ಮಂಗಳವಾರ, ನವೆಂಬರ್ 5, 2013

ಕೆಲವು ಹನಿಕವಿತೆಗಳು



ಅವಮಾನವನ್ನು ಸಹಿಸದವ
ಸಾಧನೆಯ ಸಿದ್ಧಿ ಪಡೆಯಲಾರ.
ಅನುಮಾನದ  ಅಗ್ನಿಕುಂಡ ದಾಟದವ
ಎಂದೂ ಇಟ್ಟ ಗುರಿ ಮುಟ್ಟಲಾರ.
*   *   *   *
ಸಾಧನೆಗೆ ಸಾವಿರಾರು ದಾರಿ
ಅವಮಾನವನ್ನು ಸಹಿಸುವುದೂ ಸಹ.
ವೇದನೆಗೆ ನೂರಾರು ರಹದಾರಿ
ಅತಿಯಾಸೆ ಎಂಬುದು ಹಿಂಗದ ದಾಹ.
*   *   *   *
ಕಣ್ಣು ತೆರೆದರೆ ಕತ್ತಲಾಗಬೇಕು
ಮುಚ್ಚಿದರೆ ಬೆಳಕಾಗಬೇಕು.
ಬುದ್ಧನ ಅರಿವಿನ ಬೆಳಕು ಬೇಕೆಂದರೆ
ಎಲ್ಲ ಕಳಚಿ  ಬೆತ್ತಲಾಗಬೇಕು.
*   *   *   *
ಒಂದೇ ಒಂದು ಮುಖ ಕಂಡರೆ ಸಾಕು
ಎಂದು ಎಷ್ಟೋ ಸಲ  ಅನ್ನಿಸಿದ್ದುಂಟು.
ಬೆಂಗಳೂರಿನ ತುಂಬಾ ಬರೀ ಮುಖವಾಡಗಳೇ
ಆತ್ಮೀಯತೆ ಎಂಬುದು ಕನ್ನಡಿಯ ಗಂಟು.
*   *   *   *
ನನಗೆಲ್ಲವೂ ಗೊತ್ತು ಎನ್ನುವವರೇ ಹೆಚ್ಚು
ಎಲ್ಲವೂ ಗೊತ್ತಾದ ಮೇಲೆ ಬದುಕಿದ್ಯಾಕೆ?
ನಮ್ಮನ್ನೆ ನಾವರಿಯದ ಮೇಲೆ
ಎಲ್ಲ ಅರಿತಿರುವೆನೆಂಬ  ಅಹಂ ಬೇಕೆ?
*   *   *   *
ಈ ಸರಕು  ಮಾರುವವರು
ನನ್ನ ಕನಸಿಗೂ ಕನ್ನ ಹಾಕುತ್ತಿದ್ದಾರೆ.
ಟಿವಿ ಜಾಹಿರಾತು ತೋರುವವರು
ನನ್ನ ನಿದ್ದೆಯಲ್ಲೂ ಸರಕು ಮಾರುತ್ತಿದ್ದಾರೆ.
*   *   *   *
ನನ್ನ ಪಾಪಗಳ ಲೆಕ್ಕವಿಡಲು
ನನಗೆ ಪುರುಸೊತ್ತಿಲ್ಲಾ.
ಇನ್ನೊಬ್ಬರ ತಪ್ಪುಗಳ ಲೆಕ್ಕದ ಪುಸ್ತಕ
ದಿನವೂ ಬರೆಯಬೇಕಲ್ಲಾ.


               *    *   *
ದಿನದಿಂದ ದಿನಕ್ಕೆ ಬದುಕುತ್ತಿದ್ದೇವೆ
ಎಂಬ ನಂಬಿಕೆ ಎಲ್ಲರದೂ.
ಆದರೆ.. ಕ್ಷಣದಿಂದ ಕ್ಷಣಕ್ಕೆ ಸಾವಿಗೆ ಹತ್ತಿರವಾಗುತ್ತಿದ್ದೇವೆ
ಎಂಬ ಪರಮಸತ್ಯ ಮರೆಯಲಾಗದು.
  *    *   *
ಕಣ್ಣ ಹನಿಗಳನ್ನ್ಯಾರೂ ಲೆಕ್ಕವಿಡಲಿಲ್ಲ
ನೋವಿನ ದಿನಗಳೆಲ್ಲೂ ಧಾಖಲಾಗಲಿಲ್ಲ.
ಸಣ್ಣ ಸಾಧನೆಗೆ ಹೊಗಳುವವರಿಗೇನು ಗೊತ್ತು
ಫಸಲಿನ ಹಿಂದಿನ ಪರಿಶ್ರಮದ ಗಮ್ಮತ್ತು.
  *    *   *
ನೂರು ಸಂಕಟಗಳ ಸರಮಾಲೆ ಧರಿಸಿ
ನೆಮ್ಮದಿಯನ್ನೆಲ್ಲೆಡೆ ಹುಡುಕುತ್ತಿದ್ದೇವೆ.
ಕಂಕುಳಲ್ಲಿ ಮಗುವನ್ನಿಟ್ಟುಕೊಂಡು
ಊರು ಕೇರಿ ತಡಕಾಡುತ್ತಿದ್ದೇವೆ.
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ