ಶುಕ್ರವಾರ, ಅಕ್ಟೋಬರ್ 14, 2016

ತಹ ತಹ....13 ಬಾಕಿ ಕೊಟ್ಟು ನೋಡಿ.. ದೇಶಸೇವೆಗೊಂದು ಅವಕಾಶ ಕೊಡಿ:

ತಹ ತಹ....13



"
ಒಂದು ರೂಪಾಯಿಯಿಂದ ನೀವು ದೇಶ ಸೇವೆಯನ್ನು ಮಾಡಬಹುದು" ಎಂಬುದು ಜನ ಸಾಮಾನ್ಯರನ್ನು ದೇಶದ ಕಡೆ ಸೆಳೆಯಲು ಮೋದಿಜಿ ಕೊಟ್ಟ ಪ್ರಬಲ ಅವಕಾಶವಾಗಿದೆ ಎನ್ನುವುದು ನಿರ್ವಿವಾದ.

'ಹೌದು ಭಾರತೀಯ ಸೇನೆಗೆ ನಾವು ಜನಸಾಮಾನ್ಯರು ಆನ್ಲೈನ್ ಮೂಲಕ ವರ್ಷಕ್ಕೆ 365 ರೂಪಾಯಿಗಳನ್ನು ಪಾವತಿಸಿದರೆ ಸಾಕು ಹಣವನ್ನು ಸೇನೆಯ ಕಷ್ಟ ಕಾಲಕ್ಕೆ ಹಾಗೂ ಯುದ್ಧ ಸಾಮಗ್ರಿಗಳನ್ನು ಖರೀದಿಸುವದಕ್ಕೆ ಉಪಯೋಗಿಸುತ್ತಾರಂತೆ.
'ನಮ್ಮ ದೇಶದ ಜನಸಂಖ್ಯೆಯಲ್ಲಿ ಅರ್ಧ ಜನತೆ ಅಂದರೆ 60 ಕೋಟಿ ಜನ ಇದನ್ನು ಕೊಟ್ಟರೂ ವರ್ಷಕ್ಕೆ 20000 ಕೋಟಿ ರೂಪಾಯಿಗಳು ಜಮಾ ಮಾಡಬಹುದು..' ಎಂಬ ಭಕ್ತರ ಬಲವಾದ ಪ್ರಪಗಂಡಾವನ್ನು ನಾನು ಸಮರ್ಥಿಸುವೆ. 

ನಾನಂತೂ  ಮೋದಿ ಮಹಾತ್ಮರ ದಾರ್ಶನಿಕ ಮಾತುಗಳಿಗೆ ಸಹಮತ ಹೊಂದಿದ್ದೇನೆ. ನನ್ನ ಕುಟುಂಬದಲ್ಲಿ ನನ್ನನ್ನೂ ಸೇರಿಸಿ ಒಟ್ಟು ಮೂರು ಜನರಿದ್ದೇವೆ. ದಿನಕ್ಕೊಂದು ರೂಪಾಯಿಯಂತೆ ಲೆಕ್ಕ ಹಾಕಿದರೆ ಮೂರೂ ಜನಕ್ಕೂ ಸೇರಿ ವರ್ಷಕ್ಕೆ ಸಾವಿರದ ಚಿಲ್ಲರೆ ಹಣವನ್ನು ದೇಶಕ್ಕಾಗಿ...ದೇಶದ ಸೇನೆಗಾಗಿ ಕೊಡಲು ಸಿದ್ದನಿದ್ದೇನೆ. ಆದರೆ ಮೋದಿಯವರಿಂದ ನನಗೆ ಅಪಾರವಾದ ಬಾಕಿ ಬರಬೇಕಿದೆ. ಮೋದಿ ಭಕ್ತರು ಅದನ್ನು ಕೊಡಿಸಿದರೆ  ದೇಶ ಸೇವೆಗಾಗಿ ವಂತಿಗೆ ಕೊಡಲು ನನಗೆ ಏನೇನೂ ಅಭ್ಯಂತರವಿಲ್ಲ.

ವಿಷಯ ಏನಪಾಂತಂದ್ರೆ ಕಳೆದ ಚುನಾವಣೆಯ ಹಣಾಹಣಿಯ ಸಂದರ್ಭದಲ್ಲಿ ಮೋದಿ ಸಾಹೇಬರು " ನನಗೆ ದೇಶವಾಳುವ ಅಧಿಕಾರ ಕೊಟ್ಟರೆ ಖದೀಮರ ಕಪ್ಪು ಹಣವನ್ನು ಸ್ವಿಸ್ ಬ್ಯಾಂಕಿನಿಂದ ವಸೂಲಿ ಮಾಡಿ ತಂದು ದೇಶದ ಪ್ರತಿಯೊಬ್ಬ ಪ್ರಜೆಯ ಬ್ಯಾಂಕ್ ಅಕೌಂಟಿಗೆ ಹದಿನೈದು ಲಕ್ಷ ರೂಪಾಯಿಗಳನ್ನು ಸಂದಾಯ ಮಾಡುತ್ತೇನೆ' ಎಂದು ಭರವಸೆ ಕೊಟ್ಟಿದ್ದರು. ಎಲ್ಲರಂತೆ ನಾನಂತೂ ಮಾತನ್ನು ನಂಬಿದ್ದೆ. ಈಗಲೂ ನಂಬುತ್ತೇನೆ. ಯಾಕೆಂದರೆ ನನಗೆ ಸಾಲಕೊಟ್ಟ ಮಹನೀಯರನ್ನು ಹಾಗಂತ ನಂಬಿಸಿದ್ದೇನೆ. ಮೋದಿಯವರು ನನ್ನ ಅಕೌಂಟಿಗೆ ಹಣ ಹಾಕುತ್ತಾರೆ. ಕಾಸು ಬಂದ ಕೂಡಲೇ ನಿಮ್ಮ ಋಣ ಸಂದಾಯ ಮಾಡುತ್ತೇನೆಂದೂ ನಾನೂ ಭರವಸೆ ಕೊಟ್ಟಿದ್ದೇನೆ. ಸಾಲ ಕೊಟ್ಟವರು ಮೋದಿಯವರ ಪರಮ ಭಕ್ತರಾದರೂ ಮೋದಿ ಆಶ್ವಾಸನೆಯನ್ನು ನಂಬಲು ತಯಾರಿಲ್ಲ. ಮೋದೀಜಿ ಅವರ ಆಡಳಿತಾವಧಿಯಲ್ಲಿ ನನಗೆ ಬರಬೇಕಾದ ಹಣವನ್ನು ಕೊಟ್ಟೇ ಕೊಡುತ್ತಾರೆ. ಕೊಡದಿದ್ದರೆ ನಾನು ಬಡ್ಡೀ ಸಮೇತ ಹೇಗೋ ಕೊಡುತ್ತೇನೆಂದು ಸಾಲಿಗರಿಗೆ ಆಶ್ವಾಸನೆ ಕೊಟ್ಟಿದ್ದೇನೆ. ಅವತ್ತಿಂದ  ಮೋದಿ ಕಾಸು ಬಂತಾ ಅಂತಾ ಪ್ರತಿ ತಿಂಗಳು ಬಡ್ಡಿ ಕಟ್ಟಲು ಹೋದಾಗ ಸಾಲಧಾತರು ಚುಡಾಯಿಸುತ್ತಲೇ ಇದ್ದಾರೆ. ಇಂದಲ್ಲಾ ನಾಳೆ ಬರುತ್ತೆ ಅಂತಾ ನಾನೂ ಹೇಳ್ತಾನೇ ಇದ್ದೇನೆ. ಮೂರು ಬ್ಯಾಂಕಲ್ಲಿ ನನ್ನ ಅಕೌಂಟಗಳಿವೆ . ಯಾವ ಬ್ಯಾಂಕಿಗೆ ಹಣ ಜಮಾ ಆಗಬಹುದು ಎನ್ನುವ ಗೊಂದಲದಲ್ಲಿದ್ದೇನೆ. ಬಹುಷಃ ಗ್ಯಾಸ್ ರಿಯಾಯತಿ ಬರುತ್ತಲ್ಲಾ ಅದೇ ಬ್ಯಾಂಕ್ ಅಕೌಂಟಿಗೆ ಕಾಸು ಬರಬಹುದೆಂಬುದು ನನ್ನ ಅದಮ್ಯ ನಂಬಿಕೆ. ಅದಕ್ಕಾಗಿ ಆಗಾಗ ಹೋಗಿ ನನ್ನ ಬ್ಯಾಂಕ್ ಖಾತೆಯಲ್ಲಿ ಜಮೆಯಾಗಬಹುದಾದ ಹಣದ ಬಗ್ಗೆ ಪರಿಶೀಲಿಸುತ್ತೇನೆ.

 ಹೀಗಾಗಿ ನನ್ನ ಕುಟುಂಬದಲ್ಲಿರುವ ಒಟ್ಟು ಮೂರು ಜನರಿಗೆ ಟೋಟಲ್ಲಾಗಿ ನಲವತ್ತೈದು ಲಕ್ಷ ರೂಪಾಯಿಗಳು ಬರುವುದು ಮೋದೀ ಸರಕಾರದಿಂದ ಬಾಕಿ ಇದೆ. ಹಣವನ್ನೂ ಸರಕಾರ ತನ್ನ ಖಜಾನೆಯಿಂದ ಕೊಡುತ್ತಿಲ್ಲ. ನನ್ನಂತ ಕೊಟ್ಯಾಂತರ ದುಡಿಯುವ ಜನರ ಶ್ರಮ ಹಾಗೂ ಸಾರ್ವಜನಿಕ ಸಂಪತ್ತನ್ನು ಲೂಟಿ ಮಾಡಿ ವಿದೇಶಿ ಬ್ಯಾಂಕಿನಲ್ಲಿಟ್ಟ ಖದೀಮರಿಂದ  ವಸೂಲಿ ಮಾಡಿ ಜನರಿಗೆ ಹಂಚಲಾಗುತ್ತದೆ. ನಾನೂ ಕಳ್ಳರ ಖಜಾನೆಯ ಅರ್ಹ ಫಲಾನುಭವಿಯಾಗುವ ಯೋಗ್ಯತೆ ಹೊಂದಿರುವೆ. ಇನ್ನೂ ಎರಡೂ ಮುಕ್ಕಾಲು ವರ್ಷ ಮೋದಿ ಸರಕಾರದ ಅವಧಿ ಇರುವುದರಿಂದ ಅಷ್ಟರಲ್ಲಿ ಖದೀಮರ ಖಜಾನೆಯಿಂದ ಹಣ ಕಿತ್ತುಕೊಂಡು ಬಂದು ರಾಬಿನ್ ಹುಡ್ ಶೈಲಿಯಲ್ಲಿ ಪರಮ ಪವಿತ್ರ ದೇಶದ ವಾಸಿಗಳಿಗೆಲ್ಲಾ  ಹಂಚುತ್ತಾರೆಂಬ ಅಪಾರವಾದ ಮೂಢನಂಬಿಕೆ ನನ್ನದಾಗಿದೆ.

ನನ್ನಂತೆಯೇ ಕೊಟ್ಯಾಂತರ ಜನತೆ ಪವಾಡಪುರುಷ ಮೋದಿಯವರ ಮೇಲೆ ಇನ್ನೂ ಅದಮ್ಯ ನಂಬಿಕೆ ಇಟ್ಟುಕೊಂಡಿದ್ದಾರೆ. ಬೇರೆಲ್ಲದರ ಮೇಲೆ ನಂಬಿಕೆ ಕಳೆದುಕೊಂಡರೂ ಹದಿನೈದು ಲಕ್ಷಗಳ ಬಾಕಿ ಹಣದ ಮೇಲಂತೂ  ಆಸೆ ಇಟ್ಟಿಕೊಂಡೇ ಕೂತಿದ್ದಾರೆ. ಅಕಸ್ಮಿಕವಾಗಿ ದೇಶ ವಿದೇಶಗಳ ಸುತ್ತಾಟದ ಆಯಾಸದಿಂದ ಮೋದಿಯವರು ಸುಸ್ತಾಗಿ ಕೊಟ್ಟ ಭರವಸೆಯನ್ನು ತಾತ್ಕಾಲಿಕವಾಗಿ ಮರೆತಿರಬಹುದಾದ ಸಾಧ್ಯತೆ ಇದೆ. ಆದ್ದರಿಂದ ಸಮಸ್ತ ಮೋದೀ ಭಕ್ತರುಗಳು ತಮ್ಮ ಆರಾದ್ಯ ದೇವರನ್ನು ಎಚ್ಚರಿಸಿ ಜನತೆಗೆ ಕೊಡುತ್ತೇನೆಂದು ಹೇಳಿದ ವರವನ್ನು ಆದಷ್ಟು ಬೇಗ ದಯಪಾಲಿಸಲು ನೆನಪಿಸಬೇಕೆಂದು ಅಡ್ಡಡ್ಡ ಉದ್ದುದ್ದ ಬಿದ್ದು ಕೇಳಿಕೊಳ್ಳುತ್ತೇನೆ. 

ಯಾರಾದರೂ ಬಂದು ನೀನು ದೇಶಕ್ಕೆ ಏನ್ ಮಹಾ ಮಾಡಿದೀಯ ಎಂದು ಕೇಳಿದರೆ ನಾನು ನನ್ನ ದೇಶದ ಸೈನಿಕರಿಗೆ ಪ್ರತಿ ದಿನ ಒಂದು ರೂಪಾಯಿ ಕೊಡ್ತಾ ಇದ್ದೀನಿ ಅಂತ  ಎದೆ ತಟ್ಟಿ ಹೇಳಬಹುದು. ನನ್ನ ದೇಶಭಕ್ತಿ ಹಾಗೂ ಸೈನ್ಯಭಕ್ತಿಯನ್ನು ಆದಾರ ಸಮೇತ ಸಾಬೀತುಪಡಿಸಬಹುದು.

ಅದಕ್ಕಾಗಿಯೇ ನಾನೂ ಸಹ ನನ್ನ ದೇಶಪ್ರೇಮವನ್ನು ಸಾಬೀತುಮಾಡಿ ಸೇನೆಯ ಬಗ್ಗೆ ನನ್ನ ಕಾಳಜಿ ತೋರಲು ನನ್ನ ಕುಟುಂಬದಿಂದ ಕೊಡಬೇಕಾದ ಸಾವಿರದ ಚಿಲ್ಲರೆ ಹಣವನ್ನು ಕೊಡಲು ಬದ್ದನಾಗಿರುವೆ. ಕೊಟ್ಟ ಮಾತು ತಪ್ಪಿದರೆ ಭಕ್ತರು ನನ್ನ ನಾಲಿಗೆ ಕತ್ತರಿಸಬಹುದಾಗಿದೆ. ನನ್ನ ಕುಟುಂಬಕ್ಕೆ ಮೋದೀ ಸರಕಾರದಿಂದ ಬರಬೇಕಾದ ನಲವತ್ತೈದು ಲಕ್ಷರೂಪಾಯಿಗಳಲ್ಲಿ ಸಾವಿರದ ಚಿಲ್ಲರೆ ಹಣವನ್ನು ಮುರಿದುಕೊಂಡು ಬಾಕಿ ಹಣವನ್ನು ನನ್ನ ಬ್ಯಾಂಕ ಖಾತೆಗೆ ಆದಷ್ಟು ಬೇಗ ಜಮಾ ಮಾಡಬೇಕೆಂದು ವಿನಂತಿಸಿಕೊಳ್ಳುವೆ. ಭಕ್ತಗಣ ಮನಸು ಮಾಡಬೇಕು. ಇಲ್ಲದಿದ್ದರೆ ತಮ್ಮದು ಬೂಟಾಟಿಕೆ ದೇವರೆಂದು ಒಪ್ಪಿಕೊಳ್ಳಬೇಕಾಗುತ್ತದೆ. ಹೇಗಾದರೂ ಮಾಡಿ ನಮ್ಮ ಬಾಕಿ ಕೊಡಿಸಿಕೊಟ್ಟು ಅವತಾರಪುರುಷ ಮೋದಿಯವರ ಕಲಿಯುಗದ ಮಹಾತ್ಮೆಯನ್ನು ಸಂಭ್ರಮಿಸಲು  ನನ್ನಂತ ಪಾಮರರಿಗೆ ಅವಕಾಶ ಒದಗಿಸಿಕೊಡಬೇಕೆಂದು ಮೋದೀಭಕ್ತರಲ್ಲಿ ವಿನಂತಿ.

ಕೊನೆಯ ಕ್ಷಣದವರೆಗೂ ಮೋದೀ ಆಶ್ವಾಸನೆಯನ್ನು ನಂಬುತ್ತೇನೆ. ಯಾಕೆಂದರೆ ನಂಬಿಕೆಯೆ ಬದುಕಲ್ಲವೇ. ನಂಬಿಕೆ ಕಳೆದುಕೊಂಡರೆ ಬದುಕೇ ನರಕ ಎಂದು ಪುರೋಹಿತಶಾಹಿಗಳೇ ಹೇಳಿದ್ದಾರಲ್ಲ. 
ಜೈ ಮೋದೀಜಿ...
ಜೈ ಜೈ ಮೋದಿ ಭಕ್ತಗಣಂಜೀ..



- ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ