ಮಂಗಳವಾರ, ಜನವರಿ 30, 2024

ಕಲಾಕ್ಷೇತ್ರಕ್ಕೆ ಅನಗತ್ಯ ನವೀಕರಣ; ಸಾಂಸ್ಕೃತಿಕ ಕ್ಷೇತ್ರದ ಆತಂಕಕ್ಕೆ ಕಾರಣ

ತಹ ತಹ - 498

ಕಲಾಕ್ಷೇತ್ರಕ್ಕೆ ಅನಗತ್ಯ ನವೀಕರಣ;  ಸಾಂಸ್ಕೃತಿಕ ಕ್ಷೇತ್ರದ ಆತಂಕಕ್ಕೆ ಕಾರಣ


ಬ್ರ್ಯಾಂಡ್ ಬೆಂಗಳೂರಿನ ಅಬ್ಬರ ಈಗ ರವೀಂದ್ರ ಕಲಾಕ್ಷೇತ್ರಕ್ಕೆ ಆವರಿಸುವಂತಿದೆ. ಕಲಾಕ್ಷೇತ್ರಕ್ಕೆ 75 ವರ್ಷಗಳು ತುಂಬಿದ ಸಂಭ್ರಮವನ್ನು ರಂಗಮಂದಿರದ  ನವೀಕರಣದ ಮೂಲಕ ಆಚರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. 

ವಜ್ರ ಮಹೋತ್ಸವದ ಅಂಗವಾಗಿ  ರಂಗಮಂದಿರದಲ್ಲಿ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಮಾಡಿಸಿ, ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ದ್ವನಿ ಬೆಳಕಿನ ಪರಿಕರಗಳನ್ನು ಅಳವಡಿಸಿ, ವಾಟರ್ ಪ್ರೂಪ್ ಆಸನಗಳನ್ನು ಹಾಕಿಸಿ ಇಡೀ ಕಲಾಕ್ಷೇತ್ರವನ್ನು ಅಂತರಾಷ್ಟ್ರೀಯ ಮಟ್ಟದ ರಂಗಮಂದಿರವನ್ನಾಗಿ ಮಾಡುವ ಯೋಜನೆ ರೂಪಿಸಿ ಸರಕಾರದ ಅನುಮೋದನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಳುಹಿಸಿದೆ.

ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಡಾ. ಧರಣಿದೇವಿ ಮಾಲಗತ್ತಿಯವರು "ಸಾಂಸ್ಕೃತಿಕ ಕ್ಷೇತ್ರದ ಸಮಸ್ಯೆಗಳು ಹಾಗೂ ಪರಿಹಾರದ ಸಾಧ್ಯತೆಗಳು" ಕುರಿತು ಚರ್ಚಿಸಲು ಡಿಸೆಂಬರ್ 15 ರಂದು ಆಯ್ದ ರಂಗಕರ್ಮಿಗಳ ಸಭೆಯನ್ನು ಕರೆದಿದ್ದರು. ಆಗ ಕಲಾಕ್ಷೇತ್ರ ಮತ್ತು ಸಂಸ ಬಯಲು ರಂಗಮಂದಿರದ ನವೀಕರಣದ ಬಗ್ಗೆಯೂ ಮಾಹಿತಿಯನ್ನು ಪಡೆದುಕೊಂಡರು. ಇಲಾಖೆಯ ಸಚಿವರಾದ ಮಾನ್ಯ ಶಿವರಾಜ ತಂಗಡಿಗಿಯವರು ಕಲಾಕ್ಷೇತ್ರದ ನವೀಕರಣ ಮಾಡಿಸಲು ಉತ್ಸುಕರಾಗಿದ್ದಾರೆ ಎಂದೂ ತಿಳಿಸಿದರು. ಈಗ ಸಚಿವರ ಒತ್ತಾಸೆಯಂತೆ ನವೀಕರಣ ಯೋಜನೆಯ ರೂಪರೇಷೆಗಳು ಸಿದ್ದವಾಗಿ ಸರಕಾರದ ಅನುಮೋದನೆಗೆ ರವಾನೆಯಾಗಿದೆ.

ಇದೆಲ್ಲಾ ಸಂತಸದ ಸಂಗತಿಯೇ ಆಗಿದೆ. ಕಲಾಕ್ಷೇತ್ರ ಬ್ರ್ಯಾಂಡ್ ಬೆಂಗಳೂರಿನ ಐಕಾನ್ ಆಗುವುದಾದರೆ ಬೇಡ ಎನ್ನುವವರಾದರೂ ಯಾರು? ವಿಶ್ವದರ್ಜೆಯ ಥೇಯಟರ್ ನಮ್ಮದೆಂದು ಹೇಳಿಕೊಳ್ಳುವುದರಲ್ಲೇನಿದೆ ತಕರಾರು?  ಆದರೆ ದಿಗಿಲು ಹುಟ್ಟಿಸುವ ಸಂಗತಿ ಏನೆಂದರೆ ಈ ನವೀಕರಣಕ್ಕೆ ಮಾಡಲಾದ ಅಂದಾಜು ವೆಚ್ಚ 24 ಕೋಟಿಯಂತೆ. ಇದನ್ನು ಕೇಳಿಯೇ ಸಾಂಸ್ಕೃತಿಕ ಲೋಕದವರು ಬೆಚ್ಚಿಬಿದ್ದಿದ್ದಾರೆ. ಇಷ್ಟೊಂದು ಹಣದಲ್ಲಿ ಇನ್ನೊಂದು ಭವ್ಯವಾದ ಕಲಾಕ್ಷೇತ್ರವನ್ನೇ ಕಟ್ಟಬಹುದಾಗಿತ್ತಲ್ಲಾ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ರೀತಿಯ ಆತ್ಯಾಧುನಿಕ ರಂಗಮಂದಿರದಲ್ಲಿ ಕಲೆ ಸಾಹಿತ್ಯ ನಾಟಕಾದಿ ಕಾರ್ಯಕ್ರಮಗಳನ್ನು ಮಾಡಲು ಕನ್ನಡ ಸಾಂಸ್ಕೃತಿಕ ಕ್ಷೇತ್ರದವರಿಗೆ ಸಾಧ್ಯವಿದೆಯಾ? ಎಂದು ಆತಂಕವನ್ನೂ ಹೊರಹಾಕುತ್ತಿದ್ದಾರೆ.

ಹೌದು, ಈ ಆತಂಕ ನಿಜಕ್ಕೂ ಕಳವಳಕಾರಿಯಾಗಿರುವಂತಹುದು. ಈಗಾಗಲೇ ಬಿಜೆಪಿ ಸರಕಾರ ಇದ್ದಾಗ ರವೀಂದ್ರ ಕಲಾಕ್ಷೇತ್ರದ ಬಾಡಿಗೆಯನ್ನು ದುಪ್ಪಟ್ಟು ಮಾಡಲಾಗಿತ್ತು. ಜೊತೆಗೆ ಪ್ರತಿ ವರ್ಷ ಶೇಕಡಾ ಐದರಷ್ಟು ಬಾಡಿಗೆಯನ್ನು ಹೆಚ್ಚು ಮಾಡುವ ನಿರ್ಣಯವನ್ನೂ ಸರಕಾರ ಕೈಗೊಂಡಿತ್ತು. ಮೊದಲು  ರವೀಂದ್ರ ಕಲಾಕ್ಷೇತ್ರದ ಬಾಡಿಗೆ ದಿನವೊಂದಕ್ಕೆ ಕೇವಲ ನಾಲ್ಕು ಸಾವಿರವಿತ್ತು. ಕೇವಲ ಕಲಾಕ್ಷೇತ್ರ ಮಾತ್ರವಲ್ಲ ಕರ್ನಾಟಕದಾದ್ಯಂತ ಸಂಸ್ಕೃತಿ ಇಲಾಖೆಯ ನಿಯಂತ್ರಣದಲ್ಲಿರುವ ಎಲ್ಲಾ ರಂಗಮಂದಿರಗಳ ಬಾಡಿಗೆ ಇದೇ ರೀತಿ ಏಕರೂಪದಲ್ಲಿ ಇರಬೇಕೆಂದು ಆಗ ಸಚಿವೆಯಾಗಿದ್ದ ಮಾನ್ಯ ಉಮಾಶ್ರೀಯವರು ಆದೇಶ ಹೊರಡಿಸಿ ರಂಗಭೂಮಿಗೆ ದೊಡ್ಡ ಉಪಕಾರ ಮಾಡಿದ್ದರು. ಆದರೆ ನಂತರ ಬಂದ ಸರಕಾರ ಒಂದೊಂದು ರಂಗಮಂದಿರಕ್ಕೂ ಒಂದೊಂದು ರೀತಿ ಬಾಡಿಗೆ ನಿಗದಿಪಡಿಸಿ ಬೆಲೆ ಹೆಚ್ಚು ಮಾಡಿತು. ಇದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮಾಡುವವರಿಗೆ ಆರ್ಥಿಕ ಭಾರ ಹೆಚ್ಚಾಗಿ ನಾಟಕ ಪ್ರದರ್ಶನಗಳ ಸಂಖ್ಯೆ ಇಳಿಮುಖವಾಗಿತ್ತು.

ಈಗ ಒಂದು ದಿನಕ್ಕೆ ರವೀಂದ್ರ ಕಲಾಕ್ಷೇತ್ರದ ಬಾಡಿಗೆ ಒಟ್ಟು 25000 ರೂಪಾಯಿಯಾಗಿದೆ. ಇದರಲ್ಲಿ ಹತ್ತು ಸಾವಿರ ಠೇವಣಿ ಹಣ ಸೇರಿದ್ದರೂ ಮೇಂಟೇನನ್ಸ್, ಕರೆಂಟ್ ಅಂತಾ ಕಟ್ಟಿಂಗ್ ಮಾಡಿಕೊಳ್ಳಲಾಗುತ್ತದೆ. ಒಂದು ನಾಟಕ ಪ್ರದರ್ಶನ ಆಗಬೇಕೆಂದರೆ ಬೆಳಿಗ್ಗೆ ಟೆಕ್ನಿಕಲ್ ರಿಹರ್ಸಲ್ಸ ಮಾಡಿ ಸಂಜೆ ಪ್ರದರ್ಶನ ಕೊಡಬೇಕಾಗುತ್ತದೆ. ಮೊದಲೇ ಪ್ರೇಕ್ಷಕರ ಕೊರತೆಯಿಂದ ಬಡವಾಗಿರುವ ಕನ್ನಡ ರಂಗಭೂಮಿ ಆದಾಯ ತರುವ ಉದ್ಯಮವಂತೂ ಅಲ್ಲ. ಎಷ್ಟೋ ನಾಟಕ ಪ್ರದರ್ಶನಗಳು ಆರ್ಥಿಕ ನಷ್ಟದಲ್ಲಿ ಅಂತ್ಯವಾಗುತ್ತವೆ.

ಪರಿಸ್ಥಿತಿ ಹೀಗಿರುವಾಗ, ಕಲಾಕ್ಷೇತ್ರವನ್ನು ಅತ್ಯಾಧುನಿಕೀಕರಣ ಮಾಡಿದರೆ ಅದಕ್ಕೆ ತಕ್ಕಂತೆ ವಿಪರೀತ ಬಾಡಿಗೆಯನ್ನು ನಿಗಧಿಪಡಿಸಲಾಗುತ್ತದೆ. ಅಷ್ಟೊಂದು ಹಣ ಕೊಟ್ಟು ನಾಟಕ ಪ್ರದರ್ಶನಗಳನ್ನು ಮಾಡುವ ಶ್ರೀಮಂತಿಕೆ ಕನ್ನಡ ರಂಗಭೂಮಿಗೆ ಇಲ್ಲವಾಗಿದೆ. ಈಗ ರಂಗಭೂಮಿಯವರನ್ನು ಕಾಡುವ ಆತಂಕ ಇದೇ ಆಗಿದೆ. ಮತ್ತು ಸರಕಾರಕ್ಕೂ ಇದೇ ಬೇಕಾಗಿದೆ. ರಂಗಮಂದಿರವನ್ನು ಉನ್ನತೀಕರಿಸಿ ಸ್ಥಳೀಯ ನಾಟಕ ತಂಡದವರ ಕೈಗೆಟುಕದಂತೆ ಮಾಡುವುದು ಹಾಗೂ ಕಾರ್ಪೋರೇಟ್ ಕಾರ್ಯಕ್ರಮಗಳಿಗೆ, ರಿಯಾಲಿಟಿ ಶೋಗಳಿಗೆ ಕಲಾಕ್ಷೇತ್ರವನ್ನು ಬಾಡಿಗೆಗೆ ಕೊಡುವುದು ಸರಕಾರದ ಉದ್ದೇಶವಾಗಿದೆ. ಈಗಾಗಲೇ ರವೀಂದ್ರ ಕಲಾಕ್ಷೇತ್ರವನ್ನು ವಿಸ್ತಾರ ಟಿವಿ ವಾಹಿನಿಯವರಿಗೆ ಬಾಡಿಗೆಗೆ ಕೊಡಲಾಗುತ್ತಿದೆ. ಮುಂದೆ ಆಧುನಿಕೀಕರಣಗೊಂಡ ಕಲಾಕ್ಷೇತ್ರ ಅಂತವರ ಪಾಲಾಗುತ್ತದೆ.

ಕಲಾಕ್ಷೇತ್ರದ ಪಕ್ಕದಲ್ಲಿ ಟೌನ್  ಹಾಲ್ ಇದೆ. ಆರೇಳು ವರ್ಷಗಳ ಹಿಂದೆ ಅಲ್ಲಿ ಅನೇಕ ನಾಟಕ ಪ್ರದರ್ಶನಗಳು, ನಾಟಕೋತ್ಸವಗಳು, ರಂಗಸ್ಪರ್ಧೆಗಳು ನಿರಂತರವಾಗಿ ನಡೆಯುತ್ತಿದ್ದವು. ಮತ್ತು ಕಡಿಮೆ ಬಾಡಿಗೆಗೆ ಅದು ದೊರಕುತ್ತಿತ್ತು. ಆದರೆ ಯಾವಾಗ ಬಿಬಿಎಂಪಿ ಯವರು ಪುರಭವನದ ನವೀಕರಣ ಮಾಡಿದರೋ ಆಗ ಅದರ ಬಾಡಿಗೆ ದಿನವೊಂದಕ್ಕೆ ಐವತ್ತು ಸಾವಿರ ನಿಗದಿಪಡಿಸಿದರು. ಅಷ್ಟೊಂದು ಹಣ ಕೊಟ್ಟು ಕನ್ನಡ ರಂಗತಂಡಗಳಿಗೆ ನಾಟಕ ಮಾಡಲು ಸಾಧ್ಯವೇ? ಆ ನಂತರ ಟೌನ್ ಹಾಲ್ ನಲ್ಲಿ ರಂಗಚಟುವಟಿಕೆಗಳೇ ನಿಂತು ಹೋದವು. ಕಲಾಕ್ಷೇತ್ರ ಅತ್ಯಾಧುನಿಕರಣಗೊಂಡರೆ ಟೌನ್ ಹಾಲ್ ನಂತೆಯೇ ವಿಪರೀತ ಬಾಡಿಗೆ ತೆತ್ತಬೇಕಾಗುತ್ತದೆ ಎನ್ನುವುದು ರಂಗಕರ್ಮಿಗಳ ಭಯ. ಇದೇ ರೀತಿ ಹನುಮಂತನಗರದಲ್ಲಿರುವ ಕೆ.ಹೆಚ್.ಕಲಾಸೌಧವನ್ನು ನವೀಕರಣ ಮಾಡಿ ಬಿಬಿಎಂಪಿ ಅದರ ಟೆಂಡರ್ ಹಣ ಹೆಚ್ಚಿಸಿದ್ದರಿಂದಾಗಿ ಬಾಡಿಗೆ ದುಪ್ಪಟ್ಟಾಯಿತು. ಬನಶಂಕರಿನಗರದಲ್ಲಿರುವ ಸುಚಿತ್ರಾ ರಂಗಮಂದಿರವನ್ನು ಪೂರ್ವಂಕರ ಎನ್ನುವ ಖಾಸಗಿ ಕಂಪನಿಯವರು ನವೀಕರಣ ಮಾಡಿ ಬಾಡಿಗೆ ದರವನ್ನು ಮೂರು ಪಟ್ಟು ಹೆಚ್ಚಿಸಿದರು. ನವೀಕರಣದಿಂದಾಗುವ ಆರ್ಥಿಕ ಹಣದುಬ್ಬರದ ಬಗ್ಗೆ, ಸಾಂಸ್ಕೃತಿಕ ಕ್ಷೇತ್ರದ ಮೇಲಾಗುವ ಹೆಚ್ಚುವರಿ ಹೊರೆಯ ಬಗ್ಗೆ ಇಂತಹ ಹಲವಾರು ಉದಾಹರಣೆ ಕೊಡಬಹುದಾಗಿದೆ.

ಇಷ್ಟಕ್ಕೂ ಸಂಪೂರ್ಣ ಆಧುನೀಕರಣ ಮಾಡುವಂತಹ ಅನಿವಾರ್ಯತೆ ಕಲಾಕ್ಷೇತ್ರಕ್ಕೆ ಏನಿದೆ?  ಕೇವಲ ಐದು ವರ್ಷಗಳ ಹಿಂದೆ ಇದೇ ಕಾಂಗ್ರೆಸ್ ಸರಕಾರ ಇದ್ದಾಗ ವರ್ಷಗಳ ಕಾಲ ಕಲಾಕ್ಷೇತ್ರವನ್ನು ಮುಚ್ಚಿ ಎರಡೂಕಾಲು ಕೋಟಿ ರೂಪಾಯಿಗಳಷ್ಟು ಖರ್ಚು ಮಾಡಿ ನವೀಕರಣ ಮಾಡಿಯಾಗಿದೆ. ದ್ವನಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಅಪಗ್ರೇಡ್ ಮಾಡಲಾಗಿದೆ. ಈಗಲೂ  ಹೆಚ್ಚುವರಿ ಲೈಟಿಂಗ್ ಅಳವಡಿಸಿ, ಹಾಳಾದ ಲೈಟ್ಸಗಳನ್ನು ಬದಲಾಯಿಸಿ, ಹೆಚ್ಚುವರಿ ಸ್ಪೀಕರ್ ಗಳನ್ನು ಹಾಕಿಸಿ, ಈಗಾಗಲೇ ಇದ್ದು ಕೆಲಸ ಮಾಡದೇ ಇರುವ ಹವಾನಿಯಂತ್ರಣದ ವ್ಯವಸ್ಥೆಯನ್ನು ಸರಿಪಡಿಸಿದರೆ ಸಾಕು ನೆಮ್ಮದಿಯಾಗಿ ಎಂತಹುದೇ ಕಾರ್ಯಕ್ರಮಗಳನ್ನು ಕಲಾಕ್ಷೇತ್ರದಲ್ಲಿ ಮಾಡಬಹುದಾಗಿವೆ. ಕಡಿಮೆ ವೆಚ್ಚದಲ್ಲಿ, ಕಡಿಮೆ ಸಮಯದಲ್ಲಿ ಆಗಬಹುದಾದ ರಿಪೇರಿ ಕೆಲಸಗಳನ್ನು ಮಾಡಿಸುವುದು ಬಿಟ್ಟು ಇಡೀ ಕಲಾಕ್ಷೇತ್ರವನ್ನೇ ಅತ್ಯಾಧಿಕರಣ ಮಾಡುತ್ತೇವೆ ಎನ್ನುವುದರ ಹಿಂದೆ ಇರುವಂತಿದೆ ಅಗೋಚರ ಆರ್ಥಿಕ ಅವ್ಯವಹಾರದ ಗುಟ್ಟು. 

ಹೌದು, ಸಂಸ್ಕೃತಿ ಇಲಾಖೆಯ ಕೃಪಾ  ಕಟಾಕ್ಷದಲ್ಲಿರುವ ಅಕಾಡೆಮಿ ಪ್ರಾಧಿಕಾರಗಳಿಗೆ ಹಾಗೂ ರಂಗಾಯಣಗಳಿಗೆ ಬಿಡುಗಡೆ ಮಾಡಲು ಅನುದಾನವಿಲ್ಲ. ಎಲ್ಲಿ ಈ ಸರಕಾರಿ ಸಂಸ್ಥೆಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಿದರೆ ಕೊಟ್ಯಾಂತರ ಹಣ ಬಿಡುಗಡೆ ಮಾಡಬೇಕಾಗುತ್ತದೆಯೋ ಎಂದು ಸರಕಾರ ಎಂಟು ತಿಂಗಳಾದರೂ ಇನ್ನೂ ನೇಮಕಾತಿ ಮಾಡುತ್ತಿಲ್ಲ. ಸಂಸ್ಕೃತಿ ಇಲಾಖೆಯ ಕಾರ್ಯಕ್ರಮದಲ್ಲಿ ಪ್ರದರ್ಶನ ಕೊಟ್ಟ ಜಾನಪದ ಕಲಾವಿದರಿಗೆ ಎರಡು ವರ್ಷಗಳಾದರೂ ಇನ್ನೂ ಗೌರವಧನ ಬಿಡುಗಡೆಯಾಗಿಲ್ಲ. ಸಾಂಸ್ಕೃತಿಕ ತಂಡಗಳಿಗೆ ಪ್ರಾಯೋಜನೆ ಕೊಡಲು ಹಣವಿಲ್ಲದಾಗಿದೆ, ಕಲಾ ತಂಡಗಳಿಗೆ ಕೊಡಲಾಗುವ ಅನುದಾನವನ್ನು ಕಡಿತಗೊಳಿಸಲಾಗಿದೆ, ಕಲಾವಿದರಿಗೆ ಮಾಸಿಕ ಪಿಂಚಣಿ ಎಂದೂ ಪ್ರತಿ ತಿಂಗಳು ಪಾವತಿಯಾಗುತ್ತಿಲ್ಲ. ಇಲಾಖೆಯ ರಂಗಮಂದಿರಗಳಲ್ಲಿರುವ ಸಿಬ್ಬಂದಿಗಳಿಗೆ ಆರೇಳು ತಿಂಗಳಿಗೊಮ್ಮೆ ಸತಾಯಿಸಿ ಸಂಬಳ ಕೊಡಲಾಗುತ್ತಿದೆ.  ಇಂತಹ ಆರ್ಥಿಕ ದುಸ್ಥಿತಿಯಲ್ಲಿ 24 ಕೋಟಿ ಖರ್ಚು ಮಾಡಿ ಕಲಾಕ್ಷೇತ್ರ ನವೀಕರಣ ಮಾಡುವ ಅಗತ್ಯವಾದರೂ ಏನಿದೆ? ಕಟ್ಟಿಸಲೇ ಬೇಕೆಂದಿದ್ದರೆ ಇದೇ ಹಣದಲ್ಲಿ ಬೆಂಗಳೂರಿನ ಬೇರೆ ಕಡೆ ಇನ್ನೊಂದು ಕಲಾಕ್ಷೇತ್ರವನ್ನೇ ಕಟ್ಟಲಿ. ಇಲ್ಲವೇ ಇಷ್ಟೇ ಹಣದಲ್ಲಿ ತಲಾ ಎರಡು ಕೋಟಿಗೊಂದರಂತೆ ಒಟ್ಟು 12 ಆಪ್ತ ರಂಗಮಂದಿರಗಳನ್ನು 12 ಜಿಲ್ಲಾ ಕೇಂದ್ರಗಳಲ್ಲಿ ಕಟ್ಟಿಸಬಹುದಾಗಿತ್ತು. ಹಾಗೆ ಮಾಡಿದರೆ ಆ ಜಿಲ್ಲಾಕೇಂದ್ರಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಗರಿಗೆದರಬಹುದಾಗಿತ್ತು. ಕನ್ನಡ ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಅಗತ್ಯವಾದ ಇಂತಹ ಕಾರ್ಯಯೋಜನೆಗಳನ್ನು ಅನುಷ್ಟಾನಕ್ಕೆ ತರುವ ಬದಲಾಗಿ ದುಂದುವೆಚ್ಚದ ಅನಗತ್ಯ ಯೋಜನೆ ರೂಪಿಸುವ ಅಗತ್ಯವಾದರೂ ಏನಿದೆ? ಇಂತಹ ಅತೀ ವೆಚ್ಚದ ಆಧುನೀಕರಣಕ್ಕೆ ಈಗ ಒತ್ತಾಯ ಮಾಡಿದ್ದಾದರೂ ಯಾರು? ಇಂತಹುದನ್ನು ಯಾವೊಬ್ಬ ರಂಗಕರ್ಮಿಯೂ ಕೇಳಿಲ್ಲ, ಯಾವ ಸಾಹಿತಿ ಕಲಾವಿದರೂ ಒತ್ತಾಯಿಸಿಲ್ಲ. ಯಾವುದೇ ಸಂಘ ಸಂಸ್ಥೆಯೂ ಬೇಕೆ ಬೇಕೆಂದು ಪ್ರತಿಭಟನೆ ಮಾಡಿಲ್ಲ. ಆದರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸ್ವಯಂಪ್ರೇರಿತವಾಗಿ ಇಂತಹ ಅನಗತ್ಯ ವೆಚ್ಚದಾಯಕ ಯೋಜನೆ ರೂಪಿಸಿ ಸರಕಾರದ ಅನುಮೋದನೆಗೆ ಒತ್ತಾಯಿಸುತ್ತಿದೆಯೆಂದರೆ ಇದರ ಹಿಂದೆ ಇರುವ ಗುತ್ತಿಗೆ ಲಾಭಗಳ ಲೆಕ್ಕಾಚಾರಗಳ ಬಗ್ಗೆ ಗುಮಾನಿ ಪಡಲೇಬೇಕಿದೆ. ಈ ರೀತಿಯ ದುಂದು ವೆಚ್ಚಕ್ಕೆ ಮಾನ್ಯ ಮುಖ್ಯಮಂತ್ರಿಗಳು ಅನುಮತಿ ಕೊಡದೇ ನಿರಾಕರಿಸಬೇಕಿದೆ. ಇಂತಹ ಅನಗತ್ಯ ಅದ್ದೂರಿ ಯೋಜನೆಗಳ ವಿರುದ್ದ ಸಾಂಸ್ಕೃತಿಕ ಕ್ಷೇತ್ರದ ಕಲಾವಿದರು ಸಾಹಿತಿಗಳು ಹಾಗೂ ಸಂಘ ಸಂಸ್ಥೆಗಳು ದ್ವನಿ ಎತ್ತಲೇಬೇಕಿದೆ. ಕಲಾಕ್ಷೇತ್ರವನ್ನು ಕಲೆಗಾಗಿಯೇ ಮೀಸಲಿಡಬೇಕಾಗಿದೆ. 

- ಶಶಿಕಾಂತ ಯಡಹಳ್ಳಿ
28-01-2024

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ