ಶನಿವಾರ, ನವೆಂಬರ್ 2, 2013

ಆಸೆ ಎಂಬ ಕುದುರೆಯನೇರಿ........

ಆಸೆ ಎಂಬ ಕುದುರೆಯನೇರಿ...


                   
         ಆತ ಒಂದು ಕುದುರೆ ಕದ್ದ. ಕದಿಯೋದೇನೂ ಅವನ ವೃತ್ತಿನೂ ಅಲ್ಲಾ, ಪ್ರವೃತ್ತಿನೂ ಅಲ್ಲ. ಆದರೂ ಆರ್ಥಿಕ ಸಮಸ್ಯೆ. ಮಾಡೊಕೂ ಏನೂ ಕೆಲಸ ಇರಲಿಲ್ಲ. ಸುಮ್ಮನೆ ಇದ್ರೆ ಹೇಗೆ? ತುತ್ತಿನ ಚೀಲ ತುಂಬಬೇಕಲ್ಲಾ. ಬೆಳಿಗ್ಗೆ ಇಂದಾ ಬಲಗಣ್ಣು ಹಾರತಿತ್ತು. ಏನೋ ಒಳ್ಳೇದಾಗುತ್ತೆ ಅಂತಾ ಗೊತ್ತಿತ್ತು, ಆದರೆ ಅದು ಏನು ಅನ್ನೋದು ಕುದುರೆ ಸಿಕ್ಕ ಮೇಲೆ ಗೊತ್ತಾಯ್ತು.
          ಎಂತಾ ಕುದುರೆ ಅಂತೀರಿ, ಮಾಯದಂತಾ ಕುದುರೆ. ಬಿಳಿ ಬಣ್ಣ ನಡುನಡುವೆ ಕಂದು ಕರಿ ಚುಕ್ಕೆ. ಭಾರೀ ಗಾತ್ರ,  ನೋಡಿದಕೂಡ್ಲೇ ಮೇಲೆ ಕೂತು ಟಕಾಟಕಾ ಅಂತಾ ವಾಯುವೇಗದಾಗ ಹೋಗಬೇಕು ಅನ್ನಿಸ್ತು. ಆದರೆ ಅನ್ಸಿದ್ದನ್ನೆಲ್ಲಾ ಮಾಡೋಕೆ ಅನುಭವ ಬೇಕಲ್ಲಾ. ಎಂದೂ ಕುದುರೆ ಬಿಡಿ ಎಮ್ಮೆ ಕೂಡಾ ಏರಿರಲಿಲ್ಲ. ಅತ್ತಾ ಇತ್ತಾ ನೋಡಿದಾ, ಸುತ್ತ ಮುತ್ತ ಸುತ್ತಾಡಿದ. ಯಾರೆಂದರೆ ಯಾರೂ ಇರಲಿಲ್ಲ. ಕೈ ಕಡಿಯೋಕೆ ಶುರುಮಾಡ್ತು. ಕುದುರೆ ಹತ್ತಿರ ಹೋದ. ಭಯಾ ಆಯ್ತು. ಯಾರಾದ್ರೂ ನೋಡಿದ್ರೆ ಅನ್ನೋದಕ್ಕಿಂತಾ ಕುದುರೆ ಒದ್ದರೆ ಅನ್ನೋ ಭಯಾ. ಗುಂಡಿಗೆ ಗಟ್ಟಿಮಾಡಿಕೊಂಡು ಕೈತುಂಬಾ ಹುಲ್ಲು ತಗೊಂಡು ಕದುರೆ ಮುಂದೆ ಆನೆಮುಂದೆ ಆಡು ನಿಂತಂಗೆ ನಿಂತ. ಕುದುರೆಗೆ ಹಸಿವಾಗಿರಬೇಕು. ಗಬಕ್ಕನೆ ಬಾಯಿ ಹಾಕಿತು. ಇನ್ನೇನು ಅವನ ಬೆರಳೂ ತನ್ನತ್ತೆನೋ ಅನ್ನೋವಷ್ಟರಲ್ಲಿ ಕೈ ಹಿಂದೆ ತಗೆದ. ಹೀಗೆ ಆತ ತಿನ್ನಿಸೋದು, ಅದು ತಿನ್ನೋದು. ಏನೋ ಒಂದು ತರಾ ದೋಸ್ತಿ ಬೆಳಿತು. ನೀರು ಕುಡಿಸಿದ. ಹೆದರ್ತಾ ಹೆದರ್ತಾ ಮೈ ಉಜ್ಜಿದಾ. ಮೈಚಳಿ ಬಿಟ್ಟಂಗಾತು. ಸಾವಕಾಶ ಗೂಟಕ್ಕ ಕಟ್ಟಿದ ಹಗ್ಗ ಬಿಚ್ಚಿದ. ಮುಂದ ಹೋದ. ಕುದುರಿ ಕೂಡಾ ಹಿಂದೆಂದೆ ಬಂತು. ಸರಿ ಅವ ಮುಂದುಮುಂದ, ಅದು ಹಿಂದಿಂದ. ಹಿಂಗ ನಡೀತು ಪ್ರಯಾಣ ದನದ ಮಾರ್ಕೆಟ್ವರೆಗೂ.
          ಅಂತೂ ಇಂತೂ ಠೀವಿಯಿಂದ ಕುದರಿ ಮುಂದ ಹೊರಟ. ಜನ ಎಲ್ಲಾ ಬಿಟ್ಟು ಕುದುರಿ ನೋಡೋದಕ್ಕೆ ಶುರು ಮಾಡಿದ್ರು. ಎಂತಾ ಕುದುರಿ. ನೋಡಿದೋರಿಗೆಲ್ಲಾ ಅಚ್ಚರಿ. ಯಾವುದೋ ರಾಜನ ಕುದುರಿಯೋ, ಇಲ್ಲಾ ಯಾರೋ ಕುಬೇರನದೋ ಇಲ್ಲಾ ರೇಸ್ ಕೋರ್ಸ ಕುದರೀನೋ. ಒಟ್ಟಾರೆ ನೋಡುನೋಡುತ್ತಿದ್ದಂತೆ ಕುದುರಿ ಅನ್ನೋದು ಸೆಂಟರ್ ಆಪ್ ಅಟ್ರಾಕ್ಷನ್ ಆಗಿ ಹೋಯಿತು. ಒಬ್ಬ ಬಂದ ಏನು ರಾಯರೆ ಕುದುರೆ ಮಾರತಿರೇನು? ಅಂದ. ಮತ್ತೆ ದನದ ಜಾತ್ರಿಗೇನು ಗೆನಸು ಕೆರಿಯಾಕೆ ಬಂದೀನೀನು? ಕುದುರಿ ತಂದಿರೋದೆ ಮಾರೋಕೆ, ನಿಮಗೆ ಬೇಕೇನು? ಕೇಳಿದ. ಕೊಟ್ರ ಬೇಕಪಾ. ಆದರ ಎಷ್ಟು ಆಗತೈತಿ ?  ಎಷ್ಟು ಆಗತೈತಿ ಅನ್ನೋದು ಬಿಡ್ರಿ, ನೀವು ಎಷ್ಟು ಕೊಡ್ತೀರಿ ಅದನ್ನ ಹೇಳ್ರಿ? ಛೇ ಛೇ ನನಗ ಕುದುರಿ ಬೆಲಿ ಕಟ್ಟೋ ಕೋತಾ ಮಾತಾ? ಬೇಕಂದ್ರ ನನ್ನ ಹತ್ರ ಹತ್ತು ಸಾವಿರ ಅದಾವಪ್ಪಾ. ಈಗ ಜೋಡಿ ಎತ್ತು ಮಾರಿ ಬಂದದ್ದು. ದೊಡ್ಡ ಮನಸ ಮಾಡಿ ನೀ ಇಷ್ಟಕ್ಕ ಕೊಡ್ತೀದ್ರ ಹೇಳಲ್ಲಾ


          ಅವನ ಮೈತುಂಬಾ ರೋಮಾಂಚನ ಆದಂತಾಯ್ತು. ಎಂದೂ ಅವನ ಜೀವನದಲ್ಲಿ ಅಷ್ಟು ಹಣ ನೋಡಿರಲಿಲ್ಲ. ಆದ್ರೂ ಅದ್ಯಾಕೋ ಅವನ ಅತಿಆಸೆ ಆತನಿಗೆ ಒಪ್ಪೋದಕ್ಕೆ ಬಿಡಲಿಲ್ಲ. ಆಯ್ತು ಇಲ್ಲೇ ಇರಿ. ಒಂದು ತಾಸಿನೊಳಗ ಬರ್ತೀನಿ. ಅಂದವನೇ ಮುಂದಕ್ಕ ಹೊರಟೇ ಹೋದ. ಹಾಗೇ ಮುಂದೆ ಇನ್ನೊಬ್ಬ ಸಿಕ್ಕ. ಕುದುರಿ ಕೊಡ್ತೀರೇನು? ಅಂತಾ ಕೇಳಿದ. ನೀವು ತಗೋತಿರೇನು? ಮರುಪ್ರಶ್ನೆ ಹಾಕಿದ. ಕೊಟ್ರ ಬಿಡ್ತಿನೇನು? ಎಷ್ಟು ಹಣ ಆಗುತ್ತೆ ಅದನ್ನಾದ್ರೂ ಹೇಳ್ರಲ್ಲಾ? ಚೌಕಾಸಿಗಿಳಿದ.  ನನಗಂತೂ  ಅರಬ್ಬೀ ಕುದುರಿಗೆ ಬೆಲೆ ಕಟ್ಟೋಕೆ ಆಗ್ತಿಲ್ಲಾ, ನೀವ ಹೇಳಿ ಎಷ್ಟು ಕೊಡ್ತೀರಿ ಅಂತಾ. ಪ್ರಸ್ತಾಪ ಮುಂದಿಟ್ಟ. ನಿಜ ಹೇಳಬೇಕಂದ್ರೆ ಕುದರೆ ಬೆಲೆ ಅವನಿಗೆ ಗೊತ್ತಿರಲಿಲ್ಲ. ಆತಪಾ ನಿನಗೂ ಬೇಡಾ, ನನಗೂ ಬೇಡಾ, ಮುಂದ ಚೌಕಾಸೀನೂ ಬೇಡಾ. ಒಂದೇ ಮಾತು, ಇಪ್ಪತೈದು ಸಾವಿರ ಕೊಡ್ತೀನಿ, ಹೂಂ ಅಂದಬಿಡಿ ಆತಲ್ಲಾ ವ್ಯಾಪಾರ ಮುಗಿಸಿದವನಂಗ ಮಾತಾಡಿದ. ಇವನಿಗೆ ತಲೆ ಸುತ್ತ ತೊಡಗಿತು. ಇಷ್ಟೊಂದು ಕಾಸು ಕನಸಲ್ಲೂ ನೋಡಿದವನಲ್ಲ. ಈಗ ದುಡಿಲಿಲ್ಲ ದುಃಖಪಡಲಿಲ್ಲ. ಸುಖಾ ಸುಮ್ನೆ ರೊಕ್ಕ ಬರುತ್ತಂದ್ರ ಯಾರಿಗೆ ಆನಂದ ಆಗುದಿಲ್ಲ. ಹೌದಾ! ಸರಿ ಹಂಗಾದ್ರ. ಒಂದು ಅರ್ಧ ಗಂಟೆ ಇಲ್ಲೇ ಇರಿ. ವಾಪಸ್ ಬಂದು ಹೇಳ್ತಿನಿ ಅಂದ ಮುಂದ ಹೊರಟ.
          ಮುಂದ ಹಿಂಗ ಹೋಗುದರೊಳಗ ಯಾವುದೋ ಊರಿನ ಗೌಡ ಬಂದ. ಅವನ ಮೀಸಿನ ಅರ್ಧ ಕೆಜಿಕಿಂತ ಜಾಸ್ತಿ ಭಾರ ಇದ್ವು. ಏನೋ ತಮ್ಮಾ ಕುದುರಿ ಕೊಡ್ತಿ ಏನು? ಕೊಡುದ ಇದ್ರ ನನಗ ಕೊಡಲ್ಲಾ, ಅವನೌನ ಕುದುರಿ ಅಂದ್ರ ಹಿಂಗ ಇರ್ಬೇಕು. ಅದನ್ನ ಏರಬೇಕಂದ್ರ ನನ್ನಂಗಿರಬೇಕು. ಇದನ್ನ ಹತ್ತಿ ಊರೊಳಗ ಟಕಾ ಟಕಾ ಅಂತ ಹೋಂಟ್ರ, ಅವನೌನ ನೋಡಿದೋರು ಯಾವ ದೇಶದ ರಾಜಾ ಬರತಾಇದ್ದಾನಪಾ ಅನ್ಬೇಕು. ಹಂಗ ಐತಿ ನೋಡು. ಎಷ್ಟರ ಹೇಳ್ತಿ ಹೇಳು. ಒಟ್ಟ ಕುದುರಿ ನನಗ ಬೇಕು ನೋಡ ಅಂದವನೇ ಮೀಸೆ ತಿರುವಿದ. ನೀವ ಹೇಳ್ರಿ ಗೌಡ್ರ, ನಿಮ್ಮುಂದ ನಾನೇನು ಹೇಳುದೈತಿ. ನೀವ ಕೊಟ್ಟಷ್ಟು ನಾ ತಗೊಂಡಷ್ಟು ಅಂತ ಹಲ್ಲಕಿರಿದ. ಬಲೇ ಮಗನ. ಮಾತಂದ್ರ ಇದು ಅವನೌನ. ನೋಡು ತಮ್ಮಾ ನಿನಗ ಒಂದು ಲಕ್ಷ ರೂಪಾಯಿ ಕೊಡ್ತೀನಿ. ಕುದುರಿ ಬಿಟ್ಟು ಹೋಗು. ರೋಕ್ಕ ತಗೋ. ನನಗ ರೊಕ್ಕ ಮುಖ್ಯ ಅಲ್ಲೋ ಅವನೌನ ದಿಮಾಕು,,,, ದಿಮಾಕು ಮುಖ್ಯ, ಒಪ್ಪಿಗಿ ಐತಿ ಹೌದಲ್ಲೋ... ಮತ್ತ ಮೀಸೆ ತಿರುವಿ ಹುರಿ ಮಾಡಿ ಜೋರಾಗಿ ನಕ್ಕು ಜೇಬಿಗೆ ಕೈ ಹಾಕಿದ.  ಇವನಿಗೆ ತಲೆ ತಿರಗಿದಂಗಾಯ್ತು. ದಂಗಾಗಿಹೋದ. ಇವನಾಪ್ಪನ ಮಾತಾಡೋ ಮನುಷ್ಯಾಗ ಇಲ್ಲದ ಬೆನೀ ಹುಲ್ಲ ತಿನ್ನೋ ಪ್ರಾಣೀಗೆ ಐತಲ್ಲಾ. ನನ್ನ ಇಲ್ಲೇ ಕ್ಷಣಕ್ಕೆ ತೂಕಕ್ಕ ಹಾಕಿ ಹರಾಜು ಹಾಕಿದ್ರೂ ಯಾರೂ ಮೂರು ಕಾಸಿಗೂ ತೊಗೊಳ್ಳಾಕಿಲ್ಲ. ನಾನು  ಕುದುರಿ ಆಗಿದ್ರ ಎಷ್ಟು ಚೆನ್ನಾಗಿತ್ತು. ಅಂತ ಮನಸ್ಸಲ್ಲೇ ಅಂದ್ಕೊಂಡ. ಆತ್ರಿ ಗೌಡ್ರ. ಇಲ್ಲೇ ಇರಿ, ಹತ್ತು ನಿಮಿಷದಾಗ ವಾಪಸ್ ಬರ್ತೀನಿ ಅಂದವನ ಹಿಂದ ನೋಡದ ಕುದುರಿ ಜೊತೆ ಮುಂದೆ ಹೊರಟ

       ಒಂದೈವತ್ತು ಹೆಜ್ಜೆ ಹೋಗಿರಬಹುದು ಅಷ್ಟರಲ್ಲೇ ಒಬ್ಬಾತ ಎದುರು ಬಂದ. ಬಂದವನೇ ಕುದುರಿ ಬಾಲಾ ಎತ್ತಿ ನೋಡಿದ. ಕುದುರಿ ಹಲ್ಲು, ಬೆನ್ನು ಮತ್ತೊಂದು ಮಗದೊಂದು ಅಂತ ಇಡೀ ಕುದುರಿ ತಪಾಸನೆ ಮಾಡೋಕೆ ಶುರು ಮಾಡಿದ. ಇವನಿಗೋ ಹೆದರಿಕೆ ಶುರುವಾಯ್ತು. ಕುದರಿ ಮಾಲೀಕ ಇವ್ನೇ ಇರಬೋದಾ. ತನ್ನದೇ ಕುದುರಿ ಹೌದೋ ಅಲ್ಲೋ ಅಂತಾ ಚೆಕ್ ಮಾಡ್ತಿರಬೋದಾ? ಅಂತ ಭಯಾ ಶುರುವಾಯ್ತು. ಆದರೂ ಏನರ ಅಗಿದ್ದಾಗಲೀ ಅಂತಾ ನಿಂತಲ್ಲೇ ನಿಂತ. ತಂದ ಕುದುರಿ  ಅಂದ್ರ ಹೆಂಗ ಓಡಿ ಹೋಗಿ ತಪ್ಪಿಸಿಕೊಳ್ಳೋದು ಅಂತ ಕಳ್ಳ ದಾರಿ ಹುಡುಕಲು ಸುತ್ತಲು ನೋಡತೊಡಗಿದ. ಕುದುರಿ ನನಗ ಬಾಳಾ ಪಸಂದಾತು. ನನಗ ರೊಕ್ಕ ಮುಖ್ಯ ಅಲ್ಲ. ಖುಷಿ ಮುಖ್ಯ. ನನಗ ಕುದುರಿ ಮ್ಯಾಲೆ ಮನಸ್ಸಾಗೇತಿ. ಎಷ್ಟು ಹೇಳ್ತಿ ಹೇಳು ಅಂದ. ಇವನಿಗೆ ಹೋದ ಜೀವ ವಾಪಸ್ ಬಂದಂಗಾತು. ನೀವೆ ಹೇಳಿ ಎಷ್ಟು ಕೊಡ್ತೀರಿ ಅಂತಾ? ಕೀರಲು ದ್ವನಿಯಲ್ಲಿ ಕೇಳಿದ. ಅಷ್ಟು ಇಷ್ಟು ಅನೋದು ಬೇಕಾಗಿಲ್ಲೋ, ಎರಡು ಲಕ್ಷ ಕೊಡ್ತೀನಿ, ದುಸರಾ ಮಾತಾಡ್ಬೇಡ, ಹೂಂ ಅಂದ ಬಿಡು ಅಂತಾ ಹೇಳಿ ಕುದುರೆ ಮೇಲೆ ಹತ್ತಿ ಕೂತೆ ಬಿಟ್ಟ. ಇವನಿಗೆ ಮೂರ್ಚೆ ಹೋಗೋದೊಂದೇ ಬಾಕಿ. ಇವನಪ್ಪ, ಅವನಪ್ಪ, ಅವನಪ್ಪನ ಅಪ್ಪ... ಇಡೀ ವಂಶಾನೇ ಜೀವನಾ ಪೂರ್ತಿ ಜೀತಾ ಮಾಡಿದ್ರೂ  ಇಷ್ಟು ಹಣ ಸಿಗ್ತಿರಲಿಲ್ಲ.  ಬದುಕು ಬಂಗಾರ ಆಯ್ತು ಅನ್ಕೊಂಡ. ಆಯ್ತು ಯಜಮಾನ್ರೆ ಕುದುರಿ ನಿಮಗೆ ಮಾರ್ತೀನಿ ಹಣ ಕೊಡ್ರಿ ಎಂದು ಕೈಚಾಚಿದ. ಅಲೆಲೆಲೆ ಹಿಂಗಂದ್ರ ಹ್ಯಾಂಗೂ ಮಾರಾಯಾ, ಕುದುರಿ ಓಡುತ್ತೋ ಇಲ್ಲೋ ಅಂತಾ ನೋಡೋದು ಬ್ಯಾಡೇನು. ಇರು ಒಂದು ರೌಂಡ ಹಾಕಿ ಬರತೀನಿ. ಬಂದು ರೋಕ್ಕಾ ಕೊಡ್ತೀನಿ. ನಿನಗ ಅನುಮಾನ ಇದ್ರ ಬಾ ನೀನು ಕುದರಿ ಹಿಂದೆ ಕೂಡು ಬ್ಯಾಡಾ ಅಂದೋರಾರು? ಎನ್ನುತ್ತಾ ಕೈ ಹಿಡಿದು ಮೇಲೆಳೆದುಕೊಳ್ಳಲು ನೋಡಿದ. ಇವನಿಗೆ ಹೆದರಿಕೆ ಆಯ್ತು. ಎಂದೂ ಕುದುರೆ ಬಿಡಿ ಒಂದು ಕತ್ತೆ ಕೂಡಾ ಹತ್ತಿದವನಲ್ಲ. ಆಯ್ತು ಇಲ್ಲೇ ಒಂದು ರೌಂಡ ಹಾಕಿ ಅಂತ ಅನ್ನೋದೆ ತಡ ಅವನು ಕುದುರೆ ಪಕ್ಕಕ್ಕ ಜೋರಾಗಿ ಒದ್ದ. ನಾಗಾಲೋಟದಿಂದ ಕುದುರೆ ಶರವೇಗದಲ್ಲಿ ಓಡ ತೊಡಗಿತು. ಮುಂದೆ ಬಂದವರೆಲ್ಲಾ ಚೆಲ್ಲಾಪಿಲ್ಲಿ ಆದರು. ಕುದುರೆ  ಓಡೋದನ್ನ ನೋಡೋದೇ ಒಂದು ಮಜಾ ಅನ್ನಿಸ್ತು.
          ಇನ್ನು ನನ್ನ ಬಡತನ ಮುಗೀತು. ಕೇರಿಯೊಳಗಿನ ಗುಡಸಲ ಹೋಗಿ ಊರಲ್ಲಿರೋ ಉಳ್ಳವರ ಮನೆಗಿಂತ ಮಿಗಿಲಾದ ಮನಿ ಕಟ್ಕೊಂಡು ಮೆರೀತೀನಿ. ಹೆಂಡತೀನ ದೊಡ್ಡಾಸ್ಪತ್ರೆಗೆ ತೋರಿಸ್ತೀನಿ. ಮಕ್ಕಳನ್ನ ಇಂಗ್ಲೀಷ್ ಸಾಲಿಗೆ ಕಳಿಸ್ತೇನೆ.... ಹೀಗೆ ಮನಸ್ಸಲ್ಲೆ ಮುಂದಿನ ಬದುಕಿನ ಲೆಕ್ಕಾಚಾರ ಹಾಕ್ತಾ ನಿಂತ್ಕೊಂಡ. ಅರ್ಧ ಗಂಟೆ ಆಗೋಯ್ತು. ಕುರುರೀನೂ ಇಲ್ಲಾ, ಕುದುರಿ ತೊಗೊಂಡೋವ್ನು ಇಲ್ಲಾ. ಇನ್ನೂ ಇಪ್ಪತ್ತು ನಿಮಿಷ ಕಾಯ್ದ. ಊಹೂಂ. ಕುದುರಿ ಬರಲೇಇಲ್ಲ. ಅನುಮಾನ ಕಾಡತೊಡಗಿತು. ಮುಂದೆ ಹೋದ, ಅಲ್ಲೊಂದು ಕಟ್ಟೆ ಇತ್ತು. ಹತ್ತಿನಿಂತು ನೋಡಿದ. ಏನೇನೂ ಕಾಣಿಸಲಿಲ್ಲ. ಇನ್ನೂ ಮುಂದೆ ಹೋದ. ಒಂದು ಮರ ಇತ್ತು. ಪ್ರಯಾಸ ಪಟ್ಟು ಹತ್ತಿ ನೋಡಿದ. ಕುದುರಿನೂ ಇಲ್ಲಾ, ಕುದುರಿ ಬಾಲಾನೂ ಕಾಣಿಸಲಿಲ್ಲ. ಕಾದೇ ಕಾದ.... ಕಾದೇ ಕಾದ. ಹೋದ ಕುದುರಿ ಬರಲೇ ಇಲ್ಲ. ಬಿಸಿಲು ನಿತ್ತಿ ಸುಡತೊಡಗಿತು. ಹೊಟ್ಟೆ ಚುರುಗುಟ್ಟತೊಡಗಿತು. ತನ್ನ ಉಪ್ಪರಿಗೆ ಮನೆ ಮಠ, ಸುಖ ಸಂತೋಷ ಎಲ್ಲಾ ಕುದುರಿ ಜೊತೆಗೆ ಹೊರಟೋಯ್ತು ಅಂತಾ ಅನ್ನಿಸತೊಡಗಿತು.  ಮೂರು ತಾಸಾದ್ರೂ ಬರಲಿಲ್ಲ. ಇನ್ನು ಕುದುರಿ ತನಗ ದಕ್ಕುದಿಲ್ಲ ಅಂತಾ ಗೊತ್ತಾಯ್ತು. ಇನ್ನೂ ಇಲ್ಲಿರೋದು ಸರಿಯಲ್ಲಾ ಅಂತಾ ಅನ್ನಿಸ್ತು. ಕುದುರಿ ಹೋದದ್ದು ಹೋಯ್ತು, ಆದರೆ ಕುದರಿ ಮಾಲೀಕ ಹುಡಿಕಿಕೊಂಡು ಬಂದ್ರೆ. ನಾನೇ ಕುದುರಿ ತಗೊಂಡು ಬಂದಿದ್ದು ಅಂತಾ ಗೊತ್ತಾದ್ರೆ, ಸಿವಾ...ಸಿವಾ...... ನನ್ನಗತಿ ಏನು?  ಅಂತ ಅಂದ್ಕೊಂಡವ್ನೆ ಬಂದ ದಾರಿಗೆ ಸುಂಕ ಇಲ್ಲಾ ಅಂತಾ ವಾಪಸ್ ಹೊರಡತೊಡಗಿದ.
          ದಾರೀಲಿ ಗೌಡ ಸಿಕ್ಕ. ಏನಾಯ್ತೋ ತಮ್ಮಾ ಕುದುರಿ ಮಾರಿದೇನು? ಎಷ್ಟಕ್ಕ ಮಾರೀದಿ? ನನಗ ಮಾರಬೇಕಾಗಿತ್ತಲ್ಲ. ಎಂದು ಕೇಳಿದ. ಉಕ್ಕಿ ರುತ್ತಿದ್ದ ದುಃಖ ನುಂಗಿ ಹ್ಯಾಂಗ ಬಂದಿತ್ತು ಹಂಗ ಹೋಯ್ತ್ರಿ ಗೌಡ್ರ, ಲಾಭಾನೂ ಇಲ್ಲಾ ನಷ್ಟಾನೂ ಇಲ್ಲಾ ಅಂತಂದವನ ಮುಂದ ಹೊರಟ. ಮೊದಲ ಸಿಕ್ಕವರೆಲ್ಲಾ ದಾರೀಲಿ ಸಿಕ್ರು. ಎಷ್ಟುಕ್ಕ ಮಾರಿದಿ ಕುದುರಿ? ಅಂತ ಕೇಳಿದ್ರೂ. ಎಲ್ಲರಿಗೂ ಒಂದೇ ಮಾತು ಒಂದೇ ಉತ್ತರ ಹ್ಯಾಂಗ ಬಂದಿತ್ತು ಹಂಗ ಹೋಯ್ತು ಲಾಭಾನೂ ಇಲ್ಲಾ ನಷ್ಟಾನೂ ಇಲ್ಲಾ..
          ಮುಂದ ನಡದಾ...ನಡದಾ... ನಡದಾ..... ಬಿಸಿಲು ಕಡಿಮೆ ಆಗೋದರ ಬದಲು ಹೆಚ್ಚಿದಂಗೆನಿಸಿತು. ಮುಂಜಾನಿಂದ ಅದೃಷ್ಟದ ಬೆನ್ನೇರಿ ಹೊರಟವನು ಏನು ತಿಂದಿರಲಿಲ್ಲ, ಏನೇನೂ ಕುಡಿದಿರಲಿಲ್ಲ. ಬಾಯಾರಿದಂಗಾಯ್ತು.. ಮೈಯೆಲ್ಲಾ ಬೆವರು ಕಿತ್ತುಕೊಂಡು ಬಂತು. ಕಾಲುಗಳು ಮುಂದಕ್ಕೆ ಹೋಗೋದಿಲ್ಲ ಅಂತಾ ಹಠ ಮಾಡಿ ನಿಂತಗೊಂಡ ಬಿಟ್ವು. ಹಿಂದೆ ನೋಡಿದ ಕುದುರೆ ಕೆನೆದಂಗಾಯ್ತು... ಕಣ್ಣುಜ್ಜಿಕೊಂಡ ಕಣ್ಣಿಗೆ ಕತ್ತಲೆ ಆವರಿಸತೊಡಗಿತು. ಮಂಜು ಮಂಜಾದ ಕಣ್ಣಲ್ಲಿ ಮುಂದೆ ನೋಡಿದ.. ಅಲ್ಲಿ ಆತನ ಸಣಕಲು ಹೆಂಡತಿ ನಿಂತಿದ್ದಳು. ಮೂಳೆಚೆಕ್ಕಳ ಎದ್ದು ಬರುವಂತಿದ್ದ ಇಬ್ಬರೂ ಮಕ್ಕಳು ಅಪ್ಪ ಏನಾದ್ರೂ ತಂದಾನೇನು... ಅಂತಾ ಆಸೆಯಿಂದ ಕಾಯ್ತಿದ್ದವು. ಅಪ್ಪಾ.... ಅಂತ ಮಗು ಕೂಗಿದಂಗಾಯ್ತು. ಕಣ್ಣು ಮಂಜಾಯ್ತು.... ಕತ್ತಲಾಯ್ತು... ನಾಲಿಗೆ ಪಸೆ ಒಣಗೋಯ್ತು. ನಿಂತಲ್ಲೆ ಕುಸಿದುಬಿದ್ದ. ಬಿದ್ದವ ಮತ್ತೆಂದೂ ಏಳಲೇ ಇಲ್ಲ.
          ಮುಸ್ಸಂಜೆ ಹೊತ್ತು. ಸುತ್ತಲೂ ಜನ ಜಾತ್ರೆ ಸೇರಿತು. ತಲೆಗೊಂದು ಮಾತು ಶುರುಮಾಡಿದ್ರು. ಕುದುರೆ ವ್ಯಾಪಾರ ಕೇಳಿದವರಿಬ್ಬರೂ ಮೆಲ್ಲನೆ ಶವದ ಹತ್ತಿರ ಬಂದರು. ಅಯ್ಯೋ ಅಣ್ಣಾ ಇಲ್ಲಿ ಬಂದು ಸತ್ಯಾ... ಅಂತಾ ಗೋಗರಿಯಲು ಆರಂಭಿಸಿದರು. ಹೆಗಲ ಮೇಲೆ ಹಾಕಿಕೊಂಡರು. ಇಲ್ಲೇ ಹತ್ತಿರ ನಮ್ಮೂರು, ನಮ್ಮಣ್ಣನ ಶವ ಸಂಸ್ಕಾರ ಊರಲ್ಲಿ ಮಾಡ್ತೇವೆ ಎನ್ನುತ್ತಾ ಇಬ್ಬರೂ ಹೆಣವನ್ನು ಹೊತ್ತು ನಡೆದೇ ಬಿಟ್ಟರು. ಜನರಿಗೇನು ಗೊತ್ತು ಏನು ಹೇಳಿದ್ರೂ ನಂಬೋವಷ್ಟು ಮುಗ್ದರು. ಎಲ್ಲಾ ತಮ್ಮ ತಮ್ಮ ಮನೆಗೆ ಹೊರಟರು. ಹೆಣ ಹೊತ್ತು ಗುಡ್ಡದ ಬದಿಗೆ ಬಂದು ಶವ ಕೆಳಕ್ಕಿಳಿಸಿ ಬಟ್ಟೆನೆಲ್ಲಾ ಹುಡುಕ ತೊಡಗಿದರು. ಏನೂ ಸಿಗಲಿಲ್ಲ. ಒಬ್ಬ ಅಂಗಿ ಬಿಚ್ಚಿ ಜೇಬು ತಡಕಾಡಿದ. ಇನ್ನೊಬ್ಬ ದೋತಿ ಬಿಚ್ಚಿ ಶವವನ್ನ ಬೆತ್ತಲೆ ಮಾಡಿದ. ಏನಾದರೂ ಸಿಕ್ಕೀತಾ ಅಂತ ಹುಡುಕಾಡಿದ. ಇಬ್ಬರಿಗೂ ನಿರಾಸೆ. ಥೂ ಇವನೌನ... ಕುದರಿ ಮಾರಿದ ರೊಕ್ಕ ಎಲ್ಲೆರ ಇಟ್ಟನಲೇ ಇವಾ. ಏನಿಲ್ಲಂದ್ರೂ ಲಕ್ಷಾನಾದ್ರೂ ಸಿಕ್ಕಿರಬೇಕು.. ಸತ್ತಾವ ಸತ್ತ ನಮಗಾದ್ರೂ ರೊಕ್ಕಾ ಕೊಟ್ಟ ಸಾಯಬಾರದಿತ್ತಾ ಸೂ... ಮಗಾ ಅಂತ ಸತ್ತವನನ್ನ ಬೈದರು. ತಮ್ಮ ಭಾರೀ ಉಪಾಯ ಫಲ ಕೊಡದೇ ಟುಸ್ ಆಗಿದ್ದಕ್ಕೆ, ತಮ್ಮ ಶ್ರಮ ರೀತಿ ವ್ಯರ್ಥ ಆಗಿದ್ದಕ್ಕೆ ಸಿಕ್ಕಾಪಟ್ಟೆ ನಿರಾಶೆ ಆದ್ರು. ಶವ ಬೆತ್ತಲೆ ಮಲಗಿತ್ತು. ರಾತ್ರಿ ಆಗತೊಡಗಿತ್ತು. ಒಂದೆರಡು ನರಿಗಳು ಶವವನ್ನು ಕಿತ್ತು ತಿನ್ನತೊಡಗಿದವು. ದೂರದ ಸಂತೇಲಿರೋ ದೀಪಗಳೆಲ್ಲಾ ಆರಿಹೋಗಿ ಎಲ್ಲಿ ನೋಡಿದರಲ್ಲಿ ಕತ್ತಲೋ ಕತ್ತಲು. ಎಲ್ಲಾ ಬೆತ್ತಲು.  



   




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ