರಮ ಧರ್ಮ ಹೋಗಿ ಸಂವಿಧಾನವೇ ಈ ದೇಶದ ಧರ್ಮವಾಗಿದೆ. ಬಾಬಾಸಾಹೇಬರ ಸಂವಿಧಾನದಲ್ಲಿ ಜಾತಿ ಬೇಧ ಹಾಗೂ ಲಿಂಗ ತಾರತಮ್ಯಗಳು ನಿಷಿದ್ಧವಾಗಿವೆ. ಸರ್ವರಿಗೂ ಸಮಪಾಲು ಸಮಬಾಳು ಸಂವಿಧಾನದ ಆಶಯವಾಗಿದೆ. ಆದರೆ ಈ ಸನಾತನ ಸಂಸ್ಕೃತಿಯ ಪಳುವಳಿಕೆಗಳು ಮಾತ್ರ ಇನ್ನೂ ಮನುಸ್ಮೃತಿಗೆ ಜೋತುಬಿದ್ದಿವೆ. ಮಹಿಳೆಯರಿಗೆ ಸಮಾನ ಅವಕಾಶವನ್ನು ಕೊಡುವ ಯಾವುದೇ ಪ್ರಯತ್ನವನ್ನೂ ವಿರೋಧಿಸಲಾಗುತ್ತಿದೆ. ಸುಶ್ರಾವ್ಯವಾಗಿ ದೇವರ ಹಾಡು ಸ್ತೋತ್ರಗಳನ್ನು ಹಾಡುವ ಹೆಣ್ಮಕ್ಕಳಿಗೆ ಮಂತ್ರಪಠನ ಮಾಡಲು ಬರುವುದಿಲ್ಲವಾ? ಮಹಿಳೆಯರು ಅರ್ಚಕರಾದರೆ ಆ ದೇವರು ಒಪ್ಪುವುದಿಲ್ಲವಾ? ಅರ್ಹತೆ ಪಡೆಯುವ ಮಹಿಳೆಯರಿಗೆ ಅವಕಾಶ ನಿರಾಕರಿಸುವುದೂ ಸಂವಿಧಾನ ವಿರೋಧಿ ಸಂಚು ಎನ್ನುವುದನ್ನು ಈ ಸನಾತನಿ ಸಂತಾನಗಳಿಗೆ ಯಾರು ವಿವರಿಸಿ ಹೇಳುವುದು. 

"ಮಠಗಳು ಒಂದು ಸಮುದಾಯ ಮತ್ತು ಜಾತಿಯ ಪ್ರತಿನಿಧಿಯಾದರೆ ದೇವಸ್ಥಾನಗಳು ಇಡೀ ಸಮಾಜದ ಪ್ರತಿನಿಧಿಯಾಗುತ್ತವೆ. ಅದು ಜ್ಯಾತ್ಯಾತೀತವಾಗಿರಬೇಕು. ಪ್ರತಿ ದೇವಾಲಯಗಳು ಇರುವುದು ಮಾನವನ ಉದ್ಧಾರಕ್ಕಾಗಿಯೇ" ಎಂದು ಹೇಳಿ ಸನಾತನ ಸಂಸ್ಕಾರದ ಪೀಠಿಕೆಯ ಮೇಲೆ ಜ್ಯಾತ್ಯಾತೀತೆಯ ಸೋಗು ಹಾಕುವ ಈ ಅರ್ಚಕ ಪಂಡಿತರಿಗೆ ಸತ್ಯ ಗೊತ್ತಿಲ್ಲವೆಂದೇನಲ್ಲ. ಸನಾತನ ಧರ್ಮದ ವಿಚಾರ ಆಚಾರಗಳಿಗೂ ಹಾಗೂ ಜ್ಯಾತ್ಯಾತೀತತೆಗೂ ಎಣ್ಣೆ ಸೀಗೇಕಾಯಿ ಸಂಬಂಧ. ಹಿರೇಮಗಳೂರಿನ ಕೋದಂಡರಾಮ ದೇವಸ್ಥಾನದ ಗರ್ಬಗುಡಿಯಲ್ಲಿ ಈ ಅರ್ಚಕ ಕಣ್ಣನ್ ಯಾವತ್ತಾದರೂ ಅಬ್ರಾಹ್ಮಣರಿಗೆ ಪ್ರವೇಶ ಕೊಟ್ಟಿದ್ದಾರಾ? ದೇವರ ಮೂರ್ತಿಯನ್ನು ಮುಟ್ಟಲು ಅನುಮತಿ ಅವಕಾಶ ಕೊಟ್ಟಿದ್ದಾರಾ? ಇಲ್ಲವೆಂದ ಮೇಲೆ ಇವರು ಜ್ಯಾತ್ಯಾತೀತತೆಯ ಬಗ್ಗೆ ಮಾತಾಡುವುದೇ ಸೋಗಲಾಡಿತನವಾಗುತ್ತದೆ. ಇಷ್ಟಕ್ಕೂ ಬಹುತೇಕ ಪ್ರಸಿದ್ದ ದೇವಸ್ಥಾನಗಳು ಯಾವುದಾದರೂ ಮಠಮಾನ್ಯಗಳ ನಿಯಂತ್ರಣದಲ್ಲಿಯೇ ಇರುತ್ತವೆ. ಆ ದೇವಸ್ಥಾನಗಳಿಗೂ ಎಲ್ಲಾ ಜಾತಿಗಳ ಜನರೂ ಬಂದು ದೇವರ ದರ್ಶನ ಮಾಡಿ ಹೋಗುತ್ತಾರೆ. ಹೀಗಿರುವಾಗ ಇವರ ದೇವಸ್ಥಾನಗಳು ಮಾತ್ರ ಇಡೀ ಸಮಾಜದ ಪ್ರತಿನಿಧಿಯಾಗುತ್ತವೆ ಹಾಗೂ ಮಠಗಳ ಮಂದಿರಗಳು ಜಾತಿ ಕೇಂದ್ರಿತವಾಗುತ್ತವೆ? ಪ್ರತಿ ದೇವಸ್ಥಾನಗಳು ಇರುವುದು ಈ ಪುರೋಹಿತಶಾಹಿಗಳ ಉದ್ದಾರಕ್ಕಾಗಿಯೇ ಹೊರತು ಮಾನವರ ಉದ್ದಾರಕ್ಕಾಗಿಯಂತೂ ಅಲ್ಲ. ಮಾನವರ ಉದ್ದಾರವೇ ಎಲ್ಲಾ ದೇವಸ್ಥಾನಗಳ ಉದ್ದೇಶವಾಗಿದ್ದರೆ ಈ ಸಹಸ್ರಾರು ವರ್ಷಗಳಲ್ಲಿ ಮನುಕುಲ ಉದ್ದಾರವಾಗಬಹುದಾಗಿತ್ತು. ಮೇಲು ಕೀಳು, ಜಾತಿ ಲಿಂಗ ತಾರತಮ್ಯ ಕೊನೆಯಾಗಬಹುದಾಗಿತ್ತು. ಜಗತ್ತಿನಲ್ಲಿ ಕೇಡು ಕೊನೆಯಾಗಿ ಒಳಿತೇ ಉಳಿಯಬೇಕಿತ್ತು. ಆದರೆ ಆಗಿದ್ದೇನು? ಜಾತಿಬೇಧ ಲಿಂಗಬೇಧ ವರ್ಗತಾರತಮ್ಯಗಳನ್ನು ದೇವರು ಹಾಗೂ ಧರ್ಮಗಳ ಹೆಸರಲ್ಲಿ ಮುಂದುವರೆಸಿಕೊಂಡು ಹೋಗಿದ್ದೇ ಈ ಪುರೋಹಿತಶಾಹಿಗಳು. ಅಂಧಶ್ರದ್ದೆ ಹಾಗೂ ಮೌಢ್ಯಭಕ್ತಿಯನ್ನು ಬಿತ್ತಿ ಬೆಳೆದಿದ್ದೇ ಈ ಸನಾತನಿಗಳು. ಕರ್ಮ ಧರ್ಮದ ಹೆಸರಲ್ಲಿ ಸ್ವರ್ಗದ ಆಸೆ ಹಾಗೂ ನರಕದ ಆತಂಕವನ್ನು ಹುಟ್ಟುಹಾಕಿದ್ದೇ ಈ ವೈದಿಕಶಾಹಿಗಳು. ಇಂತವರ ಪ್ರತಿನಿಧಿಯಾದ ಕಣ್ಣನ್ ಎನ್ನುವ ಅರ್ಚಕನ ಬಾಯಲ್ಲಿ ಇನ್ನೇನು ತಾನೆ ಬರಲು ಸಾಧ್ಯ?

ಲಿಂಗಬೇಧದ ಹೇಳಿಕೆ ನೀಡಿ ಸಂವಿಧಾನದ ಆಶಯಕ್ಕೆ ದಕ್ಕೆ ತರುವ ಪ್ರಯತ್ನ ಮಾಡಿದ ಈ ಅರ್ಚಕನ ಮೇಲೆ ಸರಕಾರ ಕ್ರಮ ಕೈಗೊಳ್ಳಬೇಕಿದೆ. ಮುಜರಾಯಿ ಇಲಾಖೆಯ ದೇವಸ್ಥಾನಗಳನ್ನು ಸರ್ಕಾರದ್ದಲ್ಲವೆಂದು ಘೋಷಿಸಿ ಭಕ್ತರನ್ನು ಸರಕಾರದ ವಿರುದ್ಧ ಎತ್ತಿ ಕಟ್ಟುತ್ತಿರುವ ಈ ಅರ್ಚಕನನ್ನು ಮುಜರಾಯಿ ಇಲಾಖೆ ಕೂಡಲೇ ಅಮಾನತ್ತುಗೊಳಿಸಬೇಕಿದೆ. ಮಠಗಳ ದೇವಸ್ಥಾನಗಳನ್ನು ಜಾತಿಕೇಂದ್ರಿತ ಎಂದು ಆರೋಪಿಸಿದ ಈ ಪೂಜಾರಿಯ ವಿರುದ್ಧ ಮಠಗಳು ಕೇಸು ದಾಖಲಿಸಬೇಕಿದೆ. ಅಧಿಕಾರಿಗಳ ಜೊತೆ ಶಾಮೀಲಾಗಿ ಲಕ್ಷಾಂತರ ರೂಪಾಯಿ ಸರಕಾರಿ ಹಣವನ್ನು ಅಕ್ರಮವಾಗಿ ಪಡೆದ ಈ ಕಣ್ಣನ್ ರವರ ವಿರುದ್ದ ಜಿಲ್ಲಾಡಳಿತವು ವಂಚನೆ ದೂರು ದಾಖಲಿಸಿ ಸರಕಾರಿ ಹಣವನ್ನು ವಸೂಲಿ ಮಾಡಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇಂತಹ ಆಶಾಡಬೂತಿ ಅರ್ಚಕರ ಬಗ್ಗೆ ಭಕ್ತರು ಎಚ್ಚರದಿಂದ ಇರಬೇಕಿದೆ.

- ಶಶಿಕಾಂತ ಯಡಹಳ್ಳಿ
11-02-2024

ಭಾನುವಾರ, ಫೆಬ್ರವರಿ 11, 2024

ತೋನಂ ಎಂಬ ಆಪದ್ಬಾಂಧವ

ತಹ ತಹ - 509

ತೋನಂ ಎಂಬ ಆಪದ್ಬಾಂಧವ

ಮೂರುವರೆ ವರ್ಷಗಳಾದವು ಕನ್ನಡ ರಂಗಭೂಮಿಯ ಸಂಘಟಕ ತೋಟ್ಟವಾಡಿ ನಂಜುಂಡಸ್ವಾಮಿಗಳು (ತೋನಂ) ಅಸ್ತಂಗತರಾಗಿ. ಅವರ ನಿರ್ಗಮನದ ನಂತರವೂ ತೋನಂ ನೆನಪನ್ನು ಜೀವಂತವಾಗಿಡಲು ಸಮುದಾಯದ ಗುಂಡಣ್ಣನವರ ನೇತೃತ್ವದಲ್ಲಿ ಕೆಲವಾರು ರಂಗಕರ್ಮಿಗಳು ಸೇರಿಕೊಂಡು 'ತೋ.ನಂಜುಂಡಸ್ವಾಮಿ ಗೆಳೆಯರ ಬಳಗ' ಕಟ್ಟಿಕೊಂಡು ಪ್ರತಿವರ್ಷ  ರಂಗಸಾಧಕರೊಬ್ಬರನ್ನು ಆಯ್ಕೆ ಮಾಡಿ ತೋನಂ ಹುಟ್ಟಿದ ದಿನದಂದು ಅವರ ಹೆಸರಲ್ಲಿ ಪ್ರಶಸ್ತಿಯೊಂದನ್ನು ಕೊಡುತ್ತಾ ಬಂದಿದ್ದಾರೆ. ಕಳೆದ ವರ್ಷ ಬೆಳಕಿನ ತಜ್ಞ ಚಂದ್ರಕುಮಾರ ಸಿಂಗ್ ರವರಿಗೆ ತೋನಂ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದ್ದು ಈ ವರ್ಷ ನಾಟಕಕಾರ ಹೂಲಿ ಶೇಖರ್ ರವರಿಗೆ ಪ್ರಶಸ್ತಿ ಕೊಟ್ಟು ಫೆಬ್ರವರಿ 10 ರಂದು ಮಲ್ಲತ್ತಳ್ಳಿಯ ಕಲಾಗ್ರಾಮ ರಂಗಮಂದಿರದಲ್ಲಿ ಸನ್ಮಾನಿಸಲಾಯಿತು.

ತೋನಂ ಒಬ್ಬ ದಣಿವರಿಯದ ರಂಗಸಂಘಟಕ. ಯಾವಾಗಲೂ ಏನಾದರೊಂದು ರಂಗಕೈಂಕರ್ಯವನ್ನು ಮಾಡುತ್ತಲೇ ಇದ್ದವರು. ಹಠಕ್ಕೆ ಬಿದ್ದು ನಾಟಕಗಳನ್ನೂ ಬರೆದವರು. ಬರೆದ ನಾಟಕಗಳನ್ನು ತಾವೇ ಹಣ ಹೂಡಿ ನಿರ್ಮಿಸಿದವರು. ಇವರ ನಾಟಕವನ್ನು ನಿರ್ದೇಶಿಸಿದವರ ಜೊತೆ ನಾಟಕ ನಿರ್ಮಿತಿಯಲ್ಲಿ ಭಿನ್ನಾಭಿಪ್ರಾಯಗಳು ಬಂದಾಗ ತಾವೇ ನಿರ್ದೇಶನವನ್ನೂ ಮಾಡಿದರು. ಇವರು ಬರೆದ ಮಾದಾರ ಚೆನ್ನಯ್ಯ ನಾಟಕವನ್ನು ಸಾಣೇಹಳ್ಳಿಯ ಶಿವಸಂಚಾರ ಸಂಚಾರಿ ತಂಡವು ನಾಡಿನಾದ್ಯಂತ ಪ್ರದರ್ಶಿಸಿತ್ತು. ಇದೇ ನಾಟಕವನ್ನು ಬೆಂಗಳೂರಿನಲ್ಲಿ  ಕೃಷ್ಣಮೂರ್ತಿ ಕವತ್ತಾರ್, ಸಬ್ಬನಹಳ್ಳಿ ರಾಜು ಹಾಗೂ ಮೈಕೋ ಶಿವಶಂಕರ್ ಈ ಮೂವರೂ ಒಬ್ಬರಾದ ಮೇಲೆ ಒಬ್ಬರು ನಿರ್ದೇಶಿಸಿದ್ದರು. ಆದರೆ ನಿರ್ದೇಶಕರನ್ನು ಬದಲಾಯಿಸಿದರೂ ತೋನಂ ಗೆ ತೃಪ್ತಿ ಆಗಲೇ ಇಲ್ಲ. "ನಾನು ಹುಟ್ಟಿಸಿದ ಕೂಸನ್ನು ಸರಿಯಾಗಿ ಕಟ್ಟಿ ನಿಲ್ಲಿಸಲಿಲ್ಲ" ಎನ್ನುವ ಕೊರಗಿನಿಂದಾಗಿ ಕೊನೆಗೆ ತಾವೇ ನಿರ್ದೇಶನವನ್ನೂ ಮಾಡಿದರು. ಆದರೆ ಅದ್ಯಾಕೋ ಈ ನಾಟಕ ಯಾರ ತೆಕ್ಕೆಗೂ ದಕ್ಕಲೇ ಇಲ್ಲವಾದರೂ ಈ ನಾಟಕದ ಮೇಲಿನ ವ್ಯಾಮೋಹ ತೋನಂ ರವರಿಗೆ ಕಡಿಮೆಯಾಗಲೇ ಇಲ್ಲ. ಕೊನೆಗೆ ನಯನ ಸೂಡರವರಿಂದಲೂ ನಿರ್ದೇಶನ ಮಾಡಿಸಿ ನೋಡಿದರಾದರೂ ಹೆಚ್ಚು ಪ್ರದರ್ಶನ ಕಾಣಲಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ತಾವು ರಚಿಸಿದ ನಾಟಕಗಳು ರಂಗಚರಿತ್ರೆಯಲ್ಲಿ ಗಟ್ಟಿಯಾಗಿ ನಿಲ್ಲಲಿಲ್ಲವೆನ್ನುವ ಕೊರಗು ಅವರನ್ನು ಕೊನೆಯವರೆಗೂ ಕಾಡುತ್ತಲೇ ಇತ್ತು.  ರಂಗ ನಿರ್ದೇಶಕರಾಗಿಯೂ ವಿಫಲರಾಗಿದ್ದು ಅವರಿಗೆ ಬೇಸರವನ್ನೂ ಹುಟ್ಟಿಸಿತ್ತು. ಹಾಗಂತ ಸುಮ್ಮನೇ ಕೂಡುವ ವ್ಯಕ್ತಿತ್ವವೇ ಅವರದ್ದಲ್ಲ. 

ಒಂದಲ್ಲಾ ಎರಡ್ಮೂರು ಸಾಂಸ್ಕೃತಿಕ ಸಂಸ್ಥೆಗಳನ್ನು ಹುಟ್ಟುಹಾಕಿ ಈ ಎಲ್ಲಾ ಸಂಸ್ಥೆಗಳನ್ನು ಕ್ರಿಯಾಶೀಲವಾಗಿಟ್ಟಿದ್ದರು. ಪ್ರತಿವರ್ಷ ಕೆಲವಾರು ಸಾಧಕರನ್ನು ಗುರುತಿಸಿ ರಂಗಚೇತನ ಹಾಗೂ ನಾಡಚೇತನ ಎನ್ನುವ ಹೆಸರಿನಲ್ಲಿ ಪ್ರಶಸ್ತಿಗಳನ್ನು ಕೊಟ್ಟು ಗೌರವಿಸುತ್ತಲೇ ಬಂದರು. ಅದಕ್ಕಾಗಿ ಅದ್ದೂರಿ ಸಮಾರಂಭಗಳನ್ನು ಆಯೋಜಿಸುತ್ತಾ ವೃತ್ತಿಪರ ಸಂಘಟಕರಾಗಿದ್ದರು. ವಿಪರ್ಯಾಸ ಏನೆಂದರೆ ಸಾಧಕರನ್ನು ಗುರುತಿಸಿ ಪ್ರಶಸ್ತಿಗಳನ್ನು ಕೊಡುತ್ತಲೇ ಬಂದ ತೋನಂ ರವರಿಗೆ ಯಾವುದೇ ಪ್ರಮುಖ ಪ್ರಶಸ್ತಿ ಬರಲೇ ಇಲ್ಲ. ಯಾರೂ ಗುರುತಿಸಿ ಕರೆದು ಕೊಡಲೂ ಇಲ್ಲ. ಆದರೆ ತೋನಂ ಆರಂಭಿಸಿದ ಪ್ರಶಸ್ತಿ ಪ್ರದಾನ ಪರ್ವವನ್ನು ಅವರ ಅನುಪಸ್ಥಿತಿಯಲ್ಲಿ ರಂಗ ಒಡನಾಡಿಗಳು ಮುಂದುವರೆಸಿಕೊಂಡು ಹೋಗುತ್ತಿರುವುದು ಸ್ತುತ್ತಾರ್ಹ.

ತಮ್ಮ ಸಂಘಟನಾ ಸಾಮರ್ಥ್ಯದ ಮೂಲಕ ತೋನಂ ಯಾವಾಗಲೂ ಪ್ರಸಿದ್ದರ ಒಡನಾಟವನ್ನು ಹೊಂದಿರುತ್ತಿದ್ದರು. ರಂಗದಿಗ್ಗಜರಾದ ಸಿಜಿಕೆ ಗರಡಿಯಲ್ಲಿ ಪಳಗಿದ ತೋನಂ ರಂಗಪೋಷಕರಾದ ಡಿ.ಕೆ.ಚೌಟರ ಬಲಗೈ ಬಂಟನಂತಿದ್ದರು. ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮಿಗಳ ಕೃಪಾಕಟಾಕ್ಷವನ್ನೂ ಗಳಿಸಿದ್ದರು. ಜಯದೇವ ಆಸ್ಪತ್ರೆಯ ಮುಖ್ಯಸ್ಥರಾದ ಪ್ರಸಿದ್ಧ ಹೃದಯತಜ್ಞ ಡಾ.ಮಂಜುನಾಥರವರ ನಂಬಿಕೆ ವಿಶ್ವಾಸಕ್ಕೂ ಪಾತ್ರರಾಗಿದ್ದರು. ಇಂತಹ ಹಲವಾರು ಪ್ರಮುಖರ ಸಂಪರ್ಕಗಳನ್ನು  ತಮ್ಮ ರಂಗಭೂಮಿ ಕಾಯಕಕ್ಕೆ ಪೂರಕವಾಗಿ ಬಳಸಿಕೊಂಡು ತಮ್ಮ ರಂಗಪಾರಿಚಾರಿಕೆಯನ್ನು ವೃತದಂತೆ ಮಾಡುತ್ತಿದ್ದರು. 

ಇಷ್ಟೇ ಆಗಿದ್ದರೆ ತೋನಂ ನೆನಪು ಇಷ್ಟು ಕಾಡುತ್ತಿರಲಿಲ್ಲ. ಆದರೆ ತೋನಂ ವಿಶೇಷತೆ ಇರುವುದು ರಂಗಕರ್ಮಿ ಕಲಾವಿದರ ಅನಾರೋಗ್ಯಕ್ಕೆ ಕೂಡಲೇ ಸ್ಪಂದಿಸುವ ರೀತಿಯಲ್ಲಿ. ವೈದ್ಯರಲ್ಲದಿದ್ದರೂ ರಂಗಭೂಮಿಯ ವೈದ್ಯರೆಂದೇ ಹೆಸರಾದ ತೋನಂ ಕೆಲಸ ಮಾಡುತ್ತಿದ್ದುದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ. ಅಲ್ಲಿ ಕೆಲಸದಲ್ಲಿದ್ದಾಗ ಹಾಗೂ ರಿಟೈರ್ಡ್ ಆದನಂತರವೂ ಸಹ ಯಾವುದೇ ಸಾಹಿತಿ ಕಲಾವಿದರು ಅನಾರೋಗ್ಯಕ್ಕೆ ತುತ್ತಾಗಿದ್ದು ಗೊತ್ತಾದರೆ ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿ, ಸಂಬಂಧಿಸಿದ ವೈದ್ಯರಿಂದ ಚಿಕಿತ್ಸೆ ಕೊಡಿಸಿ, ಅಗತ್ಯವಾದ ಟೆಸ್ಟ್ ಗಳಿಗೆ ವ್ಯವಸ್ಥೆ ಮಾಡಿ, ಉಚಿತ ಔಷದೋಪಚಾರಗಳನ್ನು ಕೊಡಿಸುವ ಮಾನವೀಯ ಕಾಳಜಿ ತೋನಂ ರವರದ್ದಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗದ ಅದೆಷ್ಟೋ ಬಡ ಕಲಾವಿದರು ಅನಾರೋಗ್ಯಕ್ಕೀಡಾದಾಗ ಆಪದ್ಬಾಂಧವನಂತೆ ನಿಂತು ಆರೋಗ್ಯ ಭಾಗ್ಯ ಕೊಡಿಸಿದ್ದನ್ನು ಈಗಲೂ ಅನೇಕರು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ. ಅದೇ ತೋನಂ ರವರ ಬದುಕಿನ ಮಹತ್ತರವಾದ ಸಾರ್ಥಕತೆ. ಆದರೆ ವಿಪರ್ಯಾಸ ಏನೆಂದರೆ ಅನೇಕರಿಗೆ ವೈದ್ಯಕೀಯ ನೆರವನ್ನು ಕೊಟ್ಟು ಕಾಪಾಡಿದ ತೋ.ನಂಜುಂಡಸ್ವಾಮಿಯವರು ಕೊನೆಗೆ  ಕರೋನಾ ಮಾರಿಗೆ ತುತ್ತಾಗಿ ತಮ್ಮ 70 ನೇ ವರ್ಷದಲ್ಲಿ (15-09-2020) ತೀವ್ರ ಅನಾರೋಗ್ಯಕ್ಕೀಡಾಗಿ ಕಾಲವಶರಾದದ್ದು ಖಂಡಿತಾ ಖೇದಕರ ಸಂಗತಿ. 

ರಂಗಭೂಮಿಯಲ್ಲಿ ಸಂಘಟಕರು ನಾಟಕಕಾರರು ಬರುತ್ತಾರೆ ಹೋಗುತ್ತಾರೆ. ಆದರೆ ಕಲಾವಿದರ ಯೋಗಕ್ಷೇಮಕ್ಕೆ ಸ್ಪಂದಿಸುವ, ಉಚಿತ ವೈದ್ಯಕೀಯ ನೆರವನ್ನು ನೀಡುವಂತಹ ಮಾನವೀಯ ಕಳಕಳಿ ಇರುವ ತೋನಂ ನಂತವರ ಅನುಪಸ್ಥಿತಿ ಬಹುಕಾಲ ಕಾಡದೇ ಇರದು. 

ಇಂತಹ ಸಾಂಸ್ಕೃತಿಕ ಕ್ಷೇತ್ರದ ಆಪದ್ಬಾಂಧವನ ಹೆಸರಲ್ಲಿ ಪ್ರತಿವರ್ಷ ಅವರ ಹುಟ್ಟಿದ ದಿನದಂದು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಿ ನಾಟಕ ಪ್ರದರ್ಶನವನ್ನೂ ಏರ್ಪಡಿಸಿ ತೋನಂ ಹೆಸರನ್ನು ಉಳಿಸುವ ಸ್ತುತ್ಯಾರ್ಹ ಕಾಯಕವನ್ನು ಮಾಡುತ್ತಿರುವ ಸಿ.ಕೆ.ಗುಂಡಣ್ಣ ಹಾಗೂ ತೋನಂ ಗೆಳೆಯರ ಬಳಗದ  ರಂಗಕರ್ಮಿಗಳಿಗೆ ವಂದನೆಗಳು. ಈ ವರ್ಷ ತೋನಂ ಪ್ರಶಸ್ತಿಗೆ ಭಾಜನರಾದ ನಾಟಕಕಾರ ಹೂಲಿ ಶೇಖರ್ ರವರಿಗೆ ಅಭಿನಂದನೆಗಳು. ಇದೇ ಸಂದರ್ಭದಲ್ಲಿ ನಟನಾ ರೆಪರ್ಟರಿ ತಂಡದ "ಕಣಿವೆಯ ಹಾಡು" ಎನ್ನುವ ದೃಶ್ಯಕಾವ್ಯದಂತಹ ನಾಟಕವನ್ನು ಪ್ರದರ್ಶಿಸಿದ್ದು ಆ ನಾಟಕದ ನಿರ್ದೇಶಕರಾದ ಡಾ.ಶ್ರೀಪಾದ ಭಟ್ ರವರಿಗೂ ಹಾಗೂ ತಮ್ಮ ಅಮೋಘ ಅಭಿನಯದಿಂದ ಮನಸೂರೆಗೊಂಡ ಕಲಾವಿದರಾದ ಮೇಘ ಸಮೀರ್ ಹಾಗೂ ದಿಶಾ ರಮೇಶರವರಿಗೆ ಧನ್ಯವಾದಗಳು.

- ಶಶಿಕಾಂತ ಯಡಹಳ್ಳಿ
10-02-2024