ಶನಿವಾರ, ಅಕ್ಟೋಬರ್ 15, 2016

ತಹ ತಹ .....34 ಯುದ್ದೋನ್ಮಾದದ ಕೇಡು ಮತ್ತು ದ್ವೇಶ ರಾಜಕಾರಣ :





ಯುದ್ದಗೆಲ್ಲಲು ಕೇವಲ ಯುದ್ದೋನ್ಮಾದ ಒಂದೇ ಸಾಲದು ಯುದ್ಧವನ್ನೂ ಮಾಡಬೇಕು. ಅಗಣಿತ ಸಂಖ್ಯೆಯ ಯೋಧರ ಬಲಿಕೊಡಬೇಕು, ಅಸಂಖ್ಯಾತ ಜನಸಾಮಾನ್ಯರ ಸಾವು ನೋವಿಗೆ ಸಾಕ್ಷಿಯಾಗಬೇಕು. ಜನ ಜಾನುವಾರು ಸತ್ತರೆ ಸಾಯಲಿ, ಊರು ಪಟ್ಟಣಗಳು ನಾಶವಾದರೆ ಆಗಲಿ ಸೇಡು ತೀರಿಸಿಕೊಳ್ಳಲೇಬೇಕು ಎಂದರೆ ಘನಘೋರ ಯುದ್ದಕ್ಕೆ ಸಿದ್ದರಾಗಬೇಕು..

ಈಗ ನಮ್ಮ ದೇಶಾದ್ಯಂತ ಯುದ್ಧದ ಉನ್ಮಾದವನ್ನು ಸೃಷ್ಟಿಸಲಾಗಿದೆ. ಯಾರನ್ನೇ ಕೇಳಿ ಪಾಕಿಸ್ಥಾನಕ್ಕೆ ಬುದ್ದಿ ಕಲಿಸಬೇಕು, ದೇಶವನ್ನೇ ಭೂಪಟದಿಂದ ಅಳಿಸಿಹಾಕಬೇಕು ಎನ್ನುವ ಅತಿರೇಕದ ವೀರಾವೇಶದ ಮಾತುಗಳೇ ಕೇಳಿ ಬರುತ್ತಿವೆ. ಮಾಧ್ಯಮಗಳು ಭಾವನೆಯನ್ನು ಬಡಿದೆಬ್ಬಿಸುತ್ತಿವೆಬಹುಷಃ ಯುದ್ದವೆಂದರೆ ಶತ್ರುಗಳನು ಸೆದೆಬಡೆದು ಗೆಲ್ಲುವುದೊಂದೇ ಆಶಯ ಎನ್ನುವುದು ಬಹುತೇಕರ ಅನಿಸಿಕೆಯಾಗಿದೆ. ಆದರೆ ಬಹುತೇಕರಿಗೆ ಯುದ್ಧದ ಬೀಕರತೆ ಗೊತ್ತಿಲ್ಲಭೂಪಾಲ್ ಪಟ್ಟಣದಲ್ಲಿ ಅಣು ದುರಂತವಾದಾಗ ಲಕ್ಷಾಂತರ ಜನ ಸತ್ತು ಉಳಿದವರೂ ಇನ್ನೂ ನರಕಯಾತನೆ ಅನುಭವಿಸುತ್ತಿದ್ದಾರೆಂಬುದನ್ನು ಮರೆತವರು ಯುದ್ದದ ಬಗ್ಗೆ ಮಾತಾಡಬಹುದು. ಈಗ ಯುದ್ಧ ವಾದರೆ ಭೂಪಾಲ ದುರಂತಕ್ಕಿಂತಾ ಲಕ್ಷ ಪಟ್ಟು ಹೆಚ್ಚು ಹಾನಿಯಾಗುವುದರಲ್ಲಿ ಸಂದೇಹವಿಲ್ಲ.

ವಾಹಿನಿಯವರ ಅತಿರೇಕದ ಮಾತುಗಳಂತೂ ನಂಬಿಕೆಗೆ ಅರ್ಹವಲ್ಲ. ಬಹುತೇಕ ವಾಹಿನಿಗಳು ಯುದ್ದೋನ್ಮಾದವನ್ನು ಪ್ರೇರೇಪಿಸುತ್ತಿವೆ. ಕೇವಲ ಎಂಟೇ ನಿಮಿಷಗಳಲ್ಲಿ ಪಾಕಿಸ್ಥಾನವನ್ನು ಭೂಪಟದಿಂದ ಅಳಿಸಿ ಹಾಕುವ ಶಕ್ತಿ ಸಾಮರ್ಥ್ಯ ಭಾರತಕ್ಕಿದೆ ಎಂದು ಕೂಗುತ್ತಿವೆ. ಆದರೆ ಇವರು ಹೇಳುವಂತೆ ಯುದ್ದವೆನ್ನುವುದು ಏಕಪಕ್ಷೀಯವಲ್ಲ. ಅಣ್ವಸ್ತ್ರ ಸಾಮರ್ಥ್ಯದ ಎರಡು ದೇಶಗಳ ನಡುವೆ ಘನಗೋರ ಯುದ್ದವಾದಲ್ಲಿ ಎರಡೂ ದೇಶಗಳೂ ಸರ್ವನಾಶವಾಗುತ್ತವೆ ಎನ್ನುವ ಸಾಮಾನ್ಯ ಕಲ್ಪನೆಯೂ ನಮ್ಮ ವಾಹಿನಿಗಳ ನಿರೂಪಕರಿಗೆ ಹಾಗೂ ದೇಶಭಕ್ತರಿಗಿಲ್ಲಪಾಕಿಸ್ತಾನ ಹಾಕುವ ಒಂದು ಅಣುಬಾಂಬಿನಿಂದ ಭಾರತದ ಎರಡು ಕೋಟಿ ಜನ ನಿಮಿಷಾರ್ಧದಲ್ಲಿ ಅಸುನೀಗುತ್ತಾರೆ ಎಂದು ಹೇಳುವ ವಾಹಿನಿಗಳು ಭಾರತ ಪಾಕಿಸ್ಥಾನವನ್ನು ಎಂಟು ನಿಮಿಷದಲ್ಲಿ ಸರ್ವನಾಶಮಾಡಬಲ್ಲುದು ಎಂದು ಖನಿ ಹೇಳುತ್ತಾರೆ. ಅಂದರೆ ಎರಡು ಕೋಟಿ ಜೀವರಾಶಿಗಳಿಗೆ ಬೆಲೆ ಎಂಬುದು ಇಲ್ಲವೇ. ನಮ್ಮ 2 ಕೋಟಿ ಜನ ಸತ್ತರೂ ಪರವಾಗಿಲ್ಲ ಶತ್ರು ದೇಶದ 20  ಕೋಟಿ ಜನ ನಿರ್ಣಾಮವಾಗಬೇಕು ಎನ್ನುವ ಸೇಡಿನ ಕಿಚ್ಚು ದೇಶಭಕ್ತರ ಮನದಲ್ಲಿ ಹೊತ್ತಿ ಉರಿಯುತ್ತದೆ. ಎರಡು ಕೋಟಿ ಜನರಲ್ಲಿ ಯುದ್ದೋನ್ಮಾನಿಗಳ ಪಟ್ಟಣಗಳೂ ಇರಬಹುದಲ್ಲವೇ. ನಮ್ಮ ಒಂದು ಕಣ್ಣು ಹೋದರೂ ಚಿಂತೆಯಿಲ್ಲ ಶತ್ರುಗಳ ಅಂಗಾಗಗಳು ನಾಶವಾಗಬೇಕು ಎನ್ನುವ ಮನೋಭಾವ ಬುದ್ದ, ಬಸವ, ಗಾಂಧಿ ಹುಟ್ಟಿದ ನಾಡಿನಲ್ಲಿ ಉನ್ಮಾದವಾಗಿ ಉಕ್ಕೇರಿತ್ತಿರುವುದು ಅಚ್ಚರಿಯ ಸಂಗತಿ. 

ದೇಶ ಯಾವುದೇ ಇರಲಿ ಅಲ್ಲಿರುವವರೆಲ್ಲಾ ಹೋಲಸೇಲಾಗಿ ದುಷ್ಟರೂ ಅಲ್ಲಾ ಒಳ್ಳೆಯವರೂ ಅಲ್ಲಾ. ಮನುಷ್ಯರು ಅಂತಾ ಇದ್ದ ಮೇಲೆ ವಿನಾಶಕಾರಿ ದುರುಳರು ಹಾಗೂ ಒಳಿತು ಬಯಸುವವರು ಇದ್ದೇ ಇರುತ್ತಾರೆ. ಆದರೆ ನೀಚರು ತಮ್ಮ ಹಿಂಸಾಪಾತದಿಂದಾಗಿ ಹೆಚ್ಚು ಗಮನ ಸೆಳೆದು ತಮ್ಮ ದೇಶಕ್ಕೆ ಕಳಂಕ ತರುತ್ತಾರೆ. ಒಳ್ಳೆಯವರು ನಿರ್ಲಿಪ್ತರಾಗಿದ್ದು ಕೆಟ್ಟವರ ನೀಚತನದ ವಿರುದ್ಧ ತಮ್ಮದೇ ಆದ ಮಿತಿಯಲ್ಲಿ ವಿರೋಧಿಸುತ್ತಲೇ ಇರುತ್ತಾರೆ. ಇದಕ್ಕೆ ಹಿಂದೂಸ್ತಾನವಾಗಲೀ ಪಾಕಿಸ್ತಾನವಾಗಲೀ ಹೊರತಲ್ಲ. ಪಾಕಿಸ್ತಾನವನ್ನು ಶತಾಯ ಗತಾಯ ವಿರೋಧಿಸಿ ಪಾಪಿಗಳ ದೇಶವೇ ನಾಶವಾಗಬೇಕು ಎನ್ನುವ ದೇಶಭಕ್ತರಿಗೆ ಅರಿವಿರಲಿ ದೇಶವಾಸಿಗಳೆಲ್ಲಾ ಭಯೋತ್ಪಾದಕರಲ್ಲ. ಇಪ್ಪತ್ತು ಕೋಟಿ ಜನಸಂಖ್ಯೆಯಲ್ಲಿ ಒಂದು ಕೋಟಿ ಜನ ಮತಾಂಧ ವಿದ್ವಂಸಕರು ಇರಬಹುದು. ಒಂದು ಕೋಟಿ ಉಗ್ರರು ಹಾಗೂ ಅವರ ಸಮರ್ಥಕರ ನಾಶಕ್ಕಾಗಿ ದೇಶದಲ್ಲಿರುವ ಹತ್ತೊಂಬತ್ತು ಕೋಟಿ ಮಕ್ಕಳು, ಮಹಿಳೆಯರು, ದುಡಿಯುವವರು ಉರಿದು ಬೂದಿಯಾಗಬೇಕು ಎಂದು ಬಯಸುವುದು ಮಾನವೀಯತೆ ಅಲ್ಲವೇ ಅಲ್ಲ. ಭಯೋತ್ಪಾದಕರು ಕೇವಲ ಭಾರತಕ್ಕೆ ಮಾತ್ರವಲ್ಲ ಪಾಕಿಸ್ಥಾನದ ಪ್ರಜೆಗಳಿಗೂ ಶತ್ರುಗಳೇ ಆಗಿದ್ದಾರೆ. ಹಿಂಸಾವಾದಿಗಳು, ವಿದ್ವಂಸಕರು ಯಾವ ದೇಶದಲ್ಲೇ ಇರಲಿ ಅವರು ಆಯಾ ದೇಶದ ಜನತೆಯ ಶತ್ರುಗಳೇ ಆಗಿರುತ್ತಾರೆಂಬುದು ಸುಳ್ಳಲ್ಲ. 

ಆದ್ದರಿಂದ ದೇಶದ ಅಮಾಯಕರನ್ನೆಲ್ಲಾ ಸರ್ವನಾಶಮಾಡಿ ಪಾಪ ಕಟ್ಟಿಕೊಳ್ಳುವ ಬದಲು ಮತಾಂಧ ಭಯೋತ್ಪಾದಕರನ್ನು ಮಟ್ಟ ಹಾಕಲು ಪರ್ಯಾಯ ತಂತ್ರಗಳನ್ನು ರಚಿಸುವುದುತ್ತಮ. ಅಂತಹ ಯೋಜನೆಗೆ ನನ್ನದೊಂದು ಸಲಹೆ ಹಾಗೂ ದೇಶಭಕ್ತರಲ್ಲೊಂದು ಮನವಿ.

ಯುದ್ದೋನ್ಮಾದಿ ದೇಶಭಕ್ತರ  ಆತ್ಮಹತ್ಯಾದಳವನ್ನು ರಚಿಸಿ ಶಸ್ತ್ರ ತರಬೇತಿ ಕೊಡಲು ದೇಶದ ಪ್ರಧಾನಿ ಹಾಗೂ ರಾಷ್ಟ್ರಪತಿಗಳಿಗೆ ದೇಶಭಕ್ತರೆಲ್ಲಾ ಸೇರಿ ಒತ್ತಾಯಿಸಲಿ. ಸುಮ್ಮನೇ ದುಡಿಯುವ ವರ್ಗದಿಂದ ಹೋದ ಯೋಧರನ್ನು ಸಮರದಲಿ ಬಲಿಕೊಟ್ಟು ಅವರನ್ನೇ ನಂಬಿದ ಕುಟುಂಬವರ್ಗದವರನ್ನು ಶೋಕಸಾಗರದಲ್ಲಿ ಮುಳುಗಿಸುವ ಬದಲು ಯುದ್ಧ ಬೇಕೇ ಬೇಕೆನ್ನುವ ದೇಶಭಕ್ತರ ಪಡೆ ಪ್ರಾಣಾರ್ಪನೆಗೆ ಸಿದ್ದವಾಗಲಿ. ಸರಕಾರವು ಮಿಲಿಟರಿಯವರ ಮೂಲಕ ದೇಶಭಕ್ತರಿಗೆ ಅಗತ್ಯ ತರಬೇತಿಯನ್ನು ಕೊಟ್ಟು, ಇವರ ಸೊಂಟಕ್ಕೆ ಶಕ್ತಿಶಾಲಿ ಬಾಂಬಗಳನ್ನು ಕಟ್ಟಿ ಹೆಲಿಕ್ಯಾಪ್ಟರ್ ಮೂಲಕ ಉಗ್ರರಿರುವ ಕ್ಯಾಂಪನೊಳಗೆ ಇಳಿಸಲಿ. ಇವರು ಯುದ್ದಾ ಗಿದ್ದಾ ಏನೂ ಮಾಡೋದು ಬೇಡಾ.. ಭಯೋತ್ಪಾದಕರಿಗೊಂದು ಹಲೋ ಹೇಳಿ ಕೈಲಿರುವ ಬಾಂಬ್ ಬಟನ್ ಅಮುಕಿದರೆ ಸಾಕು ಉಗ್ರರ ಕ್ಯಾಂಪ್ ಮಟಾಶ್. 

ಹೇಗೆ ಲೆಕ್ಕ ಹಾಕಿದರೂ ಭವ್ಯ ಭಾರತದಲ್ಲಿ ಒಂದು ಕೋಟಿ ಯುದ್ದೋನ್ಮಾದಿ ಸಿಂಹಗಳಿಗಂತೂ ಬರವಿಲ್ಲ. ಉಗ್ರ ಕುನ್ನಿಗಳನ್ನು ಎಣಿಸಿದರೆ  ಒಂದು ಲಕ್ಷದಷ್ಟಿರಬಹುದು. ಒಂದು ಕೋಟಿ ಜನ ವೀರ ದೇಶಭಕ್ತರ ಆತ್ಮಹತ್ಯಾ ದಳ ಪಾಕಿಸ್ಥಾನದೊಳಗೆ ಇಳಿದು ತಮ್ಮನ್ನು ತಾವು ಸ್ಪೋಟಿಸಿಕೊಂಡರೆ ಸಾಕು ಉಗ್ರರ ದಮನ ಗ್ಯಾರಂಟಿ. ಪಾಕಿಗಳ ದೂರ್ತ ಮಿಲಿಟರಿ ಕ್ಯಾಂಪಗಳ ಮೇಲೂ ಒಂದಿಷ್ಟು ಸಿಂಹಗಳನ್ನು ಉದುರಿಸಿದರೆ ದೇಶದ ಮಿಲಿಟರಿ ಮಟಾಶ್. ಇದಕ್ಕಿಂತಾ ದೊಡ್ಡ ದೇಶಭಕ್ತಿ ಇನ್ನೇನಿದೆ. ಸತ್ತರೆ ವೀರಸ್ವರ್ಗವಂತೂ ಗ್ಯಾರಂಟಿ. ಪ್ರಾಣತ್ಯಾಗ ಮಾಡಿದ ಪ್ರತಿಯೊಬ್ಬರ  ಕುಟುಂಬಗಳಿಗೂ ಲಕ್ಷಾಂತರ ರೂಪಾಯಿ ಪರಿಹಾರದ ಜೊತೆಗೆ ಪರಮವೀರಚಕ್ರ ಪದವಿ ಕೊಡಬಹುದು. ಇಂತಹ ದೇಶಪ್ರೇಮಿ ತ್ಯಾಗಿಗಳಿಂದ ಭಾರತದ ನೂರಿಪ್ಪತ್ತು ಕೋಟಿ ಜನತೆ ಹಾಗೂ ಪಾಕಿಸ್ತಾನದ ಹತ್ತೊಂಬತ್ತು ಕೋಟಿ ಜನತೆಯ ಪ್ರಾಣ ಉಳಿಯುತ್ತದೆ. ಶತ್ರು ದೇಶದ ಉಗ್ರರು ಹಾಗೂ ಮಿಲಿಟರಿ ನಾಶವಾದ ಮೇಲೆ ನಮ್ಮ ದೇಶದ ಸೈನಿಕರು ದೇಶವನ್ನು ನಿರಾಯಾಸವಾಗಿ ವಶಪಡಿಸಿಕೊಂಡು ಅಖಂಡ ಭಾರತವನ್ನು ಸ್ಥಾಪಿಸಬಹುದಾಗಿದೆ. 

ಆದರೆ ಆತ್ಮಹತ್ಯಾದಳ ಸೇರುವ ದೇಶಭಕ್ತರ ಕುಟುಂಬ ವರ್ಗ ನಗುನಗುತ್ತಾ ಖುಷಿಖುಷಿಯಿಂದಾ ಪುರುಷ ಸಿಂಹಗಳನ್ನು ಉಗ್ರನಾಶಕ್ಕೆ ಕಳುಹಿಸಿಕೊಡಬೇಕುಹಾಗೂ ಬಾಂಬ್ ಸಿಡಿಸಿಕೊಂಡು ಹುತಾತ್ಮರಾದಾಗ ಯಾರೂ ಕಣ್ಣೀರು ಹಾಕದೇ ಸಂತಸಪಡಬೇಕು. ನಿಯಮಕ್ಕೆ ಯಾರು ತಮ್ಮ ಮನೆಯವರನ್ನು ಒಪ್ಪಿಸುತ್ತಾರೋ ಅಂತಹ ದೇಶಭಕ್ತರು ಆತ್ಮಹತ್ಯಾದಳಕ್ಕೆ ಸೇರಬಹುದು ಎಂಬ ಕಾನೂನನ್ನೂ ಪ್ರಧಾನಿಗಳು ಮಾಡಬೇಕು. 

ತಮ್ಮ ಯುದ್ದೋನ್ಮಾದ ಬರೀ ಬಾಯಿಮಾತಿನದಲ್ಲಾ ನಿಜವಾದದ್ದು ಎಂದು ಸಾಬೀತುಪಡಿಸ ಬಯಸುವ ಎಲ್ಲಾ ಭಕ್ತರೂ ಆತ್ಮಹತ್ಯಾದಳ ರಚಸಬೇಕು ಹಾಗೂ ಅರ್ಹ ದೇಶಭಕ್ತರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭಿಸಬೇಕೆಂದು ಪ್ರಧಾನಿಯವರನ್ನು ಒತ್ತಾಯಿಸಿ ಒಪ್ಪಿಸುವ ಮೂಲಕ ಎರಡೂ ದೇಶಗಳ ಅಮಾಯಕ ಪ್ರಜೆಗಳಿಗೆ ಜೀವದಾನ ಮಾಡಬೇಕೆಂದು ವಿನೀತನಾಗಿ ಕೇಳಿಕೊಳ್ಳುತ್ತಿದ್ದೇನೆ. ದೇಶಭಕ್ತ ಯುದ್ದೋನ್ಮಾದಿಗಳು ದೊಡ್ಡ ಮನಸ್ಸು 



ಮಾಡಬೇಕು... ನಮ್ಮೆಲ್ಲರ ಜೀವ ನಿಮ್ಮ ಕೈಯಲ್ಲಿದೆ ಎನ್ನುವುದನ್ನು ಮರೆಯಬಾರದು. ಹಾಗೆಯೇ ಯುದ್ದವನ್ನು ಬಯಸುವ ಎಲ್ಲಾ ಪಕ್ಷಗಳ ನಾಯಕರುಗಳನ್ನು ಹಾಗೂ ಅವರ ಮಕ್ಕಳನ್ನೂ ಸಹ ನಿಮ್ಮ ಆತ್ಮಹತ್ಯಾದಳದ ಕಮಾಂಡರುಗಳನ್ನಾಗಿ ನೇಮಿಸುವುದನ್ನು ಮಾತ್ರ ಮರೆಯಬೇಡಿರೆಂದೂ ಕೋರಿಕೆ. ಸಧ್ಯ ಮುಂದಿನ ತಲೆಮಾರಾದರೂ ಜನವಿರೋಧಿ ರಾಜಕಾರಣಿಗಳ ಹಾಗೂ ಜೀವವಿರೋಧಿ ಯುದ್ದೋನ್ಮಾದಿ ದೇಶಭಕ್ತರ ಕಾಟ ಕಿರಿಚಾಟ ಇಲ್ಲದೇ ನೆಮ್ಮದಿಯಾಗಿರಲಿ ಎನ್ನುವುದೇ ನನ್ನ ಹಾಗೂ ನನ್ನಂತಹ ಯುದ್ಧವಿರೋಧಿ ದೇಶದ್ರೋಹಿಗಳ ಮನದಾಳದ ಆಶಯವಾಗಿದೆ. 

- ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ