ಶುಕ್ರವಾರ, ಅಕ್ಟೋಬರ್ 14, 2016

ತಹ ತಹ 1 ಸ್ವರ್ಗ ನರಕ ಬೇರಿಲ್ಲ ಕಾಣಿರೋ

ತಹ ತಹ ....1



"ನಮ್ಮ ಸೈನಿಕರ ರುಂಡ ಕತ್ತರಿಸಿ ಮುಂಡವನ್ನು ರವಾನಿಸುವ, ಗಡಿಯೊಳಗೆ ಭಯೋತ್ಪಾದಕರನ್ನು ನೂಕುವ, ಅಫೀಮನ್ನು ಕಳ್ಳಸಾಗಣೆ ಮಾಡಿ ನಮ್ಮ ಯುವಪೀಳಿಗೆಯನ್ನು ದುಶ್ಚಟಗಳ ದಾಸರಾಗಿ ಮಾಡುತ್ತಿರುವ ಪಾಪಿ ಪಾಕಿಸ್ಥಾನದ ಕರಾಳ ಮುಖದ ಪರಿಚಯ ನಟಿ ರಮ್ಯಾಗೆ ಇಲ್ಲ..." ಎಂದು ನಿನ್ನೆ ನಮ್ಮ ಗೌರವಾಣ್ವಿತ ಸಂಸದೆ ಶೋಭಾರವರು ತಮ್ಮ ಪಕ್ಷಕ್ಕೆ ಶೋಭೆ ತರುವಂತಾ ಮಾತು ಉದುರಿಸಿದ್ದಾರೆ.
 
ಸಂಸದೆ ಮಾತಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಜಗತ್ತಿನ ಬೇರೆ ಯಾವ ದೇಶದವರನ್ನಾದರೂ ಬೇಕಾದರೆ ಒಳ್ಳೆಯವರು ಅಂದರೂ ಪರವಾಗಿಲ್ಲ... ಆದರೆ ಪಾಪಿ ಪಾಕಿಗಳನ್ನು ಒಳ್ಳೆಜನ ಎಂದು ಹೇಳುವ ದುಸ್ಸಾಹಸ ಮಾಡಿದ ರಮ್ಯಾರನ್ನು ದೇಶದ್ರೋಹದ ಅಪರಾಧದಲ್ಲಿ ಬಂಧಿಸಿ... ವಿಚಾರಣೆ ನಡೆಸಿ ಆದಷ್ಟು ಬೇಗ ಗಲ್ಲಿಗೇರಿಸಬೇಕು. ಶತ್ರು ದೇಶವನ್ನು ಹೊಗಳುವುದು ಎಂದರೆ ಕಡಿಮೆ ಅಪರಾಧಾನಾ..?  ಹಾಂ. ಹಾಗೆಯೆ ದುಷ್ಟ ದುರುಳ ಪಾಕಿಸ್ಥಾನದ ಜೊತೆಗೆ ಯಾರ್ಯಾರು ಉತ್ತಮ ಸಂಬಂಧಕ್ಕೆ ಪ್ರಯತ್ನಿಸಿದ್ದಾರೋ ಅವರೆಲ್ಲಾ ಮಹಾ ದೇಶದ್ರೋಹಿಗಳು. ಕರಾಳ ಶತ್ರುಗಳ ಜೊತೆಗೆ ಬಾಂಧವ್ಯ ಎಂದೂ ಸಾಧ್ಯವಿಲ್ಲ ಎಂಬುದು ಪರಮ ಪುಣ್ಯ ಭೂಮಿಯಲಿ ಜನಿಸಿದ ಹಿಂದೂಗಳಿಗೆಲ್ಲಾ ಗೊತ್ತಾಗಲೇಬೇಕು. ಪಾಕಿ ಪರವಾಗಿರುವವರು ಯಾವುದೇ ಪಕ್ಷದಲ್ಲಿರಲಿ ಅವರೆಲ್ಲಾ ದೇಶದ್ರೋಹಿಗಳಲ್ಲದೇ  ಮತ್ತೇನು..
.

ಮೊಟ್ಟ ಮೊದಲು ಶಾಂತಿ ಸೌಹಾರ್ಧತೆಗಾಗಿ ಪಾಕಿಸ್ಥಾನವೆಂಬ ನರಕಕ್ಕೆ ಬಸ್ ಸೇವೆ ಆರಂಭಿಸಿ ವೈರಿಗಳತ್ತ ಸ್ನೇಹಹಸ್ತ ಚಾಚಿದ ಅಂದಿನ ಪ್ರಧಾನಿ ವಾಜಪೇಯಿಯವರನ್ನು ದೇಶದ್ರೋಹಿ ಎಂದು ಘೋಷಿಸಿ ವಿಚಾರಣೆ ನಡೆಸಿ ಶಿಕ್ಷಿಸಬೇಕು. ಪರಮ ಪಾಪಿ ದೇಶಕ್ಕೆ ಹೋಗಿ ನರಕದ ಸಂಸ್ಥಾಪಕ ಜಿನ್ನಾರನ್ನು ಮಹಾನ್ ದೇಶಭಕ್ತ ಎನ್ನುವಂತೆ ಹೊಗಳಿದ ಲಾಲಕೃಷ್ಣ ಅಡ್ವಾಣಿಯವರನ್ನು  ಮಹಾರಾಜದ್ರೋಹಿ ಎಂದು ಘೋಷಿಸಿ ಗರಿಷ್ಟ ಶಿಕ್ಷೆ ವಿಧಿಸಬೇಕುಸಂಸತ್ತಿನ ಅನುಮತಿ ಪಡೆಯದೇ, ಯಾರೆಂದರೆ ಯಾರಿಗೂ ಒಂದು ಮಾತು ಸಹ ತಿಳಿಸದೇ ಏಕಾಏಕಿ ಪಾಕಿಸ್ಥಾನಕ್ಕೆ ಹೋಗಿ ಶತ್ರುದೇಶದ ಪ್ರಧಾನಿಯ ಮನೆಯ ಔತನಕೂಟದಲ್ಲಿ ತಿಂದುಂಡು ಬಂದ ಹಾಲಿ ಪ್ರಧಾನಿ ಮೋದಿಯವರನ್ನು ಕೂಡಲೇ ಪದಚ್ಯುತಗೊಳಿಸಿ... ದೇಶದ್ರೋಹದ ಆರೋಪ ಹೊರೆಸಿ ವಿಚಾರಣೆ ಇಲ್ಲದೇ ಶಿಕ್ಷೆ ಜಾರಿಗೊಳಿಸಬೇಕು.

ನ್ಯಾಯ ಅಂದರೆ ಎಲ್ಲರಿಗೂ ಒಂದೇ ಅಲ್ಲವೇ ಶೋಬಾ ತಾಯಿ. ಮೊದಲು ದೊಡ್ಡ ದೊಡ್ಡ ದೇಶದ್ರೋಹಿಗಳಿಗೆ ರಾಜದ್ರೋಹದ ಆರೋಪದ ಮೇಲೆ ಶಿಕ್ಷಿಸಿದರೆ ರಮ್ಯಾನಂತಾ ನಟಿಯರಿಗೆ ಪಾಕಿಸ್ಥಾನದ ಜನ ಒಳ್ಳೆಯವರು ಎಂದು ಹೇಳುವ ದೈರ್ಯವಾದರೂ ಎಲ್ಲಿ ಬಂದೀತು..   ದೇಶಭಕ್ತೆ ಶೋಭಾರವರು ಕೂಡಲೇ ಮಾಡಬೇಕಾದ ಕೆಲಸವೆಂದರೆ ಖತರ್ನಾಕ್ ಶತ್ರು ದೇಶದವರ ಪರ ಯಾರೇ ಒಂದೇ ಒಂದು ಶಬ್ದ ಮಾತಾಡಿದರೂ ಅದನ್ನು ರಾಜದ್ರೋಹ ಎಂದು ತಿಳಿದು ಗರಿಷ್ಟ ಶಿಕ್ಷೆ ವಿಧಿಸುವ ಕಾನೂನನ್ನು ಜಾರಿಗೊಳಿಸಲು ಸಂಸತ್ತಿನಲ್ಲಿ ಹಕ್ಕೋತ್ತಾಯ ಮಂಡಿಸಬೇಕು ಹಾಗೂ ಸ್ವಾತಂತ್ರ್ಯಾ ನಂತರ ಪಾಕಿಸ್ಥಾನದ ಜೊತೆ ಯಾರು ಸ್ನೇಹ ಹಸ್ತ ಚಾಚಿದ್ದಾರೋ... ಸೌಹಾರ್ಧತೆ ಬಯಸಿದ್ದಾರೋ... ಅವರು ಅದೆಷ್ಟೇ ಪ್ರಭಾವಶಾಲಿಗಳಾಗಿರಲಿ ಅವರಿಗೆಲ್ಲ ದೇಶದ್ರೋಹಿ ಪಟ್ಟ ಕಟ್ಟಿ ಪಾಕಿಸ್ಥಾನವೆಂಬೋ  ಭೂಲೋಕದ  ನರಕಕ್ಕೆ ಗಡಿಪಾರು ಮಾಡಬೇಕು.. ಶೋಭಾರವರಿಗೆ  ಜಯವಾಗಲಿ..
.
ಶೊಭಾರಂತಾ ದೇಶಭಕ್ತರು ಅಮರರಾಗಲಿ... ಇಂತಾ ಅಪ್ರತಿಮ ದೇಶಭಕ್ತರಿರುವುದರಿಂದಲೇ ದೇಶಾದ್ಯಂತ ಅತಿವೃಷ್ಟಿ ಅನಾವೃಷ್ಟಿಗಳು ನಿರಂತರವಾಗಿವೆ ಎಂಬುದು ನೆನಪಿರಲಿ...

                                                                          - ಶಶಿಕಾಂತ ಯಡಹಳ್ಳಿ

1 ಕಾಮೆಂಟ್‌:

  1. ತಮ್ಮ ತಹ ತಹ... ದಂತಹ ತುಂಬಾ ವೈಚಾರಿಕತೆಯಿಂದ ಕೂಡಿದ ಲೇಖನಗಳನ್ನು ಒಂದೆಡೆ ಸಿಗುವಂತೆ ಮಾಡಿದ ತಮ್ಮ ಶರಣ ಮನಕ್ಕೆ ಶರಣು ಶರಣಾರ್ಥಿಗಳು.

    - ದಿನಕರ ಸಿ ಕೋರಿಶೆಟ್ಟರ. ಹಾವೇರಿ.

    ಪ್ರತ್ಯುತ್ತರಅಳಿಸಿ