ಎಲ್ಲೋ ಕೇಳಿದ ಇಲ್ಲವೇ ಓದಿದ ಕಥೆ ಇದು.
ಶ್ರೀಮಂತ ರಾಯರಿಗೆ ಬಡತನ ಅಂದರೇನು ಎಂದು ಮೊಮ್ಮಗನಿಗೆ ತೋರಿಸಿ ಸಿರಿತನದ ಮಹತ್ವವನ್ನು ಮನದಟ್ಟು ಮಾಡಬೇಕೆಂಬಾಸೆ. ಒಂದಿನ ಬಿಡುವು ಮಾಡಿಕೊಂಡು ಮೊಮ್ಮಗನನ್ನು ಹಳ್ಳಿಗೆ ಕರೆದುಕೊಂಡು ಹೋಗಿ ಅಲ್ಲಿಯ ಬಡವರ ಬದುಕಿನ ಬಗೆಯನ್ನು ಮೊಮ್ಮಗನ ಅನುಭವಕ್ಕೆ ದಕ್ಕುವ ಹಾಗೆ ತೋರಿಸಿಕೊಂಡು ಮರುದಿನ ಮರಳಿ ಅರಮನೆಯಂತಹ ತನ್ನ ಮನೆಗೆ ಕರೆದುಕೊಂಡು ಬಂದು “ಏನೇನು ಗಮನಿಸಿದೆ ವಿವರಿಸು” ಎಂದು ಕೇಳಿದ.
“ತಾತಾ ವಿಲ್ಲೇಜ್ ಟ್ರಿಪ್ ಚೆನ್ನಾಗಿತ್ತು. ನಿನಗೆ ಗೊತ್ತಾ ತಾತಾ ನಮ್ಮನೇಲಿ ಒಂದೇ ನಾಯಿ ಇದ್ದರೆ ಅಲ್ಲಿ ಮನೆ ಬೀದಿಗಳಲ್ಲಿ ನಾಯಿಗಳ ಗುಂಪೇ ಇತ್ತು. ಎಲ್ಲಾ ಕೂಡಿ ಆಟ ಆಡ್ತಾ ಇದ್ದವು. ಎಷ್ಟೊಂದು ಚೆಂದ ಅಲ್ವಾ ಪಾಪ ನಮ್ಮ ಪಪ್ಪಿ ಇಲ್ಲಿ ಒಂಟಿಯಾಗಿದೆ.” ಎಂದು ಮನೆಯ ನಾಯಿಯ ಬಗ್ಗೆ ಸಿಂಪಥಿ ತೋರಿಸಿದ ಮೊಮ್ಮಗ.
“ತಾತಾ ಇಲ್ಲಿ ಕೇಳು ತಾತಾ... ಅಲ್ಲಿ ಆ ಊರಲ್ಲಿ ದೊಡ್ಡದಾದ ಕೆರೆ, ಊರ ಮುಂದೆ ಪ್ರೆಶ್ ಆಗಿ ಹರಿಯುವ ನದಿ. ಆ ಊರ ಮಕ್ಕಳು ಕೇಕೆ ಹಾಕುತ್ತಾ ಸಂತೋಷದಿಂದ ಈಸುವುದನ್ನು ನೋಡುವುದೇ ಚೆಂದ. ಇಲ್ಲಿ ನಮ್ಮನೇಲಿ ಒಂದೇ ಒಂದು ಚಿಕ್ಕ ಸ್ವಿಮಿಂಗ್ ಪೂಲ್ ಇದೆ ಅಷ್ಟೇ.. ನಾನೊಬ್ಬನೇ ಸ್ವಿಮ್ ಮಾಡಬೇಕು ಬೇಜಾರು. ಆ ಮಕ್ಕಳಿಗಾಗುವ ಆನಂದ ಇಲ್ಲಿ ಈ ಕ್ಲೋರಿನ್ ಮಿಶ್ರಿತ ನಿಂತ ನೀರಲ್ಲಿ ಇಲ್ಲ ಬಿಡು ತಾತಾ”
“ತಾತಾ ಆ ಊರಲ್ಲಿ ಆಟವಾಡಲು ದೊಡ್ಡ ಆಟದ ಮೈದಾನವೇ ಇತ್ತು. ಅಲ್ಲಿಯ ಮಕ್ಕಳು ಬುಗುರಿ, ಲಗೋರಿ, ಕೊಕೋ ಕುಂಟಾವಿಲ್ಲೆ, ಚಿನ್ನಿದಾಂಡು ಅಂತಾ ಅದೆಷ್ಟೋ ಬಗೆಯ ಆಟಗಳನ್ನು ಗುಂಪುಗುಂಪಲ್ಲಿ ಆಡಿ ಕೇಕೇ ಹಾಕುತ್ತಾ ಸಂತಸ ಪಡುತ್ತಿದ್ದರು. ಆದರೆ ಇಲ್ಲಿ ಮನೆಯ ಕಂಪೌಂಡ್ ದಾಟಿ ಹೋಗಲೂ ನನಗೆ ಪರ್ಮಿಶನ್ ಇಲ್ಲ. ಅಂತಹ ಆಟಗಳನ್ನ ಶಾಲೆಯಲ್ಲಿಯೂ ಆಡಿಸೋದಿಲ್ಲ. ನನಗಂತೂ ಅಲ್ಲಿಯೇ ಆ ಮಕ್ಕಳ ಜೊತೆಗೆ ಆಟವಾಡುತ್ತಾ ನಲಿಯುವ ಆಸೆ.. ಆದರೆ ನೀನು ಬಿಡದೇ ಎಳೆದುಕೊಂಡು ಬಂದೆ.. ಬ್ಯಾಡ್ ತಾತಾ ನೀನು..”
“ತಾತಾ ನೀನು ಗಮನಿಸಿದೆಯಾ, ರಾತ್ರಿಯಾದರೆ ಆ ಊರ ಆಗಸದಲ್ಲಿ ಅದೆಷ್ಟು ನಕ್ಷತ್ರಗಳು ಸ್ಪಷ್ಟವಾಗಿ ಮಿನುಗುತ್ತಿದ್ದವು ಎಂದು. ನೋಡೋಕೆ ನೂರು ಕಣ್ಣು ಸಾಲದು ತಾತಾ. ಆದರೆ ಇಲ್ಲಿ ನಮ್ಮನೆಯ ಟೆರೇಸ್ ಮೇಲೆ ಬರೀ ಲೈಟ್ಸ್ ಗಳೇ ತುಂಬಿವೆ. ನಕ್ಷತ್ರಗಳು ಹೊಳಪನ್ನೇ ಕಳೆದುಕೊಂಡಿವೆ. ಪ್ರತಿರಾತ್ರಿ ನಕ್ಷತ್ರಗಳ ನೋಡುತ್ತಾ ಆನಂದಿಸುವ ಆ ಊರಿನ ಜನರು ಅದೆಷ್ಟು ಅದೃಷ್ಟವಂತು ಅಲ್ಲವೇ ತಾತಾ”
“ತಾತಾ ಅಲ್ಲಿಯ ಮಕ್ಕಳು ಅಪ್ಪ ಅಮ್ಮ ಅಣ್ಣ ತಮ್ಮ ಅಕ್ಕ ತಂಗಿ ಚಿಕ್ಕಪ್ಪ ಚಿಕ್ಕಮ್ಮ ಹೀಗೆ ಇಡೀ ಕುಟುಂಬ ಸಮೇತ ಖುಷಿಯಾಗಿದ್ದರು. ಆದರೆ ಇಲ್ಲಿ ನಮ್ಮಪ್ಪ ನಾನು ಮಲಗಿದ ನಂತರ ಮನೆಗೆ ಬರುತ್ತಾರೆ. ಅಮ್ಮ ಕ್ಲಬ್ ನಿಂದ ವಾಪಸ್ ಬರುವುದರೊಳಗೆ ನನ್ನ ಊಟ ಮುಗಿದಿರುತ್ತದೆ. ನೀನೋ ನಿನ್ನ ಗೆಳೆಯರ ಜೊತೆಗೆ ಟೆರೆಸ್ನಲ್ಲಿ ಇಸ್ಪೆಟ್ ಆಡ್ತಿರ್ತೀಯಾ. ಅಜ್ಜಿ ಯಾವಾಗಲೂ ಟಿವಿ ನೋಡ್ತಾ ಇರ್ತದೆ. ನಾನು ಒಬ್ಬಂಟಿ ಎನ್ನುವ ಪೀಲ್ ಬರ್ತಿದೆ ತಾತಾ. ನಾನು ಆ ಹಳ್ಳಿಯಲ್ಲೇ ಹುಟ್ಟಿದ್ದರೆ ಚೆನ್ನಾಗಿತ್ತು ಎಂದೆನ್ನಿಸುತ್ತಿದೆ.
“ನಿನಗೆ ಗೊತ್ತಾ ತಾತಾ.. ನಾವು ಕಾಳು ಬೇಳೆ ಹಾಲು ತರಕಾರಿ ಹೀಗೆ ಎಲ್ಲವನ್ನೂ ಕೊಂಡುಕೊಳ್ಳುತ್ತೇವೆ. ಆದರೆ ಆ ಊರಿನ ಜನ ಅವುಗಳನ್ನು ತಾವೇ ಬೆಳೆಯುತ್ತಾರೆ. ತಾವೂ ತಿಂದು ನಮಗಾಗಿಯೂ ಮಾರ್ಕೆಟ್ ಗೆ ಕಳಿಸುತ್ತಾರೆ. ಅವರು ಎಷ್ಟು ಗ್ರೇಟ್ ಅಲ್ವಾ ತಾತಾ. ನಿಜವಾದ ಶ್ರೀಮಂತರು ನಾವಲ್ಲ ತಾತಾ. ಅವರು.. ಆ ಹಳ್ಳಿಯ ಜನ. ಅವರಲ್ಲಿ ಹಣ ಸಂಪತ್ತುಗಳು ಇರದೇ ಇರಬಹುದು ಆದರೆ ಆನಂದ ನೆಮ್ಮದಿಗಳಿವೆ. ನಮಗೆ ಅವುಗಳ ಕೊರತೆ ಇದೆ ಅಲ್ವಾ”
ಮೊಮ್ಮಗ ತನ್ನ ಹಳ್ಳಿಯ ಪ್ರವಾಸದ ಕಥನವನ್ನು ವಿವರಿಸಿ ಹೇಳುತ್ತಿದ್ದ. ಮೊಮ್ಮಗನಿಗೆ ಬಡತನದ ನೋವನ್ನೂ ಹಾಗೂ ಸಿರಿತನದ ಅನುಕೂಲತೆಗಳ ಕುರಿತು ಅರಿವು ಮೂಡಿಸಲು ಹೊರಟಿದ್ದ ತಾತನಿಗೆ ಮೊಮ್ಮಗನ ಮಾತುಗಳನ್ನು ಕೇಳಿ ಜ್ಞಾನೋದಯವಾದಂತಾಯಿತು. ಮೊಮ್ಮಗನನ್ನು ಬರಸೆಳೆದು ಅಪ್ಪಿಕೊಂಡು
“ಹೌದು ಕಂದಾ, ನೀನು ಇಂದು ನನ್ನ ಕಣ್ಣು ತೆರೆಸಿದೆ. ಹಣ ಸಂಪತ್ತು ಸವಲತ್ತುಗಳೇ ಬದುಕಿಗೆ ಮುಖ್ಯ ಎಂದು ತಿಳಿದು ಇಷ್ಟು ವರ್ಷಗಳ ಕಾಲ ನೆಮ್ಮದಿಯ ಬದುಕಿನಿಂದ ದೂರವಾಗಿದ್ದೆ. ಇನ್ಮೇಲಾದರೂ ಬದಲಾಗಬೇಕಿದೆ. ನನ್ನ ಹಳ್ಳಿಗೆ ಹೋಗಿ ಬಾಕಿ ಬದುಕನ್ನು ಸಂತಸದಿಂದ ಕಳೆಯುವೆ. ರಜೆ ಇದ್ದಾಗ ನೀನು ನನ್ನ ಜೊತೆ ಬಂದು ಇರ್ತೀಯಲ್ವಾ..” ಎಂದಾಗ ತಾತನ ಕಣ್ಣಾಲಿಗೆಯಲ್ಲಿ ಪಶ್ಚಾತ್ತಾಪದ ಕಣ್ಣಹನಿಗಳು ಮೊಮ್ಮಗನ ಕೇಕೆಯಲ್ಲಿ ಕರಗಿಹೋದವು.
ಕಥೆ ಇಷ್ಟೇ.. ಆದರೆ ಇದರ ವ್ಯಾಪ್ತಿ ತುಂಬಾನೇ ದೊಡ್ಡದು. ಹಳ್ಳಿಯಲ್ಲಿ ಏನಿದೆ ಎಂದು ಪಟ್ಟಣಕ್ಕೆ ಹೋಗಿ ಸಾಗರ ಸೇರಿದ ನದಿ ತನ್ನ ಅಸ್ತಿತ್ವನ್ನೇ ಕಳೆದುಕೊಂಡಂತೆ ಬದುಕುವ ಎಲ್ಲರಿಗೂ ಈ ಕಥೆಯೊಂದು ಪಾಠ. ಸಂಪಾದನೆಯ ಹಿಂದೆ ಹೋಗಿ ಸಂತಸವನ್ನು ಕಳೆದುಕೊಂಡ ಪ್ರತಿಯೊಬ್ಬರು ಯೋಚನೆ ಮಾಡಬೇಕಿದೆ. ಹುಟ್ಟಿದ ಹಳ್ಳಿಯನ್ನು ತೊರೆದು ಪಟ್ಟಣಕ್ಕೆ ಹೋಗಿ ನಿಜ ನೆಮ್ಮದಿಯನ್ನು ಕಳೆದುಕೊಂಡು ಕೃತಕ ಪರಿಸರದಲ್ಲಿ ಜೀವಿಸುತ್ತಾ ಅದೇ ಬದುಕು ಎಂಬ ಭ್ರಮೆಯಲ್ಲಿರುವ ಎಲ್ಲರೂ ಆಲೋಚಿಸಬೇಕಿದೆ. ಅದೆಷ್ಟೇ ಶ್ರೀಮಂತಿಕೆ ಇದ್ದರೂ ನೆಮ್ಮದಿ ಎನ್ನುವುದು ಐಷಾರಾಮಿ ವಸ್ತುಗಳಲ್ಲಿ ಇಲ್ಲ, ಕಾರು ಬಂಗಲೆಗಳಲ್ಲಿ ಇಲ್ಲ. ಸೂಟು ಕೋಟುಗಳಲ್ಲಿ ಇಲ್ಲ. ಇದೆಲ್ಲಾ ಇಲ್ಲದವರು ಬಡವರೂ ಅಲ್ಲ. ಕೂಡಿ ಬಾಳುವಲ್ಲಿ, ಹಂಚಿ ತಿನ್ನುವುದರಲ್ಲಿ, ಗುಂಪಾಗಿ ಅಟೋಟಗಳಲ್ಲಿ ತೊಡಗಿಕೊಳ್ಳುವುದರಲ್ಲಿ, ಹಬ್ಬ ಹರಿದಿನಗಳನ್ನು ಊರವರ ಜೊತೆ ಸೇರಿ ಸಂಭ್ರಮಿಸುವುದರಲ್ಲಿ, ಒಬ್ಬರ ಕಷ್ಟ ಸುಖಕ್ಕೆ ಇನ್ನೊಬ್ಬರು ಆಗುವುದರಲ್ಲಿ ಸಂತಸವಿದೆ, ಸಿರಿತನವಿದೆ, ನೆಮ್ಮದಿ ಇದೆ. ದುಡ್ಡೇ ದೊಡ್ಡಪ್ಪ ಎನ್ನುವ ದೊಡ್ಡವರ ಆಸೆ ದುರಾಸೆಗಳನ್ನು ಬದಿಗಿಟ್ಟು, ನೆಮ್ಮದಿ ಆನಂದವೇ ಸಿರಿತನಕ್ಕೂ ಅಪ್ಪ ಎನ್ನುವ ಮಕ್ಕಳ ದೃಷ್ಟಿಕೋನವನ್ನು ಅರ್ಥಮಾಡಿಕೊಂಡಾಗ ಮಾತ್ರ ಮನುಷ್ಯರಾಗಲು ಸಾಧ್ಯ. ಜೀವನವನ್ನು ಸಾರ್ಥಕವಾಗಿ ಬದುಕಲು ಸಾಧ್ಯ. ಸಂಪಾದನೆಯೊಂದೇ ಬದುಕಾದರೆ ನಿಜವಾದ ಸುಖ ಶಾಂತಿ ನೆಮ್ಮದಿ ನೈವೇದ್ಯ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ