ಶನಿವಾರ, ಅಕ್ಟೋಬರ್ 15, 2016

ತಹ ತಹ ..... 23 ದ್ವೇಷ ಬಿಟ್ಟು - ನಾಡು ಕಟ್ಟು...; ಸ್ಪಂದನೆ ಇರಲಿ- ನಿಂದನೆ ತೊಲಗಲಿ:

ತಹ ತಹ ..... 23


ಬಹುತೇಕ ಕನ್ನಡಿಗರ ಕಣ್ಣಲ್ಲಿ ಯಾರಾದರು ಸಾರ್ವತ್ರಿಕ ಶತ್ರುಗಳಿದ್ದರೆ ಅದು ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾರವರೇ ಎನ್ನುವುದು ನಿರ್ವಿವಾದ. ಕನ್ನಡಿಗರ ಪಾಲಿನ ನೀರನ್ನು ಕಿತ್ತುಕೊಂಡ ರಕ್ಕಸಿಯಾಗಿ, ಕರ್ನಾಟಕದ ನೆಮ್ಮದಿ ಕೆಡಿಸಲು ಬೆನ್ನಿಗೆ ಬಿದ್ದ ಬೂತವಾಗಿ ಕಾಣುತ್ತಿದ್ದಾರೆ. ಒಂದು ಕಾಲದಲ್ಲಿ ಕನ್ನಡ ತಮಿಳು ಚಲನಚಿತ್ರಗಳಲ್ಲಿ ನಾಯಕಿಯಾಗಿ ಜನಮನ ಸೂರೆಗೊಂಡ ಜಯಮ್ಮ ಈಗ ಕರ್ನಾಟಕದ ಬಹುತೇಕರ ಕಣ್ಣಲ್ಲಿ ಖಳನಾಯಕಿಯಾಗಿದ್ದೊಂದು ವಿಪರ್ಯಾಸ. ಕೆಲವು ಕನ್ನಡಪರ ಸಂಘಟನೆಯ ನಾಯಕರಂತೂ ಇಲ್ಲಸಲ್ಲದ ರೀತಿಯಲ್ಲಿ ಜಯಮ್ಮನವರನ್ನು ವಾಚಾಮಗೋಚರವಾಗಿ ಸಾರ್ವಜನಿಕವಾಗಿಯೇ ನಿಂದಿಸಿ ತಮ್ಮ ಆಕ್ರೋಶವನ್ನು ಅವಕಾಶ ಸಿಕ್ಕಾಗಲೆಲ್ಲಾ ಕಾರಿಕೊಳ್ಳುತ್ತಿದ್ದಾರೆ. ಇನ್ನು ಕೆಲವು ವಿದ್ಯಾವಂತರು ಇಂಟರನೆಟ್ ಜಾಲತಾಣಗಳಲ್ಲಿ ಬೈಗುಳಗಳೇ ನಾಚಿಕೊಳ್ಳುವಂತಹ ಭಾಷೆಯಲ್ಲಿ ಅಕ್ಷರ ಹಾದರಕ್ಕಿಳಿದು ತಮ್ಮ ಕನ್ನಡಾಭಿಮಾನವನ್ನು ಮೆರೆದು ಪಾವನರಾಗಿದ್ದಾರೆ. ಪೋಟೋಶಾಪ್ ಪರಿಣಿತಿ ಪಡೆದ ಪಂಡಿತರುಗಳು ಜಯಲಲಿತಾರವರ ಕುರಿತು ಚಿತ್ರವಿಚಿತ್ರ ರೀತಿಯಲ್ಲಿ ವಿಕೃತ ಚಿತ್ರಗಳನ್ನು ಕೊಲ್ಯಾಜ್ ಮಾಡಿ ತಮ್ಮ ಮನೋವಿಕ್ಷಿಪ್ತತೆಯ ಕ್ರಿಯಾಶೀಲತೆ ತೋರಿಸಿ ಕೃತಾರ್ಥರಾಗಿದ್ದಾರೆ. 

ಇಷ್ಟೆಲ್ಲಾ ನಿಂದನೆಗೆ, ದ್ವೇಷಕ್ಕೆ ಜಯಲಲಿತಾ ನಿಜವಾಗಿಯೂ ಅರ್ಹರೇ? ಮಹಿಳೆಯಾಗಿದ್ದಕ್ಕೆ ಕನ್ನಡಿಗರ ದ್ವೇಷಾಗ್ನಿ ಇಷ್ಟೊಂದು ಉಲ್ಬನಗೊಂಡಿದೆಯೆ? ಜಯಲಲಿತಾರನ್ನು ಬೀದಿಬೀದಿಗಳಲ್ಲಿ, ಸಾರ್ವಜನಿಕ ಸಭೆಗಳಲ್ಲಿ, ಜಾಲತಾಣಗಳಲ್ಲಿ ಅಣಕಿಸಿ ನಿಂದಿಸುವವರಲ್ಲಿ ಪುರುಷರೇ ಹೆಚ್ಚಾಗಿರುವುದನ್ನು ನೋಡಬಹುದು. ಕಾವೇರಿಯ ಹಾಗೆಯೇ ಮಹದಾಯಿ ನದಿ ನೀರಿನ ಹಂಚಿಕೆ ವಿವಾದ ಬೇಕಾದಷ್ಟು ಉಲ್ಬಣಗೊಂಡಿದೆ. ಧರಣಿ ಹರತಾಳ ಬಂದ್ ಗಳಾಗಿವೆ. ಆದರೆ ತಮಿಳುನಾಡಿನ ಮುಖ್ಯಮಂತ್ರಿ ವಿರುದ್ದ ಮಾಡಲಾದಂತ ವ್ಯಯಕ್ತಿಕ ನಿಂದನೆ ಹಾಗೂ ಅಸಹ್ಯಕರ ಭಾಷಾ ಬಳಕೆ ಗೋವಾದ ಮುಖ್ಯಮಂತ್ರಿಯ ಮೇಲೆ ಮಾಡಲಿಲ್ಲ. ಯಾಕೆಂದರೆ ಆತ ಪುರುಷನಾಗಿದ್ದೂ ಕಾರಣವಾದಂತಿದೆ. ಅನಾದಿಕಾಲದಿಂದಲೂ ಮಹಿಳೆಯರನ್ನು ಅವಮಾನಿಸಬೇಕಾದರೆ ಪುರುಷ ಪ್ರಧಾನ ವ್ಯವಸ್ಥೆ ಅವಳ ಚಾರಿತ್ರ್ಯಭಂಗಕ್ಕೆ ಮೊದಲು ಪ್ರಯತ್ನಿಸುತ್ತದೆ. ಇಂದಿರಾಗಾಂಧಿಯಿಂದ ಸೋನಿಯಾ ಗಾಂಧಿಯವರೆಗೂ ಕಾಲಕಾಲಕ್ಕೆ ವಿಕ್ಷಿಪ್ತ ಮನೋವ್ಯಾಧಿ ಪೀಡಿತರಿಂದ ಚಾರಿತ್ರ್ಯ ಹರಣದ  ನಿಂದನೆಗೆ ಬಲಿಯಾಗಿದ್ದಾರೆ. ಮಹಿಳೆಯ ಶೀಲವನ್ನು ಶಂಕಿಸಿ ನಿಂದಿಸಿ ಅವಮಾನಿಸುವುದು ನಮ್ಮ ಸನಾತನ ಸಂಸ್ಕೃತಿಯ ಭಾಗವೇ ಆಗಿದೆ. 

ಈಗಲೂ ಜಯಲಲಿತಾರ ಮೇಲೆ  ರಾಜಕೀಯ ಆರೋಪಗಳಿಗಿಂತಲೂ ವ್ಯಯಕ್ತಿಕ ನಿಂದನೆಗಳೇ ಅತಿಯಾಗಿವೆ. ಕನ್ನಡಿಗರು ಸಹೃದಯರು, ಸಹನಶೀಲರು ಎಂದೆಲ್ಲಾ ಕರೆದುಕೊಳ್ಳುವಂತವರೇ ತಮ್ಮ ಹಿತಾಸಕ್ತಿಗೆ ವಿರುದ್ದವಾಗಿರುವ ಮಹಿಳೆಯನ್ನು ವ್ಯಯಕ್ತಿಕವಾಗಿ ನೀಚ ಪದಗಳಿಂದ ನಿಂದಿಸುತ್ತಿರುವುದು ಕನ್ನಡಿಗರ ಸಂಸ್ಕೃತಿಗೆ ಅವಮಾನಕಾರಿಯಾಗಿದೆ. "ಇದೇನಾ ಸಂಸ್ಕೃತಿ... ಇದೇನಾ ಸಭ್ಯತೆ" ಎಂದು ಮಾನವಂತರು ಕೇಳುವಂತಾಗಿದೆ. 

ಜಯಲಲಿತಾರವರ ಮೇಲೆ ರಾಜಕೀಯ ಹಗೆತನವಿದ್ದರೆ ಅದನ್ನು ರಾಜಕೀಯವಾಗಿಯೇ ವಿರೋಧಿಸಬೇಕೆ ಹೊರತು ಕೀಳು ಭಾಷೆಯ ನಿಂದನಾ ಪ್ರಯೋಗದಿಂದಲ್ಲ. ಜಯಲಲಿತಾ ಮೇಲಿನ ಆಕ್ರೋಶ ನಮ್ಮ ಕೆಲವು ವಿಕೃತ ಮನಸ್ಸಿನ ಪುರುಷ ಪುಂಗವರಲ್ಲಿ ಯಾವ ರೀತಿಯ ವಿಕಾರತೆ ಸೃಷ್ಟಿಸಿದೆ ಅನ್ನುವುದಕ್ಕೆ ಜಯಲಲಿತಾ ಅಕ್ರಮ ಸಂತಾನ ಎನ್ನುವಂತೆ ಕಥೆಕಟ್ಟಿ ಜಾಲತಾಣಗಳಲ್ಲಿ ಪ್ರಚಾರಮಾಡುತ್ತಿದ್ದಾರೆ.

"ಜಯಲಲಿತಾಳ ತಾಯಿ ಸಂಧ್ಯಾ ಮೈಸೂರು ಅರಮನೆಯಲ್ಲಿ ರಾಜನರ್ತಕಿಯಾಗಿದ್ದಳು. ಕೊನೆಯ ಅರಸ ಜಯಚಾಮರಾಜ ಒಡೆಯರ್ ರವರ ಅಕ್ರಮ ಸಂಬಂಧದಿಂದ ಹುಟ್ಟಿದವರೇ ಜಯಲಲಿತಾ. ತಂದೆಯ ಹೆಸರಿನ ಭಾಗ ಜಯ, ಲಲಿತ್ ಮಹಲ್ (ಪ್ಯಾಲೇಸ್ ) ಹೆಸರು ಲಲಿತಾ ಸೇರಿ ಇಟ್ಟ ಹೆಸರೇ ಜಯಲಲಿತಾ. ಸಂಧ್ಯಾ ಬಹಳಷ್ಟು ಹೋರಾಟ ಮಾಡಿ ಅಪಾರ ಸಂಪತ್ತನ್ನು ಜಯಚಾಮರಾಜರಿಂದ ಪಡೆದರೂ ಸಮಾಧಾನವಿಲ್ಲದೇ ಹೋಗುತ್ತಾಳೆ. ಮೈಸೂರು ರಾಜಮನೆತನದ ಆಭರಣಗಳು ಜಯಲಲಿತಾಳ ಮನೆಯಲ್ಲಿ ತೆರಿಗೆ ಅಧಿಕಾರಿಗಳು ರೇಡ್ ಮಾಡಿದಾಗ ಸಿಕ್ಕಿದ್ದು ಇಲ್ಲಿ ಗಮನಿಸಬೇಕಾದ ಅಂಶ. ಇದೇ ಸೇಡು ಇಟ್ಟುಕೊಂಡು ಕರ್ನಾಟಕಕ್ಕೆ ತರಹ ಸೇಡು ತೀರಿಸಿ ಕೊಳ್ಳತ್ತಿದ್ದಾಳೆ ಜಯಲಲಿತಾ.‌‌‌

ಜಯಲಲಿತಾಗೆ ಜಯಚಾಮರಾಜರ ಮುಖಹೋಲಿಕೆ ಇದೆ. ಈಗ ಬೆಳೆದ ಜಯಾಳ ದಡೂತಿ ದೇಹರಚನೆ ಶ್ರೀಕಂಠದತ್ತ ಒಡಯರ್ ದೇಹರಚನೆಗೂ ಹೋಲಿಕೆಯಿದೆ ಪರಿಶೀಲಿಸಿ ನೋಡಿ.." ಎನ್ನುವ ವಿಕೃತ ಸಂಗತಿಯನ್ನು ಅದ್ಯಾರೋ ಬ್ರಹಸ್ಪತಿ ಸೃಷ್ಟಿಸಿ ಜಾಲತಾಣದಲ್ಲಿ ಹರಿಬಿಟ್ಟ. ಕನ್ನಡಿಗ ಪುರುಷ ಪುಂಗವರೆಲ್ಲಾ ಸಂಗತಿಯನ್ನು ಹಿಂದೆ ಮುಂದೆ ಯೋಚಿಸದೇ ನಂಬಿ ವಾಟ್ಸಾಪು ಪೇಸ್ಬುಕ್ಕಗಳಲ್ಲಿ ಹಂಚಿಕೊಂಡು ಥ್ರಿಲ್ ಅನುಭವಿಸಿದರು. ಫೊಸ್ಟ್ ಸೃಷ್ಟಿಸಿದ ಬೇನಾಮಿ ವ್ಯಕ್ತಿ ಹಾಗೂ ಅದನ್ನು ಜಗಕೆ ಹಂಚಿದ ಹಾಗೂ ಹಂಚುತ್ತಿರುವವರು ಅದ್ಯಾವಾಗ ಹೋಗಿ ಜಯಮ್ಮನ ಡಿ ಎನ್ ಚೆಕ್ ಮಾಡಿಸಿದ್ದರೋ ಗೊತ್ತಿಲ್ಲ. ದಪ್ಪಗೆ ಗುಂಡಗೆ ಇದ್ದ ಹೆಂಗಸರೆಲ್ಲಾ ಮಹಾರಾಜರಿಗೆ ಹುಟ್ಟಿದವರು ಎಂದುಕೊಂಡರೆ ಅದಕ್ಕಿಂತ ಭೌದ್ದಿಕ ದಿವಾಳಿತನ ಇನ್ನೊಂದಿಲ್ಲ. ರೀತಿಯ ವ್ಯಯಕ್ತಿಕ ಶೀಲಶಂಕಿತ ನಿಂದನೆ ಜಯಲಲಿತಾರವರಿಗೆ ಮಾತ್ರವಲ್ಲ ಮಹಿಳಾ ಕುಲಕ್ಕೆ ಮಾಡುವ ಅವಮಾನವಾಗಿದೆ. 

ಜಯಲಲಿತಾ ತಾಯಿ ಯಾರ ಜೊತೆ ಇದ್ದಳು. ಯಾರ ಅಕ್ರಮ ಸಂಬಂಧಕ್ಕೆ ಜಯಲಲಿತಾ ಹುಟ್ಟಿದಳು, ಯಾರ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು ಎನ್ನುವುದಕ್ಕೂ ಕಾವೇರಿ ನೀರಿನ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ. ನಿಂದಕರು ಹೇಳಿದಂತೆ ಜಯಲಲಿತಾ ಆಗಲಿ ಇಲ್ಲವೇ ಅವರ ತಾಯಿಯೇ ಆಗಲಿ ಯಾರ ಜೊತೆ ಇರಬೇಕು ಯಾರ ಜೊತೆ ಇರಬಾರದು ಎನ್ನುವುದು ಅವರ ಖಾಸಗಿ ವಿಷಯ. ಅದನ್ನೇ ವೈಭವೀಕರಿಸಿ ನಿಂದಿಸುವುದು ಪುರುಷರ ವಿಕೃತ ಮನೋವಿಕಾರವಾಗಿದೆ. ಮೈಸೂರಿನ ಮಹಾರಾಜರು ಅಷ್ಟೇ ಯಾಕೆ, ಜೆ.ಹೆಚ್.ಪಟೇಲ್, ಗುಂಡುರಾವ್ ರವರಂತಹ ಹಲವಾರು ಮುಖ್ಯಮಂತ್ರಿಗಳು ಅಧಿಕಾರದಲ್ಲಿದ್ದಾಗಲೇ ಮಾಡಿದ ಪಲ್ಲಂಗ ಪುರಾಣಗಳು ನಮಗೆ ರಸಿಕತೆಯ ಸಂಕೇತವಾಗಿ... ಪುರುಷತ್ವದ ಪ್ರತೀಕವಾಗಿ ಕಾಣಿಸುತ್ತದೆ. ಎಂದಾದರೂ ಯಾರಾದರೂ ಶೀಲಗೆಟ್ಟವರು.. ನೀತಿಗೆಟ್ಟವರು ಎಂದು ರಸಿಕ ಪುರುಷರನ್ನು ಸಾರ್ವಜನಿಕವಾಗಿ ನಿಂದಿಸಿದ್ದಾರಾಅದೇ ಕೆಲಸವನ್ನು ಮಹಿಳೆ ಮಾಡಿರಲಿ ಬಿಡಲಿ ಅದು ಬಹು ದೊಡ್ಡ  ಅಕ್ಷಮ್ಯ ಅಪರಾಧವಾಗುತ್ತದೆ. ಭಲೇ ಭಲೇ ಪುರುಷ ವ್ಯವಸ್ಥೆಯೇ! ಗಂಡು ಹೆಣ್ಣಿನ ಸಂಬಂಧ ಎಲ್ಲಿವರೆಗೂ ಬಲವಂತವಾಗದೆ ಪರಸ್ಪರ ಒಪ್ಪಿಗೆಯ ಮೇಲೆ ಮುಂದುವರೆಯುತ್ತದೆಯೋ ಅದು ಅಕ್ರಮ ಹೇಗಾಗುತ್ತದೆ. ಅಕ್ರಮ ಎನ್ನುವುದೇ ಆದರೆ ಆರೋಪಕ್ಕೆ ಭಾಗಿಯಾದ ಗಂಡು ಹೆಣ್ಣು ಇಬ್ಬರೂ ಸಮಾನ ಭಾಗ್ಯಸ್ಥರಲ್ಲವೇ? ಸ್ತುತಿ ನಿಂದನೆ ಇಬ್ಬರಿಗೂ ಸಮಾನವಾಗಿರಬೇಕಲ್ಲವೆ? ಜಯಲಲಿತಾರವರ ತಾಯಿ ಹಾದರ ಮಾಡಿದರು ಎಂದರೆ.. ಮೈಸೂರು ಮಹಾರಾಜರು ಇನ್ನೇನು ಮಾಡಿದರು...? ಮಾಡೋದೆಲ್ಲಾ ಗಂಡೇ ಆದರೂ ಕೆಟ್ಟ ಹೆಸರು ಮಾತ್ರ ಹೆಣ್ಣಿಗೆ.. ಇದೆಂತಾ ನ್ಯಾಯ? 

ಇಷ್ಟಕ್ಕೂ ಕನ್ನಡದ ಪುರುಷ ಸಿಂಹಗಳು  ಜಯಲಲಿತಾ ಮೇಲೆ ಇಷ್ಟೊಂದು ದ್ವೇಷ ಕಾರಲು ಆಕೆ ಮಾಡಿದ ಘನ ಘೋರ ಅಪರಾಧವಾದರೂ ಏನು? ಕರ್ನಾಟಕದ ಮೇಲೆ ದಂಡೆತ್ತಿ ಬಂದು ದಾಳಿ ಮಾಡಿದ್ದಾಳಾ? ಇಲ್ಲವೇ ಕನ್ನಡಿಗರ ಭಾಷೆ ಸಂಸ್ಕೃತಿಗೆ ಅವಹೇಳನ ಆಗುವ ಹಾಗೆ ನಿಂದಿಸಿದ್ದಾರಾಒಂದು ರಾಜ್ಯದ ಜನತೆಯ ಪ್ರತಿನಿಧಿಯಾಗಿ ಜನರ ಹಿತಾಸಕ್ತಿಯನ್ನು ಕಾಪಾಡಬೇಕಾದದ್ದು ನಾಡಿನ ಮುಖ್ಯಮಂತ್ರಿಯಾದವರ ಹೊಣೆಗಾರಿಕೆ ಹಾಗೂ ಕರ್ತವ್ಯವಾಗಿದೆ. ತಮಿಳುನಾಡಿನ ಮುಖ್ಯಮಂತ್ರಿಣಿಯಾಗಿ ತಮಿಳರ ಪರವಾಗಿ ತಮ್ಮ ಕರ್ತವ್ಯವನ್ನು ನಿಷ್ಟೆ ಹಾಗೂ ಬದ್ದತೆಯಿಂದ ಮಾಡುತ್ತಿದ್ದಾರೆ. 'ತಮ್ಮ ರಾಜ್ಯದ ರೈತರಿಗೆ ನೀರು ಬೇಕು... ಕೋರ್ಟ್ ಆದೇಶದಂತೆ ನೀರು ಬಿಡಿ' ಎಂದು ತಮ್ಮ ನಾಡಿನ ರೈತರ ಪರವಾಗಿ ಹಕ್ಕು ಮಂಡಿಸುತ್ತಿದ್ದಾರೆ. ಇದರಲ್ಲೇನಿದೆ ತಪ್ಪು? ತನಗೆ ಅಧಿಕಾರ ಕೊಟ್ಟ ಜನತೆಯ ಹಿತಾಸಕ್ತಿಗಾಗಿ ಬದ್ದವಾಗಿರುವ ಮುಖ್ಯಮಂತ್ರಿಯನ್ನು ನಿಜವಾಗಿಯೂ ಭಾಷಾತೀತವಾಗಿ ಅಭಿನಂದಿಸಬೇಕೆ ಹೊರತು ನಿಂದಿಸಬಾರದು. ನಮ್ಮ ರಾಜ್ಯದ ಜನತೆಯ ಹಕ್ಕನ್ನು ಶತಾಯ ಗತಾಯ ಪ್ರತಿಪಾದಿಸಿ ಪಡೆಯುವ ನಾಯಕರು ಕರ್ನಾಟಕದಲ್ಲಿಲ್ಲವಲ್ಲಾ ಎಂದು ಕನ್ನಡಿಗರಾದ ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕುಯಾರಿಗೆ ಬಹುಸಂಖ್ಯಾತ ಕನ್ನಡಿಗರು ತಮ್ಮ ನಾಡಿನ ಹಿತವನ್ನು ಕಾಪಾಡಲು ಅಧಿಕಾರ ಕೊಟ್ಟಿದ್ದೇವೋ ಅಂತವರು ಹೈಕಮಾಂಡ್ ಜೀತದಾಳಾಗಿ ಕನ್ನಡಿಗರ ಹಿತಾಸಕ್ತಿಯನ್ನು ನಿರ್ಲಕ್ಷಿಸಿದ್ದನ್ನು ಮೊದಲು ಪ್ರಶ್ನಿಸಬೇಕೆ ಹೊರತು ನ್ಯಾಯಾಲಯದ ಆದೇಶದಂತೆ ತಮ್ಮ ಹಕ್ಕಿನ ಪಾಲನ್ನು ಅಧೀಕೃತವಾಗಿಯೇ ಪಡೆಯುತ್ತಿರುವ ಪರರಾಜ್ಯದವರನ್ನಲ್ಲ. ನಮ್ಮ ಮನೆಯ ಯಜಮಾನಿಕೆಯನ್ನು ಅಯೋಗ್ಯರಿಗೆ ಕೊಟ್ಟು ಬೇರೆ ಮನೆಯವರನ್ನು ನಿಂದಿಸುತ್ತಾ ಕೂರುವುದು ಸಮಂಜಸವಲ್ಲ. 

ತಮಿಳುನಾಡಿನ ಜನರಿಗೆ ಚೆನ್ನಾಗಿ ಗೊತ್ತಿದೆ. ರಾಷ್ಟ್ರಿಯ ಪಕ್ಷಗಳು ತಮ್ಮ ನಾಡಿನ ಹಿತವನ್ನೆಂದೂ ಕಾಪಾಡಲು ಸಾಧ್ಯವಿಲ್ಲವೆಂದು. ಅದಕ್ಕೆ ಪ್ರಾದೇಶಿಕ ಪಕ್ಷಗಳನ್ನೇ ಆಯ್ಕೆ ಮಾಡಿ ತಮ್ಮ ನಾಡು ನುಡಿಗಾಗಿ ಶ್ರಮಿಸುವವರಿಗೆ ತಮಿಳಿಗರು ಅಧಿಕಾರ ಕೊಡುವುದು. ಇದು ತಂದೆ ಪರೆಯಾರ್ ರವರು ಬೆಳೆಸಿದ ರಾಜಕೀಯ ಪ್ರಜ್ಞೆ ಮತ್ತು ಸ್ವಾಭಿಮಾನದ ಪ್ರತೀಕವಾಗಿದೆ. ಆದರೆ ಕರ್ನಾಟಕದಲ್ಲಿ ಪರಿಸ್ಥಿತಿ ತದ್ವಿರುದ್ದವಾಗಿದೆ. ಇಲ್ಲಿ ಪ್ರಾದೇಶಿಕತೆಯ ಸ್ವಾಭಿಮಾನವೇ ಇಲ್ಲವಾಗಿದೆ. ತಮಿಳುನಾಡಿಗೆ ತೊಂದರೆಯಾದರೆ ಎಲ್ಲಾ ತಮಿಳು ಎಂಪಿಗಳು ಒಂದಾಗಿ ಕೇಂದ್ರ ಸರಕಾರವನ್ನೇ ಬ್ಲಾಕ್ಮೇಲ್ ಮಾಡಿ ತಮ್ಮ ನಾಡಿನ ಹಿತ ಕಾಪಾಡಿಕೊಳ್ಳುತ್ತಾರೆ. ಆದರೆ ಕಾವೇರಿ ನೀರಿನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಇಷ್ಟೊಂದು ಅನ್ಯಾಯವಾದರೂ ಅದೆಷ್ಟು ಎಂಪಿಗಳು ರಾಜೀನಾಮೆ ಕೊಟ್ಟರುಕೇಂದ್ರ ಸರಕಾರದ ಮೇಲೆ ಒತ್ತಡ ತಂದರು? ಯಾರೂ ಇಲ್ಲ. ಇತ್ತ ರೈತರು.. ಕನ್ನಡ ಸಂಘಟನೆಗಳು ಧರಣಿ ಬಂದ್ ಸತ್ಯಾಗ್ರಹ ಮಾಡುತ್ತಿರುವಾಗ ಅದೆಷ್ಟು ಜನ ಜನಪ್ರತಿನಿಧಿಗಳು ಹೋರಾಟ ಬೆಂಬಲಿಸಿ ರಾಜೀನಾಮೆ ಕೊಟ್ಟರು? ಯಾರೊಬ್ಬರೂ ಇಲ್ಲ. ರಾಜ್ಯದ ನೆಲ ಜಲ ಜನರ ಹಿತಾಸಕ್ತಿಗಿಂತ ಅಧಿಕಾರವೇ ದೊಡ್ಡದೆನ್ನುವ ಇಂತಹ ಜನಪ್ರತಿನಿಧಿಗಳನ್ನು ಓಟು ಕೊಟ್ಟು ಆಯ್ಕೆ ಮಾಡಿ ವಿಧಾನಸಭೆ ಹಾಗೂ ಸಂಸತ್ತಿಗೆ ಕಳುಹಿಸಿದ್ದಕ್ಕೆ ನಮಗೆ ನಾಚಿಕೆಯಾಗಬೇಕು ಹಾಗೂ ಸ್ವಾಭಿಮಾನಿ ತಮಿಳರ ಆಯ್ಕೆಯ ಬಗ್ಗೆ ಹೆಮ್ಮೆಪಡಬೇಕು. 

ಕಾವೇರಿ ನೀರಿನ ಹಂಚಿಕೆ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಇದಕ್ಕೆ ಜಯಲಲಿತಾ ಒಬ್ಬರೇ ಕಾರಣವಲ್ಲ. ಯಾಕೆಂದರೆ ಅವರನ್ನು ಓಟು ಹಾಕಿ ಸಿಎಂ ಮಾಡಿದ್ದು ಕನ್ನಡಿಗರಲ್ಲಾ ತಮಿಳರು. ಕನ್ನಡಿಗರಾದ ನಾವು ಯಾರನ್ನು ಓಟಿನ ಮೂಲಕ ಅಧಿಕಾರ ಕೊಟ್ಟು ರಾಜ್ಯದ ಹೊಣೆಗಾರಿಕೆಯನ್ನು ಕೊಟ್ಟಿದ್ದೇವೆಯೋ ಹಾಗೂ ರಾಜ್ಯದ ಹಿತ ಕಾಪಾಡುತ್ತಾರೆಂದು ನಂಬಿ ಯಾರನ್ನು ಅಸೆಂಬ್ಲಿಗೆ ಎಂಪಿಯಾಗಿ ಆರಿಸಿ ಕಳಿಸಿದ್ದೇವೋ ಅವರನ್ನು ಹಿಡಿದು ಹೊಡೆದು ಕೇಳುವ ಹಕ್ಕು ಮತ್ತು ಅಧಿಕಾರ ಕನ್ನಡಿಗರಿಗಿದೆ. ಯಾರನ್ನು ಕೇಳಬೇಕೋ ಅವರನ್ನು ಅವರ ಪಾಡಿಗೆ ಬಿಟ್ಟು ಬೇರೆಯವರ ಮೇಲೆ ಗೂಬೆ ಕೂರಿಸಿ ಆಕ್ರೋಶ ತೋರುವುದು ಸಮಂಜಸವಲ್ಲ.

ಕರ್ನಾಟಕಕ್ಕೆ ಅನ್ಯಾಯವಾಗಿದ್ದು ಖಂಡಿತಾ ಜಯಲಲಿತಾರವರಿಂದಲ್ಲ, ಅನ್ಯಾಯವಾಗಿದ್ದರೆ ಅದು ಕರ್ನಾಟಕವನ್ನು ಆಳಿದ ಆಳುತ್ತಿರುವ ಬೇಜವಾಬ್ದಾರಿ ರಾಜಕಾರಣಿಗಳಿಂದ ಹಾಗೂ ಹೊಣೆಗಾರಿಕೆರಹಿತ ಅಧಿಕಾರಿಗಳಿಂದ. ಇವರಿಗೆಲ್ಲಾ ಸ್ವಾಭಿಮಾನ, ಭಾಷಾಭಿಮಾನ ಅನ್ನೋದೆಲ್ಲಾ ಬರೀ ತೋರುಂಬ ಲಾಭ. ಅಕ್ಕಪಕ್ಕದ ರಾಜ್ಯದವರು ಪುಕ್ಕಟೆ ಸಿಕ್ಕುತ್ತದೆ ಎಂದರೆ ಹೆಚ್ಚಿನ ಪಾಲನ್ನೇ ಕೇಳುತ್ತಾರೆ ಅದು ಅವರ ಅಪೇಕ್ಷೆ. ದುರಾಸೆ ಎಂದುಕೊಂಡರೂ ಪರವಾಗಿಲ್ಲ. ಆದರೆ ಸರಿಯಾದ ರೀತಿಯಲ್ಲಿ, ಸರಿಯಾದ ವೇದಿಕೆಯಲ್ಲಿ, ಸರಿಯಾದ ತಯಾರಿಯೊಂದಿಗೆ ವಾದ ಮಂಡಿಸಿ ನ್ಯಾಯ ನಿರ್ಣಯವನ್ನು ತಮ್ಮ ಕಡೆ ಮಾಡಿಕೊಳ್ಳದವರು ಸೋಲುತ್ತಾರೆ ಗಾಗೂ ಅಸಮರ್ಥರಾಗುತ್ತಾರೆ. ನಮ್ಮವರ ಅಭಿಮಾನ ಶೂನ್ಯ ಬೇಜವಾಬ್ದಾರಿತನಕ್ಕೆ ಅನ್ಯರ ಸ್ವಾಭಿಮಾನವನ್ನು ನಿಂದಿಸಿ ಫಲವೇನು? ಕೈಲಾಗದವರು ಮೈಪರಚಿಕೊಂಡಂತೆ. 

ಬೀದಿ ಬೀದಿಗಳಲ್ಲಿ ಜಯಲಲಿತಾರ ಪ್ರತಿಕೃತಿಗಳಿಗೆ ಬೆಂಕಿ ಇಟ್ಟು ಅಣಕು ಶವಯಾತ್ರೆ ಶ್ರಾದ್ಧ ಮಾಡಿದರೂ ಹರಿಯುತ್ತಿರುವ ಕಾವೇರಿಯನ್ನು ನಿಲ್ಲಿಸಲಾಗಲಿಲ್ಲಬಂದ್ ಮಾಡಿ ಕನ್ನಡಿಗರ ಜನಜೀವನವನ್ನು ಅಸ್ಥಿರಗೊಳಿಸಿ ಬೆಂಕಿ ಹಾಕಿದರೂ ಕೋರ್ಟ್ ಆದೇಶ ಮೀರಲಾಗಲಿಲ್ಲ.   ಜಯಲಲಿತಾರನ್ನು ವ್ಯಯಕ್ತಿಕವಾಗಿ ಕೆಟ್ಟ ಭಾಷೆಯಲ್ಲಿ ಸಿಕ್ಕ ಸಿಕ್ಕಲ್ಲಿ ನಿಂದಿಸಿ ಅವಮಾನಿಸಿದರೂ ತಮಿಳು ರೈತರ ಪರವಾದ ಜಯಮ್ಮನ ನಿಷ್ಟೆ ಬದಲಾಗಲಿಲ್ಲ. ಇವೆಲ್ಲವನ್ನೂ ಮಾಡುವುದರಿಂದ  ದೇಶಾದ್ಯಂತ ಕನ್ನಡಿಗರ ಹೆಸರು ಹಾಳಾಯಿತು. ಕರ್ನಾಟಕವೆಂದರೆ ಜಗಳಗಂಟರ, ನಿಂದಕರ ನಾಡೆನ್ನುವಂತ ಭಾವನೆ ಬೇರೆ ರಾಜ್ಯದವರಿಗಾಯಿತು. 

ಇದೆಲ್ಲಾ ಬೇಕಿರಲಿಲ್ಲ. ನಮ್ಮ ಹಕ್ಕು ಪರರ ಪಾಲಾಗುವುದನ್ನು ತಡೆಯ ಬೇಕಾದದ್ದು ಕನ್ನಡ ಜನತೆಯ ಪ್ರತಿನಿಧಿಗಳ ಕರ್ತವ್ಯ. ಕೊಟ್ಟ ಕರ್ತವ್ಯವವನ್ನು ಕಡೆಗಣಿಸಿದ ಜನಪ್ರತಿನಿಧಿಗಳ ಮನೆ ಮುಂದೆ ಬೆಂಕಿ ಹಾಕಲಿ, ಎಂಮ್ಮೆಲ್ಲೆ ಎಂಪಿಗಳನ್ನೆಲ್ಲಾ ಸಿಕ್ಕಸಿಕ್ಕಲ್ಲಿ ಗೇರಾವ್ ಮಾಡಲಿ. ನಾಡಿನ ಪರ ಹಕ್ಕೋತ್ತಾಯ ಮಾಡಿ ನ್ಯಾಯ ಕೊಡಿಸದ ಎಂಪಿಗಳನ್ನು ರಾಜ್ಯಕ್ಕೆ ಕಾಲಿಡದಂತೆ ಮಾಡಲಿ ಬೇಡ ಎನ್ನುವವರಾರು. ಯಾಕೆಂದರೆ ಜನಪ್ರತಿನಿಧಿಗಳನ್ನು ಪ್ರಶ್ನಿಸುವ, ಅವರ ಹೊಣೆಗಾರಿಕೆಯನ್ನು ಒತ್ತಾಯಪೂರ್ವಕವಾದರೂ ನೆನಪಿಸುವ ಹಕ್ಕು ಕನ್ನಡಿಗರಿಗಿದೆ. ಕೇಳಬೇಕಾದವರನ್ನು ಹಕ್ಕಿನಿಂದ ಕೇಳದೇ ಕೇಳಬಾರದವರನ್ನು ನಿಂದಿಸಿದರೆ  ನಾವೇ ಲೋಕದ ಕಣ್ಣಲ್ಲಿ ಬೆತ್ತಲಾಗುತ್ತೇವೆ. ಮಹಿಳೆಯನ್ನು ಹೀಗೆ ಹೀನಾಯವಾಗಿ ಬೈಯುವುದರಿಂದ ನಾವೇ ಜಗದ ಕಣ್ಣಲ್ಲಿ ಕುಬ್ಜರಾಗುತ್ತೇವೆ. ಕನ್ನಡಮ್ಮನ ಮೇಲಾಣೆ ಇದು ಜಯಲಲಿತಾರ ಪರವಾಗಿ ಮಾಡುತ್ತಿರುವ ವಾದವಊ ಅಲ್ಲಾ ವಕಾಲತ್ತೂ ಅಲ್ಲ. ಜಯಲಲಿತಾರಂತಹ ನಾಡು ನುಡಿಯ ಕುರಿತ ಬದ್ದತೆ ಇರುವ ಮುಖ್ಯಮಂತ್ರಿ ಕನ್ನಡ ನಾಡಿಗೆ ಇಲ್ಲವಲ್ಲ ಎನ್ನುವ ವೇದನೆ. 

ಸಹೃದಯ ಕನ್ನಡಿಗರಲ್ಲಿ ವಿನಂತಿಸಿಕೊಳ್ಳಬೇಕಿದೆ. ಎಲ್ಲರಲ್ಲೂ ಭಾಷಾಭಿಮಾನವಿರಲಿ ಭಾಷಾಂಧತೆ ತೊಲಗಲಿಮಹಿಳೆಯರ ಬಗ್ಗೆ ಗೌರವವಿರಲಿ ಶೀಲಶಂಕಿತ ವ್ಯಯಕ್ತಿಕ ನಿಂದನೆಗಳು ದೂರವಿರಲಿ. ನ್ಯಾಯಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರಕಾರಗಳನ್ನು ಕನ್ನಡಿಗರ ಪರವಾಗಿ ಪ್ರತಿನಿಧಿಸುತ್ತಿರುವ ಜನಪ್ರತಿನಿಧಿಗಳ ಮೇಲೆ ಕನ್ನಡಿಗರ ಒತ್ತಡವಿರಲಿ... ನೆರೆಹೊರೆಯ ರಾಜ್ಯದವರ ಕುರಿತು ಬಳಸುವ ಭಾಷರ ಮರ್ಯಾದೆಯ ಗಡಿದಾಟದಿರಲಿ. ದೇಶ ಭಾಷೆ ಯಾವುದೇ ಇರಲಿ ದುಡಿಯುವ ಕೂಲಿ ಕಾರ್ಮಿಕರು, ರೈತರು ಹಾಗೂ ಮಹಿಳೆಯರ ಸಂಕಷ್ಟಗಳು ಸಾರ್ವಕಾಲಿಕವಾದವುಗಳು ಎನ್ನುವ ಅರಿವಿರಲಿ. ಎಲ್ಲ ಭಾಷೆ ಗಡಿ ಮೀರಿದ್ದು ಮಾನವೀಯತೆ ಎಂಬುದು ಸದಾ ನೆನಪಿರಲಿ... ರಾಜಕೀಯ ಮಾತುಕತೆ ಹಾಗೂ ಕಾನೂನಾತ್ಮಕ ಕ್ರಮಗಳಿಂದ ಕಾವೇರಿ ವಿವಾದ ಸಾಧ್ಯವಾದಷ್ಟೂ ಬೇಗ ಬಗೆಹರಿದು ಎರಡೂ ರಾಜ್ಯಗಳ ಜನತೆ ನೆಮ್ಮದಿಯಾಗಿರಲಿ...

- ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ