ಶನಿವಾರ, ಡಿಸೆಂಬರ್ 21, 2013

ಹೆಣ್ಣಿನ ಆಕ್ರಂದನ :











ನನಗೆ ತಿಳಿಯುತ್ತಿಲ್ಲ ನಾನ್ಯಾಕಾದರೂ ಹೆಣ್ಣಾದೆ
ಅಪ್ಪ ಗೆಳೆಯ ಗಂಡ ಮಗ ಎಲ್ಲರ ದಬ್ಬಾಳಿಕೆಯಲ್ಲಿ ಹಣ್ಣಾದೆ.
ಅಂಡದಿಂದ ಪಿಂಡಬಿಡುವವರೆಗೂ ಪುರುಷಲೋಕಕ್ಕೆ ಹೊರೆಯಾದೆ
ಎಂದೂ ಎಲ್ಲೂ ನನ್ನ ಅಸ್ತಿತ್ವ ಉಳಿಸಿಕೊಳ್ಳಲಾಗದೇ ಮರೆಯಾದೆ.

ತುಂಡುಡುಗೆ ತೊಟ್ಟರೆ ಬಲಾತ್ಕಾರಕ್ಕೆ ಪ್ರಚೋದನೆಯಂತೆ
ಮೈತುಂಬಾ ಮುಚ್ಚಿಕೊಂಡರೆ ಕುತೂಹಲಕ್ಕೆ ಅತ್ಯಾಚಾರವಂತೆ
ಹೊರಗೆ ಹೊರಟರೆ ಸಹಸ್ರ ಕಣ್ಣುಗಳ ವಿಚಿತ್ರ ನೋಟ.
ದೇಹದ ಉಬ್ಬು ತಗ್ಗುಗಳ ಮೋಜಣಿ ಮಾಡುವ ಕಾಮುಕರಾಟ.

ಹೆಣ್ಣು ಮನೆಯ ಕಣ್ಣೆಂದು ಕರೆದು ಕಪ್ಪು ಕನ್ನಡಕ ಹಾಕಿದರು
ಮನೆಬೆಳಗುವ ಬೆಳಕೆಂದರು, ಸುತ್ತಲೂ ಬೇಲಿ ಸುತ್ತಿದರು
ಹೆಣ್ಣು ದೇವತೆಯೆಂದರು ಗೋಡೆಗಳ ಕಟ್ಟಿ ಕಾವಲಿಗೆ ನಿಂತರು
ಹೀಗೇಕೆ ಎಂದು ಪ್ರಶ್ನಿಸಿದರೆ ನಾರಿಯಲ್ಲಾ ಮಾರಿ ಎಂದು ಹೀಗಳೆದರು.

ಹೆಣ್ಣು ಬಿಟ್ಟಿರಲಾರದ, ಕಟ್ಟಿಕೊಂಡು ಸಮಾನವಾಗಿ ನೋಡಿಕೊಳ್ಳಲಾಗದ-
ಗಂಡಸರು, ಹೆಣ್ಣೆಂದರೆ ಬಿಟ್ಟಿ ಬಿದ್ದವಳೆಂದ್ಯಾಕೆ ತಿಳೀತಾರೆ?
ಹೆಣ್ಣೆಂದರೆ ಬರೀ ದೇಹ, ತೀರಿದರಾಯಿತು ದಾಹ, ಅವಳಿಗೆ ಮನಸ್ಸಿದೆ-
ಮನುಷ್ಯ ಸೃಷ್ಟಿಯ ಮೂಲ ಹೆಣ್ಣೆಂಬುದನ್ಯಾಕೆ ಮರೀತಾರೆ?

ನನಗೆ ತಿಳಿಯುತ್ತಿಲ್ಲ ನಾನ್ಯಾಕಾದರೂ ಹೆಣ್ಣಾದೆ..
ಪುರುಷ ಪ್ರಪಂಚದ ದಬ್ಬಾಳಿಕೆಯಲ್ಲಿ ಹಣ್ಣಾದೆ....


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ