ತಹ ತಹ..
ದೇಗುಲಗಳಲ್ಲಿ ದಲಿತರ ಮೇಲೆ ಪ್ರಬಲರ ದಮನ; ಮಾನವೀಯತೆಯ ಸೋಲಿನ ಕಥನ.
ಅವರ್ಣೀಯರ ಅಸಹಾಯಕತೆ ಮತ್ತು ಸವರ್ಣೀಯರ ಶ್ರೇಷ್ಠತೆಯ ವ್ಯಸನಕ್ಕೆ ಈ ದೇಶದಲ್ಲಿ ಕೊನೆಮೊದಲಿಲ್ಲ. ಅದರಲ್ಲೂ ಸಮಾಜದಲ್ಲಿ ಜಾತೀಯತೆಯೆಂಬ ಸನಾತನ ವಿಷವೃಕ್ಷದ ಬೇರುಗಳು ಇನ್ನೂ ಗಟ್ಟಿಯಾಗಿ ಹಬ್ಬಿ ತನ್ನ ವಿಕಾರತೆಗಳನ್ನು ಆಗಾಗ ಅನಾವರಣಗೊಳಿಸುತ್ತಲೇ ಇರುತ್ತವೆ. ಈ ಹಿಂದುತ್ವವಾದಿಗಳು ಅದೆಷ್ಟೇ “ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು” ಎಂದು ಬಾಯಿಬಡಿದುಕೊಂಡರೂ ಪಂಚಮರನ್ನು ಕನಿಷ್ಟ ಚತುರ್ವರ್ಣದ ಚೌಕಟ್ಟಿನಲ್ಲೂ ತರದೇ ಬಹಿಷ್ಕೃತರಾಗಿ ಉಳಿಸಲಾಗಿದೆ. ಸಮಾನತೆ ಸಾರುವ ಸಂವಿಧಾನವೂ ಮೇಲ್ಜಾತಿಗಳು ಮತ್ತು ಪುರೋಹಿತಶಾಹಿಗಳ ಮೇಲಾಟದಲ್ಲಿ ಸೋತುಹೋಗಿದೆ. ಈಗ ಮತ್ತೆ ದಲಿತರ ಮೇಲಿನ ದಮನದ ಕುರಿತ ಎರಡು ಘಟನೆಗಳು ನಿನ್ನೆ ಘಟಿಸಿ ಮಾನವೀಯತೆ ತಲೆತಗ್ಗಿಸುವಂತೆ ಮಾಡಿದೆ.
ಒಂದು.. ಕರ್ನಾಟಕದ ತಿಪಟೂರಿನಲ್ಲಿ ದೇವಾಲಯ ಪ್ರವೇಶವನ್ನು ನಿರಾಕರಿಸಿ ದಲಿತರ ಮೇಲೆ ಸವರ್ಣೀಯರು ಹಲ್ಲೆ ನಡೆಸಿದ್ದಾರೆ. ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಕಸಬಾ ಹೋಬಳಿಯಲ್ಲಿರುವ ಶ್ರೀ ಬಿದಿರಾಂಬಿಕಾ ದೇವಾಲಯದ ಪ್ರವೇಶಕ್ಕೆ ದಲಿತ ಯುವಕನೊಬ್ಬ ಪ್ರವೇಶಿಸಲು ಪ್ರಯತ್ನಿಸಿದ ಎನ್ನುವ ಕಾರಣಕ್ಕೆ ಆ ದೇವಾಲಯದ ಧರ್ಮದರ್ಶಿಯ ಆದೇಶದಂತೆ ಅರ್ಚಕರೂ ಸೇರಿದಂತೆ 20ಕ್ಕೂ ಹೆಚ್ಚು ಜನ ಪ್ರಬಲ ಜಾತಿಯವರ ಗುಂಪು ಲಿಂಗರಾಜು ಎನ್ನವ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಕಳೆದ ವರ್ಷವೂ ಸಹ ದಲಿತರು ಉತ್ಸವ ಮೂರ್ತಿಗೆ ಈಡುಗಾಯಿ ಒಡೆದದ್ದನ್ನು ವಿರೋಧಿಸಿದ ಈ ದೇವಸ್ಥಾನದ ಅರ್ಚಕರುಗಳು ‘ದಲಿತರು ಈಡುಗಾಯಿ ಒಡೆದರೆ ದೇವರಿಗೆ ಮೈಲಿಗೆಯಾಗುತ್ತದೆ’ ಎಂದು ತಕರಾರು ತೆಗೆದಿದ್ದರು. ಈ ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಪೊಲೀಸರು ಈ ಅರ್ಚಕರಿಗೆ ಎಚ್ಚರಿಕೆ ಕೊಟ್ಟಿದ್ದರೂ ಈ ವರ್ಷ ಮತ್ತೆ ದಲಿತನ ಮೇಲೆ ಗುಂಫು ಹಲ್ಲೆ ಮಾಡಲಾಗಿದೆ. ಇದೆಲ್ಲಾ ಗೊತ್ತಿದ್ದೂ ಬಿದಿರಮ್ಮದೇವಿ ಬಿದಿರು ಕೋಲಿನಂತೆ ಸ್ಥಬ್ದವಾಗಿದ್ದಾಳೆ. ಈ ದೇವಸ್ಥಾನದ ಮುಂಬಾಗದಲ್ಲಿ ಹಾಕಲಾದ “ಅಸ್ಪೃಶ್ಯತೆ ಆಚರಣೆ ಕಾನೂನು ಬಾಹಿರ “ ಎಂಬ ನಾಮಫಲಕ ಸಂವಿಧಾನ ಮತ್ತು ಕಾನೂನನ್ನು ಅಣಕಿಸುವಂತಿದೆ.
ಇನ್ನೊಂದು ಇಂತಹುದೇ ದುರ್ಘಟನೆ ಸಂಭವಿಸಿದ್ದು ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಕೊಲಿಯನೂರು ಪಕ್ಕದ ಮೇಲ್ಪತಿ ಗ್ರಾಮದಲ್ಲಿ. ದ್ರೌಪತಿ ಅಮ್ಮನ್ ದೇವಾಲಯದ ಉತ್ಸವದ ದಿನ ದೇವತೆಯನ್ನು ನೋಡಲು ದಲಿತರು ದೇವಾಲಯಕ್ಕೆ ಪ್ರವೇಶಿಸಿದ್ದನ್ನೇ ನೆಪವಾಗಿಟ್ಟುಕೊಂಡ ಪ್ರಬಲ ಜಾತಿಯ ಜನರ ಗುಂಪು ವಾಗ್ವಾದಕ್ಕೆ ಇಳಿದು ದಲಿತರನ್ನು ಮನಬಂದಂತೆ ತಳಿಸಿ ಗಾಯಗೊಳಿಸಿದರು. ದಲಿತ ಸುಮುದಾಯದವರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರಾದರೂ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ಕೊಟ್ಟ ಭರವಸೆಯಿಂದ ಪ್ರತಿಭಟನೆ ಕೈಬಿಟ್ಟರು.
ಇಂತಹ ಘಟನೆಗಳು ಭಾರತದ ಒಂದಿಲ್ಲೊಂದು ಭಾಗದಲ್ಲಿ ಪ್ರತಿದಿನ ಘಟಿಸುತ್ತಲೇ ಇರುತ್ತವೆ. ಕೆಲವು ವರದಿಯಾದರೆ ಹಲವಾರು ಘಟನೆಗಳು ಬೆಳಕಿಗೆ ಬರುವುದೇ ಇಲ್ಲ. ಟಿಆರ್ಪಿ ಸಿಗುವುದಿಲ್ಲವಾದ್ದರಿಂದ ಇಂತಹ ಘಟನೆಗಳಿಗೆ ಮಾಧ್ಯಮಗಳು ಬೆಳಕು ಚೆಲ್ಲುವುದೂ ಇಲ್ಲ. ದಲಿತ ಸಮುದಾಯದವರ ಮೇಲೆ ಪ್ರಬಲ ಜಾತಿಯವರ ದೌರ್ಜನ್ಯ ನಿಲ್ಲುವುದೂ ಇಲ್ಲ. ಪೊಲೀಸರ ಮದ್ಯಸ್ತಿಕೆ ಖಾಯಂ ಪರಿಹಾರವನ್ನೂ ಕೊಡುವುದಿಲ್ಲ.
ಹೆಸರಿಗೆ ಜ್ಯಾತ್ಯಾತೀತ ಭಾರತ ಎಂದಿದ್ದರೂ ಈ ಜಾತಿ ವೈಷಮ್ಯಕ್ಕೆ ಕೊನೆಮೊದಲಿಲ್ಲ. ಯಾವಾಗಲೂ ಮೇಲ್ಜಾತಿ ಪರವಾಗಿಯೇ ಇರುವ ಆಳುವ ವರ್ಗಗಳು ದಲಿತರನ್ನು ಕೇವಲ ಮತಕ್ಕಾಗಿ ಬಳಸಿಕೊಂಡು ಶೋಷಿಸುತ್ತವೆ. ಉಳ್ಳವರ ದಬ್ಬಾಳಿಕೆಗೆ ಬೇಸತ್ತ ದಲಿತರು ಎಲ್ಲಿ ಮತಾಂತರ ಹೊಂದುತ್ತಾರೋ ಎನ್ನುವ ಆತಂಕದಲ್ಲಿ ಹಿಂದುತ್ವವಾದಿ ಸಂಘಟನೆಗಳು ದಲಿತರೂ ಸಹ ಹಿಂದುಗಳು ಎಂದು ಬೊಗಳೆ ಬಿಡುತ್ತಲೇ ಬಂದಿವೆ. ಆದರೆ ದಲಿತ ಸಮುದಾಯಕ್ಕೆ ಸಂವಿಧಾನಬದ್ದ ಸಮಾನತೆ ಮತ್ತು ಸ್ವಾಭಿಮಾನದ ಬದುಕನ್ನೂ ಕೊಡದೇ ಶೋಷಿಸುತ್ತಿವೆ.
ವೈದಿಕ ದೇವರುಗಳನ್ನು ಬಿಡಿ ಅವೈದಿಕರ ಗ್ರಾಮದೇವತೆಗಳಿಂದಲೂ ಸಹ ದಲಿತ ಸಮುದಾಯವನ್ನು ದೂರವಿಡುವ ಸನಾತನ ಹುನ್ನಾರ ಪುರೋಹಿತಶಾಹಿ ಮನಸ್ಥಿತಿಯವರದ್ದು. ಅದಕ್ಕೆ ಹೇಳುವುದು ಪುರೋಹಿತಶಾಹಿ ಸಂತಾನ ಕೇವಲ ವೈದಿಕರಲ್ಲಿ ಮಾತ್ರವಿಲ್ಲ ಅವರು ಎಲ್ಲಾ ಜಾತಿ ಧರ್ಮಗಳಲ್ಲೂ ಬೇರುಬಿಟ್ಟು ಮಾನವೀಯತೆಗೆ ಕಳಂಕವಾಗಿದ್ದಾರೆ. ಜಾತೀವಾದದ ಮುಂದೆ ಮಾನವೀಯತೆ ಸೋಲುತ್ತಲೇ ಇದೆ. ಪುರೋಹಿತಶಾಹಿಗಳ ಶೋಷಣೆಗೆ ಆದಿ ಅಂತ್ಯವಿಲ್ಲವಾಗಿದೆ. ಸಂವಿಧಾನದ ರಕ್ಷಣೆ ಇರುವಾಗಲೇ ಹೀಗಾದರೆ ಮುಂದೊಮ್ಮೆ ಮನುವಾದಿಗಳು ಈ ದೇಶದ ಚುಕ್ಕಾಣಿ ಹಿಡಿದು ಮನುಧರ್ಮಶಾಸ್ತ್ರವನ್ನೇ ಸಂವಿಧಾನ ಮಾಡಿಕೊಂಡರೆ ಬಹುಜನರ ಬದುಕು ಮತ್ತೆ ಗುಲಾಮಗಿರಿಗೆ ಒಳಗಾಗುವುದರಲ್ಲಿ ಸಂದೇಹವೇ ಇಲ್ಲ. ಮತ್ತೆ ವರ್ಣವ್ಯವಸ್ಥೆ ಜಾರಿಗೆ ಬರುವ ಅಪಾಯವನ್ನೂ ಅಲ್ಲಗಳೆಯುವಂತಿಲ್ಲ.
-ಶಶಿಕಾಂತ ಯಡಹಳ್ಳಿ
9-04-2023
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ