ಶನಿವಾರ, ಡಿಸೆಂಬರ್ 10, 2016

ತಹ ತಹ..... 68 ಕುಡುಕನ ಬಾಯಲ್ಲಿ ಸತ್ಯ; ಕ್ಯಾಶಲೆಸ್ ಎಂಬೋ ಮಿತ್ಯ: (ಏಕವ್ಯಕ್ತಿ ಪ್ರಹಸನ)



ಓ ಹೋ ಹೋ.. ಭಕ್ತರು.. ಮೋದಿ ಭಕ್ತರು.. ದೇಶಭಕ್ತರು.. ನಿಮ್ಮೆಲ್ಲಾರ ಕಾಲಿಗೂ ಅಡ್ಡಬಿದ್ದೆ... ನಿಮ್ಮಂತಾ ದೇಶಪ್ರೇಮಿಗಳನ್ನ ಪಡೀಲಿಕ್ಕೆ ಭಾರತ ಮಾತಾ ಬಾಳಾ ಪುಣ್ಯಾ ಮಾಡಿರಬೇಕು ಗೊತ್ತಾ.. ಸಾರಿ.. ಕ್ಷಮಿಸಿ.. ಮನ್ನಿಸಿ.. ಒಂದೇ ಒಂದೈದು ನಿಮಿಷಾ ನಿಮ್ಮ ಭಜನೆ ನಿಲ್ಲಿಸಿ ನನ್ನ ಮಾತು ಕೇಳೋ ಔದಾರ್ಯ ತೋರಿ ಸ್ವಾಮಿ ಏನು ಕುಡುಕನನ್ಮಗನೇ ತೊಲಗಿ ಹೋಗು ಅಂತೀರಾ.. ಊಹೂಂ ಇವತ್ತು ನಿಮ್ಮ ಮೋದಿ ಆಣೆಗೂ ನಾನು ಕುಡಿದಿಲ್ಲಾ. ಕುಡಿಬಾರದು ಅಂತೇನಿಲ್ಲಾ ಸ್ವಾಮಿ.. ಆದರೆ ಆ ಸರಾಯಿ ಅಂಗಡಿಯವನು ಹೆಂಡಾ ಕೊಡೋದಿಲ್ಲಾ ಅಂದ್ಬಿಟ್ಟಾ ಮಿಂಡ್ರಿನನ್ಮಗಾ. ನಾನೇನ್ ಮಾಡ್ಲಿ ಹೇಳಿ.. ನಿಮ್ಮ ಮೋದಿ ಮಹಾತ್ಮರು ಅದೆಂತದೋ ಮಾಡಿದ್ದಾರಲ್ಲಾ ಹಾಂ.. ಸರ್ಜಿಕಲ್ ಸ್ಟ್ರೈಕು.. ಅದು ಬಂದು ನೇರವಾಗಿ ಹೊಡೆದದ್ದು ನಮ್ಮಂತಾ ಕುಡಕರಿಗೆ ಅನ್ನೋದು ನಿಮಗೆ ಗೊತ್ತಾ.. ಗೊತ್ತಾ ಮೊದಲ್ ಹೇಳಿ. ಗೊತ್ತಿಲ್ವಾ ಹಂಗಾದ್ರೆ ಇಲ್ಲಿ.. ಸಾರಿ.. ಕ್ಷಮಿಸಿ.. ಇಲ್ಲಿ  ಕೇಳ್ರಿ..

ನಿಮ್ಮ ಮೋದಿಗೆ ಸಾರಿ.. ಹಂಗಂದ್ರೆ ನಿಮಗೆ ಕೋಪಾ ಬರುತ್ತೆ.. ಜೀಗೆ.. ಮೋದಿಜಿಗೆ ಹೇಳಿ ನಮ್ಮಂತಾ ಕುಡಕರಿಗೆ ದಿನಕ್ಕೆ ಎರಡೆರಡು ಸಲಾ ಕ್ಯೂ ಹಚ್ಚೋಕೆ ಆಗಾಕಿಲ್ಲಾ ಅಂತಾ. ಒಂದು ಸರಾಯಿ ಅಂಗಡೀಲಿ ಬ್ಯಾಂಕ್ ವ್ಯವಹಾರ ಶುರು ಮಾಡಿಸಿ, ಇಲ್ಲಾಂದ್ರೆ ಬ್ಯಾಂಕಲ್ಲಿ ಸರಾಯಿ ಮಾರೋ ಏರ್ಪಾಟು ಮಾಡಲಿ. ಸುಮ್ಕೆ ಅಲ್ಲೂ ಕ್ಯೂ ನಿಲ್ಲಬೇಕು.. ಇಲ್ಲೂ ಕ್ಯೂ ನಿಲ್ಲಬೇಕು. ನಮಗೇನು ಬೇರೆ ಕೆಲಸಾ ಇಲ್ಲಾ ಅಂತಾ ತಿಳ್ಕೋಡಿದ್ದೀರೇನ್ರೀ.. ರೀ ಮಿಸ್ಟರ್.. ನೀವೆ.. ಭಕ್ತ ಮಹಾಶಯರು ಕ್ಷಮಿಸಬೇಕು. ಹಳೇ ನೋಟು ಹಾಳಾಗೋಗ್ಲಿ.. ಎರಡು ತಾಸು ಸಾಲಲ್ಲಿ ಒಚಿಟಿ ಕಾಲಲ್ಲಿ ನಿಂತರೂ ಎರಡು ಸಾವಿರ್ರೂಪಾಯಿ ಹೊಸಾ ನೋಟು ತಗೊಳ್ಳೋಕೆ ನಮ್ಮ ಜೀವಾ ಹೈರಾಣಾಗಿ ಬಿಡ್ತದೆ ಸ್ವಾಮಿ. ನಮ್ಮದೇ ಕಾಸು ನಮಗೆ ಕೊಡಾಕಿಲ್ಲಾ ಅಂತಾವ್ರೆ ಆ ಬ್ಯಾಂಕಿನವ್ರು. ನಾವೇನು ತಿನ್ನೋನ.. ಹೆಂಡತಿ ಮಕ್ಕಳ್ನ ಹೆಂಗ್ ನೋಡ್ಕೋಳ್ಳೋಣ ನೀವೆ ಹೇಳಿ ಸ್ವಾಮಿ.. ಎಲ್ಲಾ ತಿಳಿದೋರು ನೀವು ಮೋದಿ ಭಕ್ತರು..


ಹಂಗೂ ಹಿಂಗೂ ಮಾಡಿ ಹೊಸಾ ನೋಟು ತಗೊಂಡು ಬ್ಯಾಂಕಿಂದಾ ಬಂದ್ರೆ ಎಲ್ಲೆಂದ್ರೆ ಎಲ್ಲೂ ಚಿಲ್ಲರೇನೆ ಸಿಗ್ತಿಲ್ಲಾ ನಾನೇನು ಮಾಡ್ಲಿ ಹೇಳ್ರಿ. ಆ ಗುಲಾಬಿ ನೋಟು ನೋಡಿದ ಕೂಡಲೇ ಮುಂದೆ ಹೋಗು ಅನ್ನೋತರಾ ಅಂಗಡಿಯವರು ನೋಡತಾರೆ.. ನಾನಾದ್ರೂ ಚಿಲ್ಲರೆಗೆ ಎಲ್ಲಿ ಅಂತಾ ಹೋಗ್ಲಿ. ಇವತ್ತು ಮಾಮೂಲಿ ಬಾರಿಗೆ ಹೋದ್ರೆ ಆ ನನ್ಮಕ್ಕಳೂ ಚಿಲ್ಲರೆ ಇದ್ರೆ ಕುಡಿ ಇಲ್ಲಾ ಅಂದ್ರೆ ಮುಂದಕ್ಕೆ ನಡಿ ಅಂತಾ ಅಂದು ಬಿಡೋದಾ.. ನೀವೇ ಹೇಳಿ ಸ್ವಾಮಿ ಇದು ನ್ಯಾಯಾನಾ.. ಇದು ಧರ್ಮಾನಾ... ಒಂದೆರಡಲ್ಲಾ ಹತ್ತಾರು ವರ್ಷ ಅದೇ ಬಾರಿಗೆ ಹೋಗಿ ಕುಡಿದಿರ್ತೀವಿ. ಆದರೆ ನಿಯತ್ತಿಲ್ಲದ ನನ್ಮಕ್ಕಳು.. ಸಾಲಾ ಕೊಡಾಕಿಲ್ಲಾ ಅಂತಾರೆ.. ಹಾಳಬಿದ್ದೋಗಲಿ.. ಹೊಚ್ಚ ಹೊಸಾ ನೋಟ ಕೊಡ್ತೀನಂದ್ರೂ ಚಿಲ್ರೆ ಇಲ್ಲಾ ಹಚಾ ಅಂತಾ ನಾಯಿ ಓಡಿಸಿದಂಗೆ ಓಡ್ಸಿದ್ರು.. ಮನಸಿಗೆ ಎಷ್ಟು ನೋವಾಯ್ತು ಅಂತಾ ನಿಮಗ್ಯಾರಿಗಾದ್ರೂ ಗೊತ್ತಾ.. ಗೊತ್ತಾ ಅದು ಮೊದ್ಲ ಹೇಳಿ..

ಅದೇನೋ ಬ್ಲಾಕ್ ಮನಿ ಐಮೀನ್ ಕಪ್ಪು ಹಣಾ ಅಂತಾರಲ್ಲಾ ಅದನ್ನ ಹೊರಗ್ ತಗೀತೀನಿ.. ಇಚೆಗೆ ಹಾಕ್ಬಿಡ್ತೀನಿ.. ಟೇಂ ಕೊಡಿ.. ಶ್ರೀಮಂತರನ್ನ ಬೀದೀಲಿ ನಿಲ್ಲಿಸ್ತೀನಿ ಅಂತೆಲ್ಲಾ ನಿಮ್ಮ ಮೋದಿ ಮಹಾತ್ಮರು ದಿನಾಲೂ ಟಿವಿನಾಗೆ ಕೂಗಾಡ್ತಿದ್ರಲ್ಲಾ.. ಏನಾಯ್ತು ಸ್ವಾಮಿ.. ಯಾವೊಬ್ಬ ಸಾವುಕಾರ್ರೂ ಬ್ಯಾಂಕ್ ಮುಂದೆ ಒಂದಿನಾನೂ ಕ್ಯೂ ನಿಂತಿದ್ದು ನಾನಂತೂ ನೋಡಲಿಲ್ಲಾ. ಆದರೂ ಅವರ ಮನೇಲಿ ಕೋಟ್ಯಾಂತರ ಗರಿ ಗರಿ ಗುಲಾಬಿ ಬಣ್ಣದ ಹೊಸ ನೋಟು ಓಡಿ ಹೋಗಿ ಕೂತ್ಕೊಂಡೈತೆ. ಕಪ್ಪುಹಣ ಎಲೈತೆ ಸೋಮಿ.. ಹಳೇ ನೋಟೆಲ್ಲಾ ಬ್ಯಾಂಕಿಗೆ ಬಂದು ಹೊಸನೋಟಾಗಿ ಮತ್ತೆ ಸಾವುಕಾರರ ತಿಜೋರಿಯೊಳಗೆ ಹೋಗಿ ಕುಂತೈತೆ.. ಅದೇನೋ ಕಿತ್ತಾಕಿ ಬಿಡ್ತೀನಿ.. ಅದೇನೇನೋ ಎತ್ತಾಕಿ ಬಿಡ್ತೀನಿ ಅಂತಾ ಆ ನಿಮ್ಮ ದೇವ್ರು ಹೇಳಿದ್ದೆಲ್ಲಾ ಬರೀ ಡೌವಾ.. ಅಂದ್ರೆ ಬ್ಲಾಕ್ಮನಿ ಅನ್ನೂದು ಎಲ್ಲಾ ಹೊರಗ್ ತರೋಕಾಗಲಿಲ್ವಾ? ಬೆಟ್ಟಾ ಅಗದು ಭಾರಿ ಕಸರತ್ತು ಮಾಡಿದ್ರೂ ಹುಲಿ ಇರಲಿ ಒಂದೀಲೀನೂ ಹಿಡಿಯೋಕಾಗಲಿಲ್ವಾ? ಛೇ.. ಹಿಂಗಾದ್ರೆ ಹೆಂಗೆ ಸ್ವಾಮಿ.. ನಮ್ಮಂತೋರೆಲ್ಲಾ ಕಾಸಿಲ್ಲದೇ, ಕೆಲಸಾ ಇಲ್ಲದೇ ಪರದಾಡ್ತಿದ್ದೀವಿ. ಬೆಕ್ಕಿಗೆ ಚೆಲ್ಲಾಟ ಇಲಿಗಳಿಗೆ ಪ್ರಾಣಸಂಕಟಾ ಅನ್ನೋಹಂಗಾಗೇತಿ ಬಡವರ ಗೋಳು.. ನಿಮಗೇನಾದ್ರೂ ಗೊತ್ತಾ ಸ್ವಾಮಿ. ಅದೇನೋ ದೇಶಕ್ಕಾಗಿ ಎಲ್ಲಾ ಸಹಿಸ್ಕೊಳ್ರಿ.. ಎಲ್ಲಾ ಸರಿಹೋಗ್ತದೆ ತಡಕೊಳ್ರಿ, ಇಲ್ಲಾ ಅಂದ್ರೆ ನೀವೆಲ್ಲಾ ದೇಶದ್ರೋಹಿಗಳಾಗ್ತೀರಿ ಅಂತಾ ನೀವೆ ಅಲ್ವಾ ಸ್ವಾಮಿ ಭಕ್ತರುಗಳು ಬಾಯಿ ಬಡ್ಕೊಂತಿರೋದು. ಈಗೇನಾಯ್ತು.. ನಾವು ನಿಮ್ಮ ಮಾತು ಕೇಳಿ  ದೇಶಕ್ಕೊಳ್ಳೇದಾಗ್ಲಿ ಅಂತಾ ತಡ್ಕೊಂಡ್ವಿ. ದೊಡ್ಡ ದೊಡ್ಡ ಸಾವುಕಾರರು ಬೀದಿಗೆ ಬಿದ್ದಾಗ ಒಂದೊಂದು ಕಲ್ಲಾದ್ರೂ ಒಗೆದು ಸೇಡು ತೀರಿಸ್ಕೊಳ್ಳಾವಾ ಅಂತಾ ಕಾಯ್ತಿದ್ವಿ. ಆದರೆ.. ಯಾರೊಬ್ಬರೂ ಬೀದಿಗೆ ಬರಲೇ ಇಲ್ವಲ್ಲಾ ಸ್ವಾಮಿ.. ಇಷ್ಟು ದಿನಾ ನೀವೆಲ್ಲಾ ಊದಿದ್ದು ಬರೀ ಪುಂಗಿನಾ...?



ಅದ್ಯಾವುದೋ ದೇಶದಾಗಿಂದಾ ಕಪ್ಪು  ಹಣ ತಂದು ನಮ್ಮಂತವರ ಖಾತೆಗೆ ಹದಿನೈದು ಲಕ್ಷರೂಪಾಯಿ ಹಾಕ್ತೀನಿ ಅಂತಾ ಹೇಳಿ ಓಟು ತಗೊಂಡು ಪ್ರಧಾನಿ ಆದ್ರಲ್ಲಾ ನಿಮ್ಮ ಮೋದಿ ಸಾಹೇಬರು.. ಅದೆಷ್ಟು ಕಾಸು ಕೆರಕೊಂಡು ಬಂದ್ರು.. ಇನ್ನೂವರೆಗೂ ಒಂದುರೂಪಾಯಿ ಕೂಡಾ ನಮ್ಮ ಖಾತೆಗೆ ಬರಲೇ ಇಲ್ವಲ್ಲಾ.. ಅದು ಹೋಗಲಿ.. ಅದೇನೋ  ದೇಶದಲ್ಲಿರೋ ಕಪ್ಪುಹಣಾನೆಲ್ಲಾ ಗೂಡಿಸಿ ರಾಶಿ ಹಾಕಿ ದೇಶಾ ಉದ್ದಾರಾ ಮಾಡ್ತೀನಿ ಅಂತಾ ಹೇಳಿದ್ರಲ್ಲಾ ನಿಮ್ಮ ಕಿಂದರಜೋಗಿ.. ಏನಾಯ್ತು.. ಏನೂ ಹೊರಗೆ ಬರಲೇ ಇಲ್ಲಾ. ಈಗ ನೋಡಿದ್ರೆ ಕ್ಯಾಶಲೆಸ್ ವ್ಯವಹಾರ ಮಾಡಿ ಅಂತಾನಲ್ಲಾ.. ಹೆಂಗರೀ ಮಾಡೋದು.  ನನ್ನತ್ರಾನೂ ಒಂದು ಕಾರ್ಡ ಐತೆ. ಯಾವ ಎಟಿಎಂ ಮಷೀನಿನ ಬಾಯಿಗೆ ತುರುಕಿದ್ರೂ ಕಾಸಿಲ್ಲಾ ಅಂತಾ ವಾಪಸ್ ಬರತೈತೆ. ನನ್ನತ್ರಾನೂ ಒಂದು ಮೊಬೈಲ್ ಐತೆ. ಅದೇನೋ ಪೇಟಿಯಂ ಮೂಲಕ ಬಾರಿನ ಬಿಲ್ ಕೊಡ್ತೀನಿ  ಅಂದ್ರು ಬಾರಿನವರು ಒಪ್ತಿಲ್ಲಾ. ಯಾಕೆಂದ್ರೆ ಕುಡದ್ ಚಿತ್ ಆದ್ ಮೇಲೆ ಎಲ್ಲಿ ಪಿನ್ ನಂಬರ್ ಮರ‍್ತ್ ಬಿಡ್ತಿನೋ ಅನ್ನೋ ಭಯಾ ಆ ಹಂದಿನನ್ಮಕ್ಕಳಿಗೆ. ಅಲ್ಲಾ ಸ್ವಾಮಿ ಕ್ಯಾಶಲೆಸ್ ಅಂತೇಳಿ ಮೊಬೈಲು, ಕಾರ್ಡು ಬಳಸಿ ಎಲ್ಲಾ ಕೊಂಡಕೊಳ್ಳಬೇಕು ಅಂತೀರಲ್ಲಾ.. ಅದೇನು ಪುಗಸಟ್ಟೆ ಬರ‍್ತದಾ. ನೀವೇನಾದ್ರೂ ಹೇಳಿ ಸ್ವಾಮಿ.. ನನ್ನ ದೇಶದ್ರೋಹಿ ಅಂದ್ರೂ ಚಿಂತೆ ಇಲ್ಲಾ. ಆದರೆ ಇಷ್ಟು  ದಿನಾ ನೀವು ಪುಂಗಿದ್ದನ್ನ ನಾನು ಕೇಳದ್ದೀನಿ. ಈಗ ನೀವು ನನ್ನ ಸಂಕಟಾನ ಕೇಳಾಕೆ ಬೇಕು.

ನಿಮ್ಮ ಕ್ಯಾಶಲೆಸ್ ಮಹಾತ್ಮೆ ಹೇಳ್ತೀನಿ ಕೇಳಿ. ಬ್ಯಾಂಕಿನ ಡೆಬಿಟ್ ಕಾರ್ಡ ಬಳಸಿ ವಹಿವಾಟು ಮಾಡಿದೆ ಅಂತಾ ಇಟ್ಕೊಳ್ಳಿ. ಅದಕ್ಕೆ ಬ್ಯಾಂಕಿನವ್ರು ಅರ್ಧ ಪರ್ಸೆಂಟಿಂದಾ ಒಂದು ಪರ್ಸೆಂಟ್ ಚಾರ್ಜ ಮಾಡ್ತಾರೆ. ಅದನ್ಯಾರು ನಿಮ್ಮ ಮೋದಿ ಸಾಹೇಬರು ತುಂಬಿ ಕೊಡ್ತಾರಾ? ಹೋಗಲಿ ಕ್ರೆಡಿಟ್ ಕಾರ್ಡ ಕೊಟ್ಟು ಸಾಮಾನು ಸರಂಜಾಮು  ಕೊಂಡಕೊಂಡ್ರೆ ಒಂದೂವರೆಯಿಂದಾ ಎರಡೂವರೆ ಪರ್ಸೆಂಟ್ ಹೆಚ್ಚಿಗೆ ಸರ್ವಿಸ್ ಚಾರ್ಜ ಅಂತಾ ಕಿತ್ಕೊಂತಾರಲ್ಲಾ ಸ್ವಾಮಿ ಇದು ನ್ಯಾಯಾನಾ? ಅದೇನೋ ಪೇಟಿಯಂ, ಈ-ವ್ಯಾಲೆಟ್ ಅದೂ ಇದು ಮಣ್ಣು ಮಸಿ ಅಂತಾರಲ್ಲಾ ಅದನ್ನ ಉಪಯೋಗಿಸಿ ಏನಾದ್ರೂ ಖರ್ಚು ಮಾಡಿದ್ರೆ ನನ್ನ ಮನಿ ಮುಳಗೋಯ್ತು. ಒಂದಲ್ಲಾ ಎರಡಲ್ಲಾ ಎರಡೂವರೆ ಇಂದಾ ಮೂರುವರೆ ಪರ್ಸೆಂಟ್ ಕಾಸು ಪೀಕಬೇಕಲ್ಲಾ ಸ್ವಾಮಿ.. ಇದನ್ನೆಲ್ಲಾ ಭಕ್ತ ಮಹಾಶಯರು ನೀವು ಕೊಡ್ತೀರಾ? ಇದು ನಂದೊಬ್ಬಂದೇ ಅಲ್ಲಾ.. ಈ ದೇಶದಲ್ಲಿರೋ ಕೊಟ್ಯಾಂತರ ಜನರ ಹಣಾ ಸರಕಾರಕ್ಕಾದ್ರು ಹೋಗಿ ಸೇರಿದ್ರೆ ದೇಶಭಕ್ತಿ ಅನ್ಬೋದಿತ್ತು. ಆದರೆ.. ಕಾರ್ಡು ವ್ಯಾಲೆಟ್ ಎಲ್ಲಾ ವಹಿವಾಟು ಮಾಡೋ ಕಾರ್ಪೋರೇಟ್ ಕಂಪನಿಗಳಿಗೆ ಜನರ ಕಾಸು ಹೋಗಿ ಸೇರ‍್ತಿದೆಯಲ್ಲಾ, ಇದೇನಾ ಕ್ಯಾಶಲೆಸ್ ವ್ಯವಹಾರದ ಹಿಂದಿನ ಗುಟ್ಟು. ಬಡಜನರನ್ನು ಬಡದು ಕಂಪನಿಗಳ ಬಾಯಿಗೆ ಹಾಕೋದು ಅಂದ್ರೆ ಇದೇನಾ ಸ್ವಾಮಿ? ಇಲ್ಲದ ಕಪ್ಪು ಹಣಾ ಹೊರಗೆ ತಗೀತೀನಿ ಅನ್ನೋ ನೆಪದಲ್ಲಿ ಕಾರ್ಪೋರೇಟ್ ಕಂಪನಿಗಳ ಖಜಾನೆ ತುಂಬಿಸೋ ಹುನ್ನಾರಾನಾ ಇದು ಮಹಾಸ್ವಾಮಿ? ಇಲ್ಲಾ.. ನಾನು ಸುಮ್ಕಿರಾಕಿಲ್ಲಾ.. ನೀವು ಭಕ್ತಾದಿಗಳು ಇವತ್ತು ನಂಗೆ ಉತ್ತರಾ ಕೊಡಲೇ ಬೇಕು. ಇಷ್ಟು ದಿನಾ ನಮ್ಮಂತವ್ರ ಕಿವಿಗೆ ಚಂಡು ಹೂ ಇಟ್ಟಿದ್ದು ಸಾಕು. ದೇಶಪ್ರೇಮದ ಹೆಸರಲ್ಲಿ ದೇಶವಾಸಿಗಳನ್ನ ಯಾಮಾರಿಸಿದ್ದು ಸಾಕು. ನಮ್ಮ ದುಡಿಮೆಯ ಹಣವನ್ನ ನಮ್ಮಿಷ್ಟದಂತೆ ಖರ್ಚು ಮಾಡೋ ಸ್ವಾತಂತ್ರ್ಯ ಬೇಕು. ಬ್ಯಾಂಕಲ್ಲಿ ಕಾಸಿಟ್ರೆ ಅಲ್ಲೇ ಇರುತ್ತೆ ಅನ್ನೋ  ನಂಬಿಕೆ ನಮಗಂತೂ ಇಲ್ಲಾ. ಅದ್ಯಾವನೋ ಅಕೌಂಟ್ ಹ್ಯಾಕ್ ಮಾಡಿ ಇರೋ ಕಾಸನ್ನೂ ಕದಿಯೋದಿಲ್ಲಾ ಅನ್ನೋದಕ್ಕೂ ಗ್ಯಾರಂಟಿ ಇಲ್ಲಾ. ನಮ್ಮ ಕಾಸು ನಮ್ಮತ್ರಾ ಇರ‍್ಲಿ. ನಿಮ್ಮ ಕಾರ್ಡು ನಿಮ್ಮತ್ರಾ ಇರ‍್ಲಿ.


ಕುಡುಕನ ಮಾತು ಅಂತಾ ನಿರ್ಲಕ್ಷ ಮಾಡ್ತಿದ್ದೀರಾ? ಓಹೋ ಕಿಸಿ ಕಿಸಿ ನಗ್ತಿದ್ದೀರಾ? ದೇಶದ್ರೋಹಿ ಅಂತಾ ಬೈತಿದ್ದೀರಾ? ಬೈರಿ ಸ್ವಾಮಿ. ನಾವು ಕುಡಕರೇ ಇರ‍್ಬೋದು ಆದ್ರೆ ಬೆವರ ಹರಿಸಿ ದುಡಿದು ಕುಡೀತೀವಿ. ಯಾರೋ ದುಡಿದ್ ದುಡ್ಡಲ್ಲಿ ಹತ್ತು ಲಕ್ಷ ರೂಪಾಯಿ ಸೂಟು ಬೂಟು ಹಾಕ್ಕೊಂಡು ದಿನಕ್ಕೊಂದು ದೇಶಾ ಸುತ್ತಕೊಂಡು ಮೆರೆಯೋದಿಲ್ಲಾ ಅನ್ನೋದು ನೆಪ್ಪಿಡಿ. ಇಷ್ಟು ದಿನಾ ಇಡೀ ದೇಶಾನೆಲ್ಲಾ ಯಾಮಾರಿಸಿದ್ದು ಸಾಕು. ಈ ಸಂಘಿಗಳು, ಕಮಂಗಿಗಳು, ಭಕ್ತಾಸ್‌ಗಳು, ಬ್ರಿಗೇಡ್‌ಗಳು ಎಲ್ಲಾರೂ ಸೇರಿದ್ರೂ ಜನರನ್ನ ಬಾಳಾ ದಿನಾ ಮೋಸಾ ಮಾಡಿ ಭ್ರಮೆಯಲ್ಲಿಡೋಕೆ ಸಾಧ್ಯಾನೇ ಇಲ್ಲಾ. ಒಂದಿಲ್ಲೊಂದು ದಿನಾ ತಿರಿಗಿ ಬೀಳ್ತೀವಿ ನೋಡಿ ಆಗ ಗೊತ್ತಾಗುತ್ತೆ ನಿಮ್ಮ ಯೋಗ್ಯತೆ ಏನು ಅಂತಾ? ಜನಾ ಅಂದ್ರೆ ಹಾರಾಡೋ ನೊಣಾ ಅಂತಾ ತಿಳ್ಕೊಂಡಿದ್ದೀರಾ.. ನೀವು ಆಡಿಸಿದಂಗೆ ಆಡೋಕೆ.. ನೀವು ಎಸೆದಿರೋದನ್ನ ತಿನ್ನೋಕೆ? ನಿಮ್ಮ ಉನ್ಮಾದದ ಭಂಗಿಯ ಭ್ರಮೆ ಇಳಿದ ಮೇಲೆ ಜನರೇ ಲುಂಗಿ ಮೇಲೆ ಕಟ್ಟಿ ನಿಮ್ಮ ಪುಂಗಿ ಕಿತ್ತಾಕಿ ತದುಕ್ತಾರೆ ಅನ್ನೋದನ್ನ ಮರೀಬ್ಯಾಡ್ರಪ್ಪೋ.. ಅಲ್ಲಿವರೆಗೂ ಅದೇಟು ಆಟಾ ಆಡ್ತೀರೋ ಆಡಿ.. ಅದೆಷ್ಟು ಸರ್ಕಸ್ ಮಾಡ್ತಿರೋ ಮಾಡಿ.. ಎಲ್ಲಾದಕ್ಕೂ ಕೊನೆ ಅನ್ನೋದು ಇದ್ದೇ ಇದೆ. ಆ ಹಿಟ್ಲರ‍್ನಂತಾ ಹಿಟ್ಲರೇ ಮಣ್ಣು ಮುಕ್ಕಿದಾ ಇನ್ನು ನಿಮ್ಮದೇನು ಮಹಾ? ಚರಿತ್ರೆ ತಗ್ದು ನೋಡ್ರೋ ನೋಡಿ.. ಎಂತೆಂಥಾ ಸರ್ವಾಧಿಕಾರಿಗಳನ್ನ ದಂಗೆ ಎದ್ದ ಜನರು ಏಳು ಕೆರೆ ನೀರು  ಕುಡಿಸಿ ಮಡಿಚಿ ಇತಿಹಾಸದ ತೊಟ್ಟಿಗೆ ಬಿಸಾಕಿದ್ದಾರೆ ಅನ್ನೋದನ್ನ ನೋಡಿ. ಇನ್ನು ನೀವ್ಯಾವ ಲೆಕ್ಕಾ.. ಈ ಹಾಡಾದ್ರೂ ಕೇಳ್ರಪೋ ಕೇಳಿ..

ಎಷ್ಟೇ ಉರಿ ಬುಡದಲಿದ್ದರು
ಕಾಯುವವರೆಗೂ ಕಾಯ್ದು ಉಕ್ಕುವುದೋ ಹಾಲು
ಅದೆಷ್ಟೇ ಒಡಲುರಿ ಹೊಟ್ಟೆಯಲಿದ್ದರೂ
ತಾಳ್ಮೆಮೀರಲು ದಂಗೆ ಏಳ್ವುದು ಜನರ ಸಾಲು...

ಎಚ್ಚೆತ್ತುಕೊಂಡರೆ ಜನಗಣಮನ
ದುರುಳರ ಪಾಲಿಗಂದೇ ಸೋಲು…
ಇಂದಿಲ್ಲಾ ನಾಳೆ ಸಿಗಲೇ ಬೇಕು
ದುಡಿಯುವ ಜನರಿಗೆ ಬೆವರಿನ ಪಾಲು...

-ಶಶಿಕಾಂತ ಯಡಹಳ್ಳಿ
  



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ