ಶನಿವಾರ, ಅಕ್ಟೋಬರ್ 15, 2016

ತಹ ತಹ .....38 ಹೆಂಡಾ ಬೇಡಾ ಭೂಮಿ ಬೇಕು: ಮಹಿಳೆಯರ ಬೇಡಿಕೆ ಈಡೇರಲೇಬೇಕು;


ನೊಂದ ಮಹಿಳೆಯರ ಕೂಗು ದೊರೆಗೆ ತಲುಪಬೇಕು:



ಅತ್ತ ಬಿಹಾರದಲ್ಲಿ ಸರಕಾರ ಹೊರಡಿಸಿದ ಸರಾಯಿ ನಿಷೇಧ ಆದೇಶವನ್ನು ಬಿಹಾರ್ ಹೈಕೋರ್ಟ್  ರದ್ದುಪಡಿಸಿ ಸರಾಯಿ ಲಾಭಿ ಸಂಭ್ರಮಿಸುವಂತೆ ಮಾಡಿತು. ಇತ್ತ ಗಾಂಧಿ ಜಯಂತಿಯ ದಿನ ರಾಯಚೂರಿನಲ್ಲಿ ಸರಾಯಿ ನಿಷೇಧಿಸಲು ಮಹಿಳೆಯರ ಜನಾಂದೋಲನವೇ ನಡೆಯಿತು. ಗಂಡಸರ ಮಧ್ಯಪಾನ ವ್ಯಸನವೆಂಬುದು ನಮ್ಮ ಗ್ರಾಮೀಣ ಮಹಿಳೆಯರನ್ನು ಅದೆಷ್ಟು ದುಃಸ್ವಪ್ನವಾಗಿ ಕಾಡಿದೆಯೆಂದರೆ ರಾಯಚೂರು ಪ್ರಾಂತ್ಯದ ಮಹಿಳೆಯರು ಮಧ್ಯಪಾನ ನಿಷೇಧ ಆಂದೋಲನಕ್ಕೆ ಸ್ವಯಂಪ್ರೇರಿತರಾಗಿ ಬಂದು ಅಭೂತ ಪೂರ್ವ ಬೆಂಬಲ ವ್ಯಕ್ತಪಡಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಇತ್ತೀಚೆಗೆ ಭಾಗದಲ್ಲಿ ನಡೆದ ಅತೀ ದೊಡ್ಡರೀತಿಯ ಪ್ರತಿಭಟನೆ ಇದಾಗಿದ್ದು  ಮಹಿಳೆಯರೇ ಪ್ರತಿಭಟನೆಯಲ್ಲಿ ಬ್ರಹತ್ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಹೋರಾಟದ ವಿಶೇಷತೆಯಾಗಿತ್ತು.

ನವಜೀವನ ಮಹಿಳಾ ಸಂಘಟನೆ ಮತ್ತು ಗ್ರಾಮೀಣ ಕೂಲಿ ಕಾರ್ಮಿಕ ಸಂಘಗಳ ನೇತೃತ್ವದಲ್ಲಿ ನಡೆದ ಮಹಿಳಾ ಆಂದೋಲನಕ್ಕೆ ಹಲವಾರು ಪ್ರಗತಿಪರ ಸಂಘಟನೆಗಳು ಬೆಂಬಲಿಸಿ ಭಾಗವಹಿಸಿದ್ದವು. ಸರಾಯಿ ವಿರುದ್ಧ ಆಗಾಗ ಬಿಡಿ ಪ್ರತಿಭಟನೆಗಳು ಕರ್ನಾಟಕದಲ್ಲಿ ನಡೆದಿವೆ. ಆದರೆ ಇಷ್ಟು ದೊಡ್ಡ ಮಟ್ಟದಲ್ಲಿ ಮಹಿಳೆಯರು ಸಂಘಟಿತರಾಗಿ ಬೀದಿಗಿಳಿದಿದ್ದು ಚಾರಿತ್ರಿಕವಾದದ್ದು. 

ಗಾಂಧಿ ಮಹಾತ್ಮರು 'ಪಾನ ನಿಷೇದವು ಗ್ರಾಮ ಸ್ವರಾಜ್ಯದ ಅಡಿಪಾಯ'ವೆಂದು ಸರಿಯಾಗಿಯೇ ಗ್ರಹಿಸಿ ಕುಡಿತದ ಕೆಡುಕಿನ ಬಗ್ಗೆ ಎಚ್ಚರಿಸಿದ್ದರು. ಆದರೆ ದೇಶ ರಾಜ್ಯಗಳನ್ನಾಳುವ ಪ್ರಭುಗಳಿಗೆ ಹೆಂಡ ಎನ್ನುವುದು ಆದಾಯದ ಮೂಲವಾಯಿತು. ರಾಜ್ಯಗಳ ಒಟ್ಟು ಆದಾಯದಲ್ಲಿ ಶೇಕಡಾ ಇಪ್ಪತ್ತರಷ್ಟು ಆದಾಯ ಬರುವುದೇ ಹೆಂಡ ಮಾರಾಟದ ಗುತ್ತಿಗೆ ಹಾಗೂ ತೆರಿಗೆಗಳಿಂದ. ಹೀಗಾಗಿ ಪಾನನಿಷೇಧವೆನ್ನುವುದು ಮರೀಚಿಕೆಯಾಗಿದೆ. ಮಹಿಳೆಯರ ಒತ್ತಾಯಕ್ಕೆ ಮಣಿದ ಬಿಹಾರದ ಸರಕಾರ ಕುಡಿತವನ್ನು ನಿಷೇಧಿಸಿದರೂ ಕೋರ್ಟು ಕುಡುಕರ ಹಕ್ಕನ್ನೇ ಎತ್ತಿ ಹಿಡಿದಿದೆ. ರಾಜ್ಯ ಸರಕಾರ ಜನರಿಗೆ ಸರಾಯಿ ಕುಡಿಸಿ ಗಳಿಸಿದ ಆದಾಯವನ್ನು ಮತ್ತೆ ಜನರ ಆರೋಗ್ಯಕ್ಕೇ ಖರ್ಚುಮಾಡಬೇಕಾಗುತ್ತದೆ ಅಂದರೆ ಅಬಕಾರಿ ಇಲಾಖೆಯ ಆದಾಯ ಆರೋಗ್ಯ ಇಲಾಖೆಗೆ ಕೊಡಬೇಕಾಗುತ್ತದೆ ಎಂಬ ಸಾಮಾನ್ಯ ಜ್ಞಾನ ನಮ್ಮ ಆಳುವ ಸರಕಾರಗಳಿಗಿಲ್ಲವಾಗಿದೆ.


ಕುಡಿತ ಎನ್ನುವುದು ಕೇವಲ ವ್ಯಕ್ತಿಗತ ವ್ಯಸನ ಮಾತ್ರವಲ್ಲ ಕೌಟುಂಬಿಕ ಹಾಗೂ ಸಾಮಾಜಿಕ ಸಮಸ್ಯೆಯಾಗಿದೆ. ಪುರುಷರ ಕುಡಿತಕ್ಕೆ ಅದೆಷ್ಟೋ ಕುಟುಂಬಗಳು ಬಲಿಯಾಗಿ ತಲ್ಲಣಗೊಂಡಿವೆ. ಕುಡಿತದ ದುಷ್ಪರಿಣಾಮಕ್ಕೆ ಮೊಟ್ಟ ಮೊದಲು ಹಿಂಸೆಗೊಳಗಾಗುವವರೇ ಮಹಿಳೆಯರು. ಆರ್ಥಿಕ ತಾಪತ್ರಯಗಳ ಬಿಸಿ ಮುಟ್ಟುವುದೇ ಮಹಿಳೆಯರಿಗೆ. ಹೆಂಡದ ದಾಸ್ಯಕ್ಕೊಳಗಾದವ ದುಡಿಯುವುದಿಲ್ಲ. ದುಡಿದರೂ ದುಡಿದಿದ್ದು ಕುಡಿತಕ್ಕೆ ಸಾಲುವುದಿಲ್ಲ.   ಮನೆಯ ಮಹಿಳೆಯರ ಸಂಪಾದನೆಯನ್ನೂ ಬಲವಂತವಾಗಿ ಕಿತ್ತುಕೊಂಡು ಸರಾಯಿ ಅಂಗಡಿಗೆ ಸುರಿಯುವುದು ತಪ್ಪುತ್ತಿಲ್ಲ. ಇದರಿಂದಾಗಿ ಗ್ರಾಮೀಣ ಮಹಿಳೆಯರೆಲ್ಲರ ಅಸಹನೆ ಮಿತಿಮೀರುತ್ತಿದೆ. ತಮ್ಮ ಮನೆಯ ಪುರುಷರ ವ್ಯಸನಕ್ಕಿಂತಲೂ ಅವರಿಗೆ ಹೆಂಡ ಸಿಗುವಂತೆ ಮಾಡುವ ಮಾರಾಟಗಾರರ ಮೇಲೆ ಹಾಗೂ ಸರಾಯಿ ವ್ಯಾಪಾರಕ್ಕೆ ಅನುಮತಿ ಕೊಟ್ಟ ಸರಕಾರದ ಮೇಲೆ ಹೆಣ್ಮಕ್ಕಳಿಗೆ ಅಸಾಧ್ಯ ಆಕ್ರೋಶವಿದೆ. ಹೀಗೇ ಸುಮ್ಮನಿದ್ದರೆ ಮಕ್ಕಳ ಸಮೇತ ಬೀದಿಗಿಳಿದು ಭಿಕ್ಷೆ ಬೇಡುವ ದುಸ್ಥಿತಿ ಬರುತ್ತದೆಂಬುದನ್ನು ಮನಗಂಡ ನೊಂದ ಮಹಿಳೆಯರೆಲ್ಲಾ ಸಂಘಟಿತರಾಗಿ ರಾಯಚೂರಿನಲ್ಲಿ ಬೀದಿಗಿಳಿದು ಆಂದೋಲನ ಆರಂಭಿಸಿದ್ದನ್ನು ಎಲ್ಲಾ ಪ್ರಜ್ಞಾವಂತರೂ ಬೆಂಬಲಿಸಬೇಕಿದೆ. ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕಿದೆ. 

" ನಮಗೆ ಸರಾಯಿ ಬೇಡ, ಕುಡಿಯಲು ನೀರು ಕೊಡಿ, ನಮಗೆ ಹೆಂಡ ಬೇಡ ಭೂಮಿ ವಸತಿ ಕೊಡಿ, ನಮಗೆ ಹೆಂಡದಂಗಡಿ ಬೇಡ ಶಾಲೆ ಕಾಲೇಜ್ ತೆರೆಯಿರಿ" ಎನ್ನುವ ಘೋಷಣೆಗಳು ಗ್ರಾಮೀಣ ಪ್ರದೇಶದ ಬಡಮಹಿಳೆಯರ ಒಡಲುರಿಯಾಗಿ ಸಮ್ಮೇಳನದಲ್ಲಿ ಹೊರಹೊಮ್ಮಿದವು. 

ಸ್ವಸ್ಥ ಸಮಾಜಕ್ಕಾಗಿ, ಸಭಲ ಆರ್ಥಿಕತೆಗಾಗಿ, ಕೌಟುಂಬಿಕ ನೆಮ್ಮದಿಗಾಗಿ ನಡೆದ ಆಂದೋಲನವನ್ನು ದೇಶದ ಜನತೆಗೆ ಹಾಗೂ ಆಳುವ ಪ್ರಭುಗಳಿಗೆ ಪರಿಣಾಮಕಾರಿಯಾಗಿ ತೋರಿಸಿ ಎಚ್ಚರಿಸಬೇಕಾದ ಸುದ್ದಿ ವಾಹಿನಿ ಮಾಧ್ಯಮಗಳಿಗೆ ಮಹಿಳಾ ಆಂದೋಲನ ಪ್ರಮುಖವಾದ ಸುದ್ದಿ ಎನ್ನಿಸಲೇ ಇಲ್ಲ. ರಾಜಕಾರಣಿಯ ಕಿಸ್ಸಿಂಗ್ ಹಗರಣವಾಗಿದ್ದರೆ, ಸಿನೆಮಾದ ನಟನಟಿಯರ ಕುಟುಂಬ ಕಲಹವಾಗಿದ್ದರೆ ದಿನದಿಪ್ಪತ್ನಾಲ್ಕು ಗಂಟೆ ಬಾಯಿಬಡಿದುಕೊಳ್ಳುವ ಮೀಡಿಯಾಂಗದ ಕೂಗುಮಾರಿಗಳಿಗೆ ಉರಿಬಿಸಿಲಲ್ಲಿ ಬೀದಿಯಲಿ ನಿಂತು ಆಗ್ರಹಿಸುತ್ತಿರುವ ಹದಿನೈದು ಸಾವಿರಕ್ಕೂ ಹೆಚ್ಚಿದ್ದ ಮಹಿಳೆಯರ ಒಡಲುರಿಯ ಸಂಕಟ ಮುಖ್ಯ ಅನ್ನಿಸಲೇ ಇಲ್ಲಲೋಕಲ್ ಪತ್ರಿಕೆಗಳನ್ನು ಹೊರತು ಪಡಿಸಿ ರಾಜ್ಯವ್ಯಾಪಿ ಎಡಿಶನ್ ಗಳು ಮಹಿಳೆಯರ ಸಂಕಟಕ್ಕೆ ದ್ವನಿಗೂಡಿಸಲಿಲ್ಲ. ವ್ಯಸನಕ್ಕೆ ಬಲಿಯಾದ ಸಿಎಂ ಸಿದ್ದರಾಮಯ್ಯನವರ ಮಗನ ಮರಣದ ಸುದ್ದಿ ಎಲ್ಲಾ ಮಾಧ್ಯಮಗಳಲ್ಲಿ ವಾರಗಳ ಕಾಲ ವಿಜ್ರಂಭಿಸಿತು. ಆದರೆ ಕುಡಿತದ ವ್ಯಸನಕ್ಕೆ ಬಲಿಯಾಗುತ್ತಿರುವ ಗ್ರಾಮೀಣ ಜನರ ಜೀವನ್ಮರಣದ ಸಂಗತಿ ಮಾಧ್ಯಮಗಳಿಗೆ ಸುದ್ದಿ ಎನ್ನಿಸಲೇ ಇಲ್ಲ. ಬಂಡವಾಳಶಾಹಿ ವ್ಯವಸ್ಥೆಯ ಪರವಾಗಿರುವ ಬಹುತೇಕ ಮಾಧ್ಯಮಗಳು ಶೋಷಕ ವ್ಯವಸ್ಥೆಯ ಪರವಾಗಿದ್ದು ಶೋಷಿತರ ದ್ವನಿಗೆ ಪ್ರತಿದ್ವನಿಯಾಗುವುದಂತೂ ಅಸಾಧ್ಯ.


ಶಾಂತಿಯುತವಾಗಿ ಜನರು ಪ್ರತಿಭಟಿಸಿದಾಗ ಸರಕಾರ ಎಚ್ಚೆತ್ತುಕೊಳ್ಳಬೇಕು. ನೊಂದವರ ಆಕ್ರೋಶ ಹಿಂಸಾತ್ಮಕ ಮಾರ್ಗ ಹಿಡಿಯುವ ಮುನ್ನ ಸರಕಾರ ಸರಾಯಿ ನಿಷೇಧಕ್ಕೆ ಮುಂದಾಗಬೇಕು. ಮಹಿಳೆಯರಿಗೆ ಮಾರಕವಾಗಿರುವ, ಕುಟುಂಬಗಳ ನಾಶಕ್ಕೆ ಕಾರಣವಾಗಿರುವ, ಸಮಾಜದ ಅವನತಿಗೆ ಪ್ರೇರಕವಾಗಿರುವ, ದೇಶದ ಅಭಿವೃದ್ದಿಗೆ ಕಂಟಕವಾಗಿರುವ ಮಧ್ಯಪಾನವನ್ನು ರಾಜ್ಯಾದ್ಯಂತ ನಿಷೇಧಿಸಲು ಶಾಸಕಾಂಗವು ಶಾಸನ ಸಭೆಯಲ್ಲಿ ಕಾಯಿದೆಯಾಗಿಸಬೇಕು. ಆದರೆ ಹೆಂಡದ ಲಾಭಿ ಪರೋಕ್ಷವಾಗಿ ರಾಜಕೀಯ ಪಕ್ಷಗಳ ಮಹಾಪೋಷಕರೂ ಆಗಿದ್ದರಿಂದ ಅಂತಹ ದಿಟ್ಟ ನಿರ್ಣಯ ತೆಗೆದುಕೊಳ್ಳುವುದು ರಾಜ್ಯದಲ್ಲಿ ಕನಸಿನ ಮಾತು. ನ್ಯಾಯಾಂಗ ಹೇಳುತ್ತದೆ ಕುಡುಕರ ಕುಡಿಯುವ ಹಕ್ಕನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲವೆಂದು. ಶಾಸಕಾಂಗ ಹೇಳುತ್ತದೆ ಇಷ್ಟಾ ಇದ್ದವರು ಕುಡಿಯಲಿ ಇಲ್ಲವಾದವರು ಬಿಡಲಿ, ಸರಕಾರಕ್ಕೆ ಆದಾಯ ನಿರಂತರವಾಗಿ ಬರಲಿ ಎಂದು. ಅಕ್ರಮ ಸರಾಯಿ ತಯಾರಿ ಹಾಗೂ ಮಾರಾಟವನ್ನು ಮಟ್ಟಹಾಕಬೇಕಾದ ಕಾರ್ಯಾಂಗವು ನಮಗೆ ಕೊಡುವ ಮಾಮೂಲಿ ಕೊಟ್ಟು ಯಾರಾದರೂ ಸಾಯಲಿ ನಮಗೇನು ಎನ್ನುತ್ತದೆ. ಟಿಆರ್ಪಿ ಬರದಿದ್ದಮೇಲೆ ಹೋರಾಟ ಹಾರಾಟಹಳ ಕುರಿತು ನಾವೇಕೆ ತಲೆಕೆಡಿಸಿಕೊಳ್ಳಬೇಕು ಎಂದು ಮೀಡಿಯಾಂಗ್ ಮುಖ ತಿರುಗಿಸುತ್ತದೆ.

ಬಂಡವಾಳಶಾಹಿ ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಹಾಗೂ ಮೀಡಿಯಾಂಗಗಳು ಯಾವತ್ತಿಗೂ ಆಳುವ ವರ್ಗಗಳ ಪರವಾಗಿದ್ದು ದುಡಿಯುವ ಜನತೆಯ ಶತ್ರುಗಳೇ ಆಗಿದ್ದಾವೆಂಬುದು ಹಲವಾರು ಸಂದರ್ಭಗಳಲ್ಲಿ ನಿರೂಪಿತವಾಗಿವೆ. ನಾಲ್ಕೂ ಅಂಗಗಳನ್ನು ಮಣಿಸುವ ಶಕ್ತಿ ಹಾಗೂ ಸಾಮರ್ಥ್ಯ ಇರುವುದು ಬಹುಸಂಖ್ಯಾತ ದುಡಿಯುವ ವರ್ಗಗಳ ಸಂಘಟನಾತ್ಮಕ ಹೋರಾಟಗಳಿಗೆ ಮಾತ್ರ. ಜನಾಲೊಂದನಗಳು ಮಾತ್ರ ದೇಶದಲ್ಲಿ ಬದಲಾವಣೆ ತರಲು ಸಾಧ್ಯ. ನಿಟ್ಟಿನಲ್ಲಿ  ರಾಯಚೂರಿನ ಮಹಿಳೆಯರ ಮಧ್ಯಪಾನ ವಿರೋಧಿ ಚಳುವಳಿ ಬಹು ಮುಖ್ಯವಾದ ಆರಂಭವಾಗಿದೆ. ಚಳುವಳಿಯನ್ನು ಗತಿತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿ ಯಶಸ್ವಿಗೊಳಿಸಬೇಕಾದ ಹೊಣೆಗಾರಿಕೆ ಜನ ಸಂಘಟನೆಗಳ ಮೇಲಿದೆ. ಕೂಲಿ ಕಾರ್ಮಿಕ  ರೈತ ದಲಿತರನ್ನು ಶೋಷಣೆಯಿಂದ ಬಿಡುಗಡೆಗೊಳಿಸುವ ಎಲ್ಲಾ ಹೋರಾಟಗಳು ಮೊದಲು ಆರಂಭವಾಗಬೇಕಾದದ್ದೇ ಸರಾಯಿ, ತಂಬಾಕು ಮುಂತಾದ ಮಾದಕ ವಸ್ತುಗಳ ಸಂಪೂರ್ಣ ನಿಷೇಧಕ್ಕಾಗಿಜನರನ್ನು ವ್ಯಸನಿಗಳನ್ನಾಗಿಸಿ ಅವರ ಆಲೋಚನಾ ಪ್ರಜ್ಞೆಯನ್ನು ಹಾಳುಮಾಡುವುದು ಹಾಗೂ ಕೇವಲ ಮತಬ್ಯಾಂಕ್ ರೀತಿಯಲ್ಲಿ ಜನರನ್ನು ಅಗತ್ಯವಿದ್ದಾಗ ಮಾತ್ರ ಬಳಸಿಕೊಳ್ಳುವುದು ಆಳುವ ವರ್ಗಗಳ ಒಳಹುನ್ನಾರವಾಗಿದೆ. ಮೊದಲು ಎಲ್ಲಾ ಪ್ರಗತಿಪರ ಜನ ಸಂಘಟನೆಗಳು ತಮ್ಮೆಲ್ಲಾ ಸಂಘಟನಾತ್ಮಕ ಸಾಮರ್ಥ್ಯವನ್ನು ಬಳಸಿಕೊಂಡು ರಾಜ್ಯವನ್ನು ವ್ಯಸನಮುಕ್ತ ಗೊಳಿಸುವ ನಿಟ್ಟಿನಲ್ಲಿ ಹೋರಾಟಗಳನ್ನು ತೀವ್ರಗೊಳಿಸಿ ಸರಕಾರವನ್ನು ಶತಾಯ ಗತಾಯ ಒಪ್ಪಿಸಬೇಕಿದೆ. ನಮ್ಮ ಗ್ರಾಮೀಣ ಪ್ರದೇಶದ ಅಕ್ಕತಂಗಿಯರು, ಅವ್ವ ಅಜ್ಜಿಯರು ನೆಮ್ಮದಿಯಿಂದ ಬಾಳಬೇಕಿದೆ. ಎಲ್ಲರೂ ಸೇರಿ ಸ್ವಸ್ಥ ಸಮಾಜ ನಿರ್ಮಿಸಬೇಕಿದೆ. ಸರಾಯಿ ನಿಷೇಧ ಜನಾಂದೋಲನದ ರೂವಾರಿಗಳಾದ ಅಭಯ್ ಕುಮಾರ್ ಹಾಗೂ ವಿದ್ಯಾ ಪಾಟೀಲ್ ಮತ್ತು ಜೊತೆಗೂಡಿದ ಎಲ್ಲಾ ಸಂಘಟನೆಗಳ ಸಂಗಾತಿಗಳನ್ನು ಅಭಿನಂದಿಸಿ ಮುಂದಿನ ಹೋರಾಟಕ್ಕೆ ನೈತಿಕ ಬೆಂಬಲ ಕೊಡಬೇಕಿದೆ. ದುಡಿಯುವ ಜನರ ಐಕ್ಯತೆ ಚಿರಾಯುವಾಗಲಿ. ಆದಷ್ಟು ಬೇಕ ವ್ಯಸನ ಮುಕ್ತ ರಾಜ್ಯ ನಮ್ಮದಾಗಲಿ.

- ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ