ತಹ ತಹ ..... 17
ಹೌದು ನನಗೂ ಮಹಾಭಾರತ ದ್ರೌಪದಿಗೂ ಅಂತಾ ವ್ಯತ್ಯಾಸವೇನಿಲ್ಲ. ರೂಪಕ ಸಾಮ್ಯತೆಗೆ ಕೊರತೆಯಿಲ್ಲ.
ಇತ್ತ ಪಾಂಡವರು ಅತ್ತ ಕೌರವರು ನನಗಾಗಿ ಕಾದಾಡುತ್ತಿದ್ದಾರೆ. ಅಂಧ ದೃತರಾಷ್ಟ್ರನ ನ್ಯಾಯಾಲಯದಲ್ಲಿ ನಾನು ಕೌರವರಿಗೆ ಸೇರಬೇಕೆಂದು ತೀರ್ಪು ಬಂದಿದೆ. ರಾಜಕೀಯದ ಜೂಜಾಟದಲ್ಲಿ ನನ್ನನ್ನು ಪಣಕ್ಕಿಟ್ಟು ಸೋತ ಈ ಪಾಂಡವರು ನನ್ನ ಮೇಲಿನ ಸಂಪೂರ್ಣ ಹಕ್ಕನ್ನು ಬಿಟ್ಟುಕೊಡಲು ನಿರಾಕರಿಸುತ್ತಿದ್ದಾರೆ. ಅತ್ತ ಕೌರವರು ತಮ್ಮ ಹಕ್ಕನ್ನು ಪ್ರತಿಪಾದಿಸುತ್ತಿದ್ದಾರೆ. ಅವರಿವರ ಹಕ್ಕುದಾರಿಕೆಯ ಕದನದಲಿ ನಾನು ಕಂಗಾಲಾಗಿದ್ದೇನೆ. ಇವರು ಹಿಡಿದಿಟ್ಟುಕೊಳ್ಳಲು ಬಯಸುತ್ತಾರೆ.. ಅವರು ಸೆಳೆದೊಯ್ಯಲು ಸದಾ ಹವಣಿಸುತ್ತಾರೆ. ಈ ಪಾಂಡವ ಕೌರವರ ಪ್ರತಿಷ್ಟೆಯ ಸಂಘರ್ಷದಲಿ ನಾನಂತೂ ಅಸಹಾಯಕಳಾಗಿದ್ದೇನೆ.
ಹೌದು ನನ್ನ ಈ ಸ್ವಗತ ಕೇಳಿದ ಮೇಲೆ ನಾನ್ಯಾರೆಂಬ ನಿಮ್ಮ ಊಹೆ ಸರಿಯಾಗಿದೆ. ನಾನು ಕಾವೇರಿ. ಕನ್ನಡ ತಮಿಳಿನ ಪಾಂಡವ ಕೌರವರ ಸ್ವಪ್ರತಿಷ್ಟೆಯ ಕದನಕ್ಕೆ ನಾನು ಕಾರಣವಾಗಿದ್ದಕ್ಕೆ ನನಗೆ ಅಪಾರ ಬೇಸರವಿದೆ. ನನ್ನ ಪಾಡಿಗೆ ನನ್ನ ಬಿಡದೇ ಎರಡೂ ಪಾಳೆಯದ ದಾಯಾದಿಗಳು ಹೀಗೆ ನನ್ನನ್ನು ಹಂಚಿಕೊಳ್ಳಲು ನಡೆಸುವ ನಿರಂತರ ಕದನಗಳಿಂದ ನೊಂದಿದ್ದೇನೆ.
ಈ ದಾಯಾದಿಗಳ ವ್ಯಾಜ್ಯವನ್ನು ಸೌಹಾರ್ದಯುತವಾಗಿ ಬಗೆಹರಿಸಬೇಕಾಗಿದ್ದ ದೃತರಾಷ್ಟ್ರನ ಕುರುಡು ನ್ಯಾಯಾಲಯ ಸಮಸ್ಯೆಯನ್ನು ಕಣ್ಣು ಬಿಟ್ಟು ನೋಡದೇ ಕಿವಿಯಲ್ಲಿ ಕೇಳಿದ ಅಬ್ಬರದ ಶಬ್ದಗಳ ಪರವಾಗಿ ನ್ಯಾಯ ನಿರ್ಣಯ ಕೊಟ್ಟಿದ್ದು ಎರಡೂ ಪಾಳೆಯದವರ ವೈಷಮ್ಯಕ್ಕೆ ತುಪ್ಪ ಸುರಿದಂತಾಗಿದೆ.
ಹೋಗಲಿ ಕೇಂದ್ರ ಸರಕಾರ ಎನ್ನುವ ಕೃಷ್ಣನಾದರೂ ಈ ಹತಭಾಗ್ಯ ಸಹೋದರಿಯ ಸಹಾಯಕ್ಕೆ ಬರುತ್ತಾನೆಂದು ಆಸೆಯಿಂದ ಕಾಯುತ್ತಲೇ ಇದ್ದೇನೆ. ಅವನೋ ತನ್ನ ರಾಜಕೀಯದಾಟದಲ್ಲಿ ಬ್ಯೂಸಿ ಆಗಿದ್ದಾನೆ. ಈಗ ಕಾಲ ಬದಲಾಗಿದೆ.. ಹಾಗೆಯೇ ಕೃಷ್ಣನೂ ಕೂಡಾ. ಕೌರವ ಪಾಂಡವರಲ್ಲಿ ಯಾರ ಪರವಾಗಿದ್ದರೆ ತನಗೆ ಹೆಚ್ಚು ಲಾಭ ಎನ್ನುವ ಲೆಕ್ಕಾಚಾರದಲ್ಲಿ ಶ್ರೀಕೃಷ್ಣ ಚದುರಂಗದಾಟವಾಡುತ್ತಿದ್ದಾನೆ.
ಈಗ ದೃತರಾಷ್ಟ್ರ ನ್ಯಾಯಾಲಯದಲ್ಲಿಯಾಗಲಿ, ಪಾಂಡವ ಕೌರವರ ಮೇಲಾಟದಲ್ಲಾಗಲಿ ಇಲ್ಲವೇ ಕೃಷ್ಣನ ಸಂಧಾನದಲ್ಲಾಗಲೀ ನನಗೀಗ ನಂಬಿಕೆಯೇ ಇಲ್ಲ. ನನ್ನ ಬಗ್ಗೆಯೂ ನನಗೆ ಅಂತಾ ಮೋಹವಿಲ್ಲ. ನಾನು ಹೆಣ್ಣು.. ನಿಲ್ಲಿಸಿದರೆ ನಿಲ್ಲುವುದು... ಬಿಟ್ಟರೆ ಹರಿಯುವುದಷ್ಟೇ ನಾನು ಹುಟ್ಟಿನಿಂದ ಕಟ್ಟಿಕೊಂಡು ಬಂದ ಭಾಗ್ಯ. ನನಗೆ ಆತಂಕವಾಗಿರೋದು ನನ್ನನ್ನೇ ನಂಬಿಕೊಂಡು ಬದುಕುತ್ತಿರುವ ರೈತಾಪಿ ಜನಸಮೂಹದ ಬಗ್ಗೆ. ಈ ಬಡಪಾಯಿ ಜನ ಎರಡೂ ಪಾಳೆಯದಲ್ಲಿದ್ದಾರೆ. ಈ ಆಳುವವರ ಕುತಂತ್ರಕ್ಕೆ ಹಾಗೂ ಸೃಷ್ಟಿಸುವ ಉನ್ಮಾದಕ್ಕೆ ಪರಸ್ಪರ ಜಗಳಾಡಿಕೊಂಡು ಬಲಿಯಾಗುತ್ತಿದ್ದಾರೆ. ಮತ್ಸರವನ್ನು ಹುಟ್ಟಿಸಿಕೊಂಡು ದ್ವೇಷವನ್ನೇ ಬಿತ್ತಿ ಹಿಂಸೆಯನ್ನು ಬೆಳೆದು ತಮ್ಮ ಅಮೂಲ್ಯ ಬದುಕನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಆಳುವವರ ರಾಜಕೀಯದ ಜೂಜಾಟಕ್ಕೆ ನಾನು ದಾಳವಾದಂತೆ ಈ ಅಮಾಯಕ ಜನರೂ ಬಲಿಪಶುಗಳಾಗುತ್ತಿರುವುದನ್ನು ನೋಡುವುದೇ ನನಗೆ ಸಂಕಟದ ಸಂಗತಿ. ಒಂದೊಂದು ಸಲ ಉಕ್ಕಿ ಹರಿದು ಜಲಪ್ರಳಯ ಸೃಷ್ಟಿಸಿ ಎಲ್ಲರನ್ನೂ ಮುಳುಗಿಸಿಬಿಡಲೇ ಎಂದೆನ್ನಿಸುತ್ತದೆ. ಆದರೆ ಪಾಪ ಬಡ ರೈತಾಪಿ ಜನರ ಬವಣೆಯನ್ನು ನೋಡಿ ನನ್ನ ನಿರ್ಧಾರವನ್ನು ಹಲವು ಸಲ ಬದಲಾಯಿಸಿದ್ದೇನೆ.
ಇನ್ನೆಷ್ಟು ದಿನ ಈ ದಾಯಾದಿಗಳ ಕದನದಾಟ. ಇನ್ನೂ ಎಷ್ಟು ದಿನ ಈ ನಕಲಿ ಶಾಮನ ರಾಜಕೀಯದಾಟ. ಇಂತವರಿಗೆಲ್ಲಾ ಅಧಿಕಾರ ಕೊಟ್ಟ ಎರಡೂ ಪಾಳೆಯದ ದುಡಿಯುವ ಜನ ಒಂದಾಗಿ ಜನರ ಹಿತಾಸಕ್ತಿ ಮರೆತ ಆಳುವವರನ್ನೆಲ್ಲಾ ಮನೆಗೆ ಕಳಿಸಬೇಕಿದೆ. ಭಾಷೆ ಗಡಿಗಳೆಂದು ಒಡೆದಾಳುವವರನ್ನು ಜನಾಂದೋಲನದ ಮೂಲಕ ಹೊಡೆದೋಡಿಸಬೇಕಿದೆ. ಗಡಿಗಳನೊಡೆದು ಹಾಕಿ ರೈತರಾದಿಯಾಗಿ ಸಮಸ್ತ ದುಡಿಯುವ ಜನರ ಹಿತಾಸಕ್ತಿಯನ್ನು ಕಾಪಾಡುವ ಆಸಕ್ತಿ ಹಾಗೂ ಶಕ್ತಿ ಇರುವವರಿಗೆ ರಾಜ್ಯ-ದೇಶವಾಳುವ ಅಧಿಕಾರವನ್ನು ಕೊಡಬೇಕಿದೆ.
ಅಲ್ಲಿವರೆಗೂ ನನಗಾಗಿ ನಡೆಯುವ ಕದನ ನಿಲ್ಲುವುದಿಲ್ಲ. ಅಂದು ಮಹಾಭಾರತ ಯುದ್ದ ನಡೆದು ಸರ್ವನಾಶವಾಗಿದ್ದು ದ್ರೌಪದಿಗಾಗಿ ಎಂದು ಆರೋಪಿಸುವ ಹಾಗೆಯೇ ಮುಂದೆ ಕನ್ನಡ ತಮಿಳರ ಯುದ್ದ ನಡೆದಿದ್ದು ಕಾವೇರಿಗಾಗಿ ಎನ್ನುವ ಆರೋಪವೂ ನನಗೆ ಸುತ್ತಿಕೊಳ್ಳುತ್ತದೆ. ನಾನು ಯಾರಿಗೂ ಕದನ ಮಾಡಿ ಎಂದು ಪ್ರಚೋದಿಸುವುದಿಲ್ಲ. 'ನನ್ನ ಪಾಡಿಗೆ ನನ್ನನ್ನು ಬಿಡಿ ರೈತಾಪಿ ಜನರ ಸೇವೆಗೆ ಅವಕಾಶ ಕೊಡಿ' ಎಂದು ಕೇಳಿಕೊಳ್ಳುತ್ತಿದ್ದೇನೆ. ಯಾರ ಕಿವಿಗೂ ಅದು ಬೀಳುತ್ತಿಲ್ಲ. ಈ ದಾಯಾದಿ ಕದನ ನಿಲ್ಲುವಂತೆ ಕಾಣುತ್ತಿಲ್ಲ. ನೆಮ್ಮದಿಯ ಬದುಕೆಂಬುದು ಕಾವೇರಿ ಕೊಳ್ಳದ ಜನರಿಗಂತೂ ಸಾಧ್ಯವಾಗುತ್ತಿಲ್ಲ. ಆಪದ್ಬಾಂದವ ಕೃಷ್ಣಾ ಎಲ್ಲಿ ಹಾಳಾಗಿ ಹೋಗಿದ್ದೀಯೋ....
- ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ