ಶನಿವಾರ, ಅಕ್ಟೋಬರ್ 15, 2016

ತಹ ತಹ .....47 ನಡೆ ನುಡಿ ಸಿದ್ದಾಂತವಾದಲ್ಲಿ ಪೇಜಾವರರ ಶ್ರೀಪಾದಕೆ ನಮೋ ನಮಃ:



ಉಡುಪಿ ಧರ್ಮಸಂಸ್ಥಾನದ ಪರ್ಯಾಯಾಧಿಪತಿಯಾದ ಶ್ರೀ ಶ್ರೀ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದ ಸ್ವಾಮೀಜಿಗಳು ಕೊನೆಗೂ ಮೌನ ಮುರಿದು ಮಾತಾಗಿದ್ದಾರೆ.
ಉಡುಪಿ ಚಲೋ ನಡೆಸಿದವರು ಶ್ರೀಕೃಷ್ಣಮಠಕ್ಕೆ ಮುತ್ತಿಗೆ ಹಾಕಿದರೆ ಭಕ್ತರೊಂದಿಗೆ ಉಪವಾಸ ಕೂಡುವುದಾಗಿಯೂ ಸರಕಾರಕ್ಕೆ ಪರೋಕ್ಷ ಬೆದರಿಕೆಯೊಡ್ಡಿ ಬ್ಲಾಕ್ಮೇಲ್ ಅಸ್ರ್ತವೊಂದನ್ನು ಪ್ರಯೋಗಿಸಿದ್ದಾರೆ. ಶ್ರೀಮಠದ ಇತಿಹಾಸದಲ್ಲಿ ಬಹುಷಃ ಇದೇ ಮೊದಲ ಬಾರಿಗೆ ಸಹಸ್ರಾರು ದಲಿತರು ಒಂದಾಗಿ ಕೇಸರಿ ಬಣ್ಣದ ಉಡುಪಿಯಲ್ಲಿ ನೀಲಿ ಬಾವುಟಗಳ ಮೆರವಣಿಗೆ ಮಾಡಿದ್ದು ಪೇಜಾವರರಿಗೆ ದಿಗಿಲು ಹುಟ್ಟಿಸಿದ್ದಂತೂ ಸತ್ಯ. ದಲಿತರ ನಡಿಗೆಯಿಂದ ಉಡುಪಿ ಅಪವಿತ್ರವಾಯ್ತು ಎಂದು ಉಡುಪಿಯ ಬೀದಿಗಳನ್ನು ಶುದ್ದೀಕರಿಸುವ ಕಾರ್ಯಕ್ರಮವನ್ನು ಸೂಲಿಬೆಲೆಯ ಯುವಬ್ರಿಗೇಡ್ .23 ರಂದು ಹಮ್ಮಿಕೊಂಡಿದೆ. ಇದು ದಲಿತರಿಗೆ ಮಾಡಿದ ಅವಮಾನ, ಇಂತಹ ಶುದ್ದೀಕರಣದ ಕುಕೃತ್ಯಕ್ಕೆ ಇಳಿದರೆ ದಲಿತರೆಲ್ಲಾ ಸೇರಿ ಶ್ರೀಕೃಷ್ಣಮಠಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ದಲಿತ ಸಂಘಟನೆಗಳು ಹಾಗೂ ಪ್ರಗತಿಪರರು ಎಚ್ಚರಿಸಿದ ತಕ್ಷಣ ಶ್ರೀಮಠ ತಲ್ಲಣಗೊಂಡಿತು. 'ಇದು ಶುದ್ದೀಕರಣ ಕಾರ್ಯವಲ್ಲ ಮೋದಿಯವರ ಸ್ವಷ್ಷಭಾರತದ ಅನುಷ್ಟಾನದ ಭಾಗವಾಗಿ ಉಡುಪಿ ಬೀದಿಗಳನ್ನು ಗೂಡಿಸುವ ಕಾರ್ಯಕ್ರಮ'ವೆಂದು ಸೂಲಿಬೆಲೆ ಎನ್ನುವ ಮತಾಂಧನ ಬಾಯಲ್ಲಿ ಶ್ರೀಮಠ ಹೇಳಿಕೆ ಕೊಡಿಸಿ ಡ್ಯಾಮೇಜ್ ಕಂಟ್ರೋಲ್ ಮಾಡಲು ಪ್ರಯತ್ನಿಸಿತು. ಆದರೂ ಅದೂ ಸಹ ವರ್ಕೌಟ್ ಆಗದೇ ಯಾವಾಗ ಶುದ್ದೀಕರಣದ ವಿರುದ್ದ ಜನಾಕ್ರೋಶ ಹೆಚ್ಚಾಗತೊಡಗಿತೋ ಆಗ ಸ್ವತಃ ಪೇಜಾವರರೆ ಜ್ಯಾತ್ಯಾತೀತ ಮುಖವಾಡ ಧರಿಸಿಕೊಂಡು ಹೊರಬಂದು ಉಪವಾಸ ಎನ್ನುವ ಬ್ಲಾಕ್ಮೇಲಾಸ್ತ್ರವನ್ನು ಪ್ರಯೋಗಿಸಿದರು.

ತಮ್ಮ ಕೇಸರಿ ಬಣ್ಣದ ಮೇಲೆ ಜ್ಯಾತ್ಯಾತೀತತೆಯ ಹಲವು ಬಣ್ಣಗಳನ್ನು ತೋರಿಕೆಗೆ ಬಳಿದುಕೊಂಡ ಶ್ರೀಪಾದರು ಕಪ್ಪು ಬಣ್ಣವನ್ನು ಬುದ್ದೀಜೀವಿಗಳಿಗೆ ಬಳಿಯಲು ಪ್ರಯತ್ನಿಸಿದರು. " ನನ್ನ ಮೆದುಳು ಸ್ವಚ್ಚವಿದೆ, ಬುದ್ದಿಜೀವಿಗಳೇ ಆತ್ಮವಿಮರ್ಶೆ ಮಾಡಿಕೊಳ್ಳಿ" ಎಂದು ಸವಾಲೆಸೆದರು. ಮತಾಂಧತೆಯೆನ್ನುವ ಮಾಲಿನ್ಯವನ್ನು ಮೆದುಳಲ್ಲಿ ತುಂಬಿಕೊಂಡು ಮೆದುಳು ಸ್ವಚ್ಚವಿದೆ ಎಂದು ಹೇಳಿದರೆ ವಿಪ್ರಕುಲ ಹೊರತು ಪಡಿಸಿ ನಂಬುವವರಾದರೂ ಯಾರು? ಶ್ರೀಮಠದ ತಾರತಮ್ಯ ಕಣ್ಣಿಗೆ ಕಟ್ಟುವಂತೆ ಪಂಕ್ತಿಬೇಧದ ರೂಪದಲ್ಲಿ ಎಲ್ಲರಿಗೂ ಡಾಳಾಗಿ ಕಾಣುತ್ತಿರುವಾಗ ಪೇಜಾವರರ ಜ್ಯಾತ್ಯಾತೀತತೆಯ ಸೋಗಲಾಡಿತನದಲ್ಲಿ ಅದ್ಯಾರು ವಿಶ್ವಾಸವಿಡಲು ಸಾಧ್ಯ? ಇವರ ಬ್ರಾಹ್ಮಣ್ಯದ ಆಚರಣೆಗಳಿಗೆ ಬುದ್ದಿಜೀವಿಗಳೇಕೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು?

ಯಾರು ಧರ್ಮಾಂಧರ ದೌರ್ಜನ್ಯವನ್ನು ವಿರೋಧಿಸುತ್ತಾರೋ, ಯಾರು ಜಾತಿ ವ್ಯವಸ್ಥೆಯ ಶೋಷಣೆಯನ್ನು ದಿಕ್ಕರಿಸುತ್ತಾರೋ, ಯಾರು ದಮನಿತ ವರ್ಗಗಳ ಪರವಾಗಿ ಮಾತಾಡುತ್ತಾರೋ ಅವರನ್ನೆಲ್ಲಾ ಸಾರಾಸಗಟಾಗಿ ಬುದ್ದಿಜೀವಿಗಳು ಎಂದು ನಿಂದಿಸುವ ಮಹತ್ಕಾರ್ಯವನ್ನು ಮತಾಂಧ ಶಕ್ತಿಗಳು ಕಾಲಕಾಲಕ್ಕೆ ಮಾಡುತ್ತಲೇ ಬಂದಿವೆ. ಆದರೆ ದಲಿತ ಚಲೋ ಪ್ರತಿಭಟನೆಗೂ ಹಾಗೂ ಪೇಜಾವರ ಸಂತಾನಗಳು ಕಲ್ಪಿಸಿಕೊಂಡ ಬುದ್ದಿಜೀವಿಗಳಿಗೂ ಯಾವುದೇ ಸಂಬಂಧವಿಲ್ಲ. ಯಾಕೆಂದರೆ ದಲಿತ ಚಳುವಳಿಯನ್ನು ದಲಿತ ದಮನಿತ ಜನಾಂಗದ ಎಚ್ಚೆತ್ತ ಯುವಪೀಳಿಗೆ ಸಂಘಟಿಸಿ ಮುನ್ನಡೆಸಿದೆ. ದಲಿತರ ನ್ಯಾಯಯುತವಾದ ಬೇಡಿಕೆಗಳಿಗೆ ಬುದ್ದಿಜೀವಿಗಳು ಎನ್ನಿಸಿಕೊಂಡ ಕೆಲವರು ಬೆಂಬಲಿಸಿದ್ದಾರಷ್ಟೇ. ಇದು ಪೇಜಾವರರಿಗೆ ಗೊತ್ತಿದ್ದರೂ ತಮ್ಮ ವಿರುದ್ದ ತಾವೇ ಒಂದು ಪ್ರತಿನಾಯಕ ಬಣವನ್ನು ಸೃಷ್ಟಿಸಿ ತಮ್ಮ ಮಾಮೂಲಿ ಅಸ್ತ್ರಗಳನ್ನು ಪ್ರಯೋಗಿಸಿ ಸರಕಾರದ ಮೇಲೆ ಒತ್ತಡ ತರುವ ತಂತ್ರಗಾರಿಕೆ ಶುರುಮಾಡಿದ್ದಾರೆ.

" ಬುದ್ದಿಜೀವಿಗಳು ಹಾಗೂ ರಾಜಕಾರಣಿಗಳಿಗಿಂತಾ ನಾನು ಹೆಚ್ಚು ಜ್ಯಾತ್ಯಾತೀತನಾಗಿದ್ದೇನೆ" ಎಂಬ ಚಿನ್ನಂದಂತಾ ಮಾತುಗಳನ್ನು ಉದುರಿಸಿದ ಪೇಜಾವರರು ಅದನ್ನು ಆಚರಣೆಗೆ ತಂದರೆ ಸಮಸ್ತ ಶೂದ್ರ ದಲಿತ ಸಮುದಾಯ ಅವರನ್ನು ತಲೆಮೇಲೆ ಇರಿಸಿ ಮೆರೆಸುತ್ತದೆ. ದಲಿತ ಕೇರಿಗೆ ಹೋಗಿ ತಮ್ಮ ಶ್ರೀಪಾದಕ್ಕೆ ದಲಿತರಿಂದ ಪೂಜೆ ಮಾಡಿಸಿಕೊಂಡು ಬಂದರೆ ಜ್ಯಾತ್ಯಾತೀತರಾದಂತಲ್ಲ. ದಲಿತರ ಕೆಲವು ನ್ಯಾಯಸಮ್ಮತ ಬೇಡಿಕೆಗಳ ಹೋರಾಟಕ್ಕೆ ಬೆಂಬಲಿಸಿ ಜೊತೆಯಾದರೆ ಸಾಕು ಪೇಜಾವರರ ಜ್ಯಾತ್ಯಾತೀತತೆಗೆ ಉಘೇ ಉಘೇ ಹೇಳಬಹುದು. ಮೊದಲು ಪಂಕ್ತಿಬೇಧವನ್ನು ಅಂತ್ಯಗೊಳಿಸಿ ಅಂತ್ಯಜರೂ ಸಹ ಬ್ರಾಹ್ಮಣರ ಜೊತೆ ಕುಳಿತು ಸಹಭೋಜನ ಮಾಡುವಂತೆ ತಮ್ಮ ಮಠದಲ್ಲಿ ವ್ಯವಸ್ಥೆ ಮಾಡಿ ಶ್ರೀಕೃಷ್ಣ ದೇವಸ್ಥಾನವನ್ನು ಎಲ್ಲರಿಗೂ ಮುಕ್ತಗೊಳಿಸಿದರೆ ಪೇಜಾವರರು ಅರ್ಧ ಜ್ಯಾತ್ಯಾತೀತರಾದಂತೆ. ದಲಿತರು ಕೇಳುತ್ತಿರುವ ಆಹಾರದ ಆಯ್ಕೆಯ ಹಕ್ಕಿಗಾಗಿ ಬೆಂಬಲಿಸಿ ಹೋರಾಟಗಾರರ ಜೊತೆ ಸೇರಿ ಪ್ರತಿಭಟಿಸಿದರೆ ಇನ್ನೂ ಕಾಲು ಭಾಗ ಜ್ಯಾತ್ಯಾತೀತರಾಗಬಹುದು. ದಲಿತರು ಸವರ್ಣೀಯರ ಜೀತದಿಂದ ಮುಕ್ತರಾಗಿ ಸ್ವಾವಲಂಭೀ ಬದುಕನ್ನು ಕಟ್ಟಿಕೊಳ್ಳಲು ತುಂಡು ಭೂಮಿ ಕೇಳುತ್ತಿದ್ದಾರೆ. ಅದನ್ನೂ ಬೆಂಬಲಿಸಿ ಪೇಜಾವರರು ದಲಿತರೊಟ್ಟಿಗೆ ಕೂತು ಉಪವಾಸ ಸತ್ಯಾಗ್ರಹ ಮಾಡಿ ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಭೂಮಿಯ ಹಕ್ಕನ್ನು ಒದಗಿಸಿಕೊಟ್ಟಿದ್ದೇ ಆದರೆ ಸಮಸ್ತ ಫಲಾನುಭವಿ ದಲಿತರು ತಮ್ಮ ಮನೆಗಳಲ್ಲಿ ಅಂಬೇಡ್ಕರ್ ಪೊಟೋದ ಜೊತೆ ಪೇಜಾವರರ ಪಾದದ ಪೊಟೋ ಇಟ್ಟು ಪೂಜಿಸುತ್ತಾರೆ. ಆದರೆ ನಕಲಿ ಜ್ಯಾತ್ಯಾತೀತ ಹೇಳಿಕೆಗಳನ್ನು ಕೊಡುತ್ತಾ ಶೂದ್ರವರ್ಗವನ್ನು ಭ್ರಮೆಯಲ್ಲಿಡುವ ಬದಲು ಅಸಲಿ ಜ್ಯಾತ್ಯಾತೀತರಾಗುವತ್ತ ಪೇಜಾವರ ಶ್ರೀಪಾದರು ಪ್ರಯತ್ನಿಸಲಿ. ಇಲ್ಲವಾದರೆ ತಾವು ಜಾತಿವಾದಿಗಳು, ಧರ್ಮಾಂಧರು, ಬ್ರಾಹ್ಮಣ್ಯದ ಪೋಷಕರು ಎಂದು ಬಹಿರಂಗವಾಗಿ ಒಪ್ಪಿಕೊಳ್ಳಲಿ.

"ದಲಿತರನ್ನು ಮುಖ್ಯವಾಹಿನಿಯಲ್ಲಿ ಸೇರಿಸುವ ವಿಶ್ವಹಿಂದೂ ಪರಿಷತ್ತು ಹಾಗೂ ನನ್ನ ಯತ್ನವನ್ನು ಸಹಿಸಲಾರದ ಕೆಲವು ಬುದ್ದಿಜೀವಿಗಳು ದಲಿತರನ್ನು ಮತ್ತು ಮುಸ್ಲಿಮರನ್ನು ನನ್ನಿಂದ ದೂರ ಸರಿಸುವ ಯತ್ನದಲ್ಲಿ ತೊಡಗಿದ್ದಾರೆ" ಎನ್ನುವ ಗುರುತರವಾದ ಆರೋಪವನ್ನು ಪೇಜಾವರರು ಮಾಡುತ್ತಿದ್ದಾರೆ. ಮುಖ್ಯವಾಹಿನಿ ಅಂದರೆ ಯಾವುದು? ಪಂಕ್ತಿಬೇಧದ ಹೆಸರಲ್ಲಿ ಜಾತಿ ತಾರತಮ್ಯ ಮಾಡುವುದಾ? ಗೊರಕ್ಷಣೆಯ ಹೆಸರಲ್ಲಿ ದಲಿತರ ಹೊಟ್ಟೆ ಮೇಲೆ ಹೊಡೆಯುವುದಾ? ದಲಿತರ ಮೀಸಲಾತಿಯನ್ನು ಕಿತ್ತುಕೊಂಡು ಜೀತಗಾರರನ್ನಾಗಿಯೇ ಇಡುವುದಾ? ಸವರ್ಣೀಯರ ಮನೆಯೊಳಗೆ, ಗುಡಿಯೊಳಗೆ ದಲಿತರನ್ನು ಬಿಟ್ಟುಕೊಳ್ಳದೇ ಕೇರಿಗೆ ಮಾತ್ರ ಸೀಮಿತಗೊಳಿಸುವುದಾ? ಮುಖ್ಯವಾಹಿನಿ ಅಂದರೆ ಇದೇ ಪೇಜಾವರರು ಪ್ರತಿನಿಧಿಸುವ ಸಂಘ ಪರಿವಾರ ಪ್ರತಿಪಾದಿಸುವ ಮನುವಾದಿ ಸಿದ್ದಾಂತವಲ್ಲದೇ ಮತ್ತೇನಿದೆ. ನಿಮ್ಮ ಜೀವವಿರೋಧಿ ಮತಾಂಧ ಮುಖ್ಯವಾಹಿನಿಯಿಂದಾ ದಲಿತರು ಹಾಗೂ ಅಲ್ಪಸಂಖ್ಯಾತರನ್ನು ಯಾರೇ ದೂರಮಾಡಿದರೂ ಅವರು ಒಳ್ಳೆಯ ಕೆಲಸವನ್ನೇ ಮಾಡುತ್ತಿದ್ದಾರೆ. ಮನುವಾದಿ ಮುಖ್ಯವಾಹಿನಿಯನ್ನು ಕೈಬಿಟ್ಟು ಅಂಬೇಡ್ಕರ್ ವಾದಿ ಮುಖ್ಯವಾಹಿನಿಗೆ ಸಂಘ ಪರಿವಾರವನ್ನು ಹಾಗೂ ಸಮಸ್ತ ಮನುವಾದಿ ಮತಾಂಧ ಮನಸ್ಸುಗಳನ್ನು ಶುದ್ದೀಕರಿಸಿ ಸೇರಿಸುವುದಾದರೆ ಪೇಜಾವರರಿಗೆ ಜೈ. ಇಲ್ಲವಾದರೆ ಎಲ್ಲಾ ದಲಿತ ದಮನಿತರ ಪರವಾಗಿ ಶ್ರೀಪಾದರ ಪಾದಾರವಿಂದಗಳಿಗೆ ಧಿಕ್ಕಾರ.

"ನನ್ನ ಬಳಿ ಚರ್ಚೆಗೆ ಅವಕಾಶವಿದೆ" ಎಂದು ಶ್ರೀಪಾದರು ಹೇಳಿದ್ದಾರೆ. ಈಗಾಗಲೇ ಹಲವು ಬಾರಿ ಇವರ ಚರ್ಚೆಯ ಪ್ರಹಸನಗಳನ್ನು ನೋಡಿಯಾಗಿದೆ. ಒಂದು ವೈದಿಕಶಾಹಿಪರವಾಗಿ ವಿತಂಡವಾದ ಶುರುಮಾಡುತ್ತಾರೆ. ಇಲ್ಲವೇ ಸಮರ್ಥನೀಯ ಉತ್ತರ ಕೊಡಲು ಅಸಮರ್ಥರಾದಾಗ ಜಾಣ ಮೌನ ವಹಿಸುತ್ತಾರೆ. ಪೇಜಾವರರ ಆಹ್ವಾನವನ್ನು ದಲಿತಪರ ಸಂಘಟನೆಗಳು ಸವಾಲಾಗಿ ತೆಗೆದುಕೊಳ್ಳುವುದು ಒಳಿತು. ಪೇಜಾವರರ ಶ್ರೀಮಠದೊಳಗೆ ದಲಿತ ಹೋರಾಟದ ಯುವ ಮುಖಂಡರು ಹೋಗಿ ಶ್ರೀಮಠದ ಪಂಕ್ತಿಬೇಧ, ಮುಖ್ಯವಾಹಿನಿಯ ಹಿಂದಿರುವ ದುರುದ್ದೇಶ, ಉಡುಪಿ ಮಠದ ಆಡಳಿತದಲ್ಲಿ ದಲಿತ ವರ್ಗದವರಿಗೆ ಮೀಸಲಾತಿ ಹಾಗೂ ಆಹಾರದ ಆಯ್ಕೆಗಳ ಕುರಿತು ಮುಕ್ತವಾಗಿ ಚರ್ಚಿಸಿ ಅದರ ವಿಡಿಯೋ ಮಾಡಿಕೊಂಡು ಬಂದು ಜನತೆಯ ಮುಂದೆ ಜ್ಯಾತ್ಯಾತೀತನೆಂದುಕೊಳ್ಳುವ ಸ್ವಾಮೀಜಿಗಳ ಮುಖವಾಡವನ್ನು ಬೆತ್ತಲುಗೊಳಿಸುವುದು ಸೂಕ್ತ. ಪೇಜಾವರರ ಮೆದುಳಿನಲ್ಲಿರುವ ಮಾಲಿನ್ಯವನ್ನು ಸ್ವಚ್ಚಗೊಳಿಸಲು ಸಾಧ್ಯವಿಲ್ಲವಾದರೂ ಅವರಿಗೆ ಹಾಗೂ ಅವರ ಸಮರ್ಥಕರಿಗೆ ಅದರ ದರ್ಶನ ಮಾಡಿಸಬೇಕಿದೆ. ಇಲ್ಲವಾದರೆ ಮನುವಾದಿಗಳೇ ಜ್ಯಾತ್ಯಾತೀತರೆಂದು ಜನರನ್ನು ನಂಬಿಸಿ ದಲಿತರ ಮೇಲೆ ಶೂದ್ರರನ್ನು ಎತ್ತಿಕಟ್ಟುವುದರಲ್ಲಿ ಸಂದೇಹವೇ ಇಲ್ಲ.

"ದಲಿತರು ಬ್ರಾಹ್ಮಣರು ಒಂದಾದರೆ ಬುದ್ದಿಜೀವಿಗಳಿಗೇಕೆ ಹೊಟ್ಟೆಯುರಿ" ಎಂದು ಪ್ರಶ್ನಿಸುವ ಪೇಜಾವರರು ಸೂಚಿಸುವ ಎಲ್ಲಾ ಬುದ್ದಿಜೀವಿಗಳನ್ನೂ ದೂರವಿಡೋಣ. ದಲಿತರನ್ನು ಉಡುಪಿಯ ದೇವಸ್ಥಾನದ ಅರ್ಚಕರನ್ನಾಗಿ ನಿಯಮಿಸಿ ದಲಿತ ಬ್ರಾಹ್ಮಣ ಬೇಧವನ್ನು ಪೇಜಾವರರು ತೊಲಗಿಸಲಿ. ಪಂಕ್ತಿಬೇಧವನ್ನು ಕೊನೆಗಾಣಿಸಿ ಬ್ರಾಹ್ಮಣ ದಲಿತರ ಸಹಪಂಕ್ತಿ ಬೋಜನವನ್ನು ಜಾರಿ ಗೊಳಿಸಲಿ, ಶ್ರೀಕೃಷ್ಣನ ವಿಗ್ರಹದ ಪಕ್ಕದಲ್ಲೇ ಕನಕನ ವಿಗ್ರಹವನ್ನೂ ಪ್ರತಿಷ್ಟಾಪಿಸಿ ಪೂಜಿಸಲು ಆರಂಭಿಸಲಿ, ದೇವಸ್ಥಾನದೊಳಗೆ ದಲಿತರಿಗೆ ಮುಕ್ತ ಪ್ರವೇಶ ಒದಗಿಸಲಿ, ಉಡುಪಿ ಮಠದಲ್ಲಿ ಇನ್ಮೇಲೆ ದಲಿತರು ಹಾಗೂ ಬ್ರಾಹ್ಮಣರು ಎಂಬ ಬೇಧವಿಲ್ಲಾ, ಎಲ್ಲರೂ ಒಂದೇ ಎಂದು ಘೋಷಿಸಲಿ. ಬೇಕಾದರೆ ಬುದ್ದಿಜೀವಿಗಳಿಗೆ ಮಠದೊಳಗೆ ಪ್ರವೇಶವಿಲ್ಲವೆಂದೂ ಬೊರ್ಡು ಬರೆಸಲಿ. ಬಹುಸಂಖ್ಯಾತ ದಲಿತರೊಂದಿಗೆ ಬ್ರಾಹ್ಮಣರು ಸಹಬಾಳ್ವೆ ನಡೆಸುವ ಮಹತ್ತರವಾದ ಕೈಂಕರ್ಯಕ್ಕೆ ಬುದ್ದಿಜೀವಿಗಳು ಅಡ್ಡಬರದಂತೆ ನೋಡಿಕೊಳ್ಳೋಣ.

ಇದೆಲ್ಲಾ ಆಗದ ಹೋಗದ ಮಾತು. ಪಂಕ್ತಿಬೇಧ ನಿಷೇಧಿಸಿ ಬ್ರಾಹ್ಮಣ ದಲಿತರನ್ನು ಒಂದಾಗಿಸುವೆ ಎಂದು ಪೇಜಾವರರು ಘೋಷಿಸಿದ ತಕ್ಷಣ ಅವರು ತಮ್ಮ ಮಠಾದೀಶರ ಸ್ಥಾನದಲ್ಲಿರುವುದಿಲ್ಲ. ಅಷ್ಟೇ ಯಾಕೆ ಮತಾಂಧರು ಪೇಜಾವರರನ್ನೇ ಭಹಿಷ್ಕರಿಸುತ್ತಾರೆ ಇಲ್ಲವೇ ಕೊಲೆಮಾಡಿಸಿ ದಲಿತರ ಮೇಲೆ ಆರೋಪಿಸುತ್ತಾರೆ. ವೈದಿಕಶಾಹಿ ವ್ಯವಸ್ಥೆಯಲ್ಲಿ ಪೇಜಾವರ ಎನ್ನುವವರು ಕೇವಲ ಒಂದು ಪರಿಕರ (ಟೂಲ್) ಮಾತ್ರ. ಎಲ್ಲಿವರೆಗೂ ಪುರೋಹಿತಶಾಹಿ ಹಿತಾಸಕ್ತಿಯನ್ನು ಕಾಯಾ ವಾಚಾ ಮನಸಾ ಕಾಪಾಡುತ್ತಿರುತ್ತಾರೋ ಅಲ್ಲಿವರೆಗೂ ಪೇಜಾವರರು ಪೂಜ್ಯನೀಯರಾಗಿರುತ್ತಾರೆ. ಯಾವಾಗ ಮನುವಾದೀ ಸಂವಿಧಾನದ ವಿರುದ್ದ ಹೋಗುತ್ತಾರೋ ಆಗ ಅವರು ದೈವದ್ರೊಹಿಗಳೆಂದೋ ಇಲ್ಲವೆ ಮಾನಸಿಕ ಅಸ್ವಸ್ಥರೆಂದೂ ಆರೋಪಿತರಾಗಿ ಮಠದ ಪೀಠದಿಂದ ಬಹಿಷ್ಕೃತರಾಗುತ್ತಾರೆ. ಇದೆಲ್ಲವೂ ಪೇಜಾವರರಿಗೆ ಗೊತ್ತಿದೆ. ಅದಕ್ಕೆ ಅವರು ಬ್ರಾಹ್ಮಣರು ದಲಿತರು ಒಂದಾಗಬೇಕು ಎಂದು ಬಾಯಲ್ಲಿ ಹೇಳುತ್ತಲೇ ಮಠದಿಂದ ದಲಿತರನ್ನು ದೂರವೇ ಇಡುತ್ತಾರೆ. ಹೇಳುವುದು ಒಂದು ಮಾಡುವುದು ಇನ್ನೊಂದು ಎನ್ನುವ ಸಂಘಪರಿವಾರದ ಗುಪ್ತನೀತಿಯನ್ನು ಚಾಚು ತಪ್ಪದೇ ಪಾಲಿಸುತ್ತಿದ್ದಾರೆ. ಇಂತವರ ಮುಖವಾಡಗಳನ್ನು ಪ್ರಜ್ಞಾವಂತ ದಲಿತ ಯುವಕರು ಹುಂಬತನವನ್ನು ಕೈಬಿಟ್ಟು ಜಾಣತನದಿಂದ ಬಯಲಿಗೆಳೆಯಬೇಕಿದೆ. ನಯವಂಚಕರನ್ನು ನಯವಾಗಿಯೇ ಎದುರಿಸಬೇಕಿದೆ. ವರ್ಗ ಶತ್ರುಗಳನ್ನು ಅವರ ಮಾತಿನ ವರಸೆಯಲ್ಲೇ ಸಿಕ್ಕಿ ಹಾಕಿಸಿ ಜನರ ಮುಂದೆ ಅವರ ಆಷಾಡಬೂತಿತನವನ್ನು ಬೆತ್ತಲುಗೊಳಿಸಬೇಕಿದೆ. ಎಲ್ಲಕ್ಕಿಂತ ಮೊದಲು ದಲಿತ ಸಮುದಾಯದಲ್ಲಿ ಜಾಗ್ರತಿ ಮೂಡಿಸಿ, ಶೂದ್ರ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮನುವಾದಿ ಮತಾಂಧರ ಶತಮಾನಗಳ ಶಡ್ಯಂತ್ರವನ್ನು ಬೇಧಿಸಿ ವಿಫಲಗೊಳಿಸಬೇಕಿದೆ. ಆಗ ಮಾತ್ರ ತಾರತಮ್ಯಕ್ಕೆ ಮುಕ್ತಿ. ಫಲಿಸಬೇಕಿದೆ ಅಂಬೇಡ್ಕರ್ ಯುಕ್ತಿ..

- ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ