ತಹ ತಹ.... 28
ಈ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್ ಪೇಸ್ಬುಕ್ ಗಳೇ ಹೀಗೆ... ಆಗಾಗ ಸುಮ್ಮನೆ ಹರಿದಾಡುವ ಸುಳ್ಳು ಸುದ್ದಿಗಳ ಬೇಗೆ. ಇವತ್ತು ಅದ್ಯಾವ ಮಹಾನುಭಾವ ಎಸ್.ಜಾನಕಿಯವರು ತೀರಿಕೊಂಡರು ಎನ್ನುವ ಸುದ್ದಿ ಹಾಕಿದನೋ ಗೊತ್ತಿಲ್ಲ. ಮೂರು ನಿಮಿಷದೊಳಗೆ ಬಹುತೇಕ ಗುಂಪುಗಳಲ್ಲಿ ಅದೇ ಸುದ್ದಿ ವೈರಲ್ ಆಗಿ ಹರಿದಾಡತೊಡಗಿತು. ಓದಿದವರು ಹಿಂದೆ ಮುಂದೆ ಯೋಚನೆ ಮಾಡದೇ ಪಾರ್ವರ್ಡ್ ಮಾಡತೊಡಗಿದರು. ಕೆಲವರು RIP ಗಳ ಮೂಲಕ ಇನ್ನು ಬದುಕಿರುವ ಜಾನಕಮ್ಮನವರನ್ನು ಚಿರನಿದ್ರೆಗೆ ಕಳುಹಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದರು.
ಇದೆಂತಹ ಹುಚ್ಚಾಟ. ನಮ್ಮ ಪಾರ್ವರ್ಡಿಗರಿಗೆ ಸುದ್ದಿ ಅಸಲಿಯೋ ನಕಲಿಯೋ ಎಂದು ಪರಿಶೀಲಿಸುವ ಸಹನೆಯೇ ಇಲ್ಲವಾಗಿದೆ. ಯಾವುದೇ ಸುದ್ದಿ ಯಾವುದೇ ಮೂಲದಿಂದ ಬಂದರೂ ಯಾವಾಗ ಅದನ್ನು ಬೇರೆಯವರಿಗೆ.... ಬೇರೆ ಗ್ರುಪ್ಪುಗಳಿಗೆ ಹಂಚಿಕೊಳ್ಳುತ್ತೇವೋ ಎನ್ನುವ ತಹ ತಹ ನಿಜಕ್ಕೂ ಅತಿರೇಕವೆನಿಸುವಂತಿದೆ. ಯಾಕಿಂತಾ ಆತುರ ಗೊತ್ತಿಲ್ಲ. ಯಾಕೆ ಈ ಪಾರ್ವರ್ಡ್ ಉಮೇದು ತಿಳಿಯುತ್ತಿಲ್ಲ. ಸುಳ್ಳು ಸುದ್ದಿಗಳಂತೂ ಹರಿದಾಡುವುದು ನಿಲ್ಲುತ್ತಿಲ್ಲ. ಈ ಹಿಂದೆ ಅಮಿತಾಬ್ ಬಚ್ಚನ್ ತೀರಿಕೊಂಡರೆಂಬ ಹಸಿ ಹುಸಿ ಸಂಗತಿ ದೇಶಾದ್ಯಂತ ಸುದ್ದಿ ಮಾಡಿತ್ತು. ಅದೇ ರೀತಿ ರಾಜಪಾಲ್ ಯಾದವ್ ಎನ್ನುವ ಹಿಂದಿ ಸಿನೆಮಾ ನಟನ ಸಾವಿನ ಸುದ್ದಿ ದೇಶವಾಸಿಗಳ ಮೊಬೈಲುಗಳಲ್ಲಿ ಹರಿದಾಡಿ ಕೊನೆಗೆ ಅವರ ಮೊಬೈಲಿಗೂ ಪಾರ್ವರ್ಡಾಗಿತ್ತು.
ಮೊನ್ನೆ ಸೆಪ್ಟಂಬರ್ 20 ರಂದು ರಾತ್ರಿ ಹತ್ತರ ಸುಮಾರು 'ಗೋಪಾಲ ವಾಜಪೇಯಿ ಇನ್ನಿಲ್ಲ' ಎನ್ನುವ ಸುದ್ದಿ ವಾಟ್ಸಾಪ್ ಗುಂಪಲ್ಲಿ ಮಿಸುಗಾಡತೊಡಗಿತು. ಈ ಸುದ್ದಿಯೂ ಸಹ ಸುಳ್ಳಾಗಲಿ... ಕ್ರಿಯಾಶೀಲ ಹಿರಿಯ ಜೀವ ಇನ್ನೂ ಒಂದೆರಡು ದಶಕ ನಮ್ಮೊಂದಿಗಿರಲಿ ಎಂದು ಮನಸ್ಸು ಬೇಡಿಕೊಂಡಿತು. ಆದರೆ... ನಾವಂದುಕೊಂಡಂತೆಲ್ಲಾ ಯಾವಾಗಲೂ ಆಗೋದಿಲ್ಲ. ವಾಜಪೇಯಿಯವರ ಅಗಲಿಕೆ ನಂಬಲಾಗಲಿಲ್ಲ. ಸಾವಿನ ಸುದ್ದಿ ಅಸಲಿಯಾಗಿತ್ತು... ಮನದ ತುಂಬಾ ಸೂತಕದ ಛಾಯೆ ತುಂಬಿಕೊಂಡಿತು.
ಪತ್ರಿಕೋದ್ಯಮವನ್ನು ವೃತ್ತಿಯಾಗಿಸಿಕೊಂಡಿದ್ದ ವಾಜಪೇಯಿಯವರು ಕಲೆ, ಸಾಹಿತ್ಯ, ರಂಗಭೂಮಿ, ಸಿನೆಮಾವನ್ನು ಪ್ರವೃತ್ತಿಯಾಗಿ ತೆಗೆದುಕೊಂಡಿದ್ದರು. ರಂಗಭೂಮಿಯಲ್ಲಿ ನಟರಾಗಿ, ನಿರ್ದೇಶಕರಾಗಿ, ನಾಟಕಕಾರರಾಗಿ, ರಂಗಗೀತೆ ರಚನಕಾರರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸಂತ ಶಿಶುನಾಳ ಶರೀಫ, ನಾಗಮಂಡಲ, ಸಿಂಗಾರೆವ್ವ, ಸಂತ್ಯಾಗ ನಿಂತ ಕಬೀರ.. ಹೀಗೆ ಕೆಲವಾರು ಸಿನೆಮಾಗಳಿಗೆ ಹಾಡುಗಳನ್ನು ರಚಿಸಿ ಸಂಭಾಷಣೆಯನ್ನೂ ಬರೆದಿದ್ದರು. ಸಾಹಿತ್ಯಕವಾಗಿ ಕವಿತೆ ಲೇಖನಗಳನ್ನು ಬರೆಯುವ ಜೊತೆಗೆ ಅಂಕಣ ಬರಹಗಳನ್ನೂ ಬರೆದರು. ಇಂತಹ ಬಹುಮುಖಿ ಪ್ರತಿಭೆ ಇಷ್ಟು ಬೇಗ ಅರವತ್ನಾಲ್ಕರ ಹರೆಯದಲ್ಲಿ ಬದುಕಿನ ನೇಪತ್ಯ ಸೇರಬಾರದಿತ್ತು. ಅವರಿಂದ ಇನ್ನೂ ಸೃಜನಶೀಲ ಬರಹವನ್ನು ನಿರೀಕ್ಷಿಸುತಿದ್ದವರಿಗೆ ಹೀಗೆ ನಿರಾಸೆ ಮಾಡಬಾರದಿತ್ತು.
ನಮಗೆ ಒಂಚೂರು ನೆಗಡಿಜ್ವರ ಬಂದರೆ ಸಾಕು ಯಾವ ಕೆಲಸವನ್ನೂ ಮಾಡಲು ಮನಸ್ಸೇ ಬರುವುದಿಲ್ಲ. ಆದರೆ ಗೋಪಾಲ ವಾಜಪೇಯಿ ಅದೆಂತಾ ದೈತ್ಯನೆಂದರೆ ಬರೆಯಲು ಕುಳಿತರೆ ಅನಾರೋಗ್ಯವೆಂಬುದು ಲೆಕ್ಕಕ್ಕೇ ಇರುತ್ತಿರಲಿಲ್ಲ. ಕಳೆದೊಂದು ದಶಕದಿಂದ ಅದ್ಯಾಕೋ ವಾಜಪೇಯಿಯವರ ಆರೋಗ್ಯ ಅವಾಗಾವಾಗ ಕೈಕೊಡುತ್ತಲೇ ಇತ್ತು. ಅಸ್ತಮಾ ಎನ್ನುವ ವಾಸಿಯಾಗದ ಖಾಯಿಲೆ ಹಗಲೂ ರಾತ್ರಿ ಅವರ ಜೀವ ಹಿಂಡುತ್ತಿತ್ತು. ಬಿಪಿ ಶುಗರು ಜೊತೆಗೆ ಕಿಡ್ನಿ ಹಾಗೂ ಹೃದಯದ ಸಮಸ್ಯೆ ಬೇರೆ. ಇಷ್ಟೊಂದು ಅನಾರೋಗ್ಯವನ್ನಿಟ್ಟುಕೊಂಡು, ಖಾಯಿಲೆಗಳ ಜೊತೆ ಸೆನೆಸುತ್ತಲೇ ವಾಜಪೇಯಿಯವರು ಅದು ಹೇಗೆ ಇಷ್ಟೊಂದು ಬರವಣಿಗೆ ಮಾಡಲು ಸಾಧ್ಯವಾಯಿತು ಎನ್ನುವುದೇ ವಿಸ್ಮಯದ ಸಂಗತಿ. ತಮ್ಮ ತೀವ್ರವಾದ ಅಸ್ವಸ್ಥತೆಯ ನಡುವೆಯೇ 'ಸಂತೆಯಲಿ ನಿಂತ ಕಬೀರ' ಚಲನಚಿತ್ರಕ್ಕೆ ಅರ್ಥಗರ್ಭಿತ ಸಂಭಾಷಣೆಯ ಜೊತೆಗೆ ಅನನ್ಯವಾದ ಹಾಡುಗಳನ್ನೂ ರಚಿಸಿದ್ದು ಅವರ ಬದ್ದತೆಗೆ ಸಾಕ್ಷಿಯಾಗಿತ್ತು. ಬೇರೆ ಯಾರೇ ಆಗಿದ್ದರೂ ಅನಾರೋಗ್ಯದ ಆತಂಕದಿಂದಾಗಿ ಬದುಕಲ್ಲಿ ನಿರುತ್ಸಾಹ ಹೊಂದುತ್ತಿದ್ದರು. ಆದರೆ ವಾಜಪೇಯಿಯವರು ಜೀವ ಹಿಂಡುವ ರೋಗಗಳನ್ನು ಹಿಮ್ಮೆಟ್ಟಿಸಿ ಜೀವನೋತ್ಸಾಹದಿಂದ ಆಯುಸ್ಸನ್ನು ವೃದ್ದಿಸಿಕೊಳ್ಳುತ್ತಿದ್ದರು. ಗೋ.ವಾ ರವರ ಇಚ್ಚಾಶಕ್ತಿ ಅನ್ನೋದು ಅಳತೆಗೆ ಮೀರಿದಂತಹುದು. ಇರುವಷ್ಟು ದಿನ ಪತ್ರಿಕೋದ್ಯಮ, ಸಾಹಿತ್ಯ, ರಂಗಭೂಮಿ ಮತ್ತು ಸಿನೆಮಾ ಕ್ಷೇತ್ರಗಳಿಗೆ ತಮ್ಮದೇ ರೀತಿಯಲ್ಲಿ ಕೊಡುಗೆಯನ್ನು ಕೊಟ್ಟು ಬದುಕನ್ನು ಸಾರ್ಥಕಗೊಳಿಸಿದರು. ಸಾವಿನ ನಂತರವೂ ಹಾಡುಗಳ ಮೂಲಕ ಜನರೆದೆಯಲ್ಲಿ ನೆನಪಾಗುಳಿದರು.
ಇಲ್ಲಾ.... ಇನ್ನಷ್ಟು ದಿನ ವಾಜಪೇಯಿಯವರು ಬರೆಯುತ್ತಲೇ ಬದುಕಿರಬೇಕಿತ್ತು. ಆಗಾಗ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳಂತೆ ವಾಜಪೇಯಿಯವರ ಸಾವಿನ ಸುದ್ದಿಯೂ ಹುಸಿಯಾಗಬೇಕಿತ್ತು. ಆದರೇನು ಮಾಡುವುದು ಅನನ್ಯ ಹಾಡುಗಳಿಗೆ ಉಸಿರಾದ ಈ ಹಿರಿಯ ಜೀವದ ಉಸಿರು ಕೊಡಬಾರದ ತೊಂದರೆ ಕೊಟ್ಟು ಕೊನೆಗೆ ನಿಂತಾಗಿತ್ತು. ಹೃದಯವಂತನ ಹೃದಯಬಡಿತ ಬಂದಾಗಿತ್ತು. ಐದು ದಶಕಗಳ ಕಾಲ ನಿರಂತರವಾಗಿ ಬರೆದ ಕೈಬೆರಳುಗಳ ಚಲನೆ ನಿಶ್ಚಲಗೊಂಡಿತ್ತು. ಸೆಪ್ಟಂಬರ್ 22 ರಂದು ಗೋಪಾಲ ವಾಜಪೇಯಿಯವರ ಪಾರ್ಥೀವ ಶರೀರ ಪಂಚಭೂತಗಳಲ್ಲಿ ಲೀನವಾಯಿತು....
ಒಂದು ಬೇಸರದ ಸಂಗತಿ ಏನೆಂದರೆ. ರಂಗಭೂಮಿಗೆ ಕೊಡುಗೆ ಕೊಟ್ಟವರು ತೀರಿಕೊಂಡರೆ ಅವರ ಪಾರ್ಥೀವ ಶರೀರವನ್ನು ರವೀಂದ್ರ ಕಲಾಕ್ಷೇತ್ರದ ಹಿಂದಿರುವ ಸಂಸ ಬಯಲು ರಂಗಮಂದಿರಕ್ಕೆ ತಂದು ಕಲಾವಿದರುಗಳಿಗೆ ಅಂತಿಮ ದರ್ಶನ ಮಾಡುವ ಅವಕಾಶ ಮಾಡಿಕೊಡಲಾಗುತ್ತದೆ. ರಂಗಕರ್ಮಿಯೊಬ್ಬರಿಗೆ ರಂಗಭೂಮಿಯವರು ಸಲ್ಲಿಸುವ ಅಂತಿಮ ರಂಗನಮನ ಇದಾಗಿದೆ. ರಂಗಗೀತೆಗಳನ್ನು ಹಾಡುವ ಮೂಲಕ ವಿದಾಯ ಹೇಳಲಾಗುತ್ತದೆ. ಆದರೆ ಆ ಭಾಗ್ಯ ಗೋಪಾಲ ವಾಜಪೇಯರವರಿಗೆ ಇಲ್ಲದೇ ಹೋಗಿದ್ದೊಂದು ವಿಪರ್ಯಾಸ. ರಂಗಭೂಮಿಯಲ್ಲಿ ಹೆಸರು ಮಾಡಿದವರು... ಪ್ರಭಾವಿಗಳು ತೀರಿಕೊಂಡಾಗ ಓಡಾಡಿ 'ಸಂಸ' ದಲ್ಲಿ ಅಂತಿಮ ನಮನ ಕಾರ್ಯಕ್ರಮಗಳನ್ನು ಆಯೋಜಿಸುವ ಕಪ್ಪಣ್ಣ, ನಾಗರಾಜಮೂರ್ತಿಯಂತಹ ರಂಗಸಂಘಟಕರು ವಾಜಪೇಯಿಯವರನ್ನು ಯಾಕೆ ಮರೆತರು. ಉತ್ತರ ಕರ್ನಾಟಕದವರೆಂಬ ನಿರ್ಲಕ್ಷವೋ ಇಲ್ಲಾ ಪ್ರಸ್ತುತವಾಗಿ ರಂಗಭೂಮಿಯಲ್ಲಿ ತೊಡಗಿಕೊಂಡಿಲ್ಲ ಎನ್ನುವ ಉಪೇಕ್ಷೆಯೋ...? ಗೊತ್ತಿಲ್ಲ. ಯಾವ ರಂಗ ಸಂಘಟಕರೂ ಮುಂದೆ ಬಂದು ವಾಜಪೇಯಿಯವರ ಅಂತಿಮ ನಮನಕ್ಕೆ 'ಸಂಸ' ದಲ್ಲಿ ಅವಕಾಶ ಮಾಡಿಕೊಡಲಿಲ್ಲ. ಹೀಗಾಗಿ ಅದೆಷ್ಟೋ ಕಲಾವಿದರುಗಳಿಗೆ ವಾಜಪೇಯಿಯವರ ಅಂತಿಮ ದರ್ಶನ ಭಾಗ್ಯ ಸಿಗದೇ ಹೋಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಾದರೂ ಈ ಕೆಲಸ ಮಾಡಬಹುದಿತ್ತು. ಅಲ್ಲಿರುವ ಅಧಿಕಾರಿಗಳನೇಕರಿಗೆ ವಾಜಪೇಯಿಯವರ ಬಗ್ಗೆ ಗೊತ್ತಿರುವುದೇ ಅನುಮಾನ. ಇನ್ನು ಅಂತಿಮ ರಂಗಗೌರವಕ್ಕೆ ಸಿದ್ದಗೊಳಿಸುವ ಹೊಣೆಗಾರಿಕೆ ನಾಟಕ ಅಕಾಡೆಮಿಯದಾಗಿತ್ತು. ಯಾಕೆಂದರೆ ವಾಜಪೇಯಿಯವರು ಮೂರು ವರ್ಷಗಳ ಕಾಲ ಈ ಅಕಾಡೆಮಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಆದರೆ ಅಕಾಡೆಮಿಯೇ ನಿರ್ಜೀವವಾಗಿರುವಾಗ ಅರೆಸತ್ತ ಅಧ್ಯಕ್ಷ ಸದಸ್ಯರುಗಳಿಂದ ಇಂತದ್ದನ್ನೆಲ್ಲಾ ನಿರೀಕ್ಷಿಸುವುದೇ ವ್ಯರ್ಥ. ಹೀಗಾಗಿ ಕೆಲವೇ ಕೆಲವು ವಾಜಪೇಯಿಯವರ ಆತ್ಮೀಯರು ಅವರ ಮನೆಗೆ ಹೋಗಿ ಅಂತಿಮ ನಮನ ಸಲ್ಲಿಸಿದರು. ಬಹುತೇಕ ರಂಗಕರ್ಮಿ ಕಲಾವಿದರುಗಳು ವಾಜಪೇಯಿಯವರ ಅಂತಿಮ ದರ್ಶನ ಮಾಡುವುದರಿಂದ ವಂಚಿತರಾದರು.
ಏನಾದರಾಗಲಿ.... ಗೋಪಾಲ ವಾಜಪೇಯಿಯವರು ತಮ್ಮ ಅಸಾಧಾರಣ ಹಾಡುಗಳಿಂದಾಗಿ ಜನಮನದಲ್ಲಿ ಉಳಿದಿದ್ದಾರೆ. ಆ ಹಾಡುಗಳು ಇರುವಷ್ಟೂ ಕಾಲ ಅವರು ಪದವಾಗಿ ರಾಗವಾಗಿ ಬದುಕಿರುತ್ತಾರೆ.
ವಾಜಪೇಯಿಯವರು ನಾಗಮಂಡಲ ನಾಟಕ ಹಾಗೂ ಸಿನೆಮಾಕ್ಕೆ ಬರೆದ ಜನಪ್ರೀಯ ಹಾಡೊಂದನು ಇಲ್ಲಿ ಕೊಡುವ ಮೂಲಕ ಅವರಿಗೆ ಎಲ್ಲಾ ರಂಗಕರ್ಮಿ ಕಲಾವಿದರ ಪರವಾಗಿ ರಂಗನಮನ ಸಲ್ಲಿಸುವೆ....
ಕಂಬದಾ ಮ್ಯಾಲಿನಾ ಗೊಂಬೆಯೇ
ನಂಬಲೇನಾ ನಿನ್ನಾ ನಗೆಯನ್ನಾ..
ಭಿತ್ತಿಯ ಮ್ಯಾಲಿನ ಚಿತ್ತಾರವೇ
ಚಿತ್ತಗೊಟ್ಟು ಹೇಳ ಉತ್ತಾರವಾ...
ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ
ಮಬ್ಬು ಹರಿಯುವುದೇನಾ, ಹಬ್ಬವಾಗುವುದೇನಾ || ೧ ||
ನೀರೊಲೆಯ ನಿಗಿಕೆಂಡ ಸತ್ಯವೇ
ಈ ಅಭ್ಯಂಜನವಿನ್ನು ನಿತ್ಯವೇ?!
ಒಳ್ಳೆ ಗಮಗುಡುತಿಯಲ್ಲೆ ಸೀಗೆಯೇ
ನಿನ್ನ ವಾಸನೆ ಹರಡಿರಲಿ ಹೀಗೆಯೇ
ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ
ಮಬ್ಬು ಹರಿಯುವುದೇನಾ ಹಬ್ಬವಾಗುವುದೇನಾ || ೨ ||
ಒಪ್ಪಿಸುವೆ ಹೂ ಹಣ್ಣು ಭಗವಂತ
ನೆಪ್ಪೀಲೇ ಹರಸು ನಗಿ ಇರಲಂತ
ಕರ್ಪುರವ ಬೆಳಗೂವೆ ದೇವನೆ
ತಪ್ಪದೇ ಬರಲೆನ್ನ ಗುಣವಂತ
ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ
ಮಬ್ಬುಹರಿಯುವುದೇನಾ ಹಬ್ಬವಾಗುವುದೇನಾ || ೩ ||
- ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ