ತಹ ತಹ....12
"ಹೌದು ತಾಳಿದವರು ಬಾಳಿಯಾರು. ನಾವು ಮಹಿಳೆಯರು ತಾಳ್ತಾನೇ ಇರ್ತೇವೆ...ಅವರು ಗಂಡಸರು ಬಾಳ್ತಾನೇ ಇರ್ತಾರೆ... " ಎಂದು 'ಮಲ್ಲಿಗೆ' ನಾಟಕದ ಮಲ್ಲಿಗೆ ರಾಣಿ ತನ್ನ ಸಂಕಟ ತೋಡಿಕೊಳ್ಳುತ್ತಲೇ ಈ ನಾಟಕದ ಆಶಯವನ್ನು ಸೂಚ್ಯವಾಗಿ ಸ್ಪಷ್ಟಪಡಿಸುತ್ತಾಳೆ.
'ಮಲ್ಲಿಗೆ' ಎನ್ನುವ ನಾಟಕದ ಕರ್ತೃ ಡಾ.ಕೆ.ವೈ.ನಾರಾಯಣಸ್ವಾಮಿಗಳು ತಮ್ಮ ಸ್ತ್ರೀಪರ ನಿಲುವನ್ನು ಈ ನಾಟಕದ ಮೂಲಕ ಸಾಬೀತು ಪಡಿಸಲು ಹರಸಾಹಸ ಪಟ್ಟಿದ್ದಾರೆ. ಗಂಡಸರಲ್ಲಿ ಹೆಣ್ತನ ಎನ್ನುವುದು ಇರಬೇಕು ಎನ್ನುವ ತಮ್ಮ ಥೇಯರಿಯನ್ನು ನಾಟಕದ ಮೂಲಕ ಪ್ರ್ಯಾಕ್ಟಿಕಲ್ಲಾಗಿ ತೋರಿಸಿದ್ದಾರೆ. ತಮ್ಮ ಹೆಂಗರುಳಿನಾಳದ ಹೆಣ್ತನವನ್ನು ಹೊರಗೆ ಹಾಕಲು ಹೋಗಿ ಗಂಡ್ತನವನ್ನೇ ಸಾಯಿಸಲು ಬೇಕಾದ ಎಲ್ಲಾ ಹುನ್ನಾರಗಳನ್ನೂ ನಾಟಕಕಾರರು ಮಾಡಿದ್ದಾರೆಂಬ ಆರೋಪವನ್ನು ಈ ನಾಟಕ ನೋಡಿದವರು ಮಾಡಿದ್ದರಲ್ಲಿ ಅತಿಶಯವೇನಿಲ್ಲ.
ಗಂಡು ಹೆಣ್ಣಿನ ನಡುವಿರುವ ಸಂಬಂಧ ತುಂಬಾ ಸಂಕೀರ್ಣವಾದಂತದು. ಅದನ್ನು ಇದಂಮಿತ್ಯಂ ಎಂದು ಗೆರೆ ಎಳೆದು ಒಬ್ಬರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಅತಿರೇಕದ ಪರಮಾವಧಿ. ಈ ನಾಟಕದೊಳಗಿನ ಪತಿ ಮಹಾಶಯರು ವಿನಾಕಾರಣ ತಮ್ಮ ಪತ್ನಿಯರನ್ನು ಅನುಮಾನಿಸಿ ಅವಸಾನ ಹೊಂದುತ್ತಾರೆ. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡದೇ ಆತುರಕ್ಕೆ ಬಿದ್ದು ಅನಾಹುತಗಳಿಗೆ ಕಾರಣರಾಗುತ್ತಾರೆ.
ಈ ನಾಟಕವನ್ನು ನೋಡುವ ಪ್ರೇಕ್ಷಕ ಮಹನೀಯರಿಗೆ ಗಂಡಸರೆಂದರೆ ಆತುರದ ಆಂಜನೇಯರು... ಹಿಂದು ಮುಂದು ನೋಡದೇ, ಕಂಡದ್ದನ್ನು ಕೇಳಿದ್ದನ್ನು ಪರಿಶೀಲಿಸದೇ ನಂಬಿ ಅತಿರೇಕದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ. ಪಾಪ ಹೆಣ್ಮಕ್ಕಳು ನೋಡಿ ತಮ್ಮ ಗಂಡಂದಿರನ್ನು ಅದೆಷ್ಟು ಪ್ರೀತಿಸಿ ತ್ಯಾಗಕ್ಕೆ ಸಿದ್ದರಾಗುತ್ತಾರೆ.. ಎಂಬುದನ್ನು ನಂಬಿಸಲು ನಾಟಕದಾದ್ಯಂತ ಪ್ರಯತ್ನಿಸಲಾಗಿದೆ. ಮಹಿಳೆಯರ ಪರವಾದ ಏಕಮುಖಿ ನಿರ್ಧಾರಗಳನ್ನು ಪ್ರೇಕ್ಷಕರ ಮೇಲೆ ಹೇರಲು ಕೆವೈಎನ್ ತಮ್ಮ ಪ್ರತಿಭೆಯನ್ನೆಲ್ಲಾ ಧಾರೆಯರೆದಿದ್ದಾರೆ. ಗಂಡು ಹೆಣ್ಣಿನ ಸಂಬಂಧ ನಾರಾಯಣಸ್ವಾಮಿಗಳು ಅಂದುಕೊಂಡಂತೆ ಬ್ಲಾಕ್ ಆಂಡ್ ವೈಟ್ ಅಲ್ಲವೇ ಅಲ್ಲ. ಎರಡೂ ಕಡೆಯಿಂದ ತಪ್ಪು ಹಾಗೂ ಸರಿಗಳು ಇದ್ದೇ ಇರುತ್ತವೆ. ಬೇರೆ ಬೇರೆ ದಾಂಪತ್ಯಗಳಲ್ಲಿ ಸರಿತಪ್ಪುಗಳ ಪ್ರಮಾಣ ಹೆಚ್ಚು ಕಡಿಮೆ ಇರಬಹುದಾಗಿದೆ.
ಯಾವುದೋ ಒಂದು ಉದಾಹರಣೆಯನ್ನು ಸಾರ್ವತ್ರೀಕರಣಗೊಳಿಸಿ 'ನೋಡಿ ಗಂಡಸರೆಲ್ಲಾ ಅನುಮಾನದ ಪಿಶಾಚಿಗಳು' ಎಂದು ಹೇಳುವುದು ವಿವೇಕತನವಲ್ಲ. ಒಂದಲ್ಲ ಈ ನಾಟಕದಲ್ಲಿ ಎರೆಡೆರಡು ಶಂಕೆಯ ಪಿಶಾಚಿಗಳಿವೆ. ಒಂದು ರಾಜು ಹಾಗೂ ಇನ್ನೊಂದು ಮಲ್ಲಿಗೆರಾಯ. ಒಂದು ಆಧುನಿಕ ಪಾತ್ರ ಇನ್ನೊಂದು ಕಾಲ್ಪಣಿಕ ಪೌರಾಣಿಕ ಪಾತ್ರ. ಇವೆರಡೂ ಪಾತ್ರಗಳು ತಮ್ಮ ಪತ್ನಿಯನ್ನು ಅನುಮಾನಿಸಿ ಮಾನಸಿಕ ವ್ಯಸನಕ್ಕೆ ಗುರಿಯಾಗಿ ಹತಾಶೆಯಿಂದ ತಮ್ಮನ್ನು ತಾವೇ ಹತ್ಯೆಗೆ ಗುರಿಯಾಗಿಸಿಕೊಂಡು ಸಾಯುತ್ತವೆ. ಕಾಲ ಯಾವುದಾದರೇನು ಗಂಡಸರ ಸಂದೇಹದ ರೋಗಕ್ಕೆ ಮದ್ದಿಲ್ಲವೆಂದು ಹೇಳುವುದೇ ಈ ನಾಟಕದ ನಕಾರಾತ್ಮಕ ಉದ್ದೇಶವಾಗಿದೆ.
ಹೆಣ್ತನವನ್ನು ಗಮನದಲ್ಲಿಟ್ಟುಕೊಂಡೇ ಈ ನಾಟಕ ರಚಿಸಿರುವ ನಾರಾಯಣಸ್ವಾಮಿಗಳು ತಮಗರಿವಿಲ್ಲದಂತೆ ಪುರುಷ ಪ್ರಧಾನ ವ್ಯವಸ್ಥೆ ಮಹಿಳೆಯರ ಮೇಲೆ ಹೇರಿರುವ ಪತಿಭಕ್ತಿ, ಪತಿಪ್ರೇಮ, ಪತಿಗಾಗಿ ತ್ಯಾಗ, ಪತಿನಿಷ್ಟೆ, ಮಾನಸಿಕ ಕಿರುಕುಳ ಸಹಿಸಿಕೊಂಡೂ ಪತಿಯತ್ತ ಸಮರ್ಪನಾ ಮನೋಭಾವ...ಗಳನ್ನು ಹೇಳುತ್ತಾರೆ. ಗಂಡಸರು ಬಯಸುವ ಈ ಗುಣಗಳನ್ನು ಈ ನಾಟಕದ ಪತ್ನಿ ಪಾತ್ರಗಳು ಸಾಬೀತು ಪಡಿಸುತ್ತವೆ. ಗಂಡಸು ಅದೆಷ್ಟೇ ಸ್ತ್ರೀಪರ ಎಂದುಕೊಂಡರೂ ಆಳದಲ್ಲಿ ಪಿತೃಪ್ರಧಾನ ಅಂಶಗಳೇ ಅಂತರ್ಗತವಾಗಿರುತ್ತವೆ ಎನ್ನುವುದಕ್ಕೆ ಕೆವೈಎನ್ ಹಾಗೂ ಅವರ ಮಲ್ಲಿಗೆ ನಾಟಕವೇ ಸಾಕ್ಷಿಯಾಗಿದೆ....
ಹೆಣ್ಮಕ್ಕಳು ದಾಂಪತ್ಯದಲ್ಲಿ ಎಷ್ಟೇ ಸಮಸ್ಯೆಗಳಿದ್ದರೂ ಗಂಡಸರಿಗೆ ನಿಷ್ಟೆಯಿಂದ ಇರಬೇಕು ಹಾಗೂ ಗಂಡಸರು ಪರಿಶೀಲಿಸಿ ನಿಜವರಿಯದೇ ಹೆಂಡತಿಯ ಮೇಲೆ ಅನುಮಾನ ಪಡಬಾರದು ಎನ್ನುವ ಸಂದೇಶವನ್ನು ' ಮಲ್ಲಿಗೆ' ನಾಟಕ ಮೆಲ್ಲಗೆ ಕೊಡುತ್ತದೆ. ಮಹಿಳಾ ಪರ ಎನ್ನುತ್ತಲೇ ಮಹಿಳಾ ವಿರೋಧಿ ನೀತಿಯನ್ನು.... ಪುರುಷರ ಮನೋಭಾವ ವಿರೋಧಿಸುತ್ತಲೇ ಪುರುಷ ಪ್ರಧಾನ ಸಂವಿತೆಯನ್ನು ಈ ನಾಟಕ ತನ್ನ ಅಂತರಂಗದಲ್ಲಿ ಪ್ರತಿಪಾದಿಸುತ್ತದೆ.
ಅಕಸ್ಮಾತ್ ಪತಿ ತಪ್ಪುತಿಳುವಳಿಕೆಯಿಂದ ಅನುಮಾನದ ಖಾಯಿಲೆಯಿಂದ ಬಳಲುತ್ತಾ ಖಿನ್ನನಾಗಿದ್ದರೆ ಅದನ್ನು ದೂರಮಾಡುವ ಹೊಣೆಗಾರಿಕೆ ಈ ನಾಟಕದ ಪತಿನಿಷ್ಟ ಪತ್ನಿಯದಾಗಿರುತ್ತದೆ. ಅದು ಬಿಟ್ಟು ಮನೆ ಸಾಲ ತೀರಿಸಲು ಗೆಳೆಯನ ಸಹಾಯ ಬೇಕೆಂದು ಆತನ ಜೊತೆಗೆ ನಡುಮಧ್ಯರಾತ್ರಿ ಹೊಟೇಲಿಗೆ ಹೋಗುವ ಹೆಂಡತಿಯ ನಡುವಳಿಕೆ ಅನುಮಾನವನ್ನೇ ಹುಟ್ಟಿಸುತ್ತದೆ. ಕಛೇರಿಯಲ್ಲೆ ಇದ್ದೆ ಎಂದು ಆಕೆ ಹೇಳುವ ಸುಳ್ಳು ಗಂಡನಲ್ಲಿ ಇನ್ನಷ್ಟು ಖಿನ್ನತೆಯನ್ನು ಹುಟ್ಟಿಸಿ ಆತ್ಮಹತ್ಯೆಗೆ ಪ್ರೇರೇಪಿಸುತ್ತದೆ. ಪತ್ನಿಯ ಮೇಲೆ ಅನುಮಾನ ಪಡುವುದು ಎಷ್ಟು ತಪ್ಪೋ ಅಷ್ಟೇ ದೊಡ್ಡ ತಪ್ಪು ಸುಳ್ಳು ಹೇಳಿ ಅನುಮಾನ ಬರುವಂತೆ ಪತ್ನಿ ನಡೆದುಕೊಳ್ಳುವುದು. ಹಾಗಾದರೆ ಇದರಲ್ಲಿ ಯಾರು ಹೆಚ್ಚು ತಪ್ಪಿತಸ್ತರು ಎನ್ನುವುದಕ್ಕಿಂತ ತಪ್ಪು ಎರಡೂ ಕಡೆ ಆಗಿರುತ್ತವೆ. ಒಬ್ಬರ ಮೇಲೆ ಆರೋಪ ಹೊರೆಸಿ ಅಪರಾಧಿಯನ್ನಾಗಿಸುವುದು ಆಕ್ಷೇಪಣೀಯ. ಇದರಿಂದಾಗಿ ಏನೋ ಗಹನವಾದ ವಿಚಾರವನ್ನು ಹೇಳಲು ಹೋಗಿ ಏನನ್ನೂ ಹೇಳದೇ ನಾಟಕ ಕೊನೆಯಾಗುತ್ತದೆ. ಸ್ತ್ರೀಪರ ನಿಲುವುಗಳ ಹಂದರದ ಬಲೆಯೊಳಗೆ ನಾಟಕಕಾರ ತಾನೇ ಬಂಧಿಯಾಗುತ್ತಾ ತನಗರಿವಿಲ್ಲದಂತೆ ಪುರುಷ ಪ್ರಧಾನ ಮೌಲ್ಯಗಳ ಪಳವಳಿಕೆಗಳನ್ನು ನಾಟಕದೊಳಗೆ ಅಳವಡಿಸಲಾಗಿದೆ. ಈ ನಾಟಕ ಸ್ತ್ರಿಪರವೋ ವಿರೋಧವೋ..ಪುರುಷ ಪರವೋ ವಿರೋಧವೋ ಎನ್ನುವ ದ್ವಂದ ಅವರವರ ಭಾವಭಕುತಿಗೆ ಅನುಗುಣವಾಗಿ ಕಾಡುತ್ತದೆ.

ಡಾ.ಕೆವೈಎನ್ ರಂತಹ ಪ್ರತಿಭಾವಂತರ ಅಪಾರ ಬುದ್ದಿವಂತಿಕೆ ದ್ವಂದ್ವ ಹಾಗೂ ಅತಿರೇಕಗಳನ್ನು ಹುಟ್ಟಿಸುತ್ತದೆ. ನಿರ್ದೇಶಕರ ಅಪಾರ ಕ್ರಿಯಾಶೀಲತೆ ಹಾಗೂ ರಂಗತಂತ್ರಗಳ ಬಳಕೆಯಿಂದ ಆಕರ್ಷಣೀಯವಾಗಿ ಮೂಡಿಬಂದ 'ಮಲ್ಲಿಗೆ' ನಾಟಕವು ಪ್ರೇಕ್ಷಕರ ಮನ ಹಾಗೂ ಮೆದುಳಿನವರೆಗೆ ಪರಿಮಳ ಬೀರಬೇಕಾದರೆ ರಂಗಪಠ್ಯದಲ್ಲಿ ಇನ್ನೂ ಬದಲಾವಣೆಯನ್ನು ಬಯಸುತ್ತದೆ.
ಒಂದು ಆತ್ಮಹತ್ಯೆಯ ಸುತ್ತ ಅನುಮಾನಗಳ ಹುತ್ತ ಕಟ್ಟಿದ 'ಮಲ್ಲಿಗೆ' ತನ್ನ ಸಿನಮೀಯ ನಡೆ ಹಾಗೂ ನಿರೂಪಣಾ ಕ್ರಮಗಳಿಂದಾಗಿ ಗಮನ ಸೆಳೆಯುತ್ತದೆ. ತರ್ಕ ತತ್ವಗಳಾಚೆ ನಿಂತು ನಾಟಕ ನೋಡಿದರೆ ವೃತ್ತಿಪರ ಪ್ರಸೆಂಟೇಶನ್ನಿನಿಂದಾಗಿ ಇಡೀ ಪ್ರಯೋಗ ಮನಸಿಗೆ ಮುದಕೊಡುವಲ್ಲಿ ಯಶಸ್ವಿಯಾಗಿದೆ.
- ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ