ಬುಧವಾರ, ಜೂನ್ 28, 2017

ತಹ ತಹ.....98 ಆಳುವ ವರ್ಗಗಳಿಂದ ಪತ್ರಿಕಾ ಸ್ವಾತಂತ್ರ್ಯದ ದಮನ :



 
ಶಾಸಕಾಂಗ ತನ್ನ ಸರ್ವಾಧಿಕಾರತ್ವವನ್ನು ಮೀಡಿಯಾಂಗದ ಮೇಲೆ ಹೇರಲು ಪ್ರಯತ್ನಿಸುತ್ತಲೇ ಇರುತ್ತದೆ. ಭಿನ್ನಾಭಿಪ್ರಾಯ ಹಾಗೂ ವಿರೋಧಗಳನ್ನು ಸಾಮ ಬೇಧ ದಂಡಾದಿಗಳಿಂದ ದಮನಿಸಲು ಪ್ರಯತ್ನಿಸುತ್ತದೆ.  ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮಟ್ಟಹಾಕಲು ಅನೇಕಾನೇಕ ಪಟ್ಟುಗಳನ್ನು ಹಾಕುತ್ತಲೇ ಇರುತ್ತದೆ. ರಾಜಕಾರಣಿಗಳ ಹಲ್ಕಾ ಕೆಲಸಗಳನ್ನು ಹುಡುಕುಡುಕಿ ತೆಹಲ್ಕಾ ಪತ್ರಿಕೆಯಲ್ಲಿ ಬರೆದಾಗ ಅದರ ಸಂಪಾದಕನನ್ನು ಲೈಂಗಿಕ ಹಗರಣದಲ್ಲಿ  ಸಿಲುಕಿ ಹಾಕಿಸಿ ಮತ್ತೆ ತಲೆ ಎತ್ತದಂತೆ ನೋಡಿಕೊಳ್ಳಲಾಯಿತು. ಇತ್ತೀಚೆಗೆ ಸಂಘಪರಿವಾರದ ವಿರುದ್ಧದ ನಿಲುವನ್ನು ತೆಗೆದುಕೊಂಡ ಎನ್‌ಡಿ ಟಿವಿಯ ಮಾಲೀಕರ ಮನೆಯ ಮೇಲೆ ರೇಡ್ ಮಾಡಿಸಿ ಹೆದರಿಸಲು ಕೇಂದ್ರ ಸರಕಾರ ಪ್ರಯತ್ನಿಸಿತು. ಈಗ  ಕರ್ನಾಟಕದಲ್ಲಿ ಇಬ್ಬರು ಪತ್ರಕರ್ತರ ಮೇಲೆ ರಾಜಕಾರಣಿಗಳ ಕುರಿತು ಮಾನಹಾನಿಕರ ಲೇಖನ ಪ್ರಕಟಿಸಲಾಗಿದೆ ಎಂದು ಆರೋಪಿಸಿ ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸಿ ಆದೇಶ ಹೊರಡಿಸಲಾಯಿತು. ಸರಕಾರ ಯಾವುದೇ ಪಕ್ಷದ್ದಾಗಿರಲಿ ತಮ್ಮ ಪರವಾಗಿ ಬರೆಯುವವವರಿಗೆ ಎಲ್ಲಾ ರೀತಿಯಲ್ಲೂ ಸಹಕರಿಸುವುದು ಹಾಗೂ ತಮ್ಮ ವಿರುದ್ಧ ಬರೆಯುವವರಿಗೆ ಸರ್ವ ರೀತಿಯ ಕಿರುಕುಳಗಳನ್ನು ನೀಡುವುದು ನಿರಂತರವಾಗಿ ನಡೆದುಕೊಂಡೇ ಬಂದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ನಡೆಯುತ್ತಲೇ ಇದೆ.

  ಹಿಂದೆ ಪತ್ರಿಕೆಗಳು ಆಳುವವರ ವಿರುದ್ಧ ಮಾನಹಾನಿಕರವಾಗಿ ಲೇಖನ ಪ್ರಕಟಿಸಿದ್ದರ ಬಗ್ಗೆ ಆಕ್ಷೇಪಣೆ ಇದ್ದವರು ನ್ಯಾಯಾಲಯಕ್ಕೆ ಹೋಗಿ ಮಾನನಷ್ಟ ಮೊಕದ್ದಮೆ ಹಾಕುತ್ತಿದ್ದರು. ಅಂತಹ ಹವರು ಕೇಸುಗಳು ಹತ್ತಾರು ವರ್ಷ ನ್ಯಾಯಾಲಯದ ಕಂಬಗಳನ್ನು ಸುತ್ತಿ ಸುಸ್ತಾಗಿ ಕೊನೆಗೊಮ್ಮೆ ಬಿದ್ದೇ ಹೋಗುತ್ತಿದ್ದವು. ಪ್ರಕಟಿತ ಲೇಖನ ಸುಳ್ಳಾಗಿದ್ದಲ್ಲಿ ಪತ್ರಿಕೆಯ ಸಂಪಾದಕರನ್ನು ಸದನಕ್ಕೋ ಇಲ್ಲವೇ ಸಂಸತ್ತಿಗೋ ಕರೆಯಿಸಿ ವಾಗ್ದಂಡನೆಯನ್ನು ವಿಧಿಸಲಾಗುತ್ತಿತ್ತು ಅಥವಾ ಕೆಲವೊಮ್ಮೆ ಛೀಮಾರಿ ಹಾಕಲಾಗುತ್ತಿತ್ತು. ಈಗ ಕರ್ನಾಟಕ ಸರಕಾರದ ಸದನ ಸಮಿತಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಶಾಸಕರು ಕೊಟ್ಟ ದೂರನ್ನು ಆಧರಿಸಿ ತಾನೇ ವಿಚಾರಣೆ ಮಾಡಿ ಜೈಲು ಶಿಕ್ಷೆಯನ್ನೂ ವಿಧಿಸಿ ನ್ಯಾಯಾಲಯದ ಕೆಲಸವನ್ನು ತಾನೇ ಮಾಡಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಪತ್ರಿಕೋದ್ಯಮದ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ಹುನ್ನಾರವನ್ನು ಅರಂಭಿಸಿದೆ. 


2017, ಜೂನ್ 22 ರಂದು ಕರ್ನಾಟಕ ಸರಕಾರದ ಸಭಾಧ್ಯಕ್ಷ (ಸ್ಪೀಕರ್) ಹಾಗೂ ಹಕ್ಕು ಬಾಧ್ಯತಾ ಸಮಿತಿಯ ಅಧ್ಯಕ್ಷರಾದ ಕೆ.ಬಿ.ಕೋಳಿವಾಡರವರು ಪತ್ರಿಕೋದ್ಯಮಕ್ಕೆ ಆಘಾತಕಾರಿಯಾದ ಆದೇಶವೊಂದನ್ನು ಹೊರಡಿಸಿದರು. ಅವಹೇಳನಕಾರಿ ವರದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಸದನ ಹಕ್ಕು ಬಾಧ್ಯತಾ ಸಮಿತಿಯ ಶಿಫಾರಸ್ಸಿನಂತೆ ಶಾಸಕರ ಹಕ್ಕು ಚ್ಯುತಿಯಾಯ್ತು ಎಂಬ ಕಾರಣಕ್ಕೆ ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಹಾಗೂ ಅನಿಲ್ ರಾಜ್ ಈ ಇಬ್ಬರಿಗೂ ಒಂದು ವರ್ಷ ಜೈಲು ಶಿಕ್ಷೆ ಹಾಗೂ ಹತ್ತು ಸಾವಿರ ರೂಪಾಯಿ ದಂಡವನ್ನು ವಿಧಿಸಿ ತಕ್ಷಣ ಬಂಧಿಸಲು ಆದೇಶಿಸಿದರು. ಇದೂ ಸಹ ಏಕಪಕ್ಷೀಯವಾದ ತೀರ್ಮಾನವಾಗಿದೆ. ಹಕ್ಕು ಬಾಧ್ಯತಾ ಸಮಿತಿ ನೀಡಿರುವ ವರದಿಯನ್ನು ಕುರಿತು ಸದನದಲ್ಲಿ ಚರ್ಚಿಸದೇ, ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಾಯಕರುಗಳ ಗಮನಕ್ಕೆ ತರದೇ ಪತ್ರಕರ್ತರಿಗೆ ಜೈಲು ಶಿಕ್ಷೆ ವಿಧಿಸಿರುವುದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಮನಕಾರಿ ನಿಲುವಾಗಿದೆ. 

ಈ ಕೋಳಿವಾಡಾದಿಗಳಿಗೆ ಸದನದ ಕಾನೂನುಗಳ ಬಗ್ಗೆ ತಪ್ಪು ತಿಳುವಳಿಕೆ ಇರುವುದು ಈ ಪ್ರಕರಣದಿಂದ ಸ್ಪಷ್ಟವಾಗಿದೆ. ಸದನದೊಳಗೆ  ಹಕ್ಕುಚ್ಯುತಿಯಾದರೆ ಮಾತ್ರ ಸ್ಪೀಕರ್ ಆದವರಿಗೆ ವಿಚಾರಣೆ ಮಾಡಿ ಶಿಕ್ಷೆಯನ್ನು ವಿಧಿಸುವ ಅಧಿಕಾರವಿದೆ. ಸದನದ ಹೊರಗೆ ಶಾಸಕರಿಗೆ ಆಗುವ ಅವಮಾನಗಳಿಗೆ ಶಿಕ್ಷೆ ವಿಧಿಸುವ ಯಾವುದೇ ಅಧಿಕಾರ ಸದಸ ಸಮಿತಿಗಾಗಲೀ ಇಲ್ಲವೇ ಸ್ಪೀಕರ್ ರವರಿಗಾಗಲೀ ಸಂವಿಧಾನ ಕೊಟ್ಟಿಲ್ಲಾ. ಲೋಕಸಭೆಯ ಹಕ್ಕುಬಾಧ್ಯತಾ ನಿಯಮಾವಳಿಗಳನ್ನಾದರೂ ಪರಿಶೀಲಿಸಿದ್ದರೆ ಈ ಸ್ಪೀಕರ್ ಮಹಾಶಯರಿಗೆ ಸ್ಪಷ್ಟವಾಗಿ ಅರಿವಾಗುತ್ತಿತ್ತು. ಸದನದ ಹೊರಗೆ ನಡೆಯುವ ಪ್ರಜಾಪ್ರತಿನಿಧಿಗಳ ಅವಹೇಳನಕ್ಕೆ ಮಾನನಷ್ಟ ಮೊಕದ್ದಮೆಯನ್ನು ಹೂಡಬಹುದಾಗಿದೆ. ಯಾವಾಗ ನ್ಯಾಯಾಲಯ ಮಾಡುವ ನ್ಯಾಯನಿರ್ಣಯ ಮತ್ತು ಶಿಕ್ಷೆಯ ಜಾರಿಯ ಕೆಲಸವನ್ನು ಈ ಅರೆಬೆಂದ ಸ್ಪೀಕರ್ ಮಾಡಲು ಹೊರಟರೋ ಆಗಲೇ ಇವರ ಯೋಗ್ಯತೆ ಗೊತ್ತಾಗಿ ಹೋಯಿತು.  ಸದನದ ಕಾನೂನನ್ನು ಸರಿಯಾಗಿ ತಿಳಿದುಕೊಳ್ಳದೇ ಆತುರಕ್ಕೆ ಬಿದ್ದು ತೆಗೆದುಕೊಂಡು ನಿರ್ಣಯವು ಸದನಕ್ಕೆ ಹಾಗೂ ಸಭಾಧ್ಯಕ್ಷರಿಗೆ ತಿರುಗುಬಾಣವಾಗುವುದರಲ್ಲಿ ಸಂದೇಹವೇ ಇಲ್ಲಾ. ಸಜೆ ಶಿಕ್ಷೆಗೊಳಗಾದ ಪತ್ರಕರ್ತರು ಕೋರ್ಟಲ್ಲಿ ಸದನ ಸಮಿತಿಯ ತೀರ್ಮಾಣವನ್ನು ಪ್ರಶ್ನೆ ಮಾಡಿದರೆ ಸದನದ ಮರ್ಯಾದೆ ಹೋಗುವುದರಲ್ಲಿ ಅನುಮಾನವೇ ಇಲ್ಲಾ. ಸದನ ಹಾಗೂ ಅದರ ಅಧ್ಯಕ್ಷರಾದವರು ಸದನವನ್ನು ಸಂಬಾಳಿಸಬೇಕೆ ಹೊರತು ಸದನದ ಹೊರಗೆ ನಡೆಯುವ ಸಮಸ್ಯೆಗಳಿಗೆ ತೀರ್ಪುಗಾರರಾಗಬಾರದು. ತಮ್ಮ ಇತಿ  ಮಿತಿಗಳನ್ನು ಮೀರಿ ನಡೆದರೆ ಕೊನೆಗೆ ನಗೆಪಾಟಲಿಗೆ ಈಡಾಗಬೇಕಾಗುತ್ತದೆ. ಈಗ ಈ ಪ್ರಕರಣದಲ್ಲೂ ಸಹ ಸದನದ ಗರ್ವ ಭಂಗ ಆಗುವುದರಲ್ಲಿ ಯಾವ ಗುಮಾನಿಗಳೂ ಇಲ್ಲವೇ ಇಲ್ಲಾ.


ರವಿ ಬೆಳಗೆರೆಯವರ ಮೇಲೆ ಸಾಕಷ್ಟು ಜನರಿಗೆ ಅಸಮಾಧಾನವಿದೆ. ಹಲವಾರು ಪತ್ರಕರ್ತರಿಗೆ ಬೆಳಗೆರೆಯವರ ಅಕ್ಷರ ವ್ಯಾಪಾರದ ಒಳವ್ಯವಹಾರಗಳ ಬಗ್ಗೆ ಬೇಸರವಿದೆ. ತುಂಬಾ ವ್ಯಕ್ತಿಗತವಾಗಿ ನಿಂದನೆಗೆ ಇಳಿಯುವ ಈ ಟ್ಯಾಬ್ಲೈಡ್ ಪತ್ರಿಕೆಯ ಮೇಲೆ ಆಳುವ ವರ್ಗಗಳಿಗೆ ವಿಪರೀತ ಕೋಪವೂ ಇದೆ. ಅತಿರೇಕದ ವರದಿಗಳನ್ನು ರಂಜನೀಯವಾಗಿ ಹೇಳುವ ಈ ಪತ್ರಿಕೆಯ ಆಕ್ರಮಣಶೀಲತೆಯಿಂದಾಗಿ ಹಲವಾರು ಪ್ರಜ್ಞಾವಂತರೂ ಸಹ ಅವಮಾನಕ್ಕೊಳಗಾಗಿದ್ದಾರೆ. ಈ ಪತ್ರಿಕೆಯ ವಿಕ್ಷಿಪ್ತ ವರದಿ, ಲೇಖನಗಳು ಸಮಾಜದಲ್ಲಿ ನಕಾರಾತ್ಮಕತೆಯನ್ನು ಹುಟ್ಟಿಸಲು ಪ್ರೇರಣೆಯಾಗಿವೆ ಎಂಬುದರಲ್ಲಿ ಸುಳ್ಳಿಲ್ಲಾ. ಆದರೆ.. ಯಾವುದೇ ಪತ್ರಿಕೆ ಏನನ್ನೇ ಬರೆಯಲಿ ಅದನ್ನು ಪ್ರಶ್ನಿಸಲು ನ್ಯಾಯಾಲಯದಲ್ಲಿ ಅವಕಾಶವಿದೆ. ಮಾನಹಾನಿಕರವಾಗಿ ವರದಿಯನ್ನು ಯಾವುದೇ ಪತ್ರಿಕೆ ಪ್ರಕಟಿಸಿದರೆ ಆ ಪತ್ರಿಕೆಯ ಸಂಪಾದಕರು ಹಾಗೂ ಮಾಲೀಕರ ಮೇಲೆ ಮಾನನಷ್ಟ ಮೊಕದ್ದಮೆಯನ್ನು ಹೂಡಬಹುದಾಗಿದೆ. ಆದರೆ.. ಈ ರೀತಿ ಶಾಸಕಾಂಗದ ಹಕ್ಕು ಬಾಧ್ಯತಾ ಸಮೀತಿಯೊಂದು ತಾನೇ ಏಕಪಕ್ಷೀಯವಾಗಿ ವಿಚಾರಣೆ ಮಾಡಿ ಶಿಕ್ಷೆಯನ್ನೂ ವಿಧಿಸಿರುವುದು ಪತ್ರಿಕಾ ಅಭಿವ್ಯಕ್ತಿ ಸ್ವಾತಂತ್ಯದ ಮೇಲೆ ನಡೆದ ಹಲ್ಲೆಯಾಗಿದೆ. ಇಷ್ಟಕ್ಕೂ ಜೈಲು ಶಿಕ್ಷೆ ವಿಧಿಸುವ ಅಧಿಕಾರವೇ ಶಾಸಕಾಂಗ ಸಮಿತಿಗಿಲ್ಲ. ತನ್ನ ಅಧಿಕಾರವನ್ನು ಅತಿರೇಕವಾಗಿ ಬಳಸಿಕೊಂಡು ಆರೋಪಿತರಿಗೆ ತಮ್ಮ ವಾದವನ್ನು ಮಂಡಿಸಲು ಅವಕಾಶವನ್ನೂ ಕೊಡದೇ ಜೈಲು ಶಿಕ್ಷೆಯನ್ನು ಪ್ರಕಟಿಸಿ ಬಂಧನಕ್ಕೆ ಆದೇಶ ಹೊರಡಿಸಿದ್ದು ಅಸಂವಿಧಾನಿಕ ಕ್ರಮವಾಗಿದೆ. ಮತ್ತೊಬ್ಬ ಪತ್ರಕರ್ತ ಅನಿಲ್ ರಾಜ್ ಸಮಿತಿಯ ಮುಂದೆ ಹಾಜರಾಗಿ ಬೇಷರತ್ ಕ್ಷಮೆಯಾಚಿಸಿದ್ದರೂ ಅವರಿಗೂ ಜೈಲು ಶಿಕ್ಷೆ ವಿಧಿಸಲಾಗಿದೆ. ಇಂತಹ ಆದೇಶವನ್ನು ಪ್ಯಾಸಿಸ್ಟ್ ಮನಸ್ಥಿತಿಯ ಸರಕಾರ ಹೊರಡಿಸಿದ್ದರೆ ಅದು ಅಪೇಕ್ಷಣೀಯವಾಗಿರುತ್ತಿತ್ತು. ಆದರೆ ಜನಪರ ಸರಕಾರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಸರಕಾರದ ಆಡಳಿತ ಇರುವಾಗಲೇ ಪತ್ರಿಕಾ ಸ್ವಾತಂತ್ರ್ಯದ ದಮನವಾಗಿರುವುದನ್ನು ಪ್ರಗತಿಪರರೆಂದು ಅನ್ನಿಸಿಕೊಂಡವರಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲಾ. ಎಲ್ಲಾ ಆಳುವ ಪಕ್ಷಗಳ ಜಂಡಾ ಬೇರೆ ಬೇರೆಯಾಗಿದ್ದರೂ ತಮ್ಮ ಸ್ವಾರ್ಥ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುವ ಅಜೆಂಡಾ ಒಂದೇ ಎನ್ನುವುದು ಸಾಬೀತಾದಂತಾಯಿತು.


ಇಂದು ಈ ಇಬ್ಬರು ಪೀತ ಪತ್ರಕರ್ತರಿಗೆ ಆದ ಜೈಲು ಶಿಕ್ಷೆ ನಾಳೆ ಬೇರೆ ನಿಷ್ಟುರ ಪತ್ರಕರ್ತರಿಗೂ ಆಗುವುದರಲ್ಲಿ ಸಂದೇಹವಿಲ್ಲಾ.  ಪತ್ರಕರ್ತರಿಗೆ ಜೈಲು ಶಿಕ್ಷೆ ಜಾರಿ ಆಗಿದ್ದನ್ನು ಕರ್ನಾಟಕದ ಕಾರ್ಯನಿರತ ಪತ್ರಕರ್ತರ ಸಂಘಗಳು, ಅವುಗಳ ಘಟಕಗಳು ತೀವ್ರವಾಗಿ ವಿರೋಧಿಸಬೇಕಾಗಿತ್ತು, ಸರಕಾರದ ಮೇಲೆ ಒತ್ತಡ ತಂದು ಹಕ್ಕು ಚ್ಯುತಿ ನಿರ್ಣಯವನ್ನು ಹಿಂಪಡೆಯಬೇಕೆಂದು ಆಗ್ರಹಿಸಬೇಕಾಗಿತ್ತು, ಇಡೀ ಪತ್ರಿಕಾ ಮಾಧ್ಯಮವೇ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧ ಶಾಸಕಾಂಗದ ಪ್ರಹಾರವನ್ನು ಒಕ್ಕೂರಲಿನಿಂದ ಪ್ರತಿಭಟಿಸಬೇಕಾಗಿತ್ತು. ಆದರೆ ಹಾಗಾಗಲೇ ಇಲ್ಲಾ. ಬೆಂಗಳೂರಿನ ಪ್ರೆಸ್ ಕ್ಲಬ್ ಪದಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ನಾಮಕಾವಸ್ತೆ ಮನವಿ ಸಲ್ಲಿಸಿ ಸುಮ್ಮನಾಗಿದ್ದಾರೆ. ಇದಕ್ಕೆ ಮೂಲ ಕಾರಣ ರವಿ ಬೆಳಗೆರೆಯ ಮೇಲಿರುವ ತೀವ್ರ ಅಸಮಾಧಾನ ಹಾಗೂ ಆಳುವವರನ್ನು ವಿರೋಧ ಕಟ್ಟಿಕೊಳ್ಳಲಾಗದ ಅನಿವಾರ್ಯತೆಗಳೇ ಆಗಿವೆ. ಹೀಗಾಗಿ ಎಲ್ಲರೂ ಜಾಣ ಮೌನಕ್ಕೆ ಜಾರಿಕೊಂಡರು. ಆದರೆ.. ದೂರದ ದೆಹಲಿಯಲ್ಲಿರುವ ರಾಷ್ಟ್ರೀಯ ಪತ್ರಕರ್ತರ ಒಕ್ಕೂಟ (ಎನ್‌ಯುಜೆ)ವು ಇದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಮುಕ್ತ ದಾಳಿ ಎಂದು ಪತ್ರಿಕಾ ಹೇಳಿಕೆ ನೀಡಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿತು. ಕೂಡಲೇ ಜೈಲು ಶಿಕ್ಷೆಯನ್ನು ಹಿಂಪಡೆಯುವ ನಿಟ್ಟಿನಲ್ಲಿ ನಿರ್ಣಯ ಮಂಡಿಸುವಂತೆ ಕರ್ನಾಟಕ ಸರಕಾರಕ್ಕೆ ಎನ್‌ಯುಜೆ ಹಾಗೂ ಅದರ ದಿಲ್ಲಿ ಘಟಕ ದಿಲ್ಲಿ ಪತ್ರಕರ್ತರ ಸಂಘ (ಡಿಜೆಎ) ಕರ್ನಾಟಕ ಸರ್ಕಾರಕ್ಕೆ ಆಗ್ರಹಿಸಿತು. ಎಡಿಟರ್ ಗಿಲ್ಡ್ ಆಪ್ ಇಂಡಿಯಾ ಕೂಡಾ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ಪತ್ರಕರ್ತರಿಗೆ ಜೈಲು ಶಿಕ್ಷೆ ವಿಧಿಸಿರುವುದನ್ನು ತೀವ್ರವಾಗಿ ವಿರೋಧಿಸಿ, ಶಾಸಕಾಂಗದ ಈ ನಿರ್ಣಯವು ಸಂವಿಧಾನವು ಕೊಟ್ಟ ಮೂಲಭೂತ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಮೇಲೆ ಹಲ್ಲೆ ಮಾಡಿ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ತನ್ನ ತೀಕ್ಷ್ಣ ಪ್ರತಿಭಟನೆಯನ್ನು ವ್ಯಕ್ತಪಡಿಸಿತು.


ಪ್ರತಿಯೊಬ್ಬ ಪತ್ರಕರ್ತರಿಗೂ ಹಾಗೂ ಪತ್ರಿಕೆಗಳಿಗೂ ಚುನಾಯಿತ ಪ್ರತಿನಿಧಿಗಳ ಕುರಿತು ವಿಶ್ಲೇಷನಾತ್ಮಕ ಲೇಖನಗಳನ್ನು ಬರೆಯುವ ಹಕ್ಕಿದೆ. ಹಾಗೂ ಜನರಿಂದ ಆಯ್ಕೆಯಾದವರು ಜನವಿರೋಧಿಯಾದಾಗ, ಜನತೆ ಕೊಟ್ಟ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಾಗ, ಇಲ್ಲವೇ ಬ್ರಷ್ಟಾಚಾರದಲ್ಲಿ ಭಾಗಿಯಾಗಿ ಫಲಾನುಭವಿಯಾದಾಗ ಅವರ ಬಗ್ಗೆ ಬರೆದು ಜನರಲ್ಲಿ ಜಾಗೃತಿ ಮೂಡಿಸಬೇಕಾದದ್ದು ಪತ್ರಕರ್ತರಾದವರ ಹೊಣೆಗಾರಿಕೆಯಾಗಿದೆ. ದುರುದ್ದೇಶಪೂರ್ವಕ ಮಾನಹಾನಿಕರ ವರದಿ ಲೇಖನಗಳಿದ್ದರೆ ಅದನ್ನು ಪ್ರಕಟಿಸಿದವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಶ್ನಿಸಿ ತಮ್ಮ ಪ್ರಾಮಾಣಿಕತೆಯನ್ನು ಸಾಕ್ಷಿ ಸಮೇತ ಸಾಬೀತು ಪಡಿಸಬಹುದಾಗಿದೆ. ಅದನ್ನೆಲ್ಲಾ ಬಿಟ್ಟು ಶಾಸಕರ ದೂರನ್ನು ಆಧರಿಸಿ ಹಕ್ಕು ಬಾಧ್ಯತಾ ಸಮಿತಿ ತಾನೇ ವಿಚಾರಣೆಯನ್ನು ಆರಂಭಿಸಿ ಜೈಲು ಶಿಕ್ಷೆಯನ್ನೂ ವಿಧಿಸುವುದು ಪಕ್ಕಾ ಸಂವಿಧಾನ ವಿರೋಧಿತನವಾಗಿದೆ. ಇನ್ನು ಮುಂದೆ ಶಾಸಕರುಗಳು ಮಾನಹಾನಿಯಾಯಿತೆಂದು ನ್ಯಾಯಾಲಯಗಳಿಗೆ ಹೋಗುವ ಅಗತ್ಯವೇ ಇಲ್ಲಾ. ತಮ್ಮ ವಿರುದ್ದವಾಗಿ ಬರೆದ ಪತ್ರಕರ್ತರನ್ನು ಜೈಲಿಗಟ್ಟಲು ಹಕ್ಕು ಬಾಧ್ಯತಾ ಸಮೀತಿಯೇ ಇದೆಯಲ್ಲಾ..? ಈ ರಾಜಕಾರಣಿಗಳೆಲ್ಲಾ ಸಾಚಾ ಅಂದರೆ ಯಾರೂ ನಂಬುವುದಿಲ್ಲಾ. ಸಂಪೂರ್ಣ ಪ್ರಾಮಾಣಿಕರಾದವರು ಈ ವ್ಯವಸ್ಥೆಯಲ್ಲಿ ಶಾಸಕರಾಗುವುದೂ ಕಷ್ಟಸಾಧ್ಯ. ಸ್ವಜನಪಕ್ಷಪಾತ, ಭ್ರಷ್ಟಾಚಾರ, ಅಧಿಕಾರ ದುರುಪಯೋಗಗಳು ಬಹುತೇಕ ಜನಪ್ರತಿನಿಧಿಗಳ ದಿನಚರಿಯ ಭಾಗವೇ ಆಗಿವೆ. ಇಂತಹ ಸಂದರ್ಭದಲ್ಲಿ ಅವರ ಕರ್ಮಕಾಂಡಗಳ ಬಗ್ಗೆ ಪತ್ರಿಕೆಯಲ್ಲಿ ಬರೆಯಲೇ ಬಾರದು, ಬರೆದರೆ ಜೈಲಿಗೆ ಕಳಿಸುವ ನಿರ್ಣಯ ಕೈಗೊಳ್ಳಲಾಗುವುದು ಎಂದರೆ ಸಂವಿಧಾನದತ್ತ ಪತ್ರಿಕಾ ಸ್ವಾತಂತ್ರ್ಯ ಉಳಿದೀತೆ?


ಕಾಂಗ್ರೆಸ್ ಸರಕಾರವಿದ್ದಾಗಲೇ ಹೀಗೆ ಪತ್ರಕರ್ತರನ್ನು ಜೈಲಿಗಟ್ಟುವುದು ಶುರುವಾದರೆ ಮುಂದೊಮ್ಮೆ ಪ್ಯಾಸಿಸ್ಟ್ ಸರಕಾರವೇನಾದರೂ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ವ್ಯವಸ್ಥೆಯ ಅವ್ಯವಸ್ಥೆಗಳ ಬಗ್ಗೆ ಬರೆಯುವ ಪತ್ರಕರ್ತರು ಹಾಗೂ ಪತ್ರಿಕೆಯ ಸಂಪಾದಕರುಗಳೆಲ್ಲಾ ಜೈಲಿನಲ್ಲಿರಬೇಕಾಗುತ್ತದೆ. ಇಲ್ಲವೇ ಈಗಾಗಲೇ ಇರುವ ಕೆಲವಾರು ರಾಜೀಕೋರ ಪತ್ರಕರ್ತರಂತೆ ಆಳುವ ಪಕ್ಷಗಳ ಹೊಗಳುಭಟ್ಟರಾಗಿ ಬಾಲ ಅಲ್ಲಾಡಿಸಬೇಕಾಗುತ್ತದೆ. ಇವೆರಡರಲ್ಲಿ ಯಾವುದೇ ಆದರೂ ಅದು ಸಾಮಾಜಿಕ ಸ್ವಾಸ್ತ್ಯವನ್ನು ಹಾಳುಮಾಡುವುದರಲ್ಲಿ ಸಂದೇಹವಿಲ್ಲಾ. ಸಂವಿಧಾನದ ನಾಲ್ಕನೇ ಆಧಾರ ಸ್ಥಂಬವನ್ನು ದುರ್ಬಲಗೊಳಿಸುವ ಪ್ರಯತ್ನವಂತೂ ಜಾರಿಯಲ್ಲಿದೆ. 


ಈಗ ಕನ್ನಡದಲ್ಲಿ ಕಳೆದ ಒಂದೂವರೆ ದಶಕದಿಂದ ವಾರ್ತಾಭಾರತಿ ದಿನಪತ್ರಿಕೆ ತುಂಬಾ ವಸ್ತುನಿಷ್ಟವಾಗಿ ಪ್ರಕಟಗೊಳ್ಳುತ್ತಿದೆ. ಅದರ ಲೇಖನಗಳು ಸಾಮಾಜಿಕ ತಾಣವಾದ ಫೇಸ್‌ಬುಕ್‌ನಲ್ಲಿಯೂ ಸಹ ಬಿತ್ತರಗೊಳ್ಳುತ್ತದೆ.ಫೇಸ್ಬುಕ್ಕಿನಲ್ಲಿ ಲಿಂಕ್ ಮೂಲಕ ಬರುವ ಸುದ್ದಿಗಳು ಯಾರಿಗಾದರೂ ಇಷ್ಟವಾಗದಿದ್ದರೆ ಅದರ ವಿರುದ್ಧವಾಗಿ ತಮ್ಮ ಅಭಿಪ್ರಾಯಗಳನ್ನು ಬರೆಯುವ ಸ್ವಾತಂತ್ರ್ಯ ಎಲ್ಲರಿಗೂ ಮುಕ್ತವಾಗಿದೆ.  ಆದರೆ ಸಂಘಪರಿವಾರದ ಟ್ರೋಲ್‌ಗಳು ಫೇಸ್ಬುಕ್ಕಿಗೆ ಸುಳ್ಳು ದೂರುಗಳನ್ನು ನಿರಂತರವಾಗಿ ನೀಡಿವೆ.  ಈ ಟ್ರೋಲ್‌ಗಳ ದ್ವೇಷಪೂರಿತ ಹಾವಳಿ ಎಷ್ಟಾಗಿದೆ ಎಂದರೆ ಫೇಸ್‌ಬುಕ್ ಸಂಸ್ಥೆ ವಾರ್ತಾಭಾರತಿಯ ಫೇಸ್‌ಬುಕ್ ಅಕೌಂಟಿನ ನ್ಯೂಜ್ ಲಿಂಕ್ ಸೌಲಭ್ಯವನ್ನು ಒಂದು ವಾರದಿಂದಾ ಬ್ಲಾಕ್ ಮಾಡಿಬಿಟ್ಟಿದೆ. ಈ ರೀತಿಯ ದಮನದ ವಿರುದ್ಧವೂ ಸಹ  ಪತ್ರಕರ್ತರ ಹಿತಕಾಯಲು ಹುಟ್ಟಿರುವ, ಪತ್ರಿಕೋದ್ಯಮದ ಹಿತರಕ್ಷಣೆಯ ಹೊಣೆಗಾರಿಕೆ ಹೊತ್ತ ಯಾವ ಸಂಘಗಳೂ ಚಕಾರ ಎತ್ತಲಿಲ್ಲಾ. ಎನ್‌ಡಿಟಿವಿ ಇಂಡಿಯಾದ ಕಾರ್ಯನಿರ್ವಾಹಕ ಸಂಪಾಕದರಾದ ರವೀಶ್ ಕುಮಾರ್‌ರವರು ಈ ಪೇಸ್‌ಬುಕ್ ಬ್ಲಾಕ್ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನವನ್ನು ಪ್ರೆಸ್ ಕ್ಲಬ್ ಆಪ್ ಇಂಡಿಯಾದಲ್ಲಿ ಪ್ರಸ್ತಾಪಿಸಿ ವಿರೋಧಿಸಿದರು. ಈಗ ಅತ್ಯಂತ ಮಹತ್ವದ ಹುದ್ದೆಯಾದ ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್‌ರವರೇ ಪತ್ರಕರ್ತರು ಅಪ್ರೀಯ ಸತ್ಯಗಳನ್ನು ಹೇಳಬಾರದು ಎಂದು ಫರ್ಮಾನು ಹೊರಡಿಸಿದ್ದಾರೆ. ಸರಕಾರದ ಜೊತೆಗೆ ಪ್ರೀತಿಯಿಂದ ಮಾತಾಡಿ ಎಂದು ಕರೆಕೊಟ್ಟಿದ್ದಾರೆ. ಈಗ ಯಾವುದು ಸತ್ಯ ಹಾಗೂ ಯಾವುದು ಅಪ್ರೀಯ ಸತ್ಯ ಎಂಬುದನ್ನು ಸರಕಾರ ನಿರ್ಧರಿಸುತ್ತದೆ. ಇನ್ನು ಈ ಬೆದರಿಕೆಯ ಯೋಜನೆಗಳು ಯಾವುದೇ ಹೆದರಿಕೆ ಇಲ್ಲದೇ ಖುಲಂ ಖುಲ್ಲಾ ನಡೆಯುತ್ತವೆ.. ಎಂದು ಹೇಳಿದ ರವೀಶ್‌ರವರು ಆಳುವವರ ಸರ್ವಾಧಿಕಾರಿ ದಮನವನ್ನು ವಿವರಿಸಿದ್ದಾರೆ. ಈ ಸಾಮಾಜಿಕ ಜಾಲ ತಾಣ ಮಾಧ್ಯಮಗಳು ಅಭಿವ್ಯಕ್ತಿ  ಸ್ವಾತಂತ್ರ್ಯಕ್ಕೆ ಪರ್ಯಾಯ ಮಾರ್ಗವನ್ನು ಕಲ್ಪಿಸಿವೆ. ಅಸಲಿ ವಿಚಾರಗಳು, ಮುಚ್ಚಿಟ್ಟ ಸತ್ಯಗಳು ಲಕ್ಷಾಂತರ ಜನರನ್ನು ತಲುಪಲು ಸಾಧ್ಯವಾಗಿದೆ. ಈ ಮಾರ್ಗಗಳನ್ನೂ ಬಂದ್ ಮಾಡುವ ಹುನ್ನಾರಗಳು ನಡೆಯುತ್ತಿವೆ. ವಾರ್ತಾಭಾರತಿ ಫೇಸ್ ಬುಕ್ ಅಕೌಂಟ್ ಮಾಡಿದ್ದು ಕೇವಲ ಒಂದು ಸ್ಯಾಂಪಲ್ ಮಾತ್ರ. ಇನ್ನು ಮುಂದೆ ಆಳುವವರ ಜನವಿರೋಧಿತನ ಕುರಿತು ಬರೆದು ಜನತೆಯನ್ನು ಜಾಗೃತ ಮಾಡುವ ಎಲ್ಲರ ವಿರುದ್ಧ ಈ ಬ್ಲಾಕಾಸ್ತ್ರ ಪ್ರಯೋಗಗಳು ನಡೆಯುತ್ತವೆ. ಅಘೋಷಿತ ತುರ್ತು ಪರಿಸ್ಥಿತಿ ಯಾವುಯಾವುದೋ ರೂಪದಲ್ಲಿ ದೇಶದಲ್ಲಿ ಜಾರಿಯಲ್ಲಿದೆ. ಇನ್ನೂ ಕರಾಳ ದಿನಗಳು ಮುಂದಿವೆ.

-ಶಶಿಕಾಂತ ಯಡಹಳ್ಳಿ                            
  

 


ಸೋಮವಾರ, ಜೂನ್ 26, 2017

ತಹ ತಹ.....97 ಅಹಾರದ ಹಕ್ಕು ಮತ್ತು ವ್ಯಕ್ತಿ ಸ್ವಾತಂತ್ರ್ಯ : ಮೈಸೂರಲ್ಲೊಂದು ಅನಗತ್ಯ ವಿವಾದ


ಗೋಮಾಂಸ ಸೇವನೆಯ ಪ್ರಮಾದಕ್ಕೆ  ಗೋಮೂತ್ರದ ಪರಿಹಾರ...!!!



ಮೈಸೂರಿನ ಕಲಾಮಂದಿರದಲ್ಲಿರುವ ಮನೆಯಂಗಳ ಸಭಾಂಗಣದಲ್ಲಿ ಚಾರ್ವಾಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಮೂರು ದಿನಗಳ ವಿಚಾರ ಸಂಕಿರಣವೊಂದು ಆಯೋಜನೆಗೊಂಡಿತ್ತು. ಜೂನ್ ಶನಿವಾರ ಭಾನುವಾರ ಹಾಗೂ ರಂಜಾನ್ ಹಬ್ಬದ ದಿನ ಸೋಮವಾರಗಳಂದು ಸರಕಾರಿ ರಜೆಗಳಿರುವುದರಿಂದ ಹೆಚ್ಚು ಜನ ಕಾರ್ಯಕ್ರಮಕ್ಕೆ ಬರುತ್ತಾರೆಂಬ ಯೋಚನೆ ಸಂಘಟಕರದ್ದಾಗಿತ್ತು. ಆಹಾರದ ಹಕ್ಕು ಮತ್ತು ವ್ಯಕ್ತಿ ಸ್ವಾತಂತ್ರ್ಯದ ಕುರಿತಾದ ವಿಚಾರ ಸಂಕಿರಣದ ಸಮಾರೋಪ ಸಮಾರಂಭದ ಉದ್ಘಾಟನೆಯ ಸಮಯದಲ್ಲಿ ಗೋಮಾಂಸವನ್ನು ಕೆಲವಾರು ಪ್ರಗತಿಪರರು ಸೇವಿಸಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು. ಗೋವಿನ ಮಾರಾಟ ಹಾಗೂ ಹತ್ಯೆಯನ್ನು ನಿರ್ಬಂಧಿಸುವ ಕೇಂದ್ರ ಸರಕಾರ ಹಾಗೂ ಸಂಘಪರಿವಾರದ ಜೀವವಿರೋಧಿ ನೀತಿಯನ್ನು ವಿರೋಧಿಸವ ನಿಟ್ಟಿನಲ್ಲಿ ಗೋಮಾಂಸ ಭಕ್ಷಣೆಯು ವಿಚಾರ ಸಂಕಿರಣದ ಭಾಗವಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿದ್ದ ಪ್ರೊ.ಕೆ.ಎಸ್.ಭಗವಾನ್‌ರವರೂ ಸಹ ಎಲ್ಲರ ಜೊತೆಗೆ ಗೋಮಾಂಸವನ್ನು ಸೇವಿಸಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿದರು. ಇಷ್ಟು ಸಾಕಾಗಿತ್ತು ಮತಾಂಧ ಪಡೆಗೆ ಟಿವಿ ಮಾಧ್ಯಮಗಳಲ್ಲಿ, ಜಾಲತಾಣಗಳಲ್ಲಿ ಹುಯಿಲೆಬ್ಬಿಸಲು. ಮತಿಗೆಟ್ಟ ಬಿಜೆಪಿಯ ಯುವ ಮೋರ್ಚಾದವರು ಅಲ್ಲಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಂಡು ಬಾಯಿಬಡಿದುಕೊಳ್ಳಲು. ಅಲ್ಲಿ ಗೋಮಾಂಸ ಸೇವಿಸಿದವರೆಲ್ಲರನ್ನೂ ಬಿಟ್ಟರು ಭಗವಾನ್‌ರವರಿಗೆ ಅಟಕಾಯಿಸಿಕೊಂಡರು. ಈ ಸಂಕಿರಣದಲ್ಲಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಕೆ.ಎಸ್.ಶಿವರಾಂ,  ಮೈಸೂರು ವಿವಿ ಪ್ರಾದ್ಯಾಪಕ ಮಹೇಶ ಚಂದ್ರ ಗುರು ಹಾಗೂ ಇನ್ನೂ ಅನೇಕ ಪ್ರಜ್ಞಾವಂತ ವಿಚಾರವಾದಿಗಳು ಭಾಗವಹಿಸಿದ್ದರು. 

ಸಾರ್ವಜನಿಕವಾಗಿ ಗೋಮಾಂಸ ತಿಂದಿದ್ದು ಅಪರಾಧ. ಅದೂ ಸರಕಾರಿ ಕಟ್ಟಡದಲ್ಲಿ ತಿಂದಿದ್ದಂತೂ ಘನಘೋರ ಅಪರಾಧ, ಅದರಲ್ಲೂ ಭಗವಾನ್‌ರಂತವರು ತಿಂದಿದ್ದಂತೂ ಅರಗಿಸಿಕೊಳ್ಳಲಾಗದ ಅಕ್ಷಮ್ಯ ಅಪರಾಧ ಎನ್ನುವುದು ಈ ಸೋಕಾಲ್ಡ್ ಹಿಂದುತ್ವವಾದಿಗಳ ಆತಂಕ ಹಾಗೂ ಆರೋಪವಾಗಿತ್ತು. ಹುಸಿ ಭ್ರಮೆಯನ್ನು ತಲೆಯಲ್ಲಿ ತುಂಬಿಕೊಂಡ ಈ ನಕಲಿ ಗೋಭಕ್ತರನ್ನು ಕೆರಳಿಸಲು ಈ ಘಟನೆ ಸಾಕಾಗಿತ್ತು. ವಿವಾದಗಳನ್ನು ಸೃಷ್ಟಿಸಿ ಜನರನ್ನು ದಿಕ್ಕೆಡೆಸಲು ಸದಾ ಹಸಿದು ಕಾಯ್ದುಕುಳಿತಿರುವ ಮತಾಂಧ ದುಷ್ಟ ಶಕ್ತಿಗಳಿಗೆ ಈ ಘಟನೆಯಿಂದಾಗಿ ಆಹಾರ ಸಿಕ್ಕಂತಾಯಿತು. ಆದರೆ.. ಅಲ್ಲಿ ನಡೆದದ್ದಾದರೂ ಏನು? ಗೋಮಾಂಸವನ್ನು ತಿಂದಿದ್ದಾದರೂ ಯಾಕೆ? ಎನ್ನುವುದನ್ನು ಅರಿತುಕೊಳ್ಳುವ ತಾಳ್ಮೆಯಾಗಲೀ ಇಲ್ಲವೇ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಭಿನ್ನಾಭಿಪ್ರಾಯಗಳಿದ್ದರೆ ಅಲ್ಲಿಯೇ ಮಂಡಿಸುವ ವೈಚಾರಿಕತೆಯಾಗಲೀ ಈ ಉನ್ಮಾದ ಪೀಡಿತರಿಗಂತೂ ಇಲ್ಲವೇ ಇಲ್ಲಾ. ಯಾವಾಗ ಏನು ಮಾತಾಡಬೇಕು ಎನ್ನುವ ವಿವೇಕವನ್ನೇ ಕಳೆದುಕೊಂಡಂತೆ ಮಾತಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಶ್ರೀಮಾನ್ ಯಡಿಯೂರಪ್ಪನವರಂತೂ "ಗೋಮಾಂಸ ಪ್ರೀಯವಾದರೆ ಮನೆಯಲ್ಲೇ ತಿಂದು ಸಾಯಲಿ.." ಎಂದು ಜೀವವಿರೋಧಿ ಹೇಳಿಕೆ ಕೊಟ್ಟು ಮಾಂಸಾಹಾರಿಗಳನ್ನು ಅಪಮಾನಿಸಿದ್ದಾರೆ. ತಿನ್ನೋದು ಸಾಯೋದಕ್ಕಲ್ಲಾ ಬದುಕೋದಕ್ಕೆ ಎನ್ನುವ ಕನಿಷ್ಟ ಪ್ರಜ್ಞೆಯೂ ಇಲ್ಲದವರು ಹೇಳುವ ಮಾತಿದು. ಅಲ್ಲಿ ಗೋಮಾಂಸವನ್ನು ತಿಂದು ಪ್ರತಿಭಟಿಸಿದ್ದು ಮುಸ್ಲಿಂರ ಮೇಲಿನ ಪ್ರೀತಿಯಿಂದಲೂ ಅಲ್ಲಾ, ಹಿಂದೂಗಳ ಮೇಲಿನ ದ್ವೇಷದಿಂದಲೂ ಅಲ್ಲಾ.. ಸಂಘಪರಿವಾರಿಗಳು ಬಹುಸಂಖ್ಯಾತ ಮಾಂಸಾಹಾರಿಗಳ  ಮೇಲೆ ಹೇರುತ್ತಿರುವ ಗೋಹತ್ಯೆ ಮತ್ತು ಮಾರಾಟ ನಿಷೇಧವೆಂಬ ಜೀವವಿರೋಧಿ ಕಾನೂನಿನ ವಿರುದ್ಧ. ಆಹಾರದ ಹಕ್ಕು ಮತ್ತು ವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವುದರ ಪರವಾಗಿ ಸಾಂಕೇತಿಕ ಪ್ರತಿರೋಧ ವ್ಯಕ್ತವಾಗಿದೆ. ಆಹಾರದ ಹಕ್ಕನ್ನೇ ಕಿತ್ತುಕೊಂಡು ವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸ ಬಯಸುವ ಮತಾಂಧರಿಗೆ ಹಾಗೂ ಅವರ ಸಮರ್ಥಕರಿಗೆ ಈ  ಎಲ್ಲಾ ಸೂಕ್ಷ್ಮಗಳು ಹಾಗೂ ಬಹುಜನರ ತುತ್ತಿನ ಚಿಲದ ಸಂಕಟಗಳು ಅರ್ಥವಾಗುವುದಿಲ್ಲಾ. ಅರ್ಥವಾದರೂ ಜನವಿರೋಧಿತನವನ್ನೇ ಮೈಗೂಡಿಸಿಕೊಂಡ ಕೇಸರಿ ಪಡೆ ಗುಲ್ಲೆಬ್ಬಿಸುವುದನ್ನು ನಿಲ್ಲಿಸುವುದಿಲ್ಲಾ.


ಇಷ್ಟಕ್ಕೂ ಗೋವು ಅಂದ ಕೂಡಲೇ ಸಂಘಿಗಳ ಅಂಗಗಳಲ್ಲಿ ಹಿಂದುತ್ವ ಜಾಗೃತವಾಗಿ ಬಿಡುತ್ತದೆ. ಮೂರು ಕೋಟಿ ದೇವತೆಗಳೂ ಇವರ ಮೈಮನಗಳಲ್ಲಿ ಏಕಕಾಲಕ್ಕೆ ಸೇರಿಕೊಂಡು ರುದ್ರತಾಂಡವ ಮಾಡತೊಡಗುತ್ತವೆ. ಎಂದೂ ಹಸುಗಳನ್ನು ಸಾಕದ, ಸಾಕಿ ಸಗಣಿ ಗಂಜಳ ಬಾಚದ ಈ ಗೋಭಕ್ತರಿಗೆ ಹಸುವಿನ ಬಗ್ಗೆ ಪವಿತ್ರ ಭಾವನೆ ಪ್ರಹರಿಸುತ್ತದೆ. ಆದರೆ.. ಹಸು ಕೂಡಾ ಎಲ್ಲಾ ಪ್ರಾಣಿಗಳ ಹಾಗೆಯೇ ಒಂದು ಪ್ರಾಣಿ ಎನ್ನುವುದನ್ನು ಒಪ್ಪಿಕೊಳ್ಳಲು ಸಿದ್ದರಿಲ್ಲದ ಇವರು ಅದನ್ನು ಮಾತೆ, ದೇವತೆ ಎಂದೆಲ್ಲಾ ಪೂಜಿಸುತ್ತೇವೆ ಎನ್ನುತ್ತಾರೆ. ಆದರೆ ಇದೇ ಮಾತೆಯನ್ನು ಒಂದು ಕಡೆ ಕಟ್ಟಿ ಹಾಕಿ ಅದರ ಸಹಜ ಸ್ವಾತಂತ್ರ್ಯವನ್ನು ಹರಣ ಮಾಡಿದ್ದು ಇವರಿಗೆ ಸಹನೀಯ, ಅದೇ ದೇವತೆಯ ಕೆಚ್ಚಲಿಗೆ ಹಾಮೋನ್ ಇಂಜಕ್ಷನ್ ಕೊಟ್ಟು ಮಿತಿಮೀರಿದ ಹಾಲನ್ನು ಆಧುನಿಕ ಮಶಿನ್‌ಗಳಿಂದ ಹೀರಿ ಹಿಂಸಿಸುವುದು ಅನುಕರಣೀಯ, ಗೋಮಾತೆಯ ಕರುವನ್ನು ಬಲವಂತವಾಗಿ ಎಳೆದು ಕಟ್ಟಿ ಅದರ ಪಾಲಿನ ಹಾಲನ್ನು ಕಬಳಿಸುವುದು ಆನಂದನೀಯ. ಹೀಗೆ ಇವರ ಗೋಮಾತೆಯನ್ನು ಅನುದಿನವೂ ಹಿಂಸಿಸಿ ಪಡೆದ ಹಾಲು ಅದರಿಂದ ತೆಗೆದ ಬೆಣ್ಣೆ ತುಪ್ಪ ಮೊಸರು ಮಜ್ಜಿಗೆಗಳೆಲ್ಲಾ ಈ ಗೋಭಕ್ತರಿಗೆ ಹಾಗೂ ಅವರ ಮನೆಮಂದಿ ಮಕ್ಕಳಿಗೆ ಬೇಕೇ ಬೇಕು. ಈ ಪುರೋಹಿತಶಾಹಿಗಳ ಪೂಜೆ, ಅಭಿಷೇಕಗಳಿಗೆ ಉಪಯೋಗವಾಗಬೇಕು. ಎಂದಾದರೂ ಯಾರಾದರೂ ತಮ್ಮ ತಾಯಿಗೆ ಈ ರೀತಿ ಹಿಂಸೆ ಕೊಡುತ್ತಾರಾ? ಪೂಜಿಸುವ ದೇವತೆಯನ್ನು ಕೊಟ್ಟಿಗೆಯಲ್ಲಿ ಕಟ್ಟಿ ನೋವು ನೀಡುತ್ತಾರಾ? ಆದರೆ ಗೋವಿನ ಮೇಲೆ ನಿರಂತರವಾಗಿ ಆಗುತ್ತಿರುವ ದಿನನಿತ್ಯದ ಹಿಂಸೆಗೆ ಜಾಣಮರೆವನ್ನು ತೋರಿಸುವ ಗೋಪಾಲಕರಲ್ಲದ ಈ ಗೋಭಕ್ತರುಗಳು ಹಸುವನ್ನು ಸಾಗಿಸುವವರ ಮೇಲೆ ಹಲ್ಲೆ ಮಾಡುತ್ತಾರೆ, ಬರಡು ಹಸುಗಳನ್ನು ಕೊಂದು ಹಸಿವು ನೀಗಿಸಿಕೊಳ್ಳಲು ತಿನ್ನುವವರ ಮೇಲೆ ಕೆಂಡಕಾರುತ್ತಾರೆ, ಗೋಹತ್ಯೆ ಮಾಡಿದವರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಮತಾಂಧ ನಾಯಕರು ಪ್ರಚೋದಿಸುತ್ತಾರೆ. ದನಗಳನ್ನು ಕೊಂದು ವಿದೇಶಕ್ಕೆ ರಪ್ತು ಮಾಡುವ ಬ್ರಹತ್ ಮಾಂಸ ರಪ್ತು  ಕಂಪನಿಗಳ ಕ್ರೌರ್ಯವನ್ನು ಕಡೆಗಣಿಸುತ್ತಾರೆ. ಗೋಮಾರಾಟ ನಿಷೇಧ, ಗೋಮಾಂಸ ಭಕ್ಷಣೆ ಅಕ್ರಮ ಎಂದೆಲ್ಲಾ ಜೀವವಿರೋಧಿ ಕಾನೂನುಗಳನ್ನು ತಂದು ಅಸಂಖ್ಯಾತ ದಲಿತರು ಹಾಗೂ ಮುಸ್ಲಿಂ ಸಮುದಾಯದ ಮಾಂಸಾಹಾರಿ ಜನರ ಹೊಟ್ಟೆಯ ಮೇಲೆ ಹೊಡೆಯಲು ಪ್ರಯತ್ನಿಸುತ್ತಿದ್ದಾರೆ.

ಇದನ್ನೇ.. ಇಂತಹ ಮತಾಂಧ ಶಕ್ತಿಗಳ ಜೀವವಿರೋಧಿ ನಿಲುವನ್ನೇ ವಿರೋಧಿಸಿ ಮೈಸೂರಲ್ಲಿ ವಿಚಾರ ಸಂಕಿರಣವನ್ನು ಆಯೋಜಿಸಿದ್ದು. ಸಾಂಕೇತಿಕವಾಗಿ ಗೋಮಾಂಸವನ್ನು ತಿಂದು ಪ್ರತಿಭಟಿಸಿದ್ದು. ಆಹಾರ ಪದ್ದತಿ ಹಾಗೂ ವ್ಯಕ್ತಿ ಸ್ವಾತಂತ್ರ್ಯವನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದು. ಸಮಾಜವನ್ನು ಒಡೆಯುವ ಹುನ್ನಾರ ಇದು ಎಂದು ದೇಶವನ್ನೇ ಧರ್ಮಾಧಾರಿತವಾಗಿ ಒಡೆಯುತ್ತಲೇ ಬಂದಿರುವ ಕೋಮುವಾದಿಗಳು ಆರೋಪಿಸಿದರು. ಸರಕಾರಿ ಕಟ್ಟಡದಲ್ಲಿ ಗೋಮಾಂಸ ತಿಂದಿರುವುದನ್ನೇ ದೊಡ್ಡದು ಮಾಡತೊಡಗಿದರು. ಹೋರಾಟದ ಸಾಗರಕೆ ಸಾವಿರಾರು ನದಿಗಳು ಎನ್ನುವುದನ್ನು ಈ ತಲೆತಿರುಕರಿಗೆ ಹೇಳುವವರಾದರೂ ಯಾರು? ಹಸು ಎನ್ನುವ ಪ್ರಾಣಿಯ ಮೇಲೆ ಮಾತೆ ದೇವತೆ ಎಂದು ಮಿತ್ಯಾರೋಪ ಮಾಡಿಕೊಂಡು ಬಹುಜನರ ಆಹಾರ ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳುತ್ತಿರುವ ಸಂಘ ಪರಿವಾರದ ಪುರೋಹಿತಶಾಹಿ ಮನಸ್ಸುಗಳ ಹುನ್ನಾರವನ್ನು ಪ್ರತಿಭಟಿಸುವುದು ಪ್ರಜ್ಞಾವಂತಹ ಹಕ್ಕೆಂಬುದು ಈ ಉನ್ಮಾದಿತರಿಗೆ ತಿಳಿಸುವುದಾದರೂ ಹೇಗೆ? ಹೀಗೆ ಪ್ರತಿಭಟನಾತ್ಮಕವಾಗಿ ದನದ ಮಾಂಸ ತಿಂದಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಕೂಡಾ ಪ್ರತಿಭಟನಾತ್ಮಕವಾಗಿ ಸಂಸತ್ತು ಹಾಗೂ ವಿಧಾನಸೌಧದಲ್ಲಿ ಮಾಂಸವನ್ನು ತಿಂದು ವಿರೋಧವನ್ನು ವ್ಯಕ್ತಪಡಿಸಲಾಗಿದೆ. ಟೌನ್‌ಹಾಲ್ ಮುಂದೆ ಗಿರೀಶ್ ಕಾರ್ನಾಡಾದಿಯಾಗಿ ಹಲವಾರು ಪ್ರಗತಿಪರರು ಗೋಮಾಂಸವನ್ನು ಹಂಚಿ ತಿಂದು ತೀವ್ರವಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಆಗ ಕಾನೂನು  ಕ್ರಮದ ಬಗ್ಗೆ ಮಾತಾಡದ ಈ ಹಿಂದುತ್ವವಾದಿಗಳು ಈಗ ಗೋಮಾಂಶ ಸೇವನೆಯ ಸಾಂಕೇತಿಕ  ಪ್ರತಿಭಟನೆಯ ವಿರುದ್ಧ ಗುಲ್ಲೆಬ್ಬಿಸುತ್ತಿದ್ದಾರೆ.ಈಗ ಕಲಾಮಂದಿರದಲ್ಲಿ  ಸಾರ್ವಜನಿಕವಾಗಿ ಗೋಮಾಂಸ ಸೇವಿಸಿ, ಇತರರಿಗೂ ಸೇವಿಸುವಂತೆ ಪ್ರಚೋದಿಸಿದ್ದಾರೆಂದು ದೂರಿ ಕೆ.ಎಸ್.ಭಗವಾನ್, ಮಹೇಶ್ ಚಂದ್ರಗುರು ಹಾಗೂ ಇತರರ ಮೇಲೆ ಬಿಜೆಪಿಯ ಗೋಸಂರಕ್ಷಕ ಪ್ರಕೋಷ್ಠ ಎನ್ನುವ ಕೇಸರಿ ಸಂಸ್ಥೆ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಪ್ರತಿಭಟನೆಯನ್ನು ಕಾನೂನು ಕಿರುಕುಳ ಕೊಡುವ ಮೂಲಕ ಹತ್ತಿಕ್ಕುವ ಪ್ರಯತ್ನ ಮಾಡಿದೆ.

"ಯಾವುದೇ ಸರಕಾರಿ ಸಭೆ ಸಮಾರಂಭಗಳಲ್ಲೂ ಮಾಂಸಾಹಾರವನ್ನು ಸೇವಿಸಬಾರದೆಂಬ ಸಂಪ್ರದಾಯವಿದೆ. ಇದು ನಿಯಮವಲ್ಲ" ಎಂದು ಸ್ವತಃ ಜಿಲ್ಲಾಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವಾಲಯವು ಕೇಸರಿ ಪಡೆಗಳ ಆಟಾಟೋಪಕ್ಕೆ ಆತಂಕಗೊಂಡು ಸಮಗ್ರ ತನಿಖೆಗೆ ಆದೇಶಿಸಿ ಈ ಘಟನೆ ನಡೆಯಲು ಕಾರಣರಾದವರ ಮೇಲೆ ತುರ್ತಾಗಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಲಾಗಿದೆ.  ಕಟ್ಟಡ ಸರಕಾರದ್ದೋ ಇಲ್ಲವೇ ಖಾಸಗಿಯವರದ್ದೋ ಎನ್ನುವುದು ಇಲ್ಲಿ ಮುಖ್ಯವಲ್ಲಾ. ಅಲ್ಲಿ ತಿನ್ನಲು ಅನುಮತಿ ಇದೆಯೋ ಇಲ್ಲವೋ ಎನ್ನುವುದೂ ಪ್ರಮುಖವಲ್ಲಾ. ಅನ್ಯಾಯದ ವಿರುದ್ಧ ಪ್ರತಿಭಟಿಸುವುದೇ ಪ್ರಮುಖ ಉದ್ದೇಶ. ಇಷ್ಟಕ್ಕೂ ಸರಕಾರಿ ಕಟ್ಟಡಗಳಲ್ಲಿ ಮಾಂಸ ತಿನ್ನಬಾರದು ಎನ್ನುವುದು ಯಾವುದೇ ಕಾನೂನಿನಲ್ಲೂ ನಮೂದಾಗಿಲ್ಲಾ, ಸಂವಿಧಾನದ ಯಾವುದೇ ಪರಿಚ್ಚೇದದಲ್ಲಿ ಹೇಳಲಾಗಿಲ್ಲಾ, ಅದೊಂದು ರೀತಿ ಅಘೋಷಿತ ಸಂಪ್ರದಾಯವಾಗಿ ರೂಢಿಯಲ್ಲಿದೆ.  ಈ ನೈತಿಕತೆಯ ಗುತ್ತಿಗೆದಾರರಿಗೆ ಈ ಕಾನೂನುಗಳ ಬಗ್ಗೆ ಅರಿವೂ ಇರುವುದಿಲ್ಲಾ. ಇವರು ಅಂದುಕೊಂಡಿದ್ದೇ ಕಾನೂನು ಎಂದು ತಿಳಿದುಕೊಂಡವರಿಗೆ ಎಷ್ಟು ತಿಳಿಹೇಳಿದರೂ ಅರ್ಥವಾಗುವುದಿಲ್ಲಾ. ಸರಕಾರಿ ಕಟ್ಟಡಗಳಲ್ಲಿ ಮಾಂಸಾಹಾರವನ್ನು ನಿಷೇಧಿಸುವ ಕಾನೂನು ಮಾಡಿದರೂ ಅದನ್ನು ವಿರೋಧಿಸುವ ಹಾಗೂ ಸರಕಾರಿ ಕಟ್ಟಡಗಳಲ್ಲಿ ಮಾಂಸ ತಿಂದು ಪ್ರತಿಭಟಿಸುವ ವ್ಯಕ್ತಿ ಸ್ವಾತಂತ್ರ್ಯ ಇದ್ದೇ ಇದೆ. ಆದರೆ ಈ ಪ್ಯಾಸಿಸ್ಟ್ ಮನಸ್ಥಿತಿಯವರಿಗೆ ಅವರ ಜನವಿರೋಧಿ ನಂಬಿಕೆಗಳ ವಿರುದ್ಧ ನಡೆಯುವ ಯಾವುದೇ ರೀತಿಯ ಪ್ರತಿಭಟನೆ ಎಂದೂ ಸಹ್ಯವಾಗಿವುದಿಲ್ಲಾ. ಪುರೋಹಿತಶಾಹಿ ಮನುವಾದಿಗಳು ಶತಮಾನಗಳಿಂದ ಹೇರಿಕೆ ಮಾಡಿಕೊಂಡು ಬಂದ ಅಸಂಗತ ಮೌಢ್ಯಗಳ ವಿರುದ್ಧ ಮಾಡಲಾಗುವ ವೈಚಾರಿಕ ನಡೆಗಳು ಮತಾಂಧರಿಗೆ ಜೀರ್ಣವಾಗುವುದಿಲ್ಲಾ. ತಮ್ಮ ಜೀವವಿರೋಧಿ ನಂಬಿಕೆಗಳನ್ನು ಇಡೀ ದೇಶವಾಸಿಗಳ ಮೇಲೆ ಹೇರಬೇಕೆಂಬ ಹಿಂದುತ್ವವಾದಿಗಳ ಹುನ್ನಾರಗಳಿಗೆ ಕೊನೆಮೊದಲೆಂಬುದಿಲ್ಲಾ.


ಪ್ರತಾಪ ಸಿಂಹ ಎನ್ನುವ ಬಿಜೆಪಿಯ ಮತಾಂಧ ಸಂಸದ ಮನೆಯಲ್ಲಿ ಯಾವುದೇ ಮಾಂಸ ತಿನ್ನಲಿ, ಆದರೆ ಸರಕಾರಿ ಕಛೇರಿಯಲ್ಲಿ ಮಾಂಸಾಹಾರ ಭಕ್ಷಣೆಗೆ ಅವಕಾಶವಿಲ್ಲಾ, ಕಲಾಮಂದಿರದಲ್ಲಿ ಮಾಂಸಾಹಾರ ಸೇವಿಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಹಾಗೂ ಪ್ರಾದ್ಯಾಪಕ ಹುದ್ದೆಯಿಂದ ಮಹೇಶಚಂದ್ರ ಗುರುವನ್ನು ವಜಾಗೊಳಿಸಬೇಕು ಎಂದು ಗುಡುಗಿದ್ದಾರೆ. ವಿಚಾರ ಸಂಕಿರಣದ ನಂತರ ಕಲಾಮಂದಿರಕ್ಕೆ ದೌಡಾಯಿಸಿದ ಬಿಜೆಪಿ ಕೋಮುವಾದಿ ಕಾರ್ಯಕರ್ತರುಗಳು ಮಾವಿನ ಎಲೆಗಳ ಮೂಲಕ ಗೋಮೂತ್ರವನ್ನು ಕಲಾಮಂದಿರದ ಆವರಣದಲ್ಲಿ ಸಿಂಪಡಿಸಿ ಶುದ್ಧಿ ಮಾಡಿದೆವು ಎಂದುಕೊಂಡು ತಮ್ಮ ಮೌಢ್ಯವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ ಸಂಭ್ರಮಿಸಿದರು. ಈ ಮತಾಂಧರ ಹಾಗೂ ಅವರ ಸಮರ್ಥಕರ ಹುನ್ನಾರಗಳು ಗೊತ್ತಿರುವಂತಹುದೇ ಆಗಿವೆ. ಆದರೆ ಈ ಕಾಂಗ್ರೆಸ್ ಸರಕಾರಕ್ಕೇನಾಗಿದೆ? ಹಿಂದುತ್ವವಾದಿಗಳ ಆಟೋಟೋಪಕ್ಕೆ ಪೂರಕವಾಗಿ ಯಾಕೆ ಸ್ಪಂದಿಸುತ್ತಿದೆ? ವಿಚಾರ ಸಂಕಿರಣದಲ್ಲಿ ಮಾಂಸಾಹಾರ ಸೇವನೆ ಆಗಿದೆ ಎಂದು ಸುದ್ದಿಯಾದ ತಕ್ಷಣ ಜಾಗೃತರಾದ ಮೈಸೂರಿನ ಜಿಲ್ಲಾಧಿಕಾರಿ ಡಿ.ರಂಧೀಪ್ ಮಾಡಿದ ಮೊದಲ ಆದೇಶವೇನೆಂದರೆ ವಿಚಾರ ಸಂಕಿರಣವನ್ನು ಆಯೋಜಿಸಿದ ಚಾರ್ವಾಕ ಟ್ರಸ್ಟಿಗೆ ನೋಟೀಸ್ ಜಾರಿಮಾಡಿದ್ದು. ಆ ಸಂಸ್ಥೆಯನ್ನು ಬ್ಲಾಕ್‌ಲಿಸ್ಟಿಗೆ ಸೇರಿಸಲು ನಿರ್ಧರಿಸಿ ಕಲಾಮಂದಿರಕ್ಕೆ ಕಟ್ಟಿದ ಮುಂಗಡ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶಮಾಡಲಾಗಿದೆ. ಇದು ನಿಜಕ್ಕೂ ಆಘಾತಕಾರಿಯಾದ ಸಂಗತಿ. ಪ್ರತಿಭಟನೆಗಳನ್ನೇ ಇಲ್ಲವಾಗಿಸುವ ಆಳುವ ವರ್ಗಗಳ ಕುತಂತ್ರವಾಗಿದೆ. ಮತಾಂಧ ಶಕ್ತಿಗಳ ತಾಳಕ್ಕೆ ಜಿಲ್ಲಾಡಳಿತ ಪೂರಕವಾಗಿ ಕೆಲಸಮಾಡುತ್ತಿದೆ ಎಂಬುದು ಗೊತ್ತಾಗುತ್ತದೆ.


ದನ ಕುರಿ ಕೋಳಿ ಮೀನು ಸೇರಿದಂತೆ ಎಲ್ಲಾ  ಮಾಂಸಗಳೂ ಒಂದೇ, ಯಾವುದೂ ಮೇಲಲ್ಲಾ ಯಾವುದೂ ಕೀಳಲ್ಲಾ. ನಾವೇನೂ ಸಂವಿಧಾನ ವಿರೋಧಿ ಕೆಲಸವನ್ನಂತೂ ಮಾಡಿಲ್ಲಾ. ತಿಳುವಳಿಕೆ ಇಲ್ಲದವರು ಸುಮ್ಮನೇ ಕೂಗಾಡುತ್ತಿದ್ದಾರೆ. ಯಾವುದೇ ರೀತಿಯ ಮೊಕದ್ದಮೆ ದಾಖಲಿಸಲು ಎದುರಿಸಲು ನಾವು ಸಿದ್ಧ.. ಎಂದು ಪ್ರೊ.ಕೆ.ಎಸ್.ಭಗವಾನ್‌ರವರು ಮತಾಂಧರಿಗೆ ಉತ್ತರಿಸಿದ್ದಾರೆ. 

ಚಾರ್ವಾಕ ಟ್ರಸ್ಟ್ ಅನೇಕ ವೈಚಾರಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಬಂದಿದೆ, ವೈಚಾರಿಕ ನಾಟಕಗಳನ್ನು ಕಟ್ಟಿ ಆಡಿಸುತ್ತಾ ಈ ಪುರೋಹಿತಶಾಹಿಗಳ ಪಾರಂಪರಿಕ ಕುತಂತ್ರಗಳನ್ನು ಬಯಲು ಮಾಡುತ್ತಿದೆ. ಇದು ಹಿಂದುತ್ವವಾದಿಗಳಿಗೆ ನುಂಗಲಾರದ ತುತ್ತಾಗಿದೆ. ಈಗ ಪ್ರತಿಭಟನಾತ್ಮಕವಾಗಿ ಗೋಮಾಂಸ ಸೇವಿಸಿದ್ದನ್ನೇ ನೆಪವಾಗಿಟ್ಟುಕೊಂಡು ಆ ವೈಚಾರಿಕ ಸಂಸ್ಥೆಯನ್ನು ನಾಶಗೊಳಿಸುವ ಹಾಗೂ ಅದರ ಸಂಘಟಕರ ಉತ್ಸಾಹವನ್ನು ಕುಗ್ಗಿಸುವ ಕೆಲಸವನ್ನು ಮನುವಾದಿಗಳು ಮಾಡುತ್ತಿದ್ದಾರೆ. ಅವರ ಉದ್ದೇಶಕ್ಕೆ ಪೂರಕವಾಗಿ ಜಿಲ್ಲಾಧಿಕಾರಿ ಸ್ಪಂದಿಸುತ್ತಿರುವುದು ಆಘಾತಕಾರಿಯಾಗಿದೆ. ಇದು ಮತಾಂಧ ಶಕ್ತಿಗಳಿಗೆ ಇನ್ನಷ್ಟು ಪ್ರೇರಣೆಯನ್ನೊದಗಿಸುತ್ತದೆ. ಪ್ರಜ್ಞಾವಂತಹ ನೈತಿಕ ಸ್ತೈರ್ಯವನ್ನು ಕಡಿಮೆಗೊಳಿಸುತ್ತದೆ. ಹೀಗೇ ಕಾಂಗ್ರೆಸ್ ಸರಕಾರಕ ಕೋಮುವಾದಿಗಳ ಆಟೋಟೋಪಕ್ಕೆ ಹೆದರು ಅವರ ಪರವಾಗಿ ಆದೇಶಗಳನ್ನು ಕೈಗೊಂಡು ವಿಚಾರವಾದಿಗಳ ದ್ವನಿಯನ್ನು ದಮನಿಸಲು ನೋಡಿದರೆ ತನ್ನ ಅಂತ್ಯವನ್ನು ತಾನೇ ತಂದುಕೊಳ್ಳುವುದರಲ್ಲಿ ಸಂದೇಹವಿಲ್ಲಾ. ಮತಾಂಧ ದುಷ್ಟ ಶಕ್ತಿಗಳು ಇನ್ನೂ ಹೆಚ್ಚು ವಿಜ್ರಂಭಿಸುವುದರಲ್ಲೂ ಅನುಮಾನವಿಲ್ಲಾ.

                                   - ಶಶಿಕಾಂತ ಯಡಹಳ್ಳಿ
 

ಬುಧವಾರ, ಜೂನ್ 14, 2017

ತಹ ತಹ ..... 96 ಒಂದೇ ದೇಶ ಒಂದೇ ತೆರಿಗೆ ನೀತಿಯ ಹಿಂದಿರುವ ಹುನ್ನಾರ: ತಲ್ಲಣಿಸುತಿದೆ ಕನ್ನಡ ಸಿನೆಮಾ ಕ್ಷೇತ್ರ:


ತಮ್ಮ ಬುಡಕ್ಕೆ ಬಿಸಿ ನೀರು ಹರಿದಾಗಲೇ ಎಚ್ಚೆತ್ತುಕೊಳ್ಳುವ ಜಾಯಮಾನ ನಮ್ಮ ಕನ್ನಡ ಸಿನೆಮಾರಂಗದ  ಜನರಿಗೆ. ಈಗ ಕೇಂದ್ರ ಸರಕಾರ ಜಾರಿಗೊಳಿಸಿದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಯು ಕನ್ನಡ ಪ್ರಾದೇಶಿಕ ಚಿತ್ರರಂಗದವರಿಗೆ ನುಂಗಲಾರದ ತುತ್ತಾಗಿದೆ. ಹಿಂದೆ ಬ್ಲಾಕ್ ಮತ್ತು ವೈಟ್ ಹಣವನ್ನು ಬಳಸುತ್ತಾ, ರಾಜ್ಯ ಸರಕಾರದಿಂದ ಸಂಪೂರ್ಣ ತೆರಿಗೆ ರಿಯಾಯತಿ ಸವಲತ್ತನ್ನು ಪಡೆಯುತ್ತಾ, ಯಾವುದಕ್ಕೂ ನೆಟ್ಟಗೆ ಲೆಕ್ಕವಿಡದೇ ಕನ್ನಡ ಸಿನೆಮಾಗಳನ್ನು ನಿರ್ಮಿಸಲಾಗುತ್ತಿತ್ತು. ಈಗ ಎಲ್ಲದಕ್ಕೂ ಪಕ್ಕಾ ಲೆಕ್ಕ ಇಟ್ಟು ಸರಕಾರಕ್ಕೆ ಸಲ್ಲಿಸಲೇ ಬೇಕಲ್ಲಾ ಎನ್ನುವುದೇ ನಿರ್ಮಾಪಕರ ವಲಯಕ್ಕೆ ಬಲು ದೊಡ್ಡ ಸಂಕಟವಾಗಿದೆ. ಅದಕ್ಕಾಗಿ  "ಸಿನೆಮಾ ಎನ್ನುವುದನ್ನು ಮನರಂಜನಾ ಮಾಧ್ಯಮವನ್ನಾಗಿ ನೋಡಬೇಕೆ ಹೊರತು ವಾಣಿಜ್ಯದ ಮಾನದಂಡದಿಂದ ಅಳೆಯಬಾರದು" ಎಂದು ಎಲ್ಲಾ ನಿರ್ಮಾಪಕರು ಹುಯಿಲಿಡುತ್ತಿದ್ದಾರೆ. ತೆರಿಗೆಯ ಗೋಳಿನಿಂದ ರಿಯಾಯಿತಿ ಬೇಕೆಂದು ಒತ್ತಾಯಿಸುತ್ತಿದ್ದಾರೆ

ಆದರೆ... ಈಗ ಚಲನಚಿತ್ರ ಮಾಧ್ಯಮವು ಕೇವಲ ಮನರಂಜನೆಯ ಮಾಧ್ಯಮವಾಗಿರದೇ ಸಾವಿರಾರು ಕೋಟಿಗಳ ವ್ಯವಹಾರ ನಡೆಸುವ ಉದ್ದಿಮೆಯಾಗಿದೆ. ಕೋಟಿಗಳನ್ನು ಹಾಕಿ ಕೋಟಿಗಳನ್ನು ಗಳಿಸುವ ವ್ಯಾಪಾರವಾಗಿದೆ. ಇನ್ನೂ ಸಿನೆಮಾ ರಿಲೀಜ್ ಆಗಿ ನಾಲ್ಕು ದಿನ ಆಗಿರುವುದಿಲ್ಲಾ ಅಷ್ಟರಲ್ಲಿಅಷ್ಟು ಕೋಟಿ ಕಲೆಕ್ಷನ್ ಆಯ್ತು, ಇಷ್ಟು ಕೋಟಿ ಕಲೆಕ್ಷನ್ ಆಯ್ತು’ ಅಂತಾ ಸಿನೆಮಾದ ನಿರ್ಮಾಪಕರು ಸುಳ್ಳು ಸುಳ್ಳೇ ಬೊಂಬಡಾ ಬಾರಿಸುತ್ತಾರೆ. ಅಷ್ಟೆಲ್ಲಾ ಕೋಟಿ ಬಂದಿದ್ದೇ ನಿಜವಾದರೆ ಸರಕಾರಕ್ಕೆ ತೆರಿಗೆ ಕಟ್ಟಲಿ ಬಿಡಿ. ಬಂದ ಲಾಭವೆಲ್ಲಾ ತಮಗೇ ಇರಲಿ... ತೆರಿಗೆಗೆ ಮಾತ್ರ ರಿಯಾಯಿತಿ ಸಿಗಲಿ ಅಂದರೆ ಹೇಗೆ? ಇಷ್ಟು ವರ್ಷಗಳ ಕಾಲ ಕರ್ನಾಟಕ ಸರಕಾರದಿಂದ ನೂರಕ್ಕೆ ನೂರು ತೆರಿಗೆ ರಿಯಾಯತಿಯ ಸವಲತ್ತು ಪಡೆದವರಿಗೆ ಈಗ ತೆರಿಗೆ ಕಟ್ಟಿ ಅಂದ ತಕ್ಷಣ ಆತಂಕ ಶುರುವಾಗಿದೆ.  
"ಕನ್ನಡ ಸಿನೆಮಾಗಳಿಗೆ ಸೀಮಿತ ಮಾರುಕಟ್ಟೆ ಇದೆ ಹಾಗೂ ಪರಭಾಷಾ ಚಿತ್ರಗಳ ಹಾವಳಿ ಇದೆ" ಎಂಬ ಪುರಾತನ ನೆಪವನ್ನೇ ಮತ್ತೆ ಮತ್ತೆ ಹೇಳುತ್ತಾ ತಮ್ಮ ನ್ಯೂನ್ಯತೆಗಳನ್ನ ಸಿನೆಮಾ ನಿರ್ಮಾತೃಗಳು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಲೇ ಇದ್ದಾರೆ. ಕರ್ನಾಟಕಕ್ಕಿಂತಾ ಚಿಕ್ಕದಾದ ಕೇರಳ ರಾಜ್ಯದ ಸಿನೆಮಾ ಕ್ಷೇತ್ರವೂ ತನ್ನ ಸೀಮಿತ ಮಾರುಕಟ್ಟೆಯನ್ನು ವಿಸ್ತರಿಸುತ್ತಲೇ, ಪರಭಾಷಾ ಸಿನೆಮಾಗಳ ಪೈಪೋಟಿಯನ್ನು ಎದುರಿಸಿಯೇ ಬೆಳೆಯುತ್ತಿದೆಯಲ್ಲಾ. ಯಾಕೆಂದರೆ ಮಲಯಾಳಿಗಳು ತಮ್ಮ ವೃತ್ತಿಪರತೆಯಿಂದಾ ಉತ್ತಮವಾದ ಪ್ರಯೋಗಶೀಲ ಸಿನೆಮಾಗಳನ್ನು ತಯಾರಿಸುತ್ತಾರೆ. ನಮ್ಮ ವ್ಯಾಪಾರಿ ಸಿನೆಮಾದ ನಿರ್ಮಾತೃಗಳು ಕಥೆ, ಕಲೆ, ವೃತ್ತಿಪರತೆಗಳಿಗಿಂತಾ ಸಿನೆಮಾದಿಂದ ಬರುವ ಲಾಭದತ್ತ ಮಾತ್ರ ಗಮನವಿಟ್ಟಿರುತ್ತಾರೆ. ಆಗ ಹುಟ್ಟುವ ಮಸಾಲೆ ಸಿನೆಮಾಗಳು ಜನರಿಂದ ತಿರಸ್ಕರಿಸಲ್ಪಡುತ್ತವೆ. ತಮ್ಮ ಪ್ರೊಡಕ್ಟ್ ಕಳಪೆಯಾಗಿದ್ದನ್ನು ಮರೆಮಾಚಿ ಪರಭಾಷಾ ಚಿತ್ರಗಳ ಹಾವಳಿ.. ಅದು ಇದು ಎಂದು ನೆಪ ಹೇಳತೊಡಗುತ್ತಾರೆ

ಚುನಾವಣಾ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಬಹುತೇಕರು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬಿಜೆಪಿ ಪಕ್ಷವನ್ನು ಬೆಂಬಲಿಸಿದ್ದರು. ದೇಶಾದ್ಯಂತ ಏಕ ಭಾಷೆ, ಏಕ ಸಂಸ್ಕೃತಿ, ಏಕ ಆರ್ಥಿಕ ನೀತಿ ಇರಬೇಕೆಂಬುದು ಸಂಘ ಪರಿವಾರದ ಪ್ರಮುಖ ಅಜೆಂಡಾ ಆಗಿದೆ. ಆದರೂ ಮೋದಿ ಮೋಡಿಗೆ ಒಳಗಾಗಿ ಬಿಜೆಪಿಯ ಜಂಡಾ ಹಿಡಿದವರು ಅನೇಕರು. ಆದರೆ ಈಗ ಅದೇ ಮೋದಿ ಸರಕಾರ ದೇಶಾದ್ಯಂತ ಜಿಎಸ್ಟಿ ಎನ್ನುವ ಏಕರೂಪದ ತೆರಿಗೆಯನ್ನು ಹೇರಿದೆ. ಇದರಿಂದ ಸಿನೆಮಾ ಕ್ಷೇತ್ರವೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಏಕರೂಪದ ತೆರಿಗೆ ಹೇರಿಕೆಯಿಂದ ಹಿಂದಿ ಚಿತ್ರರಂಗವು ಪ್ರಾದೇಶಿಕ ಸಿನೆಮಾ ಕ್ಷೇತ್ರವನ್ನು ಸಾವಕಾಶವಾಗಿ ಆಪೋಷಣ ತೆಗೆದುಕೊಳ್ಳುತ್ತದೆ. ಕೇಂದ್ರ ಸರಕಾರದ ಉದ್ದೇಶವೂ ಇದೇ ಆಗಿದೆ. “ಒಂದು ದೇಶ ಒಂದೇ ಭಾಷೆ” ಎನ್ನುವ ಬಿಜೆಪಿಯ ಹಿಡನ್ ಅಜೆಂಡಾ ಈಗ ಏಕರೂಪದ ತೆರಿಗೆ ಹೇರಿಕೆ ಮೂಲಕ ಜಾರಿಯಾಗುತ್ತಿದೆ. ಮೇಲ್ನೋಟಕ್ಕೆ ತೆರಿಗೆ ಎನ್ನುವುದು ಆರ್ಥಿಕ ವ್ಯವಹಾರ ಎನ್ನುವಂತೆ ತೋರಿದರೂ ನೇಪತ್ಯದಲ್ಲಿ ಪ್ರಾದೇಶಿಕ ಭಾಷೆ ಹಾಗೂ ಸಂಸ್ಕೃತಿಯನ್ನು ನಿಧಾನವಾಗಿ ನಾಶ ಮಾಡುವುದರಲ್ಲಿ ಸಂದೇಹವಿಲ್ಲ

ಆರ್ಥಿಕ ಹೊರೆ ಎನ್ನುವ ಕಾರಣಕ್ಕೆ ಸಿನೆಮಾದವರು ಈಗ ಜಿಎಸ್ಟಿಯನ್ನು ವಿರೋಧಿಸುತ್ತಿದ್ದಾರೆ. ಈಗ ಸಿನೆಮಾದವರಿಗೆ     28 % ನಿಂದಾ 18 % ಗೆ ತೆರಿಗೆ ಇಳಿಕೆ ಮಾಡಿದ ಕೇಂದ್ರ ಸರಕಾರ ಪ್ರತಿರೋಧದ ಶಮನ ಮಾಡಲು ಪ್ರಯತ್ನಿಸಿದೆ. ಇನ್ನೂ ಹೆಚ್ಚು ಒತ್ತಡ ತಂದರೆ ರಾಜ್ಯ ಸರಕಾರ ಮತ್ತೆ  ಜನರ ಹಣದಿಂದ ಸಬ್ಸಿಡಿ ಕೊಡಬೇಕಾಗುತ್ತದೆ. ಆದರೆ ಕನ್ನಡ ಚಲನಚಿತ್ರ ರಂಗದವರು ವಿರೋಧಿಸಬೇಕಾದದ್ದು ಕೇವಲ ತೆರಿಗೆಯನ್ನಷ್ಟೇ ಅಲ್ಲಾ ಅದರ ಹಿಂದಿರುವ ಸಂಘ ಪರಿವಾರದ ಶಡ್ಯಂತ್ರವನ್ನು. “ಒಂದು ದೇಶ ಒಂದೇ ಸಂಸ್ಕೃತಿ” ಎನ್ನುವ ಮನುವಾದಿಗಳ ಒಳಹುನ್ನಾರಗಳನ್ನು. ಒಕ್ಕೂಟ ವ್ಯವಸ್ಥೆಯನ್ನು ಒಡೆದು ಹಾಕಿ ಕೇಂದ್ರೀಕೃತ ವ್ಯವಸ್ಥೆಯನ್ನು ತರುವ ಕುತಂತ್ರವನ್ನು.  ಇದು ಕೇವಲ  ಚಿತ್ರರಂಗದ ಸಮಸ್ಯೆಯಲ್ಲಾ... ಇಡೀ ಕನ್ನಡ ನಾಡಿನ ಅಸ್ಮಿತೆಯ ಉಳಿವಿನ ಸಮಸ್ಯೆಯಾಗಿದೆ. ಕನ್ನಡಿಗರ ಸ್ವಾಭಿಮಾನದ ಸಮಸ್ಯೆಯಾಗಿದೆ. ಕನ್ನಡ ರಾಷ್ಟ್ರೀಯತೆ ಸಂಪೂರ್ಣವಾಗಿ ಅಪಾಯದಲ್ಲಿದೆ.   ಕುರಿತು ವಿಸ್ತೃತ ಚರ್ಚೆಯಾಗಬೇಕಿದೆ.

                                    -ಶಶಿಕಾಂತ ಯಡಹಳ್ಳಿ