ಮಂಗಳವಾರ, ಅಕ್ಟೋಬರ್ 25, 2016

ತಹ ತಹ.... 52 ಉನ್ಮಾದ ರಾಜಕಾರಣಕ್ಕೆ ಬೇಕಿದೆ ಸುಪ್ರಿಂ ಅಂಕುಶ:



ಭಾರತದ ಉನ್ನತ ನ್ಯಾಯಾಲಯ ಇರೋದೇ ಹೀಗೆ. ಕೆಲವೊಮ್ಮೆ ಜನರ ನಿರೀಕ್ಷೆಗಳಿಗೆ ವ್ಯತಿರಿಕ್ತವಾಗಿ ತೀರ್ಪಿತ್ತು ಆಳುವ ವರ್ಗಗಳ ಹಿತಾಸಕ್ತಿಯನ್ನು ಕಾಪಾಡಿದರೆ ಇನ್ನು ಕೆಲವೊಮ್ಮೆ ಅಧಿಕಾರಸ್ತರ ಬುಡವನ್ನೇ ಅಲ್ಲಾಡಿಸುತ್ತದೆ. ಈ ನ್ಯಾಯಾಲಯಗಳ ಬಗ್ಗೆ ಇನ್ನೇನು ಜನರು ವಿಶ್ವಾಸ ಕಳೆದುಕೊಂಡರು ಎನ್ನುವುದರೊಳಗೆ  ಆಳುವವರ ವಿರುದ್ದ ಬರುವ ನಿರ್ಣಯಗಳು ಕೋರ್ಟ್ ಮೇಲೆ ಮತ್ತೆ ಜನ ನಂಬಿಕೆ ಇಡುವಂತೆ ಮಾಡುತ್ತವೆ. 

ಈಗ ಆಗಿರೋದೂ ಹಾಗೇನೆ. ಸಂಘ ಪರಿವಾರದವರು ಚುನಾವಣಾ ಲಾಭಕ್ಕಾಗಿ ದೇವರು ಹಾಗೂ ಧರ್ಮವನ್ನು ಬಳಸಿಕೊಂಡಿರುವುದು ಗುಟ್ಟಾದ ಸಂಗತಿ ಏನಲ್ಲ. 

" ಚುನಾವಣೆ ಸಂದರ್ಭದಲ್ಲಿ ಹಿಂದಿತ್ವದ ಹೆಸರಲ್ಲಿ ಓಟು ಕೇಳುವುದು ಮತ್ತೊಬ್ಬ ಅಭ್ಯರ್ಥಿಗೆ ಕೇಡು ಮಾಡದು" ಎಂದು ಇದೇ ಸುಪ್ರಿಂ ಕೋರ್ಟ್ 1995 ರಲ್ಲಿ ನೀಡಿತ್ತು. ಸಂಘ ಪರಿವಾರಕ್ಕೆ ಈ ತೀರ್ಪು ಆನೆ ಬಲ ತಂದುಕೊಟ್ಟಿತ್ತು.  ತದನಂತರವಂತೂ ಹಿಂದುತ್ವದ ಉನ್ಮಾದವನ್ನು ತನ್ನ ರಾಜಕೀಯ ಚದುರಂಗದಾಟಕ್ಕೆ ಸಮರ್ಥವಾಗಿ ಬಳಸಿಕೊಂಡ ಬಿಜೆಪಿ ದೇಶವಾಳುವ ಅಧಿಕಾರವನ್ನು ಗಳಿಸಿಕೊಂಡಿತು. 

ಕೇವಲ ಧರ್ಮದ ಉನ್ಮಾದ ಒಂದೇ ಬಿಜೆಪಿಯನ್ನು ಕಾಪಾಡಲಾರದು ಎಂದು ಅರಿತ ಆರೆಸ್ಸೆಸ್ಸಿಗರು ದೇಶಭಕ್ತಿಯ ಉನ್ಮಾದವನ್ನು ಜನರಲ್ಲಿ ಬಿತ್ತ ತೊಡಗಿದರು. ಯುವಜನರನ್ನು  ತಮ್ಮತ್ತ ಸೆಳೆಯಲು ಈ ದೇಶಭಕ್ತಿಯ ಪ್ರಯೋಗ ಈಗ ವ್ಯಾಪಕವಾಗಿ ಶುರುವಾಗಿದೆ ಯಾಕೆಂದರೆ ಉತ್ತರ ಭಾರತದಲ್ಲಿ ಚುಣಾವಣೆಗಳು ಹತ್ತಿರದಲ್ಲಿವೆ. 

ಇಂತಹ ಸಂದರ್ಭದಲ್ಲಿ "ಚುನಾವಣಾ ಲಾಭಕ್ಕಾಗಿ ಧರ್ಮವನ್ನು ಬಳಸುವುದು ಬ್ರಷ್ಟಾಚಾರ" ಎಂದು ಎರಡು ದಶಕದ ಹಿಂದೆ ಸುಪ್ರಿಂ ಕೋರ್ಟ್ ನೀಡಿದ್ದ 'ಹಿಂದುತ್ವ' ತೀರ್ಪಿನ ಕುರಿತ ಮರು ವಿಚಾರಣೆ  ಸಾಂವಿಧಾನಿಕ ಪೀಠದಲ್ಲಿ ನಡೆಯುತ್ತಿದೆ. ಮುಖ್ಯ ನ್ಯಾಯಮೂರ್ತಿಗಳಾದ ಟಿ.ಎಸ್.ಠಾಕೂರ್ ನೇತೃತ್ವದ ಏಳು ಸದಸ್ಯರ ಈ ಸಾಂವಿಧಾನಿಕ ಪೀಠವು " ರಾಷ್ಟ್ರಧ್ವಜ, ರಾಷ್ಟ್ರ ಲಾಂಚನ ಹಾಗೂ ಗಡಿಯಲ್ಲಿ ಸಂಭವಿಸುವ ಯೋಧರ ಸಾವನ್ನೇ ಮುಂದಿಟ್ಟುಕೊಂಡು ಯಾವುದೇ ಪಕ್ಷ ಮತ ಕೇಳಬಹುದೇ, ಇಂತಹುದನ್ನೆಲ್ಲಾ ಪ್ರೋತ್ಸಾಹಿಸುವುದು ಸರಿಯೇ" ಎನ್ನುವ ಮಹತ್ವದ ಪ್ರಶ್ನೆಗಳನ್ನು ಎತ್ತಿದೆ. 

ದೇಶದ ಪ್ರಜ್ಞಾವಂತ ಪ್ರಗತಿಪರ ಜನರ ಮನದಾಳದ ಸಂದೇಹಗಳನ್ನೇ ಈ ಪೀಠ ಕೇಳಿದಂತಿದೆ. "ಪ್ರತ್ಯೇಕತಾವಾದ ಮತ್ತು ಕೋಮು ಪ್ರವೃತ್ತಿಯನ್ನು ತಡೆಗಟ್ಟುವ ಉದ್ದೇಶದಿಂದಲೇ ಸಂಸತ್ತು ಚುನಾವಣಾ ಕಾನೂನುಗಳಲ್ಲಿರುವ ಬ್ರಷ್ಟಾಚಾರ ಕುರಿತು ವಿಸ್ತರಿಸಲಾಗಿತ್ತು" ಎಂದು ಹೇಳಿರುವ ಈ ಸಂವಿಧಾನ ಪೀಠವು ಧರ್ಮಗಳನ್ನು ಮುಂದಿಟ್ಟುಕೊಂಡು ಓಟು ಕೇಳುವುದು ಸರಿಯಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿದೆ.
 

ಆದರೆ ಕೇವಲ ಈ ಅಭಿಪ್ರಾಯಗಳಿಂದ ಏನೂ ಆಗುವುದಿಲ್ಲ. ದೇವರು, ಧರ್ಮ, ಜಾತಿ ಹಾಗೂ ದೇಶಭಕ್ತಿಯ ಕುರಿತ ಉನ್ಮಾದವನ್ನು ಜನರಲ್ಲಿ ಹುಟ್ಟಿಸಿ ಸಮಾಜದಲ್ಲಿ ದ್ವೇಷವನ್ನು ಸೃಷ್ಟಿಸಿ ರಾಜಕೀಯಾಧಿಕಾರ ಗಳಿಸಿಕೊಳ್ಳುವ ಬಿಜೆಪಿ ಹುನ್ನಾರವನ್ನು ಮೊದಲು ತನ್ನ ಕಟ್ಟುನಿಟ್ಟಿನ ತೀರ್ಪಿನ ಮೂಲಕ ಸುಪ್ರಿಂ ಕೋರ್ಟ್ ನಿರ್ಬಂಧಿಸಬೇಕಿದೆ. ಈ ಉನ್ಮಾದ ಕೇವಲ ಮತಗಳಿಕೆಗೆ ಮಾತ್ರ ಸೀಮಿತವಾಗದೇ ಕೋಮುದ್ವೇಷಕ್ಕೆ ಕಾರಣವಾಗಿ ಇಡೀ ದೇಶದಲ್ಲಿ ಅಸಹಿಷ್ಣುತತೆ ಹೆಚ್ಚಲು ಪ್ರೇರೇಪಣೆಯಾಗಿದೆ. ದೇಶದ ಜನರ ಸುಖ ಶಾಂತಿ ನೆಮ್ಮದಿ ಹಾಗೂ ಸಹಬಾಳ್ವೆ ಈ ರಾಜಕೀಯವನ್ನೂ ಮೀರಿದ್ದಾಗಿದೆ. ಈ ದೇಶದ ಜನರನ್ನು ಒಡೆದಾಳುವುದೇ ರಾಜಕೀಯ ಪಕ್ಷಗಳ ತಂತ್ರಗಾರಿಕೆಯಾಗಿದೆ. ಸಂವಿಧಾನದ  ಅಂಗಗಳಾದ ಶಾಸಕಾಂಗ, ಕಾರ್ಯಾಂಗಗಳ ಮೇಲೆ ಜನಸಾಮಾನ್ಯರ ವಿಶ್ವಾಸ ಹೊರಟುಹೋಗಿದೆ. ನ್ಯಾಯಾಂಗದ ಮೇಲೆ ಇನ್ನೂ ಅಲ್ಪಸ್ವಲ್ಪ ನಂಬಿಕೆಯನ್ನು ಜನತೆ ಇಟ್ಟುಕೊಂಡಿದೆ. ದೇಶದ ಬಹುಸಂಖ್ಯಾತ ಜನರ ನಂಬಿಕೆಯನ್ನು ಕಾಪಾಡಲು ನ್ಯಾಯಾಂಗ ವ್ಯವಸ್ಥೆ ಈ ರಾಜಕೀಯ ಪಕ್ಷಗಳ ಉನ್ಮಾದ ರಾಜಕೀಯಕ್ಕೆ ತಡೆ ಹಾಕಬೇಕಿದೆ. ಇಲ್ಲವಾದರೆ ಇಡೀ ದೇಶ ದ್ವೇಷ ಅಸೂಯೆ ಅಸಹಿಷ್ಷುತತೆಯ ಬೀಡಾಗುವುದರಲ್ಲಿ ಸಂದೇಹವಿಲ್ಲ. ಪ್ರಸ್ತುತ ಕೇಂದ್ರ ಸರಕಾರದ ಜನವಿರೋಧಿತನಕ್ಕೆ ನ್ಯಾಯಾಲಯವೂ ಸಾಥ್ ನೀಡಿದರೆ ಈ ದೇಶ ಸರ್ವಾಧಿಕಾರಿ ಪ್ಯಾಸಿಸ್ಟ್ ಪ್ರಭುತ್ವದ ಅಡಿಯಲ್ಲಿ ನಲುಗುವುದಂತೂ ಸತ್ಯ. 

                              - ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ