ನಾಯಿ ಕಥೆ ರಾಯರ ಜೊತೆ..
ಇದೊಂದು ನಾಯಿ ಕಥೆ..
ಅವತ್ತು ಬೆಳಿಗ್ಗೆ ರಾಯರು ಪ್ರತಿದಿನದಂತೆ ವಾಯುಸೇವನೆಗೆ ಹೊರಟಿದ್ದರು. ಯಾರೋ ಹಿಂಬಾಲಿಸುತ್ತಿದ್ದಾರೆಂಬ ಅನುಮಾನ ಬಂದು ಹಿಂತಿರುಗಿ ನೋಡಿದರೆ ಯಕಶ್ಚಿತ್ ಕಂತ್ರಿ ನಾಯಿ.
“ಏ ಥೂ ನಾಯಿ.. ತೊಲಗಾಚೆ “ ಎಂದು ಕ್ಯಾಕರಿಸಿ ಉಗಿದು ಮುಂದೆ ನಡೆದರು.
“ಇರಿ.. ಸ್ವಲ್ಪ ನಿಲ್ಲಿ ರಾಯರೇ” ಎಂದು ಯಾರೋ ಹಿಂದಿನಿಂದ ಕರೆದಂತಾಯ್ತು. ಯಾರು ಎಂದು ಹಿಂತಿರುಗಿ ನೋಡಿದರೆ ಯಾರೂ ಇಲ್ಲ. ಅದೇ ನಾಯಿ ಬಾಲ ಅಲ್ಲಾಡಿಸುತ್ತಾ ಕರುಣೆಯಿಂದ ನೋಡುತ್ತಿತ್ತು.
“ರಾಯರೇ ನಮಸ್ಕಾರ. ನಿಮಗೆ ಬೆಳಗಿನ ವಂದನೆಗಳು” ಎಂದಿತು.
ರಾಯರಿಗೆ ಅಚ್ಚರಿ. ಅರೆ ನಾಯಿ ಮಾತಾಡ್ತಿದೆಯಲ್ಲಾ. ಹತ್ತಿರ ಹೋಗಲು ಹೆದರಿಕೆ. ಕಚ್ಚಿ ಬಿಟ್ಟರೆ ಏನು ಗತಿ ಎಂಬ ಆತಂಕ.
“ಎನೂ ಹೆದರಬೇಡಿ ರಾಯರೇ ನಾನೇನು ನಿಮ್ಮನ್ನು ಕಚ್ಚುವುದಿಲ್ಲ. ಅಷ್ಟಕ್ಕೂ ಸುಮ್ಮಸುಮ್ಮನೇ ಕಚ್ಚುವುದು ನಾಯಿಕುಲದ ಸ್ವಭಾವವೂ ಅಲ್ಲ, ಸ್ವಲ್ಪ ನಿಲ್ಲಿ ನನ್ನ ಮಾತು ಕೇಳಿ” ಎಂದಿತು ಶ್ವಾನ.
ವಿಸ್ಮಯಗೊಂಡು ನಿಂತಲ್ಲೇ ನಿಂತ ರಾಯರು “ ಏನು ಬೇಕು ನಿನಗೆ.. ಥೂ ಹೋಗಾಚೆ.., ಉಳ್ಳವರು ಶ್ರೀಮಂತರು ಸೂಟುಬೂಟುದಾರಿಗಳು ಬಂದರೆ ಬಾಲ ಅಲ್ಲಾಡಿಸುವ ನೀನು ನನ್ನಂತಹ ಬಡವರು ಬಂದರೆ ಬೊಗಳಿ ಬೆದರಿಸಿ ಓಡಿಸುವೆ. ಈಗ ನೋಡಿದರೆ ಮನುಷ್ಯರಂತೆಯೇ ಮಾತಾಡ್ತಿದ್ದೀ, ಏನು ಕಾಲ ಕೆಟ್ಟಿದೆಯಪ್ಪಾ ” ಎಂದು ಗದರಿದರು.
“ರಾಯರೆ ನಾವು ನಾಯಿಗಳು ನೀವು ಅಂದುಕೊಂಡಷ್ಟು ಕೆಟ್ಟವರಂತೂ ಖಂಡಿತಾ ಅಲ್ಲಾ. ನಿಮ್ಮ ಹಾಗೆ ಮೇಲು ಕೀಳು ತಾರತಮ್ಯಗಳು ಶ್ವಾನ ಜಾತಿಯಲ್ಲಿ ಇಲ್ಲ. ನಿಮ್ಮಂತೆ ದುರಾಸೆಗಳೂ ನಮಗಿಲ್ಲ” ಎಂದ ಶ್ವಾನದ ಮಾತು ಕೇಳಿ ಕೆರಳಿದ ರಾಯರು
“ಏನು ಏನೆಂದೆ.. ನನಗೆ ಬುದ್ದಿ ಹೇಳ್ತಿದ್ದೀಯಾ.. ನೀಚ ನಾಯಿ.. “ ಎಂದು ಕೈಎತ್ತಿ ಹೊಡದಂತೆ ಮಾಡಿದರು.
“ಯಾಕೆ ರಾಯರೇ ನಿಜ ಹೇಳಿದರೆ ಕೋಪ ನಿಗುನಿಗುರಿ ಬುಗುರಿಯಂತೆ ತಿರುಗುತ್ತದೆ. ನಿಮ್ಮ ಹಾಗೆ ಮನೆಕಟ್ಟಿಕೊಳ್ಳುವ ಬಯಕೆ ನಮಗಿಲ್ಲ. ಆಸ್ತಿ ಅಂತಸ್ತು ಮಾಡಿಕೊಳ್ಳುವ ಆಸೆಗಳೂ ಇಲ್ಲ. ಹಣ ಬಂಗಾರದ ಗೊಡವೆಗಳು ನಮಗೆ ಬೇಕಿಲ್ಲ. ಬದುಕುವುದಕ್ಕಾಗಿ ತಿನ್ನುತ್ತೇವೇಯೇ ಹೊರತು ನಾಳೆಗೆ ನಮಗೆ ನಮ್ಮ ಸಂತಾನಕ್ಕೆ ಇರಲಿ ಎಂದು ಏನನ್ನೂ ಕೂಡಿಡುವುದಿಲ್ಲ” ಎಂದು ಲೇವಡಿ ಮಾಡಿ ಬಾಲ ಅಲ್ಲಾಡಿಸಿತು ಶ್ವಾನ.
ಅವಮಾನಕ್ಕೊಳಗಾದಂತೆ ಕನಲಿ ಕೆಂಡವಾದ ರಾಯರು “ ಥೂ.. ಶ್ರೇಷ್ಟರಾದ ಮನುಷ್ಯರ ಕುರಿತು ಯಕಶ್ಚಿತ್ ನಾಯಿಯಾದ ನೀನು ಬಾಯಿಗೆ ಬಂದಂತೆ ಬೊಗಳುತ್ತೀಯಾ..?
“ ಇದೇ ಬೇಡಾ ಎನ್ನುವುದು. ಈ ಶ್ರೇಷ್ಟತೆಯ ವ್ಯಸನವೇ ನಿಮ್ಮನ್ಮು ದುರಹಂಕಾರಿಯಾಗಿ ಮಾಡಿದ್ದು. ನೀವು ಮಾತಾಡುತ್ತೀರಿ, ನಾವೂ ಮಾತಾಡುತ್ತೇವೆ. ನಿಮ್ಮದು ಮಾತೇ ಭಾಷೆಯಾದರೆ ನಮ್ಮದು ಬೊಗಳುವುದೇ ಭಾಷೆ. ನಮ್ಮದು ಆಸೆ, ದುರಾಸೆ, ಮಡಿಹುಡಿ ಮೌಢ್ಯಗಳಿಲ್ಲದ ಸರಳ ಬದುಕು. ನಿಮ್ಮದು ನಂಬಿಕೆ ಅಪನಂಬಿಕೆ ದುರಾಲೋಚನೆ ಅಹಮಿಕೆ ಇರುವ ಬದುಕು. ನಾಯಿಯಾದರೂ ನೆಮ್ಮದಿಯ ಬದುಕು ನಮ್ಮದು. ಬುದ್ದಿ ಭಾಷೆ ಇರುವ ನೀವುಗಳೋ ನೆಮ್ಮದಿಯೇ ಇಲ್ಲದೇ ಅಲೆದಾಡುವ ಅತೃಪ್ತ ಆತ್ಮಗಳಂತಹ ಬದುಕು. ಹೌದೋ ಅಲ್ಲವೋ ಯೋಚನೆ ಮಾಡಿ ರಾಯರೇ” ಎಂದು ಹೇಳಿದ ನಾಯಿ ಕಿವಿ ನಿಮಿರಿಸಿ ಉತ್ತರಕ್ಕಾಗಿ ಕಾಯತೊಡಗಿತು.
ಈಗ ರಾಯರು ಚಿಂತೆಗೆ ಬಿದ್ದರು. ಮುಂದಕ್ಕೆ ತಿರುಗಿ ಹೆಜ್ಜೆ ಹಾಕುತ್ತಾ ಯೋಚಿಸಲು ಶುರುಮಾಡಿದರು. “ಹೌದಲ್ಲಾ.. ಎಷ್ಟೇ ತಿಂದರೂ, ಅದೆಷ್ಟೇ ಸಂಪಾದಿಸಿದರೂ ತೃಪ್ತಿ ಅನ್ನುವುದೇ ಇಲ್ಲವಲ್ಲಾ ನಮಗೆ. ಬೇಕು ಇನ್ನೂ ಬೇಕು ಎನ್ನುವ ಬೇಡಿಕೆಗಳಲ್ಲಿಯೇ ಬದುಕು ಸವೆಯುತ್ತಿದೆಯಲ್ಲಾ. ಒಂದೇ ಒಂದು ದಿನವೂ ನಾಳೆಯ ಚಿಂತೆ ಇಲ್ಲದೇ ನಿದ್ದೆ ಮಾಡಿದ್ದೇ ಇಲ್ಲವಲ್ಲಾ.. ಈ ನಾಯಿ ಹೇಳುವ ಹಾಗೆ ನಮಗಿಂತಲೂ ನಾಳೆಯ ಚಿಂತೆ ಇಲ್ಲದ ಈ ಶ್ವಾನಗಳೇ ತೃಪ್ತ ಜೀವಿಗಳಾ, ಇವುಗಳಿಗೆ ದೇವರು ಧರ್ಮ ಕರ್ಮಗಳ ಭಯವಿಲ್ಲ, ಕೂಡಿ ಹಾಕಬೇಕೆಂಬ ದುರಾಸೆಗಳಿಲ್ಲ, ವರ್ತಮಾನದಲ್ಲಿ ಸ್ವಾರ್ಥರಹಿತವಾಗಿ ಬದುಕಿ ಒಂದು ದಿನ ಸಾಯುತ್ತವೆ. ನಮಗೂ ಸಾವು ತಪ್ಪಿದ್ದಲ್ಲ. ಆದರೆ ಬದುಕಿದ್ದಾಗ ಸ್ವಾರ್ಥಕ್ಕಾಗಿ, ಸಂಪತ್ತಿಗಾಗಿ, ಸಂಪಾದನೆಗಾಗಿ ಏನೆಲ್ಲಾ ಮಾಡುತ್ತೇವೆ. ಅದಕ್ಕಾಗಿ ಎಷ್ಟೊಂದು ಸುಳ್ಳು, ವಂಚನೆ, ನಂಬಿಕೆದ್ರೋಹಗಳನ್ನು ಮಾಡುತ್ತೇವೆ. ಛೇ.. ಮನುಷ್ಯರಿಗಿಂತ ಪ್ರಾಣಿ ಪಕ್ಷಿಗಳ ಜೀವನವೇ ತೃಪ್ತಿದಾಯಕವಾ..” ಎಂದು ಯೋಚಿಸುತ್ತಾ ಹಿಂತಿರುಗಿ ನೋಡಿದರೆ ಅಲ್ಲೇನಿದೆ.. ಹಿಂಬಾಲಿಸುತ್ತಿದ್ದ ನಾಯಿಯೂ ಮಾಯವಾಗಿದೆ. ರಾಯರ ಮನದೊಳಗಿನ ಅರಿವು ಜಾಗೃತವಾಗಿದೆ.
-ಶಶಿಕಾಂತ ಯಡಹಳ್ಳಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ