ಶನಿವಾರ, ಅಕ್ಟೋಬರ್ 15, 2016

ತಹ ತಹ ..... 29 ವಿವಿ ನಾಮಕರಣ ಮತ್ತು ಮಹಾದೇವಿಯಕ್ಕನ ಪ್ರಸ್ತುತತೆ :

ತಹ ತಹ – 29


ಅಂತೂ ಇಂತೂ ವಿಜಾಪುರದ ಮಹಿಳಾ ವಿವಿ ಹುಟ್ಟಿ ಹನ್ನೊಂದು ವರ್ಷದ ನಂತರ ಸರಕಾರವು ನಾಮಕರಣ ಮಾಡಲು ಹೆಸರನ್ನು ಅಂತಿಮಗೊಳಿಸಿದೆ. ವಚನಕಾರ್ತಿ ಮಹಾದೇವಿ ಅಕ್ಕನ ನೆನಪಲ್ಲಿ "ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯ" ಎಂದು ನಾಮಕರಣ ಮಾಡಲು ಸೆ.21ರಂದು ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ.

ಮಹಿಳೆಯರ ಸರ್ವಾಂಗೀಣ ಉನ್ನತಿ ಹಾಗೂ ಉನ್ನತ ಶಿಕ್ಷಣ ಸಂಶೋಧನೆಯಲ್ಲಿ ಪ್ರಗತಿ ಸಾಧಿಸುವಂತೆ ಒತ್ತುನೀಡುವ ಸದುದ್ದೇಶದಿಂದ  ವಿಜಯಪುರ (ವಿಜಾಪುರ) ದಲ್ಲಿ 2003-04 ರಲ್ಲಿ ಮಹಿಳಾ ವಿಶ್ವವಿದ್ಯಾಲಯ ಸ್ಥಾಪನೆಗೊಂಡಿತ್ತು. ಆದರೆ ಅದಕ್ಕೇನು ಹೆಸರಿಡಬೇಕು ಎನ್ನುವುದನ್ನೇ ಮರೆತಿತ್ತು. 2013 ರಲ್ಲಿ ನಡೆದ ಅಖಿಲ ಭಾರತ 12 ನೇ ಶರಣ ಸಾಹಿತ್ಯ ಸಮ್ಮೇಳನವು ಮಹಿಳಾ ವಿವಿ ಗೆ ಅಕ್ಕಮಹಾದೇವಿಯ ಹೆಸರಿಡಬೇಕೆಂದು ನಿರ್ಣಯ ತೆಗೆದುಕೊಂಡು ಸರಕಾರವನ್ನು ಒತ್ತಾಯಿಸಿತ್ತು. ಹಾಗೆಯೇ ವಿಜಯಪುರದಲ್ಲಿ ನಡೆದಿದ್ದ 79 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಕೂಡಾ ಅಕ್ಕಮಹಾದೇವಿಯವರ ಹೆಸರನ್ನು ಮಹಿಳಾ ವಿವಿ ಗೆ ಇಡಬೇಕೆಂದು ಗೊತ್ತುವಳಿ ಸ್ವೀಕರಿಸಿ ಸರಕಾರಕ್ಕೆ ಸಲ್ಲಿಸಲಾಗಿತ್ತು. ಅದಕ್ಕೀಗ ಕಾಲ ಕೂಡಿ ಬಂತು.   ಮಗುವನ್ನು ಹುಟ್ಟಿಸಿದ ಸರಕಾರಕ್ಕೆ ಅದಕ್ಕೊಂದು ಹೆಸರಿಡಲು ದಶಕವೇ ಬೇಕೆಂಬುದು ನಮ್ಮ ಶಾಸಕಾಂಗದ ವೇಗ ಹಾಗೂ ಇಚ್ಚಾಶಕ್ತಿಗೆ ಬಲು ದೊಡ್ಡ ನಿದರ್ಶನವಾಗಿದೆ. ಸಧ್ಯ ನಾಮಕರಣ ಮಾಡಿದರಲ್ಲಾ ಅನ್ನುವುದೇ ಕನ್ನಡಿಗರು ಸಂತಸ ಪಡಬೇಕಾದ ಸಂಗತಿ. 

ಸಹಜವಾಗಿ ಲಿಂಗಾಯತ ಸಮುದಾಯದವರಿಗೆ ಸರಕಾರದ ನಿರ್ಧಾರ ಸಂತಸ ತಂದಿತು. ಬೇರೆ ಹೆಸರನ್ನು ಸೂಚಿಸಿದ್ದ ಕೆಲವರಿಗೆ ನಿರಾಸೆಯೂ ಆಯಿತು. ಮುಸ್ಲಿಂ ಸಂಘಟನೆಯೊಂದು " ಅಕ್ಕಮಹಾದೇವಿಯ ಹೆಸರನ್ನು ಬೇರೆ ವಿವಿ ಗಳಿಗೆ ಇಡಿ, ಬಿಜಾಪುರವನ್ನು ಆಳಿದ ಚಾಂದಬೀಬಿ ಹೆಸರನ್ನು ವಿಜಯಪುರದ ಮಹಿಳಾ ವಿವಿ ಗೆ ಕೊಡಿ ಎಂದು ಒತ್ತಾಯಿಸಿ ಪ್ರತಿಭಟನೆಗಿಳಿಯಿತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏನೇ ಮಾಡಿದರೂ ಪರ ಮತ್ತು ವಿರೋಧಗಳಂತೂ ಇದ್ದದ್ದೇ ಹಾಗೂ ಇರಬೇಕಾದದ್ದೆ.

ಮಹಿಳೆಯರ ಸಬಲೀಕರಣದ ಹಾಗೂ ಜಾಗತೀಕರಣದ ಮನ್ವಂತರದ ಸವಾಲುಗಳನ್ನು ಎದುರಿಸಲು ಮಹಿಳೆಯನ್ನು ಶಸಕ್ತಗೊಳಿಸುವ ಉದ್ದೇಶದಿಂದ ಸ್ಥಾಪನೆಗೊಂಡಿರುವ ವಿಶ್ವವಿದ್ಯಾಲಯಕ್ಕೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಎಂದು ಮರುನಾಮಕರಣಗೊಳಿಸ ಬೇಕೆಂಬುದು ಶರಣ ಸಾಹಿತ್ಯ ಸಮ್ಮೇಳನದ ಮನವಿಯಾಗಿತ್ತುಅದನ್ನು ಸರಕಾರ ಈಗ ಮಾನ್ಯ ಮಾಡಿತು. ಅಸಲಿ ಪ್ರಶ್ನೆ ಇರೋದು ಅಕ್ಕಮಹಾದೇವಿಗೂ ಮಹಿಳಾ ಸಬಲೀಕರಣಕ್ಕೂ  ಏನು ಸಂಬಂಧ? ಎನ್ನುವುದರಲ್ಲಿ. ಜಾಗತೀಕರಣದ ಸವಾಲುಗಳನ್ನು ಎದುರಿಸಲು ಮಹಿಳೆಯರನ್ನು ಸಶಕ್ತಗೊಳಿಸುವುದಕ್ಕೂ ಅಕ್ಕಮಹಾದೇವಿ ಹೆಸರಿಗೂ ಎಂತಾ ಅನುಬಂಧ. 

ಮಹಾದೇವಿ ಶಿವಶರಣೆಯೆಂದು ಬಹುಸಂಖ್ಯಾತರು ಒಪ್ಪಿದ್ದಾರೆ. ಆದರೆ ವಚನ ರಚನೆಯ ಸಾಮ್ಯತೆಗಳನ್ನು ಹೊರತುಪಡಿಸಿ ಬಸವಣ್ಣನವರ ವಾಸ್ತವವಾದಿ ನೆಲೆಗಟ್ಟಿನ ಚಿಂತನೆಗಳಿಗೂ ಹಾಗೂ ಅಕ್ಕನ ಅವಾಸ್ತವವಾದಿ ಪರಿಕಲ್ಪನೆಗಳಿಗೂ ವೈರುಧ್ಯಗಳಿವೆ. ಅಕ್ಕನ ಬಹುತೇಕ ವಚನಗಳು ಮಹಿಳೆಯರಿಗೆ ಜೀವೋನ್ಮುಖಿ ಸಂದೇಶ ಕೊಡುವುದಕ್ಕಿಂತ ಜೀವವಿಮುಖತೆಯ ಆಶಯವನ್ನು ಕಟ್ಟಿಕೊಟ್ಟಿವೆ.
 
ಭಕ್ತಿಯ ಮಾರ್ಗದಲ್ಲಿ ನಡೆದು ಮುಕ್ತಿಯ ಗುರಿಯನ್ನು ಸಾಧಿಸಲು ಬಯಸಿದ ಮಹಾದೇವಿಯಕ್ಕ ಬದುಕು ಸಂಸಾರ ದೇಹ ಜೀವಗಳನ್ನೆಲ್ಲಾ ಮಾಯೆ ಎಂದೇ ಪರಿಗಣಿಸಿದ್ದು  ಸ್ಪಷ್ಟವಾಗಿದೆ. ಭಕ್ತಿ ಮತ್ತು ಮುಕ್ತಿ ಎನ್ನುವುದೇ ವೈದಿಕಶಾಹಿಗಳ ಪುರಾತನ ಪರಿಕಲ್ಪನೆಯಾಗಿದೆ. ಪುರೋಹಿತಶಾಹಿಗಳು ಜನರ ದಿಕ್ಕುತಪ್ಪಿಸಿ ಶೊಷಿಸಲೆಂದೇ ಪ್ರತಿಪಾದಿಸಿ ನಂಬಿಸಿದ ಕರ್ಮಸಿದ್ದಾಂತದ ತತ್ವಗಳೇ ಆಗಿವೆ.

ಲೌಕಿಕದೊಳಿದ್ದು  ಬದುಕನ್ನು ಸಾರ್ಥಕ ರೀತಿಯಲ್ಲಿ ಕಟ್ಟಿಕೊಳ್ಳದೇ ಅಲೌಕಿಕದತ್ತಲೇ ಚಿತ್ತವಿಟ್ಟು ಇಹ ಮರೆತು ಪರಧ್ಯಾನದಲ್ಲಿ ಲೀನವಾಗುವುದೂ ಸಹ ಬದುಕಿನ ವಿಮುಖತತೆಯ ಬಹು ದೊಡ್ಡ ದ್ಯೊತಕವಾಗಿದೆ. ಅಕ್ಕಮಹಾದೇವಿ ಮಾಡಿದ್ದೂ ಅದನ್ನೇ. ಅಕ್ಕನ ನಂಬಿಕೆಯನ್ನು ಪ್ರಶ್ನಿಸುವುದಕ್ಕಿಂತಾ ಮಹಿಳಾ ಸಬಲೀಕರಣಕ್ಕೆ ಅಕ್ಕನ ಬದುಕು ಹಾಗೂ ಬರಹ ಅದೆಷ್ಟು ಪೂರಕ ಹಾಗೂ ಮಾರಕ ಎನ್ನುವುದರ ಸಂವಾದ ಇಂದಿನ ಅಗತ್ಯವಾಗಿದೆ. 

ನೇರವಾಗಿ ಶರಣ ಚಳುವಳಿಯ ಭಾಗವಾಗದೇ ಪ್ರತ್ಯೇಕವಾಗಿಯೇ ತನ್ನ ಅಸ್ತಿತ್ವವನ್ನು ವಚನ ಕವನಗಳ ಮೂಲಕ ಕಂಡುಕೊಂಡ ಅಕ್ಕಮಹಾದೇವಿ ಮಹಿಳೆಯಾಗಿದ್ದರಿಂದ ಮಹಿಳೆಯರಿಗೆ ಐಕಾನ್ ಆಗಿದ್ದಂತೂ ಸತ್ಯ. ಆದರೆ ಅಕ್ಕ ಪ್ರತಿಪಾದಿಸುವ ಚಿಂತನೆಗಳು ಅಲೌಕಿಕದತ್ತಲೇ ತುಡಿಯುವುದರಿಂದ ಲೌಕಿಕದ ಮಹಿಳೆಯರಿಗೆ ಅದೆಷ್ಟು ಅನುಕರಣೀಯ ಎನ್ನುವ ಸಂದೇಹ ಕಾಡದಿರದು. ಅಕ್ಕನ ಅಂತಿಮ ಉದ್ದೇಶ ಲೋಕದೊಳಿರದ ಕಲ್ಪನೆಯ ಗಂಡನನ್ನೇ ಸೇರುವುದಾದರೆ.. ಎಲ್ಲಾ ಮಹಿಳೆಯರು ಇದೇ ಮಾದರಿಯನ್ನು ಅನುಕರಿಸಿದರೆ ಲೋಕದ ಗಂಡಂದಿರ ಗತಿ ಏನು? ಸಂಸಾರ ದಾಂಪತ್ಯ ಗಂಡು ಹೆಣ್ಣಿನ ನಡುವಿನ ಸಂಬಂಧಗಳ ಸಾವಯವ ಅರ್ಥವೇನು? ಪ್ರಕೃತಿ ಪುರುಷ ಸೇರದಿದ್ದರೆ ಪ್ರಕೃತಿ ನಿಯಮದ ಯತಾರ್ಥವೇನು?

ವೈರಾಗ್ಯ ಎನ್ನುವುದು ಪಲಾಯಣವಾದವೇ? ಬದುಕಿನ ವೈಫಲ್ಯತೆಗೆ ವ್ಯಕ್ತಿ ಕಂಡುಕೊಂಡ ಪರ್ಯಾಯವೇ?
ಬದುಕು ಒಡ್ಡುವ ಸಂಕಷ್ಟಗಳಿಂದ ದೂರಾಗುವ ವಿಮೋಚನೆಯ ಮಾರ್ಗವೇಅಥವಾ ಅದೊಂದು ಮಾನಸಿಕ ಸ್ಥಿತ್ಯಂತರವೇ? ಇವೆಲ್ಲವೂ ವ್ಯಕ್ತಿಯ ಬದುಕಿನ ಸ್ಥಿತಿ ಹಾಗೂ ಮಾನಸಿಕ ಗತಿಯನ್ನು ಅವಲಂಬಿಸಿದೆ. ಆದರೆ ವೈರಾಗ್ಯ ಎನ್ನುವುದು ವ್ಯಯಕ್ತಿಕ ನಿರ್ಧಾರವಾದರೆ ಸಮಸ್ಯೆಯಿಲ್ಲ. ಯಾವಾಗ ಅದನ್ನು ಸಾರ್ವತ್ರಿಕಗೊಳಿಸಲಾಗುತ್ತದೆಯೋ ಆಗ ಅದು ಅನುಕರಣೀಯವಲ್ಲ.
 
ಅಕ್ಕಮಹಾದೇವಿ ಮಾಡಿದ್ದೇ ವ್ಯಯಕ್ತಿಕ ವೈರಾಗ್ಯದ ಸಾರ್ವತ್ರೀಕರಣ. ದೇಹವನ್ನು ತುಚ್ಚೀಕರಿಸಿ, ಬದುಕನ್ನು ನಿರಾಕರಿಸಿ, ಕಾಯಕವನ್ನು ತ್ಯಜಿಸಿ ಬರೀ ಅಲೌಕಿಕ ಭಾವಲೋಕದಲ್ಲಿ ಸಂಚರಿಸಿದ ಅಕ್ಕಮಹಾದೇವಿ ತನ್ನ ವಚನಗಳಲ್ಲಿ ಅಂತಹ ವಿಚಾರಗಳನ್ನೇ ಪ್ರತಿಪಾದಿಸಿದ್ದಾರೆ. ಎಲ್ಲ ಸಂಕಷ್ಟಗಳ ನಡುವೆ ಬದುಕನ್ನು ಪ್ರೀತಿಸುವವರಿಗೆ. ಎಲ್ಲ ಸಮಸ್ಯೆಗಳ ಮಧ್ಯೆ ಜಗತ್ತನ್ನು ಇಷ್ಟಪಡುವವರಿಗೆ, ಭಿನ್ನಾಭಿಪ್ರಾಯಗಳ ಜೊತೆಗೆ ಮನುಷ್ಯ ಸಂಬಂಧಗಳನ್ನು ಬಯಸುವವರಿಗೆ ಅಕ್ಕನ ಭಕ್ತಿ ಮಾರ್ಗ, ಮುಕ್ತಿಯ ಬಯಕೆ ಹಾಗೂ ವೈರಾಗ್ಯ ಎಂದೂ ಮಾದರಿಯಾಗಲು ಸಾಧ್ಯವಿಲ್ಲ. ಇಂತಹ ಭ್ರಮಾಲೋಕದ ಅಲೌಕಿಕ ಆಶಯಗಳು ಮಹಿಳಾ ಸಬಲೀಕರಣಕ್ಕಿಂತ ಮನುಷ್ಯ ಸಂಬಂಧಗಳ ವಿಘಟನೆಗೆ ಕಾರಣವಾದೀತೆಂಬ ಆತಂಕ ಕಾಡುತ್ತಿದೆ.
 
ಅಕ್ಕನನ್ನು ಆರಾಧನಾ ಮನೋಭಾವದಿಂದ ನೋಡುವುದನ್ನು ಪಕ್ಕಕ್ಕಿಟ್ಟು ವಾಸ್ತವದ ನೆಲೆಗಟ್ಟಿನಲ್ಲಿ ನಿಂತೊಮ್ಮೆ ಯೋಚಿಸಿದರೆ ಅಕ್ಕನ ಬದುಕು ಹಾಗೂ ಬರಹ ಅದೆಷ್ಟು ಪ್ರಸ್ತುತ ಹಾಗೂ ಅಪ್ರಸ್ತುತ ಎನ್ನುವುದು ತಿಳಿದೀತು. ಅಕ್ಕನನ್ನು ಶಿವಶರಣೆ ಎಂದೇ ಪರಿಭಾವಿಸಿ, ಶರಣರ ಸಾಲಿನಲ್ಲಿ ಅಗ್ರಪಂಥಿಯಲ್ಲಿ ಕೂರಿಸಿ ಆರಾಧಿಸಿದರೆ ಅವರ ಅಂಧ ಅನುಯಾಯಿಗಳಾಗಬಹುದೇ ಹೊರತು ವಿಚಾರವಾದಿಗಳಾಗಲು ಸಾಧ್ಯವಿಲ್ಲ.

ವೈರಾಗ್ಯವೆಂಬುದು ಅಕ್ಕನ ಆಯ್ಕೆಯಾಗಿದ್ದರೆ, ಇಲ್ಲದ ಗಂಡನ ಧ್ಯಾನದಲ್ಲಿ ಲೀನವಾಗಿದ್ದರೆ ಅದನ್ನು ವ್ಯಕ್ತಿಯ ಆಯ್ಕೆಯ ಸ್ವಾತಂತ್ರ್ಯದ ದೃಷ್ಟಿಕೋನದಲ್ಲಿ ಗೌರವಿಸಬಹುದು. ಆದರೆ ವ್ಯಯಕ್ತಿಕ ಆಯ್ಕೆ ಸಾರ್ವತ್ರೀಕರಣಗೊಂಡಾಗ ಸಮಸ್ಯೆ ಶುರುವಾಗುವುದು. ವ್ಯಯಕ್ತಿಕ ನೆಲೆಯಲ್ಲಿ ತನಗೆ ಅನ್ನಿಸಿದ ಭಕ್ತಿಯ ದಾರಿಯಲ್ಲಿ ನಡೆದು ಮುಕ್ತಿಯ ಗುರಿ ಮುಟ್ಟಿದ ಅಕ್ಕಮಹಾದೇವಿಯ ಹೆಸರನ್ನು ಸಾರ್ವಜನಿಕ ವಿಶ್ವವಿದ್ಯಾಲಯಕ್ಕೆ ನಾಮಕರಣಮಾಡಿದ್ದಂತೂ ಪ್ರಶ್ನಾರ್ಹವಾಗಿದೆ.
 
ಮಹಾದೇವಿಯಕ್ಕನನ್ನು ಕನ್ನಡದ ಮೊದಲ ಕವಯತ್ರಿ ಎನ್ನುವ ಸುಳ್ಳು ಸಂಗತಿಯನ್ನು ಬಿತ್ತರಿಸಲಾಗುತ್ತಿದೆ. ಆದರೆ ಇದು ಸತ್ಯಕ್ಕೆ ದೂರವಾದದ್ದು. ಅಕ್ಕನಿಗಿಂತ ಮೊದಲೇ ಬೇಕಾದಷ್ಟು ಮಹಿಳೆಯರು ಕವಿತೆ ಬರೆದಿದ್ದಾರೆ. ಅಕ್ಕ ಅನುಭವ ಮಂಟಪಕ್ಕೆ ಕಾಲಿಡುವ ಮೊದಲೇ ಅಲ್ಲಿ ತಳ ಸಮುದಾಯದ ಕಾಯಕ ಜೀವಿ ಶರಣೆಯರು ವಚನ ರೂಪದ ಕವಿತೆಯನ್ನು ರಚಿಸಿ ವಾಚಿಸುತ್ತಿದ್ದರು. 

"
ಮೊಲೆ ಮೂಡಿ ಬಂದಡೆ ಹೆಣ್ಣೆಂಬರು
ಮೀಸೆ ಕಾಸೆ ಬಂದೆಂಡೆ ಗಂಡೆಂಬರು
ಉಭಯದ ಜ್ಞಾನ
ಹೆಣ್ಣೊ ಗಂಡೋ ನಾಸ್ತಿನಾಥಾ...?"

ಎಂದು ಶರಣೆ ಗೊಗ್ಗವ್ವೆ ಲಿಂಗಭೇಧ ನೀತಿಯನ್ನು ತನ್ನ ವಚನದಲ್ಲಿ ಪ್ರಶ್ನಿಸಿದ್ದಳು. ಮುಕ್ತಾಯಕ್ಕ, ಆಯ್ದಕ್ಕಿ ಲಕ್ಕಮ್ಮ, ನೀಲಾಂಬಿಕೆ, ಗಂಗಾಂಬಿಕೆ, ಕಾಳವ್ವೆ, ಕೇತಲದೇವಿ, ಗಂಗಮ್ಮ, ಗುಡ್ಡವ್ವೆ, ಲಿಂಗಮ್ಮ, ವೀರಮ್ಮ... ಹೀಗೆ 35 ಕ್ಕೂ ಹೆಚ್ಚು ವಚನಕಾರ್ತಿಯರು 1350  ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಇವರು ತಮ್ಮ ಭಕ್ತಿ ಶ್ರದ್ದೆಯನ್ನು ಅಕ್ಕನ ಹಾಗೆ ಮುಕ್ತಿಗೆ ದಾರಿಯಾಗಿ ಬಳಸದೇ ಕಾಯಕದ ಮಾರ್ಗವಾಗಿ ಬಳಸಿದರು. ತಮ್ಮ ವಚನಗಳಲ್ಲಿ ಲಿಂಗತಾರತಮ್ಯವನ್ನು ಖಂಡಿಸಿದರು. ಕಾಯಕ ತತ್ವವನ್ನು ಎತ್ತಿ ಹಿಡಿದರು. ಜಾತಿ ವ್ಯವಸ್ತೆಯನ್ನು ಪ್ರಶ್ನಿಸಿದರು, ವೈದಿಕರ ಶೋಷಣೆಯನ್ನು ವಿರೋಧಿಸಿದರು. ವಚನಕಾರ್ತಿಯರು ಕಾಯಕ ಮಾಡುತ್ತಲೇ, ಸಂಸಾರ ನಿರ್ವಹಿಸುತ್ತಲೇ ಜೀವ ಪರತೆಯನ್ನು ರೂಢಿಸಿಕೊಂಡು ಹೊಂದಾಣಿಕೆಯೊಂದಿಗೆ ಬದುಕನ್ನು ಸಾರ್ಥಕವಾಗಿಸಿಕೊಂಡರು. ಅಕ್ಕನ ಮುಕ್ತಿಮಾರ್ಗಕ್ಕಿಂತಾ ವಚನಕಾರರ್ತಿಯರ ಕಾಯಕ ಮಾರ್ಗ ಬಲು ದೊಡ್ಡದು. ವ್ಯವಸ್ಥೆಯಿಂದ ಹೊರ ಹೋಗಿ ವ್ಯವಸ್ಥೆಯ ಹುಳುಕನ್ನು ವಚನಗಳಲಿ ಹೇಳುವುದಕ್ಕೂ , ವ್ಯವಸ್ಥೆಯೊಳಗಿದ್ದೇ ಶೋಷಣೆಯ ವಿರುದ್ಧ ಪ್ರತಿಭಟಿಸುವುದಕ್ಕೂ ವ್ಯತ್ಯಾಸವಿದೆ. ವಾಸ್ತವದ ನೆಲೆಗಟ್ಟಿನಲ್ಲಿ ಮೊದಲನೆಯದು ಪಲಾಯನವಾದ ಎನ್ನಿಸಿಕೊಂಡರೆ ಎರಡನೆಯದು ಬದುಕು ಕಟ್ಟುವ ಛಲದ ಮಾರ್ಗವೆನಿಸುತ್ತದೆ.
 
ಇಷ್ಟಕ್ಕೂ ಯಾಕೆ ಎಲ್ಲಾ ವಚನಕಾರ್ತಿಯರಿಗಿಂತಾ ಅಕ್ಕಮಹಾದೇವಿಗೆ ಬಹಳ ಪ್ರಾಮುಖ್ಯತೆ  ಕೊಡಲಾಗುತ್ತಿದೆ? ಬಹುತೇಕ ವಚನಕಾರ್ತಿಯರು ದುಡಿಯುವ ವರ್ಗದವರು ಹಾಗೂ ಅದರಲ್ಲೂ ಕೆಲವರು ದಲಿತರು ಎಂದು ಅವರನ್ನು ಕಡೆಗಣಿಸಿ ಮೇಲ್ವರ್ಗದಿಂದ ಬಂದ ಅಕ್ಕನಿಗೆ ಹೆಚ್ಚು ಮಹತ್ವ ಕೊಡಲಾಗಿದೆಯಾ? ಇಲ್ಲವೇ ಪುರುಷ ಪ್ರಧಾನ ವ್ಯವಸ್ಥೆಯನ್ನು ವಿಡಂಬಿಸಿದ ಬಾಕಿ ವಚನಕಾರ್ತಿಯರಿಗಿಂತಾ ಇಲ್ಲದ ಗಂಡನ ಹಿಂದೆ ಬಿದ್ದ ಅಕ್ಕಮಹಾದೇವಿಯೇ ವಾಸಿ ಎಂದು ಪುರುಷರು ಭಾವಿಸಿದ್ದರಿಂದ ಅಕ್ಕ ವೈಭವೀಕರಣಕ್ಕೊಳಗಾದಳೆ? ಇಲ್ಲವೇ ವೀರಶೈವ ಲಿಂಗಾಯತ ಧರ್ಮದೊಳಗಿನ ಪುರೋಹಿತಶಾಹಿಗಳಿಗೆ ಜನರನ್ನು ಭ್ರಮೆಯಲ್ಲಿಡಲು ಬೇಕಾದ ಭಕ್ತಿ ಹಾಗೂ ಮುಕ್ತಿಯ ಮಾರ್ಗ ಹಿಡಿದ ಅಕ್ಕನ ಪಾರಿಮಾರ್ಥಿಕ ಚಿಂತನೆ ಅನುಕೂಲಕರವಾಗಿದ್ದರಿಂದ ಮಠ ಮಾನ್ಯಗಳು ಮಹಾದೇವಿಯಕ್ಕನಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದವಾ? ಗೊತ್ತಿಲ್ಲ. ವಾಸ್ತವದ ನೆಲೆಗಟ್ಟಿನಲ್ಲಿ ತಾರತಮ್ಯ ವ್ಯವಸ್ಥೆಯನ್ನು ವಿರೋಧಿಸಿದ ಎಲ್ಲಾ ವಚನಕಾರ್ತಿಯರಿಗಿಂತಾ ಅವಾಸ್ತವದ ಭ್ರಮೆಗೆ ಬಿದ್ದ ಅಕ್ಕಮಹಾದೇವಿ ಮಠ ಮಾನ್ಯರಿಗೆ ಮುಖ್ಯವಾಗಿದ್ದರಿಂದ ಮೇಲಿನ ಸಂದೇಹ ಹುಟ್ಟಿಕೊಂಡಿದೆ. ಪುರೋಹಿತಶಾಹಿ ಪರಿಕಲ್ಪನೆಗೆ ಅಕ್ಕನ ಚಿಂತನೆ ಪೂರಕವಾಗಿದ್ದರಿಂದ ಅಕ್ಕ ಮುನ್ನಲೆಗೆ ಬಂದು ನಿಂತಿದ್ದಾಳೆ. ಲಿಂಗಾಯತರ ಶರಣ ಸಾಹಿತ್ಯ ಸಮ್ಮೇಳನವು ವಿವಿ ಗೆ ಅಕ್ಕನ ಹೆಸರನ್ನಿಡಲು ಒತ್ತಾಯಿಸುತ್ತದೆ. ಮಠಗಳ ವಿರೋಧವನ್ನು ಕಟ್ಟಿಕೊಳ್ಳಲು ಬಯಸದ ಸರಕಾರ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರನ್ನಿಡಲು ನಿರ್ಣಯಿಸಿದೆ.
 
ಪುರುಷಪ್ರಧಾನ ವ್ಯವಸ್ಥೆಯ ವಿರೋಧಿ ದ್ವನಿಯಾಗಿ ಅಕ್ಕನನ್ನು ಪರಿಗಣಿಸುವ ಸ್ರ್ತೀವಾದಿಗಳು ವಿವಿ ನಾಮಕರಣದಿಂದ ತೃಪ್ತರಾಗಿದ್ದಾರೆ. ಅಕ್ಕನಿಗೆ ಸಿಕ್ಕ ತಕ್ಕ ಗೌರವವೆಂದು ಹೆಮ್ಮೆ ಪಡುತ್ತಿದ್ದಾರೆ  ಆದರೆ ನಿಜವಾದ ಕಾಯಕಜೀವಿ ವಚನಕಾರ್ತಿಯರಿಗೆ ಆದ ಅನ್ಯಾಯ ಎನ್ನುವುದು ಇವರ ಅರಿವಿಗೆ ಬರಲೇ ಇಲ್ಲ. ವಾಸ್ತವದ ಚಿಂತನೆಗೆ ಸೋಲಾಗಿ ಅಲೌಕಿಕ ಆಲೋಚನೆಗೆ ಗೆಲುವಾಗಿದ್ದೂ ಹಲವರಿಗೆ ಅರ್ಥವಾಗಲಿಲ್ಲ. ಅಕ್ಕನ ಬದುಕು ಹಾಗೂ ಬರಹ ಜೀವನೋತ್ಸಾಹವಿರುವ ಮಹಿಳೆಯರಿಗೆ ಮಾದರಿ ಅಲ್ಲವೆಂದು ಯಾರಿಗೂ ಅನ್ನಿಸಲೇ ಇಲ್ಲ. ಅಕ್ಕನನ್ನು ಪುರುಷಪ್ರಧಾನ ವ್ಯವಸ್ಥೆಯ ಬಹು ದೊಡ್ಡ ರೂಪಕವಾಗಿ ನಂಬಿದ್ದಾರೆ ಹಾಗೂ ನಂಬಿಸಲಾಗುತ್ತಿದೆ. ಪ್ರಕ್ರಿಯೆಯಲ್ಲಿ ಜೀವಪರ ನಿಲುವನ್ನು, ಬದುಕಿನ ಪರ ದಿಟ್ಟ ಧೋರಣೆಯನ್ನು ಹೊಂದಿದ ಕೆಳಸಮುದಾಯದ ವಚನಕಾರ್ತಿಯರನ್ನು ಕಡೆಗಣಿಸಲಾಗಿದೆ. ಕಾಯಕ ವಿಮುಖಿ ಅಕ್ಕನಿಗಿಂತಾ ಕಾಯಕಜೀವಿ ಗೊಗ್ಗವ್ವೆ, ಸೂಳೆ ಸಂಕವ್ವೆ ಮುಖ್ಯರಾಗುತ್ತಾರೆ. ಭ್ರಮೆಯನ್ನು ಹಾಗೂ ಭ್ರಮಾಧೀನರನ್ನು  ಯಾವಾಗಲೂ ಸ್ಥಾಪಿತ ಹಿತಾಸಕ್ತಿಗಳು ಪ್ರಮೋಟ್ ಮಾಡುತ್ತಲೇ ಬಂದಿವೆ. ಆಳುವ ವ್ಯವಸ್ಥೆ ಸಹ ಅಂತಹ ಮಠಮಾನ್ಯ ಹಿತಾಸಕ್ತಿಯನ್ನು ತನ್ನ ಅಸ್ತಿತ್ವದ ಭಾಗವಾಗಿ ಕಾಪಾಡುತ್ತಲೇ ಇರುತ್ತದೆ. ಆಗ ವಾಸ್ತವದ ತತ್ವ ಚಿಂತನೆ ವಚನಗಳು ಹಿನ್ನೆಡೆಗೆ ಸರಿದು ಅವಾಸ್ತವದ ಪರಿಕಲ್ಪನೆಗಳು ಮುಂಚೂಣಿಗೆ ಬರುತ್ತದೆ. ಇದೇ ಸಾಂಸ್ಕೃತಿಕ ರಾಜಕಾರಣ. ಸಾಂಸ್ಕೃತಿಕ ರಾಜಕಾರಣದ ಫಲದಿಂದಾದ ನಾಮಕರಣವೇ " ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವ ವಿದ್ಯಾಲಯ".

ಇಷ್ಟೇ ಅಲ್ಲದೇ ಇನ್ನು ಮೇಲೆ ಅಕ್ಕಮಹಾದೇವಿಯ ದಿನಾಚರಣೆಯನ್ನೂ ಸಹ ಸರಕಾರವೇ ಆಚರಿಸುವುದೆಂದು ಕರ್ನಾಟಕ ಸರಕಾರ ಘೊಷಿಸಿದೆ. ಅಕ್ಕನನ್ನು ಉತ್ಸವ ಮೂರ್ತಿಯನ್ನಾಗಿ ಮಾಡಿ ಅವಳು ಪ್ರತಿಪಾದಿಸಿದ ಪುರೋಹಿತಶಾಹಿ ಮೌಲ್ಯಗಳಿಗೆ ಸಾಂಸ್ಥಿಕ ರೂಪ ಕೊಡುತ್ತಾ ಜನರ ಗಮನವನ್ನು ವಾಸ್ತವದಿಂದ ಅವಾಸ್ತವದ ಕಡೆಗೆ ದಿಕ್ಕುತಪ್ಪಿಸುವ ಹುನ್ನಾರ ಘೋಷಣೆಯ ಹಿಂದಿದೆ. ಹಿಂದುಳಿದವರ ಪರವಾದ ಸರಕಾರ ನಮ್ಮದು ಎನ್ನುವ ಸಿದ್ದರಾಮಯ್ಯನವರು ದಲಿತ ಶೂದ್ರ ವರ್ಗದ ವಚನಕಾರ್ತಿಯರನ್ನು ದೂರವಿಟ್ಟು ಮತ್ತೆ ಮೇಲ್ವರ್ಗದ ಮಹಿಳೆಯ ದಿನಾಚರಣೆಯನ್ನು ಸರಕಾರದ ಖರ್ಚಿನಲ್ಲಿ ಆಚರಿಸುತ್ತಿರುವುದರ ನೇಪತ್ಯದಲ್ಲಿ ಲಿಂಗಾಯತರ ಲಾಭಿ ಇದೆ. ಮಠ ಮಾನ್ಯರನ್ನು ಸಂತೃಪ್ತಗೊಳಿಸಿವ ಮತ ರಾಜಕಾರಣವಿದೆ. ಅತ್ತ ಕನಕದಾಸರ ಜಯಂತಿ ಮೂಲಕ ಕುರುಬ ಜನಾಂಗದವರನ್ನೂ ಇತ್ತ ಅಕ್ಕಮಹಾದೇವಿಯ ದಿನಾಚರಣೆ ಮಾಡುವ ಮೂಲಕ ಲಿಂಗಾಯತ ಸಮುದಾಯದವರನ್ನು ಮೆಚ್ಚಿಸುವ ತಂತ್ರಗಾರಿಕೆಯನ್ನು ಸಿದ್ದರಾಮಯ್ಯನವರ ಸರಕಾರ ಮಾಡುತ್ತಿದೆ. ರಾಜಕೀಯ ಹಿತಾಸಕ್ತಿ ಸಾಂಸ್ಕೃತಿಕ ವಲಯವನ್ನೂ ಬಿಡದೇ ಆಪೋಷಣ ತೆಗೆದುಕೊಳ್ಳುತ್ತಿರುವುದು ಖಂಡನೀಯ. ಹೀಗೆ ಮುಂದೆ ಬಂದ ಸರಕಾರಗಳೂ ಸಹ ತಮ್ಮ ಹಿತಾಸಕ್ತಿಗೆ ಪೂರಕವಾಗಿ ವಿವಿ ಗಳಿಗೆ ಹೆಸರುಗಳನ್ನು ಇಡುತ್ತಾ, ಜಯಂತಿಗಳನ್ನು ಆಚರಿಸುತ್ತಾ ಜಾತಿ ಧರ್ಮದವರನ್ನು ಸಂತುಷ್ಟ ಪಡಿಸುತ್ತಾ ಹೋದರೆ ನಾಡಿನ ಗತಿ ಏನು? ಜನರ ಹಣ ರಾಜಕೀಯ ಮತಬೇಟೆಗೆ ಪೋಲಾಗುತ್ತಾ ಹೋದರೆ ನಾಡನ್ನು ಕಾಪಾಡುವುದಾದರೂ ಹೇಗೆ?
                                                                                              - ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ