ತಹ ತಹ..
ಮರುಕಳಿಸದಿರಲಿ ಮತ್ತೆಂದೂ ಜಾಲಿಯನ್ ಭಾಗ್ ಹತ್ಯಾಕಾಂಡ. ಸೋಲಿಸೋಣ ಪ್ಯಾಸಿಸ್ಟರ್ ಅಜೆಂಡಾ
ಇವತ್ತಿಗೆ ಸರಿಯಾಗಿ 104 ವರ್ಷಗಳ ಹಿಂದೆ ಎಪ್ರೀಲ್ 13 ರಂದು ಸ್ವಾತಂತ್ರಪೂರ್ವ ಭಾರತದ ಬಲು ದೊಡ್ಡ ದುರಂತ ಪಂಜಾಬ್ ನಲ್ಲಿ ನಡೆದಿತ್ತು. ವಸಾಹತುಶಾಹಿ ಬ್ರಿಟೀಷರು ಅಮೃತಸರದ ಜಾಲಿಯನ್ ವಾಲಾ ಭಾಗ್ ನಲ್ಲಿ ನಡೆಸಿದ ನರಮೇಧ ಭಾರತ ಎಂದೂ ಮರೆಯದ, ಮರೆಯಲಾಗದ ರಣಗಾಯವಾಗಿದೆ.
ಎಪ್ರೀಲ್ 13 ಸಿಖ್ ಸಮುದಾಯದವರು ಸಂಭ್ರಮಿಸುವ ಪವಿತ್ರ ಬೈಸಾಕಿ ಹಬ್ಬ. ಅವತ್ತು ಅಲ್ಲಿ ಹಬ್ಬದ ಸಂಭ್ರಮದ ಜೊತೆಗೆ ಸ್ವಾತಂತ್ರ್ಯ ಹೋರಾಟಗಾರರ ಬಂಧನಕ್ಕೆ ಪ್ರತಿರೋಧ ತೋರಲು ಸಹಸ್ರಾರು ಸಂಖ್ಯೆಯಲ್ಲಿ ಪಂಜಾಬಿಗಳು ಬ್ರಿಟೀಷ್ ಅಧಿಕಾರಿಗಳು ಹೇರಿದ್ದ ನಿಷೇಧಾಜ್ಞೆಯ ನಡುವೆಯೂ ಒಂದೇ ಒಂದು ಪ್ರವೇಶದ್ವಾರ ಇರುವ ಉದ್ಯಾನವನದಲ್ಲಿ ಸೇರಿದ್ದರು.
ನೂರಾರು ಜನ ಸಶಸ್ತ್ರ ಸೈನಿಕರೊಂದಿಗೆ ಬಂದು ಗೇಟನ್ನು ಬಂದ್ ಮಾಡಿ ಪೈರ್ ಎಂದು ಆಜ್ಞೆ ಕೊಟ್ಟ ದುರುಳನ ಹೆಸರು ಬ್ರಿಗೇಡಿಯರ್ ಜನರಲ್ ಎಡ್ವರ್ಡ್ ಡಯರ್. ರೈಪಲ್ ಗಳು ನಿರಾಯುಧರ ಮೇಲೆ ಬೆಂಕಿಯುಗುಳಿದವು. ಮಹಿಳೆ ಮಕ್ಕಳಾದಿಯಾಗಿ ಸಾವಿರಾರು ಜನರು ಕೆಲವೇ ನಿಮಿಷಗಳಲ್ಲಿ ಹೆಣವಾದರು. ಜೀವ ಉಳಿಸಿಕೊಳ್ಳಲು ಭಾವಿಗಿಳಿದ 120 ಜನ ಮತ್ತೆ ಬದುಕಿ ಬರಲಿಲ್ಲ. 1700 ಸುತ್ತು ಗುಂಡುಗಳು, 1800 ಕ್ಕೂ ಹೆಚ್ಚು ಮೃತರು ಇಡೀ ಉದ್ಯಾನವನ ಕೆಲವೇ ನಿಮಿಷಗಳಲ್ಲಿ ಸ್ಮಶಾನವಾಯ್ತು.
ರಕ್ತದಾಹಿ ರಕ್ಕಸ ಡಯರ್ ಮಾಡಿಸಿದ ನರಹತ್ಯೆಯನ್ನು ಲೆಪ್ಟನಂಟ್ ಗೌವರ್ನರ್ ಮೈಕಲ್ ಓಡ್ವಾಯರ್ ಸಮರ್ಥಿಸಿಕೊಂಡ. ಹಂಟರ್ ವಿಚಾರಣಾ ಆಯೋಗ ಡಯರ್ ಪರವಾಗಿತ್ತು. ಇಂಗ್ಲೆಂಡಿನ ಲಾರ್ಡ್ಸ್ ಸಭೆ ಈ ನರರಾಕ್ಷಸನ ಪರ ನಿರ್ಣಯ ಮಂಡಿಸಿತು. ಆದರೆ ಮಾಡಿದ ಪಾಪಕ್ಕೆ ಕನಿಷ್ಟ ಪಶ್ಚಾತ್ತಾಪವನ್ನೂ ಪಡದ ಈ ನರರಾಕ್ಷಸ ಡಯರ್ ನರಮೇಧ ನಡೆಸಿದ ಎಂಟು ವರ್ಷಗಳ ನಂತರ ಲಕ್ವಾ ಹೊಡೆದು ದೀರ್ಘ ಕಾಲ ಹಾಸಿಗೆಯಲ್ಲಿ ನರನರಳಿ ಸತ್ತ. ಡಯರ್ ನ ದುಷ್ಕೃತ್ಯವನ್ನು ಸಮರ್ಥಿಸಿದ್ದ ಇನ್ನೊಬ್ಬ ನರರಾಕ್ಷಸ ಓಡ್ವಾಯರ್ ನನ್ನು ಹತ್ಯಾಕಾಂಡದಲ್ಲಿ ಬದುಕುಳಿದಿದ್ದ ಉಧಮ್ ಸಿಂಗ್ 21 ವರ್ಷಗಳ ನಂತರ ಇಂಗ್ಲೆಂಡಿನಲ್ಲೇ ಗುಂಡಿಟ್ಟು ಸಾಯಿಸಿ ಸೇಡು ತೀರಿಸಿಕೊಂಡ.
ಈ ಜಾಲಿಯನ್ ವಾಲಾ ಹತ್ಯಾಕಾಂಡವು ಕೇವಲ ಪಂಜಾಬಿಗರನ್ನಷ್ಟೇ ಅಲ್ಲ ಇಡೀ ಭಾರತೀಯರ ಎದೆಯಲ್ಲಿ ಆರದ ಗಾಯ ಮಾಡಿತು. ತದ ನಂತರ ಸ್ವಾತಂತ್ರ್ಯ ಹೋರಾಟವು ತೀವ್ರಗೊಂಡಿತು. ಇಂಗ್ಲೀಷರ ವಿರುದ್ದ ಕ್ರಾಂತಿಕಾರಿಗಳ ಚಟುವಟಿಕೆಗಳು ಚುರುಕಾದವು. ನರಮೇಧ ನಡೆದ ಹತ್ತು ವರ್ಷದ ನಂತರ ಅಂದರೆ 1929 ಏಪ್ರಿಲ್ 8 ರಂದು ಭಗತ್ ಸಿಂಗ್ ಮತ್ತು ಭಟುಕೇಶ್ವರ ದತ್ತ ರು ದೆಲ್ಲಿಯ ಅಸೆಂಬ್ಲಿ ಕೇಂದ್ರದಲ್ಲಿ ಬಾಂಬ್ ಹಾಕಿ ಬ್ರಿಟೀಷರಿಗೆ ಎಚ್ಚರಿಕೆಯನ್ನು ನೀಡಿ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಪೂರ್ತಿಯ ಸೆಲೆಯಾದರು.
ಅನೇಕಾನೇಕ ದೇಶಪ್ರೇಮಿಗಳ ತ್ಯಾಗ ಬಲಿದಾನಗಳಿಂದ ಭಾರತಕ್ಕೆ ರಾಜಕೀಯ ಸ್ವಾತಂತ್ರ್ಯ ದೊರೆಯಿತು. ಆದರೆ ಕಾಲ ಉರುಳಿದಂತೆ, ತಲೆಮಾರುಗಳು ಬದಲಾದಂತೆ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನದ ನೆನಪು ಜನರ ಚಿತ್ತಬಿತ್ತಿಯಿಂದ ಸಾವಕಾಶವಾಗಿ ಮರೆಯಾಗಿದ್ದು ವಿಪರ್ಯಾಸ. ಆಂಗ್ಲರ ಸರ್ವಾಧಿಕಾರಿ ಪ್ರಭುತ್ವದಿಂದ ವಿಮೋಚನೆಗೊಂಡ ಈ ದೇಶವು ಪ್ರಜಾಪ್ರಭುತ್ವವನ್ನು ಅನುಸರಿಸಿ ಈಗ ಮತ್ತೆ ಪ್ಯಾಸಿಸ್ಟ್ ಪ್ರಭುತ್ವದ ಹಿಡಿತದಲ್ಲಿ ಸಿಲುಕಿರುವುದು ಈ ದೇಶದ ದೌರ್ಭಾಗ್ಯ. ಮುಂದಿನ ತಲೆಮಾರು ಸ್ವತಂತ್ರವಾಗಿ ಸಹಮತದಿಂದ ಬದುಕಲಿ ಎನ್ನುವ ಮಹತ್ತರ ಆಶಯದಿಂದ ಪ್ರಾಣವನ್ನೇ ತ್ಯಾಗ ಮಾಡಿದ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ಕನಸು ನನಸಾಗಬೇಕಾದರೆ ಧರ್ಮದ್ವೇಷ ಬಿತ್ತಿ ಸಹಬಾಳ್ವೆ ಹಾಳು ಮಾಡುತ್ತಿರುವ ಮತಾಂಧ ಶಕ್ತಿಗಳನ್ನು ವಿರೋಧಿಸಬೇಕಿದೆ. ಪ್ಯಾಸಿಸ್ಟ್ ಶಕ್ತಿಗಳನ್ನು ಈಗಲೇ ಮಟ್ಟಹಾಕದೇ ಬೆಂಬಲಿಸಿ ಬೆಳೆಯಲು ಬಿಟ್ಟರೆ ಡಯರ್, ಓಡ್ವಾಯರ್ ಗಳು ಮರುಹುಟ್ಟು ಪಡೆಯುತ್ತಾರೆ. ಜಾಲಿಯನ್ ವಾಲಾ ಭಾಗ್ ನಂತಹ ಅದೆಷ್ಟೋ ಹತ್ಯಾಕಾಂಡಗಳು ಭವಿಷ್ಯದಲ್ಲಿ ಕಾದಿವೆ. ಸಮಸಮಾಜದ ಆಶಯಗಳನ್ನು ಕಾಪಿಟ್ಟುಕೊಂಡು, ಮತಾಂಧ ಶಕ್ತಿಗಳ ಅಟ್ಟಹಾಸವನ್ನು ಮಟ್ಟಹಾಕುವ ಮೂಲಕ ಭವಿಷ್ಯದಲ್ಲಾಗಬಹುದಾದ ಅನಾಹುತಗಳನ್ನು ತಪ್ಪಿಸಬೇಕಿದೆ. ಇದಕ್ಕಾಗಿ ಜನಪರ ನಿಲುವಿನ, ಜೀವಪರ ಹಂಬಲದ ಮನಸ್ಸುಗಳು ಒಂದಾಗಬೇಕಿದೆ. ಮಾನವೀಯತೆ ಗೆಲ್ಲಬೇಕಿದೆ.
- ಶಶಿಕಾಂತ ಯಡಹಳ್ಳಿ
13-04-2023
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ