"ಈ ಮಸೀದಿಗಳು ದಿನನಿತ್ಯ ಉತ್ಪಾದಿಸುವ ಶಬ್ದಾಸುರನ ಕಾಟ ಸಹಿಸಲಸಾಧ್ಯ ಕೂಡಲೇ ಬ್ಯಾನ್ ಮಾಡಲೇಬೇಕು. ನಮಗೆ ಅಂದರೆ ಇಸ್ಲಾಮೇತರ ಬಹುಸಂಖ್ಯಾತರಿಗೆ ನಿದ್ರಾಭಂಗ ಮಾಡ್ತಿರೋದು ಅಕ್ಷಮ್ಯ, ಮೊದಲು ಈ ಅಲ್ಲಾ ಹೋ ಆಜಾನ್ ಎನ್ನುವ ದ್ವನಿವರ್ಧಕದ ಮೂಲಕ ಪ್ರಾರ್ಥನೆ ಆಹ್ವಾನ ನಿಲ್ಲಿಸಲೇಬೇಕು... ನಮ್ಮ ಮನೆಯ ಪುಟ್ಟ ಮಕ್ಕಳಿಗೆಲ್ಲಾ ನಿದ್ರಾಭಂಗವಾಗುತ್ತದೆ..."
ಹೀಗೆ ಮುಸ್ಲಿಮೇತರರಾದ ಹಿಂದುತ್ವವಾದಿಗಳು ಆಗಾಗ ತಮ್ಮ ಅಸಮಾಧಾನ ಹೇಳಿಕೊಳ್ಳುವುದು ಈ ಮೈಕಾಸುರ ಅನ್ನೋದು ಬಂದ ಮೇಲೆ ಜಾಸ್ತಿಯಾಗಿದೆ. ಈಗ ಸೋನು ನಿಗಮ್ ಎನ್ನುವ ಪ್ರಸಿದ್ದ ಹಾಡುಗಾರ " ಮಸೀದಿಗಳಲ್ಲಿ ಧರ್ಮಬೋಧನೆ ಹಾಗೂ ಪ್ರಾರ್ಥನೆಗಾಗಿ ಧ್ವನಿವರ್ಧಕಗಳ ಬಳಕೆ ಗೂಂಡಾಗಿರಿಯಾಗಿದೆ. ಈ ಆಜಾನ್ ಸದ್ದಿಗೆ ಪ್ರತಿ ದಿನ ಬೆಳಿಗ್ಗೆ ಏಳಬೇಕಾಗಿದೆ. ಭಾರತದಲ್ಲಿ ಹೀಗೆ ಧರ್ಮವನ್ನು ಒತ್ತಾಯ ಪೂರ್ವಕವಾಗಿ ಹೇರುವುದು ಯಾವಾಗ ಕೊನೆಯಾಗುತ್ತದೋ? ಯಾವುದೇ ಮಂದಿರ ಹಾಗೂ ಗುರುದ್ವಾರಗಳು ಧರ್ಮವನ್ನು ಪಾಲಿಸದ ಜನರನ್ನೆಬ್ಬಿಸಲು ದ್ವನಿವರ್ಧಕ ಬಳಸುವುದಿಲ್ಲ. ಈ ಖಯಾಲಿ ಕೊನೆಯಾಗಬೇಕು.." ಎಂದು ಟ್ವೀಟ್ ಮಾಡಿದ್ದು ಮಾಧ್ಯಮಗಳಲ್ಲಿ ಚರ್ಚೆಯ ಸಂಗತಿಯಾಗಿದೆ. ಹಿಂದೂ ಕೋಮುವಾದಿಗಳಿಗಂತೂ ಸೋನು ನಿಗಮ್ ಹೇಳಿಕೆ ಮುಸ್ಲಿಂ ವಿರೋಧಿ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಹೌದು... ಮುಸ್ಲಿಂ ಬಾಂಧವರು ಹೀಗೆ ಸಾರ್ವಜನಿಕವಾಗಿ ಧ್ವನಿವರ್ಧಕಗಳ ಮೂಲಕ ಪ್ರಾರ್ಥನೆಗೆ ಕೂಗುವುದು ಅನ್ಯ ಧರ್ಮೀಯರಿಗೆ ಶಬ್ದ ಮಾಲಿನ್ಯ ಎನ್ನಿಸುವುದರಲ್ಲಿ ತಪ್ಪೇನಿಲ್ಲ. ಬೆಳ್ಳಂಬೆಳಿಗ್ಗೆ 5 ಗಂಟೆಗೆ ತಮ್ಮದಲ್ಲದ ಪ್ರಾರ್ಥನೆ ಕೇಳಿಬಂದರೆ ನಿದ್ರಾಭಂಗವಾಗುವುದೂ ಸಹಜವೇ ಆಗಿದೆ. ಇದು ನಿಲ್ಲಬೇಕು ಎನ್ನುವುದು ಸಹ ಮಸೀದಿಗಳ ನೆರೆಹೊರೆಯಲ್ಲಿ ಬದುಕುವ ಮುಸ್ಲಿಮೇತರರ ಆಗ್ರಹವೂ ಆಗಿದೆ. ಆದರೆ... ಈ ಶಬ್ದಭಯೋತ್ಪಾದನೆ ನಿಲ್ಲಬೇಕು ಎಂದು ಒತ್ತಾಯಿಸುವ ಹಿಂದೂಗಳು ಎಂದುಕೊಳ್ಳುವವರು ಮೊದಲು ತಮ್ಮ ಧಾರ್ಮಿಕ ಆಚರಣೆಗಳು ಹುಟ್ಟು ಹಾಕುವ ಶಬ್ದ ಮಾಲಿನ್ಯದ ಕಡೆಯೂ ಲಕ್ಷವಹಿಸಬೇಕಿದೆ. ನಮ್ಮ ಮನೆಯ ಮಗು ಅತ್ತರೆ ಪರವಾಗಿಲ್ಲ... ಆದರೆ ಪಕ್ಕದ ಮನೆಯ ಮಗುವಿನ ಅಳು ಅಸಹನೀಯ ಅನ್ನುವ ಅಸಹಿಷ್ಣುತತೆ ಅಕ್ಷಮ್ಯ.
ಈ ಮಸೀದಿಗಳ ಸಂಖ್ಯೆಗೆ ಹೋಲಿಸಿದರೆ ಹಿಂದೂ ದೇವಸ್ಥಾನಗಳ ಸಂಖ್ಯೆ ನಾಲ್ಕಾರು ಪಟ್ಟು ಹೆಚ್ಚಿವೆ. ಇಸ್ಲಾಂ ಆಚರಣೆಗಳಿಗೆ ಹೋಲಿಸಿದರೆ ಹಿಂದೂ ಧಾರ್ಮಿಕ ಆಚರಣೆಗಳು ನೂರಾರು ಪಟ್ಟು ಜಾಸ್ತಿ. ಇಸ್ಲಾಂಗೆ ಒಬ್ಬ ದೇವರಿದ್ದರೆ ಈ ಹಿಂದೂ ಧರ್ಮೀಯರಿಗೆ ಕನಿಷ್ಟ ಮೂವತ್ತಮೂರು ಕೋಟಿ ದೇವರುಗಳು. ಹೀಗಾಗಿ ದೇವರ ಕಾರ್ಯ, ಜಾತ್ರೆ, ಹಬ್ಬ ಹರಿದಿನ, ಜನ್ಮಾಷ್ಟಮಿ, ನವಮಿ...ಹೀಗೆ ಮುಂತಾದ ಧಾರ್ಮಿಕ ಆಚರಣೆಗಳಲ್ಲಿ ಹಿಂದೂಗಳು ಮಾಡುವ ಶಬ್ದಮಾಲಿನ್ಯಕ್ಕೆ ನಿಯಂತ್ರಣವೇ ಇಲ್ಲಾ. ಕಾರ್ತಿಕ ಮಾಸದಲ್ಲಿ, ಅಯ್ಯಪ್ಪ ದೇವರ ಪೂಜಾ ಮಾಸದಲ್ಲಿ ತಿಂಗಳಾನುಗಂಟಲೇ ಧ್ವನಿವರ್ಧಕಗಳು ಗಂಟಲು ಹರಿದುಕೊಳ್ಳುತ್ತವೆ. ದೇವರ ಹಾಡು, ಭಜನೆಗಳು ಬೆಳ್ಳಂಬೆಳಗ್ಗೆ ಕಿವಿ ತುಂಬುತ್ತವೆ. ಈ ಶಿಷ್ಟ ದೇವರುಗಳ ಪೂಜಾರಿಗಳ ಮಂತ್ರ ಘೋಷಣೆ ಮುಗಿಲು ಮುಟ್ಟುತ್ತವೆ.. ಆದರೂ ಈ ಎಲ್ಲವೂ ದೇವರ ಮೇಲಿನ ಭಕ್ತಿ ಹಾಗೂ ಪುರೋಹಿತಶಾಹಿಗಳು ಹುಟ್ಟಿಸುವ ಭಯದಿಂದಾಗಿ ಅಪ್ಯಾಯಮಾನವಾಗುತ್ತವೆ. ಇನ್ನು ಗಣೇಶ ಹಬ್ಬ ಬಂದರೆ ಸಾಕು ಬೆಂಗಳೂರಂತಾ ಬೆಂಗಳೂರೆ ಶಬ್ದ ಭಯೋತ್ಪಾದನೆಯ ಕೇಂದ್ರವಾಗುತ್ತದೆ. ಪಟಾಕಿಗಳಂತೂ ಶಬ್ದಮಾಲಿನ್ಯದ ಜೊತೆಗೆ ವಾಯುಮಾಲಿನ್ಯಕ್ಕೂ ಅಪಾರ ಕೊಡುಗೆ ಕೊಡುತ್ತದೆ. ಆರ್ಕೆಸ್ಟಾಗಳ ಹಾವಳಿ ಬಡಾವಣೆಗಳನ್ನೇ ನಡುಗಿಸುತ್ತವೆ. ಕಾನೂನು ಪ್ರಕಾರ ರಾತ್ರಿ ಹತ್ತಕ್ಕೆ ನಿಲ್ಲಬೇಕಾದ ಈ ದ್ವನಿವರ್ಧಕಗಳು ಮಧ್ಯರಾತ್ರಿ ಹನ್ನೆರಡಾದರೂ ಕಿವಿಗಡಚಿಕ್ಕುವ ಹಾಡು ಸಂಗೀತವನ್ನು ಉತ್ಪಾದಿಸುತ್ತಲೇ ಇರುತ್ತವೆ. ಆದರೂ... ಇವೆಲ್ಲವೂ ಮೋಜು ಮಸ್ತಿ ಹಾಗೂ ಆಚರಣೆಗಳ ಹೆಸರಲ್ಲಿ.. ಭಯ ಭಕ್ತಿಯ ನೆಲೆಯಲ್ಲಿ ಸಹ್ಯವಾಗುತ್ತವೆ.. ಆದರೆ ಮಸೀದಿಯಲ್ಲಿ ಪ್ರತಿದಿನ ಐದು ಸಲ ಒಂದೊಂದು ನಿಮಿಷದಂತೆ ಶಬ್ದೋತ್ಪಾದನೆ ಮಾಡಿದರೆ ಅದು ಅಸಹನೀಯವಾಗುತ್ತದೆ. ಇದಕ್ಕೆ ಅಸಹಿಷ್ಣುತತೆ ಎನ್ನುವುದು.
ಮುಸ್ಲಿಂ ಬಾಂಧವರ ಧ್ವನಿವರ್ಧಕದ ಪ್ರಾರ್ಥನಾ ಕರೆಗಳನ್ನು ಧಾರ್ಮಿಕ ಗೂಂಡಾಗಿರಿ ಅನ್ನುವುದಾದರೆ... ಹಿಂದೂ ಪುರೋಹಿತಶಾಹಿ ಪ್ರಣೀತ ಧಾರ್ಮಿಕ ಆಚರಣೆಗಳು ಹುಟ್ಟು ಹಾಕುವ ಎಲ್ಲಾ ನಮೂನಿಯ ಸಾರ್ವತ್ರಿಕ ಶಬ್ದೋತ್ಪಾದನೆಯೂ ಸಹ ಗೂಂಡಾಗಿರಿಯೇ ಆಗಿದೆ. ಇಲ್ಲಿ ಅವರದು ಹೆಚ್ಚು...ಇವರದು ಕಡಿಮೆ ಎನ್ನುವ ಮಾನದಂಡ ಅನಗತ್ಯ. ಶಬ್ದೋತ್ಪಾದನೆಯ ಸಮಯ ಮತ್ತು ತೀವ್ರತೆಯನ್ನು ಲೆಕ್ಕ ಹಾಕಿದರೆ ಹಿಂದೂ ಧರ್ಮೀಯ ಆಚರಣೆಗಳಿಂದಾಗುವ ಶಬ್ದ ಮಾಲಿನ್ಯ ಅತೀ ಹೆಚ್ಚಿನದಾಗಿದೆ. ಎಲ್ಲಾ ಧರ್ಮಗಳು ತಮ್ಮ ನಂಬಿಕೆ ಸಾಮರ್ಥ್ಯಕ್ಕೆ ತಕ್ಕಂತೆ ಪ್ರಾರ್ಥನೆ ಭಜನೆ ಹಾಗೂ ಆಚರಣೆಗಳ ಹೆಸರಲ್ಲಿ ಸಾರ್ವಜನಿಕವಾಗಿ ಶಬ್ದವನ್ನು ಉತ್ಪಾದನೆ ಮಾಡುತ್ತಲೇ ಬಂದಿವೆ... ಬರುತ್ತವೆ. ಬಹುತೇಕ ಜನರೂ ಸಹ ತಮಗಿಷ್ಟ ಇರಲಿ ಬಿಡಲಿ ಈ ಧಾರ್ಮಿಕ ಶಬ್ದಮಾಲಿನ್ಯದ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಬದುಕುತ್ತಿದ್ದಾರೆ. ಇಷ್ಟಕ್ಕೂ ಬಹುತೇಕ ಮಸೀದಿಗಳು ಇರುವುದು ಇಸ್ಲಾಂ ಧರ್ಮೀಯರ ಸಂಖ್ಯೆ ಜಾಸ್ತಿ ಇರುವ ಕಡೆಗೆ. ಹಾಗೆಯೇ ಗುಡಿ ಮಠಗಳಿರೋದು ಹಿಂದೂ ಧರ್ಮೀಯರು ಹೆಚ್ಚಿರುವಲ್ಲಿ. ಇದಕ್ಕೆ ಅಪವಾದಗಳೂ ಇಲ್ಲದಿಲ್ಲ. ಆದರೆ ಧಾರ್ಮಿಕ ಸಹಿಷ್ಣುತತೆ ಕೋಮುಸಾಮರಸ್ಯದ ಭಾಗವೇ ಆಗಿದ್ದು ಈ ಧಾರ್ಮಿಕ ಶಬ್ದಾಸುರನ ಹಾವಳಿಗೆ ಕಿವಿಗಳು ಹೊಂದಾಣಿಕೆಯಾಗಿವೆ.
ಆದರೆ... ಕೋಮುವಾದಿ ಭಯೋತ್ಪಾದಕ ಮನುವಾದಿ ಮನಸ್ಥಿತಿಯವರಿಗೆ ಈ ರೀತಿಯ ಕೋಮುಸಾಮರಸ್ಯ ಎಂದೂ ಸಹನೀಯವಲ್ಲ. ಧ್ವನಿವರ್ಧಕದ ಸಮಸ್ಯೆಯನ್ನೇ ಆಗಾಗ ದೊಡ್ಡದು ಮಾಡಿ ಕೋಮುವಾದವನ್ನು ಹುಟ್ಟುಹಾಕಿ ಧಾರ್ಮಿಕವಾಗಿ ಜನರಲ್ಲಿ ಅಸಹಿಷ್ಣುತತೆಯನ್ನು ಬೆಳೆಸುವುದು ಕೋಮುವಾದಿಗಳ ಕಾಯಕವೇ ಆಗಿದೆ. ಕೋಮುವಾದಿಗಳಲ್ಲದವರ ಮನಸ್ಸಲ್ಲೂ ಸಹ ಕೋಮು ವಿಷಬೀಜ ಬಿತ್ತಿ ಧಾರ್ಮಿಕ ಸಂಘರ್ಷವನ್ನು ಹುಟ್ಟುಹಾಕಲು ಪ್ರಯತ್ನಿಸಲಾಗುತ್ತದೆ. ಅದರ ಭಾಗವಾಗಿಯೇ ಸೋನು ನಿಗಮ್ ಎನ್ನುವ ಗಾಯಕ ತನ್ನ ಟ್ವೀಟರ್ ನಲ್ಲಿ ಬರೆದ ವೈಯಕ್ತಿಕ ಅನಿಸಿಕೆಗಳನ್ನು ಸಾರ್ವತ್ರಿಕಗೊಳಿಸಿ ದೇಶಾದ್ಯಂತ ಚರ್ಚೆ ಹುಟ್ಟಿಸಿ ಧಾರ್ಮಿಕ ಅಸಹನೆಯನ್ನು ಹೆಚ್ಚಿಸುವ ಕೆಲಸವನ್ನು ಸಂಘಿಗಳು ಶುರುಮಾಡಿಕೊಂಡಿದ್ದಾರೆ.
ಇಷ್ಟಕ್ಕೂ ಈ ಧರ್ಮ ದೇವರ ನಂಬಿಕೆಗಳೆಲ್ಲಾ ತುಂಬಾನೇ ವ್ಯಕ್ತಿಗತವಾದದ್ದು. ಪ್ರತಿಯೊಬ್ಬ ವ್ಯಕ್ತಿ ತನ್ನ ನಂಬಿಕೆಗೆ ಅನುಗುಣವಾಗಿ ತಾನು ನಂಬಿದ ದೇವರನ್ನು ಪೂಜಿಸುತ್ತಾನೆ. ಒಪ್ಪಿಕೊಂಡ ಧರ್ಮವನ್ನು ಆಚರಿಸುತ್ತಾನೆ. ಇದಕ್ಕೆ ನಮ್ಮ ಸಂವಿಧಾನವೂ ಅವಕಾಶ ಮಾಡಿಕೊಟ್ಟಿದೆ. ಆದರೆ ದೇವರನ್ನು ನಂಬುವವರು, ನಂಬದೇ ಇರುವವರು... ಯಾವುದೋ ಧರ್ಮವನ್ನು ಅಪ್ಪಿಕೊಂಡವರು.. ಯಾವ ಧರ್ಮವನ್ನೂ ಒಪ್ಪದೇ ಇರುವವರೂ ಈ ದೇಶದಲ್ಲಿದ್ದಾರೆ. ಸಂಖ್ಯೆಯಲ್ಲಿ ಕಡಿಮೆ ಇದ್ದರೂ ನಾಸ್ತಿಕರೂ ಈ ದೇಶವಾಸಿಗಳೇ. ಯಾವುದೇ ಪ್ರಾರ್ಥನೆ.. ಭಜನೆ... ಆಚರಣೆ ಕೌಟುಂಬಿಕ ನೆಲೆಯಲ್ಲಿ ವೈಯಕ್ತಿಕವಾಗಿ ಇದ್ದಷ್ಟೂ ಯಾರಿಗೂ ತೊಂದರೆ ಇರುವುದಿಲ್ಲ. ಯಾವಾಗ ಧರ್ಮಾಚರಣೆಗಳು ಸಾರ್ವತ್ರಿಕವಾಗುತ್ತವೆಯೋ ಆಗ ಅಸಹನೆಗಳು ಮೂಡುತ್ತವೆ. ಯಾವಾಗ ನಿದ್ರಾಭಂಗವಾಗುತ್ತದೆ ಎಂದು ಮುಸ್ಲಿಂ ಬಾಂಧವರಿಗೆ ಧ್ವನಿವರ್ಧಕಗಳ ಮೂಲಕ ಪ್ರಾರ್ಥನೆಗೆ ಕರೆಕೊಡುವುದನ್ನು ಗೂಂಡಾಗಿರಿ ಎಂದು ಕರೆದು ಅದನ್ನು ನಿಲ್ಲಿಸಲು ಒತ್ತಾಯಿಸಲಾಗುತ್ತದೆಯೋ... ಆಗ ಶಬ್ದೋತ್ಪಾದನೆ ಮಾಡುವ ಹಿಂದೂ ಬಾಂಧವರ ಎಲ್ಲಾ ನಮೂನೆಯ ಪ್ರಾರ್ಥನೆ, ಕೀರ್ತನೆ, ಭಜನೆ, ಆಚರಣೆಗಳನ್ನು ಸಹ ನಿರ್ಬಂದಿಸಬೇಕಾಗುತ್ತದೆ. ಈ ಧಾರ್ಮಿಕ ಪ್ರಧಾನ ದೇಶದಲ್ಲಿ ಜನರು ಒಂದೊತ್ತು ಊಟ ಇಲ್ಲದೇ ಇರಬಲ್ಲರು, ಆದರೆ ದೇವಸ್ಥಾನದಲ್ಲಿ ಗಂಟೆ ಜಾಗಟೆ ಮಂತ್ರಗಳ ಸದ್ದು ಕೇಳದೇ ಇರಲಾರರು. ಇದು ಆಯಾ ಧರ್ಮೀಯರ ನಂಬಿಕೆ ಹಾಗೂ ಭಾವನೆಗಳಿಗೆ ಸಂಬಂಧಿಸಿದ ಸಂಗತಿ. ಆದರೆ ಈ ಎಲ್ಲಾ ಧರ್ಮಗಳ ಜಾಡ್ಯಗಳನ್ನು ಮೀರಿದ ನಿಜವಾದ ಧರ್ಮವೊಂದಿದೆ. ಅದು ಮಾನವತಾ ಧರ್ಮ. ಬೇರೆ ಯಾರಿಗೂ ನೋವು ತೊಂದರೆ ಕೊಡದೇ, ಎಲ್ಲರನೂ ತನ್ನಂತೆ ಬಗೆದು, ಪರಸ್ಪರ ಹೊಂದಾಣಿಕೆ ಮಾಡಿಕೊಂಡು ನೆಮ್ಮದಿಯಿಂದಾ ಬದುಕುವ ಆದರ್ಶವಾದಿ ಧರ್ಮವದು. ಅಂತಹ ಧರ್ಮವೊಂದು ಈ ದೇಶದ ಜನರ ಬದುಕಿನ ಅವಿಭಾಜ್ಯ ಅಂಗವಾದಾಗ ಈ ಧಾರ್ಮಿಕ ಭಯೋತ್ಪಾದನೆ, ಶಬ್ದ ಮಾಲಿನ್ಯ, ಅಸಹಿಷ್ಣುತತೆ ಹಾಗೂ ಭಾವನಾತ್ಮಕ ಮೌಢ್ಯಗಳು ಕೊನೆಗೊಂಡು ಎಲ್ಲರೂ ನೆಮ್ಮದಿಯಿಂದಾ ಬದುಕಲು ಸಾಧ್ಯವಾಗುತ್ತದೆ.
ಆದರೆ... ಮಾನವೀಯ ಧರ್ಮವೆಂಬುದು ಈ ಪ್ರಚಲಿತ ಧರ್ಮದ ಗುತ್ತಿಗೆದಾರರಿಗೆ ಬೇಕಾಗಿಲ್ಲ. ಎಲ್ಲಿವರೆಗೂ ಮನುಕುಲದಲ್ಲಿ ಈ ಧಾರ್ಮಿಕ ಭಿನ್ನತೆ, ಜಾತಿ ಬೇಧ ಹಾಗೂ ಪರಸ್ಪರ ಅಸಹಿಷ್ಣುತತೆ ಇರುತ್ತದೋ ಅಲ್ಲಿವರೆಗೂ ಈ ತಾರತಮ್ಯವನ್ನು ಪೋಷಿಸುವ ಧರ್ಮಗಳು ಹಾಗೂ ಧರ್ಮಪೀಠಗಳು ಇದ್ದೇ ಇರುತ್ತವೆ. ಎಲ್ಲಿವರೆಗೂ ಸಾಮಾಜಿಕ ತಾರತಮ್ಯ, ಆರ್ಥಿಕ ಅಸಮಾನತೆ ಹಾಗೂ ವರ್ಣಾಶ್ರಮವಾಧಾರಿತ ಮೇಲುಕೀಳುಗಳು ಈ ದೇಶದಲ್ಲಿ ಅಸ್ತಿತ್ವದಲ್ಲಿರುತ್ತವೋ ಅಲ್ಲಿವರೆಗೂ ನೆಮ್ಮದಿಯ ಬದುಕೆಂಬುದು ನಾಸ್ತಿ.. ಎಲ್ಲಿವರೆಗೂ ಎಲ್ಲಾ ಜಾತಿ ಧರ್ಮಗಳಲ್ಲಿರುವ ಜನಶೋಷಕ ಪುರೋಹಿತಶಾಹಿ ವ್ಯವಸ್ಥೆ ಜನರ ಭಾವನೆಗಳನ್ನೇ ಬಂಡವಾಳ ಮಾಡಿಕೊಂಡು ಭ್ರಮೆಗಳನ್ನು ಪೋಷಿಸುತ್ತಾ ಅನ್ಯ ಜಾತಿ ಕುಲ ಮತಗಳ ವಿರುದ್ದ ಅಸಹನೆಯನ್ನು ಉತ್ಪಾದಿಸುತ್ತಿರುತ್ತದೋ ಅಲ್ಲಿವರೆಗೂ ಈ ದೇಶವಾಸಿಗಳು ಪರಸ್ಪರ ಸಾಮರಸ್ಯದ ಬದಲು ಸಂಘರ್ಷವನ್ನು ಎದುರಿಸಲೇಬೇಕು.
ಈಗ ಈ ಧಾರ್ಮಿಕ ಆಚರಣೆಗಳು ಉಂಟು ಮಾಡುವ ಶಬ್ದಭಯೋತ್ಪಾದನೆಯನ್ನು ನಿಲ್ಲಿಸಬೇಕೆಂದರೆ ಎಲ್ಲಾ ಧರ್ಮಗಳ ಸಾರ್ವಜನಿಕ ಆಚರಣೆಗಳನ್ನು ನಿಷೇಧಿಸಬೇಕು. ಅದು ಈ ವ್ಯವಸ್ಥೆಯಲ್ಲಿ ಅಸಾಧ್ಯ? ಎಲ್ಲಾ ಧರ್ಮೀಯರಿಗೂ ತಮ್ಮ ಆಚರಣೆಗಳ ಮೇಲೆ ಭಯ ಭಕ್ತಿ ಹಾಗೂ ಮೋಹಗಳಿರುವುದರಿಂದಾ ಪರಸ್ಪರ ಹೊಂದಾಣಿಕೆ ಮಾಡಿಕೊಂಡೇ ಬದುಕಬೇಕು. ಇದು ಬಿಟ್ಟು ಯಾವುದೇ ಪರ್ಯಾಯ ಮಾರ್ಗಗಳಿಲ್ಲ. 'ನಾವು ಬಹುಸಂಖ್ಯಾತರಾದ್ದರಿಂದ ಧಾರ್ಮಿಕ ಶಬ್ದ ಭಯೋತ್ಪಾದನೆ ನಮ್ಮ ಹಕ್ಕು...ಆದರೆ ಅಲ್ಪಸಂಖ್ಯಾತ ಧರ್ಮೀಯರು ಅದನ್ನು ಮಾಡುವಂತಿಲ್ಲ' ಎನ್ನುವುದು ಧಾರ್ಮಿಕ ದಮನವಾಗುತ್ತದೆ. ಇದರಿಂದಾಗಿ ಸಮಾಜದಲ್ಲಿ ಅಸಹನೆ ಹೆಚ್ಚಾಗಿ ಸಂಘರ್ಷಗಳು ಮಿತಿ ಮೀರುತ್ತವೆ. ಇದೇ ಕೋಮುವಾದಿಗಳಿಗೆ ಬೇಕಾದದ್ದು. ಜನಾಂಗೀಯ ದ್ವೇಷವನ್ನು ಪ್ರಚೋದಿಸಿ ಮನುವಾದಿ ಪ್ರಣೀತ ಪ್ಯಾಸಿಸ್ಟ್ ಪ್ರಭುತ್ವವನ್ನು ತರಲು ಶತಾಯ ಗತಾಯ ಪ್ರಯತ್ನಿಸುತ್ತಿದೆ. ಕೋಮುಸಾಮರಸ್ಯತೆಯಿಂದ ತಲೆತಲಾಂತರದಿಂದ ಬದುಕುತ್ತಿರುವ ಜನರು ಈ ಸಂಘಿಗಳ ಕುತಂತ್ರಕ್ಕೆ ಒಳಗಾಗದೇ ಹೊಂದಾಣಿಕೆಯಿಂದ ಬದುಕುವುದರಲ್ಲಿ ಸಾಮಾಜಿಕ ನೆಮ್ಮದಿ ಇದೆ... ಮೊದಲು ಮನದೊಳಿರುವ ಕೋಮುವ್ಯಾಧಿ ಮಾಲಿನ್ಯ ತೊಳೆದುಕೊಂಡರೆ. ಹೊರಗಿನ ಶಬ್ದ ಮಾಲಿನ್ಯವನ್ನೂ ಕಳೆದುಕೊಳ್ಳಬಹುದಾಗಿದೆ. ಆ ದಿನ ಆದಷ್ಟು ಬೇಗ ಬರಲಿ...
- ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ