ಚಿಕ್ಕವನಾಗಿದ್ದಾಗ ನನಗೆ
ಗುರಿ ಇತ್ತು ದಾರಿ ಗೊತ್ತಿರಲಿಲ್ಲ.
ಈಗ ದೊಡ್ಡವನಾಗಿದ್ದೇನೆ
ದಾರಿ ಸಿಕ್ಕಿದೆ ಗುರಿ ಮರೆತಿದೆ.
* * *
ಪರಿಚಿತ ಸ್ನೇಹಿತರ
ಅಪರಿಚಿತ ಮುಖಗಳು
ಒಟ್ಟಿಗೆ ಕಾಣುವುದಿಲ್ಲ.
ಕಾಲನ ಓಟದಲ್ಲಿ ಮುಖವಾಡ
ಕಳಚಿ ಬಿದ್ದಂತೆಲ್ಲಾ
ಸಂಬಂಧಗಳು ಉಳಿಯುವುದಿಲ್ಲ.
* * *
ಇತ್ತೀಚೆಗೆ ಮೆಟ್ರೋ ಸಿಟಿಯಲ್ಲಿ
ಸಂಬಂಧಗಳ ಸಾಚಾತನದ ಬಗ್ಗೆ ಗುಮಾನಿಯಿದೆ.
ಹಣದ ಹಿಂದೆ ಬಿದ್ದ ಸ್ವಾರ್ಥಿಗಳ
ನೀಚತನ ನಿರಂತರವಾಗಿ ಸಾಗಿದೆ.
* * *
ಪ್ರೀತಿಯ ಬಲೆಯಲಿ ಸಿಕ್ಕ ಮೇಲೆ
ಅದರ ನೆಲೆಯನರಸಿ ಹೋಗದಿರು....
ಶೋಧಿಸುವ ಕಯಾಲಿಗೆ ಬಿದ್ದವರು
ಪ್ರೀತಿಯನ್ನೇ ಕಳೆದುಕೊಂಡರು....
* * *
ಯಾಕೀ ನಿರಾಶೆ, ಯಾತಕೀ ಹತಾಶೆ
ನನ್ನ ನಿರೀಕ್ಷೆ ಅತಿಯಾಯಿತೇನೋ?
ಯಾಕೆ ಈ ವ್ಯವಸ್ಥೆ ಇಷ್ಟೊಂದು ದುರಾವಸ್ತೆ
ದುರಸ್ತಿ ಮಾಡಲು ಸಾಧ್ಯವೇ ಇಲ್ಲವೇನೋ?
* * *
ಬದುಕು ಬಲು ರೋಚಕ ಎಂದುಕೊಂಡು
ಸೂಚನೆಗಳನ್ನು ಮೀರಿ ಮೆರೆದವನ
ಮನೆಯಲ್ಲೀಗ ಸೂತಕ.....
* * *
ಪರಿಚಿತ ಲೋಕದ ಅಪರಿಚಿತ ಮಜಲುಗಳು ಕಾಣುವುದಿಲ್ಲ
ಕಣ್ಣಿಗೆ
ಒಟ್ಟಿಗಿದ್ದೂ ನೆಟ್ಟಗಿದ್ದರೂ ಮುಚ್ಚುಮರೆ ನಿಗೂಢಗಳು
ಚುಚ್ಚುತ್ತವೆ ತಣ್ಣಗೆ.
* * *
ಬದುಕಿನ ದ್ವಂದ್ವ-ವೈರುಧ್ಯ ಅಸಾಂಗತ್ಯಗಳನ್ನು
ಯಾವ ತತ್ವ-ಸಿದ್ದಾಂತಗಳೂ ಪರಿಪೂರ್ಣವಾಗಿ ವಿವರಿಸಲಾರವು...
ನಾವು ಮನುಷ್ಯರು ಇರೋದೇ ಹೀಗೆ
ಯಾವ ಧರ್ಮ-ಕರ್ಮಗಳೂ ಅಪೂರ್ಣತೆಯನ್ನು ಪರಿಹರಿಸಲಾರವು...
* * *
ಆಗ ತ್ರಿಕರಣ ಶುದ್ದೀಕರಣ
ಮುಂದೆ ಗುರಿಯಿತ್ತು
ಹಿಂದೆ ಗುರುವಿದ್ದ.
ಈಗ ಜಾಗತೀಕರಣ
ಗುರಿಯೂ ಇಲ್ಲಾ, ಗುರುವೂ ಇಲ್ಲಾ
ಯಾಕೆಂದರೆ ಗುರುವಿಗೆ ಗುರಿ ಗೊತ್ತಿಲ್ಲ.
* * *
ಗಂಡು ಹೆಣ್ಣಿನ ನಡುವಿನ ಮಜಲುಗಳು
ಯಾವ ಕಾಲವಾದರೂ ಗೋಜಲುಗಳೇ...
ಪ್ರೀತಿ ಪ್ರೇಮದ ಪರಾಕಾಷ್ಟೆಯಲ್ಲಿ ಎಲ್ಲಾ ಗೋಜಲುಗಳೂ
ಗಮ್ಯ ತಲುಪುವ ಮಜಲುಗಳೇ.....
* * *
ಗಂಡು ಹೆಣ್ಣುಗಳು ಅರ್ಥೈಸಿಕೊಳ್ಳುವ
ವ್ಯರ್ಥ ಪ್ರಯತ್ನ ನಿರಂತರ..
ಮೊದಲು ಒಬ್ಬರಿಗೊಬ್ಬರು
ಮಾನಸಿಕವಾಗಿ ಆಗಲೇಬೇಕು ರೂಪಾಂತರ.....
* * *
ಇನ್ನೂ ಎಷ್ಟೂಂತ ಹುಡುಕಲಿ, ಎಲ್ಲೀಂತ ಹುಡುಕಲಿ
ಕಳೆದುಕೊಂಡ ನೆಮ್ಮದಿಯನ್ನ....
ಪ್ರೀತಿ ಆಯ್ತು..ಮದುವೆ ಆಯ್ತು.. ಮಕ್ಕಳೂ ಆಯ್ತು
ನೆಮ್ಮದಿಯ ನೆಲೆ ಎಂದುಕೊಂಡಿದ್ದೆಲ್ಲಾ ಕೊಟ್ಟಿದ್ದು
ಬರೀ ನಿರಾಶೆಯನ್ನ......
* * *
ಯಾವುದೇ ಕೋಮುದಳ್ಳುರಿ ಬರೀ-
ಸಂತ್ರಸ್ತರನ್ನು ಮಾತ್ರ ಸುಡುವುದಿಲ್ಲ...
ಮನುಷ್ಯತ್ವ ಇರುವವರ ಎದೆಗೆ
ಕೊಳ್ಳಿ ಇಡದೇ ಬಿಡುವುದಿಲ್ಲ.
* * *
ಈ ಜಾತಿವಾದ ಯಾರನ್ನೂ ಬಿಟ್ಟಿಲ್ಲ
ಸತ್ತವರನ್ನೂ ಸಹ..
ಹುಟ್ಟದವರನ್ನು ಇನ್ನೂ ತಟ್ಟಿಲ್ಲ
ಯಾಕೆಂದರೆ ಅವರಿನ್ನೂ ಹುಟ್ಟಿಲ್ಲ.....
* * *
ಸಂಕಟ ಸಂಕೋಲೆಗಳೊಳಗೂ
ಕ್ಷೀಣವಾಗದು ಬದುಕುವ ಆಸೆ..
ಕಾರಣ......
ನೆಮ್ಮದಿಯ ನಾಳೆಯತ್ತ ಇರುವ
ಅದಮ್ಯ ಭರವಸೆ...
* * *
ರಾಗ ತಾಳಬದ್ದವಾಗಿ
ಹಾಡುತ್ತಾರೆ ಗಾಯಕರು
ಅವರದು ಕೊರಳಿನ ದ್ವನಿ....
ಗಾರ್ದಭ ರಾಗದಲ್ಲಿ
ಕರ್ಕಶವಾಗಿ ಹಾಡುತ್ತಾರೆ ಭಿಕ್ಷುಕರು
ಅವರದು ಕರುಳಿನ ದ್ವನಿ....
* * *
ದೇಶದ ಆರ್ಥಿಕತೆ ಛಿದ್ರಗೊಂಡಿದೆ
ಸಾಮಾಜಿಕ ಭದ್ರತೆ ಭಗ್ನಗೊಂಡಿದೆ
ಆದರೂ
ಆಳುವವರ ಹೇಳುತ್ತಾರೆ
ಭಾರತ ಬೆಳಗುತ್ತಿದೆ.
* * *
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ